Monday, September 16, 2019

ಕೊನೆಯ ಅಂಕ (ಕಥೆ)

           ‘ಮೂವತ್ತು ವರ್ಷಗಳಾಯ್ತು ನಿನ್ನಕೂಡ ಬಾಳ್ವೆ ಮಾಡ್ಲಿಕತ್ತು. ಒಂದು ಸೀರೆ ಅನ್ಲಿಲ್ಲ, ಒಂದು ಒಡವೆ ಅನ್ಲಿಲ್ಲ. ಈ ಬದಕನ್ಯಾಗ ನಾಕು ಮಕ್ಕಳನ್ನ ಹೆತ್ತಿದ್ದೊಂದೆ ಬಂತು ನಿನ್ನಿಂದ ಯಾವ ಸಿಂಗಾರನೂ ಕಾಣ್ಲಿಲ್ಲ. ಸಂಸಾರ ಕಟ್ಕೊಂಡು ಊರೂರು ತಿರುಗೋದು ಈ ಜೀವಕ್ಕೂ ಬ್ಯಾಸರ ಆಗ್ಯಾದಾ. ಮಕ್ಕಳಿಗೊಂದು ಉದ್ಯೋಗ ಇಲ್ಲ ತಲಿಮ್ಯಾಲ ಸೂರಿಲ್ಲ. ಈ ನಾಟಕದ ಕಂಪನಿನೇ ನೆಚ್ಚಿಕೊಂಡು ಕೂತರ ನಾವು ಬದುಕಿದಾಂಗ. ಮಕ್ಕಳನ್ನ ಕರಕೊಂಡು ನಾ ಹೋಗ್ತಿದ್ದೀನಿ. ಎಂದಾದರೂ ನಮ್ಮ ನೆನಪಾದರ ಹುಡ್ಕೊಂಡು ಬಾ’ ಹೆಂಡತಿ ಕಮಲಾಬಾಯಿಯ ಮಾತುಗಳು ಬೇಡವೆಂದರೂ ಮತ್ತೆ ಮತ್ತೆ ನೆನಪಾಗಿ ಚೆನ್ನಬಸಣ್ಣ ಕುಗ್ಗಿಹೋಗುತ್ತಿದ್ದ. ರಾತ್ರಿ ಝಗಮಗಿಸುವ ಬೆಳಕು, ಕಲಾವಿದರ ಸಂಭ್ರಮ, ಪ್ರೇಕ್ಷಕರ ಹರ್ಷೋದ್ಘಾರಗಳಿಂದ ಜೀವಕಳೆಯಾಗಿ ನಳನಳಿಸುತ್ತಿದ್ದ ನಾಟಕದ ಥೇಟರ್ ಹಗಲಾದರೆ ಬೇಸಿಗೆಯ ಭೂಮಿಯಂತೆ ಜೀವಕಳೆ ಇಲ್ಲದೆ ಮಂಕಾಗಿ ಕಾಣಿಸುತ್ತಿತ್ತು. ರಾತ್ರಿಯ ನಾಟಕ ಪ್ರದರ್ಶನದಿಂದ ದಣಿದಿದ್ದ ಕಲಾವಿದರು ಅಲ್ಲಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದ ಸದ್ದು ಚೆನ್ನಬಸಣ್ಣನ ಕಿವಿಗೆ ಬಂದು ಅಪ್ಪಳಿಸುತ್ತ ಅವನಿಂದ ನಿದ್ದೆಯನ್ನು ಕಸಿದೊಯ್ಯುತ್ತಿರುವಂತೆ ಭಾಸವಾಗುತ್ತಿತ್ತು. ಬದುಕಿನ ಹಲವು ಮಗ್ಗುಲುಗಳನ್ನು ನೋಡಿದ ಅನುಭವದ ಬದುಕು ಚೆನ್ನಬಸಣ್ಣನದು. ಕಮಲಾಬಾಯಿ ಹರೆಯಕ್ಕೆ ಬಂದ ತನ್ನ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಕಂಪನಿ ಬಿಟ್ಟು ಹೋಗಿ ಇವತ್ತಿಗೆ ಒಂದು ವಾರ ಕಳೆದೋಯ್ತು. ಚೆನ್ನಬಸಣ್ಣನ ‘ಮೈಲಾರಲಿಂಗೇಶ್ವರ ನಾಟಕ ಮಂಡಳಿ’ ಬದಾಮಿಗೆ ಬನಶಂಕರಿ ಜಾತ್ರೆಗೆಂದು ಬಂದು ಇಲ್ಲಿ ಠಿಕಾಣಿ ಹೂಡಿ ಇಪ್ಪತ್ತು ದಿನಗಳಾದವು. ಇನ್ನು ಹತ್ತು ದಿನಗಳಲ್ಲಿ ಜಾತ್ರೆ ಮುಗಿದದ್ದೆ ಹೊಟ್ಟೆಪಾಡಿಗಾಗಿ ಬೇರೆ ಊರನ್ನು ಅರಸಿ ಹೊರಡಬೇಕಾದ ಅನಿವಾರ್ಯತೆ ಈ ನಾಟಕ ಕಲಾವಿದರದು. ಜಾತ್ರೆಗೆಂದೇ ಪ್ರತಿರಾತ್ರಿ ಎರಡೆರಡು ಆಟಗಳನ್ನಾಡುತ್ತಿದ್ದರೂ ಕಲೆಕ್ಶನ್ ಮಾತ್ರ ಮೊದಲಿನಂತಾಗುತ್ತಿಲ್ಲ ಎನ್ನುವ ಬೇಸರ ನಾಟಕ ಕಂಪನಿಯ ಎಲ್ಲ ಕಲಾವಿದರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿತ್ತು. ಒಂದುವಾರದ ಹಿಂದೆ ರಾತ್ರಿ ಎರಡನೆ ಆಟ ಮುಗಿದದ್ದೆ ನಾಟಕದಲ್ಲಿ ಕುಂಟನ ಪಾತ್ರ ಮಾಡುತ್ತಿದ್ದ ಶಂಕ್ರೆಪ್ಪ ಊರಲ್ಲಿ ಅವ್ವನಿಗೆ ಹುಷಾರಿಲ್ಲವೆಂದು ಹೊರಟು ನಿಂತಿದ್ದ. ಹಲವು ವರ್ಷಗಳಿಂದ ಕಷ್ಟ ಸುಖದಲ್ಲಿ ಜೊತೆಗಿದ್ದ ಸ್ನೇಹಿತ ಅವನು. ಅವನ ಊರಿಗೆ ಹೋದಾಗಲೆಲ್ಲ ನನ್ನನ್ನೂ ಮಗನಂತೆ ಕಂಡ ಹಿರಿಯಜೀವ ಹಾಸಿಗೆ ಹಿಡಿದು ಸಂಕಟ ಪಡುತ್ತಿರುವಾಗ ಮನಸ್ಸು ಕೇಳಲಿಲ್ಲ. ಯಾವುದಕ್ಕೂ ಇರಲಿ ಅಂತ ಅವತ್ತಿನ ಎರಡೂ ಪ್ರದರ್ಶನಗಳಿಂದ ಬಂದ ಹಣವನ್ನು ಬೇಡವೆಂದರೂ ಅವನ ಕಿಸೆಗೆ ತುರುಕಿ ಕಳುಹಿಸಿದ್ದೇ ತಪ್ಪಾಗಿ ಕಾಣಿಸಿತು ಹೆಂಡತಿ ಮಕ್ಕಳಿಗೆ. ಎಷ್ಟೆಂದರೂ ತಾವು ಕಂಪನಿಯ ಮಾಲೀಕರು ಎನ್ನುವ ಭಾವ ಅವರದು. ತನಗಾದರೂ ಈ ನಾಟಕ ಕಂಪನಿಯ ಮೇಲೆ ಯಾವ ಹಕ್ಕಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡ ಚೆನ್ನಬಸಣ್ಣನ ಮುಖದಲ್ಲಿ ವಿಚಿತ್ರವಾದ ನಗೆಯ ಎಳೆಯೊಂದು ಮೂಡಿ ಕೆಲವು ಕ್ಷಣಗಳ ಕಾಲ ನೆಲೆನಿಂತು ಮಾಯವಾಯಿತು. 

     ಸಾಕುತಾಯಿ ಚಂದ್ರಾಬಾಯಿ ಕೈಹಿಡಿಯದಿದ್ದರೆ ನನ್ನ ಬಾಳು ಏನಾಗುತ್ತಿತ್ತು ಎನ್ನುವ ಪ್ರಶ್ನೆ ಮನಸ್ಸಲ್ಲಿ ಹೊಕ್ಕು ಅರೆಕ್ಷಣ ಚೆನ್ನಬಸಣ್ಣನನ್ನು ಕಳವಳಗೊಳಿಸಿತು. ಆಗ ಮೈಲಾರಲಿಂಗೇಶ್ವರ ನಾಟಕ ಮಂಡಳಿ ಗದಗಿನಲ್ಲಿ ಠಿಕಾಣಿ ಹೂಡಿತ್ತಂತೆ. ಜಾತ್ರೆ ಎಂದು ಎರಡೆರಡು ಪ್ರದರ್ಶನಗಳನ್ನು ಆಡಿ ನಾಟಕ ಮಂಡಳಿಯವರೆಲ್ಲ ದಣಿದು ನಿದ್ದೆಗೆ ಜಾರಿದ ಹೊತ್ತು. ಕೋಳಿ ಕೂಗುವ ಸಮಯಕ್ಕೆ ಸರಿಯಾಗಿ ಸಮೀಪದಲ್ಲೆಲ್ಲೊ ಮಗುವೊಂದು ಅಳುವ ಸದ್ದಿಗೆ ಚಂದ್ರಾಬಾಯಿಗೆ ಎಚ್ಚರವಾಗಿದೆ. ಕಿವಿಗೊಟ್ಟು ಆಲಿಸುತ್ತಿದ್ದವಳಿಗೆ ಆ ಅಳುವಿನ ಶಬ್ದ ತೀರ ಹತ್ತಿರದಲ್ಲಿದೆಯೆಂದು ಭಾಸವಾಗಿ ಹೊರಗೆ ಬಂದು ನೋಡಿದವಳಿಗೆ ರಂಗಸ್ಥಳದ ಮಧ್ಯದಲ್ಲಿ ಬಟ್ಟೆಯಲ್ಲಿ ಸುತ್ತಿದ ಮಗುವೊಂದು ಕಣ್ಣಿಗೆ ಬಿದ್ದಿದೆ. ಅದೆ ಆಗ ಜನಿಸಿದಂತೆ ಕಾಣುವ ಕೆಂಪು ಕೆಂಪಾಗಿರುವ ಚಿವುಟಿದರೆ ರಕ್ತ ಬರುವಂತಿರುವ ಮಗುವನ್ನು ನೋಡಿದ್ದೆ ಚಂದ್ರಾಬಾಯಿಯ ಕರಳು ಚುರಕ್ಕೆಂದು ಮಗುವನ್ನು ಎತ್ತಿಕೊಂಡು ಎದೆಗವಚಿಕೊಂಡವಳಲ್ಲಿ ಮಾತೃತ್ವದ ಭಾವ ಸ್ಪುರಿಸಲಾರಂಭಿಸಿ ಅದು ತನ್ನದೇ ಮಗುವೆನ್ನುವಂತೆ ಕಣ್ಣಿಂದ ಆನಂದಭಾಷ್ಪ ಹರಿಯಲಾರಂಭಿಸಿತು. ಕತ್ತಲು ನಿಧಾನವಾಗಿ ಕರಗುತ್ತ ಬೆಳಕು ತನ್ನ ಆಧಿಪತ್ಯ ಸ್ಥಾಪಿಸುತ್ತಿದ್ದಂತೆ ನಾಟಕದ ಡೇರೆಯ ಸುತ್ತ ಎಷ್ಟು ಹುಡುಕಾಡಿದರೂ ಜನ್ಮ ನೀಡಿದವಳ ಸುಳಿವಿಲ್ಲ. ತನ್ನ ಒಂಟಿ ಬಾಳಿಗೆ ಆಸರೆಯಾಗಿ ಆ ದೇವರೆ ಕರುಣಿಸಿದ ವರಪ್ರಸಾದವೆಂದು ಭಾವಿಸಿದ ಚಂದ್ರಾಬಾಯಿ ಮಗುವಿಗೆ ಚೆನ್ನಬಸಣ್ಣನೆಂದು ತನ್ನ ಅಪ್ಪನ ಹೆಸರಿಟ್ಟು ಹೊಸ ಬದುಕನ್ನು ನೀಡಿದವಳು ಮುಂದೆ ಕಂಪನಿಯನ್ನು ಅವನ ಕೈಗಿತ್ತು ಜೀವನಕ್ಕೊಂದು ಭದ್ರತೆ ಒದಗಿಸಿದಳು. ಯೌವನದ ದಿನಗಳಲ್ಲಿ ಹಡೆದವ್ವನ ನೆನಪಾದಾಗಲೆಲ್ಲ ಕಣ್ಣೆದುರು ಬಂದರೆ ಅವಳನ್ನು ಕಡಿದು ಹಾಕುವಷ್ಟು ಕೋಪ ಬರುತ್ತಿತ್ತು ಚೆನ್ನಬಸಣ್ಣನಿಗೆ. ಕಾಲಕ್ರಮೇಣ ಹಡೆದವ್ವನ ಮೇಲಿನ ದ್ವೇಷ ಕಡಿಮೆಯಾಗುತ್ತ ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಮನಸ್ಸೂ ಮಾಗತೊಡಗಿತು. ಪಾಪ ಅವಳಾದರೂ ಏನು ಮಾಡಬೇಕಿತ್ತು. ಯಾವನೋ ಮದುವೆಯಾಗುತ್ತೆನೆಂದು ನಂಬಿಸಿ ವಂಚಿಸಿರಬಹುದು. ನನ್ನನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಮಾಜಕ್ಕೆ ಅಂಜಿ ಬದುಕಿದ ಆ ಜೀವ ಒಂಬತ್ತು ತಿಂಗಳು ಅದೆಷ್ಟು ಸಂಕಟಪಟ್ಟಿರಬಹುದು ಎಂದು ಈಗ ನೆನಪಾದಾಗಲೆಲ್ಲ ಹೊಟ್ಟೆಯಲ್ಲಿ ವಿಚಿತ್ರ ಸಂಕಟದ ಅನುಭವವಾಗುತ್ತದೆ. ಹಳೆಯದೆಲ್ಲ ನೆನಪಾಗಿ ಚೆನ್ನಬಸಣ್ಣನ ಕಣ್ಣುಗಳು ಒದ್ದೆಯಾದವು. 

     ಪಾಪ ಚಂದ್ರಾಬಾಯಿದಾದರೋ ಪರಿತ್ಯಕ್ತ ಬದುಕು. ಮದುವೆಯಾದ ನಾಲ್ಕು ತಿಂಗಳಿಗೇ ನಾಟಕದವಳೆಂದು ಗಂಡನ ಮನೆಯಿಂದ ಹೊರದಬ್ಬಿಸಿಕೊಂಡ ಚಂದ್ರಾಬಾಯಿಗೆ ಅಭಿನಯವೇ ಉಸಿರಾಗಿತ್ತು. ಅಪ್ಪ ಕಟ್ಟಿದ ನಾಟಕ ಮಂಡಳಿ ಅವಳ ಬದುಕಿಗಾಧಾರವಾಗಿತ್ತು. ಗಂಡನ ಮನೆಯಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಅಪ್ಪನ ಸಾವಿನ ನಂತರ ಮುಚ್ಚಿದ್ದ ನಾಟಕ ಕಂಪನಿಯನ್ನು ಮತ್ತೆ ಕಟ್ಟುವಲ್ಲಿ ಚಂದ್ರಾಬಾಯಿ ಸಫಲಳಾದಳು. ಹೋದಕಡೆಯಲ್ಲೆಲ್ಲ ನಾಟಕಗಳು ತುಂಬಿದ ಪ್ರೇಕ್ಷಕರಿಂದ ಪ್ರದರ್ಶನಗೊಳ್ಳತೊಡಗಿದವು. ಒಂಟಿ ಬದುಕು ಬೇಸರವೆನಿಸುತ್ತಿತ್ತು. ತನ್ನ ಬದುಕು ಈ ದುಡಿಮೆ ಯಾರಿಗಾಗಿ ಎನ್ನುವ ಪ್ರಶ್ನೆ ಚಂದ್ರಾಬಾಯಿಯನ್ನು ಆಗಾಗ ಬದುಕಿಗೆ ವಿಮುಖಳನ್ನಾಗಿಸುತ್ತಿತ್ತು. ಕಂಪನಿಯನ್ನೇ ನಂಬಿರುವ ಕುಟುಂಬಗಳ ಜೀವನ ನಿರ್ವಹಣೆಗಾಗಿ ಆದರೂ ತಾನು ಬದುಕಬೇಕೆನ್ನುವ ಛಲವೇ ಅವಳಲ್ಲಿ ಆತ್ಮಸ್ಥೈರ್ಯವನ್ನು ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುತ್ತಿತ್ತು. ಒಂಟಿತನ ಬದುಕನ್ನು ಭಾದಿಸುತ್ತಿರುವ ಹೊತ್ತಲ್ಲೇ ಆ ದೇವರು ಕರುಣಿಸಿ ಅನಾಥ ಮಗುವನ್ನು ಅವಳ ಮಡಿಲಿಗೆ ಹಾಕಿದ್ದ. ಕೂಸಿನ ಆಗಮನದಿಂದ ಭರವಸೆ ಕಳೆದುಕೊಂಡಿದ್ದ ಚಂದ್ರಾಬಾಯಿಯ ಬದುಕಲ್ಲಿ ಮತ್ತೆ ಬಣ್ಣ ತುಂಬತೊಡಗಿತು. ಯಾರು ಯಾರಿಗೆ ದಿಕ್ಕಾದೆವು ಎನ್ನುವ ಪ್ರಶ್ನೆ ಚೆನ್ನಬಸಣ್ಣನ ಮನಸ್ಸಿನಲ್ಲಿ ಅನೇಕ ಸಂದರ್ಭಗಳಲ್ಲಿ ಹಾದು ಹೋಗಿ ಅದು ಇವತ್ತಿಗೂ ಉತ್ತರವೇ ಇಲ್ಲದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. 

      ನನ್ನ ಬದುಕಿನಲ್ಲಿ ರಂಗಸ್ಥಳವೇ ಪಾಠಶಾಲೆಯಾಯಿತು. ಹಗಲು ಹೊತ್ತಿನಲ್ಲಿ ನಾಟಕದ ತಾಲೀಮು, ರಾತ್ರಿಯಾದರೆ ನಾಟಕ ಪ್ರದರ್ಶನ. ಊರೂರು ಅಲೆದಾಟ. ಅವಶ್ಯಕತೆ ಎದುರಾದಾಗಲೆಲ್ಲ ಬಾಲನಟನಾಗಿ ಅಭಿನಯ. ಬದುಕು ಎಲ್ಲಿಯೂ ಸ್ಥಿರವಾಗಿ ನೆಲೆ ನಿಲ್ಲಲಿಲ್ಲ. ಅಭಿನಯವೇ ಮನಸ್ಸನ್ನು ತುಂಬಿಕೊಂಡಿತ್ತು. ಮೂವತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆಯಲ್ಲಿ ನಾಟಕವಾಡಲು ಹೋದಾಗ ಕಮಲಾಳ ಪರಿಚಯವಾಗಿದ್ದು, ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತ ಕೊನೆಗೆ ನಮ್ಮ ನಾಟಕ ಕಂಪನಿಗೆ ಬಂದವಳು ಮುಂದೊಂದು ದಿನ ಬದುಕನ್ನೇ ಹಂಚಿಕೊಳ್ಳುತ್ತಾಳೆಂದು ಭಾವಿಸಿರಲಿಲ್ಲ. ಆ ತುಂಬು ಯೌವನದ ದಿನಗಳು ನೆನಪಾಗಿ ಚೆನ್ನಬಸಣ್ಣನ ಮುಖ ಲಜ್ಜೆಯಿಂದ ಕೆಂಪಾಯಿತು. ಕೃಷ್ಣ ಸತ್ಯಭಾಮ ನಾಟಕದಲ್ಲಿ ನನ್ನದು ಕೃಷ್ಣನ ಪಾತ್ರವಾದರೆ ಅವಳು ಸತ್ಯಭಾಮೆ. ನಾಟಕ ಅದ್ಭುತ ಯಶಸ್ಸು ಕಂಡಿತು. ನಮ್ಮಿಬ್ಬರ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ. ಹಗಲು ಹೊತ್ತಿನಲ್ಲಿ ತಾಲೀಮಿನ ಕೊಠಡಿಯಲ್ಲಿ ಇಬ್ಬರೇ ಇದ್ದಾಗ ಅವ್ಯಕ್ತ ಭಾವನೆಗಳು ಪುಟಿದೇಳುತ್ತಿದ್ದವು. ಕೆನೆಹಾಲಿನ ಮೈಬಣ್ಣ, ದಟ್ಟವಾದ ಕೇಶರಾಶಿ, ಸಪೂರ ನಿಲುವಿನ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಸ್ನಿಗ್ಧ ಸೌಂದರ್ಯದ ಕಮಲ ಹಾಗೇ ಭಾವದಲ್ಲಿ ಬೆರೆತು ಹೋದಳು. ರಂಗಸ್ಥಳದ ಮೇಲೆ ಜೊತೆಯಾಗಿ ನಿಂತ ಆ ಕ್ಷಣ ಅದು ಅಭಿನಯ ಎನ್ನುವುದಕ್ಕಿಂತ ವಾಸ್ತವದ ಘಳಿಗೆ ಎಂಬ ಭಾವ ಉದಿಸುತ್ತಿತ್ತು. ಯಾರೂ ಇಲ್ಲದ ಏಕಾಂತದ ಸಂದರ್ಭ ರಂಗಸ್ಥಳದ ಮೇಲೆ ತನ್ನನ್ನು ನನಗೆ ಇಡೀಯಾಗಿ ಸಮರ್ಪಿಸಿಕೊಂಡ ಕಮಲಳ ಸ್ಪರ್ಷಕ್ಕೆ ದೇಹದಲ್ಲಿ ನವಿರಾದ ಭಾವಗಳ ಕಂಪನ ಹುಟ್ಟಿ ಬದುಕು ಹೊಸ ಅರ್ಥದಲ್ಲಿ ಗ್ರಹೀತವಾಗಲಾರಂಭಿಸಿತು. ಕಮಲಳ ಒಡಲಲ್ಲಿ ಜೀವವೊಂದು ಚಿಗಿತುಕೊಳ್ಳತೊಡಗಿದ್ದೆ ಚಂದ್ರಾಬಾಯಿಗೆ ನಮ್ಮ ಪ್ರೇಮದ ವಾಸನೆ ಬಡಿಯಿತು. ರಂಗಸ್ಥಳವೇ ಮದುವೆ ಮಂಟಪವಾಗಿ, ಸಂಗೀತವೇ ಮಂತ್ರಘೋಷವಾಗಿ ನೂರಾರು ಪ್ರೇಕ್ಷಕರ ಸಾಕ್ಷಿಯಾಗಿ ನಾವಿಬ್ಬರೂ ಸತಿಪತಿಗಳಾಗಿ ದಾಂಪತ್ಯದ ಬದುಕಿಗೆ ಕಾಲಿಟ್ಟೆವು. ಹರೆಯದ ದಿನಗಳ ನೆನಪು ಅವ್ಯಕ್ತ ಅನುಭವದ ಭಾವತಂತಿಯನ್ನು ಮೀಟಿದಂತಾಗಿ ಚೆನ್ನಬಸಣ್ಣನ ಮುಖದಲ್ಲಿ ಅಪೂರ್ವ ಕಳೆಯೊಂದು ಮೂಡಿ ಮರೆಯಾಯಿತು. 

    ಅದೆಷ್ಟು ಸಂತೋಷದ ದಿನಗಳಾಗಿದ್ದವು. ಇಬ್ಬರೂ ಜೊತೆಯಾಗಿ ಅಭಿನಯಿಸಿದ ಸಾಲು ಸಾಲು ನಾಟಕಗಳು ಭರ್ಜರಿ ಯಶಸ್ಸು ಕಂಡ ದಿನಗಳವು. ಪ್ರತಿ ಪ್ರದರ್ಶನ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿರುತ್ತಿತ್ತು. ದಿನಗಳು ಹೇಗೆ ಸರಿದು ಹೋದವೋ. ಸರಿದು ಹೋದ ಸಮಯದ ವೇಗ ಅನುಭವಕ್ಕೇ ಬರಲಿಲ್ಲ. ಕಾಲ ಆಗಾಗ ನಿಂತು ನೆನಪಿಸಿದ್ದು ಮಕ್ಕಳ ಹುಟ್ಟು ಮತ್ತು ಚಂದ್ರಾಬಾಯಿಯ ಸಾವನ್ನು ಮಾತ್ರ. ಹಸಿವಿನಿಂದ ಚೆನ್ನಬಸಣ್ಣನ ಹೊಟ್ಟೆ ಚುರುಗುಟ್ಟತೊಡಗಿತು. ಸೂರ್ಯ ನೆತ್ತಿಯ ಮೇಲೆ ಬಂದ ಗುರುತಾಗಿ ಛಾವಣಿಯೊಳಗಿಂದ ಬಂದ ಬಿಸಿಲು ಡೇರೆಯ ನಟ್ಟನಡುವೆ ಬೆಳಕಿನಕೋಲನ್ನು ಸೃಷ್ಟಿಸಿತ್ತು. ಕಲಾವಿದರು ಒಬ್ಬೊಬ್ಬರಾಗಿ ಎದ್ದು ಅದೇ ಆಗ ಬೆಳಗಾಗಿದೆ ಎನ್ನುವಂತೆ ತಮ್ಮ ದೈನಿಕದಲ್ಲಿ ತೊಡಗಿದ್ದರು. ಕಂಪನಿಯ ಸಾಮಾನು ಸರಂಜಾಮುಗಳ ದೇಖರೇಖಿಗೆಂದು ಗೊತ್ತು ಮಾಡಿದ್ದ ಆಳು ಈರಣ್ಣನನ್ನು ಕೂಗಿ ಕರೆದು ಎಲ್ಲರಿಗೂ ಊಟಕ್ಕೆ ಬಡಿಸಲು ಹೇಳಿ ಚೆನ್ನಬಸಣ್ಣ ಸ್ನಾನದ ಮನೆಯತ್ತ ಹೆಜ್ಜೆ ಹಾಕಿದ. 

    ‘ಚೆನ್ನಬಸಣ್ಣ ಮುಂದಿನ ಠಿಕಾಣಿ ಎಲ್ಲಿ ಅಂತ ನಿರ್ಧಾರ ಮಾಡಿಯೇನು?’ ಪೇಟಿ ಮಾಸ್ತರ ನೀಲಕಂಠಪ್ಪ ಕೇಳಿದ ಪ್ರಶ್ನೆಯಿಂದ ಭವಿಷ್ಯ ಭೂತದ ರೂಪತಾಳಿ ತನ್ನನ್ನು ಇಡೀಯಾಗಿ ನುಂಗುತ್ತಿರುವಂತೆ ಭಾಸವಾಗಿ ಚೆನ್ನಬಸಣ್ಣ ಅಧೀರನಾದ. ಎದೆಯಲ್ಲಿ ಸಳ್ ಎಂದಂತಾಗಿ ಲೋಟದಲ್ಲಿದ್ದ ನೀರನ್ನೆಲ್ಲ ಗಂಟಲಿಗೆ ಸುರಿದುಕೊಂಡ. ಉತ್ತರಕ್ಕಾಗಿ ಎಲ್ಲರೂ ಚೆನ್ನಬಸಣ್ಣನ ಮುಖ ನೋಡತೊಡಗಿದರು. ಪೇಟಿ ಮಾಸ್ತರ ನೀಲಕಂಠಪ್ಪ ಆಗಲೇ ತನ್ನ ಒಂದು ಕಾಲನ್ನು ಕಂಪನಿಯಿಂದ ಹೊರಗೆ ಇಟ್ಟಿರುವ ವಿಷಯ ಚೆನ್ನಬಸಣ್ಣನಿಗೆ ಹೊಸದೇನಲ್ಲ. ಹಾಗೆ ಹೊರಗೆ ಹೋಗುವವನು ತಾನೊಬ್ಬನೇ ಹೋಗಲಾರ ಎನ್ನುವುದೂ ಗೊತ್ತಿದೆ. ಅವನೊಂದಿಗೆ ಹತ್ತಾರು ಕಲಾವಿದರು ಬಿಟ್ಟು ಹೋದಲ್ಲಿ ಕಂಪನಿಯ ಬಾಗಿಲು ಮುಚ್ಚಬೇಕಾಗುತ್ತದೆ ಎನ್ನುವ ವಿಚಾರ ಕಳೆದ ಹಲವು ದಿನಗಳಿಂದ ಮನಸ್ಸಿನಲ್ಲಿ ಹೊಳೆದು ಚೆನ್ನಬಸಣ್ಣನನ್ನು ಹಣ್ಣು ಹಣ್ಣು ಮಾಡುತ್ತಿತ್ತು. ಹಿಂದಿನಂತೆ ನಾಟಕಗಳಿಗೆ ಪ್ರೇಕ್ಷಕರ ಬೆಂಬಲ ಈಗಿಲ್ಲ. ದಿನನಿತ್ಯದ ಖರ್ಚುವೆಚ್ಚಗಳನ್ನು ಸರಿದೂಗಿಸುವುದೇ ಕಷ್ಟವಾಗುತ್ತಿರುವಾಗ ಕೆಲವು ಕಲಾವಿದರು ಕಂಪನಿ ಬಿಟ್ಟು ಹೋದರೆ ಮತ್ತೆ ಹೊಸ ಕಲಾವಿದರನ್ನು ಹುಡುಕುವುದು ಕಷ್ಟದ ಕೆಲಸ. ‘ನಾಳೆ ಗದಗಿಗಿ ಹೋಗಿ ಮಠದ ಸ್ವಾಮಿಗಳನ್ನು ಕಂಡು ಬರ್ತೀನಿ. ನೋಡೋಣ ಅವರಾದ್ರೂ ದಾರಿ ತೋರಿಸಬಹುದು’ ತಟ್ಟೆಯಲ್ಲಿ ಕೈತೊಳೆದುಕೊಂಡು ಎದ್ದ ಚೆನ್ನಬಸಣ್ಣ ತಾಲೀಮು ಕೊಠಡಿಯತ್ತ ತೆರಳಿದ. ಹಾಗೆ ಚೆನ್ನಬಸಣ್ಣ ತಾಲೀಮು ಕೊಠಡಿಯತ್ತ ತೆರಳಿದನೆಂದರೆ ಅದು ರೀಹರ್ಸಲ್ ಸಮಯವೆಂದು ಎಲ್ಲರಿಗೂ ಗೊತ್ತು. ಊಟ ಮಾಡಿ ಕೈ ತೊಳೆದುಕೊಂಡು ಒಬ್ಬೊಬ್ಬರಾಗಿ ತಾಲೀಮು ಕೊಠಡಿಯಲ್ಲಿ ಸೇರತೊಡಗಿದರು. ನೀಲಕಂಠಪ್ಪ ಮಾಸ್ತರರ ‘ವಂದಿಸುವೆ ಗಜವದನಗೆ’ ಪ್ರಾರ್ಥನೆಯೊಂದಿಗೆ ನಾಟಕದ ರೀಹರ್ಸಲ್‍ಗೆ ರಂಗೇರತೊಡಗಿತು.

    ಎಲ್ಲರನ್ನೂ ರೀಹರ್ಸಲ್‍ಗೆ ಹಚ್ಚಿ ಚೆನ್ನಬಸಣ್ಣ ಸ್ವಲ್ಪ ಅಡ್ಡಾಗಲೆಂದು ರಂಗಸ್ಥಳದ ಮೂಲೆಗೆ ತೆರಳಿದ. ನಾಟಕದ ಪರದೆಗಳತ್ತ ಲಕ್ಷ್ಯ ಹರಿದು ಪರದೆಗಳೆಲ್ಲ ಬಣ್ಣ ಕಳೆದುಕೊಂಡು ಹಳತಾಗಿರುವುದು ಜ್ಞಾಪಕಕ್ಕೆ ಬಂದು ಹೊಸ ಪರದೆಗಳನ್ನು ಬರೆಸಬೇಕೆಂದು ಯೋಚಿಸುತ್ತ ದೇಹವನ್ನು ನೆಲಕ್ಕೆ ಅಡ್ಡಾಗಿಸಿದ. ಹಳೆಯ ನೆನಪುಗಳಿಂದ ಮನಸ್ಸಿನಲ್ಲಿ ದೆವ್ವ ಹೊಕ್ಕಿದಂತಾಗಿ ಕಣ್ಣು ಮುಚ್ಚಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಸುಧನ್ವ, ಸುಶೇಷ, ಸುಚೇತ, ಸುಭದ್ರೆ ಮಕ್ಕಳಿಗೆ ನಾಟಕದ ಹೆಸರುಗಳೆ. ನನ್ನಂತೆ ಮೊದಲ ಮೂರು ಗಂಡು ಮಕ್ಕಳಿಗೆ ರಂಗಸ್ಥಳವೇ ಪಾಠಶಾಲೆಯಾಯಿತು. ಸುಭದ್ರೆಗೂ ಅಭಿನಯದಲ್ಲಿ ಆಸಕ್ತಿಯಿತ್ತು. ಆದರೆ ಕಮಲಳದು ಒಂದೇ ಹಟ. ಮಗಳು ಓದಿ ವಿದ್ಯಾವಂತೆಯಾಗಿ ಹೊಸಬದುಕನ್ನು ರೂಪಿಸಿಕೊಳ್ಳಲೆಂದು ನಾಟಕದಿಂದ ದೂರವೇ ಇಟ್ಟಿದ್ದಳು. ಮಗಳ ನೆನಪಾಗಿ ಚೆನ್ನಬಸಣ್ಣನ ಮನಸ್ಸು ಆರ್ದ್ರವಾಯಿತು. ಮೂರುಗಂಡು ಮಕ್ಕಳ ನಂತರ ಹುಟ್ಟಿದ ಅಕ್ಕರೆಯ ಹೆಣ್ಣುಮಗು. ಉಳಿದ ಮಕ್ಕಳಿಗಿಂತ ಸುಭದ್ರೆಯ ಮೇಲೆ ಒಂದು ಹಿಡಿ ಪ್ರೀತಿ ಹೆಚ್ಚು. ನಾಟಕದವರ ಮಗಳೆಂದು ಮದುವೆಗೆ ಕಂಕಣಬಲ ಕೂಡಿಯೇ ಬರುತ್ತಿಲ್ಲ. ಅವ್ವ ಮತ್ತು ಅಣ್ಣಂದಿರೊಂದಿಗೆ ಹೊರಟು ನಿಂತವಳಿಗೆ ಅಪ್ಪನನ್ನು ಬಿಟ್ಟುಹೋಗುವ ಇಚ್ಛೆಯೇ ಇರಲಿಲ್ಲ. ಪಾಪ ಇನ್ನೂ ಸಣ್ಣ ವಯಸ್ಸು ಅದರ ಮೇಲೆ ಅಣ್ಣಂದಿರ ಭಯ ಬೇರೆ ಚೆನ್ನಬಸಣ್ಣ ಮನಸ್ಸಿಗೆ ಸಮಾಧಾನ ಮಾಡಿಕೊಂಡ.

    ಚೆನ್ನಬಸಣ್ಣ ಗದಗಿನ ಮಠದ ಆವರಣದೊಳಗೆ ಕಾಲಿಟ್ಟಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಮಠದ ಸ್ವಾಮಿಗಳು ಪೂಜೆ, ಊಟ ಮುಗಿಸಿ ವಿಶ್ರಮಿಸುತ್ತಿದ್ದರು. ಕೋಣೆಯೊಳಗೆ ಕಾಲಿಟ್ಟ ಚೆನ್ನಬಸಣ್ಣ ಸ್ವಾಮಿಗಳ ಪಾದಕ್ಕೆರಗಿ ದೂರದಲ್ಲಿ ಗೋಡೆಯನ್ನು ಬೆನ್ನಿಗೆ ಆಸರೆಯಾಗಿಸಿಕೊಂಡು ಕುಳಿತು ಅವರ ಮಾತಿಗಾಗಿ ಕಾಯತೊಡಗಿದ. ಚೆನ್ನಬಸಣ್ಣನನ್ನು ಅನೇಕ ವರ್ಷಗಳಿಂದ ಬಲ್ಲ ಸ್ವಾಮಿಗಳು ‘ಏನು ಬಸಣ್ಣ ಭಾಳ ದಿವಸಗಳ್ಯಾದ ಮ್ಯಾಲ ಸವಾರಿ ಈ ಕಡಿ. ನಮ್ಮಿಂದ ಏನಾದರೂ ಕೆಲಸ ಆಗಬೇಕಿತ್ತೇನು. ಊಟದ ವ್ಯಾಳಿ ಆಗ್ಯಾದ ಮೊದಲು ಪ್ರಸಾದ ಆಗಲಿ’ ಎಂದು ಉಪಚರಿಸಿದರು. ಮಠದ ಊಟ ಹೊಟ್ಟೆ ಮತ್ತು ಮನಸ್ಸು ಎರಡನ್ನೂ ತುಂಬಿಸಿತು. ‘ಬುದ್ದಿ ಈ ವರ್ಷ ಜಾತ್ರಿಗಿ ನಾಟಕ ಆಡ್ಲಿಕ್ಕ ದೊಡ್ಡ ಮನಸ್ಸು ಮಾಡಿ ಜಾಗ ಕೊಡ್ಬೇಕು ತಾವು’ ಚೆನ್ನಬಸಣ್ಣನ ಮಾತಿನಲ್ಲಿ ಬೇಡಿಕೆಯಿತ್ತು. ‘ಬಸಣ್ಣ ಈಗ ಕಾಲ ಭಾಳ ಬದಲಾಗ್ಯಾದಪ. ಹಿಂದಿನಂಗ ಈಗಿನ ಜನ ಇಲ್ಲ. ಸಿನೆಮಾ ನೋಡೋ ವ್ಯಾಳಾದಾಗ ನಿನ್ನ ನಾಟಕ ಯಾರು ನೋಡ್ತಾರ’ ಸ್ವಾಮಿಗಳ ಧ್ವನಿಯಲ್ಲಿ ಬೇಸರವಿತ್ತು. ‘ಬುದ್ದಿ ಇದೊಂದು ಸಲ ಅವಕಾಶ ಕೊಡಿ. ಸಂಸಾರನೌಕೆ ಅನ್ನೊ ಸಾಮಾಜಿಕ ನಾಟಕ ಆಡ್ತೀವಿ’ ಚೆನ್ನಬಸಣ್ಣ ಪಟ್ಟು ಹಿಡಿದ. ಅವನಿಗೆ ಗೊತ್ತಿತ್ತು ಅದು ಸ್ವಾಮಿಗಳಿಗೆ ಬಹಳ ಇಷ್ಟದ ನಾಟಕವೆಂದು. ‘ಆಯ್ತು ನಿನಗ ಇಲ್ಲ ಅನ್ನೊದಕ್ಕ ಮನಸಾದ್ರು ಹ್ಯಾಂಗ ಬರ್ತದ ಬಸಣ್ಣ. ಜಾಗ ಅಂದರ ಅದೇ ನೀ ಕೂಸಿದ್ದಾಗ ಚಂದ್ರಾಬಾಯಿಗಿ ಸಿಕ್ಕ ಜಾಗ ಹೌದಲ್ಲೊ’ ಚೆನ್ನಬಸಣ್ಣನಿಗೆ ಆ ಜಾಗದೊಂದಿಗೆ ಇರುವ ಅವಿನಾಭಾವ ಸಂಬಂಧದ ಅರಿವು ಸ್ವಾಮಿಗಳಿಗಿತ್ತು. ತಲೆಯಾಡಿಸಿದ ಚೆನ್ನಬಸಣ್ಣ ‘ಬುದ್ದಿ ಈ ಜೀವದಾಗ ಉಸಿರಿರೊತನಕ ನಿಮ್ಮ ಉಪಕಾರ ಮರೆಯೊದಿಲ್ಲ’ ಮತ್ತೊಮ್ಮೆ ಸ್ವಾಮಿಗಳ ಪಾದಕ್ಕೆರಗಿ ಹೊರಡಲು ಎದ್ದು ನಿಂತ. ‘ಸಂಸಾರ ನೌಕೆಯ ಕೊನಿ ಅಂಕದಾಗ ವಿಷ ಕುಡಿದು ಸಾಯೋ ಪ್ರಸಂಗದಾಗ ಬಸಣ್ಣ ನಿನ್ನ ಅಭಿನಯ ಪ್ರೇಕ್ಷಕರನ್ನ ಮೂಕರನ್ನಾಗಿಸ್ತದ’ ಸ್ವಾಮಿಗಳ ಮೆಚ್ಚುಗೆಯ ಮಾತುಗಳಿಂದ ಚೆನ್ನಬಸಣ್ಣನ ಮನಸ್ಸು ತುಂಬಿಬಂತು. ನಾಟಕ ಕಂಪನಿ ಠಿಕಾಣಿ ಹೂಡಬೇಕಿದ್ದ ಜಾಗವನ್ನು ಮತ್ತೊಮ್ಮೆ ಕಣ್ತುಂಬಿಕೊಂಡು ಬಸ್‍ಸ್ಟ್ಯಾಂಡಿಗೆ ಬಂದ ಚೆನ್ನಬಸಣ್ಣ ಬದಾಮಿಗೆ ಹೋಗುವ ಬಸ್ ಹತ್ತಿ ಕುಳಿತ.

      ಬನಶಂಕರಿ ಜಾತ್ರೆ ಮುಗಿದದ್ದೆ ಮೈಲಾರಲಿಂಗೇಶ್ವರ ನಾಟಕ ಮಂಡಳಿ ಗದಗಿಗೆ ಸ್ಥಳಾಂತರಗೊಂಡಿತು. ಒಂದು ವಾರದಲ್ಲಿ ಮಠದ ಆವರಣದೊಳಗೆ ನಾಟಕ ಕಂಪನಿಯ ಡೇರೆ ಎದ್ದು ನಿಂತಿತು. ಹೆಂಡತಿ ಮಕ್ಕಳು ಬರುವ ನಿರೀಕ್ಷೆ ದಿನಕಳೆದಂತೆ ಹುಸಿಯಾಗತೊಡಗಿದಾಗ ಚೆನ್ನಬಸಣ್ಣ ಮಾನಸಿಕವಾಗಿ ಕುಗ್ಗಿ ಹೋದ. ಮೇಲೆ ಮಾತ್ರ ಏನನ್ನೂ ತೋರಿಸಕೊಡದೆ ನಾಟಕ ಪ್ರದರ್ಶನಕ್ಕೆ ಎಲ್ಲ ಕಲಾವಿದರನ್ನು ಹುರುದುಂಬಿಸತೊಡಗಿದ. ಮಠದ ಆವರಣಕ್ಕೆ ಜನರ ಗದ್ದಲದಿಂದ ಹೊಸಕಳೆ ಬಂದಿತ್ತು. ಅಂಗಡಿಗಳು, ಹೋಟೆಲುಗಳು, ನಾಟಕದ ಟೆಂಟುಗಳು, ಸರ್ಕಸ್ ಡೇರೆ ಮಠದ ಆವರಣದಲ್ಲಿ ತಲೆ ಎತ್ತಿ ಗೌಜುಗದ್ದಲಗಳಿಂದ ಇಡೀ ಮಠದ ಆವರಣ ಜೀವಕಳೆಯಿಂದ ನಳನಳಿಸುತ್ತಿತ್ತು. ಹೆಂಗಸರು ಬಳೆ, ಸೀರೆ, ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತಲ್ಲಿನರಾಗಿದ್ದರೆ ಗಂಡಸರು ಕೃಷಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದರು. ಮಕ್ಕಳು ಆಟದ ಸಾಮಾನುಗಳನ್ನು ಮತ್ತು ಹೋಟೆಲುಗಳಲ್ಲಿನ ಕಾಜೀನ ಬುರುಡೆಗಳಲ್ಲಿ ತುಂಬಿಸಿಟ್ಟ ತರೇವಾರಿ ತಿನಿಸುಗಳನ್ನು ಆಸೆಯ ಕಂಗಳಿಂದ ದಿಟ್ಟಿಸುತ್ತ ಅಪ್ಪ ಅಮ್ಮನನ್ನು ಕೊಡಿಸುವಂತೆ ಕಾಡಿಸುತ್ತಿದ್ದವು. ಮಕ್ಕಳ ಕೈಯಲ್ಲಿ ಹಾರಾಡುತ್ತಿದ್ದ ವಿವಿಧ ಬಣ್ಣದ ಬಲೂನ್‍ಗಳಿಂದ ಜಾತ್ರೆಗೆ ಹೊಸದೊಂದು ಮೆರುಗು ಬಂದಿತ್ತು. ವಯಸ್ಸಾದ ಹಿರಿಯ ಜೀವಗಳಿಗೆ ಗದ್ದಲದಲ್ಲಿ ಚಿಕ್ಕಮಕ್ಕಳು ಕಳೆದುಹೋಗದಂತೆ ಕಾಯುವುದೇ ದೊಡ್ಡ ಕೆಲಸವಾಗಿತ್ತು. ಯುವಕ ಯುವತಿಯರ ಕಣ್ಣುಗಳು ತಮ್ಮ ತಮ್ಮ ಕನಸಿನ ರಾಜಕುಮಾರ, ರಾಜಕುಮಾರಿಯರನ್ನು ಅರಸುತ್ತಿದ್ದವು. ತಮ್ಮ ಮಕ್ಕಳಿಗೆ ಮದುವೆಗಾಗಿ ಗಂಡು, ಹೆಣ್ಣುಗಳನ್ನು ಹುಡುಕುತ್ತಿದ್ದ ಅಪ್ಪ ಅಮ್ಮಂದಿರಿಗೆ ನಾಲ್ಕು ಜನ ಸೇರುವ ಇಂಥ ಜಾತ್ರೆಗಳು ಸಂಬಂಧಿಕರ ಭೇಟಿಗೆ, ಮಕ್ಕಳ ಮದುವೆ ನಿಶ್ಚಯಕ್ಕೆ ಅನುಕೂಲಕರವಾಗಿ ತೋರುತ್ತಿತ್ತು. ಅಂಗಡಿಗಳ ಕೆಲಸಗಾರರ ಮಧ್ಯೆ ತುರುಸಿನ ಸ್ಪರ್ಧೆಯೇ ಏರ್ಪಟ್ಟಂತೆ ಅವರು ತಮ್ಮ ತಮ್ಮ ಅಂಗಡಿಗಳ ಎದುರು ನಿಂತು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರನ್ನು ಆಕರ್ಷಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದದ್ದು ನೋಡುವವರಿಗೆ ಪುಕ್ಕಟ್ಟೆ ಮನೋರಂಜನೆ ಒದಗಿಸುತ್ತಿತ್ತು. ಮಠದ ಇನ್ನೊಂದು ಮಗ್ಗುಲಲ್ಲಿ ದನದ ಸಂತೆ ಇದ್ದು ವಿವಿಧ ತಳಿಯ ದನಗಳನ್ನು ನೋಡುವುದೇ ಜನರಿಗೆ ಹಬ್ಬವಾಗಿತ್ತು. ದಿನವೆಲ್ಲ ಮಠದ ಗದ್ದುಗೆಯ ದರ್ಶನ, ಪ್ರಸಾದ ಸ್ವೀಕಾರ, ಅಂಗಡಿಗಳಲ್ಲಿ ಖರೀದಿ, ದನಗಳ ಮಾರಾಟ- ಖರೀದಿ, ಮನೋರಂಜನೆಯಲ್ಲಿ ಮಗ್ನರಾದ ಜನ ರಾತ್ರಿಯಾಗುತ್ತಿದ್ದಂತೆ ನಾಟಕದ ಡೇರೆಯ ಕಡೆ ಹೆಜ್ಜೆ ಹಾಕತೊಡಗಿದರು. ನಾಟಕ ಶುರುವಾಗುವ ವೇಳೆಗೆ ಸಾಕಷ್ಟು ಪ್ರೇಕ್ಷಕರು ಜಮಾಯಿಸಿದ್ದರು. ರಂಗಸ್ಥಳದ ಸೈಡ್‍ವಿಂಗ್‍ನಿಂದ ಹಣಿಕಿಕ್ಕಿದ ಚೆನ್ನಬಸಣ್ಣನಿಗೆ ಸಮಾಧಾನವಾಯಿತು. ಮತ್ತೊಮ್ಮೆ ಪ್ರೇಕ್ಷಕರನ್ನು ಕಣ್ತುಂಬಿಕೊಂಡು ಮೇಕಪ್ ರೂಮಿನತ್ತ ಹೆಜ್ಜೆ ಹಾಕಿದ ಚೆನ್ನಬಸಣ್ಣನ ಮನಸ್ಸಿನಲ್ಲಿ ಬೆಳಿಗ್ಗೆಯಿಂದ ಅಸ್ಪಷ್ಟ ರೂಪದಲ್ಲಿದ್ದ ಒಂದು ನಿರ್ಧಾರ ಈಗ ಘನೀಕರಿಸತೊಡಗಿತು. 

     ನಾಟಕದ ಪ್ರತಿದೃಶ್ಯಕ್ಕೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಅಭಿನಂದಿಸುತ್ತಿದ್ದರು. ತನ್ನ ಅವಿರತ ದುಡಿಮೆಯಿಂದ ಕುಟುಂಬವನ್ನು ಒಂದು ನೆಲೆಗೆ ತಂದ ಮನೆಯ ಯಜಮಾನನೇ ಈಗ ಅನಾಥನಾಗಿದ್ದಾನೆ. ಹೆಂಡತಿಯ ಸಾವು ಅವನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದೆ. ಮಕ್ಕಳ, ಸೊಸೆಯಂದಿರ ಅನಾದಾರಕ್ಕೆ ಒಳಗಾದವನಿಗೆ ಈಗ ಆತ್ಮಹತ್ಯೆಯೊಂದೇ ಕೊನೆಯ ದಾರಿ. ರಂಗಸ್ಥಳದ ಮೇಲೆ ಕತ್ತಲು ನಿಧಾನವಾಗಿ ಕರಗುತ್ತ ಬೆಳಕು ಮೂಡುತ್ತಿದ್ದಂತೆ ಮನೆಯ ದೃಶ್ಯವಿರುವ ಪರದೆ ಕೆಳಗಿಳಿಯಲಾರಂಭಿಸಿತು. ರಂಗಸ್ಥಳದ ಮಧ್ಯದಲ್ಲಿ ಪ್ರೇಕ್ಷಕರಿಗೆ ಎದುರಾಗಿ ಚೆನ್ನಬಸಣ್ಣ ನಾಟಕದ ಕೊನೆಯ ಅಂಕದ ಅಭಿನಯಕ್ಕಾಗಿ ರಘುಪತಿರಾಯರ ಪಾತ್ರಧಾರಿಯಾಗಿ ಸಿದ್ಧನಾಗಿ ನಿಂತಿದ್ದಾನೆ. ಚೆನ್ನಬಸಣ್ಣ ಈಗ ತನ್ನನ್ನು ಇಡಿಯಾಗಿ ಪಾತ್ರಕ್ಕೆ ಸಮರ್ಪಿಸಿಕೊಂಡಿರುವುದು ಅವನ ಮುಖದಲ್ಲಿ ಮಡುಗಟ್ಟಿದ ಭಾವನೆಗಳೇ ಹೇಳುತ್ತಿವೆ. ರಂಗಸ್ಥಳದ ಮಧ್ಯಭಾಗದಲ್ಲಿದ್ದ ಮೈಕ್‍ಗೆ ಹತ್ತಿರ ಬಂದು ಚೆನ್ನಬಸಣ್ಣ ನಿಧಾನವಾಗಿ ತನ್ನ ಸಂಭಾಷಣೆಯನ್ನು ಹೇಳತೊಡಗಿದ ‘ಸಾವಿತ್ರಿ ಸಾವಿತ್ರಿ ಬದುಕಿನುದ್ದಕ್ಕೂ ಜೊತೆಯಾಗಿರ್ತಿನಿ ಎಂದವಳು ಹೀಗೆ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದು ಸರೀನಾ. ನೀನಿಲ್ಲದೆ ನಾನು ಬದುಕಿರಬಲ್ಲೆ ಎಂದು ನಿನಗೆ ಹೇಗಾದ್ರೂ ಅನಿಸಿತು. ಇಲ್ಲಿ ಪ್ರತಿದಿನ ಪ್ರತಿಕ್ಷಣ ನಿನ್ನ ಮಕ್ಕಳು ನನ್ನ ಬದುಕನ್ನ ನರಕ ಮಾಡ್ತಿದ್ದಾರೆ ಸಾವಿತ್ರಿ. ಅವರಿಗೆ ಜನ್ಮಕ್ಕೆ ಕಾರಣನಾದ ಈ ಅಪ್ಪ ಬೇಕಿಲ್ಲ. ಆ ಅಯೋಗ್ಯರಿಗೆ ಬೇಕಿರೋದು ನಾನು ದುಡಿದು ಗಳಿಸಿದ ಹಣ, ಒಡವೆ, ಆಸ್ತಿ. ನನ್ನನ್ನು ಕೊಲೆ ಮಾಡೋದಕ್ಕೂ ಹೇಸದ ಪಾಪಿಗಳಿವರು. ನೀನೇ ಜೊತೆಗಿಲ್ಲದಾಗ ಈ ಆಸ್ತಿ, ಹಣ ಇದನೆಲ್ಲ ತೊಗೊಂಡು ನಾನೇನು ಮಾಡ್ಲಿ. ನೀನಿಲ್ಲದೆ ಅರೆಘಳಿಗೆ ಕೂಡ ನನಗೆ ಬದುಕೊಕೆ ಸಾಧ್ಯ ಆಗ್ತಿಲ್ಲ. ಇದೋ ಸಾವಿತ್ರಿ ನೋಡು ಈ ಕ್ಷಣವೇ ನಾನು ನಿನಿದ್ದಲ್ಲಿಗೇ ಬರ್ತಿದ್ದೀನಿ’ ಜೇಬಿನಿಂದ ವಿಷದ ಬಾಟಲಿ ಹೊರತೆಗೆದು ಗಟಗಟನೆ ಕುಡಿದ ಚೆನ್ನಬಸಣ್ಣ ರಂಗಸ್ಥಳದ ಮೇಲೆ ಕುಸಿದು ಬಿದ್ದ. ಹೊಟ್ಟೆಯಲ್ಲಿ ಆರಂಭವಾದ ಸಂಕಟ ಕ್ರಮೇಣ ನರನಾಡಿಯಿಂದ ಪ್ರವಹಿಸುತ್ತ ದೇಹದ ತುಂಬೆಲ್ಲ ವ್ಯಾಪಿಸಿ ಚೆನ್ನಬಸಣ್ಣನ ಕಣ್ಣುಗಳು ಮಂಜಾಗತೊಡಗಿದವು. ಎದುರಿನದೆಲ್ಲ ಮಸುಕು ಮಸುಕಾಗಿ ಕಾಣಲಾರಂಭಿಸಿತು. ಬಾಯಿಯಿಂದ ಹನಿಹನಿಯಾಗಿ ತೊಟ್ಟಿಕ್ಕಲಾರಂಭಿಸಿದ ರಕ್ತದಹನಿ ಸ್ವಲ್ಪ ಸಮಯದ ನಂತರ ತನ್ನ ವೇಗವನ್ನು ಹೆಚ್ಚಿಸಿಕೊಂಡು ಚೆನ್ನಬಸಣ್ಣನ ದೇಹವನ್ನು ತೋಯಿಸತೊಡಗಿತು. ಸಾವು ಸಮೀಪಿಸುತ್ತಿದ್ದೆ ಎಂದರಿವಾಗಿ ತಾನು ಒಂದೊಮ್ಮೆ ಕೂಸಾಗಿ ಮಲಗಿದ್ದ ಜಾಗವನ್ನು ಬಿಗಿದಪ್ಪಿಕೊಳ್ಳುವಂತೆ ಒಂದಿಷ್ಟು ಮುಂದೆ ತೆವಳಿದ ಚೆನ್ನಬಸಣ್ಣನ ದೇಹ ಬಳಲಿಕೆಯಿಂದ ನಿಸ್ತೇಜಗೊಂಡು ಪಕ್ಕಕ್ಕೆ ವಾಲಿತು. ನಿಧಾನವಾಗಿ ದೀಪಗಳು ಒಂದೊಂದಾಗಿ ಆರುತ್ತಿದ್ದಂತೆ ಇಡೀ ರಂಗಸ್ಥಳದ ತುಂಬ ಕತ್ತಲಾವರಿಸಿತು. ಪ್ರೇಕ್ಷಕಗಣ ಎದ್ದುನಿಂತು ದೀರ್ಘ ಕರತಾಡನದ ಮೂಲಕ ಚೆನ್ನಬಸಣ್ಣನ ಅಭಿನಯಕ್ಕೆ ತಮ್ಮ ಮೆಚ್ಚುಗೆ ಸೂಚಿಸಿತು. 


- ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ