Thursday, October 9, 2014

ರಾಜಕಾರಣ ಮತ್ತು ಭ್ರಷ್ಟಾಚಾರ




    UGLY FACE OF INDIAN POLITICS


              ಭಾರತದ ರಾಜಕಾರಣ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದೆ. ಇವತ್ತಿನ ರಾಜಕಾರಣಿಗಳಿಗೆ ರಾಜಕಾರಣ ಎನ್ನುವುದು ಹಣ ಮಾಡುವ ಧಂದೆಯಾಗಿ ಕಾಣಿಸುತ್ತಿದೆ. ಹೀಗೆ ಹಣ ಮಾಡುವ ಮ್ಯಾಮೋಹಕ್ಕೆ ಬಲಿಯಾದ  ನಮ್ಮ ರಾಜಕಾರಣಿಗಳು ರಾಜಕೀಯದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಪಾತಾಳಕ್ಕೆ ತಳ್ಳಿರುವರು. ಇವತ್ತು ರಾಜಕೀಯದಲ್ಲಿ ನೈತಿಕತೆಯ ಕ್ಷೋಭೆ ಕಾಣಿಸಿಕೊಂಡಿದೆ. ನಿನ್ನೆ ಮೊನ್ನೆಯವರೆಗೂ ಬಡವರಾಗಿದ್ದ ನಮ್ಮ ರಾಜಕಾರಣಿಗಳು ಇವತ್ತು ಕುಬೇರರಾಗಿರುವರು. ಚುನಾವಣೆಯಿಂದ ಚುನಾವಣೆಗೆ ನಮ್ಮ ಜನಪ್ರತಿನಿಧಿಗಳ ಸಂಪತ್ತು ವೃದ್ಧಿಸುತ್ತಲೇ ಇದೆ. ಅನೇಕ ಪೀಳಿಗೆ ಕುಳಿತು ಉಂಡರೂ ಕರಗದಷ್ಟು ಆಸ್ತಿಯನ್ನು ಇವರು ಸಂಪಾದಿಸಿರುವರು. ಕೆಲವು ದಿನಗಳ ಹಿಂದೆ ರಾಜಕೀಯ ಪಕ್ಷದ ಮುಖಂಡರೋರ್ವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ವಿಧಾನ ಪರಿಷತ್ ಆಯ್ಕೆಗಾಗಿ ೪೦ ಕೋಟಿ ರುಪಾಯಿಗಳನ್ನು ಕೇಳಿದ ಸುದ್ಧಿ ಸೀಡಿ ರೂಪದಲ್ಲಿ ಬಿಡುಗಡೆಯಾಗಿ ಒಂದು ಸಂಚಲನವನ್ನೇ ಸೃಷ್ಟಿಸಿತ್ತು. ಇಡೀ ರಾಜ್ಯದ ಜನತೆ ಇಂಥದ್ದೊಂದು ಘಟನೆಯಿಂದ ರಾಜಕಾರಣವೆಂದರೆ ಅಸಹ್ಯ ಪಟ್ಟುಕೊಂಡರು. ಈ ವಿಷಯದ ಪರ ಮತ್ತು ವಿರೋಧವಾಗಿ ಚರ್ಚೆಗಳಾದವು. ಆತಂಕದ ಸಂಗತಿ ಎಂದರೆ ಹೀಗೆ ಹಣ ಮಾಡುವುದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ ಎನ್ನುವ ಮಾತು ಆ ಸಂದರ್ಭ ಅನೇಕ ರಾಜಕಾರಣಿಗಳಿಂದ ಮತ್ತು ಮಾಧ್ಯಮದವರಿಂದ ಕೇಳಿ ಬಂತು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಕ್ಕಿಂತ ಬೇರೆಯವರು ಮಾಡಿದ್ದನ್ನೇ ನಾವು  ಮಾಡಿರುವೇವು  ಎಂದು ತಪ್ಪನ್ನು ಸಮರ್ಥಿಸಿಕೊಳ್ಳುವ ಲಜ್ಜೆಗೇಡಿ ವರ್ತನೆ ಅನೇಕ ರಾಜಕಾರಣಿಗಳದ್ದಾಗಿತ್ತು. 

       ಈ ಸಂದರ್ಭ ನಾನು ಒಂದಿಷ್ಟು ಹಿಂದೆ ಹೋಗುತ್ತೇನೆ. ನಮಗೆಲ್ಲ ನೆನಪಿರುವಂತೆ ೨೦೦೯ ರಲ್ಲಿ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ಭೀಕರ ನೆರೆಹಾವಳಿ ಅನೇಕ ಹಳ್ಳಿಗಳನ್ನು ಧ್ವಂಸಗೊಳಿಸಿತ್ತು. ಸಾವಿರಾರು ಜನ ತಮ್ಮ ಕುಟುಂಬದವರನ್ನು ಮತ್ತು  ಆಸ್ತಿಯನ್ನು ಕಳೆದುಕೊಂಡು ನಿರಾಶ್ರಿತರಾದರು. ತುತ್ತು ಕೂಳಿಗಾಗಿ ಸರ್ಕಾರದ ಗಂಜಿ ಕೇಂದ್ರಗಳಲ್ಲಿ ಅವರು ಪಡುತ್ತಿರುವ ಸಂಕಷ್ಟಗಳಿಗೆ ರಾಜ್ಯದ ಮೂಲೆ ಮೂಲೆಯಿಂದ ನೆರವಿನ ಮಹಾಪೂರ ಹರಿದುಬಂತು. ವಿಪರ್ಯಾಸದ ಸಂಗತಿ ಎಂದರೆ ನಿರಾಶ್ರಿತರ ಸಂಕಷ್ಟದಲ್ಲಿ ಭಾಗಿಯಾಗಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕಾದ ಜನಪ್ರತಿನಿಧಿಗಳು ಮಾತ್ರ ದೂರದ ಹೈದ್ರಾಬಾದನ ಲೆಕ್ಸುರಿ ರೆಸ್ಟಾರೆಂಟ್ ನಲ್ಲಿ ಕುಳಿತು ಮೋಜು ಮಸ್ತಿಯಲ್ಲಿ ತೊಡಗಿದ್ದರು. ನಿರಾಶ್ರಿತರ ಸಮಸ್ಯೆಗಳಿಗಿಂತ ಅವರಿಗೆ ಆ ಹೊತ್ತು ರಾಜ್ಯದ ಮುಖ್ಯಮಂತ್ರಿಯನ್ನು ಬದಲಿಸುವುದು ಇಲ್ಲವೇ ತಾವುಗಳು ಮಂತ್ರಿ ಸ್ಥಾನವನ್ನು ಪಡೆಯುವುದು ಬಹುಮುಖ್ಯ ಉದ್ದೇಶವಾಗಿತ್ತು. ಕೊನೆಗೂ ತಮ್ಮ ಉದ್ದೇಶವನ್ನು ಸಾಧಿಸಿಕೊಂಡ ಆ ರಾಜಕಾರಣಿಗಳಿಗೆ ರಾಜ್ಯದ ಜನರ ಸಮಸ್ಯೆಗಳಿಗಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿತ್ತು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ರಾಜಕಾರಣಿಗಳು ತಮ್ಮನ್ನು ಆರಿಸಿ ಕಳಿಸಿರುವ ಮತದಾರರು ಕಷ್ಟದಲ್ಲಿರುವಾಗ ತಾವು ಭಿನ್ನಮತದ ಚಟುವಟಿಕೆಯಲ್ಲಿ ತೊಡಗಿ ಒಂದಿಷ್ಟು ಹಣ ಮಾಡಿಕೊಂಡರೆ ಕೆಲವರು ಮಂತ್ರಿ ಇಲ್ಲವೇ ನಿಗಮ ಮಂಡಳಿಗಳಂಥ ಆಯಕಟ್ಟಿನ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಮತದಾರರು ಮಾತ್ರ ತಮ್ಮ ಪ್ರತಿನಿಧಿಗಳ ಅವಕಾಶವಾದಿತನಕ್ಕೆ ಸಾಕ್ಷಿಯಾಗಬೇಕಾಯಿತು.

          ಇನ್ನೂ ಒಂದಿಷ್ಟು ಹಿಂದೆ ಹೋದರೆ ನಮ್ಮ ಜನನಾಯಕರುಗಳ ಹಣ ಮಾಡುವ ದುರಾಸೆ ಮತ್ತು ಅವಕಾಶವಾದಿತನದ ಗುಣ ಅನಾವರಣಗೊಳ್ಳುತ್ತದೆ. ೨೦೦೮ ರಲ್ಲಿ ಕರ್ನಾಟಕ ರಾಜ್ಯದಲ್ಲಿ ಮತದಾರ ಪ್ರಥಮ ಬಾರಿಗೆ ಪಕ್ಷವೊಂದಕ್ಕೆ ಸರ್ಕಾರ ರಚಿಸುವ ಜನಾದೇಶ ನೀಡಿದ. ಹೀಗೆ ಅಧಿಕಾರದ ಗದ್ದುಗೆ ಏರಿದ ಪಕ್ಷ ತನ್ನ ಅಲ್ಪಮತದ ಸರ್ಕಾರವನ್ನು ಸುಭದ್ರಗೊಳಿಸಲು ಅನ್ಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳಿಗೆ ಹಣದ ಮತ್ತು ಅಧಿಕಾರದ ಆಮೀಷ ತೋರಿಸಿ ಕೆಲವರಿಂದ  ಶಾಸಕ ಸ್ಥಾನಕ್ಕೆ ರಾಜಿನಾಮೆ  ಕೊಡಿಸುವಲ್ಲಿ ಯಶಸ್ವಿಯಾಯಿತು. ತಮ್ಮ ಈ ಅನೈತಿಕ ಕೆಲಸದಿಂದ ಕೋಟ್ಯಾಂತರ ರುಪಾಯಿಗಳನ್ನು ಬಕ್ಷಿಸಾಗಿ ಪಡೆದ ಚುನಾಯಿತ ಪ್ರತಿನಿಧಿಗಳು ತಮ್ಮ ಮತದಾರರ ಮತಗಳನ್ನು ಅಪಮೌಲ್ಯಗೊಳಿಸಿ ಅನ್ಯ ಪಕ್ಷಕ್ಕೆ ವಲಸೆ ಹೋಗಿ ಮತ್ತೊಮ್ಮೆ ಚುನಾವಣೆಗೆ ನಿಂತು ಮಂತ್ರಿಯಾದರು. ಇನ್ನು ಕೆಲವರು ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂದು ಸಿಕ್ಕ ಈಡು  ಗಂಟನ್ನೇ ಭದ್ರವಾಗಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸದೆ ತಮ್ಮ ಮತಕ್ಷೆತ್ರವನ್ನು ಆಳುವ ಪಕ್ಷಕ್ಕೆ ಮಾರಿಕೊಂಡರು. ಹೀಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವಾಗ  ಅವರು ತಮ್ಮನ್ನು ಆರಿಸಿ ಕಳಿಸಿದ ಮತದಾರರ ಭಾವನೆಗಳನ್ನು ಪರಿಗಣಿಸಲೇ ಇಲ್ಲ. ಮತದಾರರ ಮತಗಳನ್ನು ಅಪಮೌಲ್ಯಗೊಳಿಸಿದ್ದಲ್ಲದೆ ಜನರ ಭಾವನೆಗಳಿಗೆ ಮತ್ತು ಆಶೋತ್ತರಗಳಿಗೆ ಕೊಳ್ಳಿ ಇಟ್ಟ ಈ ರಾಜಕಾರಣಿಗಳು ಮಾತ್ರ ತಮ್ಮ ವರ್ತನೆಯಿಂದ ಅವರೆಂದೂ ಲಜ್ಜೆಗೆಡಲಿಲ್ಲ.

        ಈ ನಡುವೆ ಬುದ್ಧಿವಂತರ ಮೇಲ್ಮನೆ ಎಂದೇ  ಕರೆಯಿಸಿಕೊಳ್ಳುವ ವಿಧಾನ ಪರಿಷತ್ತಿಗೆ ಬಂಗಾರದಂಗಡಿಯ ಮಾಲೀಕರು, ಗಣಿದಣಿಗಳು, ಕೈಗಾರಿಕೋದ್ಯಮಿಗಳು ಆಯ್ಕೆಯಾಗುತ್ತಾರೆ. ಹಿರಿಯರು, ಬುದ್ದಿಜೀವಿಗಳು, ಉತ್ತಮ ವಾಗ್ಮಿಗಳನ್ನು ಕೈಬಿಟ್ಟು ಎಲ್ಲ ಪಕ್ಷಗಳು ಹಣಕ್ಕಾಗಿ ವಿಧಾನ ಪರಿಷತ್ತಿನ ಶಾಸಕ ಸ್ಥಾನವನ್ನು ಮಾರಿಕೊಳ್ಳುತ್ತವೆ. ಹೀಗೆ ಹಣಕೊಟ್ಟು ಆಯ್ಕೆಯಾಗಿ ಬರುವ ರಾಜಕಾರಣಿಗಳಿಗೆ ಜನಪರ ಕಾಳಜಿಯಾಗಲಿ ಇಲ್ಲವೇ ನೈತಿಕತೆಯಾಗಲಿ ಇರುವುದಿಲ್ಲ. ಅವರದೇನಿದ್ದರೂ ತಮ್ಮ ಕಾನೂನು ಬಾಹಿರ ಚಟುವಟಿಕೆಗಳಿಗೆ ಒಂದು ರಾಜಕೀಯ ನೆಲೆಯನ್ನು ಒದಗಿಸುವುದು. ಕೆಲವೊಂದು ಸಂದರ್ಭಗಳಲ್ಲಿ ಈ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸೋಲುವ ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸುವ ಕೇಂದ್ರವಾಗುತ್ತಿದೆ. ಸಕ್ರಿಯ ರಾಜಕಾರಣಿಗಳನ್ನೇ ಸಮಾಜ ಸೇವೆ, ಶಿಕ್ಷಣ, ಕಲೆ ಇತ್ಯಾದಿ ಹೆಸರಿನಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಮಾಡಿದ ಅನೇಕ ಉದಾಹರಣೆಗಳಿವೆ. ನಿಜಕ್ಕೂ ಪಕ್ಷಾತೀತವಾಗಿ ರಾಜಕಾರಣಿಯಲ್ಲದ ಅರ್ಹರಿಗೆ ಸಲ್ಲಬೇಕಾದ ಗೌರವವನ್ನು ನಮ್ಮ ಭ್ರಷ್ಟ ರಾಜಕಾರಣಿಗಳು ತಮ್ಮದಾಗಿಸಿಕೊಂಡು ಈ ಮೂಲಕ ನಾಡಿನ ಜನತೆಗೆ ದ್ರೋಹ ಮಾಡುತ್ತಿರುವರು.

         ರಾಜಕಾರಣವೊಂದು ನೈತಿಕ ಅಧ:ಪತನಕ್ಕಿಳಿದಾಗ ಅದು ತನ್ನೊಂದಿಗೆ ಸಮಾಜವನ್ನೂ ನೈತಿಕವಾಗಿ ಕೆಳಗಿಳಿಸುತ್ತದೆ. ಈ ಮಾತಿಗೆ ದಾರಿ ತಪ್ಪುತ್ತಿರುವ ನಮ್ಮ ಮಠಗಳೇ ಉತ್ತಮ ಉದಾಹರಣೆಗಳಾಗಿವೆ. ಮಠಗಳು ಮತ್ತು ಮಠಾಧಿಪತಿಗಳ ಬಗ್ಗೆ ಸಮಾಜದಲ್ಲಿ ಒಂದು ಗೌರವವಿತ್ತು. ಶಿಕ್ಷಣ ಪ್ರಚಾರಕ್ಕೆ ಒತ್ತು ನೀಡುತ್ತಿರುವ ಮಠಗಳು  ಸಾಮಾಜಿಕ ಪರಿವರ್ತನೆಯ ಪ್ರಮುಖ ಆಯಾಮಗಳೆನ್ನುವ ಭಾವನೆ ಜನರಲ್ಲಿತ್ತು. ಆದರೆ ಯಾವಾಗ ಈ ಮಠ ಮಾನ್ಯಗಳು ರಾಜಕಾರಣದೊಂದಿಗೆ ಕೈಜೋಡಿಸಿದವೋ ಆಗ ಜನರಿಗೆ ಭ್ರಮನಿರಸನವಾಯಿತು. ಅದರಲ್ಲೂ ಮಠಗಳು ವೋಟ್ ಬ್ಯಾಂಕ್ ಗಳಾಗಿ ರೂಪಾಂತರಗೊಂಡ ಮೇಲೆ ಅನೇಕ ಮಠಾಧೀಶರು ಫುಲ್ ಟೈಮ್ ರಾಜಕಾರಣಕ್ಕಿಳಿದರು. ಚುನಾವಣೆಗೆ  ಅಭ್ಯರ್ಥಿಯನ್ನು ನಿರ್ಧರಿಸುವಾಗ  ಮತ್ತು ಆಯ್ಕೆಯಾದ ಜನಪ್ರತಿನಿಧಿಗಳನ್ನು  ಮಂತ್ರಿಗಳನ್ನಾಗಿ ಮಾಡುವಲ್ಲಿ  ಮಠಗಳ ಪಾಲ್ಗೊಳ್ಳುವಿಕೆ ಪ್ರಾಮುಖ್ಯತೆ ಪಡೆಯತೊಡಗಿತು. ಒಟ್ಟಿನಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಮಠಗಳು ಬೆಳೆದು  ನಿಂತವು. ಮಠಗಳ ಪ್ರಾಮುಖ್ಯತೆಯನ್ನರಿತು ಆಯಾ ಕಾಲಕ್ಕೆ ಬಂದ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳ ದೇಣಿಗೆಯನ್ನು ನೀಡತೊಡಗಿದವು. ಸರ್ಕಾರದಿಂದ ದೇಣಿಗೆ ಪಡೆದ ಮಠಗಳಿಗೆ  ಕಾಲಾನಂತರದಲ್ಲಿ ಹೈಟೆಕ್ ಸ್ಪರ್ಶವಾಯಿತು. ಮಠಗಳ ಈ ಹೈಟೆಕ್ ಪರಿವರ್ತನೆಯ ಪರಿಣಾಮ ಎದುರಾದ ಬಹುದೊಡ್ಡ ಆತಂಕವೆಂದರೆ ಅವು ಜನಮಾನಸದಿಂದ ಸಂಪೂರ್ಣವಾಗಿ ವಿಮುಖವಾದವು. ಸಮಾಜದಲ್ಲಿ ಶಿಕ್ಷಣದ ಮೂಲಕ ಬಹುದೊಡ್ಡ ಪರಿವರ್ತನೆಗೆ ಕಾರಣವಾಗಬೇಕಿದ್ದ ಮಠಗಳು ರಾಜಕಾರಣದ ಭ್ರಷ್ಟಾಚಾರದ ಕಪಿ ಮುಷ್ಠಿಗೆ ಸಿಲುಕಿ ತಮ್ಮ ನಿಜವಾದ ಉದ್ದೇಶವನ್ನೇ ಮರೆತುಹೋದವು. ಬಸವಣ್ಣನಂಥ ಸಮಾಜ ಸುಧಾರಕನ ನೆಲದಲ್ಲಿ ರಾಜಕಾರಣದ ಕುರುಡು ಕಾಂಚಾಣ ಮಠಗಳ ನೈತಿಕತೆಯನ್ನೇ ಬುಡಮೇಲಾಗಿಸಿದ್ದು ಬಹುದೊಡ್ಡ ದುರಂತ.  ಮಠಾಧಿಪತಿಗಳು ಮಾತ್ರವಲ್ಲದೆ ದೇಶದ ಕೈಗಾರಿಕೋದ್ಯಮಿಗಳೂ ರಾಜಕಾರಣದ ಭ್ರಷ್ಟಾಚಾರದಲ್ಲಿ ಜನಪ್ರತಿನಿಧಿಗಳೊಂದಿಗೆ ಕೈಜೋಡಿಸುತ್ತಿರುವರು. ಇವತ್ತು ರಾಜ್ಯ ಸಭೆ ಮತ್ತು ವಿಧಾನ ಪರಿಷತ್ತಿನ ಸ್ಥಾನಗಳು ಕೋಟ್ಯಾಂತರ ರೂಪಾಯಿಗಳಿಗೆ ಬಿಕರಿಯಾಗುತ್ತಿರುವುದರ ಹಿಂದೆ ಈ ಕೈಗಾರಿಕೋದ್ಯಮಿಗಳ ಹಣದ ಥೈಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಕೋಟಿ ಬಂಡವಾಳ ಹೂಡಿ ವ್ಯಾಪಾರದಲ್ಲಿ ತೊಡಗುವ ಈ ಕೈಗಾರಿಕೋದ್ಯಮಿಗಳಿಗೆ ಒಂದು ರಾಜಾಶ್ರಯ ಬೇಕು. ತಮ್ಮ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಂದ ಗಳಿಸಿದ ಸಂಪತ್ತನ್ನು ಉಳಿಸಿಕೊಳ್ಳಲು ಅವರಿಗೆ ರಾಜಕಾರಣದ ನೆರವು ಬೇಕು. ಅದಕ್ಕೆಂದೇ ಚುನಾವಣಾ ಸಮಯದಲ್ಲಿ ಪಕ್ಷಭೇದ ಮರೆತು ಕಾಸು ಹಂಚುವ ಇವರು ರಾಜಕಾರಣದಿಂದ ತಮ್ಮ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಪಕ್ಷ ಸಂಘಟನೆ, ಭಿನ್ನಮತ ಶಮನ, ಚುನಾವಣಾ ಖರ್ಚು  ಈ ಎಲ್ಲದಕ್ಕೂ ಕೈಗಾರಿಕೋದ್ಯಮಿಗಳೇ ಹೂಡಿಕೆದಾರರು. ಹೀಗೆ ರಾಜಕಾರಣದಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಹೂಡುವ ಈ ವರ್ತಕರು ಅದಕ್ಕೆ ನೂರರಷ್ಟು ಲಾಭ ಮಾಡಿಕೊಳ್ಳುವರು.

      ಈ    ರಾಜಕಾರಣ  ಮಾಧ್ಯಮ ಕ್ಷೇತ್ರವನ್ನೂ ಕಲುಷಿತಗೊಳಿಸುತ್ತಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಳಂತೆ ಪತ್ರಿಕಾರಂಗ ಸಹ ದೇಶದ ಬಹುಮುಖ್ಯ ವ್ಯವಸ್ಥೆಗಳಲ್ಲೊಂದು. ಶಾಸಕಾಂಗ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ತರುವ ಕೆಲಸವನ್ನು ಮಾಧ್ಯಮ ಮಾಡಬೇಕು. ಆದರೆ ಇವತ್ತು ರಾಜಕಾರಣದ ಭ್ರಷ್ಟಾಚಾರಕ್ಕೆ ಮಾಧ್ಯಮದ ಬೆಂಬಲ  ಸಿಗುತ್ತಿದೆ. ರಾಜಾಕಾರಣದ ಭ್ರಷ್ಟಾಚಾರ ಅನಾವರಣಗೊಂಡಾಗ ಮಾಧ್ಯಮದಲ್ಲೇ ಪರ ಮತ್ತು ವಿರೋಧದ ಧ್ವನಿಗಳು ಕೇಳಿ ಬರುತ್ತವೆ. ದಿನವಿಡೀ ಚರ್ಚೆ ಸಂವಾದದ ಮೂಲಕ ರಾಜಕಾರಣದ ಭ್ರಷ್ಟಾಚಾರಕ್ಕೆ  ನಮ್ಮ ಮಾಧ್ಯಮಗಳು ಒತ್ತಾಸೆಯಾಗಿ ನಿಲ್ಲುತ್ತಿವೆ. ಪಿ. ಲಂಕೇಶ್ ಬದುಕಿರುವಷ್ಟು ಕಾಲ ಕರ್ನಾಟಕದಲ್ಲಿ ಮಾಧ್ಯಮಗಳು ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುತ್ತಿದ್ದವು. ನಂತರದ ದಿನಗಳಲ್ಲಿ ಕೆಲವು ಪತ್ರಕರ್ತರು ಪತ್ರಿಕೋದ್ಯಮವನ್ನು  ಹಣ ಮಾಡುವ ಧಂದೆಗೆ ತಂದು ನಿಲ್ಲಿಸಿದಾಗ ಪತ್ರಿಕಾ ಮಾಧ್ಯಮದ ಸ್ವರೂಪವೇ ಬದಲಾಯಿತು. ಅದರಲ್ಲೂ ಪತ್ರಿಕಾ ಮಾಧ್ಯಮ ಎಲೆಕ್ಟ್ರಾನಿಕ್ ಮಾಧ್ಯಮವಾಗಿ ರೂಪಾಂತರ ಹೊಂದಿದ  ಮೇಲೆ ಪತ್ರಕರ್ತರ ಕಾರ್ಯವೈಖರಿಯೇ ಬದಲಾಗಿದೆ. ದೃಶ್ಯ ಮಾಧ್ಯಮದ ಮೂಲಕ ಹೆಚ್ಚು ಹೆಚ್ಚು ಜನಪ್ರಿಯರಾಗುತ್ತಿರುವ ಪತ್ರಕರ್ತರು ತಮ್ಮ ಜನಪ್ರಿಯತೆ ಮತ್ತು ರಾಜಕಾರಣದ ಭ್ರಷ್ಟಾಚಾರವನ್ನೇ ಎನ್ಕ್ಯಾಶ್ ಮಾಡಿಕೊಂಡು ರಾತ್ರಿಕಳೆದು ಬೆಳಗಾಗುವಷ್ಟರಲ್ಲಿ ಕುಬೇರರಾಗುತ್ತಿರುವರು. ಪರಿಣಾಮವಾಗಿ ಇವತ್ತು ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಕನ್ನಡ ಭಾಷೆಯಲಿ ಹತ್ತಕ್ಕೂ ಹೆಚ್ಚು ಸುದ್ದಿವಾಹಿನಿಗಳು ದಿನದ ೨೪ ಗಂಟೆ ಸುದ್ದಿಯನ್ನು ಬಿತ್ತರಿಸುತ್ತಿವೆ. ಕೆಲವು ರಾಜಕಾರಣಿಗಳು ಸ್ವತಹ ಸುದ್ದಿವಾಹಿನಿಗಳ ಮಾಲಿಕತ್ವವನ್ನು ಹೊಂದುವುದರ ಮೂಲಕ ತಮ್ಮ ಭ್ರಷ್ಟಾಚಾರಕ್ಕೆ ಮಾಧ್ಯಮವನ್ನು ರಕ್ಷಾಕವಚವಾಗಿ ಮಾಡಿಕೊಂಡಿರುವರು.

     ರಾಜಕಾರಣವು ಭ್ರಷ್ಟಾಚಾರದ ವಿವಿಧ ಮುಖಗಳನ್ನು ತನ್ನೊಳಗೆ ಅಂತರ್ಗತಗೊಳಿಸಿಕೊಳ್ಳುತ್ತಿರುವ ಈ ಹೊತ್ತು ನನಗೆ ಲೋಹಿಯಾ ನೆನಪಾಗುತ್ತಾರೆ. ಪ್ರಾಮಾಣಿಕ, ಜನಪರ ಕಾಳಜಿಯುಳ್ಳ ಮತ್ತು ಶುದ್ಧ ಹಸ್ತದ ಅಪರೂಪದ ರಾಜಕಾರಣಿ ಈ ರಾಮಮನೋಹರ ಲೋಹಿಯಾ. ಲೋಹಿಯಾ ರಾಜಕಾರಣವನ್ನು ಯಾವತ್ತೂ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳಲಿಲ್ಲ. ಹಾಗೆ ಬಳಸುವವರನ್ನು ಅವರು ಖಂಡಿಸುತ್ತಿದ್ದರು. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಅದು ೧೯೬೨ ರ ಸಾರ್ವತ್ರಿಕ ಚುನಾವಣೆ. ಆ   ಸಂದರ್ಭ  ಲೋಹಿಯಾ  ಚುನಾವಣೆಯಲ್ಲಿ ನೆಹರು ವಿರುದ್ಧ ಸ್ಪರ್ಧಿಸುತ್ತಾರೆ. ಆಗ ನೆಹರು ರಾಜಕೀಯವಾಗಿ ಉತ್ತುಂಗದಲ್ಲಿದ್ದ  ಕಾಲವದು. ಆದರೂ ಲೋಹಿಯಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ತಮ್ಮ ಈ  ನಿಲುವಿಗೆ ಕಾರಣವನ್ನು ವಿವರಿಸಿ  ಲೋಹಿಯಾ ನೆಹರು ಅವರಿಗೆ ಪತ್ರ ಬರೆದು ಹೇಳುತ್ತಾರೆ 'ಈ ಚುನಾವಣೆಯಲ್ಲಿ ನೀವು ಗೆಲ್ಲುವುದು ನಿಶ್ಚಿತ ಆದರೆ ಅನಿಶ್ಚಿತವಾಗಿ ನಿಮಗೆ ಸೋಲಾದರೆ ನನಗೆ ಸಂತೋಷವಾಗುತ್ತದೆ. ಏಕೆಂದರೆ ಈ ಸೋಲು ನಿಮ್ಮನ್ನು ರಾಜಕಾರಣದಿಂದ ದೂರವಿಟ್ಟು ಒಂದಿಷ್ಟು ಆತ್ಮಾವಲೋಕನಕ್ಕೆ ದಾರಿಮಾಡಿ ಕೊಡುತ್ತದೆ. ಈ ರಾಜಕಾರಣಕ್ಕೆ ಬಂದ ಮೇಲೆ ಅಧಿಕಾರ ನಿಮ್ಮನ್ನು ಸಂಪೂರ್ಣವಾಗಿ ಬದಲಿಸಿದೆ. ನಿಮ್ಮನ್ನು ೧೯೪೭ ರ ಮೊದಲಿನ ನೆಹರುವಾಗಿ ಬದಲಿಸಲು ಮತ್ತು ನೋಡಲು ನಾನು ಇಚ್ಛಿಸುತ್ತೇನೆ'. ಲೋಹಿಯಾರ ದೃಷ್ಟಿಯಲ್ಲಿ ರಾಜಕಾರಣ ಎನ್ನುವುದು ಸಾಮಾಜ ಸೇವೆಯೇ ವಿನ: ಅದು ಹಣ ಮಾಡುವ ಉದ್ದಿಮೆಯಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ರಾಜಕಾರಣವನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸಿ ಅದನ್ನು  ಶುಚಿಗೊಳಿಸಲು ಲೋಹಿಯಾರಂಥ ವಿಚಾರಶೀಲ ರಾಜಕಾರಣಿಗಳ ಅಗತ್ಯವಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment