Wednesday, January 4, 2023

ನನ್ನ ಲೇಖನ 'ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಜನವರಿ ೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು) 

Monday, January 2, 2023

ಗ್ರಂಥಾಲಯ: ಓದುಗರ ಕೊರತೆಯೇಕೆ?




      (೭.೧೧.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

     ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುವುದು. ವಾರಪೂರ್ತಿ ಪುಸ್ತಕ ಪ್ರದರ್ಶನ, ಪರಿಣತರಿಂದ ವಿಶೇಷ ಉಪನ್ಯಾಸಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇಂಥ ಕಾರ್ಯಕ್ರಮಗಳಿಂದ ಗ್ರಂಥಾಲಯದತ್ತ ಓದುಗರನ್ನು ಆಕರ್ಷಿಸುವ ಪ್ರಯತ್ನ ಸಾರ್ವಜನಿಕ ಗ್ರಂಥಾಲಯ ಇಲಾಖೆಯದ್ದು.  

    ಇದೇ ಸಂದರ್ಭ ಸಾರ್ವಜನಿಕ ಗ್ರಂಥಾಲಯಗಳಿಗೆ ಬರುವ ಓದುಗರ ಸಂಖ್ಯೆ ಏಕೆ ಇಳಿಮುಖವಾಗುತ್ತಿದೆ ಎಂದು ಯೋಚಿಸಬೇಕಿದೆ. ಸಾರ್ವಜನಿಕರಲ್ಲಿ ಓದುವ ಅಭಿರುಚಿ ಮತ್ತು ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಆರೋಪಿಸುವುದರಲ್ಲಿ ಯಾವುದೇ ಹುರುಳಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸರತಿಸಾಲಿನಲ್ಲಿ ನಿಂತು ಪುಸ್ತಕಗಳನ್ನು ಖರೀದಿಸುವ ಚಿತ್ರಣ ನಮ್ಮ ಕಣ್ಣೆದುರಿಗಿದೆ. ಅನೇಕ ಪ್ರಕಾಶನ ಸಂಸ್ಥೆಗಳು ಆನ್‍ಲೈನ್ ಮೂಲಕವೇ ಪುಸ್ತಕಗಳ ಮಾರಾಟದಿಂದ ಲಕ್ಷಾಂತರ ರೂಪಾಯಿಗಳ ವಹಿವಾಟು ಮಾಡುತ್ತಿವೆ. ಅದೆಷ್ಟೋ ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಪ್ರಜ್ಞಾವಂತ ಓದುಗರನ್ನು ನೆಚ್ಚಿಕೊಂಡಿವೆಯೇ ವಿನಾ ಸಾರ್ವಜನಿಕ ಗ್ರಂಥಾಲಯಗಳನ್ನಲ್ಲ. 

    ಸನ್ನಿವೇಶ ಹೀಗಿರುವಾಗ ಸಾರ್ವಜನಿಕ ಗ್ರಂಥಾಲಗಳಲ್ಲೇಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಓದುಗರಿಗೆ ಗುಣಮಟ್ಟದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಆರೋಪ ಸತ್ಯಕ್ಕೆ ಹತ್ತಿರವಾಗಿದೆ. ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ಖರೀದಿಯ ಒಟ್ಟು ವಿಧಾನವೇ ಅವೈಜ್ಞಾನಿಕವಾಗಿದೆ. ಪ್ರಕಾಶಕರಿಂದ ಇಂತಿಷ್ಟು ಪ್ರಮಾಣದಲ್ಲಿ ಪುಸ್ತಕಗಳ ಪ್ರತಿಗಳನ್ನು ಖರೀದಿಸಬೇಕೆಂಬ ನಿಯಮ ಚಾಲ್ತಿಯಲ್ಲಿದೆ. ಪ್ರತಿಪುಟಕ್ಕೆ ನಿರ್ಧಿಷ್ಟ ಬೆಲೆಯನ್ನು ನಿಗದಿಪಡಿಸಲಾಗಿದೆ. ಪ್ರಕಾಶಕರಿಗೆ ಉತ್ತೇಜನ ಕೊಡಲು ಜಾರಿಯಲ್ಲಿರುವ ಈ ವಿಧಾನದಿಂದಾಗಿ ಗುಣಮಟ್ಟದ ಪುಸ್ತಕಗಳ ಕೊರತೆ ಗ್ರಂಥಾಲಯಗಳಲ್ಲಿ ಎದ್ದುಕಾಣುತ್ತಿದೆ. 

    ಅದೆಷ್ಟೋ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಒಬ್ಬರೇ ಪ್ರಕಾಶಕರು ಬೇರೆ ಬೇರೆ ಹೆಸರುಗಳ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟುಹಾಕಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವು ವರ್ಷಗಳ ಹಿಂದೆ ಹಿಂದುಳಿದ ಭಾಗವೆಂಬ ಕಾರಣದಿಂದ ಹೈದರಾಬಾದ ಕರ್ನಾಟಕ ಭಾಗದ (ಈಗಿನ ಕಲ್ಯಾಣ ಕರ್ನಾಟಕ) ಪ್ರಕಾಶಕರಿಂದ ಪ್ರತಿ ಪುಸ್ತಕದ 1500 ಪ್ರತಿಗಳನ್ನು ಖರೀದಿಸಬೇಕೆನ್ನುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಕ್ಕಾಗಿ ಪ್ರಕಟಣಾ ವರ್ಷದ ನಿರ್ಬಂಧವನ್ನು ಕೂಡ ತೆಗೆದುಹಾಕಲಾಗಿತ್ತು. ಪರಿಣಾಮವಾಗಿ ಆ ಭಾಗದ ಪ್ರಕಾಶಕರು ತಮ್ಮ ಪ್ರಕಟಣೆಯ ಅಳಿದುಳಿದ ಸರಕನ್ನೆಲ್ಲ ಮಾರಾಟಮಾಡಿ ಧನ್ಯರಾದರು. 

    ಪರಿಸ್ಥಿತಿ ಹೀಗಿರುವಾಗ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಅದೆಷ್ಟೋ ಪ್ರಕಾಶನ ಸಂಸ್ಥೆಗಳು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸುವ ಪ್ರಕಾಶಕರ ಪಟ್ಟಿಯಿಂದ ಹೊರಗೇ ಉಳಿದಿವೆ. ಪುಸ್ತಕದಂತಹ ಸಂಸ್ಕೃತಿಗೆ ಈ ರೀತಿಯ ವಿನಾಯಿತಿ ಮತ್ತು ಔದಾರ್ಯವನ್ನು ತೋರಿಸುವ ಅಗತ್ಯವಿತ್ತೆ ಎನ್ನುವ ಸಂದೇಹ ಕಾಡದೆ ಇರದು. ಪುಸ್ತಕ ಪ್ರಕಟಣೆ ಎನ್ನುವುದು ಉದ್ಯಮವಲ್ಲ, ಅದೊಂದು ಮಾಧ್ಯಮ. ಪುಸ್ತಕ ಪ್ರಕಟಣೆಯ ಕೆಲಸವನ್ನು ಮಾಧ್ಯಮ ಎಂದು ಭಾವಿಸಿದವರು ಒಂದು ನೀತಿಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಪುಸ್ತಕ ಪ್ರಕಟಣೆಯನ್ನು ಪುಸ್ತಕೋದ್ಯಮವಾಗಿಸಿದವರು ನೀತಿಯ ಚೌಕಟ್ಟಿನಿಂದ ಹೊರಗುಳಿಯುತ್ತಾರೆ. ನೀತಿಯ ಚೌಕಟ್ಟಿನಲ್ಲಿರುವ ಪ್ರಕಾಶಕರಿಗೆ ಓದುಗರೇ ಅನ್ನದಾತರು. ಚೌಕಟ್ಟನ್ನು ಮೀರಿ ನಿಂತವರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸಿ ಕುಬೇರರಾಗುತ್ತಿರುವರು. 

    ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೇ ಗ್ರಂಥಾಲಯಗಳು ಅವ್ಯವಸ್ಥೆಗಳ ಆಗರವಾಗಿರುವಾಗ ಇನ್ನು ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಸ್ಥಳೀಯರನ್ನೆ ಗ್ರಂಥಾಲಯ ಮೇಲ್ವಿಚಾರಕರೆಂದು ನೇಮಕಮಾಡಿಕೊಳ್ಳುತ್ತಿರುವುದರಿಂದ ಅಲ್ಲಿನ ಗ್ರಂಥಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ಥಳೀಯರ ಬೆಂಬಲವಿರುವುದರಿಂದ ಮೇಲ್ವಿಚಾರಕರು ಗ್ರಂಥಾಲಗಳಿಗೆ ಬೀಗಹಾಕಿ ತಮ್ಮ ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವರು. ಈ ಮೊದಲು ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗಾಗಿ ಪುನಶ್ಚೇತನ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ನಾನು ಕೆಲವು ಶಿಬಿರಗಳಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಿದೆ. ಮೇಲ್ವಿಚಾರಕರಲ್ಲಿ ವಿಷಯಜ್ಞಾನ ಮತ್ತು ತರಬೇತಿಯ ಕೊರತೆ ಎದ್ದು ಕಾಣುತ್ತಿತ್ತು. ಈಗ ಶಿಬಿರಗಳನ್ನು ಆಯೋಜಿಸುತ್ತಿಲ್ಲವೋ ಅಥವಾ ಸರ್ಕಾರದ ದಸ್ತಾವೇಜುಗಳ ಮಟ್ಟದಲ್ಲಿ ಮಾತ್ರ ದಾಖಲಾಗುತ್ತಿದೆಯೋ ತಿಳಿಯುತ್ತಿಲ್ಲ. 

    ಪುಸ್ತಕಗಳ ಓದಿನ ಸಂಸ್ಕೃತಿಯನ್ನು ಬಿತ್ತುವ ಕೆಲಸ ಆರೋಗ್ಯಕರ ಸಮಾಜದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಪುಸ್ತಕಗಳ ಮಹತ್ವವನ್ನು ನೊಬೆಲ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ ಹೀಗೆ ಹೇಳಿರುವರು-‘ನಾವು ನಮ್ಮ ನಾಯಕರುಗಳನ್ನು ರಾಜಕೀಯ ಕಾರ್ಯತಂತ್ರಕ್ಕಿಂತ ಅವರ ಓದಿನ ಅನುಭವವನ್ನಾಧರಿಸಿ ಆಯ್ಕೆ ಮಾಡಿದ್ದೆ ಆಗಿದ್ದಲ್ಲಿ ಈಗ ಭೂಮಿಯ ಮೇಲಿರುವ ದು:ಖಕ್ಕಿಂತ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’. ಈ ಮಾತನ್ನು ಅವರು ನೊಬೆಲ್ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಹೇಳಿರುವರು. ಈ ನಡುವೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕಗಳ ಡಿಜಿಟಲೀಕರಣಕ್ಕೆ ಮುಂದಾಗಿದೆ. ಡಿಜಿಟಲೀಕರಣದಿಂದ ಪುಸ್ತಕಗಳನ್ನು ಅಸಂಖ್ಯಾತ ಓದುಗರಿಗೆ ತಲುಪಿಸಬಹುದು ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು ನಿರ್ಣಯವಾಗುತ್ತದೆ. ಜೊತೆಗೆ ಡಿಜಿಟಲೀಕರಣಗೊಳ್ಳುತ್ತಿರುವ ಪುಸ್ತಕಗಳು ಯಾವುವು ಮತ್ತು ಯಾವ ವಯೋಮಾನದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಯೋಚನೆಮಾಡಬೇಕಾಗಿದೆ. ಇಲಾಖೆಯ ಜಾಲತಾಣದ ಮುಖಪುಟವನ್ನು ಆಕರ್ಷಣೀಯಗೊಳಿಸಿದ ಮಾತ್ರಕ್ಕೆ ಡಿಜಿಟಲೀಕರಣದ ಕಾರ್ಯವನ್ನು ಸಮರ್ಥಿಸಿಕೊಂಡಂತಾಗುವುದಿಲ್ಲ. ಒಟ್ಟಾರೆ ಇಲಾಖೆಯ ಪ್ರಯತ್ನ ‘ಟೊಳ್ಳುಗಟ್ಟಿ’ಯಂತಾಗಬಾರದು. ಡಿಜಿಟಲೀಕರಣಕ್ಕೆ ಖರ್ಚಾಗುವ ಹಣವನ್ನೇ ಯೋಗ್ಯ ಗುಣಮಟ್ಟದ ಪುಸ್ತಕಗಳ ಖರೀದಿಗಾಗಿ ವಿನಿಯೋಗಿಸಿದರೆ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಿದಂತಾಗುತ್ತಿತ್ತು. 

    ಒಂದುಕಡೆ ಅತಿಯಾದ ಮೊಬೈಲ್ ಬಳಕೆಯಿಂದ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿರುವ ಯುವಜನಾಂಗ. ಇನ್ನೊಂದುಕಡೆ ಗ್ರಂಥಾಲಯಗಳನ್ನು ತಮ್ಮ ಹೊತ್ತುಗಳೆಯುವ ತಾಣಗಳೆಂದು ಭಾವಿಸಿರುವ ವಯೋವೃದ್ಧರು. ಮತ್ತೊಂದುಕಡೆ ಸಂಚಾರಿ ಗ್ರಂಥಾಲಯ ಸೇವೆ ಸ್ಥಗಿತಗೊಂಡು ಧಾರಾವಾಹಿಗಳ ವೀಕ್ಷಕರಾಗಿ ಬದಲಾಗಿರುವ ಮನೆಯ ಗೃಹಿಣಿಯರು. ಈ ಎಲ್ಲರ ನಡುವೆ ಪುಸ್ತಕ ಮಳಿಗೆಗಳೇ ತಮ್ಮ ಓದಿನ ಶಮನಕ್ಕಿರುವ ಏಕೈಕ ಪರ್ಯಾಯಮಾರ್ಗವೆಂದು ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರು. ಹೀಗೆ ಸಾರ್ವಜನಿಕ ಗ್ರಂಥಾಲಯಗಳ ಓದುಗ ವರ್ಗ ವಿಭಿನ್ನ ಕವಲುಗಳಾಗಿ ಒಡೆದುಹೋಗಿದೆ. ಇಂಥ ಸನ್ನಿವೇಶದಲ್ಲಿ ಪುಸ್ತಕಗಳ ಓದಿನ ಸಂಸ್ಕೃತಿಯನ್ನು ಬಿತ್ತಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಗ್ರಂಥಾಲಯ ಇಲಾಖೆ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಕೊನೆಗೂ ಇಲಾಖೆ ಉತ್ತರದಾಯಿಯಾಗಿರಬೇಕಾದದ್ದು ತೆರಿಗೆ ಕಟ್ಟುತ್ತಿರುವ ಸಾರ್ವಜನಿಕರಿಗೆ ಎನ್ನುವ ಸತ್ಯ ಅರಿವಾಗಬೇಕು. 

-ರಾಜಕುಮಾರ ಕುಲಕರ್ಣಿ