Wednesday, July 23, 2014

ಇದು ಅಪ್ಪನಿಗೆ ಮಗಳ ಉಡುಗೊರೆ







ಮೊನ್ನೆ ನನ್ನ ಗೆಳೆಯರೊಬ್ಬರು ನನಗೆ ಓದಲು ಪುಸ್ತಕ ತಂದುಕೊಟ್ಟರು. ಆ ಪುಸ್ತಕದಲ್ಲಿ ನನ್ನ ಲೇಖನವಿದೆ ಎನ್ನುವುದು ಬೇರೆ ಮಾತು. ಪುಸ್ತಕಕ್ಕೆ ಲೇಖನ ಕಳುಹಿಸಿಕೊಡಿ ಎಂದು ಸಂಪಾದಕ ಸಮಿತಿಯವರು ಕೇಳಿದಾಗ ನನ್ನ ಮತ್ತು ರುದ್ರಪ್ಪನವರ ಸ್ನೇಹದ   ಕುರಿತು  ಲೇಖನ ಬರೆದು ಕಳುಹಿಸಿದ್ದೆ. ಆನಂತರ ಕೆಲಸದ ಒತ್ತಡದ ನಡುವೆ ಈ ವಿಷಯ ನನ್ನ ಸ್ಮೃತಿಯಿಂದ ಮರೆಯಾಗಿತ್ತು. ಈ ಪುಸ್ತಕದ ಕಥಾ ನಾಯಕನ ಮಗಳು ಡಾ. ಹೇಮಾ ನನ್ನನ್ನು ವೈಯಕ್ತಿಕವಾಗಿ ಕಂಡು ಮಾತನಾಡಿಸಿ ಲೇಖನ ಬರೆದಿದ್ದಕ್ಕೆ ಕೃತಜ್ಞತೆ ಸೂಚಿಸಿದ್ದರೂ ಅವರು ನನ್ನನ್ನು ಭೇಟಿಯಾಗುವ ವೇಳೆಗೆ ಅವರು ತಂದಿದ್ದ ಪುಸ್ತಕದ ಪ್ರತಿಗಳೆಲ್ಲ ಖಾಲಿಯಾಗಿದ್ದವು. ಕೊನೆಗೂ ನನ್ನ ಸ್ನೇಹಿತರ ಮೂಲಕ ಪುಸ್ತಕ ನನ್ನ ಕೈಸೇರಿತು. ಪುಸ್ತಕದ ಹೆಸರು 'ಶಾಂತರುದ್ರ'. ಇದು ಪುಸ್ತಕ ವ್ಯಾಪಾರಿಯೂ ಮತ್ತು ಪ್ರಕಾಶಕರಾಗಿದ್ದ ಶ್ರೀ ಪಿ. ರುದ್ರಪ್ಪ ಅಂಗಡಿ ಅವರ ಕುರಿತಾದ ನೆನಪುಗಳ ಗ್ರಂಥ. ಒಂದರ್ಥದಲ್ಲಿ 'ಸಂಸ್ಮರಣ ಗ್ರಂಥ' ವೆಂದೂ ಕರೆಯಬಹುದು. 

         ಶ್ರೀ ರುದ್ರಪ್ಪನವರು ನನಗೆ ಅಪರಿಚಿತರೇನೂ ಆಗಿರಲಿಲ್ಲ. ನಾನು ಬಾಗಲಕೋಟೆಯ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕನೆಂದು ೨೦೦೧ ರಲ್ಲಿ ನಿಯುಕ್ತಿಗೊಂಡ ದಿನದಿಂದಲೂ ನನಗೆ ಅವರು ಪರಿಚಿತರಾಗಿದ್ದರು. ಮೊದಲು ಸಪ್ನಾ   ಪುಸ್ತಕ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದವರು  ನಂತರ ತಮ್ಮದೇ   ಪುಸ್ತಕ ಮಳಿಗೆ ಮತ್ತು ಪ್ರಕಾಶನ ಸಂಸ್ಥೆಯನ್ನು  ಪ್ರಾರಂಭಿಸಿದರು. ಒಂದಿಷ್ಟು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಕನ್ನಡದ ಸಾಂಸ್ಕೃತಿಕ ಲೋಕವನ್ನು ತಮ್ಮ ಕೈಲಾದ ಮಟ್ಟಿಗೆ ಸಂಪದ್ಭರಿತಗೊಳಿಸಿದ ಹೆಮ್ಮೆ  ಮತ್ತು ಅಭಿಮಾನ ಶ್ರೀಯುತರದ್ದಾಗಿತ್ತು. ವ್ಯಾಪಾರದ ನಡುವೆಯೂ ಒಂದಿಷ್ಟು ದೈವಭಕ್ತಿ ಮತ್ತು ಸಾತ್ವಿಕ ಗುಣವನ್ನು ಅವರು ಮೈಗೂಡಿಸಿಕೊಂಡಿದ್ದು ನನ್ನ ಅನುಭವಕ್ಕೆ ಬಂದ ಸಂಗತಿಗಳಲ್ಲೊಂದು.  ಬಾಲ್ಯವನ್ನು ಬಡತನದಲ್ಲೇ ಕಳೆದ ಅವರು ನಂತರದ ದಿನಗಳಲ್ಲಿ ತಾವು ಮಾಡುತ್ತಿದ್ದ ವ್ಯಾಪಾರದಿಂದ ತಕ್ಕ ಮಟ್ಟಿಗೆ ಸ್ಥಿತಿವಂತರಾಗಿದ್ದರು. ಬೆಂಗಳೂರಿನಂಥ ಮಹಾನಗರದಲ್ಲಿ ಸ್ವಂತಕ್ಕೆ ಮನೆ, ಅಂಗಡಿ, ಪ್ರಕಾಶನ ಸಂಸ್ಥೆ, ಹುಟ್ಟೂರಿನಲ್ಲಿ ತೋಟ ಗದ್ದೆ ಒಂದಿಷ್ಟು ನೌಕರರು ಹೀಗೆ ಬದುಕಿನ ಸಮೃದ್ಧ ಸುಖವನ್ನುಂಡ ಜೀವ ಅವರದು. ಎಲ್ಲೋ ಒಂದು ಕಡೆ ಪುಸ್ತಕ ಪ್ರಕಟಣೆಯಿಂದ ಕೈಸುಟ್ಟು ಕೊಂಡರೂ ಪಠ್ಯ ಪುಸ್ತಕಗಳ ಮಾರಾಟದಿಂದ ಲಾಭ ಅವರ ಕೈಹಿಡಿದಿತ್ತು. ಆದರೆ ಸಮಾಜ ವಿರೋಧಿಯಾಗಿ ಬದುಕುವವರೇ  ಹೆಚ್ಚುತ್ತಿರುವ ಈ ದಿನಗಳಲ್ಲಿ ಸಾತ್ವಿಕವಾಗಿ ಬದುಕುತ್ತಿರುವವರ ಸಂಖ್ಯೆ ಸಮಾಜದಲ್ಲಿ ದಿನದಿಂದ ಕ್ಷೀಣಿಸುತ್ತಿದೆ. ಈ ಒಂದು ಕಾರಣದಿಂದ ಶ್ರೀ ರುದ್ರಪ್ಪನವರ ಸಾತ್ವಿಕ ಮತ್ತು ದೈವ ಭಕ್ತಿಯ ಬದುಕು ಎಲ್ಲರ ಮೆಚ್ಚುಗೆಗೆ ಮತ್ತು ಪ್ರೇರಣೆಗೆ  ಪಾತ್ರವಾಗಿತ್ತು. ಅವರಲ್ಲಿ ನಾನು ಗಮನಿಸಿದ ಇನ್ನೊಂದು ಗುಣವೆಂದರೆ ಅದು ಅವರೊಳಗಿನ ಹಾಸ್ಯ ಪ್ರವೃತ್ತಿ ಮತ್ತು ಜೀವನ ಪ್ರೀತಿ. 

        ಈ ಸಲದ ಯುಗಾದಿ ಹಬ್ಬದಂದು ಧಿಡೀರನೇ ಬಂದ ಮೃತ್ಯು ರುದ್ರಪ್ಪನವರನ್ನು ತನ್ನ ಜೊತೆಗೆ ಕರೆದೊಯ್ಯಿತು. ಅವರಿಗೆ ಸಾಯುವಂಥ ವಯಸ್ಸೆನೂ ಆಗಿರಲಿಲ್ಲ. ಹಾಗೆಂದು ಸಾವನ್ನು ತಪ್ಪಿಸುವುದು ಯಾರ ಕೈಯಲ್ಲೂ ಇಲ್ಲ. ರುದ್ರಪ್ಪನವರ  ಸಾವಿನ ನಂತರ ಅವರ ಮಗಳು ಹೇಮಾ ತಮ್ಮ ತಂದೆಯ ನೆನಪಿಗಾಗಿ  ಹೊರತಂದ ಹೊತ್ತಿಗೆಯೇ ಈ 'ಶಾಂತರುದ್ರ'. ಆ ಪುಟ್ಟ ಹೆಣ್ಣುಮಗಳು ತನ್ನ ತಂದೆಯ ಪರಿಚಿತರನ್ನೆಲ್ಲ ಸಂಪರ್ಕಿಸಿ ಅವರಿಂದ ಲೇಖನ ಪಡೆದು ನಾಡಿನ ಖ್ಯಾತ ಸಂಶೋಧನಾ ತಜ್ಞ  ಪ್ರೊ ಹನ್ನೆರಡುಮಠ ಅವರನ್ನು ಸಂಪಾದಕರನ್ನಾಗಿಸಿ  ಈ ಪುಸ್ತಕವನ್ನು ಅತ್ಯಂತ ಪ್ರೀತಿ ಮತ್ತು ತನ್ನ ತಂದೆಯ ಮೇಲಿನ ಅಭಿಮಾನದಿಂದ ಹೊರತಂದಿರುವರು. ಬದುಕು ರೂಪಿಸಿದ ಅಪ್ಪನಿಗೆ ಇದು ಮಗಳು ನೀಡಿದ ಬಹುಮೂಲ್ಯ ಉಡುಗೊರೆ. ಸತ್ತನಂತರ ಸತ್ತವರ ಹೆಸರಿನಲ್ಲಿ ಹೊಟ್ಟೆ ತುಂಬಿದವರಿಗೆ ಭೂರಿ ಭೋಜನ ಬಡಿಸುವುದು, ಉಳ್ಳವರಿಗೇ ಕಂತೆ ಗಟ್ಟಲೇ ಹಣ ದಾನ ಮಾಡುವುದು, ಪುತ್ಥಳಿ ಪ್ರತಿಷ್ಠಾನ, ಗುಡಿ ಕಟ್ಟುವುದು  ಇಂಥ ಅರ್ಥವಿಲ್ಲದ ಆಚರಣೆಗಳಿಗಿಂತ ತನ್ನ ತಂದೆಯ ನೆನಪುಗಳನ್ನು ಅತ್ಯಂತ ಜತನದಿಂದ ಅಕ್ಷರಗಳಲ್ಲಿ ಕಾಪಿಟ್ಟು  ಮತ್ತು ಅದನ್ನು ತನ್ನ ನಂತರದ ಪೀಳಿಗೆಗೆ  ದಾಟಿಸುವ ಕೆಲಸ ಮಾಡಿದ ಈ ಹೆಣ್ಣು ಮಗಳು ನಿಜಕ್ಕೂ ಸಮಾಜಕ್ಕೆ ಮಾದರಿ.

          ಡಾ ಹೇಮಾ ಅಪ್ಪನ ಕುರಿತು ಪುಸ್ತಕ ಪ್ರಕಟಿಸುವುದರ ಜೊತೆಗೆ ಇಲ್ಲಿ ಒಂದು ಲೇಖನವನ್ನೂ ಬರೆದಿರುವರು. ಲೇಖನ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವನ್ನು ತುಂಬಾ ಆಪ್ತವಾಗಿ ಕಟ್ಟಿಕೊಡುತ್ತದೆ. ಮಗಳು ಹುಟ್ಟಿದಾಗ ಅಪ್ಪನ ಸಂಭ್ರಮ, ಮಗಳ ಬದುಕಿಗೆ ಬೆನ್ನೆಲುಬಾಗಿ ನಿಂತ ಘಳಿಗೆಗಳು, ಮಗಳನ್ನು ಅತ್ಯಂತ ಜತನದಿಂದ ಸಾಕಿ ಬೆಳೆಸಿದ್ದು, ಮಗಳ ಯಶಸ್ಸನ್ನು ಕಂಡು ಆನಂದಿಸಿದ್ದು, ಮದುವೆಯ ವಯಸ್ಸಿಗೆ ಬೆಳೆದು ನಿಂತಾಗ ಮಗಳ ಮನದ ಭಾವನೆಗಳಿಗೆ ಸ್ಪಂದಿಸಿದ್ದು ನಿಜಕ್ಕೂ ಲೇಖನದ ಓದು ಹೃದಯವನ್ನು ತಟ್ಟುತ್ತದೆ. ಅಪ್ಪನ ಬಗ್ಗೆ ಬರೆಯುವಾಗ ಯಾವ ಭಾವಾವೇಶ ಇಲ್ಲವೇ ಅತಿಶಯೋಕ್ತಿಗಳಿಗೆ ಮನಸ್ಸನ್ನು ಒಪ್ಪಿಸದೆ ತೀರ ಸರಳವಾಗಿ ಅಪ್ಪನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದು ಇಲ್ಲಿ ಮೆಚ್ಚುಗೆಯಾಗುವ ಸಂಗತಿಗಳಲ್ಲೊಂದು. ಇದೇ ಮಾತು ಇತರ ಲೇಖನಗಳ ಕುರಿತು ಹೇಳಿದರೆ ಅದು ತಪ್ಪಾಗುತ್ತದೆ. ಕೆಲವು ಬಂಧುಗಳು ರುದ್ರಪ್ಪನವರ ಬಗ್ಗೆ ಬರೆಯುವಾಗ ಒಂದಿಷ್ಟು ಭಾವಾವೇಶಕ್ಕೆ ಒಳಗಾದರೆನೋ ಎನ್ನುವ  ಅನುಮಾನ ವಿಮರ್ಶಾತ್ಮಕ ಓದುಗನ ಅರಿವಿಗೆ ಬರದೆ ಹೋಗುವುದಿಲ್ಲ.

      ರುದ್ರಪ್ಪನವರ ಸಂಸ್ಮರಣ ಗ್ರಂಥವನ್ನು ಓದುತ್ತಿರುವ ಘಳಿಗೆ ನಾನು ಮೆಚ್ಚಿದ ಇನ್ನೊಂದು ಸಂಗತಿ ಅದು ಇಡೀ ಪುಸ್ತಕ ಕೇವಲ ರುದ್ರಪ್ಪನವರನ್ನು ಕೇಂದ್ರೀಕೃತವಾಗಿಟ್ಟುಕೊಳ್ಳದೆ ಅಲ್ಲಿ ರುದ್ರಪ್ರಭೆಯ ಜೊತೆಗೆ ಸಾಹಿತ್ಯ ಪ್ರಭೆ ಮತ್ತು ತತ್ವ ಪ್ರಭೆ ಎನ್ನುವ ಇನ್ನೆರಡು ಭಾಗಗಳಿವೆ. ಸಾಹಿತ್ಯ ಪ್ರಭೆಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಲೇಖನಗಳಿದ್ದು ರಾಷ್ಟ್ರಕವಿ ಕುವೆಂಪು ಅವರ ಪ್ರಕಟಿತ ಲೇಖನವನ್ನು ಇಲ್ಲಿ ಬಳಸಿಕೊಂಡಿದ್ದು ಗಮನಾರ್ಹ ಸಂಗತಿ. ಇದೇ ಭಾಗದಲ್ಲಿರುವ ಭಾರತಿಯವರ 'ಅಪ್ಪ ಎನ್ನುವ ಎರಡನೇ ಅಮ್ಮ' ಲೇಖನ ತನ್ನ ಲವಲವಿಕೆ ಮತ್ತು ಭಾವತೀವ್ರತೆಯಿಂದ ತೀರ ಆಪ್ತವಾಗುತ್ತದೆ. ಇಲ್ಲಿ ಹೇಮಾ ಮತ್ತು ರುದ್ರಪ್ಪನವರ ಬಾಂಧವ್ಯ ಮತ್ತೊಮ್ಮೆ ನೆನಪಾಗುತ್ತದೆ. ತತ್ವ ಪ್ರಭೆ ಭಾಗದಲ್ಲಿ  ಶರಣರ, ದಾಸರ, ಅನುಭಾವಿಗಳ ಕೀರ್ತನೆ ಮತ್ತು ವಚನಗಳಿವೆ.

      ರುದ್ರಪ್ಪನವರ ಬದುಕಿನ ಜೊತೆಗೆ ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಮಜಲುಗಳನ್ನು ಮೆಲುಕು ಹಾಕಲು ಓದಿನ  ಅವಕಾಶ ಮಾಡಿಕೊಡುವ ಈ ಸಂಸ್ಮರಣ ಗ್ರಂಥ ನಿಜಕ್ಕೂ ನಾನು ಓದಿದ ಉತ್ತಮ ಪುಸ್ತಕಗಳಲ್ಲೊಂದು. ಜೊತೆಗೆ ಇಂಥದ್ದೊಂದು ಸಾಂಸ್ಕೃತಿಕ ಮತ್ತು ಸೃಜನಶೀಲ ಕೆಲಸಕ್ಕೆ ರುದ್ರಪ್ಪನವರ ಪುತ್ರಿ ಹೇಮಾ ಅವರು ಕೈಹಾಕಿದ್ದು ಶ್ಲಾಘನೀಯ. ಇಂಥ ಸಾಂಸ್ಕೃತಿಕ ಚಟುವಟಿಕೆಗಳನ್ನು ಕನ್ನಡ ಭಾಷೆಯಲ್ಲಿ ನಾವುಗಳು ಇನ್ನಷ್ಟು ನೋಡುವಂತಾಗಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment