Tuesday, May 4, 2021

ನಾತಿ ಚರಾಮಿ (ಕಥೆ)

                                             
 


(ಏಪ್ರಿಲ್ ೨೦೨೧ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟ)

     ಈಗೀಗ ಪ್ರಭಂಜನನಿಗೆ ತನ್ನ ಮೇಲೆ ಆಸಕ್ತಿ ಕಡಿಮೆಯಾಗುತ್ತಿದ್ದು ಮತ್ತು ಅವನಿಗೆ ಹೀಗಾಗುತ್ತಿರುವುದಕ್ಕೆ ಬೇರೆ ಹೆಣ್ಣಿನ ಸಾಂಗತ್ಯವೇನಾದರೂ ಕಾರಣವಾಗಿರಬಹುದೇ ಎನ್ನುವ ಸಣ್ಣ ಅನುಮಾನವೊಂದು ಮನಸ್ಸಿನಲ್ಲಿ ಸುಳಿದು ಕ್ರಮೇಣ ಅದು ದೊಡ್ಡದಾಗುತ್ತ ಇಡೀ ಕೋಣೆಯನ್ನು ವ್ಯಾಪಿಸಿ ತನ್ನೆದುರು ಭೂತಾಕಾರವಾಗಿ ಬೆಳೆದು ನಿಂತಂತೆ ಭಾಸವಾದಾಗ ಒಂದು ಕ್ಷಣ ವಸುಮತಿಯ ದೇಹ ಭಯದಿಂದ ಕಂಪಿಸಿ ಆ ಕೊರೆಯುವ ಚಳಿಯಲ್ಲೂ ಹಣೆ ಮತ್ತು ಕುತ್ತಿಗೆಯ ಸುತ್ತ ಬೆವರೊಡೆದು ನಿಧಾನವಾಗಿ ಹರಿಯುತ್ತ ಎದೆಯ ಸೀಳನ್ನು ಹಾಯ್ದು ತೊಟ್ಟಿದ್ದ ಬ್ಲೌಜಿನೊಳಗೆ ಇಂಗಲಾರಂಭಿಸಿತು. ಅಂಥದ್ದೊಂದು ಅನುಮಾನ ಮನಸ್ಸಿನಲ್ಲಿ ಸುಳಿದದ್ದೆ ಕುಳಿತಿದ್ದ ವಸುಮತಿ ಧಡಕ್ಕನೆ ಮಂಚದಿಂದೆದ್ದು ಹತ್ತಿರದಲ್ಲಿರುವ ಅಲ್ಮೆರಾಕ್ಕೆ ಅಂಟಿಸಿದ್ದ ಆಳೆತ್ತರದ ನಿಲುವುಗನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ದಿಟ್ಟಿಸಿ ನೋಡತೊಡಗಿದಳು. ವಿರಳವಾಗುತ್ತಿರುವ ತಲೆಗೂದಲಿನಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಳ್ಳಿರೇಖೆಯಂಥ ಎಳೆಗಳು, ಕಣ್ಣಿನ ಕೆಳಗೆ ಕಟ್ಟಿಕೊಳ್ಳುತ್ತಿರುವ ವರ್ತುಲಾಕಾರದ ಕಪ್ಪು, ಕ್ಷಿಣಿಸುತ್ತಿರುವ ಮುಖದ ಮೇಲಿನ ಕಳೆ, ಒಂದೆರಡು ಹಲ್ಲುಗಳುದುರಿ ಅಸ್ಪಷ್ಟವಾಗಿ ಗೋಚರಿಸುತ್ತಿರುವ ಬಲ ಕೆನ್ನೆಯ ಮೇಲಿನ ಕುಳಿ, ಬಿರಿದ ತುಟಿಗಳು, ಸಡಿಲಾಗುತ್ತಿರುವ ಕುತ್ತಿಗೆ ಮತ್ತು ತೋಳಿನ ಸುತ್ತಲಿನ ಚರ್ಮ, ಮಡಿಕೆ ಬೀಳುತ್ತಿರುವ ಹೊಟ್ಟೆ, ಸೊಂಟದ ಸುತ್ತಲೂ ತುಂಬಿಕೊಳ್ಳುತ್ತಿರುವ ಬೊಜ್ಜು ಒಂದುಕ್ಷಣದ ಮಟ್ಟಿಗೆ ವಸುಮತಿಯ ಮನಸ್ಸಿನಲ್ಲಿ ತಾನು ನೋಡುತ್ತಿರುವುದು ಬೇರೆ ಯಾರದೋ ಪ್ರತಿಬಿಂಬ ಎನ್ನುವ ಭಾವವೊಂದು ಸುಳಿದು ಆ ಭಾವವೇ ಶಾಶ್ವತವಾಗಿರಲಿ ಎಂದೆನಿಸಿತು. ಹಾಗೆ ಕನ್ನಡಿಯಲ್ಲಿನ ತನ್ನ ಪ್ರತಿಬಿಂಬವನ್ನು ದಿಟ್ಟಿಸಿ ನೋಡುತ್ತ ನಿಂತವಳಿಗೆ ಪ್ರಭಂಜನ ಮಾತ್ರವಲ್ಲ ಪ್ರಪಂಚದಲ್ಲಿನ ಯಾವ ಗಂಡಸನ್ನೂ ಆಕರ್ಷಿಸುವ ಸೌಂದರ್ಯ ಇನ್ನು ತನ್ನ ಶರೀರಕ್ಕಿಲ್ಲ ಎಂದೆನಿಸಿ ಅಧೀರಳಾದಳು. ದಾಂಪತ್ಯದ ಬದುಕಿನಲ್ಲಿ ‘ಶಯನೇಶು ರಂಭಾ’ ಎನ್ನುವ ಸೂಕ್ತಿಗೆ ತಾನಿನ್ನು ಹೊರತಾದೆ ಎನ್ನುವ ಭಾವವೇ ಅವಳನ್ನು ಆ ಕ್ಷಣಕ್ಕೆ ಮುತ್ತಿನಿಂತು ಒಂದುರೀತಿ ಶೂನ್ಯ ಆವರಿಸಿದಂತಾಗಿ ಬದುಕಿನ ಬಗ್ಗೆಯೇ ಜಿಗುಪ್ಸೆ ಮೂಡಲಾರಂಭಿಸಿತು.

ವಸುಮತಿಯ ಮನಸ್ಸಿನಲ್ಲಿ ಪ್ರಭಂಜನನ ಬಗ್ಗೆ ಇಂಥದ್ದೊಂದು ಅನುಮಾನ ಮೊಳಕೆಯೊಡೆಯಲು ಕೆಲವು ದಿನಗಳ ಹಿಂದೆ ಆ ದಿನ ರಾತ್ರಿ ಮಲಗುವಾಗ ನಡೆದ ಘಟನೆಯೇ ಕಾರಣವಾಗಿತ್ತು. ನಡೆದದ್ದಿಷ್ಟು- ಎಂದಿನಂತೆ ರಾತ್ರಿ ಊಟದ ನಂತರ ಅಡುಗೆ ಮನೆಯಲ್ಲಿನ ದೀಪಗಳನ್ನಾರಿಸಿ ಬೆಡ್‍ರೂಂಗೆ ಬಂದವಳತ್ತ ಗಮನಕೊಡದೆ ಕೈಯಲ್ಲೊಂದು ಪುಸ್ತಕ ಹಿಡಿದು ಪ್ರಭಂಜನ ಓದುತ್ತ ಕುಳಿತಿದ್ದ. ಈ ಮೊದಲಾದರೆ ಕೈಯಲ್ಲಿ ನೆಪ ಮಾತ್ರಕ್ಕೆ ಪುಸ್ತಕ ಹಿಡಿದು ಕೂಡುತ್ತಿದ್ದವನು ವಸುಮತಿ ಬೆಡ್‍ರೂಂ ಒಳಗೆ ಕಾಲಿಟ್ಟಿದ್ದೆ ಕೈಯಲ್ಲಿನ ಪುಸ್ತಕವನ್ನು ಟೇಬಲ್ ಮೇಲೆ ಒಗೆದು ಅವಳನ್ನು ಎತ್ತಿ ಮಂಚದ ಮೇಲೆ ಮಲಗಿಸಿ ಇಡಿಯಾಗಿ ಆಕ್ರಮಿಸುತ್ತಿದ್ದ. ದೇಹದೊಂದಿಗೆ ದೇಹ ಬೆಸೆದು ತಮ್ಮಿಬ್ಬರದೂ ಒಂದೇ ದೇಹ ಮತ್ತು ಆತ್ಮವೆಂಬಂತೆ ತಣಿದು ಒಬ್ಬರನ್ನೊಬ್ಬರು ತಣಿಸಿ ನಿದ್ದೆಗೆ ಜಾರುವಷ್ಟರಲ್ಲಿ ಮಧ್ಯರಾತ್ರಿಯಾಗಿರುತ್ತಿತ್ತು. ಆದರೆ ಆ ದಿನ ವಸುಮತಿ ಕೋಣೆಯೊಳಗೆ ಬಂದಿದ್ದನ್ನು ನೋಡಿಯೂ ನೋಡದವನಂತೆ ಓದುತ್ತಿರುವ ಪುಸ್ತಕದಲ್ಲಿ ತನ್ನನ್ನು ತಲ್ಲೀನಗೊಳಿಸಿಕೊಂಡವನು ಈ ಇಡೀ ಭೂಮಂಡಲದಲ್ಲಿ ಆ ಪುಸ್ತಕವೊಂದನ್ನು ಹೊರತುಪಡಿಸಿ ತನಗೆ ಯಾವ ಬಾಹ್ಯ ಸಂಪರ್ಕವೂ ಇಲ್ಲವೇನೋ ಎನ್ನುವಂತೆ ಮುಗುಮ್ಮಾಗಿ ಕುಳಿತದ್ದು ವಸುಮತಿಯಲ್ಲಿ ಕೋಪಕ್ಕೆ ಕಾರಣವಾಗಿ ಆ ಕ್ಷಣಕ್ಕೆ ತಾನು ಹೆಣ್ಣೆಂಬ ಸಂಕೋಚವನ್ನು ಬಿಟ್ಟು ಅವನನ್ನು ಕೇಳಿದ್ದಳು ‘ಪ್ರಭ್ ನಿಮಗೆ ನೆನಪಿದೆಯಾ ನಾವಿಬ್ಬರೂ ಸೇರಿ ಎಷ್ಟು ದಿನಗಳಾಯ್ತು ಅಂತ’. ವಸುಮತಿಯ ಪ್ರಶ್ನೆಗೆ ಯಾವ ಅಳುಕು ಅನುಮಾನವಿಲ್ಲದೆ ಪ್ರಭಂಜನ ಉತ್ತರಿಸಿದ್ದ ‘ವಸು ಇಪ್ಪತ್ತು ವರ್ಷಗಳಿಂದ ಇದೇ ಮನೆಯಲ್ಲಿ ಒಟ್ಟಾಗಿ ಬಾಳ್ತಿದ್ದಿವಿ ಇದೇನು ಹೊಸದಾಗಿ ಕೇಳ್ತಿದ್ದಿ’. ಪ್ರಭಂಜನನ ಮಾತು ತನ್ನ ಪ್ರಶ್ನೆಗೆ ಉತ್ತರವೋ ಇಲ್ಲ ಅವನೇ ತನ್ನನ್ನು ಪ್ರಶ್ನಿಸುತ್ತಿರುವನೋ ಎನ್ನುವ ಗೊಂದಲಕ್ಕೊಳಗಾದ ವಸುಮತಿಗೆ ಪ್ರಭಂಜನನ ನಿರ್ಲಿಪ್ತತೆ ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ‘ಪ್ರಭ್ ನನ್ನ ಮಾತಿನ ಅರ್ಥ ನಾವಿಬ್ಬರೂ ಒಟ್ಟಿಗೆ ಸೇರಿ ಐ ಮೀನ್ ಇಂಟರ್‍ಕೋರ್ಸಿಗೆ ಒಳಗಾಗಿ’ ಈ ಸಲ ವಸುಮತಿ ಸಂಕೋಚವನ್ನು ಮುರಿದು ನೇರವಾಗಿಯೇ ಪ್ರಶ್ನಿಸಿದ್ದಳು. ವಸುಮತಿಯ ನೇರವಾದ ಆಕ್ರಮಣಕ್ಕೆ ಪ್ರಭಂಜನನ ನಿರುತ್ಸಾಹ ಮತ್ತು ನಿರುತ್ತರವೇ ಪ್ರತಿಕ್ರಿಯೆಯಾಗಿತ್ತು. ಪ್ರಭಂಜನನ ವರ್ತನೆಯಿಂದ ಆ ರಾತ್ರಿ ವಸುಮತಿಗೆ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತಾಗಿ ನಿದ್ದೆ ಹತ್ತಿರ ಸುಳಿಯದೆ ಅವಳ ಮನಸ್ಸು ಒಂದುರೀತಿಯ ಕ್ಷೋಭೆಯಿಂದ ನರಳಿತು. 

* * *

ನಗರದ ಅನುದಾನಿತ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿರುವ ಪ್ರಭಂಜನ ಆಚಾರ್ಯ ಇಪ್ಪತ್ತು ವರ್ಷಗಳ ಹಿಂದೆ ಅದೇ ಆಗ ನೌಕರಿಗೆ ಸೇರಿದ್ದ ಆ ಆರಂಭದ ದಿನಗಳಲ್ಲಿ ಕಾಲೇಜಿನ ಕ್ಯಾಂಪಸ್‍ನಲ್ಲಿದ್ದ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಅಕೌಂಟ್ ತೆರೆಯಲೆಂದು ಹೋದವನು ಅಲ್ಲಿ ಕ್ಯಾಶ್ ಕೌಂಟರ್‍ನಲ್ಲಿದ್ದ ವಸುಮತಿಗೆ ಮನಸ್ಸು ಒಪ್ಪಿಸಿ ಒಂದು ವರ್ಷದÀ ಕಾಲ ಅವಳ ಹಿಂದೆ ಬಿದ್ದು ಕೊನೆಗೆ ಹಿರಿಯರ ಒಪ್ಪಿಗೆ ಪಡೆದು ತನ್ನ ಪ್ರೀತಿಯನ್ನು ದಾಂಪತ್ಯದಲ್ಲಿ ಪರ್ಯಾವಸಾನಗೊಳಿಸಿದ್ದ. ಬ್ಯಾಂಕಿನ ಕೂಡಿ ಕಳೆಯುವ ಲೆಕ್ಕದ ಬಿಡುವಿಲ್ಲದ ಕೆಲಸದ ಏಕತಾನತೆಯ ನಡುವೆ ಬಳಲಿ ಬೆಂಡಾಗುತ್ತಿದ್ದ ವಸುಮತಿಗೆ ಬ್ಯಾಂಕಿನ ಕೆಲಸದಾಚೆಯೂ ತನಗೊಂದು ಮನಸ್ಸಿದೆ ಮತ್ತು ಬದುಕಿದೆ ಎನ್ನುವುದು ಅವಳ ಅರಿವಿಗೆ ಬರುತ್ತಿದ್ದದ್ದು ಅವಳ ಮುಖದರ್ಶನದಿಂದಲೇ ಕೃತಾರ್ಥನಾದೆನೇನೋ ಎನ್ನುವಂತೆ ದಿನಕ್ಕೆ ಐದಾರು ಬಾರಿ ಕಾಲೇಜಿನಿಂದ ಬ್ಯಾಂಕಿಗೆ ಅಂಡಲೆಯುತ್ತಿದ್ದ ಪ್ರಭಂಜನನಿಂದ ಮಾತ್ರ. ಪುಸ್ತಕಗಳೇ ತನ್ನ ಪ್ರಪಂಚವೆಂದು ಭಾವಿಸಿದ್ದ ಪ್ರಭಂಜನ ಮತ್ತು ದಿನಬೆಳಗಾದರೆ ಡೆಬಿಟ್, ಕ್ರೆಡಿಟ್, ಬ್ಯಾಲೆನ್ಸ್‍ಶೀಟ್‍ಗಳಲ್ಲಿ ಮುಳುಗೇಳುತ್ತಿದ್ದ ವಸುಮತಿ ಪರಸ್ಪರ ವಿರುದ್ಧ ಭಾವಗಳ ಅವರಿಬ್ಬರ ಹೃದಯದಲ್ಲಿ ಅದುಹೇಗೆ ಪ್ರೇಮ ಪಲ್ಲವಿಸಿತು ಎನ್ನುವುದು ಸೃಷ್ಟಿಕರ್ತ ಬ್ರಹ್ಮನಿಗೆ ಗೊತ್ತು. ಲವ್ ಈಜ್ ಬ್ಲೈಂಡ್ ಎನ್ನುವ ಮಾತು ಇಂಥವರನ್ನು ನೋಡಿಯೇ ಹುಟ್ಟಿಕೊಂಡಿರಬಹುದೆನ್ನುವ ಸಂಶಯ ಅವರಿಬ್ಬರ ಬಂಧುಗಳಲ್ಲಿ ಮತ್ತು ಪರಿಚಿತರಲ್ಲಿ ಒಂದಿಷ್ಟು ದಿನ ಹರಿದಾಡಿ ಕೊನೆಗೆ ಅದೊಂದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿತು.

ಮದುವೆಯಾದ ನಾಲ್ಕು ವರ್ಷದೊಳಗೆ ಕೀರ್ತಿಗೊಂದು ಆರತಿಗೊಂದು ಎನ್ನುವಂತೆ ಎರಡು ಮಕ್ಕಳು ಹುಟ್ಟಿ ಅವರ ದಾಂಪತ್ಯಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಇವರಿಬ್ಬರ ಸುಖಸಂಸಾರವನ್ನು ನೋಡಿ ಆನಂದದ ಕಡಲಲ್ಲಿ ತೇಲಾಡಿದ ಅವರವರ ಅಪ್ಪ ಅಮ್ಮ ತಮಗಿನ್ನು ಈ ಲೌಕಿಕ ಬಂಧನ ಸಾಕೆನ್ನುವಂತೆ ಪ್ರಭಂಜನ ಮತ್ತು ವಸುಮತಿಯನ್ನು ಸರ್ವತಂತ್ರ ಸ್ವತಂತ್ರರನ್ನಾಗಿಸಿ ಬೇಗನೆ ತಮ್ಮ ಇಹಲೋಕಯಾತ್ರೆಯನ್ನು ಮುಗಿಸಿದ್ದರು. ಮಕ್ಕಳ ಲಾಲನೆ, ಪಾಲನೆ, ಅವರ ವಿದ್ಯಾಭ್ಯಾಸ, ತಮ್ಮ ತಮ್ಮ ಉದ್ಯೋಗದ ಜಂಜಾಟದಲ್ಲಿ ಇಪ್ಪತ್ತು ವರ್ಷಗಳು ಇಪ್ಪತ್ತು ನಿಮಿಷಗಳಂತೆ ಉರುಳಿಹೋಗಿದ್ದವು. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮಗಳು ಪಿಯುಸಿ, ಮಗ ಟೆಂಥ್ ಓದುತ್ತÀ ಮಕ್ಕಳಿಬ್ಬರೂ ಹಾಸ್ಟೆಲ್ ನಿವಾಸಿಗಳಾದ ಮೇಲೆ ತಾವಿಬ್ಬರೆ ಇರುವ ಆ ಮನೆಯಲ್ಲಿ ಆರಂಭದ ಕೆಲವು ದಿನಗಳು ಪ್ರಭಂಜನ ಮತ್ತು ವಸುಮತಿ ತಾವು ಈಗಷ್ಟೇ ಮದುವೆಯಾದ ನವವಿವಾಹಿತರೇನೋ ಎನ್ನುವಂತೆ ಹಗಲು ರಾತ್ರಿಯ ಪರಿವೆ ಇಲ್ಲದಂತೆ ಸುಖಿಸಿದ್ದರು. ವಸುಮತಿ ಕಳೆದುಹೋದ ತಾರುಣ್ಯ ತನಗೆ ಮತ್ತೆ ಪ್ರಾಪ್ತವಾದಷ್ಟೆ ಖುಷಿಯಿಂದ ಸಂಭ್ರಮಿಸಿದ್ದಳು. 

ಬದುಕು ಯಾವ ಗಳಿಗೆಯಲ್ಲಿ ಯಾವ ತಿರುವು ಪಡೆಯುತ್ತೋ ಯಾರಿಗೆ ಗೊತ್ತು. ಎಲ್ಲವೂ ಸರಿಯಾಗಿದೆ ಎಂದು ಭಾವಿಸಿದ್ದ ವಸುಮತಿಗೆ ಇತ್ತೀಚಿಗೆ ಪ್ರಭಂಜನನ ವರ್ತನೆಯೇ ಒಗಟಾಗಿ ಎಲ್ಲವೂ ಅಯೋಮಯ ಅಗೋಚರವೆನಿಸಿ ಅವನೊಂದು ವಿಚಿತ್ರ ಜೀವಿಯಂತೆ ಅವಳ ಭಾವಕ್ಕೆ ಗೋಚರಿಸಲಾರಂಭಿಸಿದ. ರಾತ್ರಿ ಊಟವಾದ ಮೇಲೆ ಅಡುಗೆ ಮನೆಯಲ್ಲಿನ ಕೆಲಸಕ್ಕೂ ಬಿಡದೆ ತನ್ನನ್ನು ಬೆಡ್ ರೂಂಗೆ ಬಾ ಎಂದು ಪೀಡಿಸುತ್ತಿದ್ದವನು ಈಗ ಕೆಲವು ದಿನಗಳಿಂದ ಊಟ ಮಾಡಿದ್ದೆ ಕೈಯಲ್ಲಿ ಪುಸ್ತಕ ಹಿಡಿದು ತನ್ನೊಂದಿಗೆ ಈ ನಾಲ್ಕು ಗೋಡೆಗಳ ನಡುವೆ ಬೇರೊಂದು ಜೀವವೂ ಉಸಿರಾಡುತ್ತಿದೆ ಎನ್ನುವುದನ್ನೂ ಮರೆತು ಗಂಟೆಗಟ್ಟಲೆ ತಪಸ್ಸಿಗೆ ಕುಳಿತವನಂತೆ ಓದಿನಲ್ಲಿ ಕಳೆದುಹೋಗಲಾರಂಭಿಸಿದ. ಪುಸ್ತಕದ ಪುಟಗಳನ್ನು ಮುಗುಚುವುದು, ಪೆನ್ನಿನಿಂದ ಅಲ್ಲಲ್ಲಿ ಗೆರೆಗಳನ್ನು ಎಳೆಯುವುದು, ಒಮ್ಮೊಮ್ಮೆ ಪುಸ್ತಕದಲ್ಲಿನ ಸಾಲುಗಳನ್ನು ಸ್ವಗತದಲ್ಲಿ ಹೇಳಿಕೊಳ್ಳುವುದು ಇಂಥ ದೈಹಿಕ ಚಲನೆಗಳನ್ನು ಬಿಟ್ಟರೆ ಉಳಿದ ವೇಳೆ ವೈರಾಗ್ಯವೇ ಮೈವೆತ್ತು ಅರೆನಿಮೀಲಿತನಾಗಿ ತಪಸ್ಸಿಗೆ ಕುಳಿತ ಬುದ್ಧನಂತೆ ಕಾಣಲಾರಂಭಿಸಿದಾಗ ವಸುಮತಿಗೆ ಭಯ ಶುರುವಾಯಿತು. 

* * *

ವಸುಮತಿ ತನ್ನನ್ನಾವರಿಸಿದ ಭಯದಿಂದ ಬಿಡುಗಡೆಗೊಳ್ಳಲು ತನ್ನ ಮನದ ಬೇಗುದಿಯನ್ನು ಬ್ಯಾಂಕಿನಲ್ಲಿ ಎಲ್ಲರ ಸಮಸ್ಯೆಗಳಿಗೂ ಒಂದಿಲ್ಲೊಂದು ಪರಿಹಾರ ಸೂಚಿಸುವ ವಿಶೇಷವಾಗಿ ಮಹಿಳಾ ಸಹೋದ್ಯೋಗಿಗಳ ವಲಯದಲ್ಲಿ ಕೌನ್ಸೆಲರ್ ಎಂದೇ ಖ್ಯಾತಳಾದ ಸರಳಾ ದೇಶಪಾಂಡೆ ಎದುರು ಹೊರಹಾಕಿದ್ದೆ ಎಡವಟ್ಟಾಗಿ ಪ್ರಭಂಜನನ ನಿರ್ಲಿಪ್ತತೆ ಬೇರೆ ಬೇರೆ

ವ್ಯಾಖ್ಯಾನಗಳನ್ನು ಪಡೆಯುತ್ತ ದಿನಕ್ಕೊಂದು ಹೊಸ ಅರ್ಥ ಹುಟ್ಟಿಸತೊಡಗಿತು. ಐವತ್ತರ ನಂತರ ಗಂಡಸರಿಗೆ ತಮ್ಮ ಹೆಂಡತಿಯನ್ನು ಹೊರತುಪಡಿಸಿ ಪ್ರಪಂಚದಲ್ಲಿರುವ ಬೇರೆ ಎಲ್ಲ ಹೆಂಗಸರೂ ತ್ರೀಲೋಕ ಸುಂದರಿಯರಾಗಿ ಕಾಣಿಸುವರೆಂದು, ಹೊರಗೆ ಮೇಯುವ ಚಾಳಿ ಬೆಳೆಸಿಕೊಂಡು ಹೆಂಡತಿಯೆದುರು ಏನೂ ಗೊತ್ತಿಲ್ಲದ ಸಂಭಾವಿತರಂತೆಯೂ ನಿರ್ಲಿಪ್ತರಂತೆಯೂ ನಡೆದುಕೊಳ್ಳುವರೆಂದು, ಹೆಂಡತಿ ಪಕ್ಕದಲ್ಲಿ ಮಲಗಿ ಕರೀನಾನೋ ಕತ್ರಿನಾಳನ್ನೋ ಕನವರಿಸುವರೆಂದು ಸರಳಾ ದೇಶಪಾಂಡೆ ಭಯಂಕರ ಗುಟ್ಟೊಂದನ್ನು ಹೊರಗೆಡವಿದ್ದಲ್ಲದೇ  ತಮ್ಮದೇ ಬ್ಯಾಂಕಿನ ಮೂರ್ನಾಲ್ಕು ಗಂಡು ಸಹೋದ್ಯೋಗಿಗಳನ್ನು ಉದಾಹರಣೆ ಸಹಿತ ಹೆಸರಿಸಿ ವಸುಮತಿಯಲ್ಲಿ ಏಕಕಾಲಕ್ಕೆ ಭಯ ಮತ್ತು ಗಂಡನ ಮೇಲೆ ಅನುಮಾನ ಇನ್ನಷ್ಟು ಹೆಚ್ಚಲು ಕಾರಣಳಾದಳು. ಈಗ ವಸುಮತಿಗೆ ಪ್ರಭಂಜನನನ್ನು ವಿವಿಧ ರೀತಿಯಿಂದ ಪರೀಕ್ಷಿಸಿ ನೋಡುವುದು ದಿನನಿತ್ಯದ ಕೆಲಸದ ಜೊತೆಗೆ ಮತ್ತೊಂದು ಹೊಸ ಕೆಲಸವಾಯಿತು. ಪ್ರಭಂಜನನ ಜೇಬು ತಡಕಾಡುವದರೊಂದಿಗೆ ಆರಂಭಗೊಂಡ ವಸುಮತಿಯ ತಪಾಸಣೆ ಅವನ ಮೊಬೈಲ್, ವಾಟ್ಸಪ್, ಫೇಸ್‍ಬುಕ್, ಇ-ಮೇಲ್, ಇನ್ಸ್‍ಟಾಗ್ರಾಮ್, ಟ್ವಿಟರ್‍ಗಳನ್ನು ಜಾಲಾಡುವುದರ ತನಕ ಮುಂದುವರೆಯಿತು. ಯಾವ ಸುಳಿವು ಸಿಗದೆ ಹೋದಾಗ ಪ್ರಭಂಜನ ತುಂಬ ಹುಷಾರಾಗಿ ಸರಳಾ ದೇಶಪಾಂಡೆ ಉಲ್ಲೇಖಿಸಿದ ಆ ಎಲ್ಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರಬಹುದೆನ್ನುವ ತೀರ್ಮಾನಕ್ಕೆ ವಸುಮತಿ ಬಂದಿದ್ದಳು. 

ಈಗೀಗ ವಸುಮತಿಗೆ ಕನ್ನಡಿ ಎದುರು ಗಂಟೆಗಟ್ಟಲೆ ನಿಂತು ಅಲಂಕರಿಸಿಕೊಳ್ಳುವ ಹೊಸ ಅಭ್ಯಾಸವೊಂದು ಶುರುವಾಗಿದೆ. ಮೊದಲೆಲ್ಲ ಮುಖಕ್ಕೆ ಒಂದಿಷ್ಟು ಪೌಡರ್ ಲೇಪಿಸಿ ನೆಪಕ್ಕೆ ಎನ್ನುವಂತೆ ತಲೆಯ ಮೇಲೆ ಬಾಚಣಿಗೆ ಆಡಿಸಿಕೊಂಡು ಜುಟ್ಟಿಗೊಂದು ಹೇರ್ ಬಾಂಡ್ ಸಿಕ್ಕಿಸಿ ಕೆಲಸಕ್ಕೆ ತಡವಾಯಿತೆಂದು ಮನೆಗೆ ಬೀಗಹಾಕಿ ಓಡುತ್ತಿದ್ದವಳು ಈಗ ಬೆಡ್ ರೂಮಿನ ಅಲ್ಮೆರಾದ ನಿಲುವುಗನ್ನಡಿ ಎದುರು ಹೆಚ್ಚಿನ ಸಮಯ ಕಳೆಯುವುದನ್ನು ರೂಢಿಸಿಕೊಂಡಿರುವಳು. ರಿಟೈರ್ಡ್ ಆಗಲು ಒಂದು ವರ್ಷವಷ್ಟೇ ಬಾಕಿ ಇರುವ ಮ್ಯಾನೇಜರ್ ಶ್ರೀಧರರಾವ್ ಬ್ಯಾಂಕಿಗೆ ಬಂದುಹೋಗುವ ಮಹಿಳಾ ಗ್ರಾಹಕರನ್ನು ಯಾವ ಯಾವುದೋ ಕಾರಣ ಮುಂದೆಮಾಡಿಕೊಂಡು ಮಾತನಾಡಿಸುವುದು ಪಾಸ್‍ಬುಕ್ ಕೊಡುವ ನೆಪದಲ್ಲಿ ಮೈ ಕೈ ಮುಟ್ಟುವುದು ಆಗಾಗ ವಲ್ಗರ್ ಜೋಕುಗಳನ್ನು ಹೇಳಿ ನಗುವುದನ್ನು ನೋಡಿ ವಸುಮತಿಗೆ ಪ್ರಪಂಚದಲ್ಲಿನ ಗಂಡಸರೆಲ್ಲ ಒಂದೇ ಜಾತಿಯವರೆಂದೆನಿಸಿ ಇಡೀ ಗಂಡುಕುಲವೇ ನಂಬಿಕೆಗೆ ಅನರ್ಹ ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಪ್ರಭಂಜನ ಕೂಡ ಕಾಲೇಜಿನಲ್ಲಿ ಅಲ್ಲಿನ ಮಹಿಳಾ ಸಹೋದ್ಯೋಗಿಗಳೊಂದಿಗೆ ಇದೇ ರೀತಿ ವರ್ತಿಸುತ್ತಿರಬಹುದೆನ್ನುವ ಕಲ್ಪನೆಯಿಂದಲೇ ವಸುಮತಿ ಅದೆಷ್ಟು ದಿಗಿಲುಗೊಂಡಳೆಂದರೆ ಮರುದಿನ ಬ್ಯಾಂಕಿಗೆ ರಜೆ ಹಾಕಿದವಳೆ ಬ್ಯೂಟಿ ಪಾರ್ಲರಿಗೆ ಹೋಗಿ ಅಲ್ಲಿನ ಬ್ಯೂಟಿಶಿಯನ್‍ಗೆ ಮುಖಕೊಟ್ಟು ಕುಳಿತವಳು ಮಧ್ಯಾಹ್ನದ ಹೊತ್ತಿಗೆ ಮೇಕಪ್ ಎಂಬ ಮಾಯೆಯ ಸಕಲ ಚರಾಚರ ಕ್ರಿಯೆಗಳು ಪೂರ್ಣಗೊಂಡು ಕನ್ನಡಿಯಲ್ಲಿ ಹೊಳೆಯುತ್ತಿರುವ ತನ್ನ ಮುಖವನ್ನು ನೋಡಿದಾಗಲೇ ಅವಳಿಗೆ ಸಮಾಧಾನವಾಯಿತು. 

ಸಾಯಂಕಾಲ ಕಾಲೇಜಿನಿಂದ ಮನೆಗೆ ಬಂದ ಪ್ರಭಂಜನನಿಗೂ ವಸುಮತಿ ಇವತ್ತು ಎಂದಿನಂತಿಲ್ಲ ಅವಳಲ್ಲಿ ಏನೋ ಬದಲಾವಣೆಯಾದಂತಿದೆ ಎಂದೆನಿಸಿದರೂ ಅಂವ ಪ್ರತಿದಿನದಂತೆ ಮುಖ ತೊಳೆದು ಟೀ ಕುಡಿದು ಬೆಡ್ ರೂಂಗೆ ಹೋಗಿ ಪುಸ್ತಕ ಕೈಯಲ್ಲಿ ಹಿಡಿದು ಕುಳಿತ. ವಸುಮತಿ ಕೆಲಸವಿಲ್ಲದಿದ್ದರೂ ಬೇಕೆಂದೆ ಅಡುಗೆ ಮನೆ ಮತ್ತು ಬೆಡ್‍ರೂಂ ನಡುವೆ ಹತ್ತಾರು ಬಾರಿ ಓಡಾಡಿದಳು. ಕಾರಣವಿಲ್ಲದೆ ಪ್ರಭಂಜನನನ್ನು ಮಾತನಾಡಿಸಿದಳು. ಸ್ಲೀವ್‍ಲೆಸ್ ರವಿಕೆ ತೊಟ್ಟವಳು ಗಳಿಗೆಗೊಮ್ಮೆ ಕೂದಲನ್ನು ಕೆರೆದು ನುಣುಪಾಗಿಸಿದ ಕಂಕುಳನ್ನು ಬೇಕೆಂದೆ ಕೈಯೆತ್ತಿ ಪ್ರಭಂಜನನಿಗೆ ಕಾಣುವಂತೆ ಪ್ರದರ್ಶಿಸಿದಳು. ಅಂದು ರಾತ್ರಿ ಪ್ರಭಂಜನ ಕೂಡ ಒಂದಿಷ್ಟು ಸಕಾರಾತ್ಮಕವಾಗಿ ಸ್ಪಂದಿಸಿದ. ಊಟದ ನಂತರ ಪುಸ್ತಕ ಕೈಗೆತ್ತಿಕೊಳ್ಳದೆ ಬೇಗನೆ ಮಂಚ ಸೇರಿದವನು ಹತ್ತಿರ ಬಂದವಳನ್ನು ಬರಸೆಳೆದು ಅಪ್ಪಿದ. ವಸುಮತಿಯ ದುರಾದೃಷ್ಟವೋ ಏನೋ ದೇಹಕ್ಕೆ ದೇಹ ಬೆಸೆದುಕೊಂಡು ಉನ್ಮತ್ತಗೊಂಡಿರುವ ಗಳಿಗೆ ನಿನ್ನೆಯಷ್ಟೆ ಓದಿ ಮುಚ್ಚಿಟ್ಟ ಫ್ರಾಂಝ್ ಕಾಫ್ಕಾನ ‘ಮೆಟಾಮಾರ್ಫಾಸಿಸ್’ ಕಥೆಯ ಗ್ರೇಗರ್‍ನ ಪಾತ್ರ ಪ್ರಭಂಜನನ ಮನದಲ್ಲಿ ಸುಳಿದು ತಾವಿಬ್ಬರೂ ಒಂದು ದೊಡ್ಡ ಕ್ರಿಮಿಯಾಗಿ ರೂಪಾಂತರಗೊಳ್ಳುತ್ತಿರುವಂತೆ ಭಾಸವಾಗಿ ಅಸಹ್ಯ ಭಾವನೆಯೊಂದು ಮೂಡಿ ಹೆಂಡತಿಯನ್ನು ದೂರತಳ್ಳಿ ಪಕ್ಕಕ್ಕೆ ಉರುಳಿದ. ಸುಖದ ಉತ್ತುಂಗದಲ್ಲಿದ್ದವಳನ್ನು ಎತ್ತಿ ಪಾತಾಳಕ್ಕೆ ಒಗೆದಂತಾಯಿತು. ಸದ್ದು ಕೇಳಿಸಿದತ್ತ ದೃಷ್ಟಿ ಹರಿಸಿದವಳಿಗೆ ಕೋಣೆಯ ಮೂಲೆಯಲ್ಲಿ ಪುಸ್ತಕ ಕೈಯಲ್ಲಿ ಹಿಡಿದು ಧ್ಯಾನಮಗ್ನನಾದ ಮುನಿಯಂತೆ ಕುಳಿತಿದ್ದ ಪ್ರಭಂಜನ ಕಣ್ಣಿಗೆ ಬಿದ್ದ. ಪ್ರಭಂಜನನಿಗೆ ಸೆಕ್ಸ್‍ನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆಯೋ ಇಲ್ಲ ನನ್ನ ಮೇಲೆ ನಿರಾಸಕ್ತಿ ಮೂಡುತ್ತಿದೆಯೋ ಎಂದು ಗೊಂದಲಕ್ಕೊಳಗಾದ ವಸುಮತಿ ಮರುದಿನ ಅವನನ್ನು ಪರೀಕ್ಷೆಗೊಳಪಡಿಸುವ ಕಾರ್ಯತಂತ್ರವನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಸಿದ್ಧಪಡಿಸಿದಳು. 

* * *

ಪ್ರಭಂಜನನನ್ನು ಕತ್ರಿನಾಳ ಆಳೆತ್ತರದ ಫೋಟೋದ  ಎದುರು ನಿಲ್ಲಿಸಿ ಅಂಗಡಿ ಒಳಹೊಕ್ಕ ವಸುಮತಿ ಬೇಕೆಂದೆ ಬಟ್ಟೆ ಹುಡುಕುವ ನೆವದಲ್ಲಿ ಅಂಗಡಿಯೊಳಗಿಂದ ಹೊರಬರಲು ಒಂದರ್ಧಗಂಟೆ ತಡಮಾಡಿದಳು. ಜನನಿಬಿಡ ಪ್ರದೇಶದ ಆಯಕಟ್ಟಿನ ಜಾಗದಲ್ಲಿರುವ ‘ಇನ್ನರ್ ಕಂಫರ್ಟ್’ ಹೆಸರಿನ ಆ ಬಟ್ಟೆಯಂಗಡಿ ಎದುರು ಅರೆಬರೆ ಪೋಷಾಕಿನಲ್ಲಿ  ಅರೆಬೆತ್ತಲೆಯಾಗಿ ಕಂಗೊಳಿಸುತ್ತಿರುವ ಕತ್ರಿನಾಳ ದಿವ್ಯ ಸೌಂದರ್ಯಕ್ಕೆ ಒಂದುಕ್ಷಣದ ಮಟ್ಟಿಗಾದರೂ ದಾರಿಹೋಕರನ್ನು ತನ್ನತ್ತ ಸೆಳೆದು ನಿಲ್ಲಿಸುವ ಮಾದಕತೆಯಿತ್ತು. ಪ್ರಭಂಜನನನ್ನು ಪರೀಕ್ಷಿಸಲೆಂದೋ ಅಥವಾ ಅವನನ್ನು ಉನ್ಮಾದಗೊಳಿಸಲೆಂದೋ ಬಟ್ಟೆಕೊಳ್ಳುವ ನೆಪದಲ್ಲಿ ಕರೆತಂದಿದ್ದ ವಸುಮತಿ ಒಳಗೆ ಬಟ್ಟೆ ಹುಡುಕುತ್ತಿದ್ದರೂ ಅವಳ ಒಂದು ಕಣ್ಣು ಕತ್ರಿನಾಳ ಫೋಟೋದ  ಎದುರು ನಿಂತಿದ್ದ ಗಂಡನ ಮೇಲೆಯೇ ನೆಟ್ಟಿತ್ತು. ಪ್ರಭಂಜನ ತನ್ನೆದುರಿನ ಆಳೆತ್ತೆರದ ಕತ್ರಿನಾಳ ಭಾವಚಿತ್ರವನ್ನೆ ತದೇಕಚಿತ್ತನಾಗಿ ನೋಡುತ್ತಿದ್ದವನು ಒಮ್ಮೆ ಕತ್ರಿನಾಳ ಎಡಕ್ಕೂ ಮತ್ತೊಮ್ಮೆ ಬಲಕ್ಕೂ ಮಗದೊಮ್ಮೆ ಮೇಲೆ ಕೆಳಗೆ ಹೀಗೆ ಕ್ಷಣ ಕ್ಷಣಕ್ಕೂ ದೃಷ್ಟಿ ಬದಲಿಸುತ್ತಿದ್ದವನು ಅದಕ್ಕೆ ತಕ್ಕಂತೆ ತಾನು ನಿಂತ ಭಂಗಿಯನ್ನೂ ಬದಲಿಸುತ್ತ ವಸುಮತಿಯಲ್ಲಿ ಆಸೆ ಭರವಸೆಗಳ ಮಹಾಪೂರವನ್ನೇ ಹುಟ್ಟಿಸಿದ. ಅಂಗಡಿಯೊಳಗಿಂದ ಹೊರಬಂದು ಪ್ರಭಂಜನನನ್ನೆ ದಿಟ್ಟಿಸಿ ನೋಡಿದವಳ ಕಣ್ಣಿಗೆ ಅವನಲ್ಲೇನೋ ಬದಲಾವಣೆಯಾದಂತೆ ಭಾಸವಾಯಿತವಳಿಗೆ. ಅವನನ್ನು ವಾಸ್ತವಕ್ಕೆಳೆಯುತ್ತ ‘ಏನೂ ಪ್ರೊಫೆಸರ್  ಸಾಹೇಬರು ಇನ್ನೊಂದಿಷ್ಟು ಹೊತ್ತು ನಾನು ಬರುವುದು ತಡವಾಗಿದ್ದರೆ ಕತ್ರಿನಾಳನ್ನು ತಿಂದೇ ಬಿಡ್ತಿದ್ದಿರೇನೋ’ ಎಂದು ನಗೆಯಾಡಿದಳು. ‘ಅಲ್ಲ ವಸು ಹೀಗೆ ಬಟ್ಟೆಯಿಲ್ಲದೆ ಅರೆಬೆತ್ತಲೆಯಾಗಿ ದೇಹನ ಪ್ರದರ್ಶಿಸಿದರೆ ನೋಡುವವರಲ್ಲಿ ಆಸಕ್ತಿ ಹುಟ್ಟಿಸಬಹುದು ಅಂತ ಭಾವಿಸ್ತಾರಲ್ಲ ಎಂಥ ಮೂರ್ಖರಿವರು. ಸೌಂದರ್ಯ ಇರೋದು ಬಿಚ್ಚಿ ತೋರಿಸೊದರಲ್ಲಲ್ಲ. ಮುಚ್ಚಿಟ್ಟಾಗ ಮನಸ್ಸಿನಲ್ಲಿ ಮೂಡುವ ಕುತೂಹಲ, ಕಲ್ಪನೆ ಬಿಚ್ಚಿಟ್ಟಾಗ ಇರಲ್ಲ ನೋಡು. ಬಿಚ್ಚಿದ ಆ ಕ್ಷಣಕ್ಕೆ ಇರೋದು ಇಷ್ಟೇನಾ ಅನ್ನೊ ನಿರ್ಲಿಪ್ತತೆ ಹುಟ್ಟುತ್ತೆ’ ಪ್ರಭಂಜನನ ಮಾತು ಕೇಳುತ್ತ ವಸುಮತಿಗೆ ಅದೇ ಆಗ ಮೂಡಿದ್ದ ಭರವಸೆಗಳೆಲ್ಲ ಒಂದೊಂದಾಗಿ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಂತೆ ಭಾಸವಾಗಿ ಕಂಗಳು ಹನಿಗೂಡಿದವು.

* * *

ಬ್ಯಾಂಕಿನ ಕೇಂದ್ರ ಕಚೇರಿಯ ಮುಖ್ಯಸ್ಥರಾದ ಸುಬ್ರತೋ ಬ್ಯಾನರ್ಜಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಯುಕ್ತ ಬ್ಯಾಂಕ್‍ನ ಸಭಾಂಗಣದಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬ್ಯಾಂಕಿನ ಉದ್ಯೋಗಿಗಳು ಮಾತ್ರವಲ್ಲದೆ ಊರಿನ ಗಣ್ಯರು, ನಾಗರಿಕರು ಕೂಡ ಪಾಲ್ಗೊಂಡು ಸಭಾಂಗಣ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಸುಬ್ರತೋ ಬ್ಯಾನರ್ಜಿ ಮತ್ತು ಅವರ ಪತ್ನಿ ಮೃಣಾಲಿನಿ ಬ್ಯಾನರ್ಜಿ ಆಸೀನರಾಗಿದ್ದರು. ಮೃಣಾಲಿನಿ ಬಂಗಾಳಿ ಭಾಷೆಯಲ್ಲಿ ಹಲವಾರು ಕಥೆ ಕಾದಂಬರಿಗಳನ್ನು ಬರೆದು ಜನಪ್ರಿಯ ಬರಹಗಾರ್ತಿಯೆಂದು ಹೆಸರು ಮಾಡಿದ್ದರು. ಅವರ ಅನೇಕ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಮೃಣಾಲಿನಿ ಕನ್ನಡಿಗರಿಗೂ ಪರಿಚಿತರಾಗಿದ್ದರು. ಅವರನ್ನು ಕಣ್ಣಾರೆ ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ಸುಬ್ರತೋ ಬ್ಯಾನರ್ಜಿ ಎಲ್ಲರಿಗೂ ಧನ್ಯವಾದ ಹೇಳಿದರು. ತಾವು ಸವೆಸಿದ ಬದುಕಿನ ದಾರಿಯನ್ನು ನೆನಪಿಸಿಕೊಂಡು ಭಾವುಕರಾದರು. ಬಾಳಿನ ಈ ಪಯಣದಲ್ಲಿ ಜೊತೆಗೆ ನಿಂತು ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿದರು. ತಮ್ಮ ಪತ್ನಿ ಮೃಣಾಲಿನಿಯನ್ನು ಬಾಯಿತುಂಬ ಹೊಗಳಿದರು. ಬ್ಯಾಂಕಿನ ವ್ಯವಹಾರಿಕ ಜಗತ್ತಿನÀ ಸುಬ್ರತೋ ಸೃಜನಶೀಲ ಕ್ಷೇತ್ರದಲ್ಲಿನ ಮೃಣಾಲಿನಿ ಬದುಕಿನ ಈ ಪಯಣದಲ್ಲಿ ಪರಸ್ಪರ ವಿಭಿನ್ನ ಅಭಿರುಚಿಗಳ ಅವರಿಬ್ಬರೂ ಜೊತೆಯಾದದ್ದೇ ಒಂದು ಸೋಜಿಗ ಎಂದು ಅಚ್ಚರಿಪಟ್ಟರು. ‘ಪರಸ್ಪರ ನಂಬಿಕೆ, ಗೌರವ, ವಿಶ್ವಾಸಗಳೇ ದಾಂಪತ್ಯದ ಯಶಸ್ಸಿನ ತಳಹದಿಗಳು. ನಾನು ಮೃಣಾಲಿನಿಯ ಬೆಳವಣಿಗೆಗೆ ನೀರೆರೆದೆ ಅವಳು ನನ್ನ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಳು. ನಾನು ಅವಳ ಅಭಿರುಚಿ, ಆಸಕ್ತಿಯನ್ನು ಗೌರವಿಸಿದೆ ಅವಳು ನನ್ನ ವ್ಯವಹಾರಿಕ ಪ್ರಜ್ಞೆಯನ್ನು ವಿಸ್ತರಿಸಿದಳು. ದಾಂಪತ್ಯ ಎನ್ನುವುದು ಕೇವಲ ದೇಹದ ಆಕರ್ಷಣೆ ಮಾತ್ರವಲ್ಲ. ಕಾಮವೇ ದಾಂಪತ್ಯದ ಬದುಕಿನ ಪರಮಾವಧಿಯೂ ಮತ್ತು ಅಂತಿಮ ಸತ್ಯವೂ ಅಲ್ಲ. ಧರ್ಮೆಚ, ಅರ್ಥೇಚ, ಕಾಮೆಚ, ಮೋಕ್ಷೆಚ ಅಹಮ್ ಇವಾಮ್ ನಾತಿಚರಾಮಿ ಎಂದು ಸಪ್ತಪದಿ ತುಳಿದ ದಾಂಪತ್ಯದಲ್ಲಿ ಕಾಮ ಅಥವಾ ಸೆಕ್ಸ್ ಅದೊಂದು ಸಂತಾನಭಿವೃದ್ಧಿಗೆ ಅಗತ್ಯವಾದ ಕ್ರಿಯೆಯೇ ವಿನ: ಅದೇ ಇಡೀ ಬದುಕಲ್ಲ’ ಎಂದು ಹಿತನುಡಿಗಳನ್ನಾಡಿದರು. ಸುಬ್ರತೋ ಬ್ಯಾನರ್ಜಿ ಅವರ ಮಾತುಗಳನ್ನಾಲಿಸುತ್ತ ವಸುಮತಿ ಒಂದು ಕ್ಷಣ ತನ್ನ ಇರುವಿಕೆಯನ್ನೇ ಮರೆತಳು. ಅವಳ ಭಾವಕೋಶದ ತುಂಬ ಪ್ರಭಂಜನನೇ ತುಂಬಿಕೊಂಡ. ಪ್ರಭಂಜನನ ವಿಸ್ತಾರವಾದ ಓದು, ಆಸಕ್ತಿ, ವಿದ್ವತ್‍ಗಳೆದುರು ಕಾಮ ಅರ್ಥಹೀನ ಎಂದೆನಿಸತೊಡಗಿತವಳಿಗೆ. ಸಭಾಂಗಣದ ಬಾಗಿಲ ಬಳಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ಮೃಣಾಲಿನಿಯವರ ಪುಸ್ತಕಗಳಿಂದ ಎರಡು ಅನುವಾದಿತ ಕಥಾಸಂಕಲನಗಳನ್ನು ಪ್ರಭಂಜನಗಾಗಿ ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದಳು. 

* * *

ಮನುಷ್ಯ ಪಾಠ ಕಲಿಯದಿದ್ದರೆ ಕೆಲವೊಮ್ಮೆ ಬದುಕೇ ಅವನಿಗೆ ಪಾಠ ಕಲಿಸುತ್ತದಂತೆ. ವಸುಮತಿಯ ವಿಷಯದಲ್ಲಿ ಈ ಮಾತು ನಿಜವಾಯಿತು. ಕೈಯಲ್ಲಿ ಮೃಣಾಲಿನಿಯವರ ಅನುವಾದಿತ ಕಥಾಸಂಕಲನಗಳನ್ನು ಹಿಡಿದು ಹೊಸ ಮನುಷ್ಯಳಾಗಿ ಅವಸರವಸರದಿಂದ ಮನೆಯತ್ತ ಹೆಜ್ಜೆಹಾಕುತ್ತಿದ್ದವಳನ್ನು ಹಿಂದುಗಡೆಯಿಂದ ಬಂದ ಬೈಕ್ ಸವಾರನೊಬ್ಬ  ಅದು ಯಾವ ಮಾಯದಲ್ಲೋ ಗುದ್ದಿ ಮುಂದೆಹೋದ. ಬೈಕ್ ಹಾಯ್ದದ್ದೊಂದು ನೆಪವಾಗಿ ವಸುಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಒಂದು ತಿಂಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಯಿತು. ಪರೀಕ್ಷೆ ಕಾಲವಾದ್ದರಿಂದ ಮಗ ಮತ್ತು ಮಗಳು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ‘ಟೇಕ್ ಕೇರ್ ಮಮ್ಮಿ’ ಎಂದು ಮಾತು ಮುಗಿಸಿದ್ದರು. ಆ ಇಡೀ ಒಂದು ತಿಂಗಳು ಪ್ರಭಂಜನ ಕಾಲೇಜಿಗೆ ರಜೆಹಾಕಿ ವಸುಮತಿಯ ಆರೈಕೆಗೆ ನಿಂತ. ಬೆಳಗ್ಗೆ ಬೆಡ್ ಟೀನಿಂದ ಹಿಡಿದು ರಾತ್ರಿ ಊಟ ಮಾಡಿಸಿ ಮಲಗಿಸುವವರೆಗೂ ಅವಳನ್ನು ಮಗುವಿನಂತೆ ಜೋಪಾನ ಮಾಡಿದ. ಸ್ನಾನ ಮಾಡಿಸುವುದು, ಮೈ ಒರೆಸುವುದು, ಬಟ್ಟೆ ತೊಡಿಸುವುದು ಆಗೆಲ್ಲ ವಸುಮತಿ, ಪ್ರಭಂಜನನ ಕೈಯೊಳಗೆ ಮಗುವಿನಂತಾಗುತ್ತಿದ್ದಳು. ದಿನಗಳುರುಳುತ್ತಿದ್ದಂತೆ ವಸುಮತಿಗೆ ದಾಂಪತ್ಯದಲ್ಲಿ  ಕಾಮದಾಚೆಗೂ ಒಂದು ವಿಸ್ತೃತವಾದ ಬದುಕಿದೆ ಎನ್ನುವುದು ಅರ್ಥವಾಗತೊಡಗಿತು. ಈಗ ಅವಳು ಪ್ರಭಂಜನನನ್ನು ಹೊಸ ಅರ್ಥದಲ್ಲಿ ನೋಡುತ್ತಾಳೆ. ಈ ಮೊದಲಿನ ಆತಂಕ, ಉದ್ವಿಗ್ನತೆಗಳಿಲ್ಲದೆ ವಸುಮತಿ ಬದುಕನ್ನು ಪ್ರೀತಿಸಲಾರಂಭಿಸಿದ್ದಾಳೆ. ದಿನದಿನಕ್ಕೂ ಬದಲಾಗುತ್ತಿರುವ ವಸುಮತಿಯನ್ನು ಪ್ರಭಂಜನ ಕೂಡ ಅವಳೊಂದು ಚಿಕ್ಕಮಗುವೇನೋ ಎನ್ನುವಂತೆ ಪ್ರೀತಿಸತೊಡಗಿದ. ಚೇತರಿಸಿಕೊಂಡು ಪುನ: ಕೆಲಸಕ್ಕೆ ಹೋಗಲಾರಂಭಿಸಿದ ಮೊದಲ ದಿನ ಪ್ರಭಂಜನನೆ ಅವಳನ್ನು ಬ್ಯಾಂಕ್‍ವರೆಗೂ ಡ್ರಾಪ್ ಮಾಡಿದ. ಅವನೆಡೆ ಕೈಬೀಸಿ ಒಳಹೋಗುತ್ತಿದ್ದವಳ ನಡಿಗೆಯಲ್ಲಿ ಒಂದುರೀತಿಯ ಎಂದೂ ಇಲ್ಲದ ಲವಲವಿಕೆ ಇತ್ತು. ಪ್ರಭಂಜನನಿಗೂ ಇಂದು ವಸುಮತಿ ಎಂದಿಗಿಂತ ಹೆಚ್ಚು ಖುಷಿಯಾಗಿದ್ದಾಳೆ ಅನಿಸಿತು.

-ರಾಜಕುಮಾರ ಕುಲಕರ್ಣಿ