Monday, April 21, 2014

ಅಪಾಯದ ಅಂಚಿನಲ್ಲಿ ಸೃಜನಶೀಲತೆ

     










               ಸಾಹಿತ್ಯ ಮತ್ತು ಕಲೆ ಭಾಷೆಯೊಂದರ ಬಹುಮುಖ್ಯವಾದ ಸೃಜನಶೀಲ ಮಾಧ್ಯಮಗಳು. ಆಯಾ ಕಾಲಘಟ್ಟದಲ್ಲಿನ ಬೆಳವಣಿಗೆ ಮತ್ತು ಬದಲಾವಣೆಗಳನ್ನು ದಾಖಲಿಸುತ್ತ ಬರುವ ಈ ಮಾಧ್ಯಮಗಳು ಭಾಷೆಯೊಂದರ ಪ್ರಥಮ ಅಭಿವ್ಯಕ್ತಿ ಮಾಧ್ಯಮಗಳೆಂದರೆ ತಪ್ಪಾಗಲಾರದು. ಇವತ್ತಿಗೂ ಜ್ಞಾನಪೀಠ ವಿಷಯ ಚರ್ಚೆಗೆ ಬಂದರೆ ಕನ್ನಡ ಭಾಷೆ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಕನ್ನಡ ಭಾಷೆಗೆ ಅಂಥದ್ದೊಂದು  ಅಗ್ರಸ್ಥಾನ ತಂದುಕೊಟ್ಟಿದ್ದು ಸಾಹಿತ್ಯದಂಥ ಸೃಜನಶೀಲ ಮಾಧ್ಯಮ. ಕೆಲವು ವರ್ಷಗಳ ಹಿಂದೆ ಕನ್ನಡ ಭಾಷೆಗೆ ಶಾಸ್ತ್ರಿಯ ಭಾಷೆಯ ಸ್ಥಾನಮಾನದ ಮಾನ್ಯತೆ ದೊರೆಯಿತು. ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಸಾಹಿತ್ಯ ರಚನೆಯಾಗಿದ್ದರ ಪರಿಣಾಮ ಅಂಥದ್ದೊಂದು ಗೌರವ ದೊರೆಯಲು ಸಾಧ್ಯವಾಯಿತು. ನನ್ನ ಅಭಿಪ್ರಾಯದಲ್ಲಿ ಕಲೆಯ ಒಂದು ಅಂಗವಾಗಿ ಚಲನಚಿತ್ರ ಕೂಡ ಅತ್ಯಂತ ಪರಿಣಾಮಕಾರಿಯಾದ ಸೃಜನಶೀಲ ಕ್ಷೇತ್ರ. ಈ ಹೇಳಿಕೆಯ ವಿಷಯವಾಗಿ ಅನೇಕ ಮಡಿವಂತರು ಅಸಮಾಧಾನ ವ್ಯಕ್ತಪಡಿಸಬಹುದು. ಇರಲಿ ಏನೆಲ್ಲಾ ಅಸಮಾಧಾನಗಳ ನಡುವೆಯೂ ಸಿನಿಮಾ ಮಾಧ್ಯಮ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದೆ ಎನ್ನುವುದು ಒಪ್ಪಲೇ ಬೇಕಾದ ಸಂಗತಿ.

       ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಈ ಎರಡು ಸೃಜನಶೀಲ ಕ್ಷೇತ್ರಗಳಲ್ಲಿ ಬಹುದೊಡ್ಡ ಅಪಾಯ ಎದುರಾಗಿದೆ. ಸೃಜನಶೀಲ ಮನಸ್ಸುಗಳ ಕೊರತೆಯ ಪರಿಣಾಮ ನಾಡು ನುಡಿಗಿಂತ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗುತ್ತಿದೆ. ಮಾಧ್ಯಮವೊಂದರ ಮೂಲ ಉದ್ದೇಶಗಳು ಬದಲಾಗಿ ಆ ಜಾಗದಲ್ಲಿ ವೈಯಕ್ತಿಕ ಹಿತಾಸಕ್ತಿಗಳು ಸ್ಥಾಪಿತವಾದಾಗ ಸೃಜನಶೀಲ ಕ್ಷೇತ್ರ ಸ್ಥಾವರವಾಗುತ್ತದೆ. ಯಾವಾಗ ಸೃಜನಶೀಲ ಮಾಧ್ಯಮ ನಿಷ್ಕ್ರಿಯವಾಗುತ್ತ ಹೋಗುತ್ತದೆಯೋ ಆಗ ನಿಜವಾಗಿ ಅಪಾಯಕ್ಕೆ ಸಿಲುಕುವುದು ಆ ಮಾಧ್ಯಮದ ಭಾಷೆ.

     ಸಾಹಿತ್ಯ;-

       ಸಾಹಿತ್ಯ ಸೃಜನಶೀಲ ಕ್ಷೇತ್ರದ ಮುಖ್ಯ ಮಾಧ್ಯಮ. ಕುವೆಂಪು, ಬೇಂದ್ರೆ, ತರಾಸು, ಹಾಮಾನಾ, ಅನಕೃ ಅವರಂಥ ಸೃಜನಶೀಲರು ಸಾಹಿತ್ಯದ ಮೂಲಕ ಕನ್ನಡ ಭಾಷೆಯ ಸಂಸ್ಕೃತಿ ಮತ್ತು ಶ್ರೀಮಂತಿಕೆಯನ್ನು ಅನಾವರಣಗೊಳಿಸಿದರು. ಹಳೆಗನ್ನಡ, ನಡುಗನ್ನಡ, ನವ್ಯ, ನವೋದಯ ಹೀಗೆ ಆಯಾ ಕಾಲಘಟ್ಟದಲ್ಲಿ ಸೃಷ್ಟಿಯಾದ ಸಾಹಿತ್ಯ ಕನ್ನಡ ಭಾಷೆಯ ಸೊಗಡು ಮತ್ತು ಶ್ರೀಮಂತಿಕೆ ಎಲ್ಲ ಕಡೆ ಪಸರಿಸಲು ಕಾರಣವಾಯಿತು. ಕರ್ನಾಟಕ ಏಕೀಕರಣ, ಗೋಕಾಕ ಚಳುವಳಿ ಈ ಎಲ್ಲ ಸಂದರ್ಭಗಳಲ್ಲಿ ಕನ್ನಡಿಗರನ್ನು ಒಂದುಗೂಡಿಸಿದ್ದು ಸಹ ಈ ಸಾಹಿತ್ಯ ಕ್ಷೇತ್ರವೇ. ಈ ರೀತಿ ಅಭಿವ್ಯಕ್ತಿ ಮಾಧ್ಯಮವಾಗಿ ಸೃಷ್ಟಿಯಾಗುತ್ತ ಬಂದ ಸಾಹಿತ್ಯ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿತು.

       ಬದಲಾದ ಸಾಹಿತ್ಯದ ರೂಪುರೇಷೆಗಳಲ್ಲಿ ಅತೀ ಮುಖ್ಯವಾದುದ್ದೆಂದರೆ ಅದು ಈಗ ಪ್ರಕಟವಾಗುತ್ತಿರುವ ಗಜಗಾತ್ರದ ಸಾಹಿತ್ಯ. ಕನ್ನಡ ಭಾಷೆಯಲ್ಲಿ ಓದುಗರ ಕೊರತೆ ತೀವೃವಾಗಿ ಕಾಡುತ್ತಿದೆ ಎನ್ನುವ ಅಭಿಪ್ರಾಯದ ನಡುವೆಯೂ ಪುಸ್ತಕಗಳು ಮಾತ್ರ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ ಎನ್ನುವುದನ್ನು ನಾವುಗಳೆಲ್ಲ ಒಪ್ಪಲೇ ಬೇಕಾದ ನಿಜ. ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವುದು ಅದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಸಂಕೇತವಲ್ಲವೇ ಎನ್ನುವ ಪ್ರಶ್ನೆ ಎದುರಾಗಬಹುದು. ಆದರೆ ನಾವು ಮಾಡಬೇಕಿರುವುದು ಕೃತಿಗಳ ಗುಣಾತ್ಮಕ ಮೌಲ್ಯಮಾಪನವೇ ಹೊರತು ಅವುಗಳ ಅಂಕಿಸಂಖ್ಯೆಯನ್ನಲ್ಲ. ಪುಸ್ತಕಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವುದರಿಂದ ಗುಣಾತ್ಮಕ ಸಾಹಿತ್ಯ ಸೃಷ್ಟಿಯಾಗುತ್ತಿದೆ ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು. ಏಕೆಂದರೆ ಬರಹಗಾರರಾಗಬೇಕೆನ್ನುವ ಹಪಾಹಪಿಗೆ ಒಳಗಾಗಿರುವವರೆಲ್ಲ ಇವತ್ತು ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವರು. ಸೃಷ್ಟಿಯಾಗುತ್ತಿರುವ ಸಾಹಿತ್ಯವನ್ನೆಲ್ಲವನ್ನೂ ಪ್ರಕಟಿಸಲು ಪ್ರಕಾಶಕರು ಸಿದ್ಧರಿಲ್ಲದ ಕಾರಣ ಜಿದ್ದಿಗೆ ಬಿದ್ದಿರುವ ನಮ್ಮ ಲೇಖಕರು ಸ್ವತಹ ತಾವೇ ಪ್ರಕಾಶಕರಾಗಿಯೂ ಪುಸ್ತಕಗಳ ಪ್ರಕಟಣೆಗೆ ಮುಂದಾಗುತ್ತಿರುವರು. ಪರಿಣಾಮವಾಗಿ ಕನ್ನಡ ಭಾಷೆಯಲ್ಲಿ ಪ್ರತಿವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗುತ್ತಿವೆ. ಜೊತೆಗೆ ಪ್ರಕಟಣೆಯಲ್ಲಿ ಬಂಡವಾಳ ತೊಡಗಿಸುತ್ತಿರುವ ಲೇಖಕ ಆದ ಖರ್ಚನ್ನು ಹಿಂದಕ್ಕೆ ಪಡೆಯಲು ಪ್ರಶಸ್ತಿಗಾಗಿಯೋ ಅಥವಾ ಸರ್ಕಾರದ ಮಟ್ಟದಲ್ಲಿ ಪುಸ್ತಕಗಳ ಮಾರಾಟಕ್ಕಾಗಿ ಲಾಬಿಗಿಳಿಯುತ್ತಿರುವನು. ಅನೇಕ  ಲೇಖಕರು ವಿಮರ್ಶಕರಿಗೊಂದಿಷ್ಟು ಒಪ್ಪಿಸಿ ತಮ್ಮ ಕೃತಿಗಳ ವಿಮರ್ಶೆಯನ್ನೂ ಮಾಡಿಸುತ್ತಿರುವುದು ರಹಸ್ಯ ಸಂಗತಿಯೇನೂ ಅಲ್ಲ. ಇದರ ಒಟ್ಟಾರೆ ಪರಿಣಾಮ ಇವತ್ತು ಓದುಗರಿಗೆ ಸಾರ್ವಜನಿಕ ಗ್ರಂಥಾಲಯಗಳಲ್ಲಾಗಲಿ ಇಲ್ಲವೇ ಪತ್ರಿಕೆಗಳ ವಿಮರ್ಶಾ ಅಂಕಣದಲ್ಲಾಗಲಿ ಅತ್ಯುತ್ತಮ ಕೃತಿಗಳ ಓದು ಸಿಗುತ್ತಿಲ್ಲ.

        ನನ್ನ ಎರಡನೇ ಪ್ರಶ್ನೆ ಈ ದಿನಗಳಲ್ಲಿ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಏನು ಮಾಡುತ್ತಿವೆ ಎನ್ನುವುದಾಗಿದೆ. ಅದೆಷ್ಟು ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳಿಂದ ಉತ್ತಮ ಕೃತಿಗಳು ಪ್ರಕಟವಾಗುತ್ತಿವೆ. ಈ ಪ್ರಸಾರಾಂಗಗಳು ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರುಗಳ ಪಿ ಹೆಚ್ ಡಿ ಪ್ರಭಂದಗಳನ್ನೇ ಪುಸ್ತಕಗಳ ರೂಪದಲ್ಲಿ ಪ್ರಕಟಿಸುವ ಕಾರ್ಯದಲ್ಲಿ ಮಗ್ನವಾಗಿವೆ. ಆದ್ದರಿಂದ ಪ್ರಸಾರಾಂಗಗಳಿಂದ ಆಯಾ ಭಾಗದ ಲೇಖಕರನ್ನು ಬೆಳೆಸುವ ಕಾರ್ಯವಾಗುತ್ತಿಲ್ಲ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಾಂಗಗಳು ಹೆಸರಿಗೆ ಮಾತ್ರವಿದ್ದು ಅವು ಸಂಪೂರ್ಣ ನಿಷ್ಕ್ರಿಯಗೊಂಡಿವೆ. ಅರವಿಂದ ಪ್ರಕಾಶನ, ಲೋಹಿಯಾ ಪ್ರಕಾಶನ, ನವಕರ್ನಾಟಕದಂಥ ಸಂಸ್ಥೆಗಳು ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ಮಾಡಿರುವ ವೈಶಿಷ್ಟ್ಯಪೂರ್ಣ ಕೆಲಸ ನಮ್ಮ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳಿಂದ ಆಗಲೇ ಇಲ್ಲ.

          ಇನ್ನು ಕೊನೆಯದಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿದ ವಿಷಯ. ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ನಂತರದ ದಿನಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿತು. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಚಟುವಟಿಕೆಗಳ ಕೇಂದ್ರವಾಗಿ ನಾಡು ನುಡಿಯ ಬೆಳವಣಿಗೆಗೆ ವಿಶಿಷ್ಟ ಕೊಡುಗೆ ನೀಡುತ್ತಿತ್ತು. ಅನೇಕ ಸೃಜನಶೀಲ ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ಕನ್ನಡ ಸಾಹಿತ್ಯದ ಹಿರಿಮೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದರು. ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ, ಪುಸ್ತಕಗಳ ಪುಸ್ತಕಗಳ ಪ್ರಕಟಣೆ ಇತ್ಯಾದಿ ಚಟುವಟಿಕೆಗಳಿಂದ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿತ್ತು. ಆದರೆ ಈಗ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯ ಬಣ್ಣ ಬಳಿದುಕೊಂಡು ವಿರೂಪಗೊಂಡಿದೆ. ಪರಿಷತ್ತಿನ ಚುನಾವಣೆ ಆಡಂಬರದ ಒಡ್ಡೋಲಗವಾಗಿ ರೂಪಾಂತರಗೊಂಡಿದೆ. ಸಾಹಿತಿಗಳ ಬದಲಾಗಿ ಉದ್ಯಮಿಗಳು ಸಾಹಿತ್ಯ ಪರಿಷತ್ತನ್ನು ಪ್ರವೇಶಿಸುತ್ತಿರುವರು. ಸಾಹಿತ್ಯದ ಗಂಧಗಾಳಿ ಇಲ್ಲದವರು ಸಾಹಿತ್ಯ ಪರಿಷತ್ತಿನ ಮುಖ್ಯ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಸಾಹಿತ್ಯದಂಥ ಸೃಜನಶೀಲ ಕ್ಷೇತ್ರ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಜೊತೆಗೆ ಚುನಾವಣೆ, ಪ್ರಚಾರ, ಸಭೆಗಳು, ಮತದಾನ ಇತ್ಯಾದಿ ಸಾಹಿತ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಲೇಖಕರು ಸಹ ತಮ್ಮಲ್ಲಿನ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಕುರಿತು ಹೇಳುವುದಾದರೆ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ಆಯಾ ಕಾಲದ ಪದಾಧಿಕಾರಿಗಳ ಸ್ವಜನ ಪಕ್ಷಪಾತ ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಕೃತಿಗಳನ್ನು ಗುರುತಿಸಿ ಪ್ರಕಟಿಸುತ್ತಿಲ್ಲ. ಉತ್ತಮ ಕೃತಿಗಳನ್ನು ಪ್ರಕಟಿಸಿ ಬಹುಸಂಖ್ಯೆಯ ಓದುಗರಿಗೆ ತಲುಪಿಸಬೇಕಾದ ಪರಿಷತ್ತು ಸ್ವಜನ ಪಕ್ಷಪಾತದ ಮೂಲಕ ಸಾಹಿತ್ಯದಂಥ ಸೃಜನಶೀಲ ಮಾಧ್ಯಮವನ್ನು ಅಪಾಯದಂಚಿಗೆ ದೂಡಿದೆ.

ಸಿನಿಮಾ 

           ಸಾಹಿತ್ಯದ ನಂತರ ನನ್ನ ಅಭಿಪ್ರಾಯದಲ್ಲಿ ಸಿನಿಮಾ ಅದು ಭಾಷೆಯೊಂದರ ಬಹುಮುಖ್ಯವಾದ ಸೃಜನಶೀಲ ಮಾಧ್ಯಮ. ಇವತ್ತು ಬಂಗಾಳಿ ಭಾಷೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಲು ಆ ಭಾಷೆಯಲ್ಲಿ ನಿರ್ಮಾಣಗೊಂಡ ಸಿನಿಮಾಗಳು ಕಾರಣ. ಸತ್ಯಜಿತ ರೇ ಅವರಂಥ ಸೃಜನಶೀಲ ನಿರ್ದೇಶಕ ಸೆಲ್ಯೂಲಾಯಿಡ್ ಮಾಧ್ಯಮದ ಮೂಲಕ ಬಂಗಾಳಿ ಭಾಷೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದರು. ಕನ್ನಡದಲ್ಲೂ ಪುಟ್ಟಣ್ಣ ಕಣಗಾಲ್, ಗಿರೀಶ್ ಕಾಸರವಳ್ಳಿ, ರಾಜಕುಮಾರ, ಶಂಕರ ನಾಗ್ ಅವರಂಥ ಪ್ರತಿಭಾನ್ವಿತರು ಸಿನಿಮಾ ಮಾಧ್ಯಮವನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡರು. ಅಂಥವರಿಂದಲೇ ಸಿನಿಮಾ ಎನ್ನುವುದು ಅದು ಕೇವಲ ಮನೋರಂಜನೆಯ ಮಾಧ್ಯಮವಲ್ಲ ಅದೊಂದು ಸೃಜನಶೀಲ ಮಾಧ್ಯಮ ಎಂದು ನಮಗೆಲ್ಲ ಗೊತ್ತಾಗಿದ್ದು.

       ಅನೇಕ ಸೃಜನಶೀಲ ನಿರ್ದೇಶಕರು ಮತ್ತು ಕಲಾವಿದರು ಈಗ ಕನ್ನಡ ಚಿತ್ರರಂಗದಿಂದ ಮರೆಯಾಗಿರುವರು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮ ಸೃಜನಶೀಲತೆ ಕಳೆದುಕೊಂಡು ಬಡವಾಗಿದೆ. ಕನ್ನಡ ಸಂಸ್ಕೃತಿಗೆ ಹೊರತಾದ ಚಲನಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ವ್ಯಾಪಾರಿ ಮನೋಭಾವದ ಉದ್ಯಮಿಗಳು ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಎನ್ನುವುದು ಬಂಡವಾಳ ಹೂಡಿಕೆಯ ಕ್ಷೇತ್ರವಾಗಿ ಬದಲಾಗಿದೆ. ಜೊತೆಗೆ ಕನ್ನಡ ಭಾಷೆ ಮತ್ತು ಇಲ್ಲಿನ ಸಂಸ್ಕೃತಿಯ ಪರಿಚಯವಿಲ್ಲದವರು ಹಣದ ಚೀಲ ಹಿಡಿದುಕೊಂಡು ಕನ್ನಡ ಸಿನಿಮಾ ಮಾಧ್ಯಮವನ್ನು ಪ್ರವೇಶಿಸುತ್ತಿರುವರು. ಹೀಗೆ ಬರುವವರೆಲ್ಲ ಹಣದ ಚೀಲದೊಂದಿಗೆ ಅನ್ಯಭಾಷೆಯ ಕಥೆಗಳನ್ನೂ ತೆಗೆದುಕೊಂಡು ಬರುತ್ತಿರುವುದರಿಂದ ತಯ್ಯಾರಾಗುತ್ತಿರುವ ಬಹಳಷ್ಟು ಸಿನಿಮಾಗಳಲ್ಲಿ ಕನ್ನಡ ಮಣ್ಣಿನ ಸೊಗಡು ಮತ್ತು ಸಂಸ್ಕೃತಿ ಮರೆಯಾಗುತ್ತಿದೆ.

        ಈ ನಡುವೆ ಬೆರಳೆಣಿಕೆಯಷ್ಟು ಸೃಜನಶೀಲ ಕಲಾವಿದರಿಂದ ಸೃಜನಾತ್ಮಕ ಸಿನಿಮಾಗಳು ತಯ್ಯಾರಾಗುತ್ತಿದ್ದರೂ ಅವುಗಳಿಗೆ ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ  ಕಟ್ಟಿ  ಜನಸಮೂಹದಿಂದ ದೂರವೇ ಇಡಲಾಗುತ್ತಿದೆ. ಅಂಥ ಚಿತ್ರಗಳನ್ನು ಪ್ರದರ್ಶಿಸಲು ಚಿತ್ರಮಂದಿರಗಳೂ ದೊರೆಯುತ್ತಿಲ್ಲವಾದ್ದರಿಂದ ಕಲಾತ್ಮಕ ಚಿತ್ರಗಳೆಂಬ ಸೃಜನಶೀಲ ಸಿನಿಮಾಗಳು ಕನ್ನಡ ಪ್ರೇಕ್ಷಕ ವರ್ಗದಿಂದ ದೂರವೇ ಉಳಿಯುತ್ತಿವೆ. ಕರಾವಳಿ ತೀರದ ಮೀನುಗಾರರ ಬದುಕಿನ ಸಂಸ್ಕೃತಿ, ಮಲೆನಾಡಿನ ಬದುಕು, ದಕ್ಷಿಣ ಕನ್ನಡದ ಜನಜೀವನ, ಉತ್ತರ ಕರ್ನಾಟಕದ ರೈತರ ಬವಣೆಗಳು ಈ ಎಲ್ಲವುಗಳನ್ನು ಪರಿಚಯಿಸಿದ್ದೆ ಸಿನಿಮಾ ಎನ್ನುವ ಮಾಧ್ಯಮ. ಆದರೆ ಯಾವಾಗ ಅಂಥ ಸೃಜನಾತ್ಮಕ ಚಿತ್ರಗಳಿಗೆ ಕಲಾತ್ಮಕತೆ ಎನ್ನುವ ಹಣೆಪಟ್ಟಿ ಕಟ್ಟುವ ಹುನ್ನಾರ ಪ್ರಾರಂಭವಾಯಿತೋ ಕ್ರಮೇಣ ಈ ರೀತಿಯ ಸಿನಿಮಾಗಳ ನಿರ್ಮಾಣ ಕಡಿಮೆಯಾಗುತ್ತ ಹೋಯಿತು. ಅದರ ನೇರ ಪರಿಣಾಮ ಕನ್ನಡ ಚಿತ್ರರಂಗದ ಮೇಲಾಯಿತು. ಈ ಕಾರಣದಿಂದಾಗಿ ಕನ್ನಡ ಸಿನಿಮಾದಂಥ ಸೃಜನಶೀಲ ಮಾಧ್ಯಮ ಅಪಾಯದ ಅಂಚಿಗೆ ಬಂದು ನಿಂತಿದೆ.

         ಹಣ ಮತ್ತು ಜನಪ್ರಿಯತೆಯ ವ್ಯಾಮೋಹ ಲೇಖಕರನ್ನು ಹಾಗೂ ಕಲಾವಿದರನ್ನು ಕಾಡತೊಡಗಿದಾಗ ಅದು ಕ್ರಮೇಣ ಸೃಜನಶೀಲ ಕ್ಷೇತ್ರವನ್ನು ನಿಷ್ಕ್ರಿಯತೆಗೆ ತಂದು ನಿಲ್ಲಿಸುತ್ತದೆ. ಅಂಥದ್ದೊಂದು ಅಪಾಯದ ಅರಿವಿದ್ದೆ ಕನ್ನಡದ ಶ್ರೇಷ್ಠ ಬರಹಗಾರ ಪೂರ್ಣಚಂದ್ರ ತೇಜಸ್ವಿ ಆ ಎಲ್ಲ ಜಂಜಡಗಳಿಂದ ದೂರನಿಂತು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೃತಿಗಳನ್ನು ನೀಡಿದರು. ರಾಜಕುಮಾರ ಅವರಲ್ಲಿನ ಅಮಾಯಕತೆಯೇ ಅವರಿಂದ ಅನೇಕ ಅತ್ಯುತ್ತಮ ಪಾತ್ರಗಳು ಸೃಷ್ಟಿಯಾಗಲು ಕಾರಣವಾಯಿತು. ಸೃಜನಶೀಲತೆ ಎನ್ನುವುದು ಒಂದು ದಿನದಲ್ಲಿ ಕಟ್ಟಿಕೊಳ್ಳುವ ಬದುಕಲ್ಲ. ಅದು ನಿರಂತರ ಪ್ರಯತ್ನದ ಫಲ. ಈ ಅರಿವು ನಮ್ಮ ಇವತ್ತಿನ ಸೃಜನಶೀಲ ಮನಸ್ಸುಗಳಿಗಿದ್ದರೆ ಒಳಿತು.

-ರಾಜಕುಮಾರ. ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ