Tuesday, December 29, 2020

ಬೇರಿಗಂಟಿದ ಮರ (ಕಥೆ)

        


(೧೭ ಡಿಸೆಂಬರ್ ೨೦೨೦ ರ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ) 

 ಬೆಳಗಿನ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಕೃಷ್ಣಭಟ್ಟರಿಗೆ ಮನೆಯ ಕಾಂಪೌಂಡ್ ಗೋಡೆಯ ಮೇಲೆ ರಾರಾಜಿಸುತ್ತಿದ್ದ ಹೂವಿನ ಹಾರದಿಂದ ಅಲಂಕರಿಸಿದ್ದ ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ ಎನ್ನುವ ಬೋರ್ಡ್ ಕಣ್ಣಿಗೆ ಬಿದ್ದು ಅವರಲ್ಲಿ ವಿಚಿತ್ರ ಸಂಕಟವನ್ನು ಮತ್ತು ಮಗನ ಮೇಲೆ ಕೋಪವನ್ನು ಒಟ್ಟೊಟ್ಟಿಗೆ ಮೂಡಲು ಕಾರಣವಾಯಿತು. ಮನೆಯ ಎದುರಿನಿಂದ ಹಾದು ಹೋಗುತ್ತಿದ್ದವರು ಒಂದು ಕ್ಷಣ ನಿಂತು ಬೋರ್ಡಿನ ಮೇಲೆ ಕಣ್ಣು ಹಾಯಿಸಿ ಮನೆಯನ್ನೊಮ್ಮೆ ವಿಚಿತ್ರವಾಗಿ ನೋಡಿ ಹೊರಟುಹೋಗುತ್ತಿದ್ದ ದೃಶ್ಯ ಕೃಷ್ಣಭಟ್ಟರಲ್ಲಿನ ಸಂಕಟ ಮತ್ತು ಕೋಪವನ್ನು ಮತ್ತಷ್ಟು ಹೆಚ್ಚಿಸಿ ಕಾಂಪೌಂಡ್ ಬಾಗಿಲನ್ನು ಧಡಾರನೇ ನೂಕಿದರು. ಅವರು ನೂಕಿದ ರಭಸಕ್ಕೆ ಕಾಂಪೌಂಡಿನ ಬಾಗಿಲು ಕಿರ್ರ್ ಎಂದು ಸದ್ದು ಮಾಡಿ ಆ ಪ್ರಶಾಂತ ಮುಂಜಾನೆಯ ನೀರವ ವಾತಾವರಣಕ್ಕೆ ಒಂದು ವಿಚಿತ್ರ ಕಳೆಯನ್ನು ನೀಡಿತು. ಕಾಂಪೌಂಡು ಧಾಟಿ ಒಳಗೆ ಬಂದವರು ಬಲಭಾಗಕ್ಕೆ ದೃಷ್ಟಿ ಹರಿಸಿದವರ ಮುಖವನ್ನು ಮತ್ತಷ್ಟು ಕಳಾಹೀನವಾಗಿಸುವಂತೆ ಮುಕ್ತಿರಥ ಎನ್ನುವ ಹೆಸರುಹೊತ್ತ ವಾಹನ ಕಣ್ಣಿಗೆ ಬಿದ್ದು ಕೃಷ್ಣಭಟ್ಟರು ಮತ್ತಷ್ಟು ಕೋಪಗೊಂಡರು. ‘ರಾಧಾ ಇವನದು ಯಾಕೋ ಅತಿಯಾಯ್ತು ಅಂತ ಅನಿಸುತ್ತೆ’ ಹೆಗಲ ಮೇಲಿದ್ದ ಪಂಚೆಯಿಂದ ಮುಖದ ಬೆವರನ್ನು ಒರೆಸುತ್ತ ಅಡುಗೆ ಮನೆಗೆ ಬಂದವರು ಅಲ್ಲೆ ಇದ್ದ ಕುರ್ಚಿಯ ಮೇಲೆ ಕುಳಿತು ನೀರಿನ ಲೋಟವನ್ನು ಕೈಗೆತ್ತಿಕೊಂಡು ಅದರಲ್ಲಿದ್ದ ನೀರನ್ನೆಲ್ಲ ಒಂದೇ ಗುಕ್ಕಿಗೆ ತಮ್ಮ ಗಂಟಲಿಗೆ ಸುರಿದುಕೊಂಡರು. ಚಹಾ ಮಾಡುತ್ತಿದ್ದ ರಾಧಮ್ಮನವರಿಗೆ ಪತಿಯ ಸಂಕಟ ಅರ್ಥವಾದರೂ ಅವರು ಅಸಹಾಯಕರಾಗಿದ್ದರು. ‘ಎಲ್ಲಿದ್ದಾನೆ ನಿನ್ನ ಸುಪುತ್ರ. ಇನ್ನು ಬೆಳಗಾಗಿಲ್ಲವಂತೊ’ ಕೃಷ್ಣಭಟ್ಟರ ಮಾತಿನಲ್ಲಿ ವ್ಯಂಗ್ಯವಿತ್ತು. ಅಪ್ಪ ಮತ್ತು ಮಗನ ಶೀತಲ ಸಮರದ ನಡುವೆ ರಾಧಮ್ಮನವರು ಹೈರಾಣಾಗಿದ್ದರು. ‘ನೀವು ವಾಕಿಂಗ್ ಅಂತ ಹೊರಗೆ ಹೋದ ಹಿಂದೆನೆ ಫೆÇೀನ್ ಬಂತು. ಅರ್ಜೆಂಟ್ ಕೆಲಸಯಿದೆ ಅಂತ ಹೋದ. ಬರೋದು ಲೇಟಾಗುತ್ತೆ ಊಟಕ್ಕೆ ಕಾಯ್ಬೇಡಿ ಅಂತ ಹೇಳ್ದ’ ರಾಧಮ್ಮನವರು ಗಂಡನಿಗೆ ವರದಿ ಒಪ್ಪಿಸಿ ಕುದಿಯುತ್ತಿದ್ದ ಚಹಾವನ್ನು ಸ್ಟೌವ್‍ನಿಂದ ಕೆಳಗಿಳಿಸಿ ಕಪ್ಪಿಗೆ ಸುರಿಯತೊಡಗಿದರು. ‘ಸತ್ತವರು ಯಾವ ಪೈಕಿಯಂತೆ ಏನಾದರೂ ಹೇಳಿದನೋ ಹೇಗೆ’ ಕೃಷ್ಣಭಟ್ಟರ ಮಾತಿನಲ್ಲಿ ಸಹಜತೆ ಇದ್ದರೂ ಅದು ರಾಧಮ್ಮನವರಿಗೆ ತನಿಖೆಯ ಧಾಟಿಯಂತೆ ಅನ್ನಿಸಿತು. ‘ಕೆಲಸ ಅಂದರೆ ಅದು ಯಾವಾಗಲೂ ಸಾವೇ ಅಂತ ಯಾಕೆ ಅನ್ಕೊತೀರಿ’ ಅಪೇಕ್ಷಿಸುವ ಧಾಟಿಯಲ್ಲಿ ಕೇಳಿದರಾದರೂ ಅವರ ಒಳ ಮನಸ್ಸು ಮಗ ಹೋಗಿರುವ ಕಾರಣವನ್ನು ಊಹಿಸುತ್ತಿತ್ತು. ಮಾತಿಗೆ ಮಾತು ಬೆಳೆದು ಸುಮ್ಮನೆ ತಮ್ಮಿಬ್ಬರ ನಡುವೆ ಅದು ಜಗಳಕ್ಕೆ ಕಾರಣವಾಗುತ್ತದೆಂದು ಹಿಂದಿನ ಅನುಭವದಿಂದ ಅರಿತಿದ್ದ ಕೃಷ್ಣಭಟ್ಟರು ಮಾತು ಬೆಳೆಸದೆ ಕುಡಿದು ಖಾಲಿಯಾದ ಕಪ್ಪನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಹಾಲ್‍ಗೆ ಬಂದು ಅಂದಿನ ದಿನಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದರು.

ಮುಕುಂದ ಕೃಷ್ಣಭಟ್ಟ ಮತ್ತು ರಾಧಮ್ಮ ದಂಪತಿಗಳ ಏಕಮಾತ್ರ ಸಂತಾನ. ಮದುವೆಯಾದ ಎಂಟು ವರ್ಷಗಳ ನಂತರ ಹುಟ್ಟಿದ ಪುತ್ರಸಂತಾನವೆಂದು ತುಂಬ ಮುದ್ದಿನಿಂದಲೇ ಬೆಳೆಸಿದ್ದರು. ಮುಕುಂದ ಬಾಲ್ಯದಿಂದಲೇ ತುಂಬ ಚುರುಕಾಗಿದ್ದ. ಓದು, ಆಟ ಎಲ್ಲದರಲ್ಲೂ ಮುಂದಿದ್ದ. ಮಗನನ್ನು ಡಾಕ್ಟರ್ ಇಲ್ಲವೇ ಎಂಜಿನಿಯರ್ ಮಾಡಬೇಕೆನ್ನುವ ಆಸೆ ಕೃಷ್ಣಭಟ್ಟರಿಗಿದ್ದರೂ ಅವನಿಗೆ ಈವೆಂಟ್ ಮ್ಯಾನೇಜಮೆಂಟ್‍ಗಳಲ್ಲಿ ಆಸಕ್ತಿ ಇದ್ದುದ್ದರಿಂದ ಬಿ.ಬಿ.ಎ ಓದುತ್ತೆನೆಂದು ಹಟ ಹಿಡಿದಾಗ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಡ್ಮಿಷನ್ ಕೊಡಿಸಿದ್ದರು. ಮುಂದೆ ಎಂ.ಬಿ.ಎ ಗೂ ಸುಲಭವಾಗಿ ಪ್ರವೇಶ ಸಿಕ್ಕು ಮುಕುಂದ ಎರಡು ವರ್ಷ ಪರಿಶ್ರಮಪಟ್ಟು ಓದಿ ಫಸ್ಟ್ ಕ್ಲಾಸಿನಲ್ಲಿ ಉತ್ತೀರ್ಣನಾಗಿದ್ದ. ಈಗೀಗ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಓದಿದವರು ಮಾತ್ರವಲ್ಲದೆ ಎಂ.ಬಿ.ಎ ಓದಿದವರೂ ಅಮೆರಿಕಾ, ಇಂಗ್ಲೆಂಡ್‍ಗಳಿಗೆ ಹೋಗುತ್ತಿದ್ದಾರೆಂದು ಕೇಳಿ ತಿಳಿದಿದ್ದ ಕೃಷ್ಣಭಟ್ಟರಿಗೂ ಮಗ ಫಾರೆನ್ನಿಗೆ ಹೋಗುತ್ತಾನೆನ್ನುವ ಮಹದಾಸೆಯಿತ್ತು. ಕಾಲೊನಿಯ ಗಣಪತಿ ದೇವಸ್ಥಾನದ ಅರ್ಚಕರಾದ ಶ್ರೀಪತಿರಾಯರ ಮಗ ಎಂ.ಬಿ.ಎ ಓದಿ ಈಗ ಅಮೆರಿಕಾದ ದೊಡ್ಡ ಕಂಪನಿಯಲ್ಲಿ ಡಾಲರಿನಲ್ಲಿ ಸಂಬಳ ಪಡೆಯುತ್ತಿರುವ ವಿಷಯ ತಿಳಿದಾಗಿನಿಂದ ಕೃಷ್ಣಭಟ್ಟರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿತ್ತು. ಮಗ ಅಮೆರಿಕಾ ಸೇರಿದ್ದೆ ಅವನಿಗೊಂದು ಮದುವೆಮಾಡಿ ತಾವು ಹೆಂಡತಿಯೊಂದಿಗೆ ಅಮೆರಿಕಾ ಮತ್ತು ಭಾರತದ ನಡುವೆ ಓಡಾಡುತ್ತ ಬದುಕಿನ ಸಂಧ್ಯಾಕಾಲವನ್ನು ಸಂತೃಪ್ತವಾಗಿ ಕಳೆದರಾಯ್ತು ಎನ್ನುವ ದೂರದ ಆಸೆ ಅವರದಾಗಿತ್ತು. ತಮಗೂ ನೌಕರಿಯಿಂದ ನಿವೃತ್ತಿಯಾಗಿದೆ ಮಗನನ್ನು ಬಿಟ್ಟರೆ ನಮ್ಮವರು ಅಂತ ಸಮೀಪದವರು ಯಾರೂ ಇಲ್ಲ ಹೀಗಿರುವಾಗ ನೆಲೆ ನಿಲ್ಲಲು ಭಾರತವೇನು ಅಮೆರಿಕಾವೇನು ಎನ್ನುವ ಲೆಕ್ಕಚಾರ ಭಟ್ಟರದಾಗಿತ್ತು. ಎಂ.ಬಿ.ಎ ಓದಿ ವರ್ಷ ಕಳೆದರೂ ಮುಕುಂದ ಅಮೆರಿಕಾಗೆ ಹೋಗುವುದಿರಲಿ ಇಲ್ಲೇ ಯಾವ ಕಂಪನಿಯಲ್ಲೂ ಕೆಲಸಕ್ಕೆ ಸೇರದೆ ಇದ್ದಾಗ ಕೃಷ್ಣಭಟ್ಟರಿಗೆ ಆತಂಕ ಶುರುವಾಯಿತು. ಒಂದೆರಡು ಸಲ ರಾಧಮ್ಮನವರಿಂದ ಹೇಳಿಸಿ ನೋಡಿದರೂ ಮಗನಿಂದ ಯಾವ ಪ್ರತಿಕ್ರಿಯೆಯೂ ಬರದೆ ಇದ್ದಾಗ ನೇರವಾಗಿ ವಿಷಯವನ್ನು ತಾವೇ ಪ್ರಸ್ತಾಪಿಸಿದರು. ‘ನನಗೆ ಬೇರೆಯವರ ಕೈಕೆಳಗೆ ಕೆಲಸ ಮಾಡೋ ಆಸಕ್ತಿ ಇಲ್ಲ ಅಪ್ಪ. ನಾನೇ ಒಂದು ಕಂಪನಿ ಶುರು ಮಾಡ್ಬೇಕು ಅಂತಿದ್ದೀನಿ’ ಮುಕುಂದ ತನ್ನ ಆಸೆಯನ್ನು ಅಪ್ಪ ಅಮ್ಮನ ಮುಂದೆ ತೋಡಿಕೊಂಡ. ಕೃಷ್ಣಭಟ್ಟರಿಗೂ ಮಗನ ಮಾತು ಸರಿ ಅನಿಸಿತು. ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಕೃಷ್ಣಭಟ್ಟರೇನೂ ಮಗನ ದುಡಿಮೆಯನ್ನು ಅವಲಂಬಿಸಿರಲಿಲ್ಲ. ಮೂವತ್ತು ವರ್ಷಗಳ ಕಾಲ ಹೈಸ್ಕೂಲು ಮಾಸ್ತರರಾಗಿ ದುಡಿದು ಗಳಿಸಿದ್ದೇ ಬೇಕಾದಷ್ಟಿತ್ತು. ವಾಸಿಸಲು ಸ್ವಂತ ಮನೆ ಹತ್ತಿರದ ಊರಿನಲ್ಲಿ ತೋಟ ಆರ್ಥಿಕವಾಗಿ ಯಾವ ತೊಂದರೆಯೂ ಇರಲಿಲ್ಲ. ಮಗ ಸ್ವಂತದ ವ್ಯವಹಾರ ಶುರು ಮಾಡ್ತೀನಿ ಅಂದಾಗ ಖುಷಿಯಿಂದಲೇ ಒಪ್ಪಿಗೆ ನೀಡಿದ್ದರು.

ಕಳೆದ ಹಲವು ದಿನಗಳಿಂದ ಕೃಷ್ಣಭಟ್ಟರಿಗೆ ಸಮಾಧಾನವೇ ಇಲ್ಲ. ಹೊಟ್ಟೆಯಲ್ಲೆಲ್ಲ ವಿಚಿತ್ರ ಸಂಕಟದ ಅನುಭವ. ರಾತ್ರಿ ನಿದ್ದೆಯಲ್ಲಿ ಕನವರಿಸುತ್ತಾರೆ. ಎಚ್ಚರವಾಗಿ ಎದ್ದು ಕುಳಿತರೆ ಮತ್ತೆ ನಿದ್ದೆ ಹತ್ತಿರ ಸುಳಿಯಲಾರದು. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದದ್ದುಂಟು. ಹೆಂಡತಿ ಜೊತೆ ಹಂಚಿಕೊಳ್ಳಬೇಕೆಂದರೂ ಆ ಜೀವಕ್ಕಾದರೂ ಯಾಕೆ ನೋವು ಕೊಡಬೇಕೆನ್ನುವ ಭಾವವೇ ಮುಂದೆ ಬಂದು ಆಡಬೇಕೆಂದ ಮಾತುಗಳೆಲ್ಲ ತಮ್ಮೊಳಗೇ ಉಳಿಯುತ್ತವೆ. ಕಾಲೊನಿಯಲ್ಲಿ ತಮಗೆ ಪರಿಚಯವಿರುವವರ ಹತ್ತಿರ ಹೇಳಿಕೊಳ್ಳಬೇಕೆಂದರೂ ಎಷ್ಟಾದರೂ ಇದು ತಮ್ಮ ಸಂಸಾರದ ವಿಷಯ ತಾವೇ ಬೇರೆಯವರು ಆಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿಕೊಳ್ಳಲೂ ಆಗದೆ ನೋವನ್ನು ಒಳಗೊಳಗೆ ಅನುಭವಿಸುತ್ತ ಹಣ್ಣಾಗುತ್ತಿರುವರು. ಅಷ್ಟಕ್ಕೂ ಇದೆಲ್ಲ ಶುರುವಾದದ್ದು ಆ ದಿನ ಮುಕುಂದ ಮನೆಗೆ ಬರುವಾಗ ಕೈಯಲ್ಲಿ ಹಿಡಿದು ತಂದಿದ್ದ ಆ ಲಕೋಟೆಯಿಂದಲೇ. ಅವತ್ತು ತುಂಬ ಖುಷಿಯಾಗಿದ್ದ. ಮನೆಗೆ ಬಂದವನೆ ನಮ್ಮಿಬ್ಬರನ್ನೂ ಹಾಲ್‍ಗೆ ಕರೆದು ನಿಲ್ಲಿಸಿ ತಾನು ತಂದಿದ್ದ ಲಕೋಟೆಯನ್ನು ಕೈಗೆ ಕೊಟ್ಟು ಕಾಲಿಗೆರಗಿದ್ದ. ನಾಳೆಯಿಂದ ಕೆಲಸ ಶುರು ಮಾಡುತ್ತಿರುವುದಾಗಿಯೂ ಕಂಪನಿಯನ್ನು ರಜಿಸ್ಟ್ರೇಶನ್ ಮಾಡಿಸಿದ ಪತ್ರವಿದು ಎಂದು ಹೇಳಿದ. ಲಕೋಟೆಯ ಒಳಗಿದ್ದ ಪತ್ರದಲ್ಲಿನ ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ ಎನ್ನುವ ಹೆಸರನ್ನು ಓದಿದಾಗ ಏನೊಂದೂ ಅರ್ಥವಾಗಲಿಲ್ಲ. ಮುಕುಂದನೆ ವಿವರಿಸಿ ಹೇಳಿದಾಗ ಅರ್ಥವಾಯಿತು. ಆ ಕ್ಷಣ ಪತ್ರ ಕೈಯಿಂದ ಜಾರಿ ಕೆಳಗೆ ಬಿದ್ದು ಕೃಷ್ಣಭಟ್ಟರ ಮುಖ ಕಪ್ಪಿಟ್ಟಿತು. ಇಂಥ ಉದ್ಯೋಗಕ್ಕಿಂತ ಕೆಲಸವಿಲ್ಲದೆ ಸುಮ್ಮನೆ ಮನೆಯಲ್ಲಿರುವುದು ಒಳಿತು ಎಂದು ಖಾರವಾಗಿಯೇ ಮಗನಿಗೆ ಹೇಳಿದರು. ‘ಅಪ್ಪ ಈ ಈವೆಂಟ್ ಮ್ಯಾನೇಜಮೆಂಟ್‍ಗಳಿಗೆ ಇಂಥದ್ದೆ ಕೆಲಸ ಅಂತ ಇಲ್ಲ. ಇದರಿಂದ ನಾನೊಬ್ಬನೆ ಅಲ್ಲ ಹತ್ತಾರು ಕುಟುಂಬಗಳಿಗೆ ಆಶ್ರಯ ಸಿಗುತ್ತೆ’ ಮಗ ತನ್ನ ಕಂಪನಿಯ ಕೆಲಸವನ್ನು ಸಮರ್ಥಿಸಿಕೊಂಡ. ‘ಎಷ್ಟೆಂದರೂ ಓದಿದವನು ಏನಾದರೂ ಮಾಡ್ಕೋ’ ಕೃಷ್ಣಭಟ್ಟರ ಮಾತಿನಲ್ಲಿನ ಅಸಹಾಯಕತೆಯನ್ನು ಗುರುತಿಸಿದ ರಾಧಮ್ಮನವರ ಕರುಳು ಚುರುಕ್ಕೆಂದಿತು.

ನಾಲ್ಕಾರು ತಿಂಗಳುಗಳಲ್ಲೆ ಮುಕುಂದನ ಕಂಪನಿ ಸಾಕಷ್ಟು ಪ್ರಗತಿಯನ್ನು ಕಂಡಿತು. ಈಗೀಗ ಅವನಿಗೂ ಬಿಡುವಿಲ್ಲದ ಕೆಲಸದಿಂದ ಮನೆಯಲ್ಲಿ ಸಮಯ ಕಳೆಯುವುದೇ ಅಪರೂಪವಾಗುತ್ತಿದೆ. ನಗರದಲ್ಲಿ ಮಾತ್ರವಲ್ಲದೆ ದೂರದ ಹೊರ ಊರುಗಳಲ್ಲೂ ಸಿಗುತ್ತಿರುವ ಕೆಲಸಗಳಿಂದಾಗಿ ಮುಕುಂದನ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯುತ್ತಿದೆ. ಮನೆಯ ಕಾಂಪೌಂಡಿನೊಳಗೆ ಬಲಭಾಗದಲ್ಲಿದ್ದ ಖಾಲಿ ಜಾಗದಲ್ಲಿ ತನ್ನದೇ ಸಣ್ಣದೊಂದು ಆಫೀಸ್ ಮಾಡಿಕೊಂಡು ನಾಲ್ಕಾರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿರುವನು. ಕಳೆದ ತಿಂಗಳಷ್ಟೆ ಶವಸಾಗಿಸಲು ಹೊಸ ವಾಹನವನ್ನು ಖರೀದಿಸಿ ಅದಕ್ಕೆ ಮುಕ್ತಿರಥ ಎಂದು ಹೆಸರು ಕೊಟ್ಟಿರುವನು. ಕೆಲವೊಮ್ಮೆ ಶವಸಂಸ್ಕಾರಕ್ಕೆ ನಾಲ್ಕಾರು ದಿನ ವಿಳಂಬವಾಗುವಂತಿದ್ದರೆ ಶವಗಳು ಕೊಳೆಯದಂತೆ ಸುರಕ್ಷಿತವಾಗಿಡಲು ಜಪಾನ್ ದೇಶದಿಂದ ಆಮದು ಮಾಡಿಕೊಂಡ ಮಾರ್ಚ್ಯುರಿ ಕ್ಯಾಬೆನೇಟ್ ಮನೆಗೆ ಬಂದು ಅದು ಈಗ ಕಾಲೊನಿಯ ಜನರ ಆಕರ್ಷಣೆಯ ಕೇಂದ್ರವಾಗಿದೆ. ಈ ಮಾರ್ಚ್ಯುರಿ ಕ್ಯಾಬಿನೇಟ್‍ನಲ್ಲಿ ಒಮ್ಮಲೇ ನಾಲ್ಕು ಶವಗಳನ್ನಿಡುವ ಅನುಕೂಲವಿದೆ. ಮುಕುಂದನ ಕಂಪನಿ ಅವರವರ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಒದಗಿಸುತ್ತಿತ್ತು. ಶವಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳಿಂದ ಹಿಡಿದು ಕುಣಿ ತೋಡುವುದು ಇಲ್ಲವೇ ಚಿತೆಗೆ ಕಟ್ಟಿಗೆಗಳನ್ನು ಪೂರೈಸುವುದು, ಶವ ಸಾಗಿಸುವುದು, ಅಪರಕರ್ಮಗಳನ್ನು ಮಾಡಿಸುವುದು, ಸಂಸ್ಕಾರಕ್ಕೆ ಬರುವ ದೂರದೂರಿನ ನೆಂಟರಿಷ್ಟರಿಗೆ ಉಳಿದುಕೊಳ್ಳಲು ಲಾಡ್ಜಗಳ ವ್ಯವಸ್ಥೆ, ಸಾವು ಸಂಭವಿಸಿದ ಮನೆಯವರಿಗೆ ಶವಸಂಸ್ಕಾರದ ನಂತರ ಊಟದ ವಿಲೇವಾರಿ, ಶ್ರಾದ್ಧದ ಆಚರಣೆ ಹೀಗೆ ಬಿಡಿಯಾಗಿ ಇಲ್ಲವೇ ಪ್ಯಾಕೇಜ್ ರೂಪದಲ್ಲಿ ಶುಲ್ಕವನ್ನು ಪಾವತಿಸಿ ಸಾರ್ವಜನಿಕರು ಸೇವೆಯನ್ನು ಪಡೆಯಲು ಅನುಕೂಲವಿತ್ತು. ಮುಕುಂದ ತನ್ನ ಕಂಪನಿಯ ಪ್ರತ್ಯೇಕ ವೆಬ್‍ಸೈಟ್ ರೂಪಿಸಿದ್ದರಿಂದ ಜನರು ಆನ್‍ಲೈನ್ ಮೂಲಕ ಕೂಡ ಸಂಪರ್ಕಿಸಬಹುದಿತ್ತು. ವಿದೇಶಗಳಲ್ಲಿ ವಾಸಿಸುವ ಅಥವಾ ಬಿಡುವಿಲ್ಲದ ಕೆಲಸದ ಮಧ್ಯೆ ತಮ್ಮ ತಂದೆ ತಾಯಿಯ ಶ್ರಾದ್ಧ, ಮಾಸಿಕಗಳನ್ನು ಆಚರಿಸಲು ಸಾಧ್ಯವಾಗದೆ ಇದ್ದಾಗ ಅಂಥವರು ಮುಕುಂದನ ಕಂಪನಿಗೆ ಶುಲ್ಕ ಪಾವತಿಸಿ ಪ್ರತಿವರ್ಷ ಆಚರಿಸುವಂತೆ ಕೇಳಿಕೊಳ್ಳುತ್ತಿದ್ದರು. ಊರಿನ ಅನೇಕ ಪುರೋಹಿತರು ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ನ ಖಾಯಂ ಪುರೋಹಿತರಾಗಿ ಬದುಕನ್ನು ಕಟ್ಟಿಕೊಂಡಿರುವರು.

ಈಗೀಗ ಊರ ತುಂಬ ಮುಕುಂದನದೆ ಗುಣಗಾನ. ಯಾವುದೇ ಶುಭ, ಅಶುಭ ಕಾರ್ಯಗಳಿರಲಿ ನಾಲ್ಕಾರು ಜನ ಸೇರಿದ ಕಡೆ ಮುಕುಂದನ ಮಾತು ಬರದೇ ಹೋಗುವುದಿಲ್ಲ. ಮೊನ್ನೆಯಷ್ಟೇ ಪರಿಚಿತರ ಮನೆಯ ಮದುವೆಗೆಂದು ಪತ್ನಿಯೊಂದಿಗೆ ಹೋಗಿದ್ದ ಕೃಷ್ಣಭಟ್ಟರ ಎದುರು ಶ್ರೀಪತಿರಾಯರು ಮುಕುಂದನನ್ನು ಬಾಯಿತುಂಬ ಹೊಗಳಿದ್ದೆ ಹೊಗಳಿದ್ದು. ಇಂಡಸ್ಟ್ರಿಯಲಿಸ್ಟ್ ಲಕ್ಷ್ಮಣದಾಸ ತೀರಿಕೊಂಡಾಗ ಅವನ ಗಂಡುಮಕ್ಕಳಿಬ್ಬರೂ ಅಮೆರಿಕಾದಲ್ಲಿದ್ದರು. ಸುದ್ದಿ ತಿಳಿದು ಅವರು ಭಾರತಕ್ಕೆ ಬರಲು ನಾಲ್ಕಾರು ದಿನಗಳು ಬೇಕಾದವು. ಆಗ ಮುಕುಂದನೆ ತನ್ನ ಕಂಪನಿಯ ಮಾರ್ಚ್ಯುರಿ ಕ್ಯಾಬಿನೇಟ್‍ನಲ್ಲಿ ಲಕ್ಷ್ಮಣದಾಸರ ಶವವಿಟ್ಟು ಕೊಳೆಯದಂತೆ ನೋಡಿಕೊಂಡ. ನೆಂಟರಿಷ್ಟರ ಊಟ, ವಸತಿಗೆ ವ್ಯವಸ್ಥೆ ಮಾಡಿದ. ಮಕ್ಕಳು ಬಂದದ್ದೆ ಶವಸಂಸ್ಕಾರದಿಂದ ಶ್ರಾದ್ಧದವರೆಗಿನ ಎಲ್ಲ ಕೆಲಸಗಳನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾದ. ಮುಕುಂದನ ಅಚ್ಚುಕಟ್ಟುತನವನ್ನು ಮೆಚ್ಚಿ ಲಕ್ಷ್ಮಣದಾಸನ ಮಕ್ಕಳು ಹತ್ತು ಲಕ್ಷ ರೂಪಾಯಿಗಳನ್ನು ಕಂಪನಿಗೆ ಪಾವತಿಸಿದ್ದರು. ‘ಅಂತೂ ಮಗ ಛಲೋ ನೆಲೆಕಂಡ. ಇನ್ನು ನಿಮಗ ಚಿಂತಿ ಇಲ್ಲ ಬಿಡಿ’ ಎಂದು ಮಾತು ಮುಗಿಸಿದ್ದರು ಶ್ರೀಪತಿರಾಯರು.

ರಾತ್ರಿ ಊಟ ಮಾಡಿ ಮಲಗಿದ ಕೃಷ್ಣಭಟ್ಟರಿಗೆ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ತಾವು ಯಾವುದು ಬೇಡವೆಂದು ದೂರಸರಿದು ಬಂದಿದ್ದರೊ ಅದು ಬಂದು ಕೊರಳಿಗೆ ಸುತ್ತಿಕೊಂಡಂತಾಗಿತ್ತು ಅವರ ಸ್ಥಿತಿ. ಹೀಗಾಗಬಹುದೆಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ. ತಾವೊಂದು ಬಗೆದರೆ ದೈವವೊಂದು ಬಗೆದಿತ್ತು. ಇಷ್ಟೆಲ್ಲ ತಾವು ಕಷ್ಟಪಟ್ಟಿದ್ದು ನೀರಿನಲ್ಲಿ ಹೋಮ ಮಾಡಿದಂತಾಯಿತಲ್ಲ ಎಂದು ಅವರಿಗೆ ಅವ್ಯಕ್ತ ಸಂಕಟವಾಯಿತು. ಪಕ್ಕದಲ್ಲೇ ಮಲಗಿದ್ದ ರಾಧಮ್ಮನವರನ್ನು ಗಾಢ ನಿದ್ದೆ ಆವರಿಸಿತ್ತು. ಹೆಂಡತಿಯತ್ತ ನೋಡಿದ ಕೃಷ್ಣಭಟ್ಟರಿಗೆ ಒಂದು ಕ್ಷಣ ಅಸೂಯೆಯ ಎಳೆಯೊಂದು ಮನಸ್ಸಿನಲ್ಲಿ ಹಾಯ್ದುಹೋದ ಅನುಭವವಾಯಿತು. ಮರುಕ್ಷಣ ನನ್ನ ಹಣೆಬರಹಕ್ಕೆ ಪಾಪ ಅವಳಾದರೂ ಏನು ಮಾಡಬೇಕು ಎನ್ನುವ ಭಾವವೊಂದು ಉದಿಸಿ ಪತ್ನಿಯ ಹಣೆಯಮೇಲೆ ಮೃದುವಾಗಿ ಕೈಯಾಡಿಸಿ ಹೊದಿಕೆಯನ್ನು ಸರಿಯಾಗಿ ಹೊದಿಸಿ ಎದ್ದು ಕಿಟಕಿಯ ಹತ್ತಿರ ಬಂದು ನಿಂತರು. ಹೊರಗೆ ಆಕಾಶ ಶುಭ್ರವಾಗಿ ಹೊಳೆಯುತ್ತಿತ್ತು. ಆಕಾಶದಲ್ಲಿನ ಅಸಂಖ್ಯಾತ ನಕ್ಷತ್ರಗಳನ್ನು ನೋಡುತ್ತ ಮೈಮರೆತು ನಿಂತವರ ಕಣ್ಣೆದುರು ಅವರ ಗತಬದುಕಿನ ಚಿತ್ರಗಳು ಒಂದೊಂದಾಗಿ ಮೂಡತೊಡಗಿದವು.

● ● ●

ಶೇಷಭಟ್ಟರು ಹೆಂಡತಿಯೊಂದಿಗೆ ಆ ಊರಿಗೆ ಬಂದು ನೆಲೆನಿಂತಾಗ ಅವರಿಗೆ ಬದುಕಿನ ಪ್ರಶ್ನೆಯೇ ದೊಡ್ಡದಾಗಿತ್ತು. ಕೃಷ್ಣಾ ನದಿಯ ದಂಡೆಯಮೇಲಿರುವ ಆ ಸಣ್ಣ ಊರಿನ ಹೆಸರು ಕೃಷ್ಣಾ ಎಂದು. ಈ ಊರಿಗೆ ಬರುವುದಕ್ಕಿಂತ ಮೊದಲು ಶೇಷಭಟ್ಟರು ನಗರದ ಮಠವೊಂದರಲ್ಲಿ ಪುರೋಹಿತರಾಗಿ ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಕುಟುಂಬದ ಖರ್ಚನ್ನು ನಿಭಾಯಿಸುತ್ತಿದ್ದರು. ಶೇಷಭಟ್ಟರು ಸ್ವಲ್ಪ ತಡವರಿಸಿ ಮಾತಾಡುತ್ತಿದ್ದರಿಂದ ಉಳಿದ ಪುರೋಹಿತರು ಅವರನ್ನು ತಮ್ಮೊಂದಿಗೆ ಹೆಚ್ಚು ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ದೊಡ್ಡ ಪೂಜೆಯ ಸಂದರ್ಭಗಳಲ್ಲಿ ಪುರೋಹಿತರ ಕೊರತೆಯಿದ್ದಾಗ ಶೇಷಭಟ್ಟರಿಗೂ ಆಹ್ವಾನವಿರುತ್ತಿತ್ತು. ಹಾಗಾಗಿ ಉಪ್ಪಿಗಾದರೆ ಎಣ್ಣೆಗಿಲ್ಲ ಎನ್ನುವಂತೆ ಶೇಷಭಟ್ಟರ ಬದುಕಿನ ಬಂಡಿ ಉರುಳಿಕೊಂಡು ಹೋಗುತ್ತಿತ್ತು. ಪ್ರತಿವರ್ಷದಂತೆ ಆ ವರ್ಷ ಕೂಡ ಮಠದಲ್ಲಿ ಚತುರ್ಮಾಸವನ್ನು ತುಂಬ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಪ್ರತಿದಿನ ಅಸಂಖ್ಯಾತ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದರಿಂದ ಪುರೋಹಿತರಿಗೆ ದಿನವೆಲ್ಲ ಬಿಡುವಿಲ್ಲದ ಕೆಲಸ. ಅಂಥ ಸಂದರ್ಭಗಳಲ್ಲೂ ಮಠದ ಪುರೋಹಿತವರ್ಗ ಶೇಷಭಟ್ಟರನ್ನು ತುಂಬ ಕೀಳಾಗಿಯೇ ನಡೆಸಿಕೊಳ್ಳುತ್ತಿತ್ತು. ಕೆಲವೊಮ್ಮೆ ಶೇಷಭಟ್ಟರಿಗೆ ಈ ಪೌರೋಹಿತ್ಯವನ್ನೇ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಬೇಕೆನ್ನಿಸಿದರೂ ಯಾವ ದಾರಿಯೂ ಹೊಳೆಯದೆ ಮಠದಲ್ಲಿನ ಅಪಮಾನವನ್ನು ಅನಿವಾರ್ಯವೆಂಬಂತೆ ಸಹಿಸಿಕೊಳ್ಳುತ್ತಿದ್ದರು. ಈ ಚತುರ್ಮಾಸದ ದಿನಗಳಲ್ಲಿ ಹತ್ತಿರದ ಕೃಷ್ಣಾ ಎನ್ನುವ ಹಳ್ಳಿಯಲ್ಲಿ ಸಂಭವಿಸಿದ ಸಾವಿನಿಂದ ತಮ್ಮ ಬದುಕು ಹೊಸ ತಿರುವು ಪಡೆಯುವುದೆಂದು ಸ್ವತ: ಶೇಷಭಟ್ಟರೆ ಭಾವಿಸಿರಲಿಲ್ಲ. ನಗರದಿಂದ ನಾಲ್ಕಾರು ಮೈಲಿಗಳ ದೂರದಲ್ಲಿರುವ ಆ ಸಣ್ಣ ಹಳ್ಳಿಯಲ್ಲಿ ಪಾರಿಜಾತ ಎನ್ನುವ ಎಂಬತ್ತು ವಯಸ್ಸಿನ ಪಾತರದ ಮುದುಕಿ ರಾತ್ರಿ ಮಲಗಿದವಳು ಹಾಸಿಗೆಯಲ್ಲೇ ಸಾವನ್ನಪ್ಪಿದ್ದು ಊರ ಜನರಿಗೆ ಗೊತ್ತಾಗಿದ್ದು ಬೆಳಗ್ಗೆ ಊರ ಶ್ಯಾನುಭೋಗರ ಮನೆಯ ಆಳು ತೋಟದ ಮನೆಗೆ ಬಂದು ನೋಡಿದಾಗಲೆ. ಒಂದುಕಾಲದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಪಾರಿಜಾತ ಊರ ಶಾನುಭೋಗರ ಮನ ಮತ್ತು ಮನೆಯನ್ನು ಪ್ರವೇಶಿಸಲು ತಡವಾಗಲಿಲ್ಲ. ಶಾನುಭೋಗರು ಹತ್ತೆಕರೆ ತೋಟ ಮತ್ತು ತೋಟದ ಮನೆಯನ್ನು ಪಾರಿಜಾತಳ ಹೆಸರಿಗೆ ಬರೆದು ಅವಳನ್ನು ಮನೆ ತುಂಬಿಸಿಕೊಂಡರು. ಶಾನುಭೋಗರ ಮೊದಲ ಹೆಂಡತಿ ಕೆಲವು ದಿನ ತಕರಾರು ಮಾಡಿದರೂ ನಂತರ ಪಾರಿಜಾತ ಮತ್ತು ಆಕೆಯ ನಡುವೆ ಅಕ್ಕ ತಂಗಿಯರ ಅನ್ಯೋನ್ಯತೆ ಬೆಳೆಯಿತು. ಪಾರಿಜಾತಳ ಶವಸಂಸ್ಕಾರ ಬ್ರಾಹ್ಮಣ ಪದ್ಧತಿಯಂತೆ ಆಗಬೇಕೆನ್ನುವುದು ಶ್ಯಾನುಭೋಗರ ಇಚ್ಛೆಯಾಗಿತ್ತು. ಚತುರ್ಮಾಸದ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದುದ್ದರಿಂದ ಪಾರಿಜಾತಳ ಅಪರಕರ್ಮಗಳಿಗೆ ಪುರೋಹಿತರನ್ನು ಕರೆತರುವುದೇ ದೊಡ್ಡ ಸಮಸ್ಯೆಯಾಯಿತು. ಯಾವ ಕೆಲಸ ಕಾರ್ಯಗಳಿಲ್ಲದೆ ಮಠದ ಮೂಲೆಯಲ್ಲಿ ಜೋಲು ಮೊರೆಹಾಕಿ ಕುಳಿತಿದ್ದ ಶೇಷಭಟ್ಟರೆ ಶಾನುಭೋಗರು ಕಳುಹಿಸಿದ್ದ ಆಳುಗಳಿಗೆ ಮಹಾಜ್ಞಾನಿಯಂತೆ ಕಾಣಿಸಿದರು. ಶೇಷಭಟ್ಟರೂ ಬೇರೆ ದಾರಿಕಾಣದೆ ಅವರೊಂದಿಗೆ ಪಾರಿಜಾತಳ ತೋಟದ ಮನೆಯತ್ತ ಹೆಜ್ಜೆ ಹಾಕಿದರು. ಶವಸಂಸ್ಕಾರದಿಂದ ಉದಕಶಾಂತಿಯವರೆಗೆ ಪಾರಿಜಾತಳ ಕ್ರಿಯಾವಿಧಿಗಳೆಲ್ಲ ಸಾಂಗೋಪಾಂಗವಾಗಿ ನೆರವೇರಿದವು. ಸಂತುಷ್ಟರಾದ ಶಾನುಭೋಗರು ಶೇಷಭಟ್ಟರಿಗೆ ತೃಪ್ತಿಯಾಗುವಷ್ಟು ದಾನ ದಕ್ಷಿಣೆ ಕೊಟ್ಟು ಗೌರವಿಸಿದರು. ಮಠದ ಪುರೋಹಿತವರ್ಗ ಈ ಸುದ್ದಿ ತಿಳಿದು ಕೆಂಡಾಮಂಡಲಗೊಂಡಿತು. ಶೇಷಭಟ್ಟರನ್ನು ಮಠಕ್ಕೆ ಕಾಲಿಡದಂತೆ ಬಹಿಷ್ಕರಿಸಿತು.

ಶೇಷಭಟ್ಟರು ಆ ಕೂಡಲೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಹೆಂಡತಿಯೊಂದಿಗೆ ಕೃಷ್ಣಾಗೆ ಬಂದು ನೆಲೆಸಿದರು. ಶ್ಯಾನುಭೋಗರು ತಮ್ಮ ಹಳೆಯ ಮನೆಯನ್ನು ಶೇಷಭಟ್ಟರ ವಾಸಕ್ಕೆಂದು ಬಿಟ್ಟುಕೊಟ್ಟರು. ಕ್ರಮೇಣ ಶೇಷಭಟ್ಟರು ಅಪರಕರ್ಮಗಳಿಗೆ ಪ್ರಸಿದ್ಧರಾದರು. ಹತ್ತಿರದಲ್ಲೇ ಇರುವ ಕೃಷ್ಣೆಯ ದಡ ಅಪರಕರ್ಮಗಳಿಗೆ ಪ್ರಶಸ್ತವಾಗಿತ್ತು. ಶೇಷಭಟ್ಟರೊಂದಿಗೆ ಊರು ಕೃಷ್ಣಾ ಕೂಡ ಪ್ರಸಿದ್ಧಿಗೆ ಬಂತು. ವರ್ಷದ ಎಲ್ಲ ದಿನಗಳಲ್ಲೂ ಕಾಗೆಗಳ ಕಲರವ, ಮಂತ್ರಗಳ ಘೋಷ, ಹೊಗೆ ತುಂಬಿದ ಕುಂಡಗಳು, ಕ್ಷೌರಗೊಂಡ ನುಣ್ಣನೆಯ ತಲೆಗಳು ಆ ಊರಿನ ಸಾಮಾನ್ಯ ದೃಶ್ಯಗಳಾದವು. ಊರಿಗೆ ಬರುವವರ ಸಂಖ್ಯೆ ಹೆಚ್ಚಿದಂತೆ ಸಣ್ಣದೊಂದು ರೈಲು ನಿಲ್ದಾಣ ತಲೆ ಎತ್ತಿತು. ಸಣ್ಣಪುಟ್ಟ ವ್ಯಾಪಾರದಂಗಡಿಗಳು ಆರಂಭಗೊಂಡವು. ಶೇಷಭಟ್ಟರೆ ಒಂದೆರಡು ಲಾಡ್ಜಗಳನ್ನು ಕಟ್ಟಿಸಿ ಪರವೂರಿನಿಂದ ಬರುವವರು ರಾತ್ರಿ ತಂಗಲು ವ್ಯವಸ್ಥೆ ಮಾಡಿದರು. ಒಬ್ಬರೆ ಕೆಲಸ ನಿರ್ವಹಿಸುವುದು ಅಸಾಧ್ಯವಾದಾಗ ತಮ್ಮ ಹೆಂಡತಿಯ ತವರಿನಿಂದ ಕೆಲವರನ್ನು ಕರೆತಂದು ಪೌರೋಹಿತ್ಯಕ್ಕೆ ಹಚ್ಚಿದರು. ನೋಡು ನೋಡುತ್ತಿರುವಂತೆ ಶೇಷಭಟ್ಟರ ಹೆಸರಿನೊಂದಿಗೆ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿ ನಗ, ನಾಣ್ಯ, ಭೂಮಿಯನ್ನು ಕಾಣುವಂತಾದರು. ಬದುಕು ನೀಡಿದ ಊರ ಮೇಲಿನ ಕೃತಜ್ಞತೆಯಿಂದ ತಮ್ಮ ಏಕಮಾತ್ರ ಸಂತಾನಕ್ಕೆ ಕೃಷ್ಣಭಟ್ಟ ಎಂದು ಹೆಸರಿಟ್ಟರು.

ಶೇಷಭಟ್ಟರಿಗೆ ತಮ್ಮ ಪುತ್ರ ಕೃಷ್ಣಭಟ್ಟ ತಮ್ಮಂತೆ ಪೌರೋಹಿತ್ಯದಲ್ಲೆ ಮುಂದುವರೆಯಲೆಂಬ ಆಸೆ ಪ್ರಬಲವಾಗಿತ್ತು. ಆದರೆ ಕೃಷ್ಣಭಟ್ಟನಿಗೆ ವೈದಿಕಶಾಲೆಗಿಂತ ಸರ್ಕಾರಿ ಶಾಲೆಯಲ್ಲಿನ ಪಾಠವೇ ತಲೆಗೆ ಬೇಗ ಹತ್ತಿತು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಪಟ್ಟಣ ಸೇರಿದ ಮೇಲೆ ಕೃಷ್ಣಭಟ್ಟನಿಗೆ ತಂದೆಯಪೌರೋಹಿತ್ಯವೇ ಅದೊಂದು ಡಾಂಭಿಕತನವೆಂದೂ ಮುಗ್ಧರಿಂದ ಹಣ ದೋಚುವ ತಂತ್ರವೆಂದು ಅನಿಸಲು ತೊಡಗಿತು. ಊರಿಗೆ ಹೋದಾಗಲೆಲ್ಲ ಅಪ್ಪನೆದುರು ತನ್ನ ಸಿಟ್ಟನ್ನು ತೋಡಿಕೊಳ್ಳುತ್ತಿದ್ದ. ಇಡೀ ಊರು ಒಂದು ಸ್ಮಶಾನ ಮೌನದಿಂದ ಭಣಗುಟ್ಟುತ್ತಿರುವಂತೆಯೂ ಇದಕ್ಕೆಲ್ಲ ತನ್ನ ತಂದೆಯೇ ಕಾರಣನೆಂದೂ ಅವನಿಗೆ ಭಾಸವಾಗತೊಡಗಿತು. ಆ ವಾತಾವರಣದಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಅವನ ಮನಸ್ಸು ತವಕಿಸುತ್ತಿತ್ತು. ಶೇಷಭಟ್ಟರು ಹಲವು ಸಲ ಮಗನನ್ನು ತಮ್ಮ ದಾರಿಗೆ ತರಲು ಪ್ರಯತ್ನಿಸಿ ಕೊನೆಗೆ ಅದು ಸಾಧ್ಯವಿಲ್ಲವೆಂದರಿತು ಸುಮ್ಮನಾದರು. ಕೃಷ್ಣಭಟ್ಟ ವಿದ್ಯಾಭ್ಯಾಸ ಮುಗಿದದ್ದೆ ಹೈಸ್ಕೂಲು ಶಿಕ್ಷಕನಾಗಿ ನೇಮಕಗೊಂಡು ದೂರದ ಪಟ್ಟಣವನ್ನು ಸೇರಿ ಹೊಸ ಬದುಕನ್ನು ಕಟ್ಟಿಕೊಂಡ. ಶೇಷಭಟ್ಟರು ತಮ್ಮ ಕೊನೆಯ ದಿನದವರೆಗೂ ಆ ಹಳ್ಳಿಯಲ್ಲೇ ಬದುಕಿ ಹೆಂಡತಿ ತೀರಿಕೊಂಡ ನಾಲ್ಕು ತಿಂಗಳ ನಂತರ ತಾವು ಕೂಡ ಇಹಲೋಕ ಯಾತ್ರೆ ಮುಗಿಸಿದರು. 

ಕಾಂಪೌಂಡ ಗೇಟಿನ ಕಿರ್ರ್ ಎನ್ನುವ ಸದ್ದಿಗೆ ಕೃಷ್ಣಭಟ್ಟರು ವಾಸ್ತವಕ್ಕೆ ಮರಳಿದರು. ದೀರ್ಘವಾದ ಉಸಿರು ಅವರಿಂದ ಹೊರಬಂತು. ಕಾರು ಪಾರ್ಕಿಂಗ್ ಮಾಡಿ ಮಗ ಆಫೀಸ್ ರೂಮಿನತ್ತ ಹೋಗುತ್ತಿರುವುದು ಕಿಟಕಿಯಿಂದ ಕಾಣುತ್ತಿತ್ತು. ಗಡಿಯಾರದ ಮುಳ್ಳು ನಾಲ್ಕು ಗಂಟೆ ತೋರಿಸುತ್ತಿತ್ತು. ಮಗ ನಡೆದು ಹೋದ ದಿಕ್ಕಿನಿಂದ ಬೀಸಿ ಬಂದ ಗಾಳಿಯೊಂದಿಗೆ ಶವದ ವಾಸನೆ ಮೂಗಿನೊಳಗೆ ಸೇರಿದಂತೆನಿಸಿ ಕೃಷ್ಣಭಟ್ಟರಿಗೆ ಉಸಿರು ಕಟ್ಟಿದಂತಾಗಿ ಅಲ್ಲಿ ನಿಲ್ಲಲಾಗದೆ ಹಾಲ್‍ಗೆ ಬಂದು ಸೋಫಾದ ಮೇಲೆ ಕುಸಿದು ಕುಳಿತರು. ತಾವು ಕುಳಿತ ಸೋಫಾದ ಎದುರು  ಗೋಡೆಯಮೇಲೆ ಶೇಷಭಟ್ಟರ ಆಳೆತ್ತರದ ಫೆÇೀಟೋ ರಾರಾಜಿಸುತ್ತಿತ್ತು. ಫೋಟೋದೊಳಗಿದ್ದ ಅಪ್ಪ ತಮ್ಮನ್ನು ನೋಡಿ ನಕ್ಕಂತೆ ಭಾಸವಾಗಿ ಕೃಷ್ಣಭಟ್ಟರ ಮೈ ಆ ಕೊರೆಯುವ ಚಳಿಯಲ್ಲೂ ಬೆವರಲಾರಂಭಿಸಿತು.

-ರಾಜಕುಮಾರ ಕುಲಕರ್ಣಿ