Friday, February 24, 2023

ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಕೇಳಿ

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಫೆಬ್ರುವರಿ ೨೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು)

Wednesday, February 1, 2023

ಹೊತ್ತಿಗೆ ಪ್ರಕಟಣೆಯ ಈ ಹೊತ್ತು

 




 (೭.೧೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಈ ಮಾತಿಗೆ ಪತ್ರಿಕೆಗಳ ಪುರವಣಿಗಳಲ್ಲಿ ಪ್ರತಿವಾರ ಪ್ರಕಟವಾಗುವ ಹೊಸ ಪುಸ್ತಕಗಳ ಪಟ್ಟಿಯೇ ಪುರಾವೆ ಒದಗಿಸುತ್ತದೆ. ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದಕ್ಕೆ ಪ್ರಕಾಶಕರ ಸಂಖ್ಯೆ ಹೆಚ್ಚುತ್ತಿರುವುದೇ ಮೂಲ ಕಾರಣವಾಗಿದೆ. ಪ್ರತಿವರ್ಷ ಹೊಸಬರು ಪ್ರಕಾಶನ ಕ್ಷೇತ್ರಕ್ಕೆ ಕಾಲಿಡುತ್ತಿರುವರು. ಪುಸ್ತಕಗಳ ಪ್ರಕಟಣೆಯಲ್ಲಿ ಆಶಾದಾಯಕ ಬೆಳವಣಿಗೆ ಗೋಚರಿಸುತ್ತಿರುವ ಈ ಹೊತ್ತಿನಲ್ಲಿ ಲೇಖಕರ ಸಮಸ್ಯೆಗಳತ್ತಲ್ಲೂ ಗಮನ ಹರಿಸಬೇಕಾಗಿದೆ. ಪ್ರಕಾಶಕರಿಂದ ಲೇಖಕರ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆಯೇ ಎನ್ನುವುದೇ ಈ ಸಂದರ್ಭದ ಮೂಲಭೂತ ಪ್ರಶ್ನೆಯಾಗಿದೆ.

ಹೊಸ ಲೇಖಕನಾಗಿ ಸಾಹಿತ್ಯಲೋಕಕ್ಕೆ ಕಾಲಿಟ್ಟಿರುವ ಮಿತ್ರ ಇತ್ತೀಚಿಗೆ ನನ್ನನ್ನು ಪುಸ್ತಕ ಮಳಿಗೆಗೆ ಕರೆದೊಯ್ದಿದ್ದ. ಕೆಲವು ತಿಂಗಳುಗಳ ಹಿಂದೆ ಮಿತ್ರನ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಗೊಳಿಸಿದ್ದ ಪ್ರಕಾಶಕರ ಪುಸ್ತಕದಂಗಡಿ ಅದಾಗಿತ್ತು. ಆ ಅಂಗಡಿಯಲ್ಲಿ ತನ್ನ ಪ್ರಕಟಿತ ಪುಸ್ತಕವನ್ನು ನನಗೆ ತೋರಿಸಬೇಕೆಂಬ ಉಮೇದಿಯಿಂದ ಕರೆದೊಯ್ದ ಮಿತ್ರನಿಗೆ ಅಲ್ಲಿ ಅವನ ಪುಸ್ತಕ ಕಾಣಿಸದೆ ನಿರಾಸೆಯಾಯಿತು. ಪ್ರಖ್ಯಾತ ಸಾಹಿತಿಗಳ ಪುಸ್ತಕಗಳ ಸಾಲಿನಲ್ಲಿ ತನ್ನ ಪುಸ್ತಕ ಗೋಚರಿಸಬಹುದೆನ್ನುವ ಆತನ ನಿರೀಕ್ಷೆ ಹುಸಿಯಾಗಿ ಅವನ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಯಿತು. ಮಳಿಗೆಯಲ್ಲಿದ್ದ ಕೆಲಸಗಾರರನ್ನು ಪ್ರಶ್ನಿಸಿದಾಗ ಅವರು ಮಾಲೀಕರ ಕಡೆ ಕೈತೋರಿಸಿದರು. ಮಾಲೀಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಮತ್ತು ಕಾಲೇಜು ಗ್ರಂಥಾಲಯಗಳಿಗೆ ಪೂರೈಸಲೆಂದು ಪುಸ್ತಕ ಪ್ರಕಟಿಸಿದ್ದೆ ವಿನಾ ಮಳಿಗೆಯಲ್ಲಿಟ್ಟು ಮಾರಾಟಮಾಡಲಿಕ್ಕಲ್ಲ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು. ತಾನು ಪ್ರಕಟಿಸಿದ ಪುಸ್ತಕಕ್ಕೆ ತನ್ನದೇ ಪುಸ್ತಕ ಮಳಿಗೆಯಲ್ಲಿ ಜಾಗ ಕೊಡದ ಪ್ರಕಾಶಕ ಅದು ಹೇಗೆ ನನ್ನ ಪುಸ್ತಕವನ್ನು ಅನೇಕ ಓದುಗರಿಗೆ ಮುಟ್ಟಿಸುತ್ತಾನೆ ಎನ್ನುವುದು ಬರಹಗಾರ ಮಿತ್ರನ ಪ್ರಶ್ನೆಯಾಗಿತ್ತು. 

ಪ್ರಕಾಶಕರ ಗೊಡವೆಯೇ ಬೇಡವೆಂದು ನನ್ನ ಇನ್ನೊರ್ವ ಮಿತ್ರ ಸ್ವತ: ಪ್ರಕಾಶಕರಾಗಿ ಪುಸ್ತಕ ಪ್ರಕಟಿಸಿರುವರು.  ನಲವತ್ತು ಸಾವಿರ ರೂಪಾಯಿಗಳನ್ನು ಮುದ್ರಕರಿಗೆ ಪಾವತಿಸಿ ಒಂದು ಸಾವಿರ ಪ್ರತಿಗಳನ್ನು ಪ್ರಕಟಿಸಿದರು. ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಆಯೋಜಿಸಿದ್ದ ಪುಸ್ತಕ ಬಿಡುಗಡೆಯ ದಿನ ನೂರು ಪ್ರತಿಗಳು ಗೌರವ ಪ್ರತಿಯ ರೂಪದಲ್ಲಿ ಉಚಿತವಾಗಿ ವಿತರಣೆಯಾದವು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳು ಶೇಕಡಾ 20ರ ರಿಯಾಯಿತಿ ದರದಲ್ಲಿ ಮಾರಾಟವಾದವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಿದರೂ ಆ ಹಣ ಇನ್ನೂ ಅವರ ಕೈಸೇರಿಲ್ಲ. ಈಗ ಸುಮಾರು ನಾಲ್ಕು ನೂರು ಪ್ರತಿಗಳು ಮಾರಾಟವಾಗದೆ ಅವರ ಬಳಿ ಉಳಿದುಕೊಂಡಿವೆ. ಒಂದು ಅಂದಾಜಿನ ಪ್ರಕಾರ ಈ ಪುಸ್ತಕ ಪ್ರಕಟಣೆಯಿಂದ ಅವರಿಗೆ 20,000 ರೂಪಾಯಿಗಳ ನಷ್ಟವಾಗಿದೆ. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಎದುರಾದ ನಿರುತ್ಸಾಹ ಅವರನ್ನು ಶಾಶ್ವತವಾಗಿ ಪುಸ್ತಕ ಪ್ರಕಾಶನದಿಂದ ದೂರಾಗುವಂತೆ ಮಾಡಿತು. 

ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಸ್ಥಾಪಿತ ಲೇಖಕರಿಗೆ ಮಣೆ ಹಾಕುತ್ತಿವೆಯೇ ವಿನಾ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುತ್ತಿಲ್ಲ. ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಆರ್ಥಿಕವಾಗಿ ಕೈಸುಟ್ಟುಕೊಳ್ಳುವುದೇಕೆ ಎನ್ನುವ ಮನೋಭಾವ ಅವರದಾಗಿರಬಹುದು. ಕೆಲವು ಪ್ರಕಾಶಕರು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದ ಬರಹ ಅಥವಾ ಕಥೆಗಳಾಗಿದ್ದರೆ ಪುಸ್ತಕ ಪ್ರಕಟಿಸಲು ಆಸಕ್ತಿ ತೋರಿಸುವುದಿಲ್ಲ. ಇನ್ನು ಕೆಲವು ಪ್ರಕಾಶಕರು ಪ್ರತಿವರ್ಷ ಅವರು ಆಯೋಜಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ಹಸ್ತಪ್ರತಿಗಳನ್ನು ಮಾತ್ರ ಪ್ರಕಟಿಸುವ ಯೋಜನೆ ಹಾಕಿಕೊಂಡಿರುತ್ತಾರೆ. ಮೂರ್ನಾಲ್ಕು ವರ್ಷಗಳಿಗಾಗುವಷ್ಟು ಕೆಲಸವಿದೆಯೆಂದು ಹೊಸ ಲೇಖಕರತ್ತ ಕಣ್ಣೆತ್ತಿಯೂ ನೋಡದ ಪ್ರಕಾಶಕರೂ ಇರುವರು. ಕೆಲವರಂತೂ ಹೊಸ ಲೇಖಕರಿಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗುವುದಿಲ್ಲ.  

ಇನ್ನು ಕೊಟ್ಟಿದ್ದನ್ನೆಲ್ಲ ಪ್ರಕಟಿಸುವ ಪ್ರಕಾಶಕರ ಸಂಖ್ಯೆಯೂ ಬಹಳಷ್ಟಿದೆ. ಇಂಥ ಪ್ರಕಾಶಕರ ದೃಷ್ಟಿಯಲ್ಲಿ ಪುಸ್ತಕ ಪ್ರಕಟಣೆ ಎನ್ನುವುದು ಸಂಖ್ಯಾತ್ಮಕ ಪ್ರಗತಿಯೇ ವಿನಾ ಗುಣಾತ್ಮಕ ಬೆಳವಣಿಗೆಯಲ್ಲ. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಒಂದೇ ದಿನ ಒಂದೇ ವೇದಿಕೆಯಲ್ಲಿ 100 ರಿಂದ 200 ಶೀರ್ಷಿಕೆಗಳ ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದೆಷ್ಟೋ ಸಂದರ್ಭಗಳಲ್ಲಿ ಅತಿಥಿಗಳಾಗಿ ಆಗಮಿಸಿದ ವಿದ್ವಾಂಸರು ಸಂಖ್ಯೆಗಲ್ಲ ಗುಣಾತ್ಮಕತೆಗೆ ಆದ್ಯತೆ ನೀಡಿ ಎಂದು ವೇದಿಕೆಯಲ್ಲೆ ಕಿವಿಮಾತು ಹೇಳಿದ್ದುಂಟು. ಇಂಥ ಪ್ರಕಾಶಕರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳೇ ಕೃಪಾಪೋಷಿತ  ಮಂಡಳಿಗಳಾಗಿವೆ. ಒಬ್ಬರೆ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರುಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡಿ ಧನ್ಯರಾಗುತ್ತಾರೆ. ಲೇಖಕರ ಪುಸ್ತಕಗಳು ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಶೋಭೆ ತರುವ ಅಲಂಕಾರಿಕ ವಸ್ತುಗಳಾಗುತ್ತಿವೆ. ಇಲ್ಲಿ ನಿಜವಾದ ನಷ್ಟವಾಗುವುದು ಗುಣಾತ್ಮಕ ಪುಸ್ತಕಗಳ ಲೇಖಕರಿಗೆ.

ಇನ್ನೊಂದೆಡೆ ಓದುಗರು ಕನ್ನಡ ಪುಸ್ತಕಗಳ ಖರೀದಿಯಲ್ಲಿ ಧಾರಾಳತನ ತೋರಿಸುತ್ತಿಲ್ಲ. ಓದುಗರು ಅಪೇಕ್ಷಿಸುತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ ಹೊಸ ಲೇಖಕರ ಪುಸ್ತಕಗಳ ಪ್ರಕಟಣೆಯ ಹಿನ್ನೆಡೆಗೆ ಕಾರಣವಾಗಿದೆ. ಹೆಚ್ಚಿನ ಓದುಗರು ಪುಸ್ತಕವನ್ನು ಅದರ ಪ್ರಕಟಿತ ಬೆಲೆಗೆ ಖರೀದಿಸುವ ಔದಾರ್ಯ ತೋರುತ್ತಿಲ್ಲ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕಗಳ ಮಾರಾಟಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ಖರೀದಿಸುವಾಗ ಸಿಗುತ್ತಿರುವ ಹೆಚ್ಚಿನ ರಿಯಾಯಿತಿಯನ್ನು ಓದುಗರು ಕನ್ನಡ ಪುಸ್ತಕಗಳನ್ನು ಖರೀದಿಸುವಾಗಲೂ ನಿರೀಕ್ಷಿಸುತ್ತಿರುವರು. ಈ ಕಾರಣದಿಂದಾಗಿ ಜನಪ್ರಿಯ ಲೇಖಕರ ಪುಸ್ತಕ ಪ್ರಕಟಣೆಯಲ್ಲಿನ ಪ್ರಕಾಶಕರ ಆಸಕ್ತಿ ಹೊಸ ಲೇಖಕರ ಪುಸ್ತಕಗಳ ಪ್ರಕಟಣೆಯಲ್ಲಿ ಕಾಣಿಸುತ್ತಿಲ್ಲ.

ಇಂಥ ಸನ್ನಿವೇಶದಲ್ಲಿ ಓದುಗರು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಓದಿ ಹೊಸ ಲೇಖಕರ ಪುಸ್ತಕಗಳನ್ನು ಖರೀದಿಸುತ್ತಿರುವರು. ಪ್ರತಿವರ್ಷ ಪ್ರಕಟವಾಗುತ್ತಿರುವ ಎಲ್ಲ ಪುಸ್ತಕಗಳ ವಿಮರ್ಶೆಯಾಗುತ್ತಿದೆಯೇ ಎನ್ನುವ ಪ್ರಶ್ನೆ ಈ ಸಂದರ್ಭ ಎದುರಾಗುತ್ತದೆ. ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ ಅವರು ಹೇಳಿದಂತೆ ಕೆಲವೇ ಪುಸ್ತಕಗಳ ವಿಮರ್ಶೆಯು ಅದು ಇಡೀ ಸಾಹಿತ್ಯ ಲೋಕದ ವಿಮರ್ಶೆಯಾಗಲಾರದು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪರಿಸ್ಥಿತಿ ಹೀಗಿರುವಾಗ ಹೊಸ ಲೇಖಕರು ಬರವಣಿಗೆಯ ಕ್ಷೇತ್ರದಲ್ಲಿ ಕಾಲೂರಿ ನಿಲ್ಲಲು ಅಗತ್ಯವಾದ ಆಶಾದಾಯಕ ವಾತಾವರಣ ಕಾಣಿಸುತ್ತಿಲ್ಲ ಎನ್ನುವ ಮಾತನ್ನು ಬೇಸರದಿಂದ ಹೇಳಬೇಕಾಗಿದೆ.

-ರಾಜಕುಮಾರ ಕುಲಕರ್ಣಿ