Friday, August 16, 2013

ಎದೆಗಿಳಿದ ನೆನಪುಗಳು


ಎಲ್ಲೋ ಹುಡುಕಿದೆ ಇಲ್ಲದ ದೇವರ 
ಕಲ್ಲು ಮಣ್ಣುಗಳ ಗುಡಿಯೊಳಗೆ 
ಇಲ್ಲೇ ಇರುವ ಪ್ರೀತಿ ಸ್ನೇಹಗಳ 
ಗುರುತಿಸದಾದೆವು ನಮ್ಮೊಳಗೆ 

                                                     -ಜಿ. ಎಸ್. ಶಿವರುದ್ರಪ್ಪ 

           ಬದುಕು ಅದೊಂದು ನೆನಪುಗಳ ಮೆರವಣಿಗೆ. ಆ ಮೆರವಣಿಗೆಯಲ್ಲಿ ಸಿಹಿ ನೆನಪುಗಳಿವೆ, ಮನಸ್ಸನ್ನು ನೋಯಿಸುವ ಕಹಿ ಇದೆ, ಬಹುಕಾಲ ಮನಸ್ಸಿನಲ್ಲುಳಿದು ಕಾಡುವ ಕೃತಜ್ಞತೆ ಅಲ್ಲಿದೆ. ಬದುಕಿನಲ್ಲಿ ಯಾವುದೋ ಒಂದು ಘಳಿಗೆಯಲ್ಲಿ ಎದುರಾದ ವ್ಯಕ್ತಿ ನಮ್ಮ ಬದುಕಿನ ಮೇಲೆ ಗಾಢ ಪ್ರಭಾವ ಬೀರಿ ತನ್ನ ನೆನಪನ್ನು ಅನೇಕ ದಿನಗಳ ಕಾಲ ನಮ್ಮ ಮನಸಿನಲ್ಲಿ ನೆಲೆಯೂರಿಸಬಹುದು. ಇನ್ನು ಕೆಲವರು ದುತ್ತೆಂದು ಎದುರಾಗಿ 'ಕರುಣಾಳು ಬಾ ಬೆಳಕೆ ಮುಸುಕಿದ ಮಬ್ಬಿನಲಿ ಕೈಹಿಡಿದು ನಡೆಸೆನ್ನನು' ಎಂದು ಕವಿ ಹಾಡಿರುವಂತೆ ನಮ್ಮ ಕಣ್ತೆರಿಸಬಹುದು. ಹೀಗೆ ಲೆಕ್ಕ ಹಾಕಿದಾಗ ಎದೆಗಿಳಿದ ನೆನಪುಗಳು ಅಸಂಖ್ಯ. ಅಂಥ ನೆನಪುಗಳನ್ನು ಆಗಾಗ ಮೆಲುಕು ಹಾಕುತ್ತ ಒಂದಿಷ್ಟು ಕೃತಜ್ಞತೆ ಸಲ್ಲಿಸೋಣ. 

          ಧೋ ಎಂದು ಸುರಿಯುತ್ತಿರುವ ಮಳೆ. ಅದೆ ಆಗ ಲೈಬ್ರರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವ ವೇಳೆ ಆಸರೆಗಾಗಿ ರಸ್ತೆಯ ಎರಡೂ ಬದಿಗೆ ನೋಡಿದ್ದುಂಟು. ಆ ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಮನೆಗಳಾಗಲಿ ಅಥವಾ ಅಂಗಡಿಗಳಾಗಲಿ ಒಂದೂ ಇರಲಿಲ್ಲ. ಕೂಗಳತೆಯ ದೂರದಲ್ಲಿ ವೆಲ್ಡಿಂಗ್ ಅಂಗಡಿಯೊಂದು  ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಮಳೆಯಿಂದ ನೆನೆಯುವುದನ್ನು ತಪ್ಪಿಸಿಕೊಳ್ಳಲು ಆಗ ಅಲ್ಲಿದ್ದ ಏಕೈಕ ಆಸರೆಯೆಂದರೆ ಆ ವೆಲ್ಡಿಂಗ್ ಅಂಗಡಿಯೊಂದೆ. ಓಡುತ್ತ ಹೋಗಿ ಅಂಗಡಿಯ ಗೋಡೆಯನ್ನೇ ಆಸರೆಯಾಗಿಸಿಕೊಂಡು ಮಳೆಯಿಂದ ತಪ್ಪಿಸಿಕೊಳ್ಳಲು ನಾನು ಮಾಡುತ್ತಿದ್ದ ಹರಸಾಹಸವನ್ನು ನೋಡಿ ಒಳಗಿದ್ದ ಸಾಬಿ 'ಆವ್ ಸಾಬ್ ಅಂದರ್ ಆವ್ ' ಎಂದು ಕರೆದರೂ ಕೇಳಿಸಿಕೊಳ್ಳದವನಂತೆ ನಿಂತಿದ್ದೆ. ಕೊನೆಗೆ ಸಾಬಿಯೇ ಹೊರಬಂದು 'ಒಳಗೆ ಬನ್ನಿ ಸಾಬ್ ಹಾಗೆ ನಿಂತರೆ ಮಳೆಗೆ ಪೂರ್ತಿ ತೊಯ್ದು ಹೋಗ್ತಿರಿ' ಎಂದು ಬಲವಂತಪಡಿಸಿದಾಗ ವಿಧಿಯಿಲ್ಲದೆ ಅಂಗಡಿಯೊಳಗೆ ಹೆಜ್ಜೆ ಇಡಬೇಕಾಯಿತು.

        ಹತ್ತು ಚದರಡಿಯ ಸಣ್ಣ ಕೋಣೆ ಕಬ್ಬಿಣದ ಸಾಮಾನುಗಳಿಂದ ತುಂಬಿ ಹೋಗಿತ್ತು. ಆಗಲೇ ನಾಲ್ಕೈದುಜನ ಒತ್ತರಿಸಿಕೊಂಡು ಕುಳಿತಿದ್ದರು. ನನ್ನನ್ನು ನೋಡುತ್ತಲೇ ಕೆಲಸಗಾರನಿರಬೇಕು ಆತ ತಾನು ಕುಳಿತಿದ್ದ ಪ್ಲಾಸ್ಟಿಕ್ ಸ್ಟೂಲಿನಿಂದ ಎದ್ದು ನನಗೆ ಕುಳಿತುಕೊಳ್ಳಲು ಜಾಗ ನೀಡಿದ. ಸಾಬಿ ಎದುರಿನ ಹಬೆಯಾಡುವ ಚಹಾ ನೋಡಿದ ಆ ಕ್ಷಣ ಆ ಮಳೆಯ ವಾತಾವರಣದಲ್ಲಿ  ನನಗೂ ಚಹಾ ಕುಡಿದರೆ ಚೆನ್ನ ಎಂದೆನಿಸಿತು. ನನ್ನ ಮನಸ್ಸನ್ನು ಅರಿತವನಂತೆ ಸಾಬಿ 'ಸಾಬ್ ಕೊ ಎಕ್ ಕಪ್ ಚಾ ದೇನಾ' ಎಂದು ತನ್ನ ಕೆಲಸದವನಿಗೆ ಹೇಳಿದ. ತಣ್ಣನೆಯ ಗಾಳಿ ಜೊತೆಗೆ ಬಿಸಿಯಾದ ಚಹಾ ಸೇವನೆಯಿಂದ ಮನಸ್ಸು ಆಹ್ಲಾದಗೊಂಡಿತು. ಮಳೆ ನಿಲ್ಲುವ ಲಕ್ಷಣ ಕಾಣಿಸಲಿಲ್ಲ. 'ನಿಮ್ಮ ಕೈಯಲ್ಲಿರೋ ಪುಸ್ತಕದ ಮೇಲೆ ಕುವೆಂಪು ಅವರ ಮಗ ತೇಜಸ್ವಿ ಅವರ ಫೋಟೋ ಅಲ್ವಾ ಸಾಬ್ ' ನನ್ನ ಕೈಯಲ್ಲಿದ್ದ ನನ್ನ ತೇಜಸ್ವಿ ಪುಸ್ತಕವನ್ನು ನೋಡಿ ಸಾಬಿಯೇ ಮಾತಿಗೆಳೆದ. ಆತ ತೇಜಸ್ವಿ ಅವರ ಒಂದೆರಡು ಪುಸ್ತಕಗಳನ್ನು ಓದಿದ್ದನ್ನು ಹೇಳಿದಾಗ ಅಚ್ಚರಿಯಾಯಿತು. 'ನೋಡಿ ಸಾಬ್ ನಾವು ಮುಸಲ್ಮಾನರಾಗಿದ್ದ ಮಾತ್ರಕ್ಕೆ ಕನ್ನಡ ಸಾಹಿತ್ಯ ಓದಬಾರದು ಅಂತ ಏನಾದ್ರೂ ನಿಯಮ ಇದೆಯಾ?. ಧರ್ಮ ಅದು ನಮ್ಮ ನಮ್ಮ ಮನೆಗೆ ಮಾತ್ರ ಸೀಮಿತ. ದೇಶ ಅಂತ ಬಂದ್ರೆ ನಾವು ಹಿಂದೂಸ್ತಾನಿಗಳು. ಇನ್ನು ಭಾಷೆ ಅಂದ್ರೆ ನಾವು ಪಕ್ಕಾ ಕನ್ನಡಿಗರು. ಈ ದೇಶ, ಈ ಭಾಷೆ ಇಲ್ಲಿನ ಜನ ಇದೆಲ್ಲ ನಮ್ದು. ಇದನ್ನು ಬಿಟ್ಟು ನಮ್ದು ಅನ್ನೋದು ಇನ್ನೆಲ್ಲೋ ಇದೆ ಅಂತ ಯೋಚಿಸೋದು ಅದು ಮೂರ್ಖತನ'. ಉದ್ದನೆಯ ಗಡ್ಡ ಬಿಟ್ಟು ತಲೆಗೆ ಟೊಪ್ಪಿಗೆ ಧರಿಸಿದ್ದ ಸಾಬಿಯನ್ನು  ಕೆಲವು ಕ್ಷಣಗಳ ಹಿಂದೆ ನಾನು ಅವನನ್ನು ಭಯೋತ್ಪಾದಕನಂತೆ ಚಿತ್ರಿಸುತ್ತಿದ್ದದ್ದು ಈ ಕ್ಷಣಕ್ಕೆ ನನ್ನಲ್ಲಿ ನಾಚಿಕೆಯನ್ನುಂಟುಮಾಡಿತು. 'ಸಾಬ್ ಬಾಬ್ರಿ ಮಸೀದಿ ಕೆಡವಿದ ಮೇಲಂತೂ ನಮ್ಮನ್ನು ತಾಲಿಬಾನಿಗಳಂತೆ ಕಾಣ್ತಿದ್ದಾರೆ. ಈ ಮುಸಲ್ಮಾನರದು ಯಾವುದೇ  ತಪ್ಪಿಲ್ಲ ಅಂತ ನಾನು ಹೇಳ್ತಿಲ್ಲ. ಈ ದೇಶದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಬೇರೆ ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಂಡ ಅನೇಕ ಮುಸ್ಲಿಮರು ಇಲ್ಲಿದ್ದಾರೆ. ಹೀಗೆ ಕೆಲವರು ಮಾಡೋ ತಪ್ಪಿಗೆ ಇಡೀ ಇಸ್ಲಾಂ ಸಮುದಾಯದ ಬಗ್ಗೆ ತಪ್ಪು ಅರ್ಥ ಬರ್ತಾಯಿದೆ. ಇದು ಸರಿಯಲ್ಲ' ಸಾಬಿ ಹೇಳಿ ಮುಗಿಸಿ ಒಂದು ಕ್ಷಣ ಮೌನವಾದ. ಹೊರಗಡೆ ಮಳೆಯೂ ಆರ್ಭಟಿಸುವುದನ್ನು ನಿಲ್ಲಿಸಿತ್ತು. 'ಸಾಬ್ ಮನೇಲಿ ಬೀವಿ ಬಚ್ಚೋ ಕಾಯ್ತಿರಬಹುದು' ನನ್ನನ್ನು ಎಚ್ಚರಿಸಿದಾತ ತನ್ನ ಕೆಲಸಕ್ಕೆ ಅಣಿಯಾದ. ನಮಸ್ಕಾರ ಹೇಳಿ ಮನೆಯಕಡೆ ಹೆಜ್ಜೆ ಹಾಕಿದೆ.

       ಆ ದಿನದಿಂದ ನಮ್ಮಿಬ್ಬರ ನಡುವೆ ಒಂದು ಆತ್ಮೀಯ ಮುಗುಳ್ನಗೆಯ  ಜೊತೆಗೆ 'ಕೈಸೆ ಹೈ ಸಾಬ್ ' ಎನ್ನುವ ಪ್ರೀತಿಯ ಉಭಯಕುಶಲೋಪರಿ ದೈನಂದಿನ ದಿನಚರಿಯಾಗಿದೆ.

---೦೦೦---

           ಎರಡು ದಿನಗಳಿಂದ ಊಟ ಮಾಡಿರಲಿಲ್ಲ. ಹಸಿವಿನಿಂದ ಹೊಟ್ಟೆ ಚುರುಗುಡುತ್ತಿತ್ತು. ಇವತ್ತಾದರೂ ಊರಿನಿಂದ ಊಟ (ಬುತ್ತಿ) ಬರಬಹುದೆಂದು ಬಸ್ಸಿಗಾಗಿ ಕಾದು ನಿಂತವನಿಗೆ ಪ್ರತಿ ಘಳಿಗೆಯೂ  ಗಂಟೆಯಂತೆ ಭಾಸವಾಗತೊಡಗಿತು. ನನ್ನೂರಿನ ಹೆಸರುಹೊತ್ತ ಬಸ್ ದೂರದಲ್ಲಿ ಬರುತ್ತಿರುವುದು ಕಾಣಿಸಿದಾಗ ಕಂಗಳಲ್ಲಿ ಆಸೆಯ ನಿರೀಕ್ಷೆ. ಬಸ್ ಬಂದು ಎದುರಿಗೆ ನಿಂತಾಯಿತು. ಒಬ್ಬೊಬ್ಬರಾಗಿ ಬಸ್ಸಿನಿಂದ ಇಳಿಯುತ್ತಿದ್ದರೆ ಪ್ರತಿಯೊಬ್ಬರ ಕೈಗಳನ್ನು ಕಣ್ಣುಗಳು ಆಸೆಯಿಂದ ನೋಡುತ್ತಿದ್ದವು. ನಿರೀಕ್ಷೆ ಹುಸಿಯಾಗತೊಡಗಿತು.  ಯಾರೊಬ್ಬರೂ ಹತ್ತಿರಬಂದು ಊಟದ ಚೀಲವನ್ನು ಕೈಗೆ ಕೊಡುತ್ತಿಲ್ಲ. ಇಡೀ ಬಸ್ ಖಾಲಿಯಾಯಿತು. ಕೊನೆಗೆ ಇಳಿದವನೊಬ್ಬ ಹತ್ತಿರಬಂದು ಹೇಳಿದ 'ತಮ್ಮಾ ನಿನ್ನ ಬುತ್ತಿ ಇನ್ಮುಂದ ಬರಾಂಗಿಲ್ಲ. ಯಾಕಂದ್ರ ಆ ತುರುಕರೆಲ್ಲ (ಮುಸ್ಲಿಮರನ್ನು ಹಳ್ಳಿಯಲ್ಲಿ ಹೀಗೆ ಕರೆಯುತ್ತಾರೆ) ಸೇರಿ ಇವತ್ತಿನಿಂದ ನಿನಗ ಬುತ್ತಿ ಕಟ್ಟಬಾರದು ಅಂತ ಆ ಹೆಣ್ಮಗಳಿಗಿ ತಾಕೀತು ಮಾಡ್ಯಾರ. ಸುಮ್ನೆ ಯಾಕ ಕಾಯ್ತಿ ರೂಮಿಗಿ ಹೋಗು'. ಆತ ಹೇಳಿದ ಸುದ್ದಿ ನಿಜಕ್ಕೂ ನನಗೆ ಆ ಹೊತ್ತು ಆಘಾತಕಾರಿಯಾಗಿತ್ತು.

             ಅಮ್ಮ ತೀರಿಕೊಂಡ ನಂತರ ಆ ಮನೆ ಅಕ್ಷರಶ: ಹೆಣ್ಣು ದಿಕ್ಕಿಲ್ಲದ ಮನೆಯಾಗಿತ್ತು. ಮನೆತುಂಬ ಉಣ್ಣುವ ಬಾಯಿಗಳೇ. ಬೆಯಿಸಿ ಹಾಕುವ ಹೆಣ್ಣೊಬ್ಬಳ ಅಗತ್ಯ ಆ ಕುಟುಂಬಕ್ಕೆ ಖಂಡಿತವಾಗಿ ಬೇಕಿತ್ತು. ಆದರೆ ನಾಲ್ಕು ಜನರಿಗೆ ಬೆಯಿಸಿ ಹಾಕುವುದು ಯಾವ ನೆರೆಹೊರೆಯವರಿಗೂ ಇಲ್ಲವೇ ನೆಂಟರಿಷ್ಟರಿಗೂ ಅದು ನಿಜಕ್ಕೂ ಹೊರೆಯಾಗುವ ಕೆಲಸ. ಜೊತೆಗೆ ಅದು ಒಂದೆರಡು ದಿನಗಳ ಸಮಸ್ಯೆಯಾಗಿರಲಿಲ್ಲ. ಇಂಥದ್ದೊಂದು ಸಮಸ್ಯೆ ನಮ್ಮನ್ನು ದಹಿಸುತ್ತಿರುವ ಸಮಯದಲ್ಲೇ ಆ ಮುಸ್ಲಿಂ ಹೆಣ್ಣುಮಗಳು ನಮ್ಮ ಹೊಟ್ಟೆಯನ್ನು ತುಂಬಿಸಲು ಮುಂದೆ ಬಂದಿದ್ದು. ಸಮಸ್ಯೆಗೆ ಪರಿಹಾರ ಅತ್ಯಂತ ಸುಲಭವಾಗಿ ಸಿಕ್ಕಿತ್ತು. ನಾನು ಅಣ್ಣನೊಡನೆ ಪಟ್ಟಣದಲ್ಲಿನ ಪುಟ್ಟ ಬಾಡಿಗೆ ಕೋಣೆಯನ್ನು ಸೇರಿಕೊಂಡು ಕಾಲೇಜಿಗೆ ನಿರಾತಂಕವಾಗಿ ಹೋಗಲಾರಂಭಿಸಿದೆ. ಆದರೆ ಈ ನೆಮ್ಮದಿಯ ಮೇಲೆ ಯಾರ ಕಣ್ಣು ಬಿತ್ತೋ ಊರಿನಲ್ಲಿನ ಕೆಲವರು ಆ ಹೆಣ್ಣುಮಗಳಿಗೆ ನಮಗಾಗಿ ಅಡುಗೆ ಮಾಡದಂತೆ ತೊಂದರೆ ಕೊಡಲಾರಂಭಿಸಿದರು. ಇದ್ದದ್ದೊಂದು ಆಸರೆಯೂ  ಕೈಬಿಟ್ಟು ಹೋದ ನಿರಾಸೆ ನನ್ನಲ್ಲಿ ಮಡುಗಟ್ಟಿತು. ಓದಬೇಕೆನ್ನುವುದು ಅದು ಕೇವಲ ನನ್ನ ಆಸೆಯಾಗಿರದೆ ಅದು ನನ್ನ ಅಮ್ಮನ ಆಸೆ ಕೂಡ ಆಗಿತ್ತು. ಪುಟ್ಟ ಬಾಡಿಗೆ ಕೋಣೆ, ಕಡಿಮೆ ಶುಲ್ಕದ ಕಾಲೇಜು ಓದಿಗೆ ಸಾಕಿತ್ತು. ಆದರೆ ಮುಖ್ಯ ಸಮಸ್ಯೆ ಎದುರಾದದ್ದು ಅದು ಎರಡ್ಹೊತ್ತಿನ ಊಟದ್ದು. ಬಸ್ಸಿನಿಂದ ಕೊನೆಯದಾಗಿ ಇಳಿದಾತ ಹೇಳಿದಂತೆ ಈಗ ಆ ಎರಡು ಹೊತ್ತಿನ ಊಟಕ್ಕೂ ಕುತ್ತು ಬರಲಿದೆ ಎನ್ನುವ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ನನಗೆ ಕೆಲವು ನಿಮಿಷಗಳೇ ಬೇಕಾದವು. ಓದು ಅರ್ಧಕ್ಕೇ ನಿಲ್ಲಲಿದೆ ಎನ್ನುವ ಆತಂಕವೊಂದು ಬಹುವಾಗಿ ಕಾಡಲಾರಂಭಿಸಿತು. ಹೋಟೆಲ್ಲುಗಳಲ್ಲಿ, ಗ್ಯಾರೇಜುಗಳಲ್ಲಿ ಕೆಲಸ ಮಾಡುವ ಹುಡುಗರಲ್ಲಿ ನಾಳೆ ನಾನೂ ಒಬ್ಬನಾಗಬಹುದು ಎನ್ನುವ ವಿಷಯ ಮನಸ್ಸಿನಲ್ಲಿ ಸುಳಿದು ದು:ಖ ಒತ್ತರಿಸಿಬಂತು. ನಿರಾಸೆ, ಆತಂಕ, ದುಗುಡದಿಂದ ಹೆಜ್ಜೆ ಹಾಕುತ್ತಿದ್ದವನನ್ನು ಯಾರೋ ಕೈಹಿಡಿದು ಜಗ್ಗಿದಂತಾಯಿತು. ಹಿಂತಿರುಗಿ ನೋಡಿದವನಿಗೆ ನೋಡುತ್ತಿರುವುದನ್ನು  ನಂಬಲು ಕೆಲವು ಕ್ಷಣಗಳೇ ಬೇಕಾದವು. ಕೈಯಲ್ಲಿ ಊಟದ ಚೀಲ ಹಿಡಿದು ನಿಂತವಳು ಆ ಕ್ಷಣಕ್ಕೆ ದೇವತೆಯಾಗಿ ಕಂಡಳು. ಆ ಮುಸ್ಲಿಂ ಹೆಣ್ಣು ಮಗಳು ಕೈಗೆ ಊಟದ ಚೀಲವನ್ನು ಕೊಡುತ್ತ ಹೇಳಿದಳು 'ನೀ ಭಾಳ  ಓದ್ಬೇಕು. ಅದು ನಿನ್ನ ಅವ್ವನ  ಆಸೆ ಆಗಿತ್ತು.  ಊರಿನ ಮಂದಿ  ನನಗ  ಎಷ್ಟೇ ತೊಂದರೆ ಕೊಟ್ರೂ  ನಾ ದಿನಾಲು ನಿನಗೆ ಊಟ ಕಟ್ತಿನಿ. ನಿನ್ನ ಅಣ್ಣನ ಲಗ್ನಾ ಆಗಿ ನಿಮ್ಮ ಮನಿಗಿ ನಿನ್ನ ಅತ್ತಿಗೆ ಬರೋವರ್ಗೂ ನಿನ್ನ ಜವಾಬ್ದಾರಿ ನಂದು'. ಹೀಗೆ ಹೇಳಿ ಆ ದಿನ ಕೈಯಲ್ಲಿ ಬುತ್ತಿ ಇಟ್ಟು ಹೋದವಳು ಬರೋಬ್ಬರಿ ಒಂದು ವರ್ಷ ಅಡುಗೆ ಮಾಡಿ ಉಣಬಡಿಸಿದಳು. ಅವಳ ಅಂದಿನ ಆ ನಿರ್ಧಾರ ನಾನು ನಿರಾತಂಕವಾಗಿ ಓದಲು ಕಾರಣವಾಗಿದ್ದು ಅದು ಇವತ್ತಿಗೂ ಕೂಡ ಸತ್ಯ. ತನ್ನ ಮಕ್ಕಳೊಂದಿಗೆ ನನ್ನನ್ನು ಮಗನಂತೆ ನೋಡಿಕೊಂಡಿದ್ದು ಅದು ಅವಳ ದೊಡ್ಡ ಗುಣ.

       ನಂತರದ ದಿನಗಳಲ್ಲಿ ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಿದ ಜನ ಆ ಹೆಣ್ಣುಮಗಳು ನಮ್ಮ ಕುಟುಂಬದಿಂದ ದೂರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ನಡುವೆ ಕಾಲಚಕ್ರ ಉರುಳಿ ನಾನೊಂದು ಅಸ್ತಿತ್ವ ಕಂಡುಕೊಂಡಿದ್ದೇನೆ. ನನ್ನ ಈ ಅಸ್ತಿತ್ವ ಮತ್ತು ನಾನಿವತ್ತು ಕಟ್ಟಿಕೊಂಡ ಈ ಬದುಕಿನ ಮೇಲೆ ಆಕೆಯ ಋಣ ಬೆಟ್ಟದಷ್ಟಿದೆ. ನೋವಿನ ಸಂಗತಿ ಎಂದರೆ ಎರಡು ದಶಕಗಳ ಮೇಲಾಯಿತು ನಾನವಳೊಡನೆ ಮಾತನಾಡಿ. ಮನಸ್ಸು ಮತ್ತು ವಯಸ್ಸು ಪರಿಪಕ್ವಗೊಳ್ಳುತ್ತಿರುವ ಈ ಸಂದರ್ಭ ಅವಳೊಡನೆ ಮಾತನಾಡಬೇಕೆಂದು ಅನಿಸಿದ್ದು ಅದು ಎಷ್ಟು ಸಲವೋ ಗೊತ್ತಿಲ್ಲ. ಆದರೆ ಹಾಗೆ ಮಾತನಾಡಬೇಕೆಂದು ತವಕಿಸಿದ ಸಮಯದಲ್ಲೆಲ್ಲ ಅಪರಾಧ ಪ್ರಜ್ಞೆಯೊಂದು ನನ್ನನ್ನು ಕಾಡಿದ್ದುಂಟು. ಇವತ್ತಿಗೂ ನಾನು ಆಕೆಗೆ ಕೃತಜ್ಞನಾಗಿರದೆ ಕೃತಘ್ನನಾಗಿದ್ದೆನೆನ್ನುವ ನೋವು ಅನೇಕ ಸಲ ಕಾಡಿದೆ. ಈ ಅಪರಾಧ ಪ್ರಜ್ಞೆ, ಕೃತಘ್ನನಾಗಿದ್ದೆನೆಂಬ ತೊಳಲಾಟ, ಕಾಡುವ ಅನ್ನದ ಋಣ, ಮಾತನಾಡಿಸಬೇಕೆನ್ನುವ ಬಯಕೆ ಈ ಎಲ್ಲವುಗಳ ನಡುವೆ ಇವತ್ತಿಗೂ ನಾನು ಅವಳನ್ನು ನೆನಪಿಸಿಕೊಂಡೆ ಕೈಗೆ ತುತ್ತು ತೆಗೆದುಕೊಳ್ಳುತ್ತೇನೆ.

---೦೦೦---

         ಕಂಪಾರ್ಟಮೆಂಟಿನ  ಒಳಗೆ ಬಂದವನನ್ನೊಮ್ಮೆ  ಅಲ್ಲಿದ್ದ ಎಲ್ಲರೂ ಅನುಮಾನದಿಂದ ದಿಟ್ಟಿಸಿ ನೋಡಿದರು. ಆತನ ವಯಸ್ಸು ಸರಿ ಸುಮಾರು ಮೂವತ್ತರಿಂದ ಮೂವತ್ತೈದರ ಆಸುಪಾಸಿನಲ್ಲಿರಬಹುದು. ಸ್ನಾನ ಮಾಡಿ ಎಷ್ಟು ದಿನಗಳಾಗಿದ್ದವೋ.  ಪೋಲಿಯೋದಿಂದ ಕಾಲುಗಳಲ್ಲಿ ಶಕ್ತಿಯಿಲ್ಲದೆ ತೆವಳುತ್ತಲೇ ಆತ ನಾನಿದ್ದ ಭೋಗಿಗೆ ಹತ್ತಿದ. ಬಿಕ್ಷುಕನಿರಬಹುದು ಎನ್ನುವುದು ಕೆಲವರ ಅನುಮಾನವಾದರೆ ಇನ್ನು ಕೆಲವರದು ಸಣ್ಣ ಪುಟ್ಟ ಕಳ್ಳತನ ಮಾಡುವ ಕಸುಬು ಅವನದಾಗಿರಬಹುದೆನ್ನುವ ಆತಂಕ. ಈಗೀಗ ರೈಲು ಮತ್ತು ಬಸ್ಸುಗಳಲ್ಲಿ ಇಂಥವರ ಕಾಟ ಅತಿಯಾಗುತ್ತಿದೆ ಎಂದು ಆಗಲೇ ಒಬ್ಬರು ಮಾತಿಗೆ ಶುರು ಮಾಡಿದರು. ಅಲ್ಲಿದ್ದ ಹೆಣ್ಣುಮಕ್ಕಳು ತಮ್ಮ ತಮ್ಮ ಮಕ್ಕಳನ್ನು ಕರೆದು ಪಕ್ಕಕ್ಕೆ ಕೂರಿಸಿಕೊಂಡರೆ  ಕೆಲವರು ತಮ್ಮ ಲಗೇಜುಗಳಿಗಾಗಿ ತಡಕಾಡತೊಡಗಿದರು. ಅಜ್ಜಿಯೊಬ್ಬಳು ತಾನು ತಿನ್ನುತ್ತಿದ್ದ ರೊಟ್ಟಿಯಲ್ಲಿ  ಅರ್ಧದಷ್ಟನ್ನು ಅವನಿಗೆ ಕೊಡಲು ಹೋದಾಗ ಆತ ನಯವಾಗಿ ನಿರಾಕರಿಸಿದ. ಆತನ ನಿರಾಕರಣೆ ಅಲ್ಲಿದ್ದ ಕೆಲವರನ್ನು ಕೆರಳಿಸಿತು. ಕೊಬ್ಬು, ಸೊಕ್ಕು ಎಂದೆಲ್ಲ ಅವನನ್ನು ಬಯ್ದಾಡಿದರು. ಹೀಗೆ ಇತರರು ಬಯ್ಯುವುದನ್ನು ಅವನು ಸಹಜವಾಗಿಯೇ ಸ್ವೀಕರಿಸಿದ. ಹಣ ಕೊಡಲು ಹೋದಾಗಲೂ ಆತ ಕೈ ಮುಂದೆ ಚಾಚಲಿಲ್ಲ. ಅವನ ಸ್ವಾಭಿಮಾನ ಅಲ್ಲಿದ್ದವರನ್ನು ಮತ್ತಷ್ಟು ಕೆರಳಿಸಿತು. ಪ್ರತಿಯೊಬ್ಬರೂ ತಮಗೆ ತಿಳಿದಂತೆ ಅವನನ್ನು ವ್ಯಾಖ್ಯಾನಿಸತೊಡಗಿದರು. ಏನನ್ನೂ ತೆಗೆದುಕೊಳ್ಳುತ್ತಿಲ್ಲ ಎಂದಾದರೆ ಅವನು ಕಳ್ಳನಾಗಿರಲೇ ಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದಿದ್ದರು. ಇನ್ನೇನು ಸ್ವಲ್ಪ ವೇಳೆಯ ನಂತರ ಎಲ್ಲರೂ ನಿದ್ದೆಗೆ ಜಾರುವ ಹೊತ್ತು. ಎಲ್ಲರೂ ಮಲಗಿದ ಮೇಲೆ ಕಳ್ಳತನ ಮಾಡುವ ಹೊಂಚು ಹಾಕಿರಬಹುದು. ಟಿಕೇಟ್ ಪಡೆದಿದ್ದಾನೋ ಇಲ್ಲವೋ?. ಹಾಗೊಂದು ವೇಳೆ ಟಿಕೇಟ್ ಖರೀದಿಸಿ ಟ್ರೇನ್ ಹತ್ತಿದ್ದರೆ ಅವನೇಕೆ ಹೀಗೆ ಕೆಳಗೆ ಕೂಡುತ್ತಿದ್ದ?. ಅವನು ಕೆಳಗೆ ಕುಳಿತ ಜಾಗ ಪ್ರಯಾಣಿಕರು ತಿಂದು ಎಸೆದ ವಸ್ತುಗಳಿಂದ ಗಲೀಜಾಗಿತ್ತು. ಇಡೀ ರೈಲು ಭೋಗಿಯೇ ತಿಪ್ಪೆಯಂತಾಗಿತ್ತು. ಹೀಗೆ ಗಲೀಜಿನಲ್ಲಿ ಬಂದು ಕುಳಿತುಕೊಳ್ಳುವ ದರ್ದು ಅವನಿಗೇನಿರಬಹುದು?. ಹೀಗೆ ಕುಳಿತಿದ್ದಾನೆಂದರೆ ಅವನು ಟಿಕೇಟು ಪಡೆದಿರಲಿಕ್ಕಿಲ್ಲ. ಮುಂದಿನ ನಿಲ್ದಾಣದಲ್ಲಿ ಇಳಿಯಬಹುದು. ಯಾವುದಕ್ಕೂ ಎಚ್ಚರವಾಗಿರಬೇಕು. ಹೀಗೆ ಅನೇಕ ವಿಚಾರಗಳು ಮನಸ್ಸಿನಲ್ಲಿ ಸುಳಿದಾಡಿದವು. ಮಕ್ಕಳ ಕಳ್ಳರ ಹಾವಳಿ ಇತ್ತೀಚಿಗೆ ಹೆಚ್ಚುತ್ತಿದೆ ಎಂದು ಮಹಿಳೆಯೊಬ್ಬಳು ಆತಂಕ ವ್ಯಕ್ತಪಡಿಸಿದಾಗ ತನ್ನ ಮೂರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ ತಾಯಿಗೆ ರಾತ್ರಿ ಹೇಗೆ ಕಳೆಯುವುದೆನ್ನುವ ಚಿಂತೆ ಶುರುವಾಯಿತು. ಒಟ್ಟಿನಲ್ಲಿ ಆತನ ಪ್ರವೇಶ ಆ ಇಡೀ ಕಂಪಾರ್ಟಮೆಂಟಿನಲ್ಲಿ ಒಂದು ಭೀಕರತೆಯನ್ನು ಸೃಷ್ಟಿಸಿ ನೀರವ ಮೌನಕ್ಕೆ ಎಡೆಮಾಡಿಕೊಟ್ಟಿತ್ತು.

         ಮುಂದೆ ಏನಾಗಲಿದೆ ಎನ್ನುವ ಆತಂಕದಿಂದ ಎಲ್ಲರೂ ಸಮಯವನ್ನು ತಳ್ಳುತ್ತಿರುವಾಗ ಆತ ಒಂದು ಕ್ಷಣ ಇಡೀ ಭೋಗಿಯನ್ನೊಮ್ಮೆ ಅವಲೋಕಿಸಿ ತಾನು ತೊಟ್ಟಿದ್ದ ಅಂಗಿಯನ್ನು ಕಳಿಚಿದ. ಎಲ್ಲರೂ ಅವನನ್ನು ಅಚ್ಚರಿಯಿಂದ ನೋಡುತ್ತಿರುವಂತೆಯೇ ತಾನು ತೊಟ್ಟಿದ ಅಂಗಿಯನ್ನೇ ಪೊರಕೆಯಂತೆ ಉಪಯೋಗಿಸಿ ಭೋಗಿಯಲ್ಲಿ ಕಸಗುಡಿಸತೊಡಗಿದ. ಅರ್ಧ ಗಂಟೆಯಲ್ಲಿ  ಇಡೀ ಭೋಗಿಯನ್ನು ಸ್ವಚ್ಛಗೊಳಿಸಿದ. ಕೆಲವು ಕ್ಷಣಗಳ ಹಿಂದೆ ತಿಪ್ಪೆಗುಂಡಿಯಂತಿದ್ದ ಆ ಸ್ಥಳ ಈಗ ಕನ್ನಡಿಯಂತೆ ಹೊಳೆಯತೊಡಗಿತು. ತನ್ನ ಕೆಲಸ ಮುಗಿಸಿದವನೇ ಈಗ ಎಲ್ಲ ಪ್ರಯಾಣಿಕರತ್ತ ತಾನು ಮಾಡಿದ ಕೆಲಸಕ್ಕಾಗಿ ಕೈ ಚಾಚತೊಡಗಿದ. ಕೆಲವರು ಒಂದಿಷ್ಟು ಹಣ ನೀಡಿದರೆ ಇನ್ನು ಕೆಲವರು ತಾವು ತಿಂದು ಉಳಿದಿದ್ದನ್ನು ಆತನ ಕೈಗೆ ಹಾಕಿದರು. ಕೆಲವರು ಏನನ್ನೂ ಪ್ರತಿಕ್ರಿಯಿಸದೆ ಮುಂದೆ ಸಾಗಹಾಕಿದರು. ಆತ ಮಾತ್ರ ಯಾರನ್ನೂ ಒತ್ತಾಯಿಸದೆ ಅತ್ಯಂತ ನಿರ್ಲಿಪ್ತನಂತೆ ಕೊಟ್ಟಿದ್ದನ್ನು ಪಡೆದು ಮುಂದಿನ ನಿಲ್ದಾಣದಲ್ಲಿ ರೈಲಿನಿಂದ ಇಳಿದು ಹೋದ. ಒಂದು ಕ್ಷಣ ಖಿನ್ನತೆ ಮನಸ್ಸನ್ನು ಆವರಿಸಿತು. ಏನೆಲ್ಲಾ ಯೋಚನೆಗಳು ಛೇ ನಾಚಿಕೆಯಾಯಿತು. ಕೆಲವೊಮ್ಮೆ ನಾವು  ಎಷ್ಟೊಂದು ಸಣ್ಣವರಾಗುತ್ತೇವೆ. ಆತನ ಸ್ವಾಭಿಮಾನ ಅಲ್ಲಿದ್ದ ಎಲ್ಲರನ್ನೂ ಕೆಲವು ಕ್ಷಣಗಳಾದರೂ ಕಾಡಿಸಿ ಕಟ್ಟಿಹಾಕಿತ್ತು. ವೇಷ ಭೂಷಣದಿಂದ ಮನುಷ್ಯರ ವ್ಯಕ್ತಿತ್ವವನ್ನು ಅಳೆಯುವ ನಮ್ಮ ಮನೋಭಾವ ಆ ಕ್ಷಣ ನಮ್ಮನ್ನೇ ಅಣಿಕಿಸಿದಂತಾಯಿತು.

---೦೦೦---

       'ಆವ್ ಬೇಟಾ ಶಹರ್ ತಕ್ ಛೋಡ್ತಾ ಹೂಂ' ಬಸ್ಸಿಗಾಗಿ ಕಾಯುತ್ತ ನಿಂತಿದ್ದವನ ಎದುರಿಗೆ ಬಂದು ನಿಂತ   ಲಾರಿಯೊಳಗಿನಿಂದ   ಡ್ರೈವರ್ ಮಾತು ಕೇಳಿಸಿತು. ಬೃಹತ್ ಗಾತ್ರದ ವಾಹನ ಗಕ್ಕೆಂದು ಪಕ್ಕಕ್ಕೆ ನಿಂತ ಆ ಕ್ಷಣ  ಮೈ ಭಯದಿಂದ ಕಂಪಿಸಿತು. ತಲೆ ಎತ್ತಿ ನೋಡಿದರೆ ಅಪರಿಚಿತ ಡ್ರೈವರ್ ಒಳಗೆ ಬಂದು ಕೂಡುವಂತೆ ಸಂಜ್ಞೆ ಮಾಡುತ್ತಿದ್ದ. ಬಸ್ಸಿಗಾಗಿ ಕಾದು ಕುಳಿತಿದ್ದ ನನಗೆ ಪರೀಕ್ಷೆ ತಪ್ಪಬಹುದೆನ್ನುವ ಭಯ ಕಾಡುತ್ತಿತ್ತು. ಬರಬೇಕಾದ ಬಸ್ ಇನ್ನು ಬಂದಿರಲಿಲ್ಲ. ಪರೀಕ್ಷೆಗೆ ತಡವಾಗಬಾರದೆಂದು ಊರಿನಿಂದ ಎರಡು ಕಿಲೋ ಮೀಟರ್ ನಡೆದುಕೊಂಡು  ಹತ್ತಿರದ ಬಸ್ ಸ್ಟಾಪ್ ಗೆ ಬಂದರೂ ಸಮಸ್ಯೆ ತಪ್ಪಿರಲಿಲ್ಲ. ನಾನಿದ್ದ ಆ ಸ್ಥಳವೋ ಅತ್ಯಂತ ನಿರ್ಜನವಾದ ಬಸ್ ನಿಲ್ದಾಣ. ದಿನಕ್ಕೆ ಒಂದೇ ಬಸ್ ಮೂರ್ನಾಲ್ಕು ಸಲ ಮಾತ್ರ ಓಡಾಡುತ್ತಿದ್ದ ರಸ್ತೆ ಅದು. ಬಸ್ ಏನಾದರೂ ಕೆಟ್ಟು ನಿಂತರೆ ದಿನವಿಡಿ ಆ ರಸ್ತೆ ಬಸ್ಸಿನ ಮುಖವನ್ನೇ ಕಾಣುತ್ತಿರಲಿಲ್ಲ. ತೀರ ಕುಗ್ರಾಮವಾಗಿದ್ದರಿಂದ ಬಸ್ಸಿನ ಸೌಕರ್ಯ ಅಷ್ಟಾಗಿ ಇರಲಿಲ್ಲ. ಊರಿನಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇದ್ದುದ್ದರಿಂದ ಪ್ರೌಢಶಾಲೆಗಾಗಿ ಸಮೀಪದ ನಗರಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಆ ದಿನಗಳಲ್ಲಿ ಶಾಲೆಗೆ ಕಲಿಯಲು ಬರುವ ಮಕ್ಕಳ ಸಂಖ್ಯೆಯೇ ಕಡಿಮೆ ಇರುತ್ತಿದ್ದುದ್ದರಿಂದ ನನ್ನೂರಿನಿಂದ ನನ್ನಜೊತೆಗೆ ಬರುವ ಮಕ್ಕಳ ಸಂಖ್ಯೆ ಅಷ್ಟೇನೂ ಹೆಚ್ಚಿರಲಿಲ್ಲ. ಕೆಲವು ಹುಡುಗರಂತೂ ಬಾಡಿಗೆ ಕೋಣೆಯಲ್ಲೋ ಇಲ್ಲವೇ ಸಂಬಂಧಿಕರ ಮನೆಗಳಲ್ಲೋ ಇದ್ದು ಕಲಿಯುತ್ತಿದ್ದದ್ದೆ ಹೆಚ್ಚು. 'ಬೇಟಾ ಆತೀ ಕ್ಯೊಂ ನಹಿ' ಸರದಾರ್ಜಿ  ನಾನು ಸುಮ್ಮನೆ ನಿಂತಿದ್ದನ್ನು ಕಂಡು ಮತ್ತೊಮ್ಮೆ ಕೇಳಿದ. ಬಸ್ ಬರುವುದು ಖಾತ್ರಿಯಿಲ್ಲ ಜೊತೆಗೆ ಪರೀಕ್ಷೆ ಬೇರೆ ಲಾರಿ ಹತ್ತದೆ ವಿಧಿಯಿರಲಿಲ್ಲ. ಅನುಮಾನಿಸುತ್ತಲೇ ಒಳಗೆ ಹೋಗಿ ಕುಳಿತವನಿಗೆ ಸರಾಯಿಯ ಕೆಟ್ಟ ವಾಸನೆ ಮೂಗಿಗೆ ಬಡಿದು ಹೊಟ್ಟೆ ತೊಳಸಿದಂತಾಯಿತು. ಪರಿಸ್ಥಿತಿ ಅರಿತ ಡ್ರೈವರ್ ಕ್ಲಿನರ್ ನತ್ತ ಕೈ ತೋರಿಸಿ 'ಬದ್ಮಾಶ್ ಕೊ ನ ಪೀನೆ ಕೊ ಬಹುತ್ ಬಾರ್ ಬೋಲದಿಯಾ ಹೂಂ. ಸುನತಾ ನಹೀಂ' ಎಂದು ತನ್ನ ಅಸಹಾಯಕತೆ ತೋಡಿಕೊಂಡ. ತಾನು ಕುಡಿದಿಲ್ಲ ಎನ್ನುವುದನ್ನು ತೋರಿಸಿಕೊಳ್ಳುತ್ತಿರಬಹುದು ಎಂದು ಮನಸ್ಸು ಅರೆಕ್ಷಣ ಅನುಮಾನಿಸಿತು. ನನ್ನೂರಿನಲ್ಲಿ ಜನ ಮಾತನಾಡಿಕೊಳ್ಳುವಂತೆ ಈ ಲಾರಿ ಡ್ರೈವರ್ ಗಳಿಗೆ ಕುಡಿಯದೆ ಲಾರಿ ಓಡಿಸುವುದು ಅಸಾಧ್ಯದ ಮಾತು. ಜೊತೆಗೆ ಅವರಿಗೆ ನೂರಾರು ಚಟಗಳಂತೆ. ಕೆಲವು ದಿನಗಳ ಹಿಂದೆ ನನ್ನೂರಿನ ಪಕ್ಕದ ಹಳ್ಳಿಯಿಂದ   ಮದುವೆ ದಿಬ್ಬಣಕ್ಕೆ  ಹೋಗುತ್ತಿದ್ದ ಲಾರಿಯೊಂದು ಡ್ರೈವರ್ ನ ಅಚಾತುರ್ಯದಿಂದ ಹಳ್ಳಕ್ಕೆ ಬಿದ್ದು ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರು. ಒಟ್ಟಿನಲ್ಲಿ ಲಾರಿಯಲ್ಲಿ ಪ್ರಯಾಣಿಸುವುದು ಅಪಾಯಕ್ಕೆ ಅವಕಾಶ ಮಾಡಿಕೊಟ್ಟಂತೆ. ಹೀಗೆ ಅನೇಕ ಯೋಚನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ಆತ ಹಿಂದಿ ಸಿನಿಮಾದ ಹಾಡನ್ನು ಗುನುಗುತ್ತ ತಗ್ಗು  ದಿನ್ನೆಗಳಲ್ಲಿ ಸರಾಗವಾಗಿ ಲಾರಿ ಓಡಿಸುತ್ತಿದ್ದ. ಲಾರಿ ಮುಗುಚಿ ಬೀಳಲಿದೆ ಎನ್ನುವಂತೆ ಒಂದು ಕಡೆಯಿಂದ ಇನ್ನೊಂದು ಕಡೆ ಓಲಾಡುತ್ತಿತ್ತು. ಹಣೆಯ ಮೇಲಿನ ಬೆವರೊರಿಸಿಕೊಳ್ಳುತ್ತಿದ್ದ ನನ್ನನ್ನೊಮ್ಮೆ ದಿಟ್ಟಿಸಿ ನೋಡಿದ ಡ್ರೈವರ್ 'ಕ್ಯಾ ಢರ್ ಆಗಯಾ' ಎಂದವನೇ ಲಾರಿಯ ವೇಗವನ್ನು ಹೆಚ್ಚಿಸಿದ. ಗಾಡಿ ನಿಲ್ಲಿಸಲು ಹೇಳಬೇಕೆಂದರೆ ಧ್ವನಿಯೇ ಹೊರಬರುತ್ತಿಲ್ಲ. ಕಣ್ಮುಚ್ಚಿ ಮನದಲ್ಲಿ ದೇವರನ್ನು ನೆನೆದೆ. ಕೊನೆಗೂ ನಾನು ಇಳಿಯಬೇಕಿದ್ದ  ಬಸ್ ಸ್ಟ್ಯಾಂಡ್ ಸಮೀಪಿಸಿತು. ಇಳಿಯಲು ಹೋದವನನ್ನು ತಡೆದು ಆತ ಕೇಳಿದ 'ಸ್ಕೂಲ್ ಕಂಹಾ ಹೈ ದೇರ್ ಹೊರಹಿನಾ ಇಸ್ಲಿಯೆ'. ಸ್ಕೂಲಿನ ದಾರಿ ತೋರಿಸಿದೆ. ಪ್ರತಿನಿತ್ಯ ಬಸ್ ಸ್ಟ್ಯಾಂಡ್ ನಿಂದ ಮೂರು ಕಿಲೋ ಮೀಟರ್ ನಡೆದು ಹೋಗುತ್ತಿದ್ದವನು ಆ ದಿನ ಶಾಲೆಯ ಬಾಗಿಲೆದುರೇ ಇಳಿದೆ. ಹಣ ಕೊಡಲು ಹೋದವನನ್ನು ತಡೆದು ಹೇಳಿದ 'ನಹೀಂ ಬೇಟಾ ಮೈ ತೋ ಪಡಾಯಿ ನಹೀಂ ಕಿಯಾ. ಆಪ್ ಜೈಸಿ ಪಡಾಯಿ ವಾಲೋ ಕೊ ಮದತ್ ಕರ್ನೆಸೆ ಮೇರಾ ಬಚ್ಚೋ ಕೊ ಅಚ್ಛಾ ಹೋಗಾ' ಎಂದವನೇ ತನ್ನಲ್ಲಿದ್ದ ಸಿಹಿ ತಿಂಡಿಯ ಪೊಟ್ಟಣವನ್ನು  ನನ್ನ ಕೈಗಿತ್ತು ಮರೆಯಾದ. ಮನಸ್ಸು ಕೃತಜ್ಞತೆಯಿಂದ ಭಾರವಾಯಿತು. ಆತನ ಬಗ್ಗೆ ಕಲ್ಪಿಸಿಕೊಂಡಿದ್ದೆಲ್ಲ ಸುಳ್ಳು ಎಂದರಿವಾಗಲು ತಡವಾಗಲಿಲ್ಲ. ಯಾರೋ ಮಾಡುವ ತಪ್ಪಿಗೆ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡುವ ರೀತಿಗೆ ಅರೆಕ್ಷಣ ಮನಸ್ಸು ಬೇಸರಿಸಿತು. ಕಲ್ಪನೆಗೂ ಮತ್ತು ವಾಸ್ತವಿಕತೆಗೂ ಇರುವ ಅಂತರದ ಅರಿವಾಯಿತು ಆ ದಿನ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 




Thursday, August 1, 2013

ಇನ್ನೂ ಹುಟ್ಟದ ನಾಳೆ

       'ಬರಲಿರುವ ನಾಳೆ ತರಲಿರುವುದೇನು?' ಇಂಥದ್ದೊಂದು ಪ್ರಶ್ನೆ ನನ್ನನ್ನು ಅನೇಕ ಸಂದರ್ಭಗಳಲ್ಲಿ ಕಾಡಿ ವಿಚಲಿತಗೊಳಿಸಿದೆ. ನಿನ್ನೆಯ ನೆನಪುಗಳೊಂದಿಗೆ ಈ ದಿನದ ಬದುಕನ್ನು ಬದುಕುತ್ತಿರುವ ನಮಗೆ ನಾಳೆಗಳ ಅಗತ್ಯವೂ ಇದೆ. ಇವತ್ತಿನ ಬದುಕಿನೊಂದಿಗೆ ಮುಖಾಮುಖಿಯಾಗುವುದರ ಜೊತೆಗೆ ನಮ್ಮ ನಾಳೆ ಹೇಗಿರಬೇಕೆಂದು ಚಿಂತಿಸಬೇಕಿದೆ. ಈ ದಿನದ ವಾಸ್ತವಿಕತೆಯೇ ಇಷ್ಟೊಂದು ಕಠೋರವಾಗಿರುವಾಗ ಇನ್ನು ನಾಳೆ ಹೇಗಿರಬಹುದು ಎನ್ನುವ ಆತಂಕ ಎದುರಾಗಿ ಮನಸ್ಸು ತಲ್ಲಣಿಸಿದ ಸಂದರ್ಭಗಳೆಷ್ಟೋ. ಈ ಆತಂಕ ತಲ್ಲಣಗಳ ನಡುವೆಯೂ ನಾವು ಬರಲಿರುವ ನಾಳೆಗಳ ಕನಸು ಕಟ್ಟಬೇಕಿದೆ. 

ರಾಷ್ಟ್ರ ಭ್ರಷ್ಟಾಚಾರ  ಮುಕ್ತವಾಗಲಿ 


          ಭ್ರಷ್ಟಾಚಾರ ಎನ್ನುವ ಅನಿಷ್ಟ ವ್ಯವಸ್ಥೆ ರಾಷ್ಟ್ರವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಭ್ರಷ್ಟಾಚಾರ ಎನ್ನುವುದು ಬಹುರೂಪಿಯಾಗಿರುವುದರಿಂದ ಅದು ದೇಶದ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಪ್ರಾಮಾಣಿಕತೆ, ರಾಷ್ಟ್ರ ಪ್ರೇಮ, ಸತ್ಯ, ನಿಷ್ಠೆ ಈ ಗುಣಗಳೆಲ್ಲ ಮೂಲೆಗುಂಪಾಗಿವೆ. ಒಬ್ಬ ಸಾಮಾನ್ಯ ಸರ್ಕಾರಿ ನೌಕರನಿಂದ ಹಿಡಿದು ದೇಶದ ಪ್ರಧಾನ ಮಂತ್ರಿಯವರೆಗೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ಅದಕ್ಕೆಂದೇ ಲೋಕಾಯುಕ್ತ ಇಲಾಖೆಗೆ ಇಲ್ಲಿ ಕೈತುಂಬ ಕೆಲಸ. ಭ್ರಷ್ಟರನ್ನು ಹಿಡಿಯುವುದಕ್ಕೆಂದೇ ಇಲಾಖೆಯೊಂದನ್ನು ಸ್ಥಾಪಿಸಿರುವುದರ ಅರ್ಥ ಇಲ್ಲಿ ಭ್ರಷ್ಟಾಚಾರವನ್ನು ಸಾರ್ವತ್ರಿಕರಣಗೊಳಿಸಲಾಗಿದೆ ಎಂದಾಗುತ್ತದೆ. ಲೋಕಾಯುಕ್ತರು ದಾಳಿ ಮಾಡಿದಾಗ ಸಾಮಾನ್ಯ ಸರ್ಕಾರಿ ಗುಮಾಸ್ತನೋರ್ವನ ಮನೆಯಲ್ಲಿ ಕೋಟಿಗಳ ಲೆಕ್ಕದಲ್ಲಿ ಹಣ ಮತ್ತು ಕೇಜಿಗಳ ತೂಕದಲ್ಲಿ ಚಿನ್ನ ಬೆಳ್ಳಿ ದೊರೆಯುತ್ತದೆ. ರಾಜಕೀಯ ನಾಯಕರುಗಳಿಗಂತೂ ಈ ಭ್ರಷ್ಟಾಚಾರ ಎನ್ನುವುದು ಕುಲದ ಕಸುಬಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರುಗಳು ಮಾಡಿರುವ ಇತಿಹಾಸ ಕಂಡು ಕೇಳರಿಯದ ಭ್ರಷ್ಟಾಚಾರಗಳಿಗೆ ಅವರನ್ನು ಆರಿಸಿ ಕಳುಹಿಸಿದ ಮತದಾರರೇ ಸಾಕ್ಷಿಯಾಗಬೇಕಾಗಿ ಬಂದದ್ದು ಅದು ರಾಷ್ಟ್ರದ ಬಹುಮುಖ್ಯ ದುರಂತಗಳಲ್ಲೊಂದು. ವಿಧಾನ ಸೌಧದಲ್ಲೇ ಭ್ರಷ್ಟಾಚಾರದ ನೀಲ ನಕ್ಷೆ ಜನ್ಮತೆಳೆಯುತ್ತದೆ, ಪಾರ್ಲಿಮೆಂಟಿನಲ್ಲಿ ಹಣದ ಚೀಲ ಹರಿದಾಡುತ್ತದೆ ಇಂಥ ಅಪಸವ್ಯಗಳು ಘಟಿಸುವುದು ಅದು ನಮ್ಮ ರಾಷ್ಟ್ರದಲ್ಲಿ ಮಾತ್ರ.

       ಭ್ರಷ್ಟಾಚಾರ ಎನ್ನುವುದು ಬಹುಮುಖಿಯಾಗಿ ವ್ಯಾಪಿಸುತ್ತ ಹೋದಂತೆಲ್ಲ ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮ, ರಾಷ್ಟ್ರ ಧರ್ಮ ಇತ್ಯಾದಿ ಕುರಿತು ಪ್ರಜೆಗಳಲ್ಲಿ ಒಂದು ರೀತಿಯ ಸಿನಿಕತನ ಮನೆಮಾಡುತ್ತದೆ. ಅದಕ್ಕೆಂದೇ ಕಸಬ್ ನಂಥ ಅನ್ಯರಾಷ್ಟ್ರದ ಭಯೋತ್ಪಾದಕ ರಾಜಾರೋಷವಾಗಿ ದೇಶದೊಳಗೆ ಅಡಿಯಿಡುತ್ತಾನೆ. ಅಫ್ಜಲ್ ನಂಥ ಪರಮ ಪಾತಕಿ ಅತ್ಯಂತ ಪವಿತ್ರ ಸಂವಿದಾನಿಕ ಕೇಂದ್ರವಾದ ಪಾರ್ಲಿಮೆಂಟ್ ಮೇಲೆಯೇ ದಾಳಿಯ ಸಂಚು ರೂಪಿಸುತ್ತಾನೆ. ಭಯೋತ್ಪಾದಕರು ವಿಮಾನಗಳನ್ನು ಅಪಹರಿಸಿ ಜೈಲಿನಲ್ಲಿರುವ ತಮ್ಮ ಸಹಚರರ ಬಿಡುಗಡೆಯ ಬೇಡಿಕೆ ಮುಂದಿಡುತ್ತಾರೆ. ದೇಶದ  ಮಹಾನಗರಗಳಲ್ಲಿ ಬಾಂಬ್ ಸ್ಫೋಟಗಳಂತೂ ಮಕ್ಕಳ ಆಟದಂತಾಗುತ್ತವೆ. ದೇಶದ ಭ್ರಷ್ಟಾಚಾರ ವ್ಯವಸ್ಥೆಯನ್ನೇ ಏಣಿಯಾಗಿಟ್ಟುಕೊಂಡು ಇಲ್ಲಿ ಹೋರಾಟದ ಮನೋಭಾವ ಪ್ರದರ್ಶಿಸುವ ಸಮಯ ಸಾಧಕರು ಬೆಳೆಯಲು ಪ್ರಯತ್ನಿಸುತ್ತಾರೆ. ದುರಂತವೆಂದರೆ ನಂತರದ ದಿನಗಳಲ್ಲಿ ಇಂಥ ಹೋರಾಟಗಾರರೂ ಸಹ ಭ್ರಷ್ಟಾಚಾರ ಎನ್ನುವ ವ್ಯವಸ್ಥೆಯ ಭಾಗವಾಗುವುದು.

            ಭ್ರಷ್ಟಾಚಾರದ ಬೇರುಗಳಿರುವುದೇ ರಾಜಕಾರಣದಲ್ಲಿ. ಆದ್ದರಿಂದ ಇಲ್ಲಿ ಭ್ರಷ್ಟಾಚಾರವನ್ನು ಬೇರುಮಟ್ಟದಿಂದಲೇ ಕಿತ್ತೊಗೆಯುವ ಪ್ರಯತ್ನಕ್ಕೆ ಚಾಲನೆ ದೊರೆಯಬೇಕು. ಸರ್ಕಾರವೇ ಮುಂದಾಗಿ ಕಾನೂನನ್ನು ರೂಪಿಸಬೇಕು. ಮೊದಲು ಆಗಬೇಕಾದ ಕೆಲಸ ಭಾರತದ ರಾಜಕೀಯ ಪುನರುತ್ಥಾನ. ರಾಜಕೀಯ ಎನ್ನುವದು ಸಾಮಾಜಿಕ ಸೇವೆ ಎಂಬ ಮನೋಭಾವ ನಮ್ಮ ರಾಜಕೀಯ ನಾಯಕರುಗಳಲ್ಲಿ ಬಲವಾಗಬೇಕು. ಪ್ರತಿ ರಾಜಕಾರಣಿ ಒಂದಕ್ಕಿಂತ ಹೆಚ್ಚು ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ಜಾರಿಗೆ ಬರಬೇಕು. ಈ ಮೂಲಕ ರಾಜಕೀಯ ಎನ್ನುವುದು ವಂಶಪಾರಂಪರ್ಯ ಎನ್ನುವ ಮನೋಭಾವ ತೊಲಗಬೇಕು. ಜೊತೆಗೆ ಇಲ್ಲಿನ ಕಾನೂನು ಈಗಿರುವುದಕ್ಕಿಂತಲೂ ಕಠಿಣವಾಗಬೇಕು. ಮಾಡಿದ ತಪ್ಪಿಗಿಂತ ಶಿಕ್ಷೆಯ ಪ್ರಮಾಣ ಅಧಿಕವಾಗಿರಬೇಕು. ನ್ಯಾಯಾಲಯ ಕೊಡುವ ಶಿಕ್ಷೆ ಅದು ತಪ್ಪು ಮಾಡಲು ಮುಂದಡಿಯಿಡುವವರಿಗೆ  ಪಾಠವಾಗಬೇಕು.  ಕಸಬ್ ಮತ್ತು ಅಫ್ಜಲ್ ಈ ಇಬ್ಬರನ್ನು ಗಲ್ಲಿಗೇರಿಸಿದ ಮಾತ್ರಕ್ಕೆ ದೇಶ ಸುಭಿಕ್ಷವಾಗಿದೆ ಎನ್ನುವ ಆತುರದ ನಿರ್ಣಯ ಸರಿಯಲ್ಲ. ಭ್ರಷ್ಟಾಚಾರ ಕೊನೆಗೊಂಡರೆ ಅದರೊಂದಿಗೆ ಭಯೋತ್ಪಾದನೆಯೂ ಕೊನೆಗೊಂಡಂತೆಯೇ. ಅಮೆರಿಕಾ ದೇಶದಲ್ಲಿ ಭಯೋತ್ಪಾದನೆ ಮತ್ತೆ ಮತ್ತೆ ಮರುಕಳಿಸದಿರುವುದಕ್ಕೆ ಅಲ್ಲಿನ ಪ್ರಜೆಗಳ ರಾಷ್ಟ್ರ ಪ್ರೇಮ ಮತ್ತು ಪ್ರಾಮಾಣಿಕತೆಯೇ ಕಾರಣ ಎನ್ನುವುದು ನಮಗೆ ಸ್ಪೂರ್ತಿಯಾಗಬೇಕು.


   ಸರ್ವರಿಗೂ ಸಮಾನ ಶಿಕ್ಷಣದ  ಅವಕಾಶ


          ಸಂವಿಧಾನಿಕವಾಗಿ ಶಿಕ್ಷಣ ಅದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳಲ್ಲೊಂದು. ಅದಕ್ಕೆಂದೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎನ್ನುವ ಕಾಯ್ದೆಯ ಅಡಿಯಲ್ಲಿ ೧ ರಿಂದ ೧೪ ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಯೋಜನೆ ರೂಪಿಸಿ ಹಲವು ದಶಕಗಳೇ ಕಳೆದು ಹೋಗಿವೆ. ವಿಪರ್ಯಾಸ ನೋಡಿ ಹೀಗೆ ಕಾಯ್ದೆಯೊಂದನ್ನು ರೂಪಿಸುವ ಸರ್ಕಾರ ಮತ್ತೊಂದೆಡೆ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ತೆರೆಯಲು ಖಾಸಗಿಯವರಿಗೆ ಪರವಾನಿಗೆ ನೀಡುತ್ತದೆ. ಸರ್ಕಾರದಿಂದ ಪರವಾನಿಗೆ ಪಡೆಯುವ ಖಾಸಗಿಯವರು ರಾಷ್ಟ್ರದಲ್ಲಿ ಬೃಹತ್ ಶೈಕ್ಷಣಿಕ ಉದ್ದಿಮೆಯೊಂದು ತಲೆ ಎತ್ತಲು ಕಾರಣರಾಗುತ್ತಾರೆ. ಸರ್ಕಾರದಿಂದ ನೇರವಾಗಿ ಕಾರ್ಯ ನಿರ್ವಹಿಸುವ ಶಾಲೆಗಳು ಮತ್ತು ಖಾಸಗಿಯವರ ಒಡೆತನಕ್ಕೆ ಸೇರಿದ ಶಾಲೆಗಳು ಹೀಗೆ ಎರಡೆರಡು ಶಾಲೆಗಳಿಂದಾಗಿ ಪಾಲಕರಲ್ಲಿ ಆಯ್ಕೆಯ ಪ್ರಶ್ನೆ ಎದುರಾಗುತ್ತದೆ. ಇದೇ ಹೊತ್ತಿನಲ್ಲಿ ಜಾಗತೀಕರಣ ಭಾರತದ ವಿವಿಧ ಕ್ಷೇತ್ರಗಳಲ್ಲಿ ತನ್ನ ಪಾರುಪತ್ಯವನ್ನು ಆರಂಭಿಸಲು ತೊಡಗಿದಾಗ ಅದಕ್ಕೆ ತಮ್ಮ ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಲು ಪಾಲಕರಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಎನ್ನುವುದು ಖಾಸಗಿ ಒಡೆತನದವರ ಪರಂಪರಾಗತ ಆಸ್ತಿಯಂತಾಗಿರುವಾಗ ಖಾಸಗಿ ಶಾಲೆಗಳ ಮೆಟ್ಟಿಲೇರುವುದೇ ಅವರಿಗಿರುವ ಏಕೈಕ ದಾರಿ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲೇ ಬೇಕೆನ್ನುವುದಾದರೆ ಖಾಸಗಿಯವರು ವಸೂಲಿ ಮಾಡುವ ದುಬಾರಿ ಶುಲ್ಕವನ್ನು ಭರಿಸಲೇ ಬೇಕು. ಇದು ಎಲ್ಲ ಪಾಲಕರಿಂದಲೂ ಸಾಧ್ಯವೇ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಎಲ್ಲರಿಂದಲೂ ಸಾಧ್ಯವಿಲ್ಲ ಎನ್ನುವುದಾದರೆ ಹಣವಿರುವವರು ಇಂಗ್ಲಿಷ್ ಶಾಲೆಗಳತ್ತ ನಡೆದರೆ ಹಣವಿಲ್ಲದವರು ಸರ್ಕಾರದ ಕನ್ನಡ ಶಾಲೆಗಳತ್ತ ಮುಖ ಮಾಡಬೇಕು. ಹಾಗಾದರೆ ಇದರರ್ಥ ಇಲ್ಲಿ ಪಾಲಕರ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಮಗುವಿನ ಶಿಕ್ಷಣ ಮಾಧ್ಯಮ ನಿರ್ಧಾರಿತವಾಗುತ್ತದೆ ಎಂದಾಯಿತು. ಈ ಸಂದರ್ಭ ಸರ್ಕಾರವೇ ರೂಪಿಸಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ತನ್ನ ಸಂವಿಧಾನಿಕ ಮಹತ್ವವನ್ನು ಕಳೆದುಕೊಂಡಿದೆ ಎನ್ನುವ ತಾತ್ವಿಕ ನಿಲುವಿಗೆ ನಾವುಗಳು  ಬರಬಹುದು.

             ಹೀಗೆ ಮಕ್ಕಳ ಶಿಕ್ಷಣದ ವಿಷಯವಾಗಿ ಸಮಸ್ಯೆ ಎದುರಾದಾಗ ಎಚ್ಚೆತ್ತುಕೊಳ್ಳುವ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಎನ್ನುವ ಹೊಸ ಕಾಯ್ದೆಯೊಂದನ್ನು ರೂಪಿಸುತ್ತದೆ. ಈ ಕಾಯ್ದೆಯ ಮೂಲಕ ಇದುವರೆಗೂ ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸೌಲಭ್ಯ ಖಾಸಗಿ ಇಂಗ್ಲಿಷ್ ಶಾಲೆಗಳಿಗೂ ವಿಸ್ತರಿಸಿತು. ಹಾಗೆಂದ ಮಾತ್ರಕ್ಕೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಎಲ್ಲ ಮಕ್ಕಳೂ ಇಂಗ್ಲಿಷ್ ಶಿಕ್ಷಣ ಪಡೆಯಲು ಸಾಧ್ಯ ಎನ್ನುವಂತಿಲ್ಲ. ಏಕೆಂದರೆ ಈ ಕಾಯ್ದೆಯಡಿ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ   ಬಡವರ ಮಕ್ಕಳಿಗಾಗಿ ಕಾಯ್ದಿರಿಸಿದ್ದು ಪ್ರತಿಶತ ೨೫ ಸೀಟುಗಳನ್ನು ಮಾತ್ರ. ಸರ್ಕಾರದ ಈ ತಾರತಮ್ಯ ನೀತಿಯಿಂದಾಗಿ ನಮ್ಮ ದೇಶದಲ್ಲಿ ಮಕ್ಕಳ ಶಿಕ್ಷಣ ಎನ್ನುವುದು ಅವರ ಪಾಲಕರ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿದೆ. ಶ್ರೀಮಂತರ ಮಕ್ಕಳು ಇಂಗ್ಲಿಷ್ ಶಾಲೆಗಳತ್ತ ಮುಖ ಮಾಡಿದರೆ ಬಡವರ ಮಕ್ಕಳು ಸರ್ಕಾರದ ಕನ್ನಡ ಶಾಲೆಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಇಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಎನ್ನುವುದು ಇನ್ನೂ ಪರಿಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ.

           ಇಲ್ಲಿ ಸರ್ವರಿಗೂ ಸಮಾನ ಶಿಕ್ಷಣ ದೊರೆಯುವಂತಾಗಲು ಸರ್ಕಾರ ಮಾಡ  ಬೇಕಾಗಿರುವ ಮೊದಲ ಕೆಲಸ ಅದು ಶಿಕ್ಷಣ ಕ್ಷೇತ್ರವನ್ನು  ಖಾಸಗಿಯವರ ಹಿಡಿತದಿಂದ ಹೊರತರುವುದು. ಶಿಕ್ಷಣದ ಖಾಸಗಿಕರಣವೇ ಇವತ್ತು ಶಿಕ್ಷಣ ದುಬಾರಿಯಾಗಲು ಕಾರಣವಾಗಿರುವುದು. ಸಂಘ ಸಂಸ್ಥೆಗಳು ಮಾತ್ರವಲ್ಲದೆ ಶಾಲೆ ಕಾಲೇಜುಗಳ ಸ್ಥಾಪನೆ   ಎನ್ನುವುದು ಕೌಟಂಬಿಕ ಉದ್ದಿಮೆಯಾಗಿ  ಬದಲಾಗುತ್ತಿರುವುದು ಇವತ್ತು ಶಿಕ್ಷಣವನ್ನು ಖಾಸಗೀಕರಣ ಹೇಗೆ ನಿಯಂತ್ರಿಸುತ್ತಿದೆ ಎನ್ನುವುದಕ್ಕೊಂದು ಸ್ಪಷ್ಟ ನಿದರ್ಶನ. ಆದ್ದರಿಂದ ಶಿಕ್ಷಣ ಎನ್ನುವುದು ಸರಕಾರದ ಒಡೆತನಕ್ಕೆ ಸೇರಿದ ವ್ಯವಸ್ಥೆಯಾಗಬೇಕು. ಜೊತೆಗೆ ಮಗುವಿನ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಕಡ್ಡಾಯವಾಗಬೇಕು.  ಶಿಕ್ಷಣದಲ್ಲಿ ಪ್ರಾದೇಶಿಕತೆಗೆ ಆದ್ಯತೆ ದೊರೆಯಬೇಕು. ಕೇಂದ್ರೀಯ ಪಠ್ಯಕ್ರಮ ಆಧಾರಿತ ಶಿಕ್ಷಣ ಪದ್ಧತಿ ರದ್ದಾಗಬೇಕು. ಜಾತಿ ಮತ್ತು ಆರ್ಥಿಕ ಆಧಾರಿತ ಮೀಸಲಾತಿ ತೆಗೆದುಹಾಕಿ ಎಲ್ಲರಿಗೂ ಉಚಿತ ಶಿಕ್ಷಣ ದೊರೆಯುವಂತಾಗಬೇಕು. ಒಟ್ಟಿನಲ್ಲಿ ಸಾಮರ್ಥ್ಯದ ಆಧಾರದ ಮೇಲೆ ಶಿಕ್ಷಣ ಪಡೆಯುವ ವ್ಯವಸ್ಥೆ ಮರೆಯಾಗಬೇಕು.

ಅಸಮಾನತೆ ಅಳಿಯಲಿ


               ಈ ವಿಷಯವಾಗಿ ಬರೆಯುವಾಗ ಇಲ್ಲೊಂದು ಘಟನೆ ನೆನಪಾಗುತ್ತಿದೆ.  ನನ್ನೂರಿನ ಇಬ್ಬರು ಯುವಕರಾದ ರಾಮ ಮತ್ತು ಮೋಹನನಿಗೆ ಸರ್ಕಾರಿ ಇಲಾಖೆಯೊಂದರ ಹುದ್ದೆಗಾಗಿ ಸಂದರ್ಶನಕ್ಕೆ ಕರೆ ಬಂದಿತು. ಹೀಗೆ ಸಂದರ್ಶನಕ್ಕೆ ಹಾಜರಾದ ಇಬ್ಬರಲ್ಲಿ ಮೋಹನ ನೇಮಕಗೊಂಡರೆ ರಾಮ ಆಯ್ಕೆಯಾಗಲಿಲ್ಲ. ಅಚ್ಚರಿಯ ಸಂಗತಿ ಎಂದರೆ ರಾಮ ಪದವಿಯಲ್ಲಿ ಪ್ರತಿಶತ ೭೫  ರಷ್ಟು ಅಂಕಗಳನ್ನು ಮತ್ತು ಸಂದರ್ಶನದಲ್ಲಿ ಶೇಕಡಾ ೮೦ ಅಂಕಗಳನ್ನು ಪಡೆದು ಕೂಡಾ ಆಯ್ಕೆಯಾಗುವಲ್ಲಿ ವಿಫಲನಾದ.  ಇದಕ್ಕಿಂತ ಆಶ್ಚರ್ಯದ ವಿಷಯವೆಂದರೆ ಮೋಹನ ಪದವಿಯಲ್ಲಿ ಗಳಿಸಿದ್ದು ಕೇವಲ ಪ್ರತಿಶತ ೪೦ ಅಂಕಗಳನ್ನು ಹಾಗೂ ಸಂದರ್ಶನದಲ್ಲಿ ಅವನಿಗೆ ದೊರೆತದ್ದು ಪ್ರತಿಶತ ೪೫ ಅಂಕಗಳು. ಇಂಥದ್ದೊಂದು ವ್ಯತ್ಯಾಸದ ನಡುವೆಯೂ ಮೋಹನ ಆಯ್ಕೆಯಾಗಲು ಕಾರಣ  ಮೀಸಲಾತಿಯಡಿ ಆ ಹುದ್ದೆಗೆ ಅರ್ಜಿ ಸಲ್ಲಿಸಲು ಅವನು ಅರ್ಹನಾಗಿದ್ದ. ಅಂಥದ್ದೊಂದು ಸೌಲಭ್ಯ ಹೊಂದಲು ರಾಮ ಅನರ್ಹನಾಗಿದ್ದರಿಂದ ಸಹಜವಾಗಿಯೇ ಅವನು ಗರಿಷ್ಠ ಅಂಕಗಳನ್ನು ಹೊಂದಿಯೂ ಕೂಡ ಆಯ್ಕೆಯಾಗುವಲ್ಲಿ ವಿಫಲನಾದ. ಈ ವಿಫಲತೆಯಿಂದ ಮಾನಸಿಕವಾಗಿ ಘಾಸಿಗೊಂಡ ಆರ್ಥಿಕವಾಗಿ ಹಿಂದುಳಿದ  ರಾಮ ಆ ಒಂದು ಆಘಾತದಿಂದ ಹೊರಬರಲು ಅನೇಕ ದಿನಗಳು ಹಿಡಿದವು.

             ಇಲ್ಲಿ ನಾನು ಇದು ಮೋಹನನ ತಪ್ಪೆಂದಾಗಲಿ ಇಲ್ಲವೇ ರಾಮನ ತಪ್ಪೆಂದಾಗಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಒಟ್ಟಿನಲ್ಲಿ ನಮ್ಮ ವ್ಯವಸ್ಥೆಯಲ್ಲಿ ತುಂಬಾ ಆಳವಾಗಿ ಬೇರೂರಿರುವ ಸಾಮಾಜಿಕ ಅಸಮಾನತೆಯ ಫಲಶ್ರುತಿ ಇದು. ಅನೇಕ ತಲೆಮಾರುಗಳ ಹಿಂದೆ ರಾಮನ ಪೂರ್ವಿಕರು ಮಾಡಿದ ತಪ್ಪುಗಳು ಇವತ್ತು ರಾಮನಂಥ ಅಮಾಯಕರನ್ನು ದಹಿಸುತ್ತಿವೆ. ಇದೇ ಹೊತ್ತಿನಲ್ಲಿ ಆ ಮಾತನ್ನು ಹೀಗೂ ಹೇಳಬಹುದು ಅನೇಕ ತಲೆಮಾರುಗಳ ಹಿಂದೆ ಮೋಹನನ ಪೂರ್ವಿಕರು  ಅನುಭವಿಸಿದ ಯಾತನೆಯ ಬದುಕು ಮೋಹನನಂಥವರಿಗೆ ವರ ಕೊಡುವ ಕಾಮಧೇನುವಾಗಿದೆ.

        ಇರಲಿ ಯಾರ ಪೂರ್ವಿಕರದಾದರೂ ತಪ್ಪಿರಲಿ ಆದರೆ ಇಲ್ಲಿ ಎದುರಾಗುವ  ಆತಂಕವೆಂದರೆ ಅರ್ಹನಾದ ರಾಮ ಹೀಗೆ ವಂಚಿತನಾದಾಗ ಆತ ನಂತರ ಏನಾಗಬಹುದು?. ಏಕೆಂದರೆ ಇಲ್ಲಿ ರಾಮ ಸಾಮಾಜಿಕ ಅಸಮಾನತೆಯನ್ನು  ಪರಿಚಯಿಸಿದವನಲ್ಲ ಹಾಗೂ ಹಿಂದುಳಿದವರನ್ನು ತುಳಿದವನೂ ಅಲ್ಲ. ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆಗೆ ಒಳಗಾದಾಗ ಸಹಜವಾಗಿಯೇ ಆತ ಸಮಾಜದ ವಿರುದ್ಧ ಸಿಡಿದೇಳಬಹುದು. ವಿದ್ಯಾವಂತನಾಗಿಯೂ ತಪ್ಪು ದಾರಿ ತುಳಿದು ಅಪರಾಧಿಯಾಗಬಹುದು. ಒಂದೆಡೆ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ಉಮೇದಿಯಲ್ಲಿ ಸಮಾಜದ ಅಸ್ವಸ್ಥತೆಗೂ ಕಾರಣವಾಗಬಹುದು. ಆದ್ದರಿಂದ ನಾವು ಮಾಡಬೇಕಾಗಿರುವ ಮೊದಲ ಕಾರ್ಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ವಿಷಯವಾಗಿ ಈಗ ಸಮಾಜದಲ್ಲಿ ಮನೆಮಾಡಿಕೊಂಡಿರುವ ಜಾತಿ ಆಧಾರಿತ ಮೀಸಲಾತಿಯನ್ನು  ತೆಗೆದು ಹಾಕಬೇಕು. ಬದಲಾಗಿ ಆರ್ಥಿಕವಾಗಿ ಹಿಂದುಳಿದ ಆಧಾರಿತ ಮೀಸಲಾತಿ ಜಾರಿಗೆ ಬರಬೇಕು.

             

ಜಾಗತೀಕರಣ ದೂರಾಗಲಿ


       ಇವತ್ತು ಜಾಗತೀಕರಣ ಎನ್ನುವುದು ನಮ್ಮ ಅಡುಗೆ ಮನೆಯನ್ನೂ ಪ್ರವೇಶಿಸಿದೆ. ಚೀನಾದ ತಟ್ಟೆ ಬಟ್ಟಲುಗಳಲ್ಲಿ ನಾವು ಊಟ ಮಾಡುತ್ತಿದ್ದೇವೆ. ಧರಿಸುವ ಭಟ್ಟೆಯಿಂದ ಕಾಲಲ್ಲಿನ ಚಪ್ಪಲಿಯವರೆಗೆ ಪ್ರತಿಯೊಂದು ವಿದೇಶಿ ಆಮದು. ಪಯಣಿಸುವ ವಾಹನ, ಸಂಪರ್ಕಕ್ಕಾಗಿ ಉಪಯೋಗಿಸುವ ಮೊಬೈಲ್, ಮನೋರಂಜನೆ ನೀಡುತ್ತಿರುವ ದೂರದರ್ಶನ ಒಟ್ಟಿನಲ್ಲಿ ಜಾಗತೀಕರಣದ ಭೂತವನ್ನು ನಾವು ನಮ್ಮೊಳಗೆ ಎಳೆದುಕೊಂಡಿದ್ದೇವೆ. ವಿದೇಶಿ ಉತ್ಪನ್ನಗಳೆಲ್ಲ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಪರಿಣಾಮವಾಗಿ ನನ್ನೂರಿನ ಮಾರ ತಯ್ಯಾರಿಸುವ ಚಪ್ಪಲಿಗಳಿಗೆ ಈಗ ಬೇಡಿಕೆಯೇ ಇಲ್ಲ. ಒಂದು ಕಾಲದಲ್ಲಿ ಇಡೀ ಊರಿನ ಜನರಿಗೆ ಬಟ್ಟೆ ಹೊಲಿದು ಕೊಡುತ್ತಿದ್ದ ದರ್ಜಿ ಮಹಮದ್ ಅಲಿ  ಈಗ ಕೆಲಸವಿಲ್ಲದೆ ತನ್ನ ಅಂಗಡಿಗೆ ಬೀಗ ಹಾಕಿರುವನು. ಊರಿನ ಬಡಿಗ, ಕುಂಬಾರ, ಕಮ್ಮಾರ, ನೇಕಾರ ಇವರೆಲ್ಲ ನಿರುದ್ಯೋಗಿಗಳಾಗಿರುವರು. ಜೀವನೋಪಾಯಕ್ಕಾಗಿ ಸಣ್ಣ ಸಣ್ಣ ಗೃಹ ಕೈಗಾರಿಕೆಗಳನ್ನು ಅವಲಂಬಿಸಿದ್ದ ನೂರಾರು ಕುಟುಂಬಗಳು ಕೆಲಸವಿಲ್ಲದೆ ಬೀದಿ ಪಾಲಾಗಿವೆ.

           ಇನ್ನು ನನ್ನೂರಿನ ಸಮೀಪದಲ್ಲಿರುವ ನಗರಕ್ಕೆ ಬಂದರೆ ಅಲ್ಲಿನ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಒಂದು ಸಮಯದಲ್ಲಿ ಬೀದಿ ಬದಿಯಲ್ಲಿ ತಳ್ಳುಗಾಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಸಾವಿರಾರು ಸಣ್ಣ ವ್ಯಾಪಾರಿಗಳನ್ನು ಮಾಲ್ ಎನ್ನುವ ಜಾಗತೀಕರಣದ ಸಂಸ್ಕೃತಿ ಇಡೀಯಾಗಿ ಆಪೋಶನ ತೆಗೆದುಕೊಂಡಿದೆ. ಹೀಗೆ ನಾನು ಜಾಗತೀಕರಣದ ವಿರುದ್ಧ ಬರೆಯುತ್ತಿರುವ ಸಂದರ್ಭ ಕೆಲವರು ಬಹುರಾಷ್ಟ್ರೀಯ ಕಂಪನಿಗಳ ಕುರಿತು ಮಾತನಾಡಬಹುದು. ಬಹುರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗವೇನೋ ಲಭಿಸುತ್ತಿದೆ ಆದರೆ ಅದರ ಬೆನ್ನಲೇ ಅದು ಯಾರಿಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇವತ್ತು ಮಲ್ಟಿ ನ್ಯಾಷನಲ್ ಕಂಪನಿಗಳನ್ನು ಸೇರಿ ಲಕ್ಷಾಂತರ ರುಪಾಯಿಗಳಲ್ಲಿ ಸಂಬಳವನ್ನು ಪಡೆಯುತ್ತಿರುವವರು  ಸಾಫ್ಟವೇರ್ ಇಂಜಿನಿಯರ್ ಮತ್ತು ಇಂಗ್ಲಿಷ್ ಬರುವ ವಿದ್ಯಾವಂತರು ಮಾತ್ರ. ನನ್ನೂರಿನ ಮಾರ ಮತ್ತು ಮಹಮದ್ ಅಲಿ ಅಂಥವರಿಗೆ ಏನಾದರೂ ಈ ಆರಂಕಿ ಸಂಬಳ ಸಿಗುತ್ತಿದೆಯೇ? ಮ್ಯಾಕ್ ಡೊನಾಲ್ಡ್ ಎನ್ನುವ ವಿಶಿಷ್ಟ ಖಾದ್ಯವನ್ನು ತಯ್ಯಾರಿಸುವ ವಿದೇಶಿ ಕಂಪನಿಯೊಂದು ಭಾರತಕ್ಕೆ ಕಾಲಿಡಲು ಹುನ್ನಾರ ನಡೆಸುತ್ತಿದೆ. ಅದೇನಾದರೂ  ಬಂದಲ್ಲಿ ಬದುಕಿಗಾಗಿ ಸಣ್ಣ ಹೊಟೇಲ್ ಮತ್ತು ಬೇಕರಿಗಳನ್ನು  ಅವಲಂಬಿಸಿರುವ  ಲಕ್ಷಾಂತರ ಕುಟುಂಬಗಳಿಗೆ  ಕೆಲಸವಿಲ್ಲದೆ ಅವರ ಬದುಕು ಅತಂತ್ರವಾಗುತ್ತದೆ.

              ಜಾಗತೀಕರಣದ ಪರಿಣಾಮ ಪ್ರಾದೇಶಿಕ ಭಾಷೆ ಮತ್ತು ಉದ್ಯೋಗ ಮೂಲೆಗುಂಪಾಗುವ ಅಪಾಯ ಎದುರಾಗಿದೆ. ಇವತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪ್ರಾಮುಖ್ಯತೆ ಪಡೆಯುತ್ತಿರುವುದಕ್ಕೂ  ಮತ್ತು ಮಾತೃ ಭಾಷಾ ಶಿಕ್ಷಣದ ಬೇಡಿಕೆ ಕುಸಿಯುತ್ತಿರುವುದರ ಹಿಂದೆ ಈ ಜಾಗತೀಕರಣ ಅತ್ಯಂತ ಪರಿಣಾಮಕಾರಿಯಾಗಿ  ಕೆಲಸ ಮಾಡುತ್ತಿದೆ. ಜಾಗತೀಕರಣದಿಂದಾಗಿ ಭಾರತಕ್ಕೆ ಲಗ್ಗೆ ಇಡುತ್ತಿರುವ ವಿದೇಶಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಇಂಗ್ಲಿಷ್ ಶಿಕ್ಷಣ ಅನಿವಾರ್ಯವಾಗುತ್ತಿದೆ. ಆದ್ದರಿಂದ ಬಹುಪಾಲು ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷಾ ಶಿಕ್ಷಣದ ಬದಲು ಇಂಗ್ಲಿಷ್ ಶಿಕ್ಷಣ ಒದಗಿಸಲು ಹೆಣಗುತ್ತಿರುವರು. ಇನ್ನೊಂದೆಡೆ ಒಂದು ಪ್ರದೇಶದಲ್ಲಿನ ಜನರ ಉದ್ಯೋಗದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇಂದಿನ ಯುವ ಪೀಳಿಗೆ ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಮುಂದುವರೆಯಲು ಇಷ್ಟಪಡುತ್ತಿಲ್ಲ. ಒಂದುಕಾಲದಲ್ಲಿ ಬದುಕಿಗೆ ಆಧಾರವಾಗಿದ್ದ ಉದ್ಯೋಗಗಳು ಅವರಿಗೆ ಕೀಳಾಗಿ ಕಾಣಿಸುತ್ತಿವೆ. ಜೊತೆಗೆ ವಿದೇಶಿ ವಸ್ತುಗಳು ಸುಲಭವಾಗಿ ಕೈಗೆಟುಕುವ ದರದಲ್ಲಿ ದೊರೆಯುತ್ತಿರುವುದರಿಂದ ಗುಡಿ ಕೈಗಾರಿಕೆಗಳಿಗೆ ಅಂಥ ಉತ್ತೇಜನ ಸಿಗುತ್ತಿಲ್ಲ.

            ಜಾಗತೀಕರಣ ತಂದೊಡ್ಡುತ್ತಿರುವ ಇನ್ನೊಂದು ಅಪಾಯವೆಂದರೆ ಅದು ಅನ್ನ ನೀಡುತ್ತಿರುವ  ರೈತರ ಭೂಮಿಯನ್ನು ಕಬಳಿಸುತ್ತಿರುವುದು. ಸರ್ಕಾರವೇ ಮುಂದಾಗಿ ವಿದೇಶಿ ಕಂಪನಿಗಳಿಗೆ ಭೂಮಿ ನೀಡುವ ಆಮಿಷವೊಡ್ಡಿ ಆಹ್ವಾನಿಸುತ್ತಿರುವುದರಿಂದ ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿರುವರು. ಕೆಲವು ಪ್ರದೇಶಗಳಲ್ಲಿ ರೈತರು ತಮ್ಮ ಭೂಮಿಯನ್ನು ವಿದೇಶಿ ಕಂಪನಿಗಳಿಗೆ ನೀಡಲು ಹಿಂದೇಟು ಹಾಕುತ್ತಿರುವರು. ಆದರೆ ಇದೇ ಮನೋಭಾವ ನಾವು ಎಲ್ಲ ರೈತರಿಂದ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ಸರ್ಕಾರ ಹೆಚ್ಚಿನ ಹಣದ ಆಮಿಷವೊಡ್ಡಿ ರೈತರಿಂದ ಭೂಮಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ. ಕೃಷಿ ಭೂಮಿ ಕ್ಷೀಣಿಸಿದಂತೆಲ್ಲ   ಕೃಷಿ ಉತ್ಪಾದನೆಯೂ ಕ್ಷೀಣಿಸುತ್ತಿದೆ. ಈ ಸಮಸ್ಯೆಯ ಪರಿಣಾಮ ಪ್ರತಿ ಕುಟುಂಬ ಇವತ್ತು ತಿನ್ನುವ ಆಹಾರದ ಮೇಲೆ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ವಿನಿಯೋಗಿಸಬೇಕಾಗಿದೆ. ಇಂಥ ಸನ್ನಿವೇಶದಲ್ಲಿ ಶಿಕ್ಷಣ ಆರೋಗ್ಯದಂಥ ಮೂಲಭೂತ ಅವಶ್ಯಕತೆ ಜನರಿಗೆ ಅದರಲ್ಲೂ ಬಡವರೆಂದು ಗುರುತಿಸಿರುವ ದೇಶದ ಬಹುಪಾಲು ಜನಸಂಖ್ಯೆಗೆ ಮರೀಚಿಕೆಯಾಗಿದೆ.
                 

 ಸ್ತ್ರೀ ಶೋಷಣೆ ನಿಲ್ಲಲಿ


        'ಮಹಿಳೆ ಮಧ್ಯರಾತ್ರಿ ಯಾವುದೇ ಭಯವಿಲ್ಲದೆ ಓಡಾಡಿದ ದಿನದಂದೇ ನಮಗೆ ಸ್ವಾತಂತ್ರ್ಯ ದೊರೆತಂತೆ' ಎಂದು ಗಾಂಧೀಜಿ ಹೇಳಿರುವರಂತೆ. ಹೀಗೆ ಅವರೆಂದು ಹೇಳಿರುವರೆಂದು ಗೊತ್ತಿಲ್ಲ. ಆದರೆ ಈ ವಿಷಯ ಬಾಯಿಯಿಂದ ಬಾಯಿಗೆ ಹರಿದಾಡಿ ಈಗ ಅದು ಗಾಂಧೀಜಿಯವರ ಕೃತಿ ಸ್ವಾಮ್ಯವಾಗಿದೆ. ಇರಲಿ ಈ ಮಾತು ಈಗ ಏಕೆ ನೆನಪಾಯಿತೆಂದರೆ ದೆಹಲಿಯಲ್ಲಿ ನಿರ್ಭಯಾಳ ಬದುಕಿನಲ್ಲಾದ ಆ ಘಟನೆಯ ನಂತರ ನಮ್ಮ ದೇಶದಲ್ಲಿ ಹೆಣ್ಣು ಹೆತ್ತವರ ಆತಂಕ ಮತ್ತು ತಳಮಳ ಹೆಚ್ಚುತ್ತಿವೆ. ಹೀಗೆ ಶೋಷಣೆಗೆ ಒಳಗಾದವರಲ್ಲಿ ನಿರ್ಭಯಾಳೆ ಮೊದಲಿಗಳು ಎಂದಲ್ಲ. ಆಕೆಗಿಂತ ಮೊದಲು ಅನೇಕ ಮಹಿಳೆಯರು ಇಂಥದ್ದೊಂದು ಶೋಷಣೆಗೆ ಒಳಗಾಗಿರುವರು. ಆದರೆ ಈ ದಿನಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಪರಿಣಾಮ ಇಂಥ ಅಹಿತಕರ ಘಟನೆಗಳು ಬಹುಬೇಗನೆ ಜನರನ್ನು ತಲುಪುತ್ತಿವೆ.
     
             ನಮಗೆಲ್ಲ ನೆನಪಿರುವಂತೆ ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿಯಾಗಿ ಅತಿ ಹೆಚ್ಚಿನ ಅವಧಿಗೆ ಆಳ್ವಿಕೆ ನಡೆಸಿದ್ದು ಒಬ್ಬ ಮಹಿಳೆ. ಹೀಗಿದ್ದೂ ಇಲ್ಲಿ ಮಹಿಳೆಯರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಮದರ್ ಥೆರೇಸಾಳಂಥ ಮಾತೃ ಅಂತ:ಕರಣದ ಮಹಿಳೆ ಸ್ತ್ರೀಯಲ್ಲಿರುವ ಸೇವಾಮನೋಭಾವ ಮತ್ತು ಆಕೆಯ ಮಾತೃತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದಳು. ಮದರ್ ಥೆರೇಸಾ ಈ ಕಾರ್ಯವನ್ನು ಭಾರತದಲ್ಲಿದ್ದುಕೊಂಡು ಮಾಡಿದ್ದನ್ನು ನಾವಿಲ್ಲಿ ಗಮನಿಸಬೇಕು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಮಹಿಳೆಯರ ಕೊಡುಗೆ ಗಮನಾರ್ಹ.  ಒಟ್ಟಿನಲ್ಲಿ ಮಹಿಳೆಯರನ್ನು ದೇವತೆಯಂತೆ ಪೂಜಿಸಿದ ನೆಲವಿದು. ಇಷ್ಟೆಲ್ಲ ಚರಿತ್ರೆಯನ್ನು ತಳಹದಿಯಾಗಿ ಹೊಂದಿಯೂ ಕೂಡ ಇಲ್ಲಿ ಮಹಿಳೆಯರ ಮೇಲಿನ ಶೋಷಣೆ ಅವ್ಯಾಹತವಾಗಿ ಮುಂದುವರೆದಿದೆ.

      ಮಗಳಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಮಹಿಳೆ ನಿರ್ವಹಿಸುವ ಪಾತ್ರ ತುಂಬ ಮೌಲಿಕವಾದದ್ದು. ಈ ಪ್ರಜ್ಞಾವಂತ ಸಮಾಜ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನಮ್ಮ ನಾಳೆಯಲ್ಲಿ ಮಹಿಳಿಗೆ ಪೂಜ್ಯನೀಯ ಸ್ಥಾನ ದೊರೆಯಬೇಕು. ಪರಸ್ತ್ರೀಯರನ್ನು ತಾಯಿ, ಸಹೋದರಿ, ಮಗಳಾಗಿ ಕಾಣುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ಸ್ತ್ರೀ ಹತ್ಯೆ ಇತ್ಯಾದಿ ಶೋಷಣೆಗಳು ಕೊನೆಗೊಳ್ಳಬೇಕು. 

ಹಳ್ಳಿಗಳು ಉಳಿಯಲಿ 


         ನಗರೀಕರಣವನ್ನು  ಅದೊಂದು ಸಾಮಾಜಿಕ ಬೆಳವಣಿಗೆ ಎಂದೇ  ಪರಿಗಣಿಸಲಾಗುತ್ತಿದೆ. ಆದರೆ ನಗರೀಕರಣ ಎನ್ನುವುದು  ನೇರವಾಗಿ ಹಳ್ಳಿಗಳ ನಾಶಕ್ಕೆ ಕಾರಣವಾಗುತ್ತಿದೆ. ಹಳ್ಳಿಗಳೆಲ್ಲ ನಾಶವಾಗಿ ನಗರಗಳಾಗಿ ಪರಿವರ್ತನೆಯಾಗುತ್ತಿರುವ ಈ ಹೊತ್ತಿನಲ್ಲಿ ನಾವು ಕಳೆದುಕೊಳ್ಳುತ್ತಿರುವುದೇನು ಎನ್ನುವ ವಿವೇಚನೆಯೇ ನಮಗಿಲ್ಲವಾಗಿದೆ. ನಗರಗಳೆಲ್ಲ ಬೃಹದಾಕಾರವಾಗಿ ಬೆಳೆಯುತ್ತ ರೈತರ ಭೂಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವಾಗ ಕೃಷಿ ಎನ್ನುವ ವೃತ್ತಿ ನಿರಂತರವಾಗಿ ಕ್ಷೀಣಿಸುತ್ತಿದೆ. ಪರಿಣಾಮವಾಗಿ ಆಹಾರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹಿಂದೆ ನಾವುಗಳು ಚಿಕ್ಕವರಾಗಿದ್ದಾಗ ಆಗೆಲ್ಲ ಈಗಿನಂತೆ ಪ್ರತಿಯೊಂದನ್ನು ಹಣ ಕೊಟ್ಟು  ಖರೀದಿಸುವ ಅಗತ್ಯವಿರಲಿಲ್ಲ. ರೈತರು ತಾವು ಬೆಳೆದ ಕಾಳು ಕಡಿಗಳನ್ನು ಕೊಟ್ಟು ಅದಕ್ಕೆ ಬದಲಾಗಿ ದಿನಸಿ ಅಂಗಡಿಗಳಿಂದ ಮನೆಗೆ ಬೇಕಾದ ಪದಾರ್ಥಗಳನ್ನು ತರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಒಬ್ಬ ರೈತ ತಾನು ಬೆಳೆದ ಬೆಳೆಯನ್ನು ಬೇರೊಬ್ಬ ರೈತನಿಗೆ ಕೊಟ್ಟು ತನ್ನಲ್ಲಿಲ್ಲದ ಬೆಳೆಯನ್ನು ಅವನಿಂದ ಪಡೆಯುತ್ತಿದ್ದ. ಇದು ಒಂದು ರೀತಿಯಲ್ಲಿ ವಸ್ತುಗಳ ವಿನಿಮಯ. ಕಾಲ ಬದಲಾದಂತೆ ಕೃಷಿ ಭೂಮಿ ಕ್ಷೀಣಿಸುತ್ತ  ಹೋದಂತೆಲ್ಲ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾರಂಭಿಸಿದರು. ಪರಿಣಾಮವಾಗಿ ರೈತನೊಬ್ಬ ತನ್ನಲ್ಲಿ ಇಲ್ಲದ ಬೆಳೆಯನ್ನು ಹಣಕೊಟ್ಟು ಮಾರುಕಟ್ಟೆಯಿಂದ ಖರೀದಿಸುವ ಪರಿಸ್ಥಿತಿ ಎದುರಾಯಿತು. ಒಂದೆಡೆ ಕಡಿಮೆಯಾಗುತ್ತಿರುವ ಕೃಷಿ ಭೂಮಿ ಇನ್ನೊಂದೆಡೆ ನೇರವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಕೃಷಿ ಉತ್ಪನ್ನದಿಂದಾಗಿ ನಾವು ತಿನ್ನುವ ಆಹಾರದ ಬೆಲೆ ಗಗನಕ್ಕೇರುತ್ತಿದೆ.

       ಇಂಥದ್ದೊಂದು ಅಪಾಯ ಎದುರಾದ ಸಂದರ್ಭದಲ್ಲೇ ಕೃಷಿ ಎನ್ನುವ ಉದ್ಯೋಗ ಇಂದಿನ ಯುವಕರಿಂದ ಅಸಡ್ಡೆಗೆ ಒಳಗಾಗುತ್ತಿರುವುದು ಅದು ಗಾಯದ ಮೇಲೆ ಬರೆ ಎಳೆಸಿಕೊಂಡಂತೆ. ಹಳ್ಳಿಗಳಲ್ಲಿನ ಬಹಳಷ್ಟು ರೈತರು ಇರುವ ಅತ್ಯಲ್ಪ ಕೃಷಿ ಭೂಮಿಯನ್ನು ವಸತಿ ಪ್ರದೇಶಗಳಿಗಾಗಿ ಪರಭಾರೆ ಮಾಡಿ ಬರುವ ಹಣದೊಂದಿಗೆ ನಗರಗಳಿಗೆ ವಲಸೆ ಹೋಗುತ್ತಿರುವರು. ಅನೇಕ ರೈತ ಕುಟುಂಬಗಳು ಇವತ್ತು ಕೃಷಿಯನ್ನು ತೊರೆದು ಸಮೀಪದ ನಗರಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಲು ಹಿಂಜರಿಯುತ್ತಿಲ್ಲ. ಹಲವಾರು ರೈತ ಕುಟುಂಬಗಳು ಮಕ್ಕಳ ಶಿಕ್ಷಣದ ನೆಪವೊಡ್ಡಿ ಇಡೀ ಕುಟುಂಬದೊಂದಿಗೆ ನಗರಗಳಿಗೆ ಗುಳೇ ಹೋಗುತ್ತಿರುವ ಪರಿಣಾಮ ಹಳ್ಳಿಗಳೆಲ್ಲ ಖಾಲಿಯಾಗಿ ಬಿಕೋ ಎನ್ನುತ್ತಿವೆ. ಒಂದುಕಾಲದಲ್ಲಿ ದೇಶದ  ಜೀವಾಳ ಎಂದು ಪರಿಗಣಿಸಲ್ಪಟ್ಟಿದ್ದ ಹಳ್ಳಿಗಳು ಇಂದು ಅವಸಾನದ ಅಂಚಿಗೆ ಬಂದು  ನಿಂತಿವೆ.

        ಈಗ ಸರ್ಕಾರ ಮಾಡಬೇಕಿರುವ ಕೆಲಸ ಕೃಷಿ ಹಾಗೂ ಗುಡಿಕೈಗಾರಿಕೆಗಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ಹಳ್ಳಿಗಳನ್ನು ನಾಶವಾಗದಂತೆ ಎಚ್ಚರವಹಿಸಬೇಕು. ರೈತರ ಕೃಷಿ ಭೂಮಿಯನ್ನು ಕಬಳಿಸುತ್ತಿರುವ ನಗರೀಕರಣ ಸ್ಥಗಿತಗೊಳ್ಳಬೇಕು. ಹಳ್ಳಿಗಾಡಿನ ರೈತರ ಮಕ್ಕಳಿಗೆ ಅವರಿದ್ದ  ಜಾಗದಲ್ಲೇ ಗುಣಾತ್ಮಕ ಶಿಕ್ಷಣ ದೊರೆಯುವಂತಾಗಬೇಕು. ರೈತರ ಜಮೀನುಗಳಿಗೆ ಉಚಿತ ಮತ್ತು ನಿರಂತರ ವಿದ್ಯುತ್ ಪೂರೈಕೆಯಾಗುವುದಲ್ಲದೆ ಅವರು ಬೆಳೆಯುವ ಬೆಳೆಗಳಿಗೆ ಬೆಂಬಲಿತ ಬೆಲೆ ದೊರೆತು ಕೃಷಿ ಉದ್ಯೋಗಕ್ಕೆ ಮಾನ್ಯತೆ ಸಿಗಬೇಕು. ಹೀಗಾದಾಗ ಮಾತ್ರ ವಿದ್ಯಾವಂತರೂ ಕೃಷಿ ಉದ್ಯೋಗದೆಡೆ ಆಕರ್ಷಿತರಾಗಿ ಹಳ್ಳಿಗಳಲ್ಲಿಯೇ ಉಳಿದು ಜೊತೆಗೆ ಹಳ್ಳಿಗಳನ್ನೂ ಉಳಿಸುವ ದಿನಗಳನ್ನು ನಾವು ಕಾಣಬಹುದು.

ಕೊನೆಯ ಮಾತು 


              ಶಿವರಾಮ ಕಾರಂತರ ಮಾತುಗಳೊಂದಿಗೆ ಈ ಲೇಖನವನ್ನು ಪೂರ್ಣಗೊಳಿಸುವುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಅವರು ತಮ್ಮ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ 'ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದಿತು? ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ದಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?'.  ಒಟ್ಟಿನಲ್ಲಿ ಸಮಸ್ಯೆಗಳಿಂದ ಮುಕ್ತವಾದ  ನಾಳೆಯೊಂದನ್ನು ನಾವು ನಮ್ಮ ಮಕ್ಕಳಿಗಾಗಿ ಕಟ್ಟಿಕೊಡಬೇಕಿದೆ. ಅಂಥದ್ದೊಂದು ನಾಳೆಗಾಗಿ ನಾವು ಪ್ರಯತ್ನಿಸದೇ ಇದ್ದಲ್ಲಿ ಅವರಿಗಾಗಿ ಬಿಟ್ಟುಹೋಗುವುದು ಉಸಿರು ಕಟ್ಟುವ ವಾತಾವರಣವನ್ನು ಮಾತ್ರ. ಅಂಥ ವಾತಾವರಣದಲ್ಲಿ ನಮ್ಮ ಮಕ್ಕಳು ತಮ್ಮ ವರ್ತಮಾನವನ್ನು ಬದುಕಬೇಕೆ? ನಾವು ಯೋಚಿಸಬೇಕಿದೆ.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ