Thursday, September 3, 2015

ಕತ್ತಿಯಂಚಿನ ದಾರಿ: ಸಾಹಿತ್ಯ ಮತ್ತು ಸಂಸ್ಕೃತಿ





              ರಹಮತ್ ತರೀಕೆರೆ ಕನ್ನಡದ ಸಮಕಾಲೀನ ಬರಹಗಾರರಲ್ಲಿ ಅತ್ಯಂತ ವಿಶಿಷ್ಠ ಬರಹಗಾರ. ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತು ನೂರಾರು ಲೇಖನಗಳನ್ನು ಬರೆದಿರುವ ಶ್ರೀಯುತರು ಅಂಕಣ ಬರಹಗಾರರಾಗಿಯೂ ಕನ್ನಡದ ಓದುಗರಿಗೆ ಪರಿಚಿತರು. ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನೂ ಸಾಮಾನ್ಯ ಓದುಗರಿಗೂ ಸುಲಭವಾಗಿ ಅವರ ಓದಿಗೆ ದಕ್ಕುವಂತೆ ಬರೆಯುವ ಶೈಲಿ ರಹಮತ್ ತರೀಕೆರೆ ಅವರಿಗೆ ಸಿದ್ಧಿಸಿದೆ. ವಿಶ್ವವಿದ್ಯಾಲಯಗಳಲ್ಲಿನ ಪಂಡಿತೊತ್ತಮರು ಸಾಮಾನ್ಯ ಓದುಗರನ್ನು ಕಡೆಗಣಿಸಿ ಗಂಭೀರ ಸಾಹಿತ್ಯದಲ್ಲಿ ಮುಳುಗಿರುವ ಈ ವೇಳೆ ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿದ್ದುಕೊಂಡೇ ರಹಮತ್ ತರೀಕೆರೆ ತಮ್ಮ ಸಾಹಿತ್ಯ ವಿಮರ್ಶೆಯನ್ನು ಪಾಂಡಿತ್ಯಪೂರ್ಣವೂ ಶುದ್ಧಶಾಸ್ತ್ರವೂ ಆಗದಂತೆ ಬರೆಯುತ್ತಾರೆ. ತಮ್ಮ ಬರಹ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದ ಓದುಗರಿಗೂ ತಲುಪಲಿ ಎನ್ನುವ ತುಡಿತ ಅವರದು. ಇದು ನಿಜವಾದ ಬರಹಗಾರನಲ್ಲಿರಬೇಕಾದ ಸಮಾಜದ ಕುರಿತಾದ ಕಾಳಜಿ. ಹೀಗೆ ಬರವಣಿಗೆ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದವರಿಗೂ ಹೋಗಿ ಮುಟ್ಟುವುದರಲ್ಲಿ ಬರಹಗಾರನ ಮತ್ತು ಆತನ ಬರವಣಿಗೆಯ ಸಾರ್ಥಕತೆ ಅಡಗಿದೆ. ಈ ಕಾರಣದಿಂದಲೇ ರಹಮತ್ ತರೀಕೆರೆ ಅವರ ಬರವಣಿಗೆಯ ಕೃಷಿ ಅನೇಕ ಕ್ಷೇತ್ರಗಳಿಗೆ ಚಾಚಿಕೊಂಡಿದೆ. ವಿಶ್ವವಿದ್ಯಾಲಯಗಳ ಪಂಡಿತೊತ್ತಮರು ಮಡಿವಂತಿಕೆ ಎಂದು ಮೂಗು ಮುರಿದು ದೂರ ಸರಿಸಿದ್ದನ್ನೆಲ್ಲ ರಹಮತ್ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವರು. ಅವರೇ ಹೇಳಿಕೊಂಡಂತೆ ಸಾಹಿತ್ಯ ಕೃತಿಯೊಂದಕ್ಕೆ ಪ್ರತಿಕ್ರಿಯಿಸುವುದು, ಪಂಥಗಳನ್ನು ಅಧ್ಯಯನ ಮಾಡುವುದು, ಮೂಲಭೂತವಾದಗಳಿಗೆ ಪ್ರತಿರೋಧಿಸುವುದು, ಕಣ್ಮರೆಯಾದ ಲೇಖಕನಿಗೆ ಸ್ಪಂದಿಸುವುದು, ಕಲಾವಿದನ ಸಾವಿಗೆ ಪ್ರತಿಕ್ರಿಯಿಸುವುದು ಹೀಗೆ ಅನೇಕ ಸಂದರ್ಭಗಳಲ್ಲಿ ಅವರಿಂದ ಸಾಹಿತ್ಯ ಸೃಷ್ಟಿಯಾಗಿದೆ. ಜನರ ನೆನಪುಗಳಿಂದ ಮಾಸಿಹೋದ ಕಲಾವಿದೆಯೋರ್ವಳ ಬದುಕನ್ನು ಸತತ ಐದು ವರ್ಷಗಳ ಹುಡುಕಾಟದಿಂದ ಸಂಗ್ರಹಿಸಿ ಬರೆದ 'ಅಮೀರಬಾಯಿ ಕರ್ನಾಟಕಿ' ರಹಮತ್ ತರೀಕೆರೆ ಅವರ ಅತ್ಯುತ್ತಮ ಕೃತಿಗಳಲ್ಲೊಂದು. ೨೦೦೬ ರಲ್ಲಿ ಪ್ರಕಟವಾದ ಅವರ 'ಕತ್ತಿಯಂಚಿನ ದಾರಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

                'ಕತ್ತಿಯಂಚಿನ ದಾರಿ' ಈ ಪುಸ್ತಕದಲ್ಲಿ ಒಟ್ಟು ೨೦ ಲೇಖನಗಳಿವೆ. ಈ ಎಲ್ಲ ಲೇಖನಗಳನ್ನು ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿ ಲೇಖನಗಳೆಂದು ಕರೆದಿರುವರು. ಲೇಖಕನಿಗೆ  ಎದುರಾಗುವ  ಬಹುಮುಖ್ಯ ಸವಾಲು  ಎಂದರೆ ಆತ ವರ್ತಮಾನದ ಸಮಸ್ಯೆಗಳಿಂದ ದೂರನಿಂತು  ಬರೆಯುವಂತಿಲ್ಲ. ತಾನು ಬದುಕುತ್ತಿರುವ ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಿ ಲೇಖಕ ಬರೆಯಬೇಕಾದ ಅನಿವಾರ್ಯತೆ ಇದೆ. ಸ್ಪಂದಿಸಿ ಬರೆದರೆ ಬರೆದ ಬರಹ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೇ ಲೇಖಕರು ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ಭಾವಿಸಿರುವರು. ಅಂಥದ್ದೊಂದು ಎಚ್ಚರಿಕೆಯಿಂದಲೇ ಅವರು ಕನ್ನಡ ಸಾಹಿತ್ಯದ ವಿಮರ್ಶೆ ಹಾಗೂ ಬರಹಗಾರರ ಮತ್ತು ಚಿಂತಕರ ನೆನಪಿಗಿಳಿಯುತ್ತಾರೆ. ಪುಸ್ತಕದ ಕೆಲವು ಲೇಖನಗಳು ಸಾಹಿತ್ಯ ವಿಮರ್ಶೆಯಾಗಿವೆ ಮತ್ತು ತಮ್ಮ ಆಪ್ತ ಲೇಖಕರನ್ನು ಸ್ಮರಿಸಿಕೊಂಡು ಬರೆದ ಲೇಖನಗಳು ಕೆಲವಿವೆ. ಇನ್ನುಳಿದಂತೆ ಆಯಾ ಸಂದರ್ಭಕ್ಕೆಹಾಗೂ ವಿದ್ಯಮಾನಗಳಿಗೆ  ಲೇಖಕರು ಪ್ರತಿಕ್ರಿಯಿಸಿ ಬರೆದ ಲೇಖನಗಳು ಒಂದಿಷ್ಟಿವೆ.

          ಪುಸ್ತಕದ ಪ್ರಾರಂಭದಲ್ಲಿ ಕುವೆಂಪು ಕುರಿತು ಲೇಖಕರು ಅಭಿಮಾನದಿಂದ ಬರೆದ ಲೇಖನವಿದೆ. ಲೇಖಕರು ವಿವರಿಸುವಂತೆ ಕುವೆಂಪು ಕೇವಲ ಬರಹಗಾರ ಮಾತ್ರವಲ್ಲ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಕನ್ನಡದಲ್ಲಿ ಅನೇಕ ಸಮುದಾಯಗಳನ್ನು ವೈಚಾರಿಕವಾಗಿ ಪ್ರಭಾವಿಸಿದ ಕುವೆಂಪು ಅವರನ್ನು ರಹಮತ್ ಬಸವಣ್ಣನೊಂದಿಗೆ ಹೋಲಿಸುತ್ತಾರೆ. ಕನ್ನಡದ ಅನೇಕ ಲೇಖಕರು, ಹೋರಾಟಗಾರರು, ರಾಜಕೀಯ ನೇತಾರರು ಕುವೆಂಪು ಅವರಿಂದ ಪ್ರಭಾವಿತರಾಗಿರುವುದರಿಂದ ಅವರೊಬ್ಬ ಬಹುಮುಖಿಗಳು, ಬಹುಪ್ರಕಾರಿಗಳು ಮತ್ತು ಬಹುವಿಷಯ ಚಿಂತಕರು ಎಂದು ಲೇಖಕರು ಕುವೆಂಪು ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತಾರೆ. ಇಲ್ಲಿ ಕುವೆಂಪು ಅವರಲ್ಲಿದ್ದ ಮಾನವೀಯತೆ ಮತ್ತು ತಾಯ್ತನದ ಗುಣವನ್ನು 'ಕುವೆಂಪು ಹಾದಿಬದಿಯ ಹೂವನ್ನು ಬಾಗಿ ಎತ್ತಿಕೊಳ್ಳುತ್ತಾರೆ' ಎಂಬ ರೂಪಕದಲ್ಲಿ ವರ್ಣಿಸುತ್ತಾರೆ. ಅಂಥದ್ದೊಂದು ತಾಯ್ತನದ ಗುಣದಿಂದಲೇ ಕುವೆಂಪು ಅವರಿಗೆ ಈ ಲೋಕ ದಮನಿಸಿದ ಜಗತ್ತನ್ನು, ನಿರ್ಲಕ್ಷಿಸಿದ ಸಂಗತಿಗಳನ್ನು ಪ್ರೀತಿಯಿಂದ ಕುತೂಹಲದಿಂದ ನೋಡಲು ಸಾಧ್ಯವಾಯಿತು. ಹಾಗಾದರೆ ಕುವೆಂಪು ಅವರನ್ನು ಕನ್ನಡದ ವಿಮರ್ಶಾಲೋಕ ಹೇಗೆ ಪರಿಭಾವಿಸಿದೆ. ಇಲ್ಲಿ ಲೇಖಕರು ಕುವೆಂಪು ವಿಮರ್ಶಾ ಲೋಕಕ್ಕೆ ದಕ್ಕಿದ ಪರಿಯನ್ನು ವಿಶ್ಲೇಷಿಸಲು ಮುಂದಾಗುತ್ತಾರೆ. ಸಂಸ್ಕೃತ ಭಾಷೆ ಮತ್ತು ಆಧ್ಯಾತ್ಮಿಕತೆಗೆ ಹತ್ತಿರವಾಗಿದ್ದ ಕುವೆಂಪು ವಚನ ಸಾಹಿತ್ಯ ಹಾಗೂ ಜನಪದ ಭಾಷೆಯಿಂದ ದೂರವಾಗಿ ಉಳಿದದ್ದೇ ಅವರನ್ನು ಕನ್ನಡದ ವಿಮರ್ಶಕರು ಅಪಾರ್ಥಮಾಡಿಕೊಳ್ಳಲು ಕಾರಣವಾಯಿತು ಎನ್ನುವುದು ಲೇಖಕರ ಅಭಿಮತ. ಈ ಸಂದರ್ಭ  ಲೇಖಕರಿಗೆ ಬೇಂದ್ರೆ ನೆನಪಾಗುತ್ತಾರೆ. ಬೇಂದ್ರೆ ಜನಪದ ಭಾಷೆಯನ್ನು ಪಳಗಿಸುತ್ತಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ. ಯಾವ ಸಾಂಸ್ಕೃತಿಕ ಸಂದರ್ಭ ಕುವೆಂಪು ಬೇಂದ್ರೆಯವರಿಗೆ ಇಂಥ 'ವಿರುದ್ಧ' ನೆಲೆಗಳತ್ತ ಹೋಗಲು ಪ್ರೇರೇಪಿಸಿತು ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುತ್ತಾರೆ. ಕುವೆಂಪು ದಲಿತ ಬದುಕಿನ ಆಳಕ್ಕೆ ಇಳಿಯದಿರುವುದು ಹಾಗೂ ತಮ್ಮ ಕೃತಿಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತರನ್ನು ಕೇಡಿಗಳನ್ನಾಗಿ ಚಿತ್ರಿಸಿರುವರು ಎಂದ ವಿಮರ್ಶಕರ ಆರೋಪವನ್ನು ಲೇಖಕರು  ಇಲ್ಲಿ ಉಲ್ಲೇಖಿಸುವಾಗ ಆ ಸಂದರ್ಭದ ವರ್ತಮಾನ ಕುವೆಂಪು ಅವರಿಗೆ ಹೀಗೆ ಪ್ರೇರೇಪಿಸಿರಬಹುದು ಎಂದು ರಾಷ್ಟ್ರಕವಿಯ ಪರ ಮೆದು ಧೋರಣೆ ತಾಳುತ್ತಾರೆ. ಒಟ್ಟಾರೆ ಕುವೆಂಪು ಸಾಹಿತ್ಯವನ್ನು ಹೊಸ ದೃಷ್ಟಿಕೋನದ ಬೆಳಕಿನಲ್ಲಿ ಪುನರ್ವಿಮರ್ಶಿಸುವ ಕೆಲಸವಾಗಬೇಕಿದೆ ಮತ್ತು ಕನ್ನಡದ ಪರಂಪರೆ ಇಂತಹ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ ಎನ್ನುವ ಆಶಯ ಲೇಖಕರದು.

    'ಶೂನ್ಯಸಂಪಾದನೆ ಹಾಗೂ ಡೆಮಾಕ್ರಸಿ' ಲೇಖನದಲ್ಲಿ ಲೇಖಕರು ತಮ್ಮ ವಿಮರ್ಶೆಗಾಗಿ ವಚನಗಳನ್ನು  ಕೈಗೆತ್ತಿಕೊಳ್ಳುತ್ತಾರೆ. ವಚನಗಳ ಸೃಷ್ಟಿ ಕನ್ನಡ ಸಾಹಿತ್ಯದ ಬಹುಮುಖ್ಯವಾದ ಬೆಳವಣಿಗೆ. ೧೨ ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡ ಸಾಮಾಜಿಕ ಪಲ್ಲಟಗಳಿಗೆ ವಚನಗಳ ಕೊಡುಗೆ ಅಪಾರವಾಗಿದೆ. ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಮುಕ್ತಾಯಕ್ಕ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ ಅನೇಕ ವಚನಕಾರರು ಮತ್ತು ವಚನಕಾರ್ತಿಯರು ವಚನಗಳ ಮೂಲಕ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಮೇಲ್ವರ್ಗದ ಹಾಗೂ ಕೆಳವರ್ಗದ ವಚನಕಾರರು ಜೊತೆಯಾಗಿಯೇ ಸಾಮಾಜಿಕ ಅಸಮಾನತೆ ವಿರುದ್ಧ ಚಳವಳಿಯನ್ನು ಸಂಘಟಿಸಿದ್ದು ೧೨ನೇ ಶತಮಾನದಲ್ಲಿ ಕಾಣಿಸಿಕೊಂಡ ಹೋರಾಟದ ವೈಶಿಷ್ಥ್ಯತೆಗಳಲ್ಲೊಂದು. ಆ ಕಾಲದಲ್ಲಿ ರಚನೆಯಾದ ವಚನಗಳ ಉದ್ದೇಶ ಹಾಗೂ ಅವುಗಳು ಉಂಟುಮಾಡಬಹುದಾದ ಪರಿಣಾಮದಲ್ಲಿ ಸಮನ್ವಯತೆ ಇದ್ದಂತೆ ಅಲ್ಲಿ ವೈರುಧ್ಯಗಳೂ ಇವೆ. ಇದಕ್ಕೆಲ್ಲ ವಚನಗಳು ಅನೇಕ ಜಾತಿ, ಸಮುದಾಯಗಳಿಗೆ ಸೇರಿದ ನೂರಾರು ಜನರಿಂದ ರಚನೆಯಾದದ್ದೇ ಬಹುಮುಖ್ಯ ಕಾರಣ. ವಿಶೇಷವಾಗಿ ವಚನಗಳಲ್ಲಿ ಕೆಳವರ್ಗದ ವಚನಕಾರರು ಪ್ರಶ್ನೆಗಳನ್ನೆತ್ತುತ್ತಾರೆ. ಅದಕ್ಕೆ ಉದಾಹರಣೆಯಾಗಿ ನಾವು ಮಡಿವಾಳಯ್ಯನ ಈ ನುಡಿಯನ್ನು ಗಮನಿಸಬೇಕು 'ಮರಳುಗೊಂಡೆಯಲ್ಲಾ ಬಸವಣ್ಣಾ ಪಿತ್ತತಲೆಗೇರಿತೆ ನಿನಗೆ'. ವಚನ ಸಾಹಿತ್ಯದಲ್ಲಿ ಈ ವೈವಿಧ್ಯತೆಯನ್ನೇ ಲೇಖಕ ರಹಮತ್ ತರೀಕೆರೆ ಅವರು ಸಂವಾದ ಅಥವಾ ವಾಗ್ವಾದವೆಂದು ಗುರುತಿಸುತ್ತಾರೆ. ತಮ್ಮ ಈ ಹೇಳಿಕೆಗೆ ನಿದರ್ಶನವಾಗಿ ಅವರು ಅಲ್ಲಮ-ಬಸವಣ್ಣ, ಅಲ್ಲಮ-ಸಿದ್ಧರಾಮ, ಅಲ್ಲಮ-ಅಕ್ಕಮಹಾದೇವಿ, ಅಲ್ಲಮ-ಮುಕ್ತಾಯಕ್ಕ ಅವರ ನಡುವಿನ ವಾಗ್ವಾದಗಳನ್ನು ಹೆಸರಿಸುತ್ತಾರೆ. ಹೀಗೆ ಚರ್ಚೆ, ಸಂವಾದ, ಭಿನ್ನಮತದ ಹಿನ್ನೆಲೆಯಲ್ಲಿ ರಚನೆಯಾದ ವಚನಗಳನ್ನು ಆಧಾರವಾಗಿಟ್ಟುಕೊಂಡು  ೪೦೦ ವರ್ಷಗಳ ನಂತರ ಅಂದರೆ ೧೬ ನೇ ಶತಮಾನದಲ್ಲಿ ಶಿವಗಣಪ್ರಸಾದಿ 'ಶೂನ್ಯಸಂಪಾದನೆ' ಕೃತಿಯನ್ನು ರಚಿಸುತ್ತಾನೆ. ಮೂಲವಚನಗಳ ಮುಖ್ಯ ಆಶಯ ಹಾಗೂ ಅವುಗಳ ನಡುವಣ ವೈರುಧ್ಯವನ್ನು ಆಧಾರವಾಗಿಟ್ಟುಕೊಂಡು 'ಶೂನ್ಯಸಂಪಾದನೆ' ಕೃತಿಯನ್ನು ವಿಮರ್ಶಿಸುವ ಲೇಖಕರಿಗೆ ಈ ಕೃತಿ ಚರ್ಚೆ ಬೆಳೆಸುವ ಡೆಮಾಕ್ರಟಿಕ್ ಗುಣದ ಭಾಗವಾಗಿ ಕಾಣಿಸುತ್ತದೆ. 'ಶೂನ್ಯಸಂಪಾದನೆ' ಯ ಡೆಮಾಕ್ರಟಿಕ್ ಗುಣಕ್ಕೆ ಲೇಖಕರು ಕೊಡುವ ಕಾರಣಗಳು ಹೀಗಿವೆ

೧. ಶೂನ್ಯಸಂಪಾದನೆಯದು ಪ್ರಜಾಪ್ರಭುತ್ವ ಸತ್ವವುಳ್ಳ ಸಂವಾದದ ಸ್ವರೂಪ.
೨. ಶೂನ್ಯಸಂಪಾದನೆಯಲ್ಲಿರುವ ಜಾನಪದ ಪರಂಪರೆಯ ಗುಣ. ಅಂದರೆ ಹಠಮಾರಿಯಾಗದೆ ಸಹಿಸುವ, ಸರಿಕಂಡಿದ್ದೆಲ್ಲವನ್ನೂ ಒಳಗೊಳ್ಳುವ ಗುಣ. ಹಾಗೆ ಒಳಗೊಂಡದ್ದನ್ನು ಅರಗಿಸಿಕೊಂಡು ಮೂರನೆಯದೊಂದನ್ನು ಹುಟ್ಟಿಸಲು ಯತ್ನಿಸುವ ಸಮನ್ವಯ ಗುಣ.
೩. 'ಸೇರುವೆ ತಪ್ಪುಳ್ಳೊಡೆ ನಿಮ್ಮ ಪರಿಜ್ಞಾನದಿಂದ ತಿದ್ದಿ' ಎಂದು ಶಿವಗಣಪ್ರಸಾದಿ ತನ್ನ ಕೃತಿಗೆ ಕೊಡುವ ಡೆಮಾಕ್ರಟಿಕ್ಕಾದ ಕೊನೆ.

               ಆದರೆ ಲೇಖಕರ ವಿರೋಧವಿರುವುದು ಡೆಮಾಕ್ರಟಿಕ್ ಗುಣವಿರುವ 'ಶೂನ್ಯ ಸಂಪಾದನೆ' ಕೃತಿಯನ್ನು ವೀರಶೈವ ಸಮುದಾಯದ ಧರ್ಮಶಾಸ್ತ್ರವೆಂದು ಸೀಮಿತಗೊಳಿಸುತ್ತಿರುವ ಬೆಳವಣಿಗೆ ಕುರಿತು. ತಮಗೊಂದು ಸೂಕ್ತವಾದ ಧರ್ಮಶಾಸ್ತ್ರವಿಲ್ಲವೆಂದು ಕೊರಗುತ್ತಿದ್ದ ವೀರಶೈವ ಮತದವರಿಗೆ 'ಶೂನ್ಯ ಸಂಪಾದನೆ' ಒಂದು ದಾರಿದೀಪವಾಗಿ ಕಂಡಿತು. ಪರಿಣಾಮವಾಗಿ ಆಧುನಿಕ ವೀರಶೈವ ವಿದ್ವಾಂಸರು 'ಶೂನ್ಯ ಸಂಪಾದನೆ'ಯನ್ನು ವೀರಶೈವ ಧರ್ಮದ ಧರ್ಮಗ್ರಂಥವೆಂದು ಉದ್ಘೋಷಿಸಿದರು. ಅನೇಕ ಸಮುದಾಯಗಳಿಗೆ ಸೇರಿದ ವಚನಕಾರರು ರಚಿಸಿದ ವಚನಗಳಲ್ಲಿನ ಮುಕ್ತತೆ ಯಾವುದೇ ಒಂದು ಧಾರ್ಮಿಕ ಸಮುದಾಯವನ್ನು ಸಂಘಟಿಸುವಲ್ಲಿ ತೊಡಕಾಗಿರುವುದರಿಂದ 'ಶೂನ್ಯ ಸಂಪಾದನೆ' ಕೃತಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದನ್ನು ಲೇಖಕರು ಒಪ್ಪುವುದಿಲ್ಲ. ವೀರಶೈವ ಧರ್ಮಕ್ಕೆ ವ್ಯತಿರಿಕ್ತವಾದ ಅನೇಕ ಸಂಗತಿಗಳು ಶೂನ್ಯ ಸಂಪಾದನೆ ಕೃತಿಯಲ್ಲಿರುವುದನ್ನು ಲೇಖಕರು ತಮ್ಮ ವಿರೋಧದ ನಿಲುವಿಗೆ ಪ್ರಮುಖ ಕಾರಣಗಳಾಗಿ ಉದಾಹರಿಸುವರು.

೧. ಸಿದ್ಧರಾಮ ಲಿಂಗದೀಕ್ಷೆ ಪ್ರಕರಣದಲ್ಲಿ ಇಷ್ಟಲಿಂಗ ಅಗತ್ಯವಿಲ್ಲ ಎಂಬ ವಾದವು ಕೊನೆಗೆ ಗೆಲ್ಲುವುದು.
೨. ಅಲ್ಲಮನನ್ನು ಕೃತಿಯ ನಾಯಕನನ್ನಾಗಿ ಮಾಡಿರುವುದು. ಅಲ್ಲಮನನ್ನು ಇಟ್ಟುಕೊಂಡು ವೀರಶೈವ ಸಿದ್ಧಾಂತ ಕಟ್ಟುತ್ತೇನೆ ಎಂಬುದೆ ಕಷ್ಟದ ಕೆಲಸ. ಏಕೆಂದರೆ ಅಲ್ಲಮನೊಬ್ಬ ಮಹಾ ತಿರುಗಾಡಿ. ತಿರುಗಾಟಕ್ಕೂ ಮತ್ತು ಸಾಂಸ್ಥಿಕವಲ್ಲದ ಧರ್ಮಕ್ಕೂ ಸಂಬಂಧವಿದೆ (ಆದರೆ ವೀರಶೈವ ಸಾಂಸ್ಥಿಕ ಧರ್ಮ).
 
         ಹೀಗಿದ್ದೂ ಶಿವಗಣಪ್ರಸಾದಿ ತನ್ನ 'ಶೂನ್ಯ ಸಂಪಾದನೆ'ಯನ್ನು ವೀರಶೈವ ಸಮುದಾಯದ ಧರ್ಮಗ್ರಂಥವೆಂದು ಬಿಂಬಿಸಲು ಪ್ರಯತ್ನಿಸಿರುವನು ಎನ್ನುವುದು ಲೇಖಕರ ಆರೋಪ. ಅದಕ್ಕೆ ಉದಾಹರಣೆಯಾಗಿ ಕೃತಿಯಲ್ಲಿನ ಕೆಲವು ನ್ಯೂನ್ಯತೆಗಳನ್ನು ಪಟ್ಟಿ ಮಾಡುತ್ತಾರೆ.

೧. ಕೆಳವರ್ಗದ ವಚನಕಾರರಿಗೆ ಈ ಕೃತಿಯಲ್ಲಿ ತಮ್ಮ ವಾದವನ್ನು ಮಂಡಿಸಲು ಅವಕಾಶ ದೊರೆತಿಲ್ಲ.
೨. ೯೫೯ ವಚನಗಳಲ್ಲಿ ೮೦೦ ವಚನಗಳು ಮೇಲ್ವರ್ಗದ ವಚನಕಾರರದಾಗಿವೆ.
೩. ಬಸವಣ್ಣನ ಸಂಗಾತಿಗಳಾಗಿದ್ದ ನೂರಾರು ಕೆಳವರ್ಗದ ವಚನಕಾರರು ಇಲ್ಲಿಲ್ಲ.

     ನಿಸಾರ್ ಅಹ್ಮದ್, ಪೂರ್ಣಚಂದ್ರ ತೇಜಸ್ವಿ, ಶಾಂತಿನಾಥ ದೇಸಾಯಿ, ಶಿವರಾಮ ಕಾರಂತರ ಬರವಣಿಗೆಯ ವಿಮರ್ಶೆ ಕೃತಿಯ ಮುಖ್ಯ ಭಾಗಗಳಲ್ಲೊಂದು. ಮುಸ್ಲಿಂ ಬರಹಗಾರರ ಬರವಣಿಗೆಯನ್ನು  ಒಂದಿಷ್ಟು ಅನುಮಾನದಿಂದ ನೋಡುವುದು ವಿಮರ್ಶಾ ಲೋಕದಲ್ಲಿ ಸಾಮಾನ್ಯವಾಗಿ ಬೆಳೆದು ಬಂದಿರುವ ಸಂಗತಿಗಳಲ್ಲೊಂದು. ಇಂಥದ್ದೊಂದು ಅನುಮಾನವನ್ನು ತನ್ನದಲ್ಲದ ಜಾತಿ ಸಮುದಾಯದ ಕುರಿತು ಲೇಖಕ ಬರೆದಾಗಲೂ ಆತ ಎದುರಿಸಬೇಕಾಗುತ್ತದೆ. ಈ ಸಂದರ್ಭ ಚೋಮನ ದುಡಿ ಬರೆದ ಕಾರಂತರನ್ನು ನೆನಪಿಸಿಕೊಳ್ಳಬಹುದು. ಗಾಂಧಿಯಂಥ ಅಪ್ರತಿಮ ಹೋರಾಟಗಾರನನ್ನೇ ಅಸ್ಪೃಶ್ಯತಾ ಆಚರಣೆಯ ವಿರುದ್ಧದ ಹೋರಾಟ ಹಾಗೂ ಹರಿಜನರ ಕುರಿತಾದ ಆತನ ಬರವಣಿಗೆಯನ್ನು ಗುಮಾನಿಯಿಂದ ನೋಡಿದ ಅನೇಕ ಉದಾಹರಣೆಗಳಿವೆ. ಈ ನೆಲದ ಭಾಷೆ ಸಂಸ್ಕೃತಿ ಕುರಿತು ಬರೆಯುವಾಗ ನಿಸಾರ್ ಅಹ್ಮದ್ ಅವರ ಕಾವ್ಯ ಒಂದು ಬಗೆಯ ಸಾಂಸ್ಕೃತಿಕ ಕಷ್ಟಗಳಿಗೆ ಸಿಲುಕುತ್ತದೆ. ಲೇಖಕನಾದವನು ತನ್ನ ಧಾರ್ಮಿಕ ಸಮುದಾಯದ ಅನುಭವದ ಜೊತೆ ಅನುಸಂಧಾನ ಮಾಡಲು ಕೆಲವೊಮ್ಮೆ ಹಿಂಜರಿಯಬಹುದು. ಇದನ್ನೇ ಲೇಖಕ ರಹಮತ್ ತರೀಕೆರೆ ಸೃಜನಶೀಲತೆಯ ಕಷ್ಟ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟು ಎಂದು ಕರೆಯುತ್ತಾರೆ. ಜೊತೆಗೆ ಕನ್ನಡದಲ್ಲಿ ಇತರ ಮುಸ್ಲಿಂ ಬರಹಗಾರರಿಗೆ ಎದುರಾಗದ ಸಾಂಸ್ಕೃತಿಕ ಕಷ್ಟ ನಿಸಾರ್ ಅವರಿಗೇ ಎದುರಾಗಲು ಕಾರಣಗಳಾದರೂ ಏನು ಎಂದು ಹುಡುಕಲು ಹೊರಟಾಗ ಅವರು ಕಂಡುಕೊಂಡ ಉತ್ತರ ಉಳಿದವರು ನಿಸಾರರಂತೆ ಕವಿಗಳಲ್ಲ ಎಂದು. ಇತರ ಮುಸ್ಲಿಂ ಲೇಖಕರು ಕಥೆ ಕಾದಂಬರಿ ಪ್ರಕಾರಗಳ ಮೂಲಕ ಮುಸ್ಲಿಂ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ಯಾವುದೇ ಮುಜುಗರಕ್ಕೆ ಒಳಗಾಗಲಿಲ್ಲ. ಜೊತೆಗೆ ನಿಸಾರ್ ಅಹ್ಮದ್ ಬರೆಯಲು ಪ್ರಾರಂಭಿಸಿದ ಮೊದಲ ದಿನಗಳಲ್ಲಿ ಮುಸ್ಲಿಂ ಲೇಖಕರು ಬಹಳ ಇರಲಿಲ್ಲ. ಹೀಗಾಗಿ ತನ್ನ ಸಮುದಾಯದ ಅನುಭವವನ್ನು ಬಳಸಿಕೊಳ್ಳುವುದಕ್ಕೆ ಮುಜುಗರ ಪಡುವ ಸನ್ನಿವೇಶವಿತ್ತು ಎನ್ನುವುದು ಲೇಖಕರ ಅಭಿಮತ. ಕಾಲಾನಂತರದಲ್ಲಿ ನಿಸಾರ್ ಅಹ್ಮದ್ ಅವರ ಬರವಣಿಗೆ ಸಾಂಸ್ಕೃತಿಕ ಕಷ್ಟಗಳಿಂದ ಪಾರಾಯಿತು ಎನ್ನುವುದಕ್ಕೆ ರಹಮತ್ ಅವರು ಕೊಡುವ ಉದಾಹರಣೆಯನ್ನು ಗಮನಿಸಬೇಕು, 'ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ' ಎಂದು ಸಂಭ್ರಮಿಸಿದ ಕವಿಯಲ್ಲಿ ಮುಂದೊಂದು ದಿನ 'ನಾಡ ದೇವಿಯೇ ನಿನ್ನ ಮಡಿಲಲ್ಲಿ ಕಂಡೆ ಎಂಥ ದೃಶ್ಯ ಒಂದೆದೆಯ ಹಾಲು ಕುಡಿದವರ ನಡುವೆ ಎಷ್ಟೊಂದು ಭೇದ ತಾಯೆ' ಎಂಬ ದುಗುಡವು ತನ್ನ ಶ್ರದ್ಧೆಯನ್ನು ತಾನೇ ಭಗ್ನಗೊಳಿಸಿಕೊಂಡು ಹುಟ್ಟುತ್ತದೆ.

   ಪೂರ್ಣಚಂದ್ರ ತೇಜಸ್ವಿ ಅವರ ಬರವಣಿಗೆಯ ವೈರುಧ್ಯಗಳನ್ನು ರಹಮತ್ ತರೀಕೆರೆ ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಮನುಷ್ಯನ ಕಲ್ಪನೆಗೂ ಎಟುಕದ ಪ್ರಕೃತಿಯ ಒಳಗನ್ನು ತೇಜಸ್ವಿ ಅತ್ಯಂತ ನಿರಾಯಾಸವಾಗಿ ಪ್ರವೇಶಿಸಿ ಅದರೊಳಗಿನ ಅಚ್ಚರಿ ಮತ್ತು ಅದ್ಭುತಗಳನ್ನು ತಮ್ಮ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಂಡು ಅತ್ಯುತ್ತಮ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ತೇಜಸ್ವಿ ಅವರ ಒಟ್ಟಾರೆ ಬರವಣಿಗೆಯ ಕ್ರಮವನ್ನು ಲೇಖಕರು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸಂಗತಿ, ಒಂದು ವಸ್ತುವಿನ ಹಿಂದೆ ವಿಸ್ತಾರವಾದ ಸಮಾಜವಿದೆ ಎನ್ನುವ ಅರಿವಿನಲ್ಲಿ ಹುಟ್ಟುವ ಕಥನ ಮತ್ತು ಮನುಷ್ಯರ ಜೊತೆ ಪ್ರಾಣಿ, ಗಿಡ, ಬಳ್ಳಿ, ಹಳ್ಳ, ಕೀಟ, ಮಳೆ, ಗಾಳಿ ಸಮಸ್ತ ಚರಾಚರಗಳನ್ನು ಒಟ್ಟಿಗೆ ನೋಡುತ್ತ ಬರೆಯುವ ಕಥನ ಎಂದು ವಿಭಾಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಅವರ 'ಮಾಯಾಲೋಕ' ಕೃತಿ ಇಲ್ಲಿ ವಿಮರ್ಶೆಗೆ ಒಳಪಡುತ್ತದೆ. ತೇಜಸ್ವಿ ನಿಸರ್ಗಕ್ಕೆ ಮುಖಾಮುಖಿಯಾಗಿ ನಿಂತು 'ಮಾಯಾಲೋಕ' ದಂಥ ಕೃತಿ ರಚಿಸಲು ಸಾಮಾಜಿಕ ಬದುಕಿನ ಅನುಭವದ ಒಳಹರಿವು ಅವರಿಗೆ ಕಡಿಮೆಯಾದದ್ದೆ ಬಹುಮುಖ್ಯ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಅಂಥದ್ದೊಂದು ಅನುಭವದ ಕೊರತೆ ತುಂಬಿಕೊಳ್ಳಲು ತೇಜಸ್ವಿ ಹೊಸ ಉಪಾಯಗಳನ್ನು ಕಂಡುಕೊಳ್ಳುತ್ತಲೇ ಬಂದರು ಎಂದೆನ್ನುವ ರಹಮತ್ ಒಟ್ಟಾರೆ ಈ ಹೊಸ ಅನುಭವ ಅವರ ಕಥನಕ್ಕೆ ಹೊಸ ದೃಷ್ಟಿಕೋನಗಳನ್ನು ಪಡೆದುಕೊಳ್ಳಲು ಕಾರಣವಾಯಿತು ಎನ್ನುತ್ತಾರೆ. ಅವರು ತೇಜಸ್ವಿ ಅವರ ಒಟ್ಟು ಬರವಣಿಗೆಯಲ್ಲಿನ ಕೊರತೆಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ

೧. ಜುಗಾರಿ ಕ್ರಾಸಿನಲ್ಲಿ ಬರುವ ಒಂದು ಸಾಂಕೇತಿಕ ಪಾತ್ರ ಬಿಟ್ಟರೆ ತೇಜಸ್ವಿ ಕಥನದ ಯಾವ ಶೋಧದಲ್ಲಿಯೂ ಸ್ತ್ರೀಯಿಲ್ಲ.
೨. ತೇಜಸ್ವಿ ತಮ್ಮ  ಕಥನದಲ್ಲಿ ಹಾಗೂ ಶೋಧದಲ್ಲಿ ಗಂಡು ಪ್ರಧಾನ ಮನೋಭಾವದಿಂದ ಹೊರಬರಲು ಆಗುತ್ತಿಲ್ಲ.
೩. ತೇಜಸ್ವಿ ಅವರ ಬರಹದಲ್ಲಿ ಸಮಾಜದ ವರ್ಗವೈರುಧ್ಯಗಳು ತೀವ್ರ ಪ್ರಶ್ನೆಗೆ ಒಳಗಾಗುವುದಿಲ್ಲ.
೪. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಮಹಾಸೆಳೆತ ಅವರನ್ನು ಪಶ್ಚಿಮ ಆಧುನಿಕತೆಯನ್ನು ಅವಿಮರ್ಶಾತ್ಮಕವಾಗಿ ನೋಡುವಂತೆ ಮಾಡಿದೆ.

      ಶಾಂತಿನಾಥ ದೇಸಾಯಿ ಅವರ ಕುರಿತು ವಿಮರ್ಶಿಸುವಾಗ ಲೇಖಕರು ಕನ್ನಡದ ನವ್ಯ ಲೇಖಕರಲ್ಲೊಬ್ಬರಾದ ಇವರು ಯಾವ ತಾತ್ವಿಕ ಇಕ್ಕಟ್ಟುಗಳಿಗೂ ಸಿಲುಕದೆ ಆಧುನಿಕತೆಯ ಪರವಾಗಿ ನಿಂತರು ಎಂದು ಮೆಚ್ಚುಗೆಯ ನುಡಿಗಳನ್ನಾಡುತ್ತಾರೆ. ಹೀಗೆ ಹೇಳುವಾಗ ಅವರಿಗೆ ವೈದಿಕ ಸನಾತನತೆಯ ವಿರುದ್ಧ ದಂಗೆ ಎಳುವಂತಹ (ಸಂಸ್ಕಾರ) ಅಥವಾ ಆಧುನಿಕತೆ ವಿರೋಧಿಸುತ್ತ ಸಾಂಪ್ರದಾಯಿಕ ಸಮಾಜವನ್ನು ಸಮರ್ಥಿಸುವಂತಹ (ಸೂರ್ಯನ ಕುದುರೆ) ತಾತ್ವಿಕ ಇಕ್ಕಟ್ಟುಗಳ ನಡುವೆ ಬರೆದ ಅನಂತಮೂರ್ತಿ ನೆನಪಾಗುತ್ತಾರೆ. ಆದರೆ ಶಾಂತಿನಾಥ ದೇಸಾಯಿಯವರು ಮಾತ್ರ ಯಾವ ಇಕ್ಕಟ್ಟುಗಳಿಗೂ ಸಿಲುಕದೆ ಕೊನೆಯತನಕ ಆಧುನಿಕತೆಯ ಆರಾಧಕರಾಗಿಯೇ ಉಳಿದರು. ಶಾಂತಿನಾಥ ದೇಸಾಯಿ ಅವರ ಬರವಣಿಗೆಯಲ್ಲಿನ ಆಧುನಿಕ ದೃಷ್ಟಿಕೋನವನ್ನು ರಹಮತ್ ಈ ಕೆಳಗಿನ ಸಂಗತಿಗಳ ಮೂಲಕ ಗುರುತಿಸುತ್ತಾರೆ,

೧. ದೇಸಾಯಿಯವರ ಕಥನ ಲೋಕ ಬಿಡುಗಡೆಗೊಳ್ಳಲು ಬಯಸುವ ಸ್ತ್ರೀ ಸಮುದಾಯವನ್ನು ಅತ್ಯಂತ ತೀವ್ರವಾಗಿ ಚಿತ್ರಿಸುತ್ತದೆ.
೨. ದೇಸಾಯಿ ಕಥೆಗಳ ಸ್ತ್ರೀಯರು ಸ್ವತಂತ್ರ ವ್ಯಕ್ತಿತ್ವವುಳ್ಳವರು ಮತ್ತು ಧೀಮಂತಿಕೆ ಉಳ್ಳವರು.
೩. ದೇಸಾಯಿ ಅವರ ಕತೆಗಳಲ್ಲಿ ತಮ್ಮನ್ನು ನಿಯಂತ್ರಿಸುವ ಸಂಪ್ರದಾಯಗಳ ವಿರುದ್ಧ ಸ್ವತಂತ್ರಗೊಂಡ ಕಿರಿಯ ತಲೆಮಾರು ಮುಖಾಮುಖಿಮಾಡುವುದು ಕಡ್ಡಾಯವೆಂಬಂತೆ ಇದೆ.
೪. ದೇಸಾಯಿ ಕತೆಗಳ ಹೆಚ್ಚಿನ ನಾಯಕರು ಕ್ರೈಸ್ತ ಮಹಿಳೆಯರನ್ನು ಸಂಗಾತಿಗಳನ್ನಾಗಿ ಪಡೆದವರು.

        ಪುಸ್ತಕದ ಒಂದು ಭಾಗದಲ್ಲಿ ಕೆ ವಿ ಸುಬ್ಬಣ್ಣ, ಲಂಕೇಶ್, ಶಂಕರ್ ಮೊಕಾಶಿ ಪುಣೇಕರ, ಚೆನ್ನಯ್ಯನವರ ಕುರಿತಾದ ಗಾಢ ನೆನಪುಗಳಿವೆ. ಇಲ್ಲಿ ಅವರ ಬರವಣಿಗೆಯ ವಿಮರ್ಶೆ ಎನ್ನುವುದಕ್ಕಿಂತ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವರು. ನೀನಾಸಂ ಮೂಲಕ ಹೆಗ್ಗೋಡಿನಂಥ ಸಣ್ಣ ಊರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೆ ವಿ ಸುಬ್ಬಣ್ಣ ಅವರನ್ನು ನನ್ನ ಮನಸ್ಸನ್ನು ಬೆಳೆಸಿದ ಕನ್ನಡದ ಚಿಂತಕರಲ್ಲೊಬ್ಬರು ಎಂದು ಸ್ಮರಿಸಿಕೊಳ್ಳುತ್ತಾರೆ. ತಾತ್ವಿಕ ಭಿನ್ನಾಭಿಪ್ರಾಯ ಇರಿಸಿಕೊಂಡೂ ಮನುಷ್ಯ ಪ್ರೀತಿ ತೋರುವ ಮತ್ತು ವೈಯಕ್ತಿಕವಾಗಿ ಪರಸ್ಪರ ಗೌರವಿಸುವ ಸುಬ್ಬಣ್ಣನವರ   ಮನೋಭಾವ ಲೇಖಕರಿಗೆ ಮೆಚ್ಚುಗೆ ಯಾಗುವ ಗುಣಗಳಲ್ಲೊಂದು. ಹೀಗಿದ್ದೂ ನೀನಾಸಂ ಶೂದ್ರರು ಹಾಗೂ ದಲಿತರಿಗೆ ಯಾಕೆ ಅದು ನಮ್ಮದು ಎಂದೆನಿಸಿಲ್ಲ. ಎಡಪಂಥಿಯರು ಹಾಗೂ ದಲಿತರು ಯಾಕೆ ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ? ಲಂಕೇಶ್, ತೇಜಸ್ವಿ, ದೇವನೂರ ಮುಂತಾದ ಎಷ್ಟೋ ಲೇಖಕರು ಹೆಗ್ಗೋಡಿನ ಜೊತೆ ಗುರುತಿಸಿಕೊಳ್ಳಲು ಯಾಕೆ ಬಯಸಲಿಲ್ಲ? ಎನ್ನುವ ಪ್ರಶ್ನೆಗಳು ಲೇಖಕರನ್ನು ಕಾಡುತ್ತವೆ. ತಮ್ಮ ಗುರುಗಳಾದ ಚನ್ನಯ್ಯನವರನ್ನು ಕುರಿತು ಬರೆಯುವಾಗ  ರಹಮತ್ ಹೆಚ್ಚು ಆರ್ದ್ರರಾಗುತ್ತಾರೆ. ಅಷ್ಟೊಂದು ಮಹತ್ವಾಕಾಂಕ್ಷಿಯಲ್ಲದ, ಅಧಿಕಾರಕ್ಕಾಗಿ ಹಂಬಲಿಸದ, ಯಾರೊಂದಿಗೂ ಸ್ಪರ್ಧೆಗಿಳಿಯದ ಈ ಗುಣಗಳೇ ಚನ್ನಯ್ಯನವರು ನೈತಿಕತೆಯನ್ನು ಕಳೆದುಕೊಳ್ಳದಂತೆ ಬದುಕಲು ಕಾರಣಗಳಾಗಿರಬಹುದು ಎನ್ನುವ ಅನಿಸಿಕೆ ಲೇಖಕರದು. ಚನ್ನಯ್ಯನವರ ಮಹತ್ವಾಕಾಂಕ್ಷೆಯಂತೆ ಅವರ ಅವರ ಬರವಣಿಗೆ ಕೂಡ ಬಹಳ ಕಡಿಮೆ. ನಿವೃತ್ತಿಯ ನಂತರ ತೀರ ಒಂಟಿಯಾಗಿ ಬದುಕಿದ ಚನ್ನಯ್ಯನವರಿಗೆ ಸಾವು ಮತ್ತು ಅದರ ಕಠೋರತೆ ಅವರ ಬದುಕಿನ ಕಲ್ಪನೆಯನ್ನು ಗಾಢವಾಗಿ ಪ್ರಭಾವಿಸಿತೆನ್ನುವ ಲೇಖಕರು ಒಟ್ಟಾರೆ ಅವರು ಸಾವನ್ನು ಧೇನಿಸುತ್ತಿದ್ದ ಲೇಖಕನಾಗಿದ್ದರು ಎನ್ನುತ್ತಾರೆ.

    ಲಂಕೇಶ್ ೨೦ ನೇ ಶತಮಾನದ ಕರ್ನಾಟಕ ಸೃಷ್ಟಿಸಿದ ಮುಖ್ಯ ಸಾಂಸ್ಕೃತಿಕ ವ್ಯಕ್ತಿಗಳಲ್ಲಿ ಒಬ್ಬರು ಎಂದೆನ್ನುವ ರಹಮತ್ ಲಂಕೇಶ್ ಅವರನ್ನು ಮೆಚ್ಚುವಂತೆ ಅವರಲ್ಲಿನ ವೈರುಧ್ಯಗಳತ್ತಲೂ ಬೆರಳು ಮಾಡುತ್ತಾರೆ. ಅನ್ಯರ ಭಿನ್ನಾಭಿಪ್ರಾಯಗಳನ್ನು ಕೇಳಿಸಿಕೊಳ್ಳುವ ಸಂಯಮವಾಗಲಿ ಮತ್ತು ಸಂವಾದವನ್ನು ಮುಂದುವರೆಸಲು ಬೇಕಾದ ತಾಳ್ಮೆಯಾಗಲಿ ಲಂಕೇಶ್ ಅವರಲ್ಲಿ ಇರಲಿಲ್ಲ ಎನ್ನುವ ತಕರಾರು ಲೇಖಕರದು. ಹೀಗಿದ್ದೂ ಲಂಕೇಶ್ ತನ್ನ ಕಾಲದ ಎಲ್ಲ ಯಜಮಾನಿಕೆ, ಬೂಟಾಟಿಕೆ, ಓಲೈಸಿಕೆಗಳ ವಿರುದ್ಧ ಬಹುದೊಡ್ಡ ನೈತಿಕಶಕ್ತಿಯಾಗಿದ್ದರು ಎಂದು ಬರೆಯುತ್ತಾರೆ. ನಮ್ಮಲ್ಲಿ ಲೇಖಕರು ಎಂದರೆ ಬರೆಯುವವರು ಮಾತ್ರ, ಮತ್ತೊಬ್ಬರು ಬರೆದದ್ದನ್ನು ಓದಬೇಕಾದವರಲ್ಲ ಎಂಬ ಗ್ರಹಿಕೆ ಇರುವಾಗ ಕನ್ನಡದಲ್ಲಿ ತಮ್ಮ ಕಾಲದ ಎಲ್ಲ ತಲೆಮಾರಿನ ಬರಹಗಾರರು ಬರೆದುದನ್ನು ಗಂಭೀರವಾಗಿ ಓದಿ ಪ್ರತಿಕ್ರಿಯಿಸುತ್ತಿದ್ದ ಕೆಲವೇ ಲೇಖಕರಲ್ಲಿ ಲಂಕೇಶ್ ಒಬ್ಬರಾಗಿದ್ದರು ಎಂದು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ. ಶಂಕರ್ ಮೊಕಾಶಿ ಪುಣೇಕರ್ ಅವರ ಕುರಿತು ಬರೆಯುವಾಗ ಯಾವ ಟೀಕೆ ಟಿಪ್ಪಣೆಗೂ ಆಸ್ಪದವಿಲ್ಲದಂತೆ ಅವರ ವಿದ್ವತ್ತು ಮತ್ತು ಅವರೊಳಗಿನ ಭೋಳೆತನವನ್ನು ಅತ್ಯಂತ ಆಪ್ತವಾಗಿ ಬರೆಯುತ್ತಾರೆ. ಪುಣೇಕರರ 'ಗಂಗವ್ವ ಗಂಗಾಮಾಯಿ' ಕನ್ನಡದ ಶ್ರೇಷ್ಠ ಕಾದಂಬರಿ ಎಂದೆನ್ನುವ ಲೇಖಕರು ಅವರು ತಮ್ಮ ಬರಹದ ಬಗ್ಗೆ ಯಾವ ಮಮಕಾರವನ್ನೂ ಬೆಳೆಸಿಕೊಂಡಿರಲಿಲ್ಲ ಎನ್ನುತ್ತಾರೆ.

     ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರು ವಿವಿಧ ಸಾಹಿತ್ಯಕ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಬರೆದ ಟಿಪ್ಪಣಿಗಳಿವೆ. ಲೇಖನದ ಪ್ರಾರಂಭದಲ್ಲಿ ಹೂವಿನಹಡಗಲಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕುಂವೀ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸುತ್ತ ರಹಮತ್ ಹಲವು ಪ್ರಶ್ನೆಗಳನ್ನೆತ್ತುತ್ತಾರೆ. ಹಗರಿಸೀಮೆಯ ಲೋಕ ಲೇಖಕನನ್ನು ಸೃಷ್ಟಿಸಬಲ್ಲದು ಎಂದು ಸಾಹಿತ್ಯಕ ಕಾರಣದಿಂದ ಮೆಚ್ಚುವಾಗ ಲೇಖಕ ಅದನ್ನು ವೈಭವೀಕರಿಸುತ್ತಿದ್ದಾನೆಯೋ ಅಥವಾ ಇದು ಬದಲಾಗಬೇಕು ಎಂಬ ದನಿಯನ್ನು ಹೊರಡಿಸುತ್ತಿದ್ದಾನೆಯೋ ಎಂದು ಪ್ರಶ್ನಿಸುತ್ತಾರೆ. ರಹಮತ್ ಅವರ ಪ್ರಕಾರ ವಿಶಿಷ್ಠ ಅನುಭವ ನೀಡುವ ಲೋಕವೊಂದೇ ಲೇಖಕನನ್ನು ರೂಪಿಸಲಾರದು. ಒಬ್ಬನನ್ನು ಕಥೆಗಾರನಾಗಿಸುವ ಪರಿಸರ ಮತ್ತು ಆ ಪರಿಸರವನ್ನು ಕತೆಯಾಗಿಸುವ ಮನುಷ್ಯ ಎರಡೂ ತಮ್ಮ ಒಳ ಅವಶ್ಯಕತೆಯಲ್ಲಿ ಏಕೀಭವಿಸಿದಾಗ ಮಾತ್ರ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಪ್ರಜ್ಞೆ ರೂಪುಗೊಳ್ಳುವುದು ಹೊರಗಿನ ನಾಗರಿಕ ಜಗತ್ತಿನಲ್ಲಿ ಎನ್ನುವ ಸ್ಪಷ್ಟ ನಿಲುವು ಅವರದು. ತಾನು ಲೇಖಕನಾಗಿ ರೂಪುಗೊಳ್ಳಲು ನೆರವಾಯಿತು ಎಂದು ಮೆಚ್ಚುಗೆವ್ಯಕ್ತಪಡಿಸುವಾಗ ಅನೇಕ ಸಲ ಆ ಪರಿಸರ (ಲೋಕ) ಆಧುನಿಕಗೊಳ್ಳಬೇಕಿಲ್ಲ ಎಂಬ ಅರ್ಥ ಹೊರಡುವ ಅಪಾಯವನ್ನು ಕುರಿತು ರಹಮತ್ ಇಲ್ಲಿ ಎಚ್ಚರಿಸುತ್ತಾರೆ.

    'ವಿಮರ್ಶೆ ಸೃಜನಶೀಲ ಸಾಹಿತ್ಯದಿಂದ ಕಲಿಯಬೇಕಾಗಿದೆ' ಎಂದ ಕವಿಯೊಬ್ಬರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಲೇಖಕರು  ಯಾರಿಂದ ಯಾರು ಕಲಿಯಬೇಕು ಎಂದು ಪ್ರಶ್ನಿಸುತ್ತಾರೆ. ಈ ಟಿಪ್ಪಣಿಯಲ್ಲಿ ವಿಮರ್ಶೆ ಎನ್ನುವುದು ಹೇಗಿರಬೇಕು ಎಂದು ವಿವರಿಸುತ್ತಾರೆ. ಜೊತೆಗೆ ಕನ್ನಡದಲ್ಲಿ ಸಧ್ಯದ ವಿಮರ್ಶಾ ಬರಹಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುತ್ತಾರೆ. ಒಟ್ಟಾರೆ ರಹಮತ್ ಅವರಿಗೆ ಸಧ್ಯದ ವಾತಾವರಣದಲ್ಲಿ ವಿಮರ್ಶೆ ಎನ್ನುವುದು ಏಕಕಾಲಕ್ಕೆ ಬುದ್ಧಿ ಹೇಳಿಸಿಕೊಳ್ಳುವ ದಡ್ದನಂತೆ, ಪರಿಚಾರಿಕೆ ಮಾಡುವ ಊಳಿಗದವನಂತೆ, ಪ್ರಾಡೆಕ್ಟನ್ನು ಪ್ರಚಾರ ಮಾಡುವ ಜಾಹಿರಾತುದಾರನಂತೆ ಬಹುರೂಪಿಯಾಗಿ ಕಾಣುತ್ತದೆ. ತಮ್ಮ ಕೊನೆಯ ಟಿಪ್ಪಣಿಯಲ್ಲಿ ಲೇಖಕರು ಭೈರಪ್ಪನವರ ಕಾದಂಬರಿಗಳು ಹುಟ್ಟು ಹಾಕುವ ಪ್ರತಿಪಾದನೆಯನ್ನು ಕುರಿತು ಪ್ರತಿಕ್ರಿಯಿಸಿರುವರು. ಭೈರಪ್ಪನವರ ಹೆಸರು ಹಾಗೂ ಬದುಕಿನ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಇಂಥ ಭೈರಪ್ಪನವರು ಸೈದ್ದಾಂತಿಕವಾಗಿಯಾದರೂ ವರ್ಗವಾದಿ ಚಿಂತಕರಾಗಬೇಕಿತ್ತು ಆದರೆ ಅವರು ಎಡ ಚಿಂತನೆಯನ್ನು ವಿರೋಧಿಸುತ್ತಾರೆ ಎಂದು ವಿಮರ್ಶಿಸುತ್ತಾರೆ. ತಮ್ಮ ಐಡಿಯಾಲಜಿ ಮಂಡನೆಗಾಗಿ ಭೈರಪ್ಪನವರು ಪಾತ್ರಗಳನ್ನು ನಿರ್ದಯವಾಗಿ ಕುರೂಪಗೊಳಿಸಬಲ್ಲರು ಎಂದು ನುಡಿಯುವ ಲೇಖಕರು ಇದರಿಂದ ಒಬ್ಬ ಕಥೆಗಾರ ತನ್ನ ಇಂಟಿಗ್ರಿಟಿಯನ್ನು ಕಳೆದುಕೊಳ್ಳುವನು ಎಂದು ಆತಂಕ ವ್ಯಕ್ತಪಡಿಸುವರು. ಭೈರಪ್ಪನವರು ಕುರೂಪಗೊಳಿಸಿದ ಪಾತ್ರಗಳಿಗೆ ಉದಾಹರಣೆಯಾಗಿ ಅವರ ಕಾದಂಬರಿಗಳ ಕೆಲವು ಪಾತ್ರಗಳನ್ನು ಹೆಸರಿಸುವ ಲೇಖಕರು ಭೈರಪ್ಪನವರ ಕಾದಂಬರಿಗಳಿಗೂ ಹಾಗೂ ಸಂಘ ಪರಿವಾರಕ್ಕೂ ಸಂಬಂಧ ಕಲ್ಪಿಸುತ್ತಾರೆ. ಕನ್ನಡಕ್ಕೆ ಶ್ರೇಷ್ಠ ಕಾದಂಬರಿಗಳನ್ನು ಕೊಡುಗೆಯಾಗಿ ನೀಡಿರುವ ಒಬ್ಬ ಕಾದಂಬರಿಕಾರನ ಮೇಲೆ ರಹಮತ್ ಒಂದಿಷ್ಟು ಹೆಚ್ಚೆ ಎನ್ನುವಂತೆ ಪ್ರಹಾರ ಮಾಡಿರುವರು ಎನ್ನುವ ಧೋರಣೆ ನನ್ನದು.

    ಪುಸ್ತಕದಲ್ಲಿ ರಾಮಚಂದ್ರ ಶರ್ಮ, ಕಾರಂತ, ಬಸವಣ್ಣ, ರಾಘವಾಂಕ, ಮುಸ್ಲಿಂ ತತ್ವಪದಕಾರರು, ವಡ್ಡಾರಾಧನೆ ಕುರಿತು ವಿಮರ್ಶಾ ಲೇಖನಗಳಿವೆ. ಒಟ್ಟಿನಲ್ಲಿ ಕನ್ನಡದ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತು ತಮ್ಮ ವಸ್ತುನಿಷ್ಠ ವಿಮರ್ಶೆಯಿಂದ ಪುಸ್ತಕದ ಎಲ್ಲ ಲೇಖನಗಳು ಓದುಗರಿಗೆ ಮಹತ್ವದ ಮಾಹಿತಿಯನ್ನೊದಗಿಸುತ್ತವೆ. ರಹಮತ್ ತರೀಕೆರೆ ಅವರ ಪ್ರಯತ್ನ, ಪೂರ್ವ ತಯ್ಯಾರಿ, ಆಳವಾದ ಅಧ್ಯಯನ, ಸಂಶೋಧನ ಮನೋಭಾವ, ವಸ್ತುನಿಷ್ಠ ಗ್ರಹಿಕೆ ಪ್ರತಿ ಲೇಖನದ ಓದಿನಲ್ಲೂ ಓದುಗನ ಅನುಭವಕ್ಕೆ ದಕ್ಕುತ್ತವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ