Saturday, November 2, 2019

ಚಹರೆ (ಕಥೆ)




(ನವೆಂಬರ್ ೨೦೧೯ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

           ಕಳೆದ ಇಪ್ಪತ್ತು ವರ್ಷಗಳಿಂದ ಕಂಪನಿಯ ಪ್ರತಿಷ್ಠೆಗೆ ಯಾವ ಕುಂದು ಬರದಂತೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದ ತನ್ನನ್ನು ‘ಯಾರು ನೀನು?’ ಎಂದು ಕಂಪನಿಯ ಮುಖ್ಯಸ್ಥರಾದ ಕೇಶವರಾವ ಸಾಳುಂಕೆ ಕೇಳಿದ ಪ್ರಶ್ನೆ ಭೂತಾಕಾರದಂತೆ ಬೆಳೆದು ಕೂತಲ್ಲಿ ನಿಂತಲ್ಲಿ ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದಾಗ ಪ್ರೇಮಚಂದ ಗಲಗಲಿಗೆ ತನ್ನ ಅಸ್ತಿತ್ವವೇ ಎದುರು ನಿಂತು ಅಣಕಿಸಿದಂತಾಯಿತು. ಅದೇ ಪ್ರಶ್ನೆಯನ್ನು ತಲೆಯಲ್ಲಿ ಹೊತ್ತು ಆಫೀಸಿನಿಂದ ಮನೆಗೆ ಬಂದವನು ಹೆಂಡತಿ ಮಾಡಿಕೊಟ್ಟ ಚಹಾ ಕೂಡ ಕುಡಿಯಲು ಪುರುಸೊತ್ತು ಇಲ್ಲದವನಂತೆ ಮಲಗುವ ಕೋಣೆಯೊಳಗೆ ಹೋಗಿ ಧಡಾರನೇ ಬಾಗಿಲು ಮುಚ್ಚಿದವನು ಅಲೆಮಾರದ ಎದುರಿನ ಒಂದು ಭಾಗದಲ್ಲಿದ್ದ ಆಳೆತ್ತರದ ನಿಲುವುಗನ್ನಡಿಯ ಎದುರು ನಿಂತು ತನ್ನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ನಿರ್ಲಿಪ್ತತೆಯೇ ಹಾಸಿಗೆ ಹಾಸಿಕೊಂಡು ಮಲಗಿದೆಯೇನೋ ಎನ್ನುವಷ್ಟು ಸಪ್ಪೆಯಾಗಿದ್ದ ಮುಖ, ಕಂಪ್ಯೂಟರಿನ ಪರದೆಯ ಮೇಲೆ ಕಣ್ಣು ಕೀಲಿಸಿ ದೃಷ್ಟಿ ಮಂದವಾದ ಕಣ್ಣುಗಳಿಗೆ ಬೆಳಕು ನೀಡಲೆಂಬಂತೆ ಅರ್ಧಮುಖವನ್ನಾವರಿಸಿದ್ದ ದಪ್ಪ ಗಾಜಿನ ಕನ್ನಡಕ, ಕನ್ನಡಕದ ಒಳಗಿನಿಂದ ಕಾಣುತ್ತಿದ್ದ ನಿರ್ಭಾವುಕ ಕಣ್ಣುಗಳು, ಬೆಂದ ಆಲುಗಡ್ಡೆಯಂಥ ಮೂಗು ಯಾವ ಕೋನದಿಂದ ನೋಡಿದರೂ ತನ್ನದು ನೆನಪಿನಲ್ಲಿಟ್ಟುಕೊಳ್ಳಬಹುದಾದ ಚಹರೆ ಅಲ್ಲವೆನಿಸಿ ಪ್ರೇಮಚಂದ ಒಂದುಕ್ಷಣ ಅಧೀರನಾದ. ತನ್ನ ಇದುವರೆಗಿನ ಐವತ್ತು ವರ್ಷಗಳ ಆಯುಷ್ಯದಲ್ಲಿ ತನ್ನ ಮುಖದ ಚಹರೆಯ ಬಗ್ಗೆ ಮೂಡದೇ ಇದ್ದ ಜಿಗುಪ್ಸೆ ಈಗ ತನ್ನಲ್ಲಿ ಮೂಡುತ್ತಿರುವ ಬಗಗೆ ಮತ್ತು ಆ ಜಿಗುಪ್ಸೆಯೇ ಹೆಮ್ಮರವಾಗಿ ಬೆಳೆದು ತನ್ನನ್ನೆಲ್ಲಿ ನುಂಗಿಬಿಡುತ್ತದೆಯೋ ಎನ್ನುವ ಆತಂಕ ಮನಸ್ಸಿನಲ್ಲಿ ಮೂಡಿದ್ದೇ ಪ್ರೇಮಚಂದ ಎದುರಿನ ನಿಲುವುಗನ್ನಡಿಯಲ್ಲಿ ಕಾಣುತ್ತಿದ್ದ ತನ್ನ ಪ್ರತಿಬಿಂಬದ ಮೇಲಿನ ದೃಷ್ಟಿಯನ್ನು ಸರಕ್ಕನೆ ಬದಲಿಸಿ ಕೋಣೆಯಿಂದ ಹೊರಬಂದ. ಕೋಣೆಯ ಹೊರಗೆ ಚಹಾದ ಕಪ್ಪು ಕೈಯಲ್ಲಿ ಹಿಡಿದು ನಿಂತಿದ್ದ ಸರಳಾಬಾಯಿಗೆ ತನ್ನ ಗಂಡನ ಇವತ್ತಿನ ವರ್ತನೆ ವಿಚಿತ್ರವಾಗಿ ಕಾಣಿಸಿತು. ಆ ರಾತ್ರಿ ಊಟ ಸೇರದೆ, ನಿದ್ದೆ ಹತ್ತಿರ ಸುಳಿಯದೆ ಇಡೀ ರಾತ್ರಿ ಪ್ರೇಮಚಂದನ ಮನಸ್ಸು ಒಂದುರೀತಿ ಕ್ಷೋಭೆಯಿಂದ ನರಳಿತು.

ನಡೆದದ್ದಿಷ್ಟು. ವರ್ಷಕ್ಕೆ ನಾಲ್ಕಾರು ಬಾರಿ ಕಂಪನಿಯ ಬ್ರ್ಯಾಂಚ್ ಆಫೀಸಿಗೆ ಭೇಟಿ ನೀಡುವ ಮುಖ್ಯಸ್ಥ ಕೇಶವರಾವ ಸಾಳುಂಕೆ ವಾಡಿಕೆಯಂತೆ ಈ ಸಲವೂ ಪ್ರೇಮಚಂದ ಕೆಲಸ ಮಾಡುವ ಬ್ರ್ಯಾಂಚಾಫೀಸಿಗೆ ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡುವ ಪ್ರತಿಸಂದರ್ಭ ಕಚೇರಿಯ ಎಲ್ಲ ಸಿಬ್ಬಂದಿಯನ್ನು ಪರಿಚಯಿಸಿಕೊಂಡು ಅವರ ಮತ್ತು ಕುಟುಂಬ ವರ್ಗದವರ ಯೋಗಕ್ಷೇಮವನ್ನು ವಿಚಾರಿಸುವುದು ಕೇಶವರಾವ ಸಾಳುಂಕೆ ಲಾಗಾಯ್ತಿನಿಂದಲೂ ರೂಢಿಸಿಕೊಂಡು ಬಂದ ಪದ್ಧತಿಯಾಗಿತ್ತು. ಇದೆಲ್ಲ ಆತನ ವ್ಯಾಪಾರಿ ಮನೋಭಾವದ ಚಾಣಾಕ್ಷತನವೆಂದು ಕೆಲವರು ಮಾತನಾಡಿಕೊಂಡರೂ ಯಾರೂ ಅವರೆದುರು ಬಾಯಿಬಿಟ್ಟು ಹೇಳುವ ಧೈರ್ಯ ತೋರುತ್ತಿರಲಿಲ್ಲ. ವಾಡಿಕೆಯಂತೆ ಜನರಲ್ ಮ್ಯಾನೇಜರ್ ರಾಮನಾಥ ಚಿದ್ರಿ ತನ್ನ ಆಫೀಸಿನ ಸಿಬ್ಬಂದಿಯನ್ನು ಮುಖ್ಯಸ್ಥರಿಗೆ ಪರಿಚಯಿಸುತ್ತಿರುವಾಗ ಶೇಷಗಿರಿ ಪುರೋಹಿತನನ್ನು ನೋಡಿದ್ದೆ ಸಾಳುಂಕೆ ‘ಏನ್ರಿ ಪುರೋಹಿತ ಹೇಗಿದ್ದೀರಿ’ ಎಂದು ತಾವೇ ಮುಂದಾಗಿ ಮಾತನಾಡಿಸಿ ಕೈ ಕುಲುಕಿದವರು ಪ್ರೇಮಚಂದನನ್ನು ನೋಡುತ್ತಲೇ ಯಾರು ನೀನು ಎಂದು ಪ್ರಶ್ನಿಸಿದ್ದು ಪ್ರೇಮಚಂದನಿಗೆ ಸಾಳುಂಕೆ ಸಾಹೇಬರು ತನ್ನ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಗಿ ಅವಮಾನದಿಂದ ಕುಗ್ಗಿಹೋದ. ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಜನರಲ್ ಮ್ಯಾನೇಜರ್ ರಾಮನಾಥ ಕಂಪನಿಯ ಇಪ್ಪತ್ತೈದನೇ ವರ್ಷಾಚರಣೆಯ ನಿಮಿತ್ಯ ಕಂಪನಿಯ ಬೆಳವಣಿಗೆ ಮತ್ತು ಸಾಧನೆ ಕುರಿತು ದಿನಪತ್ರಿಕೆಗೆ ಲೇಖನ ಬರೆಯುವಂತೆ ಪ್ರೇಮಚಂದನನ್ನು ನಿಯೋಜಿಸಿ ಅವನನ್ನು ಮುಖ್ಯಸ್ಥ ಕೇಶವರಾವ ಸಾಳುಂಕೆ ಅವರ ಸಂದರ್ಶನ ಮಾಡಲು ಹೆಡ್ ಆಫೀಸಿಗೆ ಕಳುಹಿಸಿದ್ದ. ಸಾಳುಂಕೆ ಸಂದರ್ಶನದೊಂದಿಗೆ ಪ್ರೇಮಚಂದ ಬರೆದ ಸವಿವರವಾದ ಲೇಖನ ಪತ್ರಿಕೆಯ ಇಡೀ ಪುಟದ ತುಂಬ ಪ್ರಕಟವಾಗಿ ಪ್ರೇಮಚಂದನಲ್ಲಿ ಧನ್ಯತೆ ಮತ್ತು ಅಭಿಮಾನ ಒಟ್ಟೊಟ್ಟಿಗೆ ಮೂಡಲು ಕಾರಣವಾಗಿತ್ತು. ಆ ದಿನ ಕೇಶವರಾವ ಸಾಳುಂಕೆ ಹೆಡ್ ಆಫೀಸಿನ ತಮ್ಮ ಚೆಂಬರಿನಲ್ಲಿ ಪ್ರೇಮಚಂದನನ್ನು ಗೌರವದಿಂದಲೇ ಕಂಡಿದ್ದರು. ಸಂದರ್ಶನದುದ್ದಕ್ಕೂ ಪ್ರೀತಿಯಿಂದಲೇ ಮಾತನಾಡಿಸಿ ಮಧ್ಯಾಹ್ನದ ಲಂಚ್ ಕೂಡ ತಮ್ಮ ಚೆಂಬರಿನಲ್ಲೇ ವ್ಯವಸ್ಥೆಗೊಳಿಸಿದ್ದರು. ಮಧ್ಯದಲ್ಲಿ ತಮಗೆ ಭೇಟಿಯಾಗಲು ಯಾರನ್ನೂ ಒಳಗಡೆ ಬಿಡಬಾರದೆಂದು ಆದೇಶಿಸಿದ್ದ ಸಾಳುಂಕೆ ಆ ಇಡೀ ಅರ್ಧ ದಿನವನ್ನು ಪ್ರೇಮಚಂದನೊಂದಿಗೆ ಕಳೆದು ಅವನಲ್ಲಿ ಧನ್ಯತೆಯ ಭಾವವನ್ನು ಮೂಡಿಸಿದ್ದರು. ಆ ದಿನದ ಭೇಟಿಯ ನಂತರ ಕಂಪನಿಯ ಮುಖ್ಯಸ್ಥರ ಭಾವದಲ್ಲಿ ತನ್ನ ಚಿತ್ರ ಸ್ಥಿರವಾಗಿ ನಿಲ್ಲುತ್ತದೆಂದು ಸಂಭ್ರಮಿಸಿದ ಪ್ರೇಮಚಂದನ ಆಶಾಗೋಪುರ ಇವತ್ತಿನ ಸಾಳುಂಕೆ ಅವರ ಪ್ರಶ್ನೆಯಿಂದ ಕುಸಿದು ಬಿದ್ದು ಅವನಲ್ಲಿ ಒಂದುರೀತಿಯ ಅಶಾಂತಿಯನ್ನು ಮತ್ತು ಅಸ್ತಿತ್ವದ ಪ್ರಶ್ನೆಯನ್ನು ಏಕಕಾಲಕ್ಕೆ ಹುಟ್ಟಿಸಿತ್ತು.

ಕಳೆದ ಇಪ್ಪತ್ತು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯ ಶಾಖಾ ಕಚೇರಿಯೊಂದರಲ್ಲಿ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಪ್ರೇಮಚಂದ ಗಲಗಲಿ ಆ ಕಡೆ ಶ್ರೀಮಂತನೂ ಅಲ್ಲದ ಈ ಕಡೆ ಬಡವನೂ ಅಲ್ಲದ ಮಧ್ಯಮವರ್ಗಕ್ಕೆ ಸೇರಿದ ಭಾರತದ ಸತ್ಪ್ರಜೆ. ತಾನು, ತನ್ನ ಕೆಲಸ, ತನ್ನ ಕುಟುಂಬ ಎಂದು ಸೀಮಿತ ಚೌಕಟ್ಟಿನಲ್ಲಿ ಬದುಕುತ್ತ ಉಳಿದ ಯಾವ ಉಸಬಾರಿಗೂ ಹೋಗದೆ ಬದುಕುತ್ತಿರುವ ಸಾಧು ಸ್ವಭಾವದ ಮನುಷ್ಯ. ತನ್ನ ದೈನಂದಿನ ಉಪದ್ರವಗಳ ನಡುವೆಯೂ ಆಗಾಗ ಕಥೆ ಕಾದಂಬರಿಗಳನ್ನು ಓದುವ ಮತ್ತು ತನಗನಿಸಿದ್ದನ್ನು ಬರೆಯುವ ಚಟವಿದೆ. ಪ್ರೇಮಚಂದನ ನಾಲ್ಕಾರು ಪುಸ್ತಕಗಳನ್ನು ಪ್ರಕಾಶಕರೊಬ್ಬರು ಪ್ರಕಟಿಸಿದ್ದರಿಂದ ಮನೆಯ ಕಪಾಟಿನಲ್ಲಿ ಕುವೆಂಪು, ಕಾರಂತ, ಭೈರಪ್ಪ, ತೇಜಸ್ವಿ ಅವರ ಪುಸ್ತಕಗಳ ಸಾಲಿನಲ್ಲಿ ಕುಳಿತ ತನ್ನ ಪುಸ್ತಕಗಳ ಮೈದಡವಿ ತಾನೊಬ್ಬ ಬರಹಗಾರನೆಂದು ಆಗಾಗ ಪುಳಕಗೊಳ್ಳುತ್ತಾನೆ. ತಾನೊಬ್ಬ ಬರಹಗಾರನೆಂಬ ಕಾರಣಕ್ಕೆ ಜನರಲ್ ಮ್ಯಾನೇಜರ್ ರಾಮನಾಥ ತನ್ನನ್ನು ಕಂಪನಿಯ ಬಗ್ಗೆ ಲೇಖನ ಬರೆಯಲು ಪುಸಲಾಯಿಸಿದ್ದನೆಂದು ಮತ್ತು ಬಾಸ್‍ನ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟನೆಂದು ತಿಳಿದುಕೊಂಡಿದ್ದ ಪ್ರೇಮಚಂದನಿಗೆ ತನ್ನೊಳಗಿನ ಬರವಣಿಗೆಯ ಈ ಪ್ರತಿಭೆಯಿಂದಾಗಿ ಕಂಪನಿಯಲ್ಲಿ ತನ್ನ ಗೌರವ ಮತ್ತು ಸ್ಥಾನಮಾನ ಹೆಚ್ಚಲಿದೆಯೆಂದು ಭಾವಿಸಿದ್ದವನಿಗೆ ಕಂಪನಿಯ ಬಾಸ್ ತನ್ನನ್ನು ಅಪರಿಚಿತನಂತೆ ನಡೆಸಿಕೊಂಡಿದ್ದು ನಿರಾಸೆಗೆ ಕಾರಣವಾಗಿತ್ತು. ಸಂದರ್ಶನದ ನೆಪದಲ್ಲಿ ತನ್ನೊಂದಿಗೆ ಇಡೀ ಅರ್ಧ ದಿನವನ್ನು ಕಳೆದ ಕೇಶವರಾವ ಸಾಳುಂಕೆ ತನ್ನನ್ನು ಮರೆತು ವರ್ಷಕ್ಕೆ ನಾಲ್ಕಾರು ಬಾರಿ ಅದು ನಾಲ್ಕೈದು ನಿಮಿಷದ ಭೇಟಿಯಲ್ಲೇ ಶೇಷಗಿರಿ ಪುರೋಹಿತನನ್ನು ನೆನಪಿಟ್ಟುಕೊಳ್ಳುವುದೆಂದರೇನು ಅವನನ್ನು ಎಲ್ಲರೆದುರು ಹೆಸರು ಹಿಡಿದು ಮಾತನಾಡಿಸಿ ಯೋಗಕ್ಷೇಮ ವಿಚಾರಿಸುವುದೇನು ಪ್ರೇಮಚಂದನಿಗೆ ಎಲ್ಲವೂ ಅಯೋಮಯ ಎನಿಸಿ ಕಾರಣ ತಿಳಿಯದೇ ತಲೆಕೆಡಿಸಿಕೊಂಡಿದ್ದ. ಕಳೆದ ಇಪ್ಪತ್ತು ವರ್ಷಗಳಿಂದ ತಾನು ಪ್ರತಿನಿತ್ಯ ನೋಡುತ್ತಿರುವ ಶೇಷಗಿರಿ ಪುರೋಹಿತನ ಮುಖವನ್ನು ಪದೆಪದೆ ಕಣ್ಣೆದುರು ತಂದು ನಿಲ್ಲಿಸಿಕೊಳ್ಳಲು ಪ್ರಯತ್ನಿಸಿದ ಪ್ರೇಮಚಂದನಿಗೆ ಆ ಮುಖದಲ್ಲಿ ಯಾವ ಹೊಸ ಚಹರೆಯೂ ಗೋಚರಿಸಲಿಲ್ಲ. ಕೋಲು ಮುಖ, ನೀಳ ಮೂಗು, ಭ್ರೂಮಧ್ಯದಲ್ಲಿ ಪ್ರತಿಷ್ಠಾಪಿತಗೊಂಡ ಮಂತ್ರಾಕ್ಷತೆ ಸಹಿತ ಉದ್ದನೆಯ ತಿಲಕ, ಹಣೆಯ ಎಡ ಬಲದಲ್ಲಿ ಗಂಧದಿಂದ ನಿರ್ಮಾತೃಗೊಂಡ ಶಂಖ ಮತ್ತು ಚಕ್ರ, ತಲೆಯ ಹಿಂಬಾಗದಲ್ಲಿ ದೃಷ್ಟಿಗೆ ಗೋಚರವಾಗುವ ಶಿಖೆ ಇಪ್ಪತ್ತು ವರ್ಷಗಳಿಂದ ತಾನು ನೋಡುತ್ತಿರುವುದು ಶೇಷಗಿರಿ ಪುರೋಹಿತನ ಇದೊಂದೆ ಚಹರೆ ಅದು ಹೇಗೆ ಕಂಪನಿಯ ಮುಖ್ಯಸ್ಥರನ್ನು ಆಕರ್ಷಿಸಿತು ಎನ್ನುವ ಸಂದಿಗ್ಧತೆಗೆ ಬಿದ್ದು ಪ್ರೇಮಚಂದ ರಾತ್ರಿಯೆಲ್ಲ ಆಲೋಚಿಸಿದ. ಶೇಷಗಿರಿಯ ಈ ಸಿಗ್ನೆಚರ್ ಚಹರೆಯೇ ಕೇಶವರಾವ ಸಾಳುಂಕೆ ಅವನ ಬಗ್ಗೆ ವಿಶೇಷ ಆಸ್ಥೆ ತಾಳಲು ಕಾರಣವಾಗಿತ್ತು ಎನ್ನುವುದು ಪ್ರೇಮಚಂದನ ಮುಗ್ಧ ಮನಸ್ಸಿನ ತಿಳುವಳಿಕೆಗೆ ನಿಲುಕದ ಸಂಗತಿಯಾಗಿತ್ತು. 

ಒಟ್ಟಾರೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಕೇಶವರಾವ ಸಾಳುಂಕೆಯ ಅಳಿಯ ವಾಸಿಸುತ್ತಿರುವುದು ಶೇಷಗಿರಿ ಪುರೋಹಿತನ ಸ್ವಂತ ಮನೆಯಿದ್ದ ಸಾರಸ್ವತ ಕಾಲೋನಿಯ ಐದನೇ ವಾರ್ಡಿನಲ್ಲಿ. ಅಳಿಯ ಮಹಾಶಯ ಅರ್ಧದಲ್ಲೇ ಎಂಜಿನಿಯರ್ ವಿದ್ಯಾಭ್ಯಾಸಕ್ಕೆ ಎಳ್ಳು-ನೀರು ಬಿಟ್ಟು ವ್ಯಾಪಾರ ವಹಿವಾಟೆಂದು ನಾಲ್ಕೈದು ವರ್ಷ ಊರೂರು ಅಲೆದಾಡಿ ಆದಾಯಕ್ಕಿಂತ ನಷ್ಟದ ಬಾಬತ್ತನ್ನೆ ತೋರಿಸಿ ಮಾವ ಕೇಶವರಾವ ಸಾಳುಂಕೆಗೆ ತಲೆ ನೋವಾಗಿದ್ದ. ಮಗಳ ಬದುಕಿಗೊಂದು ದಾರಿ ಮಾಡಿಕೊಡಬೇಕೆಂದು ಆಲೋಚಿಸುತ್ತಿದ್ದವರಿಗೆ ಇನ್ನು ಆರು ತಿಂಗಳಲ್ಲಿ ನಡೆಯಲಿರುವ ನಗರಸಭೆ ಎಲೆಕ್ಶನ್ ಕತ್ತಲಲ್ಲಿ ತಡಕಾಡುವವನಿಗೆ ಬೆಳಕಿನ ಕಿರಣದಂತೆ ತೋರಿ ಅವರಲ್ಲಿ ಸಣ್ಣದೊಂದು ಆಸೆ ಚಿಗುರಿಸಿತ್ತು. ಐದನೇ ವಾರ್ಡಿನ ಕ್ಯಾಂಡಿಡೇಟ್ ಆಗಿ ಅಳಿಯನಿಗೆ ಪ್ರಮುಖ ಪಕ್ಷದಿಂದ ಟಿಕೇಟ್ ದೊರಕಿಸಿಕೊಂಡುವಲ್ಲಿ ಯಶಸ್ವಿಯಾದರೂ ಪಕ್ಷ ಮತಗಳನ್ನು ಕ್ರೋಡಿಕರಿಸುವ ಜವಾಬ್ದಾರಿಯನ್ನು ಸಾಳುಂಕೆ ಅವರಿಗೇ ಒಪ್ಪಿಸಿತ್ತು. ಬ್ರಾಹ್ಮಣ ಮತದಾರರೇ ಅಧಿಕವಾಗಿದ್ದ ಆ ವಾರ್ಡಿನಲ್ಲಿ ಹೆಚ್ಚಿನ ಮತದಾರರನ್ನು ಸೆಳೆಯಲು ಕೇಶವರಾವ ಸಾಳುಂಕೆ ಅವರಿಗೆ ಸಹಜವಾಗಿಯೇ ಅದೇ ಸಮುದಾಯಕ್ಕೆ ಸೇರಿದ್ದ ಮತ್ತು ಬಾಹ್ಯ ನೋಟದಲ್ಲಿ ಆ ಎಲ್ಲ ಗುಣಲಕ್ಷಣಗಳನ್ನು ರೂಢಿಸಿಕೊಂಡಿದ್ದ ಶೇಷಗಿರಿ ಪುರೋಹಿತನೇ ಸೂಕ್ತ ವ್ಯಕ್ತಿಯಾಗಿ ಕಾಣಿಸಿದ್ದ. ಕಂಪನಿಯ ಶಾಖಾ ಕಚೇರಿಯ ಭೇಟಿ ಎಂದು ಅಂದಿನ ಕಾರ್ಯಕ್ರಮದ ಪಟ್ಟಿಯಲ್ಲಿತ್ತಾದರೂ ಅವರ ಭೇಟಿಯ ಹಿಂದಿನ ಮಸಲತ್ತು ಶೇಷಗಿರಿಯನ್ನು ಮಾತನಾಡಿಸುವುದೇ ಆಗಿತ್ತು ಎನ್ನುವ ಗುಮಾನಿ ಜನರಲ್ ಮ್ಯಾನೇಜರ್ ರಾಮನಾಥನ ತಲೆಯಲ್ಲಿ ಹೊಳೆಯದೆ ಇರಲಿಲ್ಲ. ಪ್ರೇಮಚಂದನ ಹೆಸರಿಗಾಗಲಿ, ಅವನ ಬಾಹ್ಯ ನೋಟಕ್ಕಾಗಲಿ ಮತ್ತು ಅವನು ಪ್ರತಿನಿಧಿಸುತ್ತಿದ್ದ ಸಮುದಾಯಕ್ಕಾಗಲಿ ಒಂದಕ್ಕೊಂದು ಯಾವ ಸಂಬಂಧಗಳು ಗೋಚರಿಸದೆ ಕಂಪನಿಯ ಮುಖ್ಯಸ್ಥರಿಗೆ ಅವನೊಬ್ಬ ನಿರುಪದ್ರವಿ ಜೀವಿಯಂತೆಯೂ ಅಪರಿಚಿತನಂತೆಯೂ ಕಾಣಿಸಿದ್ದರಲ್ಲಿ ಹೆಚ್ಚು ಅಚ್ಚರಿ ಪಡುವಂಥದ್ದೇನು ಇರಲಿಲ್ಲ.

ಪ್ರೇಮಚಂದ ಗಲಗಲಿಗೆ ಅವನ ಹೆಸರಿನ ಬಗ್ಗೆ ತಕರಾರು ಎದುರಾದದ್ದು ಇಪ್ಪತ್ತೈದು ವರ್ಷಗಳ ಹಿಂದೆ ಅದು ಖುದ್ದು ತನ್ನಿಂದ ತಾಳಿಕಟ್ಟಿಸಿಕೊಂಡ ಹೆಂಡತಿಯಿಂದ ಎನ್ನುವುದು ಇವತ್ತಿಗೂ ಅರಗಿಸಿಕೊಳ್ಳಲಾಗದ ಕಟುಸತ್ಯವಾಗಿ ಅವನನ್ನು ಆಗಾಗ ಕಾಡಿ ಕಂಗೆಡಿಸುತ್ತದೆ. ಅದೆಲ್ಲವನ್ನು ಸರಳಾಬಾಯಿ ಮರೆತರೂ ಪ್ರೇಮಚಂದನ ನೆನಪಿನಾಳದಲ್ಲಿ ಅದಿನ್ನೂ ಮರೆಯಲಾಗದ ಕಹಿ ಅನುಭವವಾಗಿ ಉಳಿದುಕೊಂಡಿದೆ. ಮದುವೆಯಾದ ಆ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದಾಗ ಸರಳಾಬಾಯಿ ಸುಮ್ಮನೆ ಮಾತಿಗೆ ಅಂತಲೋ ಇಲ್ಲವೆ ಛೇಡಿಸಬೇಕೆಂದೋ ಪ್ರೇಮಚಂದನ ಹೆಸರಿನ ಮೂಲಕ್ಕೆ ಕೈಹಾಕಿದ್ದಳು. ‘ಅಲ್ರೀ ಲಗ್ನ ಪತ್ರದಾಗ ಏನು ಹಾಕ್ಬೇಕು ಅಂತ ನಮ್ಮ ಅಪ್ಪ ಕೇಳಿದರ ನಿಮ್ಮ ಅಪ್ಪ ವ್ಹಿ.ಎಸ್.ಗಲಗಲಿ ಅವರ ಜೇಷ್ಠಪುತ್ರ ಚಿ.ಪ್ರೇಮಚಂದ ಅಂತ ಹಾಕ್ಸಿ ಅಂದರಂತ. ನಮ್ಮ ಅಪ್ಪ ಕೂಡ ಹಿಂದ ಮುಂದ ವಿಚಾರ ಮಾಡ್ದ ಹಂಗೇ ಪ್ರಿಂಟ್ ಹಾಕಿಸಿಬಿಟ್ರು. ಈ ದೇಶಮುಖಗ ತಲಿ ಕೆಟ್ಟಾದೇನು ಮಗಳ್ನ ಯಾರ್ದೋ ಪೈಕಿ ಹುಡಗನಿಗಿ ಲಗ್ನಾ ಮಾಡಿ ಕೊಡ್ಲಿಕತ್ತಾನ ಅಂತ ಊರ ಮಂದಿ ಬೈದಕೊಂಡರಂತ. ಯಾಕ ವೆಂಕೋಬರಾವ ಶ್ರೀಹರಿರಾವ ಗಲಗಲಿ ಅವರ ಜೇಷ್ಠಪುತ್ರ ಚಿ.ಪ್ರೇಮಚಂದ ಅಂತ ಹಾಕಿಸಿದ್ರ ಒಂದಿಷ್ಟು ಮಾನನಾದರೂ ಉಳಿತಿತ್ತು. ನಿಮ್ಮ ಹೆಸರು ಕೇಳಿದ ಮ್ಯಾಲ ನಮ್ಮ ಅಜ್ಜಿ ಹಿಂಗ ಬ್ಯಾರೆ ಜ್ಯಾತಿಪೈಕಿ ಹುಡುಗಗ ಪೋರಿ  ಕೊಟ್ರ ನಾ ಭಾವಿಗಿ ಹಾರಿ ಸಾಯ್ತಿನಿ ಅಂತ ಸಾಯ್ಲಿಕ್ಕಿ ಹೋಗಿದ್ಳು. ಅವಳಿಗಿ ತಿಳಿಸಿ ಹೇಳೊದ್ರೊಳ್ಗ ನಮ್ಮ ಅಪ್ಪನ ಬುದ್ಧಿಯೆಲ್ಲಾ ಖರ್ಚಾಯ್ತು’. ಸರಳಾಬಾಯಿ ಚೇಷ್ಠೆಗೆಂದು ಅಂದು ಆಡಿದ ಮಾತು ಪ್ರೇಮಚಂದನ ಮನಸ್ಸಿನಲ್ಲಿ ಬಹಳ ದಿನಗಳ ಕಾಲ ನೆಲೆಯೂರಿ ಕುಳಿತಿತ್ತು. ಹಿಂದಿ ಸಾಹಿತ್ಯ ಪ್ರೇಮಿಯಾಗಿದ್ದ ಅಪ್ಪ ಹಿಂದಿ ಸಾಹಿತ್ಯದ ಮೇರು ಬರಹಗಾರ ಪ್ರೇಮಚಂದರ ಹೆಸರನ್ನು ಮಗನಿಗಿಟ್ಟು ಅಭಿಮಾನ ಮೆರೆದಿದ್ದರು. ಮನೆಯ ಕಪಾಟುಗಳಲ್ಲಿ ಪ್ರೇಮಚಂದರ ಎಲ್ಲ ಕೃತಿಗಳನ್ನು ಒಪ್ಪಓರಣವಾಗಿ ಜೋಡಿಸಿಟ್ಟಿರುತ್ತಿದ್ದ ಚಿತ್ರ ಇವತ್ತಿಗೂ ಕಣ್ಮುಂದೆ ಕಟ್ಟಿದಂತಿದೆ. ಅದೇಕೋ ಏನೋ ತನ್ನ ಅಸ್ತಿತ್ವವನ್ನೇ ಮಸುಕಾಗಿಸಿದ ಈ ಹೆಸರಿನ ಬದಲು ಅಪ್ಪನಿಗೆ ಬೇರೆ ಯಾವ ಹೆಸರೂ ಮನಸ್ಸಿಗೆ ಹೊಳೆಯಲಿಲ್ಲವೆ ಎಂದು ಅಪ್ಪನ ಮೇಲೆ ಕೋಪ ಮತ್ತು ತನ್ನ ಹೆಸರಿನ ಬಗ್ಗೆ ಜಿಗುಪ್ಸೆ ಮೊದಲ ಬಾರಿಗೆ ಪ್ರೇಮಚಂದನ ಮನಸ್ಸಿನಲ್ಲಿ ಮೂಡಿತು.

ಈಗೀಗ ಪ್ರೇಮಚಂದನಿಗೆ ಮನೆಯ ಮಲಗುವ ಕೋಣೆಯಲ್ಲಿದ್ದ ಅಲ್ಮೆರಾಗೆ ಹಚ್ಚಿದ್ದ ಆಳೆತ್ತರದ ನಿಲುವುಗನ್ನಡಿಯಲ್ಲಿ ದಿನಕ್ಕೆ ನೂರಾರು ಬಾರಿ ತನ್ನ ಮುಖವನ್ನು ವಿವಿಧ ಭಾವ ಭಂಗಿಗಳಲ್ಲಿ ಸೃಷ್ಟಿಸಿಕೊಳ್ಳುತ್ತ ನೋಡುತ್ತ ನಿಲ್ಲುವುದು ಅದೊಂದು ವಾಸಿಯಾಗದ ಕಾಯಿಲೆಯಂತೆ ಅಂಟಿಕೊಂಡು ಬಿಟ್ಟಿದೆ. ಹೀಗೆ ನಿಲುವುಗನ್ನಡಿಯ ಎದುರು ನಿಂತ ಒಂದು ಅಪೂರ್ವ ಘಳಿಗೆ ಬುದ್ಧಿಜೀವಿಗಳಂತೆ ಗಡ್ಡಬಿಟ್ಟರೆ ತನ್ನ ಚಹರೆ ಇತರರನ್ನು ಬಲುಬೇಗ ಆಕರ್ಷಿಸಬಹುದೇನೋ ಎನ್ನುವ ವಿಚಾರ ಹೊಳೆದದ್ದೆ ಅದನ್ನು ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ತಂದ. ಮನೆಯಲ್ಲಿ ಹೆಂಡತಿ ಈ ಕುರಿತು ಕೆಲವು ದಿನ ಆಡಿಕೊಂಡಳಾದರೂ ಇದು ವಾಸಿಯಾಗದ ಕಾಯಿಲೆಯೆಂದೂ ಇದಕ್ಕೆಲ್ಲ ತನ್ನ ದಿವ್ಯ ನಿರ್ಲಕ್ಷವೇ ಮದ್ದದೆಂದು ಸುಮ್ಮನಾಗಿಬಿಟ್ಟಳು. ಆಫೀಸಿನಲ್ಲಿ ಮತ್ತು ಪರಿಚಿತರಲ್ಲಿ ಕೆಲವು ದಿನ ಉತ್ತೇಜನಾತ್ಮಕ ಪ್ರತಿಕ್ರಿಯೆ ದೊರೆತರೂ ಬರಬರುತ್ತ ಪ್ರೇಮಚಂದನಿಗೆ ವಿಚಿತ್ರವಾದ ಕಾಯಿಲೆ ಅಂಟಿಕೊಂಡಿದೆಯೆಂದೂ ಅವನ ಗಲ್ಲಗಳು ಊದಿಕೊಂಡು ಅಸಹ್ಯವಾಗಿ ಕಾಣುತ್ತಿವೆಯೆಂದೂ ಅದನ್ನು ಮರೆಮಾಚಲೆಂದೇ ಅವನು ಗಡ್ಡಬೆಳೆಸಿದ್ದಾನೆಂಬ ಗುಮಾನಿಯ ಮಾತುಗಳು ಎಲ್ಲ ಕಡೆ ಹರಿದಾಡತೊಡಗಿ ಅವು ಪ್ರೇಮಚಂದನ ಕಿವಿಗಳಿಗೂ ತಲುಪಲು ಹೆಚ್ಚಿನ ವೇಳೆ ಹಿಡಿಯಲಿಲ್ಲ. ಈ ಗುಮಾನಿಯ ಮಾತುಗಳಿಂದ ಪ್ರೇಮಚಂದ ಸ್ವತ: ಎಷ್ಟು ದಿಗಿಲುಗೊಂಡನೆಂದರೆ ಆ ದಿನ ಆಫೀಸಿನಿಂದ ನೇರವಾಗಿ ಮನೆಗೆ ಹೋಗದೆ ದಾರಿಮಧ್ಯದಲ್ಲಿ ಸಿಗುವ ಸಲೂನ್ ಅಂಗಡಿಯನ್ನು ಹೊಕ್ಕು ಕ್ಷೌರಿಕನಿಗೆ ಮುಖಕೊಟ್ಟು ಕುಳಿತವನು ಗಡ್ಡ ಧರೆಗಿಳಿದು ನುಣುಪಾದ ತನ್ನ ಹೊಳೆಯುವ ಮುಖ ಸಲೂನ್ ಅಂಗಡಿಯಲ್ಲಿದ್ದ ತನ್ನೆದುರಿನ ಕನ್ನಡಿಯಲ್ಲಿ ಕಂಡಾಗಲೆ ಅವನಿಗೆ ಸಮಾಧಾನವಾಯಿತು. ಗಂಡನ ಇತ್ತೀಚಿನ ವಿಚಿತ್ರ ವರ್ತನೆಗಳನ್ನೆಲ್ಲ ನೋಡಿ ಬೇಸತ್ತಿದ್ದ ಸರಳಾಬಾಯಿ ಅವತ್ತು ರಾತ್ರಿ ಊಟ ಬಡಿಸುವಾಗ ಅವನಿಗೆ ಕೇಳಿಸುವಂತೆ ಜೋರಾಗಿಯೇ ತನ್ನ ಮನದ ಬೇಗುದಿಯನ್ನು ಹೊರಹಾಕಿದ್ದಳು ‘ಮೊದಲಿಂದ ಹೇಳಲಿಕತ್ತಿನಿ ಗುರುವಾರಕ್ಕೊಮ್ಯಾದರೂ ರಾಯರ ಮಠಕ್ಕ ಹೋಗಿ ಬರೋಣಾಂತ. ಎಲ್ಲಿ ಕಿವ್ಯಾಗ ಹಾಕೋತಿರಿ. ಹಾಂಗ ಮಂದಿ ಕೂಡು ಜಾಗಕ್ಕ ಹೋದ್ರ ನಾಲ್ಕು ಮಂದಿ ಪರಿಚಯ ಆಗ್ತಾರ ನೀವು ಯಾರು ಎಂಥವರು ನಿಮ್ಮ ಪ್ರತಿಭಾ ಎಂಥದ್ದು ಅಂತ ಬೆಳಕಿಗಿ ಬರ್ತದ. ಆಫೀಸು ಬಿಟ್ರ ಮನಿ. ಟಾಂಗಾಕ ಕಟ್ಟಿದ ಕುದರಿ ಹಾಂಗ. ಬಂಧು ಇಲ್ಲ ಬಳಗ ಇಲ್ಲ. ಮನ್ಯಾಗರ ಗಡಗಡ ಮಾತಾಡ್ತಿರೇನು. ಪುಸ್ತಕ ಹಿಡಿದು ಕೂತ್ರ ಗುಮ್ಮನ ಗುಸಕ’. ಹೆಂಡತಿ ಆರೋಪ ಕೇಳಿಸಿಕೊಂಡ ಪ್ರೇಮಚಂದನ ಮನಸ್ಸಿನಲ್ಲಿ ಎರಡನೆ ಬಾರಿಗೆ ಅಪ್ಪನ ಮೇಲೆ ಕೋಪ ಮತ್ತು ತನ್ನ ಹೆಸರಿನ ಬಗ್ಗೆ ಜಿಗುಪ್ಸೆ ಮೂಡಿತು.

ಈ ನಡುವೆ ಆಫೀಸಿನಲ್ಲಿ ಶೇಷಗಿರಿ ಪುರೋಹಿತ ಎಂದೂ ಇಲ್ಲದ ಉಮೇದಿಯಿಂದ ಪ್ರೇಮಚಂದನ ಹತ್ತಿರ ಬಂದು ‘ನೋಡಪಾ ಪ್ರೇಮಚಂದ ಮಧ್ಯಾರಾಧನಾ ದಿವಸ ಮಠದಾಗ ಸಂಜಿಗಿ ನಮ್ಮ ಸಮುದಾಯದ ಸಾಧಕರಿಗಿ ಸನ್ಮಾನ ಕಾರ್ಯಕ್ರಮ ಇಟಗೊಂಡಾರ. ಕಾರ್ಯಕ್ರಮದ ನಿರ್ವಾಹಕರಿಗಿ ಹೇಳಿ ಲಿಸ್ಟ್‍ನಲ್ಲಿ ನಿನ್ನ ಹೆಸರು ಬರಿಸೀನಿ. ಇನ್ನೆರಡು ದಿವಸದಾಗ ಮಠದಿಂದ ಫೋನ್  ಬರ್ತದ. ಅವತ್ತು ತಪ್ಪಸಬ್ಯಾಡ ಮರೀದಂಗ ಬಾ ನೋಡು’ ಎಂದು ಹೇಳಿದ ಮಾತು ಸಮಾಜ ತನ್ನ ಸಾಹಿತ್ಯ ಕೃಷಿಯನ್ನು ಗುರುತಿಸಿದೆ ಎನ್ನುವ ಪುಳಕಕ್ಕೆ ಕಾರಣವಾಗಿ ಆ ಅನುಭೂತಿಯನ್ನು ಮುಂದಿನ ಹಲವು ದಿನಗಳಕಾಲ ಅನುಭವಿಸಿದ ಪ್ರೇಮಚಂದ ತನ್ನ ಹಾವ ಭಾವ ಭಂಗಿಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಹೆಂಡತಿಗೆ ಒಗಟಾಗಿಯೂ ಮತ್ತು ಸಮಸ್ಯೆಯಾಗಿಯೂ ಗೋಚರಿಸಿದ. ಮಧ್ಯಾರಾಧನಾ ದಿನ ಸಮೀಪಿಸುತ್ತಿದ್ದರೂ ಮಠದಿಂದ ಕರೆ ಬರದೆ ಪ್ರೇಮಚಂದ ಕಂಗಾಲಾದ. ಕೆಲಸವಿಲ್ಲದಿದ್ದರೂ ಸುಮ್ಮನೆ ಮಠದ ಸುತ್ತ ಸುಳಿದಾಡುತ್ತ ತನ್ನ ಅಸ್ತಿತ್ವವನ್ನು ಅಲ್ಲಿದ್ದವರ ಗಮನಕ್ಕೆ ತರಲು ಪ್ರಯತ್ನಿಸಿದ. ಶೇಷಗಿರಿ ಪುರೋಹಿತ ಅಲ್ಲೆಲ್ಲಾದರೂ ಕಾಣಿಸುವನೇನೋ ಎಂದು ಹುಡುಕಾಡಿದ. ಮಧ್ಯಾರಾಧನೆಯ ದಿನ ಆಫೀಸಿಗೆ ರಜೆಹಾಕಿ ಮನೆಯಲ್ಲೇ ಕುಳಿತವನಿಗೆ ಕ್ಷಣವೊಂದು ಯುಗದಂತೆ ಭಾಸವಾಗತೊಡಗಿತು. ಮಧ್ಯಾಹ್ನ ಊಟ ರುಚಿಸಲಿಲ್ಲ. ಹಾಸಿಗೆಗೆ ಮೈ ಅಡ್ಡವಾಗಿಸಿ ಕಣ್ಣು ಮುಚ್ಚಿದ್ದೆ ತಡ ತನ್ನನ್ನು ಸನ್ಮಾನಿಸಿದಂತೆಯೂ ಪ್ರೇಕ್ಷಕ ಗಣ ಹರ್ಷೋದ್ಘಾರಗಳಿಂದ ಚಪ್ಪಾಳೆ ತಟ್ಟುತ್ತಿರುವಂತೆಯೂ ತಾನು ಮಂದಸ್ಮಿತನಾಗಿ ಸಭೀಕರತ್ತ ದೃಷ್ಟಿ ಬೀರುತ್ತಿರುವಂತೆಯೂ ದೃಶ್ಯಗಳು ಕಣ್ಮುಂದೆ ಸುಳಿದು ಪ್ರೇಮಚಂದ ಧಗ್ಗನೆ ಹಾಸಿಗೆಯಿಂದ ಎದ್ದು ಕುಳಿತ. ಹಗಲು ಕಳೆದು ಇರುಳು ಆರಂಭವಾಗುತ್ತಿದ್ದಂತೆ ಕಾರ್ಯಕ್ರಮ ನಿರ್ವಾಹಕರೆಲ್ಲಿ ತನ್ನನ್ನು ಮರೆತು ಹೋದರೇನೋ ಎನ್ನುವ ಆತಂಕ ಶುರುವಾಯಿತು. ಘಳಿಗೆಗೊಮ್ಮೆ ಎದ್ದು ಹೊರಗೆ ಹೋಗುವುದು ರಸ್ತೆಯ ಕೊನೆಯವರೆಗೂ ದೃಷ್ಟಿ ಹರಿಸಿ ಯಾರೂ ಕಾಣಿಸದೆ ನಿರಾಸೆಯಿಂದ ಒಳಗೆ ಬಂದು ಕೂಡುವುದು ಗಂಡನ ಈ ವಿಚಿತ್ರ ವರ್ತನೆಯನ್ನು ಟಿ.ವಿ ಪರದೆಯ ಮೇಲೆ ಮೂಡಿಬರುತ್ತಿದ್ದ ಧಾರಾವಾಹಿಯಿಂದ ಆಗಾಗ ತನ್ನ ನೋಟವನ್ನು ಗಂಡನ್ನತ್ತ ಬೀರುತ್ತ ನೋಡುತ್ತಿದ್ದ ಸರಳಾಬಾಯಿ ಎಂಟು ಗಂಟೆಯಾಯಿತೆಂದು ರಾತ್ರಿಯ ಊಟಕ್ಕೆ ಅಣಿಮಾಡಲು ಅಡುಗೆ ಕೋಣೆಯತ್ತ ಹೆಜ್ಜೆಹಾಕಿದಳು.

‘ಸುಮ್ನ ಒಂದು ವಾರದಿಂದ ಕಾಯ್ಲಿಕತ್ತಿದ್ದಿರಿ. ನೋಡ್ರಿ ಇವತ್ತಿನ ಪೇಪರ್. ಆ ಎದುರು ಮನಿ ಶಾಮರಾಯ ಜೋಶಿಗಿ ಸಾಹಿತ್ಯ ತಪೋನಿಧಿ  ಅಂತ ಬಿರುದು ನೀಡಿ ಸನ್ಮಾನಿಸಿದ್ರಂತ ಮಠದಾಗ’ ಇನ್ನು ಹಾಸಿಗೆಯಲ್ಲಿ ಇರುವಾಗಲೆ ಹೆಂಡತಿ ಪೇಪರ್ ತೋರಿಸಿ ಆಡಿದ ಮಾತುಗಳು ಕಿವಿಯಲ್ಲಿ ಕಾದಸೀಸೆ ಸುರಿದಂತೆಯೂ ಮತ್ತು ಪೇಪರ್‍ನಲ್ಲಿದ್ದ ಚಿತ್ರ ಕಣ್ಣಿಗೆ ಚೂರಿಯಿಂದ ಇರಿದಂತೆಯೂ ಭಾಸವಾಗಿ ಪ್ರೇಮಚಂದ ಕುಳಿತಲ್ಲೆ ತಲ್ಲಣಿಸಿದ. ವರ್ಷಕ್ಕೊಮ್ಮೆ ದಿನಪತ್ರಿಕೆಯ ಸ್ಥಳೀಯ ಸುದ್ಧಿಗೆ ಮೀಸಲಾದ ಪುಟದಲ್ಲಿ ಬರೆಯುವ ಶಾಮರಾಯ ಜೋಶಿಯ ಬರವಣಿಗೆ ಎದುರು ತಾನು ಬರೆದ ನಾಲ್ಕಾರು ಪುಸ್ತಕಗಳು ಸೋತು ಹೋದವೆಂಬ ಭಾವವೇ ಮನಸ್ಸಿನಿಂದ ಕ್ರಮೇಣ ಮೆದುಳನ್ನು ಆವರಿಸುತ್ತ ಬಂದು ದೃಷ್ಟಿ ಮಂದವಾಗಿ ಇಡೀ ಕೋಣೆಯ ತುಂಬ ಕತ್ತಲು ತುಂಬಿಕೊಂಡಂತಾಗಿ ಎಲ್ಲವೂ ಅಯೋಮಯ ಅಗೋಚರ ಎನಿಸಲಾರಂಭಿಸಿತು. ಆಫೀಸಿನಲ್ಲಿ ಶೇಷಗಿರಿ ಪುರೋಹಿತನನ್ನು ನೋಡಿದ್ದೆ ಹೇಸಿಗೆ ಕಂಡಂತಾಗಿ ಹೊಟ್ಟೆ ತೊಳಿಸದಂತಾದ ಅನುಭವಕ್ಕೆ ಒಳಗಾಗಿ ಹೀಗೆ ಮನುಷ್ಯನನ್ನು ನೋಡಿ ತನ್ನಲ್ಲಿ ಮೂಡಿದ ಮೊದಲ ಅಸಹ್ಯ ಭಾವವಿದು ಎನ್ನುವ ಯೋಚನೆ ಬಂದಿದ್ದೆ ಪ್ರೇಮಚಂದ ತನಗಾದ ಅನುಭವಕ್ಕೆ ತಾನೆ ಬೆಚ್ಚಿಬಿದ್ದ. ಶೇಷಗಿರಿ ಪುರೋಹಿತ ಸಮಾಧಾನ ಪಡಿಸುವಂತೆ ಹತ್ತಿರ ಬಂದು ‘ಅಲ್ಲಯ್ಯಾ ಪ್ರೇಮಚಂದ ನಿನ್ನ ಹೆಸರಿನದೇ ದೊಡ್ಡ ಸಮಸ್ಯೆ ನೋಡು. ನೀನು ನಮ್ಮ ಸಮುದಾಯದವನೇ ಅಲ್ಲ ಅಂತ ಮಠದವರು ವಾದ ಮಾಡಿದ್ರು. ನಾನು ಎಷ್ಟು ಹೇಳಿದ್ರೂ ಕೇಳಲಿಲ್ಲ. ಪ್ರೇಮಚಂದ, ರೂಪಚಂದ, ಗುಲಾಬಚೆಂದ ಇಂಥ ಹೆಸರೆಲ್ಲ ಇರ್ತಾವೆನಯ್ಯ ನಮ್ಮಲ್ಲಿ. ನಿನ್ನಪ್ಪ ನಿನಗ ಅದ್ಯಾರೋ ಕಥಿ ಬರೆದವನ ಹೆಸರಿಟ್ಟು ಕುಲಗೆಡಿಸಿಬಿಟ್ಟ. ಇನ್ನು ಮುಖ ನೋಡಿದ್ರೆ ಅಲ್ಲಿ ನಿರ್ಲಿಪ್ತತೆ, ನಿರ್ಭಾವುಕತೆ ಬಿಟ್ರೆ ಬೇರೆ ಏನಿದೆ. ನಿನ್ನ ಹೆಸರು ನಿನ್ನ ಚಹರೆ ಸಮುದಾಯದೊಂದಿಗೆ ಸ್ವಲ್ಪನೂ ಮ್ಯಾಚ್ ಆಗ್ತಿಲ್ಲ. ಏನೂ ಬೇಜಾರು ಮಾಡ್ಕೊಬೇಡ ಮುಂದಿನ ವರ್ಷ ಪ್ರಯತ್ನಿಸಿದರಾಯ್ತು’ ಸಹಜವೆಂಬಂತೆ ಹೇಳಿ ಹೋಗಿದ್ದ.


ಉಪಸಂಹಾರ:


ಈಗ ಪ್ರೇಮಚಂದ ಗಲಗಲಿ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ಮುಖದ ಚಹರೆಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಪ್ರಯತ್ನದ ಮೊದಲ ಹಂತವಾಗಿ ಅವನ ಮನೆಯಲ್ಲಿ ವ್ಯಕ್ತಿತ್ವ ವಿಕಾಸದ ಪುಸ್ತಕಗಳ ಗುಡ್ಡೆ ಬಿದ್ದಿದೆ. ಕಾರಂತ, ಭೈರಪ್ಪ, ಚಿತ್ತಾಲರ ಪುಸ್ತಕಗಳನ್ನೆಲ್ಲ ಗಂಟುಕಟ್ಟಿ ಅಟ್ಟದಲ್ಲಿಟ್ಟು ಈಗ ಬರೇ ವ್ಯಕ್ತಿತ್ವ ವಿಕಸನದ ಪುಸ್ತಕಗಳ ಮಧ್ಯೆ ಹುದುಗಿ ಹೋಗಿರುವನು. ಆನ್ ಲೈನ್‍ನಲ್ಲಿ ಗಂಟೆಗಟ್ಟಲೆ ಬದುಕುವುದು ಹೇಗೆಂಬ ಉಪನ್ಯಾಸ ಆಲಿಸುತ್ತಾನೆ. ಆಗಾಗ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ವ್ಯಕ್ತಿತ್ವ ವಿಕಸನದ ಶಿಬಿರಗಳಿಗೆ ಹಾಜರಾಗುತ್ತಾನೆ. ಪ್ರತಿಮುಂಜಾನೆ ಕಾಲೋನಿಯ ಗಾರ್ಡನ್‍ನಲ್ಲಿ ಸೇರಿ ಹೋ ಹೋ ಎಂದು ನಗುವ ಜನರ ಮಧ್ಯೆ ಸೇರಿ ತಾನೂ ನಗಲು ಪ್ರಯತ್ನಿಸುತ್ತಾನೆ. ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತವನೇ ಅಲ್ಮೆರಾದ ಬಾಗಿಲಿಗೆ ಅಂಟಿಸಿರುವ ಆಳೆತ್ತರದ ನಿಲುವುಗನ್ನಡಿ ಎದುರು ನಿಂತು ತನ್ನ ಮುಖದಲ್ಲಿ ಹೊಸ ಚಹರೆಯೇನಾದರೂ ಆವಿರ್ಭವಿಸುತ್ತಿದೆಯೇ ಎಂದು ಆ ಒಂದು ದಿವ್ಯ ಕ್ಷಣಕ್ಕಾಗಿ ಕಾದವನಂತೆ ಕಾತರದಿಂದ ನೋಡಿಕೊಳ್ಳುತ್ತಾನೆ. ಮುಂದೊಂದುದಿನ ಬದಲಾದ ಮುಖಚಹರೆಯ ಪ್ರೇಮಚಂದ ನಿಮಗೆ ದಾರಿಯಲ್ಲಿ ಎದುರಾದರೂ ಎದುರಾಗಬಹುದು. ನಾನೂ ಅವನಿಗಾಗಿ ಕಾಯುತ್ತಿದ್ದೇನೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ