Monday, June 25, 2012

ಬೇಂದ್ರೆ ಬಂದರೊಂದು ದಿನ

     ಬೇಂದ್ರೆ ಮಾಸ್ತರರೆಂದೇ ಖ್ಯಾತರಾದ ವರಕವಿ ದ.ರಾ.ಬೇಂದ್ರೆ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ವಿಶಿಷ್ಟವಾದದ್ದು. ಸಾಧನಕೆರಿಯನ್ನು ಸಾಂಸ್ಕೃತಿಕ ವಲಯದಲ್ಲಿ ಶ್ರೀಮಂತಗೊಳಿಸಿದ ಕವಿ ಕನ್ನಡ ತಾಯಿಗೆ ಜ್ಞಾನಪೀಠದ ಗರಿಯನ್ನು ಮುಡಿಸಿ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದವರು. ಬೇಂದ್ರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಛಲದಂಕಮಲ್ಲರೆಂದೇ  ಪ್ರಸಿದ್ಧರು. ಇಂಥ ಛಲದಂಕಮಲ್ಲ ಕವಿ ಒಮ್ಮೆ ಕನ್ನಡ ಭುವನೇಶ್ವರಿಯನ್ನು ಕಂಡು ನಡುಗಿದ್ದರು ಎಂದರೆ ಯಾರಿಗೆ ತಾನೇ  ನಂಬಲು ಸಾಧ್ಯ. ಬೇಂದ್ರೆ ಅವರೇ ಒಂದು ಕವಿತೆಯಲ್ಲಿ ಹೇಳಿಕೊಂಡಂತೆ ಕನ್ನಡ ತಾಯಿ ಅವರ ಕನಸಿನಲ್ಲಿ ಬಂದು ಕನ್ನಡ ಭಾಷೆ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಗುಡುಗಿದ್ದಳು. ಅವಳ ಆರ್ಭಟಕ್ಕೆ ಬೇಂದ್ರೆ ಬೆವತಿದ್ದರು, ಬೆದರಿದ್ದರು. ಭುವನೇಶ್ವರಿಯ ಉಗ್ರ ರೂಪವನ್ನು ನೋಡಿ ಬೆನ್ನ ಹುರಿಯಲ್ಲಿ ಬೆಂಕಿ ಹರಿದಂತಾಯಿತು ಎಂದು ತಮ್ಮ ಅನುಭವವನ್ನು ಕವಿತೆಯಲ್ಲಿ ಹೇಳಿಕೊಂಡಿರುವರು. ಈಗ ಕನ್ನಡ ಭಾಷೆಯ ಸ್ಥಿತಿ ಅತ್ಯಂತ ಶೋಚನಿಯವಾಗಿದೆ. ಬೇಂದ್ರೆ ಅವರೊಮ್ಮೆ ಬಂದು ಕನ್ನಡಮ್ಮನ ಈಗಿನ ಅವಸ್ಥೆಯನ್ನು ನೋಡಿದರೆ ಎನ್ನುವ ಕಲ್ಪನೆ ಆಧರಿಸಿ 'ಬೇಂದ್ರೆ ಬಂದರೊಂದು ದಿನ' ಕವಿತೆ ಬರೆದಿದ್ದೇನೆ. ಇಲ್ಲಿ ಬರುವ ವರಕವಿ ಬೇಂದ್ರೆ ಮತ್ತು ಕನ್ನಡ ತಾಯಿಯ ನಡುವಣ ಸಂಭಾಷಣೆ ನನ್ನ ಕಲ್ಪನೆಯೇ ಹೊರತು ಬೇಂದ್ರೆ ಅವರ ಯಾವುದೇ ಕವಿತೆಗಳಿಂದ ಆಯ್ದ ಸಾಲುಗಳಲ್ಲ. ಬರೆದಿದ್ದೇನೆ ಈ ಕವಿತೆ ಬೇಂದ್ರೆ ಅವರಲ್ಲಿ ಕ್ಷಮೆ ಕೋರುತ್ತ.

ಬಂದೆನೊಂದು 
ಇರುಳು 
ಕನ್ನಡಮ್ಮನ 
ಕಾಣಲು 
-1-
ಝಗಮಗಿಸುವ 
ಬೆಳಕಿನಲ್ಲೂ 
ಕಾಣಿಸುತ್ತಿಲ್ಲ ಅವಳು 
ಇಲ್ಲೆಲ್ಲೂ 
-2-
ದಿಕ್ಕಿಗೊಂದು 
ಅನ್ಯಭಾಷೆ 
ಮನೆಗೊಂದು 
ಮಾತೃಭಾಷೆ 
-3-
ಏನು ಹೇಳಲಿ 
ಕನ್ನಡಮ್ಮನ ದೌರ್ಭಾಗ್ಯ 
ಕಳೆದು ಹೋಗಿದೆ 
ನಮ್ಮ ಕಾಲದ ಸೌಭಾಗ್ಯ 
-4-
ಬಿಡುವೆನೆ ನಾನು 
ಛಲದಂಕ ಮಲ್ಲ 
ಕೂಗಿಯೇ ಬಿಟ್ಟೆ 
ತಾಯೇ ನೀನೆಲ್ಲಿ 
-5-
ಕೇಳಿದಳು ತಾಯಿ 
ಬಂದೆಯಾ ಕಂದ 
ಕನ್ನಡದ ನುಡಿ ಕೇಳಿ 
ಕರ್ಣಾನಂದ 
-6-
ದನಿಕೇಳಿದರೂ ತಾಯಿ 
ಕಾಣಿಸುತ್ತಿಲ್ಲ ನೀನು 
ಏನು ಹೇಳಲಿ ಕಂದ 
ಪರದೇಶಿ ನಾನು 
-7-
ಎದೆ ಗಟ್ಟಿ ಇದ್ದರೊಮ್ಮೆ 
ದಿಟ್ಟಿಸಿ ನೋಡು 
ಕಾಣುವುದು ನಿನಗಾಗ 
ಕನ್ನಡಮ್ಮನ ಪಾಡು 
-8-
ನೋಡಿದೆನು ನೋಡಿದೆನು 
ಬರಿಗಣ್ಣ ಬಿಟ್ಟು 
ಹೇಗೆ ಹೇಳಲಿ 
ಆಗ ಬಿದ್ದ ಪೆಟ್ಟು 
-9-
ಕನಸಲೊಮ್ಮೆ ಬಂದು 
ಜರೆದವಳು ಇವಳೇನು?
ಹೇಗೆ ಮರೆಯಲಿ ಅಂದು 
ಬೆಂಕಿಯುಗಳಿದ ಮುಖವನು 
-10-
ಹರಕು ಸೀರೆಯುಟ್ಟು 
ಕೈಯಲ್ಲೊಂದು ಕೋಲು 
ಕನ್ನಡ ಭುವನೇಶ್ವರಿ 
ಹಾಕಿಹಳು ಮುಖ ಜೋಲು 
-11-
ಎಂಟು ಜ್ಞಾನಪೀಠ 
ಪಡೆದವಳು ನೀನು 
ಸುಮ್ಮನಿರುವಿ ಏಕೆ?
ಬೆಂಕಿಯುಗಳಲಿ ಕಣ್ಣು 
-12-
ಶಕ್ತಿಹೀನಳು ನಾನು 
ಪಾಮರರ ನಡುವೆ 
ನೆಲಬೇಕು ನೆಲೆಬೇಕು 
ಬೇಕಿಲ್ಲ ನುಡಿಯಗೊಡವೆ 
-13-
ಬೆಳಗಾಗುತಿದೆ ತಾಯಿ 
ಹೋಗುವೆನು ಇನ್ನು 
ಸಾಧ್ಯವಾದರೆ ಮತ್ತೊಮ್ಮೆ 
ಹುಟ್ಟಿ ಬರುವೆನು ನಾನು 
-14-
ಕನ್ನಡದ ಕಸ್ತೂರಿ 
ಕಳೆದುಕೊಂಡಿದೆ ಕಂಪು 
ಜೊತೆಗಿರಲಿ ಬರುವಾಗ 
ಕಾರಂತ ಕುವೆಂಪು 
-15-
ಮುನ್ನಡೆದೆ ನಾನು 
ಹಿಂತಿರುಗಿ ನೋಡುತ 
ಹನಿಗೂಡಿದವು ಕಣ್ಣು 
ಕನ್ನಡಮ್ಮನ ನೆನೆಯುತ 

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Friday, June 22, 2012

ಸಾಮಾಜಿಕ ಪ್ರಜ್ಞೆ ಮತ್ತು ನಾವು

     ಒಮ್ಮೆ ಹೀಗಾಯ್ತು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಒಂದು ಕಾರಣವಿತ್ತು. ಮನೆ ಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆಯುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೇ ವಿಚಿತ್ರ ಪ್ರಾಣಿಯನ್ನು ನೋಡುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನು ಆಗಿರಲಿಲ್ಲ. ಆ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮಿಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಪ್ರಜ್ಞೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
        ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ನಡೆದ ಅಣ್ಣಾ ಹಜಾರೆ ಅವರ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಯಾರು ಯಾರು ಭಾಗವಹಿಸಿದ್ದರು ಎಂದೊಮ್ಮೆ ಅವಲೋಕಿಸಿ. ಹೀಗೆ ಭಾಗವಹಿಸಿದವರಲ್ಲಿ ಹೆಚ್ಚಿನವರು ಒಂದು ಸಂತೃಪ್ತ ಬದುಕಿನಿಂದ ಬಂದವರಾಗಿದ್ದರು. ಅವರು ಸಂತೃಪ ಬದುಕಿನವರೆಂಬ ಕಾರಣಕ್ಕೆ ಎಲ್ಲರಿಗೂ ಭಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಣ್ಣಾ ಹಜಾರೆ ಅವರೊಬ್ಬರನ್ನು ಬಿಟ್ಟು ಎಲ್ಲರೂ ತಿಂದು  ತೇಗಿ ಮಜಾ ಅನುಭವಿಸಿದರು. ಚಳುವಳಿ ಎನ್ನುವುದಕ್ಕಿಂತ ಅವರೆಲ್ಲ ಪಿಕ್ ನಿಕ್ ಗೆ ಬಂದವರಂತೆ ವರ್ತಿಸಿದರು. ಪ್ಲಾಸ್ಟಿಕ್ ತಟ್ಟೆ, ಬಟ್ಟಲುಗಳಿಂದ ಚಳುವಳಿಯ ಆ ಮೈದಾನ ತಿಪ್ಪೆ ರಾಶಿಯಾಗಿತ್ತು. ಮುಂಬೈ ನಗರದಲ್ಲಿ ಮತ್ತೊಮ್ಮೆ ಅಂಥದ್ದೇ ಚಳುವಳಿ ಸಂಘಟಿಸಿದಾಗ ಜನ ಬೆಸತ್ತುಕೊಂಡರು. ಮತ್ತೆ ಮತ್ತೆ ಚಳುವಳಿಗಳಲ್ಲಿ ಭಾಗವಹಿಸುವುದು ಅವರಿಗೆ ಬೇಕಿರಲಿಲ್ಲ. ಅದಕ್ಕೆಂದೇ ಈ ಸಾರಿ ಅವರು ಚಳುವಳಿಯಿಂದ ದೂರ ಉಳಿದರು. ಭೃಷ್ಟಾಚಾರ ವಿರೋಧಿ ಆಂದೋಲನದ ಚಳುವಳಿಗೆ ಎರಡೇ ದಿನಗಳಲ್ಲಿ ತೆರೆ ಬಿತ್ತು. ಏಕೆಂದರೆ ಹೋರಾಟ ಎನ್ನುವುದು ನಮಗೆಲ್ಲ ಸಾಮಾಜಿಕ ಪ್ರಜ್ಞೆ ಎನ್ನುವುದಕ್ಕಿಂತ ಅದೊಂದು ಫ್ಯಾಶನ್ ಆಗಿ ಬದಲಾಗಿದೆ. ಯಾವ ಚಳುವಳಿ ಮತ್ತು ಹೋರಾಟದಿಂದ ವೈಯಕ್ತಿಕವಾಗಿ ನಮಗೆ ತೊಂದರೆ ಆಗುವುದಿಲ್ಲವೋ ಅಂಥ ಹೋರಾಟಗಳಲ್ಲಿ ಅತ್ಯಂತ ಮುತುವರ್ಜಿಯಿಂದ ಭಾಗವಹಿಸುತ್ತೇವೆ. ತೀರ ವೈಯಕ್ತಿಕವಾಗಿ ತೊಂದರೆ ಆಗುತ್ತದೆ ಎಂದರಿವಾದಾಗ ಮನೆಯ ಬಾಗಿಲು ಮುಚ್ಚಿಕೊಂಡು ಕುಳಿತುಕೊಳ್ಳುತ್ತೇವೆ.
      ಮೊನ್ನೆ ಒಂದು ಘಟನೆ ನಡೆಯಿತು. ಯುವಕನೊಬ್ಬ ಬಸ್ಸಿನಲ್ಲಿ ಅಂಗವಿಕಲರಿಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಕುಳಿತಿದ್ದ. ಅವನು ಹಾಗೆ ಕುಳಿತದ್ದೆ ಮಹಾಪರಾಧ ಎನ್ನುವಂತೆ ಸರಿ ಸುಮಾರು ಅರ್ಧ ತಾಸು ಹಿರಿಯ ವ್ಯಕ್ತಿಯೊಬ್ಬರು ಉಪದೇಶ ನೀಡಿದರು. ಸ್ವಲ್ಪ ಸಮಯದ ನಂತರ ಬಸ್ಸಿನಲ್ಲಿ ಗಲಾಟೆಯಾಯಿತು. ನಾಲ್ಕು ಜನ ಕೆಟ್ಟ ಹುಡುಗರು ಯುವತಿಯೊಡನೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅರ್ಧ ತಾಸಿನ ಹಿಂದೆ ಉಪದೇಶ ನೀಡಿದ್ದ ಹಿರಿಯರು ಈಗ ಏನೂ ಆಗಿಲ್ಲವೇನೋ ಎನ್ನುವಂತೆ ಸುಮ್ಮನೆ ಕುಳಿತಿದ್ದರು. ಕೇವಲ ಅರ್ಧ ತಾಸಿನ ಹಿಂದೆ ಅವರಲ್ಲಿ ಜಾಗೃತವಾಗಿದ್ದ ಸಾಮಾಜಿಕ ಪ್ರಜ್ಞೆ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಇದನ್ನು ಅವಕಾಶವಾದಿತನ ಎಂದು ಕರೆದರೆ ಸರಿಹೋದಿತು.
      ಈ ಸಮೂಹ ಮಾಧ್ಯಮಗಳು ಸಹ ಸಾಮಾಜಿಕ ಪ್ರಜ್ಞೆಯಿಂದ ವಿಮುಖವಾಗಿವೆ. ಸಾಮಾಜಿಕವಾಗಿ ಸಾಕಷ್ಟು ಪರಿವರ್ತನೆಗಳಿಗೆ ಕಾರಣವಾಗಬೇಕಿದ್ದ ದೃಶ್ಯ ಮಾಧ್ಯಮ ಕೇವಲ ಮನೋರಂಜನಾ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಈ ಸಿನಿಮಾ ಮಾಧ್ಯಮದಲ್ಲಿ ವಿಶೇಷವಾಗಿ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳನ್ನು ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ ಕಟ್ಟಿ ಮೂಲೆಗುಂಪಾಗಿಸಲಾಗುತ್ತಿದೆ. ಅಂಥ  ಚಿತ್ರಗಳನ್ನು  ಯಾವ ಸಿನಿಮಾ ಮಂದಿರಗಳ ಮಾಲೀಕರು ಪ್ರದರ್ಶಿಸಲು ತಯ್ಯಾರಿರುವುದಿಲ್ಲ. ಅಂಥ ಸಿನಿಮಾಗಳ ನಿರ್ಮಾಣ ನಿರ್ಮಾಪಕರಿಗೆ ಹೊರೆಯಾಗುತ್ತಿರುವುದರಿಂದ ಇಂದಿನ ಚಲನಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪ್ರಾಧಾನ್ಯತೆ ದೊರೆಯುತ್ತಿಲ್ಲ. ಅನೈತಿಕ ಕಥೆಗಳುಳ್ಳ ಧಾರಾವಾಹಿಗಳು ಮತ್ತು ರಿಯಾಲಿಟಿ ಷೋಗಳ ಬೆನ್ನು ಬಿದ್ದಿರುವ ಟಿವಿ ಚಾನೆಲ್ ಗಳಿಂದ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂಥ ಕಾರ್ಯಕ್ರಮಗಳನ್ನು ನಿರೀಕ್ಷಿಸುವುದು ಸಧ್ಯದ ಪರಿಸ್ಥಿಯಲ್ಲಿ ಅದೊಂದು ಮೂರ್ಖತನದ ಕೆಲಸವಾದಿತು. ಜೊತೆಗೆ ಇವತ್ತಿನ ಬಹುತೇಕ ಬರಹಗಾರಿಂದ  ಓದುಗರನ್ನು ಸಾಮಾಜಿಕ ಸಮಸ್ಯೆಗಳತ್ತ ಮುಖ ಮಾಡಿ ನಿಲ್ಲಿಸುವಂಥ ಕೃತಿಗಳು ರಚನೆಯಾಗುತ್ತಿಲ್ಲ. ಈ ದಿನಗಳಲ್ಲಿ ಹೆಚ್ಚಿನ ಲೇಖಕರು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಣಗೊಳಿಸಲು ಪ್ರಯತ್ನಿಸುತ್ತಿರುವರು. ತೀರ ಖಾಸಗಿ ಬದುಕಿನ ಸಂಕಟ ಮತ್ತು ಸಮಸ್ಯೆಗಳನ್ನು ಓದುಗರ ಮೇಲೆ ಹೇರಲು ಹೊರಟಿರುವ ಇಂಥ ಲೇಖಕ ವರ್ಗ ಸಾಮಾಜಿಕ ಪ್ರಜ್ಞೆಯಿಂದ ಸಂಪೂರ್ಣವಾಗಿ ವಿಮುಖವಾಗಿದೆ.
       ಇನ್ನೊಂದು ಬಹುಮುಖ್ಯ ಸಂಗತಿ ಎಂದರೆ ಸಾಮಾನ್ಯವಾಗಿ ನಾವುಗಳೆಲ್ಲ ಒಂದು ಸಂತೃಪ್ತ ಬದುಕಿಗಾಗಿ ಹಂಬಲಿಸುತ್ತೇವೆ. ಮನೆ, ನೌಕರಿ, ಹೆಂಡತಿ, ಮಕ್ಕಳು, ಓಡಾಡಲೊಂದು ಕಾರು ಇದೇ ನಮ್ಮ ಬದುಕಿನ ಬಹುಮುಖ್ಯ ಉದ್ದೇಶ. ನಿವೃತ್ತಿಯ ವೇಳೆ ಮಕ್ಕಳನ್ನು ಒಂದು ದಡ ಮುಟ್ಟಿಸುವುದು, ನಂತರ ಮೊಮ್ಮಕ್ಕಳೊಡನೆ ಕಳೆಯುವ ಬದುಕಿನ ಕೊನೆಯ ದಿನಗಳು, ಮುಂಜಾನೆಯ ಒಂದು ಸಣ್ಣ ವಾಕ್, ಒಂದು ಪತ್ರಿಕೆಯ ಓದು, ಒಂದಿಷ್ಟು ಕಚೇರಿ ಕೆಲಸ, ಸಾಯಂಕಾಲದ ತಿರುಗಾಟ, ಮಕ್ಕಳ ಹೋಂ ವರ್ಕ್, ವರ್ಷಕ್ಕೊಂದು ಪ್ರವಾಸ, ತಿಂಗಳಿಗೊಂದು ಪಿಕ್ ನಿಕ್, ವಾರಕ್ಕೊಂದು ಸಿನಿಮಾ ಹೀಗೆ ಬದುಕು ನಮ್ಮದೇ ಇತಿಮಿತಿಗಳ ಸುತ್ತ ಸುತ್ತುತ್ತಿದೆ. ಬದುಕಿನ ಒಂದು ಕಂಫರ್ಟ್ ಝೋನ್ ನಲ್ಲಿ  ಬಂದು ನಿಲ್ಲುವ ನಾವುಗಳು ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇವೆ. ಯಾವ ಸಾಮಾಜಿಕ ಸಮಸ್ಯೆಯೂ ಹೊಸ್ತಿಲನ್ನು ದಾಟಿ ಮನೆಯೊಳಗೆ  ಪ್ರವೇಶಿಸುವುದನ್ನು ನಾವು ಇಚ್ಚಿಸಲಾರೆವು. ಯಾವ ಸಾಮಾಜಿಕ ಸಮಸ್ಯೆಯೂ ನಮ್ಮ ಸಂತೃಪ್ತ ಬದುಕನ್ನು ಅಲುಗಾಡಿಸಬಾರದು. ಅಂಥದ್ದೊಂದು ಕಂಫರ್ಟ್ ಝೋನ್ ನಲ್ಲಿ ಬದುಕುತ್ತಿರುವಾಗಲೇ ನಮಗೆ ಅಣ್ಣಾ ಹಜಾರೆ ಅವರ ಚಳುವಳಿಯಲ್ಲಿ ಭಾಗವಹಿಸುವ ಉಮೇದಿ ಮೂಡುತ್ತದೆ. ನೆನಪಿರಲಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಳ್ಳುವ ನಮಗೆ ನಮ್ಮದೇ ಮನೆಯ ಪಕ್ಕ ಚರಂಡಿ ಮುಚ್ಚಿ ಹೋಗಿರುವುದು, ಜನ ಎಲ್ಲೆಂದರಲ್ಲಿ ಕಸ ಚೆಲ್ಲಿರುವುದು, ಸಾರ್ವಜನಿಕ ನಳವನ್ನು ಬೇಕಾಬಿಟ್ಟಿ ಉಪಯೋಗಿಸುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಈ ಯಾವ ಕೃತ್ಯಗಳೂ ದೊಡ್ಡದಾಗಿ ಕಾಣಿಸುವುದಿಲ್ಲ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
  

Tuesday, June 12, 2012

ರತನ್ ಟಾಟಾ: ಮಾನವೀಯ ಮೌಲ್ಯಗಳ ಹೃದಯವಂತ

          ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣ ಇತಿಹಾಸದ ಪುಟ ಸೇರಿದೆ. ಪಾಪಿ ಕಸಬ್ ನನ್ನು ನ್ಯಾಯಾಲಯ ಶಿಕ್ಷಿಸಿದೆ. ತೀರ್ಪು ನೀಡಿದ ನ್ಯಾಯಾಧೀಶರಿಗೆ ಮತ್ತು ಕಸಬ್ ವಿರುದ್ಧ ವಾದಿಸಿದ ಸರಕಾರಿ ವಕೀಲರಿಗೆ ದೇಶದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಕಸಬ್ ಗೆ ನೇಣು ಶಿಕ್ಷೆ ಖಾತ್ರಿ ಆಗುತ್ತಿದ್ದಂತೆ ಇಡೀ ದೇಶಕ್ಕೆ ದೇಶವೇ ಸಂಭ್ರಮಿಸಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ತಮ್ಮ ಸಂತಸ ವ್ಯಕ್ತಪಡಿಸಿದರು. ಪ್ರಕಟಣಾ ಮತ್ತು ದೃಶ್ಯ ಮಾಧ್ಯಮಗಳು ಈ ಸುದ್ಧಿಯನ್ನು ವಿಶೇಷವಾಗಿಯೇ ಬಿತ್ತರಿಸಿದವು. ಈ ನಡುವೆ ಅದೇ ಮುಂಬೈ ದಾಳಿಗೆ ಸಂಬಂಧಿಸಿದ ಆ ಒಂದು ಸುದ್ಧಿಯ ಮೇಲೆ ಯಾವ ಮಾಧ್ಯಮವೂ ಬೆಳಕು ಬೀರಲಿಲ್ಲ. ರೋಚಕ ಸುದ್ಧಿಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳಿಗೆ ಮಾನವೀಯ ಮುಖವನ್ನು ಪರಿಚಯಿಸಲು ಪುರುಸೊತ್ತು ಇಲ್ಲದಿರುವುದು ವಿಷಾದದ ಸಂಗತಿ. ಆ ಕೃತ್ಯದಿಂದ ಉಪಕೃತರಾದವರು ಮತ್ತು ರತನ್ ಟಾಟಾ ಅಭಿಮಾನಿಗಳು ಇಂಟರ್ ನೆಟ್ ನಲ್ಲಿ ಚರ್ಚಿಸದೆ ಇದ್ದಿದ್ದರೆ ಅಂಥದ್ದೊಂದು ಘಟನೆ ಯಾರ ಗಮನಕ್ಕೂ ಬರುತ್ತಿರಲಿ. ನಡೆದದ್ದಿಷ್ಟು ನವೆಂಬರ್ 26 ರಂದು ಪಾಕಿಸ್ತಾನದ ಉಗ್ರರು ಮುಂಬೈ ನಗರದ ಮೇಲೆ ದಾಳಿ ಮಾಡಿದಾಗ ಅವರು ತಮ್ಮ ವಿಧ್ವಂಸಕ ಕೃತ್ಯಕ್ಕಾಗಿ ಆಯ್ಕೆಮಾಡಿಕೊಂಡ ಸ್ಥಳಗಳಲ್ಲಿ ತಾಜ್ ಹೊಟೆಲ್ ಕೂಡಾ ಒಂದು. ಉಗ್ರರ ದಾಳಿಯಿಂದ ತಾಜ್ ಹೊಟೆಲ್  ಜಖಂ ಗೊಂಡಿತು. ನೂರಾರು ನಾಗರಿಕರು ಗಾಯಗೊಂಡರು. ಅನೇಕರು ತಮ್ಮ ಪ್ರಾಣ ಕಳೆದುಕೊಂಡರು. ಗಾಯಾಳುಗಳ ಮತ್ತು ಹತರಾದವರ ಪಟ್ಟಿಯಲ್ಲಿ ತಾಜ್ ಹೊಟೆಲ್  ನ ನೌಕರರೂ ಇದ್ದರು. ಈ ಘಟನೆಯ ನಂತರ ಅನೇಕ ದಿನಗಳವರೆಗೆ ತಾಜ್ ಹೊಟೆಲ್  ನ ಬಾಗಿಲು ಮುಚ್ಚಲ್ಪಟ್ಟಿತು. ಹೊಟೆಲ್  ಸಿಬ್ಬಂದಿಯ ವಿಷಯದಲ್ಲಿ ಇದು ಗಾಯದ ಮೇಲೆ ಬರೆ ಎಳೆದಂತೆ. ಆದರೆ ಹೊಟೆಲ್  ಮುಖ್ಯಸ್ಥ ರತನ್ ಟಾಟಾ ಸುಮ್ಮನೆ ಕೈ ಕಟ್ಟಿಕೊಂಡು ಕೂಡಲಿಲ್ಲ. ತಮ್ಮ ಹೊಟೆಲ್  ಸಿಬ್ಬಂದಿಯ ಮನೆ ಮನೆಗೂ ಭೇಟಿ ನೀಡಿದರು. ಅವರ ಕಷ್ಟ, ಸಂಕಟಗಳಿಗೆ ಕಿವಿಯಾದರು. ಅವರ ನೆಮ್ಮದಿಯ ಬದುಕಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಿದರು. ಮುಂದಿನದು ಇಂಟರ್ ನೆಟ್ ನಲ್ಲಿ ಓದಿದ್ದರ ಕನ್ನಡ ಅನುವಾದ.
1. ಉಗ್ರರ ದಾಳಿಯ ದಿನದಿಂದ ಹೊಟೆಲ್ ಪುನ: ಕಾರ್ಯಾರಂಭಿಸುವವರೆಗಿನ ಅವಧಿಯಲ್ಲಿ ಒಂದೇ ಒಂದು ದಿನ ನೌಕರಿ ಮಾಡಿದ ನೌಕರನಿಂದ ಎಲ್ಲ ನೌಕರರನ್ನು ಕೆಲಸಕ್ಕೆ ಹಾಜರಿರುವರೆಂದೇ ಪರಿಗಣಿಸಲಾಯಿತು.
2. ಆ ದಾಳಿಯಲ್ಲಿ ಗಾಯಾಳುಗಳಾದ ಮತ್ತು ಹತರಾದ ನೌಕರರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಕೊಡಲಾಯಿತು.
3. ಪರಿಹಾರವನ್ನು ಕೇವಲ ಹೊಟೆಲ್ ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸದೆ ಉಗ್ರರ ಗುಂಡೇಟಿನಿಂದ ಗಾಯಾಳುಗಳಾದ ರೈಲ್ವೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪಾದಚಾರಿಗಳು, ಹೊಟೆಲ್ ಸುತ್ತಲಿನ ಪಾವ್ ಭಜಿ ವ್ಯಾಪಾರಿಗಳು ಮತ್ತು ಬೀಡಾ ಅಂಗಡಿ ಮಾಲೀಕರುಗಳಿಗೆ ಆರು ತಿಂಗಳುಗಳ ಕಾಲ ತಲಾ ಹತ್ತು ಸಾವಿರ ರುಪಾಯಿಗಳನ್ನು ಕಳುಹಿಸಿ ಕೊಡಲಾಯಿತು.
4. ಹೊಟೆಲ್ ತನ್ನ ಕಾರ್ಯಾಚರಣೆ ನಿಲ್ಲಿಸಿದ್ದ ಅವಧಿಯಲ್ಲಿ ಹೊಟೆಲ್ ಸಿಬ್ಬಂದಿಗೆ ಅವರ ಸಂಬಳವನ್ನು ಮನಿ ಆರ್ಡರ್ ಮೂಲಕ ಅವರವರ ಮನೆಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು. 
5. ಗಾಯಾಳುಗಳ ಮತ್ತು ಹತರಾದವರ ಕುಟುಂಬ ವರ್ಗದವರ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ನೆರವಿನೊಂದಿಗೆ ಮಾನಸಿಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
6. ಸಿಬ್ಬಂದಿ ಸುರಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಮೂಲ ಅವಶ್ಯಕತೆಗಳಾದ ಆಹಾರ, ನೀರು, ಪ್ರಥಮ ಚಿಕಿತ್ಸೆ ಇತ್ಯಾದಿ ಸೌಲಭ್ಯಗಳು ದೊರೆಯುವ ಎಲ್ಲ ವ್ಯವಸ್ಥೆ ಮಾಡಲಾಯಿತು. ತಾಜ್ ಹೊಟೆಲ್ ನ ಒಟ್ಟು 1600 ಸಿಬ್ಬಂದಿ ಈ ಸೌಲಭ್ಯವನ್ನು ಉಪಯೋಗಿಸಿಕೊಂಡರು.
7. ಗಾಯಾಳುವಾದ ಪ್ರತಿಯೊಬ್ಬ ಸಿಬ್ಬಂದಿಯ ಉಪಚಾರಕ್ಕಾಗಿ ರತನ್ ಟಾಟಾ ಖುದ್ದು ಮುತುವರ್ಜಿವಹಿಸಿ ಒಬ್ಬೊಬ್ಬ ಪರಿಚಾರಕನನ್ನು ನೇಮಿಸಿದರು. 
8. ದಾಳಿಯಲ್ಲಿ ಗಾಯಾಳುಗಳಾದ ಮತ್ತು ಹತರಾದ ಒಟ್ಟು 80 ಸಿಬ್ಬಂದಿಯ ಕುಟುಂಬ ವರ್ಗದವರನ್ನು ರತನ್ ಟಾಟಾ ವೈಯಕ್ತಿಕವಾಗಿ ಭೇಟಿ ಮಾಡಿ ನೆರವಿನ ಸಹಾಯ ಹಸ್ತ ಚಾಚಿದರು.
9. ಗಾಯಾಳುಗಳಾದ ಸಿಬ್ಬಂದಿಯ ಕುಟುಂಬ ವರ್ಗದವರು ತಮ್ಮ ತಮ್ಮ ಊರುಗಳಿಂದ ಮುಂಬೈಗೆ ಬರಲು ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಯಿತು. ಅಲ್ಲದೆ ಅವರಿಗೆ ಮೂರು ವಾರಗಳ ಕಾಲ ಹೊಟೆಲ್ ಪ್ರೆಸಿಡೆಂಟ್ ನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಯಿತು.
10. ರತನ್ ಟಾಟಾ ತಮ್ಮ ಸಿಬ್ಬಂದಿಯ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಅವರು ತಮ್ಮಿಂದ ಯಾವ ರೀತಿಯ ಸಹಾಯ ನಿರಿಕ್ಷಿಸುತ್ತಿರುವರೆಂದು ಕೇಳಿದರು. 
11. ಉಗ್ರರ ದಾಳಿಯ ನಂತರ ರತನ್ ಟಾಟಾ ಕೇವಲ 20 ದಿನಗಳಲ್ಲಿ ಟ್ರಸ್ಟ್ ಸ್ಥಾಪಿಸಿ ತಮ್ಮ ಸಿಬ್ಬಂದಿಯ ಪರಿಹಾರ ಕಾರ್ಯಕ್ಕೆ ತ್ವರಿತ ಚಾಲನೆ ನೀಡಿದರು. 
12. ರಸ್ತೆ ಬದಿಯ ವ್ಯಾಪಾರಿಯ ನಾಲ್ಕು ವರ್ಷದ ಮೊಮ್ಮಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಅವಳ ದೇಹವನ್ನು ಹೊಕ್ಕ ನಾಲ್ಕು ಬುಲೆಟ್ ಗಳಲ್ಲಿ ಕೇವಲ ಒಂದನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ರತನ್ ಟಾಟಾ ಆ ಮಗುವನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ಮಗುವಿಗೆ ಪುನರ್ಜನ್ಮ ನೀಡಿದರು. 
13. ಈ ಘಟನೆಯಲ್ಲಿ ತಮ್ಮ ತಳ್ಳು ಗಾಡಿಗಳನ್ನು ಕಳೆದುಕೊಂಡ ತಾಜ್ ಹೊಟೆಲ್ ನ ಸುತ್ತ ಮುತ್ತಲಿನ ರಸ್ತೆ ಬದಿಯ ವ್ಯಾಪಾರಿಗಳಿಗೆ ಜೀವನೋಪಾಯಕ್ಕಾಗಿ ಹೊಸ ತಳ್ಳು ಗಾಡಿಗಳನ್ನು ಖರೀದಿಸಿ ಕೊಡಲಾಯಿತು. 
14. ಉಗ್ರರ ಗುಂಡೇಟಿಗೆ ಬಲಿಯಾದ 46 ಸಿಬ್ಬಂದಿಯ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ರತನ್ ಟಾಟಾ ವಹಿಸಿಕೊಂಡರು.
15. ಉಗ್ರರ ದಾಳಿಯ ನಂತರ ಸತತ ಮೂರು ದಿನಗಳ ಕಾಲ ರತನ್ ಟಾಟಾ ತಮ್ಮ ಹೊಟೆಲ್ ಸಿಬ್ಬಂದಿಯ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿದರು.
16. ಹತನಾದ ಪ್ರತಿಯೊಬ್ಬ ಸಿಬ್ಬಂದಿಯ ಕುಟುಂಬಕ್ಕೆ 36 ಲಕ್ಷಗಳಿಂದ 85 ಲಕ್ಷ ರುಪಾಯಿಗಳವರೆಗೆ ಪರಿಹಾರ ನೀಡಲಾಯಿತು. ಜೊತೆಗೆ ಕೆಲವು ವಿಶೇಷ ಸೌಲಭ್ಯಗಳನ್ನೂ ಒದಗಿಸಲಾಯಿತು.
ಎ)    ಮೃತ ಸಿಬ್ಬಂದಿಯ ಪತ್ನಿಗೆ ಆಕೆ ಬದುಕಿರುವಷ್ಟು ಕಾಲ  ಸಂಬಳ ನೀಡಲು ನಿರ್ಧರಿಸಲಾಯಿತು.
ಬಿ)   ಸಿಬ್ಬಂದಿ ಸಂಸ್ಥೆಯಿಂದ  ಪಡೆದ ಸಾಲ ಅಥವಾ ಮುಂಗಡ  ಹಣವನ್ನು ಮನ್ನಾ ಮಾಡಲಾಯಿತು.
ಸಿ) ಮೃತ ಸಿಬ್ಬಂದಿಯ  ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ರತನ್ ಟಾಟಾ ವಹಿಸಿಕೊಂಡರು. ವಿಶ್ವದ ಯಾವುದೇ   ದೇಶದಲ್ಲಿ   ಕಲಿಯಲು ಅನುಕೂಲ ಮಾಡಿಕೊಡುವ  ಭರವಸೆ  ಕೊಡಲಾಯಿತು.
     ದುರದೃಷ್ಟವಶಾತ್ ರಿಯಾಲಿಟಿ ಷೋ, ಐಪಿಎಲ್ ಹಗರಣ, ಸೆಲೆಬ್ರಿಟಿಗಳ ವೈಯಕ್ತಿಕ   ಬದಕಿನ  ಬೆನ್ನು ಬಿದ್ದಿರುವ ಮಾಧ್ಯಮಗಳಿಗೆ ಈ ಸುದ್ಧಿ ಗೋಚರವಾಗಲೇ ಇಲ್ಲ.  ಒಂದೊಮ್ಮೆ ಗೊತ್ತಿದ್ದರೂ ದಿವ್ಯ ನಿರ್ಲಕ್ಷ ತೆಳೆದಿರಬಹುದು. ಸಿನಿಮಾ ತಾರೆಯರ  ಮನೆಯ  ನಾಯಿ ಬೆಕ್ಕುಗಳನ್ನು ತೋರಿಸುವ ಭರಾಟೆಯಲ್ಲಿ ಇಂಥದ್ದೊಂದು ಮಾನವೀಯ ಅಂತ:ಕರಣ  ಕಣ್ಣಿಗೆ  ಕಾಣಿಸದೇ ಹೋಗಿರುವ ಸಾಧ್ಯತೆಯೂ ಇರಬಹುದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
  

Wednesday, June 6, 2012

ನಾನೇಕೆ ಓದುತ್ತೇನೆ?

      'ರೀಡಿಂಗ್ ಮೇಕ್ಸ್  ಮ್ಯಾನ್ ಪರ್ಫೆಕ್ಟ್' ಎಂದು ತತ್ವಜ್ಞಾನಿ  ಬೇಕನ್ ಹೇಳಿರುವನು. ಓದು ಒಂದು ಮಾನಸಿಕ ಕ್ರಿಯೆ. ಇದು ನಮ್ಮ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಭಾಷೆಯ ಬೆಳವಣಿಗೆಗೂ ಕಾರಣವಾಗುತ್ತದೆ. ಓದು ಒಂದು ಸುಸಂಸ್ಕೃತ ಚಟುವಟಿಕೆಯಾಗಿರುವುದರಿಂದ ಅದು ನಮ್ಮ ಬದುಕಿನ ಭಾಗವಾಗಬೇಕು. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಾಗಬೇಕು. ಆದ್ದರಿಂದ ಅದೊಂದು ಹವ್ಯಾಸವಾಗಿ ರೂಪಗೊಳ್ಳಬೇಕು. 
      ಓದು ಅದು ನನ್ನ ಪ್ರಕಾರ ಅದು ಮನೆಯ ಪರಿಸರದಲ್ಲೇ ಮೊಳಕೆಯೊಡೆದು ಬೆಳೆಯಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ಒಡಮೂಡಿಸುವುದು ಪಾಲಕರ ಪ್ರಥಮ ಆದ್ಯತೆಗಳಲ್ಲೊಂದು. ಶಿಕ್ಷಣ ಬದುಕನ್ನು ರೂಪಿಸಬಹುದು. ಆದರೆ ವ್ಯಕ್ತಿತ್ವವನ್ನು ರೂಪಿಸುವುದು ಒಂದು ಉತ್ತಮ ಓದು ಮಾತ್ರ. ಬಾಲ್ಯದಲ್ಲಿ ದೊರೆಯುವ ಒಂದು ಹಸನಾದ ಓದು, ಓದಿಗೆ ಪ್ರಚೋದನೆ ನೀಡುವ ಮನೆಯ ಮತ್ತು ಶಾಲೆಯ ಪರಿಸರ ಓದುವ ಹವ್ಯಾಸ ಮೊಳಕೆಯೊಡೆದು ಮುಂದೆ ಅದು ಟಿಸಿಲೊಡೆದು ಬೆಳೆಯಲು ನೆರವಾಗುತ್ತದೆ. ಓದು ಗಂಭೀರ ಸಾಹಿತ್ಯದಿಂದಲೇ ಪ್ರಾರಂಭವಾಗಬೇಕೆನ್ನುವ ನಿಯಮವಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಗುವಿಗೆ ಕಾರಂತರ ಕಾದಂಬರಿಯನ್ನೋ  ಇಲ್ಲವೇ ಡಿವಿಜಿ ಅವರ ಕಗ್ಗವನ್ನೋ ಕೊಟ್ಟು ಓದು ಎಂದೆನ್ನುವುದು ಅವನಲ್ಲಿ ಓದುವ ಹವ್ಯಾಸ ಬೆಳೆಯಲು ನೆರವಾಗುವುದಿಲ್ಲ.ಮಗುವಿನ ಆರಂಭದ ಓದು ಸರಳ ಪುಸ್ತಕಗಳಿಂದಲೇ ಪ್ರಾರಂಭವಾಗಲಿ. ಮಗುವಿಗೆ ಓದಿನ ರುಚಿ ಹತ್ತಲಿ. ಸರಳ ಓದಿನೊಂದಿಗೆ ಓದುವ ಹವ್ಯಾಸ ಮಗುವಿನಲ್ಲಿ ಮೊಳಕೆಯೊಡೆಯುವ ಆ ಕ್ಷಣ ಮನೆ ಮತ್ತು ಶಾಲೆಯ ಪರಿಸರ ಕೂಡಾ ಉತ್ತೇಜನ ನೀಡುವಂತಿರಲಿ.  ಒಟ್ಟಿನಲ್ಲಿ ಓದುವ ಹವ್ಯಾಸವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಅದು ಬಾಲ್ಯದಿಂದಲೇ ಪ್ರಾರಂಭವಾಗಲಿ. 
      ಓದು ನನಗೆ ಅತ್ಯಂತ ಖುಷಿ ಕೊಡುವ ಸಂಗತಿ. ಸಿನಿಮಾ ನೋಡುವ, ಕ್ರಿಕೆಟ್ ವೀಕ್ಷಿಸುವ, ಇಂಟರ್ ನೆಟ್ ನ ಒಳ  ಹೊಕ್ಕು ಕೂಡುವ, ಪುಸ್ತಕಗಳನ್ನು ಓದುವ, ಒಂದಿಷ್ಟು ಬರೆಯುವ ಈ ಎಲ್ಲ ಹವ್ಯಾಸಗಳಲ್ಲಿ ನನಗೆ ಅತ್ಯಂತ ಪ್ರಿಯವಾದದ್ದು ಅದು ಪುಸ್ತಕದ ಓದು ಮಾತ್ರ. ಏಕೆಂದರೆ ಓದು ನನ್ನ ಭಾಷೆಯನ್ನು ಸುಧಾರಿಸಿದೆ, ಒಂದಿಷ್ಟು ಬರೆಯುವ ಚೈತನ್ಯ ನೀಡಿದೆ, ಬದುಕಿನಲ್ಲಿ ಕೆಲವು ಬದಲಾವಣೆಗಳಿಗೆ ಕಾರಣವಾಗಿದೆ. ಆದ್ದರಿಂದ ಖುಷಿಯಿಂದಲೇ ಓದುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. 
       ಓದುವ ವಿಚಾರಕ್ಕೆ ಬಂದರೆ ಇಂಥ ಲೇಖಕರ ಇಂಥ ಕೃತಿಗಳನ್ನೇ ಓದಬೇಕೆನ್ನುವ ನಿಯಮವನ್ನೇನೂ ಹೇರಿಕೊಂಡಿಲ್ಲ. ಪುಸ್ತಕದಲ್ಲಿನ ವಿಚಾರ ಸರಿ ಎಂದೆನಿಸಿದರೆ ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಕೆಲವೊಮ್ಮೆ ಪ್ರಾರಂಭದ ಪುಟಗಳಲ್ಲೇ ಬೇಜಾರು ಇಣುಕಿದಾಗ ಅಷ್ಟಕ್ಕೇ ಬಿಟ್ಟ ಉದಾಹರಣೆಯೂ ಉಂಟು. ಓದಲೇ ಬೇಕೆನ್ನುವ ಹಟಕ್ಕೆ ಬಿದ್ದು ಓದಿದ ಕೃತಿಗಳೂ ಸಾಕಷ್ಟಿವೆ. ಅಂಥವುಗಳಲ್ಲಿ 'ಹೋರಾಟದ ಹಾದಿ' ಮತ್ತು 'ನನ್ನ ತೇಜಸ್ವಿ' ಪುಸ್ತಕಗಳು ಪ್ರಮುಖವಾದವುಗಳು. ಮನಸ್ಸು ಕ್ಷೋಭೆಗೊಂಡಾಗ, ಏಕತಾನತೆಯಿಂದ ಬೇಸರಿಸಿದಾಗ ಓದು ನನ್ನ ಕೈ ಹಿಡಿದು ಮರು ಚೈತನ್ಯ ನೀಡಿದೆ. ಅದೇ ರೀತಿ ಓದಿದ ಕೃತಿಯೊಂದು ಅನೇಕ ದಿನಗಳವರೆಗೆ ನನ್ನನ್ನು ಕಾಡಿದ್ದಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಭೈರಪ್ಪನವರ 'ಮಂದ್ರ' ಕಾದಂಬರಿ. ಆ ಕೃತಿಯಲ್ಲಿನ ಭಾವತೀವ್ರತೆಯಿಂದ ಹೊರಬರಲು ಅದೆಷ್ಟೋ ದಿನಗಳು ಬೇಕಾದವು. ಒಂದು ಓದಿನ ಭಾವತೀವ್ರತೆಯಿಂದ ಹೊರಬರಲು ಇನ್ನೊಂದು ಪುಸ್ತಕದ ಓದು ಅನಿವಾರ್ಯವಾಗುತ್ತದೆ. ಒಂದು ಸಾಮಾಜಿಕ ಪಲ್ಲಟಕ್ಕೆ  ಕಾರಣವಾಗುವ ಮತ್ತು ಓದುಗರನ್ನು ಸಾಂಸ್ಕೃತಿಕವಾಗಿ ಕೈ ಹಿಡಿದು ನಡಿಸಿಕೊಂಡು ಹೋಗುವ ಜವಾಬ್ದಾರಿ ಲೇಖಕನಿಗಿರುವಷ್ಟೇ ಲೇಖಕರನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಮಹತ್ವದ ಹೊಣೆಗಾರಿಕೆ ಓದುಗರ ಮೇಲಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.
     ಓದು  ಅದೆಂಥ ಸುಸಂಸ್ಕೃತ ಹವ್ಯಾಸ ಎನ್ನುವುದಕ್ಕೆ ಒಂದು ಉದಾಹರಣೆ ಹೀಗಿದೆ. ನನ್ನೂರಿನ ನನ್ನ ಸಮಕಾಲಿನ ಅನಕ್ಷರಸ್ಥ ವ್ಯಕ್ತಿಯೊಬ್ಬ ಗೋಡೆಗಳಿಗೆ ಅಂಟಿಸುತ್ತಿದ್ದ ಸಿನಿಮಾ ಪೋಸ್ಟರ್ ಗಳನ್ನು ನೋಡುತ್ತ ಅಕ್ಷರಗಳನ್ನು ಕಲಿತ. ಕ್ರಮೇಣ ಸಿನಿಮಾ ಪುರವಣಿಗಳನ್ನು ಓದಲು ಶುರು ಮಾಡಿದ. ನಂತರ ಕನ್ನಡ ಪುಸ್ತಕಗಳನ್ನು ಕೈಗೆತ್ತಿಕೊಂಡ. ಈಗ ಅವನೊಬ್ಬ ಕನ್ನಡ ಸಾಹಿತ್ಯದ ಅತ್ಯುತ್ತಮ ಓದುಗ. ಓದು ಅವನ ಬದುಕಿನಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಯಾವುದೋ ಕೆಟ್ಟ  ಹವ್ಯಾಸಗಳಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಸೃಜನಶೀಲ ಓದಿನ ಮೂಲಕ ಸುಸಂಸ್ಕೃತವಾಗಿ ಕಟ್ಟಿಕೊಂಡಿರುವನು. ಅವನನ್ನು ನೋಡಿದಾಗಲೆಲ್ಲ  ನನಗೆ ರಾಮಾಯಣವನ್ನು ಬರೆದ ವಾಲ್ಮೀಕಿಯೇ ನೆನಪಾಗುತ್ತಾನೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, June 4, 2012

ಬರವಣಿಗೆಗೆ ವಾಸ್ತವಿಕತೆಯ ನೆಲೆಗಟ್ಟಿರಲಿ

      ಇತ್ತೀಚಿಗೆ ಅಪ್ರಕಟಿತ ಕವನ ಸಂಕಲನವನ್ನು ಓದಿದೆ. ಅದು ಯುವ   ಬರಹಗಾರರೊಬ್ಬರು ಬರೆದ ಕವನ ಸಂಕಲನ. ಸ್ನಾತಕೋತ್ತರ ವಿದ್ಯಾರ್ಥಿಯಾದ ಈ ಯುವ ಕವಿಗೆ ಕವಿತೆ ಅಭಿವ್ಯಕ್ತಿ ಮಾಧ್ಯಮವಾಗಿ ಹೆಚ್ಚು ಆಕರ್ಷಿಸಿದೆ. ಜೊತೆಗೆ ಬರೆದದ್ದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಅದನ್ನು ಅನೇಕರು ಓದುವಂತಾಗಬೇಕೆನ್ನುವ ಹಂಬಲ ಅವರದು. ಈಗೀಗ ಬರವಣಿಗೆ ಎನ್ನುವುದು ನಮ್ಮ ಯುವ ಪೀಳಿಗೆಗೆ ಅಭಿವ್ಯಕ್ತಿ ಮಾಧ್ಯಮವಾಗಿ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ. ಕಥೆ, ಕವನ, ಲಘು ಪ್ರಭಂದಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಯುವ ಬರಹಗಾರರು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಸಾಕಷ್ಟು ಬರೆದು ಜನಪ್ರಿಯರಾಗಬೇಕೆನ್ನುವ ಹಂಬಲ ಉಳ್ಳವರು. ಅಂಥದ್ದೊಂದು ಮನೋಭಾವದ ನಡುವೆ ಸಾಹಿತ್ಯ ಕೃಷಿಗೆ ಅಗತ್ಯವಾದ ಸಾಕಷ್ಟು ಓದು ನಿರ್ಲಕ್ಷಕ್ಕೆ ಒಳಗಾಗುತ್ತಿರುವುದು ವಿಪರ್ಯಾಸದ ಸಂಗತಿ.
       ಓದಿನ ಕೊರತೆ ಮತ್ತು ಸಾಕಷ್ಟು ಸಿದ್ಧತೆ ಇಲ್ಲದ ಪರಿಣಾಮ ಅನೇಕ ಯುವ ಲೇಖಕರ ಬರವಣಿಗೆ ವಾಸ್ತವಿಕತೆಯಿಂದ ದೂರವಾಗಿ ಅಲ್ಲಿ ತಪ್ಪುಗಳು ಢಾಳು ಢಾಳಾಗಿ ಕಣ್ಣಿಗೆ ರಾಚುತ್ತಿವೆ. ಕೆಲವೊಮ್ಮೆ ತಪ್ಪುಗಳ ಪರಿಣಾಮ ಈ ಬರಹಗಾರರ ಬರವಣಿಗೆ ಅಪಹಾಸ್ಯಕ್ಕೆ ಒಳಗಾಗುವುದೂ ಉಂಟು. ಸಾಮಾನ್ಯ ಓದುಗರಿಂದ ತಪ್ಪಿಸಿಕೊಳ್ಳಬಹುದು ಆದರೆ ವಿಮರ್ಶೆಯ ಕಣ್ಣಿನಿಂದ ಓದುವ ಓದುಗರು ಬಹುಬೇಗ ಗುರುತಿಸಬಲ್ಲರು. ಸಾಹಿತ್ಯಕ್ಕೊಂದು ಹೊಸ ಆಯಾಮ ದೊರಕಿಸಿಕೊಡಬೇಕೆನ್ನುವ ಭರಾಟೆಯಲ್ಲಿ ಮುನ್ನುಗ್ಗುವ ಈ ಯುವ ಸಾಹಿತಿಗಳು ತಮ್ಮ ತಪ್ಪುಗಳಿಂದ ಸೃಜನಶೀಲ ಕ್ಷೇತ್ರವನ್ನು ವಿರೂಪಗೊಳಿಸುತ್ತಿರುವುದು ದುರಂತದ ವಿಚಾರ. 
     ನಾನು ಈ ಮೇಲೆ ಹೇಳಿದ ಕವಿ ಶ್ರೀ ಶ್ರೀನಿವಾಸ ಬಡಿಗೇರ ಸೂಕ್ಷ್ಮ ಸಂವೇದನೆಯುಳ್ಳ ಯುವ ಬರಹಗಾರ. ತಮ್ಮ ಅಪ್ರಕಟಿತ ಕವನ ಸಂಕಲನವನ್ನು ತಂದು ಕೊಟ್ಟು ಅಭಿಪ್ರಾಯ ತಿಳಿಸುವಂತೆ ಕೇಳಿದಾಗ ನಾನು ಸಂದಿಗ್ಧದಲ್ಲಿ ಬಿದ್ದೆ. ಏಕೆಂದರೆ ಹೊಗಳಿಕೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸುವ ನಮ್ಮ ಬರಹಗಾರರು  ಟೀಕೆಗಳನ್ನು ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಲಾರರು. ಅಂಥದ್ದೊಂದು ಅಳುಕಿನಿಂದಲೇ ಶ್ರೀ ಬಡಿಗೇರ ಅವರ ಕವನ ಸಂಕಲನದ ಕುರಿತು ನನ್ನ ಅಭಿಪ್ರಾಯ ಬರೆದು ತಿಳಿಸಿದೆ. ಅದು ಹೀಗಿದೆ, 
      "ಶ್ರೀ ಶ್ರೀನಿವಾಸ ಬಡಿಗೇರ ಅವರಲ್ಲಿ ಕವಿತೆ ಬರೆಯುವ ಹಂಬಲವಿದೆ, ಒಂದು ತುಡಿತವಿದೆ, ತೀವ್ರವಾದ ಸಂವೇದನೆ ಇದೆ. ಅದೆಲ್ಲಕ್ಕೂ ಮಿಗಿಲಾಗಿ ಅವರಲ್ಲಿ ಬರೆಯಬೇಕೆನ್ನುವ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಆದರೆ ಈ ವಿಷಯವಾಗಿ ಅವರು ಇನ್ನಷ್ಟು ಪ್ರಯತ್ನಿಸಬೇಕಿದೆ. ಬರಹ ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅರಳಿ ನಿಲ್ಲಬೇಕು. ಅದು ಬರಹಗಾರನ ಕಲ್ಪನೆಯಲ್ಲಿ ಮೂಡಿ ಬಂದರೂ ಇನ್ನಾರದೋ ಬದುಕಿಗೆ ಹತ್ತಿರವಾಗಿರಬೇಕು. ಅಂದಾಗ ಮಾತ್ರ ಅಂಥ  ಬರವಣಿಗೆ ಬಹಳ ಕಾಲ ಉಳಿಯ ಬಲ್ಲದು.
      ಶ್ರೀ ಬಡಿಗೇರ ಅವರ ಹೆಚ್ಚಿನ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ವಿರಹಗಳೇ ಪ್ರಧಾನ ವಿಷಯಗಳಾಗಿ ಮೂಡಿ ಬಂದಿವೆ. ಅದು ಸಹಜ ಕೂಡಾ ಹೌದು. ಏಕೆಂದರೆ ಅವರೊಬ್ಬ ಯುವ ಕವಿ. ಆದರೆ ಈ ವಿಷಯಗಳೇ ಹೆಚ್ಚು ಹೆಚ್ಚು ಪ್ರಧಾನವಾಗುತ್ತ ಹೋಗಿ ಸಮಾಜದಲ್ಲಿ ನಾವು ಕಾಣುವ ಇನ್ನೂ ಅನೇಕ ವೈರುದ್ಯಗಳಿಗೆ ಈ ಯುವ ಕವಿ ಕುರುಡಾಗಬಾರದು. ಅಂಥದ್ದೊಂದು ಆತಂಕ ಅವರ ಕವಿತೆಗಳನ್ನು ಓದುವಾಗ ನನ್ನನ್ನು ಕಾಡಿದೆ.
     ಶ್ರೀಯುತರು ಇಂಗ್ಲಿಷ ಸಾಹಿತ್ಯವನ್ನು ಅಭ್ಯಸಿಸುತ್ತಿರುವುದರಿಂದ ಅವರ ಅನುಭವ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಜೊತೆಗೆ ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಿಕೊಂಡರೆ ಈ ಪೂರ್ವ ಮತ್ತು ಪಶ್ಚಿಮದ ಸಾಹಿತ್ಯ ಖಂಡಿತವಾಗಿ ಅವರ ಬರವಣಿಗೆಯನ್ನು ಇನ್ನಷ್ಟು ಪಕ್ವಗೊಳಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. 
       ಈ ಯುವ ಕವಿಯ ಯಾವ ಕವಿತೆ ಇಷ್ಟವಾಯಿತು ಎನ್ನುವ ಆತುರದ ನಿರ್ಣಯಕ್ಕೆ ನಾನು ಬರುವುದಿಲ್ಲ. ಒಂದು ಕವಿತೆ ಇಷ್ಟವಾಯಿತೆಂದರೆ ಉಳಿದವುಗಳು ಇಷ್ಟವಾಗಲಿಲ್ಲ ಎಂದರ್ಥವೆ? ಹಾಗಾದರೆ ಆ ಕವಿತೆಗಳಲ್ಲಿ ನುಸುಳಿದ ತಪ್ಪುಗಳು ಯಾವುವು? ಹೀಗೆ ನಿರ್ಧರಿಸುವುದು ತಪ್ಪು. ಆ ನಿರ್ಣಯವನ್ನು ಓದುಗರ ದೊಡ್ಡ ಸಮೂಹಕ್ಕೆ ಬಿಡುವುದು ಸರಿಯಾದ ನಿರ್ಧಾರ. 
       ಈ ಸಂದರ್ಭ ಒಂದು  ಮಾತು. ಅದನ್ನು ಸಲಹೆ ಎಂದು ಪರಿಗಣಿಸಿದರೂ ಅಡ್ಡಿಯಿಲ್ಲ. ಬರಹಗಾರನಿಗೆ ಯಾವತ್ತಿಗೂ ತನ್ನ ಬರವಣಿಗೆ ಕುರಿತು ಒಂದು ನಿರ್ಲಿಪ್ತತೆ ಇರಲಿ. ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಬೇಡ. ನಿರೀಕ್ಷೆಗಳು ಹುಸಿಯಾದಾಗ ಬರಹಗಾರನ ಆತ್ಮವಿಶ್ವಾಸ ಕುಸಿದು ಅದು ಆತನ ಬರವಣಿಗೆಯ ದಾರಿ ತಪ್ಪಿಸಬಹುದು. ಈ ಒಂದು ಎಚ್ಚರಿಕೆಯನ್ನು ಜೊತೆಯಲ್ಲಿಟ್ಟುಕೊಂಡು ಶ್ರೀ ಶ್ರೀನಿವಾಸ ಬಡಿಗೇರ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಲಿ.
ಶುಭಾಶಯಗಳೊಂದಿಗೆ,"

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ