Friday, February 22, 2013

ನನ್ನದಲ್ಲದ ಬದುಕು

      ಕಥೆ, ಕವಿತೆ, ನಾಟಕ, ಲೇಖನಗಳು ಇವು ಬರಹಗಾರನ ವಿವಿಧ ಅಭಿವ್ಯಕ್ತಿ ಮಾಧ್ಯಮಗಳೆನ್ನುವ ಮಾತು ಸಾಹಿತ್ಯ ಲೋಕದಲ್ಲಿ ಪ್ರಚಲಿತದಲ್ಲಿದೆ. ಒಬ್ಬ ಬರಹಗಾರ ಎಲ್ಲ ಪ್ರಕಾರದ ಮಾಧ್ಯಮಗಳಲ್ಲಿ ಅಭಿವ್ಯಕ್ತಿಗೊಳ್ಳುವುದು ತೀರ ವಿರಳ. ಕೆಲವರಿಗೆ ಕಥೆ, ಕಾದಂಬರಿ ಕೈ ಹಿಡಿದರೆ ಕವಿತೆ ಒಲಿಯುವುದಿಲ್ಲ. ಅದೇರೀತಿ ಕವಿತೆಯನ್ನು ಒಲಿಸಿಕೊಂಡವರಿಗೆ ಕಥೆ ಕಾದಂಬರಿ ಮಾಧ್ಯಮ ಕೈ ಹಿಡಿಯುವುದಿಲ್ಲ. ಈ ತಾರತಮ್ಯವೇ ಬೇಡವೆಂದು ಕೆಲವು ಬರಹಗಾರರು ವಿವಿಧ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಕೃಷಿ ಮಾಡಿರುವ ಉದಾಹರಣೆಯೂ ಉಂಟು. ಯಶವಂತ ಚಿತ್ತಾಲರು ಇದಕ್ಕೊಂದು ಸ್ಪಷ್ಟ ನಿದರ್ಶನ. ಕಥೆ, ಕಾದಂಬರಿ ಮಾಧ್ಯಮದ ಮೂಲಕ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿರುವ ಯಶವಂತ ಚಿತ್ತಾಲರು ಕವಿತೆಗಳನ್ನೂ ರಚಿಸಿರುವರು. ಅವರು ಕವಿತೆಯನ್ನು ಕವಿತೆ ಎಂದು ಕರೆಯದೆ ಅದನ್ನು 'ಲಬಸಾ'ಗಳು ಎಂದು ಹೆಸರಿಸುತ್ತಾರೆ. ಅವರ ಮಾತಿನಲ್ಲಿ 'ಲಬಸಾ'ಗಳು ಎನ್ನುವುದರ ವಿಸ್ತೃತ ರೂಪ ಲಯ ಬದ್ದ ಸಾಲುಗಳು ಎಂದು. 

      ಒಂದಿಷ್ಟು ಲೇಖನಗಳನ್ನು ಬರೆದಿರುವ ನನಗೂ ಆಗಾಗ 'ಲಬಸಾ'ಗಳನ್ನೂ ಬರೆಯಬೇಕೆನ್ನುವ ವಿಚಿತ್ರವಾದ ಉಮೇದಿಯೊಂದು ಕಾಡಿದ್ದಿದೆ. ಹಾಗೆ 'ಲಬಸಾ'ಗಳನ್ನು ಹಾಳೆಯ ಮೇಲೆ ಗೀಚಿದಾಗಲೆಲ್ಲ ನನಗೆ ಅರಿವಿಲ್ಲದಂತೆ ಪ್ರಾಸಗಳು ಹಣಿಕಿಕ್ಕಿ ತೊಂದರೆಕೊಟ್ಟಿವೆ. ಅದೇಕೋ ಈ ಪ್ರಾಸಗಳಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ನನ್ನದು. ಅದು ನನ್ನ ಬರವಣಿಗೆಯ ಮೀತಿಯೂ ಇರಬಹುದು. ಅದಕ್ಕೆಂದೇ  ಈ ಕೆಳಗೆ ಬರೆದ ಸಾಲುಗಳನ್ನು ನಾನು 'ಕವಿತೆ' ಎಂದು ಕರೆಯದೆ 'ಲಬಸಾ'ಗಳು ಎನ್ನುತ್ತೇನೆ. ಎಂದೋ ಬರೆದ 'ಲಬಸಾ'ಗಳು ನನ್ನ ಬ್ಲಾಗಿನ ಓದುಗರಿಗಾಗಿ ಈ ದಿನ................

                                  ನನ್ನದಲ್ಲದ ಬದುಕು 

                                                      ಹಾರಾಡುವ ಹಕ್ಕಿಗಳನ್ನು 
                                                      ಹರಿಯುವ ನೀರನ್ನು 
                                                      ಸುಳಿಯುವ ಗಾಳಿಯನ್ನು 
                                                      ನೋಡಿದಾಗ ನನಗನಿಸುತ್ತದೆ 
                                                      ಬದುಕುತ್ತಿದ್ದೇನೆ ನಾನು 
                                                      ನನ್ನದಲ್ಲದ ಬದುಕನ್ನು 


                                                      ಕಳೆದು ಹೋಯಿತು ಬಾಲ್ಯ 
                                                      ಅಪ್ಪನ ಬೆದರಿಕೆಯಲ್ಲಿ 
                                                      ಅವ್ವ ಕರೆಯುವ 
                                                      ಗುಮ್ಮನ ಭಯದಲ್ಲಿ 
                                                      ಕೆಂಗಣ್ಣು ಮೇಷ್ಟ್ರ 
                                                      ಬೆತ್ತದ ಛಡಿ ಏಟಿನಲ್ಲಿ 


                                                      ನಾನಾಗಲು ಪಾಸು 
                                                      ಕಾರಣವಾಯಿತು 
                                                      ಅಣ್ಣನ ನಾಪಾಸು 
                                                      ಕಿವಿ ಹಿಂಡಿ ಹೇಳಿದ್ದ ಅಪ್ಪ 
                                                      ಫೇಲಾದರೆ ಮನೆಯಿಂದ 
                                                      ಗೇಟ್ ಪಾಸು 


                                                     ಮರ್ಜಿ ಕಾಯುವ ಕೆಲಸ 
                                                     ಬೇಡವೆಂದು ಹೇಳಿದ್ದೆ ಅಪ್ಪನಿಗೆ 
                                                     ಸಿನಿಮಾ ಸೇರುತ್ತೆನೆಂದು 
                                                     ತೋಳೇರಿಸಿ ಹೇಳಿದ್ದ ಅಪ್ಪ 
                                                     ಪಾತರದವರು 
                                                     ನಾವಲ್ಲವೆಂದು 


                                                     ಮನದನ್ನೆ ಬಂದು 
                                                     ಮಗುವ ಕೈಗಿತ್ತಾಗ 
                                                     ಖುಷಿಯಾಯಿತು ಬದುಕು 
                                                     ರ್ರೀ ಸಂಸಾರ ಬೆಳೆಯುತಿದೆ 
                                                     ಸಂಬಳವ ಕೈಗಿಡಿ ಎಂದವಳ 
                                                     ಮಾತು ಬಲು ನಾಜೂಕು 


                                                     ಕನ್ನಡದ ಕಟ್ಟಾಳು ಸೇರಿಸಿದ್ದೇನೆ 
                                                     ಮಗಳನ್ನು ಇಂಗ್ಲಿಷ್ ಶಾಲೆಗೆ 
                                                     ಮನದನ್ನೆಯ ಬಯಕೆಯಂತೆ 
                                                     ಆದರೂ ಕಲಿಸುತ್ತೇನೆ 
                                                     ಕನ್ನಡದ ಅ ಆ ಇ ಈ 
                                                     ನನ್ನವಳ ದೃಷ್ಟಿಗೆ ಬೀಳದಂತೆ 


                                                     ಬದುಕುವುದು ಹೇಗೆ 
                                                     ನಿಂದಕರ ನಡುವೆ 
                                                     ಒಂದು ಮಾತಿಗೆ 
                                                     ನೂರು ಅರ್ಥ 
                                                     ಬದುಕಲ್ಲ ಇದು ನಟನೆ 
                                                     ಕಳೆಯುತಿದೆ ಸಮಯ ವ್ಯರ್ಥ 


                                                     ಗಮ್ಯವಿಲ್ಲದ ಓಟ 
                                                     ಓಡುವವರೆ ಎಲ್ಲ 
                                                     ಹಿಂದೆ ಸರಿಯುವಂತಿಲ್ಲ 
                                                     ಸಾಗಿ ಬಂದಾಗಿದೆ ದೂರ 
                                                     ಓಡಲೇ ಬೇಕಿದೆ 
                                                     ನನ್ನ ನಂಬಿದವರು ಇರುವರಲ್ಲ 

                                                            ---೦೦೦---

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 





Thursday, February 14, 2013

ಸಿಟ್ಟೊಂದೆ ಸ್ಥಾಯಿಭಾವ

         ಕೆ.ಪಿ.ಪೂರ್ಣಚಂದ್ರ ತೇಜಸ್ವಿ ತಮ್ಮ ಪುಸ್ತಕವೊಂದರಲ್ಲಿ ಹೀಗೆ ಬರೆಯುತ್ತಾರೆ 'ಮೂರ್ಖರ ಬಗ್ಗೆ ಮತ್ತು ಬದಲಾಗದ   ವ್ಯವಸ್ಥೆ ಕುರಿತು ನಾವುಗಳು ಏನೆಲ್ಲಾ ಮಾತನಾಡಿದರೂ ಕೊನೆಗೆ ನಮ್ಮಲ್ಲಿ ಉಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ'. ಅವರು ಈ ಮಾತುಗಳನ್ನು ಆ ಕಾಲಘಟ್ಟದ ಚಳುವಳಿಗಳ ಕುರಿತು ಹೇಳುತ್ತಾರೆ. ಚಳುವಳಿಗಾರರಲ್ಲಿನ ಸಣ್ಣತನ, ಅಸಹಕಾರ, ಒಳಜಗಳಗಳಿಂದ ಆಗಬಹುದಾಗಿದ್ದ ಬಹುದೊಡ್ಡ ಬದಲಾವಣೆಯನ್ನು ನಾವು ಕಳೆದುಕೊಂಡೆವು ಎನ್ನುವ ತೇಜಸ್ವಿ ಸಿಟ್ಟೊಂದೆ ಸ್ಥಾಯಿಭಾವ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. 
    
          ವ್ಯವಸ್ಥೆಯಲ್ಲಿ ಬದಲಾವಣೆಯೇ ಸಾಧ್ಯವಿಲ್ಲವೇನೋ ಎನ್ನುವ ರೀತಿಯಲ್ಲಿ ಅಪ್ರಾಮಾಣಿಕತೆ ಮತ್ತು ಅಪಮೌಲ್ಯಗಳು ಸಮಾಜದಲ್ಲಿ ಸ್ಥಾಪಿತವಾಗಿವೆ. ಇದನ್ನೆಲ್ಲ ನೋಡಿದಾಗ ತೇಜಸ್ವಿ ಅವರು ಹೇಳಿದಂತೆ ನಮ್ಮಲ್ಲಿ ಸ್ಥಾಯಿಭಾವವಾಗಿ ಉಳಿಯುವುದು ಸಿಟ್ಟೊಂದೆ. ಸಿಟ್ಟೊಂದೆ ಸ್ಥಾಯಿಭಾವವಾಗಿ ಉಳಿಯುವುದಕ್ಕೆ ಕಾರಣವಾದ ಒಂದಿಷ್ಟು ಪ್ರಸಂಗಗಳು ನಿಮಗಾಗಿ...................................

           ಎಲ್ಲರಿಗೂ ಗೊತ್ತಿರುವಂತೆ ೨೦೦೨ ನೇ ಇಸ್ವಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಚರಿತ್ರಾರ್ಹ ಹೆಜ್ಜೆಯನ್ನಿಟ್ಟಿತು. ಆ ಸಂದರ್ಭ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರಪತಿ ಹುದ್ದೆಗೆ ಡಾ.ಅಬ್ದುಲ್ ಕಲಾಮ್ ಅವರ ಹೆಸರನ್ನು ಸೂಚಿಸಿದರು. ಆಗೆಲ್ಲ ಅಲ್ಪಸಂಖ್ಯಾತರ ಮತಗಳ ಮೇಲೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಕಣ್ಣು ನೆಟ್ಟಿದೆ ಎನ್ನುವ ವ್ಯಂಗ್ಯದ ಮಾತುಗಳು ಕೇಳಿಬಂದವು. ವಿರೋಧಿಸಿದಲ್ಲಿ ಅಲ್ಪಸಂಖ್ಯಾತರ ಕೋಪಕ್ಕೆ ಗುರಿಯಾಗಬಹುದೆಂಬ ಭಯದಿಂದ ಕಾಂಗ್ರೆಸ್ ಪಕ್ಷ ಕೂಡ ಬೆಂಬಲಿಸದೆ ವಿಧಿಯಿರಲಿಲ್ಲ. ಒಟ್ಟಿನಲ್ಲಿ  ಆಯಾ ಪಕ್ಷಗಳ ವೈಯಕ್ತಿಕ ಹಿತಾಸಕ್ತಿ ಮೇಲುಗೈ ಸಾಧಿಸಿದರೂ ದೇಶದ ಇತಿಹಾಸದಲ್ಲಿ ಒಬ್ಬ ಅಪರೂಪದ ರಾಷ್ಟ್ರಪತಿಯನ್ನು ಜನಸಾಮಾನ್ಯರು  ಕಾಣುವಂತಾಯಿತು. ರಾಷ್ಟ್ರಪತಿ ಹುದ್ದೆ ಕೇಂದ್ರ ಸರ್ಕಾರದ ಕೈಗೊಂಬೆ ಎನ್ನುವ ಆಪಾದನೆ ಇರುವಾಗ ಮತ್ತು ಆ ಆಪಾದನೆ ನಿಜವಾಗಿರುವ ಹೊತ್ತಿನಲ್ಲಿ ರಾಜಕಾರಣಿಯಲ್ಲದ ವ್ಯಕ್ತಿ ಅದು ಹೇಗೆ ದೇಶದ ಉನ್ನತ ಹುದ್ದೆಯನ್ನು ನಿರ್ವಹಿಸಬಲ್ಲರು ಎನ್ನುವ ಆತಂಕ ಎಲ್ಲರದಾಗಿತ್ತು. ಏಕೆಂದರೆ ಡಾ.ಅಬ್ದುಲ್ ಕಲಾಮ್ ರಾಜಕಾರಣಿಯಾಗಿ ರಾಷ್ಟ್ರಪತಿಗಳಾದವರಲ್ಲ. ರಾಜಕಾರಣದ ಯಾವೊಂದು ಪಟ್ಟನ್ನು ಕರಗತ ಮಾಡಿಕೊಳ್ಳದೆ ಅಬ್ದುಲ್ ಕಲಾಮ್ ಆ ಹುದ್ದೆಯ ಸ್ವರೂಪವನ್ನೇ ಬದಲಿಸಿದ್ದು ಈಗ ಇತಿಹಾಸ. ಅಬ್ದುಲ್ ಕಲಾಮ್ ರಾಷ್ಟ್ರಪತಿಯಾಗಿ 'ಮಿಸ್ಟರ್ ನಾಯರ್ ನಿಮ್ಮ ತಾಯಿಯನ್ನು ಕಳುಹಿಸಿ ಕೊಡಲು ನಾನು ಕೆಳಗೆ ಕಾರಿನವರೆಗೂ ಬರಲೇ' ಎಂದು ಕೇಳುವ ಮಗುವಿನ ಮುಗ್ಧತೆಯನ್ನು ರಾಷ್ಟ್ರಪತಿ ಭವನದವರೆಗೂ ಕೊಂಡೊಯ್ದರು. ರಾಷ್ಟ್ರಪತಿಗಳಾದವರು ಪಾಲಿಸಲೇ ಬೇಕಾದ ಕೆಲವೊಂದು ಶಿಷ್ಟಾಚಾರಗಳಿವೆ. ರಾಷ್ಟ್ರಪತಿಯಾಗಿದ್ದುಕೊಂಡು ತನ್ನ ಆಪ್ತಕಾರ್ಯದರ್ಶಿಯ ತಾಯಿಯನ್ನು ಕಳುಹಿಸಿ ಕೊಡಲು ಹೊರಬಾಗಿಲ ತನಕ  ಬರುವುದು  ಆ ಹುದ್ದೆಯ ಘನತೆಗೆ ತಕ್ಕದ್ದಲ್ಲ ಎನ್ನುವ ಶಿಷ್ಟಾಚಾರದ ನಡುವೆ ಕಲಾಮ್ ತಮ್ಮ ಸರಳ ನಡೆ ನುಡಿಯಿಂದ ಶಿಷ್ಟಾಚಾರವನ್ನು ಬದಿಗೆ ಸರಿಸುತ್ತಾರೆ. ರಾಷ್ಟ್ರಪತಿ ಎಂದರೆ ಮೂರು ನೂರಕ್ಕೂ ಹೆಚ್ಚು ಕೋಣೆಗಳಿರುವ ಐಶಾರಾಮಿ ಬಂಗ್ಲೆಯಲ್ಲಿ ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆಯುವ ವ್ಯಕ್ತಿ ಎನ್ನುವ ಸಿದ್ದ ಸೂತ್ರವನ್ನು ಅಬ್ದುಲ್ ಕಲಾಮ್ ದೂರವಾಗಿಸಿದರು. ಅವರ ಅಧಿಕಾರವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳೂ ರಾಷ್ಟ್ರಪತಿ ಭವನವನ್ನು ಪ್ರವೇಶಿಸಲಾರಂಭಿಸಿದವು. ಎಲ್ಲೋ ಮರಗಳು ಉರುಳಿ ಬಿದ್ದಾಗ, ಹಳ್ಳಿಯೊಂದರ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಅಬ್ದುಲ್ ಕಲಾಮ್ ತಕ್ಷಣವೇ ಸ್ಪಂದಿಸಿ ತಮ್ಮ ಅಧಿಕಾರವನ್ನುಪಯೋಗಿಸಿ ಸಮಸ್ಯೆಯ ನಿವಾರಣೆಗೆ ಪ್ರಯತ್ನಿಸುತ್ತಿದ್ದರು. ಈ ಮೊದಲು ಭಾರತದ  ರಾಷ್ಟ್ರಪತಿ ಎಂದರೆ ಪ್ರದರ್ಶನದ ಗೊಂಬೆ ಎಂದೇ ತಿಳಿದಿದ್ದ ಸಾರ್ವಜನಿಕರು ಅಬ್ದುಲ್ ಕಲಾಮ್ ರ ಕಾರ್ಯದಕ್ಷತೆಯ ಪರಿಣಾಮ ಆ ಹುದ್ದೆಯ ಮಹತ್ವವನ್ನರಿತದ್ದು ಅವರ ವ್ಯಕ್ತಿತ್ವಕ್ಕೊಂದು ನಿದರ್ಶನ. ಅಬ್ದುಲ್ ಕಲಾಮ್ ಅವರ ಅಧಿಕಾರಾವಧಿ ಕೊನೆಗೊಳ್ಳುವ ದಿನಗಳು ಸಮೀಪಿಸುತ್ತಿದ್ದ ಸಂದರ್ಭ ದೇಶದ ಇಡೀ ಜನತೆ ಅವರು ಇನ್ನೊಂದು ಅವಧಿಗೆ ಆಯ್ಕೆಯಾಗಬಹುದೆಂದು ನಿರೀಕ್ಷಿಸಿದ್ದರು. ಆ ನಿರೀಕ್ಷೆ ಕೂಡ ಸಹಜವಾಗಿತ್ತು. ಆದರೆ ನಮ್ಮನಾಳುವ ಜನನಾಯಕರುಗಳಿಗೆ ಅಬ್ದುಲ್ ಕಲಾಮ್ ಅವರ ವಿದ್ವತ್ತನ್ನು ಉಪಯೋಗಿಸಿಕೊಂಡು ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ಬಯಕೆ ಇರಲಿಲ್ಲ. ಅವರುಗಳಿಗೆ ತಮ್ಮ ಕೈಗೊಂಬೆಯಾಗಿ ಕುಳಿತು ಕೊಳ್ಳುವ ರಾಷ್ಟ್ರಪತಿ ಬೇಕಿತ್ತು. ಅದಕ್ಕೆಂದೇ ಜನಾದೇಶವನ್ನು (ಮತದಾನದ ಮೂಲಕವಲ್ಲ) ತಿರಸ್ಕರಿಸಿ ಅಬ್ದುಲ್ ಕಲಾಮ್ ಅವರು ಮತ್ತೊಂದು ಅವಧಿಗೆ ಆಯ್ಕೆಯಾಗುವುದನ್ನು ಅಡ್ಡಿಪಡಿಸಿದರು. ಆ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಪ್ರಜ್ಞಾವಂತ ಜನರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಅಬ್ದುಲ್ ಕಲಾಮ್ ಅವರ ನಂತರ ರಾಷ್ಟ್ರಪತಿ ಭವನ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತು. ನಂತರ ಬಂದ ರಾಷ್ಟ್ರಪತಿಗಳು ಭಾರತದ ಇತಿಹಾಸದಲ್ಲೇ ಕೇಳರಿಯದ ಕಳಂಕವನ್ನು ಅಂಟಿಸಿಕೊಂಡರು. ಈ ವಿಷಯವಾಗಿ ಏನೆಲ್ಲ ಚರ್ಚೆಗಳಾದ ನಂತರ ನಮ್ಮಲ್ಲಿ ಕೊನೆಗೆ ಉಳಿದದ್ದು ಮಾತ್ರ ಸಿಟ್ಟೊಂದೆ ಸ್ಥಾಯಿಭಾವವಾಗಿ.

            ೨೦೦೮ ರಲ್ಲಿ  ರಾಜ್ಯ ರಾಜಕೀಯದಲ್ಲಿ ಕರ್ನಾಟಕದ ಮತದಾರರು ಹೊಸದೊಂದು ಜನಾದೇಶವನ್ನು ನೀಡಿದರು. ಹೊಸ ಪಕ್ಷವೊಂದು ರಾಜ್ಯದಲ್ಲಿ ಮೊದಲ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಹೀಗೆ ಅಧಿಕಾರಕ್ಕೆ ಬಂದದ್ದು ದಕ್ಷಿಣ ಭಾರತದಲ್ಲೇ ಮೊದಲು ಎನ್ನುವುದು ಇನ್ನೊಂದು ಮಹತ್ವದ ಸಂಗತಿ. ಆದರೆ ನಂತರದ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಾದ ಬೆಳವಣಿಗೆಗಳು ರಾಜ್ಯದ ಇಡೀ ಜನತೆಗೆ ಭ್ರಮನಿರಸನವನ್ನುಂಟು ಮಾಡಿದವು. ಏಕೆಂದರೆ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ  ಹಿಡಿದ ಪಕ್ಷದಿಂದ ಬಹುದೊಡ್ಡ ಬದಲಾವಣೆಯೊಂದು ರಾಜ್ಯದಲ್ಲಿ ಸಂಭವಿಸಲಿದೆ ಎನ್ನುವ ನಿರೀಕ್ಷೆ ಎಲ್ಲರದಾಗಿತ್ತು. ಆದರೆ ಜನರ ನಿರೀಕ್ಷೆಗಳೆಲ್ಲ ತಲೆಕೆಳಗಾಗುವಂಥ ಘಟನೆಗಳು ರಾಜ್ಯದ ರಾಜಕೀಯ ಇತಿಹಾಸದಲ್ಲಿ ದಾಖಲಾದವು. ಅಧಿಕಾರಕ್ಕೆ ಬಂದ ಪಕ್ಷ ಜನೋಪಯೋಗಿ ಕೆಲಸಗಳಿಗಿಂತ ತನ್ನ ಹೆಚ್ಚಿನ ಅವಧಿಯನ್ನು ಉಪಚುನಾವಣೆಗಳನ್ನು ಸಂಘಟಿಸುವುದರಲ್ಲೇ ಕಳೆಯಿತು. ಬಲವಂತವಾಗಿಯಾದರೂ ಜನರು ಮತ್ತೆ ಮತ್ತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂಥ ಸನ್ನಿವೇಶಗಳು ಸೃಷ್ಟಿಯಾದವು. ಮುಂದಿನ ದಿನಗಳಲ್ಲಿ ಎದುರಾದ ಇನ್ನೊಂದು ಅಪಾಯವೆಂದರೆ ಭೂಮಿಯನ್ನು ಅಗೆದು ಹಣ ಕೊಳ್ಳೆ ಹೊಡೆಯುವ ಲೂಟಿಕೋರರು ಇಡೀ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದು. ಆ ಹಿಡಿತದಿಂದ ಪಾರಾಗುವುದಕ್ಕಾಗಿ ಸರ್ಕಾರ ಕಂಡು ಕೊಂಡ ಇನ್ನೊಂದು ಅನೈತಿಕ ಮಾರ್ಗವೆಂದರೆ ಅದು ಸರ್ಕಾರವನ್ನು ಒಂದು ನಿರ್ಧಿಷ್ಟ ಜಾತಿಯ ಸುಪರ್ದಿಗೊಳಪಡಿಸಿದ್ದು. ರಾಜ್ಯ ರಾಜಕೀಯದ ಇತಿಹಾಸದಲ್ಲೇ ಕಂಡು ಕೇಳರಿಯದ ಲಜ್ಜೆಗೇಡಿತನದ ವರ್ತನೆಯಿದು. ನಿರಂತರ ಒಳ ಜಗಳ ಮತ್ತು ತಮ್ಮ ತಮ್ಮಲ್ಲಿನ ಒಣ ಪ್ರತಿಷ್ಠೆಯ ಪರಿಣಾಮ ರಾಜ್ಯದ ಜನತೆ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ಕಾಣ ಬೇಕಾಯಿತು. ಮುಖ್ಯಮಂತ್ರಿಯಾದಿಯಾಗಿ ಅನೇಕ ಮಂತ್ರಿಗಳು ಭೃಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಅಧಿಕಾರವನ್ನು ಕಳೆದು ಕೊಂಡು ಜೈಲು ಪಾಲಾಗುವಂಥ ಘಟನೆಗಳಿಗೆ ಕರ್ನಾಟಕದ ಜನತೆ ಸಾಕ್ಷಿಯಾಗಬೇಕಾದದ್ದು ಅತ್ಯಂತ ವಿಷಾಧನಿಯ. ದೇಶದಲ್ಲೇ ಕರ್ನಾಟಕವನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡುವ ಎಲ್ಲ ಅವಕಾಶಗಳನ್ನು ಕೈ ಚೆಲ್ಲಿದ ಈ ರಾಜಕೀಯ ನಾಯಕರುಗಳು ದೋಚಿಕೊಂಡಿದ್ದು ಮಾತ್ರ ಕೋಟಿಗಳ ಲೆಕ್ಕದಲ್ಲಿ. ತನ್ನ ಕಣ್ಣೆದುರೇ ಅಪ್ರಾಮಾಣಿಕತೆ ಮತ್ತು ಭೃಷ್ಟಾಚಾರ ತಾಂಡವವಾಡುತ್ತಿರುವಾಗ ರಾಜ್ಯದ ಪ್ರಜೆ ಮಾತ್ರ ಅಸಾಹಯಕನಾಗಿ ನೋಡುತ್ತ ಕೂಡಬೇಕಾದ ಪರಿಸ್ಥಿತಿ. ಏನೆಲ್ಲ ವಾದಿಸಿದರೂ ಪ್ರತಿರೋಧ ತೋರಿದರೂ ಕೊನೆಗೂ ನಮ್ಮಲ್ಲಿ ಉಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ.

         ಈ ನಡುವೆ ಇತ್ತೀಚಿಗೆ ನಾನೊಂದು ಪುಸ್ತಕ ಓದಿದೆ. ಆ ಪುಸ್ತಕದಲ್ಲಿ ನಾಡಿನ ಹಿರಿಯ ಸಾಹಿತಿ ಆರ್ಥಿಕವಾಗಿ ಹಿಂದುಳಿದವರು ಎನ್ನುವ ಪ್ರತ್ಯೆಕತೆಯೇ ತಪ್ಪು ಎನ್ನುವ ಮಾತುಗಳನ್ನಾಡುತ್ತಾರೆ. ಜಾತಿ ಆಧಾರಿತವಾಗಿ ಹಿಂದುಳಿದವರು ಎನ್ನುವ ಪ್ರತ್ಯೇಕತೆ ಇರಲಿ ಎಂದು ವಾದಿಸುವ ಅವರು ಚಲನ ಸಮಾಜ ಮತ್ತು ತೆವಳುವ ಸಮಾಜ ಎನ್ನುವ ಕಾರಣಗಳನ್ನು ನೀಡಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಚಲನ ಸಮಾಜದಲ್ಲಿ  ಬದುಕುತ್ತಿರುವುದರಿಂದ ಅವರಿಗೆ ಆರ್ಥಿಕ ಹಿನ್ನೆಡೆಯಿಂದ ಎದ್ದು ನಿಲ್ಲುವ ಸಾಮರ್ಥ್ಯವಿದೆ ಎಂದು ಹೇಳುವ ಶ್ರೀಯುತರು ಇಂಥವರಿಗೆ ಸರ್ಕಾರದ ಸೌಲಭ್ಯಗಳು ಅನಗತ್ಯ ಎನ್ನುತ್ತಾರೆ. ಅವರ ಪ್ರಕಾರ ಜಾತಿ ಆಧಾರಿತವಾಗಿ ನಾವು ಯಾರನ್ನು ಹಿಂದುಳಿದ ವರ್ಗದವರೆಂದು ಕರೆಯುತ್ತೇವೆಯೋ ಅವರಿಗೆ ಮಾತ್ರ ಸರ್ಕಾರ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವ ಹಕ್ಕಿದೆ. ಅವರ ಈ ಅಭಿಪ್ರಾಯವನ್ನು ನಾವು ಕಾಳಜಿ ಎನ್ನುವುದಾದರೆ ಆರ್ಥಿಕವಾಗಿ ಹಿಂದುಳಿದವರನ್ನು ಕೈಹಿಡಿದು ಮೇಲೆತ್ತುವುದು ಸಾಮಾಜಿಕ ಅಪರಾಧವೇ ಎನ್ನುವುದು ಎಲ್ಲರಲ್ಲೂ ಮೂಡುವ ಪ್ರಶ್ನೆ. ಇವತ್ತು ಮೇಲ್ವರ್ಗದವರೆಂದು ಕರೆದುಕೊಳ್ಳುವ ಅದೆಷ್ಟು ಜಾತಿಗಳಲ್ಲಿ ಬಡವರಿಲ್ಲ. ಹಾಗೆಯೇ ಹಿಂದುಳಿದ ವರ್ಗದವರೆಂದು ಕರೆದುಕೊಳ್ಳುವ ಎಷ್ಟು ಜಾತಿಗಳಲ್ಲಿ ಸ್ಥಿತಿವಂತರಿಲ್ಲ. ಅಪ್ಪ ಅಮ್ಮ ಸರ್ಕಾರಿ ನೌಕರಿಯಲ್ಲಿದ್ದೂ ಅವರ ಮಕ್ಕಳು ಹಿಂದುಳಿದ ವರ್ಗದ ಕೋಟಾದಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಹೀಗೆ ಮಾಡುತ್ತಿರುವದು ಸರಿ ಎಂದಾದರೆ ಮೇಲ್ವರ್ಗದ ಆದರೆ ಆರ್ಥಿಕವಾಗಿ ಹಿಂದುಳಿದ ಜನರು ಸರ್ಕಾರದಿಂದ ಒಂದಿಷ್ಟು ಸೌಲಭ್ಯಗಳನ್ನು ನಿರೀಕ್ಷಿಸುವುದು ಅದು ಹೇಗೆ ವಂಚನೆಯಾಗುತ್ತದೆ. ಜಾತಿ ವ್ಯವಸ್ಥೆಯೇ ಅಳಿದು ಎಲ್ಲರೂ ಒಂದು ಎನ್ನುವ ಪರಿಕಲ್ಪನೆ ಒಡಮೂಡಬೇಕು ಎಂದು  ಬಯಸುವ ಈ ಬರಹಗಾರರು ಆಂತರ್ಯದಲ್ಲಿ ಮಾತ್ರ ಹಿಂದುಳಿದ ವರ್ಗದವರು ಎನ್ನುವ ವ್ಯವಸ್ಥೆ ನಿರಂತರವಾಗಿ ಮುಂದುವರೆಯಲಿ ಎಂದು ಬಯಸುವುದು ಸರಿಯಲ್ಲ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿದಾಗ ಮಾತ್ರ ಈ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯ. ಈ ವ್ಯವಸ್ಥೆಯಡಿಯಲ್ಲಿ ಸೌಲಭ್ಯಗಳನ್ನು ಅನುಭವಿಸುತ್ತಿರುವವರಿಗೂ ಮತ್ತು ನಮ್ಮನ್ನಾಳುವ ರಾಜಕಾರಣಿಗಳಿಗೂ ಜಾತಿ ಎನ್ನುವ ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಒಂದೇ ಸಲಕ್ಕೆ ಕತ್ತರಿಸಲು ಇಷ್ಟವಿಲ್ಲ. ಈ ವಿಷಯದಲ್ಲಿ ಏನೆಲ್ಲ ಚರ್ಚೆ  ವಾದಗಳ   ನಂತರ ಕೊನೆಗೂ ನಮ್ಮಲ್ಲುಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ.

           ಜಾಗತೀಕರಣದ ಈ ದಿನಗಳಲ್ಲಿ ಬಡವರ ಮಕ್ಕಳು ಯಾವ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬೇಕು ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಇಲ್ಲಿ ನಾನು ಬಡವರ ಮಕ್ಕಳೆಂದು ಹೇಳಲು ಕಾರಣ ಸ್ಥಿತಿವಂತರ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ. ಈ ಶಾಲೆಗಳು ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿರುವುದರಿಂದ ಅಂಥ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿ ಕೊಡಬೇಕೆನ್ನುವ ಬಡ ಕುಟುಂಬಗಳಲ್ಲಿನ ಪಾಲಕರ ಆಸೆ ಇವತ್ತಿಗೂ ಮರೀಚಿಕೆಯಾಗಿಯೇ ಉಳಿದಿದೆ. ಇಂಗ್ಲಿಷ್ ಭಾಷೆ ರಾಜ್ಯದಲ್ಲಿ  ಶಿಕ್ಷಣದ ಮಾಧ್ಯಮವಾಗಬೇಕೆನ್ನುವುದು ನನ್ನ ವಾದವಲ್ಲ. ಆದರೆ ಜಾಗತೀಕರಣದ ಪರಿಣಾಮ ಇವತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನಮ್ಮ ಮಕ್ಕಳಿಗೆ ಅನಿವಾರ್ಯವಾಗುತ್ತಿದೆ. ಏಕೆಂದರೆ ಇಂಗ್ಲಿಷ್ ಬದುಕಿನ ಭಾಷೆಯಾಗಿ ನಮ್ಮೆಲ್ಲರ ಬದುಕಿನಲ್ಲಿ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದೆ. ಇಂಥ ವಾತಾವರಣದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ನೆಚ್ಚಿಕೊಂಡು ಕೂಡುವುದು ಸಧ್ಯದ ಮಟ್ಟಿಗೆ ಮೂರ್ಖತನದ ಪರಮಾವಧಿ. ಇಲ್ಲಿ ಕನ್ನಡ ಭಾಷೆಯನ್ನು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಒಡ್ಡುತ್ತಿರುವ ಪೈಪೋಟಿ ಎದುರು ಅದನ್ನು ಉಳಿಸಬೇಕಾದರೆ ಮೊದಲು ನಾವು ಮಾಡಬೇಕಾಗಿರುವ ಕೆಲಸ ಕನ್ನಡವನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳಬೇಕು. ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಅನಿವಾರ್ಯತೆಯನ್ನು ಅರಿತ ಸರ್ಕಾರ ಒಂದು ಹಂತದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಯೋಜನೆ ರೂಪಿಸಿತು. ಆಗಲೇ ನಮ್ಮ ಸಾಹಿತಿ ಗಣ್ಯರಲ್ಲಿ ಕನ್ನಡದ ಪ್ರೀತಿ ಉಕ್ಕಿ ಹರಿದದ್ದು. ಕನ್ನಡ ಪ್ರೀತಿ ಅವರಲ್ಲಿ ನಾಭಿಯಿಂದಲೇ ಹುಟ್ಟಿದೆ ಏನೋ ಎನ್ನುವಂತೆ ಸರ್ಕಾರದ ಆ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದರು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯಲೇ ಕೂಡದು ಎಂದು ಪಟ್ಟು ಹಿಡಿದರು (ಖಾಸಗಿಯವರಿಂದ ನಾಯಿ ಕೊಡೆಗಳಂತೆ ಸ್ಥಾಪನೆಯಾಗಲಿ ಅದನ್ನು ವಿರೋಧಿಸಲಾರರು). ನಿಜಕ್ಕೂ ಕನ್ನಡ ಭಾಷೆಯ ಬಗೆಗಿರುವ ಅವರ ಕಾಳಜಿಯನ್ನು ಮೆಚ್ಚಿಕೊಳ್ಳೋಣ. ದುರಂತದ ಸಂಗತಿ ಎಂದರೆ ಹೀಗೆ ಬೀದಿಗಿಳಿದು ಹೋರಾಟ ಮಾಡಿದ ಬಹುತೇಕ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳು ಓದುತ್ತಿರುವುದು ರಾಜ್ಯದ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ. ಭಾಷೆಯ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಕನ್ನಡ ಮಾಧ್ಯಮದ ಶಿಕ್ಷಣವೇ ಕಡ್ಡಾಯವಾಗಿ ಜಾರಿಗೆ ಬರಲಿ ಎಂದು ಅವರು ಸರ್ಕಾರವನ್ನು ಒತ್ತಾಯಿಸಬೇಕಿತ್ತು. ತಮ್ಮ ಮಕ್ಕಳು ಮಾತ್ರ ಬದುಕಿನ ಭಾಷೆಯಲ್ಲಿ ಕಲಿತು ಬಲಾಢ್ಯರಾಗಲಿ ಎನ್ನುವ ಈ ಪ್ರಭೃತಿಗಳ ಸ್ವಾರ್ಥ ಕಂಡಾಗ ಕೊನೆಗೂ ನಮ್ಮಲ್ಲುಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, February 5, 2013

ವಿಶ್ವರೂಪಂ, ಶಾರುಕ್ ಖಾನ್ ಮತ್ತು ಪಾಕಿಸ್ತಾನ

   



     ಕಳೆದ ತಿಂಗಳು ಕಮಲ ಹಾಸನ್ ಚಿತ್ರ ಬದುಕಿನ ಮಹತ್ವಾಕಾಂಕ್ಷೆಯ ಸಿನಿಮಾ 'ವಿಶ್ವ ರೂಪಂ' ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರೇಕ್ಷಕರೂ ಸಹ ಸಿನಿಮಾ ವೀಕ್ಷಣೆಗಾಗಿ ಕಾತುರದಿಂದಲೇ ಕಾಯುತ್ತಿದ್ದರು. ಸಿನಿಮಾ ಏನೋ ಬಿಡುಗಡೆಯಾಯಿತು ಆದರೆ ಅದು ಕಮಲ ಹಾಸನ್ ತವರು ರಾಜ್ಯ ತಮಿಳು ನಾಡೊಂದನ್ನು ಹೊರತು ಪಡಿಸಿ. ಕಮಲ ಹಾಸನ್ ಗೆ ಅತಿ ಹೆಚ್ಚಿನ ಅಭಿಮಾನಿಗಳಿರುವುದು ಮತ್ತು ಆತ ಅತ್ಯಂತ ಜನಪ್ರಿಯತೆ ಪಡೆದಿರುವುದು ತಮಿಳು ನಾಡಿನಲ್ಲೇ. ಜೊತೆಗೆ  ತನ್ನ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಆತ ತನ್ನ ಸಿನಿಮಾ ಬದುಕಿನುದ್ದಕ್ಕೂ ದುಡಿದು ಗಳಿಸಿರುವುದನ್ನೆಲ್ಲ ಖರ್ಚು ಮಾಡಿದ್ದ. ಆದ್ದರಿಂದ ಆತ 'ವಿಶ್ವ ರೂಪಂ' ನಿಂದ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿದ್ದು ಈ ತಮಿಳು ನಾಡು ರಾಜ್ಯದಿಂದಲೇ. ಏಕಾಏಕಿ ಹೀಗೆ 'ವಿಶ್ವ ರೂಪಂ' ಸಿನಿಮಾ ಬಿಡುಗಡೆಗೆ ಆ ರಾಜ್ಯದಲ್ಲಿ ನಿಷೇಧ ಹೇರಿದಾಗ ಸಹಜವಾಗಿಯೇ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿದ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕಮಲ ಹಾಸನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಯಿತು. ಈ ಚಿತ್ರದ ನಿರ್ಮಾಣದಿಂದಾದ ಸಾಲ ತೀರಿಸಲು ತನ್ನ ಮನಯನ್ನೇ ಕಳೆದು ಕೊಳ್ಳಬೇಕಾಯಿತು ಎಂದು ಹೇಳಿಕೊಂಡ ಆ ಹಿರಿಯ ನಟ ಒಂದು ಹಂತದಲ್ಲಿ ದೇಶವನ್ನೇ ಬಿಟ್ಟು ಹೋಗುವುದಾಗಿ ನುಡಿದ. ಇದು ಆ ಕ್ಷಣಕ್ಕೆ ಆಕ್ರೋಶದ ಮಾತು ಎಂದೆನಿಸಿದರೂ ಒಂದು ಸೃಜನಶೀಲ ಮನಸ್ಸು ಸರ್ಕಾರದ ಮತ್ತು ಒಂದು ಧರ್ಮದ ಪಿತೂರಿಗೆ ಘಾಸಿಗೊಂಡು ವ್ಯಕ್ತ ಪಡಿಸಿದ ಸಾತ್ವಿಕ ಸಿಟ್ಟು ಅದಾಗಿತ್ತು.

       ತಮಿಳು ನಾಡಿನಲ್ಲಿ 'ವಿಶ್ವ ರೂಪಂ' ಚಿತ್ರ ಪ್ರದರ್ಶನವನ್ನು ನಿಷೇಧಿಸಿದ ಮೇಲೆ ಆ ಸಿನಿಮಾ ಬಿಡುಗಡೆಯಾದ ಬೇರೆ ಬೇರೆ ರಾಜ್ಯಗಳಲ್ಲೂ ನಾಟಕೀಯ ಬೆಳವಣಿಗೆಗಳು ಕಾಣಿಸತೊಡಗಿದವು. ಕರ್ನಾಟಕದ ಕೆಲವು ನಗರಗಳಲ್ಲೂ ಒಂದಿಷ್ಟು ಜನ ಗುಂಪಾಗಿ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರ ಮಂದಿರಗಳ ಮೇಲೆ ಕಲ್ಲೆಸೆದು ಪ್ರತಿಭಟಿಸಿದರು. ಮುಂಬೈನಲ್ಲೂ ಚಿತ್ರದ ವಿರುದ್ಧ ಅಪಸ್ವರದ ಧ್ವನಿಗಳು ಕೇಳಿಸಿದವು. ಉತ್ತರ ಪ್ರದೇಶದಲ್ಲಿ 'ವಿಶ್ವ ರೂಪಂ' ಸಿನಿಮಾ ಬಿಡುಗಡೆಗೆ ಅವಕಾಶವೇ ನೀಡಕೂಡದೆಂದು ಅಲ್ಲಿನ ಮುಖ್ಯ ಮಂತ್ರಿಯ ಮೇಲೆ ಒತ್ತಡ ಹೇರಲಾಯಿತು. ಹೀಗೆ ಆ ಸಿನಿಮಾ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

      ಅಷ್ಟಕ್ಕೂ ಈ ಸಿನಿಮಾದ ವಿರುದ್ಧ ಒಂದು ಧರ್ಮದ ಜನ ಅಷ್ಟೊಂದು ಉಗ್ರವಾಗಿ ಪ್ರತಿಭಟಿಸಲು ಕಾರಣವಾದರೂ ಏನು? ಎಂದು ಹುಡುಕಲು ಹೊರಟರೆ ಆ ಒಂದು ಪ್ರತಿಭಟನೆಗೆ ಪೂರಕವಾಗುವ ಯಾವ ಪುರಾವೆಗಳೂ ದಕ್ಕುವ ಸಾಧ್ಯತೆ ನಿಚ್ಚಳವಾಗಿ ಇಲ್ಲ. ಆ ಸಿನಿಮಾದಲ್ಲಿ ತಾಲಿಬಾನಿ ಉಗ್ರರನ್ನು ಉಗ್ರರಾಗಿ ಚಿತ್ರಿಸಿದ್ದೆ ನಟ, ನಿರ್ದೇಶಕ ಕಮಲ ಹಾಸನ್ ಮಾಡಿರುವ ಬಹುದೊಡ್ಡ ತಪ್ಪೆನ್ನುವಂತೆ ಪ್ರತಿಭಟನಾಕಾರರು ವರ್ತಿಸುತ್ತಿರುವರು. ಹೀಗೆ ಉಗ್ರರಾಗಿ ಕಾಣಿಸುವ ತಾಲಿಬಾನಿಗಳು 'ಮುಸ್ಲಿಂ' ಧರ್ಮಕ್ಕೆ ಸೇರಿದವರೆನ್ನುವುದು ಸಿನಿಮಾದ ವಿರುದ್ಧದ ಪ್ರತಿಭಟನೆಗೆ ಮೂಲ ಕಾರಣಗಳಲ್ಲೊಂದು. ಒಂದು ಧರ್ಮದ ಒಬ್ಬ ಉಗ್ರರನನ್ನು ಉಗ್ರನೆಂದು ತೋರಿಸುವುದರಿಂದಾಗಲಿ ಇಲ್ಲವೇ ಕರೆಯುವುದರಿಂದಾಗಲಿ ಇಡೀ ಧರ್ಮಕ್ಕೆ ಅವಮಾನ ಮಾಡಿದಂತೆ ಎನ್ನುವ ಅತಾರ್ಕಿಕ ನಿಲುವಿಗೆ ಬಂದು ನಿಲ್ಲುವುದು ಅತ್ಯಂತ ಮೂರ್ಖತನ. ಜೊತೆಗೆ ನೆರೆಯ ರಾಷ್ಟ್ರದ ಅನೇಕ ಮುಸ್ಲಿಂ ಸಂಘಟನೆಗಳು ಭಾರತದ ವಿರುದ್ಧ ಜಿಹಾದ್ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ (ಇಲ್ಲಿ ತಾಲಿಬಾನಿಗಳು ತಮ್ಮ ವಿಧ್ವಂಸಕ ದಾಳಿಗಾಗಿ ಅಮೆರಿಕಾ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ). ಅಂಥದ್ದೊಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಡುವ ನಿರ್ದೇಶಕ ಸಹಜತೆಗೆ ಒತ್ತು ಕೊಡುವುದು ಸಾಮಾನ್ಯ ಸಂಗತಿಗಳಲ್ಲೊಂದು. ಇಲ್ಲಿ ಕಮಲ ಹಾಸನ್ ಮಾಡಿದ್ದು ಅದನ್ನೇ. ಸಿನಿಮಾ ವಾಸ್ತವಿಕತೆಗೆ ಹತ್ತಿರವಾಗಿರಲಿ ಎನ್ನುವ ಕಾರಣದಿಂದ ಆತ  ಸಹಜತೆಗೆ ಒತ್ತು ನೀಡಿದ. ಆದರೆ ಕೆಲವು ಕರ್ಮಠರು ಈ ವಿಷಯವನ್ನೇ ದೊಡ್ಡದಾಗಿಸಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕೆಂದು ಪ್ರತಿಭಟಿಸುತ್ತಿರುವುದು ಸರಿಯಲ್ಲ. ಹೀಗೆ ಪ್ರತಿಭಟಿಸುತ್ತಿರುವವರು ಕಾಶ್ಮೀರದಲ್ಲಾಗಲಿ ಇಲ್ಲವೇ ನೆರೆಯ ರಾಷ್ಟ್ರದಲ್ಲಾಗಲಿ ಅಲ್ಲಿನ ಹಿಂದೂಗಳ ಮೇಲೆ ಆಗುತ್ತಿರುವ ಅಮಾನವೀಯ ಕೃತ್ಯಗಳ ವಿರುದ್ಧ ಎಂದಾದರೂ ಧ್ವನಿ ಎತ್ತಿರುವರೆ? ಕಸಬ್ ಎನ್ನುವ ಪಾಪಿ ಭಾರತಕ್ಕೆ ಕಾಲಿಟ್ಟು ಇಲ್ಲಿನ ನೂರಾರು ಅಮಾಯಕರನ್ನು ನಿರ್ದಯವಾಗಿ ಗುಂಡಿಟ್ಟು ಹತ್ಯೆಗೈದಾಗ ಅವನನ್ನು ಮುಸ್ಲಿಂ ಎಂದು ಕರೆಯುವುದು ತಪ್ಪೇ? ಹಾಗೆಂದ ಮಾತ್ರಕ್ಕೆ ಇಡೀ ಮುಸ್ಲಿಂ ಧರ್ಮವೇ ಅನ್ಯಾಯಕ್ಕೋ ಇಲ್ಲವೇ ಅವಮಾನಕ್ಕೋ ಒಳಗಾಯಿತು ಎಂದುಕೊಳ್ಳುವುದು ಅದು ನಮ್ಮ ಸಂಕುಚಿತ ಮನಸ್ಸಿಗೆ ಹಿಡಿದ ಕೈಗನ್ನಡಿ. ಜೊತೆಗೆ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ ಬಿಡುಗಡೆಗೆ ಅನುಮತಿ ನೀಡಿದೆ. ಹಾಗೊಂದುವೇಳೆ ಸಿನಿಮಾದಲ್ಲಿ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಇಲ್ಲವೇ ಯಾವುದಾದರು ಧರ್ಮಕ್ಕೆ ನೋವುಂಟು ಮಾಡುವಂತಹ ಸನ್ನಿವೇಶಗಳಿದ್ದರೆ ಸೆನ್ಸಾರ್ ಮಂಡಳಿಯೇ ಸಿನಿಮಾದ ಬಿಡುಗಡೆಗೆ  ತಡೆಯೊಡ್ಡುತಿತ್ತು. ಹಿಂದೆಯೆಲ್ಲ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿವೆ. ಮಂಡಳಿಯೇ ಅನುಮತಿ ನೀಡಿರುವಾಗ ಧರ್ಮವೊಂದರ ಸಂಘಟನೆ ಸಿನಿಮಾದ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳುವುದಿದೆಯಲ್ಲ ಅದು ರಾಷ್ಟ್ರದ  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದುದ್ದು.

      ಸಿನಿಮಾ ನಮ್ಮ ಬದುಕಿನ ಮತ್ತು ನಮ್ಮ ಸುತ್ತಮುತ್ತಲಿನ  ಸಮಾಜದ ದರ್ಪಣಸಿನಿಮಾವೊಂದು ಸಮಾಜದ ಗುಣಾವಗುಣಗಳಿಗೆ ಕನ್ನಡಿ ಹಿಡಿದು ತೋರಿಸುವ ಕೆಲಸ ಮಾಡುತ್ತದೆಬ್ರಾಹ್ಮಣ ಸಮುದಾಯದಲ್ಲಿನ ವಿಧವಾ ಸಮಸ್ಯೆ ಕುರಿತು ಎಪ್ಪತ್ತರ ದಶಕದಲ್ಲೇ 'ಸಂಸ್ಕಾರಎನ್ನುವ ಸಿನಿಮಾ ನಿರ್ಮಾಣವಾಯಿತು ದೇಶದಲ್ಲಿನ ಜಾತಿ ಸಮಸ್ಯೆಭೃಷ್ಟಾಚಾರಕೋಮು ಗಲಭೆಕೆಟ್ಟ ರಾಜಕೀಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಅನೇಕ ಸಿನಿಮಾಗಳು ಭಾರತದ ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಂಡಿವೆಹೀಗೆ ಪ್ರತಿ ಸಂದರ್ಭದಲ್ಲಿ ನಾವುಗಳು ಪ್ರತಿಭಟನೆ ಮಾಡುತ್ತ ಕುಳಿತರೆ ಸಿನಿಮಾ ಎನ್ನುವ ಸೃಜನಶೀಲ ಮಾಧ್ಯಮ ಕೇವಲ ಮನೋರಂಜನೆಗೆ ಸೀಮಿತವಾಗುವ ಅಪಾಯ ಎದುರಾಗುತ್ತದೆ.

           ನಡುವೆ ನಟ ಶಾರುಕ್ ಖಾನ್ ಭಾರತದಲ್ಲಿ ತನ್ನನ್ನು ಅನುಮಾನದಿಂದ ಕಾಣುತ್ತಿರುವರು ಎನ್ನುವ ಹೇಳಿಕೆ ನೀಡಿ ಮಾಧ್ಯಮದ ಮತ್ತು ಅಭಿಮಾನಿಗಳ ಅನುಕಂಪಗಳಿಸಲು ಪ್ರಯತ್ನಿಸುತ್ತಾನೆಮಾತನಾಡುವ ಉತ್ಸಾಹದಲ್ಲಿ  ನೆಲದಿಂದ ತಾನು ಪಡೆದದ್ದೇನು ಎನ್ನುವ ಕಿಂಚಿತ್ ಉಪಕಾರ ಸ್ಮರಣೆಯೂ  ನಟನಲ್ಲಿ ಸುಳಿಯುವುದಿಲ್ಲನಾನು ನೋಡಿದಂತೆ ಸರ್ಕಸ್ ಎನ್ನುವ ದೂರದರ್ಶನದ ಧಾರಾವಾಹಿಯಿಂದ ಸಿನಿಮಾ ಜಗತ್ತಿಗೆ ಕಾಲಿಟ್ಟವನು  ಶಾರುಕ್ ಖಾನ್ಹಿಂದಿ ಚಿತ್ರರಂಗದ ಸ್ಟಾರ್ ನಿರ್ದೇಶಕರ ಕೈಗೆ ಸಿಕ್ಕ ಆತ ನಂತರದ ದಿನಗಳಲ್ಲಿ ಜನಪ್ರಿಯ ನಟನಾಗಿ ಬೆಳೆದು ನಿಂತಅವನಲ್ಲಿನ ಪ್ರತಿಭೆಯ ಜೊತೆಗೆ  ನಟನನ್ನು ಆರಾಧಿಸುವ ಅಭಮಾನಿಗಳ ಪಡೆಯೇ ಹುಟ್ಟಿಕೊಂಡ ಪರಿಣಾಮ ಆತ ಹಂತ ಹಂತವಾಗಿ ಯಶಸ್ಸಿನ ಉತ್ತುಂಗಕ್ಕೇರಿದಅಂದೇ ಶಾರುಕ್ ಖಾನ್ ಒಂದು ಧರ್ಮಕ್ಕೆ ಸೇರಿದವನೆಂದು ಆತನನ್ನು ಅನುಮಾನದಿಂದ ನೋಡಿರುತ್ತಿದ್ದರೆ ಹೀಗೆ ಎರಡು ದಶಕಗಳಿಂದ ಭಾರತದ ಸಿನಿಮಾ ಪ್ರೇಕ್ಷಕರ ಡಾರ್ಲಿಂಗ್ ನಟನಾಗಿ ಜನಪ್ರಿಯತೆಯ ಉತ್ತುಂಗದಲ್ಲಿರಲು ಸಾಧ್ಯವಾಗುತ್ತಿರಲಿಲ್ಲ

        ಈ ಸಿನಿಮಾವನ್ನು ಭಾರತೀಯ ಪ್ರೇಕ್ಷಕರು ಪ್ರೀತಿಸುವಷ್ಟು  ಪ್ರಪಂಚದ ಬೇರೆ ಯಾವ ದೇಶದ ಪ್ರೇಕ್ಷಕರು ಪ್ರೀತಿಸಲಾರರು. ಭಾರತೀಯ ಪ್ರೇಕ್ಷಕರಿಗೆ ರಾಜ್ ಕಪೂರ, ದಿಲೀಪ ಕುಮಾರ, ಅಮಿತಾಬ್ ಬಚ್ಚನ್, ಅಮೀರ ಖಾನ್, ಶಾರುಕ್ ಖಾನ್ ಈ ನಟರ ಸಿನಿಮಾ ಮತ್ತು ಅಭಿನಯ ಮುಖ್ಯವೇ ವಿನಃ ಅವರ ಧರ್ಮ ಮತ್ತು ರಾಷ್ಟ್ರೀಯತೆಯಲ್ಲ. ಅದಕ್ಕೆಂದೇ ಅನ್ಯ ದೇಶದ ಅನ್ಯ ಧರ್ಮದ ಜಾಕಿಚಾನ್ ಕೂಡ ಇಲ್ಲಿ ಜನಪ್ರಿಯ ನಟನೆಂಬ ಅಭಿಮಾನಕ್ಕೆ ಪಾತ್ರನಾಗುತ್ತಾನೆ. ಇಲ್ಲಿನ ಸಿನಿಮಾ ಪ್ರೇಕ್ಷಕರು ತೀರ ಧರ್ಮಾಭಿಮಾನಿಗಳಾಗಿದ್ದರೆ ದಿಲೀಪ ಕುಮಾರ, ಅಮೀರ ಖಾನ್, ಅಮ್ಜದ್ ಖಾನ್, ಖಾದರ್ ಖಾನ್, ನರ್ಗಿಸ್, ಶಾರುಕ್ ಖಾನ್, ಸಲ್ಮಾನ್ ಖಾನ್ ಇವರುಗಳೆಲ್ಲ ಜನಪ್ರಿಯ ಕಲಾವಿದರುಗಳಾಗಿ ಭಾರತೀಯರ ಮನೆ ಮತ್ತು ಮನಸ್ಸುಗಳಲ್ಲಿ ನೆಲೆಯೂರಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಇನ್ನೊಂದು ಮಾತು  ಕೆಲವು ವರ್ಷಗಳ ಹಿಂದೆ ಇದೇ ಶಾರುಕ್ ಖಾನ್ ಅಭಿನಯದ 'ಮೈ ನೇಮ್ ಈಸ್ ಖಾನ್' ಸಿನಿಮಾ ಬಿಡುಗಡೆಯಾದಾಗ ಭಾರತದ ಎಲ್ಲ ಪ್ರೇಕ್ಷಕ ವರ್ಗ ಚಿತ್ರವನ್ನು ವೀಕ್ಷಿಸಿ ಆತನ ಅಭಿನಯವನ್ನು ಮೆಚ್ಚಿ ಮಾತನಾಡಿದರು. ಆ ಸಿನಿಮಾದುದ್ದಕ್ಕೂ ಮುಸ್ಲಿಂ ಧರ್ಮದ ನಾಯಕನನ್ನು ಸಮಾಜ ಹೇಗೆ ಅನುಮಾನದಿಂದ ನೋಡುತ್ತಿದೆ ಎನ್ನುವುದನ್ನೇ ತೋರಿಸಲಾಗಿತ್ತು. ಆದರೂ ಸಿನಿಮಾ ಪ್ರೇಕ್ಷಕರಿಗೆ ಇಲ್ಲಿ ಕಥಾ ವಸ್ತುವಿಗಿಂತ ಶಾರುಕ್ ಅಭಿನಯ ಇಷ್ಟವಾಗಿತ್ತು.

       ಶಾರುಕ್ ಖಾನನ ಈ ಹೇಳಿಕೆಯನ್ನು ದೇಶದಾದ್ಯಂತ ಖಂಡಿಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ ರಾಷ್ಟ್ರದ ಮಂತ್ರಿಯೋರ್ವರು ಭಾರತದಲ್ಲಿ ಶಾರುಕ್ ಖಾನ್ ಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಹೇಳಿ ಎಡಬಿಡಂಗಿಯಂತೆ ವರ್ತಿಸುತ್ತಾರೆ. ಶಾರುಕ್ ಖಾನ್ ಭಾರತೀಯ ಮತ್ತು ಇದು ಭಾರತದ ಆಂತರಿಕ ವಿಚಾರ. ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿ ಮಾತನಾಡುವ ರೆಹಮಾನ್ ಮಲೀಕ್ ಗೆ ಮೊದಲು ತನ್ನ ರಾಷ್ಟ್ರದ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಾಳಜಿ ಇರಲಿ. ಏಕೆಂದರೆ ಆತನದು ಭಯೋತ್ಪಾದಕರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾಕುತ್ತಿರುವ ರಾಷ್ಟ್ರ. ಪ್ರಪಂಚದ ಪರಮ ಪಾತಕಿ ಬಿನ್ ಲಾಡೆನ್ ಗೆ ತನ್ನ ಸೇನಾ ತರಬೇತಿ ಶಿಬಿರದ ಅನತಿ ದೂರದಲ್ಲೇ ರಾಜಾಶ್ರಯ ನೀಡಿದ ನೆಲವದು. ಭಾರತದ ಮೇಲೆ ದಾಳಿಮಾಡುವ ಉಗ್ರರನ್ನು ಆ ರಾಷ್ಟ್ರ ಸದಾಕಾಲ ಬೆಂಬಲಿಸುತ್ತ ಬಂದಿದೆ. ದಾವೂದ್ ಇಬ್ರಾಹಿಂ, ಅಜರ್ ಮಸೂದ್ ರಂಥ ಅಂತರಾಷ್ಟ್ರೀಯ ಭಯೋತ್ಪಾದಕರು ಪಾಕಿಸ್ತಾನದ ನೆಲದಲ್ಲಿ ಕುಳಿತುಕೊಂಡು ಭಾರತದ ವಿರುದ್ಧ ದಾಳಿಯ ತಂತ್ರ ರೂಪಿಸುತ್ತಾರೆ. ಭಾರತದ ಮೇಲೆ ಭಯೋತ್ಪಾದಕರ  ದಾಳಿಯನ್ನು ಹೆಚ್ಚಿಸಲು ಅಗತ್ಯವಾದ ಯಾವ ಅವಕಾಶವನ್ನು ಪಾಕಿಸ್ತಾನ ಕೈ ಬಿಡುವುದಿಲ್ಲ. ಮೇಲಾಗಿ ಇಡೀ ಪಾಕಿಸ್ತಾನವೇ ಇವತ್ತು ತಾಲಿಬಾನಿಗಳ ನಿಯಂತ್ರಣದಲ್ಲಿದೆ. ಉಗ್ರರಿಂದಾಗಿ ಅಲ್ಲಿನ ನಾಗರಿಕರ ಬದುಕು ಅಸ್ತವ್ಯಸ್ತಗೊಂಡಿದೆ. ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಅರಾಜಕತೆ ಮನೆ ಮಾಡಿದೆ. ಎಲ್ಲರಿಗೂ ನೆನಪಿರುವಂತೆ ಕಳೆದ ವರ್ಷ ಅಕ್ಟೋಬರ್ ತಿಂಗಳ ಒಂದು ದಿನ ತಾಲಿಬಾನಿಗಳು ಅಲ್ಲಿನ ಮಲಾಲಾ ಎನ್ನುವ ಶಾಲಾ ಬಾಲಕಿಯನ್ನು ಹತ್ಯೆ ಗೈಯಲು ಪ್ರಯತ್ನಿಸಿದ ಸಂಗತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲ್ಪಟ್ಟಿತು. ಎಲ್ಲ ರಾಷ್ಟ್ರಗಳು ಈ ಅಮಾನವೀಯ ಕೃತ್ಯವನ್ನು ಖಂಡಿಸಿದವು. ಪಾಕಿಸ್ತಾನಿ ನಾಗರಿಕರಿಗೆ ಉಗ್ರರ ಉಪಟಳದ ನಡುವೆ ದಿನನಿತ್ಯದ ಬದುಕು ನಡೆಸುವುದೇ ಕಷ್ಟವಾಗಿದೆ. ಶಾರುಕ್ ಖಾನ್ ಭದ್ರತೆ ವಿಷಯವಾಗಿ ಹೇಳಿಕೆ ನೀಡುವ ಮೊದಲು ತನ್ನ ರಾಷ್ಟ್ರದಲ್ಲಿನ ಪ್ರಜೆಗಳ ಸುರಕ್ಷತೆಯ ಬಗ್ಗೆ ರೆಹಮಾನ್ ಮಲ್ಲಿಕ್ ಚಿಂತಿಸಬೇಕಿತ್ತು.

         ಭಯೋತ್ಪಾದನೆಯೊಂದು ಆ ರಾಷ್ಟ್ರದಲ್ಲಿ ಯಾವ ಪರಿ ಅಲ್ಲಿನ ಜನರ ಬದುಕನ್ನು ಅಸಹಾಯಕತೆಯ ಅಂಚಿಗೆ ತಂದು ನಿಲ್ಲಿಸಿದೆ ಎನ್ನುವುದನ್ನು ಕುರಿತು ಪಾಕಿಸ್ತಾನಿ ಸಹೋದರಿಯೊಬ್ಬಳು ಇಂಗ್ಲಿಷ್ ದೈನಿಕವೊಂದಕ್ಕೆ ಬರೆದ ಪತ್ರ ಹೀಗಿದೆ,


ಮುಂಬೈ ನಾಗರಿಕರಿಗೆ ನನ್ನ ಸಹಾನುಭೂತಿ,
        ಮುಂಬೈನ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಉಗ್ರರ ದಾಳಿಯಲ್ಲಿ  ಗಾಯಗೊಂಡವರಿಗೆ ಮತ್ತು ತಮ್ಮ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡವರಿಗೆ ನನ್ನ ಹೃದಯಾಂತರಾಳದ ಸಾಹಾನುಭೂತಿ . ಸಾವಿರಾರು ಮೈಲಿ ದೂರದಲ್ಲಿ ಕುಳಿತು ಟೆಲಿವಿಜನ್ ಪರದೆಯ ಮೇಲೆ ನೂರು ವರ್ಷ ಹಳೆಯದಾದ ತಾಜ್ ಹೋಟೆಲ್ ನಲ್ಲಿ ನಡೆದ ಕಮಾಂಡೋ ಪಡೆಯ ಕಾರ್ಯಾಚರಣೆ ನೋಡುತ್ತಿರುವಾಗ ಮನಸ್ಸು ರೋಧಿಸುತ್ತದೆ.  ಮುಂಬೈನ ಈ ಘಟನೆ ನನಗೆ ಕಳೆದ ವರ್ಷ ೨೦೦೭ ಡಿಸೆಂಬರ್ ೨೮ ರಂದು ಕರಾಚಿಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಿದೆ. ಆ ದಿನ ಉಗ್ರರು ನಮ್ಮ ನಾಯಕಿ ಬೆನಜೀರ್ ಭುಟ್ಟೊರನ್ನು ಹತ್ಯೆಗೈದರು. ಇಡೀ ಕರಾಚಿ ಪಟ್ಟಣ ಹೊಗೆಯಿಂದ ತುಂಬಿ ಕೊಂಡಿತ್ತು.
        ಈ ಉಗ್ರರು ಪಾಕಿಸ್ತಾನಿ ಪ್ರಜೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವರು. ಇಲ್ಲಿಯ ಕಟ್ಟಡಗಳು ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಧ್ವಂಸಗೊಂಡಿವೆ. ರೈತರ ಬೆಳೆಗಳು ನಾಶಗೊಂಡಿವೆ. ಮಕ್ಕಳಿಗೆ ಕಲಿಯಲು ಶಾಲೆಗಳಿಲ್ಲ. ಲಾಹೋರ್ ನಲ್ಲಿ ಪತ್ರಿಕೆ ನಡೆಸುತ್ತಿರುವ ನನ್ನ ಸಹೋದರಿ ಮತ್ತವಳ ಪತಿ ಭಯೋತ್ಪಾದಕರ ಬೆದರಿಕೆಯಿಂದ ಪ್ರತಿನಿತ್ಯ ಪೊಲೀಸರ ರಕ್ಷಣೆಯಲ್ಲಿ ಬದುಕು ಸಾಗಿಸುತ್ತಿರುವರು.
       ನಿಜ ಹೇಳುತ್ತಿದ್ದೇನೆ ಭಾರತೀಯರು ನೀವು ಎಷ್ಟು ದ್ವೇಷಿಸುತ್ತಿರೋ  ಅದಕ್ಕಿಂತ ಹೆಚ್ಚು ನಾನು ಈ ಉಗ್ರರನ್ನು ದ್ವೇಷಿಸುತ್ತೇನೆ. ಸಾವಿರಾರು ಪಾಕಿಸ್ತಾನಿಯರನ್ನು ಕೊಂದ ಇವರು ದಿನನಿತ್ಯ ನಮ್ಮನ್ನು ಸಾಯಿಸುತ್ತಿರುವರು. ಬೇರೆ ರಾಷ್ಟ್ರದೊಂದಿಗೆ ಯುದ್ಧ ಮಾಡಿ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವರು.
        ಮುಂಬೈ ನಮಗೆ ದಿಲಿಪ ಕುಮಾರ್, ಅಮಿತಾಬ ಬಚ್ಚನ್, ಶಾರುಕ  ಖಾನ್ ರಂಥ ಸೆಲೆಬ್ರಿಟಿಗಳನ್ನು ನೀಡಿದ ನಗರ. ಅದು ನಮ್ಮ ಕನಸುಗಳ ಮಾಯಾ ನಗರ. ನಿಮ್ಮ ಧೈರ್ಯಕ್ಕೆ ನನ್ನ ಸಲಾಂಗಳು. ಈ ಘಟನೆಗೆ ಕಾರಣರಾದವರನ್ನು ಖಂಡಿಸುತ್ತೇನೆ. ನಡೆದ ಈ ಅಸಂಗತ ಘಟನೆಯಿಂದ ಬಹು ಬೇಗ ಚೇತರಿಸಿಕೊಳ್ಳಿರೆಂದು ಹಾರೈಸುವೆ.
ಇಂತಿ ನಿಮ್ಮ
ಪಾಕಿಸ್ತಾನಿ ಸಹೋದರಿ


          ಈ ಸಂದರ್ಭ ಇಷ್ಟವಿಲ್ಲದಿದ್ದರು ಒಂದೆರಡು ವಿಷಯಗಳನ್ನು ಹೇಳಬೇಕಾಗಿದೆ. ಈ ಎಲ್ಲ ಅಸಂಗತ ಘಟನೆಗಳು ನಡೆಯುತ್ತಿರುವ ಸಮಯದಲ್ಲೇ ಕೇಂದ್ರ ಸರ್ಕಾರದ ಮಂತ್ರಿಯೋರ್ವರು ಭಾರತದಲ್ಲಿ ಹಿಂದೂ ಉಗ್ರಾಮಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಹೇಳಿಕೆ ನೀಡುತ್ತಾರೆ. ಸಿನಿಮಾವೊಂದರ ಪ್ರದರ್ಶನಕ್ಕೆ ಪ್ರತಿರೋಧ ತೋರುತ್ತಿರುವ ಸಂಘಟನೆಗಳಿಗೆ ನಮ್ಮ ಬುದ್ದಿಜೀವಿಗಳು ಬೆಂಬಲ ನೀಡುತ್ತಾರೆ. ನಿಮಗೆ ಗೊತ್ತಿರಬಹುದು ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನೆರೆಹಾವಳಿ ಸಂಭವಿಸಿದಾಗ ರಾಜ್ಯದ ಅನೇಕ ಭಾಗಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದರು. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮತಿಯೊಂದನ್ನು ರಚಿಸಿದಾಗ ಅದರಲ್ಲಿದ್ದ ಬುದ್ದಿಜೀವಿಗಳು ನೆರೆ ಹಾವಳಿ ಪ್ರದೇಶಗಳಲ್ಲಿ ಇಂತಿಂಥ ಜಾತಿಯವರಿಗೆ ಹೀಗಿಗೆ ಅನ್ಯಾಯವಾಗಿದೆ ಎಂದು ಹೇಳಿದರು. ಇಡೀ ಪ್ರದೇಶದ ಜನ ನೆರೆ ಹಾವಳಿಯಿಂದ ಸಂಕಷ್ಟಗಳನ್ನು ಅನುಭವಿಸುತ್ತಿರುವಾಗ ನಮ್ಮ ಬುದ್ದಿ ಜೀವಿಗಳಿಗೆ ಜಾತಿ ಧರ್ಮದ ವಿಷಯವೇ ಮುಖ್ಯವಾಗಿತ್ತು. ಪಾರ್ಲಿಮೆಂಟ್ ಮೇಲಿನ ದಾಳಿಯ ಸಂಚು ರೂಪಿಸಿದ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡುವಂತೆ  ಇವತ್ತಿಗೂ ಒತ್ತಾಯಿಸುವ ಬುದ್ದಿಜೀವಿಗಳ ದೊಡ್ಡ ಪಡೆಯೇ ನಮ್ಮ ರಾಷ್ಟ್ರದಲ್ಲಿದೆ.
      ಈ ಪ್ರತಿಭಟನೆ ಮತ್ತು ಹೇಳಿಕೆಗಳನ್ನು ನೀಡುತ್ತಿರುವ ಸಂದರ್ಭ ಭಾರತ ಕಂಡ ಅತ್ಯಂತ ದಕ್ಷ, ಪ್ರಾಮಾಣಿಕ ಮತ್ತು  ಸೃಜನಶೀಲ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಮ್ ಅವರ ಬದುಕಿನಲ್ಲಿ ನಡೆದ ಪ್ರಸಂಗವೊಂದು ನೆನಪಾಗುತ್ತಿದೆ. ಒಮ್ಮೆ ಪತ್ರಕರ್ತ ಡಾ.ಅಬ್ದುಲ್ ಕಲಾಮ್ ಅವರಿಗೆ 'ಸರ್ ನಿಮ್ಮನ್ನು ಜನ ವಿಜ್ಞಾನಿ, ರಾಷ್ಟ್ರಪತಿ ಮತ್ತು ಮುಸ್ಲಿಂ ಈ ಯಾವುದರಿಂದ ಗುರುತಿಸಬೇಕೆಂದು ಇಚ್ಚಿಸುತ್ತಿರಿ?' ಎಂದು ಕೇಳಿದ. ಆಗ ಕಲಾಮ್ ಅವರ ಉತ್ತರ ಹೀಗಿತ್ತು 'ಮೊದಲು ನಾನು ಭಾರತೀಯ ನಂತರ ಉಳಿದದ್ದೆಲ್ಲ. ಜನರು ನನ್ನನ್ನು ಭಾರತೀಯನೆಂದು ಗುರುತಿಸಲು ಇಚ್ಚಿಸುತ್ತೇನೆ'. ಸಂಕುಚಿತ ಮನಸ್ಸುಗಳಿಗೆ  ಕಲಾಮ್ ಅವರ ವಿಶಾಲ ಮನೋಭಾವ ಅರ್ಥವಾಗಲಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ