Saturday, August 6, 2016

ಅನಂತಮೂರ್ತಿ ಅವರ ಕಥೆಗಳ ಅನನ್ಯತೆ

       





           ‘ಎಲ್ಲ ದೊಡ್ಡ ಲೇಖಕರಂತೆ ಅನಂತಮೂರ್ತಿ ಬದುಕಿನ ಕೆಲವು ಮೂಲಭೂತ ಸಂಗತಿಗಳನ್ನು ಉದ್ದಕ್ಕೂ ಧ್ಯಾನಿಸಿಕೊಂಡು ಬಂದಿದ್ದಾರೆ. ಅವು ಕೆಲವೊಮ್ಮೆ ಬೇರೆ ಬೇರೆ ವಿವರಗಳಲ್ಲಿ ಕಾಣಿಸಿಕೊಂಡಿವೆ. ಕೆಲವೊಮ್ಮೆ ಬೇರೆ ಬೇರೆ ಪ್ರಕಾರಗಳಲ್ಲಿ ಮೈದಾಳಿವೆ. ಅವರ ನಿರಂತರ ಕಥನ ಕ್ರಮದಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದು ಈ ಲೇಖಕ ಕಥೆಗಾಗಿ ಕಥೆ ಹೇಳುವ ಜಾಯಮಾನದವನಲ್ಲ. ಒಂದೇ ವಿಷಯವನ್ನು ಹಲವು ಮಗ್ಗಲುಗಳಲ್ಲಿ ನೋಡಬಯಸುವವನು. ಕೆಲವೊಮ್ಮೆ ಈ ಮಗ್ಗಲುಗಳು ಒಂದೇ ರಚನೆಯಲ್ಲಿ ತೋರಬಹುದು. ಅಥವಾ ಆತನ ಮುಂದುವರಿದ ರಚನೆಗಳಲ್ಲಿ ಕಾಣಿಸಿಕೊಳ್ಳಬಹುದು. ಮೌಲ್ಯಗಳ ಹಲವು ರೂಪಗಳು, ಸತ್ಯದ ಬಹುಮುಖತೆ, ಒಂದು ಸನ್ನಿವೇಶದ ಅನೇಕ ಸಾಧ್ಯತೆಗಳು ಹೀಗೆ ಏಕದಿಂದ ಅನೇಕದ ಕಡೆಗೆ ಅನಂತಮೂರ್ತಿ ಸಾಹಿತ್ಯ ಬೆಳೆದು ಬಂದಿದೆ. ಈ ಬಹುಮುಖ ದೃಷ್ಟಿ ಅನಂತಮೂರ್ತಿ ಅವರ ಸಾಹಿತ್ಯದ ಬಹುಮುಖ್ಯ ಗುಣ’ ಅನಂತಮೂರ್ತಿ ಅವರ ಕಥಾ ಸಾಹಿತ್ಯವನ್ನು ವಿಮರ್ಶಕ ಟಿ.ಪಿ.ಅಶೋಕ ವಿಶ್ಲೇಷಿಸುವ ಪರಿಯಿದು. ಅನಂತಮೂರ್ತಿ ಅವರ ಕಥೆಗಳನ್ನು ಓದಿದ ಓದುಗರ ಅನುಭವಕ್ಕೆ ಇಳಿಯುವ ಮಾತಿದು. ಈ ಲೇಖಕ ಕಥೆಗಾಗಿ ಕಥೆ ಹೇಳುವ ಜಾಯಮಾನದವನಲ್ಲ ಎನ್ನುವ ಮಾತನ್ನು ನಾವು ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕು. ಸಂಬಂಧಗಳ ಹುಡುಕಾಟ ಅವರ ಕಥೆಗಳ ಬಹುಮುಖ್ಯವಾದ ವಿಷಯವಸ್ತು. ಗ್ರಾಮೀಣ ಮತ್ತು ನಗರ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಅವರ ಪ್ರತಿಯೊಂದು ಕಥೆಯಲ್ಲೂ ಮನುಷ್ಯ ಸಂಬಂಧಗಳ ನಡುವಣ ಸಂಕೀರ್ಣತೆ ಮತ್ತು ಆ ಸಂಕೀರ್ಣತೆಯನ್ನು ಸೀಳಿ ನೋಡುವ ಲೇಖಕರ ಪ್ರಯತ್ನ ಎದ್ದು ಕಾಣುತ್ತದೆ. ಅನಂತಮೂರ್ತಿ ಅವರು ಪರಿಪೂರ್ಣ ಎಂದುಕೊಂಡಿರುವ ಗತವನ್ನು ಬಿರುಕು ಬಿಟ್ಟಿರುವ ವರ್ತಮಾನದ ಜೊತೆಯಲ್ಲಿ ನೋಡುತ್ತಾರೆ ಎನ್ನುವ ಮಾತು ಅವರ ಕಥೆಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಮಾತಿಗೆ ಪುರಾವೆಯಾಗಿ ಅವರ ‘ಕಾರ್ತಿಕ’ ಕಥೆಯನ್ನು ಹೆಸರಿಸಬಹುದು. ‘ಕಾರ್ತಿಕ’ದಲ್ಲಿ ಲೇಖಕರು ಭೂತ ಮತ್ತು ವರ್ತಮಾನಗಳೆರಡನ್ನು ಏಕಕಾಲದಲ್ಲಿ ಓದುಗರ ಮುಂದಿಡುವಲ್ಲಿ ಯಶಸ್ವಿಯಾಗಿರುವರು. ‘ಕಾರ್ತಿಕ’ ಕಥೆಯ ಕಥಾನಾಯಕ ರಾಘವನಿಗೆ ಆತನ ವರ್ತಮಾನದ ಬದುಕಿನ ಪ್ರತಿ ಘಳಿಗೆ ಭೂತವಾಗುತ್ತ ಹೋಗುತ್ತದೆ. ರಾಗಜ್ಜ, ಅಮ್ಮ, ಅಬ್ಬಕ್ಕ, ಅಪ್ಪನ ಜೊತೆಗಿನ ಬಾಲ್ಯದ ಒಡನಾಟದ ನೆನಪು ರಾಘವನ ವರ್ತಮಾನದ ಬದುಕಿನ ಪ್ರತಿ ಘಳಿಗೆ ಎದುರಾಗುತ್ತ ಹೋಗುತ್ತದೆ. ಈಗಿನ ನನ್ನ ಪಾಡಿಗೂ ಜೀವನ ಹಿಡಿದ ಜಾಡಿಗೂ ಅಂದು ನಾನು ಹುಡುಗನಾಗಿದ್ದಾಗ ಅನುಭವಿಸಿದ್ದಕ್ಕೂ ಏನು ಸಂಬಂಧ ಎನ್ನುವ ಹುಡುಕಾಟ ರಾಘವನದು. ‘ಹೋಗಿಯಪ್ಪ ನಿಮಗೇನೋ ಯೋಚನೆ. ಮನೆಯಲ್ಲಿ ಇದ್ದರೂ ನೀವು ಇಲ್ಲದಂತೆ’ ಎನ್ನುವ ಛಾಯಾಳ ಮಾತು ರಾಘವನ ಇಡೀ ವರ್ತಮಾನದ ಬದುಕು ಗತದ ನೆನಪುಗಳಲ್ಲಿ ಕಳೆದುಹೋಗಿರುವುದನ್ನು ಸೂಚಿಸುತ್ತದೆ. ಕರುಳು ಬಳ್ಳಿಗಳನ್ನು ಸಂಪೂರ್ಣ ಕಡಿದು ಹಾಕಿ ಬಾಳಿನ ಗತಿಯನ್ನು ಹುಡುಕಬೇಕೆಂದು, ತಂದೆತಾಯಿಗೆ ಪರಕೀಯನಾಗಿ ಬಾಳಬೇಕೆಂದು ಹೊರಟ ರಾಘವ ಭೌತಿಕವಾಗಿ ದೂರಾದರೂ ಗತದ ನೆನಪುಗಳಿಂದ ಕಳಚಿಕೊಳ್ಳುವಲ್ಲಿ  ವಿಫಲನಾಗುತ್ತಾನೆ. 
‘ಪ್ರಕೃತಿ’ಯಲ್ಲಿ ರೈತನೊಬ್ಬ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ತನ್ನ ಮನೆಯವರೊಂದಿಗೆ ಹೋರಾಟಕ್ಕಿಳಿಯುವ ಕಥೆಯಿದೆ. ಇಲ್ಲಿ ಎರಡು ತಲೆಮಾರುಗಳ ನಡುವೆ ನಡೆಯುವ ಸಂಘರ್ಷವಿದೆ. ಮಲೆನಾಡಿನ ಅತ್ಯುತ್ತಮ ಬೇಸಾಯಗಾರನೆಂದು ಸರ್ಕಾರದಿಂದ ಬೆಳ್ಳಿ ಪದಕ ಪಡೆದ ಸಂಕಯ್ಯಪ್ಪನಿಗೆ ತನ್ನ ಭೂಮಿಯಲ್ಲಿ ಕಿತ್ತಳೆ ಬೆಳೆಯುವಾಸೆ. ಆದರೆ ಮಗ ನಾರಾಯಣನಿಗೆ ಪಟ್ಟಣ ಸೇರಿ ಹೊಟೆಲ್ ಇಟ್ಟು ಬದುಕನ್ನು ರೂಪಿಸಿಕೊಳ್ಳುವ ಹಂಬಲ. ನಾರಾಯಣನ ಈ ಬಯಕೆಗೆ ತಾಯಿಯ ಒತ್ತಾಸೆಯೂ ಇದೆ. ಅಪ್ಪ ದುಡ್ಡು ಕೊಡಲು ಒಪ್ಪದಿದ್ದರೆ ಆಸ್ತಿಯಲ್ಲಿ ಪಾಲು ಕೇಳುತ್ತೇನೆ ಎನ್ನುವ ಹಠಮಾರಿ ನಾರಾಯಣನಾದರೆ ಶತಾಯಗತಾಯ ಅಮ್ಮ ಮಗನ ಬೇಡಿಕೆಗೆ ಸೋಲದ ನಿರ್ಧಾರ ಸಂಕಪ್ಪಯ್ಯನದು. ಆ ಮನೆಯಲ್ಲಿ ಅಪ್ಪನನ್ನು ಬೆಂಬಲಿಸುವ ಜೀವಗಳೆಂದರೆ ಮದುವೆಯಾಗಿ ಆರು ತಿಂಗಳಿಗೆ ಗಂಡ ಸತ್ತು ತವರು ಮನೆ ಸೇರಿದ ಹಿರಿಯ ಮಗಳು ಲಕ್ಷ್ಮಿ ಮತ್ತು ಕೊನೆಯ ಮಗಳು ಶಾಂತ. ಹರೆಯದ ಲಕ್ಷ್ಮಿ ಪ್ರಕೃತಿ ಸಹಜವಾದ ಬಯಕೆಯನ್ನು ತನ್ನಂತೆ ಕೆಚ್ಚಿನಿಂದ ಹೋರಾಡಿ ನಿಗ್ರಹಿಸಿಕೊಳ್ಳುವಳೆಂಬ ಅಪರಿಮಿತ ವಿಶ್ವಾಸ ಸಂಕಪ್ಪಯ್ಯನದು. ಮುಂದೊಂದು ದಿನ ಅವನ ಈ ವಿಶ್ವಾಸದ ಕಟ್ಟೆ ಕುಸಿದು ಬೀಳುತ್ತದೆ. ಕಾಡಿನಲ್ಲಿ ಶಾನುಭೋಗನ ಮಗ ಕಿಟ್ಟಿಯನ್ನು ತಬ್ಬಿಕೊಂಡು ಮಲಗಿದ್ದ ಲಕ್ಷ್ಮಿಯನ್ನು ನೋಡಿದ ಆ ಘಳಿಗೆ ಸಂಕಪ್ಪಯ್ಯನ ಕೆಚ್ಚಿನ ಹೋರಾಟ ಪ್ರಕೃತಿ ಎದುರು ಸೋಲು ಕಾಣುತ್ತದೆ. ತೋಟ ಮನೆಯನ್ನು ಮಾರಿ ಹೆಂಡತಿ ಮಕ್ಕಳನ್ನು ಪಟ್ಟಣಕ್ಕೆ ಕಳುಹಿಸಿ ಗುಡಿಸಿಲಿನಲ್ಲಿ ಒಬ್ಬನೆ ಉಳಿಯುವುದರೊಂದಿಗೆ ಕಥೆ ಮುಗಿಯುತ್ತದೆ. 
‘ಘಟಶ್ರಾದ್ಧ’ ಕಥೆಯಲ್ಲಿ ಹದಿಹರೆಯದ ವಿಧವೆಯ ಬದುಕಿನ ತಲ್ಲಣಗಳನ್ನು ಅನಂತಮೂರ್ತಿಯವರು ಹೃದಯಂಗಮವಾಗಿ ಕಟ್ಟಿಕೊಟ್ಟಿರುವರು. ಮದುವೆಯಾಗಿ ಕೆಲವೆ ದಿನಗಳಲ್ಲಿ ಗಂಡನನ್ನು ಕಳೆದುಕೊಂಡು ತವರು ಮನೆಗೆ ಮರಳುವ ಯಮುನಾ ಪ್ರಕೃತಿ ಕೊಡಮಾಡಿದ ಬಯಕೆಗಳೆದುರು ಸೋಲುತ್ತಾಳೆ. ಮನೆ ಪಕ್ಕದಲ್ಲಿನ ಶಾಲೆಯ  ಮೇಷ್ಟರೊಂದಿಗಿನ ದೈಹಿಕ ಸಂಪರ್ಕದಿಂದ ಬಸಿರಾಗುವ ಯಮುನಾ ಹಲವರ ಕುಚೋದ್ಯ ಮತ್ತು ವ್ಯಂಗ್ಯಕ್ಕೆ ಗ್ರಾಸವಾಗುತ್ತಾಳೆ. ಪೌರೋಹಿತ್ಯದ ಕಲಿಕೆಗೆಂದು ಮನೆ ಸೇರುವ ಹುಡುಗ ಯಮುನಾಳ ದುರಂತ ಬದುಕಿಗೆ ಸಾಕ್ಷಿಯಾಗುತ್ತಾನೆ. ಇಡೀ ಕಥೆ ಓದುಗನೆದುರು ತೆರೆದುಕೊಳ್ಳುವುದೇ ಆ ಹುಡುಗನ  ಸ್ವಗತದಿಂದ. ಯಮುನಕ್ಕನಲ್ಲಿ ತಾಯಿಯ ಮಮತೆ, ಪ್ರೀತಿ, ವಾತ್ಸಲ್ಯವನ್ನು ಕಾಣುವ ಆತ ಅವಳು ದೈಹಿಕ ಬಯಕೆಯಿಂದ ಬಳಲುವುದಕ್ಕು ಮತ್ತು ಅವಳ ಬಸಿರಿಳಿಯುವುದಕ್ಕೂ ಸಾಕ್ಷಿಯಾಗುತ್ತಾನೆ. ‘ಅಲ್ಲಿ ಯಮುನಕ್ಕನನ್ನು ಬೆತ್ತಲೆಯಾಗಿ ಮಲಗಿಸಿದ್ದರು. ಉಚ್ಚೆ ಹೊಯ್ಯುವ ಜಾಗವನ್ನು ಮಾತ್ರ ಮುಚ್ಚಿದ್ದರು’ ಎನ್ನುವ ಈ ಮಾತು ಹುಡುಗನ ಅಮಾಯಕತೆಯ ಜೊತೆಗೆ ಅನಂತಮೂರ್ತಿ ಅವರು ಭಾಷೆಯನ್ನು ದುಡಿಸಿಕೊಂಡ ಅನನ್ಯತೆಯನ್ನು ಓದುಗರಿಗೆ ಪರಿಚಯಿಸುತ್ತದೆ. ಕಥೆಯ ಅಂತ್ಯದಲ್ಲಿ ಉಡುಪರು ಯಮುನಕ್ಕ ಬದುಕಿರುವಾಗಲೆ ಶ್ರಾದ್ಧ ಮಾಡಿ ಅವಳನ್ನು ಜಾತಿಯಿಂದ ಹೊರಹಾಕಿ ತಾವು ಮುಪ್ಪಿನಲ್ಲಿ ಪುಟ್ಟ ಹುಡುಗಿಯ ಜೊತೆ ಹಸೆಮಣೆ ಏರುವುದು ವ್ಯವಸ್ಥೆಯ ವಿಪರ್ಯಾಸವನ್ನು ಅನಾವರಣಗೊಳಿಸುತ್ತದೆ. 
‘ತಾಯಿ’ ಕಥೆಯಲ್ಲಿ ಮಾತೆಯ ಮಮತೆ ಮತ್ತು ಕ್ರೂರತ್ವ ಎರಡನ್ನೂ ಒಟ್ಟೊಟ್ಟಿಗೆ ಚಿತ್ರಿಸಿರುವ ಪರಿ ವಿಶಿಷ್ಠವಾಗಿದೆ. ತನ್ನ ಮಗ ಶೀನನಿಗೆ ಕ್ರೂರ ತಾಯಿಯೊಬ್ಬಳ ಕಥೆಯನ್ನು ಹೇಳುತ್ತ ಆ ಕಥೆಯ ಪಾತ್ರವೇ ತಾನಾಗುತ್ತ ಮನೆಬಿಟ್ಟು ಹೋದ ಮಗನನ್ನು ನೆನೆಯುತ್ತ ದು:ಖಿಸುವ ಮತ್ತು ತನ್ನ ತಪ್ಪಿಗಾಗಿ ಪಶ್ಚಾತ್ತಾಪ  ಪಡುವ ಹೆಣ್ಣಿನ ಕಥೆ ಓದುಗನ ಮನ ಕಲುಕುತ್ತದೆ. ಗಂಡನ ಸಾವಿನ ನಂತರ ಇನ್ನೊಬ್ಬನೊಂದಿಗೆ ಕೂಡಿಕೆ ಮಾಡಿಕೊಳ್ಳುವ ತಾಯಿಯನ್ನು ಧಿಕ್ಕರಿಸಿ ಮನೆಬಿಟ್ಟು ಹೋದ ಮಗ ಚೆಲುವ ಮತ್ತೆ ಮರಳಿ ಬಂದಾನೆಂಬ ನಿರೀಕ್ಷೆ ಆ ತಾಯಿಯದು. ತಾಯಿಯಾದರೂ ಮೊದಲು ಅವಳು ಹೆಣ್ಣಲ್ಲವೆ? ಪ್ರಕೃತಿ ಸಹಜ ಬಯಕೆಗಳು ಅವಳಿಗಿಲ್ಲವೆ? ಸಮಾಜದ ಕಾಕದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅವಳಿಗೂ ಒಂದು ಗಂಡಿನ ಆಸರೆ ಬೇಕಿತ್ತಲ್ಲವೆ? ಎನ್ನುವ ಪ್ರಶ್ನೆಗಳು ಕಥೆ ಓದುತ್ತ ಓದುಗನ ಮನಸ್ಸಿನಲ್ಲಿ ಮೂಡಿ ಚಿಂತನೆಗೆ ಹಚ್ಚುತ್ತವೆ. ಕಥೆಗಾರನ ಕಥನ ಕಲೆ ಹೀಗೆ ಓದುಗರನ್ನು ಚಿಂತನೆಗೆ ಹಚ್ಚುವಲ್ಲೇ ಆ ಕಲೆಯ ಶ್ರೇಷ್ಠತೆ ಅಡಗಿದೆ. ತಮ್ಮ ಕಥೆಗಳಲ್ಲಿ ಅನಂತಮೂರ್ತಿ ಅವರು ಬದುಕಿನ ಒಂದು ಮಗ್ಗುಲನ್ನು ಓದುಗರಿಗೆ ಪರಿಚಯಿಸದೆ ಇಡೀ ಬದುಕನ್ನು ವಿಶಾಲ ಅರ್ಥದಲ್ಲಿ ಕಟ್ಟಿಕೊಡುತ್ತಾರೆ. ಬದುಕಿನ ಒಂದು ಪಾರ್ಶ್ವದಿಂದ ಮಾತ್ರ ಸರಿ ತಪ್ಪುಗಳ ನಿರ್ಯಣಕ್ಕೆ ಬಂದು ನಿಲ್ಲುವುದು ತಪ್ಪು. ‘ತಾಯಿ’ ಕಥೆಯಲ್ಲಿ ಹೆಣ್ಣು ಮಮತಾಮಯಿ ತಾಯಿಯಾಗಿಯೂ ಮತ್ತು ಗಂಡಿನ ರಸಿಕತೆಗೆ ಸೋಲುವ ಹೆಣ್ಣಾಗಿಯೂ ಚಿತ್ರಿತವಾಗಿರುವಳು. ಕಥೆಯ ಕೊನೆಯಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಆತ್ಮವಿಮರ್ಶೆಗಿಳಿದಾಗ ಕೊನೆಗೂ ಅಲ್ಲಿ ಗೆಲುವು ಸಾಧಿಸುವವಳು ತಾಯಿಯೆ. ‘ಆ ನೀರವ ಗಂಭೀರ ಕತ್ತಲಲ್ಲಿ ದು:ಖತಪ್ತ ಎದೆಯಿಂದ ಹಾಲು ಹರಿಯುತ್ತದೆ ಸಿಹಿಯಾದ ಹಾಲು. ಆದರೆ ತಾಯಿಯ ಕಣ್ಣಿನಿಂದ ನೀರೂ ಸುರಿಯುತ್ತದೆ ಉಪ್ಪಾದ ನೀರು ಅನಂತವಾಗಿ’ ಎನ್ನುವ ಈ ಸಾಲುಗಳು ಹೆಣ್ಣಿನ ಇಡೀ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುತ್ತವೆ. 

ಮಧ್ಯಮ ವರ್ಗದ ಕುಟುಂಬದ ಯುವಕನ ಆಸೆ, ನಿರೀಕ್ಷೆ, ಹತಾಸೆ, ಕೋಪ, ಸ್ವಾರ್ಥ, ಕೀಳರಿಮೆಗಳೇ ‘ಕ್ಲಿಪ್ ಜಾಯಿಂಟ್’ ನ ಕಥಾವಸ್ತು. ಕಥಾ ನಾಯಕ ಕೇಶವ ಇಲ್ಲಿ ಭಾರತದ ಮಧ್ಯಮ ವರ್ಗದ ಯುವಕರನ್ನು ಪ್ರತಿನಿಧಿಸುತ್ತಾನೆ. ಇಬ್ಬರು ತಂಗಿಯರ ಮದುವೆ, ತಮ್ಮಿಂದರ ಬದುಕು, ಅಮ್ಮನ ನಿರೀಕ್ಷೆಗಳು ಹೀಗೆ ಸಂಸಾರದ ಬಹುದೊಡ್ಡ ಜವಾಬ್ದಾರಿ ಕೇಶವನ ಮೇಲಿದೆ. ವಯಸ್ಸು ಮೂವತ್ತು ದಾಟಿದರೂ ಕೇಶವನಿಗೆ ಇನ್ನು ಮದುವೆಯಾಗಿಲ್ಲ. ಮನೆಗೆ ನೆರವಾಗಬೇಕೆಂದು ದುಡಿದು ಗಳಿಸಲು ಆತ ಇಂಗ್ಲೆಂಡಿಗೆ ಬಂದಿದ್ದಾನೆ. ಹಾಗೆಂದ ಮಾತ್ರಕ್ಕೆ ಕನ್ನಡ ಸಿನಿಮಾಗಳಲ್ಲಿ ತೋರಿಸುವಂತೆ ಅವನೇನೂ ಆದರ್ಶ ನಾಯಕನಲ್ಲ. ಭಾರತ ಮತ್ತು ಅಲ್ಲಿನ ಬದುಕೆಂದರೆ ಕೇಶವನಿಗೆ ಜಿಗುಪ್ಸೆ, ತಮ್ಮಂದಿರು ತಂಗಿಯರೆಂದರೆ ಧಗಧಗನೆ ಉರಿಯುತ್ತಾನೆ. ಮನೆ ಮಂದಿಯೆಲ್ಲ  ಅಪರಾಧಿಗಳು ಎನ್ನುವ ಭಾವನೆ ಅವನದು. ಪಶ್ಚಿಮ ದೇಶಗಳೆಂದರೆ ಸಭ್ಯತೆಯ ಮತ್ತು ಆದರ್ಶದ ತಾಣಗಳೆಂದು ಅಪಾರ ಭರವಸೆಗಳೊಂದಿಗೆ ಇಂಗ್ಲೆಂಡಿಗೆ ಬಂದಿರುವ ಕೇಶವನಿಗೆ ಇಲ್ಲಿ ಸ್ಟೂಅರ್ಟ್‍ನ ಪರಿಚಯವಾಗುತ್ತದೆ. ಸ್ಟೂಅರ್ಟ್‍ನ ಜೀವನದಲ್ಲೊಂದು ನಿಯತ್ತಿದೆ. ಅವನೆಂದೂ ಮಂಕು ಬಡಿದಂತೆ ಶಾಪಗ್ರಸ್ತನಂತೆ ಕೂಡಲಾರ. ತನ್ನ ಜೀವನದ ಪ್ರತಿಕ್ಷಣವನ್ನು ವಿವೇಚಿಸಿ ಜೀವಿಸುತ್ತಾನೆ. ತನ್ನಿಂದ ಪರರಿಗೆ ನೋವಾಗಬಾರದು, ಅನ್ಯಾಯವಾಗಬಾರದು; ಹಂಗಿನಲ್ಲಿ ಇರುವುದೂ ಬೇಡ, ಇಡುವುದೂ ಬೇಡ ಇದು ಅವನ ಬದುಕಿನ ಗುರಿ. ಸ್ಟೂಅರ್ಟ್‍ನ ಈ ಒಟ್ಟು ವ್ಯಕ್ತಿತ್ವ ಕೇಶವನಲ್ಲಿ ಅಸೂಯೆಯನ್ನು ಮೆಚ್ಚುಗೆಯನ್ನು ಒಟ್ಟೊಟ್ಟಿಗೆ ಹುಟ್ಟಿಸುತ್ತದೆ. ಇಂಥ ವಿಶಾಲ ವ್ಯಕ್ತಿತ್ವದ ಸ್ಟೂಅರ್ಟ್‍ನ ಒಳಗಡೆ ಕೂಡ ಅಸಹನೆಯ ಕುದಿಯುತ್ತಿದೆ. ತಾನು ಬದುಕುತ್ತಿರುವ ದೇಶ ಸ್ವಾರ್ಥದ ಪುಟ್ಟ ಲೋಕ ಎನ್ನುವ ಅಸಹನೆ ಅವನದು. ಬಡತನದ ಅನುಭವವಿಲ್ಲ, ಹಸಿವೆಂದರೆ ಏನೂಂತ ಗೊತ್ತಿಲ್ಲ, ಹೆಣ್ಣಿನ ಸುಖದ ಕೊರತೆಯಿಲ್ಲ. ಇಂಥ ಬದುಕಿನಲ್ಲಿ ಯಾವ ಥ್ರಿಲ್ ಇದೆ ಎನ್ನುವ ಸ್ಟೂಅರ್ಟ್‍ಗೆ ಸಾಧು ಸಂತರ ನೆಲೆಯಾದ ಭಾರತದಿಂದ ಬಂದ ಕೇಶವನನ್ನು ಕಂಡರೆ ಅಪಾರ ಅಭಿಮಾನ. ಹೀಗೆ ತನ್ನಲ್ಲಿ ಇಲ್ಲದಿರುವುದನ್ನು ಅರಸುವ ಸಹಜ ಮಾನವ ಸ್ವಭಾವಕ್ಕೆ ಈ ಎರಡು ಪಾತ್ರಗಳು ಉದಾಹರಣೆಯಾಗಿ ನಿಲ್ಲುತ್ತವೆ. ಕಥೆಯ ಕೊನೆಯಲ್ಲಿ ಸುಖವನ್ನು ಹುಡುಕುತ್ತ ಕ್ಲಿಪ್ ಜಾಯಿಂಟ್‍ಗೆ ಬರುವ ಕೇಶವನಿಗೆ ಅವನೆಂದುಕೊಂಡ ರಾಷ್ಟ್ರದಲ್ಲೂ ಅಸಭ್ಯತೆಯ ದರ್ಶನವಾಗುತ್ತದೆ.
             ‘ನವಿಲುಗಳು’ ಕಥೆ ವಯಸ್ಸಾದಂತೆ ಬದಲಾಗುವ ಮನುಷ್ಯನ ಭಾವನೆಗಳಿಗೆ ಕನ್ನಡಿ ಹಿಡಿಯುತ್ತದೆ. ಅಪ್ಪನ ಶ್ರಾದ್ಧಕ್ಕೆಂದು ಹಳ್ಳಿಗೆ ಹೋಗುವ ಕಿಟ್ಟು ಹದಿನೈದು ಮೈಲಿಯಾಚೆಯ ಹಳ್ಳಿಯಲ್ಲಿರುವ ವಿಧವೆ ಜಾನಕಮ್ಮನನ್ನು ಭೇಟಿಯಾಗಲು ಹೋಗುತ್ತಾನೆ. ಹೀಗೆ ಅವನು ಹೋಗುತ್ತಿರುವುದು ಇದೇ ಮೊದಲೆನಲ್ಲ. ಅಪ್ಪಯ್ಯನನ್ನು ಹುಡುಕಿಕೊಂಡು ಬಾಲಕನಾಗಿದ್ದಾಗ ಆ ಮನೆಗೆ ಅವನು ಹೋಗಿದ್ದಿದೆ. ಹಾಗೆ ಆ ಮನೆಗೆ ಹೋಗಲು ಅವನಿಗಿರುವ ಆಕರ್ಷಣೆ ಗದ್ದೆಯ ಪಕ್ಕದಲ್ಲಿ ನೋಡಲು ಸಿಗುವ ನವಿಲುಗಳು. ಹೀಗೆ ಒಮ್ಮೆ ಹೋದವನು ಅಪ್ಪ ಬೆತ್ತಲೆ ಸ್ನಾನ ಮಾಡುತ್ತಿರುವುದನ್ನು, ಜಾನಕಮ್ಮ ಅಪ್ಪನ ಮೈ ಉಜ್ಜುತ್ತಿರುವುದನ್ನು ನೋಡಿ ಅರ್ಥವಾಗದೆ ಗದ್ದೆಯಲ್ಲಿ ಸಿಕ್ಕ ನವಿಲು ಗರಿಯನ್ನು ತಂದು ಪುಸ್ತಕದಲ್ಲಿ ಇಟ್ಟವನಿಗೆ ಈಗ ಎಲ್ಲವೂ ಅರ್ಥವಾಗಿದೆ. ಹಾಗೆಂದು ಅಪ್ಪನ ಬಗ್ಗೆ ಕಿಟ್ಟುವಿಗೆ ಕೋಪವಾಗಲಿ ಅಸಹ್ಯವಾಗಲಿ ಇಲ್ಲ. ಸದಾ ಕಾಯಿಲೆಯಿಂದ ಮಲಗಿರುತ್ತಿದ್ದ ಅಮ್ಮ ಅದಕ್ಕೆಂದೆ ಅಪ್ಪಯ್ಯ ಈ ಜಾನಕಮ್ಮನಿಂದ ತೃಪ್ತಿ ಪಡೆದಿರಬೇಕು ಎನ್ನುವ ಸ್ಥಿತಪ್ರಜ್ಞತೆ ಅವನದು. ಪರಿಸ್ಥಿತಿಯನ್ನು (ಅನೈತಿಕತೆ ಎಂದರೆ ತಪ್ಪಾದಿತು) ಸಮಯ ಸಂದರ್ಭಗಳ ವಿಶ್ಲೇಷಣೆಗೊಳಪಡಿಸಿ ನೋಡುವುದು ಅನಂತಮೂರ್ತಿ ಅವರೊಳಗಿನ ಕಥೆಗಾರನ ಜಾಯಮಾನ. ಇದನ್ನು ಅವರ ಬಹಳಷ್ಟು ಕಥೆಗಳಲ್ಲಿ ಕಾಣಬಹುದು. ಜಾನಕಮ್ಮನ ಮನೆಯಿಂದ ಮರಳಿ ಬರುವಾಗ ಮತ್ತದೆ ಗದ್ದೆಯಲ್ಲಿ ನವಿಲುಗಳು ಕುಣಿಯುವುದನ್ನು ಕಿಟ್ಟು ನೋಡುತ್ತಾನೆ. ಬಾಲಕನಾಗಿದ್ದಾಗ ಮೈಮರೆತಂತೆ ಈಗ ನವಿಲುಗಳು ಕುಣಿಯುವುದನ್ನು ನೋಡಿ ಕಿಟ್ಟು ಮೈಮರೆಯುವುದಿಲ್ಲ. ಹೀಗಾಗುವುದಕ್ಕೆ ವಯಸ್ಸು ಕಾರಣವಲ್ಲವೆ? ಎನ್ನುವ ಪ್ರಶ್ನೆಯೊಂದು ಅವನ ಮನಸ್ಸಿನಲ್ಲಿ ಮೂಡಿ ಈ ಪ್ರಶ್ನೆ ವಯಸ್ಸಾದಂತೆ ಮನುಷ್ಯನ ಭಾವನೆಗಳು ಬದಲಾಗುವುದನ್ನು ಧ್ವನಿಸುತ್ತದೆ.
             ವಿದೇಶಿ ಹೆಣ್ಣೊಬ್ಬಳ ಬದುಕಿನ ಕುರಿತಾದ ನಂಬಿಕೆ, ಕ್ರಾಂತಿಕಾರಿ ನಿಲುವು, ಆತ್ಮವಿಶ್ವಾಸವನ್ನು ‘ರೂತ್ ಮತ್ತು ರಸುಲ್’ ಕಥೆಯಲ್ಲಿ ಮನೋಜ್ಞವಾಗಿ ಚಿತ್ರಿಸಿರುವರು. ಇಂಗ್ಲೆಂಡಿನ ಎಳೆಯ ಪ್ರಾಯದ ರೂತ್ ಭಾರತದ ದಿನೇಶನನ್ನು ಪ್ರೀತಿಸಿ ತನ್ನ ಪ್ರೀತಿಯ ಪರೀಕ್ಷೆಗಾಗಿ ಭಾರತಕ್ಕೆ ಹೊರಟು ನಿಂತಿದ್ದಾಳೆ. ಭಾರತಕ್ಕೆ ಹೊರಟು ನಿಂತವಳಿಗೆ ಪಾಶ್ಚಾತ್ಯ ನಾಗರೀಕತೆಯೆಂದರೆ  ಹೆಸಿಗೆಯಾಗಿದೆ. ಭಾರತದಲ್ಲೇ ಬದುಕಿಗೆ ಅರ್ಥವಿದೆ ಎಂದವಳ ನಿಲುವು. ಹಿಂದೂಸ್ತಾನಿ ಸಂಗೀತವನ್ನು ಕಲಿತು ಭಾರತದಲ್ಲೇ ಒಂದು ವರ್ಷ ಬದುಕಿ ಅಲ್ಲಿ ಬದುಕುವುದು ಸಾಧ್ಯವೆಂದಾದರೆ ದಿನೇಶನನ್ನು ಮದುವೆಯಾಗಬೇಕೆಂದು ನಿರ್ಧಿರಿಸಿರುವಳು. ಹೀಗೆ ಭಾರತಕ್ಕೆ ಹೊರಟು ನಿಂತವಳನ್ನು ಹೇಗಾದರೂ ತಡೆಯಬೇಕೆಂಬ ಹಠ ರಸುಲನದು. ಐವತ್ತರ ಪ್ರಾಯದ ರಸುಲ್ ಇಪ್ಪತರ ವಯಸ್ಸಿನಲ್ಲೇ ಪೂರ್ವ ಬಂಗಾಳದಿಂದ ಓಡಿ ಬಂದು ಇಂಗ್ಲೆಂಡಿನಲ್ಲಿ ಬದುಕು ಕಟ್ಟಿಕೊಂಡಿರುವನು. ಭಾರತೀಯರ ಬದುಕಿನ ಬಗೆಗೂ ರಸುಲ್‍ಗೆ ಅನುಭವವಿದೆ. ಪ್ರೀತಿ ಪ್ರೇಮದ ಅಮಲಿನಲ್ಲಿ ಭಾರತಕ್ಕೆ ಹೋದರೆ ರೂತ್ ನಾಶವಾಗುವುದು ನಿಶ್ಚಿತ ಎನ್ನುವ ಚಿಂತೆ ರಸುಲ್‍ನದು. ರೂತ್ ಮತ್ತು ರಸುಲ್ ಈ ಎರಡು ವಿರುದ್ಧ ವ್ಯಕ್ತಿತ್ವವುಳ್ಳ ಪಾತ್ರಗಳ ಭಾವನೆಗಳಿಗೂ ಮತ್ತು ಬದುಕಿಗೂ ಲೇಖಕರೆ ಇಲ್ಲಿ ತಾವೊಂದು ಪಾತ್ರವಾಗಿ ಸಾಕ್ಷಿಯಾಗುತ್ತಾರೆ. ರೂತ್ ಗಂಭೀರ ಸ್ವಭಾವದ ಗಟ್ಟಿ ನಿರ್ಧಾರದ ಹೆಣ್ಣಾಗಿಯೂ ಮತ್ತು ರಸುಲ್ ಬದುಕಿನ ಪ್ರತಿಯೊಂದು ಕ್ಷಣವನ್ನು ತೀರ ಸರಳವಾಗಿ ತೆಗೆದುಕೊಂಡು ಲವಲವಿಕೆಯಿಂದ ಬದುಕುವ ವ್ಯಕ್ತಿಯಾಗಿಯೂ ಓದುಗರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
             ‘ಸಂಯೋಗ’ ಕಥೆಯಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧಗಳು ಅನಾವರಣಗೊಂಡಿವೆ. ಸರ್ಕಾರಿ ಕಚೇರಿಯಲ್ಲಿ ಸೆಕ್ಷನ್ನಿನ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿರುವ ವೆಂಕಟಕೃಷ್ಣರಾವನೊಂದಿಗೆ ಒಂದು ಸಂದರ್ಭ ಲೇಖಕರು ಮುಖಾಮುಖಿಯಾಗುತ್ತಾರೆ. ಲೇಖಕರೆದುರು ವೆಂಕಟಕೃಷ್ಣರಾವನ ಬದುಕಿನ ಕಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ತನ್ನ ಬಂಧುಗಳಲ್ಲೇ ಕನಿಷ್ಠ ಕೆಲಸದಲ್ಲಿರುವವನು ತಾನು ಎನ್ನುವ ಹತಾಶೆ ವೆಂಕಟಕೃಷ್ಣರಾವನದು. ಜೊತೆಗೆ ಅರ್ಹನಾಗಿದ್ದರೂ ಪ್ರಮೋಶನ್ ದೊರೆಯುತ್ತಿಲ್ಲ ಎನ್ನುವ ಬೇಸರ ಬೇರೆ. ವೆಂಕಟಕೃಷಣರಾವ ಇಂಥದ್ದೊಂದು ಸಂಕಟದಲ್ಲಿರುವಾಗಲೇ ಕೆಲವು ದಿನಗಳ ಹಿಂದೆ ಅವನ ಹದಿನಾಲ್ಕು ವರ್ಷದ ಮಗ ಗೋಪಾಲ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದಾನೆ. ಆಕ್ಸಿಡೆಂಟ್ ಮಾಡಿದ ವ್ಯಕ್ತಿ ಕಾಂಪ್ರಮೈಸ್‍ಗೆ ಪ್ರಯತ್ನಿಸುತ್ತಿದ್ದು ವೆಂಕಟಕೃಷ್ಣರಾವಗೆ ತಹಸೀಲ್ದಾರನಾಗಿ ಪ್ರಮೋಶನ್ ಮಾಡಿಸಲು ಮುಂದಾಗಿದ್ದಾರೆ. ಇಲ್ಲಿ ಮಗನ ಸಾವನ್ನು ಅಪ್ಪ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಮನುಷ್ಯ ಸಂಬಂಧಗಳ ಶಿಥಿಲಾವಸ್ಥೆಯನ್ನು ಲೇಖಕರು ಕಥೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿರುವರು.   

           ‘ಮೂಲ’ ಕಥೆಯಲ್ಲಿ ಮಠ ಕಥೆಯ ಕೇಂದ್ರಬಿಂದುವಾಗಿದೆ. ಜಾತಿ, ಧರ್ಮದ ಆಧಾರದ ಮೇಲೆ ಮಠವನ್ನು ಬಳಸಿಕೊಂಡು ಪ್ರಬಲರಾಗಬೇಕೆನ್ನುವ ಶ್ರೀಕಂಠ ಶರ್ಮ ಮತ್ತು ಗುರುಲಿಂಗಪ್ಪನಂಥವರು ಸಮಾಜದ ವಿವಿಧ ಸ್ತರಗಳಲ್ಲಿ ಕಾಣಸಿಗುತ್ತಾರೆ. ಉಗುಳು ಸ್ವಾಮಿ ಹೆಸರಲ್ಲಿ ಆಶ್ರಮ ಕಟ್ಟಿ ದೀನ ದಲಿತರ ಸೇವೆಯಲ್ಲಿ ತೊಡಗಿರುವ ಚಿದಂಬರ ಸ್ವಾಮಿಯ ಮೂಲವನ್ನು ಸಾರ್ವಜನಿಕರಿಗೆ ಪರಿಚಯಿಸಿ ಮಠವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಇರಾದೆ ಗುರುಲಿಂಗಪ್ಪನದಾದರೆ, ಚಿದಂಬರ ಸ್ವಾಮಿಯನ್ನು ಮುಂದಿಟ್ಟುಕೊಂಡು ತಾನು ಬೆಳೆಯಬೇಕೆಂಬ ಹಂಬಲ ಶ್ರೀಕಂಠ ಶರ್ಮಾನದು. ‘ತಲೆ ಹಿಡುಕ ಅದು ಹೇಗೆ ಸಂತನಾದ?’ ಎನ್ನುವ ಪ್ರಶ್ನೆಗೆ ‘ಎರಡೂ ಅಹಂಕಾರವಿಲ್ಲದ ಅವಸ್ಥೆಗಳಲ್ಲವ’ ಎನ್ನುವ ಲೇಖಕರ ಪ್ರತಿಕ್ರಿಯೆ  ಆ ಕ್ಷಣಕ್ಕೆ ವ್ಯಂಗ್ಯವಾಗಿ ತೋರಿದರೂ ಕಥೆಗೊಂದು ತಾರ್ಕಿಕ ಅಂತ್ಯ ನೀಡುವಲ್ಲಿ ಸಫಲವಾಗಿದೆ.
         ಕಥೆ ಓದುತ್ತ ಹೋದಂತೆ ಮನಸ್ಸಿನೊಳಗೆ ಇಳಿಯುವ ‘ಸೂರ್ಯನ ಕುದುರೆ’ ಯ ವೆಂಕಟ ನಂತರವೂ ಹಲವು ದಿನಗಳವರೆಗೆ ಚಂಡಿ ಹಿಡಿದು ಮನಸ್ಸಿನಲ್ಲೇ ನೆಲೆಯೂರುತ್ತಾನೆ. ಊರಿನವರಿಗೆಲ್ಲ ಉಪಕಾರ ಮಾಡುವ ವೆಂಕಟನದು ನಿರುಪದ್ರವಿ ವ್ಯಕ್ತಿತ್ವ. ಒಂದರ್ಥದಲ್ಲಿ ಜಡತ್ವದ ಪರಮಸ್ಥಿತಿಯಲ್ಲಿ ಬದುಕುತ್ತಿರುವವರನ್ನೆಲ್ಲ ಸಂಕೇತಿಸುವಂತೆ ವೆಂಕಟ ಲೇಖಕರಿಗೆ ಕಾಣಿಸುತ್ತಾನೆ. ವೆಂಕಟನಂಥ ನಾನ್ ಪೊಲಿಟಿಕಲ್  ಬೀಯಿಂಗ್ ಎದುರಿನಲ್ಲಿ ಲೇಖಕರಿಗೆ ತಮ್ಮ  ಎಲ್ಲ ಜ್ಞಾನವೂ ವ್ಯರ್ಥ ಎಂದೆನಿಸುತ್ತದೆ. ವೆಂಕಟನ ವ್ಯಕ್ತಿತ್ವ ಇಡೀ ಕಥೆಯನ್ನು ಆವರಿಸಿ ಬೆಳೆದು ನಿಲ್ಲುತ್ತದೆ. ಗರ್ವ, ಅಹಂಕಾರ, ಪ್ರಲೋಭನೆ, ಸಿಟ್ಟು, ಅಸಹ್ಯ, ಅಸಹನೆಗಳಿಲ್ಲದ ವೆಂಕಟನ ವ್ಯಕ್ತಿತ್ವ ಮನಸ್ಸಿನಲ್ಲುಳಿದು ಬಹುಕಾಲ ಕಾಡುತ್ತದೆ. ‘ನಿನ್ನ ಸ್ನೇಹಿತರಿಗೆ ನನ್ನ ಮಗ ಗೊತ್ತಿರಬಹುದು. ಡಾಕ್ಟರ್ ಸುಬ್ರಮಣ್ಯ ಶಾಸ್ತ್ರಿ ಲಂಡನ್ನಿನಲ್ಲಿ ಓದಿದ್ದು. ಬೊಂಬಾಯಿಯಲ್ಲಿ ಇಂಜಿನಿಯರ್. ಮೂರು ಸಾವಿರ ಸಂಬಳವಂತಪ್ಪ. ಒಳ್ಳೇ ಬಂಗ್ಲೆ’ ಕ್ಷಯರೋಗದಿಂದ ಹಾಸಿಗೆ ಹಿಡಿದ ತನ್ನನ್ನು ನೋಡಲೂ ಬಾರದ ಮಗನನ್ನು ಹೊಗಳುವ ಶೇಷಣ್ಣನ ಮಾತು ಆ ಕ್ಷಣಕ್ಕೆ ತೀರ ಅಸಹ್ಯವೆನಿಸುತ್ತದೆ.
    ಬಾಲ್ಯದಲ್ಲಿ ತಾನು ಬೆಳೆದ ಮತ್ತು ತನ್ನ ಅನುಭವಕ್ಕೆ ದಕ್ಕಿದ  ಪರಿಸರ  ಬರಹಗಾರನ ಬರವಣಿಗೆಯನ್ನು ಹೆಚ್ಚು ಪ್ರಭಾವಿಸುತ್ತದೆ ಎನ್ನುವ ಮಾತಿಗೆ ಅನಂತಮೂರ್ತಿ ಅವರ ಕಥೆಗಳು ದೃಷ್ಟಾಂತವಾಗಿವೆ. ಏಕೆಂದರೆ ಅವರ ಬಹಳಷ್ಟು ಕಥೆಗಳಲ್ಲಿ ಮಲೆನಾಡಿನ ಬದುಕಿನ ವಿಶೇಷವಾಗಿ ಬ್ರಾಹ್ಮಣರ ಬದುಕಿನ ಸಂಕಟ ಮತ್ತು ಸಮಸ್ಯೆಗಳು ಕೇಂದ್ರ ಬಿಂದುವಾಗಿವೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ  ಬಹುಪಾಲು ಕಥೆಗಳಲ್ಲಿ ತಾವು ಸೃಷ್ಟಿಸಿದ ಪಾತ್ರಗಳ ಕುರಿತು ಅನಂತಮೂರ್ತಿ ಅವರಿಗೆ ಒಂದು ರೀತಿಯ ಸಹಾನುಭೂತಿ ಮತ್ತು ಔದಾರ್ಯವಿರುವುದು ಓದುಗನ ಅನುಭವಕ್ಕೆ ಬರುತ್ತದೆ. ನವಿಲುಗಳು ಕಥೆಯಲ್ಲಿನ ಅಪ್ಪಯ್ಯ, ಮೌನಿಯ ಅಪ್ಪಣ್ಣಭಟ್ಟ, ಪ್ರಸ್ಥದ ಶಿನಪ್ಪಯ್ಯ, ಸಂಯೋಗದ ವೆಂಕಟಕೃಷ್ಣರಾವ, ಸೂರ್ಯನ ಕುದುರೆಯ ಶೇಷಣ್ಣ ಬೇರೆ ಪಾತ್ರಗಳಿಂದ ತಿರಸ್ಕಾರಕ್ಕಾಗಲಿ ಇಲ್ಲವೆ ಅಸಹ್ಯಕ್ಕಾಗಲಿ ಒಳಗಾಗುವುದು ತೀರ ಕಡಿಮೆ. ಜೊತೆಗೆ ಆಯಾ ಸಂದರ್ಭದಲ್ಲಿ ಲೇಖಕರ ಆತ್ಮವಿಮರ್ಶೆಯ ಗುಣವೂ ಸ್ಪುಟವಾಗಿ ಎದ್ದುಕಾಣುತ್ತದೆ. ಇದಕ್ಕೆ ‘ಸೂರ್ಯನ ಕುದುರೆ’ ಉತ್ತಮ ಉದಾಹರಣೆ. ಬಾಲ್ಯದ ಗೆಳೆಯ ವೆಂಕಟನ ಗುಣಗಳನ್ನು ವಿಮರ್ಶಿಸುತ್ತಲೇ ಇಲ್ಲಿ ಅನಂತಮೂರ್ತಿ ತಮ್ಮನ್ನು ಸ್ವವಿಮರ್ಶೆಯ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರೆ. ಬರಹಗಾರನಲ್ಲಿರಬೇಕಾದ ಅಗತ್ಯದ ಮತ್ತು ಮಹತ್ವದ ಗುಣವಿದು. ಈ ಕಾರಣದಿಂದಲೇ ಅನಂತಮೂರ್ತಿ ಅವರ ಕಥೆಗಳ ಓದು ತುಂಬ ಆಪ್ತವಾಗುತ್ತ ಹೊಸ ಅನುಭವವನ್ನು ಕಟ್ಟಿಕೊಡುತ್ತದೆ. ವಿಮರ್ಶಕರೋರ್ವರು ಹೇಳುವಂತೆ ಅನಂತಮೂರ್ತಿ ಅವರ ಕಥೆಗಳನ್ನು ಈಗ ನಾವು ಬದುಕುತ್ತಿರುವ ಕಾಲಮಾನಕ್ಕೆ ಒಗ್ಗಿಸಿ ಓದಬೇಕಾದ  ಅನಿವಾರ್ಯತೆ ಇದೆ. ಇದು ಆರೋಗ್ಯಕರ ಸಮಾಜದ ದೃಷ್ಟಿಯಿಂದ ಅಗತ್ಯವೂ ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ