Saturday, January 30, 2021

ಸತ್ಯಯುಗದಿಂದ ಕಲಿಯುಗಕ್ಕೆ ಸಿನಿಮಾದ ರೂಪಾಂತರ

 

        ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿ  ಸಾವಿಗಾಗಿ ಉತ್ತರಾಯಣ ಕಾಲವನ್ನು ನಿರೀಕ್ಷಿಸುತ್ತಿದ್ದ ಭೀಷ್ಮ ಯುಗಧರ್ಮದ ಕುರಿತು ಯುಧಿಷ್ಠಿರನಿಗೆ ಹೀಗೆ ಉಪದೇಶಿಸುತ್ತಾನೆ ‘ಅಧರ್ಮ ಎನ್ನುವುದು ಅಸ್ತಿತ್ವದಲ್ಲಿಯೇ ಇರದ ಕಾಲ ಸತ್ಯಯುಗ ಎನಿಸಿಕೊಳ್ಳುತ್ತದೆ. ನಾಲ್ಕರಲ್ಲಿ ಒಂದು ಪಾಲಿನಷ್ಟು ಧರ್ಮ ಖಿಲವಾಗಿ ಅದರ ಜಾಗದಲ್ಲಿ ಅಧರ್ಮವು ನೆಲೆಸಿದಾಗ ಆ ಕಾಲವು ತ್ರೇತಾಯುಗವೆನಿಸಿಕೊಳ್ಳುವುದು. ಅರ್ಧಾಂಶ ಮಾತ್ರ ಧರ್ಮವಿದ್ದು ಉಳಿದರ್ಧ ಅಧರ್ಮದಿಂದ ತುಂಬಿಹೋಗಿರುವ ಕಾಲವು ದ್ವಾಪರಯುಗ. ಎಲ್ಲೆಲ್ಲಿಯೂ ಅಧರ್ಮವೇ ತಾಂಡವವಾಡುತ್ತಿದ್ದು ಧರ್ಮವು ಹೇಳಹೆಸರಿಲ್ಲದಂತಾದಾಗ ಆ ಕಾಲವು ಕಲಿಯುಗ ಎನಿಸಿಕೊಳ್ಳುವುದು’. ಡ್ರಗ್ಸ್ ಮಾರಾಟಜಾಲದ ಪ್ರಕರಣದಲ್ಲಿ ಸಿನಿಮಾ ನಟ ನಟಿಯರ ಹೆಸರುಗಳು ಕೇಳಿಬರುತ್ತಿರುವ ಈ ಸಂದರ್ಭ ಭೀಷ್ಮನ ಉಪದೇಶದ ಮಾತುಗಳನ್ನು ಸಿನಿಮಾರಂಗಕ್ಕೂ ಅನ್ವಯಿಸಿ ನೋಡಬೇಕಾದ ತುರ್ತು ಎದುರಾಗಿದೆ.

        ಒಂದುಕಾಲದಲ್ಲಿ ಸೃಜನಶೀಲ ಮಾಧ್ಯಮವೆಂದೇ ಗುರುತಿಸಲ್ಪಟ್ಟಿದ್ದ ಸಿನಿಮಾ ಮಾಧ್ಯಮ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿತ್ತು. ಕುಟುಂಬ ಪ್ರೇಮದ ಕಥಾನಕದ ಸಿನಿಮಾಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಆಗೆಲ್ಲ ಸಿನಿಮಾ ಎನ್ನುವುದು ಸಿದ್ಧ ಸೂತ್ರದಲ್ಲೇ ಅಂದರೆ ಕೌಟುಂಬಿಕ ಕಥೆ, ನಾಲ್ಕು ಹಾಡುಗಳು, ಎರಡು ಹೊಡೆದಾಟಗಳು, ಪ್ರತ್ಯೇಕ ಟ್ರ್ಯಾಕ್‍ನಲ್ಲಿ ಸಾಗುವ ಹಾಸ್ಯ ಇದೇ ಮಾದರಿಯಲ್ಲಿ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೂ ಅಲ್ಲೊಂದು ನೀತಿಯಿತ್ತು. ಕಲಾವಿದರು ಕೂಡ ಒಂದು ಮೌಲಿಕ ಬದುಕನ್ನು ಬದುಕುತ್ತಿದ್ದರು. ಸಿನಿಮಾವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕ ಸಿನಿಮಾದ ಕಥೆ ತನ್ನದೇ ಮನೆಯ ಕಥೆ ಎನ್ನುವಂತೆ ತಲ್ಲಿನನಾಗುತ್ತಿದ್ದ. ಕುಟುಂಬದ ಸದಸ್ಯರೆಲ್ಲರೂ ಯಾವ ಮುಜುಗರಕ್ಕೊಳಗಾಗದೆ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದವು. ಇವತ್ತಿಗೂ ರಾಮ, ಕೃಷ್ಣ, ಅರ್ಜುನ ನಮಗೆ ಕಾಣಿಸಿಕೊಳ್ಳುವುದು ರಾಜಕುಮಾರ ನಿರ್ವಹಿಸಿದ ಪಾತ್ರಗಳ ಮೂಲಕವೇ. ಪ್ರತಿಯೊಬ್ಬ ತಾಯಿ ತನಗೆ ರಾಜಕುಮಾರನಂಥ ಮಗನಿರಲೆಂದು ಮತ್ತು ಪ್ರತಿಹೆಣ್ಣುಮಗಳು ರಾಜಕುಮಾರನಂಥ ಸಹೋದರನಿರಲೆಂದು ಆಶಿಸುತ್ತಿದ್ದಳು. ಒಟ್ಟಾರೆ ಸಿನಿಮಾ ಜನರ ಬದುಕಿನ ಭಾಗವಾಗಿತ್ತು. ಸಿನಿಮಾದ ಕಲಾವಿದರು ಕೇವಲ ಬಣ್ಣಹಚ್ಚಿ ಅಭಿನಯಿಸುವ ಪಾತ್ರಗಳಾಗಿರಲಿಲ್ಲ ಅವರು ಆದರ್ಶವಾಗಿದ್ದರು ಮತ್ತು ಅನುಕರಣೀಯರಾಗಿದ್ದರು. 

        ಹಿಂದೆಲ್ಲ ಸಿನಿಮಾ ಮೇಲಿನ ಪ್ರೀತಿಗಾಗಿ ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರಿದ್ದರು. ಅದೇರೀತಿ ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು ಕೂಡ ಕಲೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದಲೇ ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಬಾಲಕೃಷ್ಣರಂಥ ಕಲಾವಿದ ತಮ್ಮ ಬದುಕಿನ ಬಹುಭಾಗವನ್ನು ಬಡತನದಲ್ಲೇ ಕಳೆದರೂ ಅವರೆಂದೂ ಅಭಿಮಾನ ಸ್ಟುಡಿಯೋ ಮಾರಲು ಮುಂದಾಗಲಿಲ್ಲ. ರಾಜಕುಮಾರ ತಮ್ಮ 150 ಸಿನಿಮಾಗಳ ಅಭಿನಯದ ನಂತರ ಆರ್ಥಿಕವಾಗಿ ಚೇತರಿಸಿಕೊಂಡರು. ಆದರೆ 1990 ರ ದಶಕದ ಸಂದರ್ಭ ಸಿನಿಮಾ ಮಾಧ್ಯಮ ಹೊಸ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡಿತು. ವಿವಿಧ ಉದ್ಯಮಗಳಲ್ಲಿ ಹಣತೊಡಗಿಸಿ ಲಾಭದ ರುಚಿ ಸವಿದವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. ಸಿನಿಮಾ ಕೂಡ ಬೇರೆ ಕ್ಷೇತ್ರಗಳಂತೆ ಬಂಡವಾಳ ಹೂಡುವ ಕ್ಷೇತ್ರವಾಗಿ ಬದಲಾಯಿತು. ಒಟ್ಟಾರೆ ಈ ಬಂಡವಾಳದಾರರು ಸಿನಿಮಾವನ್ನು ಮಾಧ್ಯಮದಿಂದ ಉದ್ಯಮವಾಗಿ ರೂಪಾಂತರಿಸಿದರು. ವರ್ಷದಿಂದ ವರ್ಷಕ್ಕೆ ಸಿನಿಮಾಗಳ ನಿರ್ಮಾಣದ ಸಂಖ್ಯೆಯಲ್ಲಿ ಏರುಗತಿ ಕಾಣಿಸತೊಡಗಿತು. ಕಲಾವಿದರ ಸಂಭಾವನೆಯಲ್ಲೂ ಸಾಕಷ್ಟು ಪ್ರಗತಿ ಗೋಚರಿಸಿತು. ಕ್ರಮೇಣ ಸಿನಿಮಾರಂಗದ ಥಳಕು ಬಳುಕಿಗೆ ಮಾರುಹೋಗಿ ಸಿನಿಮಾದಲ್ಲಿ ಅಭಿನಯಿಸುವ ಆಸೆಯಿಂದ ಮಾಧ್ಯಮವನ್ನು ಪ್ರವೇಶಿಸುವರ ಸಂಖ್ಯೆಯೂ ಹೆಚ್ಚತೊಡಗಿತು.   

        ಜಾಗತೀಕರಣವು ಸಿನಿಮಾ ಮಧ್ಯಮದಲ್ಲಿ ಮತ್ತಷ್ಟು ಬದಲಾವಣೆಗಳನ್ನು ತಂದಿತು. ಈ ಮೊದಲು ಸೀಮಿತ ಮಾರುಕಟ್ಟೆ ಹೊಂದಿದ್ದ ಸಿನಿಮಾ ಜಾಗತೀಕರಣದ ಪ್ರಭಾವದಿಂದ ತನ್ನ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿಕೊಂಡಿತು. ಇವತ್ತು ಕನ್ನಡ ಸಿನಿಮಾಗಳು ಅಮೆರಿಕಾ, ಇಂಗ್ಲೆಂಡ್, ಜಪಾನ್ ದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಇದು ನೇರವಾಗಿ ಸಿನಿಮಾ ಕಲಾವಿದರ ಮೇಲೆ ಪರಿಣಾಮ ಬೀರಿತು. ಸಣ್ಣ ಪ್ರೇಕ್ಷಕ ವರ್ಗಕ್ಕೆ ಸೀಮಿತಗೊಂಡಿದ್ದ ನಟ ನಟಿಯರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರೇಕ್ಷಕ ವರ್ಗ ಪ್ರಾಪ್ತವಾದ ಕಾರಣ ಅವರ ಜನಪ್ರಿಯತೆಯೂ ಹೆಚ್ಚಿತು. ಸಿನಿಮಾ ನಟ ನಟಿಯರ ಈ ಜನಪ್ರಿಯತೆಯನ್ನು ಅನೇಕ ಉದ್ಯಮಗಳು ತಮ್ಮ ಉತ್ಪಾದನಾ ವಸ್ತುಗಳ ಮಾರಾಟದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾರಂಭಿಸಿದವು. ಒಂದು ಮೂಲದ ಪ್ರಕಾರ ಸಿನಿಮಾದ ಸಂಭಾವನೆಗಿಂತ ಜಾಹೀರಾತುಗಳಲ್ಲಿನ ಅಭಿನಯದಿಂದಲೇ ಕಲಾವಿದರಿಗೆ ಹೆಚ್ಚಿನ ಆದಾಯವಾಗುತ್ತಿದೆ. ಚುನಾವಣಾ ಸಂದರ್ಭದಲ್ಲೂ ವಿವಿಧ ರಾಜಕೀಯ ಪಕ್ಷಗಳು ಸಿನಿಮಾ ನಟ ನಟಿಯರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳುವುದುಂಟು. ಹೀಗೆ ಧೀಡಿರನೇ ಪ್ರಾಪ್ತವಾಗುತ್ತಿರುವ ಜನಪ್ರಿಯತೆ ಮತ್ತು ಸಂಭಾವನೆ ರೂಪದಲ್ಲಿ ದೊರೆಯುತ್ತಿರುವ ಆರ್ಥಿಕ ಲಾಭ ಸಿನಿಮಾ ಕಲಾವಿದರನ್ನು ಉನ್ಮತ್ತಗೊಳಿಸಿದೆ. ಇದು ಅಪರೋಕ್ಷವಾಗಿ ಸಿನಿಮಾ ರಂಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ. 

        ಉಳಿದೆಲ್ಲ ಮಾಧ್ಯಮಗಳಿಗಿಂತ ಸಿನಿಮಾ ಮಾಧ್ಯಮ ತುಂಬ ಆಕರ್ಷಣೀಯವಾದ ಮಾಧ್ಯಮ. ಇದು ಯುವ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಸಿನಿಮಾದ ಸಂದೇಶವನ್ನು ಯುವ ಪ್ರೇಕ್ಷಕ ವರ್ಗ ಸರಿ ತಪ್ಪುಗಳ ನಿರ್ಣಯವಿಲ್ಲದೆ ಒಪ್ಪಿಕೊಳ್ಳುತ್ತಿದೆ. ಸಿನಿಮಾದ ಪ್ರಭಾವದಿಂದಾಗಿ ಮಚ್ಚ, ಪೊರ್ಕಿ, ಫಿಗರ್ ದಂಥ  ಪದಗಳು ಕಾಲೇಜು ಆವರಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿವೆ. ‘ಚಿಗುರಿದ ಕನಸು’ವಿನ ಶಂಕರನಲ್ಲಿ ತನ್ನನ್ನು ಕಂಡುಕೊಳ್ಳುವ ಪ್ರೇಕ್ಷಕ ‘ಮೆಂಟಲ್ ಮಂಜ’ದ ಮಂಜನಲ್ಲೂ ತನ್ನನ್ನು ಹುಡುಕಿಕೊಳ್ಳುತ್ತಾನೆ. ಇದು ಇವತ್ತಿನ ಸಿನಿಮಾದ ನಿಜವಾದ ದುರಂತ. ಪ್ರೇಕ್ಷಕರ ಈ ಮನೋಭಾವವನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಸಿನಿಮಾ ಮಾಧ್ಯಮ ಇಲ್ಲಿ ನಾಯಕ ನಟನನ್ನು ಸಕಲಕಲಾವಲ್ಲಭನಂತೆ ತೋರಿಸಲು ಅವನಿಂದ ಹಾಡು ಹಾಡಿಸುತ್ತದೆ, ನೃತ್ಯ ಮಾಡಿಸುತ್ತದೆ, ಕೈಯಲ್ಲಿ ಮಚ್ಚು ಕೊಟ್ಟು ಸಾಲು ಸಾಲು ಕೊಲೆಗಳನ್ನು ಮಾಡಿಸುತ್ತದೆ. ಸಿನಿಮಾದ ವಿಚಾರ ಸಂಕಿರಣದಲ್ಲಿ ಶಾಲಾ ಬಾಲಕ ಸಿನಿಮಾ ನೋಡಿದಾಗ ಕೈಯಲ್ಲಿ ಮಚ್ಚು ಬಂದೂಕು ಹಿಡಿಯಬೇಕೆನಿಸುತ್ತದೆ ಏಕೆ ಎಂದು ಕೇಳಿದ ಪ್ರಶ್ನೆಗೆ ವೇದಿಕೆಯಲ್ಲಿದ್ದ ಘಟಾನುಘಟಿಗಳು ಉತ್ತರಿಸಲು ತಡವರಿಸಬೇಕಾಯಿತು. 

ಇಂದು ಸಿನಿಮಾ ನಿರ್ಮಾಣದಲ್ಲಿ ಒಂದು ಬೌದ್ಧಿಕ ಶಿಸ್ತಿಲ್ಲ. ಹಣಗಳಿಕೆ ಸಿನಿಮಾದ ಮೂಲ ಉದ್ದೇಶವಾಗಿರುವಾಗ ಮತ್ತು ಶ್ರಮಿಕ ವರ್ಗದ ಅನಕ್ಷರಸ್ಥ ಪ್ರೇಕ್ಷಕರು ಸಿನಿಮಾದ ಜನಪ್ರಿಯತೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವಾಗ ಸಿನಿಮಾ ಮಾಧ್ಯಮವನ್ನು ಬೌದ್ಧಿಕ ಶಿಸ್ತಿಗೆ ಒಳಪಡಿಸುವುದು ಅಸಾಧ್ಯದ ಸಂಗತಿ. ಸದಭಿರುಚಿಯ ಪ್ರೇಕ್ಷಕ ವರ್ಗ ಸಿನಿಮಾ ವೀಕ್ಷಣೆಯಿಂದ ದೂರಸರಿದಿರುವುದು ಇನ್ನೊಂದು ಪ್ರಮುಖವಾದ ಕಾರಣ. ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣವನ್ನು ಒಂದು ಬೌದ್ಧಿಕ ಶಿಸ್ತಿಗೆ ಒಳಪಡಿಸಿ ಕಲಾತ್ಮಕ ಎನ್ನುವ ಮಾದರಿಯ ಹೊಸ ಅಲೆಯ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆಯಾದರೂ ಇಂಥ ಸಿನಿಮಾಗಳನ್ನು ಅದೆಷ್ಟು ಪ್ರೇಕ್ಷಕರು ವೀಕ್ಷಿಸಿ ಯಶಸ್ವಿಗೊಳಿಸುತ್ತಿರುವರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಸದಾಕಾಲ ಮೇನ್‍ಸ್ಟ್ರೀಮ್‍ನಲ್ಲಿ ಕಾಣಿಸಿಕೊಳ್ಳಲು ಆ ಮೂಲಕ ಹಣ ಮತ್ತು ಜನಪ್ರಿಯತೆಗಾಗಿ ಹಂಬಲಿಸುತ್ತಿರುವ ಬಹಳಷ್ಟು ಸಿನಿಮಾ ಕಲಾವಿದರು ಈ ಹೊಸ ಅಲೆಯ ಸಿನಿಮಾಗಳಲ್ಲಿ ಅಭಿನಯಿಸಲು ಮುಂದೆ ಬರುತ್ತಿಲ್ಲ. 

ಸಿನಿಮಾ ನಟ ನಟಿಯರ ಜನಪ್ರಿಯತೆಯನ್ನು ಡ್ರಗ್ಸ್ ಮಾರಾಟದ ಜಾಲ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಸಿನಿಮಾಗಳಲ್ಲಿ ನೀತಿ, ಧರ್ಮದ ಸಂಭಾಷಣೆಗಳನ್ನು ಉರುಹೊಡೆದು ಪ್ರೇಕ್ಷಕರಿಗೊಪ್ಪಿಸುವ ಇವರು ಅದೇ ಪ್ರೇಕ್ಷಕರಿಗೆ ಮಾದಕ ದ್ರವ್ಯಗಳನ್ನು ನೀಡುತ್ತಿರುವರು. ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಮಹತ್ವದ ಜವಾಬ್ದಾರಿ ಸಿನಿಮಾ ಮಧ್ಯಮದ ಮೇಲಿದೆ. ಆದರೆ ಮಾದಕ ದ್ರವ್ಯಗಳ ವ್ಯಸನಿಗಳು ಮತ್ತು ಮಾರಾಟಗಾರರಾಗಿರುವ ಇಂಥ ಕಲಾವಿದರಿಂದ ಆ ಜವಾಬ್ದಾರಿಯನ್ನು ನಿರೀಕ್ಷಿಸುವುದಾದರೂ ಹೇಗೆ? ಇಂಥ ಸಂಕ್ರಮಣ ಕಾಲದಲ್ಲಿ ರಾಜಕುಮಾರ ನೆನಪಾಗುತ್ತಾರೆ. ರಾಜಕುಮಾರ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳುಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಇಂಥ ಮಹಾನ್ ಕಲಾವಿದರ ಬದುಕು ನಮ್ಮ ಇಂದಿನ ಯುವ ಕಲಾವಿದರಿಗೆ ಮಾದರಿಯಾಗಬೇಕು.   

-ರಾಜಕುಮಾರ ಕುಲಕರ್ಣಿ