Monday, March 25, 2013

ನನ್ನ ತೇಜಸ್ವಿ: ಒಂದು ಅನನ್ಯ ಅನುಭವ

      



       ಎಲ್ಲರಿಗೂ ಗೊತ್ತಿರುವಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ತಂದೆ ಕುವೆಂಪು ಅವರ ಗಾಢ ಪ್ರಭಾವಳಿಯಿಂದ ಬಹುದೂರ ನಿಂತು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅಪೂರ್ವ ಬರಹಗಾರ. ಕುವೆಂಪು ಮಲೆನಾಡಿನಿಂದ ಮೈಸೂರಿಗೆ ಬಂದು ನೆಲೆಸಿದರೆ ತೇಜಸ್ವಿ ಮೈಸೂರಿನಿಂದ  ಮಲೆನಾಡಿಗೆ ಹೋಗಿ ಬದುಕು ಕಟ್ಟಿಕೊಂಡವರು. ಲೇಖಕರಾಗಿ, ಪ್ರಕಾಶಕರಾಗಿ, ಕೃಷಿಕರಾಗಿ, ಸಂಶೋಧಕರಾಗಿ, ಹೋರಾಟಗಾರರಾಗಿ, ಹವ್ಯಾಸಿ ಛಾಯಾಗ್ರಾಹಕರಾಗಿ ವಿವಿಧ ಪ್ರಕಾರದ ಸೃಜನಾತ್ಮಕ ಆಯಾಮಗಳನ್ನು ಅಭಿವ್ಯಕ್ತಿಗೊಳಿಸಿದ ವ್ಯಕ್ತಿತ್ವ ತೇಜಸ್ವಿ ಅವರದು. ತೇಜಸ್ವಿ ಮಹಾ ಮುಂಗೋಪಿಯಂತೆ, ಅವರ ಸ್ಕೂಟರ್ ಗೆ ಒಂದೇ ಸೀಟಂತೆ, ಪ್ರಶಸ್ತಿಗಳೆಂದರೆ ಅವರಿಗೆ ಅಲರ್ಜಿ ಹೀಗೆ ತೇಜಸ್ವಿ ಅವರ ಕುರಿತು ಅನೇಕ ವರ್ಣರಂಜಿತ ಸುದ್ದಿಗಳು ರೆಕ್ಕೆ ಬಿಚ್ಚಿಕೊಂಡು ಹಾರಾಡುತ್ತಿದ್ದರೆ ಅದು ನಮಗೆಲ್ಲ ಕುತೂಹಲದ ಸಂಗತಿಯಾಗಿರುತ್ತಿತ್ತು. ಕಾಡಿನ ಬದುಕಿನ ಅನೇಕ ವಿಸ್ಮಯಗಳನ್ನು ಬರವಣಿಗೆಯ ಮೂಲಕ ತೆರೆದಿಟ್ಟ ತೇಜಸ್ವಿ ಅವರ ಬದುಕು ನಮಗೆಲ್ಲ ಅಚ್ಚರಿ ಮತ್ತು ವಿಸ್ಮಯಗಳ ಸಂಗತಿ. ಕೊನೆಗೂ 'ನನ್ನ ತೇಜಸ್ವಿ' ಪುಸ್ತಕದ ಮೂಲಕ ಶ್ರೀಮತಿ ರಾಜೇಶ್ವರಿ ಅವರು ಆ ಎಲ್ಲ ಕುತೂಹಲಗಳಿಗೆ ಉತ್ತರಿಸಿದ್ದಾರೆ. ಒಂದರ್ಥದಲ್ಲಿ ಇದು ತೇಜಸ್ವಿ ಅವರ ಆತ್ಮಕಥೆ.

      'ನನ್ನ ತೇಜಸ್ವಿ' ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮರಣಾನಂತರ ಅವರ ಪತ್ನಿ ಶ್ರೀಮತಿ ರಾಜೇಶ್ವರಿ ಅವರು ಬರೆದ ಕೃತಿ. ತೇಜಸ್ವಿ ಅವರು ಬದುಕಿದ್ದಾಗಿನ ಘಟನೆ ಇದು ಆಗ ಅವರ ಸಾಹಿತಿ ಮಿತ್ರರೋರ್ವರು ರಾಜೇಶ್ವರಿ ಅವರಿಗೆ ಪುಸ್ತಕ ಬರೆಯುವಂತೆ ಸೂಚಿಸಿದ್ದರಂತೆ. ಅವರ ಮಾತಿಗೆ ತೇಜಸ್ವಿ 'ಅವಳು ದಿನಸಿ ಚೀಟಿ ಬರೆಯಲಿಕ್ಕೆ ಮಾತ್ರ ಲಾಯಕ್ಕು' ಎಂದು ಹಾಸ್ಯ ಮಾಡಿದ್ದನ್ನು ರಾಜೇಶ್ವರಿ ಈ ಪುಸ್ತಕದಲ್ಲಿ ಉಲ್ಲೇಖಿಸಿರುವರು. ಅಂದು ತೇಜಸ್ವಿ ಅವರ ಪರಿಹಾಸ್ಯಕ್ಕೆ ಒಳಗಾದ ಅದೇ ಗೃಹಿಣಿ ೫೪೮ ಪುಟಗಳ 'ನನ್ನ ತೇಜಸ್ವಿ' ಪುಸ್ತಕ ಬರೆದಿರುವುದು ಸಣ್ಣ ಸಂಗತಿಯಲ್ಲ. ತೇಜಸ್ವಿ ಬದುಕಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಆದರೆ ಕನ್ನಡ ಸಾಹಿತ್ಯದ ಓದುಗರು ಈ ಕೃತಿಗೆ ಸೃಜನಶೀಲತೆಯ ನೆಲೆಯಲ್ಲಿ ಅತ್ಯುತ್ತಮವಾಗಿಯೇ ಸ್ಪಂದಿಸಿರುವರು. ಓದಿದವರೆಲ್ಲ ರಾಜೇಶ್ವರಿ ಅವರ ಬರವಣಿಗೆಯನ್ನು ಮೆಚ್ಚಿಕೊಂಡಿರುವರು. 

      ಪುಸ್ತಕದಲ್ಲಿ ಒಟ್ಟು ೨೧ ಅಧ್ಯಾಯಗಳಿವೆ. ಪುಸ್ತಕದ ವಿಷಯ ವಸ್ತು ಮುಖ್ಯವಾಗಿ ತೇಜಸ್ವಿ ಅವರನ್ನೇ ಕೇಂದ್ರವಾಗಿಟ್ಟುಕೊಂಡರು ಕುವೆಂಪು ಅವರ ವ್ಯಕ್ತಿ ಚಿತ್ರಣ, ಆ ಕಾಲಘಟ್ಟದ ಚಳುವಳಿಗಳು, ಕುವೆಂಪು ಅವರ ಪತ್ನಿ ಮತ್ತು ಮಕ್ಕಳು, ಮಲೆನಾಡಿನ ಮಳೆಯ ಸೊಗಸು, ಕಾಫಿ ಬೆಳೆಗಾರರ ಸಮಸ್ಯೆಗಳು ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ. ತೇಜಸ್ವಿ ಅವರ ಜೊತೆ ಜೊತೆಗೆ ಕುವೆಂಪು ಅವರ ವ್ಯಕ್ತಿತ್ವವನ್ನು ಲೇಖಕಿ ಅತ್ಯಂತ ಸುಂದರವಾಗಿ ಕಟ್ಟಿ ಕೊಟ್ಟಿರುವರು. ಪುಸ್ತಕದಲ್ಲಿನ ಬರವಣಿಗೆಯ ಶೈಲಿ ಅತ್ಯಂತ ವಿಶಿಷ್ಟವಾಗಿದ್ದು ಓದಿದ ನಂತರ ಇದು ಲೇಖಕಿಯ ಪ್ರಥಮ ಕೃತಿಯೇ ಎನ್ನುವ ಅಚ್ಚರಿ ಓದುಗನಲ್ಲಿ ಮೂಡುತ್ತದೆ. ದೀರ್ಘಕಾಲದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಪರಿಣಿತ ಬರಹಗಾರನೋರ್ವನ ಶೈಲಿ ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ. ತೇಜಸ್ವಿ ಅವರೊಂದಿಗೆ ದೀರ್ಘಕಾಲದಿಂದ ಕಟ್ಟಿಕೊಂಡು ಬಂದ ಅನುಭವಗಳಿಗೆ ಲೇಖಕಿ ಅಕ್ಷರರೂಪ ಕೊಟ್ಟು ಓದುಗರೆದುರು ಒಂದು ವಿಶಿಷ್ಟ ವ್ಯಕ್ತಿತ್ವವನ್ನು ಅನಾವರಣಗೊಳಿಸಿರುವರು. ಪುಸ್ತಕದ ಪ್ರತಿ ಪುಟದಲ್ಲಿ ತೇಜಸ್ವಿ ಅವರ ವ್ಯಕ್ತಿತ್ವ ತನ್ನ ಛಾಪು ಮೂಡಿಸಿದೆ. ಓದುತ್ತ ಹೋದಂತೆ ತೇಜಸ್ವಿ ಅವರ ಬದುಕಿನ ಅನೇಕ ಮಗ್ಗಲುಗಳ ಪರಿಚಯ ಓದುಗನಿಗಾಗುತ್ತದೆ. ತೇಜಸ್ವಿ ಅವರ ಕುರಿತಾದ ತನ್ನ ಎಲ್ಲ ಕುತೂಹಲಗಳು ಮತ್ತು ಅಚ್ಚರಿಗಳಿಗೆ ಓದುಗ ಈ ಪುಸ್ತಕವನ್ನು ಓದುವುದರ ಮೂಲಕ ಉತ್ತರ ಕಂಡುಕೊಳ್ಳುತ್ತಾನೆ. 

            ಪತ್ರಗಳು 'ನನ್ನ ತೇಜಸ್ವಿ' ಪುಸ್ತಕದ ಪ್ರಮುಖ ಅಧ್ಯಾಯ. ಸುಮಾರು ೪೭ ಪುಟಗಳಿಗೆ ವಿಸ್ತರಿಸಿರುವ ಈ ಅಧ್ಯಾಯದಲ್ಲಿ ಒಟ್ಟು ೭೫ ಪತ್ರಗಳಿವೆ. ೧೯೬೧-೬೨ರ ಅವಧಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ರಾಜೇಶ್ವರಿ ಅವರಿಗೆ ಬರೆದ ಪತ್ರಗಳವು. ಆಗಿನ್ನೂ ತೇಜಸ್ವಿ ಅವರಿಗೆ ೨೩ರ ಹರೆಯ. ಅದೇ ಆಗ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಘಳಿಗೆ ಅದು. ಮಾನಸ ಗಂಗೋತ್ರಿಯಲ್ಲಿ ಪರಿಚಯವಾದ ತೇಜಸ್ವಿ ಮತ್ತು ರಾಜೇಶ್ವರಿ ಅವರ ನಡುವೆ ಪ್ರೀತಿ ಮೊಳಕೆಯೊಡೆದ ಪ್ರಾರಂಭದ ದಿನಗಳವು. ಅಗಲುವಿಕೆಯ ಆ ವಿರಹ ವೇದನೆಯೇ ಅವರಿಬ್ಬರ ನಡುವೆ ನೂರಾರು ಪತ್ರಗಳು ಬಟಾವಡೆಯಾಗಲು ಕಾರಣವಾಗಿರಬಹುದು. ಆ ಪತ್ರಗಳು ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಬರೆದ ಪತ್ರಗಳಂತಿರದೆ ಅಲ್ಲಿ ಅನೇಕ ಸಂಗತಿಗಳು ಚರ್ಚಿಸಲ್ಪಟ್ಟಿವೆ. ಈ ಪತ್ರಗಳನ್ನು ಯಥಾವತ್ತಾಗಿ ಓದುವದರಿಂದ ತೇಜಸ್ವಿ ಅವರ ವ್ಯಕ್ತಿತ್ವದ ಸ್ಪಷ್ಟ ಚಿತ್ರಣ ಸಿಗುತ್ತದೆ ಎನ್ನುವ ಕಾರಣದಿಂದ ಈ ಕಾಗದಗಳನ್ನು ಕೊಡುತ್ತಿರುವೆನು ಎಂದು ಲೇಖಕಿ ಹೇಳಿಕೊಂಡಿರುವರು. ಲೇಖಕಿ ಹೇಳಿದಂತೆ ಅವು ಸಾಮಾನ್ಯ ಪತ್ರಗಳಲ್ಲ. ಒಂದು ರೀತಿಯ ವೈಚಾರಿಕ ಕ್ರಾಂತಿಯೇ ಆ ಪತ್ರಗಳಲ್ಲಿ ಒಡಮೂಡಿದೆ. ಪತ್ರಗಳ ಮೂಲಕ ತೇಜಸ್ವಿ ರಾಜೇಶ್ವರಿ ಅವರಿಗೆ ಅನೇಕ ಸಂಗತಿಗಳನ್ನು ಪರಿಚಯಿಸುತ್ತಾರೆ. ಜೊತೆಯಲ್ಲಿ ಹಸಿ ಹುಡುಗಾಟಿಕೆಯೂ ಇದೆ. ಒಂದು ಪತ್ರದಲ್ಲಿ ತೇಜಸ್ವಿ ಹೀಗೆ ಬರೆಯುತ್ತಾರೆ 'Love ಎಂದರೆ ಏನು ಗೊತ್ತಾ. ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು. ದೈಹಿಕವಾಗಿ, ಮಾನಸಿಕವಾಗಿ'. ಇನ್ನೊಂದು ಪತ್ರದಲ್ಲಿ ಅಂತರ್ಜಾತಿ ವಿವಾಹದ ಕುರಿತು ತೇಜಸ್ವಿ ಬರೆಯುತ್ತಾರೆ 'Intercaste ಮದುವೆಯಾದ್ದರಿಂದ ಎಲ್ಲರ ಕೋಪ ಅಸಹಕಾರಕ್ಕೂ ನಾವು ಗುರಿಯಾಗಲೇ ಬೇಕಾಗುತ್ತದೆ. ಅದಕ್ಕೆ ಮೊದಲೇ ಆರ್ಥಿಕವಾಗಿ  ನಾವು ಸ್ಥಿರವಾಗಿಲ್ಲದಿದ್ದರೆ ಖಂಡಿತ ಬಹಳ ಕ್ಲೈಬ್ಯದ ಬಾಳನ್ನು ನಡೆಸಬೇಕಾಗುತ್ತದೆ. ಜೀವಮಾನದಾದ್ಯಂತ ಅನುಭವಿಸುವ ಈ ಯಾತನೆ ಕೊನೆಗೆ ನನ್ನ ಮಗಳಿಗೆ ಮದುವೆ ಮಾಡಲೂ ಅಸಾಧ್ಯವಾಗಿ ಕಂಡವರ ಕಾಲು ಹಿಡಿಯುವ ಅಸಹನೀಯ ಸ್ಥಿತಿಯನ್ನು ನಾನು ಕಲ್ಪಿಸಿಕೊಳ್ಳಲಾರೆ'. ಇಂಥ ಮಹತ್ವದ ವಿಚಾರಗಳನ್ನು ಚರ್ಚಿಸಿದ ಆ ಪತ್ರಗಳನ್ನು ಸುಮಾರು ಐದು ದಶಕಗಳಿಂದ ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬಂದಿರುವ ಲೇಖಕಿ ಅವುಗಳ ಮೂಲಕ ತೇಜಸ್ವಿ ಅವರ ವ್ಯಕ್ತಿತ್ವವನ್ನು ವಿಶಿಷ್ಟವಾಗಿಯೇ ಅನಾವರಣಗೊಳಿಸಿರುವರು. ಎಲ್ಲೋ ಕಳೆದು ಹೋಗುತ್ತಿದ್ದ ಪತ್ರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಓದುಗರಿಗೆ ದೊರೆಯುವಂತೆ ಮಾಡಿದ ಲೇಖಕಿಯ ಕಾರ್ಯ ಶ್ಲಾಘನೀಯ.

         ಪುಸ್ತಕದ ಇನ್ನೊಂದು ಮಹತ್ವದ ಅಧ್ಯಾಯ ಆ ಕಾಲಘಟ್ಟದ ಚಳುವಳಿಗಳಿಗೆ ಸಂಬಂಧಿಸಿದ್ದು. ಸಾಹಿತ್ಯ ಚಳುವಳಿ, ನವ ನಿರ್ಮಾಣ ಕ್ರಾಂತಿ, ಜೆಪಿ ಆಂದೋಲನ, ರೈತ ಚಳುವಳಿ, ಭಾಷಾ ಚಳುವಳಿ, ದಲಿತ ಚಳುವಳಿ, ಜಾತಿ ವಿನಾಶ ಚಳುವಳಿ ಇತ್ಯಾದಿ ಚಳುವಳಿಗಳಲ್ಲಿ ತೇಜಸ್ವಿ ಅವರು ವಹಿಸಿದ ಪಾತ್ರದ ಕುರಿತಾಗಿ ರಾಜೇಶ್ವರಿ ಅವರು ನೆನಪು ಮಾಡಿಕೊಂಡಿರುವರು. ನಂಜುಂಡ ಸ್ವಾಮಿ, ಕಡಿದಾಳು ಶಾಮಣ್ಣ, ಎನ್.ಡಿ.ಸುಂದರೇಶ, ಬಿ.ಎನ್.ಶ್ರೀರಾಮ್, ಕೆ.ರಾಮದಾಸ, ಪಿ.ಲಂಕೇಶ್ ಇವರನ್ನೆಲ್ಲ ಕಟ್ಟಿಕೊಂಡು ತೇಜಸ್ವಿ ಕರ್ನಾಟಕದಾದ್ಯಂತ ಸಂಚರಿಸಿದ್ದು, ಜನಜಾಗೃತಿ ಮೂಡಿಸಲು ಪ್ರಯತ್ನಿಸಿದ್ದು, ಕೆಲವು ಸಂದರ್ಭಗಳಲ್ಲಿ ಜೀವಕ್ಕೆ ಕುತ್ತಾದ ಹೋರಾಟ, ತೇಜಸ್ವಿ ಅವರ ಮೇಲೆ ನಡೆದ ದಾಳಿ ಅನೇಕ ಪ್ರಸಂಗಗಳನ್ನು ಈ ಅಧ್ಯಾಯದಲ್ಲಿ ಸ್ಮರಿಸಿಕೊಳ್ಳಲಾಗಿದೆ. ಒಂದು ಹಂತದಲ್ಲಿ ಚಳುವಳಿಗಾರರ ನಡುವೆ ಮೂಡಿದ ಭಿನ್ನಾಭಿಪ್ರಾಯ, ಈ ಬೆಳವಣಿಗೆಯಿಂದ ಮನನೊಂದು ತೇಜಸ್ವಿ ಅವರು ಚಳುವಳಿಗಳಿಂದ ಹಿಂದೆ ಸರಿದದ್ದನ್ನು ಲೇಖಕಿ ಅತ್ಯಂತ ಭಾವಪೂರ್ಣವಾಗಿ ನೆನಪಿಸಿಕೊಂಡಿರುವರು. ಚಳುವಳಿಗಳ ವೈಫಲ್ಯವನ್ನು ಕುರಿತು ತೇಜಸ್ವಿ ರೈತ ಸಂಘದ ಮುಖಂಡರಾದ ನಂಜುಂಡಸ್ವಾಮಿ ಅವರಿಗೆ ಹೀಗೆ ಬರೆಯುತ್ತಾರೆ 'ನಾವು ಯಾರ ನೇತೃತ್ವದಲ್ಲಿ ಏನೇನು ಮಾಡಿದರೂ ಜಯಪ್ರಕಾಶರ ಚಳುವಳಿಯಂಥ ಎಚ್ಚರವನ್ನು ಸಧ್ಯಕ್ಕಂತೂ ಪ್ರಚೋದಿಸಲಾರೆವು. ಅಂಥದ್ದೊಂದು ಶತಮಾನಕ್ಕೊಂದು ಸಂಭವಿಸುವ ಮಹಾನ್ ಅವಕಾಶವನ್ನು ರಾಷ್ಟ್ರವು ಹಾಳುಮಾಡಿಕೊಂಡಿತು. ವೈಯಕ್ತಿಕವಾಗಿ ನಾವೂ ಪರಸ್ಪರ ಗುಮಾನಿ ಒಳಜಗಳಗಳಿಂದ ಹಾಳು ಮಾಡಿಕೊಂಡೆವು. ತೀರಾ ನಾಲಾಯಕ್ ಜನಗಳ ನಡುವೆ ನಾವು ಕಾರ್ಯ ಸಾಧನೆಗೆ ತೊಡಗಿದೆವು. ಅದನ್ನೆಲ್ಲಾ ನೆನಪಿಸಿಕೊಂಡರೆ ಕೋಪವೊಂದೆ  ಸ್ಥಾಯಿ ಭಾವವಾಗಿ ಉಳಿಯುತ್ತದೆ'.

      'ಸೊಸೆ ಕಂಡಂತೆ ಕುವೆಂಪು' ರಾಷ್ಟ್ರಕವಿಯ ವ್ಯಕ್ತಿತ್ವವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ ಅಧ್ಯಾಯವಿದು. ಇಲ್ಲಿ ಕುವೆಂಪು ಅವರನ್ನು ಕನ್ನಡದ ಒಬ್ಬ ಶ್ರೇಷ್ಠ ಬರಹಗಾರರಾಗಿ ನೋಡಿದ್ದಕ್ಕಿಂತ ಅವರನ್ನು ಒಂದು ಕುಟುಂಬದ ಸದಸ್ಯನಾಗಿ ಅವರ ಮಾನವೀಯ ಮುಖದ ಪರಿಚಯ ಮಾಡಿಕೊಡಲಾಗಿದೆ. ಬರಹಗಾರರಾಗಿ ಕುವೆಂಪು ಇಡೀ ನಾಡಿಗೇ ಚಿರಪರಿಚಿತರು. ಆದರೆ ಕೌಟಂಬಿಕವಾಗಿ ಕುವೆಂಪು ಬದುಕು ಹೇಗಿತ್ತು ಎನ್ನುವುದು ಅದು ಅನೇಕರಿಗೆ ಸೂಜಿಗದ ಸಂಗತಿ. ರಾಜೇಶ್ವರಿ ಅವರು 'ಉದಯ ರವಿ'ಯ ಸೊಸೆಯಾಗಿ ಆ ಮನೆಯ ಯಜಮಾನ ಕುವೆಂಪು ಅವರ ವ್ಯಕ್ತಿತ್ವವನ್ನು ಸುಂದರವಾಗಿ ಚಿತ್ರಿಸಿರುವರು. ಕುವೆಂಪು ಅವರಲ್ಲಿನ ಸಂಸ್ಕಾರ, ಕುಟುಂಬ ಪ್ರೀತಿ, ವಿಶ್ವ ಮಾನವ ಪರಿಕಲ್ಪನೆ, ತೇಜಸ್ವಿ ಅವರೊಂದಿಗಿನ ಒಡನಾಟ, ಅವರ ವೃದ್ಧಾಪ್ಯದ ದಿನಗಳು, ಇಷ್ಟದ ತಿಂಡಿ  ಎಲ್ಲ ವಿಷಯಗಳ ಕುರಿತು ಈ ಅಧ್ಯಾಯದಲ್ಲಿ ವಿವರಣೆಗಳಿವೆ. ತೇಜಸ್ವಿ ಅವರ ಪ್ರಯೋಗಶೀಲ ಮನೋಭಾವವನ್ನು ತಂದೆಯಾಗಿ ಕುವೆಂಪು ಗೌರವಿಸುತ್ತಿದ್ದರು ಎಂದು ಹೇಳುವ ಲೇಖಕಿ ನಾಡಿನ ಎರಡು ಮಹಾನ್ ವ್ಯಕ್ತಿತ್ವಗಳೊಂದಿಗೆ ಒಡನಾಡುವ ಅವಕಾಶ ದೊರೆತದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

     ತೇಜಸ್ವಿ ಮೈಸೂರಿನಿಂದ ಮಲೆನಾಡಿಗೆ ಬಂದು ತೋಟ ಮಾಡಿದ್ದು, ತೇಜಸ್ವಿ ಮತ್ತು ರಾಜೇಶ್ವರಿ ಅವರ ಮದುವೆ ಸಂಭ್ರಮ, ಈಶಾನ್ಯೆ ಮತ್ತು ಸುಶ್ಮಿತಾ ಹುಟ್ಟಿದ್ದು, ಪುಸ್ತಕ ಪ್ರಕಾಶನದ ಕೆಲಸಕ್ಕೆ ಕೈ ಹಾಕಿದ್ದು, ತೇಜಸ್ವಿ ಅವರಲ್ಲಿನ ಹವ್ಯಾಸಗಳು, ಬದುಕಿನ ಕೊನೆಯ ದಿನಗಳಲ್ಲಿ ಕೈ ಕೊಟ್ಟ ಆರೋಗ್ಯ ಈ ರೀತಿ ತೇಜಸ್ವಿ ಅವರ ಬದುಕಿನ ಅನೇಕ ಸಂಗತಿಗಳು ಓದುಗನಿಗೆ ಸಮೃದ್ಧವಾಗಿ ಓದಲು ಸಿಗುತ್ತವೆ. 'ಆವತ್ತು ಗುರುವಾರ ಮಗಳು ಅಳಿಯ ಬಂದಿರುವರೆಂದು ಮೂಡಿಗೆರೆ ಸಾಬು ಹೋಟೆಲ್ಲಿನಲ್ಲಿ ಬಿರ್ಯಾನಿಗೆ ಆರ್ಡರ್ ಕೊಟ್ಟಿದ್ದರು. ಅವರು ಶುಕ್ರವಾರ ಸಂತೆ ದಿನ ಮಾತ್ರ ಮಾಡುವಂಥವರು. ವಿಶೇಷವಾಗಿ ತೇಜಸ್ವಿಗೆ ಮಾಡಿಕೊಡಲು ಒಪ್ಪಿದ್ದರು. ಬಿರ್ಯಾನಿ ತರಲು ಫ್ರೆಶರ್ ಕುಕ್ಕರ್ ನ್ನೆ ತೇಜಸ್ವಿ ಕೈಗಿತ್ತೆ. ಇವರು ಮನೆಗೆ ಬರುವ ಹೊತ್ತಿಗೆ ಒಂದು ಘಂಟೆಯಾಗಿತ್ತು. ತುಂಬಾ ಹಸಿವೆಯಾಗಿದೆ ಊಟ ಮಾಡೋಣವೆಂದರು. ಎಲ್ಲರೂ ಒಟ್ಟಾಗಿ ಕೂತೆವು ಊಟ ಮಾಡಲು. ಸಖತ್ತಾಗಿ ಮಸಾಲೆ ಹಾಕಿದ್ದಾನೆ ನನ್ನ ಹೊಟ್ಟೆ ಕೆಡುವುದು ಖಾತರಿ ಎಂದಳು ಈಶಾನ್ಯೆ. ಇವರು ನಾನು ಚೆನ್ನಾಗಿ ಊಟ ಮಾಡಿರುವೆನೆಂದು ಹೇಳುತ್ತ ಹೋದರು. ಆ ಕೂಡಲೇ ಕಾಡಿನ ಆಕಾಶದೆತ್ತರಕ್ಕೆ ಬೆಳೆದ ದೊಡ್ಡ ಮರವೊಂದು ಬಿದ್ದ ಸದ್ದಾಯಿತು. ಅಯ್ಯೋ ನಿಮ್ಮ ಅಣ್ಣ ಬಿದ್ದರೆಂದು ಕಾಣುತ್ತೆ ಕಣೆ ಈಶಾ ಎಂದು ಓಡಿದೆ. ಅವಳೂ ಬಂದು ಎದೆ ಒತ್ತಿದಳು. ನಾನು ಮುಖಕ್ಕೆ ನೀರು ಸಿಂಪಡಿಸಿದೆ. ನೀರು ಕುಡಿಸಿದೆ ಎಚ್ಚರವಾಗಬಹುದೆಂದು. ಎರಡು ಸಲ ತೆಲೆ ಆಡಿಸಿದ್ದೇ ಕೊನೆಯಾಯ್ತು. ನನಗೆ ಎಲ್ಲೋ ಅಂತರಾಳದ ತಳದಲ್ಲಿ....... ವಿಹಾ ಕಿಟಾರನೆ ಚೀರಿದಳು. ನನ್ನ ತೇಜಸ್ವಿ ಕಾಡಿನ ಉಸಿರಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ. ನನಗೆ ಅವರು ಬೇಕು' ಎಂದು ರಾಜೇಶ್ವರಿ ಅವರು ಹೇಳುವಲ್ಲಿಗೆ ಕೃತಿ ಕೊನೆಗೊಳ್ಳುತ್ತದೆ. ತೇಜಸ್ವಿ ನೆನಪಾಗಿ ಉಳಿಯುತ್ತಾರೆ.

ಒಂದಿಷ್ಟು ಪ್ರಸಂಗಗಳು 


           'ನನ್ನ ತೇಜಸ್ವಿ' ಪುಸ್ತಕದಲ್ಲಿನ ಒಂದಿಷ್ಟು ಸ್ವಾರಸ್ಯಕರ  ಘಟನೆಗಳು ಶ್ರೀಮತಿ ರಾಜೇಶ್ವರಿ ಅವರ ಮಾತುಗಳಲ್ಲಿ ನಿಮಗಾಗಿ,

# ಮೈಸೂರಿನಿಂದ ನಿರುತ್ತರಕ್ಕೆ  ಬರುವಾಗ ಮಾರ್ಗ ಮಧ್ಯೆ ಹಾಸನದ ಹೊಟೇಲಿನಲ್ಲಿ ಕಾಫಿ ಕುಡಿಯುತ್ತಿದ್ದೇವು. ಅಲ್ಲೊಂದು ಮರದ ಕೆಳಗೆ ಮ್ಯುಜಿಷಿಯನ್ ಮುದಕನೊಬ್ಬ ಕುಳಿತಿರುತ್ತಿದ್ದ. ಅವನೊಟ್ಟಿಗೆ ತೇಜಸ್ವಿಯ ಆತ್ಮೀಯ ಮಾತುಕತೆ. ನಮ್ಮ ಮಕ್ಕಳಿಗೂ  ಕುತೂಹಲ ಕೆರಳಿಸುವಂತೆ ಮಾತು ಮುಂದುವರೆಯುತ್ತಿತ್ತು. ಅವನು ಹಣ ಪಡೆದು ಸಲಾಂ ಹೊಡೆದು ಬಿಳ್ಕೊಡುತ್ತಿದ್ದ. ಅವನು ತೀರಿಕೊಂಡಾಗ ಹಾಸನದವರು ತೇಜಸ್ವಿಗೆ ಸುದ್ದಿ ಮುಟ್ಟಿಸಿದ್ದರು.

# ನಮ್ಮ ರಾಜ್ಯಕ್ಕೆ ಜನತಾದಳದ ಜೆ.ಹೆಚ್.ಪಟೇಲರು ಮುಖ್ಯ ಮಂತ್ರಿಯಾಗಿದ್ದಾಗ ಇವರನ್ನು ಎಮ್.ಎಲ್.ಸಿ ಆಗಲು ಆಹ್ವಾನಿಸಿದರು. ಇವರು ಮಾತ್ರ ನಯವಾಗಿ ನಿರಾಕರಿಸಿದರು.

# ತುಮಕೂರಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗಾದೆಗೆ ಇವರನ್ನು ತುಂಬ ಒತ್ತಾಯ ಮಾಡಿ ಕೇಳಿಕೊಂಡಿದ್ದರು. ಒಂದು ಪ್ರೆಸ್ ಮೀಟ್ ನಲ್ಲಿ ಇವರು ಹೇಳಿದ್ದು ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವೆನೆಂದರು.

# ವಿವೇಕ್ ರೈ ಅವರ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಲು ಎರಡೆರಡು ಸಲ ಒತ್ತಾಯ  ಮಾಡಿದರು. ರೈ ಅವರು ಮನೆಗೇ ಬಂದು ಕೂತು ಕೇಳಿಕೊಂಡರು. ಇವರು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ.

# ನೀನು ಯಾವುದಕ್ಕೂ ಹತ್ತಿರ ಬರಲೇ ಬೇಡೆಂದು ನನಗೆ ತೇಜಸ್ವಿ ಎಚ್ಚರಿಸಿದ್ದರು. ದೊಡ್ಡ ಹಿಂಡಾಲಿಯಂ ಪಾತ್ರೆಯೂ ಐದು ಕೇಜಿ ಚಿಕನ್ನೂ ಮೂಡಿಗೆರೆಯಿಂದ ಮನೆಗೆ ತಂದರು. ನಮ್ಮ ಕಾರು ಶೆಡ್ಡಿನ ಪಕ್ಕ ತೇಜಸ್ವಿ ಒಬ್ಬ ಸಹಾಯಕನೊಟ್ಟಿಗೆ ಸೇರಿ ಮೂರು ಕಲ್ಲಿಟ್ಟು ಒಲೆ ಹಚ್ಚಿದರು. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲ ಅವರೇ ಸಿದ್ದಮಾಡಿಕೊಂಡರು. ದೊಡ್ಡ ಪಾತ್ರೆ. ಎರಡು ಬಾಳೆಲೆ ಮುಚ್ಚಿದ್ರಂತೆ. ತೇಜಸ್ವಿ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅತಿಥಿಗಳ ಉಪಚಾರಕ್ಕೆ ಚಿಕನ್ ಗೊಜ್ಜು.

ಕೊನೆಯ ಮಾತು 


        ನನ್ನ ಸಮಕಾಲಿನ ಓದುಗರಿಗೆ ತೇಜಸ್ವಿ ಅವರ ಪರಿಚಯವಾಗಿದ್ದು ಅವರ ಕರ್ವಾಲೋ ಕಾದಂಬರಿಯ ಓದಿನಿಂದ. ಕರ್ವಾಲೋ ಕಾದಂಬರಿ ದ್ವಿತೀಯ ಪಿಯುಸಿಯಲ್ಲಿ ನಮಗೆ ಅಭ್ಯಾಸಕ್ಕೆ ಪಠ್ಯವಾಗಿತ್ತು. ಕರ್ವಾಲೋ ಪಾತ್ರವೇ ಅತ್ಯಂತ ಕುತೂಹಲದ ಸಂಗತಿಯಾಗಿದ್ದ ನಮಗೆಲ್ಲ ಆಗಲೇ ತೇಜಸ್ವಿ ಅವರ ಕುರಿತು ಸಣ್ಣದೊಂದು ಆಸಕ್ತಿ ಮೊಳಕೆಯೊಡೆಯಿತು. ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದ ಲೇಖನಗಳ ಮೂಲಕ ತೇಜಸ್ವಿ ನಮಗೆಲ್ಲ ಮತ್ತಷ್ಟು ಹತ್ತಿರವಾದರು. ಆ ಆಪ್ತತೆಯೇ ಮುಂದಿನ ದಿನಗಳಲ್ಲಿ ಜುಗಾರಿ ಕ್ರಾಸ್, ಚಿದಂಬರ ರಹಸ್ಯದಂಥ ಮಹತ್ವಪೂರ್ಣ ಕೃತಿಗಳ ಓದಿಗೆ ಪ್ರೇರಣೆಯಾಯಿತು. ಈಗ 'ನನ್ನ ತೇಜಸ್ವಿ' ಮೂಲಕ ನನ್ನ ಸಮಕಾಲಿನ ಓದುಗರನ್ನು ಪೂರ್ಣಚಂದ್ರ ತೇಜಸ್ವಿ ಇಡಿಯಾಗಿ ಆವರಿಸಿಕೊಂಡಿರುವರು. ಇದು ಅವರ ಬದುಕಿನ ಅನೇಕ ಮಗ್ಗಲುಗಳನ್ನು ಪರಿಚಯಿಸುವ ಮಹತ್ವದ ಕೃತಿ. ನಿಜಕ್ಕೂ ಈ ಪುಸ್ತಕದ ಓದು ಅದೊಂದು ಅನನ್ಯ ಅನುಭವ. ಪುಸ್ತಕವನ್ನೊಮ್ಮೆ ಓದಿ ನೋಡಿ ತೇಜಸ್ವಿ ಅನೇಕ ದಿನಗಳವರೆಗೆ ನಿಮ್ಮನ್ನು ಕಾಡುತ್ತಾರೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

       
      

Thursday, March 14, 2013

ಗಾಂಧಿ ಮತ್ತು ದೇವನೂರ

       


         ಮೊನ್ನೆ ಗಾಂಧಿ ನೆನಪಾದರು. ನೆನಪಾದರು ಎನ್ನುವುದು ಅವರು ಮರೆತು ಹೋಗಿರಬಹುದು ಎಂದೂ ಧ್ವನಿಸಬಹುದು. ನೆನಪು ಮತ್ತು ಮರೆತು ಹೋಗುವಿಕೆ ಈ ಎರಡೂ ಸ್ಥಿತಿಗಳಲ್ಲಿ ಗಾಂಧಿ ಜೀವಂತವಾಗಿದ್ದು ನಮ್ಮನ್ನು ಕಾಡುತ್ತಲೇ ಇರುವರು. ಇದು ಗಾಂಧಿಯಂಥ ಗಾಂಧಿಯಿಂದ ಮಾತ್ರ ಸಾಧ್ಯವಾಗುವಂತಹದ್ದು. ಏಕೆಂದರೆ ಗಾಂಧಿ ಸೂಟು ಭೂಟು ಧರಿಸಿ, ಪಂಚೆ ಉಟ್ಟುಕೊಂಡು ಮತ್ತು ಲಂಗೋಟಿ ಸಿಕ್ಕಿಸಿಕೊಂಡು ಭಾರತೀಯ ಜೀವನ ಕ್ರಮದ ಎಲ್ಲ ವರ್ಗಗಳನ್ನು ತಮ್ಮೊಳಗೆ ಅನಾವರಣಗೊಳಿಸಿಕೊಂಡವರು. ಒಬ್ಬನೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಭಾರತೀಯ ಜೀವನ ಕ್ರಮದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವುದು ಅದು ಗಾಂಧೀಜಿಯಂಥ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗುವ ಸಾಮಾಜಿಕ ಪಲ್ಲಟ.

      ಇನ್ನು ಗಾಂಧಿ ಏಕೆ ನೆನಪಾದರು ಎನ್ನುವ ವಿಷಯಕ್ಕೆ ಬರುತ್ತೇನೆ. ಆವತ್ತು ದಲಿತ ಸಂಘರ್ಷ ಸಮಿತಿಯವರ ಮೆರವಣಿಗೆ ನಡೆದು ಹೋಗುತ್ತಿತ್ತು. ಬುದ್ಧ-ಬಸವ-ಅಂಬೇಡ್ಕರ್ ಎನ್ನುವ ಜಯಘೋಷ ಅಲ್ಲಿ ಮೊಳಗುತ್ತಿತ್ತು. ಜೊತೆಗೆ ಬುದ್ಧ-ಬಸವ-ಅಂಬೇಡ್ಕರ್ ರ ಆಳೆತ್ತರದ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದ ಮನೆಮಾಡಿಕೊಂಡಿದ್ದ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಈ ಮೂವರು ಮಾಡಿದ ಪ್ರಯತ್ನ ಮತ್ತು ಹೋರಾಟ ಅದು ಚರಿತ್ರೆಯ ಪುಟಗಳಲ್ಲಿ ಸದಾಕಾಲ ಅಳಿಸಲಾಗದ ಐತಿಹಾಸಿಕ ಪ್ರಯತ್ನವಾಗಿ ದಾಖಲಾಗಿ ಉಳಿದಿದೆ. ಆದರೆ ಆ ಸಂದರ್ಭ ಅಲ್ಲಿನ ಭಾವಚಿತ್ರಗಳಲ್ಲಿ ಮತ್ತು ಅವರು ಮೊಳಗಿಸುತ್ತಿದ್ದ ಜಯ ಘೋಷಗಳಲ್ಲಿ ಗಾಂಧಿ ಅನುಪಸ್ಥಿತಿ ನನಗೆ ಬಹುಮುಖ್ಯ ಕೊರತೆಯಾಗಿ ಕಾಣಿಸಿತು.

        ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರಂತೆ ಗಾಂಧಿ ಸಹ ಅಸ್ಪೃಶ್ಯತಾ ನಿರ್ಮೂಲನೆಗಾಗಿ ತಮ್ಮ ಬದುಕಿನ ಬಹುಭಾಗವನ್ನು ಮೀಸಲಾಗಿರಿಸಿದವರು. ಭಾರತದ ಸ್ವಾತಂತ್ರ್ಯ ಚಳುವಳಿಯ ಜೊತೆ ಜೊತೆಗೆ ಹರಿಜನೋದ್ಧಾರವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು ಈ ಗಾಂಧಿ. ಹಿಂದುಳಿದ ವರ್ಗದ ಒಂದು ಸಮುದಾಯವನ್ನು 'ಹರಿಜನರು' ಎಂದರೆ ದೇವರ ಮಕ್ಕಳೆಂದು ಹೆಸರಿಸಿದ್ದೇ ಈ ಗಾಂಧಿ ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಹರಿಜನರು ವಾಸಿಸುತ್ತಿದ್ದ ಬೀದಿಗಳಲ್ಲಿನ ಮಲ ಬಳಿದು ಅವರಿಗೆ ಸ್ವಚ್ಚತೆಯ ಪಾಠ ಹೇಳಿದ ಗಾಂಧಿ ಅಸ್ಪೃಶ್ಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸಿದರು. ಹರಿಜನೋದ್ಧಾರ ಗಾಂಧೀಜಿ ಅವರ ಕನಸಾಗಿತ್ತು. ಹೀಗಿದ್ದೂ ಇಂದಿನ ಯುವ ದಲಿತರು ಗಾಂಧಿಯ ಮೇಲೆ ಮುನಿಸಿಕೊಂಡವರಂತೆ ಕಾಣಿಸುವರು. ಇವತ್ತು ಅವರಿಗೆ ಗಾಂಧಿ ಬೇಡವಾದ ವ್ಯಕ್ತಿ. ಬುದ್ಧ-ಬಸವ-ಅಂಬೇಡ್ಕರ್ ಸಾಲಿನಲ್ಲಿ ಗಾಂಧಿಯನ್ನು ನಿಲ್ಲಿಸಿಯೂ ನೋಡಲಾರದಷ್ಟು ಅಸಡ್ಡೆ ಮತ್ತು ಅಸಹನೆ ಅವರಿಗೆ ಗಾಂಧಿಯ ಮೇಲೆ. ಇಲ್ಲಿ ಗಾಂಧಿ ಮಾಡಿದ ತಪ್ಪಾದರೂ ಏನು? ಆತ ಊರೊಳಗಿದ್ದುಕೊಂಡೆ ಊರ ಹೊರಗಿನವರನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ. ಸಮಾಜದಲ್ಲಿ ಸ್ಥಾಪಿತವಾಗಿದ್ದ  ಅಸಮಾನತೆಯ ಬೇರುಗಳನ್ನು ಕತ್ತರಿಸಲು ಹಾತೊರೆದ. ಹೀಗೆ ಗಾಂಧಿ ಮಾಡಿದ್ದು ತಪ್ಪು ಎನ್ನುವುದಾದರೆ ಬೇರೆ ಯಾವ ರೀತಿ ಪ್ರಯತ್ನಿಸಬಹುದಿತ್ತು. ಇಂದಿನ ಯುವ ದಲಿತರಲ್ಲಿ ಇದಕ್ಕೆ ಉತ್ತರವಿದೆಯೇ? ಉತ್ತರಿಸುವಾಗ ಗಾಂಧಿ ಎದುರು ಗುಲಾಮಿ ಭಾರತದ ಕಟುವಾಸ್ತವ ಬೆತ್ತಲಾಗಿ ನಿಂತಿತ್ತು ಎನ್ನುವುದು ಗೊತ್ತಿರಲಿ.

           ಈಗ ನಾನು ಹೇಳಬೇಕೆಂದಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ. ಇಂದಿನ ಯುವ ದಲಿತರು ಗಾಂಧಿಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಇಡೀ ದಲಿತ ಸಮುದಾಯಕ್ಕೆ ಬಾಪು ಬೇಡವಾದವರು ಎನ್ನುವ ಅತಾರ್ಕಿಕ ನಿಲುವಿಗೆ ಬಂದು ನಿಲ್ಲುವುದು ಸರಿಯಲ್ಲ. ಏಕೆಂದರೆ ದಲಿತರಲ್ಲೇ ಗಾಂಧಿಯನ್ನು ಒಪ್ಪಿಕೊಳ್ಳುವ ಒಂದು ಗುಂಪಿದೆ. ಅಂಥವರಲ್ಲಿ ನಾಡುಕಂಡ ಶ್ರೇಷ್ಠ ಬರಹಗಾರ ದೇವನೂರ ಮಹಾದೇವ ಪ್ರಮುಖರು. ದಲಿತ ಸಮುದಾಯದಲ್ಲಿ ಜನಿಸಿ ದಲಿತ ಸಂಘರ್ಷ ಸಮಿತಿಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ದೇವನೂರ ಮಹಾದೇವ ಗಾಂಧೀಜಿಯನ್ನು ಗಾಢವಾಗಿ ಪ್ರೀತಿಸುತ್ತಾರೆ. ಗಾಂಧೀಜಿ ಕುರಿತು ಬರೆಯಲು ಮತ್ತು ಮಾತನಾಡಲು ಪ್ರಾರಂಭಿಸಿದರೆ ಅವರೊಬ್ಬ ಗಾಂಧಿಯ ಕಡುವ್ಯಾಮೋಹಿಯಂತೆ ಕಾಣಿಸುತ್ತಾರೆ. ಗಾಂಧಿಯಷ್ಟು ಬುದ್ಧ ಇನ್ನೂ ಮಹಾದೇವರ ಒಳಜಗತ್ತಿನ ಭಾಗವಾಗಿಲ್ಲವೆನಿಸುತ್ತದೆ ಎಂದ ಲೇಖಕ ಸತ್ಯನಾರಾಯಣ ಅವರ ಮಾತನ್ನು ನಾವು ಇಲ್ಲಿ  ಗಮನಿಸಬೇಕು. 'ಗಾಂಧಿ ಕಾಠಿಣ್ಯದ ತಂದೆಯಂತೆ, ಜೆಪಿ ಅಸಹಾಯಕ ತಾಯಿ, ವಿನೋಬಾ ಮದುವೆಯಾಗದ ವ್ರತನಿಷ್ಠ ಅಕ್ಕನಂತೆ, ಲೋಹಿಯಾ ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ' ಎಂದು ಹೇಳುತ್ತಲೇ ದೇವನೂರ ಮಹಾದೇವ ಗಾಂಧಿಯನ್ನು ತಂದೆಯ ಸ್ಥಾನದಲ್ಲಿಟ್ಟು ನೋಡುತ್ತಾರೆ.

         ಗಾಂಧಿಯನ್ನು ಕೆಲವರು ಪ್ರೀತಿಸುತ್ತಿರುವ ಹೊತ್ತಿನಲ್ಲೇ ಇನ್ನೊಂದಿಷ್ಟು ಜನ ದ್ವೇಷಿಸಲು ತೊಡಗುವುದು ಮತ್ತು ಗಾಂಧಿ ವಿಚಾರಧಾರೆಯನ್ನೇ ಬಹಿಷ್ಕರಿಸಲು ಹೊರಡುವುದು ವಿಷಾದನೀಯ. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯವಿತ್ತೆಂದು ಹೇಳಲು ಹೊರಡುವ ಇತಿಹಾಸಕಾರರು ಗಾಂಧಿ ಮತ್ತು ಯುವ ದಲಿತರ ನಡುವೆ ಒಂದು ಕಂದಕವನ್ನೇ ಸೃಷ್ಟಿಸುತ್ತಾರೆ. ಆ ಮೂಲಕ ಗಾಂಧಿಯನ್ನು ದ್ವೇಷಿಸಲು ವೇದಿಕೆಯೊಂದನ್ನು ಸಿದ್ಧಪಡಿಸುವರು. ಇತಿಹಾಸವನ್ನೇ ನಂಬಿ ಮೋಸ   ಹೋಗುವ  ದಲಿತರ ಯುವ ಪೀಳಿಗೆ ಗಾಂಧೀಜಿಯ ಹರಿಜನೋದ್ಧಾರದ ಪ್ರಯತ್ನವನ್ನೇ ಮರೆತು ಬಿಟ್ಟಿರುವರು. ಆಗ ದೇವನೂರ ಮಹಾದೇವರಂಥ ಗಾಂಧೀಜಿಯನ್ನು ಪ್ರೀತಿಸುವವರು ಇತಿಹಾಸದ ಉತ್ಖನನಕ್ಕೆ ಮುಂದಾಗುತ್ತಾರೆ. ಇತಿಹಾಸವನ್ನು ಕೆದಕಿ ನೋಡಿದಾಗ ಮಹಾದೇವರಿಗೆ ಹೀಗೆ ಕಾಣಿಸುತ್ತದೆ 'ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನ ಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ ಅಂಬೇಡ್ಕರ್ ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಹೆಚ್ಚೂ ಕಮ್ಮಿ ಒಂದೇ ಕೆಲಸವನ್ನಲ್ಲವೇ?'

        ದೇವನೂರ ಮಹಾದೇವ ಹೇಳುವಂತೆ ದಲಿತರ ಮೊದಲ ವಿದ್ಯಾವಂತ ತಲೆಮಾರು ತಮ್ಮ ಮನೆಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಈ ಇಬ್ಬರ ಫೋಟೋಗಳನ್ನೂ ಇಟ್ಟುಕೊಂಡಿರುತ್ತಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ದಲಿತರ ನವಪೀಳಿಗೆ ಅಂಬೇಡ್ಕರ್ ಫೋಟೋ ಮಾತ್ರ ಇಟ್ಟುಕೊಳ್ಳಲು ಪ್ರಾರಂಭಿಸಿದೆ. ಹಿಂದಿನ ತಲೆಮಾರಿನ ದಲಿತರಿಗೆ ಬೇಕಾದ ಗಾಂಧಿ ದಲಿತರ ಯುವ ಪೀಳಿಗೆಗೆ ಬೇಡವಾದ. ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ ಗಾಂಧಿ ಯಾಕೆ ನಂತರದ ದಿನಗಳಲ್ಲಿ ಯುವ ಪೀಳಿಗೆಯಿಂದ ಅಪಾರ್ಥಕ್ಕೆ ಒಳಗಾದರು? ಹಾಗಾದರೆ ದಲಿತ ಯುವ ಪೀಳಿಗೆ ಗಾಂಧಿಯಿಂದ ಏನನ್ನು ಬಯಸಿತ್ತು? ಅದನ್ನು ಮಹಾದೇವ ಈ ರೀತಿ  ಊಹಿಸುತ್ತಾರೆ 'ಗಾಂಧಿ ಅಸ್ಪೃಶ್ಯರನ್ನು ಮಕ್ಕಳು ಎಂಬಂತೆ ಭಾವಿಸಿ ವರ್ತಿಸುತ್ತಿದ್ದರು. ಅದರ ಬದಲಾಗಿ ಗಾಂಧಿ ಅಸ್ಪೃಶ್ಯರನ್ನು ಪಿತೃಗಳೆಂಬಂತೆ ಭಾವಿಸಿ ವರ್ತಿಸಿದ್ದರೆ ಆ ಅಪಾರ್ಥದಿಂದ ತಪ್ಪಿಸಿಕೊಳ್ಳಬಹುದಿತ್ತು. ಆ  ಒಂದು ನೋಟವು ನಡಾವಳಿಯನ್ನೇ ಬದಲಿಸಿ ಬಿಡುತ್ತದೆ. ಉದಾಹರಣೆಗೆ ಅಸ್ಪೃಶ್ಯರಿಗೂ ಸವರ್ಣೀಯರಿಗೂ ಸ್ಪರ್ಧೆ ಬಂದಾಗ ಮಕ್ಕಳಂತೆ ಭಾವಿಸಿದ ಮನಸ್ಥಿತಿ ಇದ್ದರೆ ಎಲಾ ನಾನು ಸಾಕಿದವನ ಕೊಬ್ಬೆ ಎಂದು ಕ್ರೋಧ, ಅಸಹನೆ ಉಂಟಾಗುತ್ತದೆ. ಅದೇ ತಂದೆ ತಾಯಿಯಂತೆ ಭಾವಿಸಿದ್ದ ಮನಸ್ಥಿತಿ ಇದ್ದರೆ ನನ್ನನ್ನು ಸಾಕಿದವನು ನಾನೇ ಸೋತರೆ ಏನಾಯ್ತು? ಎಂಬ ಭಾವನೆ ಉಂಟಾಗುತ್ತದೆ'. ಹೀಗೆ ಭಾವಿಸದಿರುವುದೇ ಗಾಂಧೀಜಿಯ ತಪ್ಪು ಎನ್ನುವುದಾದರೆ ಕಸ್ತೂರ ಬಾ ಅವರು ಅಸ್ಪೃಶ್ಯ ಮೂಲದವನ ಮಲ ಎತ್ತಲು ನಿರಾಕರಿಸಿದಾಗ ಉದ್ವಿಗ್ನಗೊಂಡ ಗಾಂಧಿ ಮನೆಯಿಂದಲೇ ತನ್ನ ಪತ್ನಿಯನ್ನು ಹೊರದೂಡುವ ವರ್ತನೆಗೆ ಏನೆನ್ನಬೇಕು? ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಅಸ್ಪೃಶ್ಯನಲ್ಲದ ಗಾಂಧಿಯ ಹೋರಾಟವನ್ನು ಅನುಮಾನದ ಕಣ್ಣುಗಳಿಂದ ನೋಡುವುದಾದರೆ ಅವರ ಹೋರಾಟಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.

       ಶಿಕ್ಷಣ, ಉದ್ಯೋಗ, ಕೈಗಾರಿಕೆ, ಕೃಷಿ ಈ ಎಲ್ಲವುಗಳನ್ನು ಕುರಿತು ಚಿಂತಿಸುವಾಗ ಗಾಂಧೀಜಿಯವರಲ್ಲಿ ದೇಸಿತನವಿರುತ್ತಿತ್ತು. ಆ ದೇಸಿತನದಲ್ಲೂ ಅವರು ಭಾರತೀಯ ಜೀವನಕ್ರಮದ ಮೂರನೇ ದರ್ಜೆಯನ್ನು ಪ್ರತಿನಿಧಿಸಲು ಇಚ್ಚಿಸುತ್ತಿದ್ದರು. ಅವರ ಚಿಂತನೆಯ ಮೂರನೇ ದರ್ಜೆಯ ಸಮುದಾಯ ಅಸ್ಪೃಶ್ಯರಿಂದ ಹೊರತಾಗಿರಲಿಲ್ಲ. ಇಂಥದ್ದೊಂದು ಸಮುದಾಯವನ್ನು ಕೈಹಿಡಿದೆತ್ತಬೇಕೆನ್ನುವ ಪ್ರಬಲ ಇಚ್ಛೆ ಗಾಂಧೀಜಿಯವರಲ್ಲಿ ಇದ್ದುದ್ದರಿಂದಲೇ ಅವರು ಆ ವರ್ಗದ ಬದುಕನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡರು. ಇಲ್ಲಿ ಮಹಾದೇವರ ಮಾತು ನಾವು ಗಮನಿಸಬೇಕು ಅವರು ಹೇಳುತ್ತಾರೆ      'ಬೆತ್ತಲಾಗಿರುವವರ ಸಂಕಟಗಳನ್ನು ಅರ್ಥಮಾಡಿಕೊಳ್ಳಲೆಂದೇ ಗಾಂಧಿ ಲಂಗೋಟಿ ತೊಟ್ಟು ಬೆತ್ತಲಾಗಿ ಬದುಕಿದರು'. ಗಾಂಧಿ ಸುಖದ ನೆರಳಿನಡಿ ನಿಂತು ಅಸ್ಪೃಶ್ಯರ ಕುರಿತು ಚಿಂತಿಸಲಿಲ್ಲ. ಆ ಸಮುದಾಯದ ಬದುಕಿನೊಂದಿಗೆ ಬೆರೆತು ಅದನ್ನು ಅನುಭವಿಸಿ ಜಾತಿ ತಾರತಮ್ಯದ ನಿರ್ಮೂಲನೆಗೆ ಮುಂದಾದರು. ಇಲ್ಲಿ ಗಾಂಧೀಜಿಯ ತಪ್ಪು ಎಂದರೆ ಅದು ಅವರು ಅಸ್ಪೃಶ್ಯನಾಗಿ ಹುಟ್ಟದಿರುವುದು ಮಾತ್ರ.

        ಈ ನಡುವೆ ಗಾಂಧಿ ತನ್ನನ್ನು ತಾನು ಸಂಪೂರ್ಣವಾಗಿ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಸಮರ್ಪಿಸಿಕೊಳ್ಳದಿರುವುದು ಕೂಡ ದಲಿತ ಯುವ ಪೀಳಿಗೆಯ ಅನುಮಾನ ಮತ್ತು ಅಪಾರ್ಥಗಳಿಗೆ ದಾರಿಮಾಡಿ ಕೊಟ್ಟಿರಲೂ ಬಹುದು. ಏಕೆಂದರೆ ಹೋರಾಟದ ವಿಷಯವಾಗಿ ಗಾಂಧೀಜಿಯ ಮೊದಲ ಆದ್ಯತೆ ಸ್ವತಂತ್ರ ಭಾರತದ ಸ್ಥಾಪನೆಯಾಗಿತ್ತು. ಬ್ರಿಟೀಷರಿಂದ ಭಾರತವನ್ನು ಬಂಧಮುಕ್ತಗೊಳಿಸುವುದೇ ಗಾಂಧೀಜಿಯ ಉದ್ದೇಶವಾಗಿತ್ತು. ಹೀಗಿದ್ದೂ ಗಾಂಧಿ ಹರಿಜನೋದ್ಧಾರದಲ್ಲಿಯೂ ತೊಡಗಿಸಿಕೊಂಡರು. ಈ ವಿಷಯವಾಗಿ ಅಂಬೇಡ್ಕರ್ ಅವರಲ್ಲಿದ್ದಷ್ಟೇ ಬದ್ಧತೆ ಗಾಂಧಿಯಲ್ಲಿ ಕೂಡ ಇತ್ತು. ಆದರೆ ಅಂಬೇಡ್ಕರ್ ಯಾವ ಸಮುದಾಯ ಅಸಮಾನತೆಗೆ ಇಡಾಗಿತ್ತೋ ಆ ಸಮುದಾಯದಿಂದಲೇ ಬಂದದ್ದು ಅವರ ಹೋರಾಟವನ್ನು ಮೆಚ್ಚುಗೆಯ ದೃಷ್ಟಿಯಿಂದ ನೋಡಲು ಕಾರಣವಾಯಿತು. ಆದರೆ ಗಾಂಧಿಯ ಅದೇ ಹೋರಾಟವನ್ನು ಅವರು ಊರೊಳಗಿನವರೆಂಬ ಕಾರಣಕ್ಕೆ ಅನುಮಾನದಿಂದ ನೋಡುವಂತಾಯಿತು. ಇದು ಗಾಂಧಿ ಬದುಕಿನ ದೌರ್ಭಾಗ್ಯವೂ ಹೌದು.

     ಗಾಂಧೀಜಿಯವರ ಅಸ್ಪೃಶ್ಯತಾ ನಿರ್ಮೂಲನಾ ಹೋರಾಟ ಹೇಗಿತ್ತು ಎನ್ನುವುದಕ್ಕೊಂದು ನಿದರ್ಶನ ಹೀಗಿದೆ ಗಾಂಧೀಜಿಯವರ ಆಪ್ತರೊಬ್ಬರು ಅಸ್ಪೃಶ್ಯ ಕುಟುಂಬವೊಂದನ್ನು ಸಾಬರಮತಿ ಆಶ್ರಮಕ್ಕೆ ತಂದು ಬಿಟ್ಟರು. ಆಶ್ರಮದ ನಿಯಮಾವಳಿಗಳನ್ನು ಒಪ್ಪಿಕೊಂಡು ಇರುವುದಾದರೆ ಅಭ್ಯಂತರವಿಲ್ಲವೆಂದು ಗಾಂಧಿ ಆ ಕುಟುಂಬ ವರ್ಗದವರಿಗೆ ಆಶ್ರಮದಲ್ಲಿರಲು ಒಪ್ಪಿಗೆ ನೀಡಿದರು. ಪರಿಣಾಮವಾಗಿ ಸಾಬರಮತಿ ಆಶ್ರಮ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಕೆಲವರು ಈ ಘಟನೆಯಿಂದಾಗಿ ಆಶ್ರಮಕ್ಕೆ ನೆರವು ನೀಡುವುದನ್ನು ನಿಲ್ಲಿಸಿದರು. ಆಶ್ರಮದ ಅಂಗಳದಲ್ಲೇ ಇದ್ದ ಭಾವಿಯ ನೀರನ್ನು ತೆಗೆದುಕೊಳ್ಳಲು ಆ ಜಾಗದ ಯಜಮಾನ ಆಕ್ಷೇಪಿಸತೊಡಗಿದ. ಮೈಲಿಗೆಯ ಕಾರಣ ನೀಡಿ ಅನೇಕರು ಕಿರುಕುಳ ನೀಡತೊಡಗಿದರು. ಗಾಂಧೀಜಿ ಇದನ್ನೆಲ್ಲ ಅತ್ಯಂತ ನಿರ್ಲಿಪ್ತತೆಯಿಂದಲೇ ಸಹಿಸಿಕೊಂಡರು. ಯಾರೂ ಆ ಜಾಗದ ಮಾಲೀಕನ ಮಾತುಗಳಿಗೆ ಪ್ರತಿಕ್ರಿಯೆ ನೀಡದಿರಲು ಮನವಿ ಮಾಡಿದರು. ಆಗ ಮಾಲೀಕನೆ ನಾಚಿಕೊಂಡು ತೊಂದರೆ ಕೊಡುವುದನ್ನು ನಿಲ್ಲಿಸಿದ. ಗಾಂಧೀಜಿಯ ಹೋರಾಟ ಅದು ಧುಮ್ಮಿಕ್ಕುವ ಜಲಪಾತವಲ್ಲ. ಅದು ಶಾಂತವಾಗಿ ಹರಿಯುವ ನದಿಯಂತೆ. ಗಾಂಧೀಜಿಯವರ ಹೋರಾಟದ ಈ ಮನೋಭಾವವೂ ಇಂದಿನ ದಲಿತ  ಯುವಕರು ಅವರನ್ನು ತಪ್ಪಾಗಿ ಅರ್ಥೈಸಿಕೊಳ್ಳಲು ಒಂದು ಕಾರಣವಾಗಿರಬಹುದು.

       ಬುದ್ಧನ ಅನುಯಾಯಿಗಳಾಗಲು ಹಾತೊರೆಯುವವರಿಗೆ, ಬಸವಣ್ಣನನ್ನು ಆನುದೇವ ಒಳಗಣವನು ಎಂದು                    ಅಪ್ಪಿಕೊಳ್ಳುವವರಿಗೆ, ಅಂಬೇಡ್ಕರ್ ತಮ್ಮವರೆಂದು ಪ್ರೀತಿಸುವವರಿಗೆ  ಇಲ್ಲಿ ಗಾಂಧಿ ಮಾತ್ರ ಅಸ್ಪೃಶ್ಯನಂತೆ ಕಾಣುತ್ತಾರೆ. ಗಾಂಧಿ ಕುರಿತು ಸಿನಿಮಾವೊಂದು ಬಿಡುಗಡೆಯಾದಾಗ ಆ ಸಿನಿಮಾ ನೋಡದಂತೆ ಬಹಿಷ್ಕರಿಸಲಾಗುತ್ತದೆ. ಈ ನಡುವೆ ದೇವನೂರ ಮಹಾದೇವರಂಥ ದಲಿತ ಸಾಹಿತಿ 'ಸಾಯಲು ಮಾನಸಿಕವಾಗಿ ಧೃಢವಾಗಿ ಸಿದ್ಧನಾದವನು  ಮಾತ್ರ ಗಾಂಧಿಯಾಗಬಲ್ಲ. ಅಹಿಂಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲೂ ಹೇಡಿತನದ ಸುಳಿವು ಇರಲಿಲ್ಲ. ಇಂಥ ಗಾಂಧಿಯನ್ನು ಅಪಾರ್ಥಕ್ಕೊಳಗಾಗಿಸಿದ್ದು ಅದು ನಮ್ಮ ಹೇಡಿತನ' ಎಂದು ಮಾತನಾಡುವುದು ಮರುಭೂಮಿಯಲ್ಲಿ ಓಯಸಿಸ್ ನಂತೆ ಕಾಣಿಸುತ್ತದೆ.

        ಈಗ ಮೊದಲು ಆಗಬೇಕಿರುವುದು ಅಪಾರ್ಥಕ್ಕೊಳಗಾದ ಗಾಂಧಿಯನ್ನು ಇಂದಿನ ದಲಿತ ಯುವಪೀಳಿಗೆಗೆ ಪರಿಚಯಿಸುವಂಥ ಕೆಲಸವಾಗಬೇಕು. ಆ ಕೆಲಸವನ್ನು ದಲಿತ ಸಾಹಿತಿಗಳೇ ಮಾಡಿದರೂ ಇನ್ನಷ್ಟು ಒಳ್ಳೆಯದು. ದಲಿತೋದ್ಧಾರದ ಬಗ್ಗೆ ದಲಿತರ ಹಿತಾಸಕ್ತಿ ಕುರಿತು ಗಾಂಧಿ ಬರೆದ ಸಾಹಿತ್ಯವನ್ನು ಒಟ್ಟುಗೂಡಿಸಿ ಸಂಪಾದಿಸುವ ಕೆಲಸಕ್ಕೆ ಚಾಲನೆ ದೊರೆಯಬೇಕು. ಅಲ್ಲಲ್ಲಿ ಚದುರಿ ಹೋಗಿರುವ ದಲಿತರ ಒಡಲಿಗೆ ಒಗ್ಗುವ ಗಾಂಧಿ ವಿಚಾರಗಳು ನಮ್ಮ ಬೊಗಸೆಗೆ ಸಿಗಬೇಕು. ಒಟ್ಟಿನಲ್ಲಿ ಗಾಂಧಿ ಮರುಹುಟ್ಟು ಪಡೆಯಬೇಕು. ಈ ಹುಟ್ಟಿನಲ್ಲಿ ಗಾಂಧಿ ಸ್ವಾತಂತ್ರ್ಯ ಚಳುವಳಿಗಿಂತ ಹರಿಜನೋದ್ಧಾರಕ್ಕೆ ತೀರ ಹತ್ತಿರನಾಗಿರಬೇಕು. ಒಂದರ್ಥದಲ್ಲಿ ಆತ  ಅಸ್ಪೃಶ್ಯನಾಗಿ ಹುಟ್ಟಿದರೂ ಸರಿಯೇ. ಅಂದಾಗ ಮಾತ್ರ ಗಾಂಧಿ ಅಪಾರ್ಥ ಮತ್ತು ಅನುಮಾನಗಳ ಪರಿಧಿಯಿಂದ ಹೊರಬಂದು ನಮ್ಮ ಇಂದಿನ ದಲಿತ ಯುವಪೀಳಿಗೆಗೆ ಆಪ್ತನಾಗಲು ಸಾಧ್ಯ. ಅಂಥದ್ದೊಂದು ಸಾಧ್ಯವಾಗಿಸುವ ಪ್ರಕ್ರಿಯೆಗೆ  ದೇವನೂರ ಮಹಾದೇವ ನಾಂದಿ ಹಾಡಿದ್ದಾರೆ  ಎನ್ನುವ ನಂಬಿಕೆ ನನ್ನದು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


       

Monday, March 4, 2013

ಆನಂದಿಬಾಯಿ ಜೋಶಿ

     
   
(ಮಾರ್ಚ್ ೮ ಅಂತರಾಷ್ಟ್ರೀಯ ಮಹಿಳಾ ದಿನ. ಆ ನಿಮಿತ್ಯ  ಬರೆದ ಲೇಖನ)

         ಅದು ೧೯ ನೇ ಶತಮಾನದ ೮೦ ರ ದಶಕದ ಸಮಯ. ಆಗಿನ್ನೂ ಭಾರತ ಬ್ರಿಟಿಷರ ಆಡಳಿತದಲ್ಲಿದ್ದ ಕಾಲವದು. ಈಗಿನಂತೆ ಆಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿಲ್ಲ. ಜೊತೆಗೆ ಸಂಪ್ರದಾಯ ಎನ್ನುವ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿದ್ದ ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗದ ಕನಸು ಕಾಣುವುದು ಸಹ  ಅಸಾಧ್ಯವಾಗಿತ್ತು. ಮಹಿಳೆ ಏನಿದ್ದರೂ ಮನೆ, ಮಕ್ಕಳು, ಗಂಡ ಎನ್ನುವ ಪ್ರಪಂಚಕ್ಕೆ ಮಾತ್ರ ತನ್ನ ಕಾರ್ಯವ್ಯಾಪ್ತಿಯನ್ನು ಸಿಮೀತಗೊಳಿಸಿಕೊಂಡು ಆ ಪ್ರಪಂಚದ ಸುಖವೇ ತನ್ನ ಸುಖವೆಂದು ನಂಬಿ ಬದುಕುತ್ತಿದ್ದ ಕಾಲವದು. ಅಂಥದ್ದೊಂದು ಕರ್ಮಠ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಹೆಣ್ಣೊಬ್ಬಳು ವಿದೇಶದಲ್ಲಿ ಶಿಕ್ಷಣ ಪಡೆದು ಭಾರತದ ಪ್ರಥಮ ಮಹಿಳಾ ವೈದ್ಯೆ ಎನ್ನುವ ಕೀರ್ತಿಗೆ ಭಾಜನಳಾದ ಕಥೆ ನಿಜಕ್ಕೂ ಅಚ್ಚರಿಯ ಸಂಗತಿಗಳಲ್ಲೊಂದು. ಹೀಗೆ ಸಾಧನೆಗೈದ ಮಹಿಳೆಯ ಹೆಸರು ಆನಂದಿಬಾಯಿ ಜೋಶಿ ಎಂದು. ಮಹಾರಾಷ್ಟ್ರದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಈ ಮಹಿಳೆ ಪುರುಷ ಪ್ರಧಾನ ಸಮಾಜದಲ್ಲಿನ ಏನೆಲ್ಲಾ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸಿ ಭಾರತದ ಗಡಿದಾಟಿ ವಿದೇಶಕ್ಕೆ ಕಾಲಿಟ್ಟು ವೈದ್ಯಕೀಯ ಶಿಕ್ಷಣ ಪಡೆದ ಆಕೆಯ ಬದುಕಿನ ಆ ಯಶೋಗಾಥೆ ನಂತರದ ದಿನಗಳಲ್ಲಿ ಅನೇಕ ಮಹಿಳೆಯರ ಬದುಕಿಗೆ ದಾರಿದೀಪವಾಯಿತು.

         ಆನಂದಿಬಾಯಿಯ ಪಯಣದ ಆ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಅಲ್ಲಿ ಬರೀ ಕಲ್ಲು ಮುಳ್ಳುಗಳೇ ತುಂಬಿದ್ದವು. ಸ್ವಲ್ಪ ಎಚ್ಚರ ತಪ್ಪಿ ಹೆಜ್ಜೆ ಇಟ್ಟರೂ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಏಕೆಂದರೆ ಅವಳ ಆ ಪಯಣದ ಹಾದಿ ಅಷ್ಟೊಂದು ದುರ್ಗಮವಾಗಿತ್ತು. ಜೊತೆಗೆ ತೀರ ಚಿಕ್ಕ ವಯಸ್ಸಿನಲ್ಲೇ ಕೈ ಕೊಡಲಾರಂಭಿಸಿದ ಆರೋಗ್ಯ ಸಹ ಆನಂದಿಬಾಯಿಯ ಬದುಕನ್ನು ಜರ್ಜರಿತಗೊಳಿಸಿಬಿಟ್ಟಿತ್ತು. ಸಂಪ್ರದಾಯದ ಬೇಲಿಯ ನಡುವಿನ ಬದುಕು, ತೀರ ಹದಗೆಟ್ಟ ಆರೋಗ್ಯ, ಅಪರಿಚಿತ ದೇಶ, ಆರ್ಥಿಕ ತೊಂದರೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸುವಾಗ ಆ ಹೆಣ್ಣು ಮಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಷ್ಟೊಂದು ಜರ್ಜರಿತಗೊಂಡಿರಬಹುದು ಎನ್ನುವ ಆತಂಕವೊಮ್ಮೆ ಮನಸ್ಸಿನ ಆಳಕ್ಕೆ ಇಳಿದಾಗ ಕಣ್ಣುಗಳು ಹನಿಗೂಡುತ್ತವೆ. ಮನಸ್ಸು ಆರ್ದ್ರವಾಗುತ್ತದೆ. ಹೃದಯ ಭಾರವಾಗುತ್ತದೆ. ನಮಗರಿವಿಲ್ಲದೆ ಆ ಮಹಾತಾಯಿಗೊಂದು ಸಣ್ಣ ಅಭಿನಂದನೆ ಹೇಳಲು ಮನಸ್ಸು ತುಡಿಯುತ್ತದೆ.

         ಆನಂದಿಬಾಯಿ ಜೋಶಿ ಬದುಕಿನ ಆ ಒಂದು ಮಹತ್ಸಾಧನೆಗಾಗಿ ಆಕೆ ಮಾಡಿದ ಹೋರಾಟವೇನು? ಆ ಹೋರಾಟದಲ್ಲಿ ಅವಳು ಪಡೆದದ್ದೆಷ್ಟು? ಹಾಗಾದರೆ ಕಳೆದುಕೊಂಡಿದ್ದೂ ಇರಬಹುದಲ್ಲ. ಅದನ್ನೆಲ್ಲ ಆನಂದಿಬಾಯಿಯ ಮಾತುಗಳಲ್ಲೇ ಕೇಳಿದರೆ ಹೇಗಿರಬಹುದು. ಆಕೆ ಏನೆಂದು ಉತ್ತರಿಸಬಹುದು? ಆ ಮಹಾತಾಯಿಯ ಬದುಕಿನ ಯಶೋಗಾಥೆ ಅದಕ್ಕಾಗಿ ಆಕೆ ಅನುಭವಿಸಿದ ಸಂಕಟಗಳನ್ನೆಲ್ಲ ಆನಂದಿಬಾಯಿಯ ಮಾತುಗಳಲ್ಲೇ ಕೇಳಿ..............................

          'ನಾನು ಆನಂದಿಬಾಯಿ ಜೋಶಿ. ಮಹಾರಾಷ್ಟ್ರದ ಮುಂಬೈ ಎನ್ನುವ ಮಾಯಾನಗರಿಯ ಸಮೀಪದಲ್ಲಿರುವ ಥಾಣೆ ಎಂಬಲ್ಲಿ ೧೮೬೫ ರ ಮಾರ್ಚ್ ೩೧ ರಂದು ಜನಿಸಿದೆ. ನಾನು ಹುಟ್ಟಿದ್ದು ಮಹಾರಾಷ್ಟ್ರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ. ನಾನು ಹುಟ್ಟಿದಾಗ ನನ್ನ ತಂದೆ ತಾಯಿ ನನ್ನನ್ನು ಯಮುನಾಬಾಯಿ ಎನ್ನುವ ಹೆಸರಿನಿಂದ ಕರೆದರು. ಸಾಕಷ್ಟು ಸ್ಥಿತಿವಂತರಾಗಿದ್ದ ನನ್ನ ಪೋಷಕರು ನಂತರದ ದಿನಗಳಲ್ಲಿ ತಮ್ಮ ಆಸ್ತಿಯನ್ನೆಲ್ಲ ಕಳೆದುಕೊಂಡು  ನಿರ್ಗತಿಕರಾದರು. ಜೊತೆಗೆ ಚಿಕ್ಕ ವಯಸ್ಸಿನಲ್ಲೇ ನಾನು ಸಿಡುಬು ರೋಗಕ್ಕೆ ಬಲಿಯಾಗಿದ್ದು ನನ್ನ ತಂದೆ ತಾಯಿಗೆ ಆಘಾತವನ್ನುಂಟುಮಾಡಿತು. ಆ ಕಾಲದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ಮದುವೆ  ಮಾಡಿ ಗಂಡನ ಮನೆಗೆ ಕಳುಹಿಸುವುದೇ ಅತಿ ದೊಡ್ಡ ಜವಾಬ್ದಾರಿಯಾಗಿತ್ತು. ನನ್ನ ತಂದೆ ತಾಯಿ ತಮ್ಮ ಮಗಳ ಮದುವೆ ವಿಷಯವಾಗಿ ಯೋಚಿಸಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.

        ಈ ನಡುವೆ ನಾನು ಮರಾಠಿ ಓದುವುದನ್ನು ಕಲಿತೆ. ಆದರೆ ಶಾಲೆಗೇ ಹೋಗಿ ಶಿಕ್ಷಣ ಪಡೆಯಬೇಕೆನ್ನುವ ನನ್ನ ಆಸೆ ಬಾಲ್ಯದ ದಿನಗಳಲ್ಲಿ ಇಡೇರಲಿಲ್ಲ. ಏಕೆಂದರೆ ಹೆಣ್ಣುಮಕ್ಕಳು ಆಗೆಲ್ಲ ಶಾಲೆಗೆ ಹೋಗುವುದನ್ನು ನಮ್ಮ ಸಂಪ್ರದಾಯಸ್ಥ ಸಮಾಜ ನಿಷೇಧಿಸಿತ್ತು. ಅದನ್ನು ವಿರೋಧಿಸಿ ತಮ್ಮ ಮಗಳನ್ನು ಶಾಲೆಗೆ ಕಳುಹಿಸುವಷ್ಟು ನನ್ನ ಪೋಷಕರು ಪ್ರಗತಿಗಾಮಿಗಳಾಗಿರಲಿಲ್ಲ. ಅದಕ್ಕೆಂದೇ ನಾನು ಸಹ ಮದುವೆಯಾಗಿ ಗಂಡನ ಮನೆಗೆ ಹೋಗುವುದು ಅನಿವಾರ್ಯವಾಗಿತ್ತು.

ವೈವಾಹಿಕ ಬದುಕು 


          ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಆಗಿನ್ನೂ ನನಗೆ ೯ ವರ್ಷ ವಯಸ್ಸು. ಮದುವೆ ಎಂದರೆ ಏನೆಂದು ಗೊತ್ತಿರದ ವಯಸ್ಸು ನನ್ನದು. ಗೋಪಾಲರಾವ ಜೋಶಿ ಎನ್ನುವ ಬ್ರಾಹ್ಮಣ ವಿಧುರನಿಗೆ ನನ್ನನ್ನು ಮದುವೆಮಾಡಿ ಕೊಡಲಾಯಿತು. ವಯಸ್ಸಿನಲ್ಲಿ ಗೋಪಾಲರಾವ ನನಗಿಂತ ೨೦ ವರ್ಷ ಹಿರಿಯರಾಗಿದ್ದರು. ಅಂಚೆ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಗೋಪಾಲರಾವಗೆ ಎರಡನೆ ಹೆಂಡತಿಯಾಗಿ ನಾನು ಗಂಡನ ಮನೆ ಸೇರಿದೆ. ಆ ಕಾಲದಲ್ಲಿನ ಸಂಪ್ರದಾಯದಂತೆ ಈ ಮೊದಲು ಯಮುನಾಬಾಯಿಯಾಗಿದ್ದ ನನ್ನನ್ನು ಗಂಡನ ಮನೆಯಲ್ಲಿ ಆನಂದಿಬಾಯಿ ಎನ್ನುವ ಹೊಸ ಹೆಸರಿನಿಂದ ಕರೆಯತೊಡಗಿದರು. ಹೊಸ ಹೆಸರಿನೊಂದಿಗೆ ಹೊಸ ಪರಿಸರದಲ್ಲಿ ನನ್ನ ವೈವಾಹಿಕ ಬದುಕಿನ ಪುಟಗಳು ಬಿಚ್ಚಿಕೊಳ್ಳ ತೊಡಗಿದವು.

          ನನ್ನ ಪತಿ ಗೋಪಾಲರಾವ ಉನ್ನತಾದರ್ಶಗಳ ವಿಚಾರವಾದಿಯಾಗಿದ್ದರು. ಆ ಕಾಲದಲ್ಲೇ ಅವರು ವಿಧವಾ ವಿವಾಹ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ಮದುವೆಯ ಪ್ರಾರಂಭದಲ್ಲೇ ನನ್ನ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ನೆರವು ಮತ್ತು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ದಿನಗಳಲ್ಲಿ ಗಂಡನಾದವನು ತನ್ನ ಹೆಂಡತಿಯೊಡನೆ ಕುಟುಂಬದ ಎಲ್ಲ ಸದಸ್ಯರೆದುರು ನಿರ್ಭಿಡೆಯಿಂದ  ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ವರ್ತಿಸುವುದನ್ನು ಲಜ್ಜೆಗೇಡಿತನವೆಂದು ಹಿಯ್ಯಾಳಿಸುತ್ತಿದ್ದರು. ಕಾರಣ ತನ್ನ ಹೆಂಡತಿಯನ್ನು ವಿದ್ಯಾವಂತಳನ್ನಾಗಿ ಮಾಡಬೇಕೆನ್ನುವ ನನ್ನ ಗಂಡನ ಆಸೆ ನಾವುಗಳು ಕಲ್ಯಾಣದಲ್ಲಿರುವಷ್ಟು ದಿನಗಳು ಕೈಗೂಡಲೇ ಇಲ್ಲ. ಅವರು ಸರ್ಕಾರಿ ನೌಕರರಾಗಿದ್ದರಿಂದ ಒಂದು ಊರಿನಿಂದ ಮತ್ತೊಂದು ಊರಿಗೆ ವರ್ಗವಾಗುವುದು ಸಹಜವಾಗಿತ್ತು. ನಮ್ಮ ಮದುವೆಯಾದ ಕೆಲವು ವರ್ಷಗಳ ನಂತರ ಅವರಿಗೆ ಅಲಿಭಾಗಿಗೆ ವರ್ಗವಾಯಿತು.

          ಈ ನಡುವೆ ನನ್ನ ಬದುಕಿನಲ್ಲಿ ಮತ್ತೊಂದು ದುರಂತ ನಡೆದು ಹೋಯಿತು. ನಾನು ಗಂಡು ಮಗುವಿಗೆ ಜನ್ಮ ನೀಡಿದ್ದು ನನ್ನ ಗಂಡನ ಮನೆಯಲ್ಲಿ ಎಲ್ಲರಿಗೂ ಸಂತಸದ ವಿಷಯವಾಗಿತ್ತು. ಈ ವಿಷಯ ತಿಳಿದು ನನ್ನ ತಂದೆ ತಾಯಿ ಸಹ ತುಂಬ ಹರ್ಷ ಪಟ್ಟರು. ಆ ಮಾತೃತ್ವದ ಸುಖ ನನ್ನ ಪಾಲಿಗೆ ಹೊಸ ಅನುಭವವನ್ನೇ ತಂದು ಕೊಟ್ಟಿತು. ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಪುಟ್ಟ ಕಂದ ಆಗ ನನ್ನ ಬದುಕಾಗಿತ್ತು ಅದುವೇ ನನ್ನ ಉಸಿರಾಗಿತ್ತು. ಮಗುವಿನ ಮುಖ ನೋಡುತ್ತ ನಾನು ನನ್ನ ಬದುಕಿನ ಎಲ್ಲ ವೈರುಧ್ಯಗಳನ್ನು ಮರೆಯುತ್ತಿದ್ದೆ. ಆ ವಿಧಿಗೆ ನನ್ನ ಬದುಕಿನ ಸಂತಸ ಸಹಿಸಲಾಗಲಿಲ್ಲವೇನೋ. ಹತ್ತು  ದಿನಗಳ ನನ್ನ ಹಸುಗಂದ ಕಣ್ಮುಚ್ಚಿ ಶಾಶ್ವತವಾಗಿ ನನ್ನಿಂದ ದೂರವಾದ. ಸರಿಯಾದ ವೈದ್ಯಕೀಯ ಸೌಲಭ್ಯ ದೊರೆಯದೆ ನನ್ನ ಮಗು ಸಾವನ್ನಪ್ಪಿತು. ಆ ಒಂದು ಘಟನೆ ನಾನು ವೈದ್ಯಳಾಗಬೇಕೆನ್ನುವ ನನ್ನ ನಿರ್ಧಾರವನ್ನು ಗಟ್ಟಿಗೊಳಿಸಿತು.

ಹೊಸ ಹೆಜ್ಜೆ 


        ನಾವು ಕಲ್ಕತ್ತಾಗೆ ವರ್ಗವಾಗಿ ಬಂದ  ಮೇಲೆ ನಾನು ಇಂಗ್ಲಿಷ್ ಭಾಷೆಯಲ್ಲಿ ಓದುವುದನ್ನು ಕಲಿತೆ. ನನ್ನ ಪತಿ ನನ್ನನ್ನು ಉನ್ನತ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸತೊಡಗಿದರು. ಆಗ ನನ್ನೆದುರಿದ್ದದ್ದು ನಾನೊಬ್ಬ ವೈದ್ಯಳಾಗಬೇಕೆನ್ನುವ ನಿರ್ಧಿಷ್ಟ ಗುರಿಯೊಂದೆ. ಆಗೆಲ್ಲ ಮಹಿಳಾ ವೈದ್ಯರ ಕೊರತೆಯಿಂದಾಗಿ ಹೆಣ್ಣು ಮಕ್ಕಳು ಪುರುಷ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯುತ್ತಿದ್ದರು. ಈ ಹಿಂಜರಿಕೆ, ಅವಮಾನಗಳು ಅದೆಷ್ಟೋ ಹೆಣ್ಣು ಮಕ್ಕಳ ಸಾವಿನಲ್ಲಿ ಕೊನೆಗೊಳ್ಳುತ್ತಿದ್ದವು. ಈ ಸಮಸ್ಯೆಯ ಬಿಸಿ ನನ್ನನ್ನು ತಟ್ಟಿತ್ತು. ಆದ್ದರಿಂದ ನಾನು ಉನ್ನತ ಶಿಕ್ಷಣ ಪಡೆದು ವೈದ್ಯಳಾಗಬೇಕೆನ್ನುವ ನಿರ್ಧಾರದ ಹಿಂದೆ ಒಂದು ಸ್ಪಷ್ಟತೆ ಇತ್ತು, ಒಂದು ಸಾಮಾಜಿಕ ತುಡಿತವಿತ್ತು.

          ೧೮೮೦ ರ ದಶಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ನಿರ್ಧರಿಸಿದೆ. ನನ್ನ ಪತಿ ನನ್ನ ಎಲ್ಲ ಪ್ರಯತ್ನಗಳಿಗೆ ಆಸರೆಯಾಗಿ ನಿಂತರು. ಈ ಉದ್ದೇಶಕ್ಕಾಗಿ ಅಮೆರಿಕಾಗೆ ಹೋಗುವ ನಮ್ಮ ನಿರ್ಧಾರ ಗಟ್ಟಿಯಾಗಿತ್ತು. ಅಮೆರಿಕಾದ ಕ್ರೈಸ್ತ ಮಿಷನರಿಯೊಂದಕ್ಕೆ ಈ ಕುರಿತು ವಿವರವಾಗಿ ಪತ್ರ ಬರೆದು ತಿಳಿಸಿದೆವು. ಆ ಪತ್ರದಲ್ಲಿ ನಮ್ಮ ಕನಸುಗಳು, ಉದ್ದೇಶ, ನಾವು ಹಾಕಿಕೊಂಡ ಯೋಜನೆ, ನಮ್ಮ ಸಾಮಾಜಿಕ ಚಿಂತನೆ ಹೀಗೆ ಎಲ್ಲವನ್ನೂ ಸ್ಪಷ್ಟಪಡಿಸಲಾಗಿತ್ತು. ನನ್ನ ಗಂಡನಿಗೊಂದು ಕೆಲಸ ನನಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನೀಡಿದಲ್ಲಿ ನಾವು ಕೃತಜ್ಞರು ಎಂದು ಮನವಿ ಮಾಡಿಕೊಂಡಿದ್ದೆವು. ಕ್ರೈಸ್ತ ಮಿಷನರಿಯಿಂದ ಉತ್ತರ ಬಹುಬೇಗನೆ ಬಂದು ನಮ್ಮ ಕೈ ತಲುಪಿತು. ಅವರು ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಒಂದು ಷರತ್ತನ್ನು ಕೂಡಾ ಹಾಕಿದ್ದರು. ಅದು ನಾವು ದಂಪತಿಗಳಿಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು. ಆದರದು ನಮಗೆ ಇಷ್ಟವಿರಲಿಲ್ಲ. ಮೊದಲ ಪ್ರಯತ್ನದಲ್ಲೇ ಬಹುದೊಡ್ಡ ಸೋಲು ನಮಗೆದುರಾಗಿ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿತು.

          ಕ್ರೈಸ್ತ ಮಿಷನರಿ ಮತ್ತು ನಮ್ಮ ನಡುವಿನ ಪತ್ರವ್ಯವಹಾರವನ್ನು ವೈಲ್ದರ್ ಎನ್ನುವ ಪಾದ್ರಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ನಮಗೆ ದೊಡ್ಡ ಉಪಕಾರ ಮಾಡಿದ. ಈ ವಿಷಯವನ್ನೋದಿದ ಅಮೆರಿಕಾದ ಕಾರ್ಪೆಂಟರ್ ಎನ್ನುವ ಮಹಿಳೆ ನನ್ನ ವಿಷಯವಾಗಿ ಆಸಕ್ತಿ ತೋರಿಸಿದಳು. ನಾನು ವೈದ್ಯಕೀಯ ಶಿಕ್ಷಣ ಪಡೆದು ಸಾಮಾಜಿಕ ಸೇವೆ ಮಾಡುವ ನನ್ನ ಆಲೋಚನೆ ಅವಳಿಗೆ ಮೆಚ್ಚುಗೆಯ ಸಂಗತಿಯಾಗಿತ್ತು. ಕೂಡಲೇ ಆ ಮಹಿಳೆ ನನಗೆ ಅಮೆರಿಕಾದಲ್ಲಿ ವಸತಿ ಸೌಲಭ್ಯ ಒದಗಿಸುವುದಾಗಿ ಪತ್ರ ಬರೆದು ತಿಳಿಸಿದಳು. ನಂತರದ ದಿನಗಳಲ್ಲಿ ನನ್ನ ಮತ್ತು ಶ್ರೀಮತಿ ಕಾರ್ಪೆಂಟರ್ ನಡುವೆ ಸುದೀರ್ಘ ಪತ್ರವ್ಯವಹಾರ ಮುಂದುವರೆಯಿತು. ನಾನು ಆಕೆಯನ್ನು ಮೌಸಿ ಎಂದೇ ಸಂಬೋಧಿಸಿದೆ. ಆಕೆ ನನ್ನಿಂದ ಹಿಂದೂ ಧರ್ಮ ಮತ್ತದರ ಸಂಸ್ಕೃತಿಯ ಬಗ್ಗೆ ಕೇಳಿ ತಿಳಿದಳು. ಈ ನಡುವೆ ಅಶಕ್ತಿ, ತಲೆನೋವು, ಜ್ವರ, ಉಸಿರಾಟದ ತೊಂದರೆಗಳಿಂದ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಆಗೆಲ್ಲ ಕಾರ್ಪೆಂಟರ್ ಅಮೆರಿಕಾದಿಂದ ನನಗೆ ಅಗತ್ಯದ ಔಷಧಿಗಳನ್ನು ಕಳುಹಿಸಿಕೊಡುತ್ತಿದ್ದಳು. ದಿನದಿಂದ ದಿನಕ್ಕೆ ನಮ್ಮಿಬ್ಬರ ನಡುವಿನ ಗೆಳೆತನ ಗಟ್ಟಿಯಾಗತೊಡಗಿತು.

          ಶ್ರೀಮತಿ ಕಾರ್ಪೆಂಟರ್ ಅವರ ಭರವಸೆಯ ಮಾತುಗಳಿಂದ ವೈದ್ಯಳಾಗಬೇಕೆನ್ನುವ ನನ್ನ ಆಸೆ ಮತ್ತೆ ಚಿಗುರತೊಡಗಿತು. ನನ್ನ ಪತಿ ಗೋಪಾಲರಾವ ನನ್ನನ್ನು ಅಮೆರಿಕಾ ದೇಶಕ್ಕೆ ಕಳುಹಿಸಲೇ ಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದರು. ಹಿಂದು ಸಮಾಜ ಅವರ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿತು. ಅನೇಕರು ಅವಹೇಳನ  ಮಾಡಿದರು. ಸಮಾಜದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು. ಆದರೆ ನಾವು ಆಗಲೇ ನಿರ್ಧಾರವನ್ನು ಮಾಡಿಯಾಗಿತ್ತು. ಯಾವ ಬೆದರಿಕೆ, ಅಪಮಾನ, ಟೀಕೆಗಳು ನಮ್ಮನ್ನು ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ನಾನು ಅನೇಕ ಸಭೆಗಳಲ್ಲಿ ಮಾತನಾಡಿ ಭಾರತದಲ್ಲಿ ಮಹಿಳಾ ವೈದ್ಯರ ಅವಶ್ಯಕತೆಯನ್ನು ಜನರಿಗೆ ಮನಗಾಣಿಸಿ ಕೊಟ್ಟೆ. ಇಲ್ಲಿನ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಕುರಿತು ತಿಳಿ ಹೇಳಿದೆ. ಭಾರತಕ್ಕೆ ಹಿಂತಿರುಗಿ ಬಂದು ಮಹಿಳೆಯರಿಗಾಗಿಯೇ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ. ಹಿಂದು ಧರ್ಮದಿಂದ ಬೇರೆ ಯಾವ ಧರ್ಮಕ್ಕೂ ಮತಾಂತರಗೊಳ್ಳದಿರುವ ನನ್ನ ನಿರ್ಧಾರವನ್ನು ಪ್ರಕಟಿಸಿದೆ. ನನ್ನ ಮಾತುಗಳು ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದವು. ಭಾರತದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರ ಹರಿದು ಬಂತು. ನಾನು ನನ್ನಲ್ಲಿದ್ದ ಒಡವೆಗಳನ್ನೆಲ್ಲ ಮಾರಿ ಬಂದ ಹಣದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ನಿರ್ಧರಿಸಿದೆ.

ಅಮೆರಿಕಾಗೆ ಪ್ರಯಾಣ 


            ೧೮೮೩ ರ ಜೂನ್ ಒಂದು ದಿನ ನಾನು ಅಮೆರಿಕಾದ ನೆಲದ ಮೇಲೆ ಕಾಲಿಟ್ಟೆ. ಆ ದಿನ ನಾನು ನನ್ನ ಕನಸಿಗೆ ತುಂಬ ಹತ್ತಿರದಲ್ಲಿದ್ದೇನೆ ಎನ್ನುವ ಸಂತಸ ನನ್ನಲ್ಲಿತ್ತು. ನ್ಯೂಯಾರ್ಕಿಗೆ ಶ್ರೀಮತಿ ಕಾರ್ಪೆಂಟರ್ ನನ್ನನ್ನು ಸ್ವಾಗತಿಸಲು ಬಂದಿದ್ದರು. ಅಪರಿಚಿತ ನಾಡಿನಲ್ಲಿ ಅವರ ಪರಿಚಯ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ಫಿಲ್ದೆಲ್ಫಿಯಾದ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ನನಗೆ ಸುಲಭವಾಗಿ ಪ್ರವೇಶ ದೊರೆಯಿತು. ನಾನು ಅಲ್ಲಿರುವಷ್ಟು ದಿನಗಳು ಕಾರ್ಪೆಂಟರ್ ನನ್ನನ್ನು ತಮ್ಮ ಮಗಳಂತೆಯೇ ನೋಡಿಕೊಂಡರು. ಕಾಲೇಜಿನ ವಸತಿ ಗೃಹದಲ್ಲಿ ನನ್ನನ್ನು ಬಿಟ್ಟು ಹೋಗುವಾಗ ಆಕೆ ಚಿಕ್ಕ ಮಗುವಿನಂತೆ ಬಿಕ್ಕಿ ಅಳುತ್ತಿದ್ದ ದೃಶ್ಯ ಅನೇಕ ದಿನಗಳವರೆಗೆ ನನ್ನ ನೆನಪುಗಳಲ್ಲಿ ಹಸಿರಾಗಿತ್ತು. ಕಾಲೇಜಿನ ಆಡಳಿತ ವರ್ಗದವರು ನನಗೆ ನೀಡಿದ ಸಹಕಾರ ಅವಿಸ್ಮರಣೀಯ. ನಾನು ದೂರದ ಭಾರತದಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಬಂದ ಸಂಗತಿ ಅವರಿಗೆ ಅತ್ಯಂತ ಮೆಚ್ಚುಗೆಯಾಗಿತ್ತು. ೬೦೦ ಡಾಲರ್ ಗಳ ಶಿಷ್ಯ ವೇತನ ನೀಡಿದ ಆಡಳಿತ ವರ್ಗದವರ ಪ್ರೋತ್ಸಾಹ ನನ್ನನ್ನು ನನ್ನ ಕನಸಿಗೆ ಮತ್ತಷ್ಟು ಹತ್ತಿರವಾಗಿಸಿತು.

      ಅಮೆರಿಕಾದಲ್ಲಿ ನನ್ನ ವೈದ್ಯಕೀಯ ವಿದ್ಯಾಭ್ಯಾಸವೇನೋ ಪ್ರಾರಂಭವಾಯಿತು. ಆದರೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ನನಗೆ ಸಾಕಷ್ಟು ತೊಂದರೆಯಾಯಿತು. ನಾನು  ಧರಿಸುವ ಬಟ್ಟೆ ಅಲ್ಲಿನ ಮೈ ನಡುಗಿಸುವ ಚಳಿಗೆ ಹೊಂದಿಕೆಯಾಗುತ್ತಿರಲಿಲ್ಲ. ಜೊತೆಗೆ ವಿದೇಶಿಯರಂತೆ ಉಡುಪು ಧರಿಸುವುದು ನನಗೆ ರೂಢಿಯಾಗಿರಲಿಲ್ಲ. ಅದರೊಂದಿಗೆ ನನ್ನ ಕೋಣೆಯಲ್ಲಿ ಚಳಿ ಕಾಯಿಸಿಕೊಳ್ಳುವುದಕ್ಕಾಗಿ ಬೆಂಕಿ ಉರಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಬೆಂಕಿಯಿಂದಾಗಿ ನನ್ನ ಕೋಣೆ ತುಂಬೆಲ್ಲ ಹೊಗೆ ತುಂಬಿ ಹೋಗುತ್ತಿತ್ತು. ಆಗೆಲ್ಲ ನನ್ನೆದುರು ಎರಡು ಆಯ್ಕೆಗಳಿದ್ದವು ಒಂದು ಚಳಿಯನ್ನು ಸಹಿಸಿಕೊಳ್ಳಬೇಕು ಇಲ್ಲವೇ ಹೊಗೆಯಿಂದ ಉಸಿರುಗಟ್ಟುವಂತಾಗಬೇಕು. ಇದರ ಪರಿಣಾಮ ನನ್ನ ಆರೋಗ್ಯದ ಮೇಲಾಯಿತು. ಅಲ್ಲಿದ್ದ ಮೂರು ವರ್ಷಗಳ ಅವಧಿಯಲ್ಲಿ ನನ್ನ ಆರೋಗ್ಯದಲ್ಲಿ ಸಾಕಷ್ಟು ಏರುಪೆರಾಯಿತು. ಅನಾರೋಗ್ಯದ ನಡುವೆಯೂ ನಾನು ವೈದ್ಯಕೀಯ ವಿಜ್ಞಾನದ ಅಂತಿಮ ಪರೀಕ್ಷೆ ಬರೆದು ಉತ್ತೀರ್ಣಳಾದೆ.

        ಪದವಿ ಪ್ರಧಾನ ಸಮಾರಂಭದ ದಿನ ನಾನು ಭಾರತದ ಪ್ರಥಮ ಮಹಿಳಾ ವೈದ್ಯೆ ಎಂದು ಘೋಷಿಸಿದಾಗ ಇಡೀ ಸಭಾಂಗಣದ ತುಂಬ ಚಪ್ಪಾಳೆಗಳ ಸುರಿಮಳೆ. ಅಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ನನಗೆ ಗೌರವ ಸೂಚಿಸಿದರು. ಆ ದಿನ ನನ್ನ ಬದುಕಿನಲ್ಲೇ ಮರೆಯಲಾಗದ ಅವಿಸ್ಮರಣೀಯ ದಿನ. ಅಂಥದ್ದೊಂದು ಗೌರವಕ್ಕೆ ಪಾತ್ರಳಾದ ನನಗೆ ಆಗಿನ್ನೂ ೨೧  ವರ್ಷ ವಯಸ್ಸು.

ಮರಳಿ ಭಾರತಕ್ಕೆ 


         ನನ್ನ ಪತಿಗೆ ನಾನಿನ್ನೂ ಕೆಲವು ವರ್ಷ ಅಮೆರಿಕಾದಲ್ಲಿದ್ದು ಪರಿಣಿತಿ ಹೊಂದಲೆಂಬ ಆಸೆಯಿತ್ತು. ಆದರೆ ನನ್ನ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ವೈದ್ಯರು ಪರೀಕ್ಷಿಸಿದಾಗ ನಾನು ಕ್ಷಯ ರೋಗದಿಂದ ಬಳಲುತ್ತಿರುವುದು ಗೊತ್ತಾಯಿತು. ಹೀಗಾಗಿ ನಾನು ಭಾರತಕ್ಕೆ ಮರಳಲು ನಿರ್ಧರಿಸಿದೆ. ಪ್ರಯಾಣದ ಮಧ್ಯೆ ಹಡಗಿನಲ್ಲಿ ಅಲ್ಲಿನ ಬಿಳಿಯ ವೈದ್ಯರು ಕಪ್ಪು ಮಹಿಳೆಯಾದ ನನ್ನನ್ನು ಚಿಕಿತ್ಸೆ ನೀಡಲು ನಿರಾಕರಿಸಿದರು. ಭಾರತಕ್ಕೆ ಬಂದ ಮೇಲೂ ಸಂಪ್ರದಾಯದ ಕಟ್ಟಳೆ ಮುರಿದವಳೆನ್ನುವ ಕಾರಣ ನೀಡಿ ಇಲ್ಲಿನ ವೈದ್ಯರು ಸಹ ಚಿಕಿತ್ಸೆ ನೀಡಲಿಲ್ಲ. ಆದ್ದರಿಂದ ನನ್ನ ಅನಾರೋಗ್ಯ ಮತ್ತಷ್ಟು ಉಲ್ಬಣಿಸಿತು. ಆ ಅನಾರೋಗ್ಯದ ನಡುವೆಯೂ ನಾನು ಕೊಲ್ಹಾಪುರದ ಸರ್ಕಾರಿ ಆಸ್ಪತ್ರೆಯ ಮಹಿಳಾ ವಾರ್ಡಿನ ಮುಖ್ಯ ವೈದ್ಯೆಯಾಗಿ ಕೆಲ ಕಾಲ ಕಾರ್ಯನಿರ್ವಹಿಸಿದೆ'.

          ಹೀಗೆ ಹೇಳುವುದರೊಂದಿಗೆ ಆನಂದಿಬಾಯಿ ಜೋಶಿಯ ಕಥೆ ಇಲ್ಲಿಗೆ ಮುಗಿಯುತ್ತದೆ. ತೀವೃ ಅನಾರೋಗ್ಯದ ಕಾರಣ ಫೆಬ್ರುವರಿ ೨೬, ೧೮೮೭ ರಂದು ಆನಂದಿಬಾಯಿ ತೀರಿಕೊಂಡಾಗ ಆಗಿನ್ನೂ ೨೨ ರ ಪ್ರಾಯ. ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆನ್ನುವ ಅವರ ಕನಸು ಕನಸಾಗಿಯೇ ಉಳಿಯಿತು ನಿಜ. ಆದರೆ ನಂತರದ ದಿನಗಳಲ್ಲಿ ಮಹಿಳೆಯರೂ ವೈದ್ಯರಾಗುವ ಕನಸು ಕಾಣಲು ಅವರು ಹಾಕಿಕೊಟ್ಟ ಮಾರ್ಗ ಮತ್ತು ನೀಡಿದ ಪ್ರೇರಣೆ ಅದು ಎಂದಿಗೂ ಅಜರಾಮರ.

(ಇಂಟರ್ ನೆಟ್ ನಲ್ಲಿ ಸಂಗ್ರಹಿಸಿದ ಇಂಗ್ಲಿಷ್ ಮಾಹಿತಿಯ ಕನ್ನಡ ಭಾವಾನುವಾದ)

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ