Wednesday, March 1, 2023

ವೃತ್ತಿಗೌರವ ಮತ್ತು ಅನುಚಿತ ವರ್ತನೆ

  


   

(೨೨.೧೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

     ಶಿಕ್ಷಕನೋರ್ವ ಹತ್ತು ವರ್ಷದ ಬಾಲಕನ ಮೇಲೆ ಕಬ್ಬಿಣದ ಸಲಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದ ವಿಷಯ ಓದಿ ದಿಗ್ಭ್ರಮೆಯಾಯಿತು. ತಮಸೋಮಾ ಜ್ಯೋತಿರ್ಗಮಯ ಎಂದು ವಿದ್ಯಾರ್ಥಿಗಳನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಕೈಹಿಡಿದು ಕರೆದೊಯ್ದು ಮಾದರಿಯಾಗಬೇಕಾದ ಶಿಕ್ಷಕನೇ ಕ್ರೌರ್ಯ ಮೆರೆದು ಇಡೀ ಶಿಕ್ಷಕ ಸಮೂಹಕ್ಕೆ ಕಳಂಕ ತಂದಿರುವನು. ಶಿಕ್ಷಕರ ಇಂತಹ ಅಸಂಗತ ವರ್ತನೆಗಳು ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗುತ್ತಿವೆ. ಕೆಲವು ದಿನಗಳ ಹಿಂದೆ ಕಾಮುಕ ಶಿಕ್ಷಕ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯರ ವಸತಿ ಗೃಹಕ್ಕೆ ಹೋಗಿ ಏಟುತಿಂದ ಪ್ರಕರಣ ವರದಿಯಾಗಿತ್ತು. ವಿದ್ಯಾರ್ಥಿಗಳ ಮೇಲೆ ಲೈಗಿಂಕ ದೌರ್ಜನ್ಯ, ದೈಹಿಕವಾಗಿ ಹಿಂಸಿಸುವುದು, ಅಸಭ್ಯ ಮಾತುಗಳನ್ನಾಡುವುದು ಇಂಥ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಶಿಕ್ಷಕರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.  

ಶಿಕ್ಷಕ ವೃತ್ತಿ ಅತ್ಯಂತ ಗೌರವದ ವೃತ್ತಿಯಾಗಿದೆ. ಭಾರತದ ಈ ನೆಲದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ನೀಡಲಾಗಿದೆ. `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಗುರುವನ್ನು ಅತೀ ಎತ್ತರದ ಸ್ಥಾನದಲ್ಲಿ ಕೂಡಿಸಿ ಹಾಡಿದ ನಾಡಿದು. `ಮುಂದೆ ಗುರಿ ಇರಲು ಹಿಂದೆ ಗುರುವಿರಲು ನಡೆ ಮುಂದೆ ನುಗ್ಗಿ ನಡೆ ಮುಂದೆ’ಎಂದು ಗುರುವಿನ ಮೇಲೆ ಅಚಲ ಮತ್ತು ಅಪರಿಮಿತ ವಿಶ್ವಾಸವಿರಿಸಿದ ನೆಲವಿದು. ಹರ ಮುನಿದರೂ ಗುರು ಕಾಯುವನು ಎನ್ನುವಷ್ಟು ನಂಬಿಕೆ ಗುರುವಿನ ಮೇಲೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಮಕ್ಕಳನ್ನು ಅರಮನೆಯ ಸುಖ ವೈಭೋಗದಿಂದ ದೂರವಾಗಿಸಿ ಗುರುಗಳ ಆಶ್ರಯದಲ್ಲಿ ಬಿಡುತ್ತಿದ್ದರು. ಕರ್ಣ, ಏಕಲವ್ಯನಂಥ ಮಹಾಯೋಧರು ವಿದ್ಯೆಗಾಗಿ ಗುರುವನ್ನು ಹುಡುಕುತ್ತ ಅಲೆದದ್ದು ಗುರುವಿನ ಪ್ರಾಮುಖ್ಯತೆಗೊಂದು ಉದಾಹರಣೆ.

`ವಿದ್ಯೆ ಕಲಿಸದ ಗುರು, ಬುದ್ಧಿ ಹೇಳದ ತಂದೆ, ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು’ ಎಂದು  ಸರ್ವಜ್ಞ ಗುರುವಿಗೆ ತಂದೆ-ತಾಯಿಗಳಷ್ಟೇ ಮಹತ್ವದ ಜವಾಬ್ದಾರಿ ನೀಡಿರುವುದು ಶಿಕ್ಷಕ ವೃತ್ತಿಯ ಘನತೆಗೊಂದು ದೃಷ್ಟಾಂತ. ಹಿಂದೆಲ್ಲ ಗುರುವಿಗೆ ತನ್ನ ಶಿಷ್ಯನ ಶ್ರೇಯೋಭಿವೃದ್ಧಿಯೇ ಮುಖ್ಯವಾಗಿರುತ್ತಿತ್ತು. ಗುರುವಾದವನಿಗೆ ಶಿಷ್ಯ ತನ್ನನ್ನೂ ಮೀರಿ ಬೆಳೆಯಬೇಕೆಂಬ ಉತ್ಕಟ ಹಂಬಲ. ಗುರು-ಶಿಷ್ಯ ಪರಂಪರೆ ಈ ನೆಲದ ಉತ್ಕೃಷ್ಟ ಸಂಸ್ಕೃತಿ. ಈ ಪರಂಪರೆ ಅನೇಕ ದೇಶಗಳಿಗೆ ಮಾದರಿಯಾಗಿದೆ. ಈ ಸಂಸ್ಕೃತಿಯ ಪ್ರಭಾವದ ಕಾರಣ ಅನ್ಯ ರಾಷ್ಟ್ರಗಳ ಅನೇಕ ವಿದ್ಯಾರ್ಥಿಗಳು ಗುರುವನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದು. `ಭಾರತದಲ್ಲಿ ನಾನು ಪಾದ ಮುಟ್ಟಿ ನಮಸ್ಕರಿಸುವುದು ನನಗೆ ಗುರು ಸಮಾನರಾದ ಶ್ರೀಧರನ್ ಅವರಿಗೆ ಮಾತ್ರ. ನಾನು ಆ ಗುರುವಿನ ಪಾದವನ್ನು ಕೈಯಿಂದ ಸ್ಪರ್ಷಿಸಿದರೆ ಸಾಲದು ನನ್ನ ತಲೆಯನ್ನೆ ಅವರ ಪಾದಕ್ಕೆ ಮುಟ್ಟಿಸಬೇಕು’ ಎಂದು ಅಮೇರಿಕಾ ದೇಶದ ಇಂಜಿನಿಯರ್ ಹೇಳಿದ ಮಾತು ಈ ದೇಶದಲ್ಲಿ ಗುರುವಿನ ಸ್ಥಾನಕ್ಕಿರುವ ಪ್ರಾಮುಖ್ಯತೆಗೊಂದು ಅನನ್ಯ ಉದಾಹರಣೆ.

ಶಿಕ್ಷಕನಾದವನು ಕ್ರೌರ್ಯ, ಹಿಂಸೆ, ದ್ವೇಷಗಳಂಥ ಮಾನವ ವಿರೋಧಿ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸರಿಯಲ್ಲ. ಶಿಕ್ಷಕ ಬದುಕಿನ ಕಹಿಯನ್ನು ಮನದಾಳದಲ್ಲಿ ಉಳಿಸಿಕೊಂಡು ಕೇಡು ಬಯಸುವ ವ್ಯಕ್ತಿಯಾಗಬಾರದು. ಬದುಕಿನ ಸಿಹಿಯನ್ನು ಸಂತೋಷದಿಂದ ಹಂಚಿಕೊಳ್ಳುವ ಮನಸ್ಸು ಶಿಕ್ಷಕನದ್ದಾಗಿರಬೇಕು. ಅಗ್ರಹಾರ ಕೃಷ್ಣಮೂರ್ತಿ `ನನ್ನ ಮೇಷ್ಟ್ರು’ ಲೇಖನದಲ್ಲಿ ಆದರ್ಶ ಶಿಕ್ಷಕರಾಗಿ ಜಿ.ಎಸ್.ಶಿವರುದ್ರಪ್ಪನವರ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ಚಿತ್ರಿಸಿರುವರು. ಅಗ್ರಹಾರ ಕೃಷ್ಣಮೂರ್ತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಒಂದು ಘಟನೆ ನಡೆಯಿತು. ಆಗ ಡಾ.ಶಿವರುದ್ರಪ್ಪ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಅವಧಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಅಗ್ರಹಾರ ಕೃಷ್ಣಮೂರ್ತಿ ಮತ್ತು ಜಿ.ಎಸ್.ಎಸ್ ನಡುವೆ ಸಣ್ಣ ಜಗಳವಾಯಿತು. ಶಿವರುದ್ರಪ್ಪನವರಿಗೆ ನೋವಾಗುವಂತೆ ಅಗ್ರಹಾರ ವರ್ತಿಸಿದರು. ಈ ಘಟನೆಯಿಂದ ಅಗ್ರಹಾರ ಕೃಷ್ಣಮೂರ್ತಿ ಎಂ.ಎ ಪದವಿ ಗಳಿಸುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಈ ಕುರಿತು  ಕೃಷ್ಣಮೂರ್ತಿ ಅವರಿಗೂ ಹೆದರಿಕೆ ಇತ್ತು. ಆದರೆ ಪರೀಕ್ಷೆಯ ಫಲಿತಾಂಶ ಬಂದಾಗ ಅವರು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು. ಅದಾದ ಎಷ್ಟೋ ತಿಂಗಳುಗಳ ನಂತರ ಕೃಷ್ಣಮೂರ್ತಿ ಗುರುಗಳಿಗೆ ಪತ್ರ ಬರೆದು ತಮ್ಮ ಅಂದಿನ ಅವಿವೇಕದ ವರ್ತನೆಯನ್ನು ಪ್ರಸ್ತಾಪಿಸಿ ಕ್ಷಮೆ ಕೇಳಿದ್ದರು. ಆಗ ಶಿವರುದ್ರಪ್ಪನವರಿಂದ ಬಂದ ಉತ್ತರ ಹೀಗಿತ್ತು `ನೀವು ನಿಮ್ಮ ವಿದ್ಯಾರ್ಥಿ ಜೀವನದ ಅವಿವೇಕದ ವರ್ತನೆಗಳ ಬಗ್ಗೆ ಪ್ರಸ್ತಾಪಿಸಿದ್ದಿರಿ. ನನಗೆ ಅವೆಲ್ಲಾ ನೆನಪಿನಲ್ಲೆ ಇಲ್ಲ. ನೀವು ಯಾವ ತಪ್ಪನ್ನೂ ಮಾಡಿಲ್ಲ. ಒಂದು ವಯಸ್ಸಿನಲ್ಲಿ ಒಂದೊಂದು ರೀತಿಯಿಂದ ನಡೆದು ಕೊಳ್ಳುವುದು ತೀರಾ ಸಹಜ. ವೈಪರಿತ್ಯಗಳು, ವೈವಿಧ್ಯತೆಗಳು ಇದ್ದರೇ ಅದು ಜೀವಂತಿಕೆಯ ಲಕ್ಷಣ’.

ಶಿಕ್ಷಕ ವೃತ್ತಿಯ ಘನತೆಯನ್ನು ಭೈರಪ್ಪನವರು ತಮ್ಮ ಆತ್ಮಕಥೆಯಲ್ಲಿ ವಿವರಿಸುವುದು ಹೀಗೆ ‘ಅಧ್ಯಾಪಕತನವೂ ಒಂದು ವೃತ್ತಿ ನಿಜ. ಬ್ಯಾಂಕ್ ನೌಕರನು, ರೈಲ್ವೆ ನೌಕರನು, ಫ್ಯಾಕ್ಟರಿ ಎಂಜಿನಿಯರನು ನನ್ನ ಕೆಲಸದ ವೇಳೆಯ ನಂತರ ನಾನೇನು ಮಾಡುತ್ತೇನೆಂದು ಕೇಳುವ ಅಧಿಕಾರ ನಿನಗಿಲ್ಲ ಎಂದರೂ ನಡೆದೀತು. ಆದರೆ ಇದೇ ಮಾತನ್ನು ಹೇಳುವ ಅಧಿಕಾರ ಅಧ್ಯಾಪಕನಿಗಿಲ್ಲ. ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ. ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ಸ್ವಾತಂತ್ರ್ಯ ಮತ್ತು ಬೋಧನಾ ಶಕ್ತಿಗಳಿಂದ’. 

ಇಂದು ಅಪ್ರಾಮಾಣಿಕರು ಮತ್ತು ಅನೀತಿವಂತರಿಂದ ಶಿಕ್ಷಕ ವೃತ್ತಿ ಸಮಾಜದಲ್ಲಿ ತನ್ನ ಮೊದಲಿನ ಗೌರವವನ್ನು ಕಳೆದುಕೊಳ್ಳುತ್ತಿದೆ. ಶಾಲೆಯಲ್ಲಿ ಪಾಠ ಮಾಡಬೇಕಾದ ಶಿಕ್ಷಕರು ಪಡೆಯುತ್ತಿರುವ ಅತ್ಯಾಕರ್ಷಕ ಸಂಬಳದ ಹೊರತಾಗಿಯೂ ಹಣಗಳಿಸುವ ಬೇರೆ ಬೇರೆ ದಂಧೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳೊಡನೆ ಅನುಚಿತವಾಗಿ ವರ್ತಿಸುತ್ತ ಶಿಕ್ಷಕನ ಸ್ಥಾನಕ್ಕೆ ಕಪ್ಪುಮಸಿ ಬಳಿಯುತ್ತಿರುವರು. ಆದರ್ಶ ಶಿಕ್ಷಕರು ಇಲ್ಲವೆಂದಲ್ಲ. ಆದರೆ ಅಂಥ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಇವತ್ತಿನ ಶಿಕ್ಷಣ ಕ್ಷೇತ್ರದ ಬಹುಮುಖ್ಯ ಸಮಸ್ಯೆಯಾಗಿದೆ. 

-ರಾಜಕುಮಾರ ಕುಲಕರ್ಣಿ