Monday, April 30, 2012

ಇಂಥವರ ಸಂಖ್ಯೆ ಸಾವಿರಾಗಲಿ

    ನಿನ್ನೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಗಳಿಗಾಗಿ ಚುನಾವಣೆ ನಡೆಯಿತು. ಮತದಾನ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ಇಂಥದ್ದೊಂದು ಅವಕಾಶ ಮಾಡಿಕೊಟ್ಟ ಮಹನೀಯರ ನೆನಪಾಯಿತು. ಆ ಹಿರಿಯರ ಹೆಸರು ಶ್ರೀ ಅನ್ನದಾನಿ ಹಿರೇಮಠ ಎಂದು. ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ಬದುಕುತ್ತಿರುವ ಶ್ರೀ ಹಿರೇಮಠರು ಈ ಎಂಬತ್ತರ ಇಳಿ ವಯಸ್ಸಿನಲ್ಲೂ ಪಾದರಸದಷ್ಟು ಚುರುಕಾಗಿರುವರು. ಕನ್ನಡಕ್ಕಾಗಿ ಅವರು ಮಾಡುತ್ತಿರುವ ಕೆಲಸ ಇಡೀ ನಾಡೇ ಮೆಚ್ಚುವಂಥದ್ದು.
    ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿದ್ದೆ ಶ್ರೀ ಹಿರೇಮಠರ ಪ್ರಯತ್ನದಿಂದ. ಹೀಗೆ ಹೇಳಿಕೊಳ್ಳುವುದರಲ್ಲಿ ನನಗೆ ಯಾವ ಮುಜುಗರವೂ ಇಲ್ಲ. ನನ್ನ ಒಂದೆರಡು ಬಿಡಿ ಲೇಖನಗಳನ್ನು ಓದಿ ಮೆಚ್ಚಿಕೊಂಡ ಶ್ರೀ ಹಿರೇಮಠರು ಒಂದು ದಿನ ನನ್ನನ್ನು ಭೇಟಿ ಮಾಡಲು ನಾನಿದ್ದ ಸ್ಥಳಕ್ಕೆ ಬಂದರು. ಮಾತಿನ ನಡುವೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿಲ್ಲದಿರುವುದು ಗೊತ್ತಾಗಿ ಬೇಸರ ವ್ಯಕ್ತಪಡಿಸಿದ ಶ್ರೀಯುತರು ಪರಿಷತ್ತಿನ ಸದಸ್ಯರ ಸಂಖ್ಯೆ ವೃದ್ಧಿಸಬೇಕೆಂದು ಹೇಳಿದರು. ನನ್ನ ಮತ್ತು ಅವರ ಈ ಮೊದಲ ಭೇಟಿ ಕೆಲವೇ ನಿಮಿಷಗಳಲ್ಲಿ ಮುಗಿದು ಹೋದರೂ ಅವರ ಮಾತುಗಳು ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದವು.
      ನಾನು ಶ್ರೀ ಅನ್ನದಾನಿ ಹಿರೇಮಠ ಅವರೊಡನೆ ಆಡಿದ ಮಾತುಗಳು ಕೆಲಸದ ಒತ್ತಡದ ನಡುವೆ ನನಗೆ ಮರತೇ ಹೋಗಿದ್ದವು. ಇದ್ದಕ್ಕಿದ್ದಂತೆ ಒಂದು ದಿನ ಪ್ರತ್ಯಕ್ಷರಾದ ಅವರು ಕೈಯಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯತ್ವದ ಅರ್ಜಿಯನ್ನು ಹಿಡಿದುಕೊಂಡೆ ಬಂದಿದ್ದರು. ನಿವೃತ್ತಿಯ ನಂತರ ಪರಿಷತ್ತಿಗೆ ಸದಸ್ಯರ ಸಂಖ್ಯೆಯನ್ನು ಹೆಚ್ಸಿಸುವುದೇ ಅವರಿಗೆ ಖಾಯಂ ಕೆಲಸವಾಗಿದೆ. ಬದಾಮಿಯಲ್ಲಿ ವಾಸಿಸುತ್ತಿರುವ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಸಂಚರಿಸುತ್ತ್  ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ವೃದ್ಧಿಸುತ್ತಿರುವರು. ನನ್ನಿಂದ ಅರ್ಜಿ ತುಂಬಿಸಿಕೊಂಡು ಒಂದು ತಿಂಗಳೊಳಗಾಗಿ ಬರುವುದಾಗಿ ಹೇಳಿ ಹೋದ ಅವರು ನನಗೆ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸಿದರು.
     ಒಂದು ತಿಂಗಳೊಳಗಾಗಿ ಅತ್ಯಂತ ಕರಾರುವಕ್ಕಾಗಿ ಖುದ್ದಾಗಿ ತಾವೇ ಬಂದು ನನ್ನ ಗುರುತಿನ ಪತ್ರ ತಂದು ಕೊಟ್ಟರು. ಜೊತೆಗೆ ಅವರ ಕೈ ಚೀಲದಲ್ಲಿ ಒಂದಿಷ್ಟು ಅರ್ಜಿಗಳೂ ಇದ್ದವು. ನಾಡು ನುಡಿಯ ಬಗ್ಗೆ ಆಸಕ್ತಿ ಇರುವ ವ್ಯಕ್ತಿಗಳು ಭೇಟಿಯಾದರೆ ಅವರನ್ನು ಪರಿಷತ್ತಿನ ಸದಸ್ಯರಾಗಿ ಮಾಡಲು ಇರಲಿ ಎನ್ನುವ ಮುಂದಾಲೋಚನೆ ಅವರದು. ಸಂಭಾಷಣೆ ವೇಳೆ ಅವರು ಹೇಳಿದ ಒಂದೆರಡು ಮಾತುಗಳು ನನಗೆ ಬಹಳ ಮೆಚ್ಚುಗೆಯಾದವು. 'ನೋಡ್ರಿ ಈ ನೆಲ ನನಗ ಜನ್ಮ ನಿಡ್ಯಾದ. ಅಕ್ಷರ ಕಲಿಸಿ  ಉದ್ಯೋಗ ಕೊಟ್ಟು ಬದುಕು ರೂಪಿಸ್ಯಾದ. ನಾನು ನನ್ನ ಬದುಕನ್ನಲ್ದ ನನ್ನ ಮಕ್ಕಳ ಬದುಕನ್ನು ಕಟ್ಟಿ ಕೊಟ್ಟಿನಿ. ಇಷ್ಟೆಲ್ಲಾ ಕೊಟ್ಟ ನಾಡಿಗಿ ನಾವೂ ಒಂದಿಷ್ಟಾದ್ರೂ ಉಪಕಾರ ಮಾಡಬೇಕಲ್ಲ. ಅದಕ್ಕಾ ನಾ ಈ ಕೆಲಸ ಶುರು ಹಚ್ಚಿನಿ. ಈ ಕೆಲಸದಾಗ ನನಗ ಭಾಳ ತೃಪ್ತಿ ಸಿಕ್ಕದ'. ಹೀಗೆ ಹೇಳಿ ಹೋದವರು ಹತ್ತಿರ ಹತ್ತಿರ ಮೂರು ವರ್ಷಗಳಾಗಿ ಹೋದವು ಇವತ್ತಿಗೂ ಭೇಟಿಯಾಗಿಲ್ಲ. ನಾನೊಂದು ದೊಡ್ಡ ಕೆಲಸ ಮಾಡುತ್ತಿದ್ದೇನೆ ಎನ್ನುವ ಅಹಂಕಾರವೂ ಅವರಿಗಿಲ್ಲ.
     ಇವತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ರಾಜಕೀಯ ಬಣ್ಣ ಬಂದಿದೆ. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಜನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವರು. ಈ ಅದ್ದೂರಿ, ಅಬ್ಬರ, ಆಡಂಬರದ ನಡುವೆ ಸದ್ದಿಲ್ಲದೆ ಕನ್ನಡದ ಕೆಲಸ ಮಾಡುತ್ತಿರುವ ಶ್ರೀ ಅನ್ನದಾನಿ ಹಿರೇಮಠರಂಥ ಸುಸಂಸ್ಕೃತ ಮನಸ್ಸುಗಳು ಕಳೆದು ಹೋಗಬಾರದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Friday, April 27, 2012

ತಾಳ್ಮೆ ಯಶಸ್ಸಿನ ಬಹು ದೊಡ್ಡ ಸೂತ್ರ


       ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಂಬಂಧಿಕರ ಮಗನಿಗೆ ಇತ್ತೀಚಿಗೆ ಸಮಸ್ಯೆಯೊಂದು ಕಾಡಲಾರಂಭಿಸಿದೆ. ಅದು ಮನೆಯಲ್ಲಿನ ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಅವನ ಸಮಸ್ಯೆ ಏನೆಂದರೆ ಕಂಪನಿಯ ಮಾಲೀಕರು ಆತನ ಸಾಮರ್ಥ್ಯವನ್ನು ಗುರುತಿಸುತ್ತಿಲ್ಲ ಎನ್ನುವುದು. ಅಲ್ಲಿ ವಿಪರೀತ ಪಕ್ಷಪಾತವಿದೆ, ನನ್ನ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸ ಕೊಡುತ್ತಿಲ್ಲ. ಸಂಬಳವೂ ನನ್ನ ಯೋಗ್ಯತಾನುಸಾರ  ದೊರೆಯುತ್ತಿಲ್ಲ. ನನಗಿಂತ ಕಡಿಮೆ ವಿದ್ಯಾರ್ಹತೆ ಇರುವವರ ಕೈಕೆಳಗೆ ನಾನು ಕೆಲಸ ಮಾಡಬೇಕಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ನಾನು ಆ ಕಂಪನಿಯಿಂದ ಕೆಲವೇ ದಿನಗಳಲ್ಲಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರ ಬರಬಹುದು. ಹೀಗೆ ಅನೇಕ ಸಮಸ್ಯೆಗಳನ್ನು ಹೇಳಿಕೊಂಡ. ಅಷ್ಟಕ್ಕೂ ಅವನು ಅಲ್ಲಿ ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳುಗಳಾಗಿವೆ. ಮೂರು ತಿಂಗಳುಗಳಲ್ಲಿಯೇ ಅವನಲ್ಲಿ ಈ ಎಲ್ಲ ಸಮಸ್ಯೆಗಳು ಹುಟ್ಟಿಕೊಂಡಿವೆ. ಕೆಲಸಕ್ಕೆ ಸೇರಿದ ಅತಿ ಕಡಿಮೆ ಅವಧಿಯಲ್ಲಿ ಕಂಪನಿಯ ಒಡೆತನದವರು ತನ್ನ ಸಾಮರ್ಥ್ಯವನ್ನು ಗುರುತಿಸಿ ದೊಡ್ಡ ಹುದ್ದೆಯೊಂದನ್ನು ನಿಡಬೇಕಿತ್ತು ಎಂದ ಅವನ ಆಲೋಚನೆಯ ಕ್ರಮ ಸರಿಯಲ್ಲ  ಎಂದೆನಿಸಿತು. ಆತನಿಗಿನ್ನೂ ೨೬ರ ಹರೆಯ. ಇದೆ ಈಗ ಶಿಕ್ಷಣವನ್ನು ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿರುವ ಅವನಿಗೆ ಸಾಮರ್ಥ್ಯವನ್ನು ತೋರಿಸಲು ಸಾಕಷ್ಟು ಕಾಲಾವಕಾಶವಿದೆ. ಬಿಸಿ ರಕ್ತದ ಯುವಕನಾಗಿರುವುದರಿಂದ ತನ್ನ ಹೊಸ ಆಲೋಚನೆಗಳನ್ನು ಮತ್ತು ಕನಸುಗಳನ್ನು ಕಂಪನಿಯ ಬೆಳವಣಿಗೆಗಾಗಿ ಆತ ವಿನಿಯೋಗಿಸಬೇಕಿದೆ. ಅದಕ್ಕೆ ಒಂದಿಷ್ಟು ಸಮಯ ಬೇಕು. ಜೊತೆಗೆ ತಾಳ್ಮೆಯ ಗುಣವೂ ಅವನಲ್ಲಿರಬೇಕು. ಹೀಗೆ ಧಿಡೀರನೆ ಯಶಸ್ಸಿನ ಮೆಟ್ಟಿಲು ಹತ್ತ ಬೇಕೆನ್ನುವ ಅವನೊಳಗಿನ ವಾಂಛೆ ಮುಂದಿನ ದಿನಗಳಲ್ಲಿ ತಪ್ಪು ಹೆಜ್ಜೆ ಇಡಲು ಪ್ರೆರೇಪಿಸಬಹುದು.

        ಒಂದಿಷ್ಟು ಉದಾಹರಣೆಗಳನ್ನು ಕೊಟ್ಟು ಅವನ ಮನಸ್ಥಿಯನ್ನು ಬದಲಿಸುವುದು ಅಗತ್ಯವಾಗಿತ್ತು. ಇವತ್ತು ಕ್ರಿಕೇಟ್ ಲೋಕದ ಅನರ್ಘ್ಯರತ್ನವಾಗಿ ಹೊಳೆಯುತ್ತಿರುವ ಸಚಿನ್ ತೆಂಡೂಲ್ಕರ್ ಗೆ ಜನಪ್ರಿಯತೆ ಎನ್ನುವುದು ಏಕಾಏಕಿ ಬಂದದ್ದಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆತ ಉದಯೋನ್ಮುಖ ಆಟಗಾರನೆಂದು ಹೆಸರುಗಳಿಸಲಿಲ್ಲ. ಆತನ ಇವತ್ತಿನ ಎಲ್ಲ ಸಾಧನೆಗಳ ಹಿಂದೆ ಸತತ ಇಪ್ಪತ್ತು ವರ್ಷಗಳ ಶ್ರಮವಿದೆ. ಈ ಇಪ್ಪತ್ತು ವರ್ಷಗಳಿಂದ ಕ್ರಿಕೇಟ್ ಆಟವನ್ನೇ ಆತ ಉಸಿರಾಡುತ್ತಿರುವನು. ಈ ಆಟವೇ ಆತನ ಬದುಕಿನ ಸರ್ವಸ್ವವೂ ಹೌದು. ಕ್ರಿಕೇಟ್ ಆಟಕ್ಕಾಗಿ ಆತ ಅನೇಕ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರಿಂದ ದೂರವೇ ಉಳಿಯಬೇಕಾಯಿತು. ಆತನ ತಂದೆ ತೀರಿಕೊಂಡಾಗ ಸಚಿನ್ ವಿದೇಶದಲ್ಲಿ ವಿಶ್ವಕಪ್ ಆಡುತ್ತಿದ್ದ. ಜೊತೆಗೆ ಬದುಕಿನ ಅನೇಕ ಸಂತಸದ ಸಮಯಗಳನ್ನು ಈ ಆಟಕ್ಕಾಗಿ ಕಳೆದುಕೊಳ್ಳಬೇಕಾಯಿತು. ಪ್ರಯತ್ನ, ಸತತ ಪರಿಶ್ರಮ, ತಾಳ್ಮೆ, ಸಹನಶೀಲತೆ ಒಟ್ಟಾರೆ ಇವೆಲ್ಲವುಗಳ ಫಲಶ್ರುತಿಯೇ ಆತನ ಇವತ್ತಿನ ಸಾಧನೆ.

    ಸಚಿನ್ ಆಟದಲ್ಲಿನ ಸ್ಥಿರತೆ ನಿಜಕ್ಕೂ ಅಚ್ಚರಿಯ ಸಂಗತಿ. ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಒಬ್ಬ ಕ್ರಿಕೆಟಿಗ ನಿರಂತರವಾಗಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುವುದು ಸಣ್ಣ ಸಂಗತಿಯಲ್ಲ. ಕ್ರಿಕೆಟ್ ಆಟದಿಂದ ದೊರೆಯುತ್ತಿರುವ ಜನಪ್ರಿಯತೆ ಮತ್ತು ಶ್ರೀಮಂತಿಕೆಯಿಂದ ಆಟಗಾರರು ಉನ್ಮತ್ತರಾಗುತ್ತಿರುವರು. ಪರಿಣಾಮವಾಗಿ ಆಟದಲ್ಲಿನ ಕನ್ಸಿಸ್ಟೆನ್ಸಿಯನ್ನು ಅವರು ಬಹಳ ಬೇಗನೆ ಕಳೆದುಕೊಳ್ಳುತ್ತಿರುವರು. ಆದರೆ ಸಚಿನ್ ಹಾಗಲ್ಲ. ಈ ಜನಪ್ರಿಯತೆ ಮತ್ತು ಹಣ ಅವನನ್ನು ಉನ್ಮತ್ತನನ್ನಾಗಿಸಿಲ್ಲ. ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದರೂ ಆತನ ತಲೆ ಭುಜದ ಮೇಲೇ ಇದೆ. ರೂಪಸಿಂಗ್ ಮೈದಾನದಲ್ಲಿ ದ್ವಿಶತಕದ ಆಟ ಆಡಿದಾಗ ಆತ ಕುಣಿಯಲಿಲ್ಲ, ಕುಪ್ಪಳಿಸಲಿಲ್ಲ, ಪಿಚ್ ಗೆ ನಮಿಸಲಿಲ್ಲ, ಬ್ಯಾಟ್ ಗೆ ಮುತ್ತಿಕ್ಕಲಿಲ್ಲ, ಕ್ರೀಡಾಂಗಣದ ತುಂಬ ಓಡಾಡಲಿಲ್ಲ. ಪ್ರತಿ ಬಾರಿ ಅರ್ಧ ಶತಕ, ಶತಕ ದಾಖಲಿಸಿದಾಗ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಆ ದಿನ ಕೂಡ ಅವನ ಪ್ರತಿಕ್ರಿಯೆ ಹಾಗೆ ಇತ್ತು.

        ಹೊಗಳಿಕೆ ಮತ್ತು ಟೀಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಆತನದು. ಸಚಿನ್ ವೃತ್ತಿ ಬದುಕಿನ ಈ ಎರಡು ದಶಕಗಳಲ್ಲಿ ಅನೇಕರು ಅನೇಕ ರೀತಿಯ ಟೀಕೆಗಳನ್ನು ಮಾಡಿರುವರು. ಸಚಿನ್ ಗೆ ವಯಸ್ಸಾಗಿದೆ, ಆತನ ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ, ಆತ ಒಳ್ಳೆಯ ಫಿನಿಶರ್ ಅಲ್ಲ, ಸಚಿನ್ ಒತ್ತಡದಲ್ಲಿ ಆಡಲಾರ, ಆತ ಕೇವಲ ದಾಖಲೆಗಾಗಿ ಆಡುವನು, ಸಚಿನ್ ನಿವೃತ್ತಿ ಹೊಂದಬೇಕು ಹೀಗೆ ಹಲವು ಬಗೆಯ ಟೀಕೆಗಳನ್ನು ಸಚಿನ್ ಎದುರಿಸಿರುವನು. ಆದರೆ ಆತ ಯಾವ ಟೀಕೆಗಳಿಗೂ ಉತ್ತರಿಸಲಾರ. ಯಾವ ಟೀಕೆಯೂ ಆಟದ ಬಗೆಗಿನ ಆತನ ಬದ್ಧತೆಯನ್ನು ಹಾಳುಗೆಡವಲಿಲ್ಲ. ಪ್ರತಿಯೊಂದು ಟೀಕೆ ಬಂದಾಗಲೂ ಅವನೊಬ್ಬ ಪ್ರಬುದ್ಧ ಆಟಗಾರನಾಗಿ ಬೆಳೆಯುತ್ತಲೇ ಹೋದ.  ಅವನು ಕಟ್ಟಿಕೊಂಡ ಈ ಆಟದ ಮತ್ತು ವೈಯಕ್ತಿಕ ಬದುಕುಗಳೆರಡೂ ಒಂದು ಕಪ್ಪು ಚುಕ್ಕೆಯೂ ಇಲ್ಲದ ಹಸನಾದ ಬದುಕದು. ಆದರೆ ಅವನದೇ ಸಮಕಾಲೀನ ಆಟಗಾರನೊಬ್ಬ ಪ್ರತಿಭೆ ಇದ್ದೂ ಮೂಲೆಗುಂಪಾದ. ಹಣ ಮತ್ತು ಜನಪ್ರಿಯತೆಯ ನಶೆ ಅವನ ಇಡೀ ಕ್ರಿಕೇಟ್ ಬದುಕನ್ನೇ ನಾಶಗೊಳಿಸಿತು.

        ಧಿರೂಭಾಯಿ ಅಂಬಾನಿಯಂಥ ಸಾಮಾನ್ಯ ಗುಮಾಸ್ತನೋರ್ವ ದೇಶದ ಬಹುದೊಡ್ಡ ಉದ್ಯಮಿಯಾಗಿ ಬೆಳೆದು ನಿಂತದ್ದು, ಸಾಮಾನ್ಯ ನಾಟಕಕಾರನೊಬ್ಬ ತನ್ನ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ರಾಜಕುಮಾರನಾಗಿ ಬೆಳೆದದ್ದು, ಬಡ ಕುಟುಂಬದ ಹುಡುಗನೊಬ್ಬ ರಾಷ್ಟ್ರಪತಿಯಾಗುವ ಅರ್ಹತೆ ಗಳಿಸಿಕೊಂಡಿದ್ದು ಈ ಎಲ್ಲ ಸಾಧನೆಗಳಿಗೆ ಹಿಡಿದ ವರ್ಷಗಳು ಒಂದೆರಡಲ್ಲ. ಧಿಡೀರ್ ಹೆಸರು ಗಳಿಸುವ ಹಪಾಹಪಿಗೆ ಬಿದ್ದಿದ್ದರೆ ಸಚಿನ್, ಅಂಬಾನಿ, ರಾಜಕುಮಾರ, ಅಬ್ದುಲ್ ಕಲಾಮ್ ಈ ಸಾಧಕರೆಲ್ಲ ಇವತ್ತು ನಮಗೆ ಆದರ್ಶಪ್ರಾಯರಾಗಿ ಕಾಣಿಸುತ್ತಿರಲಿಲ್ಲ.

       ಯಶಸ್ಸು ಎನ್ನುವುದು ಒಂದೇ ದಿನದಲ್ಲಿ ಕಟ್ಟಿಕೊಳ್ಳುವ ಬದುಕಲ್ಲ. ಅದು ಅನೇಕ ವರ್ಷಗಳ ಸಾಧನೆಯ ಫಲ. ನಿರಂತರ ಪ್ರಯತ್ನ, ಶ್ರಮ, ತಾಳ್ಮೆಯೇ ಯಶಸ್ಸಿನ ಮೂಲ ಮಂತ್ರಗಳು. ಅದಕ್ಕಾಗಿಯೇ ಅಲ್ಲವೆ ನಮ್ಮ ಹಿರಿಯರು ಹೇಳಿದ್ದು 'ತಾಳಿದವನು ಬಾಳಿಯಾನು' ಎಂದು.

ಬರೆದ  ಬಹಳ ದಿನಗಳ ನಂತರ 

         ಮೊನ್ನೆ ಒಲಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಸೈನಾ ನೆಹವಾಲ್ ಳನ್ನು ಅಭಿನಂದಿಸಲು ಏರ್ಪಡಿಸಿದ ಔತಣಕೂಟದಲ್ಲಿ ಅವಳ ತಂದೆ ಮಾತನಾಡುತ್ತಿದ್ದರು. ಮಗಳ ಸಾಧನೆ ಆ ತಂದೆಗೆ ಅಭಿಮಾನದ ವಿಷಯವಾಗಿತ್ತು. ಇವತ್ತಿನ ಈ ಸಾಧನೆಗಾಗಿ ಮಗಳು ಪಟ್ಟ ಶ್ರಮವನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟರು. ಒಂದು ಹಂತದಲ್ಲಿ ಅತ್ಯಂತ ಭಾವುಕರಾಗಿ ಹೀಗೆ ನುಡಿದರು 'ತನ್ನ ವಯಸ್ಸಿನ ಮಕ್ಕಳೆಲ್ಲ ಮುಂಜಾನೆ ಸುಖ ನಿದ್ದೆ ಮಾಡುತ್ತ, ಪಾರ್ಕಿನಲ್ಲಿ ಆಟವಾಡುತ್ತ, ಐಸ್ ಕ್ರೀಮ್ ತಿನ್ನುತ್ತ, ಟಾಮ್ ಆಯಿಂಡ್ ಜೆರ್ರಿ ನೋಡುತ್ತ ಬಾಲ್ಯವನ್ನು ಕಳೆಯುತ್ತಿದ್ದರೆ ನನ್ನ ಮಗಳು ಪ್ರತಿನಿತ್ಯ ನಸುಕಿನಲ್ಲೇ ಎದ್ದು ಕೈಯಲಿ ರಾಕೇಟ್ ಹಿಡಿದು ತರಬೇತಿಗಾಗಿ ನೂರಾರು ಕಿಲೋಮಿಟರ್ ಓಡಬೇಕಾಗುತ್ತಿತ್ತು. ಒಮ್ಮೊಮ್ಮೆ ಅವಳು ಸಹಜ ಬಾಲ್ಯ ಜೀವನದ ಖುಷಿಯಿಂದ ವಂಚಿತಳಾಗುತ್ತಿರುವ ಕುರಿತು ನನಗೆ ವೇದನೆಯಾಗುತ್ತಿತ್ತು'. 

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, April 18, 2012

ಆ ಪತ್ರದ ಹಿಂದೆ ಅದೆಂಥ ವೇದನೆಯಿತ್ತು

   ಮುಂಬೈ ನಗರದ ಮೇಲೆ ಉಗ್ರರ ದಾಳಿ ನಡೆದು ಮೂರು ವರ್ಷಗಳೇ ಕಳೆದು ಹೋದವು. ಸೆರೆ ಸಿಕ್ಕ ಉಗ್ರನಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ವಾಣಿಜ್ಯ ನಗರಿ ಮುಂಬೈ ಮೈಕೊಡವಿಕೊಂಡು ಮೇಲೆದ್ದು ನಿಂತಿದೆ. ಬದುಕಿನ ಧಾವಂತದ ಓಟದೆದುರು ಜನರು ಆ ಘಟನೆಯನ್ನು ಮರೆತು ಹೋಗಿರುವರು. ಪತ್ರಿಕೆಯಲ್ಲೋ, ಟಿ.ವಿ. ಚಾನೆಲ್ಲುಗಳಲ್ಲೋ ಉಗ್ರರ ಕುರಿತು ಸುದ್ದಿ ಬಿತ್ತರವಾದಾಗ ಮುಂಬೈನ ಕಹಿ ಘಟನೆ ಮರುಕಳಿಸಿದಂತಾಗುತ್ತದೆ. ಭಾರತದ ಆಂತರಿಕ ಭದ್ರತೆಗೆ ನಿರಂತರವಾಗಿ ಸವಾಲು ಹಾಕುತ್ತಿರುವ ನೆರೆಯ ರಾಷ್ಟ್ರ ಒಂದು ನೆನಪಾಗುತ್ತದೆ. ಭಯೋತ್ಪಾದನೆಯನ್ನೇ ಬಂಡವಾಳ ಮಾಡಿಕೊಂಡ ಆ ರಾಷ್ಟ್ರದಲ್ಲಿ ನಾಗರಿಕರು ಅದು ಹೇಗೆ ಸಹಜ ಜೀವನ ನಡೆಸುತ್ತಿರಬಹುದು ಎನ್ನುವ ವಿಷಯ ಒಂದು ಕ್ಷಣ ಯಾರನ್ನೇ ಆಗಲಿ ಆತಂಕಕ್ಕೆ ದೂಡುತ್ತದೆ. ಏಕೆಂದರೆ  ಎಷ್ಟಾದರೂ ಅವರು ಸಹ ನಮ್ಮಂತೆ ಮನುಷ್ಯರೇ ತಾನೆ. ಈ ನಡುವೆ 'ಟೈಮ್ಸ್ ಆಫ್ ಇಂಡಿಯಾ' ದಿನ ಪತ್ರಿಕೆಯಲ್ಲಿ ಪ್ರಕಟವಾದ ಆ ಹೆಣ್ಣು ಮಗಳ ಪತ್ರ ಮನಸ್ಸನ್ನು ಮತ್ತೆ ಮತ್ತೆ ಕಾಡಲಾರಂಭಿಸುತ್ತದೆ. ಮೂರು ವರ್ಷಗಳ ಹಿಂದೆ ಆ ಪತ್ರವನ್ನು ನಾನು ಕನ್ನಡಕ್ಕೆ ಅನುವಾದಿಸಿ ನನ್ನ ಲೇಖನವೊಂದಕ್ಕೆ ಪೂರಕವಾಗಿ ಬಳಸಿಕೊಂಡಿದ್ದೆ. ಯಾವುದೋ ಒಂದು ಲೇಖನ ಹುಡುಕುತ್ತಿರುವ ಹೊತ್ತು ಆ ಪತ್ರ ಮತ್ತೆ ಕಣ್ಣಿಗೆ ಬಿತ್ತು. ಒಂದು ಕ್ಷಣ ಕೈಹಿಡಿದು ಜಗ್ಗಿ ನಿಲ್ಲಿಸಿದ ಆ ಪತ್ರವನ್ನು ಯಥಾವತ್ತಾಗಿ ಇಲ್ಲಿ ಬರೆಯುತ್ತಿದ್ದೇನೆ. ಓದಿ ನೋಡಿ ಆ ಅಕ್ಷರಗಳ ಹಿಂದೆ ಅದೆಂಥ ವೇದನೆ ಇತ್ತೆಂದು ಅರ್ಥವಾದಿತು.
ಮುಂಬೈ ನಾಗರಿಕರಿಗೆ ನನ್ನ ಸಹಾನುಭೂತಿ,
     ಮುಂಬೈನ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಉಗ್ರರ ದಾಳಿಯಲ್ಲಿ  ಗಾಯಗೊಂಡವರಿಗೆ ಮತ್ತು ತಮ್ಮ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡವರಿಗೆ ನನ್ನ ಹೃದಯಾಂತರಾಳದ ಸಾಹಾನುಭುತಿ. ಸಾವಿರಾರು ಮೈಲಿ ದೂರದಲ್ಲಿ ಕುಳಿತು ಟೆಲಿವಿಜನ್ ಪರದೆಯ ಮೇಲೆ ನೂರು ವರ್ಷ ಹಳೆಯದಾದ ತಾಜ್ ಹೋಟೆಲ್ ನಲ್ಲಿ ನಡೆದ ಕಮಾಂಡೋ ಪಡೆಯ ಕಾರ್ಯಾಚರಣೆ ನೋಡುತ್ತಿರುವಾಗ ಮನಸ್ಸು ರೋಧಿಸುತ್ತದೆ.  ಮುಂಬೈನ ಈ ಘಟನೆ ನನಗೆ ಕಳೆದ ವರ್ಷ ೨೦೦೭ ಡಿಸೆಂಬರ್ ೨೮ ರಂದು ಕರಾಚಿಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಿದೆ. ಆ ದಿನ ಉಗ್ರರು ನಮ್ಮ ನಾಯಕಿ ಬೆನಜೀರ್ ಭುಟ್ಟೊರನ್ನು ಹತ್ಯೆಗೈದರು. ಇಡೀ ಕರಾಚಿ ಪಟ್ಟಣ ಹೊಗೆಯಿಂದ ತುಂಬಿ ಕೊಂಡಿತ್ತು.
     ಈ ಉಗ್ರರು ಪಾಕಿಸ್ತಾನಿ ಪ್ರಜೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವರು. ಇಲ್ಲಿಯ ಕಟ್ಟಡಗಳು ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಧ್ವಂಸಗೊಂಡಿವೆ. ರೈತರ ಬೆಳೆಗಳು ನಾಶಗೊಂಡಿವೆ. ಮಕ್ಕಳಿಗೆ ಕಲಿಯಲು ಶಾಲೆಗಳಿಲ್ಲ. ಲಾಹೋರ್ ನಲ್ಲಿ ಪತ್ರಿಕೆ ನಡೆಸುತ್ತಿರುವ ನನ್ನ ಸಹೋದರಿ ಮತ್ತವಳ ಪತಿ ಭಯೋತ್ಪಾದಕರ ಬೆದರಿಕೆಯಿಂದ ಪ್ರತಿನಿತ್ಯ ಪೊಲೀಸರ ರಕ್ಷಣೆಯಲ್ಲಿ ಬದುಕು ಸಾಗಿಸುತ್ತಿರುವರು.
    ನಿಜ ಹೇಳುತ್ತಿದ್ದೇನೆ ಭಾರತೀಯರು ನೀವು ಎಷ್ಟು ದ್ವೆಷಿಸುತ್ತಿರೋ ಅದಕ್ಕಿಂತ ಹೆಚ್ಚು ನಾನು ಈ ಉಗ್ರರನ್ನು ದ್ವೇಷಿಸುತ್ತೇನೆ. ಸಾವಿರಾರು ಪಾಕಿಸ್ತಾನಿಯರನ್ನು ಕೊಂದ ಇವರು ದಿನನಿತ್ಯ ನಮ್ಮನ್ನು ಸಾಯಿಸುತ್ತಿರುವರು. ಬೇರೆ ರಾಷ್ಟ್ರದೊಂದಿಗೆ ಯುದ್ಧ ಮಾಡಿ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವರು.
     ಮುಂಬೈ ನಮಗೆ ದಿಲಿಪ ಕುಮಾರ್, ಅಮಿತಾಬ ಬಚ್ಚನ್, ಶಾರುಖ್ ಖಾನ್ ರಂಥ ಸೆಲೆಬ್ರಿಟಿಗಳನ್ನು ನೀಡಿದ ನಗರ. ಅದು ನಮ್ಮ ಕನಸುಗಳ ಮಾಯಾ ನಗರ. ನಿಮ್ಮ ಧೈರ್ಯಕ್ಕೆ ನನ್ನ ಸಲಾಂಗಳು. ಈ ಘಟನೆಗೆ ಕಾರಣರಾದವರನ್ನು ಖಂಡಿಸುತ್ತೇನೆ. ನಡೆದ ಈ ಅಸಂಗತ ಘಟನೆಯಿಂದ ಬಹು ಬೇಗ ಚೇತರಿಸಿಕೊಳ್ಳಿರೆಂದು ಹಾರೈಸುವೆ.
ಇಂತಿ ನಿಮ್ಮ
ಪಾಕಿಸ್ತಾನಿ ಸಹೋದರಿ

ಮೇಲಿನ ಪತ್ರ ಓದಿದ ನಂತರ ಭಯೋತ್ಪಾದನೆಗೆ ದೇಶ ಮತ್ತು ಧರ್ಮದ ಗಡಿ ಇಲ್ಲವೆಂಬ ಮಾತು ನಿಜ ಎಂದೆನಿಸಿತು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 




Tuesday, April 17, 2012

ಹೊಳೆಯುವುದೆಲ್ಲಾ ಬಂಗಾರವಲ್ಲ

       ನಿಮಗೊಂದು ದೃಷ್ಟಾಂತ ಹೇಳುತ್ತೇನೆ ಕೇಳಿ. ಇಬ್ಬರು ವ್ಯಕ್ತಿಗಳಿದ್ದರು. ಇಬ್ಬರೂ ಸರಿ ಸುಮಾರು ಸಮ ವಯಸ್ಸಿನವರು. ಇಬ್ಬರೂ ವಿದ್ಯಾವಂತರು. ಆ ಇಬ್ಬರಲ್ಲಿ ಒಬ್ಬ ಪರಮ ವಾಚಾಳಿ. ಮಾತೇ ಅವನ ಬಂಡವಾಳ. ಎಂಥವರನ್ನೂ ಆತ ಮಾತನಾಡಿಸಬಲ್ಲ. ಇನ್ನೊಬ್ಬನಿದ್ದಲ್ಲ ಅವನೋ ಮಹಾ ಮೌನಿ. ಕಡಿಮೆ ಮಾತು ಅದು ಅವನ ದೌರ್ಬಲ್ಯವೂ ಹೌದು ಮತ್ತು ಶಕ್ತಿಯೂ ಕೂಡಾ. ಕಡಿಮೆ ಮಾತಿನಿಂದಾಗಿಯೇ ಆತ ಎಲ್ಲರೊಡನೆಯೂ ಬಹು ಬೇಗ ಬೆರೆಯುತ್ತಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಆತನ ಮೌನವನ್ನು ಅಹಂಕಾರವೆಂದು ಹಲವರು ತಪ್ಪಾಗಿ ಭಾವಿಸಿದ್ದುಂಟು. ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳನ್ನು ಆತ ಬೇಕೆಂದೆ ತಪ್ಪಿಸಿಕೊಳ್ಳುತ್ತಿದ್ದ. ಅಂಥ ಸಮಾರಂಭಗಳಲ್ಲಿ ಭಾಗವಹಿಸುವ ಅನಿವಾರ್ಯತೆ ಎದುರಾದಾಗ ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತು ಎದ್ದು ಬರುತ್ತಿದ್ದ. ತನ್ನ ವೈಯಕ್ತಿಕ ಬದುಕಿನ ಖಾಸಗಿತನವನ್ನು ಅವನೆಂದೂ ಸಾರ್ವತ್ರಿಕರಣ ಗೊಳಿಸಲಿಲ್ಲ. ಹೀಗೆ ಅತ್ಯಂತ ಮೌನವಾಗಿ ಬದುಕಿದ ಆತ ಆಂತರ್ಯದಲ್ಲಿ ಸಮಾಜ ಮುಖಿಯಾಗಿದ್ದ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ. ದೇಶದ ಸಮಸ್ಯೆಗಳ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದ. ಕೈಲಾಗದವರಿಗೆ, ಅಸಹಾಯಕರಿಗೆ ತನ್ನಿಂದಾದ ನೆರವು ನೀಡುತ್ತಿದ್ದ. ಹೀಗೆ ಸಹಾಯ ಮಾಡಿದ್ದನ್ನು ಬೇರೆಯವರ ಹತ್ತಿರ ಹೇಳಿಕೊಳ್ಳುವ ಜಾಯಮಾನ ಅವನದಾಗಿರಲಿಲ್ಲ. ಬಡತನ, ಸ್ತ್ರೀ ಸಮಸ್ಯೆ, ಭೃಷ್ಟಾಚಾರ, ಅನಕ್ಷರತೆ, ಭಾಷಾ ಸಮಸ್ಯೆ, ಕೆಟ್ಟ ರಾಜಕೀಯ ಅನೇಕ ಸಮಸ್ಯೆಗಳನ್ನು ಕುರಿತು ತನ್ನದೇ ವೈಯಕ್ತಿಕ ಸಮಸ್ಯೆ ಎನ್ನುವಂತೆ ಚಿಂತಿಸುತ್ತಿದ್ದ. ಮೇಲೆ ಸೌಮ್ಯವಾಗಿ ಕಾಣುತ್ತಿದ್ದರು ಆತನ ಅಂತರಂಗದಲ್ಲಿ ಸುಡುವ ಜ್ವಾಲಾಮುಖಿಯೇ ಪ್ರವಹಿಸುತ್ತಿತ್ತು. ಆದರೆ ಆತನ ಬಗ್ಗೆ ಏನೊಂದೂ ಗೊತ್ತಿರದ ಅನೇಕರು ಅವನನ್ನು ನಿಷ್ಪ್ರಯೋಜಕ, ಅಹಂಕಾರಿ, ಒಬ್ಬಂಟಿ, ಸಮಾಜ ವಿರೋಧಿ ಎಂದೆಲ್ಲ ಟೀಕಿಸಿ ತೃಪ್ತಿ ಪಡುತ್ತಿದ್ದರು.
         ಆ ಇನ್ನೊಬ್ಬನಿದ್ದಲ್ಲ ಹೆಚ್ಚು ಮಾತನಾಡುವಾತ ಆತನೋ ಎಲ್ಲರೊಡನೆಯೂ ಬೆರೆಯುತ್ತಿದ್ದ. ದಿನಬೆಳಗಾದರೆ ಅಲ್ಲಿ ಮದುವೆ ಇಲ್ಲಿ ತಿಥಿಯೂಟ ಎಂದು ತಿರುಗುತ್ತಿದ್ದ. ನಗು ನಗುತ್ತ ಮಾತನಾಡಿ ಒಳ್ಳೆಯವನೆಂದು ಹೆಸರು ಗಳಿಸಿದ್ದ. ಇದ್ದರೆ ಅವನ ಹಾಗೆ ಇರಬೇಕೆಂದು ಅವನನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದರು. ನೋಡಲು ಹೀಗಿದ್ದವನು ಆದರೆ ಆಂತರ್ಯದಲ್ಲಿ ಮಾತ್ರ ಅವನು ಸಮಾಜದ ಯಾವ ಸಮಸ್ಯೆಗೂ ಸ್ಪಂದಿಸುತ್ತಿರಲಿಲ್ಲ. ಒಬ್ಬರಿಗೂ ಕೈಮುಂದೆ ಮಾಡಿ ನೆರವಿನ ಹಸ್ತ ಚಾಚಿರಲಿಲ್ಲ. ಸಿಹಿ ಮಾತುಗಳನ್ನಾಡಿ ಬೇರೆಯವರಿಂದ ಸಹಾಯ ಪಡೆಯುವ ಜಾಣತನ ಅವನಲ್ಲಿತ್ತೆ ಹೊರತು ಕೈಲಾಗದವರಿಗೆ, ಅಸಹಾಯಕರಿಗೆ ಒಂದಿಷ್ಟು ನೆರವಾಗುವ ಬುದ್ಧಿ ಅವನಿಗಿರಲಿಲ್ಲ. ತಾನು ತನ್ನ ಕುಟುಂಬ ಸಂತೃಪ್ತವಾಗಿ ಬದುಕಿದರೆ ಸಾಕೆಂಬ ಮನೋಭಾವ ಅವನದಾಗಿತ್ತು. ಬಡತನ, ಅಸಹಾಯಕತೆಗಳನ್ನು ಯಾರಿಗೂ ಗೊತ್ತಾಗದಂತೆ ದ್ವೇಷಿಸುತ್ತಿದ್ದ. ಹಣಕಾಸಿನ ವಿಷಯದಲ್ಲಿ ಮಹಾಜಿಪುಣನಾಗಿದ್ದ ಜೊತೆಗೆ ಅವನೊಬ್ಬ ಪಕ್ಕಾ ವ್ಯವಹಾರಸ್ಥನಾಗಿದ್ದ. ಹೀಗಿದ್ದೂ ತನ್ನ ಬಣ್ಣದ ಮಾತುಗಳಿಂದ ಸುತ್ತಮುತ್ತಲಿನ  ಜನರನ್ನು, ಬಂಧು ಬಳಗದವರನ್ನು ಸುಲಭವಾಗಿ ಮರಳು ಮಾಡುತ್ತಿದ್ದ. ಪಾದರಸ, ಚುರುಕು ಮತಿ, ಸಮಾಜ ಮುಖಿ ಎಂದೆಲ್ಲ ಜನರು ಅವನ ಗುಣಗಾನ ಮಾಡುತ್ತಿದ್ದರು.
       ಈಗ ಹೇಳಿ ಈ ಮೇಲಿನ ಇಬ್ಬರಲ್ಲಿ ಯಾರನ್ನು ನೀವು ಉತ್ತಮ ಮನುಷ್ಯ ಎಂದೆನ್ನುವಿರಿ. ವಾಚಾಳಿಯಾಗಿದ್ದುಕೊಂಡು ಸಮಾಜ ವಿರೋಧಿಯಾಗಿ ಬದುಕುವುದು ಉತ್ತಮವೋ ಅಥವಾ ಮೌನವಾಗಿದ್ದುಕೊಂಡೇ ಸಮಾಜದ ಕುರಿತು ಚಿಂತಿಸುತ್ತ ಬದುಕುವುದು ಸರಿಯೋ. ನೆನಪಿರಲಿ ಹೊಳೆಯುವುದೆಲ್ಲಾ ಬಂಗಾರವಲ್ಲ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, April 5, 2012

ಸ್ತ್ರೀ: ಆಕೆ ಅನೇಕ ಅದ್ಭುತ ಮತ್ತು ಅಚ್ಚರಿಗಳ ಸಂಗಮ

ಆಕಾಶದ ನೀಲಿಯಲಿ
ಚಂದ್ರ ತಾರೆ ತೊಟ್ಟಿಲಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರಷ್ಟೆ ಸಾಕೆ

                 -ಜಿ.ಎಸ್.ಶಿವರುದ್ರಪ್ಪ

       ಕಳೆದ ನಾಲ್ಕಾರು ದಿನಗಳಿಂದ ಆಸ್ಪತ್ರೆಯ ಓಡಾಟ ಹೊಸ ಅನುಭವ ನೀಡಿದೆ. ಜೊತೆಗೆ ಈ ಓಡಾಟ ಮಹಿಳೆಯರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸಿದೆ. ಹತ್ತಿರದ ರಕ್ತ ಸಂಬಂಧದ ಹುಡುಗಿ ಈಗ ತಾಯಿಯಾಗಿದ್ದಾಳೆ. ನಿನ್ನೆ ಮೊನ್ನೆಯವರೆಗೂ ಓಡಾಡಿಕೊಂಡಿದ್ದ ಪುಟ್ಟ ಹುಡುಗಿ ಈಗ ಅಮ್ಮನ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ತಾಯ್ತನ ಅವಳ ಇಡೀ ವ್ಯಕ್ತಿತ್ವವನ್ನು ಬದಲಿಸಿದೆ. ಮೊದಲಿಗಿಂತ ಹೆಚ್ಹು ಗಂಭೀರಳಾಗಿ ಕಾಣುತ್ತಿರುವ ಆಕೆ ಹೊಸದೊಂದು ಜವಾಬ್ದಾರಿಗೆ ತನ್ನನ್ನು ತಾನು ಅಣಿಗೊಳಿಸಿಕೊಳ್ಳುತ್ತಿರುವಳು. ಪಕ್ಕದಲ್ಲಿ  ಮಲಗಿ ತನ್ನ ಮೃದುವಾದ ಕೈಗಳಿಂದ ಸ್ಪರ್ಶಿಸುತ್ತಿರುವ ಪುಟ್ಟ ಮಗು ಈಗ ಅವಳಿಗೆ ಎಲ್ಲವೂ ಹೌದು. ಅದುವೇ ಅವಳ ಬದುಕಿನ ಸರ್ವಸ್ವ.
        ಕಳೆದ ತಿಂಗಳು ಆ ಹೆಣ್ಣು ಮಗಳನ್ನು ಹೆರಿಗೆಗೆಂದು ಮನೆಗೆ ಕರೆದುಕೊಂಡು ಬಂದ ಆ ಘಳಿಗೆ ಗುಡಾಣದಂಥ       ಹೊಟ್ಟೆ   ಹೊತ್ತು ಕೊಂಡು ಓಡಾಡುತ್ತಿದ್ದವಳನ್ನು ನನ್ನ ಒಂಬತ್ತು ವರ್ಷದ ಮಗಳು ಅಚ್ಚರಿಯಿಂದ ನೋಡುತ್ತಿದ್ದಳು. ಹೊಟ್ಟೆ  ಭಾರವಾಗುವುದಿಲ್ಲವೇ ಎನ್ನುವ ಮಗುವಿನ ಮುಗ್ಧ ಪ್ರಶ್ನೆಗೆ ಮುಗುಳ್ನಗೆಯೇ ಅವಳ ಉತ್ತರವಾಗಿತ್ತು. ಅಂಥ ಭಾರ ಹೊತ್ತುಕೊಂಡು ಮನೆಗೆಲಸದಲ್ಲಿ ನೆರವಾಗುತ್ತಲೇ  ನಾಳೆ ಬರಲಿರುವ ಪುಟ್ಟ ಕಂದನ ಕನಸು ಕಟ್ಟುತ್ತಿದ್ದ ರೀತಿ ನಿಜಕ್ಕೂ ಸೂಜಿಗದ ಸಂಗತಿ. ನಾನು ಗಮನಿಸಿದಂತೆ ಈ ಒಂದು ತಿಂಗಳಲ್ಲಿ ಆ ಹೊಟ್ಟೆ  ಅವಳಿಗೆ ಎಂದೂ ಭಾರವೆನಿಸಲಿಲ್ಲ. ಅಂಥದ್ದೊಂದು ತಾಳ್ಮೆಯ ಗುಣದಿಂದಲೇ ಮಹಿಳೆಯನ್ನು ಕ್ಷಮಯಾ ಧರಿತ್ರಿ ಎಂದು ಗೌರವಿಸಲಾಗಿದೆ.
          ಜೀವ ಸೃಷ್ಟಿಯ ನಿಯಮ ಅತ್ಯಂತ ವಿಸ್ಮಯಕಾರಿ. ಇದರಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ಕಾರಣರಾದರೂ ಮಹಿಳೆಯದೇ ಸಿಂಹ ಪಾಲು. ಒಂದು ಜೀವ ಮತ್ತೊಂದು ಜೀವವನ್ನು ಸೃಷ್ಟಿಸುವ ನಿಸರ್ಗದ ಈ ನಿಯಮ ಅದೆಂಥ ವೈಜ್ಞಾನಿಕ ಬೆಳವಣಿಗೆಗೂ ಇವತ್ತಿಗೂ ನಿಲುಕದ ಸಂಗತಿ. ಅಂಥದ್ದೊಂದು ಬೆರಗಿಗೆ ಕಾರಣವಾಗುವ ಹೆಣ್ಣು ಮಾತ್ರ ತಾಯ್ತನದ ನೆಪವೊಡ್ಡಿ ಅಷ್ಟಕ್ಕೇ ತೃಪ್ತಿ ಪಡುತ್ತಾಳೆ. ಆ ತಾಯ್ತನವೇ ಅವಳಿಗೆ ಬದುಕಿನ ಪರಿಪೂರ್ಣತೆ. ತಾಯ್ತನ ಎನ್ನುವುದು ಅದು ಪ್ರತಿ ಹೆಣ್ಣು ಮಗಳ ಬದುಕಿನ ಬಹು ದೊಡ್ಡ ಬಯಕೆ. ಈ ಒಂದು ಬಯಕೆ ಎದುರು ಆಕೆಗೆ ಎಲ್ಲವೂ ನಗಣ್ಯ. ಜೀವ ಸೃಷ್ಟಿಯ ಕಾರ್ಯದಲ್ಲಿ ನಾನೊಂದು ಪಾತ್ರ ಎನ್ನುವ ಭಾವನೆ ಅವಳದೇ ಹೊರತು ನಾನೇ ಎಲ್ಲವೂ ಎನ್ನುವ ಅಹಂಕಾರ ಅವಳಲ್ಲಿ ಲವಲೇಶವೂ ಇಲ್ಲ. ಅಂಥದ್ದೊಂದು ಅಹಂಕಾರ ಒಡ ಮೂಡಿದ ದಿನ ಯಾವ ವಿಜ್ಞಾನದ ಬೆಳವಣಿಗೆಯೂ ಏನನ್ನೂ ಮಾಡಲಾರದು. ಇದೆಲ್ಲವನ್ನು ಮರೆತು ನಾವು ಹೆಣ್ಣನ್ನು ಮಾಯೆ, ಮೋಹ, ಭೋಗ ಇತ್ಯಾದಿಗಳಿಗೆ ಹೊಲಿಸುತ್ತೇವೆ. ಅದೆಲ್ಲ ಸಂದರ್ಭಗಳ ಸೃಷ್ಟಿಯೇ ವಿನಃಹ ಹೆಣ್ಣು ನಿಜಕ್ಕೂ ಜೀವ ಸೃಷ್ಟಿಯ ಅನೇಕ ಅದ್ಭುತ ಮತ್ತು ಅಚ್ಚರಿಗಳ ಸಂಗಮ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ