Tuesday, December 2, 2014

ಹುಳಿಮಾವಿನ ಮರ: ಕನ್ನಡದ ಸಾಕ್ಷಿಪ್ರಜ್ಞೆ




        'ಹುಳಿಮಾವಿನ ಮರ' ಕನ್ನಡದ ಶ್ರೇಷ್ಠ ಲೇಖಕ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಆತ್ಮಕಥನ. ಲಂಕೇಶ್ ಲೇಖಕರಾಗಿ ಮತ್ತು ಪತ್ರಕರ್ತರಾಗಿ ಕನ್ನಡಿಗರಿಗೆ ಚಿರಪರಿಚಿತರು. ಶಿವಮೊಗ್ಗೆ ಜಿಲ್ಲೆಯ ಸಣ್ಣ ಹಳ್ಳಿಯೊಂದರ ರೈತಕುಟುಂಬದಲ್ಲಿ ಜನಿಸಿ ತನ್ನೊಳಗಿನ ಪ್ರತಿಭೆ ಮತ್ತು ಪ್ರಯತ್ನದಿಂದ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿದ ಪ್ರತಿಭೆ ಈ ಲಂಕೇಶ್. ಲಂಕೇಶರ ಆಸಕ್ತಿಯ ಕ್ಷೇತ್ರದ ಹರವು ಬಹುದೊಡ್ಡದು. ಬರವಣಿಗೆ, ಪತ್ರಿಕೋದ್ಯಮ, ನಾಟಕ, ಸಿನಿಮಾ, ಅಧ್ಯಾಪನ, ಕೃಷಿ, ಚಳುವಳಿ, ಫೋಟೋಗ್ರಾಫಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಲೆದಾಡಿ ಕೊನೆಗೆ ತನ್ನ ಛಾಪನ್ನು ಮೂಡಿಸಿದ್ದು ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ. ಹತ್ತೊಂಬತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದು ವೃತ್ತಿಯ ಏಕತಾನತೆ ಬೇಸರ ಮೂಡಿಸಿದಾಗ ಮುಲಾಜಿಲ್ಲದೆ ರಾಜಿನಾಮೆಯಿತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ವಿಚಿತ್ರ ವ್ಯಕ್ತಿತ್ವ ಪಿ. ಲಂಕೇಶ್ ಅವರದು. ೧೯೭೮ ರಿಂದ ೧೯೮೦ ರ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿಯೂ ಕನ್ನಡ ಚಿತ್ರೋದ್ಯಮದ ಪಟ್ಟುಗಳು  ಅರ್ಥವಾಗದೇ ಹೋದಾಗ  ಲಂಕೇಶರ ಆಸಕ್ತಿ ಪತ್ರಿಕೋದ್ಯಮದತ್ತ ಹೊರಳುತ್ತದೆ. ೧೯೮೦ ರಲ್ಲಿ 'ಲಂಕೇಶ್ ಪತ್ರಿಕೆ' ಯನ್ನು ಆರಂಭಿಸುವುದರೊಂದಿಗೆ ಲಂಕೇಶ್ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯದ ಬಹುದೊಡ್ಡ ಪಲ್ಲಟಕ್ಕೆ ಕಾರಣರಾಗುತ್ತಾರೆ. ಪತ್ರಿಕೋದ್ಯಮ ಎನ್ನುವುದು ರಾಜಕಾರಣಿಗಳ ಮತ್ತು ಧನಿಕರ ಸೊತ್ತು ಎಂದು ಅದುವರೆಗೂ ತಿಳಿದುಕೊಂಡಿದ್ದ ಜನಸಾಮಾನ್ಯರಿಗೆ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಜನರ ಧ್ವನಿ ಎಂದು ಅರ್ಥಮಾಡಿಸುತ್ತಾರೆ. ಲಂಕೇಶ್ ಸಾಹಿತ್ಯ ಮತ್ತು ಸಿನಿಮಾಕ್ಕಿಂತ ಪತ್ರಿಕೆಯ ಮೂಲಕವೇ ಜನರಿಗೆ ಹೆಚ್ಚು ಹತ್ತಿರವಾದವರು. ಬದುಕಿನ ಕೊನೆಯ ದಿನದವರೆಗೂ ಪತ್ರಿಕೋದ್ಯಮಕ್ಕೆ ನಿಷ್ಠರಾಗುಳಿದ ಲಂಕೇಶ್ ತಮ್ಮ ಪತ್ರಿಕೆಯನ್ನು ಕನ್ನಡದ ಜಾಣ-ಜಾಣೆಯರ ಪತ್ರಿಕೆಯಾಗಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದರು. ಪತ್ರಿಕಾ ಬರವಣಿಗೆಯಾಚೆಯೂ ಲಂಕೇಶ್ ಕಥೆ, ನಾಟಕ, ಕಾದಂಬರಿ, ಕವಿತೆ, ಗದ್ಯ, ಅನುವಾದದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಠ ಕೊಡುಗೆ ನೀಡಿದ ಕನ್ನಡದ ಅನನ್ಯ ಬರಹಗಾರ. ಓದಿದ್ದು ಇಂಗ್ಲಿಷ್ ಸಾಹಿತ್ಯ ಹತ್ತೊಂಬತ್ತು ವರ್ಷಗಳ ಕಾಲ ಪಾಠ ಮಾಡಿದ್ದು ಕೂಡ ಇಂಗ್ಲಿಷ್ ಸಾಹಿತ್ಯವನ್ನೇ ಆದರೆ ಬರೆದದ್ದು ಮಾತ್ರ ಕನ್ನಡದಲ್ಲಿ. ಲಂಕೇಶ್ ಅವರಂತೆ ಅನಂತಮೂರ್ತಿ, ಭೈರಪ್ಪ, ತೇಜಸ್ವಿ, ಚಂಪಾ ಇವರುಗಳೆಲ್ಲ ತಮ್ಮ ಅಧ್ಯಯನದ ವಿಷಯದಾಚೆಯೂ ಕನ್ನಡದಲ್ಲಿ ಶ್ರೇಷ್ಠ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಲಂಕೇಶರ ಸಮಕಾಲಿನ ಬರಹಗಾರರು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದ ಈ ಪ್ರವೃತ್ತಿ ಕನ್ನಡದ ಬರಹಗಾರರ ವಿಶಿಷ್ಠ ಗುಣದ ದ್ಯೋತಕವಾಗಿದೆ ಮತ್ತು ಅವರಲ್ಲಿನ ಈ ಗುಣ ಕನ್ನಡ ಸಾಹಿತ್ಯವನ್ನು ಸಾಕಷ್ಟು ಸಮೃದ್ಧಗೊಳಿಸಿದೆ.

ವಾಟೆ, ಸಸಿ, ಗಿಡ ಮತ್ತು ಮರ 


            ಪಿ. ಲಂಕೇಶ್ ಅವರ ಸಮಗ್ರ ಬದುಕಿನ ಕಥನ ಪುಸ್ತಕದಲ್ಲಿ ವಾಟೆ, ಸಸಿ, ಗಿಡ ಮತ್ತು ಮರ ಎನ್ನುವ ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶಿವಮೊಗ್ಗೆಗೆ ಒಂಬತ್ತು ಮೈಲಿ ದೂರದ ಕೊನಗವಳ್ಳಿ ಎಂಬ ಸಣ್ಣ ಊರಿನ ರೈತ ಕುಟುಂಬದಲ್ಲಿ ಅಪ್ಪ ಅಮ್ಮನಿಗೆ ಐದನೇ ಮಗುವಾಗಿ ಜನಿಸುವುದರೊಂದಿಗೆ ಲಂಕೇಶ್ ರ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ. ಲಂಕೇಶ್ ಮೇಲೆ ಅಪ್ಪನಿಗಿಂತ ಹೆಚ್ಚು ಪ್ರಭಾವ ಬೀರಿದ್ದು ಜಗಳಗಂಟಿ ಹೆಂಗಸೆಂದೇ ಖ್ಯಾತಳಾದ ಅವ್ವ. ಗಂಡಸಿಗೆ ಸಮನಾಗಿ ಹೊಲದಲ್ಲಿ ದುಡಿಯುತ್ತಿದ್ದ ಸಂಸಾರದ ಎಲ್ಲ ಹೊಣೆಯನ್ನು ಹೊತ್ತುಕೊಂಡ ಅವ್ವನ ಪಾತ್ರ ಅಚ್ಚಳಿಯದೆ ಮನಸ್ಸಿನಲ್ಲುಳಿದು ಮುಂದೆ 'ಅವ್ವ' ಕವಿತೆಗೂ ಮತ್ತು 'ಅಕ್ಕ' ಕಾದಂಬರಿಗೂ ಪ್ರೇರಣೆಯಾಯಿತು. ತಮ್ಮ ಆತ್ಮಕಥನದ ಪ್ರಾರಂಭದ ಪುಟಗಳಲ್ಲಿ ಲಂಕೇಶ್ ಮಲೆನಾಡಿನ ಬದುಕಿನ ಚಿತ್ರಣವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಡುತ್ತಾರೆ. ಅಲ್ಲಿನ ಬೇಸಾಯ, ಜಾತ್ರೆ, ಸಾಮಾಜಿಕ ಬದುಕು, ಟೆಂಟ್ ನಲ್ಲಿ ನೋಡಿದ ಸಿನಿಮಾ ಅನುಭವ, ಶಾಲೆಯ ವಾತಾವರಣ ಹೀಗೆ ತಾವು ಬಾಲ್ಯದಲ್ಲಿ ಕಂಡು ಅನುಭವಿಸಿದ್ದನ್ನು ಲಂಕೇಶ್ ಇಲ್ಲಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿರುವರು.

          ಶಿವಮೊಗ್ಗೆಯಲ್ಲಿ ಓದುತ್ತಿದ್ದಾಗಲೇ ಸಾಹಿತಿಗಳ ಸಂಪರ್ಕಕ್ಕೆ ಬಂದು ಲಂಕೇಶ್ ರ ಬದುಕು ಮಹತ್ವದ ತಿರುವು ಪಡೆದುಕೊಳ್ಳುತ್ತದೆ. ಅನಕೃ, ಶಿವರಾಮ ಕಾರಂತ, ಕೋ. ಚೆನ್ನಬಸ್ಸಪ್ಪ, ಜಿ. ಎಸ್. ಶಿವರುದ್ರಪ್ಪ, ನಿರಂಜನ, ದ ರಾ ಬೇಂದ್ರೆ ಇವರುಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ನೋಡುವ ಅವಕಾಶ ಒದಗಿಬರುತ್ತದೆ. ಡಾಕ್ಟರಾಗಬೇಕೆಂದು ಬಯಸಿದ್ದ ಲಂಕೇಶ್ ರಿಗೆ ಮೆಡಿಕಲ್ ಸೀಟು ಸಿಗದೇ ನಿರಾಶರಾದಾಗ ಶಿವರುದ್ರಪ್ಪನವರ ಸಲಹೆ ಮೆರೆಗೆ ಇಂಗ್ಲಿಷ್ ಆನರ್ಸಗೆ ಸೇರಿಕೊಳ್ಳುತ್ತಾರೆ. 'ಕನ್ನಡದಲ್ಲಿ ವಿಮರ್ಶಕರು ಕಮ್ಮಿ. ಇಂಗ್ಲಿಷ್ ಆನರ್ಸ್ ಗೆ ಸೇರಿದರೆ ಸಾಹಿತ್ಯದ ಜೊತೆಗೆ ವಿಮರ್ಶೆಯ ಮರ್ಮ ತಿಳಿಯುತ್ತದೆ' ಎಂದ ಜಿಎಸ್ಸೆಸ್ ಅವರ ಮಾತುಗಳೇ ಪ್ರೇರಣೆಯಾಗಿ ಲಂಕೇಶ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಆನರ್ಸ್ ನ್ನು ಆಯ್ದುಕೊಳ್ಳುತ್ತಾರೆ. ಇಂಗ್ಲಿಷ್ ಸಾಹಿತ್ಯದಿಂದ ಎಲಿಯೆಟ್ಸ್, ಕಿಟ್ಸ್, ಬೋದಿಲೇರ್, ಲೋರ್ಕಾ, ನೆರೂಡ್, ಫಾಸ್ಟರ್ ನಾಕ್, ಹೆಮಿಂಗ್ವೆ ಇವರುಗಳನ್ನೆಲ್ಲ ಕನ್ನಡದ ಓದುಗರಿಗೆ ಪರಿಚಯಿಸುತ್ತಾರೆ. ಈ ವಿಷಯದಲ್ಲಿ ಕನ್ನಡದ ಓದುಗರು ಜಿ. ಎಸ್. ಎಸ ಅವರಿಗೆ ನಿಜಕ್ಕೂ ಋಣಿಗಳಾಗಿರಬೇಕು. ವೈದ್ಯರಾಗಿ ಎಲ್ಲೋ ಕಳೆದು ಹೋಗುತ್ತಿದ್ದ ಲಂಕೇಶ್ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಪಾಶ್ಚಿಮಾತ್ಯ ಸಾಹಿತ್ಯದ ಓದಿನ ಅನುಭವದಿಂದ ಕನ್ನಡಕ್ಕೆ ಅತ್ಯುತ್ತಮ ಕೃತಿಗಳನ್ನು ಕೊಡುಗೆಯಾಗಿ ನೀಡಿದರು.

           ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕರಾಗಿ ಲಂಕೇಶ್ ಅವರದು ಅಧ್ಯಾಪನ ಕ್ಷೇತ್ರದಲ್ಲಿ ೧೯ ವರ್ಷಗಳ ಕೃಷಿ. ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ. ಅಧ್ಯಾಪಕ ವೃತ್ತಿಯಲ್ಲಿ ತಾನು ಯಶಸ್ಸು ಸಾಧಿಸಲಿಲ್ಲ ಎನ್ನುವ ಅವರೊಳಗಿನ ಪ್ರಾಮಾಣಿಕ ತೊಳಲಾಟ ವೃತ್ತಿಯುದ್ದಕ್ಕೂ ಲಂಕೇಶ್ ರನ್ನು ಕಾಡುತ್ತದೆ. ಕ್ಲಾಸಿಗೆ ಹೋಗಿ ಪಾಠ ಮಾಡುವುದೇ ಕಷ್ಟವೆನಿಸುತ್ತಿತ್ತು, ಪಾಠ ಮಾಡುವುದಕ್ಕೆ ವಿಚಿತ್ರ ರೀತಿಯಲ್ಲಿ ಕಂಪಿಸುತ್ತಿದ್ದೆ, ನಾನು ಒಳ್ಳೆಯ ಅಧ್ಯಾಪಕನಾಗಬೇಕೆಂದು ಭ್ರಮೆ ಪಡೆದಷ್ಟೂ ಅನೇಕ ವಿದ್ಯಾರ್ಥಿಗಳು ನನ್ನನ್ನು ಇಷ್ಟಪಡದಿರುವುದು ನನಗೆ ಗೊತ್ತಿತ್ತು ಈ ವಾಕ್ಯಗಳು ಲಂಕೇಶ್ ರ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಪುರಾವೆ ಒದಗಿಸುತ್ತವೆ. ಒಂದೆಡೆ ಸಹ್ಯಾದ್ರಿ ಮತ್ತು ಸೆಂಟ್ರಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂಘರ್ಷ, ಇನ್ನೊಂದೆಡೆ ಅಧ್ಯಾಪಕ ವೃತ್ತಿ ಇಕ್ಕಟ್ಟಾದ ಓಣಿಯಂತೆ ವ್ಯಕ್ತಿತ್ವವನ್ನೇ ನಾಶಪದಿಸಬಲ್ಲ ಮಾತಿನ ಕಸುಬಿನಂತೆ ಕಾಣಿಸುತ್ತದೆ ಎನ್ನುವ ಪ್ರಕ್ಷುಬ್ಧತೆ ಒಟ್ಟಿನಲ್ಲಿ ದಿಗಿಲು, ಕಿಳರಿಮೆ, ಒತ್ತಡ, ಭ್ರಮೆ, ಹತಾಶೆ, ಹುಂಬುತನದಲ್ಲೇ ಅಧ್ಯಾಪನ ವೃತ್ತಿಯ ದಿನಗಳು ಕಳೆದು ಹೋಗುತ್ತವೆ. ಲಂಕೇಶ್ ನಾಡಿನ ಅಸಂಖ್ಯಾತ ಕನ್ನಡಿಗರಿಗೆ 'ಮೇಷ್ಟ್ರು' ಎಂದೇ ಪರಿಚಿತರಾದರೂ ತಮ್ಮ ಉಪನ್ಯಾಸಕ ವೃತ್ತಿಯಲ್ಲಿ ಅವರು ಯಶಸ್ಸು ಮತ್ತು ಜನಪ್ರಿಯತೆ ಗಳಿಸದಿರುವುದು ಮಾತ್ರ ವಿಪರ್ಯಾಸದ ಸಂಗತಿ. ಲಂಕೇಶ್ ತಮ್ಮ ಸಹ ಅಧ್ಯಾಪಕರುಗಳ ಕನಸು, ಭ್ರಮೆ, ಕಾಮ, ಆಕರ್ಷಣೆಯನ್ನು ತೆರೆದಿಡುವುದು ಪುಸ್ತಕದೊಳಗಿನ ಕೌತುಕದ ಸಂಗತಿಗಳಲ್ಲೊಂದು. ಅಧ್ಯಾಪಕರು ಹುಡುಗರಿಗಿಂತಲೂ ಹೆಚ್ಚಾಗಿ ತಮ್ಮ ವಿದ್ಯಾರ್ಥಿನಿಯರ ಕನಸು ಕಾಣುತ್ತಾರೆ ಎಂದು ಹೇಳುವ ಲಂಕೇಶ್ ಅದಕ್ಕೆ ಉದಾಹರಣೆಗಳನ್ನೂ ಕೊಡುತ್ತಾರೆ. ಜೊತೆಗೆ ಅಧ್ಯಾಪಕನಾಗಿ ತಾನು ಸಹ ಅಂಥದ್ದೊಂದು ಭ್ರಮೆ, ಕಾಮ ಮತ್ತು ಆಕರ್ಷಣೆಗೆ ಒಳಗಾಗಿದ್ದನ್ನು ಹೇಳಲೂ ಅವರು ಹಿಂಜರಿಯುವುದಿಲ್ಲ. ಲೇಖಕನ ಇಂಥದ್ದೊಂದು ಪ್ರಾಮಾಣಿಕ ಗುಣದಿಂದಲೇ ಪುಸ್ತಕದ ಓದು ನಮಗೆ ಹೆಚ್ಚು ಆಪ್ತವಾಗುತ್ತದೆ. ಬೇರೆಯವರ ಗುಣಾವಗುಣಗಳನ್ನು ಪಟ್ಟಿ ಮಾಡುವಷ್ಟೇ ನಮ್ಮೊಳಗಿನ ಗುಣಾವಗುಣಗಳನ್ನು ತೆರೆದಿಡುವ ಎದೆಗಾರಿಕೆ ಲೇಖಕನಿಗಿರಬೇಕು ಎನ್ನುವುದನ್ನು ಲಂಕೇಶ್ ತಮ್ಮ ಆತ್ಮಕಥೆಯ ಬರವಣಿಗೆಯಲ್ಲಿ ತೋರಿಸಿಕೊಟ್ಟಿರುವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ಘಳಿಗೆ ಲಂಕೇಶ್ ಕುಮಾರಿ ಎನ್ನುವ ವಿದ್ಯಾರ್ಥಿನಿಯನ್ನು ಬಹುವಾಗಿ ಹಚ್ಚಿಕೊಳ್ಳುತ್ತಾರೆ. ತಮ್ಮ ಪತ್ನಿಯಲ್ಲಿನ ವೈಚಾರಿಕ ಕೊರತೆಯನ್ನು ಈ ಕುಮಾರಿಯಲ್ಲಿ ತುಂಬಿಕೊಳ್ಳುತ್ತಿರುವ ಭ್ರಮೆ ಅವರದು. ಕುಮಾರಿಯನ್ನು ಉತ್ಕಟವಾಗಿ ಪ್ರೀತಿಸಲು ಪ್ರಾರಂಭಿಸಿದ ಹೊತ್ತು ಆಕೆಗೊಬ್ಬ ಗೆಳೆಯನಿರುವ ವಿಷಯ ತಿಳಿದು ಒಂದು ರೀತಿಯ ಸೋಲು, ಷಂಡತನ, ಏನೂ ಮಾಡಲಾಗದಂಥ ಅಸಹಾಯಕತೆ ಅವರನ್ನು ಕಾಡುತ್ತದೆ. ಕೊನೆಗೆ ಅದು ಪ್ರೇಮವೂ ಅಲ್ಲ ಹಾಗೂ ವ್ಯಭಿಚಾರವೂ ಆಗಿರದೆ ಅದೊಂದು ಬಗೆಯ ಆತ್ಮಘಾತಕ ದುಗುಡದಂತೆ ಇತ್ತು ಎಂದು ವಿವರಿಸುತ್ತಾರೆ. ಈ ನಡುವೆ ಸಿನಿಮಾ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಲಂಕೇಶ್ ಅವರಿಗೆ ಒಂದು ಹಂತದಲ್ಲಿ ಉಪನ್ಯಾಸಕ ವೃತ್ತಿಗೆ ತಮ್ಮಿಂದ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ ೧೯೭೮ ರಲ್ಲಿ ತಮ್ಮ ಹತ್ತೊಂಬತ್ತು ವರ್ಷಗಳ ವೃತ್ತಿಗೆ  ರಾಜಿನಾಮೆ ನೀಡುವುದರೊಂದಿಗೆ ತಮ್ಮನ್ನು ಕಾಡುತ್ತಿರುವ ನೋವಿನಿಂದ ಹೊರಬರುತ್ತಾರೆ.

ಲಂಕೇಶ್ ಮತ್ತು ಸಿನಿಮಾ 


            ೧೯೬೯ ರಲ್ಲಿ ಲಂಕೇಶ್ 'ಸಂಸ್ಕಾರ' ಸಿನಿಮಾದಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾದೊಂದಿಗಿನ ಅವರ ನಂಟು ಪ್ರಾರಂಭವಾಗುತ್ತದೆ. ಯು. ಆರ್.  ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯನ್ನು ಸಿನಿಮಾ ಮಾಡಲು ಕೈಗೆತ್ತಿಕೊಂಡಾಗ ಲಂಕೇಶ್ ನಾರಣಪ್ಪನ ಪಾತ್ರಕ್ಕೆ ಆಯ್ಕೆಯಾಗುತ್ತಾರೆ. 'ಸಂಸ್ಕಾರ' ನನ್ನ ಆಳದಲ್ಲಿ ಟಿಪ್ಪಣಿಗಳಾಗಿ, ಹಲವಾರು ಶಾಟ್ ಗಳ ತುಣುಕುಗಳಾಗಿ ನನ್ನಲ್ಲಿ ನಿಂತು ಹೋಯಿತು. ಆದರೆ ನನ್ನ ಅಂತರಾಳ ಏನನ್ನೂ ಸೃಷ್ಟಿಸಲಾಗದ ಹತಾಶೆಯಿಂದ ಅಲ್ಲೋಲಕಲ್ಲೋಲವಾಗಿತ್ತು ಎಂದೆನ್ನುವ ಲಂಕೇಶ್ ಮುಂದೆ 'ಪಲ್ಲವಿ', 'ಅನುರೂಪ', 'ಖಂಡವಿದಕೋ  ಮಾಂಸವಿದಕೋ', 'ಎಲ್ಲಿಂದಲೋ ಬಂದವರು' ಸಿನಿಮಾಗಳ ಮೂಲಕ ತಮ್ಮೊಳಗಿನ ಹತಾಶೆ ಮತ್ತು ಅಲ್ಲೋಲಕಲ್ಲೋಲಗಳನ್ನು ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಲಂಕೇಶ್ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟಾದರೂ ಅವರ ಆತ್ಮಕಥೆ ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ಓದುಗರಿಗೆ ಪರಿಚಯಿಸುತ್ತದೆ. ಸಿನಿಮಾ ಮೇಲಿನ ಉತ್ಕಟ ಪ್ರೀತಿ ಒಮ್ಮೆ ಅಡಿಗರನ್ನು ಸಿನಿಮಾ ತೋರಿಸುವಂತೆ ಪ್ರೇರೇಪಿಸುತ್ತದೆ. ಡೇವಿಡ್ ಲೀನ್ ನಿರ್ದೇಶನದ 'ಬ್ರಿಜ್ ಆನ್ ದಿ ರಿವರ್ ಕ್ವೌಯ್' ಸಿನಿಮಾ ವೀಕ್ಷಿಸಿದ ಅಡಿಗರ ನಿರ್ಲಿಪ್ತ ಪ್ರತಿಕ್ರಿಯೆಯಿಂದ ಲಂಕೇಶ್ ರಿಗೆ ಭಾರಿ ನಿರಾಸೆ ಉಂಟಾಗುತ್ತದೆ. ಅಡಿಗರು ಸಿನಿಮಾ ವಿಚಾರದಲ್ಲಿ ನಿಜಕ್ಕೂ ಅನಕ್ಷರಸ್ಥರು ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ.

             'ಸೆವೆನ್ ಬ್ರೈಡ್ಸ್ ಫಾರ್ ಸೆವೆನ್ ಬ್ರದರ್ಸ್', 'ಬ್ರಿಜ್ ಆನ್ ದಿ ರಿವರ್ ಕ್ವೌಯ್', 'ಬ್ಲೂ ಏಂಜಲ್', 'ವೈಲ್ಡ್ ಸ್ಟ್ರಾಬೆರಿಸ್', 'ಪರ್ಸೊನಾ' ಚಿತ್ರಗಳನ್ನು ಕುರಿತು ಬರೆಯುವಾಗ ಒಂದು ರೀತಿಯ ಉತ್ಕಟ ಪ್ರೀತಿ ಅವರಲ್ಲಿ ಕಾಣುತ್ತದೆ. ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆಗೆ ಕನ್ನಡಿ ಹಿಡಿಯುವ ಬರ್ಗಮನ್ ನ 'ಪರ್ಸೊನಾ' ಸಿನಿಮಾ ಒಂದರ್ಥದಲ್ಲಿ ಲಂಕೇಶ್ ರ ಬದುಕಿನ ದ್ವಂದ್ವ, ತಲ್ಲಣ, ಅಸಹಾಯಕತೆಗಳ ಒಳನೋಟವಾಗಿ ಕಾಣಿಸುತ್ತದೆ. ಸಿನಿಮಾ ಮಾಡುವುದು ನೆರಳು ಬೆಳಕನ್ನು ಬೆರೆಸಿ, ನೋಡುವುದು ಕತ್ತಲ ಕೋಣೆಯಲ್ಲಿ ಎಂದೆನ್ನುವ ಲಂಕೇಶ್ ರಿಗೆ ಸಿನಿಮಾ ಬದುಕಿನ ವಾಸ್ತವಿಕತೆಯ ತಳಹದಿಯ ಮೇಲೆ ಎದ್ದು ನಿಲ್ಲಬೇಕೆನ್ನುವ ಅರಿವಿತ್ತು. ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ ಎನ್ನುವುದರಲ್ಲಿ ಅವರಿಗೆ ಬಲವಾದ ನಂಬಿಕೆಯಿತ್ತು. ಈ ನಂಬಿಕೆಯ ಕಾರಣದಿಂದಲೇ ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರುನಂತಹ ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು.

            ಲಂಕೇಶ್ ಈ ಸಿನಿಮಾ ಪ್ರಪಂಚವನ್ನು ತೀರ ವ್ಯವಹಾರಿಕ ದೃಷ್ಟಿಯಿಂದ ನೋಡುವಲ್ಲಿ ವಿಫಲರಾದ ಕಾರಣ  ಅವರು ಸಿನಿಮಾ ನಿರ್ದೇಶಕನಾಗಿ ಯಶಸ್ಸನ್ನು ಪಡೆಯಲು ಸಾಧ್ಯವಾಗದೆ ಹೋಯಿತು. ಅವರ ಸಿನಿಮಾಗಳು ವಿಮರ್ಶಕರ ಗಮನ ಸೆಳೆದರೂ ಗಲ್ಲಾಪೆಟ್ಟಿಗೆಯನ್ನು ತುಂಬುವಲ್ಲಿ ವಿಫಲವಾದವು. ವ್ಯವಹಾರ ಜ್ಞಾನದ ಕೊರತೆಯಿಂದಾಗಿ ಲಂಕೇಶ್ ತಮ್ಮ ಸಿನಿಮಾಗಳ ನಿರ್ಮಾಣದಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು. ಈ ಆರ್ಥಿಕ ನಷ್ಟದ ನಡುವೆಯೂ 'ಪಲ್ಲವಿ' ಸಿನಿಮಾಕ್ಕೆ ದೊರೆತ ರಾಷ್ಟ್ರಪ್ರಶಸ್ತಿ ಮತ್ತು ಉಳಿದ ಸಿನಿಮಾಗಳಿಗೆ ದಕ್ಕಿದ ರಾಜ್ಯ ಪ್ರಶಸ್ತಿ ಲಂಕೇಶ್ ರಿಗೆ ಒಂದಿಷ್ಟು ನೆಮ್ಮದಿ ಕೊಟ್ಟವು. ಲಂಕೇಶ್ ಅದ್ಭುತ ಕಲಾವಿದನಲ್ಲದಿದ್ದರೂ ಅವರೊಳಗೊಬ್ಬ ಸೃಜನಶೀಲ ನಿರ್ದೇಶಕನಿದ್ದ. ಪಾಶ್ಚಿಮಾತ್ಯ ಸಿನಿಮಾಗಳನ್ನು ವಿಮರ್ಶೆಯ ಕಣ್ಣಿನಿಂದ ನೋಡುತ್ತಿದ್ದ ಲಂಕೇಶ್ ಕನ್ನಡದ ನೇಟಿವಿಟಿ ತಕ್ಕಂತೆ ಸಿನಿಮಾಗಳನ್ನು ನಿರ್ದೇಶಿಸುವ ಪ್ರತಿಭಾವಂತರಾಗಿದ್ದರು. ಆದರೆ ಕನ್ನಡ ಚಿತ್ರರಂಗ ಮಾತ್ರ ಈ ನಿರ್ದೇಶಕನಲ್ಲಿದ್ದ ಪ್ರತಿಭೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳದೆ ಹೋಯಿತು.

ಲಂಕೇಶ್ ಪತ್ರಿಕೆ 


          'ಲಂಕೇಶ್ ಪತ್ರಿಕೆ' ಯನ್ನು ಆರಂಭಿಸಿದ ಅವಧಿ ಲಂಕೇಶ್ ರ ಬದುಕಿನ ಮುಖ್ಯ ಕಾಲಘಟ್ಟವದು. ಲಂಕೇಶ್ ಪತ್ರಿಕೋದ್ಯಮವನ್ನು ಅಭ್ಯಸಿಸಿದವರಲ್ಲ. 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ Freelance ಪತ್ರಕರ್ತನಾಗಿ ತಮ್ಮ ಪತ್ರಿಕಾ ಬರವಣಿಗೆಯನ್ನು ಆರಂಭಿಸುವ ಲಂಕೇಶ್ ರಿಗೆ ಅಲ್ಲಿ ಅನೇಕ ಎಡರುತೊಡರುಗಳು ಎದುರಾಗುತ್ತವೆ. ಸಂಪಾದಕರ ಸಣ್ಣತನ, ಆಡಳಿತ ಮಂಡಳಿಯ ಅಸಹಕಾರದಿಂದ ಬೇಸತ್ತು ತಾವೇ ಒಂದು ಪತ್ರಿಕೆಯನ್ನು ತರಲು ಯೋಚಿಸುತ್ತಾರೆ. ಪ್ರಜಾವಾಣಿ ದಿನಪತ್ರಿಕೆಯಿಂದ ಹೊರಬಂದ ಕ್ಷಣ ಅವರ ಈ ನಿರ್ಧಾರ ಗಟ್ಟಿಯಾಗುತ್ತದೆ. ತಾವು ಹೊರತರುವ ಪತ್ರಿಕೆ ಶ್ರೀಮಂತ ಯಜಮಾನ, ಸಂಪಾದಕ ಮತ್ತು ಜಾಹಿರಾತುದಾರ ಎನ್ನುವ ಒಕ್ಕೂಟದಿಂದ ಮುಕ್ತವಾಗಿಸಬೇಕೆನ್ನುವ ಆಕಾಂಕ್ಷೆ ಲಂಕೇಶ್ ರದಾಗಿತ್ತು. ಅವರ ಈ ಆಕಾಂಕ್ಷೆಯಂತೆ ಯಾವುದೇ ಬಂಡವಾಳವಿಲ್ಲದೆ ೧೯೮೦ ರ ಜುಲೈ ೬ ನೇ ತಾರೀಖು 'ಲಂಕೇಶ್ ಪತ್ರಿಕೆ' ಜನ್ಮತೆಳೆಯಿತು. ಪತ್ರಿಕೆ ಲಂಕೇಶ್ ರೊಳಗಿನ ಆಳದ ದಿಗ್ಭ್ರಮೆಯ, ಅವರ ಪರಿಸರದ ಕಿರುದನಿಯ ಮತ್ತು ಇಡೀ ರಾಜ್ಯವನ್ನು ತುಂಬಿದ್ದ ಹತಾಶೆಯ ಪ್ರತೀಕವಾಗಿ ರೂಪುಗೊಳ್ಳತೊಡಗಿತು. ಪ್ರಾರಂಭದ ದಿನಗಳಲ್ಲಿ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲ, ಡಿ. ಆರ್. ನಾಗರಾಜ, ಚಂದ್ರೇಗೌಡ, ಪುಂಡಲಿಕ ಶೇಟ್, ರವೀಂದ್ರ ರೇಷ್ಮೆ ಅವರಂಥ ಬರಹಗಾರರ ನೈತಿಕ ಬೆಂಬಲ ಪತ್ರಿಕೆಗೆ ದೊರೆತು ಮಿಂಚಿನ ವೇಗದಲ್ಲಿ ಪ್ರತಿಗಳು ಖರ್ಚಾಗತೊಡಗಿದವು. ಲಂಕೇಶ್ ರೆ ಹೇಳಿಕೊಂಡಂತೆ ವಿಡಂಬನೆ, ಸ್ಮರಣೆ, ಭಾವುಕತೆ, ವೈಚಾರಿಕತೆ ಎಲ್ಲದರ ಮಿಶ್ರಣವಾದ ಪತ್ರಿಕೆ ರಾಜ್ಯದಲ್ಲಿ ವಿಚಿತ್ರ ಪರಿಣಾಮ ಬೀರಿತು. ಲಂಕೇಶ್ ಅವರ 'ಟೀಕೆ-ಟಿಪ್ಪಣೆ' ಮತ್ತು 'ನೀಲು' ಕವನ ಪತ್ರಿಕೆಯ ಬಹುಮುಖ್ಯ ಭಾಗಗಳಾಗಿ ಪತ್ರಿಕೆಯ ಜನಪ್ರಿಯತೆಯನ್ನು ಹೆಚ್ಚಿಸಿದವು. ಈ ನಡುವೆ ಮಹಿಳಾ ಬರಹಗಾರ್ತಿಯರಿಗೆ ಪತ್ರಿಕೆ ವೇದಿಕೆಯಾದದ್ದು, ರಾಜಕುಮಾರ ಮತ್ತು ವಾಟಾಳ ನಾಗರಾಜ ವಿರುದ್ಧ ಬರೆದು ಅವರ ಅಭಿಮಾನಿಗಳಿಂದಾದ ಹಲ್ಲೆ, ೧೯೮೩ ರ ಚುನಾವಣೆಯಲ್ಲಿ ಪತ್ರಿಕೆಯಿಂದಾದ ಬಹುದೊಡ್ಡ ರಾಜಕೀಯ ಬದಲಾವಣೆ, ಪತ್ರಿಕೆಗೆ ಎದುರಾದ ಆತಂಕದ ಘಳಿಗೆಗಳು ಈ ಎಲ್ಲ ಘಟನೆಗಳನ್ನು ಲಂಕೇಶ್ ತಮ್ಮ ಆತ್ಮಕಥೆಯಲ್ಲಿ ಮನೋಜ್ಞವಾಗಿ ಚಿತ್ರಿಸಿರುವರು.

             ಅಧ್ಯಾಪಕನಾಗಿ ಮತ್ತು ಸಿನಿಮಾ ನಿರ್ದೇಶಕನಾಗಿ ವಿಫಲರಾದ ಲಂಕೇಶ್ ರಿಗೆ 'ಪತ್ರಿಕೆ' ಯಿಂದ ಹಣ ಮತ್ತು ಹೆಸರು ಹೇರಳವಾಗಿ ಲಭಿಸಿತು. ೧೯೮೯ ರ ಹೊತ್ತಿಗೆ ಲಂಕೇಶ್ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಇದೇ ಅವಧಿಯಲ್ಲಿ ತಮ್ಮ ಆತ್ಮಾವಲೋಕನಕ್ಕಿಳಿಯುವ ಲಂಕೇಶ್ ಮಹಾದುರಹಂಕಾರಿಯೂ ಅಧಿಕಾರದ ಆಶೆಯುಳ್ಳವನೂ ಆಗುವ ಎಲ್ಲ ಅಪಾಯಗಳಿಂದ ತಪ್ಪಿಸಿಕೊಳ್ಳಲು ನನ್ನ ಕತೆಗಳು ನನಗೆ ನೆರವಾದವು ಎಂದು ಹೇಳಿಕೊಳ್ಳುತ್ತಾರೆ. ಸಾರ್ವಜನಿಕ ಜೀವನವನ್ನೇ ತನ್ನ ವೈಯಕ್ತಿಕ ಜೀವನವನ್ನಾಗಿ ಮಾಡಿಕೊಳ್ಳುವವನಿಗೆ ತನ್ನ ಸ್ವಂತದ ಇಷ್ಟ, ಹವ್ಯಾಸ, ಆನಂದಗಳೇ ಇರುವುದಿಲ್ಲ ಎನ್ನುವ ನಂಬಿಕೆಯಿಂದ ತೋಟ ಮಾಡುವುದು, ರೇಸ್ ಗೆ ಹೋಗುವುದು, ಇಸ್ಪಿಟ್ ಆಡುವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಲ್ಲಿ ಲಂಕೇಶ್ ರ ವ್ಯಕ್ತಿತ್ವ ಅನೇಕ ವೈರುಧ್ಯಗಳ ಸಮ್ಮಿಶ್ರಣವಾಗಿ ಗೋಚರಿಸಿದರೂ ಅವರೊಳಗಿನ ಈ ಎಲ್ಲ ವೈರುಧ್ಯಗಳೇ ನಮಗೆ ಪಾಠವಾಗಿಯೂ ಮತ್ತು ಆದರ್ಶವಾಗಿಯೂ ಕಾಣಿಸುತ್ತವೆ.

         ತನ್ನೊಳಗಿನ ಕಾಮ ಮತ್ತು ಲೈಂಗಿಕ ಬಯಕೆಯನ್ನು ಕುರಿತು ಬರೆಯುವಾಗಲೂ ಲಂಕೇಶ್ ಅವರಲ್ಲಿ ಯಾವುದೇ ಹಿಂಜರಿಕೆ ಇಲ್ಲದಿರುವುದು ಈ ಆತ್ಮಕಥೆಯಲ್ಲಿ ಮೆಚ್ಚುಗೆಯಾಗುವ ಬಹುಮುಖ್ಯ ವಿಷಯಗಳಲ್ಲೊಂದು. ಲಂಕೇಶ್ ತಮ್ಮ ಆತ್ಮಕಥೆಯಲ್ಲಿ ತಮ್ಮನ್ನು ತಾವು ಉದಾತ್ತ ಚಿಂತಕನಂತೆಯೋ, ಶ್ರೇಷ್ಠ ಬರಹಗಾರನಂತೆಯೋ ಇಲ್ಲವೇ ಬಹುಮುಖಿ ವ್ಯಕ್ತಿತ್ವದಂತೆಯೋ ಚಿತ್ರಿಸಿಕೊಂಡಿಲ್ಲ. ತಮ್ಮ ಬಗ್ಗೆ ಬರೆದುಕೊಳ್ಳುವಾಗ ಯಾವ ಸೋಗಲಾಡಿತನವಾಗಲಿ ಅಥವಾ ಮುಖವಾಡವಾಗಲಿ ಲಂಕೇಶ್ ಧರಿಸಿಕೊಂಡಿಲ್ಲ. ಕಾಮ, ಹತಾಶೆ, ದಿಗಿಲು, ಕೀಳರಿಮೆ, ಅತೃಪ್ತಿಗಳಿರುವ ಒಬ್ಬ ಸಾಧಾರಣ ಮನುಷ್ಯನಾಗಿ ಲಂಕೇಶ್ ತಮ್ಮನ್ನು ತಾವು ಕಂಡುಕೊಂಡಿರುವರು. ಚಿಕ್ಕ ವಯಸ್ಸಿನಲ್ಲಿ ಗದ್ದೆಯಲ್ಲಿ ನಿಂಗಿಯನ್ನು ನೆಲಕ್ಕೆ ಕೆಡವಿ ಅನುಭವಿಸಿದ ಲೈಂಗಿಕ ಮುಖಭಂಗ, ರಂಗಿಯನ್ನು ಮುಟ್ಟಲು ಹೋಗಿ ಬೈಯಿಸಿಕೊಂಡಿದ್ದು, ಸಂಸ್ಕಾರ ಚಿತ್ರೀಕರಣದ ವೇಳೆ ಸಹನಟಿಯನ್ನು ಸೇರುವ ಅವಕಾಶದಿಂದ ವಂಚಿತರಾದದ್ದು ಈ ಎಲ್ಲವನ್ನೂ ಲಂಕೇಶ್ ಸಹಜವೆಂಬಂತೆ ಹೇಳಿಕೊಂಡಿರುವರು. ಈ ನಡುವೆ ಮದುವೆ, ಪತ್ನಿ ಇಂದಿರಾ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದು, ಮಕ್ಕಳು ಇದೆಲ್ಲವನ್ನು ಕುರಿತು ಲಂಕೇಶ್ ಬರೆಯುತ್ತಾರೆ. ಪುಸ್ತಕದ ಅಲ್ಲಲ್ಲಿ ಅಪ್ಪ, ಅವ್ವ, ಅನಕೃ, ಕೆ. ವಿ. ಸುಬ್ಬಣ್ಣ, ಗೋಪಾಲಗೌಡರು, ಸ್ನೇಹಲತಾ ರೆಡ್ಡಿ, ಬಿ. ವಿ. ಕಾರಂತ, ಶ್ರೀಕೃಷ್ಣ ಆಲನಹಳ್ಳಿ, ಟಿ. ಎಸ್. ರಾಮಚಂದ್ರರಾವ, ದಿನಸುಡರ್ ಪತ್ರಿಕೆಯ ಮಣಿ, ಬಾಲಾಜಿ ನಾಯಕ್ ಇವರುಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿರುವರು.

            ಕೆಲವೊಮ್ಮೆ ಆತ್ಮಕಥೆಗಳನ್ನು ಓದುವಾಗ ಆ ಪುಸ್ತಕಗಳ ವಿಷಯ ವಸ್ತು ಲೇಖಕನ  ವೈಯಕ್ತಿಕ ಬದುಕಿನ ಜೊತೆಜೊತೆಗೆ ಆ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಅನೇಕ ಮಜಲುಗಳನ್ನು ಪರಿಚಯಿಸುತ್ತವೆ. ಸಾಮಾನ್ಯವಾಗಿ ಇದು ಆ ಆತ್ಮಕಥನದ ಕಥಾನಾಯಕ ಕಟ್ಟಿಕೊಂಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಅವಲಂಬಿಸಿರುತ್ತದೆ. ಕನ್ನಡಕ್ಕೆ ಕಲ್ಲುಕರಗುವ ಸಮಯ, ಮುಸ್ಸಂಜೆಯ ಕಥಾ ಪ್ರಸಂಗ, ಅಕ್ಕ, ಸಂಕ್ರಾಂತಿಯಂತಹ ಶ್ರೇಷ್ಠ ಕೃತಿಗಳನ್ನು ಕೊಡುಗೆಯಾಗಿ ನೀಡಿದ ಪಿ. ಲಂಕೇಶ್ ತಮ್ಮ ಈ ಆತ್ಮಕಥೆಯಲ್ಲಿ ಅನೇಕ ಪಾಶ್ಚಿಮಾತ್ಯ ಬರಹಗಾರರನ್ನು ಕುರಿತು ಬರೆಯುತ್ತಾರೆ. ಕನ್ನಡದ ಈ ಕೃತಿ ಓದುತ್ತಿರುವ ಘಳಿಗೆ ನಮಗೆ ಎಲಿಯೆಟ್ಸ್, ಕಿಟ್ಸ್, ಬೋದಿಲೇರ್, ನೆರೂಡ್, ಹೆಮಿಂಗ್ವೆ ಪರಿಚಿತರಾಗುತ್ತಾರೆ. ಬೋದಿಲೇರ್ ನ ರಸಿಕ ಜೀವನ, ಹತ್ತಾರು ಕಾಯಿಲೆಗಳು, ನೋವುಗಳು, ಪ್ರಶಸ್ತಿ-ಸ್ಥಾನಮಾನ-ಮನ್ನಣೆ ಎನ್ನುವುದನ್ನೂ ತಿರಸ್ಕರಿಸಿದ ಆತನ ಬದುಕಿನ ಸಾರ್ಥಕತೆ ಈ ಎಲ್ಲ ಲಂಕೇಶ್ ರ ಬರಹಗಳಿಂದಲೇ ನಮ್ಮ ಅರಿವಿನ ವ್ಯಾಪ್ತಿಗೆ ಬರುತ್ತವೆ. ಬದುಕಿನ ಕೊನೆಯ ದಿನಗಳಲ್ಲಿ ಕಾಣಿಸಿಕೊಳ್ಳುವ ದೈಹಿಕ ತೊಂದರೆಗಳು ಲಂಕೇಶ್ ಅವರನ್ನು ಸಹ ಬೋದಿಲೇರ್ ನಂತೆ ಆತ್ಮಾವಲೋಕನಕ್ಕೆ ಒಳಪಡಿಸುತ್ತವೆ. ಅಂತೆಯೇ 'ನನ್ನ ಗಾಢ ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತಿದ್ದಾಗ ಈ ಮುತ್ಸದ್ದಿತನ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು' ಎನ್ನುವ ಆತ್ಮಾವಲೋಕನದ ಸಾಲುಗಳೊಂದಿಗೆ ಲಂಕೇಶ್ ರ ಆತ್ಮಕಥೆ ಕೊನೆಗೊಳ್ಳುತ್ತದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, November 3, 2014

ನೂರರ ಹೊಸ್ತಿಲಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

     




                     ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಹೊಸ್ತಿಲಲ್ಲಿ ನಿಂತಿದೆ. ೧೯೧೫ ರಲ್ಲಿ ಸ್ಥಾಪನೆಯಾದ ಕನ್ನಡ  ಸಾಹಿತ್ಯ ಪರಿಷತ್ತು ಅನೇಕ ಏಳು ಬೀಳುಗಳ ನಡುವೆಯೂ ನೂರು ವರ್ಷಗಳನ್ನು ಪೂರೈಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಅತ್ಯಂತ ಅಭಿಮಾನದ ಸಂಗತಿಯಿದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಆದ್ಯತೆ ನೀಡಿದರು. ಇಂಥದ್ದೊಂದು ಕನ್ನಡ ಸಂಸ್ಥೆಯ ಸ್ಥಾಪನೆಗೆ   ಆ ದಿನಗಳ ಅನೇಕ ಸಾಹಿತಿಗಳ ಬೇಡಿಕೆಯೂ ಇತ್ತು. ಸರ್ ಎಮ್. ವಿಶ್ವೇಶ್ವರಯ್ಯ ಮತ್ತು ಕರ್ಪೂರ ಶ್ರೀನಿವಾಸ ರಾವ ಕನ್ನಡ ಸಾಹಿತ್ಯದ ರಕ್ಷಣೆಗಾಗಿ ಪರಿಷತ್ತನ್ನು ಸ್ಥಾಪಿಸಲು ಕಂಕಣಬದ್ಧರಾಗಿ ದುಡಿದರು. ಒಟ್ಟಾರೆ ಎಲ್ಲರ ಪ್ರಯತ್ನ ಮತ್ತು ಆಸೆಯಂತೆ ೫. ೫. ೧೯೧೫ ರಂದು ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ನಂತರದ ದಿನಗಳಲ್ಲಿ ಮಾಸ್ತಿ, ಉತ್ತಂಗಿ ಚೆನ್ನಪ್ಪ, ಹಂ. ಪಾ. ನಾಗರಾಜಯ್ಯ, ಮೂರ್ತಿರಾವ, ವೆಂಕಟಸುಬ್ಬಯ್ಯ, ಗೊರುಚ, ಚಂಪಾ ಅವರಂಥ ಖ್ಯಾತನಾಮ ಸಾಹಿತಿಗಳ ಅಧ್ಯಕ್ಷತೆ ಲಭ್ಯವಾಯಿತು. ಸಣ್ಣ ಕೊಠಡಿಯಿಂದ ಸ್ವತಂತ್ರ ಕಟ್ಟಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಾಂತರಗೊಂಡು ಕನ್ನಡ ಸಾಹಿತ್ಯದ ಮತ್ತು ನಾಡಿನ ರಕ್ಷಣೆಯ ಕೆಲಸದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿತು. ಪುಸ್ತಕಗಳ ಪ್ರಕಟಣೆ, ಸಾಹಿತ್ಯ ಸಮ್ಮೇಳನದ ಏರ್ಪಾಡು, ದತ್ತಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಬೇಗ ಜನರಿಗೆ ಹತ್ತಿರವಾಯಿತು. ಪ್ರಾರಂಭದ ದಿನಗಳಲ್ಲಿ ದೊರೆತ ಸಾಹಿತ್ಯಾಸಕ್ತರ ನೆರವು ಮತ್ತು ಅವರುಗಳ ಪ್ರಾಮಾಣಿಕ ದುಡಿಮೆಯ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತು ಬಹಳಷ್ಟು ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಯಶಸ್ಸನ್ನು ಕಾಣಲು ಸಾಧ್ಯವಾಯಿತು.

                 ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣದ ರೂಪಾಂತರ ಹೊಂದಿದ ಮೇಲೆ ಪರಿಷತ್ತಿನ ನೀತಿ ನಿಲುವುಗಳಲ್ಲಿ ಮತ್ತು ಅದರ ಕಾರ್ಯ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ಹರಿದು ಬರುವ ಸರ್ಕಾರದ ನೆರವು ಮತ್ತು ಸಾರ್ವಜನಿಕರ ದೇಣಿಗೆ ಅದು ಅನೇಕರು ಅಧ್ಯಕ್ಷ ಗಾದಿಗೆ ಹಪಾಹಪಿಸುವಂತೆ ಮಾಡಿತು. ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ರಾಜಕೀಯದ ಖದರು ಗೋಚರಿಸತೊಡಗಿತು. ಈ ಮಾತು  ಜಿಲ್ಲಾ ಮತ್ತು ತಾಲೂಕು ಮಟ್ಟದ ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಗೂ ಅನ್ವಯಿಸುತ್ತದೆ. ಪರಿಣಾಮವಾಗಿ ಪರಿಷತ್ತಿನ ಸದಸ್ಯರನ್ನು ಹುಡುಕಿಕೊಂಡು ಹೋಗುವ, ಅವರನ್ನು ಓಲೈಸುವ ಹಾಗೂ ಒಂದಿಷ್ಟು ಪ್ರಲೋಭನೆಯನ್ನೊಡ್ಡುವಂಥ ಅನೈತಿಕ ಕೆಲಸಗಳಿಗೆ ನಮ್ಮ ಸಾಹಿತಿಗಳು ಕೈಹಾಕತೊಡಗಿದರು. ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ಜಾತಿ ಮತ್ತು ಪಂಗಡಗಳು ನಿರ್ಣಾಯಕ ಪಾತ್ರವಹಿಸತೊಡಗಿದವು. ರಾಜಕಾರಣಿಗಳು ಸಹ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಅನುಕೂಲವಾಗಲೆಂದು ಪರೋಕ್ಷವಾಗಿಯೇ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲಾರಂಭಿಸಿದರು. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಅದು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧವಿಲ್ಲದವರು ಸಹ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸತೊಡಗಿದ್ದು. ಕೆಲವು ವರ್ಷಗಳ ಇತಿಹಾಸವನ್ನು ಕೆದಕಿ ನೋಡಿದಾಗ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗುತ್ತಿರುವವರಲ್ಲಿ ಹೆಚ್ಚಿನವರಿಗೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲ. ಇಂಥ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜಕೀಯದ ಅಖಾಡ  ಮಾಡಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಮಾತಿಗೆ ಹಾವೇರಿಯಲ್ಲಿ ನಡೆಯಬೇಕಿದ್ದ ೮೧ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬೇರೆಡೆ ಸ್ಥಳಾಂತರಗೊಳ್ಳುವ ಸಿದ್ಧತೆಯಲ್ಲಿರುವುದೆ ಒಂದು ಉತ್ತಮ ಉದಾಹರಣೆ. ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಜಿದ್ದಾಜಿದ್ದಿಯ ಪರಿಣಾಮ ಆ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಈಗ ನಿರಾಸೆಯಾಗಿದೆ. ಇವರೇನು ಸಾಹಿತಿಗಳೇ ಅಥವಾ ರಾಜಕಾರಣಿಗಳೇ ಎಂದು ಜಿಲ್ಲೆಯ ಜನ ಅನುಮಾನದಿಂದ ನೋಡುವಂತಾಗಿದೆ.

                     ಪ್ರತಿ ವರ್ಷದ  ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜಕಾರಣಿಗಳಿಂದ ಮುಕ್ತವಾಗಿ ಸಂಘಟಿಸಲು ಇದುವರೆಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಧ್ಯವಾಗಿಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು  ನಮ್ಮ ರಾಜಕಾರಣಿಗಳ ಒಡ್ಡೋಲಗವಾಗಿ ಪ್ರತಿಬಿಂಬಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನದಂಥ ಮಹತ್ವದ ವೇದಿಕೆಯನ್ನು ರಾಜಕಾರಣಿಗಳೇ ಹೆಚ್ಚಾಗಿ ಆಕ್ರಮಿಸಿಕೊಳ್ಳುತ್ತಿರುವರು. ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ನಾಡು ನುಡಿಗಿಂತ ರಾಜಕಾರಣಿಗಳ ಸ್ವಹಿತಾಸಕ್ತಿಯ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಚಂಪಾ ಅವರನ್ನು ಹೊರತುಪಡಿಸಿ ಸಾಹಿತ್ಯ ಪರಿಷತ್ತಿನ ಯಾವ ಅಧ್ಯಕ್ಷರೂ ರಾಜಕಾರಣಿಗಳಿಗೆ ಸಮ್ಮೇಳನದ ವೇದಿಕೆ ಹತ್ತಬೇಡಿ ಎಂದು ಗುಡುಗಿಲ್ಲ. ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿಗಳು ಬಿಡುಗಡೆ ಮಾಡುವ ಅನುದಾನ ನಮ್ಮ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಅದೊಂದು ಋಣದಂತೆ ಭಾಸವಾಗುತ್ತಿದೆ. ಅದಕ್ಕೆಂದೇ ರಾಜಕಾರಣಿಗಳನ್ನು ಓಲೈಸುವ  ಹಾಗೂ ಅವರುಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಉಮೇದಿಯಲ್ಲಿ  ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕನ್ನಡದ ಕೆಲಸ ಗೌಣವಾಗಿ ಕಾಣಿಸುತ್ತಿದೆ. ಈ ಕಾರಣದಿಂದಲೇ ಇರಬೇಕು ತೇಜಸ್ವಿ ಅವರಂಥವರು ಸಾಹಿತ್ಯ ಪರಿಷತ್ತು, ಸಮ್ಮೇಳನ, ಅಕಾಡೆಮಿ ಯಾವ ಗೊಡವೆಯೂ ಬೇಡವೆಂದು ದೂರದ ಕಾಡಿನಲ್ಲಿ ಕುಳಿತು ಸದ್ದಿಲ್ಲದೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಆದರೆ ತೇಜಸ್ವಿ ಅವರಲ್ಲಿದ್ದ ಪದವಿ ಮತ್ತು ಪ್ರಶಸ್ತಿಯ ಕುರಿತಾದ ನಿರಾಸಕ್ತಿ ಬೇರೆ ಬರಹಗಾರರಲ್ಲಿ ಇಲ್ಲದೇ ಇದ್ದುದ್ದರಿಂದ ಅವರುಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಶುಚಿಗೊಳಿಸುವ ಕೆಲಸಕ್ಕೆ ಕೈಹಾಕಲೇ ಇಲ್ಲ. ಪರಿಣಾಮವಾಗಿ ಬರೆಯದೆ ಇರುವವರು, ಶ್ರೀಮಂತ ಕುಳಗಳು, ಹೋಟೆಲ್ ಉದ್ಯಮಿಗಳೆಲ್ಲ ಸಾಹಿತ್ಯ ಪರಿಷತ್ತಿನ ಆಯಕಟ್ಟಿನ ಜಾಗವನ್ನು  ಆಕ್ರಮಿಸಿಕೊಳ್ಳುವಂತಾಯಿತು.

                      ಕನ್ನಡ ಸಾಹಿತ್ಯ ಪರಿಷತ್ತು ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವುದಕ್ಕೆ  ಪರಿಷತ್ತಿನ ಅಧ್ಯಕ್ಷರ ಆಯ್ಕೆಯೇ ಮಾನದಂಡವಾಗಿದೆ. ನೂರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೆ ೨೪ ಅಧ್ಯಕ್ಷರ ಸಾರಥ್ಯ ಲಭಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇದುವರೆಗೂ ಒಬ್ಬ ಮಹಿಳಾ ಸಾಹಿತಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಯ ಸ್ಥಾನ ಅಲಂಕರಿಸದಿರುವುದು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಹಿತ್ಯ ಪರಂಪರೆಯನ್ನು ಮೊದಲಿನಿಂದಲೂ ಒಂದು ರೀತಿಯ ಅಸಡ್ಡೆ ಹಾಗೂ ನಿರ್ಲಕ್ಷದಿಂದ ಕಾಣುತ್ತಿರುವ ಮನೋಭಾವಕ್ಕೆ ಇದೊಂದು ದೃಷ್ಟಾಂತ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಿಯ ಚುನಾವಣೆ ರಾಜಕೀಯ ಚುನಾವಣೆಯ ರೂಪರೇಷೆ ಪಡೆಯುತ್ತಿರುವುದರಿಂದ ಮಹಿಳಾ ಲೇಖಕಿಯರು ಸಾಹಿತ್ಯ ಪರಿಷತ್ತಿನ ಚುನಾವಣಾ ಕಣದಿಂದ ವಿಮುಖರಾಗುತ್ತಿರಬಹುದು. ಇಂಥದ್ದೊಂದು ತಾರತಮ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೂ ಅನ್ವಯಿಸಿ ಹೇಳಬಹುದು. ಏಕೆಂದರೆ ಇದುವರೆಗಿನ ೮೦ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಲೇಖಕಿಯರ ಸಂಖ್ಯೆ ಕೇವಲ ನಾಲ್ಕು ಮಾತ್ರ. ಜಯದೇವಿತಾಯಿ ಲಿಗಾಡೆ, ಕಮಲಾ ಹಂಪನಾ, ಶಾಂತಾದೇವಿ ಮಾಳವಾಡ ಮತ್ತು ಗೀತಾ ನಾಗಭೂಷಣ ಮಾತ್ರ ಆ ಗೌರವಕ್ಕೆ ಪಾತ್ರರಾದ ಮಹಿಳಾ ಸಾಹಿತಿಗಳು. ಕನ್ನಡ ಸಾಹಿತ್ಯ ಸಮ್ಮೇಳನದಂಥ ಮಹತ್ವದ ಸಮ್ಮೇಳನದ ವೇದಿಕೆಯನ್ನು ಅಧ್ಯಕ್ಷರಾಗಿ ಏರಲು ಮಹಿಳಾ ಲೇಖಕಿಯೊಬ್ಬಳು ತೆಗೆದುಕೊಂಡ ಸಮಯ ಸುದೀರ್ಘ ೬೦ ವರ್ಷಗಳು. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವದ ಜವಾಬ್ದಾರಿಯಾಗಿರುವುದರಿಂದ ಇಂಥದ್ದೊಂದು ಆರೋಪ ಸಹಜವಾಗಿಯೇ ಕಸಾಪದ ಮೇಲಿದೆ. ೧೯೧೫ ರಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ಏರ್ಪಡಿಸುವ ಸಂಪ್ರದಾಯಕ್ಕೆ ಚಾಲನೆ ದೊರೆತಮೇಲೆ ಮೊದಲ ಬಾರಿಗೆ ಮಹಿಳಾ ಲೇಖಕಿ ಸಮ್ಮೇಳನದ ಅಧ್ಯಕ್ಷರಾದದ್ದು ೧೯೭೪ ರಲ್ಲಿ ಮಂಡ್ಯದಲ್ಲಿ ನಡೆದ ಸಮ್ಮೇಳನದಲ್ಲಿ. ಪುರುಷ ಲೇಖಕರಷ್ಟೇ ಮಹಿಳಾ ಲೇಖಕಿಯರೂ ಅತ್ಯಂತ ಸಕ್ರಿಯವಾಗಿ ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡು ಅತ್ಯತ್ತಮ ಸಾಹಿತ್ಯವನ್ನು ರಚಿಸುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಲೇಖಕಿಯರನ್ನು ಸ್ತ್ರೀ ಎನ್ನುವ ತಾರತಮ್ಯದ ನೆಲೆಯಲ್ಲೇ ನಡೆಸಿಕೊಳ್ಳುತ್ತಿದೆ.

                 ಪುಸ್ತಕ ಪ್ರಕಟಣೆ ಸಾಹಿತ್ಯ   ಪರಿಷತ್ತಿನ  ಬಹುಮುಖ್ಯ   ಚಟುವಟಿಕೆಯಾಗಬೇಕಿತ್ತು. ಆದರೆ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆಯನ್ನು ಗಮನಿಸಿದಾಗ ಪರಿಷತ್ತಿನಿಂದ ಪ್ರಕಟಣಾ ವಿಷಯವಾಗಿ ಗಮನಾರ್ಹವಾದ ಕೆಲಸ ಆಗುತ್ತಿಲ್ಲ ಎನ್ನುವುದು ತಿಳಿದು ಬರುತ್ತದೆ. ಕನ್ನಡ ಸಾಹಿತ್ಯ   ಪರಿಷತ್ತು ಇದುವರೆಗೂ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ೧೫೦೦. ನೂರು ವರ್ಷಗಳ ಇತಿಹಾಸವಿರುವ ಪರಿಷತ್ತು ವರ್ಷಕ್ಕೆ ಸರಾಸರಿ ೧೫ ಪುಸ್ತಕಗಳನ್ನು ಪ್ರಕಟಿಸಿದೆ. ನವಕರ್ನಾಟಕ, ಲೋಹಿಯಾ ಪ್ರಕಾಶನ, ಸಪ್ನಾ, ಗುಲಬರ್ಗಾದ ಸಿದ್ಧಲಿಂಗೇಶ್ವರ ಇತ್ಯಾದಿ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವಾಗ ಸರ್ಕಾರಿ ಅನುದಾನದ ಸಂಸ್ಥೆಯೊಂದು ಹೀಗೆ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ನಿರಾಸಕ್ತಿ ತೋರುತ್ತಿರುವುದು ಕನ್ನಡಿಗರು ಯೋಚಿಸಬೇಕಾದ ಸಂಗತಿ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳ ಪ್ರಕಟಣೆಯಲ್ಲಿ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳ ಮತ್ತು ಪದಾಧಿಕಾರಿಗಳ ಶಿಫಾರಸ್ಸು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.  ಬಹುತೇಕ ಲೇಖಕರಿಗೆ  ವಸೂಲಿ ಬಾಜಿ ಮೂಲಕ ಪರಿಷತ್ತಿನಿಂದ ಪುಸ್ತಕಗಳ ಪ್ರಕಟಣೆಯ ಭಾಗ್ಯ ಸಿಗುತ್ತಿದೆ. ಈ ವಿಷಯದಲ್ಲಿ ಲೇಖಕರು  ಜಾತಿ, ಸಮುದಾಯ ಮತ್ತು ಪ್ರಾದೇಶಿಕತೆಯ ಕೋಟಾದಡಿ ಫಲಾನುಭವಿಗಳಾಗುತ್ತಿರುವುದು ದುರಂತದ ಸಂಗತಿ. ಜೊತೆಗೆ ಪರಿಷತ್ತು ಕಳೆದ ಹಲವು ದಶಕಗಳಿಂದ  'ಕನ್ನಡ ನುಡಿ' ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಅದು ನೆಪ ಮಾತ್ರಕ್ಕೆ ಎನ್ನುವಂತೆ ಪ್ರಕಟವಾಗುತ್ತಿದೆ. ಅದರಲ್ಲೂ ಕೆಲವೇ ಕೆಲವು ಲೇಖಕರು ಈ ಪತ್ರಿಕೆಗೆ ಬರೆಯುವ ಗುತ್ತಿಗೆ ತೆಗೆದುಕೊಂಡಂತೆ ಸರಣಿಯಲ್ಲಿ ಲೇಖನಗಳನ್ನು ಬರೆಯುತ್ತಿರುವರು. ಕೆಲವೇ ಪುಟಗಳಲ್ಲಿ ಪ್ರಕಟವಾಗುವ ಪರಿಷತ್ತಿನ ಪತ್ರಿಕೆ  ಸುಧಾ, ತರಂಗ, ಕರ್ಮವೀರ ಪತ್ರಿಕೆಗಳ ಗುಣಮಟ್ಟವನ್ನು ಮುಟ್ಟಲಾರದು. ಇನ್ನೊಂದು ಕಳವಳದ ಸಂಗತಿ ಎಂದರೆ ಈ ಮೊದಲು ಪ್ರತಿತಿಂಗಳು ಪ್ರಕಟವಾಗುತ್ತಿದ್ದ 'ಕನ್ನಡ ನುಡಿ' ಪತ್ರಿಕೆಯನ್ನು ಈಗ ಕೆಲವು ತಿಂಗಳುಗಳಿಂದ ತ್ರೈಮಾಸಿಕವಾಗಿ ಪ್ರಕಟಿಸಲಾಗುತ್ತಿದೆ. ಇದು ಪರಿಷತ್ತಿನ ಆರ್ಥಿಕ ದಾರಿದ್ರ್ಯವೋ ಅಥವಾ ವೈಚಾರಿಕ ದಾರಿದ್ರ್ಯವೋ ಎನ್ನುವುದು ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.

                       ಕನ್ನಡ ಸಾಹಿತ್ಯ ಪರಿಷತ್ತಿನ ಇನ್ನೊಂದು ಗಮನಾರ್ಹವಾದ ವಿಫಲತೆ ಎಂದರೆ ಅದು  ನಾಡು ನುಡಿಯ ರಕ್ಷಣೆ ವಿಷಯವಾಗಿ ಪರಿಷತ್ತು ತಳೆದ ದಿವ್ಯ ಮೌನ ಮತ್ತು ನಿರ್ಲಕ್ಷ್ಯ. ಕನ್ನಡ ಭಾಷೆಯ ರಕ್ಷಣೆಗಾಗಿ ಈ ನೆಲದಲ್ಲಿ ಅನೇಕ  ಚಳುವಳಿಗಳನ್ನು ಸಂಘಟಿಸಿ ಯಶಸ್ವಿಯಾದ ಉದಾಹರಣೆಗಳಿವೆ. ಆದರೆ  ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ಮುಂಚೂಣಿಯಲ್ಲಿ ನಿಂತು ಚಳುವಳಿಗಳನ್ನು ಸಂಘಟಿಸಿದ ಉದಾಹರಣೆಯೇ ಇಲ್ಲ. ಗೋಕಾಕ ಚಳುವಳಿಯ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆ ಚಳುವಳಿಗೆ ಧುಮುಕಿದಾಗ ಕನ್ನಡ ಸಾಹಿತ್ಯ ಪರಿಷತ್ತು ತಟಸ್ಥ ನೀತಿಯನ್ನು ಅನುಸರಿಸಿತು. ಅದು ಕಾವೇರಿ ನೀರಿನ ವಿಷಯವಾಗಿರಬಹುದು, ಅನ್ಯಭಾಷಾ ಸಿನಿಮಾಗಳ ಪ್ರದರ್ಶನದ ವಿರುದ್ಧದ ಚಳುವಳಿಯಾಗಿರಬಹುದು, ಡಬ್ಬಿಂಗ್ ವಿರೋಧಿ ನಿಲುವಾಗಿರಬಹುದು, ಮರಾಠಿಗರ ಕುತಂತ್ರದ ವಿರುದ್ಧದ ಹೋರಾಟವಾಗಿರಬಹುದು ಈ ಎಲ್ಲ ಸಂದರ್ಭಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು  ಮೌನದ ಮೊರೆಹೊಕ್ಕು ಹೋರಾಟಗಳಿಂದ  ದೂರವೇ ಉಳಿದಿದೆ.  ಒಂದು ರಕ್ಷಣಾ ವೇದಿಕೆಗೆ ಮತ್ತು ಒಬ್ಬ ವಾಟಾಳ್ ನಾಗರಾಜ್ ಗೆ ಕನ್ನಡದ ನೆಲ ಮತ್ತು ನುಡಿಯ ಬಗ್ಗೆ ಇರುವಷ್ಟು ಬದ್ಧತೆ ಪರಿಷತ್ತಿಗೆ ಇಲ್ಲದಿರುವುದು ಅತ್ಯಂತ ನಾಚಿಕೆಯ ಸಂಗತಿ. ವಿಪಾರ್ಯಾಸವೆಂದರೆ ಕೆಲವು ವರ್ಷಗಳ ಹಿಂದೆ ಸರ್ಕಾರಿ  ಇಂಗ್ಲಿಷ್ ಶಾಲೆಗಳು ಪ್ರಾರಂಭವಾಗಬಾರದೆಂದು  ಹೋರಾಟ ಮಾಡಿದ ಪರಿಷತ್ತಿನ ಪದಾಧಿಕಾರಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಓದುತ್ತಿದ್ದುದ್ದು  ಇಂಗ್ಲಿಷ್ ಮಾಧ್ಯಮದ ದುಬಾರಿ ಖಾಸಗಿ  ಕಾನ್ವೆಂಟ್ ಶಾಲೆಗಳಲ್ಲಿ. ಸರ್ಕಾರದ ಕೃಪಾಕಟಾಕ್ಷದಲ್ಲಿದ್ದೇನೆ ಎನ್ನುವ ಭಾವನೆಯೇ ಕನ್ನಡ ಸಾಹಿತ್ಯ ಪರಿಷತ್ತು ಚಳುವಳಿಗಳು ಮತ್ತು ಹೋರಾಟಗಳಿಂದ ವಿಮುಖವಾಗಿರುವುದಕ್ಕೆ ಪ್ರಮುಖ ಕಾರಣವಾಗಿರಬಹುದು. ಅದಕ್ಕೆಂದೇ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಪರಿಷತ್ತಿನ ಪದಾಧಿಕಾರಿಗಳು ಶಾಸಕರು ಮತ್ತು ಮಂತ್ರಿಗಳಿಗೆ ಮಣೆಹಾಕುವುದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ.

                    ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಗಮನಾರ್ಹವಾಗಿ ಬೆಳೆದಿಲ್ಲ. ಈ ವಿಷಯವಾಗಿ ನಾವು ಮತ್ತೆ ದೂಷಿಸುವುದು ಕಸಾಪವನ್ನೇ. ಏಕೆಂದರೆ ಪರಿಷತ್ತು ಚುನಾವಣಾ ಸಂದರ್ಭವನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಸದಸ್ಯತ್ವದ ನೊಂದಣಿ ವಿಷಯದಲ್ಲಿ ದಿವ್ಯ ನಿರ್ಲಿಪ್ತತೆಯನ್ನು ತಳೆಯುತ್ತ ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನನ್ನದೇ ಅನುಭವದ ಕುರಿತು ಹೇಳುವುದಾದರೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾದದ್ದು ಹೀಗೆ ಚುನಾವಣೆ ಸಮೀಪಿಸುತ್ತಿರುವ ಘಳಿಗೆಯಲ್ಲಿ. ವಯಸ್ಸಾದ ಹಿರಿಯರೊಬ್ಬರು ನನ್ನನ್ನು ಸಂಪರ್ಕಿಸಿ ಆ ವರ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿಯ ಕುರಿತಾಗಿ ಒಂದಿಷ್ಟು ಮಾತನಾಡಿ ತಮ್ಮ ಕೈಚೀಲದಲ್ಲಿರುವ ಅರ್ಜಿಯನ್ನು ನನಗೆ ಹಸ್ತಾಂತರಿಸಿದರು. ಅಚ್ಚರಿಯ ಸಂಗತಿ ಎಂದರೆ ಚುನಾವಣೆ  ಸಂದರ್ಭದಲ್ಲಿ ಸ್ಪರ್ಧಿಸುತ್ತಿರುವ ವ್ಯಕ್ತಿಗಳೇ  ಸದಸ್ಯತ್ವದ ಶುಲ್ಕವನ್ನು ಭರಿಸುವ ಪರಿಪಾಠವಿದೆ. ಹೀಗೆ ತಮ್ಮದೇ ಒಂದು ಮತಬ್ಯಾಂಕ್ ನ್ನು ಸೃಷ್ಟಿಸಿಕೊಳ್ಳುವ ಇರಾದೆಯಿಂದ ಸದಸ್ಯತ್ವದ ಅಭಿಯಾನಕ್ಕೆ ಮುತುವರ್ಜಿವಹಿಸುವ ನಮ್ಮ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಚುನಾವಣೆಯ ನಂತರ ನಿಷ್ಕ್ರಿಯರಾಗುತ್ತಾರೆ. ಇಲ್ಲಿ ಸದಸ್ಯತ್ವದ ಸಂಖ್ಯೆಯನ್ನು ಹೆಚ್ಚಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸಬೇಕೆನ್ನುವ ಕಾಳಜಿಗಿಂತಲೂ ವೈಯಕ್ತಿಕ ಹಿತಾಸಕ್ತಿ ಬಹುಮುಖ್ಯವಾಗುತ್ತಿದೆ. ಇದೇ ಕಾರಣದಿಂದ ಏಳು ಕೋಟಿ ಕನ್ನಡಿಗರಿದ್ದೂ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದೂವರೆ ಲಕ್ಷವನ್ನೂ ಮೀರಿಲ್ಲ.

                 ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಎಲ್ಲ ವರ್ಗದ ಮತ್ತು ಸಮುದಾಯದ ಸಾಹಿತ್ಯಿಕ ಆಶಯವನ್ನು ಪೂರೈಸುವ ಮತ್ತು ಎಲ್ಲ ಸಮುದಾಯದ ಬರಹಗಾರರ ದನಿಗೆ ವೇದಿಕೆಯಾಗುವ ಅವಕಾಶವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಿರಾಕರಿಸುತ್ತ  ಬಂದಿದೆ ಎನ್ನುವ ಮಾತುಗಳು ಅನೇಕ ಸಂದರ್ಭಗಳಲ್ಲಿ ಕೇಳಿ ಬಂದಿವೆ. ಇದಕ್ಕೆ ಬಹುಮುಖ್ಯ ಕಾರಣ ಪರಿಷತ್ತಿನ ಪದಾಧಿಕಾರಿಗಳ ಸಂಕುಚಿತ ಮನಸ್ಸು ಮತ್ತು ಪೂರ್ವಾಗ್ರಹಪೀಡಿತ ಮನೋಭಾವ. ಸಾಮಾನ್ಯವಾಗಿ ಪರಿಷತ್ತಿನ ಪ್ರಕಟಣೆಯಲ್ಲಿ ಆಯಾ ಕಾಲದ ಪದಾಧಿಕಾರಿಗಳ ಜಾತಿ ಮತ್ತು ಸಮುದಾಯ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ತಮ್ಮದೇ ಜಾತಿ ಮತ್ತು ಸಮುದಾಯದ ಬರಹಗಾರರಿಗೆ ಈ ಪದಾಧಿಕಾರಿಗಳು ಮನ್ನಣೆ ನೀಡುವುದು ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆದ್ಯತೆ ನೀಡುವುದರಿಂದ ಎಲ್ಲ ವರ್ಗದ ಬರಹಗಾರರ ಆಶಯವನ್ನು ಪರಿಷತ್ತು ಪೂರೈಸುತ್ತಿಲ್ಲ. ಜೊತೆಗೆ ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿದಾಗ ಅದಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವುದು ಅದೊಂದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಪ್ರತಿವರ್ಷದ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯಕ್ಕೆ  ವೇದಿಕೆ ನೀಡದಿರುವುದೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ದಲಿತ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ಕಾಲಘಟ್ಟಗಳಲ್ಲೊಂದು. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯವನ್ನು ನೋಡುವುದು ಅಪೂರ್ಣ ಎಂದೆನಿಸುತ್ತದೆ. ಶರಣರ ಮತ್ತು ಸಂತರ ಸಾಹಿತ್ಯಕ್ಕೆ ವೇದಿಕೆ ಒದಗಿಸುವ ಪರಿಷತ್ತು ದಲಿತ ಸಾಹಿತ್ಯ ವಿಚಾರವಾಗಿ ದಿವ್ಯ ಮೌನ ತಳೆದಿರುವುದು ಇಡೀ ಕನ್ನಡ ಸಾಹಿತ್ಯಕ್ಕೆ ಮಾಡುತ್ತಿರುವ ಘೋರ ಅಪಚಾರ. ವರ್ಗ ಮತ್ತು ಸಮುದಾಯದ ವಿಚಾರವಾಗಿ ಪರಿಷತ್ತಿನ ಧೋರಣೆಗಳು ಬದಲಾಗಬೇಕಿದೆ.

ಕೊನೆಯ ಮಾತು 


           ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ರಾಜಕೀಯದ ಅಖಾಡವಾಗಿ  ರೂಪಾಂತರಗೊಂಡಿದೆ ಎನ್ನುವುದಕ್ಕೆ ಈ ದಿನದವರೆಗೂ ೮೧ ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಿ ಏರ್ಪಡಿಸಬೇಕೆನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವುದೇ ಸಾಕ್ಷಿ. ಇದಕ್ಕೆಲ್ಲ ಕಾರಣ ನಮ್ಮ ಸಾಹಿತಿಗಳ ಮತ್ತು ಪರಿಷತ್ತಿನ ಪದಾಧಿಕಾರಿಗಳ ಸ್ವಾರ್ಥ ಮತ್ತು ಅವಕಾಶವಾದಿತನ. ಕನ್ನಡ ಸಾಹಿತ್ಯ ಪರಿಷತ್ತನ್ನು ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಒಂದು ಸಾಂಸ್ಕೃತಿಕ ಕೇಂದ್ರವಾಗಿಸುವುದಕ್ಕಿಂತ ಅದನ್ನು ತಮ್ಮ ತಮ್ಮ ಹಿತಾಸಕ್ತಿಗೆ ಅನುಕೂಲವಾಗುವಂತೆ ಬಳಸಿಕೊಳ್ಳುವದರಲ್ಲೇ ಇವರಿಗೆ ಹೆಚ್ಚಿನ ಆಸಕ್ತಿ. ಜೊತೆಗೆ ಜಾತಿ ಮತ್ತು ಸಮುದಾಯಗಳು ಪರಿಷತ್ತಿನ ನಡೆಯನ್ನು ನಿರ್ಧರಿಸುತ್ತಿವೆ. ಹೀಗೆ ಅವರವರ ವೈಯಕ್ತಿಕ ಹಿತಾಸಕ್ತಿ ಮತ್ತು ಜಾತಿ ಹಾಗೂ ಸಮುದಾಯಗಳ ನಡುವೆ ಸಿಲುಕಿರುವ ನೂರುವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ಶಕ್ತಿಹೀನವಾಗಿದೆ. ಅದರ ವೈಭವವನ್ನು ಮತ್ತೆ ಮರಳಿ ತರುವ ಹಾಗೂ ಪರಿಷತ್ತಿನ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ನಾಡು ನುಡಿಯ ರಕ್ಷಣೆಯ ದೃಷ್ಟಿಯಿಂದ ಇವತ್ತಿನ ತುರ್ತು ಅಗತ್ಯವಾಗಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  


   



Thursday, October 9, 2014

ರಾಜಕಾರಣ ಮತ್ತು ಭ್ರಷ್ಟಾಚಾರ




    UGLY FACE OF INDIAN POLITICS


              ಭಾರತದ ರಾಜಕಾರಣ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದೆ. ಇವತ್ತಿನ ರಾಜಕಾರಣಿಗಳಿಗೆ ರಾಜಕಾರಣ ಎನ್ನುವುದು ಹಣ ಮಾಡುವ ಧಂದೆಯಾಗಿ ಕಾಣಿಸುತ್ತಿದೆ. ಹೀಗೆ ಹಣ ಮಾಡುವ ಮ್ಯಾಮೋಹಕ್ಕೆ ಬಲಿಯಾದ  ನಮ್ಮ ರಾಜಕಾರಣಿಗಳು ರಾಜಕೀಯದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಪಾತಾಳಕ್ಕೆ ತಳ್ಳಿರುವರು. ಇವತ್ತು ರಾಜಕೀಯದಲ್ಲಿ ನೈತಿಕತೆಯ ಕ್ಷೋಭೆ ಕಾಣಿಸಿಕೊಂಡಿದೆ. ನಿನ್ನೆ ಮೊನ್ನೆಯವರೆಗೂ ಬಡವರಾಗಿದ್ದ ನಮ್ಮ ರಾಜಕಾರಣಿಗಳು ಇವತ್ತು ಕುಬೇರರಾಗಿರುವರು. ಚುನಾವಣೆಯಿಂದ ಚುನಾವಣೆಗೆ ನಮ್ಮ ಜನಪ್ರತಿನಿಧಿಗಳ ಸಂಪತ್ತು ವೃದ್ಧಿಸುತ್ತಲೇ ಇದೆ. ಅನೇಕ ಪೀಳಿಗೆ ಕುಳಿತು ಉಂಡರೂ ಕರಗದಷ್ಟು ಆಸ್ತಿಯನ್ನು ಇವರು ಸಂಪಾದಿಸಿರುವರು. ಕೆಲವು ದಿನಗಳ ಹಿಂದೆ ರಾಜಕೀಯ ಪಕ್ಷದ ಮುಖಂಡರೋರ್ವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿಧಾನ ಪರಿಷತ್ ಆಯ್ಕೆಗಾಗಿ ೪೦ ಕೋಟಿ ರುಪಾಯಿಗಳನ್ನು ಕೇಳಿದ ಸುದ್ಧಿ ಸೀಡಿ ರೂಪದಲ್ಲಿ ಬಿಡುಗಡೆಯಾಗಿ ಒಂದು ಸಂಚಲನವನ್ನೇ ಸೃಷ್ಟಿಸಿತ್ತು. ಇಡೀ ರಾಜ್ಯದ ಜನತೆ ಇಂಥದ್ದೊಂದು ಘಟನೆಯಿಂದ ರಾಜಕಾರಣವೆಂದರೆ ಅಸಹ್ಯ ಪಟ್ಟುಕೊಂಡರು. ಈ ವಿಷಯದ ಪರ ಮತ್ತು ವಿರೋಧವಾಗಿ ಚರ್ಚೆಗಳಾದವು. ಆತಂಕದ ಸಂಗತಿ ಎಂದರೆ ಹೀಗೆ ಹಣ ಮಾಡುವುದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ ಎನ್ನುವ ಮಾತು ಆ ಸಂದರ್ಭ ಅನೇಕ ರಾಜಕಾರಣಿಗಳಿಂದ ಮತ್ತು ಮಾಧ್ಯಮದವರಿಂದ ಕೇಳಿ ಬಂತು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಕ್ಕಿಂತ ಬೇರೆಯವರು ಮಾಡಿದ್ದನ್ನೇ ನಾವು  ಮಾಡಿರುವೇವು  ಎಂದು ತಪ್ಪನ್ನು ಸಮರ್ಥಿಸಿಕೊಳ್ಳುವ ಲಜ್ಜೆಗೇಡಿ ವರ್ತನೆ ಅನೇಕ ರಾಜಕಾರಣಿಗಳದ್ದಾಗಿತ್ತು. 

       ಈ ಸಂದರ್ಭ ನಾನು ಒಂದಿಷ್ಟು ಹಿಂದೆ ಹೋಗುತ್ತೇನೆ. ನಮಗೆಲ್ಲ ನೆನಪಿರುವಂತೆ ೨೦೦೯ ರಲ್ಲಿ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ಭೀಕರ ನೆರೆಹಾವಳಿ ಅನೇಕ ಹಳ್ಳಿಗಳನ್ನು ಧ್ವಂಸಗೊಳಿಸಿತ್ತು. ಸಾವಿರಾರು ಜನ ತಮ್ಮ ಕುಟುಂಬದವರನ್ನು ಮತ್ತು  ಆಸ್ತಿಯನ್ನು ಕಳೆದುಕೊಂಡು ನಿರಾಶ್ರಿತರಾದರು. ತುತ್ತು ಕೂಳಿಗಾಗಿ ಸರ್ಕಾರದ ಗಂಜಿ ಕೇಂದ್ರಗಳಲ್ಲಿ ಅವರು ಪಡುತ್ತಿರುವ ಸಂಕಷ್ಟಗಳಿಗೆ ರಾಜ್ಯದ ಮೂಲೆ ಮೂಲೆಯಿಂದ ನೆರವಿನ ಮಹಾಪೂರ ಹರಿದುಬಂತು. ವಿಪರ್ಯಾಸದ ಸಂಗತಿ ಎಂದರೆ ನಿರಾಶ್ರಿತರ ಸಂಕಷ್ಟದಲ್ಲಿ ಭಾಗಿಯಾಗಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕಾದ ಜನಪ್ರತಿನಿಧಿಗಳು ಮಾತ್ರ ದೂರದ ಹೈದ್ರಾಬಾದನ ಲೆಕ್ಸುರಿ ರೆಸ್ಟಾರೆಂಟ್ ನಲ್ಲಿ ಕುಳಿತು ಮೋಜು ಮಸ್ತಿಯಲ್ಲಿ ತೊಡಗಿದ್ದರು. ನಿರಾಶ್ರಿತರ ಸಮಸ್ಯೆಗಳಿಗಿಂತ ಅವರಿಗೆ ಆ ಹೊತ್ತು ರಾಜ್ಯದ ಮುಖ್ಯಮಂತ್ರಿಯನ್ನು ಬದಲಿಸುವುದು ಇಲ್ಲವೇ ತಾವುಗಳು ಮಂತ್ರಿ ಸ್ಥಾನವನ್ನು ಪಡೆಯುವುದು ಬಹುಮುಖ್ಯ ಉದ್ದೇಶವಾಗಿತ್ತು. ಕೊನೆಗೂ ತಮ್ಮ ಉದ್ದೇಶವನ್ನು ಸಾಧಿಸಿಕೊಂಡ ಆ ರಾಜಕಾರಣಿಗಳಿಗೆ ರಾಜ್ಯದ ಜನರ ಸಮಸ್ಯೆಗಳಿಗಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿತ್ತು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ರಾಜಕಾರಣಿಗಳು ತಮ್ಮನ್ನು ಆರಿಸಿ ಕಳಿಸಿರುವ ಮತದಾರರು ಕಷ್ಟದಲ್ಲಿರುವಾಗ ತಾವು ಭಿನ್ನಮತದ ಚಟುವಟಿಕೆಯಲ್ಲಿ ತೊಡಗಿ ಒಂದಿಷ್ಟು ಹಣ ಮಾಡಿಕೊಂಡರೆ ಕೆಲವರು ಮಂತ್ರಿ ಇಲ್ಲವೇ ನಿಗಮ ಮಂಡಳಿಗಳಂಥ ಆಯಕಟ್ಟಿನ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಮತದಾರರು ಮಾತ್ರ ತಮ್ಮ ಪ್ರತಿನಿಧಿಗಳ ಅವಕಾಶವಾದಿತನಕ್ಕೆ ಸಾಕ್ಷಿಯಾಗಬೇಕಾಯಿತು.

          ಇನ್ನೂ ಒಂದಿಷ್ಟು ಹಿಂದೆ ಹೋದರೆ ನಮ್ಮ ಜನನಾಯಕರುಗಳ ಹಣ ಮಾಡುವ ದುರಾಸೆ ಮತ್ತು ಅವಕಾಶವಾದಿತನದ ಗುಣ ಅನಾವರಣಗೊಳ್ಳುತ್ತದೆ. ೨೦೦೮ ರಲ್ಲಿ ಕರ್ನಾಟಕ ರಾಜ್ಯದಲ್ಲಿ ಮತದಾರ ಪ್ರಥಮ ಬಾರಿಗೆ ಪಕ್ಷವೊಂದಕ್ಕೆ ಸರ್ಕಾರ ರಚಿಸುವ ಜನಾದೇಶ ನೀಡಿದ. ಹೀಗೆ ಅಧಿಕಾರದ ಗದ್ದುಗೆ ಏರಿದ ಪಕ್ಷ ತನ್ನ ಅಲ್ಪಮತದ ಸರ್ಕಾರವನ್ನು ಸುಭದ್ರಗೊಳಿಸಲು ಅನ್ಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳಿಗೆ ಹಣದ ಮತ್ತು ಅಧಿಕಾರದ ಆಮೀಷ ತೋರಿಸಿ ಕೆಲವರಿಂದ  ಶಾಸಕ ಸ್ಥಾನಕ್ಕೆ ರಾಜಿನಾಮೆ  ಕೊಡಿಸುವಲ್ಲಿ ಯಶಸ್ವಿಯಾಯಿತು. ತಮ್ಮ ಈ ಅನೈತಿಕ ಕೆಲಸದಿಂದ ಕೋಟ್ಯಾಂತರ ರುಪಾಯಿಗಳನ್ನು ಬಕ್ಷಿಸಾಗಿ ಪಡೆದ ಚುನಾಯಿತ ಪ್ರತಿನಿಧಿಗಳು ತಮ್ಮ ಮತದಾರರ ಮತಗಳನ್ನು ಅಪಮೌಲ್ಯಗೊಳಿಸಿ ಅನ್ಯ ಪಕ್ಷಕ್ಕೆ ವಲಸೆ ಹೋಗಿ ಮತ್ತೊಮ್ಮೆ ಚುನಾವಣೆಗೆ ನಿಂತು ಮಂತ್ರಿಯಾದರು. ಇನ್ನು ಕೆಲವರು ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂದು ಸಿಕ್ಕ ಈಡು  ಗಂಟನ್ನೇ ಭದ್ರವಾಗಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸದೆ ತಮ್ಮ ಮತಕ್ಷೆತ್ರವನ್ನು ಆಳುವ ಪಕ್ಷಕ್ಕೆ ಮಾರಿಕೊಂಡರು. ಹೀಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವಾಗ  ಅವರು ತಮ್ಮನ್ನು ಆರಿಸಿ ಕಳಿಸಿದ ಮತದಾರರ ಭಾವನೆಗಳನ್ನು ಪರಿಗಣಿಸಲೇ ಇಲ್ಲ. ಮತದಾರರ ಮತಗಳನ್ನು ಅಪಮೌಲ್ಯಗೊಳಿಸಿದ್ದಲ್ಲದೆ ಜನರ ಭಾವನೆಗಳಿಗೆ ಮತ್ತು ಆಶೋತ್ತರಗಳಿಗೆ ಕೊಳ್ಳಿ ಇಟ್ಟ ಈ ರಾಜಕಾರಣಿಗಳು ಮಾತ್ರ ತಮ್ಮ ವರ್ತನೆಯಿಂದ ಅವರೆಂದೂ ಲಜ್ಜೆಗೆಡಲಿಲ್ಲ.

        ಈ ನಡುವೆ ಬುದ್ಧಿವಂತರ ಮೇಲ್ಮನೆ ಎಂದೇ  ಕರೆಯಿಸಿಕೊಳ್ಳುವ ವಿಧಾನ ಪರಿಷತ್ತಿಗೆ ಬಂಗಾರದಂಗಡಿಯ ಮಾಲೀಕರು, ಗಣಿದಣಿಗಳು, ಕೈಗಾರಿಕೋದ್ಯಮಿಗಳು ಆಯ್ಕೆಯಾಗುತ್ತಾರೆ. ಹಿರಿಯರು, ಬುದ್ದಿಜೀವಿಗಳು, ಉತ್ತಮ ವಾಗ್ಮಿಗಳನ್ನು ಕೈಬಿಟ್ಟು ಎಲ್ಲ ಪಕ್ಷಗಳು ಹಣಕ್ಕಾಗಿ ವಿಧಾನ ಪರಿಷತ್ತಿನ ಶಾಸಕ ಸ್ಥಾನವನ್ನು ಮಾರಿಕೊಳ್ಳುತ್ತವೆ. ಹೀಗೆ ಹಣಕೊಟ್ಟು ಆಯ್ಕೆಯಾಗಿ ಬರುವ ರಾಜಕಾರಣಿಗಳಿಗೆ ಜನಪರ ಕಾಳಜಿಯಾಗಲಿ ಇಲ್ಲವೇ ನೈತಿಕತೆಯಾಗಲಿ ಇರುವುದಿಲ್ಲ. ಅವರದೇನಿದ್ದರೂ ತಮ್ಮ ಕಾನೂನು ಬಾಹಿರ ಚಟುವಟಿಕೆಗಳಿಗೆ ಒಂದು ರಾಜಕೀಯ ನೆಲೆಯನ್ನು ಒದಗಿಸುವುದು. ಕೆಲವೊಂದು ಸಂದರ್ಭಗಳಲ್ಲಿ ಈ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸೋಲುವ ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸುವ ಕೇಂದ್ರವಾಗುತ್ತಿದೆ. ಸಕ್ರಿಯ ರಾಜಕಾರಣಿಗಳನ್ನೇ ಸಮಾಜ ಸೇವೆ, ಶಿಕ್ಷಣ, ಕಲೆ ಇತ್ಯಾದಿ ಹೆಸರಿನಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಮಾಡಿದ ಅನೇಕ ಉದಾಹರಣೆಗಳಿವೆ. ನಿಜಕ್ಕೂ ಪಕ್ಷಾತೀತವಾಗಿ ರಾಜಕಾರಣಿಯಲ್ಲದ ಅರ್ಹರಿಗೆ ಸಲ್ಲಬೇಕಾದ ಗೌರವವನ್ನು ನಮ್ಮ ಭ್ರಷ್ಟ ರಾಜಕಾರಣಿಗಳು ತಮ್ಮದಾಗಿಸಿಕೊಂಡು ಈ ಮೂಲಕ ನಾಡಿನ ಜನತೆಗೆ ದ್ರೋಹ ಮಾಡುತ್ತಿರುವರು.

         ರಾಜಕಾರಣವೊಂದು ನೈತಿಕ ಅಧ:ಪತನಕ್ಕಿಳಿದಾಗ ಅದು ತನ್ನೊಂದಿಗೆ ಸಮಾಜವನ್ನೂ ನೈತಿಕವಾಗಿ ಕೆಳಗಿಳಿಸುತ್ತದೆ. ಈ ಮಾತಿಗೆ ದಾರಿ ತಪ್ಪುತ್ತಿರುವ ನಮ್ಮ ಮಠಗಳೇ ಉತ್ತಮ ಉದಾಹರಣೆಗಳಾಗಿವೆ. ಮಠಗಳು ಮತ್ತು ಮಠಾಧಿಪತಿಗಳ ಬಗ್ಗೆ ಸಮಾಜದಲ್ಲಿ ಒಂದು ಗೌರವವಿತ್ತು. ಶಿಕ್ಷಣ ಪ್ರಚಾರಕ್ಕೆ ಒತ್ತು ನೀಡುತ್ತಿರುವ ಮಠಗಳು  ಸಾಮಾಜಿಕ ಪರಿವರ್ತನೆಯ ಪ್ರಮುಖ ಆಯಾಮಗಳೆನ್ನುವ ಭಾವನೆ ಜನರಲ್ಲಿತ್ತು. ಆದರೆ ಯಾವಾಗ ಈ ಮಠ ಮಾನ್ಯಗಳು ರಾಜಕಾರಣದೊಂದಿಗೆ ಕೈಜೋಡಿಸಿದವೋ ಆಗ ಜನರಿಗೆ ಭ್ರಮನಿರಸನವಾಯಿತು. ಅದರಲ್ಲೂ ಮಠಗಳು ವೋಟ್ ಬ್ಯಾಂಕ್ ಗಳಾಗಿ ರೂಪಾಂತರಗೊಂಡ ಮೇಲೆ ಅನೇಕ ಮಠಾಧೀಶರು ಫುಲ್ ಟೈಮ್ ರಾಜಕಾರಣಕ್ಕಿಳಿದರು. ಚುನಾವಣೆಗೆ  ಅಭ್ಯರ್ಥಿಯನ್ನು ನಿರ್ಧರಿಸುವಾಗ  ಮತ್ತು ಆಯ್ಕೆಯಾದ ಜನಪ್ರತಿನಿಧಿಗಳನ್ನು  ಮಂತ್ರಿಗಳನ್ನಾಗಿ ಮಾಡುವಲ್ಲಿ  ಮಠಗಳ ಪಾಲ್ಗೊಳ್ಳುವಿಕೆ ಪ್ರಾಮುಖ್ಯತೆ ಪಡೆಯತೊಡಗಿತು. ಒಟ್ಟಿನಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಮಠಗಳು ಬೆಳೆದು  ನಿಂತವು. ಮಠಗಳ ಪ್ರಾಮುಖ್ಯತೆಯನ್ನರಿತು ಆಯಾ ಕಾಲಕ್ಕೆ ಬಂದ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳ ದೇಣಿಗೆಯನ್ನು ನೀಡತೊಡಗಿದವು. ಸರ್ಕಾರದಿಂದ ದೇಣಿಗೆ ಪಡೆದ ಮಠಗಳಿಗೆ  ಕಾಲಾನಂತರದಲ್ಲಿ ಹೈಟೆಕ್ ಸ್ಪರ್ಶವಾಯಿತು. ಮಠಗಳ ಈ ಹೈಟೆಕ್ ಪರಿವರ್ತನೆಯ ಪರಿಣಾಮ ಎದುರಾದ ಬಹುದೊಡ್ಡ ಆತಂಕವೆಂದರೆ ಅವು ಜನಮಾನಸದಿಂದ ಸಂಪೂರ್ಣವಾಗಿ ವಿಮುಖವಾದವು. ಸಮಾಜದಲ್ಲಿ ಶಿಕ್ಷಣದ ಮೂಲಕ ಬಹುದೊಡ್ಡ ಪರಿವರ್ತನೆಗೆ ಕಾರಣವಾಗಬೇಕಿದ್ದ ಮಠಗಳು ರಾಜಕಾರಣದ ಭ್ರಷ್ಟಾಚಾರದ ಕಪಿ ಮುಷ್ಠಿಗೆ ಸಿಲುಕಿ ತಮ್ಮ ನಿಜವಾದ ಉದ್ದೇಶವನ್ನೇ ಮರೆತುಹೋದವು. ಬಸವಣ್ಣನಂಥ ಸಮಾಜ ಸುಧಾರಕನ ನೆಲದಲ್ಲಿ ರಾಜಕಾರಣದ ಕುರುಡು ಕಾಂಚಾಣ ಮಠಗಳ ನೈತಿಕತೆಯನ್ನೇ ಬುಡಮೇಲಾಗಿಸಿದ್ದು ಬಹುದೊಡ್ಡ ದುರಂತ.  ಮಠಾಧಿಪತಿಗಳು ಮಾತ್ರವಲ್ಲದೆ ದೇಶದ ಕೈಗಾರಿಕೋದ್ಯಮಿಗಳೂ ರಾಜಕಾರಣದ ಭ್ರಷ್ಟಾಚಾರದಲ್ಲಿ ಜನಪ್ರತಿನಿಧಿಗಳೊಂದಿಗೆ ಕೈಜೋಡಿಸುತ್ತಿರುವರು. ಇವತ್ತು ರಾಜ್ಯ ಸಭೆ ಮತ್ತು ವಿಧಾನ ಪರಿಷತ್ತಿನ ಸ್ಥಾನಗಳು ಕೋಟ್ಯಾಂತರ ರೂಪಾಯಿಗಳಿಗೆ ಬಿಕರಿಯಾಗುತ್ತಿರುವುದರ ಹಿಂದೆ ಈ ಕೈಗಾರಿಕೋದ್ಯಮಿಗಳ ಹಣದ ಥೈಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಕೋಟಿ ಬಂಡವಾಳ ಹೂಡಿ ವ್ಯಾಪಾರದಲ್ಲಿ ತೊಡಗುವ ಈ ಕೈಗಾರಿಕೋದ್ಯಮಿಗಳಿಗೆ ಒಂದು ರಾಜಾಶ್ರಯ ಬೇಕು. ತಮ್ಮ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಂದ ಗಳಿಸಿದ ಸಂಪತ್ತನ್ನು ಉಳಿಸಿಕೊಳ್ಳಲು ಅವರಿಗೆ ರಾಜಕಾರಣದ ನೆರವು ಬೇಕು. ಅದಕ್ಕೆಂದೇ ಚುನಾವಣಾ ಸಮಯದಲ್ಲಿ ಪಕ್ಷಭೇದ ಮರೆತು ಕಾಸು ಹಂಚುವ ಇವರು ರಾಜಕಾರಣದಿಂದ ತಮ್ಮ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಪಕ್ಷ ಸಂಘಟನೆ, ಭಿನ್ನಮತ ಶಮನ, ಚುನಾವಣಾ ಖರ್ಚು  ಈ ಎಲ್ಲದಕ್ಕೂ ಕೈಗಾರಿಕೋದ್ಯಮಿಗಳೇ ಹೂಡಿಕೆದಾರರು. ಹೀಗೆ ರಾಜಕಾರಣದಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಹೂಡುವ ಈ ವರ್ತಕರು ಅದಕ್ಕೆ ನೂರರಷ್ಟು ಲಾಭ ಮಾಡಿಕೊಳ್ಳುವರು.

      ಈ    ರಾಜಕಾರಣ  ಮಾಧ್ಯಮ ಕ್ಷೇತ್ರವನ್ನೂ ಕಲುಷಿತಗೊಳಿಸುತ್ತಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಳಂತೆ ಪತ್ರಿಕಾರಂಗ ಸಹ ದೇಶದ ಬಹುಮುಖ್ಯ ವ್ಯವಸ್ಥೆಗಳಲ್ಲೊಂದು. ಶಾಸಕಾಂಗ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ತರುವ ಕೆಲಸವನ್ನು ಮಾಧ್ಯಮ ಮಾಡಬೇಕು. ಆದರೆ ಇವತ್ತು ರಾಜಕಾರಣದ ಭ್ರಷ್ಟಾಚಾರಕ್ಕೆ ಮಾಧ್ಯಮದ ಬೆಂಬಲ  ಸಿಗುತ್ತಿದೆ. ರಾಜಾಕಾರಣದ ಭ್ರಷ್ಟಾಚಾರ ಅನಾವರಣಗೊಂಡಾಗ ಮಾಧ್ಯಮದಲ್ಲೇ ಪರ ಮತ್ತು ವಿರೋಧದ ಧ್ವನಿಗಳು ಕೇಳಿ ಬರುತ್ತವೆ. ದಿನವಿಡೀ ಚರ್ಚೆ ಸಂವಾದದ ಮೂಲಕ ರಾಜಕಾರಣದ ಭ್ರಷ್ಟಾಚಾರಕ್ಕೆ  ನಮ್ಮ ಮಾಧ್ಯಮಗಳು ಒತ್ತಾಸೆಯಾಗಿ ನಿಲ್ಲುತ್ತಿವೆ. ಪಿ. ಲಂಕೇಶ್ ಬದುಕಿರುವಷ್ಟು ಕಾಲ ಕರ್ನಾಟಕದಲ್ಲಿ ಮಾಧ್ಯಮಗಳು ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುತ್ತಿದ್ದವು. ನಂತರದ ದಿನಗಳಲ್ಲಿ ಕೆಲವು ಪತ್ರಕರ್ತರು ಪತ್ರಿಕೋದ್ಯಮವನ್ನು  ಹಣ ಮಾಡುವ ಧಂದೆಗೆ ತಂದು ನಿಲ್ಲಿಸಿದಾಗ ಪತ್ರಿಕಾ ಮಾಧ್ಯಮದ ಸ್ವರೂಪವೇ ಬದಲಾಯಿತು. ಅದರಲ್ಲೂ ಪತ್ರಿಕಾ ಮಾಧ್ಯಮ ಎಲೆಕ್ಟ್ರಾನಿಕ್ ಮಾಧ್ಯಮವಾಗಿ ರೂಪಾಂತರ ಹೊಂದಿದ  ಮೇಲೆ ಪತ್ರಕರ್ತರ ಕಾರ್ಯವೈಖರಿಯೇ ಬದಲಾಗಿದೆ. ದೃಶ್ಯ ಮಾಧ್ಯಮದ ಮೂಲಕ ಹೆಚ್ಚು ಹೆಚ್ಚು ಜನಪ್ರಿಯರಾಗುತ್ತಿರುವ ಪತ್ರಕರ್ತರು ತಮ್ಮ ಜನಪ್ರಿಯತೆ ಮತ್ತು ರಾಜಕಾರಣದ ಭ್ರಷ್ಟಾಚಾರವನ್ನೇ ಎನ್ಕ್ಯಾಶ್ ಮಾಡಿಕೊಂಡು ರಾತ್ರಿಕಳೆದು ಬೆಳಗಾಗುವಷ್ಟರಲ್ಲಿ ಕುಬೇರರಾಗುತ್ತಿರುವರು. ಪರಿಣಾಮವಾಗಿ ಇವತ್ತು ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಕನ್ನಡ ಭಾಷೆಯಲಿ ಹತ್ತಕ್ಕೂ ಹೆಚ್ಚು ಸುದ್ದಿವಾಹಿನಿಗಳು ದಿನದ ೨೪ ಗಂಟೆ ಸುದ್ದಿಯನ್ನು ಬಿತ್ತರಿಸುತ್ತಿವೆ. ಕೆಲವು ರಾಜಕಾರಣಿಗಳು ಸ್ವತಹ ಸುದ್ದಿವಾಹಿನಿಗಳ ಮಾಲಿಕತ್ವವನ್ನು ಹೊಂದುವುದರ ಮೂಲಕ ತಮ್ಮ ಭ್ರಷ್ಟಾಚಾರಕ್ಕೆ ಮಾಧ್ಯಮವನ್ನು ರಕ್ಷಾಕವಚವಾಗಿ ಮಾಡಿಕೊಂಡಿರುವರು.

     ರಾಜಕಾರಣವು ಭ್ರಷ್ಟಾಚಾರದ ವಿವಿಧ ಮುಖಗಳನ್ನು ತನ್ನೊಳಗೆ ಅಂತರ್ಗತಗೊಳಿಸಿಕೊಳ್ಳುತ್ತಿರುವ ಈ ಹೊತ್ತು ನನಗೆ ಲೋಹಿಯಾ ನೆನಪಾಗುತ್ತಾರೆ. ಪ್ರಾಮಾಣಿಕ, ಜನಪರ ಕಾಳಜಿಯುಳ್ಳ ಮತ್ತು ಶುದ್ಧ ಹಸ್ತದ ಅಪರೂಪದ ರಾಜಕಾರಣಿ ಈ ರಾಮಮನೋಹರ ಲೋಹಿಯಾ. ಲೋಹಿಯಾ ರಾಜಕಾರಣವನ್ನು ಯಾವತ್ತೂ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳಲಿಲ್ಲ. ಹಾಗೆ ಬಳಸುವವರನ್ನು ಅವರು ಖಂಡಿಸುತ್ತಿದ್ದರು. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಅದು ೧೯೬೨ ರ ಸಾರ್ವತ್ರಿಕ ಚುನಾವಣೆ. ಆ   ಸಂದರ್ಭ  ಲೋಹಿಯಾ  ಚುನಾವಣೆಯಲ್ಲಿ ನೆಹರು ವಿರುದ್ಧ ಸ್ಪರ್ಧಿಸುತ್ತಾರೆ. ಆಗ ನೆಹರು ರಾಜಕೀಯವಾಗಿ ಉತ್ತುಂಗದಲ್ಲಿದ್ದ  ಕಾಲವದು. ಆದರೂ ಲೋಹಿಯಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ತಮ್ಮ ಈ  ನಿಲುವಿಗೆ ಕಾರಣವನ್ನು ವಿವರಿಸಿ  ಲೋಹಿಯಾ ನೆಹರು ಅವರಿಗೆ ಪತ್ರ ಬರೆದು ಹೇಳುತ್ತಾರೆ 'ಈ ಚುನಾವಣೆಯಲ್ಲಿ ನೀವು ಗೆಲ್ಲುವುದು ನಿಶ್ಚಿತ ಆದರೆ ಅನಿಶ್ಚಿತವಾಗಿ ನಿಮಗೆ ಸೋಲಾದರೆ ನನಗೆ ಸಂತೋಷವಾಗುತ್ತದೆ. ಏಕೆಂದರೆ ಈ ಸೋಲು ನಿಮ್ಮನ್ನು ರಾಜಕಾರಣದಿಂದ ದೂರವಿಟ್ಟು ಒಂದಿಷ್ಟು ಆತ್ಮಾವಲೋಕನಕ್ಕೆ ದಾರಿಮಾಡಿ ಕೊಡುತ್ತದೆ. ಈ ರಾಜಕಾರಣಕ್ಕೆ ಬಂದ ಮೇಲೆ ಅಧಿಕಾರ ನಿಮ್ಮನ್ನು ಸಂಪೂರ್ಣವಾಗಿ ಬದಲಿಸಿದೆ. ನಿಮ್ಮನ್ನು ೧೯೪೭ ರ ಮೊದಲಿನ ನೆಹರುವಾಗಿ ಬದಲಿಸಲು ಮತ್ತು ನೋಡಲು ನಾನು ಇಚ್ಛಿಸುತ್ತೇನೆ'. ಲೋಹಿಯಾರ ದೃಷ್ಟಿಯಲ್ಲಿ ರಾಜಕಾರಣ ಎನ್ನುವುದು ಸಾಮಾಜ ಸೇವೆಯೇ ವಿನ: ಅದು ಹಣ ಮಾಡುವ ಉದ್ದಿಮೆಯಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ರಾಜಕಾರಣವನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸಿ ಅದನ್ನು  ಶುಚಿಗೊಳಿಸಲು ಲೋಹಿಯಾರಂಥ ವಿಚಾರಶೀಲ ರಾಜಕಾರಣಿಗಳ ಅಗತ್ಯವಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, September 18, 2014

ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ


















 

                                    (ಸೆಪ್ಟೆಂಬರ್ ೧೮ ವಿಷ್ಣುವರ್ಧನ್ ಜನ್ಮದಿನದ ನಿಮಿತ್ಯ ಈ ಲೇಖನ) 


           ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು 'ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು' ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೇ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ 'ಸಾಹಸ ಸಿಂಹ' ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ identity ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಿಲು, ಬಂಧನ, ಸುಪ್ರಭಾತದಂಥ ಭಾವ ಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರ ಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು  ತಾವು ತೆರೆದುಕೊಂಡರು. ಹೀಗೆ  ಪ್ರಯತ್ನಿಸದೇ  ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ brand   ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿ ಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತು ಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ಬದುಕಿರುತ್ತಿದ್ದರೆ ಅವರನ್ನು ನಾವು ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್ ೧೮) ವಿಷ್ಣುವರ್ಧನ್ ತಮ್ಮ  ೬೪ ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.

                ವಿಷ್ಣುವರ್ಧನ್ ಆಕಸ್ಮಿಕವಾಗಿ ಕನ್ನಡ ಚಿತ್ರರಂಗಕ್ಕೆ ಬಂದವರಲ್ಲ. ನಟನೆಯ ಒಂದಿಷ್ಟು ತಯ್ಯಾರಿ ಮಾಡಿಕೊಂಡೇ ಈ ನಟ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿನ ಅಭಿನಯ ಸಿನಿಮಾ ಪ್ರಪಂಚಕ್ಕೆ ಕರೆತಂದಿತು. ಅಭಿನಯಿಸಿದ ಮೊದಲ ಸಿನಿಮಾ 'ವಂಶ ವೃಕ್ಷ'. ಬಿ. ವಿ. ಕಾರಂತರ ಗರಡಿಯಲ್ಲಿನ ಸಿನಿಮಾ ಅಭಿನಯದ ತಾಲೀಮು ನಂತರದ ದಿನಗಳಲ್ಲಿ ಅಭಿನಯ ಪ್ರವೃತ್ತಿಗೆ ಭದ್ರ ಬುನಾದಿ ಹಾಕಿತು. ಹೆಸರು ಬದಲಿಸಿಕೊಂಡು ಕುಮಾರನಿಂದ ವಿಷ್ಣುವರ್ಧನನಾಗಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಪ್ರಥಮ ಚಿತ್ರ 'ನಾಗರ ಹಾವು'. ಪುಟ್ಟಣ್ಣ ಕಣಗಾಲ್ ಆ ಹೊತ್ತಿಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕನೆಂದು ಗುರುತಿಸಿಕೊಂಡಿದ್ದರು. ಗೆಜ್ಜೆಪೂಜೆ,  ಶರ ಪಂಜರ, ಬೆಳ್ಳಿ  ಮೋಡ ದಂಥ ನಾಯಕಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಅಭಿನಯಿಸುವ ಕಲಾವಿದರಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಡುವ ನಿರ್ದೇಶಕ ಈ ಪುಟ್ಟಣ್ಣ ಕಣಗಾಲ್ ಎನ್ನುವ ಮಾತು ಆ ದಿನಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ದಟ್ಟವಾಗಿ ಕೇಳಿ ಬರುತ್ತಿತ್ತು. ಜೊತೆಗೆ ಈ ನಿರ್ದೇಶಕ ನಿರ್ದೇಶಿಸಿದ ಬಹಳಷ್ಟು ಸಿನಿಮಾಗಳು ನಾಯಕಿ ಪ್ರಧಾನ ಚಿತ್ರಗಳೇ ಆಗಿರುತ್ತಿದ್ದವು. ಈಶ್ವರಿ ಸಂಸ್ಥೆಯ ಎನ್. ವೀರಾಸ್ವಾಮಿ ನಾಯಕ ಪ್ರಧಾನ ಸಿನಿಮಾ ಮಾಡಲು ಹೊರಟಾಗ ಈ ಸಂಸ್ಥೆಯ ಜನಪ್ರಿಯತೆ ಮತ್ತು ಅವರಲ್ಲಿನ ಸಿನಿಮಾ ನಿರ್ಮಾಣ  ಕುರಿತಾದ  ಬದ್ಧತೆಯ ಪರಿಣಾಮ ಪುಟ್ಟಣ್ಣ ಕಣಗಾಲ್ ಸಿನಿಮಾ ಮಾಡಿಕೊಡಲು ಒಪ್ಪಿದರು. ತರಾಸು ಅವರ ಕಾದಂಬರಿ 'ನಾಗರ ಹಾವು' ಸಿನಿಮಾದ ಕಥಾವಸ್ತುವಾಯಿತು. ಹೊಸ ನಟನೊಬ್ಬನನ್ನು ನಾಯಕನಾಗಿ ಪರಿಚಯಿಸಬೇಕೆನ್ನುವ ನಿರ್ದೇಶಕರ ಮತ್ತು ನಿರ್ಮಾಪಕರ ಮಹತ್ವಾಕಾಂಕ್ಷೆಯಿಂದಾಗಿ ವಿಷ್ಣುವರ್ಧನ್ ಎನ್ನುವ ಪ್ರತಿಭೆ ಕನ್ನಡ ಸಿನಿಮಾ ರಂಗದಲ್ಲಿ ಅರಳಿಕೊಂಡಿತು. ಆರತಿ, ಜಯಂತಿ, ಲೀಲಾವತಿ, ಅಶ್ವತ್ಥ್, ಎಂ. ಪಿ. ಶಂಕರ ಅವರಂಥ ಪ್ರತಿಭಾನ್ವಿತರು ಅಭಿನಯಿಸಿದ 'ನಾಗರ ಹಾವು' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಕನ್ನಡ ಸಿನಿಮಾ ರಂಗದಲ್ಲಿ ರಾಜ ಕುಮಾರ ನಂತರ ಹೊಸ ಸೂಪರ್ ಸ್ಟಾರ್ ವಿಷ್ಣುವರ್ಧನ್ ರೂಪದಲ್ಲಿ ಜನ್ಮತಳೆದ.

                  ವಿಷ್ಣುವರ್ಧನ್ ವೃತ್ತಿ ಬದುಕಿಗೆ 'ನಾಗರ ಹಾವು' ನಂಥ ಹಿಟ್ ಚಿತ್ರದ ಮೂಲಕ ಭದ್ರ ಬುನಾದಿ ಒದಗಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ವೃತ್ತಿ ಬದುಕಿನಲ್ಲಿ ಅದೇ ವಿಷ್ಣುವರ್ಧನ್ ಗಾಗಿ ಮತ್ತೊಂದು ಸಿನಿಮಾ ನಿರ್ದೆಶಿಸಲೇ ಇಲ್ಲ. ಪುಟ್ಟಣ್ಣ ಕಣಗಾಲ್ ಚಿತ್ರರಂಗಕ್ಕೆ ಪರಿಚಯಿಸಿದ ಅನೇಕ ಕಲಾವಿದರು ಮತ್ತೆ ಮತ್ತೆ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆಗಳಿವೆ. ಆದರೆ ವಿಷ್ಣುವರ್ಧನ್ ವಿಷಯದಲ್ಲಿ ಮಾತ್ರ ಈ ಮಾತು ಸುಳ್ಳಾಯಿತು. ತಾನೊಬ್ಬ ಸ್ಟಾರ್ ನಿರ್ದೇಶಕ ಎನ್ನುವ ಅಹಂ ಪುಟ್ಟಣ್ಣ ಕಣಗಾಲರಿಗಿದ್ದಂತೆ ನಾಯಕನಾಗಿ ಅಭಿನಯಿಸಿದ ಪ್ರಥಮ ಚಿತ್ರದಲ್ಲೇ ದೊರೆತ ಅದ್ಭುತ ಯಶಸ್ಸು ವಿಷ್ಣುವರ್ಧನ್ ಗೂ ತಾನೊಬ್ಬ ಜನಪ್ರಿಯ ನಟ ಎನ್ನುವ ಅಹಂಗೆ ಕಾರಣವಾಯಿತೇನೋ? ಪರಸ್ಪರರಲ್ಲಿನ ಈ ಅಹಂಕಾರದ ಗುಣವೇ ಅವರಿಬ್ಬರೂ ಮತ್ತೆ ಜೊತೆಗೂಡಿ ಮತ್ತೊಂದು ಯಶಸ್ಸನ್ನು ಕೊಡಲು ಸಾಧ್ಯವಾಗಲಿಲ್ಲ. ಜೊತೆಗೆ ಆ ಹೊತ್ತಿಗಾಗಲೇ ವಿಷ್ಣುವರ್ಧನ್ ಸುತ್ತ ಅವಕಾಶವಾದಿ ನಿರ್ಮಾಪಕರ ಒಂದು ಪಡೆ ಭದ್ರ ಕೋಟೆಯನ್ನೇ ನಿರ್ಮಿಸಿತ್ತು. ಆ ಕೋಟೆಯಿಂದ ಹೊರಬರಲು ವಿಷ್ಣುವರ್ಧನ್ ಗೆ ಬಹಳಷ್ಟು ಸಮಯ ಹಿಡಿಯಿತು.

                  ವಿಷ್ಣುವರ್ಧನ್ 'ಗಂಧದ ಗುಡಿ' ಸಿನಿಮಾದಲ್ಲಿ ಖಳನ ಪಾತ್ರದಲ್ಲಿ ನಟಿಸಿದ್ದು ನನ್ನನ್ನು ಆ ನಟನ ವಿಷಯವಾಗಿ ಇವತ್ತಿಗೂ ಕಾಡುವ ಸಂಗತಿಗಳಲ್ಲೊಂದು. ಹಾಗೆಂದ ಮಾತ್ರಕ್ಕೆ ಕಲಾವಿದನಾದವನು ಒಂದೇ ಬಗೆಯ ಪಾತ್ರಗಳಿಗೆ  ತನ್ನ ನಟನೆಯನ್ನು ಸೀಮಿತಗೊಳಿಸಿಕೊಳ್ಳಬೇಕು ಎನ್ನುವುದು ನನ್ನ ವಾದವಲ್ಲ. ಆದರೆ ೧೯೭೦ ರ ದಶಕದಲ್ಲಿ ಒಂದು ಇಮೇಜಿಗಾಗಿ ಹಂಬಲಿಸುತ್ತಿದ್ದ ನಾಯಕ ನಟರು ಯಾವತ್ತೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿರಲಿಲ್ಲ. ಹಾಗೊಂದು ವೇಳೆ ನಾಯಕ ನಟನನ್ನು  ನೆಗೆಟಿವ್ ಪಾತ್ರದಲ್ಲಿ ತೋರಿಸುವುದು ಸಿನಿಮಾ ಕಥೆಗೆ ಅನಿವಾರ್ಯವಾದರೆ ಆಗ ದ್ವಿಪಾತ್ರದ ಸೃಷ್ಟಿಯಾಗುತ್ತಿತ್ತು. ಈಗ ನಾನು ಮತ್ತೆ ವಿಷ್ಣುವರ್ಧನ್ ವಿಷಯಕ್ಕೆ ಬರುತ್ತೇನೆ. ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ಅಪಾರ ಜನಪ್ರಿಯತೆ ಮತ್ತು ಅದ್ಭುತ ಯಶಸ್ಸನ್ನು ತಂದುಕೊಟ್ಟಿತ್ತು. ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಲು ಚಿತ್ರರಂಗದ ಅವಕಾಶದ ಬಾಗಿಲು ತೆರೆದುಕೊಂಡಿತ್ತು. ಸಿನಿಮಾ ರಂಗದಲ್ಲಿ ಭದ್ರವಾಗಿ ನೆಲೆಯೂರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿದ್ದವು. ಹೀಗಿದ್ದೂ 'ಗಂಧದ ಗುಡಿ' ಚಿತ್ರಕ್ಕೆ ವಿಷ್ಣುವರ್ಧನ್ ಅವರನ್ನು ಖಳನ  ಪಾತ್ರಕ್ಕೆ ಆಯ್ಕೆ ಮಾಡಿದ್ದು ಒಂದು ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರ ತಪ್ಪು ಎಂದಾದರೆ  ವಿಷ್ಣು ಆ ಪಾತ್ರವನ್ನು ಒಪ್ಪಿಕೊಂಡಿದ್ದು ಇನ್ನೊಂದು ತಪ್ಪು. ಪಾತ್ರದ ಆಯ್ಕೆಯಲ್ಲಿ ಎಡವಿದ ಈ ಒಂದು ಘಟನೆ ಆ ನಟನ ದುಡುಕಿನ ನಿರ್ಧಾರ ಎಂದೆನಿಸಿದರೂ ಎಲ್ಲೋ ಕೆಲವರ ಋಣದ ಭಾರ ಆ ಸಂದರ್ಭ ವಿಷ್ಣುವರ್ಧನ್ ಗೆ ಅಂಥದ್ದೊಂದು ಪಾತ್ರ ಒಪ್ಪಿಕೊಳ್ಳುವಂತೆ ಮಾಡಿತು ಎನ್ನುವುದು ಸಿನಿಮಾ ವಲಯದಲ್ಲಿ ಇವತ್ತಿಗೂ ಕೇಳಿ ಬರುತ್ತಿರುವ ಮಾತಿದು. ಒಟ್ಟಿನಲ್ಲಿ ಆ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ ನಂತರ ವಿಷ್ಣುವರ್ಧನ್ ಖಾಸಗಿ ಮತ್ತು ವೃತ್ತಿ ಬದುಕುಗಳೆರಡರಲ್ಲೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.

                 ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟ. 'ನಾಗರ ಹಾವು' ಸಿನಿಮಾದ ಯಶಸ್ಸು ಅವರಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸಿತು. ನಾಗರ ಹೊಳೆ, ಭಾಗ್ಯ ಜ್ಯೋತಿ, ಬಂಗಾರದ ಗುಡಿ, ಸಿರಿತನಕ್ಕೆ ಸವಾಲ್ ನಂಥ ಅನೇಕ ಹಿಟ್ ಸಿನಿಮಾಗಳು ಅವರನ್ನು ಜನಪ್ರಿಯತೆ ಮತ್ತು ಯಶಸ್ಸಿನ ಉತ್ತುಂಗಕ್ಕೇರಿಸಿದವು. ಹೀಗೆ ಯಶಸ್ಸಿನ ಏಣಿಯನ್ನು ಹತ್ತಿ ಕುಳಿತ ಈ ನಟ ಕನ್ನಡ ಚಿತ್ರರಂಗದ ಎರಡನೇ ನಾಯಕನಾಗಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡರು. ಈ ಸಂದರ್ಭದಲ್ಲೇ ವಿಷ್ಣುವರ್ಧನ್ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಯಿತು. ವಿಷ್ಣುವರ್ಧನ್ ಆಗಮನದ ವೇಳೆಗಾಗಲೇ ರಾಜಕುಮಾರ ನೂರ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದ ಏಕಮೇವಾ ದ್ವಿತೀಯ ನಾಯಕನಾಗಿ ಪ್ರತಿಷ್ಥಾಪನೆಗೊಂಡಿದ್ದರು. ಕನ್ನಡ ನಾಡಿನ ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದ ಪ್ರೇಕ್ಷಕರು ರಾಜಕುಮಾರ ಅಭಿನಯವನ್ನು ಮೆಚ್ಚಿ ಕೊಂಡಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ಪೈಪೋಟಿಯನ್ನೇ ಕಾಣದಿದ್ದ ರಾಜಕುಮಾರ ಸಿನಿಮಾಗಳಿಗೆ ವಿಷ್ಣುವರ್ಧನ್ ಸಿನಿಮಾಗಳು ಪ್ರಬಲ ಸ್ಪರ್ಧೆಯೊಡ್ಡಲಾರಂಭಿಸಿದವು. ರಾಜಕುಮಾರ ಗುಂಪಿನ ಖಾಯಂ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ಹೊಸ ನಟನೊಬ್ಬನ ಆಗಮನದ ಪರಿಣಾಮ ಅವನನ್ನು ಹುಡುಕಿಕೊಂಡು ವಲಸೆ ಹೋಗಲಾರಂಭಿಸಿದರು. ಆಗಲೇ ರಾಜಕುಮಾರ ಆಸ್ಥಾನದ ಖಾಯಂ ಹೊಗಳು ಭಟ್ಟರಾಗಿ ಠಳಾಯಿಸಿದ್ದ ನಿರ್ಮಾಪಕರು ಮತ್ತು ನಿರ್ದೇಶಕರು ಎಚ್ಚೆತ್ತು ಕೊಂಡರು. ರಾಜಕುಮಾರ ಅವರನ್ನು ಓಲೈಸುತ್ತ ತಮ್ಮ ಹಣದ ಥೈಲಿಯನ್ನು ತುಂಬಿಕೊಂಡ ನಿರ್ಮಾಪಕರಿಗೆ ಮತ್ತು ಸಿನಿಮಾ ವಿತರಕರಿಗೆ ವಿಷ್ಣುವರ್ಧನ್ ಆಗಮನ ಮತ್ತು ಬೆಳವಣಿಗೆ ತೊಡಕಾಗಿ ಪರಿಣಮಿಸಿತು. ಇನ್ನೊಂದೆಡೆ ರಾಜಕುಮಾರ ಅವರನ್ನು ಹಾಕಿಕೊಂಡು ಸಿನಿಮಾಗಳನ್ನು ನಿರ್ಮಿಸಲು ಅವಕಾಶ ವಂಚಿತರಾದ ನಿರ್ಮಾಪಕರ  ಪಾಲಿಗೆ ವಿಷ್ಣುವರ್ಧನ್ ಹೊಸ ಭರವಸೆಯಾಗಿ ಗೋಚರಿಸತೊಡಗಿದರು. ಹೀಗೆ ರಾಜಕುಮಾರ ಪರ ಮತ್ತು ವಿರೋಧಿ ಗುಂಪುಗಳು ವಿಷ್ಣುವರ್ಧನ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಪೈಪೋಟಿಯ ನಾಟಕ ಹೆಣೆಯತೊಡಗಿದರು. ಅಂಥದ್ದೊಂದು ನಾಟಕಕ್ಕೆ ರಾಜಕುಮಾರ ಮತ್ತು ಅವರ ಕುಟುಂಬ ವರ್ಗದವರು ಆವತ್ತೇ ತಣ್ಣಗೆ ಪ್ರತಿಕ್ರಿಯಿಸಿದ್ದರೆ ವಿಷ್ಣುವರ್ಧನ್ ವೃತ್ತಿ ಬದುಕು ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿರಲಿಲ್ಲ. ಜೊತೆಗೆ ಅಸುರಕ್ಷತೆಯ ಭಯ ಈ ನಟನನ್ನು ಬದುಕಿನ ಕೊನೆಯ ದಿನಗಳವರೆಗೂ ಕಾಡುತ್ತಿರಲಿಲ್ಲ.

                   ಪೈಪೋಟಿ ಮತ್ತು ಸ್ಪರ್ಧೆಯ ಪರಿಣಾಮ ವಿಷ್ಣುವರ್ಧನ್ ಗೆ ರಾಜಕುಮಾರ ಅವರ ಪ್ರಭಾವಳಿಯಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ರಾಜಕುಮಾರ ಪಾತ್ರಗಳ ನೆರಳು ಸೋಕದಂತೆ ಅಭಿನಯಿಸುವ ಅವಕಾಶವನ್ನು ಅವರನ್ನು ಸುತ್ತುವರಿದ ನಿರ್ದೇಶಕರು ಮತ್ತು ನಿರ್ಮಾಪಕರುಗಳು ಮಾಡಿಕೊಡಲೇ ಇಲ್ಲ. ಮತ್ತೊಬ್ಬ ರಾಜಕುಮಾರನನ್ನು ಸೃಷ್ಟಿಸುವ ಭರಾಟೆಯಲ್ಲಿ ಅವರೆಲ್ಲ ವಿಷ್ಣುವರ್ಧನ್ ಎನ್ನುವ ನಟನನ್ನು ರಾಜಕುಮಾರ ನಡೆದ ದಾರಿಯಲ್ಲೇ ನಡೆಯುವಂತೆ ಮಾಡಿದರು. ಪರಿಣಾಮವಾಗಿ ಇಬ್ಬರ ಸಿನಿಮಾಗಳು ಒಂದೇ ರೀತಿಯ ಕಥೆ ಮತ್ತು ಪಾತ್ರಗಳಿಂದ ಸೊರಗಿಹೋದವು. ಒಬ್ಬರು ಸಾಹಸ ಸಿಂಹನಾದರೆ ಇನ್ನೊಬ್ಬರು ಕೆರಳಿದ ಸಿಂಹ ಎಂದು ಗರ್ಜಿಸಿದರು. ಒಬ್ಬ ನಟ ಸಂಪತ್ತಿಗೆ ಸವಾಲು ಹಾಕಿದರೆ ಇನ್ನೊಬ್ಬ ನಟ ಸಿರಿತನಕ್ಕೆ ಸವಾಲು ಎಂದು ತೊಡೆ ತಟ್ಟಿದರು. ಒಟ್ಟಿನಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ್ ಒಂದೇ ದೋಣಿಯ ಪಯಣಿಗರಾದರು. ಇಲ್ಲಿ ವಿಷ್ಣುವರ್ಧನ್ ಗೆ ಒಬ್ಬ ಪರಿಪೂರ್ಣ ಕಲಾವಿದನಾಗಿ ಬೆಳೆಯುವ ವಿಪುಲ ಅವಕಾಶವಿದ್ದರೂ ಆ ನಟನನ್ನು ಸುತ್ತುವರಿದ ಅವಕಾಶವಾದಿಗಳಿಗೆ ಅವರನ್ನು ರಾಜಕುಮಾರ್ ಗೆ ಪ್ರಬಲ ಸ್ಪರ್ಧೆ ಒಡ್ಡುವ ನಟನಾಗಿ ಬೆಳೆಸುವುದರಲ್ಲೇ ಹೆಚ್ಚಿನ ಆಸಕ್ತಿಯಿತ್ತು. ಇಂಥ ಅವಕಾಶವಾದಿಗಳಿಂದಾಗಿಯೇ ಪುಟ್ಟಣ್ಣ ಕಣಗಾಲ್, ಗೀತ ಪ್ರಿಯರಂಥ ಪ್ರತಿಭಾನ್ವಿತ ನಿರ್ದೇಶಕರ ಒಂದೊಂದು ಸಿನಿಮಾಕ್ಕೆ ಮಾತ್ರ ವಿಷ್ಣುವರ್ಧನ್ ಅಭಿನಯ ಸೀಮಿತವಾಯಿತು. ಇಂಥದ್ದೊಂದು ನಿರಾಸೆಯ ನಡುವೆಯೂ ಎಸ್. ವಿ. ರಾಜೇಂದ್ರ ಸಿಂಗ ಬಾಬು, ಸುನಿಲ ಕುಮಾರ ದೇಸಾಯಿ, ದಿನೇಶ ಬಾಬು, ಎಸ್ ನಾರಾಯಣ ಈ ನಿರ್ದೇಶಕರು ವಿಷ್ಣುವರ್ಧನ್ ಅವರೊಳಗಿನ ಕಲಾವಿದನನ್ನು ಸಮರ್ಥವಾಗಿ ದುಡಿಸಿಕೊಂಡರು. ಬಂಧನ, ಮುತ್ತಿನಹಾರ, ಸುಪ್ರಭಾತ, ಲಾಲಿ, ಉತ್ಕರ್ಷ, ಸಿರಿವಂತ, ವೀರಪ್ಪ ನಾಯ್ಕ ಸಿನಿಮಾಗಳು ಕನ್ನಡದ ಸರ್ವಕಾಲಿಕ ಶ್ರೇಷ್ಠ ಸಿನಿಮಾಗಳು ಎನ್ನುವ ಗೌರವಕ್ಕೆ ಪಾತ್ರವಾದವು.

                  ವಿಷ್ಣುವರ್ಧನ್ ಅವರಂಥ ಪ್ರತಿಭಾನ್ವಿತ ಕಲಾವಿದನನ್ನು ಅತ್ಯಂತ ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗ ಎಡವಿತು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾದ ಸಂಗತಿ. ವೃತ್ತಿ ಬದುಕಿನ ಆರಂಭದಲ್ಲಿ ಸಾಹಸ ಪ್ರಧಾನ ಪಾತ್ರಗಳಿಗೆ ಸೀಮಿತವಾಗಿದ್ದ ತಮ್ಮ ಅಭಿನಯದ ಇತಿಮಿತಿಯಿಂದ ಹೊರಬರಲು ವಿಷ್ಣುವರ್ಧನ್ ಗೆ ಹಲವು ವರ್ಷಗಳೇ ಬೇಕಾದವು. ಬಂಧನ ಸಿನಿಮಾದಿಂದ ವಿಷ್ಣುವರ್ಧನ್ ವೃತ್ತಿ ಬದುಕು ಬೇರೊಂದು ಮಗ್ಗುಲು ಹೊರಳಿದರೂ ಆ ಸಿನಿಮಾದ ಯಶಸ್ಸನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಾಪಕರು ಮತ್ತು ನಿರ್ದೇಶಕರು ಆ ನಟನನ್ನು ಮತ್ತೆ ಮತ್ತೆ ಬಂಧನದಂಥ ಪಾತ್ರದಲ್ಲೇ ಚಿತ್ರಿಸತೊಡಗಿದರು. ಇದು ವಿಷ್ಣುವರ್ಧನ್ ವೃತ್ತಿ ಬದುಕಿನ ದುರಾದೃಷ್ಟ. ಯಜಮಾನ ಚಿತ್ರದ ಯಶಸ್ಸಿನ ನಂತರ ವಿಷ್ಣುವರ್ಧನ್ ಗೆ ಮತ್ತೆ ಅಂಥದ್ದೇ ಪಾತ್ರಗಳು ಸಿಗತೊಡಗಿದವು. ಅವರ ವೃತ್ತಿ ಬದುಕಿನ ಕೊನೆಯ ಸಿನಿಮಾ 'ಆಪ್ತ ರಕ್ಷಕ' ಕೂಡ 'ಆಪ್ತ ಮಿತ್ರ' ದ ಯಶಸ್ಸಿನ ಮುಂದುವರೆದ ಭಾಗ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಜೊತೆಗೆ ವಿಷ್ಣುವರ್ಧನ್ ವಯಸ್ಸಿಗೊಪ್ಪುವ ಪಾತ್ರಗಳಲ್ಲಿ ಅಭಿನಯಿಸಿದ್ದು ತುಂಬ ಕಡಿಮೆ. ಇಲ್ಲೂ ರಾಜಕುಮಾರ ವೃತ್ತಿ ಬದುಕಿನ ಪ್ರಭಾವವನ್ನು ಕಾಣುತ್ತೇವೆ. ರಾಜಕುಮಾರ ಹೇಗೆ ಕೊನೆಯವರೆಗೂ ಮರಸುತ್ತುವ ಪಾತ್ರಗಳಲ್ಲೇ ಕಾಣಿಸಿಕೊಂಡರೋ ವಿಷ್ಣುವರ್ಧನ್ ಸಹ ಅಂಥದ್ದೇ ಪಾತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ವಯೋಸಹಜ ಪಾತ್ರಗಳಲ್ಲಿ ಅಭಿನಯಿಸಿದ್ದರೆ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಂದ ಇನ್ನಷ್ಟು ಚಾರಿತ್ರಿಕ ಪಾತ್ರಗಳು ಸೃಷ್ಟಿಯಾಗುತ್ತಿದ್ದವು.

      ಕಲಾತ್ಮಕ ಸಿನಿಮಾಗಳಿಗೆ ವಿಮುಖರಾಗಿ ನಡೆದಿದ್ದು ಕೂಡ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನ ವಿರೋದಾಭಾಸಗಳಲ್ಲೊಂದು. ವಿಷ್ಣುವರ್ಧನ್ ಅಭಿನಯದ ಮೊದಲ ಸಿನಿಮಾ 'ವಂಶ ವೃಕ್ಷ' ಅದೊಂದು ಕಲಾತ್ಮಕ ಸಿನಿಮಾ. ಹೆಸರು ಮತ್ತು ಹಣ ಮಾಡುವುದಕ್ಕಿಂತ ಮೊದಲು ಸಿನಿಮಾ ಅಭಿನಯಕ್ಕಾಗಿ ಹಂಬಲಿಸುತ್ತಿದ್ದ ಈ ನಟ ಕಲಾತ್ಮಕ ಸಿನಿಮಾದಲ್ಲಿ ಅವಕಾಶ ದೊರೆತಾಗ ಅದನ್ನು ಸಹಜವಾಗಿಯೇ ಒಪ್ಪಿಕೊಂಡರು. ಆ ನಂತರದಲ್ಲಿ ದೊರೆತ ಜನಪ್ರಿಯತೆ ಅವರನ್ನು ಕಲಾತ್ಮಕ ಸಿನಿಮಾಗಳಿಂದ ವಿಮುಖವಾಗಿಸಿತು. ಇಮೇಜಿಗೆ ಧಕ್ಕೆ ಬರಬಹುದೆನ್ನುವ ಕಾರಣದಿಂದ ವಿಷ್ಣುವರ್ಧನ್ ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ನಟಿಸಲಿಲ್ಲ. ಗಿರೀಶ್ ಕಾಸರವಳ್ಳಿ, ಲಕ್ಷ್ಮಿ ನಾರಾಯಣ ಅವರಂಥ ಸೃಜನಶೀಲ ನಿರ್ದೇಶಕರು ಈ ಕಲಾವಿದನನ್ನು ನಿರ್ದೇಶಿಸಲು ಸಾಧ್ಯವಾಗಲೇ ಇಲ್ಲ. ಶಂಕರ್ ನಾಗ್, ಅನಂತ ನಾಗ್, ಗಿರೀಶ್ ಕಾರ್ನಾಡ್ ರಂಥ ಕಲಾವಿದರು ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಪ್ರಕಾರದ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಉದಾಹರಣೆ ಕಣ್ಣೆದುರೇ ಇರುವಾಗ ವಿಷ್ಣುವರ್ಧನ್ ಮಾತ್ರ ನಟಿಸುವ ಮನಸು ಮಾಡಲೇ ಇಲ್ಲ. ಬೇಡವೆಂದರೂ ಇಲ್ಲೂ ಅದೇ ರಾಜಕುಮಾರ ನೆರಳು ವಿಷ್ಣುವರ್ಧನ್ ವೃತ್ತಿ ಬದುಕಿನ ಮೇಲೆ ತನ್ನ ಮೈ ಚಾಚಿಕೊಳ್ಳುತ್ತದೆ. ರಾಜಕುಮಾರ ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ನಟಿಸದೆ ಇದ್ದದ್ದು ವಿಷ್ಣುವರ್ಧನ್ ಗೆ ಆದರ್ಶವಾಗಿಯೋ ಇಲ್ಲವೇ ಪೈಪೋಟಿಯಾಗಿಯೋ ಕಾಣಿಸಿರಲೂಬಹುದು.

                   ರಾಜಕುಮಾರ ವೃತ್ತಿ ಬದುಕಿಗೆ ಪಾರ್ವತಮ್ಮನವರ ಕಾವಲಿತ್ತು. ವರದಪ್ಪನವರಂಥ ಸಹೋದರನ ಬೆಂಬಲವಿತ್ತು. ಚಿನ್ನೇಗೌಡ, ಗೋವಿಂದ ರಾಜ್, ಸಾ ರಾ ಗೋವಿಂದು ಅವರ ಬೆಂಗಾವಲು ಪಡೆಯಿತ್ತು. ಸ್ವಾಮಿ ನಿಷ್ಥೆ ತೋರುವ  ನಿರ್ಮಾಪಕರು ಮತ್ತು ನಿರ್ದೇಶಕರಿದ್ದರು. ಒಟ್ಟಿನಲ್ಲಿ ರಾಜಕುಮಾರ ಮತ್ತು ಅವರೊಳಗಿನ ಕಲಾವಿದ ಈ ಇಬ್ಬರೂ ಅತ್ಯಂತ ಸುರಕ್ಷಿತ ವಲಯದೊಳಗಿದ್ದರು. ಆದರೆ ವಿಷ್ಣುವರ್ಧನ್ ಗೆ ಇಂಥದ್ದೊಂದು ಸುರಕ್ಷತೆಯ ಕೊರತೆ ಅವರ ವೃತ್ತಿ ಬದುಕಿನುದ್ದಕ್ಕೂ ಕಾಡುತ್ತಿತ್ತು. ಕೆಲವು ಅವಕಾಶವಾದಿಗಳು ಸುರಕ್ಷತೆಯ  ಭಾವನೆ ಮೂಡಿಸಲು ಹತ್ತಿರ ಬಂದರಾದರೂ ಅವರೆಲ್ಲ ತಮ್ಮ ತಮ್ಮ ಹಣದ ಥೈಲಿಯನ್ನು ತುಂಬಿಕೊಂಡು ಬದುಕನ್ನು ಹಸನಾಗಿಸಿ ಕೊಂಡರೇ ವಿನ: ವಿಷ್ಣುವರ್ಧನ್ ಗೆ ನೆರವು ನೀಡಿದ್ದು ಕಡಿಮೆ. ಆದ್ದರಿಂದಲೇ ಈ ನಟ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಆಧ್ಯಾತ್ಮದ ನೆಲೆಯಲ್ಲಿ ನಿಂತು  ಸಾವನ್ನು ಕುರಿತು ಧ್ಯಾನಿಸುತ್ತಿದ್ದರು.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, August 23, 2014

ಡಾ. ಯು. ಆರ್. ಅನಂತಮೂರ್ತಿ: ನಾಡು ಕಂಡ ಶ್ರೇಷ್ಠ ಚಿಂತಕ ಹಾಗೂ ಬರಹಗಾರ

       



  (೨೧. ೧೨. ೧೯೩೨- ೨೨. ೦೮. ೨೦೧೪)


          ಕನ್ನಡದ ಶ್ರೇಷ್ಠ ಬರಹಗಾರ ಮತ್ತು ಚಿಂತಕ ಡಾ. ಯು. ಆರ್. ಅನಂತಮೂರ್ತಿ ಇನ್ನಿಲ್ಲ. ಕನ್ನಡ ಸಾರಸ್ವತಲೋಕದ ಪ್ರಭೆಯೊಂದು ನಂದಿಹೋಯಿತು ಎನ್ನುವ ಸಂಗತಿ ಜೀರ್ಣಿಸಿಕೊಳ್ಳುವುದು ಬಲು ಕಷ್ಟದ ವಿಷಯ. ತಮ್ಮ ಸಮಗ್ರ ಸಾಹಿತ್ಯದ ಮೂಲಕ ಕನ್ನಡಕ್ಕೆ ಆರನೇ ಜ್ಞಾನಪೀಠ ತಂದು  ಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ಡಾ.ಯು. ಆರ್. ಅನಂತಮೂರ್ತಿ ಅವರು ಸಂಸ್ಕಾರ, ಭವ, ಘಟಶ್ರಾದ್ಧ, ಬರ ಸಂಖ್ಯಾತ್ಮಕ ದೃಷ್ಟಿಯಿಂದ ಬೆರಳೆಣಿಕೆಯ ಕಾದಂಬರಿಗಳನ್ನು ಮತ್ತು ಕೆಲವು ಕಥಾಸಂಕಲನಗಳನ್ನು ಬರೆದು ಬರೆದದ್ದು ಕಡಿಮೆ ಎಂದೆನಿಸಿದರೂ ಅವರು  ಬರೆದದ್ದೆಲ್ಲ ತುಂಬ ಮೌಲಿಕವಾದದ್ದು. ೧೯೬೦ ರ ದಶಕದಲ್ಲಿ 'ಸಂಸ್ಕಾರ' ದಂಥ ಸಂಪ್ರದಾಯ ವಿರೋಧಿ ಕಾದಂಬರಿಯನ್ನು ಅದು ಕುರುಡು ನಂಬಿಕೆಗಳು ಅತ್ಯಂತ ಪ್ರಸ್ತುತವಾಗಿದ್ದ ದಿನಗಳಲ್ಲಿ ಬರೆಯಲು ಸಾಧ್ಯವಾಗಿದ್ದು ಮೂರ್ತಿಗಳಲ್ಲಿದ್ದ ಸಮಾಜದ ಕುರಿತಾದ ಕಳಕಳಿಗೆ ನಿಜವಾದ ದೃಷ್ಟಾಂತ. ಸಂಪ್ರದಾಯವನ್ನು ವಿರೋಧಿಸಿ ಬರೆಯಲು ತಮಗೆ ಹೇಗೆ  ಸಾಧ್ಯವಾಯಿತು ಎನ್ನುವುದನ್ನು ತಮ್ಮ  ಆತ್ಮಕಥನ 'ಸುರಗಿ' ಯಲ್ಲಿ ಹೀಗೆ ಹೇಳಿಕೊಂಡಿರುವರು  'ಅಪ್ಪ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಹೊಲದ ಕೆಲಸದ ಆಳನ್ನು ತಮ್ಮ ಸಮಕ್ಕೆ ಕೂಡಿಸಿಕೊಂಡು ಊಟ ಹಾಕುತ್ತಿದ ಅಂದಿನ ಮನೆಯ ವಾತಾವರಣವೇ ನಾನು  ಬದುಕುತ್ತಿದ್ದ ವ್ಯವಸ್ಥೆಯನ್ನು ವಿರೋಧಿಸಿ ಬರೆಯಲು ಸ್ಪೂರ್ತಿ ನೀಡಿತು'. ಸಂಪ್ರದಾಯಗಳು ಜಡ್ಡುಗಟ್ಟಿದ್ದ ಆ ದಿನಗಳಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದು ಅವರೊಳಗಿನ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ಹೇಳದೆ ಹೇಳಿದ್ದನ್ನು ಸ್ವತ: ಕಾರ್ಯಗತ ಮಾಡಿತೋರಿಸಿದ ಅವರೊಳಗಿನ ಈ ಧಾಡಸಿತನದ ಗುಣವೇ ಅವರನ್ನು ವಿರೋಧಿಸುವವರಂತೆ ಮೆಚ್ಚುವ ಮತ್ತು ಅನುಕರಿಸುವ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿತು. ಡಾ. ಯು. ಆರ್. ಅನಂತಮೂರ್ತಿ ವೈಚಾರಿಕವಾಗಿ ಅತ್ಯಂತ ಪ್ರಬುದ್ಧರಾಗಲು ಮತ್ತು ತಾನು ಬದುಕುತಿದ್ದ ವ್ಯವಸ್ಥೆಯ ಅಪಸವ್ಯಗಳನ್ನು ವಿರೋಧಿಸುವಂತಾಗಲು ಅವರು ಪಡೆದ ಇಂಗ್ಲಿಷ್ ಶಿಕ್ಷಣವೂ ಕಾರಣವಾಯಿತು. ಬರ್ಮಿಂಗ್ ಹ್ಯಾಮ್ ಯುನಿವರ್ಸಿಟಿಯಲ್ಲಿನ ಇಂಗ್ಲಿಷ್ ಶಿಕ್ಷಣ ಅವರನ್ನು ಬರಹಗಾರನ ಜೊತೆಗೆ ಒಬ್ಬ ಚಿಂತಕನನ್ನಾಗಿಯೂ ರೂಪಿಸಿತು. ಅದಕ್ಕೆಂದೇ ಅವರು ತಮ್ಮ ಬರಹ ಹಾಗೂ ವೈಚಾರಿಕ ಮಾತುಗಳಿಂದ ತಾವು ಬದುಕುತ್ತಿದ್ದ ಸಮಾಜವನ್ನು ಕಾಲಕಾಲಕ್ಕೆ ಜಾಗೃತಗೊಳಿಸುತ್ತಲೇ ಬಂದರು. ಬರಹಗಾರನೊಬ್ಬ ಸಮಾಜದ ಸಮಸ್ಯೆಗಳು ಮತ್ತು ವೈರುಧ್ಯಗಳಿಗೆ ಸದಾಕಾಲ ಮುಖಾಮುಖಿಯಾಗಿರಬೇಕು ಎನ್ನುವ ನಿಲುವು ಅವರದಾಗಿತ್ತು. ಉತ್ತಮವಾದದ್ದನ್ನು ಉತ್ತೇಜಿಸಿ ಮಾತನಾಡುತ್ತಿದುದ್ದಕ್ಕಿಂತ ತಮಗೆ ಸರಿಕಾಣದ್ದನ್ನು ಅವರು ಖಂಡಿಸಿ ಮಾತನಾಡಿದ್ದೇ ಹೆಚ್ಚು.  ಲೇಖಕ ಸತ್ಯನಾರಾಯಣ ಅವರು ಹೇಳುವಂತೆ ಲೇಖಕನಾದವನ ಕೆಲಸ  ಸದಾಕಾಲ ಓದುಗರಿಗೆ ಪ್ರಿಯವಾದದ್ದನ್ನೇ ಹೇಳುವುದಲ್ಲ  ಎನ್ನುವ ಮಾತು ಅನಂತಮೂರ್ತಿಯವರಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಕಾರಣದಿಂದಲೇ ಅವರು ಸದಾಕಾಲ ಹೇಳುತ್ತಿದ್ದ ಮಾತು ಬರಹಗಾರ ಏನನ್ನೂ ಸುಲಭವಾಗಿ  ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದಿಂದ ನೋಡಬೇಕೆಂದು.

             ಮೂರ್ತಿಗಳು ಶ್ರೇಷ್ಠ ಬರಗಾರನಾದಂತೆ ಅವರೊಬ್ಬ ಶ್ರೇಷ್ಠ ವಾಗ್ಮಿಯೂ ಆಗಿದ್ದರು. ಅವರಲ್ಲಿದ್ದ ವಾಕಪಟುತ್ವವೇ ಅವರು ಅನೇಕರಿಗೆ ಹತ್ತಿರವಾಗಲು ಅದರೊಂದಿಗೆ ಕೆಲವರ ಶತ್ರುತ್ವವನ್ನು ಕಟ್ಟಿಕೊಳ್ಳಲು ಕಾರಣವಾಯಿತು. ತಮಗೆ ಅನಿಸಿದ್ದನ್ನು ಕೇಳುಗರು ಒಪ್ಪಿಕೊಳ್ಳುವಂತೆ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು. ಒಂದೊಂದು ಸಲ ಅವರ ಚಿಂತನೆಗಳು ಅವರೊಬ್ಬ ಗಾಂಧಿಯ ಕಡು ವ್ಯಾಮೋಹಿ ಎನ್ನುವಂತೆ ಬಿಂಬಿತವಾಗುತ್ತಿದ್ದವು. ಈ ಮಾತಿಗೆ ಪುಷ್ಟಿ ಕೊಡುವಂತೆ ಅವರು ಗಾಂಧೀಜಿಯ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸಿ ಮಾತನಾಡುತ್ತಿದ್ದರು.  ಈಗಿನ ರಾಜಕಾರಣಿಗಳು ಮಾಡುತ್ತಿರುವ ಕೈಗಾರೀಕರಣ ಹಾಗೂ ಸಿಟಿ, ಬಿಟಿಗಳ ಅಭಿವೃದ್ಧಿ ಅವರ ದೃಷ್ಟಿಯಲ್ಲಿ ಅಭಿವೃದ್ಧಿಯೇ ಅಲ್ಲವಾಗಿತ್ತು. ಒಂದು ಆರ್ಥಿಕ ಬೆಳವಣಿಗೆ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಬದುಕುವ ಚೈತನ್ಯ ನೀಡಬೇಕು ಅದು ಮಾತ್ರ ಆರ್ಥಿಕ ಅಭಿವೃದ್ಧಿ ಎನ್ನುವುದು ಅವರ ನಿಲುವಾಗಿತ್ತು. ಇದು ಸಾಧ್ಯವಾಗುವುದು ಅದು ಗಾಂಧೀಜಿಯ ಸರ್ವೋದಯದ ಕಲ್ಪನೆಯಿಂದ ಮಾತ್ರ ಸಾಧ್ಯ ಎನ್ನುವ ಸಿದ್ಧಾಂತಕ್ಕೆ ಮೂರ್ತಿಗಳು ಕೊನೆಯವರೆಗೂ ಅಂಟಿಕೊಂಡಿದ್ದರು. ನಗರೀಕರಣ ಮತ್ತು ಮಾಲ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ನರೇಂದ್ರ ಮೋದಿಯಂಥ ಕೆಳ  ಸಮುದಾಯದ ಹಾಗೂ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಾಗುವುದು ಅದು ಗಾಂಧಿ ಕಟ್ಟಿದ ಭಾರತದಲ್ಲಿ ಮಾತ್ರ ಸಾಧ್ಯ ಎನ್ನುವ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದರು.

               ಅನಂತಮೂರ್ತಿ ಅವರು ಯಾವತ್ತೂ ತಾನು ಬಂದ ಸಮುದಾಯದ ಜಡ ಸಿದ್ಧಾಂತಗಳಿಗೆ ಮತ್ತು ಸಂಪ್ರದಾಯಗಳಿಗೆ ಕುರುಡು ನಂಬಿಕೆಗಳಿಂದ ಕಟ್ಟಿಬಿದ್ದವರಲ್ಲ. ಬೇರುಗಳಿಗೆ ಅಂಟಿಕೊಳ್ಳದೆ rootless (ಬೇರುರಹಿತ) ಆಗಿ ಬದುಕುವ ಕಲೆ ಮತ್ತು ಮನೊಧಾರ್ಢ್ಯ ಪ್ರತಿಯೊಬ್ಬರಲ್ಲಿ ಬಲವಾದಾಗಲೇ ವಿಶ್ವಮಾನವ ಕಲ್ಪನೆ ಸಾಧ್ಯ ಎಂದೆನ್ನುತ್ತಿದ್ದರು. ಒಂದರ್ಥದಲ್ಲಿ ಇದು  ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ ಎನ್ನುವ ಬಸವಣ್ಣನ ಸಂದೇಶವನ್ನು ಅವರು ಸ್ವತ: ಪಾಲಿಸಿಕೊಂಡು ಬಂದರು. ಜೊತೆಗೆ ಸ್ಥಾವರವಾಗದೆ ಜಂಗಮರಾಗಿರಿ  ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅನಂತಮೂರ್ತಿ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದರ ಹಿಂದಿನ ಮಾನದಂಡ ಅವರೊಳಗಿನ ಜಂಗಮ ಕಲ್ಪನೆಯೇ ಆಗಿರಬಹುದು. ಇದನ್ನು ಅರ್ಥಮಾಡಿಕೊಳ್ಳದೆ ಕೆಲವರು ವಚನಗಳನ್ನು ಬರೆಯದೇ ಇರುವ ಅನಂತಮೂರ್ತಿ ಅದು ಹೇಗೆ ಬಸವಶ್ರೀ ಪ್ರಶಸ್ತಿಗೆ ಆಯ್ಕೆಯಾದರು ಎಂದು  ವಿವಾದವನ್ನು ಸೃಷ್ಟಿಸಿ ಅವರ ವ್ಯಕ್ತಿತ್ವದ ತೇಜೋವಧೆಗೆ ಪ್ರಯತ್ನಿಸಿದ್ದುಂಟು.

              ಅನಂತಮೂರ್ತಿ ಅವರು ಸಿದ್ಧಾಂತದ ನೆಲೆಗಟ್ಟಿನಲ್ಲಿ ವಿರೋಧಿಸುತಿದ್ದರೆ ವಿನ: ಯಾವತ್ತೂ ವೈಯಕ್ತಿಕವಾಗಿ ಯಾರನ್ನೂ ವಿರೋಧಿಸಿದವರಲ್ಲ. ಬರಹಗಾರರು, ಚಿಂತಕರು, ಮಠಾಧಿಶರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಿಮರ್ಶಕರು ಹೀಗೆ ಮೂರ್ತಿಗಳ ನಿಲುವನ್ನು ಪ್ರತಿಭಟಿಸುವ ದೊಡ್ಡ ಪಡೆಯೇ ಇತ್ತು. ಹೀಗಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಪ್ರಮಾಣದ ಪ್ರತಿಭಟನೆಯನ್ನು ಎದುರಿಸಿದ ಬರಹಗಾರ ಮೂರ್ತಿ ಅವರನ್ನು ಬಿಟ್ಟರೆ  ಬೇರೊಬ್ಬರಿಲ್ಲ. ಅವರು ತಮಗೆ ಎದುರಾಗುವ ಪ್ರತಿಭಟನೆಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದರು. ತಮ್ಮೊಳಗಿದ್ದ ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಗುಣಗಳಿಂದಾಗಿಯೇ ಅವರು ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು ಮತ್ತು ಅದನ್ನು ಸೈದ್ಧಾಂತಿಕ ನೆಲೆಯಲ್ಲಿ  ಪ್ರಶ್ನಿಸುತ್ತಿದ್ದರು. ಅವರ ಈ ಗುಣ ಅನೇಕರಿಗೆ ವಿತಂಡವಾದಿಯಂತೆ ಗೋಚರಿಸುತ್ತಿತ್ತು. ಈ ಕಾರಣದಿಂದಲೇ ಮೂರ್ತಿ ಅವರ ಪ್ರತಿ ಹೇಳಿಕೆ ಮತ್ತು ಬರವಣಿಗೆಯನ್ನು ಅದು ಅಗತ್ಯವಿರಲಿ ಇಲ್ಲದಿರಲಿ ಒಂದು ಗುಂಪಿನ ಜನ ಸದಾಕಾಲ ಪ್ರತಿಭಟಿಸುತ್ತಿದ್ದರು. ಅಂಥ ಪ್ರತಿರೋಧಗಳನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದ ಅನಂತಮೂರ್ತಿ ಅವರಿಗೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎರಡು ಪ್ರತಿರೋಧಗಳನ್ನು ಮಾತ್ರ ನಿಭಾಯಿಸಲು ಸಾಧ್ಯವಾಗದೇ ಹೋಯಿತು. ಕುಂವೀ ಕನ್ನಡಕ್ಕೆ ಬಂದ ಎಂಟು ಜ್ಞಾನಪೀಠಗಳಲ್ಲಿ ಎರಡನ್ನು ಕುರಿತು ಅಪಸ್ವರದ ಮಾತನಾಡಿದಾಗ (ಆ ಎರಡರಲ್ಲಿ ಮೂರ್ತಿ ಅವರದೂ ಒಂದು) ಅನಂತಮೂರ್ತಿ ಆ ಒಂದು ಪ್ರತಿರೋಧವನ್ನು ನಿಭಾಯಿಸದೇ 'ಕುಂವೀ ದೈಹಿಕವಾಗಿ ಬಲಾಢ್ಯರು ಅವರೊಡನೆ ಕುಸ್ತಿ ಮಾಡುವುದು ಅಸಾಧ್ಯದ ಸಂಗತಿ' ಎಂದು ಹೇಳಿಕೆ ನೀಡಿ ಸುಮ್ಮನಾದರು. ಇನ್ನೊಂದು ಸಂದರ್ಭ ಮೋದಿ ಆಳುವ ಭಾರತದಲ್ಲಿ ನಾನಿರಲಾರೆ ಎಂದು ಹೇಳಿಕೆ ನೀಡಿದಾಗಲೂ ಅವರ ಈ ಮಾತಿಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಆಗಲೂ ಮೂರ್ತಿಗಳು ಏನನ್ನೂ ಪ್ರತಿಕ್ರಿಯಿಸಲಿಲ್ಲ. ಇಲ್ಲಿ ಎರಡು ಅಂಶಗಳು ವ್ಯಕ್ತವಾಗುತ್ತವೆ ಒಂದು ಆ ಎರಡು ಘಟನೆಗಳ ಸಂದರ್ಭ ಮೂರ್ತಿ ಅವರಿಗೆ ವಯಸ್ಸಾಗಿದ್ದು ಸಾಕಷ್ಟು ದೈಹಿಕ ತೊಂದರೆಗಳು ಕಾಣಿಸಿಕೊಂಡಿದ್ದವು ಜೊತೆಗೆ ವ್ಯವಸ್ಥೆಯನ್ನು ವಿರೋಧಿಸುವ ಗುಣ ಅವರಲ್ಲಿದ್ದುದ್ದರಿಂದ ತೀರ ವ್ಯಕ್ತಿಗತ  ಪ್ರತಿಭಟನೆಯಾಗಬಹುದೆಂದು ಅವರು ಪ್ರತಿಕ್ರಿಯಿಸದೆ ಹೋಗಿರಬಹುದು. ಅನಂತಮೂರ್ತಿ ಅವರು ಮೋದಿ ಅವರನ್ನು ಆರ್ ಎಸ್ ಎಸ್ ಸಂಘಟನೆಯ ಹಿನ್ನೆಲೆಯಿಂದ ಬಂದವರೆಂಬ ಕಾರಣದಿಂದ ವಿರೋಧಿಸುವುದಕ್ಕಿಂತ ಅವರು ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದದ್ದೇ ಹೆಚ್ಚು. ಬಹು ರಾಷ್ಟ್ರೀಯ ಕಂಪನಿಗಳಿಗೆ ಕೆಂಪುಗಂಬಳಿ ಹಾಸಿ ಅವರಿಗೆ ಸಕಲ ಸವಲತ್ತುಗಳನ್ನು ಕೊಟ್ಟು ಭಾರತಕ್ಕೆ ಆಹ್ವಾನಿಸುವ ಈ ಗುಣ ಮೂರ್ತಿಗಳಿಗೆ ಅದೊಂದು ಅಪಾಯದಂತೆ ಗೋಚರಿಸುತ್ತಿತ್ತು. ಹೀಗೆ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಎರಡು ನೂರು ವರ್ಷಗಳ ಕಾಲ ಆಳಿದ ಉದಾಹರಣೆ ನಮ್ಮೆದುರಿರುವಾಗ  ಈ ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು ಮತ್ತೆಲ್ಲಿ ದಾಸ್ಯಕ್ಕೆ ದೂಡುತ್ತವೆಯೋ ಎನ್ನುವ ಭಯ ಮತ್ತು ಅನುಮಾನ ಅವರಲ್ಲಿತ್ತೆಂದು ಕಾಣುತ್ತದೆ. ಈ ಕಾರಣದಿಂದಲೇ ಅವರು ಗಾಂಧೀಜಿ ಅವರ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸುತ್ತ ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ಅವರ ತಾತ್ವಿಕ ನಿಲುವನ್ನು ಅರ್ಥಮಾಡಿಕೊಳ್ಳದ ಕೆಲವು ಸಂಘಟನೆಗಳು ನಿನ್ನೆ ಅವರ ನಿಧನದ ಸುದ್ಧಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದವು. ಸೂತಕದ  ಮನೆಯಲ್ಲಿ ಸಂಭ್ರಮಿಸುವ ಗುಣ ಇದೊಂದು  ಅನಾಗರಿಕ ವರ್ತನೆ  ಮತ್ತು ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದದ್ದು.

       ಜಿ. ಎಸ್. ಎಸ್ ಕುರಿತು ಅನಂತಮೂರ್ತಿ ಹೀಗೆ ಬರೆಯುತ್ತಾರೆ 'ಜಿ. ಎಸ್. ಶಿವರುದ್ರಪ್ಪನವರ ಸಾಹಿತ್ಯವನ್ನು ಓದಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕನ್ನಡದಲ್ಲಿ ಅಸಂಖ್ಯ. ಅವರ ಬದುಕು ಮತ್ತು ಬರಹವನ್ನು ಗಮನಿಸುತ್ತಲೇ ಬರಹಗಾರರಾದವರಿದ್ದಾರೆ. ಅದಕ್ಕೆಂದೇ ಜಿ. ಎಸ್. ಎಸ್ ಅವರನ್ನು ನಮ್ಮ ಕಾಲದ 'ದ್ರೋಣ'ರೆಂದು ಕರೆಯುವುದು ಹೆಚ್ಚು ಸಮಂಜಸವೆನಿಸುತ್ತದೆ'. ಅನಂತಮೂರ್ತಿ ಅವರು ಶಿವರುದ್ರಪ್ಪನವರ ಬಗ್ಗೆ ಹೇಳಿದ ಈ ಮಾತು ಸ್ವತ: ಅವರಿಗೂ ಅನ್ವಯಿಸುತ್ತದೆ. ಮೂರ್ತಿ ಅವರ ಕಥೆ, ಕಾದಂಬರಿಗಳನ್ನೂ ಓದಿ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಅನೇಕ ಲೇಖಕರು ಕನ್ನಡದಲ್ಲಿರುವರು. ಜೊತೆಗೆ ಅನಂತಮೂರ್ತಿ ಅವರ ಪ್ರಭಾವದ ಪರಿಣಾಮ ಸಮಾಜದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿ ಬರೆಯುವ ಮತ್ತು ಸಮಾಜಮುಖಿಯಾಗಿ ನಿಲ್ಲುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಟ್ಟಿಕೊಂಡರು. ಲೇಖಕರೋರ್ವರು ಹೇಳುವಂತೆ ಅನಂತಮೂರ್ತಿ ಒಂದು ತಲೆಮಾರಿನ ಲೇಖಕರಿಗೆ ಪ್ರಶ್ನಿಸುವುದನ್ನು ಕಲಿಸಿದರು ಮತ್ತು ಪ್ರತಿಭಟಿಸುವುದನ್ನು ಹಕ್ಕೆಂದು ತೋರಿಸಿಕೊಟ್ಟರು. ಸಂವಾದ, ವಾಗ್ವಾದ, ಪ್ರಶ್ನಿಸುವಿಕೆಯ ಮೂಲಕ ಲೇಖಕನಾದವು ತನ್ನ ಪ್ರತಿಭಟನೆಯ ಕಾವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕೆನ್ನುವುದನ್ನು ತಮ್ಮ ನಂತರದ ಪೀಳಿಗೆಯ ಲೇಖಕರಿಗೆ ಕಲಿಸಿಕೊಟ್ಟ ಮೇಷ್ಟ್ರು ಅವರು.

       ಡಾ. ಯು. ಆರ್. ಅನಂತಮೂರ್ತಿ ನಮ್ಮ ಮುಂದಿನ ಪೀಳಿಗೆಗೆ ಯಾವ ರೀತಿ ಪರಿಚಿತರಾಗಬೇಕು ಎನ್ನುವ ಪ್ರಶ್ನೆ ಎದುರಾದಾಗ ಲೇಖಕ  ಜೋಗಿ 'ಅನಂತಮೂರ್ತಿ ಅವರು ಬರಹಗಾರನಾಗಿ ಅಲ್ಲದಿದ್ದರೂ ಹೋರಾಟಗಾರನಾಗಿ ಮತ್ತು ಚಿಂತಕನಾಗಿ ನಮ್ಮ ನಂತರದ ಪೀಳಿಗೆಗೆ ಪರಿಚಿತರಾಗಿ ಉಳಿಯುವುದು ಖಂಡಿತ ಸಾಧ್ಯ' ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ. ಆದ್ದರಿಂದ ಅನಂತಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು. ಅವರ ಅನುಮಾನದ ಮತ್ತು ಸಂದೇಹದ ನೋಟದಲ್ಲೇ ನಾವು ಬದುಕುತ್ತಿರುವ ಸಮಾಜವನ್ನು ನೋಡುವ ಹಾಗೂ ಪ್ರತಿಭಟಿಸುವ ಜೊತೆಗೆ ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಮೂಡುವಂತಾಗಲು ಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಸಂರಕ್ಷಿಸಿಟ್ಟು ಅದನ್ನು  ದಾಟಿಸುವ ಕೆಲಸವಾಗಬೇಕಿದೆ.  ನಮ್ಮ ಮುಂದಿನ ಪೀಳಿಗೆಯ ಬದುಕನ್ನು ಒಂದಿಷ್ಟು ಸಹನೀಯವಾಗಿಸಲು ಇದು ಇವತ್ತಿನ ತುರ್ತು ಅಗತ್ಯವಾಗಿದೆ ಎನ್ನುವ ಭಾವನೆ ನನ್ನದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


         

       

Monday, August 11, 2014

ಡಾ.ಎಸ್.ಆರ್.ರಂಗನಾಥನ್: ಗ್ರಂಥಾಲಯ ವಿಜ್ಞಾನಕ್ಕೆ ಭಾರತದ ಕೊಡುಗೆ

                 


                                           (ಅಗಸ್ಟ್ ೧೨ ಡಾ: ಎಸ್. ಆರ್. ರಂಗನಾಥನ್ ರ ಜನ್ಮದಿನ)


                  ನಾನು ನನ್ನ ಸ್ನಾತಕೋತ್ತರ ಶಿಕ್ಷಣಕ್ಕಾಗಿ 'ಗ್ರಂಥಾಲಯ ವಿಜ್ಞಾನ' ವನ್ನು ಅಧ್ಯನದ ವಿಷಯವಾಗಿ ಆಯ್ದು ಕೊಂಡಿದ್ದು ಹೀಗೆ ಒಂದು ಆಕಸ್ಮಿಕ ಘಳಿಗೆಯಲ್ಲಿ. ಪದವಿಯ ಅಂತಿಮ ವರ್ಷದ ಪರೀಕ್ಷೆ ಮುಗಿದು ಸ್ನೇಹಿತರೆಲ್ಲ ಮಾತನಾಡುತ್ತ ಕುಳಿತಿದ್ದ ಸಮಯ ವಿಶ್ವವಿದ್ಯಾಲಯದಲ್ಲಿ 'ಗ್ರಂಥಾಲಯ ವಿಜ್ಞಾನ' ಎನ್ನುವ ಸ್ನಾತಕೋತ್ತರ ಕೋರ್ಸು ಇರುವ ಸಂಗತಿ ಮಾತಿನ ನಡುವೆ ಸುಳಿಯಿತು. ಜೊತೆಗೆ ಅದೇ ಆಗ ಮಾಹಿತಿ ತಂತ್ರಜ್ಞಾನ ಭಾರತಕ್ಕೆ ಕಾಲಿಡುವ ತಯ್ಯಾರಿ ನಡೆಸಿತ್ತು. ಮಾಹಿತಿ ತಂತ್ರಜ್ಞಾನದ ಪರಿಣಾಮ ಗ್ರಂಥಾಲಯ ವಿಜ್ಞಾನವನ್ನು ಪ್ರಾಯೋಗಿಕವಾಗಿ ಅದ್ಯಯನ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎನ್ನುವ ಅಭಿಪ್ರಾಯ ನಮ್ಮ ಅಂದಿನ ಚರ್ಚೆಯ ಫಲಿತಾಂಶವಾಗಿತ್ತು. ಅದೇ ದಿನ ನಾವು ನಾಲ್ಕಾರು ಗೆಳೆಯರು 'ಗ್ರಂಥಾಲಯ ವಿಜ್ಞಾನ'ದಲ್ಲೇ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದು ನಿರ್ಧರಿಸಿದೇವು. ಪರೀಕ್ಷಾ ಫಲಿತಾಂಶದ ನಂತರ ವಿಶ್ವವಿದ್ಯಾಲಯಕ್ಕೆ ಹೋಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದೇವು. ತರಗತಿ ಪ್ರಾರಂಭವಾದ ಮೊದಲ ದಿನವೇ ನಮ್ಮ ಪ್ರಾಧ್ಯಾಪಕರು ನಮ್ಮನ್ನೆಲ್ಲ ಗ್ರಂಥಾಲಯಕ್ಕೆ ಕರೆದೊಯ್ದು ಅಲ್ಲಿ  ವಿವಿಧ ವಿಭಾಗಗಳನ್ನು ಪರಿಚಯಿಸಿ ಜೊತೆಗೆ ಅಲ್ಲಿಯೇ ತೂಗು ಹಾಕಿದ್ದ ಆಳೆತ್ತರದ ಭಾವಚಿತ್ರಕ್ಕೆ ನಮಸ್ಕರಿಸುವಂತೆ ಹೇಳಿದರು. ಕಪ್ಪು ಬಿಳುಪಿನ ಆ ಭಾವಚಿತ್ರದಲ್ಲಿ  ಕೋಟು ಧೋತಿ ಧರಿಸಿ ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಅಜಾನುಬಾಹು ವ್ಯಕ್ತಿ ನಗುತ್ತ ನಿಂತಿದ್ದರು. ಆ ಭಾವ ಚಿತ್ರದತ್ತ ದೃಷ್ಟಿ ಹರಿಸಿದಾಗ ಭಾವಚಿತ್ರದ ಅಡಿಯಲ್ಲಿ 'ಡಾ:ಎಸ್. ಆರ್. ರಂಗನಾಥನ್: ಗ್ರಂಥಾಲಯ ಚಳುವಳಿಯ ಜನಕ' ಎನ್ನುವ ಟಿಪ್ಪಣಿ ಕಣ್ಣಿಗೆ ಬಿತ್ತು. ಹೀಗೆ ತರಗತಿಗೆ ಕಾಲಿಟ್ಟ ಮೊದಲ ದಿನವೇ ಪರಿಚಿತರಾದ ಡಾ; ಎಸ್. ಆರ್. ರಂಗನಾಥನ್ ನಂತರದ ಎರಡು ವರ್ಷಗಳ ಕಾಲ ನಮ್ಮ ವಿದ್ಯಾರ್ಥಿ ಬದುಕಿನ ಪ್ರತಿ ಘಳಿಗೆ ನಮ್ಮೊಂದಿಗೆ ಮುಖಾಮುಖಿಯಾಗುತ್ತಲೇ ಹೋದರಲ್ಲದೆ ವೃತ್ತಿ ಬದುಕಿನಲ್ಲೂ ಅವರ ಪ್ರಭಾವ ಮತ್ತು ಅವರು ಕಟ್ಟಿಕೊಟ್ಟ ಅನುಭವ ಅಪಾರ. 

             ಡಾ: ಎಸ್. ಆರ್. ರಂಗನಾಥನ್ ಕೇವಲ ಗ್ರಂಥಾಲಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಮತ್ತು ಗ್ರಂಥಾಲಯ ವಿಜ್ಞಾನವನ್ನು ವೃತ್ತಿಯಾಗಿಸಿಕೊಂಡ ಶಿಕ್ಷಕರಿಗೆ ಹಾಗೂ ಗ್ರಂಥಪಾಲಕರಿಗೆ ಮಾತ್ರ ಪರಿಚಿತರಲ್ಲ. ಗ್ರಂಥಾಲಯದ ಕುರಿತು ಆಸಕ್ತಿಯುಳ್ಳ ಎಲ್ಲರಿಗೂ ರಂಗನಾಥನ್ ಪರಿಚಿತರು. ಗ್ರಂಥಾಲಯ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ವೇಳೆ ನಾನು ನನ್ನೂರಿಗೆ ಹೋಗಿದ್ದ ಒಂದು ಸಂದರ್ಭ ಊರಿನಲ್ಲಿದ್ದ ಪುಸ್ತಕ ಪ್ರೇಮಿ ಓದುಗ ರಂಗನಾಥನ್ ಅವರ ಹೆಸರು ಹೇಳಿ ಅವರ ಬಗ್ಗೆ ಒಂದಿಷ್ಟು ಮಾತನಾಡಿದ ಆ ಕ್ಷಣ ನನಗೆ ಆಶ್ಚರ್ಯವಾಗಿತ್ತು. ರಂಗನಾಥನ್ ನನ್ನೂರಿನಂಥ ಕುಗ್ರಾಮಕ್ಕೂ ಪರಿಚಿತರು ಎನ್ನುವ ಸಂಗತಿಯೇ ನನಗೆ ಅಚ್ಚರಿಯ ಸಂಗತಿಯಾಗಿದ್ದು ಜೊತೆಗೆ ಈ ವ್ಯಕ್ತಿ ಕೇವಲ ಗ್ರಂಥಾಲಯ ವಿಜ್ಞಾನವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದವರಿಗೆ ಮಾತ್ರ ಗೊತ್ತು ಎಂದು ಅದುವರೆಗೂ ನಾನು ಕಟ್ಟಿಕೊಂಡಿದ್ದ ಕಲ್ಪನೆ ಒಡೆದು ಚೂರಾಗಿತ್ತು. ಇಲ್ಲೇ ರಂಗನಾಥನ್ ಅವರ ವ್ಯಕ್ತಿತ್ವದ ವಿರಾಟ ದರ್ಶನ ನನಗಾದದ್ದು. ಸಿಗ್ಮಂಡ್ ಪ್ರಾಯ್ಡ್ ಮನೋವಿಜ್ಞಾನಕ್ಕೆ ಮತ್ತು ಹೆರೋಡೊಟಸ್ ಇತಿಹಾಸಕ್ಕೆ ಹೇಗೋ ಹಾಗೆ ರಂಗನಾಥನ್ ಗ್ರಂಥಾಲಯ ವಿಜ್ಞಾನಕ್ಕೆ ಪಿತಾಮಹನಾದವರು. ಮಾಹಿತಿ ತಂತ್ರಜ್ಞಾನ ಇನ್ನು ಕಣ್ಣು ಬಿಡದಿದ್ದ ಕಾಲದಲ್ಲಿ ಗ್ರಂಥಾಲಯಗಳನ್ನು ಕಟ್ಟಿ ಬೆಳೆಸಿದ ರಂಗನಾಥನ್ ತಮ್ಮ ದೂರದೃಷ್ಟಿತ್ವ ಮತ್ತು ತಮ್ಮೊಳಗಿನ ಅಪಾರ ಅನುಭವದಿಂದ ಗ್ರಂಥಾಲಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮುಖಾಮುಖಿಯಾಗಿ ನಿಲ್ಲಿಸಿದರು. ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ರಂಗನಾಥನ್ ರ ವಿಚಾರಗಳು ಗ್ರಂಥಾಲಯಗಳ ಬೆಳವಣಿಗೆಗೆ ಅತಿ ಅವಶ್ಯಕವಾಗಿದ್ದು ಅವರ ವ್ಯಕ್ತಿತ್ವ  ಗ್ರಂಥಾಲಯ ವಿಜ್ಞಾನ ಕ್ಷೇತ್ರದ ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ಅಗಾಧವಾಗಿ ಆಕ್ರಮಿಸಿಕೊಂಡಿದೆ.

      ಶಿಯ್ಯಾಳಿ ರಾಮಾಮೃತ ರಂಗನಾಥನ್ ತಮಿಳುನಾಡಿನವರು. ಅವರು ಜನಿಸಿದ್ದು ತಮಿಳು ನಾಡಿನ (ಆಗಿನ ಮದ್ರಾಸ್ ರಾಜ್ಯ) ತಂಜಾವೂರು ಜಿಲ್ಲೆಯ ಶಿಯ್ಯಾಳಿ ಎನ್ನುವ ಪುಟ್ಟ ಗ್ರಾಮದಲ್ಲಿ ೧೮೯೨ ಅಗಸ್ಟ್ ೧೨ ರಂದು. ತಂದೆ ರಾಮಾಮೃತ ಅಯ್ಯರ್ ಮತ್ತು ತಾಯಿ ಸೀತಾ ಲಕ್ಷ್ಮಿ. ರಂಗನಾಥನ್ ಆರು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ತಂದೆಯ ನಿಧನದ ನಂತರ ಅಜ್ಜ ಸುಬ್ಬಾ ಅಯ್ಯರ ಅವರ ಮಾರ್ಗದರ್ಶನದಲ್ಲಿ ರಂಗನಾಥನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ಶಿಯ್ಯಾಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂದಿನ ವಿದ್ಯಾಭ್ಯಾಸಕ್ಕಾಗಿ ರಂಗನಾಥನ್ ಮದ್ರಾಸಿಗೆ ಬಂದು ನೆಲೆಸುತ್ತಾರೆ. ಚಿಕ್ಕಂದಿನಿಂದ ಗಣಿತ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಗಣಿತ ಶಾಸ್ತ್ರದಲ್ಲೇ ಪೂರ್ಣಗೊಳಿಸಿ  ನಂತರ ಒಂದೆರಡು ವರ್ಷಗಳ ಕಾಲ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ.  ಕರ್ನಾಟಕದ ಮಂಗಳೂರಿನಲ್ಲೂ  ಕೆಲವು ತಿಂಗಳು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದು ಗಮನಾರ್ಹ ಸಂಗತಿಗಳಲ್ಲೊಂದು. ೧೯೨೪ ರಲ್ಲಿ ರಂಗನಾಥನ್ ರ ವೃತ್ತಿ ಬದುಕು ಮಹತ್ವದ ತಿರುವು ಪಡೆದುಕೊಳ್ಳುತ್ತದೆ. ಅರೆಕಾಲಿಕ ಉಪನ್ಯಾಸಕ ವೃತ್ತಿಯಿಂದ ಬರುತ್ತಿದ ಕಡಿಮೆ ಸಂಬಳದಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾದಾಗ ಬೇರೆ ವೃತ್ತಿಯನ್ನು ಹುಡುಕುವುದು ಬದುಕಿಗಾಗಿ ಅನಿವಾರ್ಯವಾಗುತ್ತದೆ. ಇದೇ ಸಂದರ್ಭ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪೂರ್ಣ ಕಾಲಿಕ ಗ್ರಂಥಪಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ರಂಗನಾಥನ್ ರ ಆರ್ಥಿಕ ತೊಂದರೆ ತಿಳಿದಿದ್ದ ಕೆಲವು ಉಪನ್ಯಾಸಕರು ಮತ್ತು ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯರ ಮಿ. ಡಂಕನ್ ಗ್ರಂಥಪಾಲಕ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಒತ್ತಾಯಿಸುತ್ತಾರೆ. ಒಲ್ಲದ ಮನಸ್ಸಿನಿಂದಲೇ ಅರ್ಜಿ ಸಲ್ಲಿಸಿದ ರಂಗನಾಥನ್  ಅಚ್ಚರಿ ಎನ್ನುವಂತೆ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕ ಹುದ್ದೆಗೆ ನೇಮಕಗೊಳ್ಳುವರು. ಪೂರ್ಣಕಾಲಿಕ ಕೆಲಸ ಮತ್ತು ಹೆಚ್ಚಿನ ಸಂಬಳ ಎಂದು ಆ ಹುದ್ದೆಯನ್ನು ಒಪ್ಪಿಕೊಂಡ ರಂಗನಾಥನ್ ರಿಗೆ ಒಂದೇ ವಾರದಲ್ಲಿ ಆ ಕೆಲಸ ಬೇಸರ ತರಿಸುತ್ತದೆ. ಪಾಠ ಮಾಡುತ್ತ ವಿದ್ಯಾರ್ಥಿಗಳ ನಡುವೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅವರಿಗೆ ಯಾರ ಸಂಪರ್ಕವೂ ಇಲ್ಲದೆ ದಿನವಿಡೀ ಒಬ್ಬಂಟಿಯಾಗಿ ಕುಳಿತು ಕೊಳ್ಳುವುದು ಅದೊಂದು ಶಿಕ್ಷೆಯಂತೆ ಭಾಸವಾಗುತ್ತದೆ. ಒಂದೇ ವಾರದಲ್ಲಿ ಪ್ರೆಸಿಡೆನ್ಸಿ ಕಾಲೇಜಿಗೆ ಮರಳಿದ ರಂಗನಾಥನ್ ತಮ್ಮನ್ನು ಮತ್ತೆ ಅದೇ ಹಿಂದಿನ ಅರೆಕಾಲಿಕ ಉಪನ್ಯಾಸಕ  ಹುದ್ದೆಗೆ ಮರು ನೇಮಕಾತಿ ಮಾಡಿಕೊಳ್ಳುವಂತೆ ಪ್ರಾಚಾರ್ಯರಲ್ಲಿ ವಿನಂತಿಸಿಕೊಳ್ಳುವರು. ರಂಗನಾಥನ್ ರಿಗಿದ್ದ ಓದಿನ ಅಭಿರುಚಿ ಮತ್ತು ಸಂಶೋಧನಾ ಮನೋಭಾವದ ಅರಿವಿದ್ದ ಪ್ರಾಚಾರ್ಯರಿಗೆ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಪುನಶ್ಚೇತನಗೊಳಿಸಲು ರಂಗನಾಥನ್ನರೆ  ಸರಿಯಾದ ವ್ಯಕ್ತಿಯೆಂದು ಅವರನ್ನು ಮರಳಿ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಲಂಡನ್ನಿನಿಂದ ಗ್ರಂಥಾಲಯ ತರಬೇತಿ ಪಡೆದು ಮರಳಿದ ಮೇಲೂ ತನ್ನ ಮನಸ್ಸಿಗೆ ಆ ಹುದ್ದೆ ಒಪ್ಪದೇ ಹೋದಲ್ಲಿ ಪ್ರೆಸಿಡೆನ್ಸಿ ಕಾಲೇಜಿಗೆ ಮತ್ತೆ ಮರಳಿ ಬರಲು ಅವಕಾಶ ನೀಡಬೇಕೆನ್ನುವ ಷರತ್ತಿನ ಮೇಲೆ ರಂಗನಾಥನ್ ಮದ್ರಾಸ ವಿಶ್ವವಿದ್ಯಾಲಯಕ್ಕೆ ಹಿಂತಿರುಗುತ್ತಾರೆ. ಮಿ. ಡಂಕನ್ ಅಂದು ಮಾಡಿದ ಕೆಲಸ ನಂತರದ ದಿನಗಳಲ್ಲಿ ಭಾರತದ ಗ್ರಂಥಾಲಯ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ಕಾರಣವಾಯಿತು. ಈ ದೃಷ್ಟಿಯಿಂದ ಭಾರತೀಯರು ಮಿ. ಡಂಕನ್ ಗೆ ಋಣಿಗಳಾಗಿರಲೇ ಬೇಕು.

          ಮತ್ತೆ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕ ಹುದ್ದೆಗೆ ಮರಳಿದ ರಂಗನಾಥನ್ ಗ್ರಂಥಾಲಯ ತರಬೇತಿಗಾಗಿ ಲಂಡನ್ ಗೆ ಪಯಣಿಸುತ್ತಾರೆ. ಲಂಡನ್ನಿನಲ್ಲಿದ್ದ ೯ ತಿಂಗಳ ಅವಧಿಯಲ್ಲಿ ರಂಗನಾಥನ್ ಅವರಿಗೆ ಗ್ರಂಥಾಲಯ ಎನ್ನುವುದು ಪ್ರಾಯೋಗಿಕವಾಗಿ ಅಧ್ಯಯನ ಮಾಡಬೇಕಾದ ವಿಷಯ ಎನ್ನುವ ಸಂಗತಿ ಮನದಟ್ಟಾಗುತ್ತದೆ. ಲಂಡನ್ನಿನ 'ಸ್ಕೂಲ್ ಆಫ್ ಲೈಬ್ರರಿಯನ್ ಶಿಪ್' ನಲ್ಲಿ ಡಬ್ಲ್ಯು. ಸಿ. ಸೇಯರ್ಸ್ ಅವರಿಂದ ಗ್ರಂಥಾಲಯ ವಿಜ್ಞಾನದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಆ ಒಂಬತ್ತು ತಿಂಗಳ ಕಾಲಾವಧಿಯಲ್ಲಿ ರಂಗನಾಥನ್ ಬರೋಬ್ಬರಿ ನೂರು ಗ್ರಂಥಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರತಿಯೊಂದು  ಗ್ರಂಥಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಹೊಸ ಹೊಸ ಸಂಗತಿಗಳನ್ನು ತಿಳಿದುಕೊಳ್ಳುವರು. ಆ ಸಂದರ್ಭದಲ್ಲೇ ಅವರ ವಿಶ್ಲೇಷಣಾತ್ಮಕ ಮನಸ್ಸು ಭಾರತೀಯ ಮತ್ತು ಬ್ರಿಟಿಷ್ ಗ್ರಂಥಾಲಯಗಳನ್ನು ತುಲನೆ ಮಾಡಿ ನೋಡುತ್ತದೆ. ಭಾರತದ ಗ್ರಂಥಾಲಯಗಳಲ್ಲಿನ ಬಹುಮುಖ್ಯ ಕೊರತೆಗಳೇನು ಎನ್ನುವುದು ಅವರಿಗೆ ಲಂಡನ್ನಿನಲ್ಲಿದ್ದ ಆ ಸಂದರ್ಭ ವೇದ್ಯವಾಗುತ್ತದೆ. ಬ್ರಿಟಿಷ ಗ್ರಂಥಾಲಯಗಳ  ಸೇವೆಗಳು, ಅಲ್ಲಿನ ತಾಂತ್ರಿಕ ಚಟುವಟಿಕೆಗಳು, ಆಕರ್ಷಕ ಮತ್ತು ಓದುಗ ಸ್ನೇಹಿ ಕಟ್ಟಡಗಳು, ಉತ್ತಮ ಗುಣ ಮಟ್ಟದ ಪಿಠೋಪಕರಣಗಳು, ಗ್ರಂಥಾಲಯ ಸಿಬ್ಬಂದಿಯ ಸೇವಾ ಮನೋಭಾವ ಈ ಎಲ್ಲವುಗಳಿಂದ ರಂಗನಾಥನ್ ಪ್ರಭಾವಿತರಾಗುತ್ತಾರೆ. ಬ್ರಿಟಿಷ್ ರಾಷ್ಟ್ರದಲ್ಲಿ ಸಾಧ್ಯವಾಗಿದ್ದು ಭಾರತದಲ್ಲೇಕೆ ಸಾಧ್ಯವಾಗಿಲ್ಲ ಎಂದು ಅವರ ಮನಸ್ಸು ಪ್ರಶ್ನಿಸುತ್ತದೆ. ಬೇರೆ ಮುಂದಿವರೆದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಗ್ರಂಥಾಲಯ ಕ್ಷೇತ್ರದಲ್ಲಿ ಬಹಳಷ್ಟು ಹಿಂದಿದೆ ಎನ್ನುವ ಸಂಗತಿ ಅರಿವಾಗುತ್ತದೆ. ಭಾರತದಲ್ಲೂ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಲಂಡನ್ನಿನಲ್ಲಿದ್ದಾಗಲೇ ನಿರ್ಧರಿಸುತ್ತಾರೆ. ಗ್ರಂಥಾಲಯಗಳ ಅಭಿವೃದ್ಧಿಯ ನೀಲನಕ್ಷೆ ಆಗಲೇ ರೂಪುಗೊಳ್ಳುತ್ತದೆ. ಆ ಎಲ್ಲ ಆಸೆ ಮತ್ತು ಕನಸುಗಳನ್ನು ಹೊತ್ತು  ರಂಗನಾಥನ್ ೧೯೨೫ ರಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿಕೊಂಡು ಭಾರತಕ್ಕೆ ಮರಳುತ್ತಾರೆ. ಗ್ರಂಥಪಾಲಕ ಹುದ್ದೆ ಮನಸ್ಸಿಗೆ ಒಪ್ಪದೇ ಹೋದಲ್ಲಿ ಉಪನ್ಯಾಸಕನಾಗಿ ತನ್ನನ್ನು ಮರಳಿ ಮರು ನೇಮಕಾತಿ ಮಾಡಿಕೊಳ್ಳಬೇಕು ಎನ್ನುವ ಷರತ್ತಿನ ಮೇಲೆ ಲಂಡನ್ ಗೆ ಹೋಗಿ ತರಬೇತಿ ಪಡೆದ ರಂಗನಾಥನ್ ಮುಂದಿನ ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯವನ್ನೇ ತಮ್ಮ ಉಸಿರಾಗಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ. ಇಡೀ ಜಗತ್ತೇ  ಭಾರತದ ಗ್ರಂಥಾಲಯಗಳ ಕಡೆ ನೋಡುವಂತೆ ಅವುಗಳನ್ನು ಕಟ್ಟಿ ಬೆಳೆಸುವರು. ಗ್ರಂಥಪಾಲಕರಾಗಿ ಗ್ರಂಥಾಲಯ ವಿಜ್ಞಾನದ ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಮತ್ತು ಸಂಶೋಧಕರಾಗಿ ರಂಗನಾಥನ್ ಮಾಡಿದ ಕೆಲಸ ಮತ್ತು ಸಾಧನೆಗಳು ಅವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಅಜರಾಮರಗೊಳಿಸಿವೆ.

ಸಾಧನೆಗಳು 


       ಲಂಡನ್ನಿನಿಂದ ಭಾರತಕ್ಕೆ ಮರಳಿದ ಮೇಲೆ ರಂಗನಾಥನ್ ಮದ್ರಾಸ್ ವಿಶ್ವವಿದ್ಯಾಲಯದ  ಗ್ರಂಥಾಲಯವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು ಬಹಳಷ್ಟು ಬದಲಾವಣೆಗಳಿಗೆ ಕಾರಣರಾಗುತ್ತಾರೆ. ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಿ ಓದುಗರಿಗೆ ಅತ್ಯುತ್ತಮ ಓದಿನ ವಾತಾವರಣವನ್ನು ಕಟ್ಟಿಕೊಟ್ಟರು. ಉತ್ತಮ ಪುಸ್ತಕಗಳ ಸಂಗ್ರಹ ಮತ್ತು ತಮ್ಮಲ್ಲಿನ ಸೇವಾ ಮನೋಭಾವದ ಪರಿಣಾಮ ಗ್ರಂಥಾಲಯಕ್ಕೆ ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ವರ್ಗೀಕರಣ ಮತ್ತು ಸೂಚೀಕರಣ ಎನ್ನುವ ಎರಡು ಅತ್ಯುತ್ತಮ ತಾಂತ್ರಿಕ ಚಟುವಟಿಕೆಗಳ ಉಪಯೋಗದ ಕಾರಣ ಓದುಗರಿಗೆ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳು ಸುಲಭವಾಗಿ ದೊರೆಯಲಾರಂಭಿಸುತ್ತವೆ. ಮದ್ರಾಸ್ ನಗರದಲ್ಲಿನ ಓದುವ ಹವ್ಯಾಸಿಗಳನ್ನು ಒಂದುಗೂಡಿಸಿ ಮದ್ರಾಸ್ ಗ್ರಂಥಾಲಯ ಸಂಘ ಎನ್ನುವ ಸಂಸ್ಥೆಯನ್ನು ಆರಂಭಿಸುವ ರಂಗನಾಥನ್ ಸಾರ್ವಜನಿಕರಿಗೂ ಗ್ರಂಥಾಲಯದ ಸೌಲಭ್ಯ ದೊರೆಯುವಂತೆ ಮಾಡಿದರು. ಮುಂದಿನ ದಿನಗಳಲ್ಲಿ ಗ್ರಂಥಾಲಯ ಕ್ಷೇತ್ರವನ್ನು ಅಧ್ಯಯನದ ವಿಷಯವಾಗಿಸಿ ಮದ್ರಾಸ್ ನಲ್ಲಿ ಗ್ರಂಥಾಲಯ ಶಾಲೆ ರಂಗನಾಥನ್ ರ ನೇತೃತ್ವದಲ್ಲಿ ತನ್ನ ಕಾರ್ಯಚಟುವಟಿಕೆಯನ್ನಾರಂಭಿಸುತ್ತದೆ. ೨೧ ವರ್ಷಗಳ ಸುದೀರ್ಘ ಸೇವೆಯ ನಂತರ ರಂಗನಾಥನ್ ೧೯೪೫ ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಳ್ಳುವರು. ಇದೇ ಸಂದರ್ಭ ಬನಾರಸ್ ಹಿಂದು ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಲು ಅಂದಿನ ಕುಲಪತಿಗಳಾಗಿದ್ದ ಡಾ. ರಾಧಾಕೃಷ್ಣನ್ ರ ಆಹ್ವಾನವನ್ನು ಒಪ್ಪಿ ಎರಡು ವರ್ಷಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ವಿವಿಧ ವಿಷಯಗಳಾಗಿ ವರ್ಗೀಕರಿಸಿ ಅವುಗಳ ಸೂಚಿಯನ್ನು ತಯ್ಯಾರಿಸಿ ಅತಿ ಕಡಿಮೆ ಅವಧಿಯಲ್ಲಿ ವಿಶ್ವವಿದ್ಯಾಲಯ ಗ್ರಂಥಾಲಯವನ್ನು ಅತ್ಯುತ್ತಮ ಶೈಕ್ಷಣಿಕ ಗ್ರಂಥಾಲಯವನ್ನಾಗಿ ಪರಿವರ್ತಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಿ ನಂತರ ರಂಗನಾಥನ್ ೧೯೪೭ ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ನಿಯುಕ್ತಿಗೊಳ್ಳುವರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಅವರು ಗ್ರಂಥಾಲಯವನ್ನು ಕಟ್ಟಿ ಬೆಳೆಸುವುದರ ಜೊತೆಗೆ ಮಾಡಿದ ಇನ್ನೊಂದು ಮಹತ್ವದ ಕೆಲಸವೆಂದರೆ ಅದು ಗ್ರಂಥಾಲಯ ವಿಜ್ಞಾನದ ಸ್ನಾತಕೋತ್ತರ ಕೋರ್ಸನ್ನು ಆರಂಭಿಸಿದ್ದು. ಅದುವರೆಗೂ ನಾಲ್ಕಾರು ತಿಂಗಳ ತರಬೇತಿಗಷ್ಟೇ ಸೀಮಿತವಾಗಿದ್ದ ಗ್ರಂಥಾಲಯ ವಿಜ್ಞಾನದ ಅಧ್ಯಯನ ರಂಗನಾಥನ್ ರ ಪ್ರಯತ್ನದ ಪರಿಣಾಮ ಸ್ನಾತಕೋತ್ತರ ಕೋರ್ಸಿಗೆ ವಿಸ್ತರಿಸಿತು. ಪರಿಣಾಮವಾಗಿ ಗ್ರಂಥಾಲಯ ವಿಜ್ಞಾನವನ್ನು ಅಭ್ಯಸಿಸಿದ ಮತ್ತು ಪ್ರಾಯೋಗಿಕವಾಗಿ ತರಬೇತಿ ಹೊಂದಿದ ಗ್ರಂಥಪಾಲಕರು ಭಾರತದ ಗ್ರಂಥಾಲಯಗಳಲ್ಲಿ ನಿಯುಕ್ತಿಗೊಳ್ಳಲು ಸಾಧ್ಯವಾಯಿತು. ಇದರ ನೇರ ಪರಿಣಾಮ ಗ್ರಂಥಾಲಯಗಳ ಮೇಲಾಯಿತು. ಭಾರತದಲ್ಲಿ ಗ್ರಂಥಾಲಯಗಳ ಅಭಿವೃದ್ಧಿಯ ಶಕೆ ಆರಂಭಗೊಂಡಿತು. ಗ್ರಂಥಾಲಯಗಳು ಮಾಹಿತಿ ಕೇಂದ್ರ ಮತ್ತು ಸಂಶೋಧನಾ  ಕೇಂದ್ರಗಳೆನ್ನುವ ಮನ್ನಣೆಗೆ ಪಾತ್ರವಾದವು. ಗ್ರಂಥಾಲಯಗಳ ಅಗತ್ಯ ಮತ್ತು ಅದರ ಅಸ್ತಿತ್ವ ವಿಶ್ವವಿದ್ಯಾಲಯಗಳನ್ನೂ ಮೀರಿ ಶಾಲೆ, ಕಾಲೇಜು, ಕೈಗಾರಿಕಾ ಕೇಂದ್ರಗಳಿಗೂ ವಿಸ್ತರಿಸಿತು. ಜನಸಾಮಾನ್ಯರೂ ಗ್ರಂಥಾಲಯಗಳ ಓದುಗರಾದರು. ಓದುಗರ ಮನೆ ಬಾಗಿಲಿಗೇ ಪುಸ್ತಕಗಳನ್ನು ತಲುಪಿಸುವ ಸಂಚಾರಿ ಗ್ರಂಥಾಲಯಗಳು ಸ್ಥಾಪನೆಯಾದವು. ಒಟ್ಟಿನಲ್ಲಿ ಗ್ರಂಥಾಲಯದ ಪರಿಕಲ್ಪನೆ ಮತ್ತದರ ಬಳಕೆ ಒಬ್ಬ ಸಂಶೋಧಕನಿಂದ ಶ್ರೀ ಸಾಮಾನ್ಯನವರೆಗೆ ಜಾತಿ, ಧರ್ಮ ಮತ್ತು ಲಿಂಗ ಭೇದಗಳನ್ನು ಮೀರಿ ಅನಾವರಣಗೊಂಡಿತು. ಗ್ರಂಥಾಲಯ ಕ್ಷೇತ್ರದ ಇಂಥದ್ದೊಂದು ಅಗಾಧ ಬೆಳವಣಿಗೆ ಮತ್ತು ಅದರ ಪ್ರಸ್ತುತತೆಯ  ಹಿಂದೆ      ಡಾ. ಎಸ್. ಆರ್. ರಂಗನಾಥನ್ ರ ದಣಿವರಿಯದ ದುಡಿಮೆ, ಪ್ರಯೋಗಶೀಲ ಮನೋಭಾವ ಮತ್ತು ಅರ್ಪಣಾ ಭಾವ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಈ ಕಾರಣದಿಂದಲೇ ರಂಗನಾಥನ್ ಅವರನ್ನು ಗ್ರಂಥಾಲಯ ಚಳುವಳಿಯ ಜನಕ ಎಂದು ಕರೆಯಲಾಗಿದೆ.

      ದೆಹಲಿ ವಿಶ್ವವಿದ್ಯಾಲಯದಲ್ಲಿ ನಿವೃತ್ತಿ ಹೊಂದಿದ ನಂತರ ರಂಗನಾಥನ್ ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆದದ್ದು ಕರ್ನಾಟಕದ ಬೆಂಗಳೂರಿನಲ್ಲಿ. ೧೯೫೭ ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ರಂಗನಾಥನ್ ಇಲ್ಲಿ 'ಪ್ರಲೇಖನ ಸಂಶೋಧನಾ ಮತ್ತು ತರಬೇತಿ ಕೇಂದ್ರ' ವನ್ನು (DRTC) ಸ್ಥಾಪಿಸಿದರು. ಆ ಮೂಲಕ ಗ್ರಂಥಾಲಯ ವಿಜ್ಞಾನಕ್ಕೆ ಸಂಶೋಧನೆಯ ಸ್ವರೂಪವನ್ನು ನೀಡಿದರು. ಡಿ ಆರ್ ಟಿ ಸಿ ಸ್ಥಾಪನೆಯ ದಿನದಿಂದ ೧೯೭೨ ರ ತಮ್ಮ ಬದುಕಿನ ಕೊನೆಯ ದಿನಗಳವರೆಗೆ ರಂಗನಾಥನ್ ಈ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

೧. ಸಾರ್ವಜನಿಕ ಗ್ರಂಥಾಲಯ ಕಾಯ್ದೆ
 
        ಜನಸಾಮಾನ್ಯರಿಗೂ ಗ್ರಂಥಾಲಯಗಳ ಸೇವೆ ಲಭ್ಯವಾಗುವಂತೆ ಮಾಡುವಲ್ಲಿ ರಂಗನಾಥನ್ ರ ಪಾತ್ರ ಹಿರಿದಾದದ್ದು. ಅವರ ನಿರಂತರ ಪ್ರಯತ್ನದ ಪರಿಣಾಮ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸ್ಥಾಪನೆಯಾದವು. ನಂತರದ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಆರ್ಥಿಕ ಸಮಸ್ಯೆ ಎದುರಾಯಿತು. ಆ ಸಂದರ್ಭ ರಂಗನಾಥನ್ ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸೇವಾ ಗುಣಮಟ್ಟದ ಸುಧಾರಣೆಗಾಗಿ ಅವುಗಳ ಆರ್ಥಿಕ ನೆಲೆಯನ್ನು ಸುಭದ್ರಗೊಳಿಸಲು ೧೯೪೯ ರಲ್ಲಿ ಪ್ರಥಮ ಬಾರಿಗೆ ಅಂದಿನ ಮದ್ರಾಸ್ ಸರ್ಕಾರಕ್ಕೆ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ರೂಪಿಸಿ ಕೊಟ್ಟರು. ಸರ್ಕಾರವು ಸಾರ್ವಜನಿಕ ತೆರಿಗೆಯಿಂದ ವಸೂಲಾಗುವ ಹಣದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಿಕೊಳ್ಳಬೇಕೆಂದು ಈ ಕಾಯ್ದೆಯಲ್ಲಿ ಹೇಳಲಾಗಿದೆ. ಇಂದು ಭಾರತದ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಯಲ್ಲಿದೆ.

೨. ಗ್ರಂಥಾಲಯದ ಐದು ಸೂತ್ರಗಳು

   ಗ್ರಂಥಾಲಯದ ಆಡಳಿತಕ್ಕೆ ವೈಜ್ಞಾನಿಕ ತಳಹದಿಯನ್ನು ಕಟ್ಟಿಕೊಡಲು ರಂಗನಾಥನ್ ಐದು ಸೂತ್ರಗಳನ್ನು ರಚಿಸಿದರು. ೧೯೩೧ ರಲ್ಲಿ ರಚನೆಯಾದ ಈ ಸೂತ್ರಗಳು ಸರ್ವಕಾಲಿಕ ಮಹತ್ವವನ್ನು ಪಡೆದಿವೆ.

* ಗ್ರಂಥಗಳು ಉಪಯೋಗಕ್ಕಾಗಿವೆ

* ಪ್ರತಿಯೊಬ್ಬ ಓದುಗನಿಗೆ ಅವನದೇ ಗ್ರಂಥ

* ಪ್ರತಿಯೊಂದು ಗ್ರಂಥಕ್ಕೆ ಒಬ್ಬ ಓದುಗ

* ಓದುಗನ ಸಮಯ ಉಳಿಸಿ

* ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ

೩. ಭಾರತೀಯ ಗ್ರಂಥಾಲಯ ಸಂಘ

      ಗ್ರಂಥಾಲಯ ಕ್ಷೇತ್ರದ ಬೆಳವಣಿಗೆಗಾಗಿ ಒಂದು ಸಂಘಟಿತ ಪ್ರಯತ್ನವಿರಲಿ ಎನ್ನುವ ರಂಗನಾಥನ್ ರ ದೂರದೃಷ್ಟಿಯ ಪರಿಣಾಮ ೧೯೩೩ ರಲ್ಲಿ 'ಭಾರತೀಯ ಗ್ರಂಥಾಲಯ ಸಂಘ' ಸ್ಥಾಪನೆಯಾಯಿತು. ೧೯೪೮ ರಲ್ಲಿ ರಂಗನಾಥನ್ ಈ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೪೮ ರಿಂದ ೧೯೫೩ ರ ವರೆಗಿನ ಐದು ವರ್ಷಗಳ ಅವರ ಆಡಳಿತಾವಧಿಯನ್ನು ಭಾರತೀಯ ಗ್ರಂಥಾಲಯ ಸಂಘದ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬಣ್ಣಿಸಲಾಗಿದೆ. ರಂಗನಾಥನ್ ತಮ್ಮ ಆಡಳಿತದ ಅವಧಿಯಲ್ಲಿ ಭಾರತೀಯ ಗ್ರಂಥಾಲಯ ಸಂಘಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟರು.

೪. ಗ್ರಂಥಾಲಯ ವರ್ಗೀಕರಣ

   ಗ್ರಂಥಾಲಯದಲ್ಲಿ ಗ್ರಂಥಗಳ ವ್ಯವಸ್ಥಿತ ಜೋಡಣೆಗಾಗಿ ರಂಗನಾಥನ್ ಬಳಕೆಗೆ ತಂದ ವಿಧಾನ 'ದ್ವಿಬಿಂದು ವರ್ಗೀಕರಣ' ಎನ್ನುವ ಹೆಸರಿನಿಂದ ಪ್ರಖ್ಯಾತವಾಗಿದೆ. ಈ ವಿಧಾನವನ್ನು ಭಾರತೀಯ ಗ್ರಂಥಾಲಯಗಳಲ್ಲಿ ಮಾತ್ರವಲ್ಲದೆ ಪಾಶ್ಚಿಮಾತ್ಯ ಗ್ರಂಥಾಲಯಗಳಲ್ಲೂ ಉಪಯೋಗಿಸಲಾಗುತ್ತಿದೆ. ಇದು ಭಾರತೀಯ ಗ್ರಂಥಾಲಯ ವಿಜ್ಞಾನಿಯು  ಜಾಗತಿಕ ಮಟ್ಟದಲ್ಲಿ ನೀಡಿದ ಮಹತ್ವದ ಕೊಡುಗೆ. ಪುಸ್ತಕಗಳ  ಜೋಡಣೆ, ಹುಡುಕುವಿಕೆ ಹಾಗೂ ಪುನರ್ ಜೋಡಣೆಯಲ್ಲಿ ಓದುಗರ ಮತ್ತು ಗ್ರಂಥಾಲಯ ಸಿಬ್ಬಂದಿಯ ಸಮಯವನ್ನು ಉಳಿಸುವ ವೈಜ್ಞಾನಿಕ ವಿಧಾನವೆಂದೇ ಪ್ರಖ್ಯಾತವಾಗಿದೆ.

ಪ್ರಶಸ್ತಿ ಮತ್ತು ಗೌರವ

        ಗ್ರಂಥಾಲಯ ಕ್ಷೇತ್ರದಲ್ಲಿನ ಎಸ್. ಆರ್. ರಂಗನಾಥನ್ ರ ಸಾಧನೆಗಳನ್ನು ಗುರುತಿಸಿ ಅವರನ್ನು ಅರಸಿ ಬಂದ ಪ್ರಶಸ್ತಿಗಳು ಅನೇಕ

* ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ

* ಗ್ರಂಥಾಲಯ ವಿಜ್ಞಾನದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಎಂದು ಮನ್ನಣೆ

* ೧೯೪೮-೧೯೫೩ ರ ವರೆಗೆ ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷತೆಯ ಗೌರವ

* ೧೯೯೨ ರಲ್ಲಿ ಜನ್ಮ ಶತಮಾನೋತ್ಸವದ ನೆನಪಿಗಾಗಿ ಭಾರತ ಸರ್ಕಾರದಿಂದ ಅಂಚೆ ಚೀಟಿ ಬಿಡುಗಡೆ

* ಪ್ರತಿ ವರ್ಷ ಅಗಸ್ಟ್ ೧೨ ರಂದು 'ರಂಗನಾಥನ್ ದಿನ' ಎಂದು ಆಚರಣೆ

* ೧೯೯೨ ರಲ್ಲಿ 'ರಂಗನಾಥನ್  ಸಂಸ್ಮರಣ' ಗ್ರಂಥ ಬಿಡುಗಡೆ


 ಇದು ೧೯೭೦ ರ ಮಾತು. ಡಾ: ರಂಗನಾಥನ್ ರನ್ನು ಭೇಟಿಯಾಗಲು ಬೆಂಗಳೂರಿನ ಅವರ ಮನೆಗೆ ಹೋದ ಆ ದಿನ ರವಿವಾರವಾಗಿತ್ತು. ವಾರದ ರಜಾ ದಿನವಾಗಿದ್ದರೂ ಅಂದು ರಂಗನಾಥನ್ ರ ಮನೆಯಲ್ಲಿ ಹತ್ತಕ್ಕಿಂತ ಹೆಚ್ಚು ಜನ ಅವರೊಡನೆ ಮಾತು ಮತ್ತು ಚರ್ಚೆಯಲ್ಲಿ ತೊಡಗಿದ್ದರು. ಅವರೆಲ್ಲ ಭಾರತದ ಬೇರೆ ಬೇರೆ ಭಾಗಗಳಿಂದ ನೂರಾರು ಮೈಲಿ ದೂರದಿಂದ  ಗ್ರಂಥಾಲಯಗಳ ಬೆಳವಣಿಗೆ ಕುರಿತು ರಂಗನಾಥನ್ ರಿಂದ ಸಲಹೆಗಳನ್ನು ಕೇಳಲು ಬಂದಿದ್ದರು. ವೃತ್ತಿಯಿಂದ ಗ್ರಂಥಪಾಲಕರಾಗಿದ್ದ ಅವರು ರಂಗನಾಥನ್ ರ ಸುತ್ತ ವಿಧೇಯ ವಿದ್ಯಾರ್ಥಿಗಳಂತೆ ಕುಳಿತು ಅವರು ಹೇಳುತ್ತಿದ್ದದ್ದನ್ನು ಏಕಾಗ್ರಚಿತ್ತಾರಾಗಿ  ಕೇಳುತ್ತಿದ್ದರು. ನಾಲ್ಕಾರು ಗಂಟೆಗಳ ಚರ್ಚೆಯ ನಂತರವೂ ರಂಗನಾಥನ್ ರ ಮುಖದಲ್ಲಿ ಸ್ವಲ್ಪವೂ ಆಯಾಸ ಮತ್ತು  ಬೇಸರ ಕಾಣದಿರುವುದು ಕಂಡು ನನಗೆ ಆ ವ್ಯಕ್ತಿತ್ವದ ಕುರಿತು ಅಚ್ಚರಿಯಾಯಿತು. ಏಕೆಂದರೆ ಆ ಸಂದರ್ಭ ರಂಗನಾಥನ್ ರಿಗೆ ೭೮ ವರ್ಷ ವಯಸ್ಸು. ಇದು ಪ್ರತಿ ರವಿವಾರದಂದು ಪುನರಾವರ್ತನೆಯಾಗುತ್ತಿತ್ತೆಂದು ನನಗೆ ಅವರೊಡನೆ ಮಾತನಾಡುವಾಗ ಗೊತ್ತಾಯಿತು. ಅವರೊಡನೆ ಕಳೆದ ಆ ದಿನ ನನಗೆ ರಂಗನಾಥನ್ ರ ಬದುಕಿನ ಸರಳತೆಯ ಪರಿಚಯವಾಯಿತು. ಉತ್ತಮ ಸಂಬಳ ಪಡೆಯುತ್ತಿದ್ದರೂ ಅವರು ಗಾಂಧಿಯ ಆದರ್ಶವನ್ನು ರೂಢಿಸಿಕೊಂಡಿದ್ದರು. ಅವರ ಊಟ ಮತ್ತು ಉಡುಪಿನಲ್ಲಿ ಸರಳತೆ ಎದ್ದು ಕಾಣುತ್ತಿತ್ತು. ಚಹಾ ಕಾಫಿ ಇತ್ಯಾದಿ ಪಾನೀಯಗಳ ಸೇವನೆ ನಿಲ್ಲಿಸಿ ಅದೆಷ್ಟೋ ವರ್ಷಗಳಾಗಿದ್ದವು. ಅವರ ಮನೆಯಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ತಮ್ಮ ಖಾಸಗಿ ಬದುಕನ್ನು ಸರಳತೆ ಮತ್ತು ಅನೇಕ ಇತಿಮಿತಿಗಳಿಗೆ ಸೀಮಿತಗೊಳಿಸಿಕೊಂಡು ಈ ವ್ಯಕ್ತಿ ತಾವು ದುಡಿದು ಗಳಿಸಿದ ಹಣವನ್ನೆಲ್ಲ ಗ್ರಂಥಾಲಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಿದ್ದರು. ಆ ದಿನದ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಡಿ ಆರ್ ಟಿ ಸಿ ಯ ಗ್ರಂಥಾಲಯದೊಳಗೆ  ಕಾಲಿಡುವ ವೇಳೆ ರಂಗನಾಥನ್ ತಮ್ಮ ಪಾದ ರಕ್ಷೆಗಳನ್ನು ಗ್ರಂಥಾಲಯದ ಹೊರ ಬಾಗಿಲ ಬಳಿ ಬಿಟ್ಟು ಬರಿಗಾಲಿನಲ್ಲೇ ನಡೆದು ಒಳ ಬಂದರು. ವಿಚಾರಿಸಿದಾಗ ಗೊತ್ತಾಯಿತು ಅವರು ಗ್ರಂಥಾಲಯಗಳನ್ನು ಮನೆಯಂದೇ ಭಾವಿಸಿದ್ದರು. ನಿಜಕ್ಕೂ ರಂಗನಾಥನ್ ನಾನು ನೋಡಿದ ಮತ್ತು  ಕಂಡು ಮಾತನಾಡಿಸಿದ ಅದ್ಭುತ ಪ್ರತಿಭೆಯ ಚೇತನ. 

                    (ಅಮೇರಿಕನ್ ಗ್ರಂಥಪಾಲಕಿ ಕೊಕ್ರೇನ್ ಅವರ Personal Communication ಲೇಖನದಿಂದ )

ಕೊನೆಯ ಮಾತು 


       ೧೯೮೪ ರಲ್ಲಿ ಬೆಂಗಳೂರಿನ ಡಿ ಆರ್ ಟಿ ಸಿ ಗೆ ರಂಗನಾಥನ್ ಕುರಿತು ಉಪನ್ಯಾಸ ನೀಡಲು ಬಂದ ಅಮೇರಿಕಾದ ಮಾಹಿತಿ ವಿಜ್ಞಾನಿ ಯುಜೀನ್ ಗೆರ್ಫಿಲ್ಡ್ ಹೀಗೆ ಹೇಳುತ್ತಾರೆ 'ರಂಗನಾಥನ್ ಭಾರತ ಮಾತ್ರವಲ್ಲ ಇಡೀ ಜಗತ್ತಿನ ಗ್ರಂಥಾಲಯಗಳ ಚಿತ್ರಣವನ್ನೇ ಬದಲಿಸಿದ ಸಾಧಕ. ತಮ್ಮ ಬದುಕಿನ ಕೊನೆಯ ದಿನದವರೆಗೂ ಗ್ರಂಥಾಲಯಗಳ ಬೆಳೆವಣಿಗೆಯನ್ನು ಕುರಿತು ಚಿಂತಿಸಿದ ಚಿಂತಕ. ವೃತ್ತಿ ಬದುಕಿನಲ್ಲಿ ದುಡಿದು ಗಳಿಸಿದ್ದೆಲ್ಲವನ್ನೂ ಗ್ರಂಥಾಲಯಗಳ ಪ್ರಗತಿಗಾಗಿ ವಿನಿಯೋಗಿಸಿದ ದಾರ್ಶನಿಕ. ಅದಕ್ಕೆಂದೇ ಅವರು  ಗ್ರಂಥಾಲಯ ವಿಜ್ಞಾನಿ ಮಾತ್ರವಲ್ಲ ಅವರೊಬ್ಬ ಯೋಗಿ, ಸಂತ, ದಾರ್ಶನಿಕನಾಗಿ ನನಗೆ ಕಾಣುತ್ತಾರೆ. ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯಗಳಲ್ಲಿ  ಬರಿಗಾಲಿನಲ್ಲಿ ನಡೆದಾಡಿದ ಈ ಸಾಧಕ ತನ್ನ ಹೆಜ್ಜೆ ಗುರುತನ್ನು ಅಜರಾಮರಗೊಳಿಸಿರುವರು'. ಈ ಮಾತಿನಲ್ಲಿ ಯಾವ ಒಣ ಹೊಗಳಿಕೆಯಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇಲ್ಲ. ಜನರ ನಿರ್ಲಕ್ಷಕ್ಕೆ ಒಳಗಾಗಿದ್ದ ಒಂದು ಕ್ಷೇತ್ರವನ್ನು ರಂಗನಾಥನ್ ತಮ್ಮ ಸೇವಾಮನೋಭಾವ ಮತ್ತು ಸಂಶೋಧನಾತ್ಮಕ ಗುಣದಿಂದ ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದರು. ಜನಸಾಮಾನ್ಯರಿಗೂ ಪುಸ್ತಕಗಳು ಉಚಿತವಾಗಿ ದೊರೆಯುವಂತೆ ಮಾಡಿ ಆ ಮೂಲಕ ಸ್ವಾಸ್ಥ್ಯ  ಮತ್ತು ಸಾಂಸ್ಕೃತಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದರು. ದುಡಿದು ಗಳಿಸಿದ್ದೆಲ್ಲವನ್ನೂ ಸಮಾಜಕ್ಕೆ ಅರ್ಪಿಸಿದ ಅವರ ಸರಳ ಬದುಕು ಮತ್ತು ಸಾಮಾಜಿಕ ಕಾಳಜಿಯ ಗುಣ ನಂತರದ ಪೀಳಿಗೆಗೆ ದಾರಿದೀಪವಾಯಿತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

     

Wednesday, July 23, 2014

ಇದು ಅಪ್ಪನಿಗೆ ಮಗಳ ಉಡುಗೊರೆ







ಮೊನ್ನೆ ನನ್ನ ಗೆಳೆಯರೊಬ್ಬರು ನನಗೆ ಓದಲು ಪುಸ್ತಕ ತಂದುಕೊಟ್ಟರು. ಆ ಪುಸ್ತಕದಲ್ಲಿ ನನ್ನ ಲೇಖನವಿದೆ ಎನ್ನುವುದು ಬೇರೆ ಮಾತು. ಪುಸ್ತಕಕ್ಕೆ ಲೇಖನ ಕಳುಹಿಸಿಕೊಡಿ ಎಂದು ಸಂಪಾದಕ ಸಮಿತಿಯವರು ಕೇಳಿದಾಗ ನನ್ನ ಮತ್ತು ರುದ್ರಪ್ಪನವರ ಸ್ನೇಹದ   ಕುರಿತು  ಲೇಖನ ಬರೆದು ಕಳುಹಿಸಿದ್ದೆ. ಆನಂತರ ಕೆಲಸದ ಒತ್ತಡದ ನಡುವೆ ಈ ವಿಷಯ ನನ್ನ ಸ್ಮೃತಿಯಿಂದ ಮರೆಯಾಗಿತ್ತು. ಈ ಪುಸ್ತಕದ ಕಥಾ ನಾಯಕನ ಮಗಳು ಡಾ. ಹೇಮಾ ನನ್ನನ್ನು ವೈಯಕ್ತಿಕವಾಗಿ ಕಂಡು ಮಾತನಾಡಿಸಿ ಲೇಖನ ಬರೆದಿದ್ದಕ್ಕೆ ಕೃತಜ್ಞತೆ ಸೂಚಿಸಿದ್ದರೂ ಅವರು ನನ್ನನ್ನು ಭೇಟಿಯಾಗುವ ವೇಳೆಗೆ ಅವರು ತಂದಿದ್ದ ಪುಸ್ತಕದ ಪ್ರತಿಗಳೆಲ್ಲ ಖಾಲಿಯಾಗಿದ್ದವು. ಕೊನೆಗೂ ನನ್ನ ಸ್ನೇಹಿತರ ಮೂಲಕ ಪುಸ್ತಕ ನನ್ನ ಕೈಸೇರಿತು. ಪುಸ್ತಕದ ಹೆಸರು 'ಶಾಂತರುದ್ರ'. ಇದು ಪುಸ್ತಕ ವ್ಯಾಪಾರಿಯೂ ಮತ್ತು ಪ್ರಕಾಶಕರಾಗಿದ್ದ ಶ್ರೀ ಪಿ. ರುದ್ರಪ್ಪ ಅಂಗಡಿ ಅವರ ಕುರಿತಾದ ನೆನಪುಗಳ ಗ್ರಂಥ. ಒಂದರ್ಥದಲ್ಲಿ 'ಸಂಸ್ಮರಣ ಗ್ರಂಥ' ವೆಂದೂ ಕರೆಯಬಹುದು. 

         ಶ್ರೀ ರುದ್ರಪ್ಪನವರು ನನಗೆ ಅಪರಿಚಿತರೇನೂ ಆಗಿರಲಿಲ್ಲ. ನಾನು ಬಾಗಲಕೋಟೆಯ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕನೆಂದು ೨೦೦೧ ರಲ್ಲಿ ನಿಯುಕ್ತಿಗೊಂಡ ದಿನದಿಂದಲೂ ನನಗೆ ಅವರು ಪರಿಚಿತರಾಗಿದ್ದರು. ಮೊದಲು ಸಪ್ನಾ   ಪುಸ್ತಕ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದವರು  ನಂತರ ತಮ್ಮದೇ   ಪುಸ್ತಕ ಮಳಿಗೆ ಮತ್ತು ಪ್ರಕಾಶನ ಸಂಸ್ಥೆಯನ್ನು  ಪ್ರಾರಂಭಿಸಿದರು. ಒಂದಿಷ್ಟು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಕನ್ನಡದ ಸಾಂಸ್ಕೃತಿಕ ಲೋಕವನ್ನು ತಮ್ಮ ಕೈಲಾದ ಮಟ್ಟಿಗೆ ಸಂಪದ್ಭರಿತಗೊಳಿಸಿದ ಹೆಮ್ಮೆ  ಮತ್ತು ಅಭಿಮಾನ ಶ್ರೀಯುತರದ್ದಾಗಿತ್ತು. ವ್ಯಾಪಾರದ ನಡುವೆಯೂ ಒಂದಿಷ್ಟು ದೈವಭಕ್ತಿ ಮತ್ತು ಸಾತ್ವಿಕ ಗುಣವನ್ನು ಅವರು ಮೈಗೂಡಿಸಿಕೊಂಡಿದ್ದು ನನ್ನ ಅನುಭವಕ್ಕೆ ಬಂದ ಸಂಗತಿಗಳಲ್ಲೊಂದು.  ಬಾಲ್ಯವನ್ನು ಬಡತನದಲ್ಲೇ ಕಳೆದ ಅವರು ನಂತರದ ದಿನಗಳಲ್ಲಿ ತಾವು ಮಾಡುತ್ತಿದ್ದ ವ್ಯಾಪಾರದಿಂದ ತಕ್ಕ ಮಟ್ಟಿಗೆ ಸ್ಥಿತಿವಂತರಾಗಿದ್ದರು. ಬೆಂಗಳೂರಿನಂಥ ಮಹಾನಗರದಲ್ಲಿ ಸ್ವಂತಕ್ಕೆ ಮನೆ, ಅಂಗಡಿ, ಪ್ರಕಾಶನ ಸಂಸ್ಥೆ, ಹುಟ್ಟೂರಿನಲ್ಲಿ ತೋಟ ಗದ್ದೆ ಒಂದಿಷ್ಟು ನೌಕರರು ಹೀಗೆ ಬದುಕಿನ ಸಮೃದ್ಧ ಸುಖವನ್ನುಂಡ ಜೀವ ಅವರದು. ಎಲ್ಲೋ ಒಂದು ಕಡೆ ಪುಸ್ತಕ ಪ್ರಕಟಣೆಯಿಂದ ಕೈಸುಟ್ಟು ಕೊಂಡರೂ ಪಠ್ಯ ಪುಸ್ತಕಗಳ ಮಾರಾಟದಿಂದ ಲಾಭ ಅವರ ಕೈಹಿಡಿದಿತ್ತು. ಆದರೆ ಸಮಾಜ ವಿರೋಧಿಯಾಗಿ ಬದುಕುವವರೇ  ಹೆಚ್ಚುತ್ತಿರುವ ಈ ದಿನಗಳಲ್ಲಿ ಸಾತ್ವಿಕವಾಗಿ ಬದುಕುತ್ತಿರುವವರ ಸಂಖ್ಯೆ ಸಮಾಜದಲ್ಲಿ ದಿನದಿಂದ ಕ್ಷೀಣಿಸುತ್ತಿದೆ. ಈ ಒಂದು ಕಾರಣದಿಂದ ಶ್ರೀ ರುದ್ರಪ್ಪನವರ ಸಾತ್ವಿಕ ಮತ್ತು ದೈವ ಭಕ್ತಿಯ ಬದುಕು ಎಲ್ಲರ ಮೆಚ್ಚುಗೆಗೆ ಮತ್ತು ಪ್ರೇರಣೆಗೆ  ಪಾತ್ರವಾಗಿತ್ತು. ಅವರಲ್ಲಿ ನಾನು ಗಮನಿಸಿದ ಇನ್ನೊಂದು ಗುಣವೆಂದರೆ ಅದು ಅವರೊಳಗಿನ ಹಾಸ್ಯ ಪ್ರವೃತ್ತಿ ಮತ್ತು ಜೀವನ ಪ್ರೀತಿ. 

        ಈ ಸಲದ ಯುಗಾದಿ ಹಬ್ಬದಂದು ಧಿಡೀರನೇ ಬಂದ ಮೃತ್ಯು ರುದ್ರಪ್ಪನವರನ್ನು ತನ್ನ ಜೊತೆಗೆ ಕರೆದೊಯ್ಯಿತು. ಅವರಿಗೆ ಸಾಯುವಂಥ ವಯಸ್ಸೆನೂ ಆಗಿರಲಿಲ್ಲ. ಹಾಗೆಂದು ಸಾವನ್ನು ತಪ್ಪಿಸುವುದು ಯಾರ ಕೈಯಲ್ಲೂ ಇಲ್ಲ. ರುದ್ರಪ್ಪನವರ  ಸಾವಿನ ನಂತರ ಅವರ ಮಗಳು ಹೇಮಾ ತಮ್ಮ ತಂದೆಯ ನೆನಪಿಗಾಗಿ  ಹೊರತಂದ ಹೊತ್ತಿಗೆಯೇ ಈ 'ಶಾಂತರುದ್ರ'. ಆ ಪುಟ್ಟ ಹೆಣ್ಣುಮಗಳು ತನ್ನ ತಂದೆಯ ಪರಿಚಿತರನ್ನೆಲ್ಲ ಸಂಪರ್ಕಿಸಿ ಅವರಿಂದ ಲೇಖನ ಪಡೆದು ನಾಡಿನ ಖ್ಯಾತ ಸಂಶೋಧನಾ ತಜ್ಞ  ಪ್ರೊ ಹನ್ನೆರಡುಮಠ ಅವರನ್ನು ಸಂಪಾದಕರನ್ನಾಗಿಸಿ  ಈ ಪುಸ್ತಕವನ್ನು ಅತ್ಯಂತ ಪ್ರೀತಿ ಮತ್ತು ತನ್ನ ತಂದೆಯ ಮೇಲಿನ ಅಭಿಮಾನದಿಂದ ಹೊರತಂದಿರುವರು. ಬದುಕು ರೂಪಿಸಿದ ಅಪ್ಪನಿಗೆ ಇದು ಮಗಳು ನೀಡಿದ ಬಹುಮೂಲ್ಯ ಉಡುಗೊರೆ. ಸತ್ತನಂತರ ಸತ್ತವರ ಹೆಸರಿನಲ್ಲಿ ಹೊಟ್ಟೆ ತುಂಬಿದವರಿಗೆ ಭೂರಿ ಭೋಜನ ಬಡಿಸುವುದು, ಉಳ್ಳವರಿಗೇ ಕಂತೆ ಗಟ್ಟಲೇ ಹಣ ದಾನ ಮಾಡುವುದು, ಪುತ್ಥಳಿ ಪ್ರತಿಷ್ಠಾನ, ಗುಡಿ ಕಟ್ಟುವುದು  ಇಂಥ ಅರ್ಥವಿಲ್ಲದ ಆಚರಣೆಗಳಿಗಿಂತ ತನ್ನ ತಂದೆಯ ನೆನಪುಗಳನ್ನು ಅತ್ಯಂತ ಜತನದಿಂದ ಅಕ್ಷರಗಳಲ್ಲಿ ಕಾಪಿಟ್ಟು  ಮತ್ತು ಅದನ್ನು ತನ್ನ ನಂತರದ ಪೀಳಿಗೆಗೆ  ದಾಟಿಸುವ ಕೆಲಸ ಮಾಡಿದ ಈ ಹೆಣ್ಣು ಮಗಳು ನಿಜಕ್ಕೂ ಸಮಾಜಕ್ಕೆ ಮಾದರಿ.

          ಡಾ ಹೇಮಾ ಅಪ್ಪನ ಕುರಿತು ಪುಸ್ತಕ ಪ್ರಕಟಿಸುವುದರ ಜೊತೆಗೆ ಇಲ್ಲಿ ಒಂದು ಲೇಖನವನ್ನೂ ಬರೆದಿರುವರು. ಲೇಖನ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವನ್ನು ತುಂಬಾ ಆಪ್ತವಾಗಿ ಕಟ್ಟಿಕೊಡುತ್ತದೆ. ಮಗಳು ಹುಟ್ಟಿದಾಗ ಅಪ್ಪನ ಸಂಭ್ರಮ, ಮಗಳ ಬದುಕಿಗೆ ಬೆನ್ನೆಲುಬಾಗಿ ನಿಂತ ಘಳಿಗೆಗಳು, ಮಗಳನ್ನು ಅತ್ಯಂತ ಜತನದಿಂದ ಸಾಕಿ ಬೆಳೆಸಿದ್ದು, ಮಗಳ ಯಶಸ್ಸನ್ನು ಕಂಡು ಆನಂದಿಸಿದ್ದು, ಮದುವೆಯ ವಯಸ್ಸಿಗೆ ಬೆಳೆದು ನಿಂತಾಗ ಮಗಳ ಮನದ ಭಾವನೆಗಳಿಗೆ ಸ್ಪಂದಿಸಿದ್ದು ನಿಜಕ್ಕೂ ಲೇಖನದ ಓದು ಹೃದಯವನ್ನು ತಟ್ಟುತ್ತದೆ. ಅಪ್ಪನ ಬಗ್ಗೆ ಬರೆಯುವಾಗ ಯಾವ ಭಾವಾವೇಶ ಇಲ್ಲವೇ ಅತಿಶಯೋಕ್ತಿಗಳಿಗೆ ಮನಸ್ಸನ್ನು ಒಪ್ಪಿಸದೆ ತೀರ ಸರಳವಾಗಿ ಅಪ್ಪನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದು ಇಲ್ಲಿ ಮೆಚ್ಚುಗೆಯಾಗುವ ಸಂಗತಿಗಳಲ್ಲೊಂದು. ಇದೇ ಮಾತು ಇತರ ಲೇಖನಗಳ ಕುರಿತು ಹೇಳಿದರೆ ಅದು ತಪ್ಪಾಗುತ್ತದೆ. ಕೆಲವು ಬಂಧುಗಳು ರುದ್ರಪ್ಪನವರ ಬಗ್ಗೆ ಬರೆಯುವಾಗ ಒಂದಿಷ್ಟು ಭಾವಾವೇಶಕ್ಕೆ ಒಳಗಾದರೆನೋ ಎನ್ನುವ  ಅನುಮಾನ ವಿಮರ್ಶಾತ್ಮಕ ಓದುಗನ ಅರಿವಿಗೆ ಬರದೆ ಹೋಗುವುದಿಲ್ಲ.

      ರುದ್ರಪ್ಪನವರ ಸಂಸ್ಮರಣ ಗ್ರಂಥವನ್ನು ಓದುತ್ತಿರುವ ಘಳಿಗೆ ನಾನು ಮೆಚ್ಚಿದ ಇನ್ನೊಂದು ಸಂಗತಿ ಅದು ಇಡೀ ಪುಸ್ತಕ ಕೇವಲ ರುದ್ರಪ್ಪನವರನ್ನು ಕೇಂದ್ರೀಕೃತವಾಗಿಟ್ಟುಕೊಳ್ಳದೆ ಅಲ್ಲಿ ರುದ್ರಪ್ರಭೆಯ ಜೊತೆಗೆ ಸಾಹಿತ್ಯ ಪ್ರಭೆ ಮತ್ತು ತತ್ವ ಪ್ರಭೆ ಎನ್ನುವ ಇನ್ನೆರಡು ಭಾಗಗಳಿವೆ. ಸಾಹಿತ್ಯ ಪ್ರಭೆಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಲೇಖನಗಳಿದ್ದು ರಾಷ್ಟ್ರಕವಿ ಕುವೆಂಪು ಅವರ ಪ್ರಕಟಿತ ಲೇಖನವನ್ನು ಇಲ್ಲಿ ಬಳಸಿಕೊಂಡಿದ್ದು ಗಮನಾರ್ಹ ಸಂಗತಿ. ಇದೇ ಭಾಗದಲ್ಲಿರುವ ಭಾರತಿಯವರ 'ಅಪ್ಪ ಎನ್ನುವ ಎರಡನೇ ಅಮ್ಮ' ಲೇಖನ ತನ್ನ ಲವಲವಿಕೆ ಮತ್ತು ಭಾವತೀವ್ರತೆಯಿಂದ ತೀರ ಆಪ್ತವಾಗುತ್ತದೆ. ಇಲ್ಲಿ ಹೇಮಾ ಮತ್ತು ರುದ್ರಪ್ಪನವರ ಬಾಂಧವ್ಯ ಮತ್ತೊಮ್ಮೆ ನೆನಪಾಗುತ್ತದೆ. ತತ್ವ ಪ್ರಭೆ ಭಾಗದಲ್ಲಿ  ಶರಣರ, ದಾಸರ, ಅನುಭಾವಿಗಳ ಕೀರ್ತನೆ ಮತ್ತು ವಚನಗಳಿವೆ.

      ರುದ್ರಪ್ಪನವರ ಬದುಕಿನ ಜೊತೆಗೆ ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಮಜಲುಗಳನ್ನು ಮೆಲುಕು ಹಾಕಲು ಓದಿನ  ಅವಕಾಶ ಮಾಡಿಕೊಡುವ ಈ ಸಂಸ್ಮರಣ ಗ್ರಂಥ ನಿಜಕ್ಕೂ ನಾನು ಓದಿದ ಉತ್ತಮ ಪುಸ್ತಕಗಳಲ್ಲೊಂದು. ಜೊತೆಗೆ ಇಂಥದ್ದೊಂದು ಸಾಂಸ್ಕೃತಿಕ ಮತ್ತು ಸೃಜನಶೀಲ ಕೆಲಸಕ್ಕೆ ರುದ್ರಪ್ಪನವರ ಪುತ್ರಿ ಹೇಮಾ ಅವರು ಕೈಹಾಕಿದ್ದು ಶ್ಲಾಘನೀಯ. ಇಂಥ ಸಾಂಸ್ಕೃತಿಕ ಚಟುವಟಿಕೆಗಳನ್ನು ಕನ್ನಡ ಭಾಷೆಯಲ್ಲಿ ನಾವುಗಳು ಇನ್ನಷ್ಟು ನೋಡುವಂತಾಗಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, July 9, 2014

ದೃಶ್ಯ: ಕುಟುಂಬ ಪ್ರೇಮದ ಕಥಾನಕ

       



                ಬಹಳ ದಿನಗಳ ನಂತರ ಕುಟುಂಬ ಸಮೇತ ಉತ್ತಮ ಸದಭಿರುಚಿಯ ಸಿನಿಮಾವೊಂದನ್ನು ನೋಡುವ ಅವಕಾಶ ಮೊನ್ನೆ ದೊರೆಯಿತು. ರವಿಚಂದ್ರನ್ ಅಭಿನಯದ ಈ 'ದೃಶ್ಯ' ಸಿನಿಮಾ ಮಲೆಯಾಳಂನ 'ದೃಶ್ಯಂ' ಚಿತ್ರದ ರಿಮೇಕ್. ಮೂಲ ಸಿನಿಮಾದಲ್ಲಿ ಮೋಹನ್ ಲಾಲ್ ಮತ್ತು ಮೀನಾ ಅಭಿನಯಿಸಿದ್ದು ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಅನೇಕರು ಆ ಮಲೆಯಾಳಂ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರೂ ನಾನಿರುವ ಊರು ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಅಪರಿಚಿತ ಪ್ರದೇಶವಾಗಿದ್ದರಿಂದ ಅದನ್ನು ನೋಡುವ ಅವಕಾಶ ದೊರೆತಿರಲಿಲ್ಲ. ಈ ಮಲೆಯಾಳಂ ಭಾಷೆಯ ಚಿತ್ರರಂಗದ ಕುರಿತು ಮಾತನಾಡುವಾಗಲೆಲ್ಲ ನನಗೆ ಆ ಭಾಷೆಯ ನೀಲಿ ಸಿನಿಮಾಗಳ ಪೋಸ್ಟರ್ ಗಳೇ ಕಣ್ಮುಂದೆ ಬರುತ್ತವೆ. ಏಕೆಂದರೆ ಆಗೆಲ್ಲ ಮಲೆಯಾಳಂ ಸಿನಿಮಾಗಳೆಂದರೆ ಅಶ್ಲೀಲ ಸಿನಿಮಾಗಳು ಎನ್ನುವ ಮಾತು ಪ್ರಚಲಿತದಲ್ಲಿತ್ತು. ಇದಕ್ಕೆ ಕಾರಣವೂ ಇಲ್ಲದೇ ಇಲ್ಲ ೧೯೮೦-೯೦ ರ ದಶಕದಲ್ಲಿ ಬಹಳಷ್ಟು ಮಲೆಯಾಳಂ ಸಿನಿಮಾಗಳು ಅಶ್ಲೀಲವಾಗಿಯೇ ಇರುತ್ತಿದ್ದವು. ಆದರೆ ಈ ಮೋಹನ ಲಾಲ ಮತ್ತು ಮಮ್ಮುಟ್ಟಿ  ಅವರಂಥ ಪ್ರತಿಭಾನ್ವಿತರ ಆಗಮನದಿಂದ  ಮಲೆಯಾಳಂ ಚಿತ್ರರಂಗ ತನ್ನ ಮೇಲಿನ ಆಪಾದನೆಯನ್ನು ಕಳಚಿಕೊಂಡು ಹೊರಬಂತು. ಈ ಇಬ್ಬರು ನಟರನ್ನು ಅನುಕರಿಸಿ ಅನೇಕ ಯುವ ಪ್ರತಿಭೆಗಳು  ಮಲೆಯಾಳಂ  ಚಿತ್ರರಂಗವನ್ನು ಪ್ರವೇಶಿಸಿದರು. ಹೀಗೆ ಮಲೆಯಾಳಂ ಸಿನಿಮಾರಂಗ ಸಂಪೂರ್ಣವಾಗಿ ಮಗ್ಗುಲು ಬದಲಿಸಿ ಹೊಸದೊಂದು ಬದಲಾವಣೆಗೆ ತನ್ನನ್ನು ತಾನು ತೆರೆದುಕೊಂಡಿತು. ಮೋಹನ್ ಲಾಲ್  ಮತ್ತು ಮಮ್ಮುಟ್ಟಿ ಅದುವರೆಗೂ ಮಲೆಯಾಳಂ ಚಿತ್ರರಂಗದಲ್ಲಿ ಮನೆಮಾಡಿಕೊಂಡಿದ್ದ  ಸಿನಿಮಾ ಕಥಾವಸ್ತುವಿನ ಸಿದ್ಧ ಸೂತ್ರವನ್ನು ಮುರಿದು ಹೊಸ ಬದಲಾವಣೆಗೆ ಕಾರಣರಾದರು. ಇವತ್ತು ಮಲೆಯಾಳಂ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಗೊಳ್ಳುತ್ತಿವೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಈ ಭಾಷೆಯ ಸಿನಿಮಾಗಳಿಗೇ ಸಿಂಹಪಾಲು. ಹೀಗಾಗಿ ಮಲೆಯಾಳಂ ಭಾಷೆಯಿಂದ ಕನ್ನಡಕ್ಕೆ    ಸಿನಿಮಾವೊಂದು ರೀಮೇಕ್ ಆದಾಗ ಸಹಜವಾಗಿಯೇ ಸದಭಿರುಚಿಯ ಪ್ರೇಕ್ಷಕರಿಗೆ ಆ    ಸಿನಿಮಾವನ್ನು ನೋಡಬೇಕೆನ್ನುವ ಕುತೂಹಲ ಮೂಡುತ್ತದೆ. 'ದೃಶ್ಯ' ಸಿನಿಮಾ ವೀಕ್ಷಣೆಗಾಗಿ ಕನ್ನಡದ ಪ್ರೇಕ್ಷಕರು ಕುತೂಹಲದಿಂದಲೇ ಕಾಯುತ್ತಿದ್ದರು. ರೀಮೇಕ್ ಸಿನಿಮಾವೊಂದು ಬಿಡುಗಡೆಯಾಗುವಾಗ ಕೇಳಿ ಬರುವ ಅಪಸ್ವರ ಈ ಸಿನಿಮಾದ ಬಿಡುಗಡೆಯ ಸಂದರ್ಭ ಕೇಳಿಬರದೇ ಇರುವುದಕ್ಕೆ ಮೂಲ ಸಿನಿಮಾದಲ್ಲಿ ಮೋಹನ್ ಲಾಲ್ ಅಭಿನಯವಿತ್ತು ಎನ್ನುವುದು ಒಂದು ಕಾರಣವಾದರೆ ಇನ್ನೊಂದು ಚಿತ್ರದ ಗಟ್ಟಿ ಕಥಾವಸ್ತು.

               ಇನ್ನು ಕನ್ನಡದ ಅವತರಣಿಕೆ 'ದೃಶ್ಯ' ಸಿನಿಮಾದ ವಿಷಯಕ್ಕೆ ಬಂದರೆ ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು  ಹಿಡಿದಿಡುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಅಶ್ಲೀಲ ಸಂಭಾಷಣೆ, ಅನಗತ್ಯ ಹಾಡುಗಳು ಮತ್ತು ಹೊಡೆದಾಟದಿಂದ ಮುಕ್ತವಾದ 'ದೃಶ್ಯ' ನಮ್ಮ ಮನೆಯ ಕಥೆಯೇನೋ ಎನ್ನುವಷ್ಟು ಪ್ರೇಕ್ಷಕನಿಗೆ ಆಪ್ತವಾಗುತ್ತದೆ. ರವಿಚಂದ್ರನ್ ಅಭಿನಯವೇ ಇಲ್ಲಿ ಸಿನಿಮಾದ ಜೀವಾಳ. ಮರಸುತ್ತುವ ಮತ್ತು ಪೋಲಿ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರವಿಚಂದ್ರನ್ ಇಲ್ಲಿ ಮಧ್ಯವಯಸ್ಸಿನ ವ್ಯಕ್ತಿಯ  ಪಾತ್ರದಲ್ಲಿ ಅಭಿನಯಿಸಿರುವರು. ಪತಿಯಾಗಿ ಮತ್ತು ಮಕ್ಕಳ ತಂದೆಯಾಗಿ ಕುಟುಂಬ ಪ್ರೇಮವನ್ನು ಮೆರೆಯುವ ಪಾತ್ರದಲ್ಲಿ ರವಿಚಂದ್ರನ್ ಅವರದು  ಮನೋಜ್ಞ ಅಭಿನಯ. ನಿಜಕ್ಕೂ ರವಿಚಂದ್ರನ್ ಅವರ ವೃತ್ತಿ ಬದುಕಿನ ಹೊಸ ಅಧ್ಯಾಯವಿದು. ಈಗಾಗಲೇ ತರುಣ ಪಾತ್ರಗಳಲ್ಲಿ ಅಭಿನಯಿಸಿ ಸಿನಿಮಾ ಪ್ರಿಯರ ಮನಗೆದ್ದ  ರವಿಚಂದ್ರನ್ ತಮ್ಮ ಹಳೆಯ ಇಮೇಜಿನಿಂದ ಹೊರಬಂದು ವಯಸ್ಸಿಗೆ ಒಪ್ಪುವ ಪಾತ್ರಗಳಲ್ಲಿ ಅಭಿನಯಿಸುವ ಅಗತ್ಯವಿದೆ. ಏಕೆಂದರೆ ರವಿಚಂದ್ರನ್ ಅವರಂಥ ಸಿನಿಮಾಗಳನ್ನೇ ಕುರಿತು ಕನಸು ಕಾಣುವ  ಮತ್ತು ಚಿಂತಿಸುವ ಕಲಾವಿದರು ಪಾತ್ರಗಳ ಏಕತಾನತೆಯ ಮಧ್ಯೆ ಕಳೆದುಹೋಗಬಾರದು. ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುವಾಗಲೆಲ್ಲ ಎಲ್ಲಿ ಈ ಕಲಾವಿದ ಕಳೆದುಹೋಗುತ್ತಾನೋ ಎನ್ನುವ ಭಯ ಕಾಡುತ್ತಿತ್ತು. ಜೊತೆಗೆ ಇಂಥ ಕಲಾವಿದರ ಅಗತ್ಯ ಕನ್ನಡ ಸಿನಿಮಾರಂಗಕ್ಕಿದೆ. 'ಮಾಣಿಕ್ಯ' ಸಿನಿಮಾದ ಒಂದೆರಡು ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ರವಿಚಂದ್ರನ್ ಮಧ್ಯವಯಸ್ಸಿನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದಾಗಲೇ ಈ ನಟನೊಳಗಿನ ಕಲಾವಿದ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಗೊತ್ತಾಗಿತ್ತು. ನನಗೆ 'ದೃಶ್ಯ' ಮಾಣಿಕ್ಯ ಸಿನಿಮಾದಲ್ಲಿ ಕಾಣಿಸಿಕೊಂಡ ರವಿಚಂದ್ರನ್ ಅವರೊಳಗಿನ ಕಲಾವಿದನ ಮನಸ್ಥಿತಿಯ ಮುಂದುವರೆದ ಭಾಗದಂತೆ ಕಾಣಿಸಿತು. ಇನ್ನು ಮುಂದಾದರೂ ರವಿಚಂದ್ರನ್ ಸಿನಿಮಾಗಳ ಆಯ್ಕೆಯಲ್ಲಿ ಎಡವದೇ ಇದ್ದಲ್ಲಿ  ಅವರೊಳಗಿನ ಕಲಾವಿದ ಮತ್ತಷ್ಟು ಪಕ್ವಗೊಳ್ಳುವ ಅವಕಾಶ ನಿಚ್ಚಳವಾಗಿದೆ.

                 'ದೃಶ್ಯ' ಸಿನಿಮಾ ಏಕೆ ಇಷ್ಟವಾಯಿತು ಎನ್ನುವುದಕ್ಕೆ ಹಲವು ಕಾರಣಗಳಿವೆ. ಸಿನಿಮಾದ ಗಟ್ಟಿ ಕಥಾವಸ್ತು, ಕಥೆಯಲ್ಲಿ ಕಾಯ್ದುಕೊಂಡ ಸಸ್ಪೆನ್ಸ್, ಕಲಾವಿದರ ಅಭಿನಯ, ಇಂಪಾದ ಸಂಗೀತ, ಸುಂದರ ಛಾಯಾಗ್ರಹಣ ಈ ಎಲ್ಲವುಗಳ ಪರಿಣಾಮ ಸಿನಿಮಾ ನೋಡುಗನಿಗೆ ಆಪ್ತವಾಗುತ್ತದೆ. ಮಲೆನಾಡಿನ ಸೆರಗಿನಲ್ಲಿರುವ ಆ ಪುಟ್ಟ ಊರಿನಲ್ಲಿರುವ ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪ ಇಡೀ ಊರಿಗೇ ಬೇಕಾದ ವ್ಯಕ್ತಿ. ಎಲ್ಲರೂ ಮೆಚ್ಚುವ ಸನ್ನಡತೆ ಅವನದು. ನಾಲ್ಕೆಕರೆ ಹೊಲವನ್ನೂ  ಹೊಂದಿರುವ ರಾಜೇಂದ್ರನದು ಪತ್ನಿ ಸೀತಾ ಮತ್ತು ಮಕ್ಕಳಾದ ಶ್ರೇಯಾ, ಸಿಂಧು ಅವರೊಟ್ಟಿಗೆ ಅತ್ಯಂತ ಪ್ರೀತಿ ನಲ್ಮೆಯಿಂದ ಬಾಳುತ್ತಿರುವ ಕುಟುಂಬ. ಅವನ ಕುಟುಂಬದಲ್ಲಿ ಪ್ರೀತಿಯ ಒರತೆಗೆ ಕೊರತೆಯಿರಲಿಲ್ಲ. ಶ್ರೀಮಂತಿಕೆಗೆ ಅಲ್ಲಿ ಬಡತನವಿದ್ದರೂ ಪ್ರೀತಿ ಪ್ರೇಮಕ್ಕೆ ಬಡತನವಿರಲಿಲ್ಲ. ಅನಾಥನಾದ ರಾಜೇಂದ್ರ ಪೊನ್ನಪ್ಪ ಬದುಕಿನಲ್ಲಿ ಬಡತನದ ಕಹಿ ಅನುಭವಿಸಿದವನು. ಆ ಬಡತನದ ಬಿಸಿ  ತನ್ನ ಮಕ್ಕಳಿಗೆ ತಾಗದಿರಲೆಂದೇ ಗಳಿಸಿದ ಹಣವನ್ನು ಮಿತವಾಗಿ ಖರ್ಚುಮಾಡುವ ಆತ ಮನೆಯವರಿಂದ ಜಿಪುಣ ಎನ್ನುವ ಗೌರವಕ್ಕೂ ಪಾತ್ರನಾಗಿರುವನು. ಇಂಥ ರಾಜೇಂದ್ರನಿಗೆ ವಿಪರಿತ ಸಿನಿಮಾ ಹುಚ್ಚು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾಗಳನ್ನು ನೋಡುತ್ತಲೇ ತನ್ನ ಅನುಭವದ ಜಗತ್ತನ್ನು ಹಿಗ್ಗಿಸಿಕೊಂಡವನು. ಕೇವಲ ನಾಲ್ಕನೇ  ಕ್ಲಾಸು ಪಾಸಾಗಿದ್ದರೂ ಸಿನಿಮಾ ವೀಕ್ಷಣೆಯಿಂದ ದೊರೆತ ಅನುಭವದಿಂದಲೇ ಆತ ಊರಿನವರ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಜಾಣ. ಅದೇ ಊರಿನ ಪೋಲಿಸ್ ಸ್ಟೇಷನ್ ನಲ್ಲಿ ಪೋಲಿಸ್ ಕಾನಸ್ಟೆಬಲ್ ಆಗಿರುವ ಸೂರ್ಯ ಪ್ರಕಾಶನಿಗೆ ರಾಜೇಂದ್ರ ಪೊನ್ನಪ್ಪನನ್ನು ಕಂಡರಾಗದು. ಬೇರೆಯವರ ಹಣಕ್ಕೆ ಆಸೆಪಡುವ ಮತ್ತು ಸದಾಕಾಲ ಅವ್ಯವಹಾರದಲ್ಲೇ ಮುಳುಗಿರುವ ಸೂರ್ಯ ಪ್ರಕಾಶನದು ರಾಜೇಂದ್ರನಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ರಾಜೇಂದ್ರ ಸಹ ಅನೇಕ ಸಂದರ್ಭಗಳನ್ನು ಬಳಸಿಕೊಂಡು ಸೂರ್ಯ ಪ್ರಕಾಶನನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಾನೆ. ಇಂಥ ಅನೇಕ ಸಂದರ್ಭಗಳಲ್ಲಿ ಹೋಟೆಲ್ ಯಜಮಾನ, ಹಿರಿಯ ಪೋಲಿಸ್ ಪೇದೆ, ಬಿಕ್ಷುಕ ರಾಜೇಂದ್ರನ ನೆರವಿಗೆ ಬರುತ್ತಾರೆ. ಆದರೆ ಸೂರ್ಯ ಪ್ರಕಾಶ ಈ ಯಾವ ಪ್ರಯತ್ನಗಳಿಗೂ ಬದಲಾಗುವುದಿಲ್ಲ. ಮಧ್ಯಂತರದವರೆಗೂ ಸಿನಿಮಾ ತನ್ನ ಲವಲವಿಕೆ ಮತ್ತು ಹಾಸ್ಯ ಸನ್ನಿವೇಶಗಳಿಂದ ಒಂದು ಕ್ಷಣವೂ ಬೋರಾಗದಂತೆ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತದೆ. ಒಂದು ಕಥೆಯ ಕೇಳು ಮಗಳೇ ಹಾಡು ರಾಜೇಂದ್ರನ  ಸಂಸಾರದ ಒಟ್ಟು ಆಪ್ತತೆ ಮತ್ತು ಪ್ರೀತಿಯನ್ನು ನೋಡುಗರಿಗೆ ಕಟ್ಟಿಕೊಡುತ್ತದೆ. 'ಮನೆಯಲ್ಲಿ ದೇವರ ಕೋಣೆ ಇರುವಂತೆ ಟಾಯ್ಲೆಟ್ಟೂ ಇರುತ್ತೆ' ಎನ್ನುವಂಥ ಗಟ್ಟಿ  ಸಂಭಾಷಣೆ ಅಲ್ಲಲ್ಲಿ ಕೇಳಿ ಬರುತ್ತದೆ.

                   ಸಿನಿಮಾದ ಕಥೆ   ಮತ್ತು ರಾಜೇಂದ್ರ ಪೊನ್ನಪ್ಪನ ಬದುಕಿಗೆ ಒಂದು ಅನಿರೀಕ್ಷಿತ ತಿರುವು ಸಿಗುವುದೇ ಮಧ್ಯಂತರದ ನಂತರ. ಚಿತ್ರದ ಮೊದಲರ್ಧ ನೋಡುಗರಿಗೆ ಮನೋರಂಜನೆಯ ರಸದೌತಣ   ನೀಡಿದರೆ ಚಿತ್ರದ ಉಳಿದರ್ಧ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತ ಸಾಗುತ್ತದೆ. ಕಥೆಯ ಬಿಗಿಯಾದ ನಿರೂಪಣೆಯಿಂದ ಪ್ರೇಕ್ಷಕ ಮುಂದೆನಾಗುವುದು ಎನ್ನುವ ಕುತೂಹಲದಿಂದ ಸಿನಿಮಾದ ಕಥೆಯೊಳಗೆ ತಾನೊಂದು ಪಾತ್ರವಾಗುತ್ತಾನೆ. ಕಾನ್ವೆಂಟ್ ಶಾಲೆಯೊಂದರಲ್ಲಿ ಓದುತ್ತಿರುವ ರಾಜೇಂದ್ರನ ಮೊದಲ  ಮಗಳು ಶ್ರೇಯಾ ಅಪ್ಪನನ್ನು ಒಪ್ಪಿಸಿ ಎರಡು ದಿನಗಳ  ಕ್ಯಾಂಪ್ ನಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಾಳೆ. ಕ್ಯಾಂಪಿನಿಂದ ಮನೆಗೆ ಮರಳಿ ಬರುವ ಶ್ರೇಯಾಳ ಹಿಂದೆಯೇ ಅವಳಿಗೆ ಗೊತ್ತಿಲ್ಲದಂತೆ ಬಹುದೊಡ್ಡ ಸಮಸ್ಯೆಯೊಂದು ರಾಜೇಂದ್ರನ ಮನೆಯೊಳಗೆ ಕಾಲಿಡುತ್ತದೆ. ಕ್ಯಾಂಪಿನಲ್ಲಿ ಇವಳನ್ನು ನೋಡಿದ ಐಜಿ ರೂಪಾ ಚಂದ್ರಶೇಖರ ಮಗ ತರುಣ ಚಂದ್ರ ಶ್ರೇಯಾಳ ನಗ್ನ ಚಿತ್ರವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾನೆ. ಶ್ರೇಯಾಳ ಹಿಂದೆಯೇ ಊರಿಗೆ ಬರುವ ತರುಣಚಂದ್ರ ನಗ್ನ ಫೋಟೋ ತೋರಿಸಿ ತನ್ನ ದೈಹಿಕ ಕಾಮನೆಯನ್ನು ತೀರಿಸುವಂತೆ ಪೀಡಿಸತೊಡಗುತ್ತಾನೆ. ತನ್ನ ಮಾತಿಗೆ ಒಪ್ಪದೇ ಹೋದರೆ ಅವಳ ಫೋಟೋವನ್ನು ಇಂಟರ್ ನೆಟ್ ನಲ್ಲಿ ಹಾಕುವುದಾಗಿ ಹೆದರಿಸುತ್ತಾನೆ. ಅದುವರೆಗೂ ತಂದೆ ತಾಯಿಯ ಮಮತೆ ಮತ್ತು ಪ್ರೀತಿಯ ಲೋಕವನ್ನಷ್ಟೇ ನೋಡಿದ್ದವಳಿಗೆ ಬದುಕಿನ ಇನ್ನೊಂದು ಮುಖದ ದರ್ಶನವಾಗುತ್ತದೆ. ಒಂದೆಡೆ ಮಮತೆಯನ್ನೇ ಧಾರೆಯೇರೆಯುತ್ತಿರುವ ಪ್ರೀತಿಯ ಅಪ್ಪ ಅಮ್ಮ ಇನ್ನೊಂದೆಡೆ ದೈಹಿಕ ಕಾಮನೆಯಿಂದ ಹಪಹಪಿಸುತ್ತಿರುವ ಮೃಗ. ಆ ಎಳೆಯ ಮನಸ್ಸು ಸಂಕಷ್ಟದಲ್ಲಿ ಹೊಯ್ದಾಡುತ್ತದೆ. ಅಮ್ಮನ ಮನಸ್ಸು ತನ್ನ ಎಳೆಯ ಕಂದನ ಸಂಕಟವನ್ನು ಅರ್ಥ ಮಾಡಿಕೊಳ್ಳುತ್ತದೆ. ಒಂದು ರಾತ್ರಿ ತಾಯಿ ಮಗಳು ಮನೆಯ ಪಕ್ಕದ ತೋಟದಲ್ಲಿ ತರುಣಚಂದ್ರನನ್ನು ಭೇಟಿ ಮಾಡಿ ತೊಂದರೆ ಕೊಡದಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಕಾಮದ ವಾಂಛೆ ಅವನನ್ನು ಉನ್ಮತ್ತನಾಗಿಸುತ್ತದೆ. ಅವನೊಳಗಿನ ಕಾಮದ ಉನ್ಮತ್ತತೆ ಮಗಳೊಂದಿಗೆ ತಾಯಿಯನ್ನೂ  ಬಯಸುತ್ತದೆ. ತಾಯಿಯನ್ನು ಕಾಮಾಂಧನಿಂದ ಕಾಪಾಡಲು ಶ್ರೇಯಾ ಕಬ್ಬಿಣದ ಸಲಾಕೆಯಿಂದ ತರುಣಚಂದ್ರನ ತಲೆಗೆ ಹೊಡೆಯುತ್ತಾಳೆ. ನೆಲಕ್ಕುರಿಳಿದ ದೇಹದಿಂದ ಪ್ರಾಣಪಕ್ಷಿ ಹಾರಿಹೋಗುತ್ತದೆ. ತಾಯಿ ಮಗಳಿಬ್ಬರೂ ಆದ ಆಘಾತದಿಂದ ಹೊರಬರುವಷ್ಟರಲ್ಲಿ ಅಲ್ಲೊಂದು ಕೊಲೆ ನಡೆದು   ಹೋಗಿರುತ್ತದೆ. ಶವವನ್ನು ತೋಟದಲ್ಲಿ  ಮುಚ್ಚಿಡುವುದನ್ನು ರಾಜೇಂದ್ರನ ಸಣ್ಣ ಮಗಳು ಸಿಂಧು ನೋಡುತ್ತಾಳೆ.

                      ಬೆಳೆಗ್ಗೆ ಮನೆಗೆ ಬಂದ ರಾಜೇಂದ್ರನಿಗೆ ವಿಷಯ ತಿಳಿಯುತ್ತದೆ. ತನ್ನ ಕುಟುಂಬವೇ ತನ್ನ ಪ್ರೇಮಲೋಕವೆಂದು ಭಾವಿಸಿದ್ದ ರಾಜೇಂದ್ರ ಈ ಕೊಲೆಯ ಪ್ರಕರಣವನ್ನು  ರಹಸ್ಯವಾಗಿಟ್ಟು ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಾನೆ. ಅದಕ್ಕಾಗಿ ಕೊಲೆಯಾದ ದಿನ ಮತ್ತು ಅದರ ಮಾರನೆ ದಿನ ತಾವು ಊರಿನಲ್ಲೇ ಇರಲಿಲ್ಲ ಎನ್ನುವ ಕಥೆ ಹೆಣೆದು ಎಲ್ಲರನ್ನೂ ನಂಬಿಸುತ್ತಾನೆ. ಕೊಲೆಯಾದ ಮಾರನೆ ದಿನ ತರುಣ  ಚಂದ್ರನ ಕಾರನ್ನು ರಾಜೇಂದ್ರ ಬೇರೆಡೆ ಸ್ಥಳಾಂತರಿಸುವಾಗ ಅನಿರೀಕ್ಷಿತವಾಗಿ ಅವನನ್ನು ನೋಡುವ ಸೂರ್ಯ ಪ್ರಕಾಶನಿಗೆ ಅನುಮಾನ ಬರುತ್ತದೆ. ಇದೇ ಸಂದರ್ಭ ಐಜಿ ಗೀತಾ ತನ್ನ ಮಗ ಕಾಣೆಯಾಗಿರುವ ಕುರಿತು ತನಿಖೆಗೆ ಆದೇಶಿಸುತ್ತಾಳೆ. ತರುಣ ಚಂದ್ರ ಕಾಣೆಯಾದ ದಿನ ಅವನು ರಾಜೇಂದ್ರನ ಊರಿನಿಂದ ಕರೆಮಾಡಿದ್ದು ದೃಢಪಡುತ್ತದೆ. ಹಳದಿ ಬಣ್ಣದ ಕಾರಿನಲ್ಲಿ ತಾನು ರಾಜೇಂದ್ರನನ್ನು ನೋಡಿದ್ದಾಗಿ ಸೂರ್ಯ ಪ್ರಕಾಶ ಹೇಳುತ್ತಾನೆ. ಜೊತೆಗೆ ರಾಜೇಂದ್ರನ ಮಗಳು ಶ್ರೇಯಾ ತರುಣ ಚಂದ್ರ ಭಾಗವಹಿಸಿದ್ದ ಕ್ಯಾಂಪಿಗೆ ಬಂದಿದ್ದಳು ಎನ್ನುವ ಸಂಗತಿ ಬಯಲಾಗುತ್ತದೆ. ಈ ಎಲ್ಲ ಸಂಗತಿಗಳು  ರಾಜೇಂದ್ರ ಪೊನ್ನಪ್ಪನೆ ತರುಣ ಚಂದ್ರ ಕಾಣೆಯಾಗಿರುವುದಕ್ಕೆ ಕಾರಣ ಎನ್ನುವ ಅನುಮಾನವನ್ನು ಹುಟ್ಟು ಹಾಕುತ್ತವೆ. ರಾಜೇಂದ್ರನ ಕುಟುಂಬದವರನ್ನು  ಕರೆದು ಎಲ್ಲರನ್ನು  ಪ್ರಶ್ನಿಸಿದರೂ  ಸತ್ಯ ಹೊರಬರುವುದಿಲ್ಲ. ರಾಜೇಂದ್ರ ತನ್ನ ಚಾಣಾಕ್ಷತೆಯಿಂದ ಪೋಲೀಸರ ಎಲ್ಲ ಪ್ರಯತ್ನಗಳನ್ನು ನಿರರ್ಥಕಗೊಳಿಸುತ್ತಾನೆ. ತರುಣ ಚಂದ್ರ ಕಾಣೆಯಾದ ಹಾಗೂ ಆ ಊರಿನಲ್ಲಿ ಕಾಣಿಸಿಕೊಂಡ ದಿನ ರಾಜೇಂದ್ರ ಕುಟುಂಬ ಸಮೇತ ನಂಜನಗೂಡಿಗೆ ಭೇಟಿ ನೀಡಿದ್ದನೆಂದು ಊರಿನವರು ಸಾಕ್ಷಿ ನುಡಿಯುತ್ತಾರೆ. ನಂಜನಗೂಡಿನ ಲಾಡ್ಜ್ ಮ್ಯಾನೇಜರ್, ಹೋಟೆಲ್ ಮಾಲೀಕ ಮತ್ತು ಸಿನಿಮಾ ಮಂದಿರದ ಪ್ರೋಜೆಕ್ಸನ್ ಟೆಕ್ನಿಷಿಯನ್ ಕೂಡ ಸಾಕ್ಷಿಗೆ ದನಿ ಗೂಡಿಸುತ್ತಾರೆ. ಐಜಿ ಗೀತಾಳಿಗೆ ತನಿಖೆ ದಾರಿತಪ್ಪುತ್ತಿರುವುದು ಗೊತ್ತಾಗುತ್ತದೆ. ಇಡೀ ಕುಟುಂಬವನ್ನೇ ಹಿಂಸಿಸಿದಾಗ ಹೆದರಿದ ರಾಜೇಂದ್ರನ ಕೊನೆಯ ಮಗಳು ಸತ್ಯವನ್ನು ಬಾಯಿಬಿಡುತ್ತಾಳೆ. ಪೋಲಿಸ್ ಇಲಾಖೆಗೆ ಸತ್ಯವನ್ನು ಶೋಧಿಸಿದ ಸಂತಸವಾದರೆ ಸೂರ್ಯ ಪ್ರಕಾಶನದು  ರಾಜೇಂದ್ರನ ಮೇಲೆ ಸೇಡು ತೀರಿಸಿಕೊಂಡ ಪ್ರತಿಕಾರದ ಭಾವ. ಇಡೀ ಊರಿಗೆ ಊರೇ ರಾಜೇಂದ್ರನ ಮನೆಯನ್ನು ಸುತ್ತುವರೆದು ನಿಂತಿದೆ. ಸುದ್ದಿ ವಾಹಿನಿಗಳು ಕೊಲೆಯ ತನಿಖಾ ಸುದ್ದಿಯನ್ನು ಬಿತ್ತರಿಸಲು ಕಾತರಿಸುತ್ತಿವೆ.  ತರುಣ ಚಂದ್ರನ ತಂದೆ ತಾಯಿ ಮಗನ ಶವವನ್ನು ಕಾಣಲು ಮೈಯೆಲ್ಲ ಕಣ್ಣಾಗಿ ಕಾದು ಕುಳಿತಿರುವರು. ಸಿನಿಮಾವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರದೂ ಅತ್ಯಂತ ಕುತೂಹಲದ ಭಾವ. ಇನ್ನೇನು ಸತ್ಯ ಹೊರಬರಲಿದೆ ಎನ್ನುವಷ್ಟರಲ್ಲಿ ಗುಂಡಿಯಿಂದ ಹೊರತೆಗೆದ ಶವ ಮನುಷ್ಯನದಾಗಿರದೆ ಅದೊಂದು ದನದ ದೇಹವಾಗಿರುತ್ತದೆ. ಸುತ್ತುವರಿದ ಸುದ್ದಿವಾಹಿನಿಗಳ ಕಡೆ ಮಗಳೊಂದಿಗೆ ತೆರಳುವ ರಾಜೇಂದ್ರ ಪೋಲೀಸರ ಹಿಂಸೆಯನ್ನು ತಾಳದೆ ಮಗಳು ಸುಳ್ಳು ಹೇಳಿರುವುದಾಗಿ ಅವರನ್ನೆಲ ನಂಬಿಸುತ್ತಾನೆ. ಐಜಿ ಗೀತಾ ರಾಜಿನಾಮೆ ನೀಡುತ್ತಾಳೆ. ಪೋಲಿಸ್ ಕಾನಸ್ಟೆಬಲ್ ಸೂರ್ಯ ಪ್ರಕಾಶನನ್ನು ನೌಕರಿಯಿಂದ ವಜಾ ಗೊಳಿಸಲಾಗುತ್ತದೆ. ರಾಜೇಂದ್ರನ ಕುಟುಂಬ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತದೆ. ಹಾಗಾದರೆ ರಾಜೇಂದ್ರ ಆ ಶವವನ್ನು ಏನು ಮಾಡಿದ? ಇದು ಚಿತ್ರದ ಕ್ಲೈಮಾಕ್ಸ್.

                     ರವಿಚಂದ್ರನ್, ನವ್ಯ ನಾಯರ್, ಅಚ್ಯುತ್ ಕುಮಾರ, ಶಿವರಾಂ, ಜೈಜಗದೀಶ್, ಶ್ರೀನಿವಾಸ ಮೂರ್ತಿ, ಸುಚೇಂದ್ರ ಪ್ರಸಾದ, ಸಾಧು ಕೋಕಿಲರಂಥ ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದೆ. ದುಷ್ಟ ಪೋಲಿಸ್ ಪೇದೆ  ಪಾತ್ರದಲ್ಲಿ ನಟ ಅಚ್ಯುತ್ ಕುಮಾರ  ತಮ್ಮ ಅಭಿನಯದ  ಛಾಪು ಮೂಡಿಸಿದ್ದಾರೆ. ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಸುಚೇಂದ್ರ ಪ್ರಸಾದ ಪಾತ್ರಕ್ಕೆ ನ್ಯಾಯ ಒದಗಿಸಿರುವರು. ತಮಿಳಿನ ಶಿವಾಜಿ ಪ್ರಭು ತರುಣ ಚಂದ್ರನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿನಯಕ್ಕೆ ಹೆಚ್ಚಿನ ಅವಕಾಶವಿಲ್ಲ. ಐಜಿ ಪಾತ್ರದಲ್ಲಿ ನಟಿಸಿರುವ ಆಶಾ ಶರತ್ ಅವರ ನಟನೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಆದರೆ ಇಡೀ ಚಿತ್ರವನ್ನು ಆವರಿಸಿರುವುದು  ರವಿಚಂದ್ರನ್ ಅವರ ಅಭಿನಯ. ರವಿಚಂದ್ರನ್ ಅವರಿಗೆ ತಮ್ಮ ಸಿನಿಮಾ ಬದುಕಿನ ಬೆಳವಣಿಗೆ ಮತ್ತು ಬದಲಾವಣೆಗೆ   ಈ ಸಿನಿಮಾ ಅಗತ್ಯವಾದಷ್ಟೇ ಆ ಪಾತ್ರಕ್ಕೂ ರವಿಚಂದ್ರನ್ ಅಗತ್ಯವಿತ್ತು.

                  ಪಿ. ವಾಸು ನಿರ್ದೇಶನದಲ್ಲಿ ಬೆಳ್ಳಿತೆರೆಯ ಮೇಲೆ   'ದೃಶ್ಯ' ಸುಂದರವಾಗಿ ಮೂಡಿ ಬಂದಿದೆ. ನನಗೆ ಗೊತ್ತಿರುವಂತೆ  ಪಿ. ವಾಸು ಅನ್ಯ ಭಾಷಾ ನಿರ್ದೆಶಕರಾದರೂ ಅವರು ಕನ್ನಡಕ್ಕೆ   'ಆಪ್ತಮಿತ್ರ'ದಂಥ ಉತ್ತಮ ಸಿನಿಮಾಗಳನ್ನು ಕೊಟ್ಟಿರುವರು. ಮಧು ನೀಲಕಂಠನ್ ಅವರ ಕ್ಯಾಮೆರಾ ಮಲೆನಾಡನ್ನು ಸುಂದರವಾಗಿ ಸೆರೆ ಹಿಡಿದಿದೆ. ಇಳಿಯರಾಜಾರ  ಸಂಗೀತ ಸಿನಿಮಾದ ಹೈಲೆಟ್ ಎನಿಸಿದರೂ ಹಾಡುಗಳಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಸಿನಿಮಾದ ಓಟಕ್ಕೆ ಹೆಚ್ಚು ಹಾಡುಗಳ  ಅಗತ್ಯವೂ ಇರಲಿಲ್ಲ. ಎಸ್. ರಮೇಶರ ಸಂಭಾಷಣೆ ಆಗಾಗ ಮೆಲುಕು ಹಾಕುವಂತಿದೆ. ನಾಗೇಂದ್ರ ಪ್ರಸಾದರ ಗೀತ ರಚನೆಯಲ್ಲಿ ಮೂಡಿ ಬಂದಿರುವ ಎರಡು ಹಾಡುಗಳಲ್ಲಿ ಒಂದು ಕಥೆಯ ಕೇಳು ಮಗಳೇ ಹಾಡು ಗುನುಗುವಂತಿದೆ.

              'ದೃಶ್ಯ' ಸಿನಿಮಾ ನೋಡಿದ  ನಂತರ ನನ್ನನ್ನು ಕಾಡಿದ ಸಂಗತಿ ಎಂದರೆ ನೆರೆಯ ಮಲೆಯಾಳಂ ನಂಥ ಸಣ್ಣ ಸಿನಿಮಾ ಉದ್ಯಮದಲ್ಲಿ  ಸಾಧ್ಯವಾಗುತ್ತಿರುವ ಪ್ರಯೋಗಶೀಲತೆ ನಮ್ಮ ಕನ್ನಡ ಚಿತ್ರರಂಗದಲ್ಲೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದು. ಒಂದು ಕಾಲದಲ್ಲಿ ನೀಲಿ ಸಿನಿಮಾಗಳ ನಿರ್ಮಾಣದಿಂದ ನಲುಗಿ ಹೋಗಿದ್ದ ಮಲೆಯಾಳಂ ಚಿತ್ರರಂಗ ಇಂದು ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯಾಗುತ್ತಿದೆ. ಅನೇಕ ಪ್ರಯೋಗಶೀಲ ನಿರ್ದೇಶಕರು ಅಲ್ಲಿ ಕೆಲಸ ಮಾಡುತ್ತಿರುವರು. ಕಲಾತ್ಮಕತೆಯನ್ನೂ ಕಮರ್ಷಿಯಲ್ ಆಗಿ ತೋರಿಸುವ ಜಾಣ್ಮೆ ಈ ಮಲೆಯಾಳಿ ನಿರ್ದೇಶಕರು  ಮತ್ತು ಕಲಾವಿದರಿಗೆ ಸಿದ್ಧಿಸಿದೆ. ನೂರು ವರ್ಷಗಳ ಇತಿಹಾಸವಿರುವ ಮತ್ತು ಅನೇಕ ಪ್ರತಿಭಾವಂತ ನಿರ್ದೇಶಕರು ಮತ್ತು ಕಲಾವಿದರು ಕೂಡಿ ರೂಪಿಸಿದ ಕನ್ನಡ ಚಿತ್ರರಂಗದಲ್ಲಿ ಇವತ್ತು ಪ್ರಯೋಗಶೀಲತೆ ಎನ್ನುವುದು ಮರೀಚಿಕೆಯಾಗಿದೆ. ತಮಿಳು ತೆಲುಗು ಸಿನಿಮಾಗಳಿಂದ ಕಥೆಯನ್ನು ಕದ್ದು  ತಂದು ಸಿನಿಮಾಗಳನ್ನು ನಿರ್ಮಿಸುತ್ತಿರುವ ಪರಂಪರೆ ಇಲ್ಲಿ ಬೆಳೆಯುತ್ತಿದೆ. ಜನಪ್ರಿಯ ಕಲಾವಿದರು ಇನ್ನೂ ಮರಸುತ್ತುವ ಪಾತ್ರಗಳಿಗೆ ತಮ್ಮ ನಟನೆಯನ್ನು ಸೀಮಿತಗೊಳಿಸಿಕೊಂಡಿರುವರು. ಈ ಪರಂಪರೆ ಹೀಗೆ ಮುಂದುವರೆದಲ್ಲಿ ಕನ್ನಡ ಚಿತ್ರರಂಗ ಮುಂದೊಂದು ದಿನ  ಹಳೆ ಬಾಟ್ಲಿ, ತುಂಬಾ ನೋಡ್ಬೇಡಿ, ಜಿಂಗಡಾ ಬಂಗಡಾದಂಥ ಸಾಹಿತ್ಯದ ನಡುವೆ ಕಳೆದು ಹೋಗಬಹುದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, June 26, 2014

ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು

           







         







         




               ಈ ವರ್ಷ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳ ಮನಸ್ಸು ಗೊಂದಲದ ಗೂಡಾಗಿದೆ. ಇದಕ್ಕೆ ಕಾರಣಗಳಿಲ್ಲದಿಲ್ಲ. ಅತ್ಯಂತ ಪ್ರಮುಖ ಕಾರಣಗಳಲ್ಲೊಂದೆಂದರೆ ಅದು ಈ ವರ್ಷ ಪ್ರಾರಂಭವಾಗಬೇಕಿದ್ದ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮತಿ ದೊರೆಯದಿರುವುದು. ಒಂದು ವೇಳೆ ಅನುಮತಿ ಪಡೆಯುವಲ್ಲಿ ಕಾಲೇಜುಗಳು ಯಶಸ್ವಿಯಾಗಿರುತ್ತಿದ್ದರೆ ಆಗ ೫೧೦ ವೈದ್ಯಕೀಯ ಸೀಟುಗಳು ಹೆಚ್ಚಳವಾಗಿ ಲಭ್ಯವಾಗುತ್ತಿದ್ದವು. ಆರು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಗೊಳ್ಳಬಹುದೆನ್ನುವ ಆಕಾಂಕ್ಷೆಯಿಂದ ಪ್ರವೇಶ ಪರೀಕ್ಷೆಯನ್ನು ಬರೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಈಗ ಭ್ರಮನಿರಸನವಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನಿರಾಕರಿಸಿದ್ದರ ಪರಿಣಾಮ ರಾಜ್ಯದಲ್ಲಿ ವೈದ್ಯಕೀಯ ವಿಭಾಗದಲ್ಲಿ ೬೦೦೦ rank ಗಳಿಸಿದ್ದ ವಿದ್ಯಾರ್ಥಿನಿಯೋರ್ವಳು ತನಗೆ ವೈದ್ಯಕೀಯ ಸೀಟು ದೊರೆಯುವುದಿಲ್ಲ ಎಂದು ಗೊತ್ತಾಗಿ ಆತ್ಮಹತ್ಯೆಗೆ ಶರಣಾಗಿರುವಳು. ನಿಜಕ್ಕೂ ಇದು ಆತಂಕದ  ಮತ್ತು ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ಯೋಚಿಸಬೇಕಾದ ಸಂಗತಿ. ಇಂಥದ್ದೊಂದು ಘಟನೆ ನಡೆದ ಹಿನ್ನೆಲೆಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವಂತೆ ಭಾರತೀಯ ವೈದ್ಯಕೀಯ ಮಂಡಳಿಯನ್ನು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುವುದಾಗಿ ಭರವಸೆಯ ಮಾತುಗಳನ್ನಾಡಿರುವರು. 

              ಉಲ್ಲೇಖಿಸಲೇ ಬೇಕಾದ ಇನ್ನೊಂದು ವಿಷಯವೆಂದರೆ ಭಾರತೀಯ ವೈದ್ಯಕೀಯ ಮಂಡಳಿಯೇ ಹೇಳಿಕೊಂಡಂತೆ ಈ ವರ್ಷ ಪ್ರತಿಶತ ೩೨ ರಷ್ಟು ವೈದ್ಯಕೀಯ ಸೀಟುಗಳನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಮಂಡಳಿಯು ನೀಡುವ ಕಾರಣ ರಾಷ್ಟ್ರದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಹೀಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮುಂದಾದ ಭಾರತೀಯ ವೈದ್ಯಕೀಯ ಮಂಡಳಿ ಈ ವರ್ಷ ತಾನು ಪರಿಶೀಲಿಸಿದ ಬಹುತೇಕ ಕಾಲೇಜುಗಳಲ್ಲಿನ ವೈದ್ಯಕೀಯ ಸೀಟುಗಳನ್ನು ಕಡಿತಗೊಳಿಸಿದೆ. ಉದಾಹರಣೆಗೆ ೨೦೦ ಸೀಟುಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಪ್ರವೇಶ ಮಿತಿಯನ್ನು ೧೫೦ ಕ್ಕೂ, ೧೫೦ ಸೀಟುಗಳಿದ್ದರೆ ಅಲ್ಲಿ ಪ್ರವೇಶ ಮಿತಿಯನ್ನು ೧೦೦ ಕ್ಕೂ ಸೀಮಿತಗೊಳಿಸಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷ ಬಹಳಷ್ಟು ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಕಡಿಮೆಗೊಳಿಸಿ ಆದೇಶ ಹೊರಡಿಸಲಾಗಿದೆ. ಪತ್ರಿಕೆಯೊಂದರ ಸಮೀಕ್ಷೆಯ ಪ್ರಕಾರ ಒಟ್ಟು  ೧೬೦೦೦ ವೈದ್ಯಕೀಯ ಸೀಟುಗಳನ್ನು ಈ ವರ್ಷ ಕಡಿತಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಒಂದರಲ್ಲೇ ಈ ಸಂಖ್ಯೆ ೧೪೫೦ ನ್ನು ದಾಟಲಿದೆ. ಈಗಾಗಲೇ ರಾಷ್ಟ್ರದಲ್ಲಿ ವೈದ್ಯ ಮತ್ತು ರೋಗಿಗಳ ನಡುವಣ ಅನುಪಾತದ ಸರಾಸರಿ ಅತ್ಯಂತ ಕಡಿಮೆ ಇರುವುದರಿಂದ ಭಾರತೀಯ ವೈದ್ಯಕೀಯ ಮಂಡಳಿಯ ಈ ಕಠಿಣ ನಿರ್ಧಾರ ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನೇಮಕಾತಿ ಸರ್ಕಾರಕ್ಕೆ ಅತ್ಯಂತ ಕಠಿಣ ಸವಾಲಿನ ವಿಷಯವಾಗಿರುವುದರಿಂದ ವೈದ್ಯಕೀಯ ಸೀಟುಗಳ ಕಡಿತ ಈ ಒಂದು ಸವಾಲನ್ನು ಇನ್ನಷ್ಟು ಕಠಿಣಗೊಳಿಸಲಿದೆ. 

                 ಹೀಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟದ ನೆಪವೊಡ್ಡಿ ವೈದ್ಯಕೀಯ ಸೀಟುಗಳನ್ನು ಕಡಿಮೆ ಮಾಡುತ್ತಿರುವುದು ಅದು ನೇರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಈಗಿರುವ ಸರ್ಕಾರಿ ಸೀಟುಗಳ ಸಂಖ್ಯೆ ೧೮೦೩ ಮಾತ್ರ. ಅವುಗಳಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ದೊರೆಯುವ ಸೀಟುಗಳ ಸಂಖ್ಯೆ ೫೪೨. ಉಳಿದ ಸೀಟುಗಳನ್ನು ಹಿಂದುಳಿದ ಜಾತಿ ಮತ್ತು ಪಂಗಡದ, ವಿಶೇಷ ಕೋಟಾದಡಿ ಬರುವ ಹಾಗೂ ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿಡಲಾಗಿದೆ. ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ೫೪೨ ಸೀಟುಗಳ ಪರಿಮಿತಿಯಲ್ಲೇ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಪ್ರಯತ್ನಿಸಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳೆಂದ ಮಾತ್ರಕ್ಕೆ ಅವರು ಜಾತಿಯೊಂದಿಗೆ ಆರ್ಥಿಕವಾಗಿಯೂ ಪ್ರಬಲರು ಎನ್ನುವ ನಿರ್ಣಯಕ್ಕೆ ಬರುವುದು ಆತುರದ ನಿರ್ಧಾರವಾಗುತ್ತದೆ. ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟನ್ನು ಪಡೆದ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೪೫,೦೦೦ ರೂಪಾಯಿಗಳ ಶುಲ್ಕವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿರುವ ಸಂಗತಿ. ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜ್ಯದ ಆರ್ಥಿಕವಾಗಿ ದುರ್ಬಲರಾದ ಪ್ರತಿಭಾವಂತ ವಿದ್ಯಾರ್ಥಿಗಳು ಕಾಮೆಡ್-ಕೆ ಮೂಲಕವಾಗಲಿ ಇಲ್ಲವೇ ಮ್ಯಾನೆಜಮೆಂಟ್ ಮೂಲಕವಾಗಲಿ  ನಿಗದಿಪಡಿಸಿದ ದುಬಾರಿ ಶುಲ್ಕವನ್ನು ಭರಿಸಿ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯುವುದು ದೂರದ ಮಾತು.  ಒಂದೆಡೆ ಸರ್ಕಾರಿ ಸೀಟುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಇನ್ನೊಂದೆಡೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಕಾಲೇಜುಗಳು ನಡುವೆ ಹಟಕ್ಕೆ ಬಿದ್ದಂತೆ ವರ್ತಿಸುತ್ತಿರುವ ವೈದ್ಯಕೀಯ ಮಂಡಳಿ ಈ ಎಲ್ಲ ಸಮಸ್ಯೆಗಳ ನಡುವೆ ಸಿಲುಕಿ ನರಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವರು. ನಮ್ಮನ್ನಾಳುವ ರಾಜಕಾರಣಿಗಳಿಗಾಗಲಿ ಮತ್ತು ವೈದ್ಯಕೀಯ ಮಂಡಳಿಯಲ್ಲಿನ ಕಾನೂನು ನಿರ್ಮಾತೃರಿಗಾಗಲಿ ಈ ಬಿಸಿ ತಟ್ಟದೆ ಇರಬಹುದು ಆದರೆ ಪಾಲಕರಿಗಂತೂ ಇದೊಂದು ಬಹುಮುಖ್ಯ ಸಮಸ್ಯೆಯಾಗಿ ಪರಿಣಮಿಸಿದೆ.

             ಇಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲೇ ಬೇಕೆನ್ನುವುದು  ನನ್ನ ವಾದವಲ್ಲ. ಆದರೆ ಹೀಗೆ ಅನುಮತಿಗೆ ನಿರಾಕರಿಸುತ್ತಿರುವ ಮಂಡಳಿ ಅದಕ್ಕೆ ಕೊಡುತ್ತಿರುವ ಕಾರಣಗಳು ತೀರ ಸಣ್ಣ ಸಂಗತಿಗಳಾಗಿರುವುದು ನಾವು ಯೋಚಿಸಬೇಕಾದ ವಿಷಯ. ಪರಿಶೀಲನೆಗೆ ಒಳಪಟ್ಟ ಎಲ್ಲ ವೈದ್ಯಕೀಯ ಕಾಲೇಜುಗಳನ್ನು ಭಾರತೀಯ ವೈದ್ಯಕೀಯ ಮಂಡಳಿ ಒಂದೇ ಸಮನಾಗಿ ನೋಡುತ್ತಿದೆ. ಕೇವಲ ವಿದ್ಯಾರ್ಥಿಗಳ ಪ್ರವೇಶವನ್ನೇ ತನ್ನ ಆದಾಯದ ಮೂಲವಾಗಿಟ್ಟುಕೊಂಡ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಗಣನೀಯವಾಗಿರಬಹುದು. ಅಂಥ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಮಂಡಳಿಯ ನೀತಿ ನಿಯಮಗಳಿಗನ್ವಯವಾಗುವಂತೆ ಕಾರ್ಯನಿರ್ವಹಿಸದೇ ಇರಬಹುದು. ಆಗ ಮಂಡಳಿಯು ಅನುಮತಿ ನಿರಾಕರಿಸುವುದು ಎಲ್ಲರೂ ಒಪ್ಪತಕ್ಕ ಮಾತು.  ಹಾಗೆಂದ ಮಾತ್ರಕ್ಕೆ ಎಲ್ಲ ವೈದ್ಯಕೀಯ ಕಾಲೇಜುಗಳು ಅನುಮತಿ ನಿರಾಕರಣೆಗೆ ಅರ್ಹವಾದವುಗಳೆಂಬ ನಿರ್ಧಾರಕ್ಕೆ  ಬಂದು ನಿಲ್ಲುವುದು ಸರಿಯಲ್ಲ. ಜೊತೆಗೆ ವೈದ್ಯಕೀಯ ಮಂಡಳಿ ಪುನರ್ ಪರಿಶೀಲನೆಗೆ ಅವಕಾಶವೇ ಕೊಡದಂತೆ ಕೊನೆಯ ಕ್ಷಣಗಳಲ್ಲಿ ತನ್ನ ನಿರ್ಧಾರ ಪ್ರಕಟಿಸುತ್ತಿದೆ. ಇರಲಿ ಖಾಸಗಿ ಸಂಸ್ಥೆಗಳಿಗೆ ಅನುಮತಿ ನಿರಾಕರಿಸುತ್ತಿರುವುದರ ಹಿಂದೆ ಮಂಡಳಿಯ ಪ್ರಾಮಾಣಿಕ ಕಾಳಜಿ ಇದೆ ಎಂದು ಅಂದುಕೊಳ್ಳೋಣ. ಏಕೆಂದರೆ ಖಾಸಗಿ ಸಂಸ್ಥೆಗಳಲ್ಲಿನ ಸೀಟುಗಳನ್ನು ಕಡಿತಗೊಳಿಸುವುದರ ಹಿಂದೆ ಆರ್ಥಿಕ ಲಾಭವೆಂಬ ಒಂದು ಪ್ರಬಲ ಕಾರಣವಿರಬಹುದು. ಆದರೆ ಅದೇ ಮಾನದಂಡವನ್ನು ಸರ್ಕಾರಿ ಕಾಲೇಜುಗಳಿಗೂ ಅನ್ವಯಿಸುತ್ತಿರುವುದು ಅದು ಸಾಮಾಜಿಕ ನ್ಯಾಯದ ದೃಷ್ಥಿಯಿಂದ ನ್ಯಾಯೋಚಿತವಾದ ನಿರ್ಧಾರವಲ್ಲ.

         ಈ ಸಂದರ್ಭ ಗಮನಿಸಬೇಕಾದ ಇನ್ನೊಂದು ಮಹತ್ವದ  ಸಂಗತಿ ಎಂದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲದೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರತಿಶತ ೪೦ ರಷ್ಟು ಸೀಟುಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕಾಯ್ದಿರಿಸಿದ್ದು ಸ್ವಾಗತಾರ್ಹ ಕ್ರಮ. ಆದರೆ ಇದೇ ಸಂದರ್ಭ ಅನೇಕ ವೈದ್ಯಕೀಯ ಕಾಲೇಜುಗಳು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದು ಸರ್ಕಾರದ ಈ ಒಂದು ಸೀಟು ಹಂಚುವಿಕೆಯ ನಿಯಮದಿಂದ ನುಣುಚಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಗಳಲ್ಲೊಂದು. ಹೀಗೆ ಖಾಸಗಿ ವೈದ್ಯಕೀಯ ಕಾಲೇಜುಗಳು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆಯುವುದರೊಂದಿಗೆ ಸಹಜವಾಗಿಯೇ ಸರ್ಕಾರಿ ವೈದ್ಯಕೀಯ ಸೀಟುಗಳ ಸಂಖ್ಯೆ ಕ್ಷೀಣಿಸುತ್ತದೆ. ಇತ್ತ ಭಾರತೀಯ ವೈದ್ಯಕೀಯ ಮಂಡಳಿ ಸರ್ಕಾರಿ ಕಕ್ಷೆಯಲ್ಲಿ ಬರುವ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಮತ್ತು ನೇರವಾಗಿ ಸರ್ಕಾರದ ಅಧಿನಕ್ಕೊಳಪಟ್ಟ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಕಡಿತಗೊಳಿಸುತ್ತಿರುವುದರಿಂದ ಸಹಜವಾಗಿಯೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹೊಸದಾಗಿ ಪ್ರಾರಂಭಿಸಲು ಯೋಜನೆ ರೂಪಿಸಿದ್ದ ಆರು ಕಾಲೇಜುಗಳಿಗೆ ಅನುಮತಿಯನ್ನು ಸಾರಾಸಗಟಾಗಿ ನಿರಾಕರಿಸಿರುವುದರಿಂದ ಆ ಹೆಚ್ಚುವರಿ ಸೀಟುಗಳ ಮೂಲಕವೂ ಪ್ರವೇಶ ಪಡೆಯುವ ಭಾಗ್ಯ ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ವಿಷಯವಾಗಿ ಭಾರತೀಯ ವೈದ್ಯಕೀಯ ಮಂಡಳಿಗೆ ಮೃದು ಧೋರಣೆ ಇದೆ ಎಂಬ ಭಾವನೆ ಈಗ ಸುಳ್ಳು ಎಂದೆನಿಸುತ್ತಿದೆ. ಸಾಮಾನ್ಯವಾಗಿ ಸರ್ಕಾರಿ ಕಾಲೇಜುಗಳಿಗೆ ಅನುಮತಿ ನೀಡಿ ಆ  ಮೂಲಕ ಆರ್ಥಿಕವಾಗಿ ಮತ್ತು ಜಾತಿ ಆಧಾರಿತವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಕಡಿಮೆ ಹಣದಲ್ಲಿ ವೈದ್ಯಕೀಯ ಶಿಕ್ಷಣವನ್ನು ಒದಗಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯ ಬೇಕಿದ್ದ ವೈದ್ಯಕೀಯ ಮಂಡಳಿ ನೇರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಜೊತೆಗೆ ವೈದ್ಯ ಮತ್ತು ರೋಗಿಗಳ ನಡುವಣ ಸಂಖ್ಯೆಯ ಅಂತರವನ್ನು  ಸಹ ಹೆಚ್ಚಿಸುತ್ತಿದೆ.

        ಇದೇ ಸಂದರ್ಭ ರಾಜ್ಯದ ಸರ್ಕಾರಿ ಕಕ್ಷೆಯಲ್ಲಿ ಬರುವ ಒಟ್ಟು ವೈದ್ಯಕೀಯ ಸೀಟುಗಳಲ್ಲಿ ೪೮೯ ಸೀಟುಗಳನ್ನು ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿಡಲಾಗಿದೆ. ಇದು ಇತರ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯಕೀಯ ಸೀಟುಗಳು ಗಮನಾರ್ಹ ಸಂಖ್ಯೆಯಲ್ಲಿ ಕಡಿತಗೊಂಡಿರುವ ಹೊತ್ತಿನಲ್ಲೇ ಇಂಥದ್ದೊಂದು ಮೀಸಲಾತಿ ಇತರ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳ ರೋಷಕ್ಕೆ ಕಾರಣವಾಗುವುದು ಸಹಜವಾದ ಸಂಗತಿ. ಹೀಗೆ ಒಂದು ಭೌಗೋಳಿಕ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿಕೊಡುತ್ತಿರುವ ಹೊತ್ತಿನಲ್ಲೇ ಅದು ಇನ್ನಿತರ ಭೌಗೋಳಿಕ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳ ಅವಕಾಶವನ್ನು ಕಸಿದುಕೊಂಡಂತೆ ಎನ್ನುವ ಸಂಗತಿ ನಮ್ಮ ರಾಜಕೀಯ ನಾಯಕರುಗಳಿಗೆ ಮತ್ತು ವೈದ್ಯಕೀಯ ಮಂಡಳಿಯಲ್ಲಿನ ಕಾನೂನು ಪಂಡಿತರಿಗೆ ಅರ್ಥವಾಗಬೇಕಿತ್ತು.  ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಿದಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಅಷ್ಟೊಂದು ಅಸಮಾಧಾನವಾಗುತ್ತಿರಲಿಲ್ಲ. ಆದರೆ ಸರ್ಕಾರ ಮತ್ತು ವೈದ್ಯಕೀಯ ಮಂಡಳಿ ಪ್ರತಿಭಾವಂತ ವಿದ್ಯಾರ್ಥಿಗಳ ಕರೆಗೆ ಪ್ರತಿಕ್ರಿಯಿಸದಷ್ಟು ಕಿವುಡಾಗಿವೆ.

          ಒಂದು ಉದಾಹರಣೆಯೊಂದಿಗೆ ಈ ಲೇಖನವನ್ನು ಪೂರ್ಣಗೊಳಿಸುವುದು ಹೆಚ್ಚು ಸಮಂಜಸವೆನಿಸುತ್ತದೆ. ನನ್ನ ಪರಿಚಿತರ ಮಗ  ರಾಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಸಾಮಾನ್ಯ ವರ್ಗಕ್ಕೆ  ಸೇರಿದ ಆತ ಈ ವರ್ಷದ ವೈದ್ಯಕೀಯ ಕೋರ್ಸಿನ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ೫೫೦ rank ಪಡೆದು ತೇರ್ಗಡೆಯಾದ. ಸಹಜವಾಗಿಯೇ ತನಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಲ್ಲವಾದರೂ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸಿಗೆ ಪ್ರವೇಶ ದೊರೆಯಬಹುದೆಂದು ನಿರೀಕ್ಷಿಸಿದ್ದ. ಆದರೆ ಸಾಮಾನ್ಯ ವರ್ಗಕ್ಕೆ ೫೪೨ ಸೀಟುಗಳನ್ನು ಮಾತ್ರ ಮೀಸಲಾಗಿರಿಸಿದ್ದರಿಂದ ಅವನಿಗೆ ವೈದ್ಯಕೀಯ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ. ಕಾಮೆಡ್-ಕೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು  ಪಡೆಯಲು ಅರ್ಹನಾಗಿದ್ದರೂ ಆ ದುಬಾರಿ ಶುಲ್ಕವನ್ನು ಭರಿಸುವುದು ಆತನ ಸಾಮರ್ಥ್ಯವನ್ನು ಮೀರಿದ ಸಂಗತಿಯಾಗಿತ್ತು. ಅವನ ವರ್ಗದಲ್ಲೇ ಓದುತ್ತಿದ್ದ ಮೋಹನ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ೩೫೦೦ rank ನೊಂದಿಗೆ  ಹಿಂದುಳಿದ ವರ್ಗದ ಕೋಟಾದಡಿ ವೈದ್ಯಕೀಯ ಕಾಲೇಜಿನಲ್ಲಿ ಸುಲಭವಾಗಿ ಪ್ರವೇಶ ಪಡೆದ.  ೧೮೦೦ ವೈದ್ಯಕೀಯ ಸೀಟುಗಳಿದ್ದಾಗೂ ತನ್ನ ೫೫೦ ನೇ rank ಗೆ ಅದೇಕೆ ತನಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯಲಿಲ್ಲ ಎಂದು ರಾಮ  ಅಮಾಯಕನಂತೆ ಪ್ರಶ್ನಿಸುವಾಗಲೆಲ್ಲ ಮನಸ್ಸು ನೋವಿನಿಂದ ನರಳುತ್ತದೆ. ಈ ನೋವು ನಮ್ಮ ರಾಜಕಾರಣಿಗಳಿಗೆ, ಕಾನೂನು ರೂಪಿಸುವ ಪಂಡಿತರಿಗೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯ ತಜ್ಞರಿಗೆ  ಅರ್ಥವಾದರೆ ಒಳಿತು.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ