Wednesday, July 23, 2014

ಇದು ಅಪ್ಪನಿಗೆ ಮಗಳ ಉಡುಗೊರೆ







ಮೊನ್ನೆ ನನ್ನ ಗೆಳೆಯರೊಬ್ಬರು ನನಗೆ ಓದಲು ಪುಸ್ತಕ ತಂದುಕೊಟ್ಟರು. ಆ ಪುಸ್ತಕದಲ್ಲಿ ನನ್ನ ಲೇಖನವಿದೆ ಎನ್ನುವುದು ಬೇರೆ ಮಾತು. ಪುಸ್ತಕಕ್ಕೆ ಲೇಖನ ಕಳುಹಿಸಿಕೊಡಿ ಎಂದು ಸಂಪಾದಕ ಸಮಿತಿಯವರು ಕೇಳಿದಾಗ ನನ್ನ ಮತ್ತು ರುದ್ರಪ್ಪನವರ ಸ್ನೇಹದ   ಕುರಿತು  ಲೇಖನ ಬರೆದು ಕಳುಹಿಸಿದ್ದೆ. ಆನಂತರ ಕೆಲಸದ ಒತ್ತಡದ ನಡುವೆ ಈ ವಿಷಯ ನನ್ನ ಸ್ಮೃತಿಯಿಂದ ಮರೆಯಾಗಿತ್ತು. ಈ ಪುಸ್ತಕದ ಕಥಾ ನಾಯಕನ ಮಗಳು ಡಾ. ಹೇಮಾ ನನ್ನನ್ನು ವೈಯಕ್ತಿಕವಾಗಿ ಕಂಡು ಮಾತನಾಡಿಸಿ ಲೇಖನ ಬರೆದಿದ್ದಕ್ಕೆ ಕೃತಜ್ಞತೆ ಸೂಚಿಸಿದ್ದರೂ ಅವರು ನನ್ನನ್ನು ಭೇಟಿಯಾಗುವ ವೇಳೆಗೆ ಅವರು ತಂದಿದ್ದ ಪುಸ್ತಕದ ಪ್ರತಿಗಳೆಲ್ಲ ಖಾಲಿಯಾಗಿದ್ದವು. ಕೊನೆಗೂ ನನ್ನ ಸ್ನೇಹಿತರ ಮೂಲಕ ಪುಸ್ತಕ ನನ್ನ ಕೈಸೇರಿತು. ಪುಸ್ತಕದ ಹೆಸರು 'ಶಾಂತರುದ್ರ'. ಇದು ಪುಸ್ತಕ ವ್ಯಾಪಾರಿಯೂ ಮತ್ತು ಪ್ರಕಾಶಕರಾಗಿದ್ದ ಶ್ರೀ ಪಿ. ರುದ್ರಪ್ಪ ಅಂಗಡಿ ಅವರ ಕುರಿತಾದ ನೆನಪುಗಳ ಗ್ರಂಥ. ಒಂದರ್ಥದಲ್ಲಿ 'ಸಂಸ್ಮರಣ ಗ್ರಂಥ' ವೆಂದೂ ಕರೆಯಬಹುದು. 

         ಶ್ರೀ ರುದ್ರಪ್ಪನವರು ನನಗೆ ಅಪರಿಚಿತರೇನೂ ಆಗಿರಲಿಲ್ಲ. ನಾನು ಬಾಗಲಕೋಟೆಯ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕನೆಂದು ೨೦೦೧ ರಲ್ಲಿ ನಿಯುಕ್ತಿಗೊಂಡ ದಿನದಿಂದಲೂ ನನಗೆ ಅವರು ಪರಿಚಿತರಾಗಿದ್ದರು. ಮೊದಲು ಸಪ್ನಾ   ಪುಸ್ತಕ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದವರು  ನಂತರ ತಮ್ಮದೇ   ಪುಸ್ತಕ ಮಳಿಗೆ ಮತ್ತು ಪ್ರಕಾಶನ ಸಂಸ್ಥೆಯನ್ನು  ಪ್ರಾರಂಭಿಸಿದರು. ಒಂದಿಷ್ಟು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಕನ್ನಡದ ಸಾಂಸ್ಕೃತಿಕ ಲೋಕವನ್ನು ತಮ್ಮ ಕೈಲಾದ ಮಟ್ಟಿಗೆ ಸಂಪದ್ಭರಿತಗೊಳಿಸಿದ ಹೆಮ್ಮೆ  ಮತ್ತು ಅಭಿಮಾನ ಶ್ರೀಯುತರದ್ದಾಗಿತ್ತು. ವ್ಯಾಪಾರದ ನಡುವೆಯೂ ಒಂದಿಷ್ಟು ದೈವಭಕ್ತಿ ಮತ್ತು ಸಾತ್ವಿಕ ಗುಣವನ್ನು ಅವರು ಮೈಗೂಡಿಸಿಕೊಂಡಿದ್ದು ನನ್ನ ಅನುಭವಕ್ಕೆ ಬಂದ ಸಂಗತಿಗಳಲ್ಲೊಂದು.  ಬಾಲ್ಯವನ್ನು ಬಡತನದಲ್ಲೇ ಕಳೆದ ಅವರು ನಂತರದ ದಿನಗಳಲ್ಲಿ ತಾವು ಮಾಡುತ್ತಿದ್ದ ವ್ಯಾಪಾರದಿಂದ ತಕ್ಕ ಮಟ್ಟಿಗೆ ಸ್ಥಿತಿವಂತರಾಗಿದ್ದರು. ಬೆಂಗಳೂರಿನಂಥ ಮಹಾನಗರದಲ್ಲಿ ಸ್ವಂತಕ್ಕೆ ಮನೆ, ಅಂಗಡಿ, ಪ್ರಕಾಶನ ಸಂಸ್ಥೆ, ಹುಟ್ಟೂರಿನಲ್ಲಿ ತೋಟ ಗದ್ದೆ ಒಂದಿಷ್ಟು ನೌಕರರು ಹೀಗೆ ಬದುಕಿನ ಸಮೃದ್ಧ ಸುಖವನ್ನುಂಡ ಜೀವ ಅವರದು. ಎಲ್ಲೋ ಒಂದು ಕಡೆ ಪುಸ್ತಕ ಪ್ರಕಟಣೆಯಿಂದ ಕೈಸುಟ್ಟು ಕೊಂಡರೂ ಪಠ್ಯ ಪುಸ್ತಕಗಳ ಮಾರಾಟದಿಂದ ಲಾಭ ಅವರ ಕೈಹಿಡಿದಿತ್ತು. ಆದರೆ ಸಮಾಜ ವಿರೋಧಿಯಾಗಿ ಬದುಕುವವರೇ  ಹೆಚ್ಚುತ್ತಿರುವ ಈ ದಿನಗಳಲ್ಲಿ ಸಾತ್ವಿಕವಾಗಿ ಬದುಕುತ್ತಿರುವವರ ಸಂಖ್ಯೆ ಸಮಾಜದಲ್ಲಿ ದಿನದಿಂದ ಕ್ಷೀಣಿಸುತ್ತಿದೆ. ಈ ಒಂದು ಕಾರಣದಿಂದ ಶ್ರೀ ರುದ್ರಪ್ಪನವರ ಸಾತ್ವಿಕ ಮತ್ತು ದೈವ ಭಕ್ತಿಯ ಬದುಕು ಎಲ್ಲರ ಮೆಚ್ಚುಗೆಗೆ ಮತ್ತು ಪ್ರೇರಣೆಗೆ  ಪಾತ್ರವಾಗಿತ್ತು. ಅವರಲ್ಲಿ ನಾನು ಗಮನಿಸಿದ ಇನ್ನೊಂದು ಗುಣವೆಂದರೆ ಅದು ಅವರೊಳಗಿನ ಹಾಸ್ಯ ಪ್ರವೃತ್ತಿ ಮತ್ತು ಜೀವನ ಪ್ರೀತಿ. 

        ಈ ಸಲದ ಯುಗಾದಿ ಹಬ್ಬದಂದು ಧಿಡೀರನೇ ಬಂದ ಮೃತ್ಯು ರುದ್ರಪ್ಪನವರನ್ನು ತನ್ನ ಜೊತೆಗೆ ಕರೆದೊಯ್ಯಿತು. ಅವರಿಗೆ ಸಾಯುವಂಥ ವಯಸ್ಸೆನೂ ಆಗಿರಲಿಲ್ಲ. ಹಾಗೆಂದು ಸಾವನ್ನು ತಪ್ಪಿಸುವುದು ಯಾರ ಕೈಯಲ್ಲೂ ಇಲ್ಲ. ರುದ್ರಪ್ಪನವರ  ಸಾವಿನ ನಂತರ ಅವರ ಮಗಳು ಹೇಮಾ ತಮ್ಮ ತಂದೆಯ ನೆನಪಿಗಾಗಿ  ಹೊರತಂದ ಹೊತ್ತಿಗೆಯೇ ಈ 'ಶಾಂತರುದ್ರ'. ಆ ಪುಟ್ಟ ಹೆಣ್ಣುಮಗಳು ತನ್ನ ತಂದೆಯ ಪರಿಚಿತರನ್ನೆಲ್ಲ ಸಂಪರ್ಕಿಸಿ ಅವರಿಂದ ಲೇಖನ ಪಡೆದು ನಾಡಿನ ಖ್ಯಾತ ಸಂಶೋಧನಾ ತಜ್ಞ  ಪ್ರೊ ಹನ್ನೆರಡುಮಠ ಅವರನ್ನು ಸಂಪಾದಕರನ್ನಾಗಿಸಿ  ಈ ಪುಸ್ತಕವನ್ನು ಅತ್ಯಂತ ಪ್ರೀತಿ ಮತ್ತು ತನ್ನ ತಂದೆಯ ಮೇಲಿನ ಅಭಿಮಾನದಿಂದ ಹೊರತಂದಿರುವರು. ಬದುಕು ರೂಪಿಸಿದ ಅಪ್ಪನಿಗೆ ಇದು ಮಗಳು ನೀಡಿದ ಬಹುಮೂಲ್ಯ ಉಡುಗೊರೆ. ಸತ್ತನಂತರ ಸತ್ತವರ ಹೆಸರಿನಲ್ಲಿ ಹೊಟ್ಟೆ ತುಂಬಿದವರಿಗೆ ಭೂರಿ ಭೋಜನ ಬಡಿಸುವುದು, ಉಳ್ಳವರಿಗೇ ಕಂತೆ ಗಟ್ಟಲೇ ಹಣ ದಾನ ಮಾಡುವುದು, ಪುತ್ಥಳಿ ಪ್ರತಿಷ್ಠಾನ, ಗುಡಿ ಕಟ್ಟುವುದು  ಇಂಥ ಅರ್ಥವಿಲ್ಲದ ಆಚರಣೆಗಳಿಗಿಂತ ತನ್ನ ತಂದೆಯ ನೆನಪುಗಳನ್ನು ಅತ್ಯಂತ ಜತನದಿಂದ ಅಕ್ಷರಗಳಲ್ಲಿ ಕಾಪಿಟ್ಟು  ಮತ್ತು ಅದನ್ನು ತನ್ನ ನಂತರದ ಪೀಳಿಗೆಗೆ  ದಾಟಿಸುವ ಕೆಲಸ ಮಾಡಿದ ಈ ಹೆಣ್ಣು ಮಗಳು ನಿಜಕ್ಕೂ ಸಮಾಜಕ್ಕೆ ಮಾದರಿ.

          ಡಾ ಹೇಮಾ ಅಪ್ಪನ ಕುರಿತು ಪುಸ್ತಕ ಪ್ರಕಟಿಸುವುದರ ಜೊತೆಗೆ ಇಲ್ಲಿ ಒಂದು ಲೇಖನವನ್ನೂ ಬರೆದಿರುವರು. ಲೇಖನ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವನ್ನು ತುಂಬಾ ಆಪ್ತವಾಗಿ ಕಟ್ಟಿಕೊಡುತ್ತದೆ. ಮಗಳು ಹುಟ್ಟಿದಾಗ ಅಪ್ಪನ ಸಂಭ್ರಮ, ಮಗಳ ಬದುಕಿಗೆ ಬೆನ್ನೆಲುಬಾಗಿ ನಿಂತ ಘಳಿಗೆಗಳು, ಮಗಳನ್ನು ಅತ್ಯಂತ ಜತನದಿಂದ ಸಾಕಿ ಬೆಳೆಸಿದ್ದು, ಮಗಳ ಯಶಸ್ಸನ್ನು ಕಂಡು ಆನಂದಿಸಿದ್ದು, ಮದುವೆಯ ವಯಸ್ಸಿಗೆ ಬೆಳೆದು ನಿಂತಾಗ ಮಗಳ ಮನದ ಭಾವನೆಗಳಿಗೆ ಸ್ಪಂದಿಸಿದ್ದು ನಿಜಕ್ಕೂ ಲೇಖನದ ಓದು ಹೃದಯವನ್ನು ತಟ್ಟುತ್ತದೆ. ಅಪ್ಪನ ಬಗ್ಗೆ ಬರೆಯುವಾಗ ಯಾವ ಭಾವಾವೇಶ ಇಲ್ಲವೇ ಅತಿಶಯೋಕ್ತಿಗಳಿಗೆ ಮನಸ್ಸನ್ನು ಒಪ್ಪಿಸದೆ ತೀರ ಸರಳವಾಗಿ ಅಪ್ಪನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದು ಇಲ್ಲಿ ಮೆಚ್ಚುಗೆಯಾಗುವ ಸಂಗತಿಗಳಲ್ಲೊಂದು. ಇದೇ ಮಾತು ಇತರ ಲೇಖನಗಳ ಕುರಿತು ಹೇಳಿದರೆ ಅದು ತಪ್ಪಾಗುತ್ತದೆ. ಕೆಲವು ಬಂಧುಗಳು ರುದ್ರಪ್ಪನವರ ಬಗ್ಗೆ ಬರೆಯುವಾಗ ಒಂದಿಷ್ಟು ಭಾವಾವೇಶಕ್ಕೆ ಒಳಗಾದರೆನೋ ಎನ್ನುವ  ಅನುಮಾನ ವಿಮರ್ಶಾತ್ಮಕ ಓದುಗನ ಅರಿವಿಗೆ ಬರದೆ ಹೋಗುವುದಿಲ್ಲ.

      ರುದ್ರಪ್ಪನವರ ಸಂಸ್ಮರಣ ಗ್ರಂಥವನ್ನು ಓದುತ್ತಿರುವ ಘಳಿಗೆ ನಾನು ಮೆಚ್ಚಿದ ಇನ್ನೊಂದು ಸಂಗತಿ ಅದು ಇಡೀ ಪುಸ್ತಕ ಕೇವಲ ರುದ್ರಪ್ಪನವರನ್ನು ಕೇಂದ್ರೀಕೃತವಾಗಿಟ್ಟುಕೊಳ್ಳದೆ ಅಲ್ಲಿ ರುದ್ರಪ್ರಭೆಯ ಜೊತೆಗೆ ಸಾಹಿತ್ಯ ಪ್ರಭೆ ಮತ್ತು ತತ್ವ ಪ್ರಭೆ ಎನ್ನುವ ಇನ್ನೆರಡು ಭಾಗಗಳಿವೆ. ಸಾಹಿತ್ಯ ಪ್ರಭೆಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಲೇಖನಗಳಿದ್ದು ರಾಷ್ಟ್ರಕವಿ ಕುವೆಂಪು ಅವರ ಪ್ರಕಟಿತ ಲೇಖನವನ್ನು ಇಲ್ಲಿ ಬಳಸಿಕೊಂಡಿದ್ದು ಗಮನಾರ್ಹ ಸಂಗತಿ. ಇದೇ ಭಾಗದಲ್ಲಿರುವ ಭಾರತಿಯವರ 'ಅಪ್ಪ ಎನ್ನುವ ಎರಡನೇ ಅಮ್ಮ' ಲೇಖನ ತನ್ನ ಲವಲವಿಕೆ ಮತ್ತು ಭಾವತೀವ್ರತೆಯಿಂದ ತೀರ ಆಪ್ತವಾಗುತ್ತದೆ. ಇಲ್ಲಿ ಹೇಮಾ ಮತ್ತು ರುದ್ರಪ್ಪನವರ ಬಾಂಧವ್ಯ ಮತ್ತೊಮ್ಮೆ ನೆನಪಾಗುತ್ತದೆ. ತತ್ವ ಪ್ರಭೆ ಭಾಗದಲ್ಲಿ  ಶರಣರ, ದಾಸರ, ಅನುಭಾವಿಗಳ ಕೀರ್ತನೆ ಮತ್ತು ವಚನಗಳಿವೆ.

      ರುದ್ರಪ್ಪನವರ ಬದುಕಿನ ಜೊತೆಗೆ ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಮಜಲುಗಳನ್ನು ಮೆಲುಕು ಹಾಕಲು ಓದಿನ  ಅವಕಾಶ ಮಾಡಿಕೊಡುವ ಈ ಸಂಸ್ಮರಣ ಗ್ರಂಥ ನಿಜಕ್ಕೂ ನಾನು ಓದಿದ ಉತ್ತಮ ಪುಸ್ತಕಗಳಲ್ಲೊಂದು. ಜೊತೆಗೆ ಇಂಥದ್ದೊಂದು ಸಾಂಸ್ಕೃತಿಕ ಮತ್ತು ಸೃಜನಶೀಲ ಕೆಲಸಕ್ಕೆ ರುದ್ರಪ್ಪನವರ ಪುತ್ರಿ ಹೇಮಾ ಅವರು ಕೈಹಾಕಿದ್ದು ಶ್ಲಾಘನೀಯ. ಇಂಥ ಸಾಂಸ್ಕೃತಿಕ ಚಟುವಟಿಕೆಗಳನ್ನು ಕನ್ನಡ ಭಾಷೆಯಲ್ಲಿ ನಾವುಗಳು ಇನ್ನಷ್ಟು ನೋಡುವಂತಾಗಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, July 9, 2014

ದೃಶ್ಯ: ಕುಟುಂಬ ಪ್ರೇಮದ ಕಥಾನಕ

       



                ಬಹಳ ದಿನಗಳ ನಂತರ ಕುಟುಂಬ ಸಮೇತ ಉತ್ತಮ ಸದಭಿರುಚಿಯ ಸಿನಿಮಾವೊಂದನ್ನು ನೋಡುವ ಅವಕಾಶ ಮೊನ್ನೆ ದೊರೆಯಿತು. ರವಿಚಂದ್ರನ್ ಅಭಿನಯದ ಈ 'ದೃಶ್ಯ' ಸಿನಿಮಾ ಮಲೆಯಾಳಂನ 'ದೃಶ್ಯಂ' ಚಿತ್ರದ ರಿಮೇಕ್. ಮೂಲ ಸಿನಿಮಾದಲ್ಲಿ ಮೋಹನ್ ಲಾಲ್ ಮತ್ತು ಮೀನಾ ಅಭಿನಯಿಸಿದ್ದು ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಅನೇಕರು ಆ ಮಲೆಯಾಳಂ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರೂ ನಾನಿರುವ ಊರು ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಅಪರಿಚಿತ ಪ್ರದೇಶವಾಗಿದ್ದರಿಂದ ಅದನ್ನು ನೋಡುವ ಅವಕಾಶ ದೊರೆತಿರಲಿಲ್ಲ. ಈ ಮಲೆಯಾಳಂ ಭಾಷೆಯ ಚಿತ್ರರಂಗದ ಕುರಿತು ಮಾತನಾಡುವಾಗಲೆಲ್ಲ ನನಗೆ ಆ ಭಾಷೆಯ ನೀಲಿ ಸಿನಿಮಾಗಳ ಪೋಸ್ಟರ್ ಗಳೇ ಕಣ್ಮುಂದೆ ಬರುತ್ತವೆ. ಏಕೆಂದರೆ ಆಗೆಲ್ಲ ಮಲೆಯಾಳಂ ಸಿನಿಮಾಗಳೆಂದರೆ ಅಶ್ಲೀಲ ಸಿನಿಮಾಗಳು ಎನ್ನುವ ಮಾತು ಪ್ರಚಲಿತದಲ್ಲಿತ್ತು. ಇದಕ್ಕೆ ಕಾರಣವೂ ಇಲ್ಲದೇ ಇಲ್ಲ ೧೯೮೦-೯೦ ರ ದಶಕದಲ್ಲಿ ಬಹಳಷ್ಟು ಮಲೆಯಾಳಂ ಸಿನಿಮಾಗಳು ಅಶ್ಲೀಲವಾಗಿಯೇ ಇರುತ್ತಿದ್ದವು. ಆದರೆ ಈ ಮೋಹನ ಲಾಲ ಮತ್ತು ಮಮ್ಮುಟ್ಟಿ  ಅವರಂಥ ಪ್ರತಿಭಾನ್ವಿತರ ಆಗಮನದಿಂದ  ಮಲೆಯಾಳಂ ಚಿತ್ರರಂಗ ತನ್ನ ಮೇಲಿನ ಆಪಾದನೆಯನ್ನು ಕಳಚಿಕೊಂಡು ಹೊರಬಂತು. ಈ ಇಬ್ಬರು ನಟರನ್ನು ಅನುಕರಿಸಿ ಅನೇಕ ಯುವ ಪ್ರತಿಭೆಗಳು  ಮಲೆಯಾಳಂ  ಚಿತ್ರರಂಗವನ್ನು ಪ್ರವೇಶಿಸಿದರು. ಹೀಗೆ ಮಲೆಯಾಳಂ ಸಿನಿಮಾರಂಗ ಸಂಪೂರ್ಣವಾಗಿ ಮಗ್ಗುಲು ಬದಲಿಸಿ ಹೊಸದೊಂದು ಬದಲಾವಣೆಗೆ ತನ್ನನ್ನು ತಾನು ತೆರೆದುಕೊಂಡಿತು. ಮೋಹನ್ ಲಾಲ್  ಮತ್ತು ಮಮ್ಮುಟ್ಟಿ ಅದುವರೆಗೂ ಮಲೆಯಾಳಂ ಚಿತ್ರರಂಗದಲ್ಲಿ ಮನೆಮಾಡಿಕೊಂಡಿದ್ದ  ಸಿನಿಮಾ ಕಥಾವಸ್ತುವಿನ ಸಿದ್ಧ ಸೂತ್ರವನ್ನು ಮುರಿದು ಹೊಸ ಬದಲಾವಣೆಗೆ ಕಾರಣರಾದರು. ಇವತ್ತು ಮಲೆಯಾಳಂ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಗೊಳ್ಳುತ್ತಿವೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಈ ಭಾಷೆಯ ಸಿನಿಮಾಗಳಿಗೇ ಸಿಂಹಪಾಲು. ಹೀಗಾಗಿ ಮಲೆಯಾಳಂ ಭಾಷೆಯಿಂದ ಕನ್ನಡಕ್ಕೆ    ಸಿನಿಮಾವೊಂದು ರೀಮೇಕ್ ಆದಾಗ ಸಹಜವಾಗಿಯೇ ಸದಭಿರುಚಿಯ ಪ್ರೇಕ್ಷಕರಿಗೆ ಆ    ಸಿನಿಮಾವನ್ನು ನೋಡಬೇಕೆನ್ನುವ ಕುತೂಹಲ ಮೂಡುತ್ತದೆ. 'ದೃಶ್ಯ' ಸಿನಿಮಾ ವೀಕ್ಷಣೆಗಾಗಿ ಕನ್ನಡದ ಪ್ರೇಕ್ಷಕರು ಕುತೂಹಲದಿಂದಲೇ ಕಾಯುತ್ತಿದ್ದರು. ರೀಮೇಕ್ ಸಿನಿಮಾವೊಂದು ಬಿಡುಗಡೆಯಾಗುವಾಗ ಕೇಳಿ ಬರುವ ಅಪಸ್ವರ ಈ ಸಿನಿಮಾದ ಬಿಡುಗಡೆಯ ಸಂದರ್ಭ ಕೇಳಿಬರದೇ ಇರುವುದಕ್ಕೆ ಮೂಲ ಸಿನಿಮಾದಲ್ಲಿ ಮೋಹನ್ ಲಾಲ್ ಅಭಿನಯವಿತ್ತು ಎನ್ನುವುದು ಒಂದು ಕಾರಣವಾದರೆ ಇನ್ನೊಂದು ಚಿತ್ರದ ಗಟ್ಟಿ ಕಥಾವಸ್ತು.

               ಇನ್ನು ಕನ್ನಡದ ಅವತರಣಿಕೆ 'ದೃಶ್ಯ' ಸಿನಿಮಾದ ವಿಷಯಕ್ಕೆ ಬಂದರೆ ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು  ಹಿಡಿದಿಡುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಅಶ್ಲೀಲ ಸಂಭಾಷಣೆ, ಅನಗತ್ಯ ಹಾಡುಗಳು ಮತ್ತು ಹೊಡೆದಾಟದಿಂದ ಮುಕ್ತವಾದ 'ದೃಶ್ಯ' ನಮ್ಮ ಮನೆಯ ಕಥೆಯೇನೋ ಎನ್ನುವಷ್ಟು ಪ್ರೇಕ್ಷಕನಿಗೆ ಆಪ್ತವಾಗುತ್ತದೆ. ರವಿಚಂದ್ರನ್ ಅಭಿನಯವೇ ಇಲ್ಲಿ ಸಿನಿಮಾದ ಜೀವಾಳ. ಮರಸುತ್ತುವ ಮತ್ತು ಪೋಲಿ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರವಿಚಂದ್ರನ್ ಇಲ್ಲಿ ಮಧ್ಯವಯಸ್ಸಿನ ವ್ಯಕ್ತಿಯ  ಪಾತ್ರದಲ್ಲಿ ಅಭಿನಯಿಸಿರುವರು. ಪತಿಯಾಗಿ ಮತ್ತು ಮಕ್ಕಳ ತಂದೆಯಾಗಿ ಕುಟುಂಬ ಪ್ರೇಮವನ್ನು ಮೆರೆಯುವ ಪಾತ್ರದಲ್ಲಿ ರವಿಚಂದ್ರನ್ ಅವರದು  ಮನೋಜ್ಞ ಅಭಿನಯ. ನಿಜಕ್ಕೂ ರವಿಚಂದ್ರನ್ ಅವರ ವೃತ್ತಿ ಬದುಕಿನ ಹೊಸ ಅಧ್ಯಾಯವಿದು. ಈಗಾಗಲೇ ತರುಣ ಪಾತ್ರಗಳಲ್ಲಿ ಅಭಿನಯಿಸಿ ಸಿನಿಮಾ ಪ್ರಿಯರ ಮನಗೆದ್ದ  ರವಿಚಂದ್ರನ್ ತಮ್ಮ ಹಳೆಯ ಇಮೇಜಿನಿಂದ ಹೊರಬಂದು ವಯಸ್ಸಿಗೆ ಒಪ್ಪುವ ಪಾತ್ರಗಳಲ್ಲಿ ಅಭಿನಯಿಸುವ ಅಗತ್ಯವಿದೆ. ಏಕೆಂದರೆ ರವಿಚಂದ್ರನ್ ಅವರಂಥ ಸಿನಿಮಾಗಳನ್ನೇ ಕುರಿತು ಕನಸು ಕಾಣುವ  ಮತ್ತು ಚಿಂತಿಸುವ ಕಲಾವಿದರು ಪಾತ್ರಗಳ ಏಕತಾನತೆಯ ಮಧ್ಯೆ ಕಳೆದುಹೋಗಬಾರದು. ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುವಾಗಲೆಲ್ಲ ಎಲ್ಲಿ ಈ ಕಲಾವಿದ ಕಳೆದುಹೋಗುತ್ತಾನೋ ಎನ್ನುವ ಭಯ ಕಾಡುತ್ತಿತ್ತು. ಜೊತೆಗೆ ಇಂಥ ಕಲಾವಿದರ ಅಗತ್ಯ ಕನ್ನಡ ಸಿನಿಮಾರಂಗಕ್ಕಿದೆ. 'ಮಾಣಿಕ್ಯ' ಸಿನಿಮಾದ ಒಂದೆರಡು ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ರವಿಚಂದ್ರನ್ ಮಧ್ಯವಯಸ್ಸಿನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದಾಗಲೇ ಈ ನಟನೊಳಗಿನ ಕಲಾವಿದ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಗೊತ್ತಾಗಿತ್ತು. ನನಗೆ 'ದೃಶ್ಯ' ಮಾಣಿಕ್ಯ ಸಿನಿಮಾದಲ್ಲಿ ಕಾಣಿಸಿಕೊಂಡ ರವಿಚಂದ್ರನ್ ಅವರೊಳಗಿನ ಕಲಾವಿದನ ಮನಸ್ಥಿತಿಯ ಮುಂದುವರೆದ ಭಾಗದಂತೆ ಕಾಣಿಸಿತು. ಇನ್ನು ಮುಂದಾದರೂ ರವಿಚಂದ್ರನ್ ಸಿನಿಮಾಗಳ ಆಯ್ಕೆಯಲ್ಲಿ ಎಡವದೇ ಇದ್ದಲ್ಲಿ  ಅವರೊಳಗಿನ ಕಲಾವಿದ ಮತ್ತಷ್ಟು ಪಕ್ವಗೊಳ್ಳುವ ಅವಕಾಶ ನಿಚ್ಚಳವಾಗಿದೆ.

                 'ದೃಶ್ಯ' ಸಿನಿಮಾ ಏಕೆ ಇಷ್ಟವಾಯಿತು ಎನ್ನುವುದಕ್ಕೆ ಹಲವು ಕಾರಣಗಳಿವೆ. ಸಿನಿಮಾದ ಗಟ್ಟಿ ಕಥಾವಸ್ತು, ಕಥೆಯಲ್ಲಿ ಕಾಯ್ದುಕೊಂಡ ಸಸ್ಪೆನ್ಸ್, ಕಲಾವಿದರ ಅಭಿನಯ, ಇಂಪಾದ ಸಂಗೀತ, ಸುಂದರ ಛಾಯಾಗ್ರಹಣ ಈ ಎಲ್ಲವುಗಳ ಪರಿಣಾಮ ಸಿನಿಮಾ ನೋಡುಗನಿಗೆ ಆಪ್ತವಾಗುತ್ತದೆ. ಮಲೆನಾಡಿನ ಸೆರಗಿನಲ್ಲಿರುವ ಆ ಪುಟ್ಟ ಊರಿನಲ್ಲಿರುವ ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪ ಇಡೀ ಊರಿಗೇ ಬೇಕಾದ ವ್ಯಕ್ತಿ. ಎಲ್ಲರೂ ಮೆಚ್ಚುವ ಸನ್ನಡತೆ ಅವನದು. ನಾಲ್ಕೆಕರೆ ಹೊಲವನ್ನೂ  ಹೊಂದಿರುವ ರಾಜೇಂದ್ರನದು ಪತ್ನಿ ಸೀತಾ ಮತ್ತು ಮಕ್ಕಳಾದ ಶ್ರೇಯಾ, ಸಿಂಧು ಅವರೊಟ್ಟಿಗೆ ಅತ್ಯಂತ ಪ್ರೀತಿ ನಲ್ಮೆಯಿಂದ ಬಾಳುತ್ತಿರುವ ಕುಟುಂಬ. ಅವನ ಕುಟುಂಬದಲ್ಲಿ ಪ್ರೀತಿಯ ಒರತೆಗೆ ಕೊರತೆಯಿರಲಿಲ್ಲ. ಶ್ರೀಮಂತಿಕೆಗೆ ಅಲ್ಲಿ ಬಡತನವಿದ್ದರೂ ಪ್ರೀತಿ ಪ್ರೇಮಕ್ಕೆ ಬಡತನವಿರಲಿಲ್ಲ. ಅನಾಥನಾದ ರಾಜೇಂದ್ರ ಪೊನ್ನಪ್ಪ ಬದುಕಿನಲ್ಲಿ ಬಡತನದ ಕಹಿ ಅನುಭವಿಸಿದವನು. ಆ ಬಡತನದ ಬಿಸಿ  ತನ್ನ ಮಕ್ಕಳಿಗೆ ತಾಗದಿರಲೆಂದೇ ಗಳಿಸಿದ ಹಣವನ್ನು ಮಿತವಾಗಿ ಖರ್ಚುಮಾಡುವ ಆತ ಮನೆಯವರಿಂದ ಜಿಪುಣ ಎನ್ನುವ ಗೌರವಕ್ಕೂ ಪಾತ್ರನಾಗಿರುವನು. ಇಂಥ ರಾಜೇಂದ್ರನಿಗೆ ವಿಪರಿತ ಸಿನಿಮಾ ಹುಚ್ಚು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾಗಳನ್ನು ನೋಡುತ್ತಲೇ ತನ್ನ ಅನುಭವದ ಜಗತ್ತನ್ನು ಹಿಗ್ಗಿಸಿಕೊಂಡವನು. ಕೇವಲ ನಾಲ್ಕನೇ  ಕ್ಲಾಸು ಪಾಸಾಗಿದ್ದರೂ ಸಿನಿಮಾ ವೀಕ್ಷಣೆಯಿಂದ ದೊರೆತ ಅನುಭವದಿಂದಲೇ ಆತ ಊರಿನವರ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಜಾಣ. ಅದೇ ಊರಿನ ಪೋಲಿಸ್ ಸ್ಟೇಷನ್ ನಲ್ಲಿ ಪೋಲಿಸ್ ಕಾನಸ್ಟೆಬಲ್ ಆಗಿರುವ ಸೂರ್ಯ ಪ್ರಕಾಶನಿಗೆ ರಾಜೇಂದ್ರ ಪೊನ್ನಪ್ಪನನ್ನು ಕಂಡರಾಗದು. ಬೇರೆಯವರ ಹಣಕ್ಕೆ ಆಸೆಪಡುವ ಮತ್ತು ಸದಾಕಾಲ ಅವ್ಯವಹಾರದಲ್ಲೇ ಮುಳುಗಿರುವ ಸೂರ್ಯ ಪ್ರಕಾಶನದು ರಾಜೇಂದ್ರನಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ರಾಜೇಂದ್ರ ಸಹ ಅನೇಕ ಸಂದರ್ಭಗಳನ್ನು ಬಳಸಿಕೊಂಡು ಸೂರ್ಯ ಪ್ರಕಾಶನನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಾನೆ. ಇಂಥ ಅನೇಕ ಸಂದರ್ಭಗಳಲ್ಲಿ ಹೋಟೆಲ್ ಯಜಮಾನ, ಹಿರಿಯ ಪೋಲಿಸ್ ಪೇದೆ, ಬಿಕ್ಷುಕ ರಾಜೇಂದ್ರನ ನೆರವಿಗೆ ಬರುತ್ತಾರೆ. ಆದರೆ ಸೂರ್ಯ ಪ್ರಕಾಶ ಈ ಯಾವ ಪ್ರಯತ್ನಗಳಿಗೂ ಬದಲಾಗುವುದಿಲ್ಲ. ಮಧ್ಯಂತರದವರೆಗೂ ಸಿನಿಮಾ ತನ್ನ ಲವಲವಿಕೆ ಮತ್ತು ಹಾಸ್ಯ ಸನ್ನಿವೇಶಗಳಿಂದ ಒಂದು ಕ್ಷಣವೂ ಬೋರಾಗದಂತೆ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತದೆ. ಒಂದು ಕಥೆಯ ಕೇಳು ಮಗಳೇ ಹಾಡು ರಾಜೇಂದ್ರನ  ಸಂಸಾರದ ಒಟ್ಟು ಆಪ್ತತೆ ಮತ್ತು ಪ್ರೀತಿಯನ್ನು ನೋಡುಗರಿಗೆ ಕಟ್ಟಿಕೊಡುತ್ತದೆ. 'ಮನೆಯಲ್ಲಿ ದೇವರ ಕೋಣೆ ಇರುವಂತೆ ಟಾಯ್ಲೆಟ್ಟೂ ಇರುತ್ತೆ' ಎನ್ನುವಂಥ ಗಟ್ಟಿ  ಸಂಭಾಷಣೆ ಅಲ್ಲಲ್ಲಿ ಕೇಳಿ ಬರುತ್ತದೆ.

                   ಸಿನಿಮಾದ ಕಥೆ   ಮತ್ತು ರಾಜೇಂದ್ರ ಪೊನ್ನಪ್ಪನ ಬದುಕಿಗೆ ಒಂದು ಅನಿರೀಕ್ಷಿತ ತಿರುವು ಸಿಗುವುದೇ ಮಧ್ಯಂತರದ ನಂತರ. ಚಿತ್ರದ ಮೊದಲರ್ಧ ನೋಡುಗರಿಗೆ ಮನೋರಂಜನೆಯ ರಸದೌತಣ   ನೀಡಿದರೆ ಚಿತ್ರದ ಉಳಿದರ್ಧ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತ ಸಾಗುತ್ತದೆ. ಕಥೆಯ ಬಿಗಿಯಾದ ನಿರೂಪಣೆಯಿಂದ ಪ್ರೇಕ್ಷಕ ಮುಂದೆನಾಗುವುದು ಎನ್ನುವ ಕುತೂಹಲದಿಂದ ಸಿನಿಮಾದ ಕಥೆಯೊಳಗೆ ತಾನೊಂದು ಪಾತ್ರವಾಗುತ್ತಾನೆ. ಕಾನ್ವೆಂಟ್ ಶಾಲೆಯೊಂದರಲ್ಲಿ ಓದುತ್ತಿರುವ ರಾಜೇಂದ್ರನ ಮೊದಲ  ಮಗಳು ಶ್ರೇಯಾ ಅಪ್ಪನನ್ನು ಒಪ್ಪಿಸಿ ಎರಡು ದಿನಗಳ  ಕ್ಯಾಂಪ್ ನಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಾಳೆ. ಕ್ಯಾಂಪಿನಿಂದ ಮನೆಗೆ ಮರಳಿ ಬರುವ ಶ್ರೇಯಾಳ ಹಿಂದೆಯೇ ಅವಳಿಗೆ ಗೊತ್ತಿಲ್ಲದಂತೆ ಬಹುದೊಡ್ಡ ಸಮಸ್ಯೆಯೊಂದು ರಾಜೇಂದ್ರನ ಮನೆಯೊಳಗೆ ಕಾಲಿಡುತ್ತದೆ. ಕ್ಯಾಂಪಿನಲ್ಲಿ ಇವಳನ್ನು ನೋಡಿದ ಐಜಿ ರೂಪಾ ಚಂದ್ರಶೇಖರ ಮಗ ತರುಣ ಚಂದ್ರ ಶ್ರೇಯಾಳ ನಗ್ನ ಚಿತ್ರವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾನೆ. ಶ್ರೇಯಾಳ ಹಿಂದೆಯೇ ಊರಿಗೆ ಬರುವ ತರುಣಚಂದ್ರ ನಗ್ನ ಫೋಟೋ ತೋರಿಸಿ ತನ್ನ ದೈಹಿಕ ಕಾಮನೆಯನ್ನು ತೀರಿಸುವಂತೆ ಪೀಡಿಸತೊಡಗುತ್ತಾನೆ. ತನ್ನ ಮಾತಿಗೆ ಒಪ್ಪದೇ ಹೋದರೆ ಅವಳ ಫೋಟೋವನ್ನು ಇಂಟರ್ ನೆಟ್ ನಲ್ಲಿ ಹಾಕುವುದಾಗಿ ಹೆದರಿಸುತ್ತಾನೆ. ಅದುವರೆಗೂ ತಂದೆ ತಾಯಿಯ ಮಮತೆ ಮತ್ತು ಪ್ರೀತಿಯ ಲೋಕವನ್ನಷ್ಟೇ ನೋಡಿದ್ದವಳಿಗೆ ಬದುಕಿನ ಇನ್ನೊಂದು ಮುಖದ ದರ್ಶನವಾಗುತ್ತದೆ. ಒಂದೆಡೆ ಮಮತೆಯನ್ನೇ ಧಾರೆಯೇರೆಯುತ್ತಿರುವ ಪ್ರೀತಿಯ ಅಪ್ಪ ಅಮ್ಮ ಇನ್ನೊಂದೆಡೆ ದೈಹಿಕ ಕಾಮನೆಯಿಂದ ಹಪಹಪಿಸುತ್ತಿರುವ ಮೃಗ. ಆ ಎಳೆಯ ಮನಸ್ಸು ಸಂಕಷ್ಟದಲ್ಲಿ ಹೊಯ್ದಾಡುತ್ತದೆ. ಅಮ್ಮನ ಮನಸ್ಸು ತನ್ನ ಎಳೆಯ ಕಂದನ ಸಂಕಟವನ್ನು ಅರ್ಥ ಮಾಡಿಕೊಳ್ಳುತ್ತದೆ. ಒಂದು ರಾತ್ರಿ ತಾಯಿ ಮಗಳು ಮನೆಯ ಪಕ್ಕದ ತೋಟದಲ್ಲಿ ತರುಣಚಂದ್ರನನ್ನು ಭೇಟಿ ಮಾಡಿ ತೊಂದರೆ ಕೊಡದಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಕಾಮದ ವಾಂಛೆ ಅವನನ್ನು ಉನ್ಮತ್ತನಾಗಿಸುತ್ತದೆ. ಅವನೊಳಗಿನ ಕಾಮದ ಉನ್ಮತ್ತತೆ ಮಗಳೊಂದಿಗೆ ತಾಯಿಯನ್ನೂ  ಬಯಸುತ್ತದೆ. ತಾಯಿಯನ್ನು ಕಾಮಾಂಧನಿಂದ ಕಾಪಾಡಲು ಶ್ರೇಯಾ ಕಬ್ಬಿಣದ ಸಲಾಕೆಯಿಂದ ತರುಣಚಂದ್ರನ ತಲೆಗೆ ಹೊಡೆಯುತ್ತಾಳೆ. ನೆಲಕ್ಕುರಿಳಿದ ದೇಹದಿಂದ ಪ್ರಾಣಪಕ್ಷಿ ಹಾರಿಹೋಗುತ್ತದೆ. ತಾಯಿ ಮಗಳಿಬ್ಬರೂ ಆದ ಆಘಾತದಿಂದ ಹೊರಬರುವಷ್ಟರಲ್ಲಿ ಅಲ್ಲೊಂದು ಕೊಲೆ ನಡೆದು   ಹೋಗಿರುತ್ತದೆ. ಶವವನ್ನು ತೋಟದಲ್ಲಿ  ಮುಚ್ಚಿಡುವುದನ್ನು ರಾಜೇಂದ್ರನ ಸಣ್ಣ ಮಗಳು ಸಿಂಧು ನೋಡುತ್ತಾಳೆ.

                      ಬೆಳೆಗ್ಗೆ ಮನೆಗೆ ಬಂದ ರಾಜೇಂದ್ರನಿಗೆ ವಿಷಯ ತಿಳಿಯುತ್ತದೆ. ತನ್ನ ಕುಟುಂಬವೇ ತನ್ನ ಪ್ರೇಮಲೋಕವೆಂದು ಭಾವಿಸಿದ್ದ ರಾಜೇಂದ್ರ ಈ ಕೊಲೆಯ ಪ್ರಕರಣವನ್ನು  ರಹಸ್ಯವಾಗಿಟ್ಟು ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಾನೆ. ಅದಕ್ಕಾಗಿ ಕೊಲೆಯಾದ ದಿನ ಮತ್ತು ಅದರ ಮಾರನೆ ದಿನ ತಾವು ಊರಿನಲ್ಲೇ ಇರಲಿಲ್ಲ ಎನ್ನುವ ಕಥೆ ಹೆಣೆದು ಎಲ್ಲರನ್ನೂ ನಂಬಿಸುತ್ತಾನೆ. ಕೊಲೆಯಾದ ಮಾರನೆ ದಿನ ತರುಣ  ಚಂದ್ರನ ಕಾರನ್ನು ರಾಜೇಂದ್ರ ಬೇರೆಡೆ ಸ್ಥಳಾಂತರಿಸುವಾಗ ಅನಿರೀಕ್ಷಿತವಾಗಿ ಅವನನ್ನು ನೋಡುವ ಸೂರ್ಯ ಪ್ರಕಾಶನಿಗೆ ಅನುಮಾನ ಬರುತ್ತದೆ. ಇದೇ ಸಂದರ್ಭ ಐಜಿ ಗೀತಾ ತನ್ನ ಮಗ ಕಾಣೆಯಾಗಿರುವ ಕುರಿತು ತನಿಖೆಗೆ ಆದೇಶಿಸುತ್ತಾಳೆ. ತರುಣ ಚಂದ್ರ ಕಾಣೆಯಾದ ದಿನ ಅವನು ರಾಜೇಂದ್ರನ ಊರಿನಿಂದ ಕರೆಮಾಡಿದ್ದು ದೃಢಪಡುತ್ತದೆ. ಹಳದಿ ಬಣ್ಣದ ಕಾರಿನಲ್ಲಿ ತಾನು ರಾಜೇಂದ್ರನನ್ನು ನೋಡಿದ್ದಾಗಿ ಸೂರ್ಯ ಪ್ರಕಾಶ ಹೇಳುತ್ತಾನೆ. ಜೊತೆಗೆ ರಾಜೇಂದ್ರನ ಮಗಳು ಶ್ರೇಯಾ ತರುಣ ಚಂದ್ರ ಭಾಗವಹಿಸಿದ್ದ ಕ್ಯಾಂಪಿಗೆ ಬಂದಿದ್ದಳು ಎನ್ನುವ ಸಂಗತಿ ಬಯಲಾಗುತ್ತದೆ. ಈ ಎಲ್ಲ ಸಂಗತಿಗಳು  ರಾಜೇಂದ್ರ ಪೊನ್ನಪ್ಪನೆ ತರುಣ ಚಂದ್ರ ಕಾಣೆಯಾಗಿರುವುದಕ್ಕೆ ಕಾರಣ ಎನ್ನುವ ಅನುಮಾನವನ್ನು ಹುಟ್ಟು ಹಾಕುತ್ತವೆ. ರಾಜೇಂದ್ರನ ಕುಟುಂಬದವರನ್ನು  ಕರೆದು ಎಲ್ಲರನ್ನು  ಪ್ರಶ್ನಿಸಿದರೂ  ಸತ್ಯ ಹೊರಬರುವುದಿಲ್ಲ. ರಾಜೇಂದ್ರ ತನ್ನ ಚಾಣಾಕ್ಷತೆಯಿಂದ ಪೋಲೀಸರ ಎಲ್ಲ ಪ್ರಯತ್ನಗಳನ್ನು ನಿರರ್ಥಕಗೊಳಿಸುತ್ತಾನೆ. ತರುಣ ಚಂದ್ರ ಕಾಣೆಯಾದ ಹಾಗೂ ಆ ಊರಿನಲ್ಲಿ ಕಾಣಿಸಿಕೊಂಡ ದಿನ ರಾಜೇಂದ್ರ ಕುಟುಂಬ ಸಮೇತ ನಂಜನಗೂಡಿಗೆ ಭೇಟಿ ನೀಡಿದ್ದನೆಂದು ಊರಿನವರು ಸಾಕ್ಷಿ ನುಡಿಯುತ್ತಾರೆ. ನಂಜನಗೂಡಿನ ಲಾಡ್ಜ್ ಮ್ಯಾನೇಜರ್, ಹೋಟೆಲ್ ಮಾಲೀಕ ಮತ್ತು ಸಿನಿಮಾ ಮಂದಿರದ ಪ್ರೋಜೆಕ್ಸನ್ ಟೆಕ್ನಿಷಿಯನ್ ಕೂಡ ಸಾಕ್ಷಿಗೆ ದನಿ ಗೂಡಿಸುತ್ತಾರೆ. ಐಜಿ ಗೀತಾಳಿಗೆ ತನಿಖೆ ದಾರಿತಪ್ಪುತ್ತಿರುವುದು ಗೊತ್ತಾಗುತ್ತದೆ. ಇಡೀ ಕುಟುಂಬವನ್ನೇ ಹಿಂಸಿಸಿದಾಗ ಹೆದರಿದ ರಾಜೇಂದ್ರನ ಕೊನೆಯ ಮಗಳು ಸತ್ಯವನ್ನು ಬಾಯಿಬಿಡುತ್ತಾಳೆ. ಪೋಲಿಸ್ ಇಲಾಖೆಗೆ ಸತ್ಯವನ್ನು ಶೋಧಿಸಿದ ಸಂತಸವಾದರೆ ಸೂರ್ಯ ಪ್ರಕಾಶನದು  ರಾಜೇಂದ್ರನ ಮೇಲೆ ಸೇಡು ತೀರಿಸಿಕೊಂಡ ಪ್ರತಿಕಾರದ ಭಾವ. ಇಡೀ ಊರಿಗೆ ಊರೇ ರಾಜೇಂದ್ರನ ಮನೆಯನ್ನು ಸುತ್ತುವರೆದು ನಿಂತಿದೆ. ಸುದ್ದಿ ವಾಹಿನಿಗಳು ಕೊಲೆಯ ತನಿಖಾ ಸುದ್ದಿಯನ್ನು ಬಿತ್ತರಿಸಲು ಕಾತರಿಸುತ್ತಿವೆ.  ತರುಣ ಚಂದ್ರನ ತಂದೆ ತಾಯಿ ಮಗನ ಶವವನ್ನು ಕಾಣಲು ಮೈಯೆಲ್ಲ ಕಣ್ಣಾಗಿ ಕಾದು ಕುಳಿತಿರುವರು. ಸಿನಿಮಾವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರದೂ ಅತ್ಯಂತ ಕುತೂಹಲದ ಭಾವ. ಇನ್ನೇನು ಸತ್ಯ ಹೊರಬರಲಿದೆ ಎನ್ನುವಷ್ಟರಲ್ಲಿ ಗುಂಡಿಯಿಂದ ಹೊರತೆಗೆದ ಶವ ಮನುಷ್ಯನದಾಗಿರದೆ ಅದೊಂದು ದನದ ದೇಹವಾಗಿರುತ್ತದೆ. ಸುತ್ತುವರಿದ ಸುದ್ದಿವಾಹಿನಿಗಳ ಕಡೆ ಮಗಳೊಂದಿಗೆ ತೆರಳುವ ರಾಜೇಂದ್ರ ಪೋಲೀಸರ ಹಿಂಸೆಯನ್ನು ತಾಳದೆ ಮಗಳು ಸುಳ್ಳು ಹೇಳಿರುವುದಾಗಿ ಅವರನ್ನೆಲ ನಂಬಿಸುತ್ತಾನೆ. ಐಜಿ ಗೀತಾ ರಾಜಿನಾಮೆ ನೀಡುತ್ತಾಳೆ. ಪೋಲಿಸ್ ಕಾನಸ್ಟೆಬಲ್ ಸೂರ್ಯ ಪ್ರಕಾಶನನ್ನು ನೌಕರಿಯಿಂದ ವಜಾ ಗೊಳಿಸಲಾಗುತ್ತದೆ. ರಾಜೇಂದ್ರನ ಕುಟುಂಬ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತದೆ. ಹಾಗಾದರೆ ರಾಜೇಂದ್ರ ಆ ಶವವನ್ನು ಏನು ಮಾಡಿದ? ಇದು ಚಿತ್ರದ ಕ್ಲೈಮಾಕ್ಸ್.

                     ರವಿಚಂದ್ರನ್, ನವ್ಯ ನಾಯರ್, ಅಚ್ಯುತ್ ಕುಮಾರ, ಶಿವರಾಂ, ಜೈಜಗದೀಶ್, ಶ್ರೀನಿವಾಸ ಮೂರ್ತಿ, ಸುಚೇಂದ್ರ ಪ್ರಸಾದ, ಸಾಧು ಕೋಕಿಲರಂಥ ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದೆ. ದುಷ್ಟ ಪೋಲಿಸ್ ಪೇದೆ  ಪಾತ್ರದಲ್ಲಿ ನಟ ಅಚ್ಯುತ್ ಕುಮಾರ  ತಮ್ಮ ಅಭಿನಯದ  ಛಾಪು ಮೂಡಿಸಿದ್ದಾರೆ. ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಸುಚೇಂದ್ರ ಪ್ರಸಾದ ಪಾತ್ರಕ್ಕೆ ನ್ಯಾಯ ಒದಗಿಸಿರುವರು. ತಮಿಳಿನ ಶಿವಾಜಿ ಪ್ರಭು ತರುಣ ಚಂದ್ರನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿನಯಕ್ಕೆ ಹೆಚ್ಚಿನ ಅವಕಾಶವಿಲ್ಲ. ಐಜಿ ಪಾತ್ರದಲ್ಲಿ ನಟಿಸಿರುವ ಆಶಾ ಶರತ್ ಅವರ ನಟನೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಆದರೆ ಇಡೀ ಚಿತ್ರವನ್ನು ಆವರಿಸಿರುವುದು  ರವಿಚಂದ್ರನ್ ಅವರ ಅಭಿನಯ. ರವಿಚಂದ್ರನ್ ಅವರಿಗೆ ತಮ್ಮ ಸಿನಿಮಾ ಬದುಕಿನ ಬೆಳವಣಿಗೆ ಮತ್ತು ಬದಲಾವಣೆಗೆ   ಈ ಸಿನಿಮಾ ಅಗತ್ಯವಾದಷ್ಟೇ ಆ ಪಾತ್ರಕ್ಕೂ ರವಿಚಂದ್ರನ್ ಅಗತ್ಯವಿತ್ತು.

                  ಪಿ. ವಾಸು ನಿರ್ದೇಶನದಲ್ಲಿ ಬೆಳ್ಳಿತೆರೆಯ ಮೇಲೆ   'ದೃಶ್ಯ' ಸುಂದರವಾಗಿ ಮೂಡಿ ಬಂದಿದೆ. ನನಗೆ ಗೊತ್ತಿರುವಂತೆ  ಪಿ. ವಾಸು ಅನ್ಯ ಭಾಷಾ ನಿರ್ದೆಶಕರಾದರೂ ಅವರು ಕನ್ನಡಕ್ಕೆ   'ಆಪ್ತಮಿತ್ರ'ದಂಥ ಉತ್ತಮ ಸಿನಿಮಾಗಳನ್ನು ಕೊಟ್ಟಿರುವರು. ಮಧು ನೀಲಕಂಠನ್ ಅವರ ಕ್ಯಾಮೆರಾ ಮಲೆನಾಡನ್ನು ಸುಂದರವಾಗಿ ಸೆರೆ ಹಿಡಿದಿದೆ. ಇಳಿಯರಾಜಾರ  ಸಂಗೀತ ಸಿನಿಮಾದ ಹೈಲೆಟ್ ಎನಿಸಿದರೂ ಹಾಡುಗಳಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಸಿನಿಮಾದ ಓಟಕ್ಕೆ ಹೆಚ್ಚು ಹಾಡುಗಳ  ಅಗತ್ಯವೂ ಇರಲಿಲ್ಲ. ಎಸ್. ರಮೇಶರ ಸಂಭಾಷಣೆ ಆಗಾಗ ಮೆಲುಕು ಹಾಕುವಂತಿದೆ. ನಾಗೇಂದ್ರ ಪ್ರಸಾದರ ಗೀತ ರಚನೆಯಲ್ಲಿ ಮೂಡಿ ಬಂದಿರುವ ಎರಡು ಹಾಡುಗಳಲ್ಲಿ ಒಂದು ಕಥೆಯ ಕೇಳು ಮಗಳೇ ಹಾಡು ಗುನುಗುವಂತಿದೆ.

              'ದೃಶ್ಯ' ಸಿನಿಮಾ ನೋಡಿದ  ನಂತರ ನನ್ನನ್ನು ಕಾಡಿದ ಸಂಗತಿ ಎಂದರೆ ನೆರೆಯ ಮಲೆಯಾಳಂ ನಂಥ ಸಣ್ಣ ಸಿನಿಮಾ ಉದ್ಯಮದಲ್ಲಿ  ಸಾಧ್ಯವಾಗುತ್ತಿರುವ ಪ್ರಯೋಗಶೀಲತೆ ನಮ್ಮ ಕನ್ನಡ ಚಿತ್ರರಂಗದಲ್ಲೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದು. ಒಂದು ಕಾಲದಲ್ಲಿ ನೀಲಿ ಸಿನಿಮಾಗಳ ನಿರ್ಮಾಣದಿಂದ ನಲುಗಿ ಹೋಗಿದ್ದ ಮಲೆಯಾಳಂ ಚಿತ್ರರಂಗ ಇಂದು ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯಾಗುತ್ತಿದೆ. ಅನೇಕ ಪ್ರಯೋಗಶೀಲ ನಿರ್ದೇಶಕರು ಅಲ್ಲಿ ಕೆಲಸ ಮಾಡುತ್ತಿರುವರು. ಕಲಾತ್ಮಕತೆಯನ್ನೂ ಕಮರ್ಷಿಯಲ್ ಆಗಿ ತೋರಿಸುವ ಜಾಣ್ಮೆ ಈ ಮಲೆಯಾಳಿ ನಿರ್ದೇಶಕರು  ಮತ್ತು ಕಲಾವಿದರಿಗೆ ಸಿದ್ಧಿಸಿದೆ. ನೂರು ವರ್ಷಗಳ ಇತಿಹಾಸವಿರುವ ಮತ್ತು ಅನೇಕ ಪ್ರತಿಭಾವಂತ ನಿರ್ದೇಶಕರು ಮತ್ತು ಕಲಾವಿದರು ಕೂಡಿ ರೂಪಿಸಿದ ಕನ್ನಡ ಚಿತ್ರರಂಗದಲ್ಲಿ ಇವತ್ತು ಪ್ರಯೋಗಶೀಲತೆ ಎನ್ನುವುದು ಮರೀಚಿಕೆಯಾಗಿದೆ. ತಮಿಳು ತೆಲುಗು ಸಿನಿಮಾಗಳಿಂದ ಕಥೆಯನ್ನು ಕದ್ದು  ತಂದು ಸಿನಿಮಾಗಳನ್ನು ನಿರ್ಮಿಸುತ್ತಿರುವ ಪರಂಪರೆ ಇಲ್ಲಿ ಬೆಳೆಯುತ್ತಿದೆ. ಜನಪ್ರಿಯ ಕಲಾವಿದರು ಇನ್ನೂ ಮರಸುತ್ತುವ ಪಾತ್ರಗಳಿಗೆ ತಮ್ಮ ನಟನೆಯನ್ನು ಸೀಮಿತಗೊಳಿಸಿಕೊಂಡಿರುವರು. ಈ ಪರಂಪರೆ ಹೀಗೆ ಮುಂದುವರೆದಲ್ಲಿ ಕನ್ನಡ ಚಿತ್ರರಂಗ ಮುಂದೊಂದು ದಿನ  ಹಳೆ ಬಾಟ್ಲಿ, ತುಂಬಾ ನೋಡ್ಬೇಡಿ, ಜಿಂಗಡಾ ಬಂಗಡಾದಂಥ ಸಾಹಿತ್ಯದ ನಡುವೆ ಕಳೆದು ಹೋಗಬಹುದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ