Monday, January 21, 2013

'ಪೂರ್ಣ ಸತ್ಯ' ಪುಸ್ತಕ ಬಿಡುಗಡೆ

        ದಿನಾಂಕ ೨೦.೦೧.೨೦೧೩ ರಂದು ಗುಲಬರ್ಗಾದ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದವರು ಸುಮಾರು ೫೫ ಪುಸ್ತಕಗಳ ಬಿಡುಗಡೆ ಸಮಾರಂಭ ಆಯೋಜಿಸಿದ್ದರು. ಆ ೫೫ ಕೃತಿಗಳಲ್ಲಿ ನಾನು ಬರೆದ 'ಪೂರ್ಣ ಸತ್ಯ' ಸಹ ಬಿಡುಗಡೆಯಾದ ಕೃತಿಗಳಲ್ಲೊಂದು. 'ಪೂರ್ಣ ಸತ್ಯ' ಇದು ನನ್ನ ಎರಡನೇ ಕೃತಿ. ಆ ಪುಸ್ತಕದ ನನ್ನ ಮಾತುಗಳಲ್ಲಿ ನಾನು ಹೇಳಿದಂತೆ ಇಲ್ಲಿರುವ ೧೫ ಲೇಖನಗಳನ್ನು ಪಟ್ಟಾಗಿ ಕುಳಿತು ಒಂದೇ ಸಲಕ್ಕೆ ಬರೆದವುಗಳಲ್ಲ. ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಬಾಗಲಕೋಟೆಯ ಬಿ.ವಿ.ವಿ.ಸಂಘದ ಸಮಾಚಾರ ಪತ್ರಿಕೆಗೆ ಅತ್ಯಂತ ಪ್ರೀತಿಯಿಂದ ಬರೆದ ಲೇಖನಗಳಿವು. 


ಈ ಬರೆಯಬೇಕೆನ್ನುವ ಹುಚ್ಚು ನನಗೆ ಪ್ರಾರಂಭವಾಗಿದ್ದೆ ಕಳೆದ ಒಂದು ದಶಕದಿಂದಿಚೆಗೆ. ನಾನು ಬರೆಯುತ್ತ ಹೋದಂತೆಲ್ಲ ನನ್ನೊಳಗಿನ ಸೃಜನಶೀಲತೆಯ ಸೆಲೆ ನಿರಂತರವಾಗಿ ಒಸರುತ್ತಲೇ ಹೋಯಿತು. ಯಾವಾಗ ನಾನು ಅಕ್ಷರ ಪ್ರಪಂಚದೊಳಗೆ ಮುಳುಗಿ ಹೋದೆನೋ ಆಗ ಬದುಕನ್ನು ಒಂದಿಷ್ಟು ಇತಿಮಿತಿಗಳಿಗೆ ಮುಖಾಮುಖಿಯಾಗಿ ನಿಲ್ಲಿಸಲು ಸಾಧ್ಯವಾಯಿತು. ಅಷ್ಟರ ಮಟ್ಟಿಗೆ ನಾನು ಅಕ್ಷರ ಪ್ರಪಂಚಕ್ಕೆ ಋಣಿಯಾಗಿರಬೇಕು. 



      ನನ್ನ ಬರೆಯಬೇಕೆನ್ನುವ ಹವ್ಯಾಸಕ್ಕೆ ನೀರೆರೆದು ಪೋಷಿಸಿದ್ದು ಬಾಗಲಕೋಟೆಯ ಬಿ.ವಿ.ವಿ.ಸಂಘದ 'ಸಮಾಚಾರ' ಪತ್ರಿಕೆ. ಒಂದು ಪತ್ರಿಕೆಯನ್ನು ಪ್ರಕಟಿಸುವುದರ ಮೂಲಕ ಸೃಜನಶೀಲ ಆಯಾಮವೊಂದು ಅನಾವರಣಗೊಳ್ಳಲು ಕಾರಣರಾಗಿರುವ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ ಅವರದು ನಿಜಕ್ಕೂ ಸೃಜನಶೀಲ ಮನಸ್ಸು. ಜೊತೆಗೆ ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿ, ನಾನು ಬರೆದದ್ದನ್ನು ಓದಿ ಮತ್ತೆ ಮತ್ತೆ ಬರೆಯುವಂತೆ ಉತ್ತೇಜಿಸಿದವರು 'ಸಮಾಚಾರ' ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಎನ್.ಜಿ.ಕರೂರ ಮತ್ತು ಸಂಪಾದಕರಾದ ಶ್ರೀ ಪಿ.ಎನ್.ಸಿಂಪಿ ಅವರು. ಈ ಮಹನೀಯರ ಪ್ರೋತ್ಸಾಹದಿಂದ ನಾನೊಂದಿಷ್ಟು ಬರೆಯಲು ಸಾಧ್ಯವಾಯಿತು. ನನ್ನ ಮೊದಲ ಕೃತಿ ಸಾಧನೆಯನ್ನು ಬರೆಯಲು ಪ್ರೇರಣೆ ನೀಡಿದ ಮಹನೀಯರಾದ ಶ್ರೀ ಸಿದ್ದಣ್ಣ ಶೆಟ್ಟರ ಮತ್ತು ಡಾ.ಅಶೋಕ ಮಲ್ಲಾಪುರ ಅವರ ಸಹಕಾರ ಅವಿಸ್ಮರಣೀಯ.



      ಅಕ್ಷರ ಪ್ರಪಂಚಕ್ಕೆ ಹೊಸಬನಾದ ನನ್ನನ್ನು ಬರಹಗಾರನಾಗಿ ಪರಿಚಯಿಸುವ ಮಹತ್ವದ ಜವಾಬ್ದಾರಿಯೊಂದಿಗೆ ನನ್ನ ಪುಸ್ತಕವನ್ನು ಪ್ರಕಟಿಸುತ್ತಿರುವ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೋನೆಕ್ ಅವರ ಸಹಕಾರವನ್ನು ಕೆಲವೇ ಶಬ್ದಗಳಲ್ಲಿ ವಿವರಿಸುವುದು ಕಷ್ಟ ಸಾಧ್ಯದ ಕೆಲಸ. 



        ನಾನು ಬರೆದ ನಂತರದ ಪ್ರತಿ ಸಂದರ್ಭದಲ್ಲೂ ನಾನು ಹೀಗೆ ಬರೆಯುತ್ತಿರುವುದಕ್ಕೆ ಕಾರಣರಾರು ಎಂದು ನೆನಪಿಸಿಕೊಂಡಾಗಲೆಲ್ಲ ನನಗೆ ನೆನಪಿಗೆ ಬರುವ ವ್ಯಕ್ತಿತ್ವ ನನ್ನ ಅಮ್ಮನದು. ನನ್ನ ಅಮ್ಮನ ಪ್ರಭಾವ ನನ್ನ ಬರವಣಿಗೆಯ ಪ್ರತಿ ಅಕ್ಷರದಲ್ಲೂ ಇದೆ. ಅವಳಲ್ಲಿನ ಓದುವ ಹವ್ಯಾಸ ಮತ್ತು ಅವಳು ಓದಿದ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳು ನಂತರದ ದಿನಗಳಲ್ಲಿ ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ತನ್ನ ಬಿಡುವಿನ ಸಮಯವನ್ನು ಓದಿನಂಥ ಸೃಜನಾತ್ಮಕ ಚಟುವಟಿಕೆಯಲ್ಲಿ ಕಳೆಯುತ್ತಿದ್ದ ನನ್ನ ಅಮ್ಮ ನಾನು ನೋಡಿದಂತೆ ಅತ್ಯುತ್ತಮ ಓದುಗರಲ್ಲಿ ಒಬ್ಬಳು. ಅವಳು ಓದಿ ನನ್ನ ಕೈಗಿಟ್ಟ ಪುಸ್ತಕಗಳೇ ನನಗೆ ಈಗ ಬರೆಯಲು ಚೈತನ್ಯ ನೀಡಿವೆ. ಒಂದು ಸೃಜನಾತ್ಮಕ ಹವ್ಯಾಸ ನನ್ನೊಳಗೆ ಮೊಳಕೆಯೊಡೆಯಲು ಕಾರಣಳಾದ ನನ್ನ ಅಮ್ಮನಿಗೆ ಈ ಕೃತಿಯನ್ನು ಅರ್ಪಿಸುವುದರ ಮೂಲಕ ಒಂದು ಉತ್ತಮ ವ್ಯಕ್ತಿತ್ವವನ್ನು ಸ್ಮರಿಸಿಕೊಂಡ ಧನ್ಯತೆ ನನ್ನದು. 


-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 



Friday, January 18, 2013

ಸಜನಾ: ಸರಳ ಸಜ್ಜನಿಕೆಯ ವೈದ್ಯಬ್ರಹ್ಮ

         


            ಡಾ.ಸ.ಜ.ನಾಗಲೋಟಿಮಠ ಅವರ ಪರಿಚಯ ನನಗಾದದ್ದು ೨೦೦೧ರಲ್ಲಿ. ಈ ಮೊದಲು ಅವರ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದಿದ್ದೆನಾದರೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಒದಗಿ ಬಂದಿರಲಿಲ್ಲ. ೨೦೦೧ರಲ್ಲಿ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದವರು ತಾವು ಸ್ಥಾಪಿಸಲಿರುವ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಪಾಲಕ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದ್ದರು. ಆಗ ಡಾ.ಸ.ಜ.ನಾಗಲೋಟಿಮಠ ಅಲ್ಲಿ ವೈದ್ಯಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುಲಬರ್ಗಾದಲ್ಲಿದ್ದ ನಾನು ಗ್ರಂಥಪಾಲಕ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದೆ. ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಿದ ನಾನು  ಸಹಜವಾಗಿಯೇ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಪಾಲಕ ಹುದ್ದೆಗೆ ಆಯ್ಕೆಯಾದೆ. ಆಯ್ಕೆ ಸಮಿತಿಯವರು ಸಂದರ್ಶನದ ದಿನದಂದೇ ನನ್ನ ನೇಮಕಾತಿಯ ವಿಷಯ ತಿಳಿಸಿ ಮಾರನೆ ದಿನ ವೈದ್ಯಕೀಯ ನಿರ್ದೇಶಕರನ್ನು ಕಾಣುವಂತೆ ಸೂಚಿಸಿದರು. ಡಾ.ಸ.ಜ.ನಾಗಲೋಟಿಮಠ ಅವರ ಬಗ್ಗೆ ತಿಳಿದಿದ್ದ ನನಗೆ ಅಂತಹ ಪ್ರಸಿದ್ಧ ವ್ಯಕ್ತಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದಕ್ಕೆ ಬಹಳ ಸಂತೋಷವಾಯಿತು. ಮರುದಿನ ಬೆಳಿಗ್ಗೆ ಸರಿಯಾಗಿ ೯ ಗಂಟೆಗೆ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರ ಕಚೇರಿಗೆ ಹೋಗಿ ಅವರನ್ನು ನಮಸ್ಕರಿಸಿ ನನ್ನ ಪರಿಚಯ ಮಾಡಿಕೊಂಡೆ. 'ಹಾಂ ಗೊತ್ತಾತು ತಮ್ಮಾ. ಇಲ್ಲಿಗಿ ಬಂದು ಛಲೋ ಮಾಡ್ದಿ. ಒಳ್ಳೆ ಮನಸ್ಸಿಂದ ಕೆಲ್ಸಾ ಮಾಡು ಅಂದ್ರ ನಿನ್ಗ ಜೀವಂದಾಗ ಭಾಳ ಛಲೋ ಆಗ್ತದ ನೋಡು' ಎಂದು ತಮ್ಮ ಟಿಪಿಕಲ್ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಆ ದಿನ ಡಾ.ಸಜನಾ ಹೇಳಿದ ಮಾತು ನಾನು ಎಂದಿಗೂ ಮರೆಯಲಾರದಂತಹ ಮಾತು. ಅಲ್ಲಿಯೇ ಇದ್ದ ವೈದ್ಯರನ್ನು ಕರೆದು 'ಇಂವ ನಮ್ಮ ಕಾಲೇಜ್ ಲೈಬ್ರರಿಯನ್. ಎಂ.ಎಸ್ಸಿ ಹೋಲ್ಡರ್' ಎಂದು ತುಂಬ ಅಭಿಮಾನದಿಂದ ಪರಿಚಯಿಸಿದರು. ಅಂತರಾಷ್ಟ್ರೀಯ ಮಟ್ಟದ ಕೀರ್ತಿಯನ್ನು ಸಂಪಾದಿಸಿದ ವ್ಯಕ್ತಿ ನನ್ನಂತಹ ಸಣ್ಣ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟ ಅವರ ದೊಡ್ಡ ಗುಣ ಅವರ ಬಗೆಗಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿತು. ಹೀಗೆ ೨೦೦೧ರಲ್ಲಿ ಪ್ರಾರಂಭವಾದ ನನ್ನ ಮತ್ತು ಸಜನಾ ಅವರ ಬಾಂಧವ್ಯ ಅವರು ವೈದ್ಯಕೀಯ ನಿರ್ದೇಶಕ ಹುದ್ದೆಗೆ ರಾಜಿನಾಮೆ ಇತ್ತು ಬೆಳಗಾವಿಗೆ ಹೋಗುವವರೆಗೂ ಅವ್ಯಾಹತವಾಗಿ ಮುಂದುವರೆಯಿತು.

       ಡಾ.ಸಜನಾ ಅವರ ಸಾಧನೆಯ ಕ್ಷೇತ್ರ ಒಂದೇ ಆಗಿರಲಿಲ್ಲ. ಏಕೆಂದರೆ ಅವರು ಯಾವುದೇ ಒಂದು ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ವೈದ್ಯಕೀಯ ವಿಜ್ಞಾನದ ರೋಗ ನಿದಾನ ಶಾಸ್ತ್ರದಲ್ಲಿ ಅವರು ಪ್ರಾವಿಣ್ಯತೆ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆಗೈದರು ನಿಜ. ಆದರೆ ವೈದ್ಯಕೀಯ ಕ್ಷೇತ್ರದ ಆಚೆಯೂ ಸಜನಾ ಅವರು ಸಾಧಿಸಿದ ಸಾಧನೆ ಅಪಾರ. ಅವರೊಬ್ಬ ವೈದ್ಯ, ಶಿಕ್ಷಕ, ಸಾಹಿತಿ, ಆಡಳಿತಾಗಾರ, ಸಂಸ್ಥಾಪಕ, ವಾಗ್ಮಿ, ಶರಣ, ಸಂತ, ಸಂಘಟಕ ಮತ್ತು ಇವೆಲ್ಲವುಕ್ಕಿಂತ ಅವರೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ಸಾಮಾನ್ಯವಾಗಿ ಸಜನಾ ಯಾರನ್ನೂ ಬಹುಬೇಗನೆ ತಮ್ಮ ವಿಶ್ವಾಸದ ವಲಯದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಸಜನಾ ಅವರ ಹೃದಯಕ್ಕೆ ಹತ್ತಿರವಾಗಬೇಕಾದರೆ ಆ ವ್ಯಕ್ತಿ ಪ್ರಾಮಾಣಿಕ ಎನ್ನುವ ನಂಬಿಕೆ ಅವರಿಗೆ ಬರಬೇಕಿತ್ತು. ಒಮ್ಮೆ ಸಜನಾ ಅವರ ನಂಬಿಕೆ ಗಳಿಸಿದರೆ ಅವರೆಂದೂ ತಮ್ಮ ನಂಬಿಕೆಗೆ ಅರ್ಹನಾದ ವ್ಯಕ್ತಿಯನ್ನು ಬಿಟ್ಟು ಕೊಡುತ್ತಿರಲಿಲ್ಲ. ಪ್ರಾಮಾಣಿಕತೆ, ಸಮಯ ಪ್ರಜ್ಞೆ ಮತ್ತು ಪರಿಶ್ರಮ ಈ ಗುಣಗಳು ಇದ್ದರೆ ಮಾತ್ರ ಸಜನಾ ಅವರ ವಿಶ್ವಾಸ ಗಳಿಸಲು ಸಾಧ್ಯವಿತ್ತು. ಅವರೊಡನೆ ಕೆಲಸ ಮಾಡಿದ ಆ ಎರಡು ವರ್ಷಗಳಲ್ಲಿ ನಾನು ಬಹುಬೇಗನೆ ಸಜನಾ ಅವರಿಗೆ ಹತ್ತಿರವಾಗಿದ್ದೆ ಎನ್ನುವುದು ನನಗೆ ಇವತ್ತಿಗೂ ಅತ್ಯಂತ ಹೆಮ್ಮೆಯ ಸಂಗತಿ.

        ಲೇಖಕರಾಗಿದ್ದ ಡಾ.ಸ.ಜ.ನಾಗಲೋಟಿಮಠ ಇತರರನ್ನು ಬರೆಯಲು ಪ್ರೇರೆಪಿಸುತ್ತಿದ್ದರು. ಬಾಗಲಕೋಟೆಯ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಯೊಬ್ಬ ವೈದ್ಯ ಕನ್ನಡದಲ್ಲಿ ಒಂದೊಂದು ಲೇಖನ ಬರೆದು ಕೊಡುವಂತೆ ಕಡ್ಡಾಯ ನಿಯಮ ಜಾರಿಗೆ ತಂದಿದ್ದರು. ಬ.ವಿ.ವಿ.ಸಂಘದವರು ಪ್ರಕಟಿಸುವ 'ಸಮಾಚಾರ' ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾದಾಗ ಓದಿ ಸಂತೋಷಪಟ್ಟು ಇನ್ನು ಹೆಚ್ಹು ಹೆಚ್ಚು ಲೇಖನಗಳನ್ನು  ಬರೆಯುವಂತೆ ಹಾರೈಸಿದ್ದರು. ಬರವಣಿಗೆ ಅದೊಂದು ಸೃಜನಶೀಲ ಮಾಧ್ಯಮವೆಂದು ನಂಬಿದ್ದ ಅವರು ಎಲ್ಲರೂ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಇಚ್ಚಿಸುತ್ತಿದ್ದರು. ಬರವಣಿಗೆಯನ್ನು ಅವರು ಅಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದುದ್ದರಿಂದಲೇ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ನೂರಾರು ಲೇಖನಗಳನ್ನು ಬರೆಯಲು ಸಾಧ್ಯವಾಯಿತು. 'ಅನ್ನ ಮಾರ್ಗದಲ್ಲಿ ಅಪಘಾತಗಳು' ಮತ್ತು 'ಸತ್ತ ಮೇಲೆ ಸಮಾಜ ಸೇವೆ' ಒಬ್ಬ ಸಾಮಾನ್ಯನೂ ಅರ್ಥ ಮಾಡಿಕೊಳ್ಳುವಂತಹ ಪುಸ್ತಕಗಳನ್ನು ಬರೆದು ವೈದ್ಯಕೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅವರ ಆತ್ಮ ಚರಿತ್ರೆ 'ಬಿಚ್ಚಿದ ಜೋಳಿಗೆ' ಒಂದು ಸಂಗ್ರಹಯೋಗ್ಯ ಕೃತಿ. ಸಜನಾ ತಮ್ಮಲ್ಲಿರುವ ಬರಹಗಾರನನ್ನು ಯಾವ ರೀತಿ ದುಡಿಸಿಕೊಂಡಿರುವರು ಎನ್ನುವುದು 'ಬಿಚ್ಚಿದ ಜೋಳಿಗೆ' ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಅವರ ಆತ್ಮ ಚರಿತ್ರೆ ಕನ್ನಡದ ಅತ್ಯುತ್ತಮ ಕೃತಿಗಳಲ್ಲೊಂದು. ಸಜನಾ ಸಾವಿನ ನಂತರವೂ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಎರಡು ವಾರ ಅವರ ಅಂಕಣ ಬರಹ ಪ್ರಕಟವಾಯಿತು. ಇದು ಬರವಣಿಗೆಯ ಮೇಲೆ ಅವರಿಗಿರುವ ಪ್ರೀತಿಗೆ ಸಾಕ್ಷಿ.
     
            ಕಡಿಮೆ ಹಣದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಬೇಕೆನ್ನುವುದು ಸಜನಾ ಅವರ ಇನ್ನೊಂದು ಮಹತ್ವಾಕಾಂಕ್ಷೆಯಾಗಿತ್ತು. ಬಡತನದ ಅರಿವಿದ್ದ ಅವರಿಗೆ ಬಡ ರೋಗಿಗಳ ಬಗ್ಗೆ ಕಾಳಜಿ ಇತ್ತು. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೇವಲ ಐದು ರೂಪಾಯಿಗಳಿಗೆ ವೈದ್ಯಕೀಯ ಸೌಲಭ್ಯ ದೊರೆಯುವ ವ್ಯವಸ್ಥೆ ಮಾಡಿದರು. ಸರ್ಕಾರಿ ಆಸ್ಪತ್ರೆಯನ್ನೇ ನಂಬಿದ್ದ ಬಡ ರೋಗಿಗಳಿಗೆ ಇದೊಂದು ವರದಾನವಾಯಿತು. ಇವತ್ತಿಗೂ ಈ ಆಸ್ಪತ್ರೆಯಲ್ಲಿ ಸಜನಾ ಅವರು ಹಾಕಿಕೊಟ್ಟ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವರು. ತುರ್ತು ಸಂದರ್ಭದಲ್ಲಿ ರಕ್ತ ದೊರೆಯದೆ ರೋಗಿ ಸಾವನ್ನಪ್ಪುತ್ತಿದ ಬಾಗಲಕೋಟೆಯ ಈ ಸಮಸ್ಯೆಗೆ ಬ್ಲಡ್ ಬ್ಯಾಂಕ್ ಸ್ಥಾಪಿಸಿ ಶಾಶ್ವತ ಪರಿಹಾರ ಕಂಡು ಹಿಡಿದರು. ಡಾ.ಸ.ಜ.ನಾಗಲೋಟಿಮಠ ಅವರ ಪ್ರತಿಭೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಮೇಲೆ ನಂಬಿಕೆ ಇದ್ದುದ್ದರಿಂದಲೇ ಸರ್ಕಾರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ನಿರ್ದೇಶಕರಾಗಿ ನೇಮಿಸಿತು. ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯಬೇಕಾದ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಲು ಅವರು ದುಡಿದ ರೀತಿ ಅನನ್ಯ. ದೌರ್ಭಾಗ್ಯದ ಸಂಗತಿ ಎಂದರೆ ಕೆಲವು ಹಿತಾಸಕ್ತಿಗಳಿಗೆ ಇದು ಬೇಕಾಗಿರಲಿಲ್ಲ. ಹೀಗೆ ಸಜನಾ ತಮ್ಮ ಬದುಕಿನುದ್ದಕ್ಕೂ ಅನೇಕ ಅಡ್ಡಿ ಆತಂಕಗಳನ್ನೆದುರಿಸಿದರು. ಆದರೆ ಯಾವುದೇ ಸಮಸ್ಯೆಗಳು ಸಾಧಕನ ಬದುಕಿಗೆ ಸವಾಲುಗಳಲ್ಲ ಎನ್ನುವುದನ್ನು ಅವರು ಸಾಧಿಸಿ ತೋರಿಸಿದರು.

         ಸಜನಾ ಅವರಲ್ಲಿನ ಮೆಚ್ಚುವಂತಹ ಇನ್ನೊಂದು ಗುಣ ಅದು ನಿಷ್ಟುರತೆ. ಇದ್ದದ್ದನ್ನು ಇದ್ದಂತೆ ನೇರವಾಗಿ ಹೇಳುವ ಈ ಗುಣದಿಂದಲೇ ಅವರು ಇನ್ನು ಅನೇಕ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಬೇಕಾಯಿತು. ಪ್ರಶಸ್ತಿ, ಪದವಿಗಳಿಗಾಗಿ ದೊಡ್ಡ ವ್ಯಕ್ತಿಗಳನ್ನು ಓಲೈಸುವ ಗುಣ ಅವರಲ್ಲಿರಲಿಲ್ಲ. ಅವರಿಗೆ ನಂಬಿಕೆ ಇದ್ದದ್ದು ತಮ್ಮಲ್ಲಿರುವ ಪ್ರತಿಭೆ ಮತ್ತು ಪ್ರಾಮಾಣಿಕತೆಯ ಮೇಲೆ. ಯಾರನ್ನೂ ಓಲೈಸದೆ, ಆಶ್ರಯಿಸದೆ, ಅವಕಾಶವಾದಿಯಾಗದೆ ಕೇವಲ ಸ್ವಸಾಮರ್ಥ್ಯದಿಂದ ಒಬ್ಬ ವ್ಯಕ್ತಿ ಹೇಗೆ ಹಂತ ಹಂತವಾಗಿ ಬೆಳೆದು ಸಾಧನೆಯ ಶಿಖರವನ್ನೇರಿ ನಿಲ್ಲಬಹುದು ಎನ್ನುವುದಕ್ಕೆ ಸಜನಾ ಅವರ ಬದುಕೇ ಮಾದರಿ. ಈ ಕಾರಣದಿಂದಲೇ ಅವರೊಬ್ಬ ಅಪರೂಪದ ವ್ಯಕ್ತಿಯಾಗಿ ಕಾಣಿಸುತ್ತಾರೆ.

        ಹೇಳುತ್ತ ಹೋದರೆ ಅವರ ಮೇಲೊಂದು ಬೃಹತ್ ಪುಸ್ತಕವನ್ನೇ ಬರೆಯಬಹುದು. ಒಟ್ಟಿನಲ್ಲಿ ಪ್ರತಿಯೊಬ್ಬರೂ ಅನುಕರಿಸುವಂತಹ ವ್ಯಕ್ತಿತ್ವ ಅವರದು. ವೈದ್ಯಕೀಯ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿ ಬೆಳಗಾವಿಗೆ ಹೋಗುವಾಗ ನನ್ನನ್ನು ಕರೆದು ತಮ್ಮ ಹಸ್ತಾಕ್ಷರದೊಂದಿಗೆ 'ಜೀವಧಾರೆ' (ಅವರ ಅಭಿನಂದನಾ ಗ್ರಂಥ) ಪುಸ್ತಕವನ್ನು ಕೊಟ್ಟು ಆಶಿರ್ವದಿಸಿದರು. ಕೊನೆಯ ದಿನಗಳನ್ನು ಬೆಳಗಾವಿಯಲ್ಲಿ ಆರಾಮವಾಗಿ ಕಳೆಯುವುದಾಗಿ ತಿಳಿಸಿ ಯಾವಾಗಲಾದರೂ  ಬಂದು ಭೇಟಿಯಾಗುವಂತೆ ಆಗ್ರಹಿಸಿದರು. ಅದೆಕೋ ಅವರ ಬದುಕಿನ ಕೊನೆಯ ದಿನಗಳಲ್ಲಿ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಬೆಳಗಾವಿ ಎಂದಾಕ್ಷಣ ಸಜನಾ ನೆನಪಾಗುತ್ತಾರೆ. ಆ ನೆನಪಿನ ಹಿಂದೆ ಅವರನ್ನು ಕೊನೆಯ ದಿನಗಳಲ್ಲಿ ಭೇಟಿಯಾಗಲೇ ಇಲ್ಲ ಎನ್ನುವ ನೋವು ಮನಸ್ಸನ್ನು ಕಾಡುತ್ತದೆ. ಬೆಳಗಾವಿ ಎಂದಿನಂತಿದೆ. ಸಜನಾ ಸ್ಥಾಪಿಸಿದ ವಿಶ್ವಶ್ರೇಷ್ಠ ಮ್ಯುಜಿಯಂ ಅಲ್ಲಿದೆ. ಜೊತೆಗೆ ರುಚಿಯಾದ ಕುಂದಾ ಇದೆ. ಆದರೆ ಆ ಸಜ್ಜನ ಅಲ್ಲಿಲ್ಲ. ಅಲ್ಲಿರುವುದು ಅವರ ನೆನಪುಗಳು ಮಾತ್ರ.

('ಸಜನಾ ಸಂಸ್ಮರಣ' ಗ್ರಂಥಕ್ಕಾಗಿ ಬರೆದ ಲೇಖನ)

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


       

       

Thursday, January 10, 2013

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ: ಪರ ಮತ್ತು ವಿರೋಧ

   


 

        ಭಾರತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ೨೦೧೨-೧೩ ನೇ ಸಾಲಿನಿಂದ ವೃತ್ತಿಪರ ಕೋರ್ಸುಗಳಿಗೆ ಏಕರೂಪ ಅರ್ಹತಾ ಪ್ರವೇಶ ಪರೀಕ್ಷೆಯನ್ನು ನಡೆಸಲು ಯೋಜನೆ ರೂಪಿಸಿದೆ. ಕಳೆದ ಎರಡು ವರ್ಷಗಳಿಂದ ಈ ವಿಷಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪರ ಮತ್ತು ವಿರೋಧವಾಗಿ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿರುವುದರಿಂದ ಈಗ ಈ ವಿಷಯ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಈ ವಿಷಯವಾಗಿ ನ್ಯಾಯಾಲಯ ಜನೆವರಿ ೧೭ ರಂದು ತನ್ನ ತೀರ್ಪು ನೀಡಲಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಚಿಸುತ್ತಿರುವ ವಿದ್ಯಾರ್ಥಿಗಳು ಮಾತ್ರವಲ್ಲದೆ ಅವರ ಪಾಲಕರು ಸಹ ನ್ಯಾಯಾಲಯದ ತೀರ್ಪನ್ನು ತುದಿಗಾಲಲ್ಲಿ ನಿಂತು ಕಾಯುತ್ತಿರುವರು.

        ಭಾರತದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಅನೇಕ ಪ್ರಕಾರದ ಅರ್ಹತಾ ಪರೀಕ್ಷೆಗಳು ಚಾಲ್ತಿಯಲ್ಲಿವೆ. ಪ್ರತಿ ರಾಜ್ಯಗಳಲ್ಲಿ ಆಯಾ ಸರ್ಕಾರ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಜೊತೆಗೆ ಖಾಸಗಿ ಕಾಲೇಜುಗಳಲ್ಲಿನ ಮ್ಯಾನೆಜಮೆಂಟ್ ಸೀಟುಗಳಿಗಾಗಿ, ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳು ಹೀಗೆ ಒಂದೇ ರಾಜ್ಯದಲ್ಲಿ ಅನೇಕ ಪ್ರಕಾರದ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಯೊಬ್ಬ ಒಂದಕ್ಕಿಂತ ಹೆಚ್ಚಿನ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು ಬರೆಯುವ ಸಂದಿಗ್ಧತೆಗೆ ಒಳಗಾಗುತ್ತಾನೆ. ಜೊತೆಗೆ ಪ್ರತಿಯೊಂದು ಪ್ರವೇಶ ಪರೀಕ್ಷೆಯ ಶುಲ್ಕ ಅತ್ಯಂತ ದುಬಾರಿಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಇದು ಹೊರೆಯಾಗುತ್ತಿದೆ. 

       ಇಂಥದ್ದೊಂದು ಪರಿಸ್ಥಿತಿಯನ್ನು ಮನಗಂಡ ಕೇಂದ್ರ ಸರ್ಕಾರ ಇಡೀ ದೇಶದಾದ್ಯಂತ ಒಂದೇ ಅರ್ಹತಾ ಪ್ರವೇಶ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿದೆ. ಈ ಪ್ರವೇಶ ಪರೀಕ್ಷೆಯನ್ನು 'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ' ಎಂದು ಹೆಸರಿಸಿದ್ದು ಭಾರತದಲ್ಲಿರುವ ಒಟ್ಟು ೨೭೧ ವೈದ್ಯಕೀಯ ಕಾಲೇಜುಗಳಲ್ಲಿನ ೩೧೦೦೦ ವೈದ್ಯಕೀಯ ಸೀಟುಗಳನ್ನು ಈ ಪ್ರವೇಶ ಪರೀಕ್ಷೆಯ ಕಕ್ಷೆಯಡಿ ಸೇರ್ಪಡೆಗೊಳಿಸಲಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಸುಮಾರು ೨೫ ಪ್ರಕಾರದ ಪ್ರವೇಶ ಪರೀಕ್ಷೆಗಳು ಚಾಲ್ತಿಯಲ್ಲಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಸರಾಸರಿ ೭ ರಿಂದ ೯ ಪರೀಕ್ಷೆಗಳನ್ನು ಬರೆಯುತ್ತಿರುವನು. ಈ ಪರೀಕ್ಷೆಗಳ ಪ್ರವೇಶ ಶುಲ್ಕ ಮತ್ತು pathyakrama ಬೇರೆ ಬೇರೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆಯ ಜೊತೆಗೆ ಅನೇಕ ಪ್ರಕಾರದ pathyakrama ಗಳನ್ನು ಅಭ್ಯಸಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಈ ಸಮಸ್ಯೆಗೆ 'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ' ಒಂದೇ ಪರಿಹಾರ ಎಂದು ತನ್ನ ವಾದವನ್ನು ಸಮರ್ಥಿಸಿಕೊಳ್ಳುತ್ತಿದೆ. ಜೊತೆಗೆ ತನ್ನ  ಸಮರ್ಥನೆಗೆ ಪೂರಕವಾಗುವ ಕೆಲವು ಉತ್ತಮ ಅಂಶಗಳನ್ನು ಸಹ ಪಟ್ಟಿ ಮಾಡಿದೆ.

೧. ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಸೀಟುಗಳಿಗಾಗಿ ಒಂದೇ ಸಾಮಾನ್ಯ ಪರೀಕ್ಷೆ.

೨. ವಿದ್ಯಾರ್ಥಿಯೊಬ್ಬ ಅನೇಕ ಪರೀಕ್ಷೆಗಳನ್ನು ಬರೆಯುವ ಅವಶ್ಯಕತೆ ಎದುರಾಗದು.

೩. ವಿದ್ಯಾರ್ಥಿ ವಿಭಿನ್ನ ಪ್ರಕಾರದ pathyakrama ಕ್ಕನುಗುಣವಾಗಿ ಪರೀಕ್ಷಾ ತಯ್ಯಾರಿ ನಡೆಸುವ ಪರಿಸ್ಥಿತಿ ಎದುರಾಗದು.

೪. ಎರಡು ಇಲ್ಲವೇ ಮೂರು ತಿಂಗಳುಗಳ ಅವಧಿಯಲ್ಲಿ ಅನೇಕ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ 
     ಸಂದರ್ಭ ಎದುರಾದಾಗ ಆಗ ಸಹಜವಾಗಿಯೇ ವಿದ್ಯಾರ್ಥಿಯ ಮೇಲೆ ಮಾನಸಿಕ ಒತ್ತಡ ಉಂಟಾಗುತ್ತದೆ.
     ಇಂಥದ್ದೊಂದು  ಸಮಸ್ಯೆಯನ್ನು  ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಿಂದ ಹೋಗಲಾಡಿಸಬಹುದು.

೫. ಈ ಪರೀಕ್ಷಾ ಯೋಜನೆಯು ಪಾಲಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.

       ಎರಡು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಇಂಥದ್ದೊಂದು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ವಿಚಾರ ವ್ಯಕ್ತಪಡಿಸಿದಾಗ ಆಗ ವಿವಿಧ ರಾಜ್ಯ ಸರ್ಕಾರಗಳಿಂದ ಪ್ರತಿರೋಧ ವ್ಯಕ್ತವಾಯಿತು. ಆಯಾ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಕೇಂದ್ರ ಸರ್ಕಾರದ ಮುಂದಿಟ್ಟ ಪ್ರಶ್ನೆ ಎಂದರೆ ಈ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಪೂರಕವಾಗಿರುವ pathyakrama ಯಾವುದೆಂದು. ಏಕೆಂದರೆ ಭಾರತ ಒಂದು ವೈವಿಧ್ಯಮಯ ರಾಷ್ಟ್ರ. ಅದನ್ನು ನಾವು ನಮ್ಮ ದೇಶದ ಶಿಕ್ಷಣ ಕ್ಷೇತ್ರದಲ್ಲೂ ಕಾಣಬಹುದು. ಕೇಂದ್ರ pathyakrama ಮತ್ತು ರಾಜ್ಯ pathyakrama ಎಂದು ಎರಡು ಪ್ರಕಾರದ pathyakrama ದ ಅಭ್ಯಾಸಕ್ಕೆ ಆಯಾ ರಾಜ್ಯದಲ್ಲಿ ಅವಕಾಶಮಾಡಿ ಕೊಡಲಾಗಿದೆ. ಹೀಗಿದ್ದಾಗ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಯಾವ pathyakrama ದ ಆಧಾರದ ಮೇಲೆ ರಚಿಸಬೇಕು ಎನ್ನುವುದು ಅನೇಕ ರಾಜ್ಯಗಳ ಮುಖ್ಯ ಪ್ರಶ್ನೆಯಾಗಿತ್ತು. ಅದಕ್ಕೆ ಪರಿಹಾರವನ್ನೂ ಆಯಾ ರಾಜ್ಯಗಳೇ ಕಂಡುಕೊಂಡಿದ್ದು ಇಲ್ಲಿ ಉಲ್ಲೇಖಿಸಲೇ ಬೇಕಾದ ಗಮನಾರ್ಹ ಸಂಗತಿಯದು. ಈ ವಿಷಯವಾಗಿ ರಾಜ್ಯ ಸರ್ಕಾರಗಳು ಎರಡು ವರ್ಷಗಳ ಸಮಯಾವಧಿಯನ್ನು ತೆಗೆದುಕೊಂಡು ತಮ್ಮ ರಾಜ್ಯ pathyakrama ವನ್ನು ಕೇಂದ್ರ pathyakrama ವಾಗಿ ಪರಿವರ್ತಿಸಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಸಿದ್ಧಗೊಳಿಸುವುದಾಗಿ ಹೇಳಿದವು. ಅದೇ ರೀತಿಯಾಗಿ ಕಳೆದ ಎರಡು ವರ್ಷಗಳಿಂದ pathyakrama ವನ್ನು ವಿಶೇಷವಾಗಿ ಪಿಯುಸಿ ವಿಜ್ಞಾನದ pathyakrama ವನ್ನು ಕೇಂದ್ರ pathyakrama ದ ಮಾದರಿಯಲ್ಲಿ ರೂಪಿಸಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. 

        ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಒಂದೇ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದಾಗಲೂ ಆಯಾ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಈಗಿರುವ ಸೀಟು ಹಂಚಿಕೆ ವಿಧಾನವನ್ನೇ ಮುಂದುವರೆಸಿಕೊಂಡು ಹೋಗಲಾಗುವುದೆಂದು ಕೇಂದ್ರ ಸರ್ಕಾರ  ಹೇಳಿದೆ. ರಾಷ್ಟ್ರಮಟ್ಟದ ಮತ್ತು ರಾಜ್ಯ ಮಟ್ಟದ ryank ಗಳೆಂದು ಎರಡು ಪ್ರಕಾರದ ಫಲಿತಾಂಶ ನೀಡಿ ಆಯಾ ರಾಜ್ಯದ ವಿದ್ಯಾರ್ಥಿ ಆಯಾ ರಾಜ್ಯದಲ್ಲೇ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡುವ ಭರವಸೆ ನೀಡಿದೆ. ಒಟ್ಟಿನಲ್ಲಿ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕೆನ್ನುವುದು  ಕೇಂದ್ರ ಸರ್ಕಾರದ ನಿಲುವಾಗಿದೆ. 
   
         ಪರಿಸ್ಥಿತಿ ಹೀಗಿರುವಾಗ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರು ಕೇಂದ್ರ ಸರ್ಕಾರದ ಈ ಯೋಜನೆ ಜಾರಿಗೆ ಬರದಂತೆ ವಿರೋಧಿಸುತ್ತಿರುವರು. ಈ ಪ್ರತಿರೋಧ ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವ್ಯಾಪಕವಾಗಿದೆ. ಯಾವತ್ತೂ ತನ್ನ ಪ್ರಾದೇಶಿಕ ನೆಲೆಯಲ್ಲೇ ಚಿಂತಿಸುವ ತಮಿಳು ನಾಡು ಸರ್ಕಾರ ಈ ವಿಷಯವಾಗಿ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ಮೊರೆ ಹೋಗಿದೆ. ಕರ್ನಾಟಕದಲ್ಲೂ ಅಂಥದ್ದೊಂದು ಪ್ರತಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಹಿಂದೆ ಹೋಗೋಣ. ಅದು ೧೯೯೨-೯೩ ರ ಅವಧಿ. ಈ ಅವಧಿಯಲ್ಲೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ವೃತ್ತಿಪರ ಕೋರ್ಸುಗಳ ಪ್ರವೇಶದಲ್ಲಿ ಪಾರದರ್ಶಕತೆಯನ್ನು ತರಲು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಈ ಮೊದಲು ರಾಜ್ಯದಲ್ಲಿ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ಆಯಾ ಕಾಲೇಜುಗಳು ನಿಗದಿಪಡಿಸಿದ ಹಣವನ್ನು ಡೊನೇಶನ್ ರೂಪದಲ್ಲಿ ಪಾವತಿಸಬೇಕಿತ್ತು. ಪರಿಣಾಮವಾಗಿ ಹಿಂದುಳಿದ ವರ್ಗದ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಎನ್ನುವುದು ಮರೀಚಿಕೆಯಾಗಿತ್ತು. ಕೇವಲ ಹಣವಂತ ಕುಟುಂಬದಿಂದ ಬಂದ ಮಕ್ಕಳು ಮಾತ್ರ ವೈದ್ಯರು ಹಾಗೂ ಇಂಜನಿಯರ್ ರಾಗುವ ವಾತಾವರಣ ಆಗ ಪ್ರಚಲಿತದಲ್ಲಿತ್ತು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗುತ್ತಿರುವ ಈ ಅನ್ಯಾಯವನ್ನು ಸರಿ ಪಡಿಸಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ 'ಸಾಮಾನ್ಯ ಪ್ರವೇಶ ಪರೀಕ್ಷೆ'ಯನ್ನು ಪರಿಚಯಿಸಿದರು. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಐ.ಎ.ಎಸ್ ಅಧಿಕಾರಿ ಶ್ರೀ ಹರೀಶ ಗೌಡರ ಪರಿಶ್ರಮ ಮತ್ತು ಪ್ರಯತ್ನ ಶ್ಲಾಘನೀಯ. ಈ ಒಂದು ಪ್ರಾಮಾಣಿಕ ಪ್ರಯತ್ನದ ಪರಿಣಾಮವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಜಾರಿಗೆ ಬಂದು ಆರ್ಥಿಕವಾಗಿ ಹಿಂದುಳಿದ ಮತ್ತು ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳೂ ಕೂಡ ವೃತ್ತಿಪರ ಕೋರ್ಸುಗಳಿಗೆ ಮೆರಿಟ್ ಅನ್ವಯ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯವಾಯಿತು. ಪ್ರಾರಂಭದ ದಿನಗಳಲ್ಲಿ ಕಾಲೇಜುಗಳ ಆಡಳಿತ ಮಂಡಳಿಗೆ ಪ್ರತಿಶತ ೧೫ ರಷ್ಟು ಸೀಟುಗಳನ್ನು ಮೀಸಲಾಗಿರಿಸಿ ಉಳಿದವುಗಳನ್ನು ಪ್ರವೇಶ ಪರೀಕ್ಷೆಯ ಮೂಲಕವೇ ಭರ್ತಿ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ನಂತರದ ದಿನಗಳಲ್ಲಿ ಖಾಸಗಿ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದವು. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕವನ್ನು ಡೊನೇಶನ್ ಹೆಸರಿನಲ್ಲಿ ವಸೂಲಿ ಮಾಡುತ್ತಿವೆ ಎನ್ನುವ ತಕರಾರು ಎದುರಾಯಿತು. ಆಗ ಆಡಳಿತ ಮಂಡಳಿಗಳು ಒಟ್ಟಾಗಿ ಮ್ಯಾನೇಜಮೆಂಟ್ ಸೀಟುಗಳಲ್ಲಿ ಒಂದಿಷ್ಟನ್ನು ಪ್ರವೇಶ ಪರೀಕ್ಷೆಯ ಮೂಲಕವೂ ಕೆಲವನ್ನು ನೇರವಾಗಿ ಭರ್ತಿಮಾಡಿಕೊಳ್ಳುವ ಹೊಸ ಯೋಜನೆ ಜಾರಿಗೆ ತಂದವು. ಈ ನಡುವೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ಗುಂಪಾಗಿ ತಮ್ಮದೇ ಸಾಮಾನ್ಯ ಪ್ರವೇಶ ಪರೀಕ್ಷೆಯ ವಿಧಾನವನ್ನು ಬಳಕೆಗೆ ತಂದವು. ಜೊತೆಗೆ ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ರಾಜ್ಯದಲ್ಲಿನ ಹಲವು ವೈದ್ಯಕೀಯ ಕಾಲೇಜುಗಳು ಡೀಮ್ಡ್ ವಿಶ್ವವಿದ್ಯಾಲಯದ ಸ್ವಾಯತ್ತತೆ ಪಡೆದು ರಾಜ್ಯ ಸರ್ಕಾರದ ಹಿಡಿತದಿಂದ ಸಂಪೂರ್ಣವಾಗಿ ಹೊರಬಂದು ಆಯಾ ಕಾಲೇಜು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲಾರಂಭಿಸಿದವು. ಸಧ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಬ್ಬ ವಿದ್ಯಾರ್ಥಿಯು ರಾಜ್ಯದಲ್ಲಿನ ವೈದ್ಯಕೀಯ ಸೀಟುಗಳಿಗಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆ (ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರತಿಶತ ೧೫ ರಷ್ಟು ಸೀಟುಗಳಿಗಾಗಿ), ರಾಜ್ಯ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ, ಕಾಮೆಡ್-ಕೆ ಪ್ರವೇಶ ಪರೀಕ್ಷೆ, ಅಲ್ಪಸಂಖ್ಯಾತ ಕಾಲೇಜುಗಳ ಪ್ರವೇಶ ಪರೀಕ್ಷೆ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ ಎಂದು ಐದು ಬೇರೆ ಬೇರೆ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗಾಗುತ್ತಿದ್ದ ಅನ್ಯಾಯವನ್ನು ತಡೆಗಟ್ಟಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ೧೯೯೨ ರಲ್ಲಿ ಜಾರಿಗೆ ಬಂದ  'ಸಾಮಾನ್ಯ ಪ್ರವೇಶ ಪರೀಕ್ಷೆ' ಕಾಲಾನಂತರದಲ್ಲಿ ಅನೇಕ ವ್ಯವಸ್ಥೆಗಳಲ್ಲಿ ಹರಿದು ಹಂಚಿ ಹೋಯಿತು.

        ಈಗ ನಾನು ಮತ್ತೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ವಿಷಯಕ್ಕೆ ಬರುತ್ತೇನೆ. ಈ ಯೋಜನೆಯನ್ನು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ವಿರೋಧಿಸುತ್ತಿರುವ ಈ ಸಂದರ್ಭದಲ್ಲೇ ವಿದ್ಯಾರ್ಥಿಗಳು ಇದನ್ನು ಸ್ವಾಗತಿಸುತ್ತಿರುವರು. ಅದಕ್ಕೆ ಕಾರಣವೇನೆಂದು ವಿಚಾರಿಸಿದಾಗ ವಿದ್ಯಾರ್ಥಿಗಳೇ ಹೇಳುವಂತೆ ಈ ಯೋಜನೆಯ ಪರಿಣಾಮ ಖಾಸಗಿ ಕಾಲೇಜುಗಳಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳುವ ಅವಕಾಶವೊಂದು ಶಾಶ್ವತವಾಗಿ ಮುಚ್ಚಿಹೋಗಲಿದೆ. ಏಕೆಂದರೆ ರಾಜ್ಯ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ ಹೊರತುಪಡಿಸಿ ಉಳಿದ ಅರ್ಹತಾ ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇಲ್ಲ. ಈ ಪ್ರವೇಶ ಪರೀಕ್ಷೆಗಳಲ್ಲಿ ಹಣ ಪಡೆದು  ವಿದ್ಯಾರ್ಥಿಗಳ  ryank ನಿರ್ಧರಿಸಲಾಗುತ್ತಿದೆ ಎನ್ನುವ ಆಪಾದನೆ ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿದೆ. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಒಬ್ಬ ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಹೊಂದಿ ಕಾಲೇಜೊಂದರಲ್ಲಿ ಪ್ರವೇಶ ಪಡೆದು ಒಂದಿಷ್ಟು ಅವಧಿಯ ನಂತರ ಪ್ರವೇಶವನ್ನು ಹಿಂಪಡೆದರೆ ಮುಂದೆ ಅದು ಮ್ಯಾನೇಜಮೆಂಟ್ ಸೀಟಾಗಿ ಬದಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವು ವಿದ್ಯಾರ್ಥಿಗಳು ಪ್ರತಿವರ್ಷ ಸಿಇಟಿ ಬರೆಯುವುದು ಮತ್ತು ಪ್ರವೇಶ ಪಡೆದು ತಮ್ಮ ದಾಖಲಾತಿಯನ್ನು ಹಿಂಪಡೆಯುವುದನ್ನೆ ಮುಖ್ಯ ಉದ್ಯೋಗವಾಗಿ ಮಾಡಿಕೊಂಡಿರುವರು. ಈ ವಿಷಯವಾಗಿ ಖಾಸಗಿ ಸಂಸ್ಥೆಗಳೊಂದಿಗೆ ವ್ಯಾಪಾರಕ್ಕಿಳಿಯುವ ಅವರು ಲಕ್ಷಾಂತರ ರೂಪಾಯಿಗಳ ಲಾಭ ಮಾಡಿಕೊಳ್ಳುತ್ತಿರುವರು. ಇನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಸೀಟುಗಳನ್ನು ಮೀಸಲಾಗಿಟ್ಟರೂ ಅವುಗಳನ್ನು ಭರ್ತಿ ಮಾಡಿಕೊಳ್ಳದೆ ಮ್ಯಾನೇಜಮೆಂಟ್ ಸೀಟುಗಳಾಗಿ ಮಾರ್ಪಡಿಸಿಕೊಳ್ಳುತ್ತಿರುವರು (ನೋಡಿ ಕನ್ನಡ ಪ್ರಭ, ೦೨.೦೧.೨೦೧೩), ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳು ನಡೆಸುವ ಪ್ರವೇಶ ಪರೀಕ್ಷೆ ಅದು ನೆಪಕ್ಕೆ ಮಾತ್ರ ಎನ್ನುವಂತಿದೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಜಾರಿಗೆ ಬಂದಲ್ಲಿ ಈ ಮೇಲಿನ ಎಲ್ಲ ಅವಕಾಶಗಳ ಬಾಗಿಲುಗಳು ಮುಚ್ಚಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಅದಕ್ಕೆಂದೇ ಆಡಳಿತ ಮಂಡಳಿಯವರು ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಿರೋಧಿಸುತ್ತಿದ್ದರೆ ಅದೇ ವೇಳೆ ವಿದ್ಯಾರ್ಥಿಗಳು ಈ ಯೋಜನೆ ಬಹು ಬೇಗನೇ ಜಾರಿಗೆ ಬರಲಿ ಎಂದು ಸ್ವಾಗತಿಸುತ್ತಿರುವರು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, January 3, 2013

ಯು ಕ್ಯಾನ್ ವಿನ್

    

"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು"
     
      ಕೆಲವು ದಿನಗಳಿಂದ ಶಿವ ಖೇರಾ ಬರೆದ 'ಯು ಕ್ಯಾನ್ ವಿ' ಪುಸ್ತಕವನ್ನು ಓದುತ್ತಿದ್ದೇನೆ. ಈ ಶಿವ ಖೇರಾ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಲು, ಜನರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು, ಸಾಧನೆಗಳೆಡೆಗೆ ಪಯಣಿಸಲು ಅಗತ್ಯವಾದ ಸ್ಫೂರ್ತಿಯನ್ನು ತಮ್ಮ ಬರವಣಿಗೆಯ ಮೂಲಕ ಒದಗಿಸುತ್ತಲೇ ಬಂದಿರುವ ಮಹತ್ವದ ಲೇಖಕ. ಅವರ ಇತ್ತೀಚಿನ ಕೃತಿ 'ಯು ಕ್ಯಾನ್ ವಿನ್' ಸುಮಾರು 16 ಭಾಷೆಗಳಲ್ಲಿ ಪ್ರಕಟವಾಗಿ ಎರಡು ದಶಲಕ್ಷ ಪ್ರತಿಗಳು ಮಾರಾಟವಾಗಿವೆ. 'ಜಯಶಾಲಿಗಳು ವಿಭಿನ್ನ ಕೆಲಸಗಳನ್ನು ಮಾಡುವುದಿಲ್ಲ. ಅವರು ಸಾಧಾರಣ ಕೆಲಸಗಳನ್ನೇ ವಿಭಿನ್ನವಾಗಿ ಮಾಡುವರು' ಎನ್ನುವುದು ಅವರು ನಂಬಿಕೊಂಡುಬಂದಿರುವ ಸಿದ್ಧಾಂತ.

           ಕಳೆದ ಕೆಲವು ದಿನಗಳಿಂದ ಮನಸ್ಸನ್ನು ಪೂರ್ತಿಯಾಗಿ ಶಿವ ಖೇರಾ ಅವರ ವಿಚಾರಗಳೇ ಆವರಿಸಿವೆ. ಪುಸ್ತಕದಲ್ಲಿ ಅಲ್ಲಲ್ಲಿ ಬದುಕಿಗೆ ಸ್ಫೂರ್ತಿ ನೀಡುವ ಉದಹಾರಣೆಗಳನ್ನು ಲೇಖಕರು ಉಲ್ಲೇಖಿಸಿರುವರು. ಮನಸ್ಸನ್ನು ತಟ್ಟಿದ ಒಂದಿಷ್ಟು ಉಲ್ಲೇಖಗಳನ್ನು ಪುಸ್ತಕದಿಂದ ಹೆಕ್ಕಿ ತೆಗೆದು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದೇನೆ. ಓದಿ ನೋಡಿ ನಮಗರಿವಿಲ್ಲದಂತೆ ಬದುಕು ಬದಲಾಗುತ್ತ ಹೋಗುತ್ತದೆ.

        ಒಂದು ನಗರದಲ್ಲಿ ವ್ಯಕ್ತಿಯೊಬ್ಬ ಬಲೂನ್ ಗಳ ಮಾರಾಟದಿಂದ ಬದುಕು ನಡೆಸುತ್ತಿದ್ದ. ಬಲೂನ್ ಗಳ ವ್ಯಾಪಾರವೇ ಅವನ ಕುಟುಂಬ ನಿರ್ವಹಣೆಗೆ ಆಧಾರವಾಗಿತ್ತು. ಪ್ರತಿದಿನ ಜನಸಂದಣಿಯ ಪ್ರದೇಶಗಳಲ್ಲಿ ಆತ ಕೈಗಾಡಿಯೊಂದರಲ್ಲಿ ಬಲೂನ್ ಗಳನ್ನು ಹರವಿಕೊಂಡು ವ್ಯಾಪಾರ ಮಾಡುತ್ತಿದ್ದ. ಬೆಳಿಗ್ಗೆಯಿಂದ ಸಂಜೆವರೆಗೂ ಬಲೂನ್ ಗಳ ಮಾರಾಟದಿಂದ ದೊರೆಯುವ ಹಣ ಅವನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿತ್ತು. ಕೆಲವೊಮ್ಮೆ ಕೊಳ್ಳುವವರಿಲ್ಲದೆ ಬಲೂನ್ ಗಳ ಮಾರಾಟ ಕ್ಷೀಣಿಸುತ್ತಿತ್ತು. ಅಂಥ ದಿನದಂದು ಆ ವ್ಯಾಪಾರಿ ಬಣ್ಣ ಬಣ್ಣದ ಬಲೂನ್ ಗಳಿಗೆ ಗಾಳಿತುಂಬಿ ಅವುಗಳನ್ನು ಆಕಾಶಕ್ಕೆ ಬಿಡುತ್ತಿದ್ದ. ಹೀಗೆ ಅವನು ಗಾಳಿಯಲ್ಲಿ ಹಾರಾಡಲು ಬಿಡುತ್ತಿದ್ದ ಬಲೂನ್ ಗಳಲ್ಲಿ ಕೆಂಪು, ನೀಲಿ, ಹಸಿರು ಮತ್ತು ಹಳದಿ ಬಣ್ಣಗಳಿರುತ್ತಿದ್ದವು. ಗಾಳಿಯಲ್ಲಿ ಹಾರಾಡುವ ಸುಂದರ ಬಲೂನ್ ಗಳನ್ನು ನೋಡಿದ ತಕ್ಷಣ ಮಕ್ಕಳೆಲ್ಲ ಆಕರ್ಷಿತರಾಗಿ ಬಲೂನ್ ಗಳನ್ನು ಖರೀದಿಸಲು ಓಡೋಡಿ ಬರುತ್ತಿದ್ದರು. ಆತನ ವ್ಯಾಪಾರ ಜೋರಾಗಿ ಕುಟುಂಬ ನಿರ್ವಹಣೆಗೆ ಅಗತ್ಯವಾದ ಹಣ ದೊರೆಯುತ್ತಿತ್ತು.  ವ್ಯಾಪಾರ ಕ್ಷೀಣಿಸಿದ ದಿನಗಳಂದು ಆಕಾಶದಲ್ಲಿ ಬಣ್ಣ ಬಣ್ಣದ ಬಲೂನ್ ಗಳು ಹಾರಾಡುತ್ತಿದ್ದವು. ಒಂದು ದಿನ ಬಲೂನ್ ಗಳನ್ನು ಆಕಾಶದಲ್ಲಿ ಹಾರಾಡಲು ಬಿಟ್ಟ ಆ ಘಳಿಗೆ ಅವನ ಕೈಯನ್ನು ಯಾರೋ ಹಿಡಿದೆಳೆದಂತಾಯಿತು. ತಿರುಗಿ ನೋಡಿದಾಗ ಪುಟ್ಟ ಬಾಲಕ ನಿಂತಿದ್ದ. ಬಲೂನ್ ಬೇಕಿತ್ತಾ ಮಗು ಎಂದು ಕೇಳಿದಾಗ ಆ ಮಗು ಅವನನ್ನು ಪ್ರಶ್ನಿಸಿತು 'ನೀನು ಗಾಳಿಯಲ್ಲಿ ಹಾರಾಡಲು ಬಿಟ್ಟಿರುವ ಬಲೂನ್ ಗಳ ಗುಂಪಿನಲ್ಲಿ ಕಪ್ಪು ಬಣ್ಣದ ಬಲೂನ್ ಗಳೇ  ಇಲ್ಲ. ಕಪ್ಪು ಬಣ್ಣದ ಬಲೂನ್ ಗಳನ್ನೂ ಹೀಗೆ ಗಾಳಿಯಲ್ಲಿ ತೇಲುವಂತೆ ಮಾಡಲು ಸಾಧ್ಯವೇ'. ಮಗುವಿನ ಮುಗ್ಧ ಪ್ರಶ್ನೆಗೆ ವ್ಯಾಪಾರಿ ಜಾಣತನದಿಂದ ಉತ್ತರಿಸಿದ 'ಮಗು ಬಲೂನ್ ಗಾಳಿಯಲ್ಲಿ ತೇಲುವುದನ್ನು ಅದರ ಬಣ್ಣ ನಿರ್ಧರಿಸುವುದಿಲ್ಲ. ಬದಲಾಗಿ ಆ ಬಲೂನ್ ಒಳಗಡೆ ಏನಿದೆ ಎನ್ನುವುದು ಅದರ ಹಾರಾಟವನ್ನು ನಿರ್ಧರಿಸುತ್ತದೆ'.
---000---

        ಪ್ರತಿಯೊಂದು ಯಶಸ್ಸಿನ ಕಥೆಯೂ ಒಂದು ದೊಡ್ಡ ವಿಫಲತೆಯಿಂದಲೇ ಶುರುವಾಗುತ್ತದೆ. ಅದಕ್ಕೊಂದು ಶ್ರೇಷ್ಠ ಉದಾಹರಣೆಯಾಗಿ ವಿಶ್ವ ಪ್ರಸಿದ್ಧ ವ್ಯಕ್ತಿಯ ಬದುಕಿನ ವೈಫಲ್ಯಗಳನ್ನು ಉಲ್ಲೇಖಿಸುತ್ತೇನೆ. ಈ ವ್ಯಕ್ತಿ ತನ್ನ 21ನೇ ವಯಸ್ಸಿನಲ್ಲಿ ತಾನು ಮಾಡುತ್ತಿದ್ದ ವ್ಯಾಪಾರದಲ್ಲಿ ಬಹು ದೊಡ್ಡ ನಷ್ಟ ಅನುಭವಿಸಿದ. 22ನೇ ವಯಸ್ಸಿನಲ್ಲಿ ಶಾಸನ ಸಭೆ ಸ್ಪರ್ಧೆಯಲ್ಲಿ ಸೋಲುಂಟಾಯಿತು. 24ನೇ ವಯಸ್ಸಿನಲ್ಲಿ ಮತ್ತೊಮ್ಮೆ ವ್ಯಾಪಾರದಲ್ಲಿ ನಷ್ಟ ಸಂಭವಿಸಿತು. 26ನೇ ವಯಸ್ಸಿನಲ್ಲಿ ಪ್ರಾಣಕ್ಕೆ ಪ್ರಾಣವಾಗಿದ್ದ ಪ್ರಿಯತಮೆ ಅಕಾಲಿಕ ಮರಣಕ್ಕೆ ತುತ್ತಾಗಿ ಶಾಶ್ವತವಾಗಿ ದೂರಾದಳು. 27ನೇ ವಯಸ್ಸಿಗೆ ನರಸಂಬಂದಿ ಕಾಯಿಲೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಜರ್ಜರಿತವಾಯಿತು. 34ನೇ ವಯಸ್ಸಿಗೆ ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯಾಯ ವಿಧಾಯಕ ಸಭೆಗೆ ಸ್ಪರ್ಧಿಸಿದಾಗ ಮತ್ತೊಮ್ಮೆ ಸೋಲು ಎದುರಾಯಿತು. 47ನೇ ವಯಸ್ಸಿಗೆ ಅಮೇರಿಕಾದ ಉಪ ರಾಷ್ಟ್ರಪತಿ ಹುದ್ಧೆಗೆ ಸ್ಪರ್ಧಿಸಲು ಪ್ರಯತ್ನಿಸಿದಾಗ ವಿಫಲತೆ ಮತ್ತೆ ಕೈ ಹಿಡಿದೆಳೆಯಿತು. 49ನೇ ವಯಸ್ಸಿಗೆ ಶಾಸನ ಸಭೆಗೆ ಸ್ಪರ್ಧಿಸಿದಾಗಲೂ ಸೋಲು. ಹೀಗೆ ಬದುಕಿನಲ್ಲಿ ನಿರಂತರವಾಗಿ ಸೋಲು ಮತ್ತು ವಿಫಲತೆಗಳನ್ನು ಕಂಡ ವ್ಯಕ್ತಿ ತನ್ನ 52ನೇ ವಯಸ್ಸಿನಲ್ಲಿ ಅಮೇರಿಕ ದೇಶದ ಅಧ್ಯಕ್ಷನಾಗಿ ಆಯ್ಕೆಯಾದ. ಆ ವ್ಯಕ್ತಿಯೇ ಅಮೇರಿಕ ರಾಷ್ಟ್ರ ಕಂಡ ಸರ್ವಕಾಲಿಕ ಶ್ರೇಷ್ಠ ಆಡಳಿತಗಾರ ಅಬ್ರಾಹಂ ಲಿಂಕನ್.

                                                                         ---000---
         ಶಿಷ್ಯ ಗುರುವಿಗೆ ಕೇಳಿದ ಯಶಸ್ಸಿನ ರಹಸ್ಯವೆನೆಂದು. ಗುರು ನಾಳೆ ಬೆಳಿಗ್ಗೆ ನದಿ ತೀರದಲ್ಲಿ ತನ್ನನ್ನು ಕಾಣುವಂತೆಯೂ ಅಲ್ಲಿ ಉತ್ತರ ಹೇಳುವುದಾಗಿ ತಿಳಿಸಿದ. ರಾತ್ರಿ ಇಡೀ ಶಿಷ್ಯನಿಗೆ ಕುತೂಹಲ. ಕೊನೆಗೂ ಬೆಳಗಾಯಿತು.  ಮುಂಜಾನೆ ಗುರು ಶಿಷ್ಯರಿಬ್ಬರೂ ನದಿ ತೀರದಲ್ಲಿ ಭೇಟಿಯಾದರು. ಗುರು ಶಿಷ್ಯನಿಗೆ ತನ್ನ ಹಿಂದೆ ನಡೆದು ಬರುವಂತೆ ಹೇಳಿದ. ಗುರು ನದಿಯೊಳಗೆ ಒಂದೊಂದೆ ಹೆಜ್ಜೆ ಇಡುತ್ತ ಮುಂದೆ ಮುಂದೆ ನಡೆದರೆ ಮರು ಮಾತಿಲ್ಲದೆ ಶಿಷ್ಯ ಗುರುವನ್ನು ಹಿಂಬಾಲಿಸಿದ. ಕೆಲವು ಅಡಿಗಳಷ್ಟು ನಡೆದ ಮೇಲೆ ನೀರು ಮೇಲೆರುತ್ತ ಬಂತು. ನೀರು ಕುತ್ತಿಗೆವರೆಗೆ ಬಂದಾಗ ಇದ್ದಕ್ಕಿದ್ದಂತೆ ಗುರು ತನ್ನ ಶಿಷ್ಯನನ್ನು ಹಿಡಿದು ಜೋರಾಗಿ ನೀರೊಳಗಡೆ ಮುಳುಗಿಸಿದ. ಈ ಅನಿರೀಕ್ಷಿತ ಘಟನೆಯಿಂದ ಶಿಷ್ಯ ಕಂಗಾಲಾಗಿ ಹೋದ. ನೀರಿನಿಂದ ಹೊರಬರಲು ಪ್ರಯತ್ನಿಸಿ ಸೋತ. ಕೆಲವು ಕ್ಷಣಗಳ ನಂತರ ಗುರು ತನ್ನ ಹಿಡಿತ ಸಡಿಲಿಸಿ ಶಿಷ್ಯ ನೀರಿನಿಂದ ಹೊರ ಬರಲು ಸಹಕರಿಸಿದ. ನೀರಿನಿಂದ ಹೊರಬಂದ ತಕ್ಷಣ ಶಿಷ್ಯ ದೀರ್ಘವಾಗಿ ಉಸಿರೆಳೆದುಕೊಂಡು ಗಾಳಿಯನ್ನು ಒಳತೆಗೆದುಕೊಂಡ. ಆಗ ಗುರು ಕೇಳಿದ 'ನೀನು ನೀರಿನೊಳಗಡೆ ಇರುವಷ್ಟು ಹೊತ್ತು ಏನನ್ನು ಕುರಿತು ಚಿಂತಿಸುತ್ತಿದ್ದೆ?' ಶಿಷ್ಯ ಉತ್ತರಿಸಿದ 'ನನಗೆ ಗಾಳಿ ಬೇಕೆನ್ನುವುದನ್ನು  ಬಿಟ್ಟು ಬೇರೆ ಯಾವ ವಿಚಾರವೂ ನನ್ನ ಮನಸ್ಸಿನಲ್ಲಿ  ಇರಲಿಲ್ಲ'. 'ಇದೇ ಯಶಸ್ಸಿನ ಹಿಂದಿರುವ ರಹಸ್ಯ. ಹೇಗೆ ನೀರಿನೊಳಗಡೆ ಇರುವಷ್ಟು ಹೊತ್ತು ಗಾಳಿ ಬೇಕೆಂದು ನಿನ್ನ ಮನಸ್ಸು ಯೋಚಿಸುತ್ತಿತ್ತೋ ಅದೇ ರೀತಿ ಯಶಸ್ಸು ಬೇಕೆಂದಾಗ ನೀನು ಯಶಸ್ಸನ್ನು ಕುರಿತೇ ಯೋಚಿಸಬೇಕು. ಅದು ತಾನಾಗಿಯೇ ನಿನಗೆ ದೊರೆಯುತ್ತದೆ.' ಗುರುವಿನ ಮಾತಿನಿಂದ ಶಿಷ್ಯನಿಗೆ ಜ್ಞಾನೋದಯವಾಯಿತು.

---000---
        ಮೂರು ಜನ ಕಾರ್ಮಿಕರು ವಿಶಾಲ ಬಯಲಿನಲ್ಲಿ ಇಟ್ಟಿಗೆಗಳನ್ನು ಜೋಡಿಸಿಡುತ್ತಿದ್ದರು. ಅವರ ಕೆಲಸವನ್ನು ಗಮನಿಸಿದ ದಾರಿಹೋಕನೋರ್ವ ಅವರುಗಳು ಮಾಡುತ್ತಿರುವ ಕೆಲಸ ಏನೆಂದು ಕೇಳಿದ. ಮೊದಲನೇಯ ಕೆಲಸಗಾರ ಉತ್ತರಿಸಿದ 'ನಿನಗೆ ಕಾಣಿಸುತ್ತಿಲ್ಲವೇ ನಾನು ಹೊಟ್ಟೆ ಪಾಡಿಗಾಗಿ ಇಲ್ಲಿ ದುಡಿಯುತ್ತಿದ್ದೇನೆ'. ಆ ಪ್ರಯಾಣಿಕ ಮುಂದೆ ನಡೆದು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿರುವ ಎರಡನೆಯವನಿಗೂ  ಅದೇ ಪ್ರಶ್ನೆ ಕೇಳಿದ. ಅವನ ಪ್ರತಿಕ್ರಿಯೆ ಹೀಗಿತ್ತು 'ಇಲ್ಲಿ ನಾನು ಇಟ್ಟಿಗೆಗಳನ್ನು ಜೋಡಿಸುತ್ತಿರುವೇನು'. ದಾರಿಹೋಕ ಮತ್ತೆ ಮುಂದೆ ಹೋಗಿ ಮೂರನೇಯ ಕೆಲಸಗಾರನಿಗೂ ಅದೇ ಪ್ರಶ್ನೆಯನ್ನು ಕೇಳಿದ. ಅವನು ಹೀಗೆ ಉತ್ತರಿಸಿದ 'ನಾನು ಇಲ್ಲಿ ಸುಂದರವಾದ ಒಂದು ಸ್ಮಾರಕವನ್ನು ಕಟ್ಟುತ್ತಿದ್ದೇನೆ'. ಮೂರೂ ಜನ ಕೆಲಸಗಾರರು ಮಾಡುತ್ತಿದ್ದ ಕೆಲಸ ಒಂದೇ ಆಗಿದ್ದರೂ ತಾವು ಮಾಡುತ್ತಿರುವ ಕೆಲಸದ ಕುರಿತು ಪ್ರತಿಯೊಬ್ಬರ ಅಭಿಪ್ರಾಯ ಬೇರೆ ಬೇರೆಯಾಗಿತ್ತು. ಒಟ್ಟಾರೆ ಮೂರೂ ಜನ ಮೂರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ವ್ಯಕ್ತಿಯೊಬ್ಬ ತನ್ನ ಕೆಲಸದ ಬಗ್ಗೆ ಬೆಳೆಸಿಕೊಳ್ಳುವ ಅಭಿಪ್ರಾಯ ಅದು ಆತನ ಕೆಲಸದ ನಿರ್ವಹಣೆಯ ಮೇಲೆ ತುಂಬ ಪ್ರಭಾವ ಬೀರುತ್ತದೆ.

---000---
       ಅವರಿಬ್ಬರೂ ಅಣ್ಣ ತಮ್ಮಂದಿರು. ಅಣ್ಣ ಮಧ್ಯ ವ್ಯಸನಿ ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದ. ಅವನಿಂದಾಗಿ ಮನೆ ಅಶಾಂತಿಯ ತಾಣವಾಗಿತ್ತು. ತಮ್ಮ ಒಬ್ಬ ಯಶಸ್ವಿ ಉದ್ಯಮಿಯಾಗಿ ಸಮಾಜದಲ್ಲಿ ಗೌರವ ಮತ್ತು ಮನ್ನಣೆಗೆ ಪಾತ್ರನಾಗಿದ್ದ. ಸುಂದರ ಮತ್ತು ಸುಖಿ ಕುಟುಂಬ ಅವನದಾಗಿತ್ತು. ಒಂದೇ ತಂದೆಯ ಮಕ್ಕಳಾಗಿ ಒಂದೇ ಪರಿಸರದಲ್ಲಿ ಬೆಳೆದ ಆ ಅಣ್ಣ ತಮ್ಮಿಂದರ ಗುಣ ಸ್ವಭಾವಗಳಲ್ಲಿ ಅಜಗಜಾಂತರ ವ್ಯತ್ಯಾಸ. 'ನಿನ್ನಲ್ಲರುವ ದುಶ್ಚಟಗಳಿಗೆ ಕಾರಣವೇನು?' ಅಣ್ಣನನ್ನು ಪ್ರಶ್ನಿಸಿದಾಗ ಅವನು ಉತ್ತರಿಸಿದ 'ಇವತ್ತಿನ ನನ್ನೆಲ್ಲ ಅವಗುಣಗಳಿಗೆ ಕಾರಣ ನನ್ನ ತಂದೆ. ಅವನೊಬ್ಬ ಕುಡುಕನಾಗಿದ್ದು ಮನೆಯಲ್ಲಿ ನಮ್ಮನ್ನೆಲ್ಲ ಹೊಡೆದು ಹಿಂಸಿಸುತ್ತಿದ್ದ. ಅಂಥ ಅಪ್ಪನ ಮಗನಾಗಿ ನಾನು ಒಳ್ಳೆಯವನಾಗಿರಲು ಹೇಗೆ ಸಾಧ್ಯ'. ಅವನು ಹೇಳಿದ್ದರಲ್ಲಿ ತಪ್ಪಿರಲಿಲ್ಲ.

        ತಮ್ಮನನ್ನು ಕೇಳಲಾಯಿತು 'ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಮತ್ತು ಉತ್ತಮ ನಾಗರಿಕನಾಗಿ ಬದುಕನ್ನು ರೂಪಿಸಿಕೊಳ್ಳಲು ನಿನಗಾರು ಪ್ರೇರಣೆ?' ತಮ್ಮನ ಪ್ರತಿಕ್ರಿಯೆ ಹೀಗಿತ್ತು 'ಇವತ್ತಿನ ನನ್ನ ಯಶಸ್ಸಿಗೆಲ್ಲ ನನ್ನ ತಂದೆಯೇ ನನಗೆ ಪ್ರೇರಣೆ. ನನ್ನ ತಂದೆ ಒಬ್ಬ ಕುಡುಕ, ಸೋಮಾರಿ ಮತ್ತು ಜಗತ್ತಿನಲ್ಲಿರುವ ಎಲ್ಲ ದುಶ್ಚಟಗಳ ದಾಸನಾಗಿದ್ದ. ಮನೆಯಲ್ಲಿ ಪ್ರತಿನಿತ್ಯ ಜಗಳವಾಡುತ್ತಿದ್ದ. ಇದನ್ನೆಲ್ಲ ಪ್ರತಿನಿತ್ಯ ನೋಡುತ್ತಿದ್ದ ನಾನು ಸಣ್ಣವನಿರುವಾಗಲೇ ನಿರ್ಧರಿಸಿದೆ ಅಪ್ಪನಂತೆ ಕೆಟ್ಟ ವ್ಯಕ್ತಿಯಾಗಬಾರದೆಂದು. ಬದಲಾಗಿ ಉತ್ತಮ ಮನುಷ್ಯ ಮತ್ತು ಯಶಸ್ವಿ ಉದ್ಯಮಿಯಾಗಬೇಕು ಹಾಗೂ ಸಮಾಜದಲ್ಲಿ ಗೌರವ ಮನ್ನಣೆಗಳನ್ನು ಗಳಿಸಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಪ್ರಯತ್ನಿಸಿ ಯಶಸ್ವಿಯೂ ಆದೆ'.

        ಪ್ರೇರಣೆ ನೀಡುವ ಇಂಥ ಹತ್ತಾರು ಉದಾಹರಣೆಗಳು 'ಯು ಕ್ಯಾನ್ ವಿನ್' ಪುಸ್ತಕದಲ್ಲಿವೆ. ಪುಸ್ತಕವನ್ನೊಮ್ಮೆ ಕೈಯಲ್ಲಿ ಹಿಡಿದು ನೋಡಿ ಸ್ಫೂರ್ತಿಯ  ಸೆಲೆ ಜೀವನೋತ್ಸಾಹಕ್ಕೆ ನೀರೆರೆಯಲಾರಂಭಿಸುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ