Tuesday, May 17, 2022

ಮುಖವಾಡ (ಕಥೆ)




      ಪ್ರೇಮಚಂದನಿಗೆ ಅವನು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರಧಾನ ಕಚೇರಿಯಿಂದ ಬಂದ ಪತ್ರದ ಒಕ್ಕಣೆ ಹೀಗಿತ್ತು- ‘ಕಂಪನಿಯ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಆಡಳಿತ ಮಂಡಳಿಯು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಬಯಸಿದೆ. ಕಂಪನಿಯ ನಿಯಮಗಳು ಮತ್ತು ಸಿಬ್ಬಂದಿಯ ವ್ಯಕ್ತಿತ್ವ ಹಾಗೂ ಮುಖಚಹರೆ ನಡುವಣ ಹೊಂದಾಣಿಕೆಯನ್ನು ಗುರುತಿಸುವುದೇ ಈ ಪರಿಶೀಲನೆಯ ಉದ್ದೇಶವಾಗಿದೆ. ಉಲ್ಲೇಖಿಸಿದ ದಿನಾಂಕದಂದು ತಾವು ಮುಖ್ಯಕಚೇರಿಯಲ್ಲಿ ಚಹರೆ ಪರಿಶೀಲನಾ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಆಡಳಿತ ಮಂಡಳಿಯ ನೀತಿನಿಯಮಗಳಿಗೆ  ಅನುಗುಣವಾದ ಮುಖಚಹರೆ ತಮ್ಮದಾಗಿದ್ದಲ್ಲಿ ತಮ್ಮನ್ನು ಕೆಲಸದಲ್ಲಿ ಮುಂದುವರೆಸಲಾಗುವುದು. ಒಂದುವೇಳೆ ತಮ್ಮ ಮುಖಚಹರೆ ಆಡಳಿತ ಮಂಡಳಿ ಇಚ್ಛೆಗೆ ವಿರುದ್ಧವಾಗಿದ್ದಲ್ಲಿ ತಮ್ಮನ್ನು ಮುಂದುವರೆಸುವ ಇಲ್ಲವೇ ಕೆಲಸದಿಂದ ವಜಾಗೊಳಿಸುವ ನಿರ್ಧಾರ ಕಂಪನಿಗೆ ಸೇರಿದ್ದು. ಪತ್ರದಲ್ಲಿ ಉಲ್ಲೇಖಿಸಿದ ದಿನದಂದು ತಾವು ಸಂದರ್ಶನಕ್ಕೆ ಹಾಜರಾಗದಿದ್ದ ಪಕ್ಷದಲ್ಲಿ ತಮ್ಮ ಗೈರುಹಾಜರಿಯನ್ನು ಅಸಮ್ಮತಿಯೆಂದು ಪರಿಗಣಿಸಿ ತಮ್ಮನ್ನು ಕೆಲಸದಿಂದ ವಜಾಗೊಳಿಸುವ ಹಕ್ಕು ಆಡಳಿತ ಮಂಡಳಿಗಿದೆ’. ಪತ್ರವನ್ನೊದಿ ಪ್ರೇಮಚಂದನಿಗೆ ಒಂದುಕ್ಷಣ ಕಣ್ಣಿಗೆ ಕತ್ತಲಾವರಿಸಿದಂತಾಗಿ ತಾನು ಯಾವುದೋ ಒಂದು ಷಡ್ಯಂತ್ರದಲ್ಲಿ ಸಿಕ್ಕಿಬಿದ್ದ ವಿಚಿತ್ರ ಅನುಭವವಾಗಿ ಹೊಟ್ಟೆ ತೊಳಿಸಿದಂತೆನಿಸಿ ಎದ್ದು ವಾಶ್‌ರೂಮಿನತ್ತ ಹೆಜ್ಜೆ ಹಾಕಿದ.    ತೂಗುಹಾಕಿದ್ದ ಕನ್ನಡಿಯಲ್ಲಿ ತನ್ನ ಮುಖವನ್ನು ದಿಟ್ಟಿಸಿ ನೋಡುತ್ತ ನಿಂತವನಿಗೆ ಕೆಲವು ದಿನಗಳ ಹಿಂದಷ್ಟೆ ಹೆಂಡತಿ ಆಡಿದ ಮಾತುಗಳು ತಲೆಯಲ್ಲಿ ಗಿರಗಿಟ್ಲೆ ಆಡಲಾರಂಭಿಸಿದವು. ಅಂದು ಊಟ ಬಡಿಸುವಾಗ ಸರಳಾಬಾಯಿ ತನ್ನ ಮನದ ಬೇಗುದಿಯನ್ನು ಸಿಟ್ಟಿನಿಂದಲೇ ಹೊರಹಾಕಿದ್ದಳು, ‘ನಿಮ್ಮ ಮಾರಿ ಮ್ಯಾಲಿನ ಕಳ್ಯಾಕ ಈಗಿದ್ದ ನೌಕರಿ ಸಿಕ್ಕಿದ್ದೆ ದೊಡ್ಡ ಪುಣ್ಯ. ಪಕ್ಕದ ಮನಿ ಮಾಧುರಿ ಹೇಳ್ಲಿಕತ್ತಿದ್ದಳು ಹೊಸ ಆಡಳಿತ ಮಂಡಳಿ ಬರೊದದಾ. ಹಾಗೇನಾದ್ರೂ ಬಂದ್ರ ಈಗಿದ್ದ ಎಷ್ಟೋ ಮಂದಿ ನೌಕರಿ ಕಳ್ಕೊತಾರಂತ. ಯಾಕಂದ್ರ ಹೊಸ ಆಡಳಿತ ಮಂಡಳಿಗೂ ನೌಕರಿ ಮಾಡೊವರ ಮಾರಿ ಚಹರಾಕ್ಕೂ ಹೊಂದಿಕಿ ಆಗ್ಬೇಕಂತ. ಹಾಂಗ ಹೊಂದಿಕಿ ಆಗ್ಲಿಲ್ಲಂದ್ರ ನೌಕರಿನಿಂದ ತೆಗೆದು ಹಾಕ್ತಾರಂತ. ಎಷ್ಟ ಸಲ ಬಡ್ಕೊಂಡಿನಿ ಸಮಯ ಸಂದರ್ಭಕ್ಕ ತಕ್ಕಂಗ ಬದುಕೊದು ರೂಢಿಸಿಕೊಳ್ರಿ ಅಂತ. ಎಲ್ಲಿ ನನ್ನ ಮಾತು ಕಿವ್ಯಾಗ ಹಾಕೊತಿರಿ. ಮದವಿ ಆದಾಗ್ಲಿಂದ ನೋಡ್ಲಿಕತ್ತಿನಿ ಈ ಮುಖದಾಗ ಒಂದಷ್ಟರೆ ಬದಲಾವಣಿ ಆಗ್ಯಾದೇನು. ಅದೇ ಗುಡ್ಡದ ಮ್ಯಾಲ ನಿಂತ ಗೊಮ್ಮಟನಂಗÀ’. ಹೆಂಡತಿ ಆಡಿದ ಮಾತುಗಳು ನೆನಪಾಗಿ ಪ್ರೇಮಚಂದನ ಆತಂಕ ಮತ್ತಷ್ಟು ಹೆಚ್ಚಿತು. 

* * *

ಕಳೆದ ಇಪ್ಪತ್ತೈದು  ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯೊಂದರ ಶಾಖಾ ಕಚೇರಿಯಲ್ಲಿ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಪ್ರೇಮಚಂದ ಗಲಗಲಿಯದು ಯಾವ ಏರಿಳಿತಗಳಿಲ್ಲದ ಸರಳ ಬದುಕು. ಪತ್ನಿ ಸರಳಾಬಾಯಿ, ಇಂಜಿನಿಯರಿಂಗ್ ಫೈನಲ್ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಮಗ ವಿಜೇತ, ಎರಡನೆ ಪಿಯುಸಿ ಓದುತ್ತಿರುವ ಮಗಳು ವೀಣಾ ಒಟ್ಟಾರೆ ಚಿಕ್ಕ ಮತ್ತು ಚೊಕ್ಕ ಸಂಸಾರ. ತಲೆಯ ಮೇಲೊಂದು ಸೂರಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿರುವ ನಗರದ ಬಡಾವಣೆಯೊಂದರಲ್ಲಿ ಅಪ್ಪ ಕಟ್ಟಿಸಿದ ಮನೆಯಿದೆ. ಅಪ್ಪ ಅಮ್ಮ ಇಹಲೋಕ ತ್ಯಜಿಸಿ ಹತ್ತಿರ ಹತ್ತಿರ ಹತ್ತು ವರ್ಷಗಳಾಗುತ್ತ ಬಂತು. ಹೆತ್ತವರ ಸಾವಿನ ನಂತರ ಪ್ರೇಮಚಂದನೇ ಸಂಬಂಧಿಕರಿಂದ ದೂರಾದನೋ ಇಲ್ಲ ಅವರೇ ಇವನಿಂದ ದೂರಾದರೋ ಅಂತೂ ಯಾವ ನೆಂಟರಿಷ್ಟರ ರಗಳೆ ತಾಪತ್ರಯಗಳಿಲ್ಲದೆ ತಾನಾಯ್ತು ತನ್ನ ಕೆಲಸವಾಯ್ತು ಎಂದು ಬದುಕುತ್ತಿರುವ ನಿರುಪದ್ರವಿ ಜೀವಿ ಈತ. ಬೆಳಗ್ಗೆ ಐದಕ್ಕೆ ಎದ್ದು ಒಂದಿಷ್ಟು ವಾಕಿಂಗ್ ಮುಗಿಸಿ ಸ್ನಾನ ಸಂದ್ಯಾವಂದನೆ ಮಾಡಿ ಹೆಂಡತಿ ಮಾಡಿಟ್ಟ ಉಪ್ಪಿಟ್ಟೊ ಅವಲಕ್ಕಿನೊ ತಿಂದು ಎರಡು ಚಪಾತಿಗಳನ್ನು ಡಬ್ಬಿಯಲ್ಲಿ ಸುತ್ತಿಕೊಂಡು ಮನೆಯಿಂದ ಹೊರಬಿದ್ದು ಸಮೀಪದ ಪಿಕಪ್ ಪಾಯಿಂಟ್‌ನಲ್ಲಿ ಕಂಪನಿಯ ಕ್ಯಾಬ್ ಹತ್ತಿ ಆಫೀಸ್ ಸಮೀಪಿಸುವವರೆಗೂ ಕ್ಯಾಬ್‌ನಲ್ಲೇ ಒಂದು ಸಣ್ಣ ನಿದ್ದೆ ತೆಗೆದು ಕ್ಯಾಬ್ ನಿಂತಿದ್ದೆ  ಅವಸವಸರವಾಗಿ ಆಫೀಸ್ ಬಿಲ್ಡಿಂಗ್ ಪ್ರವೇಶಿಸಿ ತನ್ನ ದಿನನಿತ್ಯದ ಜಾಗದಲ್ಲಿ ಕುಳಿತುಕೊಂಡರೆ ಹೊರಗೆ ಕಾಲಿಡುವುದು ಮತ್ತೆ ಮನೆಗೆ ಮರಳುವಾಗಲೇ. ಸಂಸಾರ ಮತ್ತು ನೌಕರಿಯ ತಾಪತ್ರಯಗಳ ನಡುವೆಯೂ ಓದು ಬರವಣಿಗೆ ಎಂದು ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಪ್ರೇಮಚಂದನ ನಾಲ್ಕಾರು ಪುಸ್ತಕಗಳನ್ನು ಪ್ರಕಾಶಕರೊಬ್ಬರು ಪ್ರಕಟಿಸಿದ್ದರಿಂದ ಮನೆಯ ಕಪಾಟಿನಲ್ಲಿ ಹೆಸರಾಂತ ಸಾಹಿತಿಗಳ ಪುಸ್ತಕಗಳ ಸಾಲಿನಲ್ಲಿ ತನ್ನ ಪುಸ್ತಕಗಳನ್ನು ಜೋಡಿಸಿಟ್ಟು ಆಗಾಗ ಅವುಗಳ ಮೈಸವರಿ ಪುಳಕಗೊಳ್ಳುತ್ತಾನೆ.

ಈ ಹತ್ತುದಿನಗಳನ್ನು ಪ್ರೇಮಚಂದ ತುಂಬ ಆತಂಕದಿಂದಲೇ ಕಳೆದ. ಕಂಪನಿಯ ಬ್ರಾ÷್ಯಂಚ್ ಆಫೀಸಿನಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು ಈ ಮೊದಲಿನಂತೆ ಸ್ನೇಹದಿಂದ ವರ್ತಿಸುತ್ತಿಲ್ಲ ಎನ್ನುವ ಗುಮಾನಿ ಮನಸ್ಸಿನಲ್ಲಿಮೂಡಿದ್ದೆ ಪ್ರೇಮಚಂದ ಮತ್ತಷ್ಟು ದಿಗಿಲುಗೊಂಡ. ಅಲ್ಲಲ್ಲಿ ಇಬ್ಬಿಬ್ಬರೆ ಜೊತೆಯಾಗಿ ನಿಂತು ಮೇಲುಧ್ವನಿಯಲ್ಲಿ ಮಾತನಾಡುವುದು, ಯಾರಾದರೂ ಬರುತ್ತಿರುವ ಸೂಚನೆ ಸಿಕ್ಕಿದ್ದೆ ಮಾತು ನಿಲ್ಲಿಸಿ ಅವರತ್ತ ಅನುಮಾನದಿಂದ ನೋಡುವುದು, ಕೆಲಸದಲ್ಲಿ ಆಸಕ್ತಿಯನ್ನೆ ಕಳೆದುಕೊಂಡ ಕಳಾಹೀನ ಮುಖಗಳು, ನಾಳೆ ಏನಾಗುವುದೋ ಎನ್ನುವ ಆತಂಕ ಒಟ್ಟಾರೆ ಆಫೀಸಿನ ವಾತಾವರಣದಲ್ಲಿ ಈ ಮೊದಲಿನ ಲವಲವಿಕೆ ಇಲ್ಲದೆ ಎಲ್ಲವೂ ಅಯೋಮಯ ಅಗೋಚರ ಅನಿಸತೊಡಗಿತು. ಸಂದರ್ಶನದ ದಿನ ಹತ್ತಿರವಾಗುತ್ತಿದ್ದಂತೆ ಪ್ರೇಮಚಂದನ ಆತಂಕ ಮತ್ತು ದಿಗಿಲು ಉಲ್ಬಣಗೊಂಡು ಬೆಡ್ ರೂಮಿನಲ್ಲಿದ್ದ ಅಲ್ಮೆರಾಕ್ಕೆ ಅಂಟಿಸಿದ ಆಳೆತ್ತರದ ಕನ್ನಡಿ ಎದುರು ನಿಂತು ತನ್ನ ಪ್ರತಿಬಿಂಬದ ಜೊತೆ ಗಂಟೆಗಟ್ಟಲೆ ಸ್ವಗತದಲ್ಲಿ ಮಾತನಾಡತೊಡಗಿದ. ಗಂಡನ ವರ್ತನೆ  ಹೆಂಡತಿ ಸರಳಾಬಾಯಿಗೆ ಏಕಕಾಲಕ್ಕೆ ಒಗಟಾಗಿಯೂ ಮತ್ತು ಸಮಸ್ಯೆಯಾಗಿ ಕಾಡತೊಡಗಿತು.

ಸಂದರ್ಶನದ ದಿನ ಸರಿಯಾಗಿ ಬೆಳಗ್ಗಿನ ಹತ್ತುಗಂಟೆಗೆ ಪ್ರೇಮಚಂದ ಕಂಪನಿಯ ಹೆಡ್ ಆಫೀಸಿನಲ್ಲಿದ್ದ. ಸಂದರ್ಶನದ ಕೊಠಡಿ ಎದುರಿನ ಉದ್ದನೆಯ ಸಾಲಿನತ್ತ ದೃಷ್ಟಿ ಹರಿಸಿದವನಿಗೆ ನಿಂತಿದ್ದವರಲ್ಲಿ ಒಂದೆರಡು ಪರಿಚಿತ ಮುಖಗಳು ಕಣ್ಣಿಗೆ ಕಾಣಿಸಿ ಮನಸ್ಸಿಗೆ ಸಮಾಧಾನವಾಯಿತು. ರಿಸೆಪ್ಷನ್ ಕೌಂಟರ್‌ನಲ್ಲಿ ಹೆಸರು ನೋಂದಾಯಿಸಿ ತನ್ನ ದಾಖಲೆಗಳನ್ನು ಪರಿಶೀಲನೆಗೆ ಕೊಟ್ಟು ಅವರಿಂದ ಚೆಕ್‌ಲಿಸ್ಟ್ ಪಡೆದು ಉದ್ದನೆಯ ಸರತಿ ಸಾಲಿನಲ್ಲಿ ತಾನೂ ಒಬ್ಬನಾಗಿ ನಿಂತ. ಪ್ರೇಮಚಂದ ಸಂದರ್ಶನದ ಕೊಠಡಿಯೊಳಗೆ ಕಾಲಿಡುವ ವೇಳೆಗಾಗಲೇ ಹೊತ್ತು ಮಧ್ಯಾಹ್ನದ ಹನ್ನೆರಡು ದಾಟಿತ್ತು. ವಾತಾನುಕೂಲ ಸೌಲಭ್ಯದ ಕೊಠಡಿಯಲ್ಲಿ ಅಂಥ ರಣಗುಟ್ಟುವ ಭಯಂಕರ ಬೇಸಿಗೆಯಲ್ಲೂ ತಂಪಾದ ಗಾಳಿ ತುಂಬಿಕೊಂಡಿತ್ತು. ಕೂಡಲು ಮೆತ್ತನೆಯ ಸುಖಾಸೀನಗಳು, ಕಿಟಕಿಗಳಿಂದ ಒಳಗೆ ತೂರದಂತೆ ಪ್ರಖರ ಬಿಸಿಲನ್ನು ಮರೆಮಾಚಿದ ಆಕರ್ಷಕ ಪರದೆಗಳು, ಹೂದಾನಿಯಲ್ಲಿ ಅರಳಿನಿಂತಿರುವ ಬಣ್ಣಬಣ್ಣದ ಹೂಗಳು, ಮೈಸೋಕುತ್ತಿರುವ ತಂಪಾದ ಹವೆ ಅರೆಕ್ಷಣ ಪ್ರೇಮಚಂದನಿಗೆ ತಾನು ನಿಂತಿರುವ ಆ ಜಾಗ ಇಂದ್ರನ ಅಮರಾವತಿಯಂತೆ ಭಾಸವಾಯಿತು. ತಾನು ನಿಂತಿರುವ ಜಾಗಕ್ಕೆ ಎದುರಾಗಿ ಮೆತ್ತನೆಯ ಕುರ್ಚಿಗಳ ಮೇಲೆ ಆಸೀನಗೊಂಡಿದ್ದ ಮೂರು ಅಪರಿಚಿತ ಮುಖಗಳು ಗೋಚರಿಸಿದವು. ಅವರಿಗೆದುರಾಗಿ ಇಟ್ಟಿದ್ದ ಖಾಲಿ ಕುರ್ಚಿಯಲ್ಲಿ ಕುಳಿತವನು ಕೇಶವರಾವ್ ಸಾಳುಂಕೆ ಕಾಣಿಸಬಹುದೇನೋ ಎಂದು ಸುತ್ತಲೂ ಕಣ್ಣಾಡಿಸಿದ. ಕಂಪನಿಯ ಹೆಡ್ ಆಫೀಸಿನ ಈ ಜಾಗಕ್ಕೆ ಐದು ವರ್ಷಗಳ ಹಿಂದೆ ಬಂದಿದ್ದ ನೆನಪು ಪ್ರೇಮಚಂದನ ಮನಸ್ಸಿನಲ್ಲಿ ಇನ್ನೂ ಮಾಸಿರಲಿಲ್ಲ. ಕಂಪನಿಯ ಇಪ್ಪತ್ತೆöÊದನೆ ವರ್ಷಾಚರಣೆಯ ನಿಮಿತ್ಯ ಅಂದಿನ ಕಂಪನಿಯ ಮುಖ್ಯಸ್ಥರಾಗಿದ್ದ ಕೇಶವರಾವ್ ಸಾಳುಂಕೆ ಅವರನ್ನು ಸಂದರ್ಶನ ಮಾಡಲು ಮ್ಯಾನೇಜರ್ ರಾಮನಾಥ ಚಿದ್ರಿ ತನ್ನನ್ನು ಹೆಡ್ ಆಫೀಸಿಗೆ ಕಳುಹಿಸಿದ್ದು ನೆನಪಾಯಿತು. ಅಂದು ಇಡೀ ಅರ್ಧದಿನ ಕೇಶವರಾವ್ ಸಾಳುಂಕೆ ಪ್ರೇಮಚಂದನೊಂದಿಗೆ ಕಳೆದಿದ್ದರು. ಚೇಂಬರಿಗೆ ಊಟ ತರಿಸಿ ಪ್ರೇಮಚಂದನೊಂದಿಗೆ ನಗುನಗುತ್ತ ಊಟ ಮಾಡಿದ್ದರು. ಮರುದಿನ ಸಾಳುಂಕೆ ಅವರ ಸಂದರ್ಶನದೊಂದಿಗೆ ಪ್ರೇಮಚಂದ ಬರೆದ ವಿವರವಾದ ಲೇಖನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಅವನಲ್ಲಿ ಧನ್ಯತೆಯ ಭಾವವನ್ನು ಮೂಡಿಸಿತ್ತು. ಇನ್ನುಮುಂದೆ ಕಂಪನಿಯ ಮುಖ್ಯಸ್ಥರ ನೆನಪಿನಲ್ಲಿ ತನ್ನ ಚಿತ್ರ ಸ್ಥಿರವಾಗಿ ನೆಲೆಸುತ್ತದೆ ಎಂದು ಭಾವಿಸಿದ್ದ ಪ್ರೇಮಚಂದನಿಗೆ ಮುಂದೊಮ್ಮೆ ಕೇಶವರಾವ್ ಸಾಳುಂಕೆ ಬ್ರಾ÷್ಯಂಚ್ ಆಫೀಸಿಗೆ ಬೇಟಿ ನೀಡಿದ ಸಂದರ್ಭ ಯಾರು ನೀನು ಎಂದು ಪ್ರಶ್ನಿಸಿ ಅವನ ಅಸ್ತಿತ್ವವನ್ನೇ ಅಲುಗಾಡಿಸಿದ್ದರು. ಈ ಘಟನೆಯ ನಂತರ ಪ್ರೇಮಚಂದ ಇನ್ನುಮುಂದೆ ದೊಡ್ಡವರ ಸಹವಾಸವೇ ಸಾಕು ಎನ್ನುವಂತೆ ತಾನಾಯ್ತು ತನ್ನ ಕೆಲಸವಾಯ್ತು ಎನ್ನುತ್ತ ಯಾವ ಉಸಾಬರಿಗೂ ಹೋಗದೆ ಬದುಕುವುದನ್ನು ರೂಢಿಸಿಕೊಂಡಿದ್ದ.

ಹಿಂದಿನದೆಲ್ಲ ನೆನಪಾಗಿ ಈಗ ಸಾಳುಂಕೆ ಅಮೆರಿಕದಲ್ಲಿ ವಾಸಿಸುತ್ತಿರುವ ಸಂಗತಿ ಮನಸ್ಸಿಗೆ ಹೊಳೆದು ಪ್ರೇಮಚಂದ ತಾನು ಸಂದರ್ಶನದ ಕೊಠಡಿಯಲ್ಲಿ ಕುಳಿತಿರುವುದನ್ನು ಸ್ಮರಣೆಗೆ ತಂದುಕೊಂಡ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಳುವ ಪಕ್ಷದ ಕಿರುಕುಳದಿಂದ ಬೇಸತ್ತು  ಕೇಶವರಾವ್ ಸಾಳುಂಕೆ ಕಂಪನಿಯನ್ನು ವಿಲೇವಾರಿಮಾಡಿ ಪತ್ನಿಸಮೇತ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಹೊಸ ಆಡಳಿತ ಮಂಡಳಿ ಕಂಪನಿಯ ಆಮೂಲಾಗ್ರ ಬದಲಾವಣೆಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಆಡಳಿತ ಮಂಡಳಿಯ ಹೊಸ ನಿಯಮಗಳಿಗೆ ಹೊಂದಿಕೊಳ್ಳುವವರನ್ನು ಮಾತ್ರ ಕೆಲಸದಲ್ಲಿ ಮುಂದುವರೆಸುವುದು, ಹೊಂದಿಕೊಳ್ಳದವರನ್ನು ನೌಕರಿಯಿಂದ ವಜಾಗೊಳಿಸುವ ಯೋಜನೆಯ ಮೊದಲಹಂತವಾಗಿ ಈ ಸಂದರ್ಶನವನ್ನು ಏರ್ಪಡಿಸಲಾಗಿತ್ತು. ನೀವು ಯಾವ ಮತಸ್ಥರು, ನಿಮ್ಮ ಮಠ ಯಾವುದು, ನೀವು ನಮೂದಿಸಿರುವ ಸಮುದಾಯಕ್ಕೂ ಮತ್ತು ನಿಮ್ಮ ಹೆಸರು ಹಾಗೂ ಚಹರೆಗೂ ತಾಳೆ ಆಗುತ್ತಿಲ್ಲ, ನೀವು ಒದಗಿಸಿದ ಮಾಹಿತಿ ಸುಳ್ಳು ಎಂದು ಸಾಬೀತಾದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ದಾವೆ ಹೂಡುವ ಎಲ್ಲ ಹಕ್ಕುಗಳು ಕಂಪನಿಗಿವೆ ಸಂದರ್ಶನ ಸಮಿತಿಯ ಸದಸ್ಯರ ಒಂದಾದ ಮೇಲೊಂದು ಪ್ರಶ್ನೆಗಳಿಂದ ಪ್ರೇಮಚಂದ ವಿಚಲಿತನಾದ. ಉತ್ತರಿಸುವಾಗ ತಡವರಿಸಿದ. ತಂಪು ವಾತಾವರಣದಲ್ಲೂ ಹಣೆ ಮತ್ತು ಕುತ್ತಿಗೆಯ ಸುತ್ತ ಸಣ್ಣಗೆ ಬೆವರು ಜಿನುಗತೊಡಗಿತು.  

ಪ್ರೇಮಚಂದನ ಮೌನಕ್ಕೆ ಪ್ರತಿಕ್ರಿಯೆಯಾಗಿ ಮಧ್ಯದ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಬಹುಶ: ಸಂದರ್ಶನ ಸಮಿತಿಯ ಚೇರ್ಮನ್ ಇರಬಹುದು ಆತ ಸಂದರ್ಶನವು ಅಂತಿಮ ಘಟಕ್ಕೆ ಬಂದಿರುವ ಸೂಚನೆಯೆಂಬಂತೆ ವಿವರಣೆ ನೀಡಿದ ‘ನೀವು ಸಮಿತಿಯ ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲ. ನಿಮ್ಮ ವರ್ತನೆ ಮತ್ತು ನೀವು ಒದಗಿಸಿದ ಮಾಹಿತಿ ಅನುಮಾನಾಸ್ಪದವಾಗಿ ಕಂಡುಬರುತ್ತಿದೆ. ಸಮಿತಿಯು ಮತ್ತೊಮ್ಮೆ ಸಭೆಸೇರಿ ನಿಮ್ಮನ್ನು ಕೆಲಸದಲ್ಲಿ ಮುಂದುವರೆಸಬೇಕೋ ಅಥವಾ ಇಲ್ಲವೋ ಎನ್ನುವುದನ್ನು ನಿರ್ಧರಿಸಲಿದೆ. ಸಮಿತಿಯ ಅಂತಿಮ ನಿರ್ಧಾರದವರೆಗೂ ನೀವು ಕೆಲಸಕ್ಕೆ ಹಾಜರಾಗುವಂತಿಲ್ಲ. ಈ ಅವಧಿಯ ನಿಮ್ಮ ಗೈರುಹಾಜರನ್ನು ತಾತ್ಕಾಲಿಕ ರಜೆ ಎಂದು ಪರಿಗಣಿಸಲಾಗುವುದು. ನಿಮ್ಮ ನೌಕರಿಯ ವಿಷಯದಲ್ಲಿ ಆಡಳಿತ ಮಂಡಳಿಯದೇ ಅಂತಿಮ ನಿರ್ಧಾರ. ಯಾವುದಕ್ಕೂ ಇನ್ನೆರಡು ದಿನಗಳಲ್ಲಿ ಕಂಪನಿಯ ನಿರ್ಧಾರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ನಿಮ್ಮ ಕೈಸೇರಲಿದೆ. ಗುಡ್‌ಲಕ್’ ಎಂದು ಹೇಳಿ ಮಾತು ಮುಗಿಸಿದ. 

* * *

‘ನಿಮ್ಮ ಅಪ್ಪ ಮಾಡಿದ ಕಿತಾಪತಿಯಿಂದ ಈಗ ನಾವು ಅನುಭವಿಸಬೇಕಾಗಿ ಬಂದದ ನೋಡ್ರಿ. ಯಾಕ ಆ ವೆಂಕೋಬರಾಯಗ ಬೇರೆ ಯಾವ ಹೆಸರೂ ಸಿಗ್ಲಿಲ್ಲೇನು. ಇದೇ ಹೆಸರು ಬೇಕಾಗಿತ್ತೇನು. ತನಗೇನೋ ಕಥಿ ಮನಸ್ಸಿಗಿ ಹಿಡಿಸಿತು ಅಂತ ಆ ಕಥಿ ಬರೆದವನ ಹೆಸರು ನಿಮಗಿಟ್ಟು ಎಲ್ಲ ಹಾಳ್ಮಾಡಿ ಬಿಟ್ಟ. ನೀವೋ ಗುಡ್ಯಾಗ ಲಿಂಗದ ಎದುರು ಕೂತ ಬಸವಣ್ಣನಂಗ. ಅಪ್ಪ ಇಟ್ಟ ಹೆಸರಿಗಿ ಯಾವ ಕಳಂಕಾನೂ ಬರದಂಗ ವೆಂಕೋಬರಾಯನ ಮಾನ ಕಾಪಾಡ್ಲಿಕತ್ತಿರಿ. ಧೋಬಿ ಕಾ ಕುತ್ತಾ ನ ಘರ್ ಕಾ ನ ಘಾಟ್ ಕಾ ಅನ್ನೊಹಂಗ ಪರಿಸ್ಥಿತಿ ತಂದಿಟ್ಟೀರಿ. ನನ್ನ ಜೀವ ಅಂತೂ ಸೋತು ಸುಣ್ಣ ಆಗ್ಯಾದ. ಹಾಳಾದ ಹೆಸರು ಸುಟ್ಟು ಹೋಗಲಿ’ ಕಂಪನಿಯ ಹೆಡ್ ಆಫೀಸಿನಿಂದ ಬಂದ ಪತ್ರ ಓದಿದ್ದೆ ಸರಳಾಬಾಯಿ ಗಂಡ ಪ್ರೇಮಚಂದನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಸಂದರ್ಶನದ ನಾಲ್ಕು ದಿನಗಳ ನಂತರ ಕಂಪನಿಯ ಪತ್ರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕೈಸೇರಿದಾಗ ಪ್ರೇಮಚಂದ ಮಧ್ಯಾಹ್ನದ ಊಟ ಮುಗಿಸಿ ಒಂದು ಸಣ್ಣ ನಿದ್ದೆ ತೆಗೆಯಲೆಂದು ಹಾಸಿಗೆಯ ಮೇಲೆ ಅಡ್ಡಾಗುವ ತಯ್ಯಾರಿಯಲ್ಲಿದ್ದ. ಅದೇಕೋ ಸಂದರ್ಶನದ ನಂತರ ನೌಕರಿಯಿಂದ ವಜಾಗೊಂಡೆ ಎಂದೇ ಭಾವಿಸಿದ್ದ ಪ್ರೇಮಚಂದನಲ್ಲಿ ಒಂದುರೀತಿಯ ನಿರಾಳತೆ ಮನೆಮಾಡಿತ್ತು. ಈ ನಾಲ್ಕು ದಿನಗಳನ್ನು ಅವನು ಯಾವ ಆತಂಕವಿಲ್ಲದೆ ಕಳೆದಿದ್ದರೂ ಸರಳಾಬಾಯಿ ಮಾತ್ರ ಕಂಪನಿಯಿಂದ ಬರಬೇಕಿದ್ದ ಪತ್ರಕ್ಕಾಗಿ ಕ್ಷಣವನ್ನು ಯುಗವಾಗಿಸಿ ಕಾಯ್ದಿದ್ದಳು. ಪತ್ರ ಓದಿದ್ದೆ ಸರಳಾಬಾಯಿ ತಲೆ ಮೇಲೆ ಕೈಹೊತ್ತು ಚಿಂತಾಕ್ರಾಂತಳಾಗಿ ಕುಳಿತಳು. ಪತ್ರ ಓದಿದ ಪ್ರೇಮಚಂದನಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ಸಹಜವಾಗಿಯೇ ಕೋಪಗೊಂಡವಳು ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಳು. 

ಸಾರಂಶ ರೂಪದಲ್ಲಿ ಹೇಳುವುದಾದರೆ ಕಂಪನಿಯ ನಿರ್ಧಾರ ಹೀಗಿತ್ತು- ‘ಕಂಪನಿಯ ಹೊಸ ಆಡಳಿತ ಮಂಡಳಿಯ ನಿಯಮಗಳಿಗೆ ಹೊಂದಿಕೊಳ್ಳಬಹುದಾದ ಮುಖಚಹರೆ ನಿಮಗಿಲ್ಲ. ನಿಮ್ಮ ಹೆಸರು, ನಿಮ್ಮ ಮುಖದ ಚಹರೆ ಮತ್ತು ನಿಮ್ಮ ಸಮುದಾಯ ಇವುಗಳ ನಡುವೆ ಯಾವ ಹೊಂದಾಣಿಕೆಯೂ ನಮಗೆ ಕಾಣಿಸುತ್ತಿಲ್ಲ. ಸಮುದಾಯದ ಹಲವು ಶ್ರೀಮಠಗಳನ್ನು ಸಂಪರ್ಕಿಸಿ ನಿಮ್ಮ  ಹೆಸರಿನ ಕುರಿತು ಇರಬಹುದಾದ ಗೋಜಲನ್ನು ಸ್ಪಷ್ಟಪಡಿಸಿಕೊಳ್ಳಲು ಸಂದರ್ಶನ ಸಮಿತಿಯು ಪ್ರಯತ್ನಿಸಿತು. ಸಮುದಾಯದ ರೀತಿರಿವಾಜುಗಳನ್ನು ಅಭಿವ್ಯಕ್ತಿಸುವ ಹೆಸರು ನಿಮ್ಮದಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮಠಗಳ ಯತಿಗಳು ತಮ್ಮ ಜಾತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ನಿಮ್ಮ ಮೇಲೇಕೆ ದಾವೆ ಹೂಡಬಾರದೆಂದು ನಮ್ಮನ್ನು ಪ್ರಶ್ನಿಸಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮನ್ನು ಇದ್ದಕ್ಕಿದ್ದಂತೆ ನೌಕರಿಯಿಂದ ವಜಾಗೊಳಿಸಲು ಆಡಳಿತ ಮಂಡಳಿಗೂ ಇಚ್ಛೆಯಿಲ್ಲ. ಹಾಗೆಂದು ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿ ನಿಮ್ಮನ್ನು ಕೆಲಸದಲ್ಲಿ ಮುಂದುವರೆಸುವಂತೆಯೂ ಇಲ್ಲ. ಹದಿನೈದು ದಿನಗಳ ಕಾಲಾವಕಾಶವನ್ನು ನಿಮಗೆ ನೀಡಲಾಗಿದೆ. ಈ ಹದಿನೈದು ದಿನಗಳಲ್ಲಿ ನೀವು ಅರ್ಜಿಯಲ್ಲಿ ನಮೂದಿಸಿರುವ ಸಮುದಾಯಕ್ಕೆ ಸೇರಿದವರೆಂದು ರುಜುವಾತು ಪಡಿಸಬೇಕು ಮತ್ತು ಕಂಪನಿಯ ನೀತಿ ನಿಯಮಗಳು ನಿಮ್ಮ ಮುಖದ ಚಹರೆಯಲ್ಲಿ ಪ್ರತಿಬಿಂಬಿಸಬೇಕು. ಹಾಗೊಂದು ವೇಳೆ ಮೇಲೆ ಉಲ್ಲೇಖಿಸಿದ ಸಂಗತಿಗಳನ್ನು ನೀವು ಸಾಬೀತು ಪಡಿಸದೆ ಹೋದಲ್ಲಿ ಈ ಪತ್ರವನ್ನೇ ನಿಮ್ಮನ್ನು ನೌಕರಿಯಿಂದ ವಜಾಗೊಳಿಸಿದ ಆದೇಶ ಪತ್ರವೆಂದು ಪರಿಗಣಿಸತಕ್ಕದ್ದು’. 

ಆ ರಾತ್ರಿ ಸರಳಾಬಾಯಿಗೆ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತಾಗಿ ನಿದ್ದೆ ಹತ್ತಿರ ಸುಳಿಯದೆ ಅವಳ ಮನಸ್ಸು ಒಂದುರೀತಿಯ ಕ್ಷೋಭೆಯಿಂದ ನರಳಿತು. ರಾತ್ರಿಯೆಲ್ಲ ನಿದ್ದೆಗೆಟ್ಟು ಯೋಚಿಸಿದವಳಿಗೆ ಶೇಷಗಿರಿ ಪುರೋಹಿತನನ್ನು ಪ್ರೇಮಚಂದ ಭೇಟಿ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಭರವಸೆ ಮನಸ್ಸಿನಲ್ಲಿ ಮೂಡಿದ್ದೆ ಅದನ್ನು ಮರುದಿನ ಬೆಳಗ್ಗೆ ಗಂಡನ ಮನವೊಲಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದಳು.

* * *

ಇಪ್ಪತ್ತೈದು  ವರ್ಷಗಳಿಂದ ಶೇಷಗಿರಿ ಪುರೋಹಿತ ಮತ್ತು ಪ್ರೇಮಚಂದ ಕಂಪನಿಯ ಬ್ರ್ಯಾಂಚ್  ಆಫೀಸಿನಲ್ಲಿ ಕೂಡಿಯೇ ಕೆಲಸ ಮಾಡುತ್ತಿದ್ದರೂ ಅವರಿಬ್ಬರ ನಡುವೆ ಹೇಳಿಕೊಳ್ಳುವಂತಹ ಗೆಳೆತನವೇನಿರಲಿಲ್ಲ. ನಗರಸಭೆ ಎಲೆಕ್ಶನ್‌ನಲ್ಲಿ ಕೇಶವರಾವ್ ಸಾಳುಂಕೆ ಅವರ ಅಳಿಯನ ಗೆಲುವಿಗಾಗಿ ತನ್ನ ಸಮುದಾಯದ ಮತಗಳನ್ನು ಕ್ರೋಢಿಕರಿಸುವಲ್ಲಿ ನೆರವಾಗಿದ್ದ ಶೇಷಗಿರಿ ಪುರೋಹಿತ ಆ ಒಂದು ಕಾರಣದಿಂದ ಕಂಪನಿಯ ಮುಖ್ಯಸ್ಥರಿಗೆ ಹತ್ತಿರವಾಗಿದ್ದ. ಅಂತರಂಗದಲ್ಲಿ ಮಾತ್ರವಲ್ಲದೆ ಬಾಹ್ಯನೋಟದಲ್ಲೂ ತನ್ನ ಸಮುದಾಯದ ಎಲ್ಲ ಲಕ್ಷಣಗಳನ್ನು ರೂಢಿಸಿಕೊಂಡಿದ್ದ ಶೇಷಗಿರಿ ಸಮಾಜದಲ್ಲೂ ತಕ್ಕಮಟ್ಟಿಗೆ ಹೆಸರು ಸಂಪಾದಿಸಿದ್ದ. ಬಾಗಿಲು ತೆರೆದು ಹೊರಬಂದ ಶೇಷಗಿರಿ ಪುರೋಹಿತನನ್ನು ಗುರುತಿಸಲು ಪ್ರೇಮಚಂದನಿಗೆ ಕೆಲವು ಕ್ಷಣಗಳೇ ಹಿಡಿದವು. ಸದಾಕಾಲ ಭ್ರೂಮಧ್ಯದಲ್ಲಿ ಪ್ರತಿಷ್ಠಾಪಿತಗೊಂಡಿರುತ್ತಿದ್ದ ಮಂತ್ರಾಕ್ಷತೆ ಸಹಿತ ಉದ್ದನೆಯ ತಿಲಕ, ಹಣೆಯ ಎಡಬಲದಲ್ಲಿ ಗಂಧದಿಂದ ನಿರ್ಮಾತೃಗೊಂಡಿರುತ್ತಿದ್ದ ಶಂಖ ಮತ್ತು ಚಕ್ರ, ತಲೆಯ ಹಿಂಭಾಗದಲ್ಲಿ ದೃಷ್ಟಿಗೆ ಗೋಚರವಾಗುತ್ತಿದ್ದ ಶಿಖೆ ಕಳೆದ ಇಪ್ಪತ್ತೈದು ವರ್ಷಗಳಿಂದ ಶೇಷಗಿರಿ ಪುರೋಹಿತನ ಮುಖಚಹರೆ ಮನಸ್ಸಲ್ಲಿ ಅಚ್ಚೊತ್ತು ನಿಂತಿತ್ತು. ಆದರೆ ಈ ದಿನ ಆ ಪರಿಚಿತ ಚಹರೆ ಬದಲು ಅಪರಿಚಿತ ಚಹರೆ ಎದುರು ನಿಂತಂತೆ ಭಾಸವಾಯಿತು. ಮುಖದಲ್ಲಿ ತಿಲಕ, ಶಂಖ, ಚಕ್ರ ಮಾಯವಾಗಿದ್ದವು. ತಲೆಯ ಹಿಂದಿನ ಶಿಖೆ ತುಂಡಾಗಿತ್ತು.

‘ಬಾರಯ್ಯ ಪ್ರೇಮಚಂದ ಕಾಲಕ್ಕೆ ತಕ್ಕಂತೆ ವೇಷ ಧರಿಸದಿದ್ದರೆ ಬದುಕೋದು ಕಷ್ಟ ಕಣಯ್ಯಾ ಈ ಜಗತ್ತಿನಲ್ಲಿ. ಐದು ವರ್ಷಗಳ ಹಿಂದೆ ಮಧ್ಯಾರಾಧನೆ ದಿನ ಮಠದಿಂದ ಸನ್ಮಾನಿತರಾಗುವವರ ಪಟ್ಟಿಯಲ್ಲಿ ನಿನ್ನ ಹೆಸರು ಸೇರಿಸೊದಕ್ಕ ಹರಸಾಹಸ ಮಾಡಬೇಕಾಯ್ತು. ಕೊನೆಗೂ ಮಠದವರು ನೀನು ನಮ್ಮ ಸಮುದಾಯದವನೇ ಅಲ್ಲ ಅಂತ ಹಟ ಹಿಡಿದು ಪಟ್ಟಿಯಿಂದ ನಿನ್ನ ಹೆಸರು ತೆಗೆದುಬಿಟ್ಟರು. ನಿನ್ನ ಹೆಸರು, ಮುಖದ ಚಹರೆ ಸಮುದಾಯದೊಂದಿಗೆ ಸ್ವಲ್ಪನೂ ಮ್ಯಾಚ್ ಆಗ್ತಿಲ್ಲ. ಈಗ ನೌಕರಿಗೇ ಕಂಟಕ ಬಂದು ಬಿಟ್ಟಿದೆ ಅಲ್ಲೋ ಮಾರಾಯಾ. ನಿನ್ನ ಮರ‍್ಯಾಗ ಯಾವ ಬದಲಾವಣಿನೂ ಕಾಣಿಸ್ತಿಲ್ಲ. ಊರಾಗ ಮುಖಾರವಿಂದ ಅಂತ ಹೊಸ ಅಂಗಡಿ ಬಂದದಂತ. ಅವರು ಎಂಥದ್ದು ಬೇಕು ಅಂಥದ್ದು ಚಹರಾ ರೂಪಿಸಿ ಕೊಡ್ತಾರಂತ. ಚಹರಾ ಬದಲಾವಣೆ ವಿದ್ಯಾ ನನಗ ಸಿದ್ಧಿಸಿರೊದರಿಂದ ನಾನೇನೂ ಆ ಅಂಗಡಿಗಿ ಭೇಟಿ ಕೊಟ್ಟಿಲ್ಲ. ನೀನು ಹೋಗಿ ಒಂದಿಷ್ಟು ಚಹರಾ ಬದಲಾಯಿಸಿಕೊಂಡು ಬಾ’ ಎಂದ ಶೇಷಗಿರಿ ಪುರೋಹಿತ ಅಂಗಡಿಯ ವಿಳಾಸ ಹೇಳಿ ಪ್ರೇಮಚಂದನನ್ನು ಸಾಗುಹಾಕಿದ್ದ.

* * *

ಆಟೋದಿಂದ ಕೆಳಗಿಳಿದ ಪ್ರೇಮಚಂದನ ಕಣ್ಣಿಗೆ ಕಾಮತ್ ಹೋಟೆಲಿನ ಮೇಲಿನ ಅಂತಸ್ತಿನಲ್ಲಿ ತೂಗುಹಾಕಿದ್ದ ಆಳೆತ್ತರದ ‘ಮುಖಾರವಿಂದ’ ಎನ್ನುವ ಬೋರ್ಡ್ ಗೋಚರಿಸಿತು. ಮುಖಾರವಿಂದ ಶೀರ್ಷಿಕೆಯ ಕೆಳಗೆ ಸಣ್ಣ ಅಕ್ಷರಗಳಲ್ಲಿದ್ದ ಬದುಕು ಬದಲಿಸುತ್ತೇವೆ ಎನ್ನುವ ಅಡಿ ಟಿಪ್ಪಣಿ ಪ್ರೇಮಚಂದನನ್ನು ವಿಶೇಷವಾಗಿ ಆಕರ್ಷಿಸಿತು. ಜನನಿಬಿಡ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಆರಂಭಗೊಂಡ ಮಳಿಗೆ ಕಳೆದ ಹದಿನೈದು ದಿನಗಳಿಂದ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದರಿಂದ ರಿಸೆಪ್ಷನ್ ಕೌಂಟರ್‌ನಲ್ಲಿ ಕುಳಿತಿದ್ದ ಮಹಿಳೆ ಪ್ರೇಮಚಂದನನ್ನು ನೋಡುತ್ತಲೇ ಎದ್ದು ನಿಂತು ಸ್ವಾಗತಿಸಿ ಕರೆದೊಯ್ದು ಗೆಸ್ಟ್ ರೂಮಿನಲ್ಲಿ ಕೂಡಿಸಿದಳು. ಈಗಾಗಲೇ ಗೆಸ್ಟ್ ರೂಮಿನಲ್ಲಿ ನಾಲ್ಕೈದು  ಜನ ಮೊದಲೆ ಅಪಾಯಿಂಟ್‌ಮೆಂಟ್ ಪಡೆದು ಮುಖಚಹರೆಯ ಬದಲಾವಣೆಯ ಚಿಕಿತ್ಸೆಗೆಂದು ಬಂದು ಕುಳಿತಿದ್ದರು. ಅಲ್ಲಿ ಪ್ರೊಫೆಸರ್ ಕಾಳಪ್ಪ ಅವರನ್ನು ನೋಡಿ ಪ್ರೇಮಚಂದನಿಗೆ ಅಚ್ಚರಿಯಾಯಿತು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಪ್ರೇಮಚಂದ ಡಿಗ್ರಿ ಓದುತ್ತಿದ್ದಾಗ ಅಲ್ಲಿ ಕಾಳಪ್ಪ ಇಂಗ್ಲಿಷ್ ಬೋಧಿಸುತ್ತಿದ್ದರು. ಯೇಟ್ಸ್, ಶೇಕ್‌ಸ್ಪಿಯರ್, ಕಮೂ, ಕಾಫ್ಕಾರನ್ನು ಬೋಧಿಸುವಾಗಲೆಲ್ಲ ಕಾಳಪ್ಪ ಅಕ್ಷರಶ: ಅವರನ್ನೆಲ್ಲ ತಮ್ಮೊಳಗೆ ಆವಾಹಿಸಿಕೊಂಡಿರುವರೇನೋ ಎಂದು ಭಾಸವಾಗುತ್ತಿತ್ತು. ಬೋದಿಲೇರನ ದಿ ಫ್ಲಾವರ್ಸ್ ಆಫ್ ಈವಿಲ್ ಕವನ ಸಂಕಲನದಿಂದ ಕವಿತೆ ಓದುವಾಗ ಇದೇ ಕಾಳಪ್ಪ ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳೆದುರು ಬಿಕ್ಕಿ ಬಿಕ್ಕಿ ಅತ್ತಿದ್ದು ಇವತ್ತಿಗೂ ಪ್ರೇಮಚಂದನ ಕಣ್ಣಿಗೆ ಕಟ್ಟಿದಂತಿದೆ. ನಿವೃತ್ತರಾಗಿ ಮೂವತ್ತು ವರ್ಷಗಳಾದರೂ ತೊಂಬತ್ತರ ಇಳಿ ವಯಸ್ಸಿನಲ್ಲೂ ಲಾಭಿ ಶಿಫಾರಸುಗಳ ಸಹಾಯದಿಂದ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಭದ್ರವಾಗಿ ವಕ್ಕರಿಸಿಕೊಂಡಿರುವರೆಂದು ಆಗಾಗ ಅವರ ಹಳೆಯ ವಿದ್ಯಾರ್ಥಿಗಳ ಮಾತಿನ ನಡುವೆ ಈ ವಿಷಯ ಚರ್ಚೆಗೆ ಬರುತ್ತಿತ್ತು. 

ಪ್ರೇಮಚಂದ ಹತ್ತಿರ ಹೋಗಿ ನಮಸ್ಕರಿಸಿ ತನ್ನ ಪರಿಚಯ ಹೇಳಿಕೊಂಡ. ಪ್ರೊಫೆಸರ್ ಕಾಳಪ್ಪ ತಮ್ಮ ಗತದ ನೆನಪುಗಳನ್ನು ಉತ್ಖನನಗೊಳಿಸಿ ಅಲ್ಲಿ ಪ್ರೇಮಚಂದನ ಚಿತ್ರಕ್ಕಾಗಿ ಹುಡುಕಾಡಿ ಸೋತರು. ಪ್ರೇಮಚಂದ ತನ್ನ ಬ್ಯಾಚಿನ ನಾಲ್ಕಾರು ವಿದ್ಯಾರ್ಥಿಗಳ ಹೆಸರು ಹೇಳಿದ. ಆಗಲೂ ಪ್ರೊಫೆಸರ್ ನೆನಪು ಕೈಕೊಟ್ಟಿತು. ಈ ನಡುವೆ ವಿಶ್ವವಿದ್ಯಾಲಯಕ್ಕೆ ನಾಮಧಾರಿ ವ್ಯಕ್ತಿ ವೈಸ್‌ಚಾನ್ಸಲರ್‌ರಾಗಿ ಬರುತ್ತಿರುವುದರಿಂದ ತಮ್ಮ ಸ್ಥಾನಕ್ಕೆ ಧಕ್ಕೆ ಉಂಟಾಗಲಿದ್ದು ಅದಕ್ಕೆಂದೆ ಹೊಸ ವೈಸ್‌ಚಾನ್ಸಲರ್ ಸಮುದಾಯದ ಚಹರೆಯನ್ನು ತಮ್ಮ ಮುಖದಲ್ಲಿ ಆವಿರ್ಭವಿಸಿಕೊಳ್ಳಲು ಬಂದಿರುವುದಾಗಿ ಹೇಳಿದರು. ಅಷ್ಟರಲ್ಲಿ ರಿಸೆಪ್ಶನ್ ಕೌಂಟರ್‌ನಲ್ಲಿದ್ದ ಮಹಿಳೆ ಪರಿಣಿತರು ಕರೆಯುತ್ತಿರುವರೆಂದು ಇಬ್ಬರನ್ನೂ ಒಳಗೆ ಕರೆದೊಯ್ದಳು. ಪ್ರೇಮಚಂದ ತನ್ನ ಕಂಪನಿಯ ನಿಯಮಗಳಿದ್ದ ಕೈಪಿಡಿಯನ್ನು ಪರಿಣಿತ ವ್ಯಕ್ತಿಗೆ ಕೊಟ್ಟು ಅವರು ತೋರಿಸಿದ ಕುರ್ಚಿಯಲ್ಲಿ ಕುಳಿತ. ಎದುರಿನ ವಿಶಾಲವಾದ ಕನ್ನಡಿಯಲ್ಲಿ ತನ್ನ ಪಕ್ಕದ ಕುರ್ಚಿಯಲ್ಲಿ ಪ್ರೊಫೆಸರ್ ಕಾಳಪ್ಪ ಕುಳಿತಿರುವುದು ಗೋಚರಿಸಿ ಪ್ರೇಮಚಂದ ಮುಗುಳುನಕ್ಕ. ಕಾಳಪ್ಪನವರ ಮುಖದ ತುಂಬೆಲ್ಲ ಚಿತ್ರವಿಚಿತ್ರವಾದ ಕಾಗದಗಳನ್ನು ಅಂಟಿಸಿದ್ದರಿಂದ ಪ್ರೇಮಚಂದ ತಮ್ಮನ್ನು ನೋಡಿ ಮುಗುಳುನಕ್ಕಿದ್ದು ಅವರ ಗಮನಕ್ಕೆ ಬರಲಿಲ್ಲ.

ಮೂರು ಗಂಟೆಗಳ ಸತತ ಪ್ರಯತ್ನದ ನಂತರವೂ ಪ್ರೇಮಚಂದನ ಮುಖದಲ್ಲಿ ಹೊಸ ಚಹರೆಯನ್ನು ರೂಪಿಸಲು ಪರಿಣಿತರು ವಿಫಲರಾದರು. ಅಚ್ಚರಿಯ ಸಂಗತಿ ಎಂದರೆ ಪ್ರೊಫೆಸರ್ ಕಾಳಪ್ಪನವರ ಮುಖದಲ್ಲಿ ಹೊಸಚಹರೆಯೊಂದು ಆವಿರ್ಭವಿಸಿ ಅವರು ಹೊಸ ವ್ಯಕ್ತಿಯಾಗಿ ಕಾಣಿಸತೊಡಗಿದರು. ಪ್ರೇಮಚಂದನಿಗೆ ಎಲ್ಲವೂ ಅಯೋಮಯವೆನಿಸಿತು. ಅಂಗಡಿಯ ಮುಖ್ಯಸ್ಥ ಪ್ರೇಮಚಂದನನ್ನು ತನ್ನ ಚೇಂಬರಿಗೆ ಕರೆದೊಯ್ದು ಹೇಳಿದ ‘ನಿಮ್ಮಲ್ಲಿ ಯಾವ ಪ್ರಲೋಭನೆಗಳೂ ಇದ್ದಂತೆ ತೋರುತ್ತಿಲ್ಲ. ವೈರಾಗ್ಯವೇ ನಿಮ್ಮ ಮೈ ಮತ್ತು ಮನಸ್ಸನ್ನು ಆವರಿಸಿಕೊಂಡಿರಬಹುದು. ಈ ಕಾರಣದಿಂದ ನಿಮ್ಮ ಮುಖದಲ್ಲಿ ಹೊಸ ಚಹರೆಯನ್ನು ರೂಪಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅದೇ ಪ್ರೊಫೆಸರ್ ಕಾಳಪ್ಪ ಅವರನ್ನು ನೋಡಿ. ಮುಖದ ಸ್ನಾಯುಗಳು ಸಡಿಲುಗೊಂಡು ಚರ್ಮ ಸುಕ್ಕುಗಟ್ಟಿ ಜೊತು ಬಿದ್ದಿದ್ದರೂ ಅವರ ಮುಖದಲ್ಲಿ ಹೊಸ ಚಹರೆ ರೂಪಿಸಲು ಸಾಧ್ಯವಾಯಿತು. ಇದರರ್ಥ ಈ ಇಳಿ ವಯಸ್ಸಿನಲ್ಲೂ ಅವರಲ್ಲಿ ಬತ್ತದ ಮಹತ್ವಾಕಾಂಕ್ಷೆ ಇದೆ, ಪ್ರಶಸ್ತಿ ಗೌರವಗಳ ವಾಂಛೆ ಇದೆ, ಬೇರೆಯವರನ್ನು ತುಳಿದಾದರೂ ಸರಿ ತಾನು ಬೆಳೆಯಬೇಕೆಂಬ ಹಂಬಲವಿದೆ ಎಂದು. ಈ ಗುಣಗಳಿಂದಾಗಿ ಅವರ ಮುಖದಲ್ಲಿ ಹೊಸ ಚಹರೆ ಹುಟ್ಟಲು ಕೇವಲ ಅರ್ಧಗಂಟೆ ಸಾಕಾಯಿತು’.

* * *

ಉಪಸಂಹಾರ: ಸಂದರ್ಶನ ಸಮಿತಿಯು ಪತ್ರದಲ್ಲಿ ಉಲ್ಲೇಖಿಸಿದ ಸಂಗತಿಗಳನ್ನು ಸಾಬೀತು ಪಡಿಸಲು ವಿಫಲನಾದ ಹಿನ್ನೆಲೆಯಲ್ಲಿ ಕಂಪನಿಯು ಪ್ರೇಮಚಂದನನ್ನು ನೌಕರಿಯಿಂದ ವಜಾಗೊಳಿಸಿದೆ. ಮಠವೊಂದರ ಆಡಳಿತ ಮಂಡಳಿಯು ಜಾತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೋರ್ಟಿನಲ್ಲಿ ದಾವೆ ಹೂಡಿದೆ. ಸರಳಾಬಾಯಿಯ ಆತಂಕ ದಿನೆದಿನೆ ಹೆಚ್ಚುತ್ತಿದ್ದು ಗಂಡನ ಮುಖದಲ್ಲಿ ಹೊಸ ಚಹರೆ ಆವಿರ್ಭವಿಸುವ ಕ್ಷಣಕ್ಕಾಗಿ ಕಾತುರದಿಂದ ಕಾದುಕುಳಿತಿದ್ದಾಳೆ. ಈ ನಡುವೆ ಶೇಷಗಿರಿ ಪುರೋಹಿತನ ಸಲಹೆಯಂತೆ ಸರಳಾಬಾಯಿ ಗಂಡನ ಹೆಸರನ್ನು ಬದಲಿಸುವ ಸಾಧ್ಯವಾದರೆ ಮುಖದಲ್ಲಿ ಕೃತಕ ಚಹರೆ ಸೃಷ್ಟಿಸಲು ಶಸ್ತ್ರಚಿಕಿತ್ಸೆ ಮಾಡಿಸುವ ಹವಣಿಕೆಯಲ್ಲಿರುವಳು. ಈ ಎಲ್ಲ ಆತಂಕ, ಗೊಂದಲಗಳ ನಡುವೆಯೂ ಪ್ರೇಮಚಂದ ಹೊಸ ನೌಕರಿ ಹುಡುಕುತ್ತ ಓದು ಬರಹದಲ್ಲಿ ತೊಡಗಿಸಿಕೊಂಡು ನೆಮ್ಮದಿಯಿಂದಿರುವನು.

* * *

-ರಾಜಕುಮಾರ ಕುಲಕರ್ಣಿ