Tuesday, January 4, 2022

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ (ಉಪನ್ಯಾಸ)

 ದಿನಾಂಕ ೨೬.೧೨.೨೦೨೧ ರಂದು ಭಾವೈಸಿರಿ ಕಾರ್ಯಕ್ರಮದವರು ರೂಪದರ್ಶಿ ಕಾದಂಬರಿ ಕುರಿತು ನನ್ನ ಉಪನ್ಯಾಸವನ್ನು ಆಯೋಜಿಸಿದ್ದರು. ಉಪನ್ಯಾಸ ಕಾರ್ಯಕ್ರಮ ಈಗ ಯೂಟೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಉಪನ್ಯಾಸವನ್ನು ಕೇಳಬಹುದು.

https://www.youtube.com/watch?v=2NIKkkXhMLc

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ ಎನ್ನುವ ನನ್ನ ಲೇಖನದ ಓದಿಗಾಗಿ ಈ ಕೆಳಗಿನ ಕೊಂಡಿಯನ್ನು ಉಪಯೋಗಿಸಿ

https://manadamatu-rvk.blogspot.com/2016/12/blog-post.html


-ರಾಜಕುಮಾರ ಕುಲಕರ್ಣಿ 

Monday, January 3, 2022

ಪ್ರಶಸ್ತಿ ಬೇಕೇ ಪ್ರಶಸ್ತಿ?

 

(ದಿನಾಂಕ ೨೩.೧೦.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ) 

     ಇತ್ತೀಚೆಗೆ ನನ್ನ ಇ-ಮೇಲ್‍ಗೆ ಒಂದು ಪತ್ರ ಬಂದಿತ್ತು. ನಿಮ್ಮನ್ನು 2021 ನೇ ಸಾಲಿನ ಅತ್ಯುತ್ತಮ ಸಮಾಜ ಸೇವಾಕರ್ತ ಎನ್ನುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವರ್ಣರಂಜಿತ ಸಮಾರಂಭದಲ್ಲಿ ಗಣ್ಯರಿಂದ ನಿಮಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕೊನೆಯ ದಿನಾಂಕದೊಳಗಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಕಳುಹಿಸಿಕೊಡಿ. ಜೊತೆಗೆ 25,000 ರೂಪಾಯಿಗಳನ್ನು ನಮ್ಮ ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂದಾಯ ಮಾಡಿ’ ಇದಿಷ್ಟು ಆ ಪತ್ರದ ಒಕ್ಕಣೆಯಾಗಿತ್ತು. ಪತ್ರ ಓದಿ ಅಚ್ಚರಿಯುಂಟಾಯಿತು. ಯಾವುದೇ ಸೇವಾಸಂಸ್ಥೆಯೊಂದಿಗೆ ಗುರುತಿಸಿಕೊಂಡಿರದ ನನ್ನನ್ನು ಹೀಗೆ ಧಿಡೀರನೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಶ್ಚರ್ಯವನ್ನುಂಟು ಮಾಡಿತು. ಪ್ರಶಸ್ತಿ ಸ್ವೀಕರಿಸಲು ಹಣ ಸಂದಾಯ ಮಾಡಬೇಕಾಗಿರುವ ಸಂಗತಿ ಸಂಶಯಕ್ಕೆ ಕಾರಣವಾಗಿ ನಾನು ಆ ಸಂಸ್ಥೆಯೊಂದಿಗೆ ಯಾವುದೇ ಪತ್ರವ್ಯವಹಾರವನ್ನು ಮುಂದುವರೆಸಲಿಲ್ಲ.

ಇಂಥ ಅನುಭವ ಕೇವಲ ನನ್ನೊಬ್ಬನದಲ್ಲ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಆಗಾಗ ಈ ರೀತಿಯ ಪ್ರಶಸ್ತಿ ವಂಚನೆಯ ಪತ್ರಗಳು ಬರುತ್ತಿರುತ್ತವೆ. ಅತ್ಯುತ್ತಮ ವೈದ್ಯ, ಶಿಕ್ಷಕ, ಉದ್ಯಮಿ, ಸಾಮಾಜಿಕ ಸೇವಾಕರ್ತ ಎನ್ನುವ ಪ್ರಶಸ್ತಿಗಳನ್ನು ಒಂದು ನಿರ್ಧಿಷ್ಟ ಮೊತ್ತಕ್ಕೆ ವಿತರಿಸುವ ಪರಿಪಾಠ ಚಾಲ್ತಿಗೆ ಬಂದಿದೆ. ಹೆಸರನ್ನೇ ಕೇಳಿರದ ಸಂಸ್ಥೆಗಳು ಧಿಡೀರೆಂದು ಸಂಪರ್ಕಿಸಿ ಸಂದಾಯ ಮಾಡಬೇಕಾದ ಮೊತ್ತವನ್ನು ತಿಳಿಸಿ ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾಹಿತಿ ನೀಡುತ್ತವೆ. ಹಣ ಪಡೆದು ಸಮಾರಂಭ ಆಯೋಜಿಸಿ ಗಣ್ಯರಿಂದ ಪ್ರಶಸ್ತಿ ಫಲಕವನ್ನು ಕೊಡಿಸಿದ ಉದಾಹರಣೆಗಳೂ ಉಂಟು. ಹಣ ಸಂದಾಯ ಮಾಡಿ ಪ್ರಶಸ್ತಿ ಸ್ವೀಕರಿಸಿ ಫಲಕವನ್ನು ಮನೆಯ ಹಜಾರದ ಗೋಡೆಯ ಮೇಲೆ ತೂಗುಹಾಕಿ ಧನ್ಯತೆ ಅನುಭವಿಸಿದ ಸಾಧಕರ ಸಂಖ್ಯೆಯೂ ಬಹಳಷ್ಟಿದೆ.

ಪ್ರಶಸ್ತಿ ಪುರಸ್ಕಾರದ ಒಂದು ಮುಖ ಮೇಲಿನ ಘಟನೆಯಾದರೆ ಇನ್ನುಳಿದ ಸಂಗತಿಗಳನ್ನು  ಲೇಖನದಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ. ಕೆಲವು ದಿನಗಳ ಹಿಂದೆ ಸನ್ಮಾನ ಸಮಾರಂಭಕ್ಕೆ ಹಾಜರಾಗಲೆಂದು ಊರಿಗೆ ಹೋಗಬೇಕಾದ ಸಂದರ್ಭ ಎದುರಾಯಿತು. ಊರಿನಲ್ಲಿ ನನ್ನ ಮಿತ್ರನ ಶತಾಯುಷಿ ಅಜ್ಜನನ್ನು ಸನ್ಮಾನಿಸಿ ಅಭಿನಂದನ ಗ್ರಂಥವನ್ನು ಸಮರ್ಪಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ದಿನದ ಸಮಾರಂಭಕ್ಕೆ ಬಂಧುಗಳು, ಹಿತೈಷಿಗಳು, ರಾಜಕಾರಣಿಗಳ ಮಹಾದಂಡೆ ನೆರೆದಿತ್ತು. ಸನ್ಮಾನಿತ ಅಜ್ಜ ಅವರೇನೂ ದೊಡ್ಡ ಸಾಧಕರಲ್ಲ. ನೂರು ವರ್ಷಗಳನ್ನು ಪೂರೈಸಿದ್ದೆ ಅಭಿನಂದನೆಗೆ ಕಾರಣವಾಗಿತ್ತು. ಅಭಿನಂದನಗ್ರಂಥಗಳನ್ನು ಸಮರ್ಪಿಸುವ ಮತ್ತು ಸ್ವೀಕರಿಸುವ ವಾಂಛೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹೀಗೆ ಅಭಿನಂದನಗ್ರಂಥಗಳನ್ನು ಸಮರ್ಪಿಸಲು ವ್ಯಕ್ತಿಯೇನೂ ಯಾವುದೇ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಬೇಕೆಂದೇನಿಲ್ಲ. ಹಿಂದಿನ ದಿನಗಳಲ್ಲಿ ಮಹಾನ್ ಸಾಧಕರಿಗೆ ಅವರ ಅಭಿಮಾನಿಗಳು ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವ ಪರಿಪಾಠವಿತ್ತು. ಆದರೆ ಇಂದು ಸಾಧನೆಗಿಂತ ವಯೋಮಾನವೇ ಅಭಿನಂದನಾ ಗ್ರಂಥದ ಸಮರ್ಪಣೆಗೆ ನಿರ್ಧಿಷ್ಟ ಮಾನದಂಡವಾಗಿದೆ. ರಜತ ಮಹೋತ್ಸವ, ಷಷ್ಟ್ಯಬ್ಧಿ, ಸಹಸ್ರ ಚಂದ್ರಮಾನ ದರ್ಶನ ಇಂಥವೇ ಕಾರಣಗಳನ್ನು ನೀಡಿ ಸಾವಿರಾರು ಸಂಖ್ಯೆಯಲ್ಲಿ ಅಭಿನಂದನಗ್ರಂಥಗಳು ಪ್ರಕಟವಾಗುತ್ತಿವೆ. ಅದೆಷ್ಟೋ ಸಲ ಅಭಿನಂದನೆಗೆ ಒಳಗಾಗುವ ವ್ಯಕ್ತಿಯೇ ಅಭಿಮಾನಿ ಬಳಗವನ್ನು ಹುಟ್ಟುಹಾಕಿ ಇಡೀ ಖರ್ಚುವೆಚ್ಚವನ್ನು ಭರಿಸಿ ಸನ್ಮಾನಕ್ಕೆ ಒಳಗಾದ ಅನೇಕ ಉದಾಹರಣೆಗಳಿವೆ. ನಾನು ನಿನ್ನನ್ನು ಅಭಿನಂದಿಸುತ್ತೇನೆ, ನೀನು ನನ್ನನ್ನು ಎನ್ನುವ ಕೊಡು-ಕೊಳ್ಳುವ ಸಂಪ್ರದಾಯವೂ ಇಲ್ಲಿ ರೂಢಿಯಲ್ಲಿದೆ. ಇನ್ನು ಅಭಿನಂದನಗ್ರಂಥದ ಶೀರ್ಷಿಕೆಗೂ ಮತ್ತು ಅಭಿನಂದನೆಗೆ ಒಳಗಾಗುವ ವ್ಯಕ್ತಿಯ ಬದುಕಿಗೂ ಸಂಬಂಧವೇ ಇರುವುದಿಲ್ಲ. ಬುದ್ಧ, ಗಾಂಧಿ, ಬಸವ, ಮಹಾವೀರರೆಲ್ಲ ಶೀರ್ಷಿಕೆಗಳಲ್ಲಿ ಮೈದಾಳುತ್ತಾರೆ.

ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಕರ್ನಾಟದಲ್ಲಿ ಸರ್ಕಾರ ಸೇರಿದಂತೆ ಅನೇಕ ಪ್ರತಿಷ್ಠಾನಗಳು ಅಸ್ತಿತ್ವದಲ್ಲಿವೆ. ಇಂಥ ಘನಸಂಸ್ಥೆಗಳ ಪ್ರಶಸ್ತಿ ಪುರಸ್ಕಾರವನ್ನೆ ಅನುಮಾನದಿಂದ ನೋಡುವಂತೆ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಿಗೆ ಪ್ರಶಸ್ತಿ ನೀಡಲು ಕರ್ನಾಟಕದಲ್ಲಿ ನೂರಾರು ಸಣ್ಣಪುಟ್ಟ ಸಂಸ್ಥೆಗಳು ಹುಟ್ಟಿಕೊಂಡಿವೆ. ಪ್ರಶಸ್ತಿ ಎನ್ನುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಲೇಖಕ ತನ್ನ ಪ್ರಕಟಿತ ಪುಸ್ತಕದ ಮೂರು ಪ್ರತಿಗಳನ್ನು ಪ್ರಶಸ್ತಿ ಸಂಸ್ಥೆಗೆ ಕಳುಹಿಸಿಕೊಡಬೇಕು. ಒಂದು ಪ್ರಶಸ್ತಿಗಾಗಿ ನೂರಾರು ಲೇಖಕರು ಭಾಗವಹಿಸುತ್ತಾರೆ. ಸಂಸ್ಥೆಗೆ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳು ಜಮೆಯಾಗುತ್ತವೆ. ಈ ನಡುವೆ ಪ್ರಶಸ್ತಿಗಾಗಿ ಲಾಬಿ ಮತ್ತು ಶಿಫಾರಸುಗಳು ಬೇರೆ. ಜಾತಿ, ಧರ್ಮ, ಸಮುದಾಯ, ಪ್ರಾಂತ್ಯ ನೇರವಾಗಿ ಪ್ರಶಸ್ತಿ ವಿತರಣೆಯಲ್ಲಿ ಮೇಲುಗೈ ಸಾಧಿಸುತ್ತವೆ.    

ಈ ನಡುವೆ ವಿಶ್ವವಿದ್ಯಾಲಯಗಳು ಕೊಡಮಾಡುವ ಗೌರವ ಡಾಕ್ಟರೇಟಗಳು ತಮ್ಮ ಮೌಲ್ಯವನ್ನೇ ಕಳೆದುಕೊಂಡಿವೆ. ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಿರುವಂತೆ ಪ್ರತಿವರ್ಷ ‘ಗೌಡಾ’ಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ಇಲ್ಲಿಯೂ ಜಾತಿ, ಸಮುದಾಯ, ಭೌಗೋಳಿಕ ಪ್ರದೇಶ ಆಯ್ಕೆ ಹಿಂದಿನ ಕಸರತ್ತಿನಲ್ಲಿ ಪ್ರಧಾನ ಪಾತ್ರವಹಿಸುತ್ತಿವೆ. ಈಗೀಗ ವಿದೇಶಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಭಾರತೀಯ ಸಾಧಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಶಸ್ತಿಯೂ ಈಗ ಗ್ಲೋಬಲೀಕರಣಗೊಂಡಿದೆ. ಪ್ರಶಸ್ತಿಗಾಗಿ ಸಾವಿರಾರು ಡಾಲರ್‍ಗಳ ಮೊತ್ತ ಕೈ ಬದಲಾಯಿಸುತ್ತದೆ.

ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಕೆಲವು ತಿಂಗಳುಗಳ ಸಮಯವಿರುವಾಗಲೇ ರಾಜ್ಯೋತ್ಸವ ಪ್ರಶಸ್ತಿಯ ಚಟುವಟಿಕೆ ಬಿರುಸುಗೊಳ್ಳುತ್ತದೆ. ಪ್ರಶಸ್ತಿಯ ಆಕಾಂಕ್ಷಿ ತನ್ನ ಸಾಧನೆಯ ಕಿರುಹೊತ್ತಿಗೆ ತಯ್ಯಾರಿಸಿ ರಾಜಕೀಯ ನಾಯಕರ ಶಿಫಾರಸಿನೊಂದಿಗೆ ಸಂಬಂಧಿಸಿದ ಇಲಾಖೆಗೆ ಅರ್ಜಿ ಗುಜರಾಯಿಸಬೇಕು. ಸಾಧಕನೇ ಪ್ರಶಸ್ತಿಯನ್ನು ಹುಡುಕಿಹೋಗುವ ಪರಿಪಾಠವಿದು. ಪ್ರಶಸ್ತಿ ಆಯ್ಕೆಯ ಕಸರತ್ತು ಪ್ರಶಸ್ತಿ ಸಮಾರಂಭದ ಹಿಂದಿನ ದಿನದವರೆಗೂ ನಡೆಯುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಕೊನೆ ಗಳಿಗೆಯಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಟ್ಟಿಯೇ ಬದಲಾಗಿರುವುದುಂಟು. ಬೇಡದ ಹೆಸರುಗಳನ್ನು ಕೈಬಿಟ್ಟು ಬೇಕಾದ ಹೆಸರುಗಳನ್ನು ಸೇರಿಸಿ ಪುರಸ್ಕೃತರೇ ಮುಜುಗರಕ್ಕೊಳಗಾದ ಸನ್ನಿವೇಶ ನಿರ್ಮಾಣಗೊಂಡು ಪ್ರಶಸ್ತಿಯ ಘನತೆಯೇ ಹಾಳಾದ ಹಲವು ಉದಾಹರಣೆಗಳಿವೆ.

ಈಗ ಕೇಂದ್ರ ಸರ್ಕಾರ ಪದ್ಮಪ್ರಶಸ್ತಿಗಾಗಿ ಸಾರ್ವಜನಿಕರೇ ಸಾಧಕರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಪರಿಣಾಮವಾಗಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಎಷ್ಟೋ ಸಾಧಕರು ಗೌರವಕ್ಕೆ ಪಾತ್ರರಾಗಲು ಸಾಧ್ಯವಾಯಿತು. ಸರ್ಕಾರವಾಗಲಿ ಮತ್ತು ಸಂಘ ಸಂಸ್ಥೆಗಳಾಗಲಿ ಸಾಧಕರನ್ನು ಗುರುತಿಸಿ ಗೌರವಿಸುವಂಥ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಸಾಧಕರೇ ಮುಂದಾಗಿ ಪ್ರಶಸ್ತಿಗೆ ಅರ್ಜಿ ಗುಜರಾಯಿಸುವ ಪದ್ಧತಿ ಕೊನೆಗೊಳ್ಳಬೇಕು. ಪ್ರಶಸ್ತಿಗೆ ಅನರ್ಹರು ಆಯ್ಕೆಯಾಗುತ್ತಿರುವರು ಎನ್ನುವುದಕ್ಕಿಂತ ಅರ್ಹನು ವಂಚಿತನಾಗುತ್ತಿರುವನು ಎನ್ನುವ ಪ್ರಜ್ಞೆ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಶಿಫಾರಸು ಮಾಡುವ ರಾಜಕಾರಣಿಗಳಲ್ಲಿ ಮೂಡಬೇಕು. 

-ರಾಜಕುಮಾರ ಕುಲಕರ್ಣಿ