Saturday, May 2, 2015

ಅನಾವರಣ: ಪುಸ್ತಕ ಬಿಡುಗಡೆ

 (ಮೇ ೧, ೨೦೧೫ ರಂದು ನನ್ನ 'ಅನಾವರಣ' ಪುಸ್ತಕ ಬಿಡುಗಡೆಯಾಯಿತು)



ನನಗೆ ನನ್ನ ಬರವಣಿಗೆಯ ಮಿತಿ ಗೊತ್ತು. ನಾನು ಪಂಪ, ರಾಘವಾಂಕ, ಕುಮಾರವ್ಯಾಸರನ್ನು ಓದಿಕೊಂಡವನಲ್ಲ. ಹಳೆಗನ್ನಡ ನನಗೆ ಇವತ್ತಿಗೂ ಅರ್ಥವಾಗದ ಭಾಷೆ. ಅತಿ ಅಲಂಕಾರಿಕ ಪದಗಳನ್ನು ಬಳಸಿ ಬರೆದ ಪುಸ್ತಕಗಳ ಓದು ನನಗೆ ಅಷ್ಟಕಷ್ಟೆ. ಸರಳವಾಗಿ ಓದಿಸಿಕೊಂಡು ಹೋಗುವ ಮತ್ತು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲುವ ಬರಹಗಳ ಓದಿನಲ್ಲಿ ನನಗೆ ಹೆಚ್ಚು ಆಸಕ್ತಿ. ದಿನಪತ್ರಿಕೆಗಳು, ನಿಯತಕಾಲಿಕೆಗಳು, ಕಥೆ, ಕಾದಂಬರಿಗಳು, ಜೀವನ ಚರಿತ್ರೆಗಳು, ಪತ್ರಿಕೋದ್ಯಮದ ಬರಹಗಳ ಓದು ನನ್ನಲ್ಲೊಂದಿಷ್ಟು ಬರವಣಿಗೆಯಂಥ ಸೃಜನಶೀಲತೆಯನ್ನು ಮೂಡಿಸಿದೆ.  ಹಾಗೆಂದು ನನ್ನ ಬರವಣಿಗೆ ಬಗ್ಗೆ ನನಗೆ ಹೆಚ್ಚು ಅಭಿಮಾನವಾಗಲಿ ಇಲ್ಲವೇ ಅಹಂಕಾರವಾಗಲಿ ಇಲ್ಲ. ನಾನು ಬರವಣಿಗೆಯನ್ನು ನನ್ನೊಳಗಿನ ಆತಂಕ, ತಲ್ಲಣ, ಬೇಗುದಿ ಈ ಎಲ್ಲವನ್ನೂ ಅಕ್ಷರ ರೂಪಕ್ಕಿಳಿಸಲು ಬಳಸಿಕೊಂಡಿದ್ದೆ ಹೆಚ್ಚು. ಇಂಥದ್ದೊಂದು ಇತಿ ಮಿತಿಯ ಓದು ಮತ್ತು ಬರವಣಿಗೆಯ ನಡುವೆ ನಾನು ಬರೆದ ಅನಾವರಣ ಇದು ನನ್ನ ನಾಲ್ಕನೇ ಕೃತಿ.


   ಓದು ಮತ್ತು ಸಿನಿಮಾಗಳ ವೀಕ್ಷಣೆ ನನ್ನ ಅತ್ಯುತ್ತಮ  ಹವ್ಯಾಸಗಳು ಎನ್ನುವ ನಂಬಿಕೆ ನನ್ನದು. ಈ ಓದಿನ ಗೀಳು ನನಗೆ ಅಮ್ಮನಿಂದ ಬಂದ ಬಳುವಳಿ. ಸಿನಿಮಾ  ನೋಡುವ ಹುಚ್ಚು ಹತ್ತಿದ್ದು ಅಣ್ಣಂದಿರಿಂದ. ಉತ್ತಮ ಪುಸ್ತಕಗಳ ಓದು ಮತ್ತು ಅತ್ಯುತ್ತಮ ಕಲಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾಗಳ ವೀಕ್ಷಣೆಯಿಂದ ನನ್ನೊಳಗೆ ಬರವಣಿಗೆಯಂಥ ಸೃಜನಶೀಲತೆಯ ಸೆಲೆ ನಿರಂತರವಾಗಿ ಒಸರಲು ಕಾರಣವಾಯಿತು. ಜೊತೆಗೆ ನಾನು ಅಕ್ಷರ ಕಲಿತದ್ದು ಪಕ್ಕಾ ಕನ್ನಡ ಭಾಷೆಯಲ್ಲಿ. ಈ ಜಾಗತೀಕರಣ, ಐಟಿ, ಬೀಟಿಗಳು ನನ್ನ ವಿದ್ಯಾರ್ಥಿ ಜೀವನದ ಕಾಲಕ್ಕೆ ಈಗಿನಷ್ಟು ಸದ್ದು ಮಾಡುತ್ತಿರಲಿಲ್ಲವಾದ್ದರಿಂದ ಅಪ್ಪ ಖರ್ಚಾಗದೇ ಕಲಿಸುವ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದರು. ಹಾಗೆಂದು ಬೇಸರವೇನಿಲ್ಲ. ಕಲಿತ ಕನ್ನಡ ಶಾಲೆಗಳು ಪಠ್ಯಕ್ರಮದಾಚೆಯೂ ಕಲಿಸಿಕೊಟ್ಟ ಜೀವನಾನುಭವ ಅಪೂರ್ವ.


   ಬದುಕನ್ನು ಕಟ್ಟಿಕೊಳ್ಳಲು ಬಾಗಲಕೋಟೆಯಂಥ ಸಾಂಸ್ಕೃತಿಕ ನಗರಕ್ಕೆ ಬಂದ ಮೇಲೆ ನನ್ನ ಬರವಣಿಗೆ ಒಂದಿಷ್ಟು ಹದವಾಯಿತು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ನನ್ನ ಬರವಣಿಗೆಗೆ ವೇದಿಕೆ ಒದಗಿಸಿತು. ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ ಹಾಗೂ ಶ್ರೀ  ಸಿದ್ದಣ್ಣ ಶೆಟ್ಟರ್, ಪ್ರೊ ಎನ್. ಜಿ. ಕರೂರ, ಡಾ ಅಶೋಕ ಮಲ್ಲಾಪುರ, ಡಾ ಚಿದಾನಂದ ಪಾಟೀಲ, ಶ್ರೀ ಪಿ ಎನ್ ಸಿಂಪಿ ಈ ಎಲ್ಲ ಮಹನೀಯರಿಂದ ನನ್ನ ಬರವಣಿಗೆಯ ಬದುಕಿಗೆ ದೊರೆತ ಪ್ರೋತ್ಸಾಹ ಮತ್ತು ಸಹಕಾರ ಅಪಾರ.


      ಇನ್ನು ಅನಾವರಣ ಕೃತಿಯ ವಿಷಯಕ್ಕೆ ಬರುವುದಾದರೆ ಇಲ್ಲಿನ ಎಲ್ಲ ೧೮ ಲೇಖನಗಳು ನಾನು ಹತ್ತು ತಿಂಗಳ ಅವಧಿಯಲ್ಲಿ ನನ್ನ ಬ್ಲಾಗಿಗೆ ಬರೆದ ಬರಹಗಳು. ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಬ್ಲಾಗ್ ಲೇಖನಗಳನ್ನು ಸಂಕಲಿಸಿ ಎರಡು ಪುಸ್ತಕಗಳನ್ನು ಹೊರತರಲು ಸಾಧ್ಯವಾಯಿತು. ಬ್ಲಾಗ್ ಓದುಗರಿಂದ ನನ್ನ ಲೇಖನಗಳಿಗೆ ದೊರೆಯುತ್ತಿರುವ ಪ್ರತಿಕ್ರಿಯೆಗಳನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ.


   ನನ್ನ ಕೃತಿಗಳ ಪ್ರಕಟಣೆಯ ವಿಷಯವಾಗಿ ನಾನು ಸ್ಮರಿಸಲೇಬೇಕಾದ ವ್ಯಕ್ತಿತ್ವ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೆಕ್ ಅವರದು. ಅನಾವರಣವನ್ನೊಳಗೊಂಡಂತೆ ನನ್ನ ಮೂರು ಪುಸ್ತಕಗಳು ಸಿದ್ದಲಿಂಗೇಶ್ವರ ಪ್ರಕಾಶನದಿಂದ ಪ್ರಕಟವಾಗಿರುವುದರ ಹಿಂದೆ ಶ್ರೀ ಬಸವರಾಜ ಕೊನೆಕ್ ಅವರ ಪ್ರೀತಿ ಮತ್ತು ಸಹಕಾರವೇ ಕಾರಣ.  ಈ ಸಂದರ್ಭ ಸಹಕಾರ ನೀಡುತ್ತಿರುವ ಎಲ್ಲರನ್ನೂ ನಾನು ಅತ್ಯಂತ ವಿನಮೃತೆಯಿಂದ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.

-  ರಾಜಕುಮಾರ . ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ