Saturday, May 2, 2020

ಸಾವಿಲ್ಲದ ಮನೆಯ ಸಾಸಿವೆ (ಕಥೆ)

     





(ಕಥೆ ಮೇ-೨೦೨೦ ರ 'ಮಯೂರ' ದಲ್ಲಿ ಪ್ರಕಟವಾಗಿದೆ) 


       ಬಿ.ಡಿ.ಶರ್ಮಾ, ಗೋವಿಂದರಾವ್ ದೇಶಮುಖ, ಸುಕುಮಾರನ್ ಡಿಸೋಜಾ ಮತ್ತು ನಾನು ಎಲ್ಲರೂ ಒಂದೇ ಕಾಲೋನಿಯ ನಿವಾಸಿಗಳು. ಹಾಗೆಂದು ನಮ್ಮ ಮನೆಗಳೇನು ಒಂದಕ್ಕೊಂದು ಹತ್ತಿರದಲ್ಲಿಲ್ಲ. ಆದರೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ವಾಕಿಂಗ್ ಹೋಗುವಾಗ ನಾವೆಲ್ಲ ಜೊತೆಯಾಗಿಯೇ ಹೋಗುವುದು ಬಹಳ ದಿನಗಳಿಂದ ರೂಢಿಸಿಕೊಂಡುಬಂದ ಪದ್ಧತಿಯಾಗಿದೆ. ಖಚಿತವಾಗಿ ಇಂತಹ ದಿನದಂದು ನಮ್ಮ ನಡುವೆ ಪರಿಚಯ ಅಥವಾ ಸ್ನೇಹ ಆರಂಭಗೊಂಡಿತು ಎಂದು ಹೇಳುವುದು ಅಸಾಧ್ಯದ ಸಂಗತಿಯಾದರೂ ಕಳೆದ ಹತ್ತು ವರ್ಷಗಳಿಂದ ನಾವು ಪರಸ್ಪರ ಪರಿಚಿತರು ಎನ್ನುವುದನ್ನು ನಿಖರವಾಗಿ ಹೇಳಬಹುದೇನೋ. ನಾವೇನೂ ಒಂದೇ ಕಚೇರಿಯಲ್ಲಿ ಕೂಡಿ ಕೆಲಸ ಮಾಡುವವರೇನಲ್ಲ. ನಾನು ಪಿ.ಡಬ್ಲ್ಯು.ಡಿನಲ್ಲಿ ನೌಕರನಾದರೆ ಶರ್ಮಾ ಎಲ್.ಐ.ಸಿನಲ್ಲಿ, ದೇಶಮುಖ ಕಾಲೇಜ್ ಲೆಕ್ಚರರ್ ಮತ್ತು ಡಿಸೋಜಾ ಬ್ಯಾಂಕ್ ಮ್ಯಾನೇಜರ್ ಹೀಗೆ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗಿಗಳಾಗಿದ್ದೇವೆ. ವಿಭಿನ್ನ ವೃತ್ತಿಯ ಮನೋಧರ್ಮದವರಾಗಿದ್ದರೂ ಕೂಡ ನಮ್ಮ ಅಭಿರುಚಿ ಹಾಗೂ ಆಸಕ್ತಿಗಳಲ್ಲಿ ಸಾಕಷ್ಟು ಸಾಮ್ಯತೆ ಇರುವುದರಿಂದಲೇ ಕಳೆದ ಹತ್ತುವರ್ಷಗಳ ನಮ್ಮ ಸ್ನೇಹದ ನಡುವೆ ಯಾವ ಬಿರುಕು ಕಾಣಿಸಿಕೊಂಡಿಲ್ಲ. ಅಚ್ಚರಿಯ ವಿಷಯವೆಂದರೆ ಈ ಹತ್ತು ವರ್ಷಗಳಲ್ಲಿ ನಾವು ಪರಸ್ಪರರ ಮನೆಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲದಿರುವುದು ಮತ್ತು ಆ ಕುರಿತು ಅದೊಂದು ವಿಚಿತ್ರ ಸಂಗತಿ ಎನ್ನುವಂತೆ ಒಮ್ಮೆಯೂ ನಾವು ಮಾತನಾಡಿಕೊಂಡಿಲ್ಲದಿರುವುದು. ಹಾಗೆ ಭೇಟಿ ನೀಡುವ ಕಾರಣ ಕೂಡಿ ಬರದೆ ಇರುವುದಕ್ಕೆ ನಮ್ಮ ನಮ್ಮ ವೃತ್ತಿ ಬೇರೆಯಾಗಿರುವುದು ಒಂದು ಕಾರಣವಾದರೆ ಇನ್ನೊಂದು ನಮ್ಮ ಜಾತಿ ಮತ್ತು ಸಂಪ್ರದಾಯಗಳ ಹಿನ್ನೆಲೆಯೂ ಬೇರೆ ಬೇರೆಯಾಗಿರುವುದೂ ಕಾರಣವಾಗಿರಬಹುದೆಂದು ನಾನು ಅನೇಕ ಸಲ ಯೋಚಿಸಿದ್ದೇನೆ. ಭೌಗೋಳಿಕವಾಗಿಯೂ ನಾವು ವಿಭಿನ್ನ ಪ್ರದೇಶಗಳಿಂದ ಬಂದದ್ದು ಮತ್ತೊಂದು ಮಹತ್ವದ ಕಾರಣವಾಗಿರಬೇಕು. ಶರ್ಮಾ ಉತ್ತರ ಭಾರತದವನಾದರೆ, ದೇಶಮುಖ ಮಹಾರಾಷ್ಟ್ರದವನು, ಡಿಸೋಜಾ ಗೋವಾ ರಾಜ್ಯದ ಮೂಲೆಯ ಹಳ್ಳಿಯೊಂದರಿಂದ ಬಂದಿದ್ದ ಮತ್ತು ನಾನು ಕರ್ನಾಟಕದವನು. ನಮ್ಮೆಲ್ಲರ ನಡುವೆ ಇದ್ದಿರಬಹುದಾದ ಒಂದೇ ಸಾಮ್ಯತೆ ಎಂದರೆ ಸಧ್ಯ ನಾವೆಲ್ಲ ವಾಸಿಸುತ್ತಿರುವುದು ಕರ್ನಾಟಕದಲ್ಲಿ ಮತ್ತು ನಾಲ್ವರಿಗೂ ಕನ್ನಡ ಭಾಷೆ ಓದಲು ಹಾಗೂ ಬರೆಯಲು ಬರುತ್ತದೆನ್ನುವ ಸಂಗತಿ. ಒಂದರ್ಥದಲ್ಲಿ ಭಾಷೆಯೇ ನಮ್ಮ ನಾಲ್ವರನ್ನು ಒಂದು ಸೇರಿಸಿದೆಯೆಂದು ಹೇಳಬಹುದು. ನಂತರ ನಮ್ಮ ನಮ್ಮ ಆಸಕ್ತಿ ಮತ್ತು ಅಭಿರುಚಿ ಒಂದೇರೀತಿ ಇರುವುದು ತಿಳಿದು ನಮ್ಮ ನಡುವಣ ಅನ್ಯೋನ್ಯತೆ ಮತ್ತಷ್ಟು ಗಾಢವಾಗಲು ಕಾರಣವಾಯಿತು.

     ಕಳೆದ ಹದಿನೈದು ದಿನಗಳಿಂದ ಶರ್ಮಾ ನಮ್ಮ ದಿನನಿತ್ಯದ ಬೆಳಗ್ಗೆ ಮತ್ತು ಸಾಯಂಕಾಲದ ವಾಕಿಂಗ್‍ನಲ್ಲಿ  ನಮ್ಮೊಂದಿಗೆ ಕಾಣಿಸಿಕೊಳ್ಳದಿರುವುದು ಬೇರೆಯವರಲ್ಲಿ ಚರ್ಚೆಯ ಮುಖ್ಯ ವಿಷಯವಾಗಿದೆ ಎಂದು ನಮಗೆ ಗೊತ್ತಾದದ್ದು ಮೊನ್ನೆ ಪಾರ್ಕ್‍ನಲ್ಲಿ ಸುಮಾರು ವಯಸ್ಸಾದ ಯಜಮಾನರೊಬ್ಬರು ನಮ್ಮನ್ನು ಕರೆದು ಆ ಕುರಿತು ಮಾತನಾಡಿಸಿದಾಗ. ಶರ್ಮಾನ ಅನುಪಸ್ಥಿತಿ ಹೀಗೆ ನಮ್ಮ ಎರಡು ಹೊತ್ತಿನ ವಾಯುವಿಹಾರದ ಪರಿಸರದಲ್ಲಿ ನಮಗೆ ಗೊತ್ತಿಲ್ಲದೆ ಚರ್ಚೆಗೆ ಒಳಗಾದ ವಿಷಯವಾಗಿದೆ ಎನ್ನುವುದೇ ನಮ್ಮ ಗುಂಪಿನಲ್ಲಿ ಪುಳಕಕ್ಕೆ ಕಾರಣವಾಗಿತ್ತು. ನಮ್ಮ ನಾಲ್ವರಲ್ಲಿ ಸ್ವಲ್ಪ ಹೆಚ್ಚು ಮಾತನಾಡುವವನೆಂದರೆ ಅದು ಶರ್ಮಾ ಮಾತ್ರ. ತಾನು ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಅತೀ ರಂಜಕವಾಗಿ ಶರ್ಮಾ ಬಣ್ಣಿಸುವಾಗಲೆಲ್ಲ ನಾವು ಏನನ್ನೂ ಮಾತನಾಡದೆ ಕೇವಲ ಕೇಳುಗರಾಗುತ್ತಿದ್ದೇವು. ಹಾಗೆಂದು ಶರ್ಮಾ ನಮ್ಮನ್ನು ಮೆಚ್ಚಿಸಬೇಕೆಂದು ಮಾತನಾಡುತ್ತಿರಲಿಲ್ಲ. ಅವನು ಹೇಳುವ ಸಂಗತಿಗಳಲ್ಲಿ ಬಹುಮಟ್ಟಿಗೆ ಸತ್ಯಾಂಶವಿರುತ್ತಿತ್ತು. ಪರಿವಾರದೊಂದಿಗೆ ಉತ್ತರ ಭಾರತದ ತನ್ನೂರಿಗೆ ಹೋಗಿರುವ ಶರ್ಮಾ ಈ ವಾಯುವಿಹಾರದ ಸ್ನೇಹಿತರ ಬಳಗಕ್ಕೆ ಹೇಳಬೇಕಾದ ಯಾವುದಾದರೊಂದು ಬಹುಮುಖ್ಯವಾದ ವಿಷಯವನ್ನು ಮರಳಿ ಬರುವಾಗ ತನ್ನೊಂದಿಗೆ ತಂದೇ ತರುತ್ತಾನೆ ಎನ್ನುವ ವಿಶ್ವಾಸ ನಮ್ಮ ಗುಂಪಿನ ಮೂರೂ ಜನರಲ್ಲಿತ್ತು.

 ಹದಿನೈದು ದಿನಗಳ ನಂತರ ಇವತ್ತು ನಮ್ಮೊಂದಿಗೆ ವಾಕಿಂಗ್ ದಾರಿಯಲ್ಲಿ ಜೊತೆಯಾದ ಶರ್ಮಾನ ಮುಖವೇ ನಮ್ಮೊಂದಿಗೆ ಅವನು ಬಹಳಷ್ಟು ಹೇಳಲಿಕ್ಕಿದೆ ಎನ್ನುವುದನ್ನು ಬಿಂಬಿಸುತ್ತಿತ್ತು. ನಾವುಗಳು ಕೂಡ ಅವನ ಮಾತುಗಳನ್ನು ಕೇಳಲು ಕಾತರರಾಗಿದ್ದೇವು. ರೂಢಿಯಂತೆ ಈ ದಿನ ಪಾರ್ಕ್‍ನತ್ತ ಹೆಜ್ಜೆ ಹಾಕದೆ ಶರ್ಮಾನ ಸಲಹೆ ಮೇರೆಗೆ ಊರ ಹೊರಗಿನ ಗುಡ್ಡದ ಕಡೆ ನಡೆಯತೊಡಗಿದೇವು. ದಿನನಿತ್ಯದ ನಡಿಗೆಯ ಮಾರ್ಗವನ್ನು ಬದಲಾಯಿಸಿದಾಗಲೇ ಶರ್ಮಾ ಯಾವುದೋ ಗಹನವಾದ ವಿಷಯವನ್ನು ನಮ್ಮೊಂದಿಗೆ ಮಾತನಾಡಲು ಬಯಸುತ್ತಿರುವನೆಂದು ನಮಗೆಲ್ಲ ಆ ಕ್ಷಣ ಅನ್ನಿಸಿ ಸಹಜವಾಗಿಯೇ ಅವನ ಮಾತುಗಳನ್ನು ಕೇಳಬೇಕೆನ್ನುವ ನಮ್ಮೊಳಗಿನ ಕುತೂಹಲ ಇಮ್ಮಡಿಸಿತು. ಬೆಟ್ಟ ಹತ್ತಿ ಮಧ್ಯದಲ್ಲಿರುವ ಗಿಡದ ಕೆಳಗೆ ಕುಳಿತದ್ದೆ ಶರ್ಮಾ ಮಾತಿಗೆ ಶುರುವಿಟ್ಟುಕೊಂಡ. ‘ಮೊನ್ನೆ ನನ್ನೂರಿಗೆ ಹೋದಾಗ ವಿಚಿತ್ರ ಸಂಗತಿಯೊಂದು ಕೇಳಿದೆ. ಕೇಳಿದೆ ಅನ್ನುವುದಕ್ಕಿಂತ ಅಂಥದ್ದೊಂದು ಘಟನೆಗೆ ಸಾಕ್ಷಿಯಾದ ಮನುಷ್ಯನನ್ನು ಮುಖತ: ಭೇಟಿ ಮಾಡಿದೆ ಅನ್ನಬಹುದೇನೋ. ನಾನು ಕೇಳಿದ ಸಂಗತಿ ನನಗೆ ಎಷ್ಟು ಆಶ್ಚರ್ಯವನ್ನುಂಟು ಮಾಡಿದೆಯೋ ಅಷ್ಟೇ ಆಶ್ಚರ್ಯ ಕೇಳಿದ ನಂತರ ನಿಮಗೂ ಆಗಲಿದೆ ಎನ್ನುವ ವಿಶ್ವಾಸ ನನಗಿದೆ. ನನ್ನಲ್ಲಿ ಆಶ್ಚರ್ಯಕ್ಕೆ ಕಾರಣನಾದ ಆ ಮನುಷ್ಯನ ಹೆಸರು ಬ್ರಹ್ಮದತ್ತ ಎಂದು. ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಎನ್ನುವುದಕ್ಕಿಂತ ಆ ಬ್ರಹ್ಮದತ್ತನೇ ನಿಮ್ಮೆದುರು ಕುಳಿತು ಹೇಳುತ್ತಿದ್ದಾನೆ ಎಂದು ನೀವು ಭಾವಿಸಿಕೊಳ್ಳಿ. ಓವರ್ ಟು ಬ್ರಹ್ಮದತ್ತ’ ಎಂದು ಹೇಳಿ ಪರಕಾಯ ಪ್ರವೇಶ ಮಾಡಿದವನಂತೆ ಶರ್ಮಾ ಹೇಳಲಾರಂಭಿಸಿದ.
● ● ●
 ಬ್ರಹ್ಮದತ್ತ ಉತ್ತರ ಭಾರತದ ಒಂದು ಹಳ್ಳಿಯವನು. ಸಾವಿಲ್ಲದ ಮನೆಯ ಸಾಸಿವೆಕಾಳು ತೆಗೆದುಕೊಂಡು ಬಾ ಎಂದು ಬುದ್ಧನಿಂದ ಉಪದೇಶ ಪಡೆದ ಕಿಸಾ ಗೌತಮಿಯ ಮನೆತನದ ಕುಡಿ ತಾನು ಎನ್ನುವ ಹೆಮ್ಮೆ ಅವನದು. ಇದಕ್ಕೆ ಪೂರಕವಾಗಿ ಅವನ ಪೂರ್ವಜರು ಸಂಗ್ರಹಿಸಿಟ್ಟ ದಾಖಲೆಗಳು ಬ್ರಹ್ಮದತ್ತನ ಬಳಿ ಇರುವುದರಿಂದ ಅವನು ಹೇಳುವ ಮಾತನ್ನು ಸುಳ್ಳು ಎನ್ನುವ ನಿರ್ಣಯಕ್ಕೆ ಬರುವುದಾಗಲಿ ಮತ್ತು ಹಾಗೆ ಹೇಳಿಕೊಳ್ಳುವುದರಿಂದ ಬ್ರಹ್ಮದತ್ತನಿಗೆ ಯಾವುದೇ ಲಾಭವಿಲ್ಲ ಎನ್ನುವುದಾಗಲಿ ಅವನನ್ನು ಬಲ್ಲವರೆಲ್ಲರಿಗೂ ಗೊತ್ತಿದೆ. ಬ್ರಹ್ಮದತ್ತ ತನ್ನ ಉನ್ನತ ಶಿಕ್ಷಣವನ್ನು ಬೆಂಗಳೂರಿನ ಪ್ರತಿಷ್ಠಿತ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಪೂರೈಸಿ ಮುಂದೆ ಕರ್ನಾಟಕದಲ್ಲೇ ನೌಕರಿಗೆ ಆಯ್ಕೆಯಾಗಿ ಇಲ್ಲೇ ನೆಲೆ ನಿಂತ. ಕಿಸಾ ಗೌತಮಿಯ ವಂಶಕ್ಕೆ ಸೇರಿದವರು ಸಾವಿಲ್ಲದ ಮನೆಯನ್ನು ಹುಡುಕುವ ತಮ್ಮ ಪ್ರಯತ್ನವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಬರುತ್ತಿರುವರೆಂದು ಈ ಮಾತನ್ನು ಬ್ರಹ್ಮದತ್ತ ತನ್ನ ಸಹೋದ್ಯೋಗಿಗಳೆದುರು ಆಗಾಗ ಹೇಳುವಾಗ ಅವರೆಲ್ಲ ಇವನಿಗೆಲ್ಲೊ ತಲೆಕೆಟ್ಟಿರಬೇಕೆಂದು ಅವನ ಹಿಂದೆ ಮುಸಿ ಮುಸಿ ನಗುತ್ತಿದ್ದರಂತೆ. ಹಾಗೆಂದು ಅವನೇನೂ ಹೇಳಿಕೊಳ್ಳುವುದನ್ನು ಬಿಟ್ಟಿರಲಿಲ್ಲ. ಬುದ್ಧನಿಂದ ಸಾವು ಅನಿವಾರ್ಯ ಎನ್ನುವ ಜ್ಞಾನೋದಯ ಕಿಸಾಗೌತಮಿಗಾಗಿದ್ದರೂ ಮನುಷ್ಯ ಸಹಜ ದೌರ್ಬಲ್ಯಗಳನ್ನು ದಾಟಲು ಅವಳ ಮುಂದಿನ ಪೀಳಿಗೆಗೆ ಸಾಧ್ಯವಾಗಿರಲಿಲ್ಲವೇನೋ. ಕಿಸಾ ಗೌತಮಿಯ ಗಂಡ ಮತ್ತು ಮೈದುನರು ಕೂಡ ಸಾವಿಲ್ಲದ ಮನೆಯನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿ ಯಶ ಕಾಣದೆ ಸಾವನ್ನಪ್ಪಿದರಂತೆ. ಮುಂದೆ ಆ ಕೆಲಸವನ್ನು ಅವರ ಮಕ್ಕಳು ನಂತರ ಮೊಮ್ಮಕ್ಕಳು ಆಮೇಲೆ ಮರಿಮೊಮ್ಮಕ್ಕಳು ಅದೊಂದು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದು ಆ ಪ್ರಯತ್ನ ಬ್ರಹ್ಮದತ್ತನ ಕಾಲದವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಬ್ರಹ್ಮದತ್ತ ಕೂಡ ಸಾವಿಲ್ಲದ ಮನೆಯನ್ನು ಹುಡುಕಲು ಸಾಕಷ್ಟು ಪ್ರಯತ್ನಿಸುತ್ತಿರುವಾಗಲೇ ಇಂಟರ್‍ನೆಟ್‍ನಲ್ಲಿ ಅವನಿಗೆ ಅಂಥದ್ದೊಂದು ಮನೆಯೇನು ಊರೇ ಇರುವುದಾಗಿ ಮಾಹಿತಿ ದೊರೆತು ಅವನು ಪುಳುಕಿತನಾದ. ಆ ಊರು ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡಿನಲ್ಲಿರುವ ಸಂಗತಿ ಅವನನ್ನು ಮತ್ತಷ್ಟು ರೋಮಾಂಚನಗೊಳಿಸಿತು. ತನ್ನ ಪೂರ್ವಜರ ಆಸೆಯನ್ನು ಪೂರೈಸುವ ಅವಕಾಶ ಇಲ್ಲೆ ಹತ್ತಿರದಲ್ಲಿದೆ ಎಂದು ಮತ್ತು ಅದು ತನ್ನಿಂದ ಪೂರ್ಣಗೊಳ್ಳುತ್ತಿದೆಯೆಂದು ಬ್ರಹ್ಮದತ್ತ ಸಂಭ್ರಮಿಸಿದ. ಆ ಒಂದು ಖುಷಿಯಲ್ಲಿ ತನ್ನ ಕೆಲಸಕ್ಕೆ ಹದಿನೈದು ದಿನಗಳ ರಜೆ ಪಡೆದು ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಅಡಗಿ ಕುಳಿತಿದ್ದ ಆ ಸಾವನ್ನೆ ಕಾಣದ ಊರನ್ನು ಹುಡುಕಿ ಹೊರಟ.  
● ● ●
ಬ್ರಹ್ಮದತ್ತ ಬಸ್ಸಿನಿಂದಿಳಿದಾಗ ಅದೇ ಆಗ ಸೂರ್ಯ ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ಅಸ್ತಮಿಸುತ್ತಿದ್ದ. ಬಸ್ಸಿನ ನಿರ್ವಾಹಕ ಇಲ್ಲಿಂದ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋದರೆ ಆ ಸಾವಿಲ್ಲದ ಊರು ಸಿಗುವುದಾಗಿ ಹೇಳಿ ಬ್ರಹ್ಮದತ್ತನನ್ನು ಬಸ್ಸಿನಿಂದ ಇಳಿಸಿ ಜೊತೆಗೆ ಕಾಡು ದಾರಿಯಾಗಿರುವುದರಿಂದ ಕ್ರೂರ ಮೃಗಗಳಿರುತ್ತವೆ ಎನ್ನುವ ಎಚ್ಚರಿಕೆ ನೀಡಿ ಹೊರಟು ಹೋದ. ಈಗ ಬಸ್ಸಿನ ಸಪ್ಪಳವೂ ಇಲ್ಲದಂತಾಗಿ ಜೋರಾಗಿ ಬೀಸುವ ಗಾಳಿಯ ಸದ್ದು ಬಿಟ್ಟರೆ ಮನುಷ್ಯ ಮತ್ತು ಪ್ರಾಣಿಯ ಸಂಪರ್ಕವೇ ಇಲ್ಲವೇನೋ ಎನ್ನುವಷ್ಟು ಆ ಜಾಗದಲ್ಲಿ ನೀರವ ಮೌನ ಮನೆ ಮಾಡಿತ್ತು. ಬ್ರಹ್ಮದತ್ತ ನಿರ್ವಾಹಕ ಸೂಚಿಸಿದ ಕಾಲುದಾರಿಯನ್ನು ಹಿಡಿದು ಕತ್ತಲಾಗುವ ಮುಂಚೆ ಊರು ಸೇರಿಕೊಳ್ಳಬೇಕೆಂದು ಅವಸರವಸರವಾಗಿ ಹೊರಟ. ಅವನು ಹಾಗೆ ಸ್ವಲ್ಪ ದೂರ ನಡೆದಿರಬಹುದು ಹಿಂದಿನಿಂದ ಹೆಜ್ಜೆಯ ಸಪ್ಪಳ ಕೇಳಿಸಿದಂತಾಗಿ ಹಿಂತಿರುಗಿ ನೋಡಿದವನಿಗೆ ಮನುಷ್ಯಾಕೃತಿಯೊಂದು ತನ್ನತ್ತಲೇ ನಡೆದು ಬರುತ್ತಿರುವುದು ಕಾಣಿಸಿ ಹೆಜ್ಜೆಯನ್ನು ನಿಧಾನಗೊಳಿಸಿದ. ಹತ್ತಿರ ಬಂದ ವ್ಯಕ್ತಿ ಬ್ರಹ್ಮದತ್ತನನ್ನು ನೋಡಿ ಮುಗುಳ್ನಕ್ಕು ತನ್ನ ಹೆಸರು ವೆಂಕಟ್ರಮಣನೆಂದು ಸಾವಿಲ್ಲದ ಊರಲ್ಲಿ ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿರುವುದಾಗಿಯೂ ಪೇಟೆಯಲ್ಲಿ ಕೆಲಸವಿದ್ದು ಮುಗಿಸಿಕೊಂಡು ಊರಿಗೆ ಹಿಂತಿರುಗುತ್ತಿರುವುದಾಗಿ ಪರಿಚಯಿಸಿಕೊಂಡ. ಪೀಚುಪೀಚಾದ ಸಣಕಲು ದೇಹದ ವೆಂಕಟ್ರಮಣನನ್ನು ನೋಡುತ್ತಿದ್ದರೆ ಬ್ರಹ್ಮದತ್ತನಿಗೆ ತನ್ನೂರಿನ ಅರ್ಚಕರ ನೆನಪಾಯಿತು. ದಾರಿಯಲ್ಲಿ ಮಾತನಾಡುವುದಕ್ಕೆ ಜೊತೆಯಾಯಿತೆಂದು ಖುಷಿಪಟ್ಟ ಬ್ರಹ್ಮದತ್ತ ತನ್ನ ಪರಿಚಯ ಮಾಡಿಕೊಂಡು ಇಲ್ಲಿಗೆ ಬರುತ್ತಿರುವ ಉದ್ದೇಶವನ್ನು ಹೇಳಿದ. ‘ಅಂತೂ ನನ್ನೂರು ನಿಮಗೆಲ್ಲ ಕುತೂಹಲದ ಕೇಂದ್ರವಾಗಿದೆ ಅನ್ನಿ’ ಎಂದ ವೆಂಕಟ್ರಮಣ ಬ್ರಹ್ಮದತ್ತನ ಅನೇಕ ಅನುಮಾನಗಳಿಗೆ ಉತ್ತರಿಸುತ್ತ ಅವರಿಬ್ಬರೂ ಊರು ಸಮೀಪಿಸುವಷ್ಟರಲ್ಲಿ ಬೆಳಕು ಮರೆಯಾಗಿ ಇಡೀ ಊರು ಕತ್ತಲಿನ ಸೆರಗಿನಲ್ಲಿ ಅವುಚಿ ಕುಳಿತುಕೊಂಡಿತ್ತು.

ಊರಿಗೆ ಹೊಸಬನಾಗಿದ್ದ ಬ್ರಹ್ಮದತ್ತನನ್ನು ವೆಂಕಟ್ರಮಣ ತನ್ನೊಂದಿಗೆ ತನ್ನ ಮನೆಗೆ ಕರೆದೊಯ್ದ. ಕುಡಿಯಲು ನೀರು ಕೇಳಿದ ಬ್ರಹ್ಮದತ್ತನಿಗೆ ಅದೇಕೋ ವೆಂಕಟ್ರಮಣ ಅನುಮಾನಿಸುತ್ತಿರುವಂತೆ ಅನಿಸಿತು. ತೀರ ಸಂಪ್ರದಾಯಸ್ಥ ಕುಟುಂಬವಾಗಿರುವುದರಿಂದ ನನ್ನನ್ನು ಸತ್ಕರಿಸಲು ಸಹಜವಾಗಿಯೇ ಹಿಂಜರಿದಿರಬಹುದು ಎಂದು ಭಾವಿಸಿದವನಿಗೆ ಮುಂದಿನ ಕೆಲವೇ ಕ್ಷಣಗಳಲ್ಲಿ ಆ ಮನೆಯಲ್ಲಿ ದೊರೆತ ಅತಿಥಿ ಸತ್ಕಾರದಿಂದ ತಾನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ಅವನೊಳಗೇ ಒಂದುರೀತಿಯ ನಾಚಿಕೆಯ ಭಾವ ಆವರಿಸಿತು. ಊಟದ ನಂತರ ಮಹಡಿಯಲ್ಲಿ ಹಾಸಿಗೆ ಹಾಸಿಕೊಟ್ಟು ಬ್ರಹ್ಮದತ್ತನಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ ವೆಂಕಟ್ರಮಣ ‘ಈಗಾಗಲೇ ಪ್ರಯಾಣದಿಂದ ನಿಮಗೆ ಆಯಾಸವಾಗಿದೆ. ಬೇಗ ಮಲಗಿಕೊಳ್ಳಿ. ಬೆಳಗ್ಗೆ ಮಾತನಾಡಿದರಾಯ್ತು. ಈ ಊರನ್ನು ರಾತ್ರಿ ನೋಡುವುದಕ್ಕಿಂತ ಹಗಲಿನ ಬೆಳಕಲ್ಲೇ ನೀವು ನೋಡಬೇಕು’ ಎಂದು ಕೆಳಗಿಳಿದು ಹೋದ. ಪ್ರಯಾಣದ ಆಯಾಸ ಮತ್ತು ಹೊಟ್ಟೆ ತುಂಬಿದ ಊಟದಿಂದ ಬ್ರಹ್ಮದತ್ತನಿಗೆ ನಿದ್ದೆ ಬೇಗ ಹತ್ತಿತು.

ಬೆಳಗ್ಗೆ ಎಚ್ಚರವಾಗಿ ಕೆಳಗೆ ಇಳಿದು ಹೋದ ಬ್ರಹ್ಮದತ್ತನಿಗೆ ಮನೆಯ ಅಂಗಳದಲ್ಲಿ ಸಾಲಾಗಿ ಹತ್ತರಿಂದ ಹದಿನೈದು ವೃದ್ಧರು ಬಿಸಿಲಿಗೆ ಮೈ ಕಾಯಿಸುತ್ತ ಕುಳಿತಿರುವ ದೃಶ್ಯ ಕಣ್ಣಿಗೆ ಬಿತ್ತು. ಹಣ್ಣಾದ ದೇಹ, ಮಡಿಕೆಗಟ್ಟಿ ಸುಕ್ಕಾದ ಚರ್ಮ, ಕಾಂತಿಕಳೆದುಕೊಂಡ ಕಣ್ಣುಗಳು, ಹಲ್ಲಿಲ್ಲದೆ ವಕ್ರವಾದ ಬೊಚ್ಚುಬಾಯಿ, ಗುಳಿಬಿದ್ದ ಗಲ್ಲ, ಬೋಳುಬೋಳಾದ ತಲೆ, ಎಲುಬಿನ ಹಂದರವಾದ ಎದೆಗೂಡು, ನಡಗುತ್ತಿರುವ ಸೊರಗಿದ ಕೈಗಳು ತಾನು ನೋಡುತ್ತಿರುವುದು ರಕ್ತಮಾಂಸ ತುಂಬಿಕೊಂಡು ಉಸಿರಾಡುವ ಜೀವಂತ ಮನುಷ್ಯರೊ ಅಥವಾ ಜೀವಚ್ಛವಗಳೊ ಎಂದೆನಿಸಿತು ಬ್ರಹ್ಮದತ್ತನಿಗೆ. ಅಲ್ಲಿ ಕುಳಿತಿರುವ ಎಲ್ಲರ ಮುಖದ ಚಹರೆ ಒಂದೇ ರೀತಿಯಾಗಿದೆ ಎಂದೆನಿಸಿ ಅವನಿಗೆ ಅಚ್ಚರಿ ಎನಿಸಿತು. ಬ್ರಹ್ಮದತ್ತನ ಹಿಂದೆಯೇ ಬಂದ ವೆಂಕಟ್ರಮಣ ‘ಈಗ ನೀವು ನೋಡುತ್ತಿದ್ದಿರಲ್ಲ ಇದು ಈ ಊರಿನ ಎಲ್ಲ ಮನೆಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ ನೋಡಿ. ಈಗ ಇಲ್ಲಿ ಕುಳಿತಿರುವವರಲ್ಲಿ ಕೆಲವರಿಗೆ ನಾಲ್ಕುನೂರು ವರ್ಷ ವಯಸ್ಸು ಕೆಲವರಿಗೆ ಮೂರು ನೂರು ವರ್ಷಗಳು ಇನ್ನು ಕೆಲವರಿಗೆ ಎರಡುನೂರು ಸಣ್ಣವಯಸ್ಸಿನವರೆಂದರೆ ಅದೋ ಅಲ್ಲಿ ಕೆಂಪು ಸೀರೆ ಉಟ್ಟು ಕುಳಿತಿದ್ದಾರಲ್ಲ ನನ್ನ ಅಜ್ಜಿ ಆಕೆಗೆ ನೂರುವರ್ಷ ವಯಸ್ಸು. ಅಪ್ಪ ಅಮ್ಮನಿಗೆ ಇನ್ನು ಆರೋಗ್ಯ ಸರಿ ಇರುವುದರಿಂದ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಇವರನ್ನು ವೈಯಕ್ತಿಕವಾಗಿ ಗುರುತಿಸಲು ನನಗೇ ಅದೆಷ್ಟೋ ಸಲ ಗೊಂದಲವಾಗುತ್ತದೆ. ಬದುಕಿಗೆ ಒಂದು ಕಾಲಮಿತಿ ಬೇಕು ನೋಡಿ. ಹೀಗೆ ದೀರ್ಘವಾದರೆ, ದೀರ್ಘವಾಗುವುದೇನು ಬಂತು ಬದುಕಿಗೆ ಇಲ್ಲಿ ಕೊನೆ ಎಂಬುದೇ ಇಲ್ಲ. ಗ್ರೀಕ್ ಪುರಾಣದಲ್ಲಿನ ರಾಜಕುಮಾರ ಟೆಥಾನಸ್‍ನ ಕಥೆಯಂತಾಗಿದೆ ನಮ್ಮ ಬದುಕು. ಸಾವೇ ಬೇಡವೆಂದು ವರ ಪಡೆದ ಟೆಥಾನಸ್ ವಯಸ್ಸಾಗಿ ಶರೀರ ಶಿಥಿಲಗೊಂಡಾಗ ಸಾವು ಬೇಕೆಂದು ಹಂಬಲಿಸಿದನಂತೆ. ಕೊನೆಗೆ ಬಯಸಿ ಬಯಸಿ ಸಾವು ಪಡೆದನಂತೆ. ನೋಡಿ ಸಾವಿಗೆ ಎಷ್ಟೊಂದು ಮಹತ್ವವಿದೆ’ ವೆಂಕಟ್ರಮಣ ಒಂದು ಕ್ಷಣ ಮಾತು ನಿಲ್ಲಿಸಿ ದೂರದ ದಿಗಂತದತ್ತ ತನ್ನ ದೃಷ್ಟಿ ಹರಿಸಿದ. ಆ ಕ್ಷಣಕ್ಕೆ ಬ್ರಹ್ಮದತ್ತನಿಗೂ ಮಾತು ಬೇಡವೆನಿಸಿತು.

‘ಸುಮಾರು ನಾಲ್ಕುನೂರು ವರ್ಷಗಳಹಿಂದೆ ಕೆಲವು ಕುಟುಂಬಗಳು ದುಡಿಮೆ ಅರಸುತ್ತ ಈ ಜಾಗಕ್ಕೆ ಬಂದವಂತೆ. ಇಲ್ಲಿನ ಫಲವತ್ತಾದ ಮಣ್ಣು, ಕಾಡು, ಗಿಡಮರಗಳ ಸಮೃದ್ಧಿಯಿಂದ ಇಲ್ಲೆ ನೆಲೆನಿಲ್ಲಲು ಬಯಸಿದರು. ಪುಟ್ಟ ಪುಟ್ಟ ಗುಡಿಸಿಲುಗಳು ನಿರ್ಮಾಣವಾದವು. ಹತ್ತಿರದಲ್ಲೆ ಗುಡ್ಡ ಕೊರೆದು ಭಾವಿ ನಿರ್ಮಿಸಿದರು. ಬದುಕು ಸಮೃದ್ಧವಾಯಿತು. ಕ್ರಮೇಣ ಕುಟುಂಬಗಳು ಬೆಳೆದು ಇವತ್ತು ನೂರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಅಲ್ಲಿಂದ ಇಲ್ಲಿಯವರೆಗೆ ಈ ಊರಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ. ಇದೇ ಕಾರಣದಿಂದ ಬೇರೆ ಯಾವ ಊರಿನವರೂ ನಮ್ಮೊಂದಿಗೆ ನೆಂಟಸ್ತನಕ್ಕೆ ಮುಂದಾಗುತ್ತಿಲ್ಲ. ಇಲ್ಲಿನ ಕುಟುಂಬಗಳಲ್ಲೇ ಪರಸ್ಪರ ಹೆಣ್ಣು ಗಂಡುಗಳನ್ನು ಕೊಟ್ಟು ತೆಗೆದುಕೊಳ್ಳುವ ಪದ್ಧತಿಯನ್ನು ರೂಢಿಸಿಕೊಂಡಿರುವುದರಿಂದ ಕುಟುಂಬ ಘಟಕ ಬೆಳೆಯುತ್ತಿದೆ. ನಮಗಿರುವ ಸಮಸ್ಯೆ ಎಂದರೆ ಯಾವ ಮನೆಯಲ್ಲೂ ಸಾವು ಸಂಭವಿಸದೆ ಇರುವುದು. ಹಾಗೆಂದು ರೋಗರುಜಿನಗಳು ಮತ್ತು ವೃದ್ಧಾಪ್ಯದಿಂದ ಊರು ಮುಕ್ತವಾಗಿದೆಯೆಂದು ಅರ್ಥವಲ್ಲ. ದಿನಬೆಳಗಾದರೆ ಪ್ರತಿಕುಟುಂಬದಲ್ಲಿನ ವಯಸ್ಸಾದವರ ಕಾಯಿಲೆಗಳು ಮತ್ತು ಅವರ ಗೋಳು, ನರಳಾಟಗಳಿಂದ ಊರು ಅಶಾಂತಿಯ ತಾಣವಾಗಿದೆ. ಸ್ಮಶಾನ ಸದೃಶ್ಯವಾದ ಈ ಬದುಕಿಗೆ ಅರ್ಥವೇ ಇಲ್ಲದಂತಾಗಿದೆ. ಈಗ ಈ ಊರಿನಲ್ಲಿನ ಪ್ರತಿ ಮನೆಯೂ ಸಾವಿಗಾಗಿ ಕಾಯುತ್ತಿದೆ ಅದು ಎಂದು ಬರುವುದೆಂದು. ನಿಮ್ಮಂಥವರನ್ನು ನೋಡಿದಾಗಲೆಲ್ಲ ನೀವು ಎಷ್ಟೊಂದು ಪುಣ್ಯವಂತರೆಂದು ನಮಗೆ ಅಸೂಯೆ ಆಗುತ್ತದೆ. ನಿಮ್ಮ ಬದುಕು ಸುಂದರವಾಗಿರುವುದಕ್ಕೆ ಆ ಸಾವು ಎನ್ನುವ ವಾಸ್ತವವೇ ಕಾರಣ ನೋಡಿ. ಮನುಷ್ಯ ಸತ್ತು ಹೋಗದೇ ಇದ್ದರೆ ಈ ಜಗತ್ತು ಎಷ್ಟೊಂದು ಅಸಹ್ಯ ಅನಿಸುತ್ತೆ ಅನ್ನೊದಕ್ಕೆ ನಮ್ಮೂರೇ ಒಂದು ಸಾಕ್ಷಿ. ಬಿಡಿ ಇದೆಲ್ಲ ನಮ್ಮ ದುರಾದೃಷ್ಟ’ ಎಂದು ಮಾತು ನಿಲ್ಲಿಸಿದ ವೆಂಕಟ್ರಮಣ.

ಬ್ರಹ್ಮದತ್ತ ವೆಂಕಟ್ರಮಣನ ಜೊತೆಗೂಡಿ ಇಡೀ ಊರು ಸುತ್ತಿ ಬಂದ. ತಾನು ನೋಡಿದ ಪ್ರತಿ ಮನೆಯೂ ಒಂದು ಮತ್ತೊಂದರ ಛಾಯೆಯಂತೆ ಗೋಚರಿಸಿತು. ಎಲ್ಲ ಮನೆಗಳಲ್ಲೂ ವಯಸಾದ ವೃದ್ಧರು, ಕಾಯಿಲೆಗಳಿಂದ ನರಳುವ ಅವರ ಗೋಳಾಟ, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಂತಿದ್ದ ಕಾಂತಿಹೀನ ಮುಖಗಳ ಜನರು ಇದನ್ನೆಲ್ಲ ನೋಡುತ್ತ ಬ್ರಹ್ಮದತ್ತನಿಗೆ ಒಂದು ತೆರನಾದ ಜಿಗುಪ್ಸೆ ಮೂಡಲಾರಂಭಿಸಿತು. ಇನ್ನಷ್ಟು ಹೊತ್ತು ತಾನಿಲ್ಲಿದ್ದರೆ ತನಗೆ ಹುಚ್ಚೆ ಹಿಡಿಯಬಹುದೆಂದು ಅನ್ನಿಸಿ ಬ್ರಹ್ಮದತ್ತ ತನ್ನ ಯೋಚನೆಗೆ ತಾನೇ ಬೆಚ್ಚಿಬಿದ್ದ. ಹೌದು ಈ ಪರಿಸರದಿಂದ ದೂರ ಹೋಗಿ ಇವರೇಕೆ ಬದುಕು ಕಟ್ಟಿಕೊಳ್ಳಬಾರದು ಎನ್ನುವ ಯೋಚನೆ ಹೊಳೆದು ಅದನ್ನು ವೆಂಕಟ್ರಮಣನಿಗೆ ಕೇಳಿಯೂ ಬಿಟ್ಟ. ‘ನಮ್ಮ ಹಿಂದಿನ ಒಂದು ತಲೆಮಾರಿನವರು ನೀವು ಹೇಳಿದಂತೆ ಒಂದೊಮ್ಮೆ ಇಂಥದ್ದೊಂದು ಪ್ರಯೋಗ ಮಾಡಿ ನೋಡಿದ್ದರಂತೆ. ಹುಟ್ಟುವ ಮಗುವಿಗೆ ಇಲ್ಲಿನ ನೆರಳು ಕೂಡ ಸೋಕಬಾರದೆಂದು ಸಾವಿರಾರು ಮೈಲಿ ದೂರ ಹೋದರೂ ಕೂಡ ಸಾವು ಅವರನ್ನು ಸ್ಪರ್ಷಿಸಲಿಲ್ಲ. ನಮ್ಮ ವಂಶಾಣುವಿನಲ್ಲೇ ಅಂಥದ್ದೊಂದು ದೋಷ ಬೇರುಬಿಟ್ಟಿರುವಾಗ ಯಾವ ಪ್ರಯೋಗವೂ ಪ್ರಯೋಜನವಾಗಲಿಲ್ಲ’ ವೆಂಕಟ್ರಮಣ ನಿಟ್ಟುಸಿರು ಬಿಟ್ಟ.
ವೆಂಕಟ್ರಮಣನ ಬಲವಂತಕ್ಕೆ ಮಧ್ಯಾಹ್ನ ಒಂದೆರಡು ತುತ್ತು ಊಟ ಮಾಡಿ  ಬ್ರಹ್ಮದತ್ತ ಸಾಯಂಕಾಲ ಬೆಂಗಳೂರಿಗೆ ಹಿಂದಿರುಗಲು ಸಿದ್ಧನಾದ. ಕಾಡಿನ ದಾರಿಯೆಂದು ವೆಂಕಟ್ರಮಣ ಮುಖ್ಯರಸ್ತೆಯವರೆಗೂ ಒಬ್ಬನನ್ನು ಜೊತೆಮಾಡಿ ಕಳುಹಿಸಿದ. ಬ್ರಹ್ಮದತ್ತನ ಮನಸ್ಸು ಇಡೀ ಘಟನೆಯಿಂದ ಒಂದುರೀತಿಯ ಕ್ಷೋಭೆಗೆ ಒಳಗಾಗಿತ್ತು. ದಾರಿಯಲ್ಲಿ ಜೊತೆಯವನೊಡನೆ ಯಾವ ಮಾತನ್ನು ಆಡದೆ ಮೌನವಾಗಿ ಹೆಜ್ಜೆ ಹಾಕಿದ. ಮುಖ್ಯ ರಸ್ತೆಗೆ ಬಂದ ಕೆಲವೇ ನಿಮಿಷಗಳಲ್ಲಿ ಬಸ್ಸು ಬಂದು ನಿಂತಿತು. ಬಸ್ ಪೂರ್ಣ ಖಾಲಿಯಾಗಿತ್ತು. ಚಾಲಕ ಮತ್ತು ಕಂಡಕ್ಟರ್ ಸಿಗರೇಟು ಸೇದಲೆಂದು ರಸ್ತೆಯ ಬದಿಯಲ್ಲಿದ್ದ ಗೂಡಂಗಡಿ ಹೊಕ್ಕರು. ಜೊತೆಗೆ ಬಂದವನು ಪಕ್ಕದಲ್ಲಿ ಕುಳಿತು ಬ್ರಹ್ಮದತ್ತನ ಕಿವಿಯಲ್ಲಿ ಉಸುರಿದ ‘ನನ್ನೂರಿನ ನೀರಿನ ಗುಣ ನೋಡಿ ಒಮ್ಮೆ ಇಲ್ಲಿನ ನೀರು ಕುಡಿದರೆ ಸಾಕು ಅವರಿಗೆ ಸಾವೆಂಬುದೇ ಇಲ್ಲ’. ‘ಯಾವ ನೀರು ಅದೆಲ್ಲಿದೆ’ ಬ್ರಹ್ಮದತ್ತ ಕೇಳಿದ. ಆ ವ್ಯಕ್ತಿ ಆಶ್ಚರ್ಯದಿಂದ ಬ್ರಹ್ಮದತ್ತನನ್ನು ನೋಡುತ್ತ ‘ನನ್ನೂರಿನಲ್ಲಿರುವುದು ಒಂದೇ ಭಾವಿ. ನಾಲ್ಕುನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ತೆಗೆಸಿದ್ದು. ಇವತ್ತಿಗೂ ನಾವೆಲ್ಲ ಅದೇ ಭಾವಿಯ ನೀರನ್ನು ಉಪಯೋಗಿಸುವುದು. ಆ ಭಾವಿಯ ನೀರು ಒಮ್ಮೆ ಕುಡಿದರೆ ಸಾಕು ನೀರು ಕುಡಿದ ವ್ಯಕ್ತಿಯ ವಂಶಾಣುವಿನಲ್ಲಿ ಚಿರಂಜೀವಿತ್ವ ಎನ್ನುವುದು ಬೇರುಬಿಟ್ಟು ಕುಳಿತುಕೊಳ್ಳುತ್ತದೆ. ವಂಶವೇ ಮೃತ್ಯುಂಜಯವಾಗುತ್ತದೆ. ಆ ಭಾವಿ ಬಿಟ್ಟರೆ ನಮಗೆ ಬೇರೆ ಗತಿಯೇ ಇಲ್ಲ. ಯಾಕೆ ವೆಂಕಟ್ರಮಣ ನಿಮಗೆ ಇದನ್ನೆಲ್ಲ ಹೇಳಿಲ್ಲವೆ’ ಎಂದು ಅಚ್ಚರಿ ವ್ಯಕ್ತಪಡಿಸಿದ. ಬ್ರಹ್ಮದತ್ತನ ಮೈ ಬೆವರೊಡೆದು ಕಣ್ಣುಗಳಿಗೆ ಕತ್ತಲಾವರಿಸಿದಂತಾಗಿ ಎದುರು ಸೀಟಿನ ಕಬ್ಬಿಣದ ಸಲಾಕೆಯನ್ನು ಬಿಗಿಯಾಗಿ ಹಿಡಿದುಕೊಂಡ. ಸ್ವಲ್ಪ ಹೊತ್ತಿನ ನಂತರ ತಣ್ಣನೆಯ ಗಾಳಿ ಮೈಯನ್ನು ಸೋಕಿದಂತಾಗಿ ಕಣ್ಣು ಬಿಟ್ಟು ನೋಡಿದ. ಬಸ್ ಮುಂದೆ ಚಲಿಸುತ್ತಿತ್ತು. ಪಕ್ಕದಲ್ಲಿ ಸೀಟು ಖಾಲಿ ಇತ್ತು.
● ● ●

      ಶರ್ಮಾ ಹೇಳುವುದನ್ನು ನಿಲ್ಲಿಸಿ ದೀರ್ಘವಾಗಿ ಉಸಿರೆಳೆದುಕೊಂಡ. ನಮ್ಮೆಲ್ಲರನ್ನು ವಿಚಿತ್ರವಾದ ಅನುಭವವೊಂದು ಆವರಿಸಿತ್ತು. ಶರ್ಮಾ ಹೇಳಿದ ವಿಷಯಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ಮೌನವಾಗಿ ಎದ್ದು ಗುಡ್ಡ ಇಳಿಯತೊಡಗಿದೇವು. ನಾವು ಹಿಂತಿರುಗುವ ದಾರಿಯಲ್ಲಿ ಮೊದಲ ಮನೆಯೇ ಶರ್ಮಾನದು. ಕಾಂಪೌಂಡ್ ಗೇಟ್ ತೆರೆದು ಒಳ ಹೋಗುತ್ತಿದ್ದ ಶರ್ಮಾನನ್ನು ನಿಲ್ಲಿಸಿ ನಾನು ಕೇಳಿದೆ ‘ಹೌದು ಆ ಬ್ರಹ್ಮದತ್ತನ ಪರಿಚಯ ನಿನಗೆ ಹೇಗಾಯಿತು’. ಶರ್ಮಾ ಒಮ್ಮೆ ಆಕಾಶದತ್ತ ದೃಷ್ಟಿ ಹರಿಸಿ ಒಂದುತೆರನಾದ ನಿರ್ಲಿಪ್ತ ಭಾವದಿಂದ ‘ಹತ್ತು ವರ್ಷಗಳಿಂದ ನಿಮಗೆಲ್ಲ ಪರಿಚಿತನಿರುವ ಈ ಬಿ.ಡಿ.ಶರ್ಮಾನೆ ಆ ನತದೃಷ್ಟ ಬ್ರಹ್ಮದತ್ತ ಶರ್ಮಾ’ ಎಂದು ಹೇಳಿದವನೆ ಮನೆ ಒಳಗೆ ಸೇರಿಕೊಂಡು ಬಾಗಿಲು ಹಾಕಿದ. ಶರ್ಮಾ ಮುಚ್ಚಿದ ಬಾಗಿಲನ್ನೆ ಬೆರಗಾಗಿ ನೋಡುತ್ತ ನಾವು ಎಷ್ಟೋ ಹೊತ್ತಿನವರೆಗೆ ಅಲ್ಲಿ ನಿಂತಿದ್ದೇವು.

---000---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ