Monday, April 4, 2022

ಅಂತರವಿರಲಿ... ಅದು ಅಂತರಂಗದ ಸಂಗತಿ

      


       ಬೆಳಗ್ಗಿನ ವಾಕಿಂಗ್ ಮುಗಿಸಿ ಮನೆಗೆ ಮರಳಿ ಬರುತ್ತಿರುವಾಗ ನನ್ನೆದುರು ನಡೆದುಕೊಂಡು ಹೋಗುತ್ತಿದ್ದ ಮಹನಿಯರಿಬ್ಬರು ತಾವಿರುವುದು ರಸ್ತೆಯಲ್ಲಿ ಎಂಬುದನ್ನೂ ಮರೆತು ಗಹನವಾದ ಮಾತುಗಳಲ್ಲಿ ತೊಡಗಿಕೊಂಡಿದ್ದರು. ಅವರ ಇಡೀ ಮಾತಿನುದ್ದಕ್ಕೂ ಬೇರೆ ವ್ಯಕ್ತಿಯ ಕುರಿತು ಅಸಹನೆ, ದ್ವೇಷ, ಸಿಟ್ಟು, ಭರ್ತ್ಸನೆ ವ್ಯಕ್ತವಾಗುತ್ತಿದವು. ತಮ್ಮ ಕೋಪಕ್ಕೆ ಕಾರಣನಾದ ವ್ಯಕ್ತಿಯನ್ನು ಅಪಮಾನಗೊಳಿಸಲು ಸೂಕ್ತ ಸಂದರ್ಭಕ್ಕಾಗಿ ಅವರು ಕಾಯುತ್ತಿದ್ದದ್ದು ಅವರಿಬ್ಬರ ಸಂಭಾಷಣೆಯಿಂದ ಅರ್ಥವಾಗುತ್ತಿತ್ತು. ಮಾತಿನ ನಡುವೆ ಅವರಿಬ್ಬರು ಅದೇ ಆಗ ಆಧ್ಯಾತ್ಮದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವರೆಂದು ಗೊತ್ತಾಯಿತು. ಕೆಲವು ಕ್ಷಣಗಳ ಹಿಂದಷ್ಟೆ ಆಧ್ಯಾತ್ಮದ ವಿಚಾರಗಳನ್ನು ಆಲಿಸಿದವರು ಎಷ್ಟು ಬೇಗ ಲೌಕಿಕ ಬದುಕಿನ ತಾಮಸ ಗುಣಗಳಿಗೆ ಮರಳಿದರೆಂದು ನನಗೆ ಖೇದವಾಯಿತು.

ಇತ್ತೀಚೆಗೆ ನನ್ನ ಸ್ನೇಹಿತನ ಊರಿನಲ್ಲಿ ಆಧ್ಯಾತ್ಮ ಪ್ರಸಾರ ಮಂಡಳಿಯೊಂದು ಹತ್ತು ದಿನಗಳ ಆಧ್ಯಾತ್ಮ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಊರ ಮಧ್ಯದ ವಿಶಾಲವಾದ ಶಾಲಾ ಮೈದಾನದಲ್ಲಿ ಸಾವಿರಾರು ಜನ ಕೂಡಬಹುದಾದ ಬೃಹತ್ ಸಭಾಂಗಣವನ್ನು ನಿರ್ಮಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರಿಗೆ ಉಚಿತ ಆಧ್ಯಾತ್ಮ ತರಬೇತಿ ನೀಡಲಾಯಿತು. ದಿನದ ತರಬೇತಿಯ ಕೊನೆಯಲ್ಲಿ ಸಭಾಂಗಣದ ಪ್ರವೇಶ ಬಾಗಿಲ ಹತ್ತಿರದ ಮಳಿಗೆಯಲ್ಲಿ ಜನರು ಆಧ್ಯಾತ್ಮ ಸಂಬಂಧಿತ ಪುಸ್ತಕಗಳನ್ನು ಮತ್ತು ಸಿ.ಡಿಗಳನ್ನು ಮುಗಿಬಿದ್ದು ಖರೀದಿಸಿದರು. ಜೊತೆಗೆ ಮಾರಾಟಕ್ಕಿಟ್ಟಿದ್ದ ತರೆವಾರಿ ತಿಂಡಿಗಳನ್ನು ತಿಂದು ಧನ್ಯರಾದರು. ಸಾರ್ವಜನಿಕರು ಈ ತರಬೇತಿ ಕಾರ್ಯಕ್ರಮದಿಂದ ಆಧ್ಯಾತ್ಮವನ್ನು ಅದೆಷ್ಟು ಪ್ರಮಾಣದಲ್ಲಿ ಮೈಗೂಡಿಸಿಕೊಂಡರೆಂಬುದಕ್ಕಿಂತ ಆಯೋಜಕರು ಮಾತ್ರ ನಿವ್ವಳ ಲಾಭದೊಂದಿಗೆ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು ಎನ್ನುವುದು ಚರ್ಚೆಯ ಸಂಗತಿಯಾಗಿತ್ತು.

ಇವತ್ತು ಆಧ್ಯಾತ್ಮ ಮತ್ತು ಯೋಗಕ್ಕೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಒಂದರ್ಥದಲ್ಲಿ ಈ ಎರಡು ಸಂಗತಿಗಳು ಬಿಕರಿಗಿಟ್ಟ ಮಾರಾಟದ ಸರಕುಗಳಾಗಿವೆ. ಅದಕ್ಕೆಂದೆ ಇಲ್ಲಿ ಢೊಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಹುಟ್ಟಿಕೊಳ್ಳುತ್ತಾರೆ. ಪಂಚತಾರಾ ಹೊಟೇಲುಗಳನ್ನು ಮೀರಿಸುವ ಐಷಾರಾಮಿ ಸವಲತ್ತುಗಳ ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ಅಸ್ತಿತ್ವಕ್ಕೆ ಬರುತ್ತವೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಸಾರ್ವಜನಿಕರು ಆಧ್ಯಾತ್ಮವನ್ನು ಮೈಗೂಡಿಸಿಕೊಳ್ಳಲು ಹಪಹಪಿಸುತ್ತಾರೆ. 

ಅರಿವೆಗುರು ಎಂದಿರುವರು ಅನುಭಾವಿಗಳು. ಈ ನಾಡಿನಲ್ಲಿ ಶರಣರು, ಸಂತರು, ಸೂಫಿಗಳು ಲೌಕಿಕ ಬದುಕಿನ ನಡುವೆಯೂ ಅಲೌಕಿಕವನ್ನು ಸಾಧಿಸಿದರು. ತಮ್ಮ ದಿನ ನಿತ್ಯದ ಕಾಯಕದಲ್ಲೇ ಶರಣತ್ವವನ್ನು ಪಾಲಿಸಿದರು. ಕಳಬೇಡ/ಕೊಲಬೇಡ/ಹುಸಿಯ ನುಡಿಯಲುಬೇಡ/ಮುನಿಯಬೇಡ/ಅನ್ಯರಿಗೆ ಅಸಹ್ಯಪಡಬೇಡ/ತನ್ನ ಬಣ್ಣಿಸಬೇಡ/ಇದಿರ ಹಳಿಯಲುಬೇಡ/ಇದೇ ಅಂತರಂಗಶುದ್ಧಿ/ಇದೇ ಬಹಿರಂಗಶುದ್ಧಿ ಎಂದು ಇಡೀ ಬದುಕನ್ನೇ ಆಧ್ಯಾತ್ಮದ ನೆಲೆಯಲ್ಲಿ ನೋಡಿದರು. ಅಂತರಂಗ ಮತ್ತು ಬಹಿರಂಗ ಎಂದು ಎರಡು ಪ್ರತ್ಯೇಕ ಬದುಕುಗಳನ್ನು ಬದುಕದೆ ಎರಡನ್ನೂ ಏಕತ್ರವಾಗಿಸಿ ಇಹ ಮತ್ತು ಪರ ಎರಡನ್ನೂ ಒಂದಾಗಿಸಿದರು. 

ಬದುಕಿನ ಪಯಣ ಎನ್ನುವುದು ಅದೇನು ಹೂವು ಹಾಸಿದ ಹಾದಿಯ ಮೇಲಿನ ನಡಿಗೆಯಲ್ಲ. ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ದಾರಿಯನ್ನು ಪಥಿಕ ತಾನೇ ಸೃಷ್ಟಿಸಿಕೊಳ್ಳಬೇಕು. ಬದುಕೆಂದ ಮೇಲೆ ಸವಾಲುಗಳು, ಸಮಸ್ಯೆಗಳು ಸಹಜ. ಕಥೆಗಾರ್ತಿ ಕಸ್ತೂರಿ ಬಾಯರಿ ತಮ್ಮ ಸಂದರ್ಶನದಲ್ಲಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಒಂದು ಮಾತು ಹೇಳಿರುವರು-‘ಅಸಹಾಯಕತೆ, ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ಆರ್ ಸ್ಟ್ರಾಂಗ್ ಇನ್‍ಫ್ರಂಟ್ ಆಫ್ ಹಂಗರ್? ಅಂತ ಹ್ಯಾಂಗ ಗೊತ್ತಾಗೋದು. ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಯಾವ ಆಧ್ಯಾತ್ಮಿಕ ತರಬೇತಿ ಕೇಂದ್ರದಲ್ಲೂ ಕೇಳಲು ಸಿಗದ ಬದುಕಿನ ಅರ್ಥ ಮತ್ತು ಅನ್ವೇಷಣೆ ಇದು.

ಇವತ್ತು ಆಧ್ಯಾತ್ಮಕ್ಕೆ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿರುವುದಕ್ಕೆ ಸಾರ್ವಜನಿಕರ ಕೊಡುಗೆ ಸಾಕಷ್ಟಿದೆ. ಬದಲಾಗುತ್ತಿರುವ ಕುಟುಂಬ ಘಟಕ ಮತ್ತು ಬದುಕಿನ ಮೌಲ್ಯಗಳು ಜೀವನದ ರೀತಿ ನೀತಿಗಳನ್ನು ನಿಯಂತ್ರಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಕುಟುಂಬಗಳು ತಲೆ ಎತ್ತುತ್ತಿವೆ. ಕೂಡುಕುಟುಂಬಗಳಿಂದ ದೂರಾಗುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ತಬ್ಬಲಿತನದ ಭಾವ ಕಾಡುತ್ತಿದೆ. ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿಶ್ಚಿತತೆ ಮತ್ತು ಸ್ಪರ್ಧೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಏಕಮುಖವಾದ ಬದುಕಿನ ಪಯಣದಲ್ಲಿ ಕಿಂಚಿತ್ ಏರುಪೇರಾದರೂ ಮನುಷ್ಯ ಹತಾಶೆ, ಖಿನ್ನತೆ, ಉದ್ವಿಗ್ನತೆಗಳಿಗೆ ದೂಡಲ್ಪಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಢೊಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಅವತಾರ ಪುರುಷರಾಗಿ ಹುಟ್ಟಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಜನರ ಮಾನಸಿಕ ದೌರ್ಬಲ್ಯವನ್ನೆ ಬಂಡವಾಳವಾಗಿಸಿಕೊಂಡು ಆಧ್ಯಾತ್ಮದ ಕೇಂದ್ರಗಳು ಹಣ ಮಾಡುತ್ತಿವೆ,

ಆಧ್ಯಾತ್ಮವೆನ್ನುವುದು ಸಾವಿರಾರು ಜನರ ನಡುವೆ ವಿಶಾಲವಾದ ಮೈದಾನದಲ್ಲಿ ಕುಳಿತು ಸಾಧಿಸುವ ಸಾಧನೆಯಲ್ಲ. ನಿಶ್ಯಬ್ದ ಮತ್ತು ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನೆಯದು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಭೌತಿಕವೆ ಪ್ರಧಾನವಾದ ಬದುಕಿನಲ್ಲಿ ಅಂತರಂಗಕ್ಕಿಳಿಯುವ ಸಮಯವಾಗಲಿ ಸಂಯಮವಾಗಲಿ ಇವತ್ತಿನ ಮನುಷ್ಯನಿಗಿಲ್ಲ. ಎಲ್ಲವನ್ನೂ ಬಹಿರಂಗದಲ್ಲೆ ಹುಡುಕುತ್ತಿರುವನು. ಪ್ರತಿಯೊಂದು ಅವನಿಗೆ ಹೊರಗಿನಿಂದಲೇ ಪ್ರಾಪ್ತವಾಗಬೇಕು. ಅದಕ್ಕೆಂದೆ ಆಧ್ಯಾತ್ಮದಂಥ ಅಂತರಂಗದ ಸಂಗತಿ ಕೂಡ ಇಂದು  ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.

 ಬದುಕಿನ ಅರ್ಥವನ್ನು ವಿಶ್ಲೇಷಿಸಲು, ಬದುಕಿಗೆ ಆಧ್ಯಾತ್ಮದ ರೂಪ ನೀಡಲು ಕುವೆಂಪು, ಕಾರಂತ, ಚಿತ್ತಾಲ, ಬೇಂದ್ರೆ ಅವರ ಸಾಹಿತ್ಯ ಕೃತಿಗಳಿಗಿರುವ ಶಕ್ತಿ ಈ ಮಾರಾಟಕ್ಕಿಟ್ಟ ಆಧ್ಯಾತ್ಮಿಕ ಸರಕಿಗಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ