Saturday, September 1, 2018

ಜೀವಕ್ಕೊಂದಾಸರೆ (ಕಥೆ)

           ‘ನಾಲ್ಕು ದಿನ ರಜೆಹಾಕಿ ಬೇಗ ಬಂದ್ಬಿಡು ರಾಘವ ಮನೆಯಲ್ಲಿ ಅಪ್ಪನಿಗೆ ಬಹಳ ಸಿರಿಯಸ್. ಬದುಕಿನ ಕೊನೆ ಘಳಿಗೆಯಲ್ಲಿರುವ ಅಪ್ಪನೊಂದಿಗೆ ಒಂದೆರಡು ಮಾತನಾಡಿದ ಸಮಾಧಾನನಾದ್ರೂ ಸಿಕ್ಕುತ್ತೆ’ ಅಣ್ಣ ಫೋನ್  ಮಾಡಿ ವಿಷಯ ತಿಳಿಸಿದಾಗ ಅವನ ಧ್ವನಿಯಲ್ಲಿನ ಆತಂಕ ಗುರುತಿಸಿದೆ. ಮಕ್ಕಳಿಗೆ ಪರೀಕ್ಷೆ ಇದ್ದುದ್ದರಿಂದ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಒಬ್ಬನೇ ಊರಿಗೆ ಹೊರಡುವುದೆಂದು ನಿರ್ಧರಿಸಿದೆ. ಕಾಲೇಜಿನಲ್ಲಿ ಪ್ರಿನ್ಸಿಪಾಲರಿಗೆ ಕಾರಣ ವಿವರಿಸಿ ರಜೆ ಮಂಜೂರು ಮಾಡಿಸಿಕೊಳ್ಳಲು ಹೆಚ್ಚಿನ ತೊಂದರೆಯಾಗಲಿಲ್ಲ. ನಾನಿರುವ ನಗರದಿಂದ ಊರಿಗೆ ಏಳೆಂಟು ತಾಸುಗಳ ಪ್ರಯಾಣ. ಅಪ್ಪನಿಗೆ ಸಿರಿಯಸ್ ಎಂದು ಅಣ್ಣ ಹೇಳಿದ್ದರಿಂದ ತಡ ಮಾಡುವಂತಿರಲಿಲ್ಲ. ಹೇಗೂ ರಾತ್ರಿ ಬಸ್ಸಿದೆ ರಾತ್ರಿ ವೇಳೆಯೆ ಹೊರಡುವದೆಂದು ನಿಶ್ಚಯಿಸಿದೆ. ಹೆಂಡತಿಗೆ ಜಾಗ್ರತೆಯೆಂದು ಹೇಳಿ ಮಕ್ಕಳ ಪ್ರಶ್ನೆಗೆ ಊರಲ್ಲಿ ಅಜ್ಜನಿಗೆ ಹುಷಾರಿಲ್ಲವೆಂದು ಉತ್ತರಿಸಿ ಆಟೋ ಹಿಡಿದು ಬಸ್‍ಸ್ಟ್ಯಾಂಡ್ ತಲುಪಿದಾಗ ಗಡಿಯಾರದ ಮುಳ್ಳು ಹತ್ತು ಗಂಟೆ ತೋರಿಸುತ್ತಿತ್ತು. ಊರಿಗೆ ಹೋಗುವ ಬಸ್ ಪ್ಲಾಟ್‍ಫಾರ್ಮ್‍ನಲ್ಲಿ ಆಗಲೇ ಬಂದು ನಿಂತಿತ್ತು. ವಾರದ ಮಧ್ಯದ ದಿನವಾದ್ದರಿಂದ ಬಸ್‍ನಲ್ಲಿ ಅಷ್ಟೊಂದು ಜನಜಂಗುಳಿ ಇರಲಿಲ್ಲ. ಬಸ್ ಹತ್ತಿ ಪರಿಚಿತ ಮುಖಗಳಿಗಾಗಿ ಹುಡುಕಾಡಿದೆ ಒಬ್ಬರೂ ಪರಿಚಿತರಂತೆ ಕಾಣಲಿಲ್ಲ. ಖಾಲಿಯಿದ್ದ ಡ್ರೈವರ್ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತೆ. ಬಸ್ ಊರು ದಾಟಿ ಹೊರವಲಯ ಪ್ರವೇಶಿಸಿದಾಗ ತೆರೆದ ಕಿಟಕಿಯಿಂದ ನುಗ್ಗಿ ಬಂದ ತಣ್ಣನೆಯ ಗಾಳಿ ಇಡೀ ದಿನದ ಆತಂಕವನ್ನು ಅರೆಕ್ಷಣದ ಮಟ್ಟಿಗಾದರೂ ದೂರವಾಗಿಸಿ ಮನಸ್ಸಿಗೆ ಆಹ್ಲಾದ ನೀಡಿತು. ಕಂಡಕ್ಟರ್ ಪ್ರಯಾಣಿಕರಿಗೆ ಟಿಕೇಟ್ ಕೊಡುವ ತನ್ನ ಕೆಲಸ ಪೂರ್ಣಗೊಳಿಸಿ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತು ದೀಪ ಆರಿಸುವಂತೆ ಡ್ರೈವರ್‍ಗೆ ಸೂಚಿಸಿದ. ಬಸ್‍ನ ಒಳಗಡೆ ಪೂರ್ಣ ಕತ್ತಲಾವರಿಸಿ ಪ್ರಯಾಣಿಕರು ಕಪ್ಪು ಆಕೃತಿಗಳಂತೆ ಗೋಚರಿಸಲಾರಂಭಿಸಿದರು. ಅದಾಗಲೇ ಕೆಲವರು ನಿದ್ದೆಗೆ ಜಾರಿದ್ದರೆ ಹದಿಹರೆಯದ ಒಂದೆರಡು ಹುಡುಗರು ಇಯರ್ ಫೋನ್  ಕಿವಿಗೆ ಸಿಕ್ಕಿಸಿಕೊಂಡು ಹಾಡು ಕೇಳುವುದರಲ್ಲಿ ತಲ್ಲಿನರಾಗಿದ್ದರು. ಕಿಟಕಿಯ ಹೊರಗೆ ದೃಷ್ಟಿ ಹಾಯಿಸಿದವನಿಗೆ ಕಪ್ಪು ಆಕೃತಿಗಳಂತೆ ಕಾಣುವ ಮರಗಳು ವೇಗವಾಗಿ ಹಿಂದೆ ಹಿಂದೆ ಚಲಿಸುತ್ತಿರುವಂತೆ ಭಾಸವಾಯಿತು. ಗಾಢವಾದ ಕತ್ತಲೆ ಸೃಷ್ಟಿಸಿದ ಆ ನಿಶಬ್ದ ವಾತಾವರಣದಲ್ಲಿ ನನ್ನ ಮನಸ್ಸು ಕೂಡ ಹಿಂದಕ್ಕೆ ಚಲಿಸತೊಡಗಿತು. 

ಅಮ್ಮ ಸಾಯುವಾಗ ಅಪ್ಪನಿಗೆ ಇನ್ನೂ ನಲವತ್ತರ ಹರೆಯ. ಸಾಕಷ್ಟು ಆದಾಯ ತರುವ ಪಿತ್ರಾರ್ಜಿತ ಕೃಷಿ ಭೂಮಿಯ ಕಾರಣ ಬದುಕಿಗೆ ಯಾವ ಕೊರತೆಯೂ ಇರಲಿಲ್ಲ. ಅಣ್ಣ ಹುಟ್ಟಿದ ಐದು ವರ್ಷಕ್ಕೆ ನಾನು ಹುಟ್ಟಿದ್ದು. ಊರು ತೀರ ಕುಗ್ರಾಮವಾಗಿದ್ದ ಕಾರಣ ನಾನು ಮತ್ತು ಅಣ್ಣ ಪಟ್ಟಣದಲ್ಲಿದ್ದ ಸೋದರ ಮಾವನ ಮನೆಯಲ್ಲಿದ್ದು ಶಾಲೆಗೆ ಹೋಗುತ್ತಿದ್ದೇವು. ಆರ್ಥಿಕವಾಗಿ ಸ್ಥಿತಿವಂತನಾಗಿದ್ದ ಅಪ್ಪನಿಗೆ ಊರಲ್ಲಿ ತುಂಬ ಗೌರವವಿತ್ತು. ರಜೆಯ ದಿನಗಳಲ್ಲಿ ಊರಿಗೆ ಬರುತ್ತಿದ್ದ ನನ್ನನ್ನು ಮತ್ತು ಅಣ್ಣನನ್ನು ಕೂಡ ಊರ ಜನ ಗೌರವದಿಂದಲೆ ಕಾಣುತ್ತಿದ್ದರು. ಅಪ್ಪನಿಗೆ ಅಮ್ಮನ ಅನಾರೋಗ್ಯವೇ ತುಂಬ ಆತಂಕಕ್ಕೆ ಕಾರಣವಾಗಿತ್ತು. ಅಮ್ಮನ ಅನಾರೋಗ್ಯ ದಿನದಿಂದ ದಿನಕ್ಕೆ ಅಪ್ಪನನ್ನು ಮಾನಸಿಕವಾಗಿ ಕುಗ್ಗಿಸುತ್ತಿತ್ತು. ಎರಡನೆ ಹೆರಿಗೆಯ ಸಂದರ್ಭ ಹದಗೆಟ್ಟ ಅಮ್ಮನ ಆರೋಗ್ಯ ನಂತರದ ದಿನಗಳಲ್ಲಿ ಬಿಗಡಾಯಿಸುತ್ತಲೇ ಹೋಯಿತು. ಹೀಗಾಗಿ ಅಮ್ಮನಿಗೆ ಮನೆಗೆಲಸ ಮಾಡುವುದಿರಲಿ ಸಣ್ಣ ಪುಟ್ಟ ಕೆಲಸಗಳಿಂದಲೂ ಆಯಾಸವಾಗತೊಡಗಿತು. ಇಂಥ ಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಆಸರೆಯಾಗಿ ಬಂದವಳು ನೆರಮನೆಯ ಫಾತಿಮಾ. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಪುಟ್ಟ ಹೆಣ್ಣುಮಗುವಿನೊಂದಿಗೆ ತವರುಮನೆ ಸೇರಿದ ಫಾತಿಮಾ ಅಮ್ಮನಿಗೆ ಅಂತರಂಗದ ಆಪ್ತ ಗೆಳತಿಯಾಗಿ ತುಂಬ ಹತ್ತಿರವಾದಳು. ನಾನು ಅವಳನ್ನು ಪಾತಿ ಎಂದೇ ಕರೆಯುತ್ತಿದ್ದದ್ದು. ಹೆಣ್ಣುಮಕ್ಕಳಿಲ್ಲದ ಅಮ್ಮನಿಗೆ ಒಂದರ್ಥದಲ್ಲಿ ಫಾತಿಮಾಳ ಮಗಳು ಚಾಂದಬೀ ಚಂದಾಳಾಗಿ ಮಗಳ ಸ್ಥಾನ ತುಂಬಿದಳು. ಈ ಚಾಂದಬೀ ನೋಡಲು ಬೆಳ್ಳಗೆ ದುಂಡು ದುಂಡಾಗಿದ್ದು ನಮ್ಮೆಲ್ಲರ ಕಣ್ಮಣಿಯಾಗಿ ಬೆಳೆಯತೊಡಗಿದಳು. ಮನೆಯಲ್ಲಿ ಅಡುಗೆ ಮಾಡುವುದರಿಂದ ಕಸ ಮುಸುರೆ ಹೀಗೆ ಪ್ರತಿಯೊಂದು ಕೆಲಸದಲ್ಲಿ ಫಾತಿಮಾ ಅಮ್ಮನಿಗೆ ನೆರವಾಗುತ್ತ ಅವರಿಬ್ಬರ ನಡುವೆ ಅಕ್ಕ ತಂಗಿಯರ ಅನ್ಯೋನ್ಯತೆಯ ಭಾವ ದಿನಕಳೆದಂತೆ ಗಟ್ಟಿಯಾಗತೊಡಗಿತು. ನಾವು ಯಾವತ್ತೂ ಫಾತಿಮಾಳನ್ನಾಗಲಿ ಚಾಂದಬೀಯನ್ನಾಗಲಿ ಅನ್ಯಧರ್ಮಿಯರು, ಅನ್ಯ ಜಾತಿಯವರು ಎನ್ನುವ ಭಾವನೆಯಿಂದ ನೋಡಲೇ ಇಲ್ಲ. ರಜಾದಿನಗಳಲ್ಲಿ ಊರಿಗೆ ಹೋಗುತ್ತಿದ್ದ ನನ್ನ ಮತ್ತು ಅಣ್ಣನ ಆರೈಕೆಯಲ್ಲಿ ಫಾತಿಮಾ ಕೂಡ ತನಗಿಲ್ಲದ ಗಂಡು ಸಂತಾನದ ಕೊರಗನ್ನು ಮರೆಯುತ್ತಿದ್ದಳು.

ನಮಗೆ ಅರಿವಿಲ್ಲದಂತೆ ಬದುಕು ಅನೇಕ ಆಕಸ್ಮಿಕಗಳಿಗೆ ತನ್ನನ್ನು ತೆರೆದುಕೊಳ್ಳುತ್ತದೆ. ಬದುಕಿನಲ್ಲಿ ಎಲ್ಲವೂ ನಾವು ಆಶಿಸಿದಂತೆ ನಡೆದರೆ ಮನುಷ್ಯ ತನ್ನ ಮನುಷ್ಯತ್ವವನ್ನೇ ಕಳೆದುಕೊಳ್ಳಬಹುದೇನೋ ಎಂದು ಎಲ್ಲೋ ಓದಿದ ನೆನಪು. ಅಮ್ಮನ ಅನಾರೋಗ್ಯ ಸಹಜವೆಂಬಂತೆ ತಿಳಿದಿದ್ದ ನಮಗೆ ಸಾವು ಅವಳನ್ನು ಇಷ್ಟು ಬೇಗ ಕರೆದೊಯ್ಯುತ್ತದೆನ್ನುವ ಕಲ್ಪನೆಯೇ ಇರಲಿಲ್ಲ. ದೀಪಾವಳಿ ಹಬ್ಬಕ್ಕೆ ಮಕ್ಕಳು ಮನೆಗೆ ಬಂದ ಸಂಭ್ರಮದಲ್ಲಿ ಒಂದಿಷ್ಟು ಹೆಚ್ಚೆ ಆಯಾಸವಾಗುವಂತೆ ಮನೆಗೆಲಸದಲ್ಲಿ ತೊಡಗಿಸಿಕೊಂಡ ಅಮ್ಮ ಹಬ್ಬದ ಮಾರನೆದಿನ ಜ್ವರದಿಂದ ಹಾಸಿಗೆ ಹಿಡಿದು ಪಟ್ಟಣದ ಆಸ್ಪತ್ರೆ ಸೇರಿದವಳು ನಾಲ್ಕು ದಿನಗಳಲ್ಲಿ ಮನೆಗೆ ಮರಳಿದ್ದು ಹೆಣವಾಗಿಯೇ. ಅಮ್ಮನ ಅನುಪಸ್ಥಿತಿಯಲ್ಲಿ ಬದುಕುವುದು ನಮಗೆಲ್ಲ ಅನಿವಾರ್ಯವಾಯಿತು. ಆ ದುರ್ದರ ಘಳಿಗೆ ನಮ್ಮ ಬದುಕಿಗೆ ಆಸರೆಯಾಗಿ ಬಂದವಳು ಇದೇ ಫಾತಿಮಾ. ಅಣ್ಣ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಊರಿಗೆ ಮರಳಿದವನು ಅಪ್ಪನ ಜವಾಬ್ದಾರಿಯನ್ನು ಹಂಚಿಕೊಂಡ. ನಾನು ಮಾವನ ಮನೆಯಲ್ಲಿದ್ದುಕೊಂಡು ಓದನ್ನು ಮುಂದುವರೆಸಿದೆ. ರಜೆಯ ದಿನಗಳಲ್ಲಿ ಮನೆಗೆ ಹೋದಾಗ ಅಮ್ಮನ ನೆನಪು ಬಂದು ಅಳು ಒತ್ತರಿಸಿ ಬರುತ್ತಿದ್ದ ನನ್ನನ್ನು ಪಾತಿ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡುತ್ತಿದ್ದಳು. ಚಂದಾಳೊಂದಿಗೆ ನಾನು ಮತ್ತು ಅಣ್ಣ ಪಾತಿಯ ಮಕ್ಕಳಾಗಿ ಬೆಳೆಯತೊಡಗಿದೇವು. ಮನೆಯ ಹೊರಗಿನ ಜವಾಬ್ದಾರಿ ಅಪ್ಪನದಾದರೆ ಮನೆಯ ಒಳಗಿನ ಕೆಲಸದ ಎಲ್ಲ ಜವಾಬ್ದಾರಿ ಪಾತಿಯದಾಯಿತು. ಮನೆ ಕಸಗೂಡಿಸುವುದರಿಂದ ಅಡುಗೆಯವರೆಗೆ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡ ಅವಳು ನಮ್ಮ ಮನೆಯ ಸದಸ್ಯಳೇ ಆದಳು. ಊರಿನ ಜನ ಮತ್ತು ನೆಂಟರಿಷ್ಟರು ತಮ್ಮ ಎಲುಬಿಲ್ಲದ ನಾಲಗೆಯಿಂದ ಕೆಲವು ದಿನ ನಮ್ಮ ಮನೆಯ ಕುರಿತು ಕೊಳಕು ಮಾತುಗಳನ್ನಾಡಿ ಸುಮ್ಮನಾದರು. ಹೆಣ್ಣು ದಿಕ್ಕಲ್ಲದ ಮನೆಗೆ ಆಸರೆಯಾಗಿ ನನಗೆ ಮತ್ತು ಅಣ್ಣನಿಗೆ ತಾಯಿಯ ಪ್ರೀತಿಯನ್ನೆಲ್ಲ ಧಾರೆ ಎರೆದಳು. ಪಾತಿಯ ಮಾತೃತ್ವದ ಆರೈಕೆಯಲ್ಲಿ ಅಮ್ಮನ ನೆನಪು ನನ್ನ ನೆನಪಿನಂಗಳದಿಂದ ಕ್ರಮೇಣ ಮಸುಕಾಗತೊಡಗಿತು.

ಅಮ್ಮನ ಸಾವಿನ ನಾಲ್ಕು ವರ್ಷಗಳ ನಂತರ ನಮ್ಮ ಬದುಕು ಅಂಥದ್ದೊಂದು ದುರ್ದರ ಘಟನೆಗೆ ಮುಖಾಮುಖಿಯಾಗಿ ನಿಲ್ಲುವ ಸಂದರ್ಭ ಎದುರಾಗುತ್ತದೆಂದು ನಾನು ಊಹಿಸಿರಲಿಲ್ಲ. ಕಾಲೇಜು ಸೇರಿದಾಗ ಮಾವನ ಮನೆಯಲ್ಲಿ ಅಭ್ಯಾಸಕ್ಕೆ ತೊಂದರೆ ಎಂದು ಹೊರಗೆ ಗೆಳೆಯರೊಂದಿಗೆ ಬಾಡಿಗೆ ರೂಮಿನಲ್ಲಿದ್ದ ದಿನಗಳವು. ದಿನನಿತ್ಯ ಊರಿನಿಂದ ಪಾತಿ ಅಡುಗೆ ಮಾಡಿ ನನಗೆ ಎರಡು ಹೊತ್ತಿಗಾಗುವಷ್ಟು ಊಟ ಕಳಿಸುತ್ತಿದ್ದಳು. ಬದುಕು ಯಾವ ಆತಂಕಗಳಿಲ್ಲದೆ ನಿರಾತಂಕವಾಗಿ ಸಾಗುತ್ತಿದ್ದ ಆ ದಿನಗಳಲ್ಲಿ ಊಹಿಸದ ರೀತಿಯಲ್ಲಿ ಬದುಕು ತಿರುವು ಪಡೆದುಕೊಂಡಿತು. ಅಂದು ಮಧ್ಯಾಹ್ನ ಕಾಲೇಜಿಗೇ ಬಂದ ಸೋದರ ಮಾವ ಈಗಿಂದೀಗಲೇ ಊರಿಗೆ ಹೋಗುವಂತೆ ಸೂಚಿಸಿದ್ದು ಆ ಸಂದರ್ಭ ಮನಸ್ಸಿನಲ್ಲಿ ಅನೇಕ ಕೆಟ್ಟ ಯೋಚನೆಗಳು ಸುಳಿದು ಮನಸ್ಸು ಆತಂಕಕ್ಕೊಳಗಾಯಿತು. ಅಪ್ಪನ ಆರೋಗ್ಯ ಹೇಗಿದೆ ಅನುಮಾನಿಸುತ್ತಲೇ ಪ್ರಶ್ನಿಸಿದವನನ್ನು ಮಾವ ‘ಊರಿಗೆ ಹೋಗು ಎಲ್ಲ ವಿಷಯ ಗೊತ್ತಾಗುತ್ತೆ’ ಎಂದಷ್ಟೆ ಹೇಳಿ ನನ್ನನ್ನು ಬಸ್‍ಸ್ಟ್ಯಾಂಡ್‍ವರೆಗೆ ಕರೆದುಕೊಂಡು ಬಂದು ಬಸ್ ಹತ್ತಿಸಿದ. ಆತಂಕ ತುಂಬಿದ ಮನಸ್ಸಿನೊಂದಿಗೆ ಮನೆಯ ಒಳಗೆ ಕಾಲಿಟ್ಟವನಿಗೆ ಪಡಸಾಲೆಯಲ್ಲಿ ಕಂಬಕ್ಕೊರಗಿ ಕುಳಿತಿದ್ದ ಅಪ್ಪನನ್ನು ನೋಡುತ್ತಲೇ ನಾನು ಊಹಿಸಿದ ಘಟನೆ ನಡೆದಿಲ್ಲವೆಂದು ಮನಸ್ಸಿಗೆ ಸಮಾಧಾನವಾಯಿತು. ಅಪ್ಪ ತೀರ ಇಳಿದು ಹೋಗಿರುವಂತೆ ಭಾಸವಾಯಿತು. ಒಂದು ಘಳಿಗೆ ನನ್ನನ್ನು ತಲೆ ಎತ್ತಿ ನೋಡಿದ ಅಪ್ಪ ಮತ್ತೆ ತಲೆತಗ್ಗಿಸಿ ಯಾವುದೋ ಗಂಭೀರ ಚಿಂತೆಯಲ್ಲಿ ಮುಳುಗಿದರು. ‘ಅಪ್ಪ ಯಾಕೆ ನನ್ನ ಬರಹೇಳಿದ್ದು’ ನನ್ನ ಪ್ರಶ್ನೆಗೆ ಮೌನವೇ ಅಪ್ಪನ ಪ್ರತಿಕ್ರಿಯೆಯಾಗಿತ್ತು. ಅಡುಗೆಮನೆಯಲ್ಲಿ ಸಪ್ಪಳವಾಗಿ ಪಾತಿ ಇರಬಹುದೆಂದು ಹೋಗಿ ನೋಡಿದವನಿಗೆ ಅಣ್ಣ ಬೆಂದ ಅನ್ನದಿಂದ ಗಂಜಿ ಬಸಿಯುತ್ತಿರುವುದು ಕಾಣಿಸಿ ಅಚ್ಚರಿಯಾಯಿತು. ‘ಅಣ್ಣ ಪಾತಿ ಎಲ್ಲಿ ಕಾಣಿಸ್ತಿಲ್ಲ’ ಎಂದ ನನ್ನ ಮಾತಿಗೆ ‘ರಾಘವ ಮೊದಲು ಕಾಲು ತೊಳೆದು ಬಾ ಊಟ ಮಾಡುವಿಯಂತೆ’ ಎಂದ ಅಣ್ಣನ ಮಾತು ಅದೇಕೋ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಹುಟ್ಟಿಸಿತು. ಕೈ ಕಾಲು ತೊಳೆದು ಬಂದವನು ಬಡಿಸಿಟ್ಟ ಒಂದೇ ತಟ್ಟೆ ನೋಡಿ ಅಚ್ಚರಿಯಿಂದ ‘ಅಪ್ಪ ಮತ್ತು ನೀನು’ ಎಂದವನಿಗೆ ‘ನಂದಾಗಿದೆ ಅಪ್ಪನಿಗೆ ಹಸಿವಿಲ್ವಂತೆ’ ಚುಟುಕಾಗಿ ಉತ್ತರಿಸಿದ ಅಣ್ಣ ನನ್ನ ಪ್ರತಿಕ್ರಿಯೆಗೂ ಕಾಯದೆ ಅಡುಗೆಮನೆಯಿಂದ ಹೊರನಡೆದ. ಊಟಕ್ಕೆ ಕುಳಿತವನಿಗೆ ಅನ್ನ ಗಂಟಲಲ್ಲಿಳಿಯಲಿಲ್ಲ. ಅದೇಕೋ ಅಂದು ಅಮ್ಮನ ನೆನಪು ಒತ್ತಿ ಬಂದು ಹೊಟ್ಟೆಯಲ್ಲಿ ಸಂಕಟವಾಗಿ ಊಟವನ್ನು ಅರ್ಧಕ್ಕೆ ಬಿಟ್ಟು ಕೈತೊಳೆದುಕೊಂಡು ಹೊರಬಂದೆ.

ಅಣ್ಣ ನನ್ನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಎಲ್ಲವನ್ನು ವಿವರಿಸಿದಾಗಲೇ ನಡೆದ ಘಟನೆಯ ಅರಿವು ನನಗಾಯಿತು. ಅಪ್ಪ ಪಾತಿಯನ್ನು ತಮ್ಮ ಹೆಂಡತಿಯಾಗಿ ಸ್ವೀಕರಿಸಿ ಮನೆಯಲ್ಲೇ ಇಟ್ಟುಕೊಳ್ಳಲು ನಿರ್ಧರಿಸಿದ ಆ ಸಂಗತಿಯನ್ನು ಅರಗಿಸಿಕೊಳ್ಳಲು ನನಗೆ ಕೆಲವು ಕ್ಷಣಗಳೇ ಬೇಕಾದವು. ‘ಊರಿನವರೆಲ್ಲ ಈ ವಿಷಯವಾಗಿ ಮೊದಲೆ ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರಂತೆ ಆದರೆ ನಾವಿನ್ನೂ ಚಿಕ್ಕವರಾಗಿದ್ದರಿಂದ ನಮಗೆ ಇದು ಹೊಳೆದಿರಲಿಲ್ಲ’ ಎಂದ ಅಣ್ಣನ ಮುಖ ಆತಂಕದಿಂದ ಬಾಡಿ ಹೋಗಿತ್ತು. ಅವಳ ಧರ್ಮದವರೆಲ್ಲ ಕೂಡಿ ಶಿಕ್ಷೆ ವಿಧಿಸಲು ಮುಂದಾಗಿದ್ದರಿಂದ ಪಾತಿ ಕಳೆದ ಎಂಟು ದಿನಗಳಿಂದ ನಮ್ಮ ಮನೆಗೆ ಬಂದಿರಲಿಲ್ಲ. ಪಾತಿ ನಮ್ಮ ಮನೆಗೆ ಬರುವುದನ್ನು ಸಹಿಸದೆ ಅಸಹ್ಯದಿಂದ ನೋಡುತ್ತಿದ್ದ ನೆಂಟರಿಷ್ಟರು ಮತ್ತು ಊರಿನ ಜನ ಅಪ್ಪನ ಈ ನಿರ್ಧಾರದಿಂದ ನಮ್ಮನ್ನು ಇಡೀ ಊರಿನಿಂದ ಬಹಿಷ್ಕರಿಸಲು ಸಂಚು ನಡೆಸುತ್ತಿರುವ ವಿಷಯ ನನ್ನಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ‘ಈ ಘಟನೆ ನಂತರ ಪಾತಿಯನ್ನು ನೀನು ಭೇಟಿಯಾಗಿದ್ದಿಯಾ’ ನನ್ನ ಪ್ರಶ್ನೆಯ ಹಿಂದೆ ಪಾತಿಯೂ ಅಪ್ಪನ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರಬಹುದೇ ಎನ್ನುವುದನ್ನು ತಿಳಿದುಕೊಳ್ಳುವ ಉದ್ದೇಶವಿತ್ತೆಂದು ಕಾಣುತ್ತದೆ. ಇದುವರೆಗೂ ಅವಳ ಕುರಿತು ಮನೆ ಮಾಡಿದ್ದ ಅಂತ:ಕರಣದ ಜಾಗದಲ್ಲಿ ಈಗ ದ್ವೇಷದ ಸಣ್ಣ ಎಳೆಯೊಂದು ಮೂಡಲಾರಂಭಿಸಿ ನಾನು ವಿಚಲಿತಗೊಂಡೆ. ‘ಇಲ್ಲ ಅವಳನ್ನು ಭೇಟಿಯಾಗಲು ಅದೇಕೋ ಮನಸಾಗುತ್ತಿಲ್ಲ’ ಎಂದ ಅಣ್ಣನ ಮಾತು ಅಪ್ಪನ ಈ ನಿರ್ಧಾರದಲ್ಲಿ ಪಾತಿಯೂ ಸಮಪಾಲುದಾರಳು ಎನ್ನುವ ನನ್ನ ಊಹೆಯನ್ನು ದೃಢಪಡಿಸಿತು. ಅಪ್ಪ ಮತ್ತು ಪಾತಿ ಜೊತೆಯಾಗಿ ಅಮ್ಮನಿಗೆ ಮೋಸ ಮಾಡಿದರಲ್ಲ ಎನ್ನುವ ವಿಚಾರವೇ ಅವರಿಬ್ಬರ ಬಗೆಗೆ ಅಸಹ್ಯಕ್ಕೆ ಕಾರಣವಾಗಿ ಆ ಕ್ಷಣವೇ ಮನೆ ಬಿಟ್ಟು ಹೊರಡಲು ನಿರ್ಧರಿಸಿದೆ.

ತೋಟದಿಂದ ಮನೆಗೆ ಬಂದವನೇ ತೆಗೆದುಕೊಂಡು ಬಂದಿದ್ದ ಚೀಲವನ್ನು ಹೆಗಲಿಗೇರಿಸಿಕೊಂಡು ಅಣ್ಣನಿಗೆ ಹೇಳಿ ಹೊರಟು ನಿಂತಾಗ ನನ್ನನ್ನು ನೋಡಿದ ಅಪ್ಪನ ಮುಖದಲ್ಲಿ ಅಂದು ದೈನ್ಯತೆ ಮನೆ ಮಾಡಿತ್ತೇನೋ ಎಂದು ಈಗ ಅನಿಸುತ್ತದೆ. ಬಂಧುಗಳನ್ನು ಮತ್ತು ಇಡೀ ಊರನ್ನೇ ಎದುರು ಹಾಕಿಕೊಳ್ಳಲು ಸಿದ್ಧನಾಗಿದ್ದ ಅಪ್ಪ ಹೆದರಿದ್ದು ತನ್ನ ಮಕ್ಕಳಿಗೆ. ಬದುಕಿನಲ್ಲಿ ನಾವು ನಮ್ಮವರೆಂದು ತಿಳಿದವರಿಂದಲೇ ಅನಾದಾರಕ್ಕೆ ಮತ್ತು ಅಸಹ್ಯಕ್ಕೆ ಒಳಗಾಗುವುದಕ್ಕಿಂತ ಬೇರೆ ಶಿಕ್ಷೆ ಇನ್ನೊಂದಿರಲಾರದೇನೋ. ಅಪ್ಪ ಪಾತಿಯನ್ನು ಮರೆಯಲು ಪ್ರಯತ್ನಿಸಿದ. ಅಣ್ಣನಿಗೆ ಮದುವೆ ಮಾಡಿ ಸೊಸೆಯನ್ನು ಮನೆತುಂಬಿಸಿಕೊಂಡು ಮನೆಯ ಪೂರ್ಣ ಜವಾಬ್ದಾರಿಯನ್ನು ಅವನಿಗೆ ವಹಿಸಿ ತಾನು ದಿನದ ಹೆಚ್ಚಿನ ಸಮಯವನ್ನು ದೇವಸ್ಥಾನಗಳಲ್ಲಿ ಕಳೆಯತೊಡಗಿದ. ಎರಡು ಹೊತ್ತಿನ ಊಟ ಒಂದು ಹೊತ್ತಿಗೆ ಸೀಮಿತವಾಯಿತು. ಪುರಾಣ, ಪ್ರವಚನಗಳನ್ನು ಆಲಿಸತೊಡಗಿದ. ತೋಟ, ಹೊಲ, ನೆಂಟರಿಷ್ಟರು ಎಲ್ಲದರಿಂದ ದೂರವಾಗಿ ಏಕಾಂಗಿಯಂತೆ ಬದುಕಲಾರಂಭಿಸಿದ.  ಪಾತಿ ಕೂಡ ಕ್ರಮೇಣ ನಮ್ಮ ಬದುಕು ಮತ್ತು ನೆನಪುಗಳಿಂದ ದೂರಾದಳು. ಈ ನಡುವೆ ನನ್ನ ಎಂ.ಎ ಓದಿನ ನಂತರ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಕೆಲಸ ದೊರೆತು ಮದುವೆಯಾಗಿ ಬದುಕಿನ ಹೊಸ ಅಧ್ಯಾಯವೊಂದು ತೆರೆದುಕೊಳ್ಳಲಾರಂಭಿಸಿತು. ಅಣ್ಣನಿಗೆ ಮಕ್ಕಳ ಜವಾಬ್ದಾರಿಯೊಂದಿಗೆ ತೋಟದ ಜವಾಬ್ದಾರಿಯೂ ಸೇರಿ ಅವನದೇ ಪ್ರಪಂಚದಲ್ಲಿ ಮುಳುಗಿದರೆ ನಾನು ಪಟ್ಟಣದಲ್ಲಿ ಹೊಸ ಉದ್ಯೋಗ ಹೊಸ ಬದುಕು ಸಾಹಿತ್ಯದ ಗೀಳು ಎಂದು ನನ್ನದೆ ಹೊಸ ಪ್ರಪಂಚವೊಂದರಲ್ಲಿ ಬದುಕಲಾರಂಭಿಸಿದೆ. ನಮ್ಮ ನಮ್ಮ ಬದುಕಿನ ಧಾವಂತದಲ್ಲಿ ಮತ್ತು ಬದುಕನ್ನು ಕಟ್ಟಿಕೊಳ್ಳುವ ಉಮೇದಿಯಲ್ಲಿ ನಮಗೆ ಅಪ್ಪನ ಏಕಾಂಗಿತನದ ಅರಿವಾಗಲೇ ಇಲ್ಲ. ‘ಸರ್ ನೀವು ಇಳಿಯಬೇಕಾದ ಊರು ಬಂತು ನೋಡಿ’ ಕಂಡಕ್ಟರ್ ಭುಜ ಮುಟ್ಟಿ ಎಚ್ಚರಿಸಿದಾಲೇ ನಾನು ಬಸ್ಸಿನಲ್ಲಿರುವುದು ಅರಿವಾಯಿತು. ಹಿಂದಿನದೆಲ್ಲ ನೆನಪಾಗಿ ಕಣ್ಣಂಚು ಒದ್ದೆಯಾಗಿ ಮನಸ್ಸು ಭಾರವಾಯಿತು. ಹೊರಗೆ ಸೂರ್ಯ ತನ್ನ ಕಿರಣಗಳನ್ನು ಚಾಚಿ ಮೂಡಣದ ದಿಕ್ಕನ್ನು ಕೆಂಪಾಗಿಸಿದ್ದ.

ಮನೆಯ ಹೊರಗೆ ನೆರದಿದ್ದ ಜನರನ್ನು ನೋಡಿಯೇ ಮನಸ್ಸು ನಡೆದ ಘಟನೆಯನ್ನು ಊಹಿಸಿತು. ಅಂಗಳದಲ್ಲಿ ಗಿಡಕ್ಕೊರಗಿ ಕುಳಿತ ಅಣ್ಣನ ಮುಖ ದು:ಖದಿಂದ ಸೊರಗಿ ಹೋಗಿತ್ತು. ‘ನಸುಕಿನ ನಾಲ್ಕು ಗಂಟೆಗೆ ಜೀವ ಹೋಯ್ತು. ಕೊನೆ ಘಳಿಗೆಯವರೆಗೂ ಅಪ್ಪ ನಿನ್ನ ದಾರಿ ನೋಡಿದರು’ ಅಣ್ಣನ ಮಾತು ಕೇಳಿ ಹೊಟ್ಟೆಯಲ್ಲಿ ವಿಚಿತ್ರ ಸಂಕಟವಾಗಿ ಗಿಡದ ಬುಡದಲ್ಲಿ ಕುಸಿದು ಕುಳಿತೆ. ಊರಲ್ಲಿ ಅಂದು ಜಾತ್ರೆ ಇರುವುದರಿಂದ ಊರಿನವರೆಲ್ಲ ಬೇಗ ಅಂತ್ಯಕ್ರಿಯೆಗೆ ಅಣಿಗೊಳಿಸುವಂತೆ ಒತ್ತಾಯಿಸಿದರು. ಅದಾಗಲೇ ನೆಂಟರಿಷ್ಟರೆಲ್ಲ ಬಂದಾಗಿತ್ತು. ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಶಾಲಿನಿ ಮತ್ತು ಮಕ್ಕಳು ಧರ್ಮೋದಕ ಬಿಡುವ ದಿನ ಬಂದರಾಯ್ತೆಂದು ಅಣ್ಣ ಸೂಚಿಸಿದ. ಹಿರಿಯ ಮಗನಾಗಿದ್ದರಿಂದ ಅಣ್ಣನೇ ಅಪ್ಪನ ಕರ್ಮ ಮಾಡಲು ಮುಂದಾದ. ಊರ ಹೊರಗಿನ ಮಸಣದಲ್ಲಿ ಅಪ್ಪನ ದೇಹವನ್ನು ಚಿತೆಗೇರಿಸಿದಾಗ ದೂರದ ಮರದ ನೆರಳಲ್ಲಿ ನಿಂತು ನೋಡುತ್ತಿದ್ದ ನನಗೆ ಅಪ್ಪನನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲನಾದೆನೇನೋ ಎನ್ನುವ ಭಾವ ಉದಿಸಿ ದು:ಖ ಉಮ್ಮಳಿಸಿಬಂದು ಬಿಕ್ಕಿದೆ.

ಹತ್ತು ದಿನಗಳ ಸೂತಕ ನಂತರದ ಕ್ರಿಯಾವಿಧಿಗಳೆಂದು ಒಟ್ಟು ಹದಿನೈದು ದಿನಗಳ ರಜೆ ಪಡೆದು ಊರಿಗೆ ಮರಳಿದೆ. ನದಿಯ ದಡದ ದೇವಸ್ಥಾನದಲ್ಲಿ ಅಪ್ಪನ ಮೂರು ದಿನಗಳ ಕ್ರಿಯಾಕರ್ಮಗಳನ್ನು ಶ್ರೀನಿವಾಸಾಚಾರ್ಯರ ನೇತೃತ್ವದಲ್ಲಿ ಅಣ್ಣ ಸಾಂಗವಾಗಿ ನೆರವೇರಿಸಿದ. ಧರ್ಮೋದಕ ಬಿಡುವ ದಿನ ಶಾಲಿನಿ ಮತ್ತು ಮಕ್ಕಳು ನಮ್ಮನ್ನು ಕೂಡಿಕೊಂಡರು. ಒಂದು ಕ್ಷಣವು ತಡವಾಗದಂತೆ ಕಾಗೆ ಪಿಂಡ ಮುಟ್ಟಿದಾಗ ‘ನಿಮ್ಮ ಅಪ್ಪನದು ಸ್ಥಿತಪ್ರಜ್ಞ ಬದುಕು. ಯಾವ ಆಸೆ ಆಕಾಂಕ್ಷೆಗಳಿಲ್ಲದೆ ತನ್ನ ಬದುಕಿನ ಯಾತ್ರೆ ಮುಗಿಸಿದ ಜೀವವದು’ ಆಚಾರ್ಯರು ನುಡಿದಾಗ ಅಪ್ಪ ಅಂಥದ್ದೊಂದು ಬದುಕಿಗೆ ತೆರೆದುಕೊಳ್ಳುವಂಥ ಪರಿಸ್ಥಿತಿಯನ್ನು ರೂಪಿಸಿದ್ದು ನಾವೆ ಅಲ್ಲವೇ ಅನಿಸಿತು. ಹದಿಮೂರನೆ ದಿನ ಉದಕಶಾಂತಿಯಂದು ಊರಿನವರನ್ನು ಮತ್ತು ಬಳಗದವರನ್ನು ಆಹ್ವಾನಿಸಿ ಅಣ್ಣ ಸಿಹಿ ಊಟ ಹಾಕಿಸಿದ. ಇನ್ನು ಎರಡು ದಿನಗಳ ರಜೆ ಇರುವುದರಿಂದ ಶಾಲಿನಿ ಮತ್ತು ಮಕ್ಕಳನ್ನು ಮೊದಲು ಕಳುಹಿಸಿ ನಾಳೆ ಬರುವೆನೆಂದು ಊರಿನಲ್ಲೇ ಉಳಿದುಕೊಂಡೆ. ನನಗೆ ಪಾತಿಯನ್ನು ನೋಡಬೇಕಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ಅವಳನ್ನು ಭೇಟಿಯಾಗಿರಲಿಲ್ಲ. ಅಣ್ಣನಿಗೆ ನನ್ನ ಮನದಿಂಗಿತ ತಿಳಿಸಿದಾಗ ಒಪ್ಪಿಗೆ ನೀಡಿದವನು ‘ರಾಘವ ಹಿಂದೆ ಆದ ಯಾವ ಘಟನೆಯನ್ನು ಅವಳೊಂದಿಗೆ ಮಾತನಾಡ್ಬೇಡ. ಆಕೆಗೂ ವಯಸ್ಸಾಗಿದೆ ಜೊತೆಗೆ ಕೆಲವು ವರ್ಷಗಳಾದರೂ ನಮಗೆ ಅಮ್ಮನ ಪ್ರೀತಿಕೊಟ್ಟ ಜೀವ ಅದು’ ಅಣ್ಣನ ಮಾತಿನಲ್ಲಿದ್ದ ಕಾಳಜಿ ಗುರುತಿಸಿದೆ. ಅತ್ತಿಗೆ ಮಾಡಿಕೊಟ್ಟ ಚಹಾ ಕುಡಿದು ಬೇಗ ಬರುತ್ತೇನೆಂದು ಹೇಳಿ ಪಾತಿ ಮನೆಯ ಕಡೆ ಹೆಜ್ಜೆ ಹಾಕಿದಾಗ ಕಡಿದುಹೋದ ಸಂಬಂಧವನ್ನು ಮತ್ತೆ ಬೆಸೆಯುತ್ತಿರುವ ಭಾವ ಹುಟ್ಟಿ ಮನಸ್ಸು ಆಹ್ಲಾದಗೊಂಡಿತು.

ಪಾತಿ ಈಗ ತನ್ನ ತಾಯಿಯ ಮನೆಯಿಂದ ಬೇರೆಯಾಗಿ ಊರಿನ ಹೊರವಲಯದಲ್ಲಿ ವಿಸ್ತರಿಸುತ್ತಿರುವ ಹೊಸ ಕಾಲೊನಿಯಲ್ಲಿ ಪುಟ್ಟ ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಬಾಗಿಲ ಹತ್ತಿರ ನನ್ನ ಹೆಜ್ಜೆ ಸದ್ದಿಗೆ ಮುಖ ಮೇಲೆತ್ತಿ  ನೋಡಿದ ಪಾತಿ ತಲೆ ಕೂದಲೆಲ್ಲ ಬೆಳ್ಳಗಾಗಿ ವಯಸ್ಸಾದಂತೆ ಕಾಣಿಸಿದಳು. ‘ಅರೆ ರಾಘವ ಬೇಟಾ ಎಷ್ಟೊಂದು ದೊಡ್ಡವನಾಗಿದ್ದಿ ಬಾ ಒಳಗೆ’ ಅದೇ ಎಂದಿನ ಕಕ್ಕುಲಾತಿಯಿಂದ ಮೈದಡವಿ ಮಾತನಾಡಿಸಿದವಳ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ‘ಹೇಗಿದ್ದಿಯಾ ಪಾತಿ’ ಅವಳು ಹಾಸಿದ ಚಾಪೆಯ ಮೇಲೆ ಕೂಡುತ್ತ ಮನೆಯನ್ನೊಮ್ಮೆ ಅವಲೋಕಿಸಿದೆ. ‘ಹುಂ ಹೀಗಿದ್ದೀನಿ ಬೇಟಾ. ನಿನ್ನ ಅಮ್ಮ ಹೋದ್ಳು, ನಿನ್ನ ಅಪ್ಪ ಕಣ್ಮುಚ್ಚಿದರು. ಮಗಳು ಮದುವೆಯಾಗಿ ಗಂಡನ ಮನೆಲಿದ್ದಾಳೆ. ಈಗ ಯಾವ ಜವಾಬ್ದಾರಿನೂ ಇಲ್ಲ. ಈ ಪಾಪಿ ಜೀವ ಅಲ್ಲಾನ ಕರೆಗಾಗಿ ಕಾಯ್ತಿದೆ’ ಮಾತನಾಡಿದವಳ ಧ್ವನಿಯಲ್ಲಿ ನೋವಿತ್ತು. ‘ರಾಘವ ಬೇಟಾ ನಿನ್ನ ಅಮ್ಮ ನನಗೆ ಯಜಮಾನ್ತಿ ಮಾತ್ರ ಆಗಿರಲಿಲ್ಲ. ಒಡ ಹುಟ್ಟಿದ ಅಕ್ಕನಂತಿದ್ದಳು. ತನ್ನ ಹೊಟ್ಟೆಯ ಅದೇಷ್ಟೋ ಸಂಕಟ ನನ್ನೊಂದಿಗೆ ಹಂಚ್ಕೊತಿದ್ದಳು. ಊರಿನವರು ನನ್ನ ಬಗ್ಗೆ ಸಲ್ಲದ ಮಾತನಾಡಿದಾಗ ನನ್ನ ಬೆಂಬಲಕ್ಕೆ ನಿಂತಿದ್ದು ನಿನ್ನ ಅಮ್ಮನೆ’ ಪಾತಿಗೆ ತನ್ನ ಒಡಲ ಭಾರವನ್ನೆಲ್ಲ ಇಳಿಸಿಕೊಳ್ಳುವಂತೆ ಮಾತಿನ ಉಮೇದಿ ಬಂದಿತ್ತು. ‘ನಿನ್ನ ಅಮ್ಮ ಸಾಯುವಾಗ ನಿನ್ನ ಅಪ್ಪನಿಗೆ ಇನ್ನು ಯೌವನವಿತ್ತು. ಹೆಂಡತಿ ಸಾವು ಅವರನ್ನು ಕುಗ್ಗಿಸಿತ್ತು. ಅವರಿಗೂ ಜೊತೆ ಅಂತ ಬೇಕಿತ್ತು ಅನಿಸುತ್ತೆ. ನನ್ನ ಪರಿಸ್ಥಿತಿಯೂ ಅವರಿಗಿಂತ ಬೇರೆಯಾಗಿರಲಿಲ್ಲ. ಒಂಟಿ ಹೆಣ್ಣನ್ನು ಸಮಾಜ ಅನುಭವಿಸುವ ದೃಷ್ಟಿಯಿಂದಲೇ ನೋಡುತ್ತೆ. ಗಂಡು ಮಕ್ಕಳ ಕೊರತೆ ನನಗೆ ನಿಮ್ಮಿಂದ ನೀಗಿತ್ತು. ನಿಮ್ಮ ಅಪ್ಪನಿಗೆ ಜೊತೆಯಾಗಬೇಕು ಅಂತ ಆಸೆ ನನ್ನ ಮನಸ್ಸಿನ ಮೂಲೆಯಲ್ಲೂ ಹೊಂಚಿಹಾಕಿಕೊಂಡು ಕುಳಿತಿತ್ತು ಅನಿಸುತ್ತೆ. ಆದರೆ ನಿಮ್ಮ ಅಪ್ಪ ಸಮಾಜಕ್ಕೆ ಹೆದರಲಿಲ್ಲ. ಅವರು ಹೆದರಿದ್ದು ಮಕ್ಕಳಿಗೆ. ಮಕ್ಕಳ ಕಣ್ಣಲ್ಲಿ ಸಣ್ಣವರಾಗಿ ಬದುಕನ್ನು ಹೀನವಾಗಿ ಬದುಕುವುದು ಅವರಿಗೆ ಬೇಕಿರಲಿಲ್ಲ. ನಿನ್ನ ಅಪ್ಪನ ಬದುಕು ಅದು ಬರೀ ಬದುಕಲ್ಲ ರಾಘವ ಬೇಟಾ ಅದೊಂದು ತಪಸ್ಸು’ ಪಾತಿ ಮಾತು ಮುಗಿಸಿ ಸೆರಗಿನ ಅಂಚಿನಿಂದ ಕಣ್ಣೊರಿಸಿಕೊಂಡಳು. ಅಲ್ಲಿ ಕುಳಿತುಕೊಳ್ಳಲು ಮನಸ್ಸಿಗೆ ಹಿಂಸೆಯಾಗಿ ಚಡಪಡಿಸಿದೆ. ನನ್ನ ಮನದ ಭಾವ ಅರಿತವಳಂತೆ ಪಾತಿ ‘ಮಗಾ ಮನೆನಲ್ಲಿ ಅಣ್ಣ ಕಾಯ್ತಿರಬಹುದು ಮನೆಗೆ ಹೋಗು. ನಾಳೆ ಊಟಕ್ಕೆ ಇಲ್ಲಿಗೆ ಬಾ ನಿನ್ನಿಷ್ಟದ ಅಡುಗೆ ಮಾಡ್ತಿನಿ’ ಎಂದು ಮನೆಯ ಎದುರಿನ ರಸ್ತೆಯವರೆಗೂ ಬಂದು ಬಿಳ್ಕೊಟ್ಟವಳನ್ನು ಹಿಂತಿರುಗಿ ನೋಡುತ್ತ ತೋಟದ ದಾರಿ ತುಳಿದೆ.

ಮನಸ್ಸು ಕ್ಷೋಭೆಗೊಂಡಿತ್ತು. ಅಪ್ಪನನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಅವರು ನಮ್ಮಿಂದ ದೂರಾಗಿದ್ದರು. ಹೌದು ಅಮ್ಮನ ಅನುಪಸ್ಥಿತಿಯಲ್ಲಿ ಅಪ್ಪನಿಗೂ ಒಂದು ಸಾಂಗತ್ಯದ ಅಗತ್ಯವಿತ್ತು. ಅಪ್ಪ ಪಾತಿಯನ್ನು ಬಯಸಿದ್ದು ಅಮ್ಮನ ಸಾವಿನ ನಂತರ. ಅಪ್ಪ ತಪ್ಪು ಮಾಡಿರುವರೆಂದು ಅವರನ್ನು ಅವರ ಬದುಕಿನುದ್ದಕ್ಕೂ ದೂರವಿಟ್ಟೆ. ಅಪ್ಪನದು ತಪ್ಪದೆಂದು ಹೇಳುವ ಯೋಗ್ಯತೆಯಾದರೂ ನನಗಿದೆಯೇ ಎಂದು ಮನಸ್ಸು ಪ್ರಶ್ನಿಸಿತು. ಶಾಲಿನಿ ಬದುಕಿರುವಾಗಲೇ ಕಾಲೇಜಿನಲ್ಲಿ ಮಧುರಾಳೊಂದಿಗಿನ ನನ್ನ ಒಡನಾಟಕ್ಕೆ ನಾನು ಯಾವ ಸಂಬಂಧದ ಹೆಸರು ಕೊಡಲಿ. ನನ್ನ ಸಾಹಿತ್ಯದ ಅಭಿರುಚಿಯನ್ನು ಹಂಚಿಕೊಳ್ಳಲು ನನಗೂ ಒಂದು ಸಾಂಗತ್ಯದ ಅಗತ್ಯವಿತ್ತು. ಮನಸ್ಸು ಹುಡುಕಾಟದಲ್ಲಿ ತೊಡಗಿರುವಾಗ ಸಾಹಿತ್ಯದ ಓದುಗಳಾಗಿ ಮಧುರಾ ನನಗೆ ಹತ್ತಿರವಾದಳು. ಮಧುರಾ ನನ್ನ ಬರವಣಿಗೆಯ ಬದುಕಿಗೆ ಸ್ಪೂರ್ತಿಯಾಗಿ ನನ್ನ ಭಾವದಲ್ಲಿ ನೆಲೆ ನಿಂತವಳು ಆತ್ಮೀಯ ಗೆಳತಿಯಾಗಿ, ನನ್ನ ಬರವಣಿಗೆಯ ಆರಾಧಕಳಾಗಿ ನನ್ನ ಬದುಕಿಗೊಂದು ಹೊಸ ಅರ್ಥ ತಂದುಕೊಟ್ಟಳು. ಹಾಗೆಂದು ನಾನು ಶಾಲಿನಿಗೆ ಮೋಸ ಮಾಡುತ್ತಿರುವೆನೆಂಬ ಕಿಂಚಿತ್ ಪ್ರಾಯಶ್ಚಿತದ ಭಾವವೂ ನನ್ನಲ್ಲಿಲ್ಲ. ಏಕೆಂದರೆ ನಮ್ಮಿಬ್ಬರ ನಡುವೆ ಇರುವುದು ಅದು ಬೌದ್ಧಿಕ ಸಾಂಗತ್ಯವೇ ವಿನ: ದೈಹಿಕ ಸಾಂಗತ್ಯವಲ್ಲ. ಅಪ್ಪನಿಗೂ ಅವನ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸಾಂಗತ್ಯದ ಅಗತ್ಯವಿದ್ದಿರಬಹುದು. ಎಲ್ಲವನ್ನೂ ಮಕ್ಕಳೆದುರು ಹೇಳಿಕೊಳ್ಳಲು ಅಪ್ಪ ಮತ್ತು ನಮ್ಮ ನಡುವೆ ವಯಸ್ಸಿನ ಅಂತರ ಎದುರಾಗಿರಬಹುದು. ಆದರೆ ಅರ್ಥವಾಗದ ಆ ವಯಸ್ಸಿನಲ್ಲಿ ಅಪ್ಪನಲ್ಲಿ ನನಗೆ ಕಂಡಿದ್ದು ದೈಹಿಕ ವಾಂಛೆ. ಅಪ್ಪನಲ್ಲಿ ಸ್ಥಿತಪ್ರಜ್ಞತೆ ಮಡುಗಟ್ಟಲು, ತಾನು ಬದುಕುತ್ತಿದ್ದ ಪರಿಸರದೊಂದಿಗೆ ಸಂಬಂಧವನ್ನೇ ಕಡಿದುಕೊಂಡು ಮೌನಿಯಾಗಿ ಬದುಕಲು ನಾನೇ ಕಾರಣನಾದೆ. ‘ಕ್ಷಮಿಸಿ ಅಪ್ಪ ಬದುಕಿನ ಯಾವ ಘಳಿಗೆಯಲ್ಲಿ ಯಾರಿಗೆ ಯಾವ ಅಗತ್ಯ ಎದುರಾಗುತ್ತದೋ ಎಂದು ಗುರುತಿಸುವಲ್ಲಿ ಮನುಷ್ಯ ಸೋಲುತ್ತಾನೆ. ಇನ್ನೊಬ್ಬನ ಜಾಗದಲ್ಲಿ ತನ್ನನ್ನು ಇರಿಸಿ ನೋಡುವ ಕಲ್ಪನಾಶಕ್ತಿ ಮನುಷ್ಯನಲ್ಲಿ ಹುಟ್ಟಿದಾಗಲೇ ಅವನಿಗೆ ಸತ್ಯದ ಅರಿವಾಗುವುದು.’ ಅಪ್ಪ ಬದುಕಿರುವಾಗ ಹೇಳಬೇಕಾದ ಮಾತುಗಳನ್ನು ಈಗ ಅಪ್ಪನ ಅನುಪಸ್ಥಿತಿಯಲ್ಲಿ ಸ್ವಗತದಲ್ಲಿ ಹೇಳಿಕೊಳ್ಳುತ್ತಿದ್ದೆ. ಮನಸ್ಸು ಭಾರವಾಗಿ ದು:ಖ ಉಮ್ಮಳಿಸಿ ಕಣ್ಣುಗಳು ತುಂಬಿ ಬಂದವು. ‘ರಾಘವ ಕತ್ತಲಾಗ್ತಿದೆ ನಡೆ ಮನೆಗೆ ಹೋಗೋಣ’ ನನ್ನನ್ನು ಹುಡುಕಿಕೊಂಡು ಬಂದು ಹಿಂದಿನಿಂದ ಭುಜದ ಮೇಲೆ ಕೈಯಿಟ್ಟು ಹೇಳಿದ ಅಣ್ಣನ ಮುಖ ನೋಡಿದೆ ಅವನಲ್ಲೂ ದು:ಖ ಮಡುಗಟ್ಟಿ ಕಣ್ಣುಗಳು ತುಂಬಿಬಂದಿದ್ದವು.  

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ