Thursday, November 3, 2016

ಮಾರ್ಕ್ಸ್ ವಾದಿಯೊಂದಿಗೆ ಮುಖಾಮುಖಿ




(ಶ್ರೀ ಬಿ.ವ್ಹಿ. ಮಠ ಅವರ ಅಭಿನಂದನಾ ಗ್ರಂಥಕ್ಕಾಗಿ ದಿನಾಂಕ ೨೪.೦೫.೨೦೧೫ ರಂದು ನಡೆಸಿದ ಸಂದರ್ಶನ) 


ಶ್ರೀ ಬಿ.ವಿ. ಮಠ ಅವರ ಸಾಧನೆಯ ಕ್ಷೇತ್ರದ ವ್ಯಾಪ್ತಿ ಬಹುದೊಡ್ಡದು. ಅವರು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಸಮಾಜವಾದಿಯಾಗಿ ಅನೇಕ ಸಾಧನೆಗಳನ್ನು ಮಾಡಿರುವರು. ಜೊತೆಗೆ ಅವರೊಬ್ಬ ಉತ್ತಮ ಓದುಗರು. ವೈಚಾರಿಕ ಚಿಂತನೆಯ ಗ್ರಂಥಗಳ ರಾಶಿಯೇ ಅವರ ಮನೆಯಲ್ಲಿದೆ. ಕಾರ್ಲ್ ಮಾರ್ಕ್ಸ್ ನನ್ನು ಓದಿಕೊಂಡಿರುವ ಶ್ರೀಯುತರು ಬಸವಣ್ಣ, ಅಕ್ಕಮಹಾದೇವಿ, ಲೋಹಿಯಾ ಇತ್ಯಾದಿ ಚಿಂತಕರ ಬರಹಗಳ ಓದಿನಲ್ಲೂ ಆಸಕ್ತರು. ಇತಿಹಾಸ, ಶಿಕ್ಷಣ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್ ಸಾಹಿತ್ಯದಲ್ಲಿನ ಮಹತ್ವದ ಕೃತಿಗಳನ್ನು ಓದಿಕೊಂಡಿರುವ ಶ್ರೀ ಬಿ. ವಿ. ಮಠ ಅವರು ಓದಿನ ಜೊತೆ ಜೊತೆಗೆ ಬರವಣಿಗೆಯಲ್ಲೂ ಕೃಷಿ ಮಾಡಿರುವರು. ಅವರು ತಮ್ಮ ಬರವಣಿಗೆಯನ್ನು ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ರೂಪಿಸಿಕೊಂಡಿದ್ದು ಬಹಳ ವಿಶಿಷ್ಠವಾದ ಬೆಳವಣಿಗೆಯನ್ನು ಎನ್ನಬಹುದು. ಅವರ ಲೇಖನಗಳಲ್ಲಿ ಸಮಾನತೆ, ವರ್ಗರಹಿತ ಸಮಾಜ, ಬಂಡವಾಳ ಶಾಹಿಯ ವಿರುದ್ಧದ ನಿಲುವು ಹೆಚ್ಚಿನ ಪ್ರಾಧಾನ್ಯತೆ ಪಡೆದಿವೆ. ಜೊತೆಗೆ ಮಾರ್ಕ್ಸ್ ವಾದದ ಹಿನ್ನೆಲೆಯುಳ್ಳ ಲೇಖಕರನ್ನು ಗುರುತಿಸಿ ಬೆಳೆಸಲು ಬಿ. ವ್ಹಿ. ಮಠ ಅವರು ತಾವು ಅಧ್ಯಕ್ಷರಾಗಿರುವ ಟ್ರಸ್ಟ್ ನಡಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಅನೇಕ ಕೃತಿಗಳು ಅವರ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿವೆ. ಮಹಾದೇವಿಯಕ್ಕನ ಮದುವೆ, ಕ್ರಾಂತಿದೂತ ಬಸವಣ್ಣ, ಬಸವಾದೀ ಪ್ರಮಥರ ಭಕ್ತ ಚಳವಳಿಯ ಭೌತಿಕವಾದೀ ಅಧ್ಯಯನಗಳು ಇತ್ಯಾದಿ ಪುಸ್ತಕಗಳು ಅವರ ಪ್ರಕಟಣೆಯ ಮಹತ್ವದ ಕೃತಿಗಳು. ೨೦೦೬ ರಲ್ಲಿ ಬಿ ವ್ಹಿ ಮಠ ಅವರು ತಮ್ಮ ಗೆಳೆಯರಾದ ಪಿ ಎಸ ಪಾಟೀಲರೊಂದಿಗೆ ಜೊತೆಗೂಡಿ ರಚಿಸಿ ಪ್ರಕಟಿಸಿರುವ 'ಮಹಾದೇವಿಯಕ್ಕನ ಮದುವೆ' ಅವರ ಮೆಚ್ಚಿನ ಪ್ರಕಟಣೆಗಳಲ್ಲೊಂದು. ಅಕ್ಕ ಮಹಾದೇವಿಯ ಮದುವೆಯನ್ನು ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ನೋಡುವ ಈ ಕೃತಿ ಕನ್ನಡದಲ್ಲಿ ಒಂದು ವಿನೂತನ ಪ್ರಯೋಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ.
      ಶ್ರೀ ಬಿ ವ್ಹಿ ಮಠ ಅವರಿಗೀಗ ೯೦ ವರ್ಷ ವಯಸ್ಸು. ಶ್ರೀಯುತರನ್ನು ಸಂದರ್ಶಿಸಲು ಎದುರಿಗೆ ಕುಳಿತ ಘಳಿಗೆ ವಯೋಸಹಜ ಸಮಸ್ಯೆಯಿಂದ ನಿಖರವಾಗಿ ಮಾತನಾಡಲಾರರೆನೋ ಎನ್ನುವ ಆತಂಕ ನನ್ನದಾಗಿತ್ತು. ನನ್ನ ಆತಂಕವನ್ನು ಅರಿತವರಂತೆ ಕೇಳಿದ ಪ್ರಶ್ನೆಗಳಿಗೆಲ್ಲ  ಚುರುಕಾಗಿ ಮತ್ತು ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತ ಹೋದರು. ತಮ್ಮ ನೆನಪಿನ ಖಜಾನೆಯಿಂದ ಸರಕುಗಳನ್ನೆಲ್ಲ ಹೊರತೆಗೆದು ಮಾತನಾಡುತ್ತಿದ್ದರೆ ಕೆಲವೊಮ್ಮೆ  ಪ್ರಶ್ನೆ ಕೇಳಲು ನಾನೆ ತಡವರಿಸುವಂತಾಯಿತು. ಗತಕ್ಕೆ ಹೋಗಿ ಅಲ್ಲಿನ ನೆನಪುಗಳನ್ನು ಹೆಕ್ಕಿ ತಂದು ಒಂದೊಂದಾಗಿ ವಿವರಿಸುತ್ತಿದ್ದ ಅವರ ಆ ಭಂಗಿ ಹದಿಹರೆಯದವರನ್ನೂ ನಾಚಿಸುವಂತಿತ್ತು. ತುಂಬ ಮಾತನಾಡುವ ಲಹರಿಯಲ್ಲಿ ಅವರಿದ್ದರೂ ಶ್ರೀಯುತರಿಗೆ ದಣಿವಾಗಬಾರದೆನ್ನುವ ಕಾಳಜಿ ನನ್ನದಾಗಿತ್ತು. ಜೊತೆಗೆ ಮನಸ್ಸಿಗೆ ಅಹಿತವೆನ್ನಿಸುವ ಯಾವುದನ್ನೂ ಅವರಿಗೆ ಕೇಳಬಾರದೆನ್ನುವ ಎಚ್ಚರಿಕೆಯಿಂದಲೇ ನನ್ನ ಪ್ರಶ್ನೆಗಳನ್ನು ಸಮಾಜ, ಶಿಕ್ಷಣ, ಮಾರ್ಕ್ಸ್ ವಾದಕ್ಕೆ ಸೀಮಿತಗೊಳಿಸಿಕೊಂಡಿದ್ದರೂ ಅವರೊಂದಿಗಿನ ಸಂದರ್ಶನದಲ್ಲಿ ಅನೇಕ ವಿಷಯಗಳು ನುಸುಳಿದವು. ಒಟ್ಟಾರೆ ಅವರೊಂದಿಗಿನ ಮಾತುಕತೆಯಲ್ಲಿ ಒಂದು ಕಾಲದ ಇಡೀ ಸಾಮಾಜಿಕ ಬದುಕು ಕಣ್ಣೆದುರು ಹಾದು ಹೋಯಿತು.

* ನಮಸ್ಕಾರಗಳು ಸರ್ ತಮ್ಮ ಸಂದರ್ಶನಕ್ಕಾಗಿ ಬಂದಿದ್ದೇನೆ. ಇದನ್ನು ಮಾತುಕತೆ ಒಂದಿಷ್ಟು ಹರಟೆ ಎಂದರೂ ಅಡ್ಡಿಯಿಲ್ಲ ಕೆಲವು ಪ್ರಶ್ನೆ ಮತ್ತು ಅನುಮಾನಗಳಿವೆ ಉತ್ತರಿಸಿ

        ತಮಗೂ ನಮಸ್ಕಾರಗಳು. ಸಂದರ್ಶನದ ಚೌಕಟ್ಟಿಗೆ ಸೀಮಿತವಾಗಿ ಮಾತನಾಡದೆ ಮನಸ್ಸು ಬಿಚ್ಚಿ ಮಾತನಾಡಿ. ಚರ್ಚೆಯ ಮೂಲಕ ನಿಮ್ಮ ಪ್ರಶ್ನೆ ಅಥವಾ ಅನುಮಾನಗಳಿಗೆ ಒಂದಿಷ್ಟು ಉತ್ತರಗಳು ಸಿಗಬಹುದು.

* ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದವರು ನೀವು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭ ನಿಮಗೆ ೨೨ ವರ್ಷ ವಯಸ್ಸು. ಆ ಕಾಲಘಟ್ಟದ ಸ್ವಾತಂತ್ರ್ಯ ಹೋರಾಟವನ್ನು ಈಗ ಹೇಗೆ ನೆನಪಿಸಿಕೊಳ್ಳುವಿರಿ?

      ಆಗೆಲ್ಲ ಜನರು ಗಾಂಧಿಯವರಿಂದ ಪ್ರೇರಿತರಾಗಿ ಅವರನ್ನು ಅನುಕರಿಸುತ್ತಿದ್ದರು. ಆ ಸಂದರ್ಭ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಅದೇ ಆಗ ಮಾರ್ಕ್ಸ್ ವಾದ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಇಲ್ಲಿ ಒಂದು ಮಾತು ಹೇಳಲು ಬಯಸುತ್ತೇನೆ ಸ್ವಾತಂತ್ರ್ಯ ಹೋರಾಟದ ಆ ದಿನಗಳಲ್ಲಿ ನನಗೆ ಗಾಂಧೀಜಿ ಅವರ ಹೋರಾಟದ ರೀತಿ ಮತ್ತು ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಅವರ ಅಹಿಂಸಾತ್ಮಕ ಹೋರಾಟವನ್ನು ನಾನು ಇಷ್ಟ ಪಡುತ್ತಿರಲಿಲ್ಲ. ಬ್ರಿಟಿಷರನ್ನು ಅಹಿಂಸೆಯ ಮೂಲಕ ಭಾರತವನ್ನು ಬಿಟ್ಟು ತೊಲಗುವಂತೆ ಮಾಡುವುದು ಅಸಾಧ್ಯವಾದದ್ದು ಎನ್ನುವುದು ನನ್ನ ನಿಲುವಾಗಿತ್ತು. ಅವರನ್ನು ಹಿಂಸೆಯ ಮೂಲಕವೇ ಹೊರದಬ್ಬುವ ಪ್ರಯತ್ನವಾಗಬೇಕು ಎನ್ನುವ ಅಭಿಪ್ರಾಯಕ್ಕೆ ನಾನು ಬದ್ದನಾಗಿದ್ದೆ. ಬದಲಾವಣೆ ಮತ್ತು ಬೆಳವಣಿಗೆಗಳು ತ್ವರಿತವಾಗಿ ಆಗಬೇಕೆನ್ನುವ ವಯಸ್ಸು ಜೊತೆಗೆ ಮಾರ್ಕ್ಸ್ ವಾದದ ಪ್ರಭಾವ ಬೇರೆ. ಈ ಕಾರಣದಿಂದಾಗಿ ಗಾಂಧೀಜಿ ಅವರಿಗಿಂತಲೂ ಉಗ್ರಗಾಮಿಗಳ ಹೋರಾಟವೇ ನನಗೆ ಆದರ್ಶವಾಗಿತ್ತು. ಇದನ್ನು ಆ ಸಂದರ್ಭ ನಾನು ವ್ಯಕ್ತಪಡಿಸಿದ್ದೆ ಕೂಡ. ಅಂದಮಾತ್ರಕ್ಕೆ ಗಾಂಧೀಜಿ  ಬಗ್ಗೆ ಗೌರವ ಭಾವನೆ ಇಲ್ಲ ಎಂದರ್ಥವಲ್ಲ. ಅಭಿಪ್ರಾಯ ಭೇದಗಳಿರಬಹುದು ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿ ಗಾಂಧಿ ನನಗೆ ಇವತ್ತಿಗೂ ಆದರ್ಶ.

* ಸಾಮಾನ್ಯವಾಗಿ ನೀವು ಔದ್ಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿದವರು. ಕೈಗಾರಿಕಾ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು ಅದಕ್ಕೊಂದು ಉದಾಹರಣೆ. ಶಿಕ್ಷಣ ಎನ್ನುವುದು ನಮ್ಮನ್ನು ಪರಾವಲಂಬಿಗಳನ್ನಾಗಿಸುತ್ತಿದೆಯೋ ಅಥವಾ ಸ್ವಾವಲಂಬಿಗಳನ್ನಾಗಿ ರೂಪಿಸುತ್ತಿದೆಯೊ? 

            ನನ್ನ  ದೃಷ್ಟಿಯಲ್ಲಿ   ಶಿಕ್ಷಣ ಉದ್ಯೋಗಕ್ಕೆ ದಾರಿ ಎನ್ನುವುದಕ್ಕಿಂತ ಅದು ಆತ್ಮವಿಕಾಸಕ್ಕೆ ನೆರವಾಗಬೇಕು. ಹಿಂದೆಯೆಲ್ಲ ಜನರು ಉದ್ಯೋಗಕ್ಕಾಗಿ ಶಿಕ್ಷಣವನ್ನು ಅವಲಂಬಿಸಿರಲಿಲ್ಲ. ಪ್ರತಿಯೊಬ್ಬರಿಗೂ ಜೀವನ ನಿರ್ವಹಣೆಗೆ ಮನೆತನದ ಪರಂಪರಾಗತವಾಗಿ ಬಂದ ಉದ್ಯೋಗಗಳಿರುತ್ತಿದ್ದವು. ಉದಾಹರಣೆಗೆ ಕುಂಬಾರ, ಕಮ್ಮಾರ, ನೇಕಾರ, ಬಡಿಗ, ಕೃಷಿಕ ಇತ್ಯಾದಿ. ಈ ಕಾರಣದಿಂದಲೇ ಆಗೆಲ್ಲ ಜನರು ಶಿಕ್ಷಣವಿಲ್ಲದೆಯೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದರು. ಅವರೆಲ್ಲ ಶಿಕ್ಷಣವೆಂದರೆ ಅದು ವ್ಯಕ್ತಿತ್ವ ವಿಕಾಸಕ್ಕೆ ದಾರಿ ಎಂದು ನಂಬಿರುತ್ತಿದ್ದರು. ನಿಮಗೆ ನೆನಪಿರಬಹುದು ಇದೆ ಉದ್ದೇಶದಿಂದ ಆ ಕಾಲದಲ್ಲಿ ಜನರನ್ನು ವಿದ್ಯಾವಂತರನ್ನಾಗಿ ಮಾಡಲು ರಾತ್ರಿ ಶಾಲೆಗಳು ಹಳ್ಳಿ ಹಳ್ಳಿಯಲ್ಲಿ ಪ್ರಾರಂಭವಾದವು. ಆದರೆ ಕಾಲಾನಂತರದಲ್ಲಿ ಶಿಕ್ಷಣದ ಧ್ಯೇಯೋದ್ದೇಶ ಮತ್ತು ಜನರ ಅಭಿಪ್ರಾಯಗಳಲ್ಲಿ ಬದಲಾವಣೆಗಳಾಗಿ ಶಿಕ್ಷಣ ಎನ್ನುವುದು ಉದ್ಯೋಗ ಕೊಡುವ ಕ್ಷೇತ್ರ ಎನ್ನುವ ಕಲ್ಪನೆ ಬಲವಾಯಿತು.

* ಹಿಂದೆಯೆಲ್ಲ ಮಠಮಾನ್ಯಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದವು. ಅದರಲ್ಲೂ ಉಚಿತ ಶಿಕ್ಷಣ ಅವುಗಳ ಉದ್ದೇಶವಾಗಿತ್ತು. ಇವತ್ತು ರಾಜ್ಯದಲ್ಲಿ ಸಿದ್ಧಗಂಗ ಮಠ ಬಿಟ್ಟರೆ ಉಳಿದೆಲ್ಲ ಮಠಗಳು ಉಚಿತ ಶಿಕ್ಷಣದಿಂದ ದೂರವೇ ಉಳಿದಿವೆ. ಈ ಬೆಳವಣಿಗೆಯನ್ನು ನೀವು ಹೇಗೆ ನೋಡುವಿರಿ? 

     ಮಠಗಳು ಹಿಂದಿನ ಕಾಲದಲ್ಲಿ ಉಚಿತ ಶಿಕ್ಷಣ ಕೊಡುತ್ತಿದ್ದವು ಎನ್ನುವುದರ ಜೊತೆಗೆ ಆಗ ಮಠಗಳಲ್ಲಿ ಯಾವ ರೀತಿಯ ಶಿಕ್ಷಣ ದೊರೆಯುತ್ತಿತ್ತು ಎಂದು ನಾವು ಪ್ರಶ್ನಿಸಬೇಕು. ಅಲ್ಲಿ ಧಾರ್ಮಿಕ ಶಿಕ್ಷಣವೇ ಮಠಗಳ ಮೂಲ ಉದ್ದೇಶವಾಗಿತ್ತು. ಜೊತೆಗೆ ಆಗ ಮಠಗಳು ಸ್ಥಾಪನೆಯಾದದ್ದು ಕೂಡ ಜನರಿಗೆ ಧಾರ್ಮಿಕ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ. ಮಠಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೇರೆ ಬೇರೆ ಮಠಗಳ ಮಠಾಧೀಶರಾಗಿ ಇಲ್ಲವೇ ಮಠಗಳಲ್ಲಿ ಶಿಕ್ಷಕರಾಗಿ ಸಾತ್ವಿಕ ಜೀವನ ನಡೆಸುತ್ತಿದ್ದರು. ಈಗ ನೋಡಿ ಮಠಗಳು ಕೂಡ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸುಗಳಂಥ ವೃತ್ತಿಪರ ಕಾಲೇಜುಗಳನ್ನು ನಡೆಸಲು ಮುಂದಾಗುತ್ತಿರುವಾಗ ಅಲ್ಲಿ ಉಚಿತ ಮತ್ತು ಧಾರ್ಮಿಕ ಶಿಕ್ಷಣ ಎನ್ನುವ ಉದ್ದೇಶ ಮೂಲೆಗುಂಪಾಯಿತು. ಈಗ ಯಾವ ಮಠಗಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮಾತ್ರ ನಡೆಸಲು ಮುಂದಾಗುತ್ತಿಲ್ಲ.

* ಒಂದು ಹಂತದಲ್ಲಿ ಕಮ್ಯುನಿಜಮ್ ನಿಮ್ಮನ್ನು ಹೆಚ್ಚು ಹೆಚ್ಚು ಪ್ರಭಾವಿಸಿತು. ಇನ್ನೊಂದೆಡೆ ಬಂಥನಾಳ ಶ್ರೀಗಳು ನಿಮ್ಮ ಮೇಲೆ ಪ್ರಭಾವ ಬೀರಿದರು. ಏಕಕಾಲದಲ್ಲಿ ಮಠದ ಸಾಂಗತ್ಯ ಮತ್ತು ಕಮ್ಯುನಿಜಮ್ ನತ್ತ ಒಲವು ಇವೆರಡು ಹೇಗೆ ಸಾಧ್ಯವಾದವು? 

          ನಿಮಗೆ ಮೊದಲೇ ಸ್ಪಷ್ಟಪಡಿಸುತ್ತೇನೆ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೇ ಕಮ್ಯುನಿಜಮ್ ನತ್ತ ಒಲವು ಬೆಳೆಸಿಕೊಂಡವನು. ಆದರೆ ಬಂಥನಾಳ ಶ್ರೀಗಳ ಸಂಪರ್ಕಕ್ಕೆ ಬಂದದ್ದು ನಾನು ಶಿಕ್ಷಕನಾಗಿ ವೃತ್ತಿಯನ್ನು ಆರಂಭಿಸಿದ ಮೇಲೆ. ಶ್ರೀಗಳ ಸಂಪರ್ಕಕ್ಕೆ ಬಂದ ಮೇಲೆಯೂ ನಾನು ಕಮ್ಯುನಿಷ್ಟ್ ನಾಗಿಯೆ ಉಳಿದೆ. ಮಠದ ಸಾಂಗತ್ಯಕ್ಕೆ ಬಂದ ಮೇಲೆ ನನ್ನ ನಿಲುವು ಮತ್ತು ವಿಚಾರಗಳನ್ನು ಬದಲಿಸಿಕೊಳ್ಳಬೇಕೆಂದು ನನಗೆ ಅನ್ನಿಸಲಿಲ್ಲ. ಹಾಗೊಂದು ವೇಳೆ ನಾನು ನನ್ನ ನಿಲುವುಗಳನ್ನು ಬದಲಿಸಿಕೊಂಡಿದ್ದರೆ ಅದು ಆಷಾಢಭೂತಿತನ ಎಂದೆನಿಸುತ್ತಿತ್ತು. ಹೀಗೆ ಬದಲಾಗುವುದು ನನಗೆ ಇಷ್ಟವಿರಲಿಲ್ಲ. ಜೊತೆಗೆ ನಾನು ಮಠಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡವನಲ್ಲ. ಬಂಥನಾಳ ಶ್ರೀಗಳನ್ನು ನಾನು ಗೌರವಿಸುವುದು ಅವರೊಬ್ಬರು ಮಠಾಧೀಶರಾಗಿದ್ದರು ಎನ್ನುವ ಕಾರಣಕ್ಕಲ್ಲ. ಬದಲಾಗಿ ಸಮಾಜ ಮತ್ತು ಶಿಕ್ಷಣದ ಕುರಿತು ಅವರಿಗಿದ್ದ ಕಾಳಜಿ ನನ್ನನ್ನು ಹೆಚ್ಚು ಪ್ರಭಾವಿಸಿತು.

* ತಮ್ಮ ವೃತ್ತಿ ಬದುಕನ್ನೆಲ್ಲ ತಾವು ಗ್ರಾಮೀಣ ಪರಿಸರದಲ್ಲೇ ಕಳೆದಿರಿ. ಅಂಥದ್ದೊಂದು ಬದುಕನ್ನು ತಾವೇ ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡಿದ್ದು ಎನ್ನುವುದನ್ನು ನಾನು ನೆನಪಿಸ ಬಯಸುತ್ತೇನೆ. ಇದೆ ಸಂದರ್ಭ ಗಾಂಧೀಜಿ ಗ್ರಾಮೀಣಾಭಿವೃದ್ಧಿಗೆ ಕರೆ ಕೊಟ್ಟಿದ್ದರು. ಹಾಗಾದರೆ ಗಾಂಧಿ ವಿಚಾರಧಾರೆ ನಿಮ್ಮನ್ನು ಹೇಗೆ ಪ್ರಭಾವಿಸಿತು? 

      ನೋಡಿ ನಾನು ಬಿ ಎ ಪದವಿ ಪೂರೈಸಿದ ನಂತರ ಎಂ ಎ ಮಾಡುವ ಆಸೆಯಿತ್ತು.  ಆದರೆ ಆಗ ಸಿದ್ಧೇಶ್ವರ ಹೈಸ್ಕೂಲಿನಲ್ಲಿ ಶಿಕ್ಷಕರ ಅಗತ್ಯವಿದ್ದುದ್ದರಿಂದ ನನ್ನ ಗುರುಗಳಾದ ಶ್ರೀ ಸಾಸನೂರ ಅವರು ನನ್ನನ್ನು ಕರೆದು ಅಲ್ಲಿ ಶಿಕ್ಷಕನಾಗಿ ಸೇರುವಂತೆ ಹೇಳಿದರು. ಗುರುಗಳ ಆಜ್ಞೆಯನ್ನು ಮೀರುವಂತಿರಲಿಲ್ಲ. ಕೆಲಸಕ್ಕೆ ಸೇರಿಕೊಂಡೆ. ನಂತರ ಗ್ರಾಮೀಣ ಪ್ರದೇಶದ ಶಾಲೆಗೆ ಹೋಗುವಂತೆ ಆಡಳಿತ ಮಂಡಳಿ ಆದೇಶಿಸಿದಾಗ ಅದನ್ನೂ ಪಾಲಿಸಿದೆ. ಹೀಗೆ ಗ್ರಾಮೀಣ ಪ್ರದೇಶಕ್ಕೆ ಹೋದ ನಂತರ ಅಲ್ಲಿನ ಮಕ್ಕಳ ಸಮಸ್ಯೆಗಳಿಗೆ ಶಿಕ್ಷಣದ ಮೂಲಕವೇ ಪರಿಹಾರ ಹುಡುಕಲು ಪ್ರಯತ್ನಿಸಿದೆ. ಈ ಸಂದರ್ಭ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆ ನನ್ನ ಮೇಲೆ ಗಾಂಧೀಜಿ ಅವರ ಪ್ರಭಾವ ಎನ್ನುವುದರ ಬದಲು ಅದು ಕಮ್ಯುನಿಜಂನ ಪ್ರಭಾವ ಎಂದರೆ ಸರಿಹೋದಿತು. ಏಕೆಂದರೆ ಸಮಾನತೆ ಕಮ್ಯುನಿಜಂನ ಮೂಲ ಉದ್ದೇಶವಾಗಿರುವುದರಿಂದ ಗ್ರಾಮೀಣ ಮಕ್ಕಳಿಗೆ ಅನ್ಯಾಯವಾಗಬಾರದೆಂದು ನಾನು ಅಲ್ಲಿ ಉತ್ತಮ ಶಿಕ್ಷಣಕ್ಕೆ ಪ್ರಯತ್ನಿಸಿದೆ.

* ನಿಮ್ಮ ಪ್ರಕಟಣೆಗಳೆಲ್ಲ ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ಪ್ರಕಟವಾಗಿರುವುದು ಓದಿನ ಅನುಭವಕ್ಕೆ ಬರುತ್ತದೆ. ಉದಾಹರಣೆಗೆ 'ಮಾದೇವಿಯಕ್ಕನ ಮದುವೆ' ಕೃತಿಯಲ್ಲಿ ಅಕ್ಕ ವಿರಾಗಿಣಿಯೇ? ಎನ್ನುವ ಪ್ರಶ್ನೆ ಬರುತ್ತದೆ. ಅಂದರೆ ನಿಮ್ಮ ಪ್ರಕಟಣೆಯಲ್ಲಿ ಕಾಲ್ಪನಿಕತೆಗಿಂತ ವಾಸ್ತವಿಕತೆಗೆ ಮಹತ್ವ ನೀಡಿರುವಿರಿ. ಏಕೆ ಈ ಬಂಡಾಯದ ದಾರಿ. 

      ಟ್ರಸ್ಟ್ ನಡಿ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಾಗಲೇ ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಈ ಮೊದಲೆ ಹೇಳಿದಂತೆ ಕಾಲೇಜು ದಿನಗಳಲ್ಲೇ ನಾನು ಮಾರ್ಕ್ಸ್ ವಾದದ ಪ್ರಭಾವಕ್ಕೆ ಒಳಗಾಗಿದ್ದೆ. ಹೀಗಾಗಿ ನಮ್ಮ ಟ್ರಸ್ಟ್ ನಡಿ ಪ್ರಕಟಿಸುವ ಪುಸ್ತಕಗಳಲ್ಲಿ ಮಾರ್ಕ್ಸ್ ವಾದಕ್ಕೆ ಆದ್ಯತೆ ನೀಡಿದ್ದು. ಅಂಥ ಮನೋಭಾವದ ಲೇಖಕರನ್ನು ಗುರುತಿಸಿ ಅವರ ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನು ಮಾದೇವಿಯಕ್ಕನ ಮದುವೆ ಪುಸ್ತಕದ ವಿಷಯಕ್ಕೆ ಬಂದರೆ ಅಕ್ಕ ಮಹಾದೇವಿಯ ಹೋರಾಟ ಮಾರ್ಕ್ಸ್ ವಾದಕ್ಕೆ ತೀರ ಹತ್ತಿರವಾಗಿತ್ತು. ೧೨ ನೆ ಶತಮಾನದಲ್ಲಿ ಅಂಥದ್ದೊಂದು ಬದಲಾವಣೆಗೆ ಮುಂದಾದ ಅಕ್ಕನ ಕುರಿತು ಪುಸ್ತಕ ಪ್ರಕಟಿಸುವುದು ಯೋಗ್ಯ ಎಂದೆನಿಸಿತು. ಇನ್ನು ಅಕ್ಕ ಮಹಾದೇವಿ ವಿರಾಗಿಣಿಯೇ ಎನ್ನುವುದನ್ನು ನೀವು ಬಂಡಾಯ ಎಂದು ಕರೆದಿರುವಿರಿ. ಆದರೆ ಅದು ಬಂಡಾಯವಲ್ಲ ಇದ್ದ ವಸ್ತುಸ್ಥಿತಿ ಅದು. ಏಕೆಂದರೆ ಅಕ್ಕನಿಗೆ ಮದುವೆಯ ಬಗ್ಗೆ ಅವಳದೇ ಕನಸಿತ್ತು.

* ಒಂದು ಹಂತದಲ್ಲಿ ಬಸವಣ್ಣನವರಿಗೆ ವೈಜ್ಞಾನಿಕ ಸಮಾಜವಾದ ಕಲ್ಪನಾತೀತ ಎನ್ನುತ್ತಿರಿ. ಹೀಗೆ ಹೇಳುವಾಗ ಅಸಂಖ್ಯಾತ ಜನರ ಕಲ್ಪನೆಯನ್ನೇ ಬುಡಮೇಲು ಮಾಡುತ್ತಿದ್ದೇನೆ ಎಂದೆನಿಸಲಿಲ್ಲವೇ? 

     ಕೆಲವರು ಬಸವಣ್ಣನವರಿಗೆ ವೈಜ್ಞಾನಿಕ ಸಮಾಜವಾದದ ಕಲ್ಪನೆಯಿತ್ತು ಎನ್ನುತ್ತಾರೆ. ಆದರೆ ಒಂದು ವಿಷಯವನ್ನು ಸ್ಪಷ್ಟಪಡಿಸಬಯಸುತ್ತೇನೆ. ವೈಜ್ಞಾನಿಕ ಸಮಾಜವಾದ ಕಲ್ಪನೆ ಮೂಡಿದ್ದು ಬಂಡವಾಳ ಶಾಹಿ ಮತ್ತು ವಸಹಾತು ಶಾಹಿ ಆಡಳಿತದ ಸಂದರ್ಭ. ೧೨ ನೆ ಶತಮಾನದಲ್ಲಿ ಬಂಡವಾಳ ಶಾಹಿಯ ಕಲ್ಪನೆಯೇ ಇರಲಿಲ್ಲ. ಹೀಗಿದ್ದಾಗ ಆಗ ವೈಜ್ಞಾನಿಕ ಸಮಾಜವಾದದ ಕಲ್ಪನೆಯಂತೂ ಬಹುದೂರ. ನಾನು ಬಸವಣ್ಣನವರಿಗೆ ವೈಜ್ಞಾನಿಕ ಸಮಾಜವಾದದ ಕಲ್ಪನೆ ಇರಲಿಲ್ಲ ಎನ್ನುವುದು ವಾಸ್ತವಿಕತೆ. ಅವರ ಸಾಮಾಜಿಕ ಚಳವಳಿಯನ್ನು ನಾನು ಬಸವವಾದ ಎಂದು ಕರೆಯಲು ಇಚ್ಚಿಸುತ್ತೇನೆ. ಹೀಗೆ ವಾಸ್ತವಿಕತೆಯನ್ನು ಹೇಳುವಾಗ ಅದು ಜನರ ಭಾವನೆಗಳಿಗೆ ನೋವಾಗುತ್ತದೆಂದು ನಾನು ಸುಳ್ಳನ್ನು ಹೇಗೆ ಹೇಳಲಿ. ೧೨ ನೆ ಶತಮಾನದಲ್ಲಿ ಬಸವಣ್ಣನವರು ಮಾಡಿದ ಪ್ರಯತ್ನ ಮಾತ್ರ ನಿಜಕ್ಕೂ ಹೋರಾಟಗಾರರಿಗೆ ಅದೊಂದು ಪ್ರೇರಣೆ.

* ನಾವು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸುಸಂಘಟಿತ ಪ್ರಯತ್ನ ಮಾಡಿದಲ್ಲಿ ವರ್ಗರಹಿತ ಸಮಾಜದ ಮರುಸ್ಥಾಪನೆ ಸಾಧ್ಯ ಎನ್ನುವ ಆಶಯ ನಿಮ್ಮದು. ಬಂಡವಾಳ ಶಾಹಿ ಬಲಗೊಳ್ಳುತ್ತಿರುವ ಈ ಜಾಗತೀಕರಣದ  ದಿನಗಳಲ್ಲಿ ವರ್ಗರಹಿತ ಸಮಾಜದ ಆದರ್ಶವನ್ನು ಮರುಸ್ಥಾಪಿಸುವುದು ಸಾಧ್ಯವೇ? 

     ಜನರು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸುಸಂಘಟಿತರಾಗಬೇಕು. ಅಂದರೆ ಮಾತ್ರ ವರ್ಗರಹಿತ ಸಮಾಜವನ್ನು ಮತ್ತೆ ಮರುಸ್ಥಾಪಿಸಲು ಸಾಧ್ಯ. ಇಲ್ಲಿ ಜನರೆಂದರೆ ಯಾರು ಎನ್ನುವುದು ಮುಖ್ಯವಾಗುತ್ತದೆ. ಅವರೇನು ರೈತರೆ, ಪತ್ರಕರ್ತರೆ, ಬುದ್ದಿಜೀವಿಗಳೆ, ಅಧಿಕಾರಿ ವರ್ಗವೆ, ಬಂಡವಾಳ ಶಾಹಿಗಳೇ ಯಾರು ಈ ಜನ. ಈ ಬಂಡವಾಳ ಶಾಹಿಗಳಂತೂ ವರ್ಗರಹಿತ ಸಮಾಜವನ್ನು ಸ್ಥಾಪಿಸಲು ಬಯಸಲಾರರು. ಆದ್ದರಿಂದ ಸಾಮಾನ್ಯ ಜನರು (ಅಲ್ಲಿ ರೈತರು, ಕಾರ್ಮಿಕರು ಒಟ್ಟಿನಲ್ಲಿ ವರ್ಗರಹಿತ ಸಮಾಜದ ಕನಸು ಕಾಣುವ ಎಲ್ಲರೂ ಸೇರುತ್ತಾರೆ) ಮತ್ತು ಬುದ್ದಿಜೀವಿಗಳು ಸೇರಿ ಸಂಘಟಿತ ಪ್ರಯತ್ನ ಮಾಡಿದಲ್ಲಿ ವರ್ಗಪೂರ್ವ ಸಮಾಜದ ಆದರ್ಶವನ್ನು ನಾವು ಮರುಸ್ಥಾಪಿಸಲು ಸಾಧ್ಯ. ಆದರೆ ಸಾಧ್ಯವಾಗುತ್ತದೆ ಎಂದು ನಾನು ನಿಖರವಾಗಿ ಹೇಳುವುದಿಲ್ಲ. ಸಾಧ್ಯವಾಗಬಹುದು ಇಲ್ಲವೆ ಸಾಧ್ಯವಾಗದೆಯೂ ಇರಬಹುದು.

     ಜೊತೆಗೆ ನಾನು ಈ ಸಂದರ್ಭ ಇನ್ನೊಂದು ಮಾತನ್ನು ಹೇಳಲು ಬಯಸುತ್ತೇನೆ. ಈ ನಮ್ಮ ರಾಜಕಾರಣಿಗಳ ಹಿಡಿತದಲ್ಲಿ ದೇಶ ಇರುವವರೆಗೂ ನಮ್ಮ ಜನ ಸಂಘಟಿತ ರಾಗುವುದಿಲ್ಲ. ಏಕೆಂದರೆ ಇವರು ಜಾತಿ ಮತ್ತು ಧರ್ಮಗಳಿಂದ ಜನರನ್ನು ಒಡೆಯುತ್ತಿರುವರು. ಇನ್ನೊಂದು ಮಾತು ೧೯೧೭ ರಲ್ಲಿ ರಷ್ಯಾದಲ್ಲಿ ರಾಜಕಾರಣಿಗಳು ಮಾರ್ಕ್ಸ್ ವಾದಿಗಳಾಗಿದ್ದರಿಂದ ಅಲ್ಲಿ ಕ್ರಾಂತಿ ಸಾಧ್ಯವಾಯಿತು. ಆದರೆ ಭಾರತದಲ್ಲಿ ನಮ್ಮ ರಾಜಕಾರಣಿಗಳಿಂದ ಅಂಥದ್ದೊಂದು ಬದಲಾವಣೆಯನ್ನು ನಾವು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಮೊನ್ನೆ ಶ್ರೀ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದ ಸಂದರ್ಭ ಮಾನ್ಯ ರಾಷ್ಟ್ರಪತಿಗಳು ಅವರ ನಿವಾಸಕ್ಕೆ ಹೋಗಿ ಗೌರವಿಸಿದರು. ನೋಡಿ ಇಲ್ಲಿ ಇವರಿಬ್ಬರೂ ಒಂದೇ ಪಕ್ಷಕ್ಕೆ ಸೇರಿದವರಲ್ಲ. ಬೇರೆ ಬೇರೆ ಪಕ್ಷಕ್ಕೆ ಸೇರಿದವರಾಗಿದ್ದರೂ ಹಾಗೂ ಅವರುಗಳ ನಡುವೆ ಅಭಿಪ್ರಾಯ ಭೇದಗಳಿದ್ದರೂ ಅವರಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಗೌರವವಿದೆ. ಇಂಥ ಮನೋಭಾವದ ರಾಜಕಾರಣಿಗಳಿದ್ದರೆ ಮಾತ್ರ ಸಂಘಟಿತ ಪ್ರಯತ್ನ ಸಾಧ್ಯವಿದೆ. ಆದರೆ ಇಂಥ ಮನೋಭಾವದ ರಾಜಕಾರಣಿಗಳ ಸಂಖ್ಯೆ ನಮ್ಮಲ್ಲಿ ಎಷ್ಟಿದೆ?

* ಪ್ರಕಾಶಕರಾಗಿ ತಾವು ಹಲವು ಪುಸ್ತಕಗಳನ್ನು ಪ್ರಕಟಿಸಿರುವಿರಿ. ಸಾಮಾನ್ಯವಾಗಿ ಲೇಖಕರು ಎಷ್ಟೇ ಆಧುನಿಕ ಮನೋಭಾವದವರಾದರೂ ಜಾತಿ ಧರ್ಮದ ಕುರಿತು ಅವರು ಸಂಕುಚಿತರು ಎನ್ನುವ ತಕರಾರು ಓದುಗರದು. ಈ ಕುರಿತು ತಮ್ಮ ಅನುಭವವೇನು? 

    ಇದು ಇವತ್ತಿನ ಸಮಸ್ಯೆ ಮಾತ್ರವಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಿದು. ಅದು ಏಕೋ ಗೊತ್ತಿಲ್ಲ ನಮ್ಮ ಲೇಖಕರು ಎಷ್ಟೇ ಬಂಡಾಯದ ಮನೋಭಾವದವರಾದರೂ ಜಾತಿ ಧರ್ಮದ ವಿಷಯ ಬಂದಾಗ ಅವರು ತೀರ ಸಂಕುಚಿತರಾಗುತ್ತಿರುವರು. ನಿಮಗೊಂದು ದೃಷ್ಟಾಂತ ಹೇಳುತ್ತೇನೆ ನನ್ನ ಮಿತ್ರರೊಬ್ಬರು ಬಂಡಾಯ ಪ್ರವೃತ್ತಿಯವರಾಗಿದ್ದು ಒಂದು ಕಡೆ ಅಕ್ಕ ಮಹಾದೇವಿ ಇಂಥ ಉಪಪಂಗಡಕ್ಕೆ ಸೇರಿದವಳೆಂದು ಉಲ್ಲೇಖಿಸಿದ್ದರು. ಆಶ್ಚರ್ಯದ ಸಂಗತಿ ಎಂದರೆ ಅವರು ಹೀಗೆ ಉಲ್ಲೇಖಿಸಿದ ಉಪಪಂಗಡ ೧೨ ನೆ ಶತಮಾನದಲ್ಲಿ ಆಚರಣೆಯಲ್ಲೇ ಇರಲಿಲ್ಲ. ಈ ವಚನಗಳಲ್ಲಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಎಂದು ಉಲ್ಲೇಖವಿದೆ. ಆದರೆ ನನ್ನ ಮಿತ್ರರು ಗುರುತಿಸಿದ ಉಪಜಾತಿ ಯಾವ ವಚನಗಳಲ್ಲೂ ಉಲ್ಲೇಖಿತವಾಗಿಲ್ಲ. ಇದು ನನಗೆ ಅತ್ಯಂತ ಖೇದವೆನಿಸಿತು. ಬರಹಗಾರರು ಎಷ್ಟೇ ಆಧುನಿಕ ಮನೋಭಾವದವರಾದರೂ ಸ್ವಜಾತಿ ಸ್ವಧರ್ಮದ ಕುರಿತಾದ ತಮ್ಮ ಒಲವು ಮತ್ತು ಪ್ರೀತಿಯನ್ನು ಬಿಡುತ್ತಿಲ್ಲ. ಇಂಥ ವಿಪರ್ಯಾಸಗಳನ್ನು ಓದುಗರು ಖಂಡಿಸಬೇಕು.

* ನಮಸ್ಕಾರಗಳು ಸರ್ ತಮ್ಮಿಂದ ಅನೇಕ ಸಂಗತಿಗಳು ತಿಳಿದವು. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ