Friday, December 3, 2021

ದಿಗಂಬರ (ಕಥೆ)

 


(ಅಕ್ಟೊಬರ್ ೧೪, ೨೦೨೧ ರ 'ತರಂಗ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

     ದಿಗಂಬರನ ಸಾವಿನ ಸುದ್ದಿ ಕೇಳಿದ ಆ ಸಂದರ್ಭ ನಾನು ನನ್ನ ಬೋಧನಾ ವಿಷಯಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ಕಾರ್ಯಾಗಾರದಲ್ಲಿ ಭಾಗವಹಿಸಲು ದೆಹಲಿನಲ್ಲಿದ್ದೆ. ನನ್ನ ಪ್ರೀತಿಯ ದಿಗಣ್ಣನ ಸಾವಿನ ಸುದ್ದಿ ಕೇಳಿ ನನ್ನೊಳಗೆ ಮೂಡಿದ ಅವ್ಯಕ್ತ ಸಂಕಟದಿಂದ ಆ ಇಡೀ ದಿನಪೂರ್ತಿ ನಾನು ತುಂಬ ಬೇಚೈನಾಗಿದ್ದೆ. ಈ ದಿಗಣ್ಣ ನನಗೆ ವರಸೆಯಲ್ಲಿ ದಾಯಾದಿಯಾಗಲಿ, ನೆಂಟನಾಗಲಿ ಅಥವಾ ನನ್ನೂರಿನ ವ್ಯಕ್ತಿಯಾಗಲಿ ಆಗಿರಲಿಲ್ಲ. ನನ್ನೂರಿನಿಂದ ಎರಡು ಮೈಲಿ ದೂರದಲ್ಲಿರುವ ಆ ಕಡೆ ಪಟ್ಟಣವೂ ಅಲ್ಲದ ಈ ಕಡೆ ಹಳ್ಳಿಯೂ ಅಲ್ಲದ ಊರಿನಲ್ಲಿ ವಾಸಿಸುತ್ತಿದ್ದ ನಮ್ಮ ಮನೆಯ ಪುರೋಹಿತರಾದ ವೆಂಕಣ್ಣಾಚಾರ್ಯರ ಮಗ ಅವನು. ನಾನು ದಿಗಣ್ಣನ ಮನೆ ಸೇರಲು ಅದಕ್ಕೊಂದು ಸ್ಪಷ್ಟವಾದ ಕಾರಣವಿತ್ತು. ನನಗಾಗ ಹತ್ತು ವರ್ಷಗಳಿರಬಹುದು. ಊರಿನಲ್ಲಿ ಹೇಳಿಕೊಳ್ಳುವಂಥ ಸೌಕರ್ಯಗಳೇನೂ ಇರಲಿಲ್ಲ. ಊರಿನ ಹೊರವಲಯದಲ್ಲಿದ್ದ ನಾಲ್ಕನೆ ತರಗತಿಯವರೆಗಿನ ಶಾಲೆ ಅದೊಂದು ಏಕೋಪಾಧ್ಯಾಯ ಶಾಲೆಯಾಗಿತ್ತು. ಅಪ್ಪನಿಗೆ ನಾನು ಅವನಂತೆ ಊರಿನಲ್ಲಿ ಇದ್ದು ಮನೆ ಮತ್ತು ಹೊಲದ ದೇಖರೇಖಿ ನೋಡಿಕೊಳ್ಳಬೇಕೆಂಬ ಆಸೆಯೇನೂ ಇರಲಿಲ್ಲ. ಮಗ ಕಲಿತು ವಿದ್ಯಾವಂತನಾಗಿ ನೌಕರಿ ಹಿಡಿದು ನೆಮ್ಮದಿಯಿಂದ ಬಾಳಲೆಂದು ಎಲ್ಲ ಅಪ್ಪಂದಿರಂತೆ ನನ್ನ ಅಪ್ಪ ಕೂಡ ಆಸೆ ಪಟ್ಟಿದ್ದ. ಅಪ್ಪನ ಈ ಆಸೆಗೆ ಅಮ್ಮನ ಒತ್ತಾಸೆಯೂ ಇತ್ತು. ಒಮ್ಮೆ ವೆಂಕಣ್ಣಾಚಾರ್ಯರು ನಮ್ಮ ಮನೆಗೆ ಸತ್ಯನಾರಾಯಣ ಪೂಜೆಗೆಂದು ಬಂದಿದ್ದಾಗ ಅಪ್ಪ ನೇರವಾಗಿಯೇ ಇಲ್ಲಿನ ಶಾಲೆಯಲ್ಲಿನ ಅನಾನುಕೂಲವನ್ನು ಅವರೊಂದಿಗೆ ಪ್ರಸ್ತಾಪಿಸಿ ನನ್ನನ್ನು ಅವರ ಊರಿಗೆ ಕಳುಹಿಸುವ ಏರ್ಪಾಡು ಮಾಡಿದ್ದ. ವೆಂಕಣ್ಣಾಚಾರ್ಯರ ಧನ ಕನಕದ ಲೋಭವನ್ನು ಅರಿತಿದ್ದ ಅಪ್ಪ ಕಾಳು ಕಡಿಯೊಂದಿಗೆ ಅವರ ಕೈತುಂಬವಷ್ಟು ಹಣಕೊಟ್ಟು ಕಳುಹಿಸಿದ್ದ ಅಲ್ಲದೆ ವರ್ಷ ವರ್ಷ ಅಗತ್ಯವಿದ್ದಾಗಲೆಲ್ಲ ಅವರಿಗೆ ನೆರವಾಗುತ್ತಿದ್ದ.  ಊರಿನ ಹತ್ತಿರದ ಹೊಳೆಯನ್ನು ದಾಟಿ ಎರಡು ಮೈಲಿ ದೂರ ನಡೆದರೆ ಮೊದಲು ಸಿಗುವ ಊರೇ ವೆಂಕಣ್ಣಾಚಾರ್ಯರದು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಊರಾಗಿದ್ದರಿಂದ ಅಲ್ಲಿ ಹೈಸ್ಕೂಲು, ಕಾಲೇಜು, ಬ್ಯಾಂಕ್, ಆಸ್ಪತ್ರೆ ಎಲ್ಲ ರೀತಿಯ ಸೌಕರ್ಯಗಳಿದ್ದವು.

ನದಿಯ ಒಡಲಲ್ಲಿ ದ್ವೀಪದಂತೆ ಅಡಗಿ ಕುಳಿತಿದ್ದ ಸಣ್ಣ ಊರಿನಿಂದ ಬಂದ ನನಗೆ ಇಲ್ಲಿನ ವಿಶಾಲವಾದ ರಸ್ತೆಗಳು, ಎತ್ತರದ ಮನೆಗಳು, ಊರ ನಡುವಿನ ಮಾರುಕಟ್ಟೆ, ಶಿಕ್ಷಕರು-ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಯಿಂದ ಹೊಸ ಲೋಕವನ್ನು ಕಂಡಂತಾಯಿತು. ಈ ಎಲ್ಲ ಆಕರ್ಷಣೆಗಳ ಜೊತೆಗೆ ಆ ಊರನ್ನು ನಾನು ಇಷ್ಟಪಡಲು ಬೇರೊಂದು ಪ್ರಬಲವಾದ ಕಾರಣ ಅದು ದಿಗಂಬರನ ಒಡನಾಟ. ವೆಂಕಣ್ಣಾಚಾರ್ಯರ ಮಗ ದಿಗಂಬರ ಹತ್ತಿರದ ಹಳ್ಳಿಯ ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದ. ಆರಂಭದಲ್ಲಿ ದಿಗಂಬರನೊಡನೆ ಮಾತನಾಡಲು ನನಗೆ ಒಂದಿಷ್ಟು ಅಳುಕಿತ್ತಾದರೂ ಕ್ರಮೇಣ ಅವನ ಸ್ವಭಾವದ ಪರಿಚಯವಾಗಿ ಮುಂದೆ ಅವನನ್ನು ದಿಗಣ್ಣ ಎಂದು ಕರೆಯುವಷ್ಟು ನನಗೆ ಅವನಲ್ಲಿ ಸಲುಗೆ ಬೆಳೆಯಿತು. ನನ್ನ ಪಿಯುಸಿ ವಿದ್ಯಾಭ್ಯಾಸದವರೆಗೆ ಅಂದರೆ ಸರಿಸುಮಾರು ಒಂಬತ್ತು ವರ್ಷಗಳ ಕಾಲ ನಾನು ವೆಂಕಣ್ಣಾಚಾರ್ಯರ ಕುಟುಂಬದವರಲ್ಲೊಬ್ಬನಾಗಿ ಅವರ ಮನೆಯಲ್ಲೇ ನೆಲೆನಿಂತೆ.

ನಾನು ಅವರ ಮನೆಯಲ್ಲಿರುವಷ್ಟು ದಿನಗಳು ವೆಂಕಣ್ಣಾಚಾರ್ಯರು ಮತ್ತು ಅವರ ಪತ್ನಿ ಕಮಲಮ್ಮ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು. ವೆಂಕಣ್ಣಾಚಾರ್ಯರಿಗೆ ಪೌರೋಹಿತ್ಯದ ಜೊತೆಗೆ ಪಿತ್ರಾರ್ಜಿತವಾಗಿ ಬಂದ ಹೊಲ ತೋಟಗಳಿದ್ದು ಆರ್ಥಿಕವಾಗಿ ಸ್ಥಿತಿವಂತರಾಗಿದ್ದು ಒಂದಿಷ್ಟು ಧನ ಕನಕದ ಪ್ರಲೋಭನೆ ಇತ್ತು ಎನ್ನುವುದು ಬಿಟ್ಟರೆ ಗುಣಸ್ವಭಾವದಲ್ಲಿ ಅವರು ಒಳ್ಳೆಯವರೆ ಆಗಿದ್ದರು. ನನಗೂ ಮತ್ತು ದಿಗಣ್ಣನಿಗೂ ವಯಸ್ಸಿನಲ್ಲಿ ಸರಿಸುಮಾರು ಹದಿನೈದು ವರ್ಷಗಳ ಅಂತರವಿತ್ತು. ಹಾಗೆಂದು ದಿಗಣ್ಣ ಎಂದೂ ನನ್ನ ಮೇಲೆ ಹಿರಿತನದ ದರ್ಪ ತೋರಿಸುತ್ತಿರಲಿಲ್ಲ. ನನ್ನನ್ನು ತನ್ನ ಸ್ವಂತ ತಮ್ಮನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಬಿಡುವಿದ್ದಾಗಲೆಲ್ಲ ನನ್ನನ್ನು ತನ್ನ ಸೈಕಲ್ ಮೇಲೆ ಕೂರಿಸಿಕೊಂಡು ಊರು ಸುತ್ತಾಡಿಸುತ್ತಿದ್ದ ಅವನು ನನಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಹೇಳುತ್ತಿದ್ದ. ಒಮ್ಮೆಯಂತೂ ಊರ ಹತ್ತಿರದ ಗುಡ್ಡ ಹತ್ತಿ ಸೂರ್ಯಾಸ್ತ ನೋಡುತ್ತ ಕುಳಿತಿದ್ದಾಗ ದಿಗಣ್ಣ ಥಟ್ಟನೇ ಕೇಳಿದ ಪ್ರಶ್ನೆ ಮತ್ತು ಆ ಪ್ರಶ್ನೆಗೆ ಅವನೇ ಉತ್ತರಿಸಿದ ರೀತಿ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ‘ಅನಂತು ದಿಗಂಬರ ಅಂದರೆ ಏನು ಅಂತ ಗೊತ್ತೇನೋ ನಿನಗೆ’ ದಿಗಣ್ಣ ಕೇಳಿದಾಗ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟು ಅವನನ್ನೆ ನೋಡಿದ್ದೆ. ‘ನೋಡು ಅನಂತು ದಿಗಂಬರ ಅಂದರೆ ಬತ್ತಲೆ ಅಂತ ಅರ್ಥ. ಅಪ್ಪನಿಗೆ ಇದೊಂದು ದೇವರ ಹೆಸರು. ಆದರೆ ನನಗೆ ಮಾತ್ರ ಆ ಬತ್ತಲೆ ಅನ್ನೊ ಅರ್ಥದಲ್ಲೇ ನಂಬಿಕೆ. ನಾನು ಹೆಸರಿನಲ್ಲಿ ಮಾತ್ರ ದಿಗಂಬರನಾಗಿರೊದಕ್ಕೆ ಇಷ್ಟಪಡಲ್ಲ. ನನ್ನ ಮನಸ್ಸು, ವ್ಯಕ್ತಿತ್ವ ಕೂಡ ಬತ್ತಲಾಗಬೇಕು. ಮನುಷ್ಯರು ದೇಹಕ್ಕೆ ಬಟ್ಟೆ ಹಾಕಿದಂತೆ ಮನಸ್ಸಿಗೂ ಬಟ್ಟೆ ತೊಡಿಸಿರುತ್ತಾರೆ. ಅಂತರಂಗದ ಬದುಕು ಒಂದಾದರೆ ಬಹಿರಂಗದ ಬದುಕೇ ಬೇರೆ. ಹೀಗೆ ಬೇರೆ ಬೇರೆಯಾಗಿ ಬದುಕಿದರೆ ಅಂಥ ಬದುಕಿಗೆ ಏನರ್ಥ. ಅಂತರಂಗ ಮತ್ತು ಬಹಿರಂಗ ಎರಡೂ ಏಕತ್ರವಾಗಬೇಕು. ಮನಸ್ಸಿಗೆ ತೊಡಸಿದ ಬಟ್ಟೆ ಕಿತ್ತೆಸೆದು ಬತ್ತಲೆಯಾದಾಗಲೇ ಮನುಷ್ಯನ ನಿಜ ಸ್ವರೂಪ ಗೋಚರವಾಗೊದು. ನಾವು ಅಂತರಂಗದಲ್ಲಿ ಬತ್ತಲೆಯಾಗ್ತಾ ಹೋಗಬೇಕು ಅನಂತು’ ದಿಗಣ್ಣ ಆ ದಿನ ಹೇಳಿದ ಈ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪ್ರೌಢತೆ ಅಂದು ನನಗಿರಲಿಲ್ಲ ನಿಜ ಆದರೆ ಒಂದಂತೂ ಆ ದಿನ ಅರ್ಥವಾಗಿತ್ತು ಅವನ ಸ್ವಭಾವದಲ್ಲಿ ಅದೇನೋ ವಿಶೇಷವಾದದ್ದಿದೆಯೆಂದು.

ದಿಗಣ್ಣನ ಓರಿಗೆಯವರಿಗೆಲ್ಲ ಮದುವೆಯಾಗಿ ಮಕ್ಕಳಾದರೂ ಮಗ ಇನ್ನೂ ಮದುವೆಯಾಗದೆ ಉಳಿದದ್ದು ಕಮಲಮ್ಮನವರಿಗೆ ಚಿಂತೆಯ ವಿಷಯವಾಗಿತ್ತು. ವೆಂಕಣ್ಣಾಚಾರ್ಯರೂ ಅವರಿವರ ಕೈಲಿ ಹೇಳಿಸಿ ನೋಡಿದರೂ ದಿಗಣ್ಣನ ನಿರ್ಲಿಪ್ತತೆ ಅವರು ದಿಗಿಲುಗೊಳ್ಳಲು ಕಾರಣವಾಗಿ ಒಂದುದಿನ ರಾತ್ರಿ ಊಟಕ್ಕೆ ಕುಳಿತಾಗ ಮದುವೆಯ ವಿಷಯವನ್ನು ನೇರವಾಗಿ ಮಗನೆದುರೇ ಪ್ರಸ್ತಾಪಿಸಿದರು. ‘ನನಗೂ ವಯಸ್ಸಾಗಿದೆ ನಿನ್ನ ತಲೆಯ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ಸಾಯ್ತೀನಿ’ ಎಂದು ಕಮಲಮ್ಮನವರು ಕಣ್ಣೀರು ಹಾಕಿದರು. ತಾಯಿಯ ಸಂಕಟ ನೋಡಲಾಗದಕ್ಕೊ ಏನೋ ದಿಗಣ್ಣ ಮದುವೆಗೆ ಒಪ್ಪಿಗೆ ನೀಡಿದ. ವೆಂಕಣ್ಣಾಚಾರ್ಯರ ಮನೆತನ, ಅವರಿಗಿರುವ ಆಸ್ತಿ, ದಿಗಣ್ಣನ ನೌಕರಿಯಿಂದ ಆ ಮನೆಗೆ ಹೆಣ್ಣು ಕೊಡಲು ಅನೇಕ ಕನ್ಯಾಪಿತೃಗಳು ತುದಿಗಾಲಲ್ಲಿ ನಿಂತಿದ್ದರು. ಆ ದಿನ ಹೆಣ್ಣು ನೋಡುವ ಶಾಸ್ತ್ರಕ್ಕೆ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯ ನಂತರ ಮದುವೆ ದಿನ, ಮುಹೂರ್ತ ನಿಶ್ಚಯಿಸುವ ವೇಳೆ ತನಗೆ ಮುಖ್ಯವಾದ ವಿಷಯವೊಂದನ್ನು ಹೆಣ್ಣಿನ ಮನೆಯವರೊಂದಿಗೆ ಚರ್ಚಿಸಬೇಕಿದೆಯೆಂದು ದಿಗಣ್ಣ ತಗಾದೆ ತೆಗೆದ. ವರದಕ್ಷಿಣೆಯೋ ಅಥವಾ ಇನ್ನಾವುದೋ ಬಾಬತ್ತಿಗೆ ಸಂಬಂಧಿಸಿದ ವಿಷಯವಾಗಿರಬೇಕೆಂದೆ ಎಲ್ಲರೂ ತಿಳಿದುಕೊಂಡಿದ್ದರು. ದಿಗಣ್ಣ ಹೇಳಿದ ವಿಷಯ ಕೇಳಿ ವೆಂಕಣ್ಣಾಚಾರ್ಯರು ಮತ್ತು ಕಮಲಮ್ಮನವರು ಅಕ್ಷರಶ: ಭೂಮಿಗಿಳಿದು ಹೋದರು. ಮಧ್ಯಸ್ಥಿಕೆ ವಹಿಸಿದ್ದ ಪುರೋಹಿತರ ಮುಖ ವಿಷಯ ತಿಳಿದು ಕಪ್ಪಿಟ್ಟಿತು. ಹೆಣ್ಣಿನ ತಂದೆ ಮಗಳನ್ನು ಒಳಗೆ ಹೋಗಲು ಹೇಳಿ ನಮ್ಮನ್ನು ನೋಡಿ ಬಾಗಿಲತ್ತ ಕೈ ತೋರಿಸಿದರು. ಕಮಲಮ್ಮನವರು ಸೀರೆಯ ಸೆರಗಿನಿಂದ ಕಣ್ಣೊರಿಸಿಕೊಳ್ಳುತ್ತ ಮುಸುಮುಸು ಅಳುತ್ತಲೇ ಮನೆಯಿಂದ ಹೊರಗೋಡಿ ಬಂದರು. ಹಾಗೆ ಅಂದು ಅಳುತ್ತ ಓಡಿ ಬಂದ ಕಮಲಮ್ಮನವರು ಮುಂದೆ ಹಾಸಿಗೆ ಹಿಡಿದು ಚೇತರಿಸಿಕೊಳ್ಳಲೇ ಇಲ್ಲ. ವೆಂಕಣ್ಣಾಚಾರ್ಯರು ಮಗನೊಡನೆ ಮಾತನಾಡುವುದನ್ನೇ ನಿಲ್ಲಿಸಿದರು. ಈ ಮೊದಲು ತಮ್ಮನ್ನು ಗೌರವದಿಂದ ಕಾಣುತ್ತಿದ್ದ ಊರಿನವರು ಈಗ ನೋಡಿ ನಗುತ್ತಿರುವಂತೆ ಭಾಸವಾಗಿ ದಿನದ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯತೊಡಗಿದರು. ದಿಗಣ್ಣ ಮಾತ್ರ ಏನೂ ನಡದೇ ಇಲ್ಲ ಎನ್ನುವಂತೆ ತನ್ನ ಎಂದಿನ ನಿರ್ಲಿಪ್ತತೆಯಿಂದಲೇ ಇದ್ದ.

‘ದಿಗಣ್ಣ ಯಾಕೆ ಸುಳ್ಳು ಹೇಳಿದೆ. ನಿನ್ನ ಮಾತಿನಿಂದ ಅಮ್ಮನಿಗೆ ಎಷ್ಟೊಂದು ನೋವಾಗಿದೆ ಗೊತ್ತಾ ನಿನಗೆ’ ಆ ದಿನ ಸಾಯಂಕಾಲ ತಿರುಗಾಟಕ್ಕೆಂದು ಗುಡ್ಡಕ್ಕೆ ಹೋಗಿದ್ದಾಗ ನಾನು ಕೇಳಿದ ಪ್ರಶ್ನೆಯಿಂದ ದಿಗಣ್ಣ ಸ್ವಲ್ಪವೂ ವಿಚಲಿತನಾಗಿರಲಿಲ್ಲ. ‘ಅನಂತು ನಿನಗಿದೆಲ್ಲ ಅರ್ಥವಾಗೊಲ್ಲ ನೀನಿನ್ನೂ ಚಿಕ್ಕವನು’ ದಿಗಣ್ಣ ಸಮಜಾಯಿಷಿ ನೀಡಿದರೂ ನಾನು ಹಟ ಹಿಡಿದೆ. ಆವತ್ತು ದಿಗಣ್ಣನ ಮೇಲೆ ಎಂದೂ ಇಲ್ಲದ ಸಿಟ್ಟು ಬರಲು ಕಮಲಮ್ಮನವರು ಅನುಭವಿಸುತ್ತಿದ್ದ ನೋವು ಸಂಕಟವೇ ಕಾರಣವಾಗಿತ್ತು. ‘ಅನಂತು ನನಗೆ ಸುಳ್ಳು ಹೇಳೊದಕ್ಕೆ ಬರಲ್ಲ. ನಾನು ಕಮಲಮ್ಮನವರ ಮಗ ನಿಜ ಅದನ್ನು ಒಪ್ಪಿಕೊಳ್ತೀನಿ. ಆದರೆ ವೆಂಕಣ್ಣಾಚಾರ್ಯರನ್ನು ನನ್ನ ತಂದೆ ಅಂತ ಒಪ್ಪಿಕೊಳ್ಳೊಕೆ ನನ್ನ ಆತ್ಮಸಾಕ್ಷಿ ಒಪ್ತಿಲ್ಲ. ನಾನು ಹಿಮಾಲಯದ ಮೌನಿಬಾಬಾನ ಮಗ. ವೆಂಕಣ್ಣಾಚಾರ್ಯರಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆಸ್ತಿ, ಮನೆತನ ಇದೆಲ್ಲದರ ಮೇಲೆ ತುಂಬಾ ಲೋಭ ಅವರಿಗೆ. ತಮ್ಮ ಆಸ್ತಿ ದಾಯಾದಿಗಳ ಪಾಲಾಗಬಾರದೆಂದು ಅಮ್ಮನಿಗೆ ಮೋಸ ಮಾಡಿ ಮೌನಿಬಾಬಾನಿಂದ ನನ್ನ ಹುಟ್ಟಿಗೆ ಕಾರಣರಾದರು. ವಿಷಯ ಗೊತ್ತಾಗಿ ಅಮ್ಮ ಸಾಯೊದಕ್ಕೆ ಹೋಗಿದ್ದಳಂತೆ. ವೆಂಕಣ್ಣಾಚಾರ್ಯರು ತಾವೂ ಸಾಯೋ ನಾಟಕ ಮಾಡಿದ್ದರಿಂದ ಜೀವಹತ್ಯೆಯ ಭಯದಿಂದ ಅಮ್ಮ ನಿರ್ಧಾರದಿಂದ ಹಿಂದೆ ಸರಿಬೇಕಾಯ್ತು.  ಒಂದೆರಡು ಸಲ ಮೌನಿಬಾಬಾ ಮನೆಗೆ ಬಂದಿದ್ದರು. ಅವರನ್ನು ನೋಡಿದಾಗಲೆಲ್ಲ ನನ್ನನ್ನೆ ನಾನು ನೋಡಿಕೊಂಡಂತಾಗುತ್ತಿತ್ತು. ಒಂದು ದಿನ ಬಾಬಾ ನಡೆದ ಸಂಗತಿಯನ್ನು ನನಗೆ ಹೇಳಿ ಹಿಮಾಲಯಕ್ಕೆ ಹೋಗಿಬಿಟ್ಟರು. ಅದೇ ಅವರ ಕೊನೆಯ ಭೇಟಿಯಾಯ್ತು. ಮತ್ತೆಂದೂ ಅವರು ವಾಪಸ್ಸು ಬರಲಿಲ್ಲ. ಅದಕ್ಕೆ ಆ ದಿನ ಹುಡುಗಿ ಅಪ್ಪನಿಗೆ ನಾನು ಕಮಲ್ಲಮ್ಮನವರ ಮಗ ಆದರೆ ನೀವು ತಿಳಿದುಕೊಂಡಂತೆ ವೆಂಕಣ್ಣಾಚಾರ್ಯರ ಮಗನಲ್ಲ ಅಂತ ನಿಜ ಹೇಳ್ದೆ’ ದಿಗಣ್ಣ ದೂರದಲ್ಲಿ ಮುಳುಗುತ್ತಿದ್ದ ಸೂರ್ಯನನ್ನು ನೋಡುತ್ತಿದ್ದ. ಸುತ್ತಲೂ ಗಾಢವಾದ ಕತ್ತಲು ತುಂಬಿಕೊಳ್ಳುತ್ತಿತ್ತು.

ದಿಗಣ್ಣ ವೆಂಕಣ್ಣಾಚಾರ್ಯರ ಮಗನಲ್ಲ ಎನ್ನುವ ಸುದ್ದಿ ಕೆಲವು ದಿನಗಳ ಕಾಲ ಊರಿನಲ್ಲಿ ಅದೊಂದು ಚರ್ಚೆಗೆ ಗ್ರಾಸವಾಯಿತಾದರೂ ಕ್ರಮೇಣ ಊರಿನವರ ನೆನಪುಗಳಲ್ಲಿ ಈ ವಿಷಯ ಮಸುಕಾಗತೊಡಗಿ ಒಂದು ದಿನ ಇಡೀ ಊರು ಅದನ್ನು ಮರೆತೇ ಬಿಟ್ಟಿತು. ದಿನಗಳು ಕಳೆದಂತೆ ವೆಂಕಣ್ಣಾಚಾರ್ಯರಿಗೂ ಮಗನ ಮೇಲಿನ ಸಿಟ್ಟು ಶಮನವಾಗತೊಡಗಿತು. ಕಮಲಮ್ಮನವರು ಒಂದಿಷ್ಟು ಚೇತರಿಸಿಕೊಂಡರಾದರೂ ಅವರು ತಮ್ಮ ದಿನನಿತ್ಯದ ಬಹುಪಾಲು ವೇಳೆಯನ್ನು ಹಾಸಿಗೆಯಲ್ಲಿ ಮಲಗಿಕೊಂಡೆ ಕಳೆಯಲಾರಂಭಿಸಿದರು. ನಿತ್ಯದ ಮನೆಯ ಕೆಲಸ ಕಾರ್ಯಗಳಲ್ಲಿನ ಕಮಲಮ್ಮನವರ ಅನುಪಸ್ಥಿತಿ ಹೆಚ್ಚಿದಂತೆಲ್ಲ ಆ ಮನೆಗೆ ಹೆಣ್ಣೊಬ್ಬಳ ಅವಶ್ಯಕತೆ ಅನಿವಾರ್ಯ ಅನಿಸತೊಡಗಿತು. ವೆಂಕಣ್ಣಾಚಾರ್ಯರು ಅಡುಗೆ ಮನೆಯಲ್ಲಿ ಕೈಸುಟ್ಟುಕೊಳ್ಳುವುದನ್ನು ನೋಡಲಾಗದೆಯೋ ಇಲ್ಲ ಕಮಲಮ್ಮನವರ ವೇದನೆ ತುಂಬಿದ ಮುಖ ನೋಡಿಯೋ ದಿಗಣ್ಣ ಮದುವೆಗೆ ತಾನಾಗಿಯೇ ಒಪ್ಪಿಗೆ ಸೂಚಿಸಿದ. ಈ ಹಿಂದಿನ ಕಹಿ ಅನುಭವ ಮನಸ್ಸಿನಿಂದ ಇನ್ನು ಮಾಸಿಲ್ಲದ ಕಾರಣ ಮೊದಮೊದಲು ವೆಂಕಣ್ಣಾಚಾರ್ಯರು ವಧು ಪರೀಕ್ಷೆಗೆ ಬರಲು ಹಿಂದೇಟು ಹಾಕಿದರು. ಕೊನೆಗೆ ಯಾವ ಅನುಚಿತ ವರ್ತನೆಯೂ ನಡೆಯಲಾರದೆಂದು ದಿಗಣ್ಣ ಭರವಸೆ ಕೊಟ್ಟ ಮೇಲೆಯೇ ವೆಂಕಣ್ಣಾಚಾರ್ಯರು ಹೆಣ್ಣಿನವರ ಮನೆಗೆ ವಧುಪರೀಕ್ಷೆಗೆ ಬರಲು ಒಪ್ಪಿದ್ದು. ಎಲ್ಲರಿಗೂ ಮನಸ್ಸಿಗೆ ಬಂದು ನಾಗವೇಣಿ ಸೊಸೆಯಾಗಿ ಮನೆ ತುಂಬಿದಳು. ವೆಂಕಣ್ಣಾಚಾರ್ಯರ ದುರಾದೃಷ್ಟವೋ, ಕಮಲಮ್ಮನವರ ದೌರ್ಭಾಗ್ಯವೋ ಇಲ್ಲ ದಿಗಣ್ಣನ ಹಣೆಬರಹವೋ ಈ ಮದುವೆ ಮೂರೆ ತಿಂಗಳಲ್ಲಿ ಮುರಿದು ಬಿದ್ದು ನಾಗವೇಣಿ ತವರುಮನೆ ಸೇರಿದಳು. ಹಾಗೆ ತವರುಮನೆ ಸೇರಿದ ನಾಗವೇಣಿ ತಾನೆಲ್ಲಿ ಕಳಂಕವನ್ನು ಹೊರಬೇಕಾದಿತೋ ಎಂದು ಹೆದರಿ ಎಲ್ಲದಕ್ಕೂ ದಿಗಣ್ಣನ ಮೇಲೆ ಗೂಬೆ ಕೂರಿಸಿ ಹೊರನಡೆದಿದ್ದಳು. ಅವಳು ಹೇಳಿದ್ದರಲ್ಲಿ ಸತ್ಯಾಂಶವೂ ಇತ್ತು. ನಾಗವೇಣಿ ಮಾಡಿದ್ದ ಆಪಾದನೆಗಳನ್ನೆಲ್ಲ ಸ್ವತ: ದಿಗಣ್ಣ ಕೂಡ ಯಾವ ತಕರಾರುಗಳಿಲ್ಲದೆ ಒಪ್ಪಿಕೊಂಡಿದ್ದ.

ನಡೆದದ್ದಿಷ್ಟು- ರಾತ್ರಿ ಎಂದಿನಂತೆ ಕೋಣೆಯಲ್ಲಿ ಗಂಡ ಹೆಂಡತಿ ಮಲಗಿರುವಾಗ ದಿಗಣ್ಣ ನಾಗವೇಣಿಯ ಬೆನ್ನಿನ ಮೇಲೆ ಕೈಯಾಡಿಸುತ್ತ ‘ನಾಗು ನಿನ್ನನ್ನು ಕೂಡುವಾಗಲೆಲ್ಲ ಬೇರೆ ಬೇರೆ ಹೆಂಗಸರ ಮುಖಗಳು ನನ್ನ ಕಣ್ಣೆದುರು ಬಂದು ನಾನು ಅವರನ್ನೇ ಕೂಡುತ್ತಿದ್ದಿನೇನೋ ಎನ್ನುವ ಉತ್ಕಟ ಭಾವ ಮನಸ್ಸಿನಲ್ಲಿ ಮೂಡುತ್ತೆ. ನಿನಗೂ ನನ್ನಂತೆ ಅನಿಸುತ್ತೆ ಅಲ್ವಾ’ ಎಂದು ಕೇಳಿದನಂತೆ. ಹಾಸಿಗೆಯಿಂದ ಧಗ್ಗನೇ ಎದ್ದ ನಾಗವೇಣಿ ಕೋಣೆಯಿಂದ ಹೊರಬಂದು ಅತ್ತೆ ಮಾವನಿಗೆ ವಿಷಯ ತಿಳಿಸಿ ಜೋರು ಧ್ವನಿ ತೆಗೆದು ಅಳಲಾರಂಭಿಸಿದಳು. ವೆಂಕಣ್ಣಚಾರ್ಯರು ಮತ್ತು ಕಮಲಮ್ಮ ಎಷ್ಟು ಸಮಾಧಾನ ಮಾಡಿದರೂ ಬೆಳಗಾಗುತ್ತಲೆ ಉಟ್ಟ ಬಟ್ಟೆಯ ಮೇಲೆ ತವರುಮನೆಗೆ ಹೊರಟು ನಿಂತವಳು ಹಾಗೆ ಹೋಗುವಾಗ ಬೀದಿಯಲ್ಲಿ ಎದುರಾದವರಿಗೆಲ್ಲ ನಡೆದ ಘಟನೆಯನ್ನು ವಿವರಿಸುತ್ತ ದಿಗಣ್ಣನನ್ನು ಊರಿನವರ ದೃಷ್ಟಿಯಲ್ಲಿ ಅವನೊಬ್ಬ ವಿಚಿತ್ರ ಪ್ರಾಣಿ ಎನ್ನುವಂತೆ ಚಿತ್ರಿಸಿ ಹೋದಳು. ಆದ ಈ ಆಘಾತದಿಂದ ಚೇತರಿಸಿಕೊಳ್ಳದೆ ವೆಂಕಣ್ಣಾಚಾರ್ಯರು ಮತ್ತು ಕಮಲಮ್ಮ ಹಾಸಿಗೆ ಹಿಡಿದು ಒಬ್ಬರಾದ ನಂತರ ಒಬ್ಬರು ಇಹಲೋಕ ತ್ಯಜಿಸಿ ದಿಗಣ್ಣನನ್ನು ಒಂಟಿಯಾಗಿಸಿದರು. ಅವರಿಬ್ಬರ ಸಾವಿನ ನಂತರ ದಿಗಣ್ಣ ಇದ್ದ ನೌಕರಿಯನ್ನು ಬಿಟ್ಟು ಮೌನಿಬಾಬಾರನ್ನು ಹುಡುಕುತ್ತ ಹಿಮಾಲಯಕ್ಕೆ ಹೊರಟು ಹೋದ. ಅಪ್ಪ ನನ್ನನ್ನು ಬೇರೆ ಊರಿನ ಕಾಲೇಜಿಗೆ ಸೇರಿಸಿ ಹಾಸ್ಟೆಲಿನಲ್ಲಿ ಇರುವ ವ್ಯವಸ್ಥೆ ಮಾಡಿದರು.

ಇದೆಲ್ಲ ಆಗಿ ಇಪ್ಪತ್ತು ವರ್ಷಗಳ ನಂತರ ಒಂದು ದಿನ ಆಕಸ್ಮಿಕವಾಗಿ ದಿಗಣ್ಣ ನನಗೆ ಮುಂಬಯಿಯ ದಾದರಿನ ರೈಲ್ವೆ ಸ್ಟೇಷನ್ನಿನಲ್ಲಿ ಭೇಟಿಯಾದ. ನಾನು ಸಂಸಾರೊಂದಿಗನಾಗಿ ಹೆಂಡತಿ ಮಕ್ಕಳೊಡನೆ ಮುಂಬಯಿಯಲ್ಲಿ ವಾಸಿಸುತ್ತ ಈ ಮುಂಬಯಿಯವನೇ ಆಗಿದ್ದೆ. ನೌಕರಿ ಮತ್ತು ಸಂಸಾರದ ತಾಪತ್ರಯಗಳ ನಡುವೆಯೂ ನಾನು ದಿಗಣ್ಣನನ್ನು ಮರೆತಿರಲಿಲ್ಲ. ನಮ್ಮ ಮಾತುಗಳ ನಡುವೆ ಅವನು ಆಗಾಗ ಸುಳಿದು ಹೋಗುತ್ತಿದ್ದ. ಇದುವರೆಗೂ ಕೇವಲ ಮಾತಿನಲ್ಲಿ ಬಂದುಹೋಗುತ್ತಿದ್ದ ದಿಗಣ್ಣನನ್ನು ಮನೆಗೆ ಕರೆದೊಯ್ದು ಹೆಂಡತಿ ಮಕ್ಕಳಿಗೆ ‘ನೋಡಿ ನನ್ನ ಪ್ರೀತಿಯ ದಿಗಣ್ಣನನ್ನು’ ಎಂದು ತೋರಿಸುವ ಉಮೇದಿ ಮೂಡಿದ್ದೆ ‘ದಿಗಣ್ಣಾ’ ಎಂದು ಜೋರಾಗಿ ಕೂಗಿದೆ. ಈಗ ಬಿಟ್ಟರೆ ಮುಂದೆಂದೂ ಅವನು ನನಗೆ ಸಿಗುವುದಿಲ್ಲವೇನೋ ಎನ್ನುವಂತಿತ್ತು ನನ್ನ ಜೋರಾದ ಕೂಗು. ಎದುರು ನಿಂತವನನ್ನೊಮ್ಮೆ ದಿಟ್ಟಿಸಿದೆ ಇಪ್ಪತ್ತು ವರ್ಷಗಳ ಹಿಂದೆ ನೋಡಿದ್ದ ಅದೇ ನಿಲುವು, ಅದೇ ಮುಖದ ಭಾವ. ಕೂದಲು ನೆರೆತು ಒಂದಿಷ್ಟು ವಯಸ್ಸಾದವನಂತೆ ಕಂಡದ್ದು ಹೊರತುಪಡಿಸಿದರೆ ಯಾವ ಬದಲಾವಣೆಯೂ ಕಾಣಿಸಲಿಲ್ಲ. ‘ದಿಗಣ್ಣ ನಾನು ನಿನ್ನ ಅನಂತು’ ಅವನನ್ನು ನೋಡಿದ ಸಂತೋಷದಲ್ಲಿ ನಾನು ದಿಗಣ್ಣನ ‘ಅನಂತು’ ಆಗಿದ್ದೆ. ನನ್ನನ್ನು ನೋಡಿ ದಿಗಣ್ಣನ ಮುಖ ಖುಷಿಯಿಂದ ಅರಳಿತು. ಬರೀ ಮಾತಿನಲ್ಲಿ ಬರುತ್ತಿದ್ದವನು ಈಗ ಮನೆಗೇ ಬಂದಾಗ ಹೆಂಡತಿ ಮಕ್ಕಳಿಗೂ ಖುಷಿಯಾಯಿತು. ಅವನು ನಮ್ಮಲ್ಲಿರುವಷ್ಟು ದಿನಗಳು ಎಲ್ಲರೂ ಪ್ರೀತಿಯಿಂದಲೇ ನೋಡಿಕೊಂಡೆವು. ಗೇಟ್ ವೇ ಆಫ್ ಇಂಡಿಯಾ, ಹಾಜಿ ಅಲಿ ದರ್ಗಾ, ಸಿದ್ದಿವಿನಾಯಕ ಗುಡಿ, ಸಮುದ್ರದ ಕಿನಾರೆ ಎಲ್ಲ ಸುತ್ತಾಡಿ ಚೌಪಾಟಿಯಲ್ಲಿ ವಡಾಪಾವ್ ತಿಂದು ರೀಗಲ್‍ನಲ್ಲಿ ಅವನ ಮೆಚ್ಚಿನ ಕಮಲ್ ಹಾಸನನ ‘ಇಂಡಿಯನ್’ ಸಿನಿಮಾ ನೋಡಿ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ದಿಗಣ್ಣ ಕೇಳಿದ ‘ಅನಂತು ಮುಂಬಯಿಯಲ್ಲಿ ಸೂಳೆಯರ ಕೇರಿ ಇದೆಯಂತಲ್ಲ. ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗ್ತಿಯೇನೋ. ಊರಿಂದ ಬಂದಿರೊದಕ್ಕೆ ಅದೇ ಕಾರಣ’ ಅವನ ಧ್ವನಿಯಲ್ಲಿನ ದೈನ್ಯತೆಗೆ ಕರಗಿಹೋದೆ. ‘ಯಾಕೆ ದಿಗಣ್ಣ ಚುಕ್ಕಿನ ಹುಡುಕಬೇಕಾ?’ ಅವನ ಸ್ವಭಾವ ಎಂಥದ್ದೆಂದು ಗೊತ್ತಿತ್ತು. ‘ಸಾಯೋ ಮೊದಲು ಅವಳನ್ನೊಮ್ಮೆ ನೋಡಬೇಕು. ಅದೊಂದು ಆಸೆ ಉಳಿದುಬಿಟ್ಟಿದೆ ಕಣೋ’ ದಿಗಣ್ಣನ ಧ್ವನಿಯಲ್ಲಿ ಬೇಡಿಕೆಯಿತ್ತು. ಚುಕ್ಕಿ ದಿಗಣ್ಣನ ಊರಿಗೆ ಕೆಲಸಕ್ಕೆಂದು ವಲಸೆ ಬಂದ ಕುಟುಂಬದ ಮಗಳು. ನೋಡಲು ತುಂಬ ಸುಂದರಳಾಕೆ. ದಿಗಣ್ಣನ ಬದುಕಿನಲ್ಲಿ ಹಿತವಾದ ತಂಗಾಳಿಯಾಗಿ ಸುಳಿದುಹೋದ ಹೆಣ್ಣವಳು. ಅವನ ಬದುಕಿನಲ್ಲಿ ಸಂತಸದ ಘಳಿಗೆ ಎನ್ನುವುದೇನಾದರೂ ಇದ್ದರೆ ಅದು ಚುಕ್ಕಿ ಅವನ ಬದುಕಿನಲ್ಲಿ ಬಂದ ಕ್ಷಣ ಮಾತ್ರ. ಹೀಗೆ ಅನಿರೀಕ್ಷಿತವಾಗಿ ದಿಗಣ್ಣನ ಬದುಕನ್ನು ಪ್ರವೇಶಿಸಿದ ಚುಕ್ಕಿ ಅಷ್ಟೆ ಅನಿರೀಕ್ಷಿತವಾಗಿ ಮರೆಯಾಗಿ ಹೋದಳು. ಅವಳು ಎಲ್ಲಿ ಹೋದಳೆನ್ನುವುದೇ ಬಿಡಿಸಲಾಗದ ಒಗಟಾಗಿತ್ತು. ಅವಳನ್ನು ಮುಂಬಯಿ ಮಹಾನಗರದ ರೆಡ್ ಲೈಟ್ ಎರಿಯಾದಲ್ಲಿ ನೋಡಿದ್ದಾಗಿ ಕೆಲವರು ಸುದ್ದಿ ಹಬ್ಬಿಸಿದರು. ಆ ಘಟನೆಯ ನಂತರ ದಿಗಣ್ಣ ಮೌನದ ಚಿಪ್ಪಿನೊಳಗೆ ಸೇರಿಕೊಂಡ. 

ಬೆಳಗ್ಗೆ ನಾನು ಎದ್ದು ಕೆಳಗಿಳಿದು ಬಂದಾಗ ಹಾಲ್‍ನಲ್ಲಿ ದಿಗಣ್ಣ ಊರಿಗೆ ಹೊರಡಲು ತಯ್ಯಾರಾಗಿ ಕುಳಿತಿದ್ದ. ಚುಕ್ಕಿ ದೂರದಲ್ಲೆಲ್ಲೊ ಸುಖವಾಗಿರುವಳೆಂದು ಭಾವಿಸಿರುವ ತನಗೆ ಅವಳು ತನ್ನ ಕಲ್ಪನೆಯಲ್ಲಿ ಹಾಗೆ ಇರಲಿ ಎಂದ. ಅವನ ಮನಸ್ಥಿತಿಯೇ ವಿಚಿತ್ರವೆನಿಸಿತು. ರೈಲು ನಿಲ್ದಾಣದವರೆಗೂ ಜೊತೆಗೆ ಹೋದೆ. ‘ದಿಗಣ್ಣ ಯಾರಾದರೂ ಹೆಂಡತಿಗೆ ಅಂಥ ಪ್ರಶ್ನೆ ಕೇಳ್ತಾರಾ?’ ಅಂದು ಅರ್ಥವಾಗದೆ ಉಳಿದಿದ್ದ ಘಟನೆ ಈಗ ಪ್ರಶ್ನೆಯಾಗಿ ಹೊರಬಂದಿತ್ತು. ಪ್ರತ್ಯೇಕವಾಗಿ ಸಾಗಿ ದೂರದಲ್ಲೆಲ್ಲೊ ಒಂದಾಗಿವೆಯೇನೋ ಎನ್ನುವ ಭ್ರಮೆ ಹುಟ್ಟಿಸುವ ರೈಲು ಹಳಿಗಳನ್ನೇ ದಿಟ್ಟಿಸುತ್ತ ದಿಗಣ್ಣ ಉತ್ತರಿಸಿದ ‘ಅದು ಅವಳ ಮೇಲಿನ ಅನುಮಾನ, ಸಂಶಯ ಎನ್ನುವ ಸಂಗತಿಯಾಗಿರಲಿಲ್ಲ ಅನಂತು. ನನಗನ್ನಿಸುವುದು ಬೇರೆಯವರಿಗೂ ಅನಿಸಬಹುದೇನೋ ಎಂದು ತಿಳಿದುಕೊಳ್ಳಬೇಕೆನ್ನುವುದು ಮಾತ್ರ ಆ ಸಂದರ್ಭದ ಮಾತಿನ ಅಗತ್ಯವಾಗಿತ್ತು’. ಒಮ್ಮೊಮ್ಮೆ ಅರ್ಥವಾಗದಷ್ಟು ದಿಗಣ್ಣ ಸಂಕೀರ್ಣನಾಗುತ್ತಿದ್ದ. ರೈಲು ಕಣ್ಮರೆಯಾಗುವವರೆಗೂ ಕಿಟಕಿಯ ಹೊರಗಿನಿಂದ ಗಾಳಿಯಲ್ಲಿ ಅಲ್ಲಾಡುತ್ತಿದ್ದ ಅವನ ಕೈಯನ್ನೆ ನೋಡುತ್ತ ನಿಂತಿದ್ದೆ.

ಈ ಸಲದ ಬೇಸಿಗೆಯಲ್ಲಿ ಸಂಬಂಧಿಕರ ಮನೆಯ ಮದುವೆಗೆಂದು ಊರಿಗೆ ಹೋದವನು ಒಂದು ದಿನ ಬಿಡುವು ಮಾಡಿಕೊಂಡು ದಿಗಣ್ಣನ ಊರಿಗೂ ಹೋಗಿದ್ದೆ. ಮುಖಕ್ಕೆ ಮಾಸ್ಕ್ ಕೈಗಳಿಗೆ ಗ್ಲೌಜ್ ತೊಟ್ಟಿದ್ದ ದಿಗಣ್ಣ ವಿಚಿತ್ರವಾಗಿ ಕಂಡ. ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು ಆ ಜಾಗದಲ್ಲಿ ಬೆಳೆದ ಹುಲ್ಲು ಒಣಗಿ ನಿಂತಿತ್ತು. ಸೊರಗಿದ್ದ ದಿಗಣ್ಣನ ದೇಹಕ್ಕೆ ಮುಪ್ಪು ಆವರಿಸಿತ್ತು. ‘ಯಾಕೆ ದಿಗಣ್ಣ ಹೀಗೆ’ ಹೊಟ್ಟೆಯಲ್ಲಿ ಹುಟ್ಟಿದ ಸಂಕಟ ಕಣ್ಣೀರಾಗಿ ಹೊರಬಂತು. ‘ಅನಂತು ಮನುಷ್ಯನನ್ನು ಮನುಷ್ಯ ಮುಟ್ಟಿಸಿಕೊಂಡರೆ ಅದೇನೋ ಮಹಾರೋಗ ಬರುತ್ತಂತೆ. ಎಲ್ಲಿ ಮನುಷ್ಯ ಸ್ಪರ್ಷದಿಂದ ನನಗೇನಾಗುತ್ತೊ ಅನ್ನುವ ಭಯಕ್ಕೆ ಇದೆಲ್ಲ ಸಿದ್ಧತೆ ನೋಡು’ ದಿಗಣ್ಣ ಮತ್ತಷ್ಟು ಒಗಟಾಗಿ ಕಂಡ. ನನ್ನಿಷ್ಟದ ಅವರೆಕಾಳು ಉಪ್ಪಿಟ್ಟು ಮಾಡಿ ಉಪಚರಿಸಿದ. ಮಾತಿನ ನಡುವೆ ‘ಇದು ಈಗ ನನ್ನ ಮನೆಯಲ್ಲ ಅನಂತು. ಈ ಮನೆ, ಆಸ್ತಿ ಎಲ್ಲ ಹನೀಫಾಗೆ ಸೇರಿದ್ದು. ದೇಹದಲ್ಲಿ ಜೀವ ಇರೊವರೆಗೂ ಇಲ್ಲಿರಲು ಅವಳೇ ಅವಕಾಶ ಕೊಟ್ಟಿದ್ದಾಳೆ’ ದಿಗಣ್ಣ ಹೇಳಿದ್ದು ಅಚ್ಚರಿ ಮೂಡಿಸಿತು. ಅವನ ಮಾತು ಅರ್ಥವಾಗದೆ ಹುಬ್ಬೆರಿಸಿದ ನನ್ನನ್ನು ನೋಡಿ ದಿಗಣ್ಣನೆ ಮಾತು ಮುಂದುವರೆಸಿದ, ‘ವೆಂಕಣ್ಣಾಚಾರ್ಯರು ಸಾಯೊದಕ್ಕೆ ಮೊದಲೇ ತಮ್ಮ ಆಸ್ತಿನೆಲ್ಲ ನನ್ನ ಹೆಸರಿಗೆ ವರ್ಗಾಯಿಸಿದ್ದರು. ಅಮ್ಮ, ಅಪ್ಪ ಸತ್ತ ಮೇಲೆ ಎರಡು ವರ್ಷ ಹಿಮಾಲಯದಲ್ಲಿ ಅಲೆದಾಡಿದೆ. ಮನಸ್ಸಿಗೆ ಸಮಾಧಾನ ಸಿಗಲಿಲ್ಲ. ಊರು ಮನೆ ನೆನಪಾಗಿ ಮರಳಿ ಬಂದವನಿಗೆ ಅಸ್ತಿತ್ವದ ಪ್ರಶ್ನೆ ಕಾಡೊದಕ್ಕೆ ಶುರುವಾಯ್ತು. ನಾನು ಈ ವಂಶಕ್ಕೆ ಸೇರಿದವನೇ ಅಲ್ಲ ಅಂದಮೇಲೆ ಆಸ್ತಿಯನ್ನು ಅನುಭವಿಸಲು ನೈತಿಕ ಪ್ರಶ್ನೆ ಮುಂದೆ ಬಂತು. ಆಸ್ತಿನ ಏನು ಮಾಡಬೇಕು ಅಂತ ಒಂದು ದಿನ ಯೋಚಿಸ್ತಾ ಕುಳಿತಿದ್ದಾಗ ಈ ಹನೀಫಾಳ ಮುಖ ಕಣ್ಣೆದುರು ಸುಳಿಯಿತು. ನಿನಗೆ ನಾರಾಯಣಕಾಕಾ ಗೊತ್ತಿರಬಹುದು ಅಂದರೆ ವೆಂಕಣ್ಣಾಚಾರ್ಯರ ತಮ್ಮ. ಅವನು ತನ್ನ ತೆವಲು ತೀರೊವರೆಗೂ ಹನೀಫಾಳ ಜೊತೆ ಮಲಗಿ ಎರಡು ಮಕ್ಕಳು ಹುಟ್ಟಿದ್ದೆ ಅವಳಿಂದ ದೂರಾದ. ಊರಿನವರು ಎಷ್ಟು ಹೇಳಿದರೂ ಒಂದು ಬಿಡಿಗಾಸು ಬಿಚ್ಚಲಿಲ್ಲ. ಪಾಪ ಹನೀಫಾ ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಅನಾಥಳಾದವಳು ನಾರಾಯಣಚಾರ್ಯರನ್ನು ನಂಬಿ ಮೋಸ ಹೋದಳು. ಎರಡು ಹೆಣ್ಣುಮಕ್ಕಳು ಬೇರೆ ಅವಳಿಗೆ. ಹೇಗಿದ್ದರೂ ಆ ಮಕ್ಕಳು ಆಚಾರ್ಯರ ವಂಶಕ್ಕೆ ಸೇರಿದವರು. ನನಗಿಂತ ಈ ಆಸ್ತಿಯ ಮೇಲೆ ಅವರಿಗೆ ಅಧಿಕಾರ ಹೆಚ್ಚು. ಅದಕ್ಕೆಂದೆ ಈ ಮನೆ, ಹೊಲ, ತೋಟ ಎಲ್ಲ ಹನೀಫಾಳ ಹೆಸರಿಗೆ ಬರೆದು ಬಿಟ್ಟಿದ್ದೀನಿ. ಅನಂತು ಕೊನೆಗೂ ಆ ದೊಡ್ಡ ಭಾರ ಇಳಿಸಿಕೊಂಡು ಈಗ ಹಗುರಾಗಿದ್ದೀನಿ ನೋಡು’. ನನ್ನ ಎದೆಯ ಗೂಡೊಳಗೆ ಕಟ್ಟಿಕೊಂಡಿದ್ದ ದಿಗಣ್ಣನ ಪುಟ್ಟ ಮೂರ್ತಿ ಈಗ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಮುಖದ ಮಾಸ್ಕ್ ಕೈಗಳ ಗ್ಲೌಜ್‍ಗಳನ್ನು ಕಳಚಿಟ್ಟವನು ಹತ್ತಿರ ಬಂದು ನನ್ನೆರಡು ಕೈಗಳನ್ನು ಭದ್ರವಾಗಿ ಹಿಡಿದುಕೊಂಡ. ‘ಭಾಳ ದಿನಗಳ ನಂತರ ರಕ್ತ, ಮಾಂಸ ಮತ್ತು ಮನುಷ್ಯತ್ವ ತುಂಬಿರುವ ಒಬ್ಬ ಮನುಷ್ಯನನ್ನು ಸ್ಪರ್ಷಿಸಿದಂತಾಯಿತು ನೋಡೋ ಅನಂತು’ ಎಂದು ದೊಡ್ಡ ಮಾತನಾಡಿದ. ಅವನ ಕೈಗಳು ಗ್ಲೌಜಿನ ಒಳಗಡೆಯ ಬಿಸಿಗೆ ಬೆವರೊಡೆದು ಹಸಿಯಾಗಿದ್ದವು. ಕಾಳು ಕಡಿಗಳ ಸಣ್ಣ ಸಣ್ಣ ಗಂಟುಗಳನ್ನೆಲ್ಲ ಒಂದು ಚೀಲಕ್ಕೆ ಸೇರಿಸಿ ‘ಮಕ್ಕಳೊಂದಿಗ ಯಾವುದಕ್ಕೂ ಇರಲಿ’ ಎಂದು ಹೆಗಲ ಮೇಲೆ ಹೊತ್ತುಕೊಂಡು ಬಸ್‍ಸ್ಟ್ಯಾಂಡ್‍ವರೆಗೂ ಬಂದ ನನ್ನ ದಿಗಣ್ಣನನ್ನು ಬದುಕಿನ ಈ ಪಯಣದಲ್ಲಿ ಮತ್ತೊಮ್ಮೆ ಭೇಟಿಯಾಗಲಾರೆನೇನೋ ಎಂದೆನಿಸಿ ಕಣ್ಣುಗಳು ಒದ್ದೆಯಾದವು. ಕೆಳಗೆ ನಿಂತು ಕೈಬೀಸುತ್ತಿದ್ದ ದಿಗಣ್ಣ ಇದೇ ಬಸ್‍ಸ್ಟ್ಯಾಂಡಿನಲ್ಲಿ ವೆಂಕಣ್ಣಾಚಾರ್ಯರ ಕೈಹಿಡಿದು ಬಸ್ಸಿನಿಂದಿಳಿದ ಆ ಪುಟ್ಟ ಪೋರ ಅನಂತುಗೆ ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕಾಣಿಸಿದ ಥೇಟ್ ಆ ದಿಗಣ್ಣನೇ ಅನಿಸಿತು. 

ಸಾಯುವಾಗ ಕೂಡ ದಿಗಣ್ಣ ಮುಖಕ್ಕೆ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಜ್‍ಗಳನ್ನು ಧರಿಸಿಯೇ ಇದ್ದನಂತೆ.

-ರಾಜಕುಮಾರ ಕುಲಕರ್ಣಿ


Tuesday, November 2, 2021

ಪ್ರತಿಮನೆಗೂ ಬೇಕು ಹಿರಿಯ ಜೀವ

       

(೨೦.೦೯.೨೦೨೧ ರ   ಪ್ರಜಾವಾಣಿಯಲ್ಲಿ ಪ್ರಕಟ)

             ನನ್ನ ಬಂಧುವೊಬ್ಬರು ತುಂಬ ಶಿಸ್ತಿನ ಮನುಷ್ಯ. ಇತ್ತೀಚೆಗೆ ಎರಡು ದಿನಗಳ ಕಾಲ ಹೆಂಡತಿ ಮತ್ತು ಮಗಳೊಂದಿಗೆ ಅವರ ಮನೆಯಲ್ಲಿ ತಂಗಬೇಕಾದ ಪ್ರಸಂಗ ಎದುರಾಯಿತು. ಆ ಎರಡು ದಿನಗಳು ನಮಗೆ ಅಕ್ಷರಶ: ಜೈಲಿನಲ್ಲಿದ್ದ ಅನುಭವವಾಯಿತು. ಅವರ ಮನೆಯಲ್ಲಿ ಧ್ವನಿ ಎತ್ತರಿಸಿ ಮಾತನಾಡುವಂತಿಲ್ಲ, ಜೋರಾಗಿ ನಗುವಂತಿಲ್ಲ, ಸೀನು ಕೆಮ್ಮುಗಳಿಗೆ ಅವಕಾಶವೇ ಇಲ್ಲ, ಅಪಾನುವಾಯುವನ್ನು ಕೂಡ ಜಠರದೊಳಗೇ ಇಂಗಿಸಿಕೊಳ್ಳಬೇಕು. ನನಗೋ ಚಹಾ ಬಾಯಿ ಚಪ್ಪರಿಸಿ ಕುಡಿದೇ ರೂಢಿ. ಹಾಗೆ ಕುಡಿದಾಗಲೇ ಬಾಯಿಗೂ ಮತ್ತು ಭಾವಕ್ಕೂ ತೃಪ್ತಿ. ಆದರೆ ಬಾಯಿಚಪ್ಪರಿಸುವುದಾಗಲಿ, ಕಚ್ಚಿ ನೀರು ಕುಡಿಯುವುದಾಗಲಿ ಅನಾಗರೀಕತೆಯ ಲಕ್ಷಣ ಎಂದು ಭಾವಿಸಿದ ಮನೆಯದು. ಆ ಮನೆಯ ಜನ ಮಾತಿನಲ್ಲಷ್ಟೇ ತೂಕಬದ್ಧರಲ್ಲ ಆಹಾರವನ್ನು ಕೂಡ ಅವರು ತೂಗಿಯೇ ತಿನ್ನುವರು. ವಯಸ್ಸಾದ ಅಜ್ಜಿಯೊಬ್ಬರಿದ್ದಾರೆ ಅವರ ಮನೆಯಲ್ಲಿ. ಬದುಕಿನ ಬಹುಭಾಗ ಹಳ್ಳಿಯಲ್ಲೇ ಕಳೆದವಳು ಈಗ ವಯಸ್ಸಾಗಿದೆಯೆಂದು ಆಶ್ರಯಕ್ಕಾಗಿ ಮಗನ ಮನೆಗೆ ಬಂದಿರುವಳು. ನಗರ ಬದುಕಿನ ನಾಗರೀಕತೆಯ ಸ್ಪರ್ಷ ಆ ಅಜ್ಜಿಗೆ ಇನ್ನು ಸೋಕಿಲ್ಲದ ಕಾರಣ ಮನೆಯ ಸದಸ್ಯರಿಗೆ ಅವಳನ್ನು ಸಂಭಾಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.  ನಾವಿದ್ದ ಸಮಯದಲ್ಲೇ ತುಂಬ ಸಿವಿಲೈಜ್ಡ್ ಕುಟುಂಬವೊಂದು ಆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಗೊಂಡಿದ್ದ ಕಾರಣ ಅಜ್ಜಿಯನ್ನು ಒಂದು ದಿನದ ಮಟ್ಟಿಗೆ ದೂರದ ಸಂಬಂಧಿಕರ ಮನೆಗೆ ಸಾಗಹಾಕಲಾಯಿತು. ಅದುವರೆಗೂ ಸಮಾಜದಲ್ಲಿ ತಾವು ಕಾಯ್ದುಕೊಂಡುಬಂದಿದ್ದ ಗೌರವ, ಪ್ರತಿಷ್ಠೆಗೆ ಆ ಅನಾಗರೀಕ ಅಜ್ಜಿಯಿಂದ ಧಕ್ಕೆ ಬರಬಹುದೆನ್ನುವ ಆತಂಕ ಅವರದಾಗಿತ್ತು. ಪ್ರತಿರೋಧಿಸುವುದು ಎಲ್ಲಿ ಅನಾಗರೀಕತೆಯಾದಿತೋ ಎಂದು ಹೆದರಿ ಬಾಯಿಮುಚ್ಚಿ ಕುಳಿತುಕೊಳ್ಳಬೇಕಾದ ಅಸಹಾಯಕತೆ ನನ್ನದಾಗಿತ್ತು. ಆ ಅಸಹಾಯಕತೆಯೂ ಒಂದರ್ಥದಲ್ಲಿ ಅನಾಗರೀಕತೆಯ ರೂಪಾಂತರವಾಗಿತ್ತು ಎಂದು ಈಗ ನನಗನಿಸುತ್ತಿದೆ.

  ಆಧುನಿಕ ನಾಗರೀಕತೆಯ ಇನ್ನೊಂದು ಘಟನೆ ಹೀಗಿದೆ. ನನ್ನ ಪರಿಚಿತರೊಬ್ಬರು ಮಗಳಿಗೆ ಗಂಡು ಹುಡುಕುತ್ತಿರುವರು. ಸಾಫ್ಟ್ ವೇರ್ ಓದಿರುವ ಮಗಳನ್ನು ಸಾಫ್ಟ್ ಆದ ಕುಟುಂಬಕ್ಕೆ ಸೇರಿಸುವ ಇರಾದೆ ಅವರದು. ಅವರ ಆದ್ಯತೆಗಳ ಪಟ್ಟಿಯೇನೂ ಉದ್ದವಾಗಿಲ್ಲ. ಗಂಡು ಸಾಫ್ಟ್ ವೇರ್  ಉದ್ಯೋಗಿಯಾಗಿದ್ದು ಸ್ವಂತಕ್ಕೊಂದು ಸೂರಿದ್ದರೆ ಸಾಕು. ಆದರೆ ಇನ್ನುಳಿದ ಬೇಡಿಕೆಗಳು ಬೆಚ್ಚಿಬೀಳಿಸುವಂತಿವೆ. ತಂದೆ ತಾಯಿಗೆ ಒಬ್ಬನೇ ಮಗನಾಗಿರಬೇಕು. ನಾದಿನಿಯರ ಕಾಟದಿಂದ ಮನೆ ಮುಕ್ತವಾಗಿರಬೇಕಾದ ಕಾರಣ ಮದುವೆಯ ಗಂಡಿಗೆ ಅಕ್ಕ-ತಂಗಿಯರ ಅಗತ್ಯವಿಲ್ಲ. ಅಪ್ಪ-ಅಮ್ಮ ಸ್ವರ್ಗಸ್ಥರಾಗಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ದೊಡ್ಡಪ್ಪ, ಚಿಕ್ಕಪ್ಪ, ಸೋದರತ್ತೆ, ಸೋದರಮಾವ ಈ ಎಲ್ಲ ಸಂಬಂಧಗಳಿಂದ ಮದುವೆಗಂಡು ಒಂದು ನಿರ್ಧಿಷ್ಟ ಅಂತರವನ್ನು ಕಾಯ್ದುಕೊಂಡಿರಬೇಕು. ಒಟ್ಟಾರೆ ಬಂಧು-ಬಳಗ ಇಲ್ಲದ ಅನಾಥನಾಗಿದ್ದರೆ ಮೊದಲ ಆದ್ಯತೆ. ಬಹುತೇಕ ಕನ್ಯಾಮಣಿಗಳ ಅಪ್ಪ-ಅಮ್ಮಂದಿರ ಬೇಡಿಕೆಗಳಿವು. ಹಾಗೆಂದು ಇದನ್ನು ಅನಾಗರೀಕತೆ ಎಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಆಧುನಿಕ ಸಮಾಜದ ಸುಶಿಕ್ಷಿತ ಅಪ್ಪ ಅಮ್ಮಂದಿರ ನಾಗರೀಕ ಬೇಡಿಕೆಗಳಿವು. 

   ಆಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಮಾಹಿತಿ ಪ್ರಸರಣ ಅತೀ ವೇಗವನ್ನು ಪಡೆದುಕೊಂಡಿದೆ. ಕ್ಷಣಮಾತ್ರದಲ್ಲಿ ಸುದ್ಧಿಯನ್ನು ತಲುಪಿಸಲು ಅತ್ಯಾಧುನಿಕ ವ್ಯವಸ್ಥೆಯನ್ನು ತಂತ್ರಜ್ಞಾನ ಕಲ್ಪಿಸಿಕೊಟ್ಟಿದೆ. ಸುದ್ಧಿ ಬಿತ್ತರಣೆಯ ವ್ಯಾಮೋಹಕ್ಕೆ ಬಲಿಯಾದ ಮನುಷ್ಯ ಶುದ್ಧ ಎಡಬಿಡಂಗಿಯಂತೆ ವರ್ತಿಸುತ್ತಿರುವನು. ರಸ್ತೆ ಅಪಘಾತ, ಬೆಂಕಿ ಅಪಘಾತದಂಥ ದುರಂತದ ಸಂದರ್ಭದಲ್ಲೂ ಮನುಷ್ಯತ್ವದ ಸಂವೇದನೆಯನ್ನೇ ಕಳೆದುಕೊಂಡು ಘಟನೆಯನ್ನು ಚಿತ್ರೀಕರಿಸಿ ಶೀಘ್ರವಾಗಿ ಮಾಹಿತಿಯನ್ನು ಇತರರಿಗೆ ತಲುಪಿಸುವ ಧಾವಂತಕ್ಕೆ ಒಳಗಾಗುತ್ತಿರುವನು. ಸಂಗತಿಯೊಂದನ್ನು ವಿಶ್ಲೇಷಿಸಿ ವಿಮರ್ಶಿಸುವ ವ್ಯವಧಾನವಾಗಲಿ ಸಂಯಮವಾಗಲಿ ಇಲ್ಲದ ಮನುಷ್ಯ ಮಾಡುತ್ತಿರುವುದು ಸುದ್ಧಿಯ ವಿಲೇವಾರಿಯೊಂದೇ. ಎಲೆಕ್ಟ್ರಾನಿಕ್ ವಾಹಿನಿಗಳಲ್ಲಿ ಕಿರಿಚಾಡುವ ಸುದ್ಧಿ ಓದುಗರನ್ನು ನೋಡುವಾಗಲೆಲ್ಲ ಅವರು ಸಂವೇದನಾರಹೀತರೇನೋ ಎಂದು ಭಾಸವಾಗುತ್ತದೆ. ತನ್ನ ನೆರೆಹೊರೆಯವರ ಮುಖಪರಿಚಯವೂ ಇಲ್ಲದ ಮನುಷ್ಯ  ಸಮಾಜಮುಖಿಯಾಗುತ್ತಿರುವುದು ಈ ವಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲೆ. ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಬದುಕನ್ನು ದ್ವೀಪವಾಗಿಸಿಕೊಂಡಿರುವ ವiನುಷ್ಯ ಇಡೀ ಪ್ರಪಂಚ ತನ್ನ ಅಂಗೈಯಲ್ಲಿದೆ ಎಂದು ಭ್ರಮಿಸುತ್ತಿರುವನು. ಸಾವಿನ ಮನೆಯ ಸೂತಕವೂ ಇವತ್ತು ಪ್ರಸರಣಕ್ಕೆ ಯೋಗ್ಯವಾದ ಸಂಗತಿಯಾಗಿದೆ. ನನ್ನ ಸ್ನೇಹಿತರೋರ್ವರು ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡ ಅವರ ತಂದೆಯ ಸಾವಿನ ಸುದ್ಧಿಗೆ ಸರಿಸುಮಾರು ನೂರು ಕಾಮೆಂಟ್‍ಗಳು ಮತ್ತು ಐದುನೂರು ಲೈಕ್‍ಗಳು ಪ್ರಾಪ್ತವಾಗಿದ್ದವು. ವಿಪರ್ಯಾಸವೆಂದರೆ ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನದಲ್ಲಿ ಹಾಜರಿದ್ದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಆಧುನಿಕ ಪರಿವೇಷ ಧರಿಸಿರುವ ಇಂಥ (ಅ)ನಾಗರೀಕತೆಗಳನ್ನು ನೋಡುತ್ತಿದ್ದರೆ ನನಗೆ ನನ್ನೂರಿನ ಗಂಗಜ್ಜಿ ನೆನಪಾಗುತ್ತಾಳೆ. ಹತ್ತು ಹಡೆದು ಗಂಡನೊಡನೆ ಮಣ್ಣಲ್ಲಿ ಮಣ್ಣಾಗಿ ದುಡಿದು ಬದುಕು ಕಟ್ಟಿಕೊಂಡ ಗಂಗಜ್ಜಿ ಅವಿಭಕ್ತ ಕುಟುಂಬದ ಸದಸ್ಯೆ. ಈಗ ವಯಸ್ಸಾಗಿದೆ. ಮನೆಯ ಯಜಮಾನಿಕೆಯನ್ನು ಸೊಸೆಯಂದಿರಿಗೆ ಒಪ್ಪಿಸಿ ಊರ ಉಸಾಬರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವಳು. ಊರಿನ ಯಾರದೇ ಮನೆಯ ಶುಭ, ಅಶುಭ ಕಾರ್ಯಗಳಿರಲಿ ಅಲ್ಲಿ ಗಂಗಜ್ಜಿ ಹಾಜರಿರುತ್ತಾಳೆ. ಮನೆಯ ಹಿರಿತನದ ಜವಾಬ್ದಾರಿ ವಹಿಸಿಕೊಂಡು ಸಲಹೆ ನೀಡುತ್ತಾಳೆ. ಆ ಮನೆಯವರ ಹಿಗ್ಗಿನ ಸಂಭ್ರಮದಲ್ಲಿ ಪಾಲ್ಗೊಂಡು ತಾನೂ ಸಂಭ್ರಮಿಸುತ್ತಾಳೆ. ಸಾವಿನ ಮನೆಯಾಗಿದ್ದರೆ ಆ ಕುಟುಂಬದ ಸದಸ್ಯರ ದು:ಖದಲ್ಲಿ ಭಾಗಿಯಾಗಿ ಅವರ ಕಣ್ಣೊರಿಸುತ್ತಾಳೆ. ಯಾರದೋ ಮನೆಯ ರಚ್ಚೆಹಿಡಿದ ಮಗು ಅವಳ ಸೊಂಟದಲ್ಲಿ ಕುಳಿತು ಅಳು ಮರೆಯುತ್ತದೆ. ಅತಿಥಿ ಸತ್ಕಾರದಲ್ಲಿ ಗಂಗಜ್ಜಿ ಅಕ್ಷರಶ: ಮಾತೃ ಸಮಾನಳು. ಅತಿಥಿಗಳಿಗೆ ಹೊಟ್ಟೆ ಬಿರಿಯುವಂತೆ ಉಣಿಸಿದರೇ ಅವಳಿಗೆ ಸಮಾಧಾನ. ನಾಗರೀಕತೆಯ ಯಾವ ಶಿಷ್ಠಾಚಾರಕ್ಕೂ ಅವಳು ಒಳಗಾಗಿಲ್ಲ. ಬಾಯಿತುಂಬ ಕವಳ ಹಾಕಿಕೊಂಡು ಅಂಗಳದಲ್ಲೆಲ್ಲ ಉಗುಳುತ್ತಾಳೆ. ಹಾಳಾದ್ದು ಹೊರಗೆ ಹಾಕದಿದ್ದರೆ ದೇಹ ಪ್ರಕೃತಿಗೆ ಕೇಡೆಂದು ಬೈಯುತ್ತಲೆ ಕುಂಡೆ ಎತ್ತಿ ಕುಳಿತಲ್ಲೇ ಹೂಸು ಬಿಡುತ್ತಾಳೆ. ಆಧುನಿಕತೆಗೆ ಪಕ್ಕಾದ ಮೊಮ್ಮಕ್ಕಳಿಗೆ ಗಂಗಜ್ಜಿಯ ವರ್ತನೆ ಅನಾಗರೀಕವಾಗಿ ಕಾಣಿಸುತ್ತಿದೆ.

ಶಿಕ್ಷಣದೊಂದಿಗೆ ಆಧುನಿಕತೆ ಜೊತೆಗೂಡಿ ಮನುಷ್ಯನ ಭಾವನೆಗಳು ಜಡವಾಗುತ್ತಿವೆ. ಸಂಬಂಧಗಳು ಸಂಕುಚಿತಗೊಂಡು ಮನುಷ್ಯ ತನ್ನ ಸುತ್ತಲೂ ಕೋಟೆ ಕಟ್ಟಿಕೊಳ್ಳುತ್ತಿರುವ ಪರಿಣಾಮ ಬದುಕು ದ್ವೀಪವಾಗುತ್ತಿದೆ. ವಿಪರ್ಯಾಸವೆಂದರೆ ಹೀಗೆ ಬದುಕುವುದನ್ನೇ ಜನರು ನಾಗರೀಕತೆ ಎಂದು ಭಾವಿಸಿರುವರು. ನಾವು, ನಮ್ಮದು ಎನ್ನುವುದರ ಬದಲು ನಾನು ಎನ್ನುವ ಸ್ವಾರ್ಥದ ನೆಲೆಯಲ್ಲಿ ಮನುಷ್ಯ ಯೋಚಿಸುತ್ತಿರುವನು. ಪ್ರೀತಿ, ವಾತ್ಸಲ್ಯದ ಭಾವನೆಗಳು ಹಿಂದೆ ಸರಿದು ಲಾಭ, ನಷ್ಟದ ವ್ಯಾಪಾರಿ ಮನೋಭಾವವೇ ಮುನ್ನೆಲೆಗೆ ಬಂದಿದೆ. ಮನಸ್ಸು ಮನಸ್ಸಿನ ನಡುವೆ ಗೋಡೆಗಳು ನಿರ್ಮಾಣಗೊಳ್ಳುತ್ತಿವೆ. ಕಟ್ಟುವುದಾದರೆ ಸೇತುವೆಗಳನ್ನು ಕಟ್ಟಿ, ಕೆಡವುವುದಾದರೆ ಗೋಡೆಗಳನ್ನು ಕೆಡವಿ ಎಂದಿರುವರು ಅನುಭಾವಿಗಳು. ಆದರೆ ಮನುಷ್ಯ ಸೇತುವೆಗಳನ್ನು ಕೆಡವುತ್ತ ಗೋಡೆಗಳನ್ನು ಕಟ್ಟುತ್ತಿರುವನು. ಗೋಡೆಗಳನ್ನು ಕೆಡವಿ ನಾಗರೀಕತೆಯ ಆಧುನಿಕ ಮುಖವಾಡಗಳನ್ನು ಕಿತ್ತೊಗೆಯಲು ಪ್ರತಿಮನೆಗೂ ಗಂಗಜ್ಜಿಯಂಥ ಹಿರಿಯ ಜೀವದ ಅಗತ್ಯವಿದೆ.

-ರಾಜಕುಮಾರ ಕುಲಕರ್ಣಿ 

Tuesday, October 5, 2021

ಕೃಷಿಭೂಮಿ ಮತ್ತು ನಿವೇಶನದ ಹವಣಿಕೆ

 



      

(೨೩.೮.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ) 

    ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ನನ್ನ ಮಿತ್ರನಿಗೆ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವಾಸೆÉ. ನಿವೇಶನ ಖರೀದಿಸಲು 20 ರಿಂದ 25 ಲಕ್ಷ ರೂಪಾಯಿಗಳ ಅಗತ್ಯ ಎದುರಾಯಿತು. ಹಳ್ಳಿಯಲ್ಲಿರುವ ಎರಡು ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡಿ ಬಂದ ಹಣದಿಂದ ನಗರದಲ್ಲಿ 30x40 ಅಡಿಗಳ ಅಳತೆಯ ನಿವೇಶನ ಖರೀದಿಸಿದ. ಎರಡೆಕರೆ ಕೃಷಿಭೂಮಿಯನ್ನು ಮಾರಾಟ ಮಾಡಿದ್ದರಿಂದ ಕೈಸೇರಿದ ಹಣ ನಿವೇಶನ ಖರೀದಿಗಾಗಿಯೇ ಖರ್ಚಾಯಿತು. ಈಗ ಮನೆಕಟ್ಟಲು ಉಳಿದಿರುವ ಎರಡು ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡುವ ಹವಣಿಕೆಯಲ್ಲಿರುವನು. ಒಂದು ಅಂದಾಜಿನ ಪ್ರಕಾರ ನಗರ ಪ್ರದೇಶದಲ್ಲಿನ ಎರಡು ಗುಂಟೆಗಳ ನಿವೇಶನದ ಮೌಲ್ಯ ಗ್ರಾಮೀಣ ಪ್ರದೇಶದಲ್ಲಿನ 80 ಗುಂಟೆಗಳ ಕೃಷಿಭೂಮಿಯ ಮೌಲ್ಯಕ್ಕೆ ಸರಿಸಮವಾಗಿದೆ.

ನಗರೀಕರಣದ ದಾಹಕ್ಕೆ ಕೃಷಿಭೂಮಿ ಬಲಿಯಾಗುತ್ತಿದೆ. ವಸತಿ ಪ್ರದೇಶಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ ರೈತರಿಂದ ಕೃಷಿಭೂಮಿಯನ್ನು ಖರೀದಿಸಿ ಅದನ್ನು ನಿವೇಶನಗಳಾಗಿ ಪರಿವರ್ತಿಸಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿರುವರು. ಕೃಷಿಭೂಮಿಯನ್ನು ವಸತಿ ಪ್ರದೇಶವಾಗಿ ಪರಿವರ್ತಿಸಲು ಅದನ್ನು ಕೃಷಿಯೇತರ ಭೂಮಿಯೆಂದು ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ಒಪ್ಪಿಗೆ/ಅನುಮತಿ ಪಡೆಯಬೇಕು. ಆಶ್ಚರ್ಯದ ಸಂಗತಿಯೆಂದರೆ ಕೆಲವೊಮ್ಮೆ ಮಧ್ಯವರ್ತಿಗಳು ಸಂಬಂಧಿಸಿದ ಇಲಾಖೆಯಿಂದ ಯಾವ ಒಪ್ಪಿಗೆಯನ್ನು ಪಡೆಯದೆ ಕೃಷಿಭೂಮಿಯನ್ನು ನಿವೇಶನಗಳಾಗಿ ಪರಿವರ್ತಿಸುವರು. ಇತ್ತೀಚಿಗೆ ನನ್ನ ಪರಿಚಿತರೋರ್ವರು ನಗರದ ಹೊರವಲಯದಲ್ಲಿರುವ ಕೃಷಿಭೂಮಿಯಲ್ಲಿ ಮನೆಕಟ್ಟಿಕೊಳ್ಳಲೆಂದು ಮೂರು ಲಕ್ಷ ರೂಪಾಯಿಗಳಿಗೆ ಒಂದು ಗುಂಟೆ ಜಾಗ ಖರೀದಿಸಿರುವರು. ಅವರು ಹೇಳಿದ ಪ್ರಕಾರ ಮಧ್ಯವರ್ತಿಯು 50 ಲಕ್ಷ ರೂಪಾಯಿಗಳಿಗೆ ರೈತನಿಂದ ಐದು ಎಕರೆ ಕೃಷಿಭೂಮಿಯನ್ನು ಖರೀದಿಸಿ ನಂತರ ಪ್ರತಿ ಒಂದುಗುಂಟೆ ವಿಸ್ತೀರ್ಣದ ಜಾಗವನ್ನು 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿರುವನು. ಸ್ವಂತ ಮನೆಯ ಆಕಾಂಕ್ಷಿಗಳು ಅದು ಅಕ್ರಮ ಎಂದು ಗೊತ್ತಿದ್ದೂ ಅಲ್ಲಿ ನಿವೇಶನಗಳನ್ನು ಖರೀದಿಸಿರುವರು. ಮುಂದೊಂದುದಿನ ಸರ್ಕಾರ ಅಕ್ರಮವನ್ನು ಸಕ್ರಮಗೊಳಿಸಬಹುದೆನ್ನುವ ದೂರದ ಆಸೆ ಅವರದು. ರೈತನಿಂದ 50 ಲಕ್ಷ ರೂಪಾಯಿಗಳಿಗೆ ಆ ಕೃಷಿಭೂಮಿಯನ್ನು ಖರೀದಿಸಿದ ಮಧ್ಯವರ್ತಿಗೆ ಒಂದೆರಡು ತಿಂಗಳುಗಳಲ್ಲೇ 4 ರಿಂದ 5 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿದೆ. 

ನಗರ ಪ್ರದೇಶಗಳಲ್ಲಿ ವಸತಿ ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಗೃಹಮಂಡಳಿಯಿಂದ ಕಡಿಮೆ ಬೆಲೆಗೆ ಮನೆ ಅಥವಾ ನಿವೇಶನಗಳನ್ನು ಒದಗಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇಲ್ಲಿಯೂ ಸರ್ಕಾರ ವಸತಿ ಪ್ರದೇಶಕ್ಕಾಗಿ ಕೃಷಿಭೂಮಿಯನ್ನೇ ವಶಪಡಿಸಿಕೊಳ್ಳುತ್ತದೆ. ಒಂದು ಸಾವಿರ ನಿವೇಶನಗಳಿದ್ದರೆ ಬೇಡಿಕೆಕೋರಿ ಒಂದು ಲಕ್ಷ ಅರ್ಜಿಗಳು ಬಂದಿರುತ್ತವೆ. ಈಗಾಗಲೇ ಸ್ವಂತ ಮನೆ ಅಥವಾ ನಿವೇಶನ ಇರುವವರೂ ಸರ್ಕಾರದ ಗೃಹಮಂಡಳಿಯಡಿ ಕಡಿಮೆ ಬೆಲೆಗೆ ನಿವೇಶನ ಖರೀದಿಸಲು ಅರ್ಜಿ ಗುಜರಾಯಿಸುತ್ತಾರೆ. ಕಡಿಮೆ ಬೆಲೆಗೆ ಖರೀದಿಸಿದ ನಿವೇಶನ ಭವಿಷ್ಯದಲ್ಲಿ ಆರ್ಥಿಕವಾಗಿ ಲಾಭ ತಂದುಕೊಡಬಹುದೆನ್ನುವ ದೂರಾಲೋಚನೆ ಅವರದು. ಇಲಾಖೆಯ ಅಧಿಕಾರಿಗಳಿಗೆ ಒಂದಿಷ್ಟು ಕಾಣಿಕೆ ಸಂದಾಯ ಮಾಡಿ ಸ್ವಂತ ಮನೆ ಮತ್ತು ನಿವೇಶನಗಳಿದ್ದವರೂ ಕೂಡ ಗೃಹಮಂಡಳಿಯಿಂದ ನಿವೇಶನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಸರ್ಕಾರದ ಗೃಹಮಂಡಳಿಯಿಂದ ಮನೆಕಟ್ಟಲು ಖರೀದಿಸಿದ ನಿವೇಶವನ್ನು ಮುಂದೊಂದು ದಿನ ಅಧಿಕ ಬೆಲೆಗೆ ಮಾರಿಕೊಳ್ಳುತ್ತಾರೆ.

ಕಾರ್ಖಾನೆಗಳು, ವಿಶ್ವವಿದ್ಯಾಲಯಗಳು, ಸರ್ಕಾರದ ಆಡಳಿತ ಕಚೇರಿಗಳು ಇವೆಲ್ಲವುಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿಭೂಮಿ ಬಳಕೆಯಾಗುತ್ತಿದೆ. ರಸ್ತೆಗಳ ಅಗಲೀಕರಣ, ಹೆದ್ದಾರಿಗಳ ನಿರ್ಮಾಣದಲ್ಲಿಯೂ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ನಗರ ಪ್ರದೇಶಗಳಿಗೆ ಸಮೀಪದಲ್ಲಿರುವ ಹಳ್ಳಿಗಳ ಕೃಷಿಭೂಮಿಯಲ್ಲಿ ಇಟ್ಟಂಗಿ ಕಾರ್ಖಾನೆಗಳು, ಕಂಕರ್ ಉತ್ಪಾದನೆ ಕೇಂದ್ರಗಳು, ರೆಸಾರ್ಟ್‍ಗಳು ಮತ್ತು ಡಾಬಾಗಳು ಕಾರ್ಯನಿರ್ವಹಿಸುತ್ತಿವೆ. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎಡ-ಬಲದ ಕೃಷಿಭೂಮಿಯಲ್ಲಿ ಸಾಲುಸಾಲು ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿರುವುದು ಪ್ರತಿಹಳ್ಳಿಯಲ್ಲೂ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ.

ಭೂಮಿ ಈಗ ಹಣ ಹೂಡಿಕೆಯ ಉತ್ಪಾದನಾ ಕ್ಷೇತ್ರವಾಗಿ ಬಂಡವಾಳದಾರರನ್ನು ಆಕರ್ಷಿಸುತ್ತಿದೆ. ಆರ್ಥಿಕ ಸ್ಥಿತಿವಂತರು ಭೂಮಿ ಖರೀದಿಗಾಗಿ ಹಣ ಹೂಡುತ್ತಿರುವರು. ಸ್ವಂತದ ಮನೆಯಿದ್ದೂ ಲಾಭದ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳನ್ನು ಖರೀದಿಸುವ ದುರಾಸೆ ಜನರಲ್ಲಿ ಹೆಚ್ಚುತ್ತಿದೆ. ಜನರ ಈ ದುರಾಸೆಯನ್ನೇ ಬಂಡವಾಳವಾಗಿಟ್ಟುಕೊಂಡು ಉದ್ಯಮಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿಭೂಮಿಯನ್ನು ಖರೀದಿಸಿ ನಿವೇಶನಗಳನ್ನಾಗಿಸಿ ಮಾರಾಟ ಮಾಡುತ್ತಿರುವರು. ಕಪ್ಪುಹಣ ಭೂಮಿ ಖರೀದಿಗಾಗಿ ಹರಿದುಬರುತ್ತಿದೆ. ಕೃಷಿಭೂಮಿ ಅಥವಾ ನಿವೇಶನದ ಖರೀದಿ ಸಂದರ್ಭ ಕೈಬದಲಾಗುವ ಹಣ  ಮತ್ತು ನೋಂದಣಿ ಇಲಾಖೆಯಲ್ಲಿ ದಾಖಲಿಸುವ ಬೆಲೆ ನಡುವೆ ತುಂಬ ವ್ಯತ್ಯಾಸವಿರುತ್ತದೆ. ಖರೀದಿಸುವಾತ ಪಾವತಿಸುವ ಒಟ್ಟುಹಣ ನೋಂದಣಿ ಇಲಾಖೆಯಲ್ಲಿ ದಾಖಲಾಗುವುದೇ ಇಲ್ಲ. ಇದು ಸರ್ಕಾರದಿಂದ ಶ್ರೀಸಾಮಾನ್ಯನವರೆಗೆ ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಈ ಅನುಕೂಲದಿಂದಾಗಿ ಹಪ್ಪುಹಣ ಭೂಮಿ ಖರೀದಿಯಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೆ ಚಲಾವಣೆಯಾಗುತ್ತದೆ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷಿಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿರುವರು. ಪೌಷ್ಠಿಕ ಆಹಾರವಿರಲಿ ದಿನನಿತ್ಯದ ಸರಳ ಊಟಕ್ಕೆ ಅಗತ್ಯವಾದ ಆಹಾರವೂ ದೊರೆಯದ ಸಮಸ್ಯೆ ಎದುರಾಗಲಿದೆ. ಹಣ ಕೊಟ್ಟರೂ ಹಿಡಿ ಅನ್ನ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗಲಾದರೂ ಸರ್ಕಾರ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.  ಒಂದು ಕುಟುಂಬಕ್ಕೆ ಒಂದೇ ನಿವೇಶನ ಅಥವಾ ಮನೆ ಎನ್ನುವ ಕಟ್ಟುನಿಟ್ಟಿನ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಭೂಮಿಯ ಮೇಲೆ ಬಂಡವಾಳ ಹೂಡಿಕೆಯನ್ನು ನಿಯಂತ್ರಿಸಬೇಕು. ಕೃಷಿಭೂಮಿಯನ್ನು ಅಕ್ರಮವಾಗಿ ವಸತಿ ಪ್ರದೇಶವಾಗಿ ಪರಿವರ್ತಿಸುವವರಿಗೆ ಶಿಕ್ಷೆಯಾಗಬೇಕು. ವಿಪರ್ಯಾಸದ ಸಂಗತಿ ಎಂದರೆ ಕೃಷಿಕರಲ್ಲದವರು ಕೃಷಿಭೂಮಿಯನ್ನು ಖರೀದಿಸಲು ಅನುಕೂಲವಾಗುವಂತೆ ಇತ್ತೀಚಿಗೆ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ನಿಜಕ್ಕೂ ಇದು ಆತಂಕ ಪಡುವ ಬೆಳವಣಿಗೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಕೃಷಿಭೂಮಿಯ ವ್ಯಾಪ್ತಿ ಕ್ಷಿಣಿಸುತ್ತಿದೆ. ಕಾಯ್ದೆಯಲ್ಲಾದ ತಿದ್ದುಪಡಿಯಿಂದಾಗಿ ಬಂಡವಾಳದಾರರು ಕೃಷಿಭೂಮಿಯನ್ನು ಖರೀದಿಸಿ ಅದನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸಲು ಹಳ್ಳಿಗಳಿಗೆ ಲಗ್ಗೆಯಿಡಲಿರುವರು. ನಿವೇಶನಗಳನ್ನು ಖರೀದಿಸಲು ಸ್ಥಿತಿವಂತರು ಪೈಪೋಟಿಗಿಳಿಯಲಿರುವರು. ಇವರುಗಳ ನಡುವೆ ವರ್ಷವಿಡೀ ಮಣ್ಣಲ್ಲಿ ಮಣ್ಣಾಗಿ ದುಡಿದರೂ ನಾಲ್ಕು ಕಾಸು ಕಾಣದ ರೈತರು ಬಂಡವಾಳದಾರರ ಆಮೀಷಕ್ಕೆ ಬಲಿಯಾಗಿ ಕೃಷಿಭೂಮಿಯನ್ನು ಪರಭಾರೆ ಮಾಡಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವರು.

-ರಾಜಕುಮಾರ ಕುಲಕರ್ಣಿ 

Thursday, September 2, 2021

ಬದುಕುವ ಕಲೆ ಕರಗತವಾಗಿದೆಯೇ?


(೨೪.೦೭.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ)

 ನನ್ನೂರಿಗೆ ಭೇಟಿ ನೀಡಿದ ಸಂದರ್ಭದಲ್ಲೆಲ್ಲ ಅಲ್ಲಿನ ಶಾಲೆಯ ಶಿಕ್ಷಕರೊಬ್ಬರನ್ನು ಸಂಧಿಸಿ ಮಾತನಾಡುವುದು ಲಾಗಾಯ್ತಿನಿಂದಲೂ ನಾನು ರೂಢಿಸಿಕೊಂಡು ಬಂದ ಪದ್ಧತಿಯಾಗಿದೆ. ಆದರೆ ಕಳೆದ ಬಾರಿ ಊರಿಗೆ ಹೋಗಿದ್ದಾಗ ಅವರು ಶಾಲೆಯಲ್ಲಿರಲಿಲ್ಲ. ಡೆಪ್ಯುಟೇಷನ್  ಮೇಲೆ ಜಿಲ್ಲಾ ಕೇಂದ್ರದಲ್ಲಿರುವ ಇಲಾಖೆಯ ಕಚೇರಿಗೆ ವರ್ಗಗೊಂಡಿರುವರೆಂದು  ಅಲ್ಲಿನ ಮುಖ್ಯೋಪಾಧ್ಯಾಯರು ಹೇಳಿದರು. ಕೆಲವು ದಿನಗಳ ನಂತರ ಅವರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿ ಈ ಸಲ ಊರಿಗೆ ಬಂದಿದ್ದಾಗ ಅವರನ್ನು ಭೇಟಿ ಮಾಡಲೆಂದು ಶಾಲೆಗೆ ಹೋಗಿದ್ದ ಸಂಗತಿಯನ್ನು ನೆನಪಿಸಿದೆ. ತಾವು ಈಗ ಆ ಶಾಲೆಯಲ್ಲಿಲ್ಲವೆಂದು, ಡೆಪ್ಯುಟೇಷನ್ ಮೇಲೆ ಸಂಬಂಧಪಟ್ಟ ಜಿಲ್ಲಾ ಇಲಾಖೆಗೆ ವರ್ಗ ಮಾಡಿಸಿಕೊಂಡಿದ್ದು ಇಲ್ಲಿ ಮೇಲುಸಂಪಾದನೆ ಚೆನ್ನಾಗಿದೆಯೆಂದು ಈ ಕಾರಣದಿಂದ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಪ್ರವೇಶ ದೊರಕಿಸಲು ಮತ್ತು ನಾಲ್ಕಾರು ಸೈಟುಗಳನ್ನು ಖರೀದಿಸಲು ಸಾಧ್ಯವಾಗಿದೆಯೆಂದು ಹೇಳಿ ಮುಂದಿನ ಸಲ ಊರಿಗೆ ಬಂದಾಗ ಭೇಟಿಯಾಗುವಂತೆ ತಿಳಿಸಿದರು. ಅವರ ಧ್ವನಿಯಲ್ಲಿ ಸಂತೃಪ್ತಿಯ ಭಾವ ತುಂಬಿ ತುಳುಕುತ್ತಿತ್ತು.

ಈ ಮೇಲಿನ ಘಟನೆಗೆ ವಿರುದ್ಧವಾದ ಮತ್ತು ನಂಬಲಸಾಧ್ಯವಾದ ಇನ್ನೊಂದು ಸಂಗತಿ ನನ್ನೂರಿನ ಆ ನೆಲದಲ್ಲೇ ನಡೆದದ್ದು. ನನ್ನ ಕಣ್ಣೆದುರು ಬೆಳೆದು ಓದಿ ವಿದ್ಯಾವಂತನಾದ ಹುಡುಗ ಲೋಕೊಪಯೋಗಿ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್‌ನಾಗಿ ನೌಕರಿಗೆ ಸೇರಿದ. ಆ ಕ್ಷಣ ‘ಅಂವ ಇನ್ಮುಂದ ಹ್ಯಾಂಗ ಮನುಷ್ಯಾ ಆಗ್ತಾನ ನೋಡ್ರಿ’ ಎಂದು ಇಡೀ ಊರು ಸಂಭ್ರಮಿಸಿತು. ‘ಅಂವ ಕೇಳದೆ ಮನ್ಯಾಗ ರೊಕ್ಕ ಬಂದು ಬೀಳ್ತದ. ರೊಕ್ಕ ಎಣಿಸಾಕ ಆಳು ಇಟ್ಗೊಬೇಕಾಗ್ತದ’ ಎಂದು ಜನ ಮಾತನಾಡಿಕೊಂಡರು. ಆದರೆ ಆ ಹುಡುಗ ನೌಕರಿಗೆ ರಾಜೀನಾಮೆ ನೀಡಿ ಊರಿನ ಜನರನ್ನು ನಿರಾಸೆಗೊಳಿಸಿದ. ವಿಚಾರಿಸಿದಾಗ ಅಲ್ಲಿನ ವಾತಾವರಣಕ್ಕೆ ತನಗೆ ಹೊಂದಿಕೊಳ್ಳಲಾಗುತ್ತಿಲ್ಲವೆಂದು  ಹೇಳಿದ. ಇನ್ನಷ್ಟು ದಿನಗಳ ಕಾಲ ನೌಕರಿಯಲ್ಲೇ ಮುಂದುವರೆದಿದ್ದರೆ ತಾನು ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದೆ ಎಂದು ಅಳಲು ತೋಡಿಕೊಂಡ. ಸಹಜವಾಗಿಯೇ ಅವನ ಈ ನಿರ್ಧಾರದಿಂದ ಅಪ್ಪ ಅಮ್ಮನಿಗೆ ಬೇಸರವಾಯಿತು. ‘ಮನುಷ್ಯಾ ಆಗೋ ಆವಕಾಶ ಮನೆಬಾಗಿಲಿಗಿ ಹುಡ್ಕೊಂಡು ಬಂದ್ರ ಖೋಡಿ ಹುಡುಗ ಚಾನ್ಸ್ ಕಳ್ಕೊಂಡ್ತು’ ಎಂದು ಊರ ಜನ ಲೊಚಗುಟ್ಟಿದರು. ಮುಂದೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನೇಮಕಗೊಂಡು ಈಗ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕನೆಂದು ಮೆಚ್ಚುಗೆ ಗಳಿಸಿ ಸಂತೃಪ್ತಿಯ ಜೀವನ ನಡೆಸುತ್ತಿರುವನು.

ಒಂದೇ ಕಾಲದ ಒಂದೇ ನೆಲದ ಎರಡು ಪರಸ್ಪರ ವಿರುದ್ಧ ಘಟನೆಗಳಿವು. ಒಬ್ಬರು ಪವಿತ್ರ ವೃತ್ತಿಯನ್ನು ತೊರೆದು ಮೇಲುಸಂಪಾದನೆಯತ್ತ ಮುಖ ಮಾಡಿದರೆ ಇನ್ನೊಬ್ಬ ಮೇಲುಸಂಪಾದನೆಗೆ ಬೆನ್ನುಮಾಡಿ ಪಾಠ ಹೇಳುವ ಪವಿತ್ರ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡ. ಇಲ್ಲಿ ಯಾವ ಘಟನೆಯನ್ನು ಆದರ್ಶವೆಂದು ನೋಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಶ್ನೆಗೆ ಉತ್ತರ ಕೂಡ ಸರಳವಾಗಿದೆ ಸಮಾಜ ಆಯ್ದುಕೊಳ್ಳುವುದು ಮೊದಲನೆಯ ಘಟನೆಯನ್ನು. ಏಕೆಂದರೆ ಮನುಷ್ಯನಾಗುವ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಮಾಜ ‘ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯ ಸಮ್ಮತ’ ಎನ್ನುವ ಮನೋಭಾವವನ್ನು ರೂಢಿಸಿಕೊಂಡಿದೆ. ಇಲ್ಲಿ ಅನ್ಯಾಯ, ಅನೀತಿ ಎಲ್ಲವನ್ನೂ ಸಮಾಜ ಸಮ್ಮತಿಸಿ ಅದಕ್ಕೆ ತನ್ನ ಅಂಗೀಕಾರದ ಮುದ್ರೆ ಒತ್ತಿದೆ. ಹೀಗಾಗಿ ವೃತ್ತಿಯಲ್ಲಿ ಮೇಲುಸಂಪಾದನೆ ಬೇಡ ಎನ್ನುವವನು ಸಮಾಜದ ಅವಹೇಳನಕ್ಕೆ, ಅವಮಾನಕ್ಕೆ ಒಳಗಾಗುತ್ತಾನೆ. ಬೇಕು ಎನ್ನುವವನು ಸಮಾಜಕ್ಕೆ ಆದರ್ಶಪ್ರಾಯನಾಗಿ ಮನುಷ್ಯನಾಗುತ್ತ ಬೆಳೆಯತೊಡಗುತ್ತಾನೆ. 

ಎಸ್.ಎಲ್.ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಪಾತ್ರವೊಂದರ ಸಂಭಾಷಣೆ ಹೀಗಿದೆ ‘ನಾನು ಒಂದು ಕಾಸೂ ಸಂಬಳ ತಗೊಳ್ಳದೆ ಕೆಲಸ ಮಾಡಬೇಕು ಅಂತಿದ್ದೆ. ಆ ಮೇಲೆ ದೊಡ್ಡಪನನ್ನೇ ಕೇಳಿದೆ. ಅವರು ಏನಂತಾರೆ ಗೊತ್ತಾ? ಸಂಬಳ ತಗೊಂಡರೆ ತಪ್ಪಿಲ್ಲ. ವಿಶ್ವೇಶ್ವರಯ್ಯನೋರು ತಗೋತಿದ್ದರು. ಆದರೆ ಇಪ್ಪತ್ತನಾಲ್ಕು ಗಂಟೆಯೂ ಕೆಲಸದಲ್ಲೇ ಮನಸ್ಸಿಟ್ಟು ಒಂದು ಕಾಸೂ ಲಂಚ, ರುಷುವತ್ತು ಮುಟ್ಟದೆ ನಮ್ಮ ಸಂಬಳದಲ್ಲಿ ಮಾತ್ರ ಜೀವನ ಮಾಡಬೇಕು. ವಿಶ್ವೇಶ್ವರಯ್ಯನೋರು ಟೂರ್ ಹೋದಾಗ ಸರ್ಕಾರಿ ಕೆಲಸ ಮಾಡುಕ್ಕೆ ಸರ್ಕಾರದ ಮೋಂಬತ್ತಿ ಉರಿಸುತ್ತಿದ್ದರಂತೆ. ಅದು ಮುಗಿದ ಮೇಲೆ ಮಲಗುವ ಮುಂಚೆ ತಮ್ಮ ಸ್ವಂತ ಜ್ಞಾನಾರ್ಜನೆಗೆ ಬೇರೆ ಪುಸ್ತಕ ಓದುವಾಗ ಸ್ವಂತ ಖರ್ಚಿನಿಂದ ಕೊಂಡು ಹೋಗಿದ್ದ ಬೇರೆ ಮೋಂಬತ್ತಿ ಹತ್ತಿಸಿ ಸರ್ಕಾರದ ಮೋಂಬತ್ತಿಯನ್ನು ಆರಿಸಿಬಿಡ್ತಿದ್ದರಂತೆ’. ಇಂಥ ಉದಾತ್ತ ನಡೆ ಆದರ್ಶವಾಗಿರಬೇಕಿದ್ದ ಸಮಾಜದಲ್ಲಿ ಇಂದು ಲಂಚ, ರುಷುವತ್ತು ಸ್ವೀಕರಿಸುವುದೇ ಅದೊಂದು ಪ್ರತಿಷ್ಠೆಯ ವಿಷಯವಾಗಿದೆ. ಸರ್ಕಾರಿ ನೌಕರಿ ಎಂದಾಕ್ಷಣ ಮೇಲುಸಂಪಾದನೆ ಎಷ್ಟು ಎಂದು ನಾಚಿಕೆ ಬಿಟ್ಟು ಕೇಳುತ್ತಾರೆ. ಅದೆಷ್ಟೋ ಪಾಲಕರು ತಮ್ಮ ಮಕ್ಕಳಿಗೆ ಸಂಬಳದ ಜೊತೆ ಗಿಂಬಳವೂ ಸಿಗುತ್ತಿದೆ ಎಂದು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಒಟ್ಟಾರೆ ಸರ್ಕಾರಿ ಉದ್ಯೋಗ ಎನ್ನುವುದು ಅದು ಮೇಲುಸಂಪಾದನೆಗೆ ಸರಳವಾದ ಮಾರ್ಗ ಎನ್ನುವ ಮನೋಭಾವ ನಮ್ಮ ವಿದ್ಯಾವಂತ ಯುವಪೀಳಿಗೆಯಲ್ಲಿ ಹೆಚ್ಚುತ್ತಿದೆ. ಪಾಲಕರೇ ವಿದ್ಯಾವಂತ ಯುವಪೀಳಿಗೆಯಲ್ಲಿನ ಈ ಮನೋಭಾವಕ್ಕೆ ಅವರ ಬಾಲ್ಯದಿಂದಲೇ ಭದ್ರವಾದ ತಳಹದಿಯನ್ನು ನಿರ್ಮಿಸುತ್ತಿರುವರು. ಭವಿಷ್ಯದಲ್ಲಿ ಏನಾಗುವಿರಿ ಎನ್ನುವ ಪ್ರಶ್ನೆಗೆ ಮಕ್ಕಳ ಬಾಯಿಂದ ಮೇಲುಸಂಪಾದನೆಗೆ ಅವಕಾಶವಿರುವ ಉದ್ಯೋಗಳ ಹೆಸರುಗಳೇ  ಪುಂಖಾನುಪುಂಖವಾಗಿ ಹೊರಬರುತ್ತವೆ.

ಇಲ್ಲಿ ನಮ್ಮದೂ ನೂರೆಂಟು ತಪ್ಪುಗಳಿವೆ. ಮನುಷ್ಯರನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ವ್ಯಕ್ತಿತ್ವ ಮತ್ತು ಸಾಧನೆಗಳಿಗಿಂತ ಒಣ ಪ್ರತಿಷ್ಠೆ ಮತ್ತು ಆಡಂಬರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಅಪ್ರಾಮಾಣಿಕತೆಯಿಂದ ಅಪಾರ ಸಂಪತ್ತು ಗಳಿಸಿದವನೇ ನಮ್ಮ ದೃಷ್ಟಿಯಲ್ಲಿ ನಿಜವಾದ ಮನುಷ್ಯ. ಇಲ್ಲಿ ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗೇ ಬದುಕ ಬೇಕೆನ್ನುವುದಕ್ಕಿಂತ ಹೇಗಾದರೂ ಸರಿ ಬದುಕ ಬೇಕೆನ್ನುವುದು ನಿಯಮವಾಗುತ್ತದೆ. ಬದುಕುವ ಕಲೆ ಗೊತ್ತಿರುವಾತ ಸಮಾಜದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹೀಗೇ ಬದುಕಬೇಕೆಂದು ಹೊರಡುವವನು ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗಿ ಶತಮೂರ್ಖನೆಂದು ಕರೆಸಿಕೊಳ್ಳುತ್ತಾನೆ. ಅನೀತಿಯ ಮಾರ್ಗದ ಮೂಲಕ ಮೇಲುಸಂಪಾದನೆ ಮಾಡುತ್ತ ಕೆಲವರು ಮನುಷ್ಯರಾಗುತ್ತ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ. ಹಾಗಾದರೆ ಮನುಷ್ಯನಾಗುವುದೆಂದರೇನು? ಇಂಥದ್ದೊಂದು  ಜಿಜ್ಞಾಸೆ ಬದುಕುವ ಕಲೆ ಗೊತ್ತಿಲ್ಲದವರನ್ನು ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುವ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. 

-ರಾಜಕುಮಾರ ಕುಲಕರ್ಣಿ




Monday, August 2, 2021

ಆಹಾ ಜಾತಿ.........ಜ್ಞಾನಕೇಂದ್ರಗಳಿಗೆಷ್ಟು ಪ್ರೀತಿ!

          

(೦೩.೦೭.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟ)

 ಕೆಲವು ವರ್ಷಗಳ ಹಿಂದೆ ನನ್ನ ಪರಿಚಯದ ಹುಡುಗನೊಬ್ಬ ಪಿಹೆಚ್.ಡಿ ಪದವಿಗಾಗಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೊಂದಾಯಿಸಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಡಾಕ್ಟರೇಟ್ ಕನಸು ಕಾಣುತ್ತಿದ್ದವನಿಗೆ ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ ಅಧ್ಯಯನಕ್ಕೆ ಪ್ರವೇಶ ದೊರೆತದ್ದು ಸಹಜವಾಗಿಯೇ ಖುಷಿ ನೀಡಿತ್ತು. ಸಮಾಜ ವಿಜ್ಞಾನ ವಿದ್ಯಾರ್ಥಿಯಾದ ಅವನಿಗೆ ತನ್ನ ಸಂಶೋಧನೆಯಿಂದ  ಸಮಾಜಕ್ಕೊಂದು ವಿಶಿಷ್ಟ ಕೊಡುಗೆ ನೀಡುವ ಆಸೆಯಿತ್ತು. ಓದಿನಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಆತ ಹಲವು ಕನಸುಗಳನ್ನು ಕಟ್ಟಿಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ. ಹತ್ತಿರದಿಂದ ಅವನ ಏಳ್ಗೆಯನ್ನು ಗಮನಿಸುತ್ತ ಬಂದಿದ್ದ ನನಗೆ ಕೂಡಾ ಅವನಿಗೆ ದೊರೆತ ಆ ಅವಕಾಶ ಸಂತಸ ತಂದಿತ್ತು. ಅದಾದ ನಂತರ ಹಲವು ತಿಂಗಳುಗಳ ಕಾಲ ನಾನು ನನ್ನ ಕೆಲಸದ ನಡುವೆ ಆ ವಿಷಯವನ್ನು ಮರೆತು ಬಿಟ್ಟೆ. ಅವನೂ ಸಹ ತನ್ನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ  ನನ್ನನ್ನು ಅನೇಕ ತಿಂಗಳುಗಳ ಕಾಲ ಸಂಪರ್ಕಿಸಲಿಲ್ಲ. 

ಈ ನಡುವೆ ವೈಯಕ್ತಿಕ ಕೆಲಸಕ್ಕೆಂದು ನನ್ನೂರಿಗೆ ಹೋಗುತ್ತಿದ್ದ ಸಮಯ ಬಸ್ ನಿಲ್ದಾಣದಲ್ಲಿ ಚಹಾ ಕುಡಿಯಲೆಂದು ಇಳಿದಾಗ ಇದ್ದಕ್ಕಿದ್ದಂತೆ ಅನೀರಿಕ್ಷಿತವಾಗಿ ಅವನ ಭೇಟಿಯಾಯಿತು. ಮಾನಸಿಕವಾಗಿ ತುಂಬಾ ಬಳಲಿದವನಂತೆ ಕಾಣುತ್ತಿದ್ದ. ಮಾತಿನ ನಡುವೆ ಅವನ ಸಂಶೋಧನಾ ವಿಷಯ ಚರ್ಚೆಗೆ ಬಂದಿತು. ಎಲ್ಲಿಯವರೆಗೆ ಬಂದಿದೆ ನಿನ್ನ ಸಂಶೋಧನಾ ಕಾರ್ಯ ಎಂದು ಕೇಳಿದ ನನ್ನ ಪ್ರಶ್ನೆಗೆ ಅಳುವೇ ಅವನ ಉತ್ತರವಾಗಿತ್ತು. ಮಾರ್ಗದರ್ಶಕರು ಸಹಕರಿಸುತ್ತಿಲ್ಲವೆಂದು ತಾನು ಸಂಶೋಧನಾ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು ಬಿಡಲು ನಿರ್ಧರಿಸಿರುವುದಾಗಿ ಹೇಳಿದ. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಜಾತಿಯತೆಯ ಲಾಬಿ ಬಹಳಷ್ಟಿದೆ ಎಂದು ಮತ್ತು ಆ ವಾತಾವರಣದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. ನಿರುತ್ಸಾಹಗೊಳ್ಳದಿರೆಂದು ಧೈರ್ಯ ಹೇಳಿ ಅವನನ್ನು ಬಿಳ್ಕೊಟ್ಟು ನಾನು ಹೋಗಬೇಕಿದ್ದ ಬಸ್ ಹತ್ತಿದೆ.

ಜ್ಞಾನ ಕೇಂದ್ರಗಳಾದ ವಿಶ್ವವಿದ್ಯಾಲಯಗಳಲ್ಲಿ ಇಂಥದ್ದೊಂದು  ಸಮಸ್ಯೆ ವ್ಯಾಪಕವಾಗಿ ವಿಸ್ತರಿಸುತ್ತ ಹೋಗುತ್ತಿದೆ. ಜ್ಞಾನವನ್ನು ವೃದ್ಧಿಸಬೇಕಾದ ವಿಶ್ವವಿದ್ಯಾಲಯಗಳು ಜಾತಿ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧರಿಸಿ ಗುಂಪುಗಾರಿಕೆ ಬೆಳೆಯುತ್ತಿದೆ. ಈ ಜಾತಿ ವ್ಯವಸ್ಥೆ ಎನ್ನುವುದು ಎಷ್ಟೊಂದು ವ್ಯವಸ್ಥಿತವಾಗಿ ಜಾತಿ, ಉಪಜಾತಿಗಳಾಗಿ ವಿಭಿನ್ನ ಸ್ತರಗಳಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ನೋಡಲು ನಾವು ಬೇರೆಲ್ಲೂ ಹೋಗಬೇಕಿಲ್ಲ. ಈ ವಿಶ್ವವಿದ್ಯಾಲಯಗಳೇ ಅಂಥದ್ದೊಂದು  ಮಾಹಿತಿಯನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿವೆ. ಒಟ್ಟಿನಲ್ಲಿ ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಜಾತಿವ್ಯವಸ್ಥೆಯನ್ನು ಅತ್ಯಂತ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬರುತ್ತಿರುವ ಸಂಪೂರ್ಣ ಶ್ರೇಯಸ್ಸು ನಮ್ಮ ಈ ವಿಶ್ವವಿದ್ಯಾಲಯಗಳಿಗೆ ಸಲ್ಲಬೇಕು. 

ಬ್ರಾಹ್ಮಣ ಪ್ರಾಧ್ಯಾಪಕರಿಗೆ ಸಂಶೋಧನಾ ವಿದ್ಯಾರ್ಥಿ ಬ್ರಾಹ್ಮಣನೇ ಆಗಿರಬೇಕು. ಅದೇರೀತಿ ಲಿಂಗಾಯತ, ಜಂಗಮ, ಕುರುಬ, ಕುಂಬಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿ ಗಣ ಹತ್ತು ಹಲವು ಜಾತಿ, ಉಪಜಾತಿಗಳಾಗಿ ವಿಂಗಡಣೆಗೊಂಡಿವೆ. ಇಲ್ಲಿ ಅರ್ಹತೆಗೆ ಮಾನದಂಡ ಜಾತಿ ಮತ್ತು ಉಪಜಾತಿಯೇ ಹೊರತು ವಿದ್ಯಾರ್ಥಿಯ ಬದ್ದಿಮತ್ತೆಯಲ್ಲ. ಒಂದು ಕೋಮಿಗೆ ಸೇರಿದ ಪ್ರಾಧ್ಯಾಪಕ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿಯ ಸಂಶೋಧನೆಗೆ ಮಾರ್ಗದರ್ಶಕನಾಗಲು ಸುತಾರಾಂ ಇಷ್ಟಪಡುವುದಿಲ್ಲ. ತನ್ನ ಜಾತಿಗೆ ಸೇರಿದ ವಿದ್ಯಾರ್ಥಿ ಅದೆಷ್ಟೇ ಅಯೋಗ್ಯನಾದರೂ ಸರಿ ಅಂಥವರನ್ನು ಹಿಡಿದು ತಂದು ಸಂಶೋಧನೆಗೆ ಹಚ್ಚುವ ಪ್ರಭೃತಿಗಳ ಸಂಖ್ಯೆಯೇನೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಇಲ್ಲ. ಜಾತಿಯೊಂದನ್ನು ಅತ್ಯಂತ ವ್ಯವಸ್ಥಿತವಾಗಿ ಸೀಳಿ ಅದನ್ನು ಅನೇಕ ಉಪಜಾತಿಗಳಲ್ಲಿ ವರ್ಗೀಕರಿಸಿ ನೋಡುವ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರುಗಳ ಜಾತಿ ಪ್ರೀತಿ ನಿಜಕ್ಕೂ ಕುತೂಹಲಕರ ಸಂಗತಿಗಳಲ್ಲೊಂದು.

ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೆಲವೊಮ್ಮೆ ವಿಶ್ವವಿದ್ಯಾಲಯಗಳ ಉಪಕುಲಪತಿಗಳೇ ಈ ಜಾತಿವ್ಯವಸ್ಥೆಗೆ ಕುಮ್ಮಕ್ಕು ಕೊಡುವುದುಂಟು. ಅಂಥ ಸಂದರ್ಭಗಳಲ್ಲೆಲ್ಲ ಉಪಕುಲಪತಿಗಳ ಜಾತಿಗೆ ಸೇರಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಡೀ ವಿಶ್ವವಿದ್ಯಾಲಯವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದೂ ಇದೆ. ಹೊರಗೆ ಸಮಾಜದಲ್ಲಿ ಜಾತಿವ್ಯವಸ್ಥೆಯ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಬಿಗಿಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ವೈಚಾರಿಕ ಪ್ರಜ್ಞೆಯ ಪ್ರಕಾಂಡ ಪಂಡಿತರು ಆಂತರ್ಯದಲ್ಲಿ ಅದನ್ನು ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬರುತ್ತಿರುವುದು ವೈಚಾರಿಕ ಕ್ರಾಂತಿಯ ನೆಲೆಯಂದೇ ನಂಬಿರುವ ವಿಶ್ವವಿದ್ಯಾಲಯಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ. 

ಪರಿಸ್ಥಿತಿ ಹೀಗಿರುವಾಗ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಫಲಿತಾಂಶದ ಕುರಿತು ಮಾತನಾಡದಿರುವುದೇ ಲೇಸು. ವಿಶೇಷವಾಗಿ ಸಮಾಜ ವಿಜ್ಞಾನ ವಿಷಯಗಳಲ್ಲಿನ ಸಂಶೋಧನಾ ಚಟುವಟಿಕೆಗಳಿಂದ ಉತ್ತಮ ಮತ್ತು ಪರಿಣಾಮಕಾರಿಯಾದ ಫಲಿತಾಂಶ ಹೊರಬರುತ್ತಿಲ್ಲ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಪ್ರತಿವರ್ಷ ವಿಶ್ವವಿದ್ಯಾಲಯಗಳಲ್ಲಿ ನಿರುಪಯುಕ್ತ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಹಿತ್ಯ, ಸಂಗೀತ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸಿ ಸಂಶೋಧನೆ ಮಾಡುತ್ತಿರುವರು. ಕುವೆಂಪು ಒಕ್ಕಲಿಗ ವಿದ್ಯಾರ್ಥಿಗಳಿಗಾದರೆ, ಬೇಂದ್ರೆ ಬ್ರಾಹ್ಮಣರಿಗೆ, ಶಿವರುದ್ರಪ್ಪ ಲಿಂಗಾಯಿತರಿಗೆ, ಕುಂವೀ ಕುಂಬಾರರಿಗೆ, ದೇವನೂರು ಇನ್ನುಳಿದವರಿಗೆ ಈ ರೀತಿಯಾದ ಅಚ್ಚುಕಟ್ಟಾದ ವಿಂಗಡಣೆಯನ್ನು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಮಾಡುತ್ತಿರುವರು. ಈ ಜಾತಿ ಪ್ರೀತಿ ಎನ್ನುವುದು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರುಗಳನ್ನು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಅದು ಹೇಗೆ ಕುರುಡರನ್ನಾಗಿಸಿದೆ ಎನ್ನುವುದಕ್ಕೆ ಒಂದು ಉದಾಹರಣೆ ಹೀಗಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಹೋದ ಸಂದರ್ಭ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಪರಿಚಯವಾಯಿತು. ಕನ್ನಡ ಸಾಹಿತ್ಯದ ಕುರಿತು ಒಂದಿಷ್ಟು ಆಸಕ್ತಿ ಇರುವ ನಾನು ಕನ್ನಡ ಸಾಹಿತ್ಯದ ಮೇಲೆ ಸಂಶೋಧನೆ ಮಾಡುತ್ತಿರುವ ಆತನನ್ನು ಮಾತಿಗೆಳೆದು ಆಯ್ದುಕೊಂಡ ವಿಷಯ ಯಾವುದೆಂದು ವಿಚಾರಿಸಿದೆ. ಹೀಗೆ ಒಂದು ನಿರ್ಧಿಷ್ಟ ಜಾತಿಗೆ ಸೇರಿದ ಕಥೆಗಾರರ ಕುರಿತು ಸಂಶೋಧನೆ ಮಾಡುತ್ತಿರುವುದಾಗಿ ಹೇಳಿದನಲ್ಲದೆ ವಿಷಯ ವ್ಯಾಪ್ತಿ ಬಹಳ ಸೀಮಿತವಾಗಿರುವುದಾಗಿ ತನ್ನ ಅಳಲನ್ನು ತೋಡಿಕೊಂಡ. ಹಾಗಾದರೆ ಜಾತಿ ಬದಲು ಭೌಗೋಳಿಕ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಳ್ಳಬಹುದಲ್ಲ ಎಂದು ಸಲಹೆ ನೀಡಿದೆ. ಮಾರ್ಗದರ್ಶಕರಿಗೆ ತಮ್ಮ ಜಾತಿ ಕುರಿತು (ಸಂಶೋಧನಾ ವಿದ್ಯಾರ್ಥಿಯೂ ಅದೇ ಜಾತಿಗೆ ಸೇರಿದವನು) ಅತ್ಯಂತ ಅಭಿಮಾನ ಮತ್ತು ಪ್ರೀತಿ ಇರುವುದರಿಂದ ವಿಷಯ ಬದಲಾವಣೆಗೆ ಸಮ್ಮತಿಸುತ್ತಿಲ್ಲವೆಂದು ಹೇಳಿದನಲ್ಲದೆ ಬೇರೆ ಜಾತಿಗೆ ಸೇರಿದ ಬರಹಗಾರರನ್ನು ಸಂಶೋಧನೆಗೆ ಪರಿಗಣಿಸುವುದಿರಲಿ ಅವರ ಪುಸ್ತಕಗಳನ್ನೂ ಓದದಂತೆ ಎಚ್ಚರಿಸಿರುವರೆಂದು ನುಡಿದ. ಒಟ್ಟಿನಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ವೈಚಾರಿಕ ಪ್ರತಿಭಟನೆಗಿಳಿಯಬೇಕಿದ್ದ ವಿಶ್ವವಿದ್ಯಾಲಯಗಳೇ ಆ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬರುತ್ತಿವೆ. ಜಾತಿ, ಉಪಜಾತಿ, ಉಪಪಂಗಡಗಳ ಒಂದು ಶ್ರೇಣಿಕೃತ ವ್ಯವಸ್ಥೆಯನ್ನು ಈ ಜಾಗತೀಕರಣದ ದಿನಗಳಲ್ಲೂ ಅತ್ಯಂತ ಅಚ್ಚುಕಟ್ಟಾಗಿ ಕಟ್ಟಿ ಕೊಡುತ್ತಿರುವ ವಿಶ್ವವಿದ್ಯಾಲಯಗಳು ಮುಂದಿನ ದಿನಗಳಲ್ಲಿ ಜಾತಿ, ಉಪಜಾತಿಗೊಂದರಂತೆ  ಪ್ರತ್ಯೇಕಗೊಂಡರೂ ಆಶ್ಚರ್ಯವಿಲ್ಲ. 

ಕೆಲವು ವರ್ಷಗಳ ಹಿಂದೆ ಸಂಗೀತಗೋಷ್ಟಿಯೊAದಕ್ಕೆ ಹೋಗಿದ್ದೆ. ಸಂಗೀತಗಾರರಲ್ಲಿ ಬಹುತೇಕರು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳಲ್ಲಿ ಕಲಿತು ಬಂದವರಾಗಿದ್ದರು. ಕೆಲವರನ್ನು ಪರಿಚಯಿಸಿಕೊಂಡು ಮಾತಿಗಿಳಿದೆ. ಎಲ್ಲರಿಗೂ ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಕಲಿತು ಬಂದ ಅಭಿಮಾನವಿತ್ತು. ಮಾತಿನ ನಡುವೆ ಆ ಸಂಗೀತಗಾರರು ತಮ್ಮ ಗುರುಗಳ ಕುರಿತು ಅನೇಕ ವಿಷಯಗಳನ್ನು ಹೇಳಿದರು. ಅವರುಗಳು ಹೇಳಿದ ವಿಷಯಗಳಲ್ಲಿ ನನ್ನನ್ನು ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ಕಾಡಿದ ಸಂಗತಿ ಎಂದರೆ ಆ ಆಶ್ರಮದಲ್ಲಿ (ಸಂಗೀತ ಶಾಲೆ) ಜಾತಿಯ ಪ್ರಶ್ನೆಯೇ ಇರಲಿಲ್ಲ. ಗುರುಗಳು ಪ್ರತಿಯೊಬ್ಬ ಶಿಕ್ಷಣಾರ್ಥಿಯನ್ನು ಆತನ ಊರಿನ ಹೆಸರಿನಿಂದ ಕರೆಯುತ್ತಿದ್ದರಂತೆ. ವಿದ್ಯಾರ್ಥಿಯ ಮನೆತನದ ಹೆಸರನ್ನು ತಪ್ಪಿಯೂ ಕೂಡ ಬಳಸುತ್ತಿರಲಿಲ್ಲವಂತೆ. ಅದೇಕೆ ಹೀಗೆ ಎಂದು ಪ್ರಶ್ನಿಸಿದಾಗ ಮನೆತನದ ಹೆಸರು ಜಾತಿಸೂಚಕವಾಗಿರುವುದರಿಂದ ಆಶ್ರಮದಲ್ಲಿ ಜಾತಿವ್ಯವಸ್ಥೆಯೊಂದು ಅನಾವರಣಗೊಳ್ಳುವುದು ಗುರುಗಳಿಗೆ ಇಷ್ಟವಿರಲಿಲ್ಲವಂತೆ. ನಿಜಕ್ಕೂ ಜ್ಯಾತ್ಯಾತೀತ ಕಲ್ಪನೆ ಎಂದರೆ ಇದು. ಜಾತಿ ವ್ಯವಸ್ಥೆಯಿಂದ ದೂರವಿರುವ ಕಾರಣದಿಂದಲೇ ಇವತ್ತಿಗೂ ಗದುಗಿನ ‘ವೀರೇಶ್ವರ ಪುಣ್ಯಾಶ್ರಮ’ ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಪ್ರಾಮುಖ್ಯತೆ ಪಡೆದಿಲ್ಲ. ಲೇ ಹಾರವ, ಜಂಗಮ, ಕುಂಬಾರ ಎಂದು ಜಾತಿ ಹೆಸರಿನಿಂದ ವಿದ್ಯಾರ್ಥಿಗಳನ್ನು ಕೂಗಿ ಕರೆಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಬದ್ಧಿವಂತ ಪ್ರಾದ್ಯಾಪಕರುಗಳು ವೀರೇಶ್ವರ ಪುಣ್ಯಾಶ್ರಮಕ್ಕೊಮ್ಮೆ ಭೇಟಿ ನೀಡುವುದೊಳಿತು.

-ರಾಜಕುಮಾರ ಕುಲಕರ್ಣಿ


Tuesday, July 6, 2021

ಡಿಜಿಟಲ್ ಯುಗದ ದ್ರೋಣ, ಏಕಲವ್ಯ ಮತ್ತು ಕರ್ಣರು

       



     ಏಕಲವ್ಯನಿಗೆ  ಬಿಲ್ವಿದ್ಯೆ ಕಲಿಯಬೇಕೆನ್ನುವ ಆಸೆ. ಆದರೆ ವಿದ್ಯೆಯನ್ನು ಕಲಿಸುವ ಗುರುಗಳ ಕೊರತೆ ಅವನಿದ್ದ ಊರಲ್ಲಿ. ಒಂದೊಮ್ಮೆ ಆಚಾರ್ಯ ದ್ರೋಣರು ಕೌರವ ಮತ್ತು ಪಾಂಡವ ರಾಜಕುವರರಿಗೆ ಬಿಲ್ವಿದ್ಯೆ ಕಲಿಸುತ್ತ ಅವನಿದ್ದ ಊರಿನ ಹತ್ತಿರ ಬಿಡಾರ ಹೂಡಿದರು. ಏಕಲವ್ಯ ಆಶ್ರಮಕ್ಕೆ ಹೋಗಿ ದ್ರೋಣರನ್ನು ಕಂಡು ತನ್ನ ಮನದಾಸೆ ಹೇಳಿಕೊಂಡ. ದ್ರೋಣರು ಗುರುಗಳಾದರೂ ರಾಜಮನೆತನಕ್ಕೆ ನಿಷ್ಟರಾಗಿದ್ದವರು. ರಾಜಾಶ್ರಯದ ನೆರಳು ಅವರ ಮೇಲಿತ್ತು. ರಾಜಕುಮಾರರಿಗೆ ಮಾತ್ರ ತಾನು ವಿದ್ಯೆ ಕಲಿಸುವುದೆಂದು ಏಕಲವ್ಯನ ಬೇಡಿಕೆಯನ್ನು ತಿರಸ್ಕರಿಸಿದರು. ಆದರೆ ವಿದ್ಯೆ ಕಲಿಯಬೇಕೆನ್ನುವ ಛಲ ಏಕಲವ್ಯನನ್ನು ಸುಮ್ಮನೆ ಇರಗೊಡಲಿಲ್ಲ. ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಆ ಮೂರ್ತಿ ಎದುರು ಪ್ರತಿನಿತ್ಯ ಬಿಲ್ವಿದ್ಯೆ ಅಭ್ಯಾಸ ಮಾಡಿ ಪಾರಂಗತನಾದ. ಮುಂದೆ ನಡೆದದ್ದನ್ನೆಲ್ಲ ವಿವರಿಸಿ ಹೇಳಬೇಕಾದ ಅಗತ್ಯವಾಗಲಿ ಪ್ರಸ್ತುತತೆಯಾಗಲಿ ಇಲ್ಲ.

    ಕೊರೊನಾ ಸೋಂಕು ಸೃಷ್ಟಿಸಿದ ಈ ಆತಂಕದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠಗಳನ್ನು ಹೇಳುವ ವಿಧಾನ ನೋಡಿದಾಗ ನನಗೆ ಮಹಾಭಾರತದ ಈ ಏಕಲವ್ಯನ ಉಪಕಥೆ ನೆನಪಾಯಿತು. ಒಂದರ್ಥದಲ್ಲಿ ಈ ಡಿಜಿಟಲ್ ವಾತಾವರಣದಲ್ಲಿ ತಮ್ಮ ತಮ್ಮ ಮನೆಯಲ್ಲಿ ಕುಳಿತು ಶಿಕ್ಷಕರ ಪಾಠಗಳನ್ನು ಆಲಿಸುತ್ತಿರುವ ವಿದ್ಯಾರ್ಥಿಗಳು ಏಕಲವ್ಯನಂತೆ ಗೋಚರಿಸುತ್ತಿದ್ದಾರೆ. ಶಾಲೆ, ಕಾಲೇಜಿನ ಪರಿಸರದಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ತರಗತಿಯ ಕೊಠಡಿಯಲ್ಲಿ ಕುಳಿತು ಶಿಕ್ಷಕರಿಂದ  ಪಾಠ ಕೇಳಬೇಕಾದ ಸಂದರ್ಭ ಮತ್ತೆ ಎಂದು ಬರುವುದೋ ಎನ್ನುವಂಥ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು ಕೂಡ ತನ್ನೆದುರಿರುವ ಕಂಪ್ಯೂಟರ್ ಯಂತ್ರವನ್ನೇ ವಿದ್ಯಾರ್ಥಿ ಎಂದು ಭಾವಿಸಿ ಪಾಠ ಮಾಡಬೇಕಾಗಿದೆ. ಒಟ್ಟಾರೆ ಆನ್‍ಲೈನ್ ಪಾಠ ಎನ್ನುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊಸದೊಂದು ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಯನ್ನು ಸೃಷ್ಟಿಸಿದೆ.

     ಈ ಪಾಠ ಮಾಡುವ ಕಾರ್ಯಯೋಜನೆಗೆ ಡಿಜಿಟಲೀಕರಣದ ಹೊಸ ಪರಿವೇಷವನ್ನು ತೋಡಿಸುವ ವಿಧಾನ ಎರಡು ರೀತಿಯಲ್ಲಿ ನಡೆಯುತ್ತಿದೆ. ಒಂದು ಶಿಕ್ಷಕರ ಉಪನ್ಯಾಸಗಳ ವಿಡಿಯೋ ತಯ್ಯಾರಿಸಿ ವೆಬ್‍ಸೈಟ್‍ಗಳಿಗೆ ಅಪ್‍ಲೋಡ್ ಮಾಡುವ ವಿಧಾನ. ಈ ವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಯು.ಆರ್.ಎಲ್ ವಿಳಾಸ ಕೊಟ್ಟು ಅಲ್ಲಿರುವ ಲಿಂಕಿನ ಸಹಾಯದಿಂದ ಉಪನ್ಯಾಸಗಳ ವಿಡಿಯೋಗಳನ್ನು ವಿಕ್ಷಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಈ ವಿಧಾನ ಏಕಪಕ್ಷಿಯವಾದದ್ದು. ಇಲ್ಲಿ ಶಿಕ್ಷಕರ ಉಪನ್ಯಾಸಗಳನ್ನು ಆಲಿಸುವುದಷ್ಟೇ ವಿದ್ಯಾರ್ಥಿಗಳ ಕೆಲಸ. ಪಾಠ ಮಾಡುತ್ತಿರುವ ಶಿಕ್ಷಕರೊಂದಿಗೆ ನೇರ ಸಂವಾದ ಸಾಧ್ಯವಿಲ್ಲ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳ ಶಿಕ್ಷಕರಿಂದ ಪಾಠದ ವಿಡಿಯೋಗಳನ್ನು ಪಡೆದು ತನ್ನ ಇಲಾಖೆಯ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದೆ. ಜ್ಞಾನನಿಧಿ ಎನ್ನುವ ಹೆಸರಿನ ಈ ಯೋಜನೆ ಕುರಿತು ಅನೇಕ ಟೀಕೆಗಳು ಕೇಳಿಬಂದವು. ಕನ್ನಡದ ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ್ ಆಗಬೇಕಾದ ಸುಧಾರಣೆಗಳ ಕುರಿತು ದಿನಪತ್ರಿಕೆಗೆ ಲೇಖನವನ್ನು ಬರೆದು ವೆಬ್‍ಸೈಟ್‍ಗೆ ಸೇರಿಸುವುದಕ್ಕಿಂತ ಮೊದಲು ವಿಷಯ ಪರಿಣಿತರಿಂದ ಪರಾಮರ್ಶೆಗೆ ಒಳಪಡಲಿ ಎಂದು ಕಿವಿಮಾತು ಹೇಳಿದರು. ಮಕ್ಕಳ ಶಿಕ್ಷಣದಂಥ ವಿಷಯದ ಕುರಿತು ಯಾವುದೇ ಯೋಜನೆಯನ್ನು ಆರಂಭಿಸುವಾಗ ಆತುರದ ನಿರ್ಣಕ್ಕೆ ಬರುವುದು ಅದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

     ಆನ್‍ಲೈನ್ ಪಾಠದ ಇನ್ನೊಂದು ವಿಧಾನದಲ್ಲಿ ಲೈವ್ ಪಾಠಕ್ಕೆ ಕೂಡ ಅವಕಾಶವಿರುತ್ತದೆ. ನಿರ್ಧಿಷ್ಟ ತಂತ್ರಜ್ಞಾನದ ಸಹಾಯದಿಂದ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ವಿಧಾನವಿದು. ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕನ ನಡುವೆ ನೇರ ಸಂವಹನಕ್ಕೆ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಪಾಠಕ್ಕೆ ಸಂಬಂಧಿಸಿದ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು. ಶಿಕ್ಷಕರಿಗೂ ಕೂಡ ತನ್ನೆದುರು ವಿದ್ಯಾರ್ಥಿಗಳು ಕುಳಿತು ತನ್ನ ಪಾಠವನ್ನು ಆಲಿಸುತ್ತಿರುವರು ಎನ್ನುವಂಥ ಮನಸ್ಥಿತಿ ಇರುತ್ತದೆ. ಉಪನ್ಯಾಸಗಳ ವಿಡಿಯೋ ತಯ್ಯಾರಿಸಿ ಅಪ್‍ಲೋಡ್ ಮಾಡುವ ವಿಧಾನಕ್ಕಿಂತ ಈ ವಿಧಾನ ತುಂಬ ಉಪಯುಕ್ತವಾದದ್ದು. ಈ ಮೊದಲಿನ ವಿಧಾನದಲ್ಲಿ ಗೋಡೆಯತ್ತ ಮುಖಮಾಡಿ ಪಾಠ ಮಾಡಬೇಕಾದ ಶಿಕ್ಷಕರಿಗೆ ಈ ವಿಧಾನದಲ್ಲಿ ಕನಿಷ್ಠ ಪಕ್ಷ ದೂರದಲ್ಲೆಲ್ಲೊ ತಾನು ಪಾಠ ಮಾಡುತ್ತಿರುವ ಸಮಯದಲ್ಲೇ ಆಲಿಸುತ್ತಿರುವ ವಿದ್ಯಾರ್ಥಿಗಳಿರುವರೆನ್ನುವ ಕಲ್ಪನೆಯೇ ತುಂಬ ಸ್ಪೂರ್ತಿದಾಯಕವಾದದ್ದು. ಸಮಸ್ಯೆ ಎಂದರೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಪಾಠವನ್ನು ಆಲಿಸುವ ಸಂದರ್ಭ ಕಡಿಮೆ ಮತ್ತು ಪಾಠದ ಕೊಠಡಿಯಿಂದ ಹೊರತಾದ ವಾತಾವರಣದಲ್ಲಿ ವಿದ್ಯಾರ್ಥಿಗಳಿರುವುದರಿಂದ ಅವರಿಗೆ ಅಡಚಣೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚು. ಜೊತೆಗೆ ವಿದ್ಯಾರ್ಥಿಗಳು ನೆಪ ಮಾತ್ರಕ್ಕೆ ಲಾಗಿನ್ ಆಗಿ ಪಾಠ ಆಲಿಸುವುದರಿಂದ ದೂರ ಉಳಿಯುವ ಸಾಧ್ಯತೆಯೂ ಇರುತ್ತದೆ. 

    ಕೊರೊನಾ ವೈರಾಣು ಸೃಷ್ಟಿದ ಆತಂಕದ ಪರಿಣಾಮ ಅನೇಕ ಕ್ಷೇತ್ರಗಳಲ್ಲಿ ಆದಂತೆ ಶಿಕ್ಷಣ ಕ್ಷೇತ್ರದಲ್ಲೂ ಹಲವಾರು ಬದಲಾವಣೆಗಳು ಕಾಣಿಸಿಕೊಂಡವು. ಲಾಕ್‍ಡೌನ್ ಪರಿಣಾಮ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳ ಪ್ರವೇಶವನ್ನು ನಿಷೇಧಿಸಲಾಯಿತು. ಶಿಕ್ಷಕರು ಆನ್‍ಲೈನ್ ಮೂಲಕ ಪಾಠ ಮಾಡುವಂತೆ ಯೋಜನೆಗಳನ್ನು ರೂಪಿಸಲಾಯಿತು. ತಂತ್ರಜ್ಞಾನದ ಪರಿಚಯವಿಲ್ಲದ ಅನೇಕ ಶಿಕ್ಷಕರಿಗೆ ಈ ಹೊಸ ವಿಧಾನಕ್ಕೆ ಹೊಂದಿಕೊಳ್ಳುವುದು ಸಮಸ್ಯೆಯಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಪಾಠ ಮಾಡುವ ಈ ಹೊಸ ಅವಿಷ್ಕಾರದ ನೇರ ಪರಿಚಯವಿರಬಹುದು ಆದರೆ ಇದೇ ಮಾತನ್ನು ಲಲಿತ ಕಲೆಗಳು ಮತ್ತು ಮಾನವಿಕ ವಿಜ್ಞಾನದ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಅನ್ವಯಿಸಿ ಹೇಳುವುದು ತಪ್ಪು ನಿರ್ಧಾರವಾಗುತ್ತದೆ. ಅದೆಷ್ಟೋ ಶಿಕ್ಷಕರು ತಮ್ಮ ತಮ್ಮ ವಿಷಯಗಳಲ್ಲಿ ಸಾಕಷ್ಟು ಪರಿಣಿತರು ಮತ್ತು ಅನುಭವಿಗಳಾಗಿದ್ದರೂ ಈ ಆನ್‍ಲೈನ್ ಪಾಠದ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಕಷ್ಟು ಸಮಯವಕಾಶ ಬೇಕಾಯಿತು. ಇನ್ನು ಕೆಲವು ಶಿಕ್ಷಕರು ತಂತ್ರಜ್ಞಾನ ಪರಿಣಿತರ ನೆರವು ಪಡೆಯಬೇಕಾಯಿತು. ಇಷ್ಟು ವರ್ಷಗಳ ಕಾಲ ತರಗತಿಯ ಕೊಠಡಿಗಳಲ್ಲಿ ಪಾಠ ಮಾಡಿ ಅನುಭವವಿದ್ದ ಶಿಕ್ಷಕರು ಈ ಹೊಸ ವ್ಯವಸ್ಥೆಯಿಂದ ಮುಜುಗರಕ್ಕೆ ಒಳಗಾಗಬೇಕಾಯಿತು. ಅನೇಕ ಸಂದರ್ಭಗಳಲ್ಲಿ ಇಂಥ ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನೇ ಪ್ರಶ್ನಿಸಿದ್ದೂ ಉಂಟು. ಇಲ್ಲಿ ಶಿಕ್ಷಕರನ್ನು ನೇರವಾಗಿ ಆರೋಪಿಸುವುದು ಸರಿಯಲ್ಲ. ಧೀಡಿರನೆ ಹೀಗೆ ಪಾಠ ಮಾಡುವ ವಿಧಾನವನ್ನು ಒಂದು ವಿಧಾನದಿಂದ ಹೊಸದೊಂದು ವಿಧಾನಕ್ಕೆ ಬದಲಾಯಿಸಿಕೊಳ್ಳುವುದು ಯಾರಿಗಾದರೂ ಸಮಸ್ಯೆಯಾಗುತ್ತದೆ. ಹಾಗೆಂದು ಹಂತಹಂತವಾಗಿ ಹೊಸ ವಿಧಾನವನ್ನು ಪರಿಚಯಿಸುವಷ್ಟು ತಾಳ್ಮೆಯಾಗಲಿ ಮತ್ತು ಸಮಯಾವಕಾಶವಾಗಲಿ ಇರಲಿಲ್ಲ. ಹೊಸ ವಿಧಾನವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆ ಅನಿವಾರ್ಯತೆಯನ್ನು ಸವಾಲಾಗಿ ಸ್ವೀಕರಿಸಿದ ಶಿಕ್ಷಕ ವರ್ಗ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಪಾಠ ಮಾಡಿದ್ದು ನಿಜಕ್ಕೂ ಶ್ಲಾಘಿಸಬೇಕು.

     ಇದೇ ಸಂದರ್ಭ ವಿದ್ಯಾರ್ಥಿಗಳನ್ನು ಕುರಿತು ಕೂಡ ಯೋಚಿಸಬೇಕು. ಅದೆಷ್ಟು ವಿದ್ಯಾರ್ಥಿಗಳಿಗೆ ಇಂಟರ್‍ನೆಟ್, ಲ್ಯಾಪ್‍ಟಾಪ್, ಕಂಪ್ಯೂಟರ್, ಸ್ಮಾರ್ಟ್ ಫೋನ್ಗಳಂಥ ಸೌಲಭ್ಯಗಳನ್ನು ಆನ್‍ಲೈನ್ ಪಾಠಕ್ಕಾಗಿ  ಹೊಂದಿಸಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ಎದುರಾಗುತ್ತದೆ. ಜೊತೆಗೆ ಎಲ್ಲ ವಿದ್ಯಾರ್ಥಿಗಳು ವಾಸಿಸುತ್ತಿರುವುದು ನಗರ ಪ್ರದೇಶದಲ್ಲಿ ಮಾತ್ರವಲ್ಲ. ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವರು. ಉತ್ತಮ ರಸ್ತೆಯ ಸೌಲಭ್ಯವನ್ನೇ ಹೊಂದಿರದ ಅಸಂಖ್ಯಾತ ಹಳ್ಳಿಗಳು ಇವೆ. ಇಂಥ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಇಂಟರ್‍ನೆಟ್ ಸೌಲಭ್ಯಕ್ಕಾಗಿ ಪರದಾಡಬೇಕಾಗುತ್ತದೆ. ಅನೇಕ ಪಾಲಕರಿಗೆ ಆ ಎಲ್ಲ ಸೌಲಭ್ಯಗಳನ್ನು ತಮ್ಮ ಮಕ್ಕಳಿಗೆ ಒದಗಿಸಿಕೊಡುವ ಆರ್ಥಿಕ ಶಕ್ತಿ ಇರುವುದಿಲ್ಲ. ಆಗ ಈ ಗ್ರಾಮೀಣ ಮತ್ತು ಬಡ ವರ್ಗದ ಮಕ್ಕಳು ಆನ್‍ಲೈನ್ ಪಾಠಗಳಿಂದ ವಂಚಿತರಾಗುಳಿಯುವ ಸಾಧ್ಯತೆಯೇ ಹೆಚ್ಚು. 

    ಈ ದೇಶದ ಶಿಕ್ಷಣ ಪದ್ಧತಿಗೆ ಅದರದೆ ಆದ ವಿಶಿಷ್ಠ ಇತಿಹಾಸ ಮತ್ತು ಹಿನ್ನೆಲೆ ಇದೆ. ಗುರುಕುಲ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿದ ನೆಲವಿದು. ವಿದ್ಯಾರ್ಥಿಯಾದವನು ಗುರುವಿನೊಂದಿಗೆ ವಾಸಿಸುತ್ತ ಶಿಕ್ಷಣವನ್ನು ಪಡೆದಾಗಲೇ ಅವನ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎನ್ನುವ ನಂಬಿಕೆ ನಮ್ಮ ಶಿಕ್ಷಣ ಪದ್ಧತಿಯಲ್ಲಿದೆ. ಅದಕ್ಕೆಂದೆ ರಾಜಮನೆತನಗಳ ಮಕ್ಕಳು ಸರ್ವ ಭೋಗಸುಖವನ್ನು ತ್ಯಾಗ ಮಾಡಿ ಕಾಡಿನಲ್ಲಿ ಗುರುವಿನೊಂದಿಗೆ ಆಶ್ರಮದಲ್ಲಿ ಸಾಮಾನ್ಯ ಮಕ್ಕಳಂತೆ ವಾಸಿಸುತ್ತ ಶಿಕ್ಷಣ ಪಡೆಯುತ್ತಿದ್ದರು. ನಮ್ಮದು ಮೆಕಾಲೆ ಶಿಕ್ಷಣ ಪದ್ಧತಿ ಎಂದರೂ ಅದು ಮಧ್ಯದಲ್ಲಿ ಸೇರ್ಪಡೆಯಾದ ವಿಧಾನವೇ ವಿನ: ಪುರಾತನ ಗುರುಕುಲ ಶಿಕ್ಷಣವನ್ನು ಮರೆಯುವಂತಿಲ್ಲ. ಇವತ್ತಿಗೂ ನಮ್ಮ ಶಿಕ್ಷಣಕ್ಕೆ ಭದ್ರಬುನಾದಿಯಾಗಿರುವುದು ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯೇ. ಅದಕ್ಕೆಂದೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಗುರುವಿನ ಪ್ರಾಮುಖ್ಯತೆಯನ್ನು ವಿವರಿಸಿದರು. ‘ಮುಂದೆ ಗುರಿಯಿರಲು, ಹಿಂದೆ ಗುರು ಇರಲು ನಡೆಮುಂದೆ ನುಗ್ಗಿ ನಡೆಮುಂದೆ’ ಎಂದಿರುವರು ಮಹಾನುಭಾವರೊಬ್ಬರು.

    ಈಗ ಕಾಲಬದಲಾಗಿದೆ. ಬೇರೆ ಬೇರೆ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರ ಕೂಡ ಹೊಸ ಹೊಸ ಬದಲಾವಣೆಗಳತ್ತ ಹೆಜ್ಜೆ ಹಾಕುತ್ತಿದೆ. ಬದಲಾಗುತ್ತಿರುವ ಹೊಸ ಮನ್ವಂತರಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿಯೇ ಸಿದ್ಧರಾಗಬೇಕಾಗಿದೆ. ಪರಿವರ್ತನೆ ಅದು ಜಗದ ನಿಯಮ. ಬದಲಾವಣೆ ಅದು ಬೆಳವಣಿಗೆಯ ಲಕ್ಷಣ ಕೂಡ ಹೌದು. ಆದ್ದರಿಂದ ಶಿಕ್ಷಕರು ತಂತ್ರಜ್ಞಾನದ ಹೊಸ ಹೊಸ ಅವಿಷ್ಕಾರಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲೇ ಬೇಕಾಗಿದೆ. ಜೊತೆಗೆ ವಿದ್ಯಾರ್ಥಿಗಳು ಕೂಡ ಹೊಸ ವಾತಾವರಣದಲ್ಲಿ ಪಾಠ ಕೇಳಲು ಸಿದ್ಧರಾಗಬೇಕು. ಹಾಗೆಂದು ಈ ಬದಲಾವಣೆಯೇನೂ ಭವಿಷದಲ್ಲಿಯೂ ಹೀಗೆ ಮುಂದುವರೆಯುತ್ತದೆ ಎಂದೆನಿಲ್ಲ. ಆನ್‍ಲೈನ್ ಪಾಠ ಎನ್ನುವುದು ಸಧ್ಯದ ಬಿಕ್ಕಟ್ಟನ್ನು ಎದುರಿಸಲು ಅದೊಂದು ಪರ್ಯಾಯವೇ ವಿನ: ಅದೇ ಶಾಶ್ವತವಲ್ಲ ಎಂದು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಭವಿಷ್ಯದಲ್ಲಿ ಇಂಥ ಸಮಸ್ಯೆಗಳು ಎದುರಾದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆಯಾಗಿಯೇ ಮಾನಸಿಕವಾಗಿ ಸಿದ್ಧರಾಗಲು ಅಗತ್ಯವಾದ ಮುನ್ನೆಚ್ಚರಿಕೆಯ ಪಾಠವನ್ನು ಕೊರೊನಾ ವೈರಾಣು ಕಲಿಸಿದೆ.

      ಮಹಾಭಾರತದ ಒಂದು ಉಪಕಥೆಯೊಂದಿಗೆ ಲೇಖನವನ್ನು ಆರಂಭಿಸಿದ ನಾನು ಈಗ ಮಹಾಭಾರತದ ಇನ್ನೊಂದು ಉಪಕಥೆಯೊಂದಿಗೆ ಲೇಖನವನ್ನು ಮುಗಿಸುತ್ತೇನೆ. ಕರ್ಣ ಮಹಾಪರಾಕ್ರಮಿ. ಆದರೆ ಆತ ಕೌರವರು ಮತ್ತು ಪಾಂಡವರಂತೆ ರಾಜಕುವರನಲ್ಲ. ಅವರಿಗಿದ್ದ ವಿದ್ಯೆ ಕಲಿಯುವ ಸೌಲಭ್ಯ ಕರ್ಣನಿಗಿರಲಿಲ್ಲ. ಆತನಿಗೋ ಮಧ್ಯಮ ಪಾಂಡವ ಅರ್ಜುನನನ್ನು ಮೀರಿ ಬೆಳೆಯುವ ಹಂಬಲ. ತನ್ನ ಮೂಲವನ್ನೇ ಮರೆಮಾಚಿ ಮಹರ್ಷಿ ಪರುಶುರಾಮರಿಂದ ಬಿಲ್ವಿದ್ಯೆ ಕಲಿತು ಪರಿಣಿತನಾದ. ನಿಜ ತಿಳಿದ ಪರುಶುರಾಮರಿಂದ ಕಲಿತ ವಿದ್ಯೆ ಮರೆತು ಹೋಗಲೆಂದು ಶಾಪ. ಅದು ಕುರುಕ್ಷೇತ್ರದ ರಣಾಂಗಣದಲ್ಲಿ ನಿಜವಾಯ್ತು. ಅರ್ಜುನನ ಎದುರು ಬಿಲ್ಲು ಹಿಡಿದು ನಿಂತ ಕರ್ಣನಿಗೆ ಕಲಿತ ವಿದ್ಯೆ ನೆನಪಿಗೇ ಬರಲಿಲ್ಲ. ಆನ್‍ಲೈನ್ ಪಾಠಗಳನ್ನು ಕೇಳಿ ಸಿದ್ಧರಾಗಿ ಪರೀಕ್ಷಾ ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿಗಳನ್ನು ನೋಡಿದಾಗ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಬಿಲ್ವಿದ್ಯೆಯನ್ನೇ ಮರೆತು ನಿಂತ ಕರ್ಣನಂತೆ ಅವರು ಗೋಚರಿಸುತ್ತಿರುವರು ನನಗೆ.

-ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟೆ 


Tuesday, May 4, 2021

ನಾತಿ ಚರಾಮಿ (ಕಥೆ)

                                             
 


(ಏಪ್ರಿಲ್ ೨೦೨೧ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟ)

     ಈಗೀಗ ಪ್ರಭಂಜನನಿಗೆ ತನ್ನ ಮೇಲೆ ಆಸಕ್ತಿ ಕಡಿಮೆಯಾಗುತ್ತಿದ್ದು ಮತ್ತು ಅವನಿಗೆ ಹೀಗಾಗುತ್ತಿರುವುದಕ್ಕೆ ಬೇರೆ ಹೆಣ್ಣಿನ ಸಾಂಗತ್ಯವೇನಾದರೂ ಕಾರಣವಾಗಿರಬಹುದೇ ಎನ್ನುವ ಸಣ್ಣ ಅನುಮಾನವೊಂದು ಮನಸ್ಸಿನಲ್ಲಿ ಸುಳಿದು ಕ್ರಮೇಣ ಅದು ದೊಡ್ಡದಾಗುತ್ತ ಇಡೀ ಕೋಣೆಯನ್ನು ವ್ಯಾಪಿಸಿ ತನ್ನೆದುರು ಭೂತಾಕಾರವಾಗಿ ಬೆಳೆದು ನಿಂತಂತೆ ಭಾಸವಾದಾಗ ಒಂದು ಕ್ಷಣ ವಸುಮತಿಯ ದೇಹ ಭಯದಿಂದ ಕಂಪಿಸಿ ಆ ಕೊರೆಯುವ ಚಳಿಯಲ್ಲೂ ಹಣೆ ಮತ್ತು ಕುತ್ತಿಗೆಯ ಸುತ್ತ ಬೆವರೊಡೆದು ನಿಧಾನವಾಗಿ ಹರಿಯುತ್ತ ಎದೆಯ ಸೀಳನ್ನು ಹಾಯ್ದು ತೊಟ್ಟಿದ್ದ ಬ್ಲೌಜಿನೊಳಗೆ ಇಂಗಲಾರಂಭಿಸಿತು. ಅಂಥದ್ದೊಂದು ಅನುಮಾನ ಮನಸ್ಸಿನಲ್ಲಿ ಸುಳಿದದ್ದೆ ಕುಳಿತಿದ್ದ ವಸುಮತಿ ಧಡಕ್ಕನೆ ಮಂಚದಿಂದೆದ್ದು ಹತ್ತಿರದಲ್ಲಿರುವ ಅಲ್ಮೆರಾಕ್ಕೆ ಅಂಟಿಸಿದ್ದ ಆಳೆತ್ತರದ ನಿಲುವುಗನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ದಿಟ್ಟಿಸಿ ನೋಡತೊಡಗಿದಳು. ವಿರಳವಾಗುತ್ತಿರುವ ತಲೆಗೂದಲಿನಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಳ್ಳಿರೇಖೆಯಂಥ ಎಳೆಗಳು, ಕಣ್ಣಿನ ಕೆಳಗೆ ಕಟ್ಟಿಕೊಳ್ಳುತ್ತಿರುವ ವರ್ತುಲಾಕಾರದ ಕಪ್ಪು, ಕ್ಷಿಣಿಸುತ್ತಿರುವ ಮುಖದ ಮೇಲಿನ ಕಳೆ, ಒಂದೆರಡು ಹಲ್ಲುಗಳುದುರಿ ಅಸ್ಪಷ್ಟವಾಗಿ ಗೋಚರಿಸುತ್ತಿರುವ ಬಲ ಕೆನ್ನೆಯ ಮೇಲಿನ ಕುಳಿ, ಬಿರಿದ ತುಟಿಗಳು, ಸಡಿಲಾಗುತ್ತಿರುವ ಕುತ್ತಿಗೆ ಮತ್ತು ತೋಳಿನ ಸುತ್ತಲಿನ ಚರ್ಮ, ಮಡಿಕೆ ಬೀಳುತ್ತಿರುವ ಹೊಟ್ಟೆ, ಸೊಂಟದ ಸುತ್ತಲೂ ತುಂಬಿಕೊಳ್ಳುತ್ತಿರುವ ಬೊಜ್ಜು ಒಂದುಕ್ಷಣದ ಮಟ್ಟಿಗೆ ವಸುಮತಿಯ ಮನಸ್ಸಿನಲ್ಲಿ ತಾನು ನೋಡುತ್ತಿರುವುದು ಬೇರೆ ಯಾರದೋ ಪ್ರತಿಬಿಂಬ ಎನ್ನುವ ಭಾವವೊಂದು ಸುಳಿದು ಆ ಭಾವವೇ ಶಾಶ್ವತವಾಗಿರಲಿ ಎಂದೆನಿಸಿತು. ಹಾಗೆ ಕನ್ನಡಿಯಲ್ಲಿನ ತನ್ನ ಪ್ರತಿಬಿಂಬವನ್ನು ದಿಟ್ಟಿಸಿ ನೋಡುತ್ತ ನಿಂತವಳಿಗೆ ಪ್ರಭಂಜನ ಮಾತ್ರವಲ್ಲ ಪ್ರಪಂಚದಲ್ಲಿನ ಯಾವ ಗಂಡಸನ್ನೂ ಆಕರ್ಷಿಸುವ ಸೌಂದರ್ಯ ಇನ್ನು ತನ್ನ ಶರೀರಕ್ಕಿಲ್ಲ ಎಂದೆನಿಸಿ ಅಧೀರಳಾದಳು. ದಾಂಪತ್ಯದ ಬದುಕಿನಲ್ಲಿ ‘ಶಯನೇಶು ರಂಭಾ’ ಎನ್ನುವ ಸೂಕ್ತಿಗೆ ತಾನಿನ್ನು ಹೊರತಾದೆ ಎನ್ನುವ ಭಾವವೇ ಅವಳನ್ನು ಆ ಕ್ಷಣಕ್ಕೆ ಮುತ್ತಿನಿಂತು ಒಂದುರೀತಿ ಶೂನ್ಯ ಆವರಿಸಿದಂತಾಗಿ ಬದುಕಿನ ಬಗ್ಗೆಯೇ ಜಿಗುಪ್ಸೆ ಮೂಡಲಾರಂಭಿಸಿತು.

ವಸುಮತಿಯ ಮನಸ್ಸಿನಲ್ಲಿ ಪ್ರಭಂಜನನ ಬಗ್ಗೆ ಇಂಥದ್ದೊಂದು ಅನುಮಾನ ಮೊಳಕೆಯೊಡೆಯಲು ಕೆಲವು ದಿನಗಳ ಹಿಂದೆ ಆ ದಿನ ರಾತ್ರಿ ಮಲಗುವಾಗ ನಡೆದ ಘಟನೆಯೇ ಕಾರಣವಾಗಿತ್ತು. ನಡೆದದ್ದಿಷ್ಟು- ಎಂದಿನಂತೆ ರಾತ್ರಿ ಊಟದ ನಂತರ ಅಡುಗೆ ಮನೆಯಲ್ಲಿನ ದೀಪಗಳನ್ನಾರಿಸಿ ಬೆಡ್‍ರೂಂಗೆ ಬಂದವಳತ್ತ ಗಮನಕೊಡದೆ ಕೈಯಲ್ಲೊಂದು ಪುಸ್ತಕ ಹಿಡಿದು ಪ್ರಭಂಜನ ಓದುತ್ತ ಕುಳಿತಿದ್ದ. ಈ ಮೊದಲಾದರೆ ಕೈಯಲ್ಲಿ ನೆಪ ಮಾತ್ರಕ್ಕೆ ಪುಸ್ತಕ ಹಿಡಿದು ಕೂಡುತ್ತಿದ್ದವನು ವಸುಮತಿ ಬೆಡ್‍ರೂಂ ಒಳಗೆ ಕಾಲಿಟ್ಟಿದ್ದೆ ಕೈಯಲ್ಲಿನ ಪುಸ್ತಕವನ್ನು ಟೇಬಲ್ ಮೇಲೆ ಒಗೆದು ಅವಳನ್ನು ಎತ್ತಿ ಮಂಚದ ಮೇಲೆ ಮಲಗಿಸಿ ಇಡಿಯಾಗಿ ಆಕ್ರಮಿಸುತ್ತಿದ್ದ. ದೇಹದೊಂದಿಗೆ ದೇಹ ಬೆಸೆದು ತಮ್ಮಿಬ್ಬರದೂ ಒಂದೇ ದೇಹ ಮತ್ತು ಆತ್ಮವೆಂಬಂತೆ ತಣಿದು ಒಬ್ಬರನ್ನೊಬ್ಬರು ತಣಿಸಿ ನಿದ್ದೆಗೆ ಜಾರುವಷ್ಟರಲ್ಲಿ ಮಧ್ಯರಾತ್ರಿಯಾಗಿರುತ್ತಿತ್ತು. ಆದರೆ ಆ ದಿನ ವಸುಮತಿ ಕೋಣೆಯೊಳಗೆ ಬಂದಿದ್ದನ್ನು ನೋಡಿಯೂ ನೋಡದವನಂತೆ ಓದುತ್ತಿರುವ ಪುಸ್ತಕದಲ್ಲಿ ತನ್ನನ್ನು ತಲ್ಲೀನಗೊಳಿಸಿಕೊಂಡವನು ಈ ಇಡೀ ಭೂಮಂಡಲದಲ್ಲಿ ಆ ಪುಸ್ತಕವೊಂದನ್ನು ಹೊರತುಪಡಿಸಿ ತನಗೆ ಯಾವ ಬಾಹ್ಯ ಸಂಪರ್ಕವೂ ಇಲ್ಲವೇನೋ ಎನ್ನುವಂತೆ ಮುಗುಮ್ಮಾಗಿ ಕುಳಿತದ್ದು ವಸುಮತಿಯಲ್ಲಿ ಕೋಪಕ್ಕೆ ಕಾರಣವಾಗಿ ಆ ಕ್ಷಣಕ್ಕೆ ತಾನು ಹೆಣ್ಣೆಂಬ ಸಂಕೋಚವನ್ನು ಬಿಟ್ಟು ಅವನನ್ನು ಕೇಳಿದ್ದಳು ‘ಪ್ರಭ್ ನಿಮಗೆ ನೆನಪಿದೆಯಾ ನಾವಿಬ್ಬರೂ ಸೇರಿ ಎಷ್ಟು ದಿನಗಳಾಯ್ತು ಅಂತ’. ವಸುಮತಿಯ ಪ್ರಶ್ನೆಗೆ ಯಾವ ಅಳುಕು ಅನುಮಾನವಿಲ್ಲದೆ ಪ್ರಭಂಜನ ಉತ್ತರಿಸಿದ್ದ ‘ವಸು ಇಪ್ಪತ್ತು ವರ್ಷಗಳಿಂದ ಇದೇ ಮನೆಯಲ್ಲಿ ಒಟ್ಟಾಗಿ ಬಾಳ್ತಿದ್ದಿವಿ ಇದೇನು ಹೊಸದಾಗಿ ಕೇಳ್ತಿದ್ದಿ’. ಪ್ರಭಂಜನನ ಮಾತು ತನ್ನ ಪ್ರಶ್ನೆಗೆ ಉತ್ತರವೋ ಇಲ್ಲ ಅವನೇ ತನ್ನನ್ನು ಪ್ರಶ್ನಿಸುತ್ತಿರುವನೋ ಎನ್ನುವ ಗೊಂದಲಕ್ಕೊಳಗಾದ ವಸುಮತಿಗೆ ಪ್ರಭಂಜನನ ನಿರ್ಲಿಪ್ತತೆ ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ‘ಪ್ರಭ್ ನನ್ನ ಮಾತಿನ ಅರ್ಥ ನಾವಿಬ್ಬರೂ ಒಟ್ಟಿಗೆ ಸೇರಿ ಐ ಮೀನ್ ಇಂಟರ್‍ಕೋರ್ಸಿಗೆ ಒಳಗಾಗಿ’ ಈ ಸಲ ವಸುಮತಿ ಸಂಕೋಚವನ್ನು ಮುರಿದು ನೇರವಾಗಿಯೇ ಪ್ರಶ್ನಿಸಿದ್ದಳು. ವಸುಮತಿಯ ನೇರವಾದ ಆಕ್ರಮಣಕ್ಕೆ ಪ್ರಭಂಜನನ ನಿರುತ್ಸಾಹ ಮತ್ತು ನಿರುತ್ತರವೇ ಪ್ರತಿಕ್ರಿಯೆಯಾಗಿತ್ತು. ಪ್ರಭಂಜನನ ವರ್ತನೆಯಿಂದ ಆ ರಾತ್ರಿ ವಸುಮತಿಗೆ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತಾಗಿ ನಿದ್ದೆ ಹತ್ತಿರ ಸುಳಿಯದೆ ಅವಳ ಮನಸ್ಸು ಒಂದುರೀತಿಯ ಕ್ಷೋಭೆಯಿಂದ ನರಳಿತು. 

* * *

ನಗರದ ಅನುದಾನಿತ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿರುವ ಪ್ರಭಂಜನ ಆಚಾರ್ಯ ಇಪ್ಪತ್ತು ವರ್ಷಗಳ ಹಿಂದೆ ಅದೇ ಆಗ ನೌಕರಿಗೆ ಸೇರಿದ್ದ ಆ ಆರಂಭದ ದಿನಗಳಲ್ಲಿ ಕಾಲೇಜಿನ ಕ್ಯಾಂಪಸ್‍ನಲ್ಲಿದ್ದ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಅಕೌಂಟ್ ತೆರೆಯಲೆಂದು ಹೋದವನು ಅಲ್ಲಿ ಕ್ಯಾಶ್ ಕೌಂಟರ್‍ನಲ್ಲಿದ್ದ ವಸುಮತಿಗೆ ಮನಸ್ಸು ಒಪ್ಪಿಸಿ ಒಂದು ವರ್ಷದÀ ಕಾಲ ಅವಳ ಹಿಂದೆ ಬಿದ್ದು ಕೊನೆಗೆ ಹಿರಿಯರ ಒಪ್ಪಿಗೆ ಪಡೆದು ತನ್ನ ಪ್ರೀತಿಯನ್ನು ದಾಂಪತ್ಯದಲ್ಲಿ ಪರ್ಯಾವಸಾನಗೊಳಿಸಿದ್ದ. ಬ್ಯಾಂಕಿನ ಕೂಡಿ ಕಳೆಯುವ ಲೆಕ್ಕದ ಬಿಡುವಿಲ್ಲದ ಕೆಲಸದ ಏಕತಾನತೆಯ ನಡುವೆ ಬಳಲಿ ಬೆಂಡಾಗುತ್ತಿದ್ದ ವಸುಮತಿಗೆ ಬ್ಯಾಂಕಿನ ಕೆಲಸದಾಚೆಯೂ ತನಗೊಂದು ಮನಸ್ಸಿದೆ ಮತ್ತು ಬದುಕಿದೆ ಎನ್ನುವುದು ಅವಳ ಅರಿವಿಗೆ ಬರುತ್ತಿದ್ದದ್ದು ಅವಳ ಮುಖದರ್ಶನದಿಂದಲೇ ಕೃತಾರ್ಥನಾದೆನೇನೋ ಎನ್ನುವಂತೆ ದಿನಕ್ಕೆ ಐದಾರು ಬಾರಿ ಕಾಲೇಜಿನಿಂದ ಬ್ಯಾಂಕಿಗೆ ಅಂಡಲೆಯುತ್ತಿದ್ದ ಪ್ರಭಂಜನನಿಂದ ಮಾತ್ರ. ಪುಸ್ತಕಗಳೇ ತನ್ನ ಪ್ರಪಂಚವೆಂದು ಭಾವಿಸಿದ್ದ ಪ್ರಭಂಜನ ಮತ್ತು ದಿನಬೆಳಗಾದರೆ ಡೆಬಿಟ್, ಕ್ರೆಡಿಟ್, ಬ್ಯಾಲೆನ್ಸ್‍ಶೀಟ್‍ಗಳಲ್ಲಿ ಮುಳುಗೇಳುತ್ತಿದ್ದ ವಸುಮತಿ ಪರಸ್ಪರ ವಿರುದ್ಧ ಭಾವಗಳ ಅವರಿಬ್ಬರ ಹೃದಯದಲ್ಲಿ ಅದುಹೇಗೆ ಪ್ರೇಮ ಪಲ್ಲವಿಸಿತು ಎನ್ನುವುದು ಸೃಷ್ಟಿಕರ್ತ ಬ್ರಹ್ಮನಿಗೆ ಗೊತ್ತು. ಲವ್ ಈಜ್ ಬ್ಲೈಂಡ್ ಎನ್ನುವ ಮಾತು ಇಂಥವರನ್ನು ನೋಡಿಯೇ ಹುಟ್ಟಿಕೊಂಡಿರಬಹುದೆನ್ನುವ ಸಂಶಯ ಅವರಿಬ್ಬರ ಬಂಧುಗಳಲ್ಲಿ ಮತ್ತು ಪರಿಚಿತರಲ್ಲಿ ಒಂದಿಷ್ಟು ದಿನ ಹರಿದಾಡಿ ಕೊನೆಗೆ ಅದೊಂದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿತು.

ಮದುವೆಯಾದ ನಾಲ್ಕು ವರ್ಷದೊಳಗೆ ಕೀರ್ತಿಗೊಂದು ಆರತಿಗೊಂದು ಎನ್ನುವಂತೆ ಎರಡು ಮಕ್ಕಳು ಹುಟ್ಟಿ ಅವರ ದಾಂಪತ್ಯಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಇವರಿಬ್ಬರ ಸುಖಸಂಸಾರವನ್ನು ನೋಡಿ ಆನಂದದ ಕಡಲಲ್ಲಿ ತೇಲಾಡಿದ ಅವರವರ ಅಪ್ಪ ಅಮ್ಮ ತಮಗಿನ್ನು ಈ ಲೌಕಿಕ ಬಂಧನ ಸಾಕೆನ್ನುವಂತೆ ಪ್ರಭಂಜನ ಮತ್ತು ವಸುಮತಿಯನ್ನು ಸರ್ವತಂತ್ರ ಸ್ವತಂತ್ರರನ್ನಾಗಿಸಿ ಬೇಗನೆ ತಮ್ಮ ಇಹಲೋಕಯಾತ್ರೆಯನ್ನು ಮುಗಿಸಿದ್ದರು. ಮಕ್ಕಳ ಲಾಲನೆ, ಪಾಲನೆ, ಅವರ ವಿದ್ಯಾಭ್ಯಾಸ, ತಮ್ಮ ತಮ್ಮ ಉದ್ಯೋಗದ ಜಂಜಾಟದಲ್ಲಿ ಇಪ್ಪತ್ತು ವರ್ಷಗಳು ಇಪ್ಪತ್ತು ನಿಮಿಷಗಳಂತೆ ಉರುಳಿಹೋಗಿದ್ದವು. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮಗಳು ಪಿಯುಸಿ, ಮಗ ಟೆಂಥ್ ಓದುತ್ತÀ ಮಕ್ಕಳಿಬ್ಬರೂ ಹಾಸ್ಟೆಲ್ ನಿವಾಸಿಗಳಾದ ಮೇಲೆ ತಾವಿಬ್ಬರೆ ಇರುವ ಆ ಮನೆಯಲ್ಲಿ ಆರಂಭದ ಕೆಲವು ದಿನಗಳು ಪ್ರಭಂಜನ ಮತ್ತು ವಸುಮತಿ ತಾವು ಈಗಷ್ಟೇ ಮದುವೆಯಾದ ನವವಿವಾಹಿತರೇನೋ ಎನ್ನುವಂತೆ ಹಗಲು ರಾತ್ರಿಯ ಪರಿವೆ ಇಲ್ಲದಂತೆ ಸುಖಿಸಿದ್ದರು. ವಸುಮತಿ ಕಳೆದುಹೋದ ತಾರುಣ್ಯ ತನಗೆ ಮತ್ತೆ ಪ್ರಾಪ್ತವಾದಷ್ಟೆ ಖುಷಿಯಿಂದ ಸಂಭ್ರಮಿಸಿದ್ದಳು. 

ಬದುಕು ಯಾವ ಗಳಿಗೆಯಲ್ಲಿ ಯಾವ ತಿರುವು ಪಡೆಯುತ್ತೋ ಯಾರಿಗೆ ಗೊತ್ತು. ಎಲ್ಲವೂ ಸರಿಯಾಗಿದೆ ಎಂದು ಭಾವಿಸಿದ್ದ ವಸುಮತಿಗೆ ಇತ್ತೀಚಿಗೆ ಪ್ರಭಂಜನನ ವರ್ತನೆಯೇ ಒಗಟಾಗಿ ಎಲ್ಲವೂ ಅಯೋಮಯ ಅಗೋಚರವೆನಿಸಿ ಅವನೊಂದು ವಿಚಿತ್ರ ಜೀವಿಯಂತೆ ಅವಳ ಭಾವಕ್ಕೆ ಗೋಚರಿಸಲಾರಂಭಿಸಿದ. ರಾತ್ರಿ ಊಟವಾದ ಮೇಲೆ ಅಡುಗೆ ಮನೆಯಲ್ಲಿನ ಕೆಲಸಕ್ಕೂ ಬಿಡದೆ ತನ್ನನ್ನು ಬೆಡ್ ರೂಂಗೆ ಬಾ ಎಂದು ಪೀಡಿಸುತ್ತಿದ್ದವನು ಈಗ ಕೆಲವು ದಿನಗಳಿಂದ ಊಟ ಮಾಡಿದ್ದೆ ಕೈಯಲ್ಲಿ ಪುಸ್ತಕ ಹಿಡಿದು ತನ್ನೊಂದಿಗೆ ಈ ನಾಲ್ಕು ಗೋಡೆಗಳ ನಡುವೆ ಬೇರೊಂದು ಜೀವವೂ ಉಸಿರಾಡುತ್ತಿದೆ ಎನ್ನುವುದನ್ನೂ ಮರೆತು ಗಂಟೆಗಟ್ಟಲೆ ತಪಸ್ಸಿಗೆ ಕುಳಿತವನಂತೆ ಓದಿನಲ್ಲಿ ಕಳೆದುಹೋಗಲಾರಂಭಿಸಿದ. ಪುಸ್ತಕದ ಪುಟಗಳನ್ನು ಮುಗುಚುವುದು, ಪೆನ್ನಿನಿಂದ ಅಲ್ಲಲ್ಲಿ ಗೆರೆಗಳನ್ನು ಎಳೆಯುವುದು, ಒಮ್ಮೊಮ್ಮೆ ಪುಸ್ತಕದಲ್ಲಿನ ಸಾಲುಗಳನ್ನು ಸ್ವಗತದಲ್ಲಿ ಹೇಳಿಕೊಳ್ಳುವುದು ಇಂಥ ದೈಹಿಕ ಚಲನೆಗಳನ್ನು ಬಿಟ್ಟರೆ ಉಳಿದ ವೇಳೆ ವೈರಾಗ್ಯವೇ ಮೈವೆತ್ತು ಅರೆನಿಮೀಲಿತನಾಗಿ ತಪಸ್ಸಿಗೆ ಕುಳಿತ ಬುದ್ಧನಂತೆ ಕಾಣಲಾರಂಭಿಸಿದಾಗ ವಸುಮತಿಗೆ ಭಯ ಶುರುವಾಯಿತು. 

* * *

ವಸುಮತಿ ತನ್ನನ್ನಾವರಿಸಿದ ಭಯದಿಂದ ಬಿಡುಗಡೆಗೊಳ್ಳಲು ತನ್ನ ಮನದ ಬೇಗುದಿಯನ್ನು ಬ್ಯಾಂಕಿನಲ್ಲಿ ಎಲ್ಲರ ಸಮಸ್ಯೆಗಳಿಗೂ ಒಂದಿಲ್ಲೊಂದು ಪರಿಹಾರ ಸೂಚಿಸುವ ವಿಶೇಷವಾಗಿ ಮಹಿಳಾ ಸಹೋದ್ಯೋಗಿಗಳ ವಲಯದಲ್ಲಿ ಕೌನ್ಸೆಲರ್ ಎಂದೇ ಖ್ಯಾತಳಾದ ಸರಳಾ ದೇಶಪಾಂಡೆ ಎದುರು ಹೊರಹಾಕಿದ್ದೆ ಎಡವಟ್ಟಾಗಿ ಪ್ರಭಂಜನನ ನಿರ್ಲಿಪ್ತತೆ ಬೇರೆ ಬೇರೆ

ವ್ಯಾಖ್ಯಾನಗಳನ್ನು ಪಡೆಯುತ್ತ ದಿನಕ್ಕೊಂದು ಹೊಸ ಅರ್ಥ ಹುಟ್ಟಿಸತೊಡಗಿತು. ಐವತ್ತರ ನಂತರ ಗಂಡಸರಿಗೆ ತಮ್ಮ ಹೆಂಡತಿಯನ್ನು ಹೊರತುಪಡಿಸಿ ಪ್ರಪಂಚದಲ್ಲಿರುವ ಬೇರೆ ಎಲ್ಲ ಹೆಂಗಸರೂ ತ್ರೀಲೋಕ ಸುಂದರಿಯರಾಗಿ ಕಾಣಿಸುವರೆಂದು, ಹೊರಗೆ ಮೇಯುವ ಚಾಳಿ ಬೆಳೆಸಿಕೊಂಡು ಹೆಂಡತಿಯೆದುರು ಏನೂ ಗೊತ್ತಿಲ್ಲದ ಸಂಭಾವಿತರಂತೆಯೂ ನಿರ್ಲಿಪ್ತರಂತೆಯೂ ನಡೆದುಕೊಳ್ಳುವರೆಂದು, ಹೆಂಡತಿ ಪಕ್ಕದಲ್ಲಿ ಮಲಗಿ ಕರೀನಾನೋ ಕತ್ರಿನಾಳನ್ನೋ ಕನವರಿಸುವರೆಂದು ಸರಳಾ ದೇಶಪಾಂಡೆ ಭಯಂಕರ ಗುಟ್ಟೊಂದನ್ನು ಹೊರಗೆಡವಿದ್ದಲ್ಲದೇ  ತಮ್ಮದೇ ಬ್ಯಾಂಕಿನ ಮೂರ್ನಾಲ್ಕು ಗಂಡು ಸಹೋದ್ಯೋಗಿಗಳನ್ನು ಉದಾಹರಣೆ ಸಹಿತ ಹೆಸರಿಸಿ ವಸುಮತಿಯಲ್ಲಿ ಏಕಕಾಲಕ್ಕೆ ಭಯ ಮತ್ತು ಗಂಡನ ಮೇಲೆ ಅನುಮಾನ ಇನ್ನಷ್ಟು ಹೆಚ್ಚಲು ಕಾರಣಳಾದಳು. ಈಗ ವಸುಮತಿಗೆ ಪ್ರಭಂಜನನನ್ನು ವಿವಿಧ ರೀತಿಯಿಂದ ಪರೀಕ್ಷಿಸಿ ನೋಡುವುದು ದಿನನಿತ್ಯದ ಕೆಲಸದ ಜೊತೆಗೆ ಮತ್ತೊಂದು ಹೊಸ ಕೆಲಸವಾಯಿತು. ಪ್ರಭಂಜನನ ಜೇಬು ತಡಕಾಡುವದರೊಂದಿಗೆ ಆರಂಭಗೊಂಡ ವಸುಮತಿಯ ತಪಾಸಣೆ ಅವನ ಮೊಬೈಲ್, ವಾಟ್ಸಪ್, ಫೇಸ್‍ಬುಕ್, ಇ-ಮೇಲ್, ಇನ್ಸ್‍ಟಾಗ್ರಾಮ್, ಟ್ವಿಟರ್‍ಗಳನ್ನು ಜಾಲಾಡುವುದರ ತನಕ ಮುಂದುವರೆಯಿತು. ಯಾವ ಸುಳಿವು ಸಿಗದೆ ಹೋದಾಗ ಪ್ರಭಂಜನ ತುಂಬ ಹುಷಾರಾಗಿ ಸರಳಾ ದೇಶಪಾಂಡೆ ಉಲ್ಲೇಖಿಸಿದ ಆ ಎಲ್ಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರಬಹುದೆನ್ನುವ ತೀರ್ಮಾನಕ್ಕೆ ವಸುಮತಿ ಬಂದಿದ್ದಳು. 

ಈಗೀಗ ವಸುಮತಿಗೆ ಕನ್ನಡಿ ಎದುರು ಗಂಟೆಗಟ್ಟಲೆ ನಿಂತು ಅಲಂಕರಿಸಿಕೊಳ್ಳುವ ಹೊಸ ಅಭ್ಯಾಸವೊಂದು ಶುರುವಾಗಿದೆ. ಮೊದಲೆಲ್ಲ ಮುಖಕ್ಕೆ ಒಂದಿಷ್ಟು ಪೌಡರ್ ಲೇಪಿಸಿ ನೆಪಕ್ಕೆ ಎನ್ನುವಂತೆ ತಲೆಯ ಮೇಲೆ ಬಾಚಣಿಗೆ ಆಡಿಸಿಕೊಂಡು ಜುಟ್ಟಿಗೊಂದು ಹೇರ್ ಬಾಂಡ್ ಸಿಕ್ಕಿಸಿ ಕೆಲಸಕ್ಕೆ ತಡವಾಯಿತೆಂದು ಮನೆಗೆ ಬೀಗಹಾಕಿ ಓಡುತ್ತಿದ್ದವಳು ಈಗ ಬೆಡ್ ರೂಮಿನ ಅಲ್ಮೆರಾದ ನಿಲುವುಗನ್ನಡಿ ಎದುರು ಹೆಚ್ಚಿನ ಸಮಯ ಕಳೆಯುವುದನ್ನು ರೂಢಿಸಿಕೊಂಡಿರುವಳು. ರಿಟೈರ್ಡ್ ಆಗಲು ಒಂದು ವರ್ಷವಷ್ಟೇ ಬಾಕಿ ಇರುವ ಮ್ಯಾನೇಜರ್ ಶ್ರೀಧರರಾವ್ ಬ್ಯಾಂಕಿಗೆ ಬಂದುಹೋಗುವ ಮಹಿಳಾ ಗ್ರಾಹಕರನ್ನು ಯಾವ ಯಾವುದೋ ಕಾರಣ ಮುಂದೆಮಾಡಿಕೊಂಡು ಮಾತನಾಡಿಸುವುದು ಪಾಸ್‍ಬುಕ್ ಕೊಡುವ ನೆಪದಲ್ಲಿ ಮೈ ಕೈ ಮುಟ್ಟುವುದು ಆಗಾಗ ವಲ್ಗರ್ ಜೋಕುಗಳನ್ನು ಹೇಳಿ ನಗುವುದನ್ನು ನೋಡಿ ವಸುಮತಿಗೆ ಪ್ರಪಂಚದಲ್ಲಿನ ಗಂಡಸರೆಲ್ಲ ಒಂದೇ ಜಾತಿಯವರೆಂದೆನಿಸಿ ಇಡೀ ಗಂಡುಕುಲವೇ ನಂಬಿಕೆಗೆ ಅನರ್ಹ ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಪ್ರಭಂಜನ ಕೂಡ ಕಾಲೇಜಿನಲ್ಲಿ ಅಲ್ಲಿನ ಮಹಿಳಾ ಸಹೋದ್ಯೋಗಿಗಳೊಂದಿಗೆ ಇದೇ ರೀತಿ ವರ್ತಿಸುತ್ತಿರಬಹುದೆನ್ನುವ ಕಲ್ಪನೆಯಿಂದಲೇ ವಸುಮತಿ ಅದೆಷ್ಟು ದಿಗಿಲುಗೊಂಡಳೆಂದರೆ ಮರುದಿನ ಬ್ಯಾಂಕಿಗೆ ರಜೆ ಹಾಕಿದವಳೆ ಬ್ಯೂಟಿ ಪಾರ್ಲರಿಗೆ ಹೋಗಿ ಅಲ್ಲಿನ ಬ್ಯೂಟಿಶಿಯನ್‍ಗೆ ಮುಖಕೊಟ್ಟು ಕುಳಿತವಳು ಮಧ್ಯಾಹ್ನದ ಹೊತ್ತಿಗೆ ಮೇಕಪ್ ಎಂಬ ಮಾಯೆಯ ಸಕಲ ಚರಾಚರ ಕ್ರಿಯೆಗಳು ಪೂರ್ಣಗೊಂಡು ಕನ್ನಡಿಯಲ್ಲಿ ಹೊಳೆಯುತ್ತಿರುವ ತನ್ನ ಮುಖವನ್ನು ನೋಡಿದಾಗಲೇ ಅವಳಿಗೆ ಸಮಾಧಾನವಾಯಿತು. 

ಸಾಯಂಕಾಲ ಕಾಲೇಜಿನಿಂದ ಮನೆಗೆ ಬಂದ ಪ್ರಭಂಜನನಿಗೂ ವಸುಮತಿ ಇವತ್ತು ಎಂದಿನಂತಿಲ್ಲ ಅವಳಲ್ಲಿ ಏನೋ ಬದಲಾವಣೆಯಾದಂತಿದೆ ಎಂದೆನಿಸಿದರೂ ಅಂವ ಪ್ರತಿದಿನದಂತೆ ಮುಖ ತೊಳೆದು ಟೀ ಕುಡಿದು ಬೆಡ್ ರೂಂಗೆ ಹೋಗಿ ಪುಸ್ತಕ ಕೈಯಲ್ಲಿ ಹಿಡಿದು ಕುಳಿತ. ವಸುಮತಿ ಕೆಲಸವಿಲ್ಲದಿದ್ದರೂ ಬೇಕೆಂದೆ ಅಡುಗೆ ಮನೆ ಮತ್ತು ಬೆಡ್‍ರೂಂ ನಡುವೆ ಹತ್ತಾರು ಬಾರಿ ಓಡಾಡಿದಳು. ಕಾರಣವಿಲ್ಲದೆ ಪ್ರಭಂಜನನನ್ನು ಮಾತನಾಡಿಸಿದಳು. ಸ್ಲೀವ್‍ಲೆಸ್ ರವಿಕೆ ತೊಟ್ಟವಳು ಗಳಿಗೆಗೊಮ್ಮೆ ಕೂದಲನ್ನು ಕೆರೆದು ನುಣುಪಾಗಿಸಿದ ಕಂಕುಳನ್ನು ಬೇಕೆಂದೆ ಕೈಯೆತ್ತಿ ಪ್ರಭಂಜನನಿಗೆ ಕಾಣುವಂತೆ ಪ್ರದರ್ಶಿಸಿದಳು. ಅಂದು ರಾತ್ರಿ ಪ್ರಭಂಜನ ಕೂಡ ಒಂದಿಷ್ಟು ಸಕಾರಾತ್ಮಕವಾಗಿ ಸ್ಪಂದಿಸಿದ. ಊಟದ ನಂತರ ಪುಸ್ತಕ ಕೈಗೆತ್ತಿಕೊಳ್ಳದೆ ಬೇಗನೆ ಮಂಚ ಸೇರಿದವನು ಹತ್ತಿರ ಬಂದವಳನ್ನು ಬರಸೆಳೆದು ಅಪ್ಪಿದ. ವಸುಮತಿಯ ದುರಾದೃಷ್ಟವೋ ಏನೋ ದೇಹಕ್ಕೆ ದೇಹ ಬೆಸೆದುಕೊಂಡು ಉನ್ಮತ್ತಗೊಂಡಿರುವ ಗಳಿಗೆ ನಿನ್ನೆಯಷ್ಟೆ ಓದಿ ಮುಚ್ಚಿಟ್ಟ ಫ್ರಾಂಝ್ ಕಾಫ್ಕಾನ ‘ಮೆಟಾಮಾರ್ಫಾಸಿಸ್’ ಕಥೆಯ ಗ್ರೇಗರ್‍ನ ಪಾತ್ರ ಪ್ರಭಂಜನನ ಮನದಲ್ಲಿ ಸುಳಿದು ತಾವಿಬ್ಬರೂ ಒಂದು ದೊಡ್ಡ ಕ್ರಿಮಿಯಾಗಿ ರೂಪಾಂತರಗೊಳ್ಳುತ್ತಿರುವಂತೆ ಭಾಸವಾಗಿ ಅಸಹ್ಯ ಭಾವನೆಯೊಂದು ಮೂಡಿ ಹೆಂಡತಿಯನ್ನು ದೂರತಳ್ಳಿ ಪಕ್ಕಕ್ಕೆ ಉರುಳಿದ. ಸುಖದ ಉತ್ತುಂಗದಲ್ಲಿದ್ದವಳನ್ನು ಎತ್ತಿ ಪಾತಾಳಕ್ಕೆ ಒಗೆದಂತಾಯಿತು. ಸದ್ದು ಕೇಳಿಸಿದತ್ತ ದೃಷ್ಟಿ ಹರಿಸಿದವಳಿಗೆ ಕೋಣೆಯ ಮೂಲೆಯಲ್ಲಿ ಪುಸ್ತಕ ಕೈಯಲ್ಲಿ ಹಿಡಿದು ಧ್ಯಾನಮಗ್ನನಾದ ಮುನಿಯಂತೆ ಕುಳಿತಿದ್ದ ಪ್ರಭಂಜನ ಕಣ್ಣಿಗೆ ಬಿದ್ದ. ಪ್ರಭಂಜನನಿಗೆ ಸೆಕ್ಸ್‍ನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆಯೋ ಇಲ್ಲ ನನ್ನ ಮೇಲೆ ನಿರಾಸಕ್ತಿ ಮೂಡುತ್ತಿದೆಯೋ ಎಂದು ಗೊಂದಲಕ್ಕೊಳಗಾದ ವಸುಮತಿ ಮರುದಿನ ಅವನನ್ನು ಪರೀಕ್ಷೆಗೊಳಪಡಿಸುವ ಕಾರ್ಯತಂತ್ರವನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಸಿದ್ಧಪಡಿಸಿದಳು. 

* * *

ಪ್ರಭಂಜನನನ್ನು ಕತ್ರಿನಾಳ ಆಳೆತ್ತರದ ಫೋಟೋದ  ಎದುರು ನಿಲ್ಲಿಸಿ ಅಂಗಡಿ ಒಳಹೊಕ್ಕ ವಸುಮತಿ ಬೇಕೆಂದೆ ಬಟ್ಟೆ ಹುಡುಕುವ ನೆವದಲ್ಲಿ ಅಂಗಡಿಯೊಳಗಿಂದ ಹೊರಬರಲು ಒಂದರ್ಧಗಂಟೆ ತಡಮಾಡಿದಳು. ಜನನಿಬಿಡ ಪ್ರದೇಶದ ಆಯಕಟ್ಟಿನ ಜಾಗದಲ್ಲಿರುವ ‘ಇನ್ನರ್ ಕಂಫರ್ಟ್’ ಹೆಸರಿನ ಆ ಬಟ್ಟೆಯಂಗಡಿ ಎದುರು ಅರೆಬರೆ ಪೋಷಾಕಿನಲ್ಲಿ  ಅರೆಬೆತ್ತಲೆಯಾಗಿ ಕಂಗೊಳಿಸುತ್ತಿರುವ ಕತ್ರಿನಾಳ ದಿವ್ಯ ಸೌಂದರ್ಯಕ್ಕೆ ಒಂದುಕ್ಷಣದ ಮಟ್ಟಿಗಾದರೂ ದಾರಿಹೋಕರನ್ನು ತನ್ನತ್ತ ಸೆಳೆದು ನಿಲ್ಲಿಸುವ ಮಾದಕತೆಯಿತ್ತು. ಪ್ರಭಂಜನನನ್ನು ಪರೀಕ್ಷಿಸಲೆಂದೋ ಅಥವಾ ಅವನನ್ನು ಉನ್ಮಾದಗೊಳಿಸಲೆಂದೋ ಬಟ್ಟೆಕೊಳ್ಳುವ ನೆಪದಲ್ಲಿ ಕರೆತಂದಿದ್ದ ವಸುಮತಿ ಒಳಗೆ ಬಟ್ಟೆ ಹುಡುಕುತ್ತಿದ್ದರೂ ಅವಳ ಒಂದು ಕಣ್ಣು ಕತ್ರಿನಾಳ ಫೋಟೋದ  ಎದುರು ನಿಂತಿದ್ದ ಗಂಡನ ಮೇಲೆಯೇ ನೆಟ್ಟಿತ್ತು. ಪ್ರಭಂಜನ ತನ್ನೆದುರಿನ ಆಳೆತ್ತೆರದ ಕತ್ರಿನಾಳ ಭಾವಚಿತ್ರವನ್ನೆ ತದೇಕಚಿತ್ತನಾಗಿ ನೋಡುತ್ತಿದ್ದವನು ಒಮ್ಮೆ ಕತ್ರಿನಾಳ ಎಡಕ್ಕೂ ಮತ್ತೊಮ್ಮೆ ಬಲಕ್ಕೂ ಮಗದೊಮ್ಮೆ ಮೇಲೆ ಕೆಳಗೆ ಹೀಗೆ ಕ್ಷಣ ಕ್ಷಣಕ್ಕೂ ದೃಷ್ಟಿ ಬದಲಿಸುತ್ತಿದ್ದವನು ಅದಕ್ಕೆ ತಕ್ಕಂತೆ ತಾನು ನಿಂತ ಭಂಗಿಯನ್ನೂ ಬದಲಿಸುತ್ತ ವಸುಮತಿಯಲ್ಲಿ ಆಸೆ ಭರವಸೆಗಳ ಮಹಾಪೂರವನ್ನೇ ಹುಟ್ಟಿಸಿದ. ಅಂಗಡಿಯೊಳಗಿಂದ ಹೊರಬಂದು ಪ್ರಭಂಜನನನ್ನೆ ದಿಟ್ಟಿಸಿ ನೋಡಿದವಳ ಕಣ್ಣಿಗೆ ಅವನಲ್ಲೇನೋ ಬದಲಾವಣೆಯಾದಂತೆ ಭಾಸವಾಯಿತವಳಿಗೆ. ಅವನನ್ನು ವಾಸ್ತವಕ್ಕೆಳೆಯುತ್ತ ‘ಏನೂ ಪ್ರೊಫೆಸರ್  ಸಾಹೇಬರು ಇನ್ನೊಂದಿಷ್ಟು ಹೊತ್ತು ನಾನು ಬರುವುದು ತಡವಾಗಿದ್ದರೆ ಕತ್ರಿನಾಳನ್ನು ತಿಂದೇ ಬಿಡ್ತಿದ್ದಿರೇನೋ’ ಎಂದು ನಗೆಯಾಡಿದಳು. ‘ಅಲ್ಲ ವಸು ಹೀಗೆ ಬಟ್ಟೆಯಿಲ್ಲದೆ ಅರೆಬೆತ್ತಲೆಯಾಗಿ ದೇಹನ ಪ್ರದರ್ಶಿಸಿದರೆ ನೋಡುವವರಲ್ಲಿ ಆಸಕ್ತಿ ಹುಟ್ಟಿಸಬಹುದು ಅಂತ ಭಾವಿಸ್ತಾರಲ್ಲ ಎಂಥ ಮೂರ್ಖರಿವರು. ಸೌಂದರ್ಯ ಇರೋದು ಬಿಚ್ಚಿ ತೋರಿಸೊದರಲ್ಲಲ್ಲ. ಮುಚ್ಚಿಟ್ಟಾಗ ಮನಸ್ಸಿನಲ್ಲಿ ಮೂಡುವ ಕುತೂಹಲ, ಕಲ್ಪನೆ ಬಿಚ್ಚಿಟ್ಟಾಗ ಇರಲ್ಲ ನೋಡು. ಬಿಚ್ಚಿದ ಆ ಕ್ಷಣಕ್ಕೆ ಇರೋದು ಇಷ್ಟೇನಾ ಅನ್ನೊ ನಿರ್ಲಿಪ್ತತೆ ಹುಟ್ಟುತ್ತೆ’ ಪ್ರಭಂಜನನ ಮಾತು ಕೇಳುತ್ತ ವಸುಮತಿಗೆ ಅದೇ ಆಗ ಮೂಡಿದ್ದ ಭರವಸೆಗಳೆಲ್ಲ ಒಂದೊಂದಾಗಿ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಂತೆ ಭಾಸವಾಗಿ ಕಂಗಳು ಹನಿಗೂಡಿದವು.

* * *

ಬ್ಯಾಂಕಿನ ಕೇಂದ್ರ ಕಚೇರಿಯ ಮುಖ್ಯಸ್ಥರಾದ ಸುಬ್ರತೋ ಬ್ಯಾನರ್ಜಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಯುಕ್ತ ಬ್ಯಾಂಕ್‍ನ ಸಭಾಂಗಣದಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬ್ಯಾಂಕಿನ ಉದ್ಯೋಗಿಗಳು ಮಾತ್ರವಲ್ಲದೆ ಊರಿನ ಗಣ್ಯರು, ನಾಗರಿಕರು ಕೂಡ ಪಾಲ್ಗೊಂಡು ಸಭಾಂಗಣ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಸುಬ್ರತೋ ಬ್ಯಾನರ್ಜಿ ಮತ್ತು ಅವರ ಪತ್ನಿ ಮೃಣಾಲಿನಿ ಬ್ಯಾನರ್ಜಿ ಆಸೀನರಾಗಿದ್ದರು. ಮೃಣಾಲಿನಿ ಬಂಗಾಳಿ ಭಾಷೆಯಲ್ಲಿ ಹಲವಾರು ಕಥೆ ಕಾದಂಬರಿಗಳನ್ನು ಬರೆದು ಜನಪ್ರಿಯ ಬರಹಗಾರ್ತಿಯೆಂದು ಹೆಸರು ಮಾಡಿದ್ದರು. ಅವರ ಅನೇಕ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಮೃಣಾಲಿನಿ ಕನ್ನಡಿಗರಿಗೂ ಪರಿಚಿತರಾಗಿದ್ದರು. ಅವರನ್ನು ಕಣ್ಣಾರೆ ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ಸುಬ್ರತೋ ಬ್ಯಾನರ್ಜಿ ಎಲ್ಲರಿಗೂ ಧನ್ಯವಾದ ಹೇಳಿದರು. ತಾವು ಸವೆಸಿದ ಬದುಕಿನ ದಾರಿಯನ್ನು ನೆನಪಿಸಿಕೊಂಡು ಭಾವುಕರಾದರು. ಬಾಳಿನ ಈ ಪಯಣದಲ್ಲಿ ಜೊತೆಗೆ ನಿಂತು ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿದರು. ತಮ್ಮ ಪತ್ನಿ ಮೃಣಾಲಿನಿಯನ್ನು ಬಾಯಿತುಂಬ ಹೊಗಳಿದರು. ಬ್ಯಾಂಕಿನ ವ್ಯವಹಾರಿಕ ಜಗತ್ತಿನÀ ಸುಬ್ರತೋ ಸೃಜನಶೀಲ ಕ್ಷೇತ್ರದಲ್ಲಿನ ಮೃಣಾಲಿನಿ ಬದುಕಿನ ಈ ಪಯಣದಲ್ಲಿ ಪರಸ್ಪರ ವಿಭಿನ್ನ ಅಭಿರುಚಿಗಳ ಅವರಿಬ್ಬರೂ ಜೊತೆಯಾದದ್ದೇ ಒಂದು ಸೋಜಿಗ ಎಂದು ಅಚ್ಚರಿಪಟ್ಟರು. ‘ಪರಸ್ಪರ ನಂಬಿಕೆ, ಗೌರವ, ವಿಶ್ವಾಸಗಳೇ ದಾಂಪತ್ಯದ ಯಶಸ್ಸಿನ ತಳಹದಿಗಳು. ನಾನು ಮೃಣಾಲಿನಿಯ ಬೆಳವಣಿಗೆಗೆ ನೀರೆರೆದೆ ಅವಳು ನನ್ನ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಳು. ನಾನು ಅವಳ ಅಭಿರುಚಿ, ಆಸಕ್ತಿಯನ್ನು ಗೌರವಿಸಿದೆ ಅವಳು ನನ್ನ ವ್ಯವಹಾರಿಕ ಪ್ರಜ್ಞೆಯನ್ನು ವಿಸ್ತರಿಸಿದಳು. ದಾಂಪತ್ಯ ಎನ್ನುವುದು ಕೇವಲ ದೇಹದ ಆಕರ್ಷಣೆ ಮಾತ್ರವಲ್ಲ. ಕಾಮವೇ ದಾಂಪತ್ಯದ ಬದುಕಿನ ಪರಮಾವಧಿಯೂ ಮತ್ತು ಅಂತಿಮ ಸತ್ಯವೂ ಅಲ್ಲ. ಧರ್ಮೆಚ, ಅರ್ಥೇಚ, ಕಾಮೆಚ, ಮೋಕ್ಷೆಚ ಅಹಮ್ ಇವಾಮ್ ನಾತಿಚರಾಮಿ ಎಂದು ಸಪ್ತಪದಿ ತುಳಿದ ದಾಂಪತ್ಯದಲ್ಲಿ ಕಾಮ ಅಥವಾ ಸೆಕ್ಸ್ ಅದೊಂದು ಸಂತಾನಭಿವೃದ್ಧಿಗೆ ಅಗತ್ಯವಾದ ಕ್ರಿಯೆಯೇ ವಿನ: ಅದೇ ಇಡೀ ಬದುಕಲ್ಲ’ ಎಂದು ಹಿತನುಡಿಗಳನ್ನಾಡಿದರು. ಸುಬ್ರತೋ ಬ್ಯಾನರ್ಜಿ ಅವರ ಮಾತುಗಳನ್ನಾಲಿಸುತ್ತ ವಸುಮತಿ ಒಂದು ಕ್ಷಣ ತನ್ನ ಇರುವಿಕೆಯನ್ನೇ ಮರೆತಳು. ಅವಳ ಭಾವಕೋಶದ ತುಂಬ ಪ್ರಭಂಜನನೇ ತುಂಬಿಕೊಂಡ. ಪ್ರಭಂಜನನ ವಿಸ್ತಾರವಾದ ಓದು, ಆಸಕ್ತಿ, ವಿದ್ವತ್‍ಗಳೆದುರು ಕಾಮ ಅರ್ಥಹೀನ ಎಂದೆನಿಸತೊಡಗಿತವಳಿಗೆ. ಸಭಾಂಗಣದ ಬಾಗಿಲ ಬಳಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ಮೃಣಾಲಿನಿಯವರ ಪುಸ್ತಕಗಳಿಂದ ಎರಡು ಅನುವಾದಿತ ಕಥಾಸಂಕಲನಗಳನ್ನು ಪ್ರಭಂಜನಗಾಗಿ ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದಳು. 

* * *

ಮನುಷ್ಯ ಪಾಠ ಕಲಿಯದಿದ್ದರೆ ಕೆಲವೊಮ್ಮೆ ಬದುಕೇ ಅವನಿಗೆ ಪಾಠ ಕಲಿಸುತ್ತದಂತೆ. ವಸುಮತಿಯ ವಿಷಯದಲ್ಲಿ ಈ ಮಾತು ನಿಜವಾಯಿತು. ಕೈಯಲ್ಲಿ ಮೃಣಾಲಿನಿಯವರ ಅನುವಾದಿತ ಕಥಾಸಂಕಲನಗಳನ್ನು ಹಿಡಿದು ಹೊಸ ಮನುಷ್ಯಳಾಗಿ ಅವಸರವಸರದಿಂದ ಮನೆಯತ್ತ ಹೆಜ್ಜೆಹಾಕುತ್ತಿದ್ದವಳನ್ನು ಹಿಂದುಗಡೆಯಿಂದ ಬಂದ ಬೈಕ್ ಸವಾರನೊಬ್ಬ  ಅದು ಯಾವ ಮಾಯದಲ್ಲೋ ಗುದ್ದಿ ಮುಂದೆಹೋದ. ಬೈಕ್ ಹಾಯ್ದದ್ದೊಂದು ನೆಪವಾಗಿ ವಸುಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಒಂದು ತಿಂಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಯಿತು. ಪರೀಕ್ಷೆ ಕಾಲವಾದ್ದರಿಂದ ಮಗ ಮತ್ತು ಮಗಳು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ‘ಟೇಕ್ ಕೇರ್ ಮಮ್ಮಿ’ ಎಂದು ಮಾತು ಮುಗಿಸಿದ್ದರು. ಆ ಇಡೀ ಒಂದು ತಿಂಗಳು ಪ್ರಭಂಜನ ಕಾಲೇಜಿಗೆ ರಜೆಹಾಕಿ ವಸುಮತಿಯ ಆರೈಕೆಗೆ ನಿಂತ. ಬೆಳಗ್ಗೆ ಬೆಡ್ ಟೀನಿಂದ ಹಿಡಿದು ರಾತ್ರಿ ಊಟ ಮಾಡಿಸಿ ಮಲಗಿಸುವವರೆಗೂ ಅವಳನ್ನು ಮಗುವಿನಂತೆ ಜೋಪಾನ ಮಾಡಿದ. ಸ್ನಾನ ಮಾಡಿಸುವುದು, ಮೈ ಒರೆಸುವುದು, ಬಟ್ಟೆ ತೊಡಿಸುವುದು ಆಗೆಲ್ಲ ವಸುಮತಿ, ಪ್ರಭಂಜನನ ಕೈಯೊಳಗೆ ಮಗುವಿನಂತಾಗುತ್ತಿದ್ದಳು. ದಿನಗಳುರುಳುತ್ತಿದ್ದಂತೆ ವಸುಮತಿಗೆ ದಾಂಪತ್ಯದಲ್ಲಿ  ಕಾಮದಾಚೆಗೂ ಒಂದು ವಿಸ್ತೃತವಾದ ಬದುಕಿದೆ ಎನ್ನುವುದು ಅರ್ಥವಾಗತೊಡಗಿತು. ಈಗ ಅವಳು ಪ್ರಭಂಜನನನ್ನು ಹೊಸ ಅರ್ಥದಲ್ಲಿ ನೋಡುತ್ತಾಳೆ. ಈ ಮೊದಲಿನ ಆತಂಕ, ಉದ್ವಿಗ್ನತೆಗಳಿಲ್ಲದೆ ವಸುಮತಿ ಬದುಕನ್ನು ಪ್ರೀತಿಸಲಾರಂಭಿಸಿದ್ದಾಳೆ. ದಿನದಿನಕ್ಕೂ ಬದಲಾಗುತ್ತಿರುವ ವಸುಮತಿಯನ್ನು ಪ್ರಭಂಜನ ಕೂಡ ಅವಳೊಂದು ಚಿಕ್ಕಮಗುವೇನೋ ಎನ್ನುವಂತೆ ಪ್ರೀತಿಸತೊಡಗಿದ. ಚೇತರಿಸಿಕೊಂಡು ಪುನ: ಕೆಲಸಕ್ಕೆ ಹೋಗಲಾರಂಭಿಸಿದ ಮೊದಲ ದಿನ ಪ್ರಭಂಜನನೆ ಅವಳನ್ನು ಬ್ಯಾಂಕ್‍ವರೆಗೂ ಡ್ರಾಪ್ ಮಾಡಿದ. ಅವನೆಡೆ ಕೈಬೀಸಿ ಒಳಹೋಗುತ್ತಿದ್ದವಳ ನಡಿಗೆಯಲ್ಲಿ ಒಂದುರೀತಿಯ ಎಂದೂ ಇಲ್ಲದ ಲವಲವಿಕೆ ಇತ್ತು. ಪ್ರಭಂಜನನಿಗೂ ಇಂದು ವಸುಮತಿ ಎಂದಿಗಿಂತ ಹೆಚ್ಚು ಖುಷಿಯಾಗಿದ್ದಾಳೆ ಅನಿಸಿತು.

-ರಾಜಕುಮಾರ ಕುಲಕರ್ಣಿ 


Tuesday, March 2, 2021

ಪುರುಕಾಕಾ (ಕಥೆ)

     



(೧೧.೦೨.೨೦೨೧ ರ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)

  ‘ಒಂದುವಾರ ಆಯ್ತು ನಿನ್ನ ಕಾಕಾ ಇಲ್ಲಿಂದ ಹೋಗಿ. ಹೋಗುವಾಗ ಊರಿಗೆ ಅಂತ ಹೇಳಿದ್ರು. ಹೋಗಿ ಮುಟ್ಟಿದ ತಕ್ಷಣ ಒಂದು ಫೋನ್  ಆದರೂ ಮಾಡೊವಷ್ಟು ಪುರುಸೊತ್ತಿಲ್ಲ ಅಂದ್ರ ಇಂಥವರಿಗಿ ಹೆಂಡತಿ, ಮಕ್ಕಳು, ಸಂಸಾರ ಅಂತಾದ್ರೂ ಯಾಕ್ಬೇಕು. ವಸುಮತಿ ಬಾಣಂತನ ಮುಗಿಸಿಕೊಂಡು ಗಂಡನ ಮನಿಗಿ ಹೊರಟು ನಿಂತಾಳ. ಇಂಥಾ ವ್ಯಾಳ್ಯಾದಾಗ ಅಪ್ಪ ಅನಿಸಿಕೊಂಡವರು ಇರಲಿಲ್ಲಂದ್ರ ಜನ ಏನು ತಿಳ್ಕೊತಾರ. ಜನದ ಮನಿ ಹಾಳಾಗ್ಲಿ ಬೀಗರ ಬಗ್ಗ್ಯಾದರೂ ವಿಚಾರ ಮಾಡ್ಬೇಕಲ್ಲ. ನಿನ್ನ ಕಾಕಾಗ ಜಲ್ದಿ ಕಳಿಸಿಕೊಡು’ ವತ್ಸಲಾಕಕ್ಕಿಯ ಮಾತು ಯಾವಾಗಲೂ ಹೀಗೆ ಭರ್ತ್ಸನೆಯಿಂದಲೆ ಕೂಡಿರುತ್ತದೆ ಎಂದೆನಿಸಿದರೂ ಶ್ರೀಧರನಿಗೆ ಪುರುಕಾಕಾನದೆ ಚಿಂತೆ ಕಾಡಲಾರಂಭಿಸಿತು. ಕಾಕಾ ಇಲ್ಲಿಂದ ಹೋಗಿ ಇವತ್ತಿಗೆ ನಾಲ್ಕು ದಿನಗಳಾದವು. ಇನ್ನೂ ಮನೆಗೆ ಹೋಗಿಲ್ಲ ಅಂದರೆ ಎಲ್ಲಿ ಹೋಗಿರಬಹುದು ಎನ್ನುವ ಚಿಂತೆಯಿಂದ ಕ್ರಮೇಣ ಮನಸ್ಸಿನಲ್ಲಿ ಅಸ್ಪಷ್ಟವಾದ ಆಕೃತಿಯೊಂದು ಮೂಡಲಾರಂಭಿಸಿ ಹಲವು ಕ್ಷಣಗಳ ನಂತರ ಅದು ಸ್ಪಷ್ಟರೂಪ ತಾಳಿ ಕಣ್ಣೆದುರು ಗೋಚರಿಸಲಾರಂಭಿಸಿದಾಗ ಕುಳಿತಿದ್ದ ಶ್ರೀಧರ ಧಗ್ಗನೆ ಎದ್ದು ಪಡಸಾಲೆಯಿಂದ ಅಂಗಳಕ್ಕೆ ಬಂದು ಶ್ರೀಹರಿಯ ಮನೆಯತ್ತ ಹೆಜ್ಜೆ ಹಾಕತೊಡಗಿದ. 

ಪುರುಷೋತ್ತಮ ನಾರಾಯಣರಾವ್ ಮಳಖೇಡಕರ್ ಯಾನೆ ಪುರುಕಾಕಾ ಶ್ರೀಧರನಿಗೆ ವರಸೆಯಲ್ಲಿ ಚಿಕ್ಕಪ್ಪನಾಗಬೇಕು. ಶ್ರೀಧರನ ಅಜ್ಜ ಮತ್ತು ಪುರುಕಾಕಾನ ಅಪ್ಪ ಖಾಸಾ ಅಣ್ಣತಮ್ಮಂದಿರು. ಪುರುಕಾಕಾನ ಅಜ್ಜ ಶೇಷಗಿರಿರಾವ್ ಈ ಮನೆತನದ ಮೂಲ ವ್ಯಕ್ತಿ. ಮಳಖೇಡದಿಂದ ಇಲ್ಲಿಗೆ ವಲಸೆ ಬಂದವರಂತೆ. ಹಾಗೆಂದೆ ಬಿಟ್ಟುಬಂದ ಊರಿನ ಹೆಸರಿನಿಂದಲೇ ಅವರನ್ನು ಇಲ್ಲಿನವರು ಕರೆಯುತ್ತಿದ್ದುದ್ದರಿಂದ ಮಳಖೇಡಕರ್ ಎನ್ನುವ ಹೆಸರು ಮನೆತನದ ಶಾಶ್ವತ ಹೆಸರಾಗಿ ಉಳಿದುಕೊಂಡಿತೆಂದು ಪುರುಕಾಕಾನೇ ಆಗಾಗ ಹೇಳುತ್ತಿದ್ದ ನೆನಪು ಶ್ರೀಧರನಿಗಿದೆ. ಪೌರೋಹಿತ್ಯ, ಗುಡಿಯ ಪೂಜೆ ಜೊತೆಗೆ ಬಳುವಳಿಯಾಗಿ ಬಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ಪುರುಕಾಕಾ ಒಬ್ಬರೆ ಎನ್ನುವುದು ಆ ಮನೆತನದ ಎಲ್ಲರಿಗೂ ಇವತ್ತಿಗೂ ಗೌರವ ಮತ್ತು ಹೆಮ್ಮೆ ಇದೆ. ದಾಯಾದಿಗಳೆಂಬ ಬೇಧವಿಲ್ಲದೆ ನನ್ನನ್ನು ಮತ್ತು ಶ್ರೀಹರಿಯನ್ನು ಪಟ್ಟಣದ ತಮ್ಮ ಮನೆಯಲ್ಲಿಟ್ಟುಕೊಂಡು ಶಾಲೆಗೆ ಸೇರಿಸಿದರೂ ನಮ್ಮಿಬ್ಬರಿಗೂ ವಿದ್ಯೆ ತಲೆಗೆ ಹತ್ತದೆ ಪೌರೋಹಿತ್ಯ, ವ್ಯವಸಾಯವೆಂದು ಊರನ್ನೇ ನೆಚ್ಚಿಕೊಂಡಿದ್ದು ತಪ್ಪಾಯ್ತೇನೋ ಎಂದು ಈಗೀಗ ಶ್ರೀಧರನಿಗೆ ಅನಿಸುವುದಿದೆ. ಊರು ಈಗ ಮೊದಲಿನಂತಿಲ್ಲ. ಕುಟುಂಬಗಳು ಪಟ್ಟಣಕ್ಕೆ ವಲಸೆ ಹೋಗಿರುವುದರಿಂದ ಊರು ಅರ್ಧಕ್ಕರ್ಧ ಖಾಲಿಯಾಗಿದೆ. ಕೂಲಿಗೆ ಆಳುಗಳು ಸಿಗದೆ ವ್ಯವಸಾಯದಿಂದ ಬರುತ್ತಿರುವ ಆದಾಯ ಶಾಕಾಯ ಲವಣಾಯ ಎನ್ನುವಂತಾಗಿದೆ. ಪೌರೋಹಿತ್ಯವನ್ನೇ ನಂಬಿಕೊಂಡು ಕೂಡುವಂತಿಲ್ಲ. ವತ್ಸಲಾ ಕಕ್ಕಿಗೆ ನಮ್ಮಿಬ್ಬರನ್ನೂ ಮನೆಯಲ್ಲಿಟ್ಟುಕೊಂಡು ಓದಿಸುವುದು ಹೊರೆಯ ಸಂಗತಿಯೆನಿಸಿದರೂ ಪುರುಕಾಕಾನಿಗೆ ಎದುರು ಹೇಳುವ ಧೈರ್ಯಸಾಲದೆ ನುಂಗಿಕೊಂಡಿದ್ದರು. ಅವರ ಮನೆಯಲ್ಲಿದ್ದ ಆ ಮೂರು ವರ್ಷಗಳ ಕಾರಣದಿಂದ ಪುರುಕಾಕಾನೊಂದಿಗೆ ನಮ್ಮಿಬ್ಬರ ಒಡನಾಟ ಮತ್ತಷ್ಟು ಆಪ್ತವಾಯಿತು ಎನ್ನುವ ನೆನಪು ಮನಸ್ಸನ್ನು ತುಂಬಿ ಶ್ರೀಧರನ ಕಣ್ಣುಗಳು ಒದ್ದೆಯಾದವು. 

ಶ್ರೀಧರ ಗೇಟು ತೆರೆದು ಮನೆಯ ಅಂಗಳದಲ್ಲಿ ಕಾಲಿಡುವ ಹೊತ್ತಿಗಾಗಲೇ ಶ್ರೀಹರಿ ಅದೇ ಆಗ ಜಳಕ ಮಾಡಿ ಅಂಗಳದಲ್ಲಿ ನಿಂತು ಸೂರ್ಯ ನಮಸ್ಕಾರ ಮಾಡುತ್ತಿದ್ದ. ಈ ವೇಳೆಯಲ್ಲಿ ಅಣ್ಣನ ಆಗಮನ ಅನಿರೀಕ್ಷಿತವೆನಿಸಿದರೂ ಅಣ್ಣ ಯಾವುದೋ ಗಹನವಾದ ವಿಷಯವನ್ನು ನನ್ನೊಡನೆ ಮಾತನಾಡಲು ಬಂದಿರುವನೆಂದು ಅವನು ಊಹಿಸಿದ. ಶ್ರೀಹರಿಯ ಊಹೆ ನಿಜ ಎನ್ನುವಂತೆ ಇನ್ನು ಅಂಗಳದಲ್ಲಿ ಇರುವಾಗಲೇ ‘ನೋಡೋ ಶ್ರೀಹರಿ ಇದೇ ಈಗ ಕೆಲವು ಕ್ಷಣಗಳ ಹಿಂದೆ ವತ್ಸಲಾ ಕಕ್ಕಿ ಫೆÇೀನ್ ಮಾಡಿದ್ದರು. ಪುರುಕಾಕಾ ಇನ್ನೂ ಮನೆಗೇ ಬಂದಿಲ್ಲಂತ ಇನ್ನು ಏನೇನೋ ತಗಾದೆಯ ಮಾತಾಡಿದರು. ಅಲ್ಲ ಇಲ್ಲಿಂದ ಹೋಗಿ ನಾಲ್ಕು ದಿನಗಳಾಯ್ತು ಕಾಕಾ ಎಲ್ಲಿ ಹೋಗಿರ್ಬಹುದು ಅನ್ನೊದೇ ತಿಳಿವಲ್ದು. ಹೋಗುವಾಗ ಎಲ್ಲಿಗಿ ಹೋಗ್ತಿನಂತ ನಿನಗೇನಾದ್ರೂ ಹೇಳಿ ಹೋಗ್ಯಾರೇನು’ ಶ್ರೀಧರ ದೊಡ್ಡ ಧ್ವನಿಯಲ್ಲಿ ಹೇಳಿದ ಮಾತು ಕೇಳಿ ಶ್ರೀಹರಿಗೆ ಪರಿಸ್ಥಿತಿಯನ್ನು ಅರಿಯಲು ಕೆಲವು ಕ್ಷಣಗಳೇ ಹಿಡಿದವು. ಮೂರುದಿನಗಳ ಕಾಲ ತಮ್ಮೊಂದಿಗಿದ್ದು ಆಪ್ತತೆಯ ಭಾವವನ್ನು ಉಣಿಸಿ ಹೋದ ಜೀವ ಈಗ ಎಲ್ಲೋ ದಿಕ್ಕಿಲ್ಲದೆ ಅಲೆದಾಡುತ್ತಿದೆ ಎನ್ನುವ ಸಂಗತಿಯೇ ಅವರಿಬ್ಬರ ಕಳವಳಕ್ಕೆ ಕಾರಣವಾಗಿ ಮುಂದಿನ ಕೆಲವು ಕ್ಷಣಗಳ ಕಾಲ ತಾವು ಹುಟ್ಟಿನಿಂದಲೇ ಮಾತು ಬರದವರೇನೋ ಎನ್ನುವಂತೆ ಮೌನವಾಗಿ ಒಬ್ಬರನ್ನೊಬ್ಬರು ನೋಡುತ್ತ ನಿಂತರು.

‘ನಾನು ಎಷ್ಟು ಬ್ಯಾಡಾ ಅಂತ ಬಡ್ಕೊಂಡರು ಕಾಕಾ ಕೇಳಲಿಲ್ಲ. ತಮ್ಮದೆ ಹಟ ಸಾಧಿಸಿದರು. ನನ್ನಂಥ ಹುಂಬ ಮನಸ್ಸಿನವರಿಗೆ ಆಕಿ ದ್ವೇಷದ ಮಾತು ತಡಕೊಳ್ಳಲಿಕ್ಕಿ ಆಗಲ್ಲ. ಅಂಥದ್ದರಾಗ ಕಾಕಾನಂಥ ಮೃದು ಮನಸ್ಸಿನವರಿಗಿ ಎಷ್ಟು ಸಂಕಟ ಆಗಿರ್ಲಿಕ್ಕಿಲ್ಲ’ ಶ್ರೀಹರಿಯೆ ಮೌನ ಮುರಿದು ಮಾತಿಗೆ ಶುರುವಿಟ್ಟ. ತಮ್ಮನ ಮಾತಿನಿಂದ ಶ್ರೀಧರನಿಗೆ ಎಲ್ಲವೂ ಅರ್ಥವಾಯಿತು. ‘ಖೋಡಿ ಮುದಿಕಿ ಜೀವನ ಪೂರ್ತಿ ದ್ವೇಷ ಮಾಡ್ಕೊತೆ ಬಂತು. ಒಳ್ಳೆಯವರ್ಯಾರು ಕೆಟ್ಟವರ್ಯಾರು ಅಂತ ಈ ವಯಸ್ಸಿನ್ಯಾಗೂ ತಿಳಿವಲ್ದು ಅಂದ್ರ ಆಕೀನ ಹ್ಯಾಂಗರೆ ಮನುಷ್ಯರ ಜಾತಿಗಿ ಸೇರಿದವಳು ಅಂತ ಅನ್ಬೇಕು’ ಶ್ರೀಧರ ಸ್ವಗತದಲ್ಲೆಂಬಂತೆ ಆಡಿದರೂ ಅವನಾಡಿದ ಮಾತುಗಳು ಅಲ್ಲೇ ಸಮೀಪದಲ್ಲಿ ನಿಂತಿದ್ದ ಶ್ರೀಹರಿಗೂ ಕೇಳಿಸದೆ ಉಳಿಯಲಿಲ್ಲ. ‘ಆವತ್ತು ಕಾಕಾಗ ನಾ ಹೇಳದೆ ಹೋಗೋದು ಬ್ಯಾಡಾಂತ. ಯಾಕಂದರ ಆ ಮುದುಕಿ ನಮ್ಮನ್ನ ಮೊದಲಿನಿಂದಲೂ ದಾಯಾದಿಗಳಂತ ದ್ವೇಷಿಸ್ತಾನೆ ಬಂತು. ಆದರ ಕಾಕಾ ಏನಂದ ಗೊತ್ತದಾಯೇನು ಅಲ್ಲೋ ಶ್ರೀಹರಿ ಸಾಯೋ ಹೊತ್ತನ್ಯಾಗ ಏನು ಒಯ್ತಿವಿ. ಈ ಜಗಳ, ದ್ವೇಷ ಎಲ್ಲ ಬದುಕಿರೊತನಕ ನೋಡು. ಸತ್ತಮ್ಯಾಲ ಎಲ್ಲರೂ ಖಾಲಿಕೈಲೇ ಹೋಗ್ಬೇಕು. ಕಾಕಾನ ಮಾತು ಕೇಳಿ ಅವರನ್ನ ತಡಿಬೇಕು ಅಂತ ನನಗ ಅನಿಸಲಿಲ್ಲ. ಕಾಕಾನ ನೋಡಿದ್ದೆ ಸಕ್ಕುಕಕ್ಕಿ ಅವತಾರ ನೋಡ್ಬೇಕಿತ್ತು. ಮೈದಾಗ ಸಿಂಪಿ ರಕ್ತಾಯಿಲ್ಲ ಎಲ್ಲಿ ಇತ್ತೋ ಶಕ್ತಿ ಎದ್ದು ಕೂತು ಬಾಯಿಗಿ ಬಂದಂಗ ಮಾತಾಡ್ಲಿಕತ್ಳು. ಆಕಿ ಗಂಡ, ಮಕ್ಳು ಸತ್ತಿದ್ದಕ್ಕೆಲ್ಲ ಪುರುಕಾಕಾ ಕಾರಣ ಅಂತ. ದಾಯಾದಿಗಳ ಆಸ್ತಿ ಹಿಸ್ಸೆ ಮಾಡುವಾಗ ನೌಕರದಾರರಿಗಿ, ಸ್ಥಿತಿವಂತರಿಗಿ ಹಿಸ್ಸೆ ಬ್ಯಾಡ. ಊರಲ್ಲೇ ಇದ್ದು ವ್ಯವಸಾಯ ಮಾಡೊರಿಗಿ ಮಾತ್ರ ಹಕ್ಕದಾ ಅಂತ ಕಾಕಾ ಹೇಳಿದ್ದಕ್ಕ ತನ್ನ ಮಕ್ಕಳಿಗಿ ಮಳಖೇಡಕರ್ ಮನೆತನದ ಆಸ್ತಿನಲ್ಲಿ ಪಾಲು ಸಿಗಲಿಲ್ಲ ನೀ ಉದ್ಧಾರ ಆಗಲ್ಲ ಅಂತ ಅಲ್ಲೆ ಅಂಗಳದಾಗಿದ್ದ ಮಣ್ಣು ತೊಗೊಂಡು ಕಾಕಾನ ಕಡಿ ತೂರಿದ್ಳು. ಕಾಕಾಗ ನೋಡ್ಬೇಕಿತ್ತು ಅಂಥ ಹೊತ್ತನ್ಯಾಗೂ ದೇವರು ನಿಂತಂಗ ನಿಂತಿದ್ರು. ಅವರೊಳಗಿನ ಸಂತತನ, ಆ ನಿರ್ಲಿಪ್ತತೆ ಬದುಕಿಡೀ ದ್ವೇಷ ಮಾಡ್ಕೋತ ಬಂದ ಸಕ್ಕುಕಕ್ಕಿಗಿ ಎಲ್ಲಿ ಅರ್ಥ ಆಗ್ಬೇಕು’ ಶ್ರೀಹರಿ ಅಣ್ಣನೆದುರು ಅಂದಿನ ಘಟನೆಯ ವಾಸ್ತವ ಬಿಚ್ಚಿಟ್ಟ.   

ಪುರುಕಾಕಾ ಇಲ್ಲಿಂದ ಹೋದಮೇಲೆ ಮನೆಗೆ ಹೋಗದೆ ಎಲ್ಲಿಯೋ ಹೋಗಿರುವುದಕ್ಕೂ ಸಕ್ಕುಕಕ್ಕಿಯ ಭೇಟಿಗೂ ನಡುವೆ ಇರಬಹುದಾದ ಸಂಬಂಧವನ್ನು ಶ್ರೀಧರನ ಮನಸ್ಸು ಲೆಕ್ಕಹಾಕತೊಡಗಿತು. ಒಂದೇ ಊರಲ್ಲಿದ್ದರೂ ಸಕ್ಕುಕಕ್ಕಿಯನ್ನು ಕೊನೆಯ ಸಲ ನೋಡಿದ್ದು ಅವಳ ಮಗ ವೆಂಕಟರಮಣ ತೀರಿಕೊಂಡಾಗ. ಅದಾಗಿ ಐದು ವರ್ಷಗಳಾದರು ಒಂದುಸಲವೂ ಅವಳ ಮನೆಗೆ ಹೋಗಿಲ್ಲ. ಹತ್ತು ವರ್ಷಗಳ ಹಿಂದೆ ಸುಬ್ಬರಾಯ ಕಾಕಾ ತೀರಿಕೊಂಡ ಮೇಲೆ ಸಕ್ಕುಕಕ್ಕಿಯ ದಾಯಾದಿ ಮತ್ಸರ ಮತ್ತಷ್ಟು ಬೆಳೆಯುತ್ತ ಕೊನೆಗೆ ಅದು ವೆಂಕಟರಮಣನನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ಹೋದದ್ದನ್ನು ಈಗ ನೆನಪಿಸಿಕೊಂಡಾಗ ಶ್ರೀಧರನ ಮನಸ್ಸಿಗೆ ಒಂದುತೆರನಾದ ಜಡತ್ವ ಆವರಿಸಿತು. ಎರಡು ತಲೆಮಾರುಗಳಾದರೂ ಹಿಸ್ಸೆ ಆಗದೇ ಉಳಿದಿದ್ದ ಆಸ್ತಿಯನ್ನು ಸಕ್ಕುಕಕ್ಕಿಯ ಕುಮ್ಮಕ್ಕಿನಿಂದಲೇ ಸುಬ್ಬರಾಯ ಕಾಕಾ ಪಾಲು ಕೇಳಲು ಮುಂದೆ ಬಂದಿದ್ದ. ವ್ಯವಸಾಯ ಮಾಡುತ್ತಿರುವವರಿಗೆ ಮಾತ್ರ ಆಸ್ತಿಯಲ್ಲಿ ಪಾಲು ಉಳಿದವರಿಗೆ ಇಲ್ಲ ಎಂದು ಪುರುಕಾಕಾ ಕಡ್ಡಿಮುರಿದಂತೆ ಹೇಳಿದ್ದರು. ಆಸ್ತಿಯೇನೂ ಪಿತ್ರಾರ್ಜಿತವಾಗಿ ಬಂದಿದ್ದಲ್ಲ. ಗುಡಿಯ ಪೌರೋಹಿತ್ಯದಿಂದ ಬಳುವಳಿಯಾಗಿ ಬಂದಿದ್ದ ಜಮೀನನನ್ನು ಸರ್ಕಾರ ಹಿಂದೆ ಪಡೆದ ಮೇಲೆ ಈಗಿರುವುದು ಪುರುಕಾಕಾ ದುಡಿದು ಖರೀದಿಸಿದ ಆಸ್ತಿ. ನ್ಯಾಯವಾಗಿ ನೋಡುವುದಾದರೆ ಮಳಖೇಡಕರ್ ಮನೆತನದ ಬೇರೆಯವರಿಗೆ ಆಸ್ತಿಯ ಮೇಲೆ ಹಕ್ಕೇ ಇರಲಿಲ್ಲ. ಮಳಖೇಡಕೇರ್ ಮನೆತನದಲ್ಲಿ ಹೆಚ್ಚು ಓದದೆ ಮನೆತನದ ಪೌರೋಹಿತ್ಯವನ್ನೇ ನಂಬಿ ಬದುಕುತ್ತಿರುವವರೆಂದರೆ ನಾನು ಮತ್ತು ಶ್ರೀಹರಿ ಮಾತ್ರ. ಅದಕ್ಕೆಂದೆ ಪುರುಕಾಕಾ ಖರೀದಿಸಿದ ಕೃಷಿ ಜಮೀನಿನಲ್ಲಿ ನಮ್ಮಿಬ್ಬರಿಗೂ ಸಮಪಾಲು ಮಾಡಿ ಕಾನೂನಿನ ರೀತಿ ನಮ್ಮಿಬ್ಬರ ಹೆಸರಿನಲ್ಲಿ ನೊಂದಾಯಿಸಿದ್ದರು. ವತ್ಸಲಾ ಕಕ್ಕಿಗೆ ಗೊತ್ತಾದರೆ ಎಲ್ಲಿ ತಗಾದೆ ತೆಗೆಯುವಳೊ ಎಂದು ಕಾಕಾ ಅಸಲಿ ವಿಷಯವನ್ನು ಅವರಿಂದ ಮುಚ್ಚಿಟ್ಟು ಅಪ್ಪ ಖರೀದಿಸಿದ್ದೆನ್ನುವಂತೆ ಬಿಂಬಿಸಿದ್ದರು. ಆದರೂ ಅದೆಷ್ಟೋ ದಿನಗಳ ಕಾಲ ಪುರುಕಾಕಾ ಬೆಳೆದದ್ದರಲ್ಲಿ ಎಲ್ಲರಿಗೂ ಸಮಪಾಲು ಹಂಚುತ್ತಿದ್ದರು. ಸಕ್ಕುಕಕ್ಕಿ ತಾನು ಜೀವಹಿಡಿದಿರುವುದೆ ಆಸ್ತಿಯಲ್ಲಿ ಪಾಲು ಪಡೆಯಲು ಎನ್ನುವಂತೆ ಬದುಕುತ್ತಿರುವುದನ್ನು ನೋಡುತ್ತಿದ್ದರೆ ತನಗೆ ಬದುಕಿನ ಮೇಲೇ ಜಿಗುಪ್ಸೆ ಹುಟ್ಟುತ್ತಿದೆ ಎಂದೆನಿಸಿತು ಶ್ರೀಧರನಿಗೆ. ಮಳಖೇಡಕರ್ ಮನೆತನದ ಆಸ್ತಿಯಲ್ಲಿ ಹಿಸ್ಸೆ ಮಾಡಿಸಿಯೇ ತಾನು ಸಾಯುವವಳು ಎಂದು ಸಕ್ಕುಕಕ್ಕಿ ಅವರಿವರ ಎದುರು ಹೇಳುತ್ತಿದ್ದ ಮಾತು ಶ್ರೀಧರನ ಕಿವಿಗೂ ತಲುಪಿ ಈಗ ಎರಡು ಮನೆತನಗಳ ನಡುವೆ ದ್ವೇಷದ ಗೋಡೆಯನ್ನೆಬ್ಬಿಸಿದೆ. ದ್ವೇಷಿಸುವುದಕ್ಕೆ ಆ ಮನೆಯಲ್ಲಿ ಒಂಟಿಗೂಬೆಯಂತೆ ಬದುಕುತ್ತಿರುವ ಕಕ್ಕಿಯನ್ನು ಬಿಟ್ಟರೆ ಬೇರೆ ಯಾರಿದ್ದಾರೆ. ವೆಂಕಟರಮಣ ಸತ್ತಾಗ ಹೆಣ ಎತ್ತುವುದಕ್ಕೂ ಗತಿ ಇರಲಿಲ್ಲ. ಪುರುಕಾಕಾ ಬರುವವರೆಗೆ ಯಾರೊಬ್ಬರೂ ಮನೆಯ ಅಂಗಳದಲ್ಲಿ ಕಾಲಿಟ್ಟಿರಲಿಲ್ಲ. ಪುರುಕಾಕಾ ಸೂತಕದ ಮನೆಯಲ್ಲೂ ಅದೆಂಥ ದ್ವೇಷ ಎಂದು ಎಲ್ಲರಿಗೂ ಬುದ್ಧಿ ಹೇಳಿ ತಾವೆ ಮುಂದೆ ನಿಂತು ಶವಸಂಸ್ಕಾರದಿಂದ ಹಿಡಿದು ವೈಕುಂಠದವರೆಗೆ ಎಷ್ಟೊಂದು ಮುತುವರ್ಜಿಯಿಂದ ನಿರ್ವಹಿಸಿದರು ಎಂದು ಈಗ ನೆನಪಾದರೆ ಮನದ ಭಾವದಲ್ಲಿ ಪುರುಕಾಕಾನ ಬಗ್ಗೆ ಅಭಿಮಾನ ಇಮ್ಮಡಿಯಾಗುತ್ತದೆ. ಗಂಡು ಮಕ್ಕಳು ಗತಿಯಿಲ್ಲದ ಮನೆಯಲ್ಲಿ ವೆಂಕಟರಮಣನ ಹೆಣಕ್ಕೆ ಬೆಂಕಿ ಇಟ್ಟಿದ್ದು ಪುರುಕಾಕಾನೆ. ಆ ಹದಿಮೂರು ದಿನಗಳ ಖರ್ಚನ್ನೆಲ್ಲ ಸ್ವತ: ನೋಡಿಕೊಂಡು ಹೋಗುವ ದಿನ ವಯಸ್ಸಾಗಿದೆ ಒಬ್ಬರೆ ಮನೆಯಲ್ಲಿ ಹ್ಯಾಗ ಇರ್ತಿರಿ ನಂಜೊತೆ ಊರಿಗೆ ಬನ್ನಿ ಕೊನೆಗಾಲದಲ್ಲಿ ನಿಮ್ಮ ಸೇವೆ ಮಾಡಿದ ಪುಣ್ಯ ಆದರೂ ಸಿಕ್ಕುತ್ತೆ ಎಂದಾಗ ಇದೇ ಸಕ್ಕುಕಕ್ಕಿ ಮುಖ ನೋಡಬೇಕಾಗಿತ್ತು. ಮತ್ತೆ ಅದೇ ಹಟ, ಅದೇ ದ್ವೇಷ. ತಾನು ದ್ವೇಷಕ್ಕಾಗಿಯೇ ಬದುಕಿರುವವಳು ಎಂದು ತೋರಿಸಿಕೊಂಡಳು. ಪುರುಕಾಕಾನದು ಮಾತ್ರ ಅದೇ ಶಾಂತ, ಗಂಭೀರ, ನಿರ್ಲಿಪ್ತ ನಿಲುವು. ಊರಿಗೆ ಹೋಗುವಾಗ ಕುಳಿತವಳ ಹತ್ತಿರ ಹೋಗಿ ಪಾದ ಮುಟ್ಟಿ ಪಾದ ಮುಟ್ಟುವುದೇನು ತಮ್ಮ ತಲೆಯನ್ನೇ ಅವಳ ಪಾದಕ್ಕೆ ಹಚ್ಚಿ ನಮಸ್ಕರಿಸಿ ಎದ್ದುಬರುವಾಗಲಾದರೂ ಮುದುಕಿಯ ಮನಸ್ಸು ಒಂದಿಷ್ಟಾದರೂ ಕರಗಬೇಕಲ್ಲ. ಅವಳ ಮನಸ್ಸು ಅದೆಂಥ ಜಡವಾದದ್ದು ನೆನಪಿಸಿಕೊಂಡರೆ ಇವತ್ತಿಗೂ ಮೈಜುಮ್ಮೆಂದು ಮೈಮೇಲಿನ ರೋಮಗಳೆಲ್ಲ ಎದ್ದು ನಿಲ್ಲುತ್ತವೆ. ‘ತಡಮಾಡೋದು ಬ್ಯಾಡ ಶ್ರೀಹರಿ ಈಗಲೇ ಊರಿಗಿ ಹೋಗಿ ವತ್ಸಲಾಕಕ್ಕಿನ ನೋಡಿದರೆ ವಿಷಯ ಏನಂತ ತಿಳಿಬಹುದು’ ಶ್ರೀಧರನ ಮಾತಿಗೆ ಶ್ರೀಹರಿ ತಲೆಯಾಡಿಸಿ ಸಮ್ಮತಿ ಸೂಚಿಸಿದ.

●●●

‘ಮನಿಬಿಟ್ಟು ಎಂಟು ದಿವಸ ಆಯ್ತು. ಸ್ವಲ್ಪ ಆದರೂ ಸಂಸಾರದ ಚಿಂತಿ ಬ್ಯಾಡೇನು. ಇಂಥವರಿಗಿ ಹೆಂಡತಿ, ಮಕ್ಕಳು ಬ್ಯಾರೆ ಕೇಡು. ಇಂಥಲ್ಲಿ ಹೋಗ್ತೀನಿ ಅಂತ ಹೇಳಿ ಹೋಗೊದಕ್ಕೇನು ಧಾಡಿ. ಬರೀ ಪುಸ್ತಕ ಓದಿದರ ಶಾಣ್ಯಾ ಆಗಲ್ಲೊ ಶ್ರೀಧರ ಸಂಸಾರ ಅಂದರೇನು, ಹೆಂಡತಿ-ಮಕ್ಕಳನ್ನ ಹ್ಯಾಗ ನೋಡ್ಕೊಬೇಕು ಅಂತ ಬುದ್ಧಿ ಇರಬೇಕು. ಪ್ರಾಮಾಣಿಕತೆ, ಸರಳ ಜೀವನ ಬರೀ ಇದೇ ಆಯ್ತು. ಇಂಥದ್ದರಿಂದೆಲ್ಲ ಹೊಟ್ಟಿ ತುಂಬ್ತುದೇನು. ನನಗಂತೂ ಇವರಗೂಡ ಏಗದರೊಳಗ ಸಾಕು ಆಗಿ ಹೋಗ್ಯಾದ. ಇನ್ನೊಂದು ವರ್ಷದಾಗ ರಿಟೈರ್ಡ್ ಆಗ್ತಾರ ಇನ್ನೂ ತಲಿ ಮ್ಯಾಲ ಸ್ವಂತದ್ದು ಅಂತ ಒಂದು ಸೂರು ಇಲ್ಲ ನೋಡು. ಹೀಂಗ ಎಂಟೆಂಟು ದಿವಸ ನೌಕರಿ ಬಿಟ್ಟು ಕೂತರ ಮನಿಗಿ ಕಳಿಸ್ತಾರ. ಆಮ್ಯಾಲ ಹೊಟ್ಟಿಗೇನು ತಿಂತಾರ. ತಾವೇನೋ ಊರೂರು ತಿರಗ್ತಾರ ಇಲ್ಲಿ ಹೆಂಡತಿ, ಮಕ್ಕಳು ಏನು ತಿನ್ಬೇಕು. ಶ್ರೀಧರ ಈ ಸಲ ಛಂದ ಬುದ್ಧಿ ಹೇಳಿ ತಿಳಿಸಿ ಮನಿಗಿ ಕರಕೊಂಡು ಬಾ ನೋಡು’ ವತ್ಸಲಾಕಕ್ಕಿ ಮಾತುಗಳಲ್ಲಿ ಕಾಕಾನ ಕುರಿತು ಕಾಳಜಿಗಿಂತ ಅವಳ ಮತ್ತು ಮಕ್ಕಳ ಬದುಕೇ ದೊಡ್ಡದಾಗಿ ಕಾಣಿಸಿ ಶ್ರೀಧರನಲ್ಲಿ ಅವ್ಯಕ್ತ ಸಂಕಟದ ಅನುಭವವೊಂದು ಹುಟ್ಟಿ ಅದು ಕ್ರಮೇಣ ನರನಾಡಿಗಳನ್ನು ವ್ಯಾಪಿಸುತ್ತ ಇಡೀ ದೇಹ ಒಂದು ತೆರನಾದ ನೋವಿನಿಂದ ಬಳಲುತ್ತಿರುವಂತೆ ಭಾಸವಾದಾಗ ಅಲ್ಲಿ ಕುಳಿತು ಕೊಳ್ಳುವುದು ಅಸಹನೀಯವೆನಿಸಿ ಧಗ್ಗನೆ ಎದ್ದು ಮನೆಯಿಂದ ಹೊರಬಂದು ಎದುರು ಕಾಣಿಸಿದ ರಸ್ತೆಯಲ್ಲಿ ಬಿರುಸಿನಿಂದ ಹೆಜ್ಜೆಹಾಕತೊಡಗಿದ. ಹಿಂದೆಯೇ ಓಡಿ ಬಂದ ಶ್ರೀಹರಿ ಅಣ್ಣನನ್ನು ಕೂಡಿಕೊಂಡ. ಈಗ ಮಾತನಾಡುವುದರಿಂದ ಅದು ಮತ್ತಷ್ಟು ಸಂಕಟಕ್ಕೆ ದಾರಿಮಾಡಿ ಕೊಡುತ್ತದೆ ಎನ್ನುವ ಅರಿವು ಏಕಕಾಲಕ್ಕೆ ಇಬ್ಬರಲ್ಲೂ ಮೂಡಿದೆಯೇನೋ ಎನ್ನುವಂತೆ ಮೌನವಾಗಿ ನಡೆಯತೊಡಗಿದರು. ಸ್ವಲ್ಪದೂರ ನಡೆಯುವುದರಲ್ಲಿ ಬಳಲಿಕೆ ಕಾಣಿಸಿಕೊಂಡಂತಾಗಿ ಶ್ರೀಧರ ನೆರಳಿಗಾಗಿ ಸುತ್ತಲೂ ನೋಡಿದ. ಅಣ್ಣನ ಮನಸ್ಥಿಯನ್ನರಿತ ಶ್ರೀಹರಿ ಅಲ್ಲೇ ಸಮೀಪದಲ್ಲಿದ್ದ ಮಠದ ಆವರಣದೊಳಕ್ಕೆ ಅಣ್ಣನ ಕೈಹಿಡಿದು ನಡೆಸಿಕೊಂಡು ಕರೆದೊಯ್ದ. ‘ಜೊತಿಗಿ ಸಂಸಾರ ಮಾಡ್ಲಿಕತ್ತು ಇಷ್ಟು ವರ್ಷಗಳಾದರೂ ಕಕ್ಕಿ ಇನ್ನೂ ಕಾಕಾಗ ಅರ್ಥ ಮಾಡಿಕೊಂಡೆಯಿಲ್ಲ ಅಂದರ ಮನಸ್ಸಿಗಿ ಭಾಳ ಬ್ಯಾಸರ ಅನಿಸ್ತದ’ ಶ್ರೀಹರಿಯ ಧ್ವನಿಯಲ್ಲಿ ನೋವಿನ ಛಾಯೆಯಿತ್ತು. ‘ಇದೇನು ಹೊಸದೇನೋ ಶ್ರೀಹರಿ. ನಾವು ಸಣ್ಣವರಿದ್ದಾಗ ಕಾಕಾನ ಮನ್ಯಾಗ ನಡೆದ ಆ ಘಟನೆ ನೆನಪಿಸಿಕೊ. ಬಡತನದಲ್ಲಿ ಬೆಳೆದ ಕಾಕಾಗ ಉಣ್ಣೊ ಅನ್ನ ಅಂದರ ದೇವರ ಇದ್ದಂಗ. ತಾಟನ್ಯಾಗ ಒಂದು ಅಗಳ ಕೂಡ ಚೆಲ್ಲಬಾರದು. ಆ ದಿನ ಬಚ್ಚಲಿನಲ್ಲಿ ಪಾತ್ರಿದೊಳಗಿದ್ದ ಮುಸುರಿ ನೋಡಿ ಅದೆಲ್ಲಿ ಸಿಟ್ಟು ಇತ್ತೊ ಎಂದೂ ಜೋರು ಧ್ವನಿಲೆ ಮಾತಾಡದವರು ಕಕ್ಕಿಗಿ ಬೈದು ಬಿಟ್ರು. ಕಕ್ಕಿ ಬಚ್ಚಲದಾಂದ ಪಾತ್ರಿ ತಂದು ಹಾಲ್‍ನ್ಯಾಗ ಕೂತು ಮುಸುರಿ ಒಳಗಿಂದ ಅನ್ನ ತಿನ್ನೊದು ನೋಡಿ ಪುರುಕಾಕಾ ಬೆಚ್ಚಿ ಬಿದ್ದಿದ್ರು. ಅನ್ನ ಹಾಳಾಯ್ತು ಅನ್ನೊ ನೋವಿಗಿಂತ ಕಕ್ಕಿ ವರ್ತನೆ ಅವರಿಗಿ ಆಘಾತ ತಂದಿತ್ತು. ಮಾಡಿದ ತಪ್ಪಿಗಿ ಪ್ರಾಯಶ್ಚಿತ ಅಂತ ಮೂರು ದಿವಸ ಕಾಕಾ ಬರೀ ನೀರು ಕುಡಿದು ಇದ್ರು. ಈ ನೋವು, ಯಾತನೆಯಿಂದಲೆ ಕಾಕಾನ ವ್ಯಕ್ತಿತ್ವ ಎಷ್ಟೊಂದು ಕಳೆಗಟ್ಟಿದೆ ನೋಡು’ ಪುರುಕಾಕಾನ ನೆನಪಾಗಿ ಶ್ರೀಧರನ ಕಣ್ಣುಗಳು ತುಂಬಿಬಂದವು.  

ಪೂಜೆ ಮುಗಿಸಿ ಗರ್ಭ ಗುಡಿಯ ಬಾಗಿಲಿಗೆ ಬೀಗ ಹಾಕಿ ಹೊರಹೋಗುತ್ತಿದ್ದ ಅರ್ಚಕರು ಇವರಿಬ್ಬರನ್ನು ನೋಡಿ ಹತ್ತಿರ ಬಂದು ತೀರ್ಥ ಪ್ರಸಾದ ಕೊಟ್ಟು ಮಾತಿಗೆ ನಿಂತರು. ಪೂರ್ವಾಪರಗಳನ್ನೆಲ್ಲ ವಿಚಾರಿಸಿದಾಗ ಮಠದ ಹತ್ತಿರದಲ್ಲೇ ಇರುವ ಪುರುಷೋತ್ತಮರಾಯರ ಸಂಬಂಧಿಗಳೆಂದು ತಿಳಿದು ಅವರ ಮುಖದಲ್ಲಿ ಪ್ರಸನ್ನತೆ ಮೂಡಿತು. ಅರ್ಚಕರ ಮುಖದಲ್ಲಿ ಅರಳಿನಿಂತ ಪ್ರಸನ್ನ ಭಾವದಿಂದಲೇ ಪುರುಕಾಕನ ಬಗ್ಗೆ ಅವರಿಗಿರುವ ಗೌರವದ ಅರಿವಾಗಿ ಬೆಳಗ್ಗೆಯಿಂದ ಬಾಡಿಹೋದ ಶ್ರೀಧರನ ಮನಸ್ಸು ಕೂಡ ಅರಳಿಕೊಂಡಿತು. ಇಬ್ಬರಲ್ಲಿ ಯಾರಾದರೊಬ್ಬರು ಮಾತಿಗಿಳಿಯುವ ಮೊದಲೇ ಅರ್ಚಕರೆ ಮಾತಿಗೆ ಶುರುವಿಟ್ಟುಕೊಂಡರು. ‘ಪುರುಷೋತ್ತಮರಾಯರು ನನಗೆ ನೇರವಾಗಿ ಪರಿಚಿತರೆನಲ್ಲ. ಅವರ ಕುರಿತು ಸಾಕಷ್ಟು ಕೇಳಿದ್ದೀನಿ. ಪ್ರತಿದಿನ ಮಠದ ಎದುರಿಂದಲೇ ಅವರು ತಮ್ಮ ಕಚೇರಿಗೆ ಹೋಗ್ತಿದ್ದರು. ಒಂದುದಿನ ಕೂಡ ಮಠದೊಳಗೆ ಕಾಲಿಟ್ಟವರಲ್ಲ. ಹೊರಗಿನಿಂದಲೇ ಒಂದು ಕ್ಷಣ ನಿಂತು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ಕೈಮುಗಿದು ಹೋಗೋದನ್ನ ನಾನು ಎಷ್ಟೋ ಸಲ ನೋಡಿದ್ದೀನಿ. ದೇವರು, ಸಂಪ್ರದಾಯ ಈ ಕುರಿತು ಅವರಿಗೆ ಸ್ವಲ್ಪ ಒಲುವು ಕಡಿಮೆ ಅಂತ ಕೇಳಿಗೊತ್ತು. ತುಂಬಾ ಓದಿಕೊಂಡವರಂತೆ. ಕೆಲವು ಪುಸ್ತಕಗಳನ್ನು ಬರಿದಿದ್ದಾರಂತೆ. ಒಮ್ಮೆ ನಮ್ಮ ಮಠದಿಂದ ಅವರನ್ನು ಸನ್ಮಾನ ಮಾಡಬೇಕು ಅಂತ ನಿರ್ಧರಿಸಿ ನಾಲ್ಕಾರುಜನ ಜೊತೆಗೂಡಿ ಅವರಿಗೆ ತಿಳಿಸೊದಕ್ಕೆ ಹೋದಾಗ ತನಗೆ ಇದರಲ್ಲೆಲ್ಲ ಆಸಕ್ತಿ ಇಲ್ಲ ಅಂತ ನಯವಾಗಿ ನಿರಾಕರಿಸಿದರು. ಆ ನಿರಾಕರಣೆಯಲ್ಲೂ ಎಂಥ ಘನತೆ ಇತ್ತು ಅಂತೀರಿ. ಯಾವ ಆರೋಪ, ವ್ಯಂಗ್ಯ, ಸಿಟ್ಟು ಇಲ್ಲದೆ ಅವರು ನಿರಾಕರಿಸಿದ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಸಂಸಾರದ ಈ ಎಲ್ಲ ಬಂಧನಗಳ ನಡುವಿದ್ದೂ ಆ ಒಂದು ನಿರ್ಲಿಪ್ತತೆಯನ್ನು ಬೆಳೆಸಿಕೊಳ್ಳೊದಿದೆಯಲ್ಲ ಅದು ನಮ್ಮಂಥವರಿಂದ ಸಾಧ್ಯವಾಗುವಂಥದ್ದಲ್ಲ. ಪುರುಷೋತ್ತಮರಾಯರು ಅದನ್ನೆಲ್ಲ ಸಾಧಿಸಿದ್ದಾರೆ. ಹೆಸರಿಗೆ ತಕ್ಕಂತೆ ಅವರು ಪುರುಷೋತ್ತಮರೆ’ ಅರ್ಚಕರು ಮಾತನಾಡಿ ಮುಗಿಸಿದಾಗ ಯಾವ ಏರಿಳಿತಗಳಿಲ್ಲದೆ ಒಂದೇ ಲಯದಲ್ಲಿ ಹರಿಯುತ್ತಿರುವ ಅವರ ಧ್ವನಿಯಲ್ಲಿನ ಅಂತ:ಕರಣದಿಂದ ಶ್ರೀಧರ ಮತ್ತು ಶ್ರೀಹರಿಯ ಮನಸ್ಸು ತುಂಬಿ ಬಂದಿತು. ಅರ್ಚಕರನ್ನು ನಮಸ್ಕರಿಸಿ ಮಠದಿಂದ ಹೊರಬಂದ ಇಬ್ಬರೂ ಪುರುಷೋತ್ತಮರಾಯರು ಕೆಲಸ ಮಾಡುತ್ತಿದ್ದ ಕಚೇರಿಯತ್ತ ನಡೆಯತೊಡಗಿದರು.  

●●●

‘ಬನ್ನಿ ಆಫೀಸ್ ಎದುರುಗಡೆ ಪಾರ್ಕ್ ಇದೆ. ಈಗ ಅಲ್ಲಿ ಜನಸಂಚಾರ ಕೂಡ ಕಡಿಮೆ ಇರುತ್ತೆ. ಪುರುಷೋತ್ತಮರಾಯರ ಬಗ್ಗೆ ಮಾತನಾಡಬೇಕು ಅಂದರೆ ಶಾಂತವಾತಾವರಣದಲ್ಲೇ ಮನಸ್ಸು ಬಿಚ್ಚಿಕೊಳ್ಳುತ್ತೆ. ಅಲ್ಲೆ ಕುಳಿತು ಮಾತನಾಡಿದರಾಯ್ತು’ ಪುರುಷೋತ್ತಮರಾಯರೊಂದಿಗೆ ಒಂದೇ ಸೆಕ್ಷನ್‍ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜಪ್ಪ ಇಬ್ಬರನ್ನೂ ಕರೆದುಕೊಂಡು ಪಾರ್ಕ್‍ನ ಒಳ ಆವರಣವನ್ನು ಪ್ರವೇಶಿಸಿದರು. ಅವರು ಹೇಳಿದಂತೆ ಜನಸಂಚಾರವಿಲ್ಲದೆ ಅಲ್ಲಿನ ವಾತಾವರಣ ತುಂಬ ಪ್ರಶಾಂತವಾಗಿತ್ತು. ‘ಹೀಗೆ ಪುರುಷೋತ್ತಮರಾಯರು ಹೇಳದೆ ಕೇಳದೆ ಹೋದವರಲ್ಲ. ಇಪ್ಪತ್ತು ವರ್ಷಗಳಿಂದ ನನಗೂ ಅವರಿಗೂ ಪರಿಚಯ. ರಾಯರದು ಇಡೀ ಆಫೀಸಿನಲ್ಲೆ ತುಂಬ ಘನವಾದ ವ್ಯಕ್ತಿತ್ವ. ಸಂಬಳ ಬಿಟ್ಟು ಒಂದು ರೂಪಾಯಿಯನ್ನೂ ತೆಗೆದುಕೊಂಡವರಲ್ಲ. ಸಿಟ್ಟು, ದ್ವೇಷ, ವ್ಯಂಗ್ಯ ಈ ಎಲ್ಲ ಗುಣಗಳು ಈ ಮನುಷ್ಯನಿಗೆ ಪರಿಚಯವೇ ಇಲ್ಲವೇನೋ ಅನ್ನುವಷ್ಟು ರಾಯರು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡವರು. ಈ ಕೆಲಸದ ವಾತಾವರಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ತಾರತಮ್ಯ, ಮೇಲಾಧಿಕಾರಿಗಳ ಅಸಹಕಾರ, ತಮ್ಮ ತಮ್ಮ ಜನರನ್ನೇ ಆಯಕಟ್ಟಿನ ಜಾಗದಲ್ಲಿರುವಂತೆ ನೋಡಿಕೊಳ್ಳೊದು ಇದೆಲ್ಲ ನೋಡಿ ಅವರ ಮನಸ್ಸು ನೊಂದುಕೊಳ್ಳುತ್ತಿತ್ತು. ಹಾಗಂತ ಯಾರೆದರೂ ಹೇಳಿಕೊಂಡವರಲ್ಲ. ಎಲ್ಲವನ್ನೂ ನಗುನಗುತ್ತಲೆ ಸಹಿಸಿಕೊಳ್ಳುತ್ತಿದ್ದರು. ನನಗನಿಸುತ್ತೆ ಅವರೊಳಗೊಬ್ಬ ಅವಧೂತ ಇದ್ದಾನೆ ಅಂತ. ಈ ಸಾಹಿತ್ಯ ಓದೊದು, ಬರೆಯೊದು ಮಾಡುವುದರಿಂದ ಅವರಿಗೆಲ್ಲ ಇದು ಸಾಧ್ಯವಾಯ್ತೇನೋ ಅನಿಸುತ್ತೆ. ಈ ಹಣ, ಕೀರ್ತಿ, ಹೆಸರು ಇವುಗಳ ಹಿಂದೆ ಬೀಳುವ ಹಪಾಪಿತನ ಅವರಲ್ಲಿರಲಿಲ್ಲ. ಜವಾನನಿಂದ ಮೇಲಾಧಿಕಾರಿಗಳವರೆಗೆ ಎಲ್ಲರಿಗೂ ಗೌರವಕೊಡೊರು. ಅಧಿಕಾರದಲ್ಲಿರೊರನ್ನು ಓಲೈಸಬೇಕು, ಅಧಿಕಾರ ಇಲ್ಲದೆ ಇರೊರನ್ನು ಕಡೆಗಣಿಸೊದು ಇಂಥದ್ದನ್ನು ಎಂದೂ ಮಾಡಿದವರಲ್ಲ. ಇಡೀ ಬದುಕನ್ನು ಒಂದು ನಿರ್ಲಿಪ್ತತೆಯ ನೆಲೆಯಲ್ಲಿ ನೋಡಿದವರು ಅವರು. ಆ ಗುಣ ನಮಗೆಲ್ಲ ಬರೊದಿಲ್ಲ ಬಿಡಿ. ಒಂದು ವ್ಯವಸ್ಥೆಯೊಳಗಿದ್ದೂ ಆ ವವ್ಯಸ್ಥೆಯೊಂದಿಗೆ ಅಂತರವನ್ನು ಕಾಯ್ದುಕೊಳ್ಳೊಕೆ ಆ ಮನುಷ್ಯನಿಗೆ ಹೇಗೆ ಸಾಧ್ಯವಾಯ್ತು ಅನ್ನೊದು ಇವತ್ತಿಗೂ ನನಗೆ ಅದೊಂದು ಒಗಟಿನ ಸಂಗತಿ. ಅವರನ್ನು ನೋಡಿದಾಗಲೆಲ್ಲ ಭಕ್ತಿಯಿಂದ ಕೈಮುಗಿಬೇಕು ಅನಿಸುತ್ತೆ. ನಿಜಕ್ಕೂ ಪುರುಷೋತ್ತಮರಾಯರದು ಅಪರೂಪದ ವಿರಳ ವ್ಯಕ್ತಿತ್ವ. ನೋಡಿ ಈಗ ಒಂದು ಮೀಟಿಂಗ್ ಇದೆ. ನಾನು ಹೋಗಲೇಬೇಕು. ಬೇಕಾದರೆ ಸಂಜೆ ಭೇಟಿಯಾಗಿ ಇನ್ನಷ್ಟು ಮಾತಾಡಿದರಾಯ್ತು. ನೀವೇನೂ ಚಿಂತೆ ಮಾಡಬೇಡಿ. ರಾಯರಲ್ಲಿ ಬದುಕನ್ನು ಕೊನೆಗಾಣಿಸುವ ವಿಚಾರಕ್ಕೆ ಅವಕಾಶವೇ ಇಲ್ಲ. ಅವರದು ಯಾವತ್ತಿದ್ದರೂ ಬದುಕನ್ನು ತುಂಬ ಉಲ್ಲಾಸದಿಂದ ಅನುಭವಿಸುವ ಮನಸ್ಸು. ಜೀವಪ್ರೀತಿಯಿಂದ ಇರೋರು ಯಾರೂ ಜೀವವಿರೋಧಿಯಾಗಿರಲ್ಲ ಅಂತ ನಾನು ಭರವಸೆ ಕೊಡ್ತೀನಿ’ ಇಷ್ಟು ಹೇಳಿ ಬಸವರಾಜಪ್ಪ ಟೈಮಾಯಿತೆಂದು ಅವಸವಸರವಾಗಿ ಕಚೇರಿಯೊಳಗೆ ನಡೆದು ಹೋದರು. ಶ್ರೀಧರ ಮತ್ತು ಶ್ರೀಹರಿಗೆ ಮತ್ತೆ ಬಸವರಾಜಪ್ಪ ಅವರನ್ನು ಭೇಟಿ ಮಾಡುವ ಅವಶ್ಯಕತೆ ಕಾಣಿಸಲಿಲ್ಲ. ಪುರುಕಾಕನ ಘನವಾದ ವ್ಯಕ್ತಿತ್ವ ತಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚೆ ಅವರೆದುರು ತೆರೆದುಕೊಂಡಿತ್ತು. ಪುರುಕಾಕನ ಬಗ್ಗೆ ಹೆಮ್ಮೆಯೂ ಅನಿಸಿತು. ಈಗ ಊರಿಗೆ ಹೊರಡುವುದೊಂದೆ ತಮ್ಮೆದುರಿರುವ ಏಕೈಕ ಮಾರ್ಗವೆಂದರಿತು ರೇಲ್ವೆ ಸ್ಟೇಷನ್ನಿನ ಹಾದಿಯನ್ನು ತುಳಿಯತೊಡಗಿದರು.

ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಮೇಲಿದ್ದ ಸಿಮೆಂಟ್ ಬೆಂಚಿನ ಮೇಲೆ ಕುಳಿತಿದ್ದ ಶ್ರೀಧರ ಮತ್ತು ಶ್ರೀಹರಿಯ ಮನಸ್ಸಿನ ತುಂಬೆಲ್ಲ ಪುರುಕಾಕಾನೇ ತುಂಬಿಕೊಂಡಿದ್ದ. ವತ್ಸಲಾಕಕ್ಕಿಯ ಭರ್ತ್ಸನೆಯ ಮಾತುಗಳಿಂದ ನೊಂದ ಮನಸ್ಸುಗಳಿಗೆ ಮಠದ ಅರ್ಚಕರ ಮತ್ತು ಬಸವರಾಜಪ್ಪನವರ ಮಾತುಗಳು ಒಂದಿಷ್ಟು ಸಮಾಧಾನ ನೀಡಿದ್ದವು. ಶ್ರೀಧರನ ಮನಸ್ಸು ವತ್ಸಲಾಕಕ್ಕಿಯ ಕೋಪದ ಮಾತುಗಳಿಗೆ ಕಾರಣವನ್ನು ಹುಡುಕುವುದರಲ್ಲಿ ತೊಡಗಿತ್ತು. ನಾರಾಯಣಕಾಕಾ ತೀರಿಕೊಂಡ ಮೇಲೆ ಅಲ್ವೆ ಸಕ್ಕುಕಕ್ಕಿಯೊಳಗಿನ ದ್ವೇಷ ಮತ್ತಷ್ಟು ಹೆಚ್ಚಿದ್ದು. ಅದಕ್ಕೆಲ್ಲ ಕಕ್ಕಿಗೆ ದೊರೆತ ಆರ್ಥಿಕ ಸ್ವಾತಂತ್ರ್ಯ ಮತ್ತು ಪರಾವಲಂಬಿತನದಿಂದ ಹೊರಬಂದ ಮನೋಭಾವವೇ ಕಾರಣವಾಗಿರಬಹುದೆ?. ಹಬ್ಬ ಹರಿದಿನ, ಸಂಬಂಧಿಕರ ಮದುವೆ ಮುಂಜಿಗಳಲ್ಲೆಲ್ಲ ಎಲ್ಲರೂ ಒಂದೆಡೆ ಸೇರಿದಾಗ ಹೆಣ್ಣುಮಕ್ಕಳೆಲ್ಲ ಸಕ್ಕುಕಕ್ಕಿಯ ಆರ್ಥಿಕ ಸ್ವಾತಂತ್ರ್ಯದ ಕುರಿತೇ ಎಷ್ಟೊಂದು ಮಾತನಾಡಿಕೊಳ್ಳುವರು. ಸಕ್ಕುಕಕ್ಕಿಯಲ್ಲಿ ನಾರಾಯಣಕಾಕಾ ಬದುಕಿದ್ದಾಗಿನ ಹಿಂಜರಿತ ಈಗಿಲ್ಲ. ಕಾಸುಕಾಸಿಗೂ ಪರದಾಡುತ್ತಿದ್ದ ತನ್ನ ತವರು ಮನೆಯವರಿಗೆ ಹಣಕಾಸಿನ ನೆರವು ನೀಡುವಷ್ಟು ಸುಭದ್ರಳಾಗಿದ್ದಾಳೆ ಆಕೆ. ಸಕ್ಕುಕಕ್ಕಿಯನ್ನು ನೋಡಿದಾಗಲೆಲ್ಲ ತಮಗಿಲ್ಲದ ಆ ಒಂದು ಭಾಗ್ಯಕ್ಕಾಗಿ ಉಳಿದವರೆಲ್ಲ ಮಮ್ಮಲ ಮರುಗುತ್ತಿದ್ದರು. ಹಾಗಾದರೆ ವತ್ಸಲಾಕಕ್ಕಿಯಲ್ಲೂ... ಈ ವಿಷಯ ಮನಸ್ಸಿನಲ್ಲಿ ಹೊಳೆದದ್ದೆ ಅಂಥ ಚಳಿಯಲ್ಲೂ ಶ್ರೀಧರನ ಮೈ ಬೆವರೊಡೆಯಿತು. ಕಕ್ಕಿಗೂ ತಾನು ಸ್ವತಂತ್ರಳಾಗಬೇಕೆನಿಸಿ ಅವಳೂ ಪುರುಕಾಕಾನ ಸಾವನ್ನು ಬಯಸುತ್ತಿರಬಹುದೇ? ಸಕ್ಕುಕಕ್ಕಿಯ ಆರ್ಥಿಕ ಸ್ವಾತಂತ್ರ್ಯ ವತ್ಸಲಾಕಕ್ಕಿಗೆ ಪ್ರೇರಣೆಯಾಯಿತೆ? ಕಕ್ಕಿಯ ಮನೋಗತವನ್ನು ಪುರುಕಾಕಾ ಮನಗಂಡಿದ್ದರೆ? ವತ್ಸಲಾಕಕ್ಕಿಯ ಅಭಿಲಾಷೆಯನ್ನು ಈಡೇರಿಸುವುದಕ್ಕಾಗಿಯೇ ಪುರುಕಾಕಾ ದೂರ ಎಲ್ಲಿಯಾದರೂ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಪ್ರಶ್ನೆಯ ಮೇಲೆ ಪ್ರಶ್ನೆ ಹುಟ್ಟಿ ಕುಳಿತಲ್ಲೇ ಮೈ ಮತ್ತು ಮನಸ್ಸಿಗೆ ಕೂಡಿಯೇ ಜೋಮು ಹಿಡಿದ ಸ್ಥಿತಿ. ವಾಸ್ತವದ ಅರಿವು ಮತ್ತಷ್ಟು ಮನಸ್ಸಿನ ಆಳಕ್ಕೆ ಇಳಿಯುತ್ತಿದ್ದಂತೆ ಶ್ರೀಧರನ ಕಣ್ಣಿಗೆ ಕತ್ತಲಾವರಿಸಿ ಇಡೀ ರೈಲುನಿಲ್ದಾಣದ ತುಂಬ ಕತ್ತಲು ತುಂಬಿಕೊಂಡಂತಾಗಿ ತನಗೆ ಶಬ್ದದ ವಿನ: ಕಣ್ಣಿಗೆ ಏನೂ ಗೋಚರಿಸುತ್ತಿಲ್ಲ ಎಂದರಿವಾದದ್ದೆ  ಆಸರೆಗಾಗಿ ಕುಳಿತಿದ್ದ ಸಿಮೆಂಟ್ ಬೆಂಚನ್ನು  ತನ್ನ ಎರಡೂ ಕೈಗಳಿಂದ ಭದ್ರವಾಗಿ ಹಿಡಿದುಕೊಂಡ.

-ರಾಜಕುಮಾರ ಕುಲಕರ್ಣಿ 


Wednesday, February 10, 2021

ಬೇರಿಗಂಟಿದ ಮರ: ಕಥಾಸಂಕಲನ ಬಿಡುಗಡೆ






ಫೆಬ್ರವರಿ ೭, ೨೦೨೧ ರಂದು ಕಲಬುರಗಿಯಲ್ಲಿ ನನ್ನ 'ಬೇರಿಗಂಟಿದ ಮರ' ಕಥಾಸಂಕಲನ ಬಿಡುಗಡೆಯಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವಿಮರ್ಶಕ ಡಾ.ರಹಮತ್  ತರೀಕೆರೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಲಬುರಗಿಯ ಬಸವ ಪ್ರಕಾಶನ ಪ್ರಕಟಿಸಿ ಬಿಡುಗಡೆಗೊಳಿಸಿರುವ ಈ ಕಥಾಸಂಕಲನ ನನ್ನ ಮೊದಲ ಕಥಾಸಂಕಲನವಾಗಿದೆ. 

ಕಥೆ ಬರೆಯುತ್ತೆನೆಂದು ಅಂದುಕೊಂಡಿರಲಿಲ್ಲ ಆದರೂ ಕಥೆಗಳನ್ನು ಬರೆದೆ. ನನ್ನ ಮನಸ್ಸಿನ ಮೂಲೆಯಲ್ಲಿ ಕುಳಿತಿದ್ದ ಕಥೆಗಳು ಅಭಿವ್ಯಕ್ತಿಗಾಗಿ ಕಾತರಿಸುತ್ತಿದ್ದವೆಂದು ಕಾಣುತ್ತದೆ. 2008 ರಲ್ಲಿ ನನ್ನ ‘ಮೂರು ದೃಶ್ಯಗಳು’ ಕಥೆ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗುವುದರೊಂದಿಗೆ ನಾನು ಕೂಡ ಕಥೆಗಾರನಾದೆ. ಹಾಗೆಂದು ನಿರಂತರವಾಗಿ ಕಥೆಗಳನ್ನು ಬರೆಯಲಿಲ್ಲ. ಹೀಗಾಗಿ ಕಥೆಗಳನ್ನು ಬರೆದದ್ದು ತುಂಬ ಕಡಿಮೆ. ಬೇರಿಗಂಟಿದ ಮರ ಕಥಾ ಸಂಕಲನದ ಹೆಸರಾದರೂ ಆ ಹೆಸರಿನ ಕಥೆ ಇಲ್ಲಿಲ್ಲ. ಇಲ್ಲಿನ ಕಥೆಗಳೆಲ್ಲವೂ ನಾನು ಬದುಕುತ್ತಿರುವ ಪರಿಸರದಿಂದಲೇ ಸ್ಪೂರ್ತಿ ಪಡೆದವುಗಳು ಆದ್ದರಿಂದ ಈ ನೆಲದ ಕಥೆಗಳಿವು. ಒಂದರ್ಥದಲ್ಲಿ ನೆಲದಾಳಕ್ಕಿಳಿದ ಬೇರಿಗಂಟಿದ ಕಥೆಗಳಿವು ಎನ್ನುವ ನಂಬಿಕೆ ನನ್ನದು.

ನಾನು ಬರೆದ ಕಥೆಗಳನ್ನು ಓದಿ ವಿಮರ್ಶಿಸುವ ಒಂದಿಷ್ಟು ಗೆಳೆಯರಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. 

ನನ್ನ ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯನ್ನು ಈ ಸಂದರ್ಭ ಮರೆಯಲಾರೆ.

ಕಥಾ ಸಂಕಲನವನ್ನು ಪ್ರಕಟಿಸಿದ  ಕಲಬುರಗಿಯ ಬಸವ  ಪ್ರಕಾಶನದವರಿಗೆ  ನನ್ನ ಕೃತಜ್ಞತೆಗಳು.

-ರಾಜಕುಮಾರ ಕುಲಕರ್ಣಿ 

Saturday, January 30, 2021

ಸತ್ಯಯುಗದಿಂದ ಕಲಿಯುಗಕ್ಕೆ ಸಿನಿಮಾದ ರೂಪಾಂತರ

 

        ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿ  ಸಾವಿಗಾಗಿ ಉತ್ತರಾಯಣ ಕಾಲವನ್ನು ನಿರೀಕ್ಷಿಸುತ್ತಿದ್ದ ಭೀಷ್ಮ ಯುಗಧರ್ಮದ ಕುರಿತು ಯುಧಿಷ್ಠಿರನಿಗೆ ಹೀಗೆ ಉಪದೇಶಿಸುತ್ತಾನೆ ‘ಅಧರ್ಮ ಎನ್ನುವುದು ಅಸ್ತಿತ್ವದಲ್ಲಿಯೇ ಇರದ ಕಾಲ ಸತ್ಯಯುಗ ಎನಿಸಿಕೊಳ್ಳುತ್ತದೆ. ನಾಲ್ಕರಲ್ಲಿ ಒಂದು ಪಾಲಿನಷ್ಟು ಧರ್ಮ ಖಿಲವಾಗಿ ಅದರ ಜಾಗದಲ್ಲಿ ಅಧರ್ಮವು ನೆಲೆಸಿದಾಗ ಆ ಕಾಲವು ತ್ರೇತಾಯುಗವೆನಿಸಿಕೊಳ್ಳುವುದು. ಅರ್ಧಾಂಶ ಮಾತ್ರ ಧರ್ಮವಿದ್ದು ಉಳಿದರ್ಧ ಅಧರ್ಮದಿಂದ ತುಂಬಿಹೋಗಿರುವ ಕಾಲವು ದ್ವಾಪರಯುಗ. ಎಲ್ಲೆಲ್ಲಿಯೂ ಅಧರ್ಮವೇ ತಾಂಡವವಾಡುತ್ತಿದ್ದು ಧರ್ಮವು ಹೇಳಹೆಸರಿಲ್ಲದಂತಾದಾಗ ಆ ಕಾಲವು ಕಲಿಯುಗ ಎನಿಸಿಕೊಳ್ಳುವುದು’. ಡ್ರಗ್ಸ್ ಮಾರಾಟಜಾಲದ ಪ್ರಕರಣದಲ್ಲಿ ಸಿನಿಮಾ ನಟ ನಟಿಯರ ಹೆಸರುಗಳು ಕೇಳಿಬರುತ್ತಿರುವ ಈ ಸಂದರ್ಭ ಭೀಷ್ಮನ ಉಪದೇಶದ ಮಾತುಗಳನ್ನು ಸಿನಿಮಾರಂಗಕ್ಕೂ ಅನ್ವಯಿಸಿ ನೋಡಬೇಕಾದ ತುರ್ತು ಎದುರಾಗಿದೆ.

        ಒಂದುಕಾಲದಲ್ಲಿ ಸೃಜನಶೀಲ ಮಾಧ್ಯಮವೆಂದೇ ಗುರುತಿಸಲ್ಪಟ್ಟಿದ್ದ ಸಿನಿಮಾ ಮಾಧ್ಯಮ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿತ್ತು. ಕುಟುಂಬ ಪ್ರೇಮದ ಕಥಾನಕದ ಸಿನಿಮಾಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಆಗೆಲ್ಲ ಸಿನಿಮಾ ಎನ್ನುವುದು ಸಿದ್ಧ ಸೂತ್ರದಲ್ಲೇ ಅಂದರೆ ಕೌಟುಂಬಿಕ ಕಥೆ, ನಾಲ್ಕು ಹಾಡುಗಳು, ಎರಡು ಹೊಡೆದಾಟಗಳು, ಪ್ರತ್ಯೇಕ ಟ್ರ್ಯಾಕ್‍ನಲ್ಲಿ ಸಾಗುವ ಹಾಸ್ಯ ಇದೇ ಮಾದರಿಯಲ್ಲಿ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೂ ಅಲ್ಲೊಂದು ನೀತಿಯಿತ್ತು. ಕಲಾವಿದರು ಕೂಡ ಒಂದು ಮೌಲಿಕ ಬದುಕನ್ನು ಬದುಕುತ್ತಿದ್ದರು. ಸಿನಿಮಾವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕ ಸಿನಿಮಾದ ಕಥೆ ತನ್ನದೇ ಮನೆಯ ಕಥೆ ಎನ್ನುವಂತೆ ತಲ್ಲಿನನಾಗುತ್ತಿದ್ದ. ಕುಟುಂಬದ ಸದಸ್ಯರೆಲ್ಲರೂ ಯಾವ ಮುಜುಗರಕ್ಕೊಳಗಾಗದೆ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದವು. ಇವತ್ತಿಗೂ ರಾಮ, ಕೃಷ್ಣ, ಅರ್ಜುನ ನಮಗೆ ಕಾಣಿಸಿಕೊಳ್ಳುವುದು ರಾಜಕುಮಾರ ನಿರ್ವಹಿಸಿದ ಪಾತ್ರಗಳ ಮೂಲಕವೇ. ಪ್ರತಿಯೊಬ್ಬ ತಾಯಿ ತನಗೆ ರಾಜಕುಮಾರನಂಥ ಮಗನಿರಲೆಂದು ಮತ್ತು ಪ್ರತಿಹೆಣ್ಣುಮಗಳು ರಾಜಕುಮಾರನಂಥ ಸಹೋದರನಿರಲೆಂದು ಆಶಿಸುತ್ತಿದ್ದಳು. ಒಟ್ಟಾರೆ ಸಿನಿಮಾ ಜನರ ಬದುಕಿನ ಭಾಗವಾಗಿತ್ತು. ಸಿನಿಮಾದ ಕಲಾವಿದರು ಕೇವಲ ಬಣ್ಣಹಚ್ಚಿ ಅಭಿನಯಿಸುವ ಪಾತ್ರಗಳಾಗಿರಲಿಲ್ಲ ಅವರು ಆದರ್ಶವಾಗಿದ್ದರು ಮತ್ತು ಅನುಕರಣೀಯರಾಗಿದ್ದರು. 

        ಹಿಂದೆಲ್ಲ ಸಿನಿಮಾ ಮೇಲಿನ ಪ್ರೀತಿಗಾಗಿ ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರಿದ್ದರು. ಅದೇರೀತಿ ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು ಕೂಡ ಕಲೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದಲೇ ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಬಾಲಕೃಷ್ಣರಂಥ ಕಲಾವಿದ ತಮ್ಮ ಬದುಕಿನ ಬಹುಭಾಗವನ್ನು ಬಡತನದಲ್ಲೇ ಕಳೆದರೂ ಅವರೆಂದೂ ಅಭಿಮಾನ ಸ್ಟುಡಿಯೋ ಮಾರಲು ಮುಂದಾಗಲಿಲ್ಲ. ರಾಜಕುಮಾರ ತಮ್ಮ 150 ಸಿನಿಮಾಗಳ ಅಭಿನಯದ ನಂತರ ಆರ್ಥಿಕವಾಗಿ ಚೇತರಿಸಿಕೊಂಡರು. ಆದರೆ 1990 ರ ದಶಕದ ಸಂದರ್ಭ ಸಿನಿಮಾ ಮಾಧ್ಯಮ ಹೊಸ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡಿತು. ವಿವಿಧ ಉದ್ಯಮಗಳಲ್ಲಿ ಹಣತೊಡಗಿಸಿ ಲಾಭದ ರುಚಿ ಸವಿದವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. ಸಿನಿಮಾ ಕೂಡ ಬೇರೆ ಕ್ಷೇತ್ರಗಳಂತೆ ಬಂಡವಾಳ ಹೂಡುವ ಕ್ಷೇತ್ರವಾಗಿ ಬದಲಾಯಿತು. ಒಟ್ಟಾರೆ ಈ ಬಂಡವಾಳದಾರರು ಸಿನಿಮಾವನ್ನು ಮಾಧ್ಯಮದಿಂದ ಉದ್ಯಮವಾಗಿ ರೂಪಾಂತರಿಸಿದರು. ವರ್ಷದಿಂದ ವರ್ಷಕ್ಕೆ ಸಿನಿಮಾಗಳ ನಿರ್ಮಾಣದ ಸಂಖ್ಯೆಯಲ್ಲಿ ಏರುಗತಿ ಕಾಣಿಸತೊಡಗಿತು. ಕಲಾವಿದರ ಸಂಭಾವನೆಯಲ್ಲೂ ಸಾಕಷ್ಟು ಪ್ರಗತಿ ಗೋಚರಿಸಿತು. ಕ್ರಮೇಣ ಸಿನಿಮಾರಂಗದ ಥಳಕು ಬಳುಕಿಗೆ ಮಾರುಹೋಗಿ ಸಿನಿಮಾದಲ್ಲಿ ಅಭಿನಯಿಸುವ ಆಸೆಯಿಂದ ಮಾಧ್ಯಮವನ್ನು ಪ್ರವೇಶಿಸುವರ ಸಂಖ್ಯೆಯೂ ಹೆಚ್ಚತೊಡಗಿತು.   

        ಜಾಗತೀಕರಣವು ಸಿನಿಮಾ ಮಧ್ಯಮದಲ್ಲಿ ಮತ್ತಷ್ಟು ಬದಲಾವಣೆಗಳನ್ನು ತಂದಿತು. ಈ ಮೊದಲು ಸೀಮಿತ ಮಾರುಕಟ್ಟೆ ಹೊಂದಿದ್ದ ಸಿನಿಮಾ ಜಾಗತೀಕರಣದ ಪ್ರಭಾವದಿಂದ ತನ್ನ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿಕೊಂಡಿತು. ಇವತ್ತು ಕನ್ನಡ ಸಿನಿಮಾಗಳು ಅಮೆರಿಕಾ, ಇಂಗ್ಲೆಂಡ್, ಜಪಾನ್ ದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಇದು ನೇರವಾಗಿ ಸಿನಿಮಾ ಕಲಾವಿದರ ಮೇಲೆ ಪರಿಣಾಮ ಬೀರಿತು. ಸಣ್ಣ ಪ್ರೇಕ್ಷಕ ವರ್ಗಕ್ಕೆ ಸೀಮಿತಗೊಂಡಿದ್ದ ನಟ ನಟಿಯರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರೇಕ್ಷಕ ವರ್ಗ ಪ್ರಾಪ್ತವಾದ ಕಾರಣ ಅವರ ಜನಪ್ರಿಯತೆಯೂ ಹೆಚ್ಚಿತು. ಸಿನಿಮಾ ನಟ ನಟಿಯರ ಈ ಜನಪ್ರಿಯತೆಯನ್ನು ಅನೇಕ ಉದ್ಯಮಗಳು ತಮ್ಮ ಉತ್ಪಾದನಾ ವಸ್ತುಗಳ ಮಾರಾಟದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾರಂಭಿಸಿದವು. ಒಂದು ಮೂಲದ ಪ್ರಕಾರ ಸಿನಿಮಾದ ಸಂಭಾವನೆಗಿಂತ ಜಾಹೀರಾತುಗಳಲ್ಲಿನ ಅಭಿನಯದಿಂದಲೇ ಕಲಾವಿದರಿಗೆ ಹೆಚ್ಚಿನ ಆದಾಯವಾಗುತ್ತಿದೆ. ಚುನಾವಣಾ ಸಂದರ್ಭದಲ್ಲೂ ವಿವಿಧ ರಾಜಕೀಯ ಪಕ್ಷಗಳು ಸಿನಿಮಾ ನಟ ನಟಿಯರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳುವುದುಂಟು. ಹೀಗೆ ಧೀಡಿರನೇ ಪ್ರಾಪ್ತವಾಗುತ್ತಿರುವ ಜನಪ್ರಿಯತೆ ಮತ್ತು ಸಂಭಾವನೆ ರೂಪದಲ್ಲಿ ದೊರೆಯುತ್ತಿರುವ ಆರ್ಥಿಕ ಲಾಭ ಸಿನಿಮಾ ಕಲಾವಿದರನ್ನು ಉನ್ಮತ್ತಗೊಳಿಸಿದೆ. ಇದು ಅಪರೋಕ್ಷವಾಗಿ ಸಿನಿಮಾ ರಂಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ. 

        ಉಳಿದೆಲ್ಲ ಮಾಧ್ಯಮಗಳಿಗಿಂತ ಸಿನಿಮಾ ಮಾಧ್ಯಮ ತುಂಬ ಆಕರ್ಷಣೀಯವಾದ ಮಾಧ್ಯಮ. ಇದು ಯುವ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಸಿನಿಮಾದ ಸಂದೇಶವನ್ನು ಯುವ ಪ್ರೇಕ್ಷಕ ವರ್ಗ ಸರಿ ತಪ್ಪುಗಳ ನಿರ್ಣಯವಿಲ್ಲದೆ ಒಪ್ಪಿಕೊಳ್ಳುತ್ತಿದೆ. ಸಿನಿಮಾದ ಪ್ರಭಾವದಿಂದಾಗಿ ಮಚ್ಚ, ಪೊರ್ಕಿ, ಫಿಗರ್ ದಂಥ  ಪದಗಳು ಕಾಲೇಜು ಆವರಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿವೆ. ‘ಚಿಗುರಿದ ಕನಸು’ವಿನ ಶಂಕರನಲ್ಲಿ ತನ್ನನ್ನು ಕಂಡುಕೊಳ್ಳುವ ಪ್ರೇಕ್ಷಕ ‘ಮೆಂಟಲ್ ಮಂಜ’ದ ಮಂಜನಲ್ಲೂ ತನ್ನನ್ನು ಹುಡುಕಿಕೊಳ್ಳುತ್ತಾನೆ. ಇದು ಇವತ್ತಿನ ಸಿನಿಮಾದ ನಿಜವಾದ ದುರಂತ. ಪ್ರೇಕ್ಷಕರ ಈ ಮನೋಭಾವವನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಸಿನಿಮಾ ಮಾಧ್ಯಮ ಇಲ್ಲಿ ನಾಯಕ ನಟನನ್ನು ಸಕಲಕಲಾವಲ್ಲಭನಂತೆ ತೋರಿಸಲು ಅವನಿಂದ ಹಾಡು ಹಾಡಿಸುತ್ತದೆ, ನೃತ್ಯ ಮಾಡಿಸುತ್ತದೆ, ಕೈಯಲ್ಲಿ ಮಚ್ಚು ಕೊಟ್ಟು ಸಾಲು ಸಾಲು ಕೊಲೆಗಳನ್ನು ಮಾಡಿಸುತ್ತದೆ. ಸಿನಿಮಾದ ವಿಚಾರ ಸಂಕಿರಣದಲ್ಲಿ ಶಾಲಾ ಬಾಲಕ ಸಿನಿಮಾ ನೋಡಿದಾಗ ಕೈಯಲ್ಲಿ ಮಚ್ಚು ಬಂದೂಕು ಹಿಡಿಯಬೇಕೆನಿಸುತ್ತದೆ ಏಕೆ ಎಂದು ಕೇಳಿದ ಪ್ರಶ್ನೆಗೆ ವೇದಿಕೆಯಲ್ಲಿದ್ದ ಘಟಾನುಘಟಿಗಳು ಉತ್ತರಿಸಲು ತಡವರಿಸಬೇಕಾಯಿತು. 

ಇಂದು ಸಿನಿಮಾ ನಿರ್ಮಾಣದಲ್ಲಿ ಒಂದು ಬೌದ್ಧಿಕ ಶಿಸ್ತಿಲ್ಲ. ಹಣಗಳಿಕೆ ಸಿನಿಮಾದ ಮೂಲ ಉದ್ದೇಶವಾಗಿರುವಾಗ ಮತ್ತು ಶ್ರಮಿಕ ವರ್ಗದ ಅನಕ್ಷರಸ್ಥ ಪ್ರೇಕ್ಷಕರು ಸಿನಿಮಾದ ಜನಪ್ರಿಯತೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವಾಗ ಸಿನಿಮಾ ಮಾಧ್ಯಮವನ್ನು ಬೌದ್ಧಿಕ ಶಿಸ್ತಿಗೆ ಒಳಪಡಿಸುವುದು ಅಸಾಧ್ಯದ ಸಂಗತಿ. ಸದಭಿರುಚಿಯ ಪ್ರೇಕ್ಷಕ ವರ್ಗ ಸಿನಿಮಾ ವೀಕ್ಷಣೆಯಿಂದ ದೂರಸರಿದಿರುವುದು ಇನ್ನೊಂದು ಪ್ರಮುಖವಾದ ಕಾರಣ. ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣವನ್ನು ಒಂದು ಬೌದ್ಧಿಕ ಶಿಸ್ತಿಗೆ ಒಳಪಡಿಸಿ ಕಲಾತ್ಮಕ ಎನ್ನುವ ಮಾದರಿಯ ಹೊಸ ಅಲೆಯ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆಯಾದರೂ ಇಂಥ ಸಿನಿಮಾಗಳನ್ನು ಅದೆಷ್ಟು ಪ್ರೇಕ್ಷಕರು ವೀಕ್ಷಿಸಿ ಯಶಸ್ವಿಗೊಳಿಸುತ್ತಿರುವರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಸದಾಕಾಲ ಮೇನ್‍ಸ್ಟ್ರೀಮ್‍ನಲ್ಲಿ ಕಾಣಿಸಿಕೊಳ್ಳಲು ಆ ಮೂಲಕ ಹಣ ಮತ್ತು ಜನಪ್ರಿಯತೆಗಾಗಿ ಹಂಬಲಿಸುತ್ತಿರುವ ಬಹಳಷ್ಟು ಸಿನಿಮಾ ಕಲಾವಿದರು ಈ ಹೊಸ ಅಲೆಯ ಸಿನಿಮಾಗಳಲ್ಲಿ ಅಭಿನಯಿಸಲು ಮುಂದೆ ಬರುತ್ತಿಲ್ಲ. 

ಸಿನಿಮಾ ನಟ ನಟಿಯರ ಜನಪ್ರಿಯತೆಯನ್ನು ಡ್ರಗ್ಸ್ ಮಾರಾಟದ ಜಾಲ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಸಿನಿಮಾಗಳಲ್ಲಿ ನೀತಿ, ಧರ್ಮದ ಸಂಭಾಷಣೆಗಳನ್ನು ಉರುಹೊಡೆದು ಪ್ರೇಕ್ಷಕರಿಗೊಪ್ಪಿಸುವ ಇವರು ಅದೇ ಪ್ರೇಕ್ಷಕರಿಗೆ ಮಾದಕ ದ್ರವ್ಯಗಳನ್ನು ನೀಡುತ್ತಿರುವರು. ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಮಹತ್ವದ ಜವಾಬ್ದಾರಿ ಸಿನಿಮಾ ಮಧ್ಯಮದ ಮೇಲಿದೆ. ಆದರೆ ಮಾದಕ ದ್ರವ್ಯಗಳ ವ್ಯಸನಿಗಳು ಮತ್ತು ಮಾರಾಟಗಾರರಾಗಿರುವ ಇಂಥ ಕಲಾವಿದರಿಂದ ಆ ಜವಾಬ್ದಾರಿಯನ್ನು ನಿರೀಕ್ಷಿಸುವುದಾದರೂ ಹೇಗೆ? ಇಂಥ ಸಂಕ್ರಮಣ ಕಾಲದಲ್ಲಿ ರಾಜಕುಮಾರ ನೆನಪಾಗುತ್ತಾರೆ. ರಾಜಕುಮಾರ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳುಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಇಂಥ ಮಹಾನ್ ಕಲಾವಿದರ ಬದುಕು ನಮ್ಮ ಇಂದಿನ ಯುವ ಕಲಾವಿದರಿಗೆ ಮಾದರಿಯಾಗಬೇಕು.   

-ರಾಜಕುಮಾರ ಕುಲಕರ್ಣಿ