Saturday, August 23, 2014

ಡಾ. ಯು. ಆರ್. ಅನಂತಮೂರ್ತಿ: ನಾಡು ಕಂಡ ಶ್ರೇಷ್ಠ ಚಿಂತಕ ಹಾಗೂ ಬರಹಗಾರ

       



  (೨೧. ೧೨. ೧೯೩೨- ೨೨. ೦೮. ೨೦೧೪)


          ಕನ್ನಡದ ಶ್ರೇಷ್ಠ ಬರಹಗಾರ ಮತ್ತು ಚಿಂತಕ ಡಾ. ಯು. ಆರ್. ಅನಂತಮೂರ್ತಿ ಇನ್ನಿಲ್ಲ. ಕನ್ನಡ ಸಾರಸ್ವತಲೋಕದ ಪ್ರಭೆಯೊಂದು ನಂದಿಹೋಯಿತು ಎನ್ನುವ ಸಂಗತಿ ಜೀರ್ಣಿಸಿಕೊಳ್ಳುವುದು ಬಲು ಕಷ್ಟದ ವಿಷಯ. ತಮ್ಮ ಸಮಗ್ರ ಸಾಹಿತ್ಯದ ಮೂಲಕ ಕನ್ನಡಕ್ಕೆ ಆರನೇ ಜ್ಞಾನಪೀಠ ತಂದು  ಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ಡಾ.ಯು. ಆರ್. ಅನಂತಮೂರ್ತಿ ಅವರು ಸಂಸ್ಕಾರ, ಭವ, ಘಟಶ್ರಾದ್ಧ, ಬರ ಸಂಖ್ಯಾತ್ಮಕ ದೃಷ್ಟಿಯಿಂದ ಬೆರಳೆಣಿಕೆಯ ಕಾದಂಬರಿಗಳನ್ನು ಮತ್ತು ಕೆಲವು ಕಥಾಸಂಕಲನಗಳನ್ನು ಬರೆದು ಬರೆದದ್ದು ಕಡಿಮೆ ಎಂದೆನಿಸಿದರೂ ಅವರು  ಬರೆದದ್ದೆಲ್ಲ ತುಂಬ ಮೌಲಿಕವಾದದ್ದು. ೧೯೬೦ ರ ದಶಕದಲ್ಲಿ 'ಸಂಸ್ಕಾರ' ದಂಥ ಸಂಪ್ರದಾಯ ವಿರೋಧಿ ಕಾದಂಬರಿಯನ್ನು ಅದು ಕುರುಡು ನಂಬಿಕೆಗಳು ಅತ್ಯಂತ ಪ್ರಸ್ತುತವಾಗಿದ್ದ ದಿನಗಳಲ್ಲಿ ಬರೆಯಲು ಸಾಧ್ಯವಾಗಿದ್ದು ಮೂರ್ತಿಗಳಲ್ಲಿದ್ದ ಸಮಾಜದ ಕುರಿತಾದ ಕಳಕಳಿಗೆ ನಿಜವಾದ ದೃಷ್ಟಾಂತ. ಸಂಪ್ರದಾಯವನ್ನು ವಿರೋಧಿಸಿ ಬರೆಯಲು ತಮಗೆ ಹೇಗೆ  ಸಾಧ್ಯವಾಯಿತು ಎನ್ನುವುದನ್ನು ತಮ್ಮ  ಆತ್ಮಕಥನ 'ಸುರಗಿ' ಯಲ್ಲಿ ಹೀಗೆ ಹೇಳಿಕೊಂಡಿರುವರು  'ಅಪ್ಪ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಹೊಲದ ಕೆಲಸದ ಆಳನ್ನು ತಮ್ಮ ಸಮಕ್ಕೆ ಕೂಡಿಸಿಕೊಂಡು ಊಟ ಹಾಕುತ್ತಿದ ಅಂದಿನ ಮನೆಯ ವಾತಾವರಣವೇ ನಾನು  ಬದುಕುತ್ತಿದ್ದ ವ್ಯವಸ್ಥೆಯನ್ನು ವಿರೋಧಿಸಿ ಬರೆಯಲು ಸ್ಪೂರ್ತಿ ನೀಡಿತು'. ಸಂಪ್ರದಾಯಗಳು ಜಡ್ಡುಗಟ್ಟಿದ್ದ ಆ ದಿನಗಳಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದು ಅವರೊಳಗಿನ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ಹೇಳದೆ ಹೇಳಿದ್ದನ್ನು ಸ್ವತ: ಕಾರ್ಯಗತ ಮಾಡಿತೋರಿಸಿದ ಅವರೊಳಗಿನ ಈ ಧಾಡಸಿತನದ ಗುಣವೇ ಅವರನ್ನು ವಿರೋಧಿಸುವವರಂತೆ ಮೆಚ್ಚುವ ಮತ್ತು ಅನುಕರಿಸುವ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿತು. ಡಾ. ಯು. ಆರ್. ಅನಂತಮೂರ್ತಿ ವೈಚಾರಿಕವಾಗಿ ಅತ್ಯಂತ ಪ್ರಬುದ್ಧರಾಗಲು ಮತ್ತು ತಾನು ಬದುಕುತಿದ್ದ ವ್ಯವಸ್ಥೆಯ ಅಪಸವ್ಯಗಳನ್ನು ವಿರೋಧಿಸುವಂತಾಗಲು ಅವರು ಪಡೆದ ಇಂಗ್ಲಿಷ್ ಶಿಕ್ಷಣವೂ ಕಾರಣವಾಯಿತು. ಬರ್ಮಿಂಗ್ ಹ್ಯಾಮ್ ಯುನಿವರ್ಸಿಟಿಯಲ್ಲಿನ ಇಂಗ್ಲಿಷ್ ಶಿಕ್ಷಣ ಅವರನ್ನು ಬರಹಗಾರನ ಜೊತೆಗೆ ಒಬ್ಬ ಚಿಂತಕನನ್ನಾಗಿಯೂ ರೂಪಿಸಿತು. ಅದಕ್ಕೆಂದೇ ಅವರು ತಮ್ಮ ಬರಹ ಹಾಗೂ ವೈಚಾರಿಕ ಮಾತುಗಳಿಂದ ತಾವು ಬದುಕುತ್ತಿದ್ದ ಸಮಾಜವನ್ನು ಕಾಲಕಾಲಕ್ಕೆ ಜಾಗೃತಗೊಳಿಸುತ್ತಲೇ ಬಂದರು. ಬರಹಗಾರನೊಬ್ಬ ಸಮಾಜದ ಸಮಸ್ಯೆಗಳು ಮತ್ತು ವೈರುಧ್ಯಗಳಿಗೆ ಸದಾಕಾಲ ಮುಖಾಮುಖಿಯಾಗಿರಬೇಕು ಎನ್ನುವ ನಿಲುವು ಅವರದಾಗಿತ್ತು. ಉತ್ತಮವಾದದ್ದನ್ನು ಉತ್ತೇಜಿಸಿ ಮಾತನಾಡುತ್ತಿದುದ್ದಕ್ಕಿಂತ ತಮಗೆ ಸರಿಕಾಣದ್ದನ್ನು ಅವರು ಖಂಡಿಸಿ ಮಾತನಾಡಿದ್ದೇ ಹೆಚ್ಚು.  ಲೇಖಕ ಸತ್ಯನಾರಾಯಣ ಅವರು ಹೇಳುವಂತೆ ಲೇಖಕನಾದವನ ಕೆಲಸ  ಸದಾಕಾಲ ಓದುಗರಿಗೆ ಪ್ರಿಯವಾದದ್ದನ್ನೇ ಹೇಳುವುದಲ್ಲ  ಎನ್ನುವ ಮಾತು ಅನಂತಮೂರ್ತಿಯವರಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಕಾರಣದಿಂದಲೇ ಅವರು ಸದಾಕಾಲ ಹೇಳುತ್ತಿದ್ದ ಮಾತು ಬರಹಗಾರ ಏನನ್ನೂ ಸುಲಭವಾಗಿ  ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದಿಂದ ನೋಡಬೇಕೆಂದು.

             ಮೂರ್ತಿಗಳು ಶ್ರೇಷ್ಠ ಬರಗಾರನಾದಂತೆ ಅವರೊಬ್ಬ ಶ್ರೇಷ್ಠ ವಾಗ್ಮಿಯೂ ಆಗಿದ್ದರು. ಅವರಲ್ಲಿದ್ದ ವಾಕಪಟುತ್ವವೇ ಅವರು ಅನೇಕರಿಗೆ ಹತ್ತಿರವಾಗಲು ಅದರೊಂದಿಗೆ ಕೆಲವರ ಶತ್ರುತ್ವವನ್ನು ಕಟ್ಟಿಕೊಳ್ಳಲು ಕಾರಣವಾಯಿತು. ತಮಗೆ ಅನಿಸಿದ್ದನ್ನು ಕೇಳುಗರು ಒಪ್ಪಿಕೊಳ್ಳುವಂತೆ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು. ಒಂದೊಂದು ಸಲ ಅವರ ಚಿಂತನೆಗಳು ಅವರೊಬ್ಬ ಗಾಂಧಿಯ ಕಡು ವ್ಯಾಮೋಹಿ ಎನ್ನುವಂತೆ ಬಿಂಬಿತವಾಗುತ್ತಿದ್ದವು. ಈ ಮಾತಿಗೆ ಪುಷ್ಟಿ ಕೊಡುವಂತೆ ಅವರು ಗಾಂಧೀಜಿಯ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸಿ ಮಾತನಾಡುತ್ತಿದ್ದರು.  ಈಗಿನ ರಾಜಕಾರಣಿಗಳು ಮಾಡುತ್ತಿರುವ ಕೈಗಾರೀಕರಣ ಹಾಗೂ ಸಿಟಿ, ಬಿಟಿಗಳ ಅಭಿವೃದ್ಧಿ ಅವರ ದೃಷ್ಟಿಯಲ್ಲಿ ಅಭಿವೃದ್ಧಿಯೇ ಅಲ್ಲವಾಗಿತ್ತು. ಒಂದು ಆರ್ಥಿಕ ಬೆಳವಣಿಗೆ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಬದುಕುವ ಚೈತನ್ಯ ನೀಡಬೇಕು ಅದು ಮಾತ್ರ ಆರ್ಥಿಕ ಅಭಿವೃದ್ಧಿ ಎನ್ನುವುದು ಅವರ ನಿಲುವಾಗಿತ್ತು. ಇದು ಸಾಧ್ಯವಾಗುವುದು ಅದು ಗಾಂಧೀಜಿಯ ಸರ್ವೋದಯದ ಕಲ್ಪನೆಯಿಂದ ಮಾತ್ರ ಸಾಧ್ಯ ಎನ್ನುವ ಸಿದ್ಧಾಂತಕ್ಕೆ ಮೂರ್ತಿಗಳು ಕೊನೆಯವರೆಗೂ ಅಂಟಿಕೊಂಡಿದ್ದರು. ನಗರೀಕರಣ ಮತ್ತು ಮಾಲ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ನರೇಂದ್ರ ಮೋದಿಯಂಥ ಕೆಳ  ಸಮುದಾಯದ ಹಾಗೂ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಾಗುವುದು ಅದು ಗಾಂಧಿ ಕಟ್ಟಿದ ಭಾರತದಲ್ಲಿ ಮಾತ್ರ ಸಾಧ್ಯ ಎನ್ನುವ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದರು.

               ಅನಂತಮೂರ್ತಿ ಅವರು ಯಾವತ್ತೂ ತಾನು ಬಂದ ಸಮುದಾಯದ ಜಡ ಸಿದ್ಧಾಂತಗಳಿಗೆ ಮತ್ತು ಸಂಪ್ರದಾಯಗಳಿಗೆ ಕುರುಡು ನಂಬಿಕೆಗಳಿಂದ ಕಟ್ಟಿಬಿದ್ದವರಲ್ಲ. ಬೇರುಗಳಿಗೆ ಅಂಟಿಕೊಳ್ಳದೆ rootless (ಬೇರುರಹಿತ) ಆಗಿ ಬದುಕುವ ಕಲೆ ಮತ್ತು ಮನೊಧಾರ್ಢ್ಯ ಪ್ರತಿಯೊಬ್ಬರಲ್ಲಿ ಬಲವಾದಾಗಲೇ ವಿಶ್ವಮಾನವ ಕಲ್ಪನೆ ಸಾಧ್ಯ ಎಂದೆನ್ನುತ್ತಿದ್ದರು. ಒಂದರ್ಥದಲ್ಲಿ ಇದು  ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ ಎನ್ನುವ ಬಸವಣ್ಣನ ಸಂದೇಶವನ್ನು ಅವರು ಸ್ವತ: ಪಾಲಿಸಿಕೊಂಡು ಬಂದರು. ಜೊತೆಗೆ ಸ್ಥಾವರವಾಗದೆ ಜಂಗಮರಾಗಿರಿ  ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅನಂತಮೂರ್ತಿ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದರ ಹಿಂದಿನ ಮಾನದಂಡ ಅವರೊಳಗಿನ ಜಂಗಮ ಕಲ್ಪನೆಯೇ ಆಗಿರಬಹುದು. ಇದನ್ನು ಅರ್ಥಮಾಡಿಕೊಳ್ಳದೆ ಕೆಲವರು ವಚನಗಳನ್ನು ಬರೆಯದೇ ಇರುವ ಅನಂತಮೂರ್ತಿ ಅದು ಹೇಗೆ ಬಸವಶ್ರೀ ಪ್ರಶಸ್ತಿಗೆ ಆಯ್ಕೆಯಾದರು ಎಂದು  ವಿವಾದವನ್ನು ಸೃಷ್ಟಿಸಿ ಅವರ ವ್ಯಕ್ತಿತ್ವದ ತೇಜೋವಧೆಗೆ ಪ್ರಯತ್ನಿಸಿದ್ದುಂಟು.

              ಅನಂತಮೂರ್ತಿ ಅವರು ಸಿದ್ಧಾಂತದ ನೆಲೆಗಟ್ಟಿನಲ್ಲಿ ವಿರೋಧಿಸುತಿದ್ದರೆ ವಿನ: ಯಾವತ್ತೂ ವೈಯಕ್ತಿಕವಾಗಿ ಯಾರನ್ನೂ ವಿರೋಧಿಸಿದವರಲ್ಲ. ಬರಹಗಾರರು, ಚಿಂತಕರು, ಮಠಾಧಿಶರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಿಮರ್ಶಕರು ಹೀಗೆ ಮೂರ್ತಿಗಳ ನಿಲುವನ್ನು ಪ್ರತಿಭಟಿಸುವ ದೊಡ್ಡ ಪಡೆಯೇ ಇತ್ತು. ಹೀಗಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಪ್ರಮಾಣದ ಪ್ರತಿಭಟನೆಯನ್ನು ಎದುರಿಸಿದ ಬರಹಗಾರ ಮೂರ್ತಿ ಅವರನ್ನು ಬಿಟ್ಟರೆ  ಬೇರೊಬ್ಬರಿಲ್ಲ. ಅವರು ತಮಗೆ ಎದುರಾಗುವ ಪ್ರತಿಭಟನೆಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದರು. ತಮ್ಮೊಳಗಿದ್ದ ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಗುಣಗಳಿಂದಾಗಿಯೇ ಅವರು ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು ಮತ್ತು ಅದನ್ನು ಸೈದ್ಧಾಂತಿಕ ನೆಲೆಯಲ್ಲಿ  ಪ್ರಶ್ನಿಸುತ್ತಿದ್ದರು. ಅವರ ಈ ಗುಣ ಅನೇಕರಿಗೆ ವಿತಂಡವಾದಿಯಂತೆ ಗೋಚರಿಸುತ್ತಿತ್ತು. ಈ ಕಾರಣದಿಂದಲೇ ಮೂರ್ತಿ ಅವರ ಪ್ರತಿ ಹೇಳಿಕೆ ಮತ್ತು ಬರವಣಿಗೆಯನ್ನು ಅದು ಅಗತ್ಯವಿರಲಿ ಇಲ್ಲದಿರಲಿ ಒಂದು ಗುಂಪಿನ ಜನ ಸದಾಕಾಲ ಪ್ರತಿಭಟಿಸುತ್ತಿದ್ದರು. ಅಂಥ ಪ್ರತಿರೋಧಗಳನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದ ಅನಂತಮೂರ್ತಿ ಅವರಿಗೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎರಡು ಪ್ರತಿರೋಧಗಳನ್ನು ಮಾತ್ರ ನಿಭಾಯಿಸಲು ಸಾಧ್ಯವಾಗದೇ ಹೋಯಿತು. ಕುಂವೀ ಕನ್ನಡಕ್ಕೆ ಬಂದ ಎಂಟು ಜ್ಞಾನಪೀಠಗಳಲ್ಲಿ ಎರಡನ್ನು ಕುರಿತು ಅಪಸ್ವರದ ಮಾತನಾಡಿದಾಗ (ಆ ಎರಡರಲ್ಲಿ ಮೂರ್ತಿ ಅವರದೂ ಒಂದು) ಅನಂತಮೂರ್ತಿ ಆ ಒಂದು ಪ್ರತಿರೋಧವನ್ನು ನಿಭಾಯಿಸದೇ 'ಕುಂವೀ ದೈಹಿಕವಾಗಿ ಬಲಾಢ್ಯರು ಅವರೊಡನೆ ಕುಸ್ತಿ ಮಾಡುವುದು ಅಸಾಧ್ಯದ ಸಂಗತಿ' ಎಂದು ಹೇಳಿಕೆ ನೀಡಿ ಸುಮ್ಮನಾದರು. ಇನ್ನೊಂದು ಸಂದರ್ಭ ಮೋದಿ ಆಳುವ ಭಾರತದಲ್ಲಿ ನಾನಿರಲಾರೆ ಎಂದು ಹೇಳಿಕೆ ನೀಡಿದಾಗಲೂ ಅವರ ಈ ಮಾತಿಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಆಗಲೂ ಮೂರ್ತಿಗಳು ಏನನ್ನೂ ಪ್ರತಿಕ್ರಿಯಿಸಲಿಲ್ಲ. ಇಲ್ಲಿ ಎರಡು ಅಂಶಗಳು ವ್ಯಕ್ತವಾಗುತ್ತವೆ ಒಂದು ಆ ಎರಡು ಘಟನೆಗಳ ಸಂದರ್ಭ ಮೂರ್ತಿ ಅವರಿಗೆ ವಯಸ್ಸಾಗಿದ್ದು ಸಾಕಷ್ಟು ದೈಹಿಕ ತೊಂದರೆಗಳು ಕಾಣಿಸಿಕೊಂಡಿದ್ದವು ಜೊತೆಗೆ ವ್ಯವಸ್ಥೆಯನ್ನು ವಿರೋಧಿಸುವ ಗುಣ ಅವರಲ್ಲಿದ್ದುದ್ದರಿಂದ ತೀರ ವ್ಯಕ್ತಿಗತ  ಪ್ರತಿಭಟನೆಯಾಗಬಹುದೆಂದು ಅವರು ಪ್ರತಿಕ್ರಿಯಿಸದೆ ಹೋಗಿರಬಹುದು. ಅನಂತಮೂರ್ತಿ ಅವರು ಮೋದಿ ಅವರನ್ನು ಆರ್ ಎಸ್ ಎಸ್ ಸಂಘಟನೆಯ ಹಿನ್ನೆಲೆಯಿಂದ ಬಂದವರೆಂಬ ಕಾರಣದಿಂದ ವಿರೋಧಿಸುವುದಕ್ಕಿಂತ ಅವರು ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದದ್ದೇ ಹೆಚ್ಚು. ಬಹು ರಾಷ್ಟ್ರೀಯ ಕಂಪನಿಗಳಿಗೆ ಕೆಂಪುಗಂಬಳಿ ಹಾಸಿ ಅವರಿಗೆ ಸಕಲ ಸವಲತ್ತುಗಳನ್ನು ಕೊಟ್ಟು ಭಾರತಕ್ಕೆ ಆಹ್ವಾನಿಸುವ ಈ ಗುಣ ಮೂರ್ತಿಗಳಿಗೆ ಅದೊಂದು ಅಪಾಯದಂತೆ ಗೋಚರಿಸುತ್ತಿತ್ತು. ಹೀಗೆ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಎರಡು ನೂರು ವರ್ಷಗಳ ಕಾಲ ಆಳಿದ ಉದಾಹರಣೆ ನಮ್ಮೆದುರಿರುವಾಗ  ಈ ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು ಮತ್ತೆಲ್ಲಿ ದಾಸ್ಯಕ್ಕೆ ದೂಡುತ್ತವೆಯೋ ಎನ್ನುವ ಭಯ ಮತ್ತು ಅನುಮಾನ ಅವರಲ್ಲಿತ್ತೆಂದು ಕಾಣುತ್ತದೆ. ಈ ಕಾರಣದಿಂದಲೇ ಅವರು ಗಾಂಧೀಜಿ ಅವರ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸುತ್ತ ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ಅವರ ತಾತ್ವಿಕ ನಿಲುವನ್ನು ಅರ್ಥಮಾಡಿಕೊಳ್ಳದ ಕೆಲವು ಸಂಘಟನೆಗಳು ನಿನ್ನೆ ಅವರ ನಿಧನದ ಸುದ್ಧಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದವು. ಸೂತಕದ  ಮನೆಯಲ್ಲಿ ಸಂಭ್ರಮಿಸುವ ಗುಣ ಇದೊಂದು  ಅನಾಗರಿಕ ವರ್ತನೆ  ಮತ್ತು ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದದ್ದು.

       ಜಿ. ಎಸ್. ಎಸ್ ಕುರಿತು ಅನಂತಮೂರ್ತಿ ಹೀಗೆ ಬರೆಯುತ್ತಾರೆ 'ಜಿ. ಎಸ್. ಶಿವರುದ್ರಪ್ಪನವರ ಸಾಹಿತ್ಯವನ್ನು ಓದಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕನ್ನಡದಲ್ಲಿ ಅಸಂಖ್ಯ. ಅವರ ಬದುಕು ಮತ್ತು ಬರಹವನ್ನು ಗಮನಿಸುತ್ತಲೇ ಬರಹಗಾರರಾದವರಿದ್ದಾರೆ. ಅದಕ್ಕೆಂದೇ ಜಿ. ಎಸ್. ಎಸ್ ಅವರನ್ನು ನಮ್ಮ ಕಾಲದ 'ದ್ರೋಣ'ರೆಂದು ಕರೆಯುವುದು ಹೆಚ್ಚು ಸಮಂಜಸವೆನಿಸುತ್ತದೆ'. ಅನಂತಮೂರ್ತಿ ಅವರು ಶಿವರುದ್ರಪ್ಪನವರ ಬಗ್ಗೆ ಹೇಳಿದ ಈ ಮಾತು ಸ್ವತ: ಅವರಿಗೂ ಅನ್ವಯಿಸುತ್ತದೆ. ಮೂರ್ತಿ ಅವರ ಕಥೆ, ಕಾದಂಬರಿಗಳನ್ನೂ ಓದಿ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಅನೇಕ ಲೇಖಕರು ಕನ್ನಡದಲ್ಲಿರುವರು. ಜೊತೆಗೆ ಅನಂತಮೂರ್ತಿ ಅವರ ಪ್ರಭಾವದ ಪರಿಣಾಮ ಸಮಾಜದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿ ಬರೆಯುವ ಮತ್ತು ಸಮಾಜಮುಖಿಯಾಗಿ ನಿಲ್ಲುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಟ್ಟಿಕೊಂಡರು. ಲೇಖಕರೋರ್ವರು ಹೇಳುವಂತೆ ಅನಂತಮೂರ್ತಿ ಒಂದು ತಲೆಮಾರಿನ ಲೇಖಕರಿಗೆ ಪ್ರಶ್ನಿಸುವುದನ್ನು ಕಲಿಸಿದರು ಮತ್ತು ಪ್ರತಿಭಟಿಸುವುದನ್ನು ಹಕ್ಕೆಂದು ತೋರಿಸಿಕೊಟ್ಟರು. ಸಂವಾದ, ವಾಗ್ವಾದ, ಪ್ರಶ್ನಿಸುವಿಕೆಯ ಮೂಲಕ ಲೇಖಕನಾದವು ತನ್ನ ಪ್ರತಿಭಟನೆಯ ಕಾವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕೆನ್ನುವುದನ್ನು ತಮ್ಮ ನಂತರದ ಪೀಳಿಗೆಯ ಲೇಖಕರಿಗೆ ಕಲಿಸಿಕೊಟ್ಟ ಮೇಷ್ಟ್ರು ಅವರು.

       ಡಾ. ಯು. ಆರ್. ಅನಂತಮೂರ್ತಿ ನಮ್ಮ ಮುಂದಿನ ಪೀಳಿಗೆಗೆ ಯಾವ ರೀತಿ ಪರಿಚಿತರಾಗಬೇಕು ಎನ್ನುವ ಪ್ರಶ್ನೆ ಎದುರಾದಾಗ ಲೇಖಕ  ಜೋಗಿ 'ಅನಂತಮೂರ್ತಿ ಅವರು ಬರಹಗಾರನಾಗಿ ಅಲ್ಲದಿದ್ದರೂ ಹೋರಾಟಗಾರನಾಗಿ ಮತ್ತು ಚಿಂತಕನಾಗಿ ನಮ್ಮ ನಂತರದ ಪೀಳಿಗೆಗೆ ಪರಿಚಿತರಾಗಿ ಉಳಿಯುವುದು ಖಂಡಿತ ಸಾಧ್ಯ' ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ. ಆದ್ದರಿಂದ ಅನಂತಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು. ಅವರ ಅನುಮಾನದ ಮತ್ತು ಸಂದೇಹದ ನೋಟದಲ್ಲೇ ನಾವು ಬದುಕುತ್ತಿರುವ ಸಮಾಜವನ್ನು ನೋಡುವ ಹಾಗೂ ಪ್ರತಿಭಟಿಸುವ ಜೊತೆಗೆ ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಮೂಡುವಂತಾಗಲು ಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಸಂರಕ್ಷಿಸಿಟ್ಟು ಅದನ್ನು  ದಾಟಿಸುವ ಕೆಲಸವಾಗಬೇಕಿದೆ.  ನಮ್ಮ ಮುಂದಿನ ಪೀಳಿಗೆಯ ಬದುಕನ್ನು ಒಂದಿಷ್ಟು ಸಹನೀಯವಾಗಿಸಲು ಇದು ಇವತ್ತಿನ ತುರ್ತು ಅಗತ್ಯವಾಗಿದೆ ಎನ್ನುವ ಭಾವನೆ ನನ್ನದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


         

       

Monday, August 11, 2014

ಡಾ.ಎಸ್.ಆರ್.ರಂಗನಾಥನ್: ಗ್ರಂಥಾಲಯ ವಿಜ್ಞಾನಕ್ಕೆ ಭಾರತದ ಕೊಡುಗೆ

                 


                                           (ಅಗಸ್ಟ್ ೧೨ ಡಾ: ಎಸ್. ಆರ್. ರಂಗನಾಥನ್ ರ ಜನ್ಮದಿನ)


                  ನಾನು ನನ್ನ ಸ್ನಾತಕೋತ್ತರ ಶಿಕ್ಷಣಕ್ಕಾಗಿ 'ಗ್ರಂಥಾಲಯ ವಿಜ್ಞಾನ' ವನ್ನು ಅಧ್ಯನದ ವಿಷಯವಾಗಿ ಆಯ್ದು ಕೊಂಡಿದ್ದು ಹೀಗೆ ಒಂದು ಆಕಸ್ಮಿಕ ಘಳಿಗೆಯಲ್ಲಿ. ಪದವಿಯ ಅಂತಿಮ ವರ್ಷದ ಪರೀಕ್ಷೆ ಮುಗಿದು ಸ್ನೇಹಿತರೆಲ್ಲ ಮಾತನಾಡುತ್ತ ಕುಳಿತಿದ್ದ ಸಮಯ ವಿಶ್ವವಿದ್ಯಾಲಯದಲ್ಲಿ 'ಗ್ರಂಥಾಲಯ ವಿಜ್ಞಾನ' ಎನ್ನುವ ಸ್ನಾತಕೋತ್ತರ ಕೋರ್ಸು ಇರುವ ಸಂಗತಿ ಮಾತಿನ ನಡುವೆ ಸುಳಿಯಿತು. ಜೊತೆಗೆ ಅದೇ ಆಗ ಮಾಹಿತಿ ತಂತ್ರಜ್ಞಾನ ಭಾರತಕ್ಕೆ ಕಾಲಿಡುವ ತಯ್ಯಾರಿ ನಡೆಸಿತ್ತು. ಮಾಹಿತಿ ತಂತ್ರಜ್ಞಾನದ ಪರಿಣಾಮ ಗ್ರಂಥಾಲಯ ವಿಜ್ಞಾನವನ್ನು ಪ್ರಾಯೋಗಿಕವಾಗಿ ಅದ್ಯಯನ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎನ್ನುವ ಅಭಿಪ್ರಾಯ ನಮ್ಮ ಅಂದಿನ ಚರ್ಚೆಯ ಫಲಿತಾಂಶವಾಗಿತ್ತು. ಅದೇ ದಿನ ನಾವು ನಾಲ್ಕಾರು ಗೆಳೆಯರು 'ಗ್ರಂಥಾಲಯ ವಿಜ್ಞಾನ'ದಲ್ಲೇ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದು ನಿರ್ಧರಿಸಿದೇವು. ಪರೀಕ್ಷಾ ಫಲಿತಾಂಶದ ನಂತರ ವಿಶ್ವವಿದ್ಯಾಲಯಕ್ಕೆ ಹೋಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದೇವು. ತರಗತಿ ಪ್ರಾರಂಭವಾದ ಮೊದಲ ದಿನವೇ ನಮ್ಮ ಪ್ರಾಧ್ಯಾಪಕರು ನಮ್ಮನ್ನೆಲ್ಲ ಗ್ರಂಥಾಲಯಕ್ಕೆ ಕರೆದೊಯ್ದು ಅಲ್ಲಿ  ವಿವಿಧ ವಿಭಾಗಗಳನ್ನು ಪರಿಚಯಿಸಿ ಜೊತೆಗೆ ಅಲ್ಲಿಯೇ ತೂಗು ಹಾಕಿದ್ದ ಆಳೆತ್ತರದ ಭಾವಚಿತ್ರಕ್ಕೆ ನಮಸ್ಕರಿಸುವಂತೆ ಹೇಳಿದರು. ಕಪ್ಪು ಬಿಳುಪಿನ ಆ ಭಾವಚಿತ್ರದಲ್ಲಿ  ಕೋಟು ಧೋತಿ ಧರಿಸಿ ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಅಜಾನುಬಾಹು ವ್ಯಕ್ತಿ ನಗುತ್ತ ನಿಂತಿದ್ದರು. ಆ ಭಾವ ಚಿತ್ರದತ್ತ ದೃಷ್ಟಿ ಹರಿಸಿದಾಗ ಭಾವಚಿತ್ರದ ಅಡಿಯಲ್ಲಿ 'ಡಾ:ಎಸ್. ಆರ್. ರಂಗನಾಥನ್: ಗ್ರಂಥಾಲಯ ಚಳುವಳಿಯ ಜನಕ' ಎನ್ನುವ ಟಿಪ್ಪಣಿ ಕಣ್ಣಿಗೆ ಬಿತ್ತು. ಹೀಗೆ ತರಗತಿಗೆ ಕಾಲಿಟ್ಟ ಮೊದಲ ದಿನವೇ ಪರಿಚಿತರಾದ ಡಾ; ಎಸ್. ಆರ್. ರಂಗನಾಥನ್ ನಂತರದ ಎರಡು ವರ್ಷಗಳ ಕಾಲ ನಮ್ಮ ವಿದ್ಯಾರ್ಥಿ ಬದುಕಿನ ಪ್ರತಿ ಘಳಿಗೆ ನಮ್ಮೊಂದಿಗೆ ಮುಖಾಮುಖಿಯಾಗುತ್ತಲೇ ಹೋದರಲ್ಲದೆ ವೃತ್ತಿ ಬದುಕಿನಲ್ಲೂ ಅವರ ಪ್ರಭಾವ ಮತ್ತು ಅವರು ಕಟ್ಟಿಕೊಟ್ಟ ಅನುಭವ ಅಪಾರ. 

             ಡಾ: ಎಸ್. ಆರ್. ರಂಗನಾಥನ್ ಕೇವಲ ಗ್ರಂಥಾಲಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಮತ್ತು ಗ್ರಂಥಾಲಯ ವಿಜ್ಞಾನವನ್ನು ವೃತ್ತಿಯಾಗಿಸಿಕೊಂಡ ಶಿಕ್ಷಕರಿಗೆ ಹಾಗೂ ಗ್ರಂಥಪಾಲಕರಿಗೆ ಮಾತ್ರ ಪರಿಚಿತರಲ್ಲ. ಗ್ರಂಥಾಲಯದ ಕುರಿತು ಆಸಕ್ತಿಯುಳ್ಳ ಎಲ್ಲರಿಗೂ ರಂಗನಾಥನ್ ಪರಿಚಿತರು. ಗ್ರಂಥಾಲಯ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ವೇಳೆ ನಾನು ನನ್ನೂರಿಗೆ ಹೋಗಿದ್ದ ಒಂದು ಸಂದರ್ಭ ಊರಿನಲ್ಲಿದ್ದ ಪುಸ್ತಕ ಪ್ರೇಮಿ ಓದುಗ ರಂಗನಾಥನ್ ಅವರ ಹೆಸರು ಹೇಳಿ ಅವರ ಬಗ್ಗೆ ಒಂದಿಷ್ಟು ಮಾತನಾಡಿದ ಆ ಕ್ಷಣ ನನಗೆ ಆಶ್ಚರ್ಯವಾಗಿತ್ತು. ರಂಗನಾಥನ್ ನನ್ನೂರಿನಂಥ ಕುಗ್ರಾಮಕ್ಕೂ ಪರಿಚಿತರು ಎನ್ನುವ ಸಂಗತಿಯೇ ನನಗೆ ಅಚ್ಚರಿಯ ಸಂಗತಿಯಾಗಿದ್ದು ಜೊತೆಗೆ ಈ ವ್ಯಕ್ತಿ ಕೇವಲ ಗ್ರಂಥಾಲಯ ವಿಜ್ಞಾನವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದವರಿಗೆ ಮಾತ್ರ ಗೊತ್ತು ಎಂದು ಅದುವರೆಗೂ ನಾನು ಕಟ್ಟಿಕೊಂಡಿದ್ದ ಕಲ್ಪನೆ ಒಡೆದು ಚೂರಾಗಿತ್ತು. ಇಲ್ಲೇ ರಂಗನಾಥನ್ ಅವರ ವ್ಯಕ್ತಿತ್ವದ ವಿರಾಟ ದರ್ಶನ ನನಗಾದದ್ದು. ಸಿಗ್ಮಂಡ್ ಪ್ರಾಯ್ಡ್ ಮನೋವಿಜ್ಞಾನಕ್ಕೆ ಮತ್ತು ಹೆರೋಡೊಟಸ್ ಇತಿಹಾಸಕ್ಕೆ ಹೇಗೋ ಹಾಗೆ ರಂಗನಾಥನ್ ಗ್ರಂಥಾಲಯ ವಿಜ್ಞಾನಕ್ಕೆ ಪಿತಾಮಹನಾದವರು. ಮಾಹಿತಿ ತಂತ್ರಜ್ಞಾನ ಇನ್ನು ಕಣ್ಣು ಬಿಡದಿದ್ದ ಕಾಲದಲ್ಲಿ ಗ್ರಂಥಾಲಯಗಳನ್ನು ಕಟ್ಟಿ ಬೆಳೆಸಿದ ರಂಗನಾಥನ್ ತಮ್ಮ ದೂರದೃಷ್ಟಿತ್ವ ಮತ್ತು ತಮ್ಮೊಳಗಿನ ಅಪಾರ ಅನುಭವದಿಂದ ಗ್ರಂಥಾಲಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮುಖಾಮುಖಿಯಾಗಿ ನಿಲ್ಲಿಸಿದರು. ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ರಂಗನಾಥನ್ ರ ವಿಚಾರಗಳು ಗ್ರಂಥಾಲಯಗಳ ಬೆಳವಣಿಗೆಗೆ ಅತಿ ಅವಶ್ಯಕವಾಗಿದ್ದು ಅವರ ವ್ಯಕ್ತಿತ್ವ  ಗ್ರಂಥಾಲಯ ವಿಜ್ಞಾನ ಕ್ಷೇತ್ರದ ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ಅಗಾಧವಾಗಿ ಆಕ್ರಮಿಸಿಕೊಂಡಿದೆ.

      ಶಿಯ್ಯಾಳಿ ರಾಮಾಮೃತ ರಂಗನಾಥನ್ ತಮಿಳುನಾಡಿನವರು. ಅವರು ಜನಿಸಿದ್ದು ತಮಿಳು ನಾಡಿನ (ಆಗಿನ ಮದ್ರಾಸ್ ರಾಜ್ಯ) ತಂಜಾವೂರು ಜಿಲ್ಲೆಯ ಶಿಯ್ಯಾಳಿ ಎನ್ನುವ ಪುಟ್ಟ ಗ್ರಾಮದಲ್ಲಿ ೧೮೯೨ ಅಗಸ್ಟ್ ೧೨ ರಂದು. ತಂದೆ ರಾಮಾಮೃತ ಅಯ್ಯರ್ ಮತ್ತು ತಾಯಿ ಸೀತಾ ಲಕ್ಷ್ಮಿ. ರಂಗನಾಥನ್ ಆರು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ತಂದೆಯ ನಿಧನದ ನಂತರ ಅಜ್ಜ ಸುಬ್ಬಾ ಅಯ್ಯರ ಅವರ ಮಾರ್ಗದರ್ಶನದಲ್ಲಿ ರಂಗನಾಥನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ಶಿಯ್ಯಾಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂದಿನ ವಿದ್ಯಾಭ್ಯಾಸಕ್ಕಾಗಿ ರಂಗನಾಥನ್ ಮದ್ರಾಸಿಗೆ ಬಂದು ನೆಲೆಸುತ್ತಾರೆ. ಚಿಕ್ಕಂದಿನಿಂದ ಗಣಿತ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಗಣಿತ ಶಾಸ್ತ್ರದಲ್ಲೇ ಪೂರ್ಣಗೊಳಿಸಿ  ನಂತರ ಒಂದೆರಡು ವರ್ಷಗಳ ಕಾಲ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ.  ಕರ್ನಾಟಕದ ಮಂಗಳೂರಿನಲ್ಲೂ  ಕೆಲವು ತಿಂಗಳು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದು ಗಮನಾರ್ಹ ಸಂಗತಿಗಳಲ್ಲೊಂದು. ೧೯೨೪ ರಲ್ಲಿ ರಂಗನಾಥನ್ ರ ವೃತ್ತಿ ಬದುಕು ಮಹತ್ವದ ತಿರುವು ಪಡೆದುಕೊಳ್ಳುತ್ತದೆ. ಅರೆಕಾಲಿಕ ಉಪನ್ಯಾಸಕ ವೃತ್ತಿಯಿಂದ ಬರುತ್ತಿದ ಕಡಿಮೆ ಸಂಬಳದಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾದಾಗ ಬೇರೆ ವೃತ್ತಿಯನ್ನು ಹುಡುಕುವುದು ಬದುಕಿಗಾಗಿ ಅನಿವಾರ್ಯವಾಗುತ್ತದೆ. ಇದೇ ಸಂದರ್ಭ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪೂರ್ಣ ಕಾಲಿಕ ಗ್ರಂಥಪಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ರಂಗನಾಥನ್ ರ ಆರ್ಥಿಕ ತೊಂದರೆ ತಿಳಿದಿದ್ದ ಕೆಲವು ಉಪನ್ಯಾಸಕರು ಮತ್ತು ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯರ ಮಿ. ಡಂಕನ್ ಗ್ರಂಥಪಾಲಕ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಒತ್ತಾಯಿಸುತ್ತಾರೆ. ಒಲ್ಲದ ಮನಸ್ಸಿನಿಂದಲೇ ಅರ್ಜಿ ಸಲ್ಲಿಸಿದ ರಂಗನಾಥನ್  ಅಚ್ಚರಿ ಎನ್ನುವಂತೆ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕ ಹುದ್ದೆಗೆ ನೇಮಕಗೊಳ್ಳುವರು. ಪೂರ್ಣಕಾಲಿಕ ಕೆಲಸ ಮತ್ತು ಹೆಚ್ಚಿನ ಸಂಬಳ ಎಂದು ಆ ಹುದ್ದೆಯನ್ನು ಒಪ್ಪಿಕೊಂಡ ರಂಗನಾಥನ್ ರಿಗೆ ಒಂದೇ ವಾರದಲ್ಲಿ ಆ ಕೆಲಸ ಬೇಸರ ತರಿಸುತ್ತದೆ. ಪಾಠ ಮಾಡುತ್ತ ವಿದ್ಯಾರ್ಥಿಗಳ ನಡುವೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅವರಿಗೆ ಯಾರ ಸಂಪರ್ಕವೂ ಇಲ್ಲದೆ ದಿನವಿಡೀ ಒಬ್ಬಂಟಿಯಾಗಿ ಕುಳಿತು ಕೊಳ್ಳುವುದು ಅದೊಂದು ಶಿಕ್ಷೆಯಂತೆ ಭಾಸವಾಗುತ್ತದೆ. ಒಂದೇ ವಾರದಲ್ಲಿ ಪ್ರೆಸಿಡೆನ್ಸಿ ಕಾಲೇಜಿಗೆ ಮರಳಿದ ರಂಗನಾಥನ್ ತಮ್ಮನ್ನು ಮತ್ತೆ ಅದೇ ಹಿಂದಿನ ಅರೆಕಾಲಿಕ ಉಪನ್ಯಾಸಕ  ಹುದ್ದೆಗೆ ಮರು ನೇಮಕಾತಿ ಮಾಡಿಕೊಳ್ಳುವಂತೆ ಪ್ರಾಚಾರ್ಯರಲ್ಲಿ ವಿನಂತಿಸಿಕೊಳ್ಳುವರು. ರಂಗನಾಥನ್ ರಿಗಿದ್ದ ಓದಿನ ಅಭಿರುಚಿ ಮತ್ತು ಸಂಶೋಧನಾ ಮನೋಭಾವದ ಅರಿವಿದ್ದ ಪ್ರಾಚಾರ್ಯರಿಗೆ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಪುನಶ್ಚೇತನಗೊಳಿಸಲು ರಂಗನಾಥನ್ನರೆ  ಸರಿಯಾದ ವ್ಯಕ್ತಿಯೆಂದು ಅವರನ್ನು ಮರಳಿ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಲಂಡನ್ನಿನಿಂದ ಗ್ರಂಥಾಲಯ ತರಬೇತಿ ಪಡೆದು ಮರಳಿದ ಮೇಲೂ ತನ್ನ ಮನಸ್ಸಿಗೆ ಆ ಹುದ್ದೆ ಒಪ್ಪದೇ ಹೋದಲ್ಲಿ ಪ್ರೆಸಿಡೆನ್ಸಿ ಕಾಲೇಜಿಗೆ ಮತ್ತೆ ಮರಳಿ ಬರಲು ಅವಕಾಶ ನೀಡಬೇಕೆನ್ನುವ ಷರತ್ತಿನ ಮೇಲೆ ರಂಗನಾಥನ್ ಮದ್ರಾಸ ವಿಶ್ವವಿದ್ಯಾಲಯಕ್ಕೆ ಹಿಂತಿರುಗುತ್ತಾರೆ. ಮಿ. ಡಂಕನ್ ಅಂದು ಮಾಡಿದ ಕೆಲಸ ನಂತರದ ದಿನಗಳಲ್ಲಿ ಭಾರತದ ಗ್ರಂಥಾಲಯ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ಕಾರಣವಾಯಿತು. ಈ ದೃಷ್ಟಿಯಿಂದ ಭಾರತೀಯರು ಮಿ. ಡಂಕನ್ ಗೆ ಋಣಿಗಳಾಗಿರಲೇ ಬೇಕು.

          ಮತ್ತೆ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕ ಹುದ್ದೆಗೆ ಮರಳಿದ ರಂಗನಾಥನ್ ಗ್ರಂಥಾಲಯ ತರಬೇತಿಗಾಗಿ ಲಂಡನ್ ಗೆ ಪಯಣಿಸುತ್ತಾರೆ. ಲಂಡನ್ನಿನಲ್ಲಿದ್ದ ೯ ತಿಂಗಳ ಅವಧಿಯಲ್ಲಿ ರಂಗನಾಥನ್ ಅವರಿಗೆ ಗ್ರಂಥಾಲಯ ಎನ್ನುವುದು ಪ್ರಾಯೋಗಿಕವಾಗಿ ಅಧ್ಯಯನ ಮಾಡಬೇಕಾದ ವಿಷಯ ಎನ್ನುವ ಸಂಗತಿ ಮನದಟ್ಟಾಗುತ್ತದೆ. ಲಂಡನ್ನಿನ 'ಸ್ಕೂಲ್ ಆಫ್ ಲೈಬ್ರರಿಯನ್ ಶಿಪ್' ನಲ್ಲಿ ಡಬ್ಲ್ಯು. ಸಿ. ಸೇಯರ್ಸ್ ಅವರಿಂದ ಗ್ರಂಥಾಲಯ ವಿಜ್ಞಾನದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಆ ಒಂಬತ್ತು ತಿಂಗಳ ಕಾಲಾವಧಿಯಲ್ಲಿ ರಂಗನಾಥನ್ ಬರೋಬ್ಬರಿ ನೂರು ಗ್ರಂಥಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರತಿಯೊಂದು  ಗ್ರಂಥಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಹೊಸ ಹೊಸ ಸಂಗತಿಗಳನ್ನು ತಿಳಿದುಕೊಳ್ಳುವರು. ಆ ಸಂದರ್ಭದಲ್ಲೇ ಅವರ ವಿಶ್ಲೇಷಣಾತ್ಮಕ ಮನಸ್ಸು ಭಾರತೀಯ ಮತ್ತು ಬ್ರಿಟಿಷ್ ಗ್ರಂಥಾಲಯಗಳನ್ನು ತುಲನೆ ಮಾಡಿ ನೋಡುತ್ತದೆ. ಭಾರತದ ಗ್ರಂಥಾಲಯಗಳಲ್ಲಿನ ಬಹುಮುಖ್ಯ ಕೊರತೆಗಳೇನು ಎನ್ನುವುದು ಅವರಿಗೆ ಲಂಡನ್ನಿನಲ್ಲಿದ್ದ ಆ ಸಂದರ್ಭ ವೇದ್ಯವಾಗುತ್ತದೆ. ಬ್ರಿಟಿಷ ಗ್ರಂಥಾಲಯಗಳ  ಸೇವೆಗಳು, ಅಲ್ಲಿನ ತಾಂತ್ರಿಕ ಚಟುವಟಿಕೆಗಳು, ಆಕರ್ಷಕ ಮತ್ತು ಓದುಗ ಸ್ನೇಹಿ ಕಟ್ಟಡಗಳು, ಉತ್ತಮ ಗುಣ ಮಟ್ಟದ ಪಿಠೋಪಕರಣಗಳು, ಗ್ರಂಥಾಲಯ ಸಿಬ್ಬಂದಿಯ ಸೇವಾ ಮನೋಭಾವ ಈ ಎಲ್ಲವುಗಳಿಂದ ರಂಗನಾಥನ್ ಪ್ರಭಾವಿತರಾಗುತ್ತಾರೆ. ಬ್ರಿಟಿಷ್ ರಾಷ್ಟ್ರದಲ್ಲಿ ಸಾಧ್ಯವಾಗಿದ್ದು ಭಾರತದಲ್ಲೇಕೆ ಸಾಧ್ಯವಾಗಿಲ್ಲ ಎಂದು ಅವರ ಮನಸ್ಸು ಪ್ರಶ್ನಿಸುತ್ತದೆ. ಬೇರೆ ಮುಂದಿವರೆದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಗ್ರಂಥಾಲಯ ಕ್ಷೇತ್ರದಲ್ಲಿ ಬಹಳಷ್ಟು ಹಿಂದಿದೆ ಎನ್ನುವ ಸಂಗತಿ ಅರಿವಾಗುತ್ತದೆ. ಭಾರತದಲ್ಲೂ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಲಂಡನ್ನಿನಲ್ಲಿದ್ದಾಗಲೇ ನಿರ್ಧರಿಸುತ್ತಾರೆ. ಗ್ರಂಥಾಲಯಗಳ ಅಭಿವೃದ್ಧಿಯ ನೀಲನಕ್ಷೆ ಆಗಲೇ ರೂಪುಗೊಳ್ಳುತ್ತದೆ. ಆ ಎಲ್ಲ ಆಸೆ ಮತ್ತು ಕನಸುಗಳನ್ನು ಹೊತ್ತು  ರಂಗನಾಥನ್ ೧೯೨೫ ರಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿಕೊಂಡು ಭಾರತಕ್ಕೆ ಮರಳುತ್ತಾರೆ. ಗ್ರಂಥಪಾಲಕ ಹುದ್ದೆ ಮನಸ್ಸಿಗೆ ಒಪ್ಪದೇ ಹೋದಲ್ಲಿ ಉಪನ್ಯಾಸಕನಾಗಿ ತನ್ನನ್ನು ಮರಳಿ ಮರು ನೇಮಕಾತಿ ಮಾಡಿಕೊಳ್ಳಬೇಕು ಎನ್ನುವ ಷರತ್ತಿನ ಮೇಲೆ ಲಂಡನ್ ಗೆ ಹೋಗಿ ತರಬೇತಿ ಪಡೆದ ರಂಗನಾಥನ್ ಮುಂದಿನ ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯವನ್ನೇ ತಮ್ಮ ಉಸಿರಾಗಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ. ಇಡೀ ಜಗತ್ತೇ  ಭಾರತದ ಗ್ರಂಥಾಲಯಗಳ ಕಡೆ ನೋಡುವಂತೆ ಅವುಗಳನ್ನು ಕಟ್ಟಿ ಬೆಳೆಸುವರು. ಗ್ರಂಥಪಾಲಕರಾಗಿ ಗ್ರಂಥಾಲಯ ವಿಜ್ಞಾನದ ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಮತ್ತು ಸಂಶೋಧಕರಾಗಿ ರಂಗನಾಥನ್ ಮಾಡಿದ ಕೆಲಸ ಮತ್ತು ಸಾಧನೆಗಳು ಅವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಅಜರಾಮರಗೊಳಿಸಿವೆ.

ಸಾಧನೆಗಳು 


       ಲಂಡನ್ನಿನಿಂದ ಭಾರತಕ್ಕೆ ಮರಳಿದ ಮೇಲೆ ರಂಗನಾಥನ್ ಮದ್ರಾಸ್ ವಿಶ್ವವಿದ್ಯಾಲಯದ  ಗ್ರಂಥಾಲಯವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು ಬಹಳಷ್ಟು ಬದಲಾವಣೆಗಳಿಗೆ ಕಾರಣರಾಗುತ್ತಾರೆ. ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಿ ಓದುಗರಿಗೆ ಅತ್ಯುತ್ತಮ ಓದಿನ ವಾತಾವರಣವನ್ನು ಕಟ್ಟಿಕೊಟ್ಟರು. ಉತ್ತಮ ಪುಸ್ತಕಗಳ ಸಂಗ್ರಹ ಮತ್ತು ತಮ್ಮಲ್ಲಿನ ಸೇವಾ ಮನೋಭಾವದ ಪರಿಣಾಮ ಗ್ರಂಥಾಲಯಕ್ಕೆ ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ವರ್ಗೀಕರಣ ಮತ್ತು ಸೂಚೀಕರಣ ಎನ್ನುವ ಎರಡು ಅತ್ಯುತ್ತಮ ತಾಂತ್ರಿಕ ಚಟುವಟಿಕೆಗಳ ಉಪಯೋಗದ ಕಾರಣ ಓದುಗರಿಗೆ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳು ಸುಲಭವಾಗಿ ದೊರೆಯಲಾರಂಭಿಸುತ್ತವೆ. ಮದ್ರಾಸ್ ನಗರದಲ್ಲಿನ ಓದುವ ಹವ್ಯಾಸಿಗಳನ್ನು ಒಂದುಗೂಡಿಸಿ ಮದ್ರಾಸ್ ಗ್ರಂಥಾಲಯ ಸಂಘ ಎನ್ನುವ ಸಂಸ್ಥೆಯನ್ನು ಆರಂಭಿಸುವ ರಂಗನಾಥನ್ ಸಾರ್ವಜನಿಕರಿಗೂ ಗ್ರಂಥಾಲಯದ ಸೌಲಭ್ಯ ದೊರೆಯುವಂತೆ ಮಾಡಿದರು. ಮುಂದಿನ ದಿನಗಳಲ್ಲಿ ಗ್ರಂಥಾಲಯ ಕ್ಷೇತ್ರವನ್ನು ಅಧ್ಯಯನದ ವಿಷಯವಾಗಿಸಿ ಮದ್ರಾಸ್ ನಲ್ಲಿ ಗ್ರಂಥಾಲಯ ಶಾಲೆ ರಂಗನಾಥನ್ ರ ನೇತೃತ್ವದಲ್ಲಿ ತನ್ನ ಕಾರ್ಯಚಟುವಟಿಕೆಯನ್ನಾರಂಭಿಸುತ್ತದೆ. ೨೧ ವರ್ಷಗಳ ಸುದೀರ್ಘ ಸೇವೆಯ ನಂತರ ರಂಗನಾಥನ್ ೧೯೪೫ ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಳ್ಳುವರು. ಇದೇ ಸಂದರ್ಭ ಬನಾರಸ್ ಹಿಂದು ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಲು ಅಂದಿನ ಕುಲಪತಿಗಳಾಗಿದ್ದ ಡಾ. ರಾಧಾಕೃಷ್ಣನ್ ರ ಆಹ್ವಾನವನ್ನು ಒಪ್ಪಿ ಎರಡು ವರ್ಷಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ವಿವಿಧ ವಿಷಯಗಳಾಗಿ ವರ್ಗೀಕರಿಸಿ ಅವುಗಳ ಸೂಚಿಯನ್ನು ತಯ್ಯಾರಿಸಿ ಅತಿ ಕಡಿಮೆ ಅವಧಿಯಲ್ಲಿ ವಿಶ್ವವಿದ್ಯಾಲಯ ಗ್ರಂಥಾಲಯವನ್ನು ಅತ್ಯುತ್ತಮ ಶೈಕ್ಷಣಿಕ ಗ್ರಂಥಾಲಯವನ್ನಾಗಿ ಪರಿವರ್ತಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಿ ನಂತರ ರಂಗನಾಥನ್ ೧೯೪೭ ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ನಿಯುಕ್ತಿಗೊಳ್ಳುವರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಅವರು ಗ್ರಂಥಾಲಯವನ್ನು ಕಟ್ಟಿ ಬೆಳೆಸುವುದರ ಜೊತೆಗೆ ಮಾಡಿದ ಇನ್ನೊಂದು ಮಹತ್ವದ ಕೆಲಸವೆಂದರೆ ಅದು ಗ್ರಂಥಾಲಯ ವಿಜ್ಞಾನದ ಸ್ನಾತಕೋತ್ತರ ಕೋರ್ಸನ್ನು ಆರಂಭಿಸಿದ್ದು. ಅದುವರೆಗೂ ನಾಲ್ಕಾರು ತಿಂಗಳ ತರಬೇತಿಗಷ್ಟೇ ಸೀಮಿತವಾಗಿದ್ದ ಗ್ರಂಥಾಲಯ ವಿಜ್ಞಾನದ ಅಧ್ಯಯನ ರಂಗನಾಥನ್ ರ ಪ್ರಯತ್ನದ ಪರಿಣಾಮ ಸ್ನಾತಕೋತ್ತರ ಕೋರ್ಸಿಗೆ ವಿಸ್ತರಿಸಿತು. ಪರಿಣಾಮವಾಗಿ ಗ್ರಂಥಾಲಯ ವಿಜ್ಞಾನವನ್ನು ಅಭ್ಯಸಿಸಿದ ಮತ್ತು ಪ್ರಾಯೋಗಿಕವಾಗಿ ತರಬೇತಿ ಹೊಂದಿದ ಗ್ರಂಥಪಾಲಕರು ಭಾರತದ ಗ್ರಂಥಾಲಯಗಳಲ್ಲಿ ನಿಯುಕ್ತಿಗೊಳ್ಳಲು ಸಾಧ್ಯವಾಯಿತು. ಇದರ ನೇರ ಪರಿಣಾಮ ಗ್ರಂಥಾಲಯಗಳ ಮೇಲಾಯಿತು. ಭಾರತದಲ್ಲಿ ಗ್ರಂಥಾಲಯಗಳ ಅಭಿವೃದ್ಧಿಯ ಶಕೆ ಆರಂಭಗೊಂಡಿತು. ಗ್ರಂಥಾಲಯಗಳು ಮಾಹಿತಿ ಕೇಂದ್ರ ಮತ್ತು ಸಂಶೋಧನಾ  ಕೇಂದ್ರಗಳೆನ್ನುವ ಮನ್ನಣೆಗೆ ಪಾತ್ರವಾದವು. ಗ್ರಂಥಾಲಯಗಳ ಅಗತ್ಯ ಮತ್ತು ಅದರ ಅಸ್ತಿತ್ವ ವಿಶ್ವವಿದ್ಯಾಲಯಗಳನ್ನೂ ಮೀರಿ ಶಾಲೆ, ಕಾಲೇಜು, ಕೈಗಾರಿಕಾ ಕೇಂದ್ರಗಳಿಗೂ ವಿಸ್ತರಿಸಿತು. ಜನಸಾಮಾನ್ಯರೂ ಗ್ರಂಥಾಲಯಗಳ ಓದುಗರಾದರು. ಓದುಗರ ಮನೆ ಬಾಗಿಲಿಗೇ ಪುಸ್ತಕಗಳನ್ನು ತಲುಪಿಸುವ ಸಂಚಾರಿ ಗ್ರಂಥಾಲಯಗಳು ಸ್ಥಾಪನೆಯಾದವು. ಒಟ್ಟಿನಲ್ಲಿ ಗ್ರಂಥಾಲಯದ ಪರಿಕಲ್ಪನೆ ಮತ್ತದರ ಬಳಕೆ ಒಬ್ಬ ಸಂಶೋಧಕನಿಂದ ಶ್ರೀ ಸಾಮಾನ್ಯನವರೆಗೆ ಜಾತಿ, ಧರ್ಮ ಮತ್ತು ಲಿಂಗ ಭೇದಗಳನ್ನು ಮೀರಿ ಅನಾವರಣಗೊಂಡಿತು. ಗ್ರಂಥಾಲಯ ಕ್ಷೇತ್ರದ ಇಂಥದ್ದೊಂದು ಅಗಾಧ ಬೆಳವಣಿಗೆ ಮತ್ತು ಅದರ ಪ್ರಸ್ತುತತೆಯ  ಹಿಂದೆ      ಡಾ. ಎಸ್. ಆರ್. ರಂಗನಾಥನ್ ರ ದಣಿವರಿಯದ ದುಡಿಮೆ, ಪ್ರಯೋಗಶೀಲ ಮನೋಭಾವ ಮತ್ತು ಅರ್ಪಣಾ ಭಾವ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಈ ಕಾರಣದಿಂದಲೇ ರಂಗನಾಥನ್ ಅವರನ್ನು ಗ್ರಂಥಾಲಯ ಚಳುವಳಿಯ ಜನಕ ಎಂದು ಕರೆಯಲಾಗಿದೆ.

      ದೆಹಲಿ ವಿಶ್ವವಿದ್ಯಾಲಯದಲ್ಲಿ ನಿವೃತ್ತಿ ಹೊಂದಿದ ನಂತರ ರಂಗನಾಥನ್ ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆದದ್ದು ಕರ್ನಾಟಕದ ಬೆಂಗಳೂರಿನಲ್ಲಿ. ೧೯೫೭ ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ರಂಗನಾಥನ್ ಇಲ್ಲಿ 'ಪ್ರಲೇಖನ ಸಂಶೋಧನಾ ಮತ್ತು ತರಬೇತಿ ಕೇಂದ್ರ' ವನ್ನು (DRTC) ಸ್ಥಾಪಿಸಿದರು. ಆ ಮೂಲಕ ಗ್ರಂಥಾಲಯ ವಿಜ್ಞಾನಕ್ಕೆ ಸಂಶೋಧನೆಯ ಸ್ವರೂಪವನ್ನು ನೀಡಿದರು. ಡಿ ಆರ್ ಟಿ ಸಿ ಸ್ಥಾಪನೆಯ ದಿನದಿಂದ ೧೯೭೨ ರ ತಮ್ಮ ಬದುಕಿನ ಕೊನೆಯ ದಿನಗಳವರೆಗೆ ರಂಗನಾಥನ್ ಈ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

೧. ಸಾರ್ವಜನಿಕ ಗ್ರಂಥಾಲಯ ಕಾಯ್ದೆ
 
        ಜನಸಾಮಾನ್ಯರಿಗೂ ಗ್ರಂಥಾಲಯಗಳ ಸೇವೆ ಲಭ್ಯವಾಗುವಂತೆ ಮಾಡುವಲ್ಲಿ ರಂಗನಾಥನ್ ರ ಪಾತ್ರ ಹಿರಿದಾದದ್ದು. ಅವರ ನಿರಂತರ ಪ್ರಯತ್ನದ ಪರಿಣಾಮ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸ್ಥಾಪನೆಯಾದವು. ನಂತರದ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಆರ್ಥಿಕ ಸಮಸ್ಯೆ ಎದುರಾಯಿತು. ಆ ಸಂದರ್ಭ ರಂಗನಾಥನ್ ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸೇವಾ ಗುಣಮಟ್ಟದ ಸುಧಾರಣೆಗಾಗಿ ಅವುಗಳ ಆರ್ಥಿಕ ನೆಲೆಯನ್ನು ಸುಭದ್ರಗೊಳಿಸಲು ೧೯೪೯ ರಲ್ಲಿ ಪ್ರಥಮ ಬಾರಿಗೆ ಅಂದಿನ ಮದ್ರಾಸ್ ಸರ್ಕಾರಕ್ಕೆ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ರೂಪಿಸಿ ಕೊಟ್ಟರು. ಸರ್ಕಾರವು ಸಾರ್ವಜನಿಕ ತೆರಿಗೆಯಿಂದ ವಸೂಲಾಗುವ ಹಣದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಿಕೊಳ್ಳಬೇಕೆಂದು ಈ ಕಾಯ್ದೆಯಲ್ಲಿ ಹೇಳಲಾಗಿದೆ. ಇಂದು ಭಾರತದ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಯಲ್ಲಿದೆ.

೨. ಗ್ರಂಥಾಲಯದ ಐದು ಸೂತ್ರಗಳು

   ಗ್ರಂಥಾಲಯದ ಆಡಳಿತಕ್ಕೆ ವೈಜ್ಞಾನಿಕ ತಳಹದಿಯನ್ನು ಕಟ್ಟಿಕೊಡಲು ರಂಗನಾಥನ್ ಐದು ಸೂತ್ರಗಳನ್ನು ರಚಿಸಿದರು. ೧೯೩೧ ರಲ್ಲಿ ರಚನೆಯಾದ ಈ ಸೂತ್ರಗಳು ಸರ್ವಕಾಲಿಕ ಮಹತ್ವವನ್ನು ಪಡೆದಿವೆ.

* ಗ್ರಂಥಗಳು ಉಪಯೋಗಕ್ಕಾಗಿವೆ

* ಪ್ರತಿಯೊಬ್ಬ ಓದುಗನಿಗೆ ಅವನದೇ ಗ್ರಂಥ

* ಪ್ರತಿಯೊಂದು ಗ್ರಂಥಕ್ಕೆ ಒಬ್ಬ ಓದುಗ

* ಓದುಗನ ಸಮಯ ಉಳಿಸಿ

* ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ

೩. ಭಾರತೀಯ ಗ್ರಂಥಾಲಯ ಸಂಘ

      ಗ್ರಂಥಾಲಯ ಕ್ಷೇತ್ರದ ಬೆಳವಣಿಗೆಗಾಗಿ ಒಂದು ಸಂಘಟಿತ ಪ್ರಯತ್ನವಿರಲಿ ಎನ್ನುವ ರಂಗನಾಥನ್ ರ ದೂರದೃಷ್ಟಿಯ ಪರಿಣಾಮ ೧೯೩೩ ರಲ್ಲಿ 'ಭಾರತೀಯ ಗ್ರಂಥಾಲಯ ಸಂಘ' ಸ್ಥಾಪನೆಯಾಯಿತು. ೧೯೪೮ ರಲ್ಲಿ ರಂಗನಾಥನ್ ಈ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೪೮ ರಿಂದ ೧೯೫೩ ರ ವರೆಗಿನ ಐದು ವರ್ಷಗಳ ಅವರ ಆಡಳಿತಾವಧಿಯನ್ನು ಭಾರತೀಯ ಗ್ರಂಥಾಲಯ ಸಂಘದ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬಣ್ಣಿಸಲಾಗಿದೆ. ರಂಗನಾಥನ್ ತಮ್ಮ ಆಡಳಿತದ ಅವಧಿಯಲ್ಲಿ ಭಾರತೀಯ ಗ್ರಂಥಾಲಯ ಸಂಘಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟರು.

೪. ಗ್ರಂಥಾಲಯ ವರ್ಗೀಕರಣ

   ಗ್ರಂಥಾಲಯದಲ್ಲಿ ಗ್ರಂಥಗಳ ವ್ಯವಸ್ಥಿತ ಜೋಡಣೆಗಾಗಿ ರಂಗನಾಥನ್ ಬಳಕೆಗೆ ತಂದ ವಿಧಾನ 'ದ್ವಿಬಿಂದು ವರ್ಗೀಕರಣ' ಎನ್ನುವ ಹೆಸರಿನಿಂದ ಪ್ರಖ್ಯಾತವಾಗಿದೆ. ಈ ವಿಧಾನವನ್ನು ಭಾರತೀಯ ಗ್ರಂಥಾಲಯಗಳಲ್ಲಿ ಮಾತ್ರವಲ್ಲದೆ ಪಾಶ್ಚಿಮಾತ್ಯ ಗ್ರಂಥಾಲಯಗಳಲ್ಲೂ ಉಪಯೋಗಿಸಲಾಗುತ್ತಿದೆ. ಇದು ಭಾರತೀಯ ಗ್ರಂಥಾಲಯ ವಿಜ್ಞಾನಿಯು  ಜಾಗತಿಕ ಮಟ್ಟದಲ್ಲಿ ನೀಡಿದ ಮಹತ್ವದ ಕೊಡುಗೆ. ಪುಸ್ತಕಗಳ  ಜೋಡಣೆ, ಹುಡುಕುವಿಕೆ ಹಾಗೂ ಪುನರ್ ಜೋಡಣೆಯಲ್ಲಿ ಓದುಗರ ಮತ್ತು ಗ್ರಂಥಾಲಯ ಸಿಬ್ಬಂದಿಯ ಸಮಯವನ್ನು ಉಳಿಸುವ ವೈಜ್ಞಾನಿಕ ವಿಧಾನವೆಂದೇ ಪ್ರಖ್ಯಾತವಾಗಿದೆ.

ಪ್ರಶಸ್ತಿ ಮತ್ತು ಗೌರವ

        ಗ್ರಂಥಾಲಯ ಕ್ಷೇತ್ರದಲ್ಲಿನ ಎಸ್. ಆರ್. ರಂಗನಾಥನ್ ರ ಸಾಧನೆಗಳನ್ನು ಗುರುತಿಸಿ ಅವರನ್ನು ಅರಸಿ ಬಂದ ಪ್ರಶಸ್ತಿಗಳು ಅನೇಕ

* ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ

* ಗ್ರಂಥಾಲಯ ವಿಜ್ಞಾನದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಎಂದು ಮನ್ನಣೆ

* ೧೯೪೮-೧೯೫೩ ರ ವರೆಗೆ ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷತೆಯ ಗೌರವ

* ೧೯೯೨ ರಲ್ಲಿ ಜನ್ಮ ಶತಮಾನೋತ್ಸವದ ನೆನಪಿಗಾಗಿ ಭಾರತ ಸರ್ಕಾರದಿಂದ ಅಂಚೆ ಚೀಟಿ ಬಿಡುಗಡೆ

* ಪ್ರತಿ ವರ್ಷ ಅಗಸ್ಟ್ ೧೨ ರಂದು 'ರಂಗನಾಥನ್ ದಿನ' ಎಂದು ಆಚರಣೆ

* ೧೯೯೨ ರಲ್ಲಿ 'ರಂಗನಾಥನ್  ಸಂಸ್ಮರಣ' ಗ್ರಂಥ ಬಿಡುಗಡೆ


 ಇದು ೧೯೭೦ ರ ಮಾತು. ಡಾ: ರಂಗನಾಥನ್ ರನ್ನು ಭೇಟಿಯಾಗಲು ಬೆಂಗಳೂರಿನ ಅವರ ಮನೆಗೆ ಹೋದ ಆ ದಿನ ರವಿವಾರವಾಗಿತ್ತು. ವಾರದ ರಜಾ ದಿನವಾಗಿದ್ದರೂ ಅಂದು ರಂಗನಾಥನ್ ರ ಮನೆಯಲ್ಲಿ ಹತ್ತಕ್ಕಿಂತ ಹೆಚ್ಚು ಜನ ಅವರೊಡನೆ ಮಾತು ಮತ್ತು ಚರ್ಚೆಯಲ್ಲಿ ತೊಡಗಿದ್ದರು. ಅವರೆಲ್ಲ ಭಾರತದ ಬೇರೆ ಬೇರೆ ಭಾಗಗಳಿಂದ ನೂರಾರು ಮೈಲಿ ದೂರದಿಂದ  ಗ್ರಂಥಾಲಯಗಳ ಬೆಳವಣಿಗೆ ಕುರಿತು ರಂಗನಾಥನ್ ರಿಂದ ಸಲಹೆಗಳನ್ನು ಕೇಳಲು ಬಂದಿದ್ದರು. ವೃತ್ತಿಯಿಂದ ಗ್ರಂಥಪಾಲಕರಾಗಿದ್ದ ಅವರು ರಂಗನಾಥನ್ ರ ಸುತ್ತ ವಿಧೇಯ ವಿದ್ಯಾರ್ಥಿಗಳಂತೆ ಕುಳಿತು ಅವರು ಹೇಳುತ್ತಿದ್ದದ್ದನ್ನು ಏಕಾಗ್ರಚಿತ್ತಾರಾಗಿ  ಕೇಳುತ್ತಿದ್ದರು. ನಾಲ್ಕಾರು ಗಂಟೆಗಳ ಚರ್ಚೆಯ ನಂತರವೂ ರಂಗನಾಥನ್ ರ ಮುಖದಲ್ಲಿ ಸ್ವಲ್ಪವೂ ಆಯಾಸ ಮತ್ತು  ಬೇಸರ ಕಾಣದಿರುವುದು ಕಂಡು ನನಗೆ ಆ ವ್ಯಕ್ತಿತ್ವದ ಕುರಿತು ಅಚ್ಚರಿಯಾಯಿತು. ಏಕೆಂದರೆ ಆ ಸಂದರ್ಭ ರಂಗನಾಥನ್ ರಿಗೆ ೭೮ ವರ್ಷ ವಯಸ್ಸು. ಇದು ಪ್ರತಿ ರವಿವಾರದಂದು ಪುನರಾವರ್ತನೆಯಾಗುತ್ತಿತ್ತೆಂದು ನನಗೆ ಅವರೊಡನೆ ಮಾತನಾಡುವಾಗ ಗೊತ್ತಾಯಿತು. ಅವರೊಡನೆ ಕಳೆದ ಆ ದಿನ ನನಗೆ ರಂಗನಾಥನ್ ರ ಬದುಕಿನ ಸರಳತೆಯ ಪರಿಚಯವಾಯಿತು. ಉತ್ತಮ ಸಂಬಳ ಪಡೆಯುತ್ತಿದ್ದರೂ ಅವರು ಗಾಂಧಿಯ ಆದರ್ಶವನ್ನು ರೂಢಿಸಿಕೊಂಡಿದ್ದರು. ಅವರ ಊಟ ಮತ್ತು ಉಡುಪಿನಲ್ಲಿ ಸರಳತೆ ಎದ್ದು ಕಾಣುತ್ತಿತ್ತು. ಚಹಾ ಕಾಫಿ ಇತ್ಯಾದಿ ಪಾನೀಯಗಳ ಸೇವನೆ ನಿಲ್ಲಿಸಿ ಅದೆಷ್ಟೋ ವರ್ಷಗಳಾಗಿದ್ದವು. ಅವರ ಮನೆಯಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ತಮ್ಮ ಖಾಸಗಿ ಬದುಕನ್ನು ಸರಳತೆ ಮತ್ತು ಅನೇಕ ಇತಿಮಿತಿಗಳಿಗೆ ಸೀಮಿತಗೊಳಿಸಿಕೊಂಡು ಈ ವ್ಯಕ್ತಿ ತಾವು ದುಡಿದು ಗಳಿಸಿದ ಹಣವನ್ನೆಲ್ಲ ಗ್ರಂಥಾಲಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಿದ್ದರು. ಆ ದಿನದ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಡಿ ಆರ್ ಟಿ ಸಿ ಯ ಗ್ರಂಥಾಲಯದೊಳಗೆ  ಕಾಲಿಡುವ ವೇಳೆ ರಂಗನಾಥನ್ ತಮ್ಮ ಪಾದ ರಕ್ಷೆಗಳನ್ನು ಗ್ರಂಥಾಲಯದ ಹೊರ ಬಾಗಿಲ ಬಳಿ ಬಿಟ್ಟು ಬರಿಗಾಲಿನಲ್ಲೇ ನಡೆದು ಒಳ ಬಂದರು. ವಿಚಾರಿಸಿದಾಗ ಗೊತ್ತಾಯಿತು ಅವರು ಗ್ರಂಥಾಲಯಗಳನ್ನು ಮನೆಯಂದೇ ಭಾವಿಸಿದ್ದರು. ನಿಜಕ್ಕೂ ರಂಗನಾಥನ್ ನಾನು ನೋಡಿದ ಮತ್ತು  ಕಂಡು ಮಾತನಾಡಿಸಿದ ಅದ್ಭುತ ಪ್ರತಿಭೆಯ ಚೇತನ. 

                    (ಅಮೇರಿಕನ್ ಗ್ರಂಥಪಾಲಕಿ ಕೊಕ್ರೇನ್ ಅವರ Personal Communication ಲೇಖನದಿಂದ )

ಕೊನೆಯ ಮಾತು 


       ೧೯೮೪ ರಲ್ಲಿ ಬೆಂಗಳೂರಿನ ಡಿ ಆರ್ ಟಿ ಸಿ ಗೆ ರಂಗನಾಥನ್ ಕುರಿತು ಉಪನ್ಯಾಸ ನೀಡಲು ಬಂದ ಅಮೇರಿಕಾದ ಮಾಹಿತಿ ವಿಜ್ಞಾನಿ ಯುಜೀನ್ ಗೆರ್ಫಿಲ್ಡ್ ಹೀಗೆ ಹೇಳುತ್ತಾರೆ 'ರಂಗನಾಥನ್ ಭಾರತ ಮಾತ್ರವಲ್ಲ ಇಡೀ ಜಗತ್ತಿನ ಗ್ರಂಥಾಲಯಗಳ ಚಿತ್ರಣವನ್ನೇ ಬದಲಿಸಿದ ಸಾಧಕ. ತಮ್ಮ ಬದುಕಿನ ಕೊನೆಯ ದಿನದವರೆಗೂ ಗ್ರಂಥಾಲಯಗಳ ಬೆಳೆವಣಿಗೆಯನ್ನು ಕುರಿತು ಚಿಂತಿಸಿದ ಚಿಂತಕ. ವೃತ್ತಿ ಬದುಕಿನಲ್ಲಿ ದುಡಿದು ಗಳಿಸಿದ್ದೆಲ್ಲವನ್ನೂ ಗ್ರಂಥಾಲಯಗಳ ಪ್ರಗತಿಗಾಗಿ ವಿನಿಯೋಗಿಸಿದ ದಾರ್ಶನಿಕ. ಅದಕ್ಕೆಂದೇ ಅವರು  ಗ್ರಂಥಾಲಯ ವಿಜ್ಞಾನಿ ಮಾತ್ರವಲ್ಲ ಅವರೊಬ್ಬ ಯೋಗಿ, ಸಂತ, ದಾರ್ಶನಿಕನಾಗಿ ನನಗೆ ಕಾಣುತ್ತಾರೆ. ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯಗಳಲ್ಲಿ  ಬರಿಗಾಲಿನಲ್ಲಿ ನಡೆದಾಡಿದ ಈ ಸಾಧಕ ತನ್ನ ಹೆಜ್ಜೆ ಗುರುತನ್ನು ಅಜರಾಮರಗೊಳಿಸಿರುವರು'. ಈ ಮಾತಿನಲ್ಲಿ ಯಾವ ಒಣ ಹೊಗಳಿಕೆಯಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇಲ್ಲ. ಜನರ ನಿರ್ಲಕ್ಷಕ್ಕೆ ಒಳಗಾಗಿದ್ದ ಒಂದು ಕ್ಷೇತ್ರವನ್ನು ರಂಗನಾಥನ್ ತಮ್ಮ ಸೇವಾಮನೋಭಾವ ಮತ್ತು ಸಂಶೋಧನಾತ್ಮಕ ಗುಣದಿಂದ ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದರು. ಜನಸಾಮಾನ್ಯರಿಗೂ ಪುಸ್ತಕಗಳು ಉಚಿತವಾಗಿ ದೊರೆಯುವಂತೆ ಮಾಡಿ ಆ ಮೂಲಕ ಸ್ವಾಸ್ಥ್ಯ  ಮತ್ತು ಸಾಂಸ್ಕೃತಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದರು. ದುಡಿದು ಗಳಿಸಿದ್ದೆಲ್ಲವನ್ನೂ ಸಮಾಜಕ್ಕೆ ಅರ್ಪಿಸಿದ ಅವರ ಸರಳ ಬದುಕು ಮತ್ತು ಸಾಮಾಜಿಕ ಕಾಳಜಿಯ ಗುಣ ನಂತರದ ಪೀಳಿಗೆಗೆ ದಾರಿದೀಪವಾಯಿತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ