Thursday, January 7, 2016

ಸುರಗಿ: ವೈಚಾರಿಕ ಬದುಕಿನ ಒಳನೋಟಗಳು




            ಸುರಗಿ ಮಲೆನಾಡಿನಲ್ಲಿ ಬೆಳೆಯುವ ಒಂದು ಜಾತಿಯ ಹೂವು. ಒಣಗಿದ ನಂತರವೂ ತನ್ನ ಪರಿಮಳವನ್ನು ಹೆಚ್ಚಿಸಿಕೊಳ್ಳುವ ಈ ಹೂವು ಅನಂತಮೂರ್ತಿ ಅವರ ಪಾಲಿಗೆ ಮಲೆನಾಡಿನ ಸುಂದರ ನೆನಪುಗಳಲ್ಲೊಂದು. 'ಆರೋಗ್ಯ ಹದಗೆಡುತ್ತಿರುವ ನನ್ನ ವಯಸ್ಸಿನಲ್ಲಿ ಸುರಗಿಯಂತೆ ಇರಬೇಕೆಂಬುದು ನನ್ನ ಆಶಯ' ಎಂದೆನ್ನುವ ಲೇಖಕರು ತಮ್ಮ ಆತ್ಮಕಥನಕ್ಕೆ 'ಸುರಗಿ' ಎಂದು ಹೆಸರಿಟ್ಟಿರುವರು. ಸಾವಿನ ನಂತರವೂ ತನ್ನ ವೈಚಾರಿಕ ಚಿಂತನೆ ಈ ನಾಡಿನಲ್ಲಿ ಹೊಸ ಹೊಸ  ಹುಟ್ಟಿಗೆ ಕಾರಣವಾಗಲಿ ಎನ್ನುವ ಆಶಯ ಅನಂತಮೂರ್ತಿ ಅವರದಾಗಿತ್ತು. ಅನಂತಮೂರ್ತಿ ಅವರು ಒಂದು ಇಡೀ ತಲೆಮಾರಿನ ಬರಹಗಾರರ ಚಿಂತನೆಯ ಕ್ರಮವನ್ನು ಬದಲಿಸಿದ ಅನನ್ಯ ಬರಹಗಾರ. ಜೊತೆಗೆ ತಮ್ಮ ಚಿಂತನೆಗೆ ಪ್ರತಿಕ್ರಿಯಿಸುವುದರ ಮೂಲಕ ಹೊಸ ಚಿಂತನೆಯ ಹುಟ್ಟಿಗಾಗಿ ಓದುಗರಿಗೆ ಮತ್ತು ವಿಮರ್ಶಕರಿಗೆ ಮುಕ್ತ ಅವಕಾಶ ಮಾಡಿಕೊಟ್ಟು ಬದಲಾವಣೆಗಾಗಿ ಹಂಬಲಿಸುತ್ತಿದ್ದ ಅಪರೂಪದ ಲೇಖಕ. ಕನ್ನಡದಲ್ಲಿ ವಿಮರ್ಶೆ ಹಾಗೂ ಟೀಕೆಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿದ ಮತ್ತು ಸ್ಪಂದಿಸಿದ ಬರಹಗಾರರಲ್ಲಿ ಅನಂತಮೂರ್ತಿ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಟೀಕೆ ಮತ್ತು ವಿಮರ್ಶೆಗೆ ಬರಹಗಾರ ತೆರೆದುಕೊಳ್ಳದೆ ಹೋದಲ್ಲಿ ಆತನ ಬರವಣಿಗೆ ಪಕ್ವಗೊಳ್ಳಲಾರದು ಎನ್ನುವ ನಿಲುವು ಅವರದಾಗಿತ್ತು. ಅದಕ್ಕೆಂದೇ ಒಬ್ಬ ಬರಹಗಾರನಾಗಿ ಮತ್ತು ಚಿಂತಕನಾಗಿ ಅನಂತಮೂರ್ತಿ ತಮ್ಮ ನಿಲುವಿಗೆ ಕೊನೆಯವರೆಗೂ ಬದ್ದರಾಗಿದ್ದರು.

            ಅನಂತಮೂರ್ತಿ ಅವರ ವೈಚಾರಿಕ ಬದುಕಿನ ಒಳನೋಟಗಳು ಆತ್ಮಕಥನ 'ಸುರಗಿ'ಯಲ್ಲಿ ಅನಾವರಣಗೊಂಡಿವೆ. ಅವರ ಆತ್ಮಕಥನದ ಬರವಣಿಗೆಯ ಹಿಂದೆ ಲೇಖಕಿ ಜ.ನಾ. ತೇಜಶ್ರೀ ಅವರ ಅಪಾರ ಪರಿಶ್ರಮವಿದೆ. ಅನಂತಮೂರ್ತಿ ಅವರನ್ನೇ ಆತ್ಮಕಥನದ ಬರವಣಿಗೆಗಾಗಿ ಒತ್ತಾಯಿಸಿದಾಗ ಒಂದು ಹಂತದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಲೇಖಕರಿಗೆ ವಯೋಸಹಜ ದೈಹಿಕ ತೊಂದರೆಗಳಿಂದ ಒಂದೆರಡು ಪುಟಗಳ ನಂತರ ಬರವಣಿಗೆಯನ್ನು ಮುಂದುವರೆಸಲು ಸಾಧ್ಯವಾಗದೆ ಹೋಯಿತು. ಜೊತೆಗೆ ತಮ್ಮ ಬದುಕಿನ ಕಥನವನ್ನು ಅಕ್ಷರ ರೂಪಕ್ಕಿಳಿಸಲು ಎದುರಾದ ಅನಾಸಕ್ತಿ ಕೂಡ ಆರಂಭದಲ್ಲಿ ಒಂದಿಷ್ಟು ಹಿನ್ನೆಡೆಗೆ ಕಾರಣವಾಯಿತು. ಕೊನೆಗೆ ಲೇಖಕಿ ಅನಂತಮೂರ್ತಿ ಅವರ ಮಾತುಗಳಿಗೆ ಅಕ್ಷರ ರೂಪ ಕೊಟ್ಟು ಅವರ ಆತ್ಮಕಥನವನ್ನು ಓದುಗರ ಮುಂದಿಡುವಲ್ಲಿ ಸಫಲರಾಗಿರುವರು. ಅನಂತಮೂರ್ತಿ ಅವರ ಮಾತುಗಳನ್ನು ಅವರ ಬರವಣಿಗೆಯ ಶೈಲಿಯಲ್ಲೇ ಕಟ್ಟಿಕೊಟ್ಟಿರುವ ಲೇಖಕಿ ತೇಜಶ್ರೀ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಒಂದರ್ಥದಲ್ಲಿ ಲೇಖಕಿಯದು ಪರಕಾಯ ಪ್ರವೇಶ. ತೇಜಶ್ರೀ ಅವರ ನಿರೂಪಣೆ ಇದ್ದರೂ ಇಡೀ ಬರಹ ಅನಂತಮೂರ್ತಿ ಅವರ ಬರವಣಿಗೆಯ ಶೈಲಿಯಲ್ಲಿರುವುದರಿಂದ ಪುಸ್ತಕದ ಓದು ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.

      ಅನಂತಮೂರ್ತಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ತೀರ ಸಂಪ್ರದಾಯಸ್ಥ ಕುಟುಂಬ ಮತ್ತು ಪರಿಸರದಲ್ಲಾದರೂ ಅಪ್ಪನೊಳಗಿನ ಆಧುನಿಕತೆಯೇ ಅವರು ಕರ್ಮಠ ಸಂಪ್ರದಾಯದ ಚೌಕಟ್ಟನ್ನು ದಾಟಿ ಹೊರಬರಲು ಸಾಧ್ಯವಾಗಿಸಿತು. ಅನ್ಯಜಾತಿಯ ಹೆಂಗಸಿನೊಡನೆ ಅಜ್ಜನ ಕೂಡಿಕೆ, ಅಪ್ಪನ ಇಂಗ್ಲಿಷ್ ಪುಸ್ತಕಗಳ ಓದು ಅನಂತಮೂರ್ತಿ ಅವರಲ್ಲಿ ತಮ್ಮ ಸುತ್ತಲಿನ ಸಮಾಜವನ್ನು ಹೊಸ ದೃಷ್ಟಿಕೋನದಿಂದ ನೋಡಲು ನೆರವಾಗುತ್ತದೆ. ಅಪ್ಪನಿಗೆ ಒಂದು ವೈಜ್ಞಾನಿಕ ಮನಸ್ಸಿತ್ತು ಎನ್ನುವುದನ್ನು ವಿವರಿಸಲು ಅವರು ಅಪ್ಪನ ಮಾತುಗಳನ್ನೇ ಅವರು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ 'ನಮ್ಮ ಪಂಚಾಂಗದ ಲೆಕ್ಕದ ಮೂಲಕ ಗ್ರಹಣ ಇವತ್ತು ಅಂತ ಬರುತ್ತೆ. ಆದರೆ ಹೊಸ ಫ್ರೆಂಚ್ ಪುಸ್ತಕಗಳ ಪ್ರಕಾರ ಗ್ರಹಣ ಇವತ್ತಲ್ಲ ನಾಳೆ. ಹಾಗಾಗಿ ಗ್ರಹಣ ನಾಳೆ. ಶಾಸ್ತ್ರಕ್ಕಾಗಿ ಇವತ್ತು'. ಜೊತೆಗೆ ಅಪ್ಪ ಮೈಲಿಗೆಯಲ್ಲಿ ಊರ ದೇವಸ್ಥಾನದಲ್ಲಿ ಪೂಜೆ ಮಾಡಿದ ಘಟನೆ ಪರಿಣಾಮವಾಗಿ ದೇವಸ್ಥಾನದಲ್ಲಿ ಹಾವು ಹೆಡೆ ಬಿಚ್ಚಿ ನಿಂತ ಪ್ರಸಂಗ ಚಿಕ್ಕಂದಿನಲ್ಲೇ ಅವರಿಗೆ 'ನಂಬಿಕೆ'ಯ ಬಗೆಗಿನ ವಿಚಾರಗಳನ್ನು ವೈಚಾರಿಕತೆಯ ಒರೆಗಲ್ಲಿಗೆ ಹಚ್ಚಿ ವಿಶ್ಲೇಷಿಸಿ ನೋಡಲು ಕಾರಣವಾಯಿತು. ಗಾಂಧಿ, ಜಯಪ್ರಕಾಶ ನಾರಾಯಣ ಮತ್ತು ಲೋಹಿಯಾರ ಅನುಯಾಯಿಯಾಗಿದ್ದ ಹಾಗೂ ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದ ಅಪ್ಪ ನನ್ನ ವಿಚಾರಗಳನ್ನೂ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು ಎಂದೆನ್ನುವಾಗ ಅಪ್ಪನ ಬಗೆಗಿನ ಗೌರವ ವ್ಯಕ್ತವಾಗುತ್ತದೆ. ಕಾಫಿ ಕುಡಿಯುವುದರಿಂದ ಬ್ರಾಹ್ಮಣರೆಲ್ಲ ಕೆಡೋದು ಎನ್ನುವ ನಂಬಿಕೆ ದಟ್ಟವಾಗಿದ್ದ ದಿನಗಳಲ್ಲಿ ಅಜ್ಜ ಪೇಟೆಗೆ ಹೋಗಿ ಪರಿಚಿತರ ಕಣ್ಣು ತಪ್ಪಿಸಿ ಹೋಟೆಲಿನಲ್ಲಿ ಕಾಫಿ ಕುಡಿಯುತ್ತಿದ್ದ ದೃಶ್ಯ, ಮಗನ ಹೆಸರಿನ ಜೊತೆಗೆ 'ಆಚಾರ್ಯ' ಸೇರಿಸದ ಅಪ್ಪನ ಹೊಸತನಕ್ಕೆ ಒಡ್ಡಿಕೊಳ್ಳುತ್ತಿದ್ದ ಮನೋಭಾವ, ಬ್ರಾಹ್ಮಣೇತರ ಗೋಪಾಲ ಗೌಡರ ಎಂಜಲೆಲೆಯನ್ನು ತೆಗೆದ ಅಮ್ಮನಲ್ಲಾದ ಬದಲಾವಣೆ ಈ ಎಲ್ಲ ಘಟನೆಗಳು ಅನಂತಮೂರ್ತಿ ಅವರಿಗೆ ಬಾಲ್ಯದಲ್ಲೇ ಶೂದ್ರ-ಬ್ರಾಹ್ಮಣ ಬೇಧಭಾವ ಕಳೆದು ಹೋಗಲು ಕಾರಣವಾದವು. ತಾವು ಬಾಲ್ಯದಲ್ಲಿ ಕಂಡ ಮೆಳಿಗೆಯ ಜಾತ್ರೆ, ಮಲೆನಾಡಿನ ಸ್ನಾನದ ಸಂಭ್ರಮ, ದೂರ್ವಾಸಪುರದ ಬ್ರಾಹ್ಮಣ ವಿಧವೆಯರು, ಹರಿಜನ ಮತ್ತು ಬಾಲಪ್ರಪಂಚದ ಓದು, ದೇವರ ಬಗೆಗಿನ ನಂಬಿಕೆ ಮತ್ತು ಅಪನಂಬಿಕೆ ಈ ಎಲ್ಲವುಗಳ ಕುರಿತ ನೆನಪುಗಳು ಇಲ್ಲಿ ಅಕ್ಷರ ರೂಪ ತಾಳಿವೆ. ಹೈಸ್ಕೂಲಿನಲ್ಲಿದ್ದಾಗ ಓದಿದ ಗಳಗನಾಥರ ಮತ್ತು ಬಂಕಿಮ್ ಚಂದ್ರರ ಕಾದಂಬರಿಗಳು ಅನಂತಮೂರ್ತಿ ಅವರ ಜೀವನಾನುಭವವನ್ನು ವಿಸ್ತರಿಸುತ್ತವೆ.

             ಹೈಸ್ಕೂಲು ಶಿಕ್ಷಣದ ನಂತರ ಅನಂತಮೂರ್ತಿ ಅವರು ಇಂಟರ್ ಮಿಡಿಯೇಟ್ ಗಾಗಿ ಶಿವಮೊಗ್ಗಕ್ಕೆ ಬರುತ್ತಾರೆ. ಈ ಸಂದರ್ಭದಲ್ಲೇ ಅವರು ಸಮಾಜವಾದಿಗಳ ಪ್ರಭಾವಕ್ಕೆ ಒಳಗಾಗಿದ್ದು. ಶಾಂತವೇರಿ ಗೋಪಾಲಗೌಡ, ಕೆ ವಿ ಸುಬ್ಬಣ್ಣ, ಶಂಕರ ನಾರಾಯಣ ಭಟ್ಟ, ದೀಕ್ಷಿತ್ ರಂಥ ಸೋಷಿಯಲಿಸ್ಟ್ ಗೆಳೆಯರ ಪರಿಚಯವಾಗುತ್ತದೆ. ಲೋಹಿಯಾರ ಸಂಪರ್ಕದಿಂದ ಕಾಗೋಡು ಸತ್ಯಾಗ್ರಹದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇದೆ ಸಂದರ್ಭ ಅನಂತಮೂರ್ತಿ ಅವರಿಗೆ ಸಾಹಿತ್ಯದಲ್ಲಿ ತೀವ್ರ ಆಸಕ್ತಿ ಬೆಳೆಯುತ್ತದೆ. ಪುತಿನ ಮತ್ತು ಅಡಿಗರ ಬರವಣಿಗೆಯಿಂದ ಪ್ರಭಾವಿತರಾಗುತ್ತಾರೆ. ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಆರಂಭದ ದಿನಗಳಲ್ಲಿ ತಮ್ಮನ್ನು ಪ್ರಭಾವಿಸಿದ ಅಡಿಗರ ಬರವಣಿಗೆಯನ್ನು ಶ್ರೀಯುತರು ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಉತ್ಕಟವಾಗಿ ಪ್ರೀತಿಸುತ್ತಾರೆ. ಈ ಸಾಹಿತ್ಯ ಪ್ರೀತಿ ಸಹಜವಾಗಿ ಅಡಿಗರೊಂದಿಗಿನ ಒಡನಾಟವನ್ನು ಹೆಚ್ಚಿಸುತ್ತದೆ. ಸತ್ಯಾಗ್ರಹ, ಚಳವಳಿ, ಸಮಾಜವಾದಿಗಳ ಸಂಪರ್ಕ ಈ ಎಲ್ಲದರ ನಡುವೆ ಅವರು ಇಂಗ್ಲಿಷ್ ಆನರ್ಸಗೆ ಪ್ರವೇಶ ಪಡೆಯುತ್ತಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರ ಪರಿಣಾಮ ಇಂಗ್ಲಿಷ್ ಆನರ್ಸಗೆ ಸೇರಿದ ಪ್ರಾರಂಭದ ದಿನಗಳಲ್ಲಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೇಷ್ಟ್ರುಗಳು ಕನ್ನಡ ಆನರ್ಸಗೆ ಸೇರಿಕೊಳ್ಳುವಂತೆ ಅವಮಾನಿಸುತ್ತಾರೆ. ಹೀಗೆ ಅವಮಾನಿತರಾಗುವ ಅನಂತಮೂರ್ತಿ ಮುಂದೊಂದು ದಿನ ಸಂಶೋಧನಾ ವಿದ್ಯಾರ್ಥಿಯಾಗಿ ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಪಿ ಹೆಚ್ ಡಿ ಪದವಿ ಗಳಿಸುವುದು ಅವರೊಳಗಿನ ಪಾಂಡಿತ್ಯಕ್ಕೊಂದು ನಿದರ್ಶನ. ಅನಂತಮೂರ್ತಿ ಅವರು ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಕುವೆಂಪು ಅಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಯಾಗಿದ್ದರಿಂದ ಕುವೆಂಪು ಅವರ ತರಗತಿಗೆ ಕೂಡುವ ಅವಕಾಶವಿಲ್ಲದಿದ್ದುದ್ದರಿಂದ ತರಗತಿಯ ಹೊರಗಿನಿಂದಲೇ ಕಿಟಕಿಯ ಹತ್ತಿರ ಕಿವಿ ಇಟ್ಟುಕೊಂಡು ಪಾಠ ಆಲಿಸುತ್ತಿದ್ದುದ್ದನ್ನು ವಿವರಿಸುವಾಗ ಅಲ್ಲಿ ಲೇಖಕರ ಮೇಲೆ ಕುವೆಂಪು ಅವರ ಪ್ರಭಾವವನ್ನು ಕಾಣಬಹುದು. ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ರಾಜೀವ ತಾರಾನಾಥ, ಟಿ ಜಿ ರಾಘವ, ಸದಾಶಿವ, ಗಂಗಾಧರ, ಕೆ ವಿ ಸುಬ್ಬಣ್ಣನವರಂಥ ಗೆಳೆಯರೊಂದಿಗಿನ ಆಪ್ತ ಒಡನಾಟದಿಂದಾಗಿ ಸಾಹಿತ್ಯದಲ್ಲಿ ಅಭಿರುಚಿ ಮತ್ತಷ್ಟು ದಟ್ಟವಾಗುತ್ತದೆ. ತಮ್ಮನ್ನು ಪ್ರಭಾವಿಸಿದ ಗೆಳೆಯರನ್ನು ನೆನೆಯುವಾಗ ಅನಂತಮೂರ್ತಿ ಹೆಚ್ಚು ಆರ್ದ್ರರಾಗುತ್ತಾರೆ. 'ಈ ಸ್ನೇಹಿತರಲ್ಲಿ ನನ್ನನ್ನು ಕೆಣಕುವ, ನನ್ನ ಬೆಳೆಸುವ, ನನ್ನ ಪೂರೈಸುವ, ಮುಟ್ಟುವ ಅನೇಕ ಗುಣಗಳಿದ್ದವು. ಆದ್ದರಿಂದ ನಾನು ಏನಾದರೂ ಹೇಳಿದರೆ ಇದು ನನ್ನದು ಅಂತ ಹೇಳಲು ಆಗುವುದಿಲ್ಲ. ಅದಕ್ಕೆ ನನಗೆ ಬ್ಲೇಕ್ ನ This is mine, yet not mine ಸಾಲು ಬಹಳ ಇಷ್ಟ. ಇದು ನನ್ನದು ಆದರೆ ನನ್ನದು ಮಾತ್ರ ಅಲ್ಲ'. ಈ ಸಾಲುಗಳು ಗೆಳೆಯರೊಂದಿಗಿನ ಅವರ ಒಡನಾಟವನ್ನು ಬಿಚ್ಚಿಡುತ್ತವೆ.

            ೧೯೬೦ ರ ದಶಕದಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ಮದುವುಯಾಗುವುದರ ಮೂಲಕ ಸಂಪ್ರದಾಯದ ಕಟ್ಟಳೆಗಳನ್ನೆಲ್ಲ ಮುರಿಯುತ್ತಾರೆ. ಮನೆಪಾಠಕ್ಕೆ ಬರುತ್ತಿದ್ದ ಕ್ರಿಶ್ಚಿಯನ್ ಹುಡುಗಿ ಎಸ್ತರ್ ಳಲ್ಲಿ ಅನುರಕ್ತರಾಗಿ ಅವರ ನಡುವಣ ಪ್ರೇಮ ಮದುವೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ. ಅಪ್ಪ ಅಮ್ಮನ ವಿರೋಧದ ನಡುವೆಯೂ ಅನಂತಮೂರ್ತಿ ಎಸ್ತರ್ ಳ ಕೈ ಹಿಡಿಯುತ್ತಾರೆ. ಹಾಗೆಂದು ಅವರಿಗೆ ಕ್ರಿಶ್ಚಿಯನ್ ಧರ್ಮದಲ್ಲಿ ಆಸಕ್ತಿಯಾಗಲಿ ಆಕರ್ಷಣೆಯಾಗಲಿ ಇಲ್ಲ. ಮದುವೆಯ ಸಂದರ್ಭದಲ್ಲಿ ಕ್ರೈಸ್ತರ ಧಾರ್ಮಿಕ ಆಚರಣೆಗಳು ಅವರಿಗೆ ಮುಜುಗರವನ್ನುಂಟು ಮಾಡುತ್ತವೆ. 'ಈ ಮುಜುಗರ ನಾನು ಬ್ರಾಹ್ಮಣ ಜಾತಿಯವನು ಎನ್ನುವ ಕಾರಣಕ್ಕಲ್ಲ. ಜಾತಿಯನ್ನು ಮೀರಬೇಕೆಂಬ ನನ್ನ ಎಲ್ಲ ಪ್ರಯತ್ನಗಳಿಗೆ ಅಲ್ಲಿನ ಆಚರಣೆ ವಿರುದ್ಧವಾಗಿತ್ತು' ಎಂದು ಬರೆಯುತ್ತಾರೆ.

             ಕಾಮನ್ ವೆಲ್ತ್ ಸ್ಕಾಲರ್ ಶಿಪ್ ಪಡೆದು ಸಂಶೋಧನೆಗಾಗಿ ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವುದರೊಂದಿಗೆ ಅನಂತಮೂರ್ತಿ ಅವರ ಸಾಹಿತ್ಯಕ ಬದುಕು ಹೊಸ ತಿರುವು ಪಡೆಯುತ್ತದೆ. ಈ ಸಂದರ್ಭ ಅನೇಕ ಪಾಶ್ಚಾತ್ಯ ಲೇಖಕರ ಕೃತಿಗಳನ್ನು ವಿಮರ್ಶಾತ್ಮಕವಾಗಿ ಓದಿಕೊಳ್ಳುತ್ತಾರೆ. ಲಾರೆನ್ಸ್ ಸಾಹಿತ್ಯದ ಕುರಿತು ಸಂಶೋಧನೆ ಮಾಡಲು ಹೋದ ಮೂರ್ತಿ ಅವರು ಮಾರ್ಗದರ್ಶಕ ಪ್ರಸಿದ್ಧ ಕಾದಂಬರಿಕಾರ ಮಾಲ್ಕಂ ಬ್ರಾಡ್ ಬರಿಯ ಸಲಹೆಯಂತೆ ಅಪವರ್ಡ್ ಮತ್ತು ಇಷರ್ ವುಡ್ ಸಾಹಿತ್ಯದ ಸಂಶೋಧನೆಗೆ ಮುಂದಾಗುತ್ತಾರೆ. ೧೯೩೦ ರ ದಶಕದ ಇಂಗ್ಲೆಂಡಿನ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸುವಾಗ ಸಾಂಕೇತಿಕವಾಗಿ ಬದುಕನ್ನು ಗ್ರಹಿಸುವ ಐರೊಪ್ಯ ಲೇಖಕರು ಮಾತ್ರ ಭಾರತೀಯರಿಗೆ ಪ್ರಿಯರಾದರು. ಆದರೆ ವಾಸ್ತವವಾದಿ ಬರಹಗಾರರು ಭಾರತೀಯರಿಗೆ ಏಕೆ ಹೀರೋಗಳಾಗಲಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ಬರ್ಮಿಂಗ್ ಹ್ಯಾಮ್ ನಲ್ಲಿನ ತಮ್ಮ ಮೂರು ವರ್ಷಗಳ ಬದುಕನ್ನು ಕುರಿತು ಬರೆಯುವಾಗ ಅನಂತಮೂರ್ತಿ ಅವರು ಆ ಕಾಲದ ಇಂಗ್ಲೆಂಡಿನಲ್ಲಿನ ಸಾಹಿತ್ಯಕ ಚಟುವಟಿಕೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತಾರೆ. ಎರಡೇ ಎರಡು ಪುಸ್ತಕಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ಅಪರಿಚಿತನಾಗಿ ಉಳಿದ ಎಡ್ವರ್ಡ್ ಅಪವರ್ಡ್ ನನ್ನು ಹುಡುಕಿಕೊಂಡು ಹೋಗುವ ಲೇಖಕರು ಆತನೊಡನೆ ತಮ್ಮ ಸಂಶೋಧನೆಯ ವಿಷಯವನ್ನು ಚರ್ಚಿಸುತ್ತಾರೆ. ಆ ಸಂಶೋಧನಾ ಅವಧಿಯ ಮೂರು ವರ್ಷಗಳಲ್ಲೇ 'ಸಂಸ್ಕಾರ', 'ಕ್ಲಿಪ್ ಜಾಯಿಂಟ್' ಮತ್ತು 'ಮೌನಿ' ಕೃತಿಗಳು ರಚನೆಯಾಗುತ್ತವೆ. ಸಂಶೋಧನೆಗೂ ವಿಮರ್ಶಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತದೆ. ಮೂರು ವರ್ಷಗಳ ವ್ಯಾಸಂಗದ ನಂತರ ಅನಂತಮೂರ್ತಿ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ಹಾಗೆ ಅವರು ಭಾರತಕ್ಕೆ ಮರಳಿ ಬರಲು ಕನ್ನಡ ಬರವಣಿಗೆಯ ಮೇಲಿನ ಪ್ರೀತಿ ಕಾರಣ ಎನ್ನುವುದು ಗಮನಾರ್ಹ.

            ಭಾರತಕ್ಕೆ ಮರಳಿದ ಅನಂತಮೂರ್ತಿ ಅವರು ಕೆಲವು ವರ್ಷಗಳ ಕಾಲ ಮಹಾರಾಜ ಕಾಲೇಜು ಮತ್ತು ರೀಜನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. ಮಾನಸ ಗಂಗೋತ್ರಿಯಲ್ಲಿ ಖಾಲಿ ಇರುವ ರೀಡರ್ ಹುದ್ದೆಗೆ ಪ್ರಯತ್ನಿಸಿದಾಗಲೆಲ್ಲ ಅವರಲ್ಲಿನ ಕನ್ನಡ ಪ್ರೀತಿಯೇ ನೇಮಕಾತಿಗೆ ಅಡ್ಡಿಯಾಗುತ್ತದೆ. ಕೊನೆಗೆ ದೆಜೆಗೌ ಮತ್ತು ಹಾಮಾನಾರ ಪ್ರಯತ್ನದಿಂದಾಗಿ ಅನಂತಮೂರ್ತಿ ಮಾನಸ ಗಂಗೋತ್ರಿಯ ಇಂಗ್ಲಿಷ್ ವಿಭಾಗದ ರೀಡರ್ ಹುದ್ದೆಗೆ ನೇಮಕಗೊಳ್ಳುತ್ತಾರೆ. ಮಾನಸ ಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊತ್ತಿನಲ್ಲೇ ಜಿ ಹೆಚ್ ನಾಯಕ್, ಪೋಲಂಕಿ, ದಾಮೋದರರಾಯರ ನಿರ್ವಾಜ್ಯ ಪ್ರೀತಿಗೆ ಪಾತ್ರರಾಗುತ್ತಾರೆ. ಈ ಸಮಯದಲ್ಲೇ ಪರಿಚಿತರಾಗುವ ಲಂಕೇಶ್ ನಂತರದ ದಿನಗಳಲ್ಲಿ ಒಬ್ಬ ದುಡುಕಿನ ಸ್ನೇಹಿತನಾಗಿ ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ ಗೆಳೆತನವನ್ನು ಉಳಿಸಿಕೊಳ್ಳುತ್ತಾರೆ.

        ಅನಂತಮೂರ್ತಿ ಅವರ ಆತ್ಮಕಥನದಲ್ಲಿ ತುರ್ತು ಪರಿಸ್ಥಿತಿಯ ಕುರಿತಾದ ಅಧ್ಯಾಯ ಪುಸ್ತಕದ ಮಹತ್ವದ ಸಂಗತಿಗಳಲ್ಲೊಂದು. ೧೯೭೦ ರ ದಶಕದ ತುರ್ತು ಪರಿಸ್ಥಿತಿಯನ್ನು ಕುರಿತು ಬರೆಯುವಾಗ ಆಗ ಅಂಥದ್ದೊಂದು ಕರಾಳ ಘಟನೆಗೆ ಭಾರತೀಯ ಸಾಹಿತ್ಯ ಲೋಕ ಹೇಗೆ ಪ್ರತಿಕ್ರಿಯಿಸಿತು ಎಂದು ವಿವರಿಸುತ್ತಾರೆ. 'ಎಮರ್ಜೆನ್ಸಿ ಘೋಷಣೆಯಾದಾಗ ನಾವು ಸ್ನೇಹಿತರೆಲ್ಲ ತಬ್ಬಿಬ್ಬಾದೇವು. ಬರೆಯುವುದು, ಪಾಠ ಹೇಳುವುದು ಎಲ್ಲ ಅರ್ಥಹೀನವೆನ್ನಿಸಿತು. ನಾಗರಿಕತೆಗೆ ಮತ್ತು ಸಾಹಿತ್ಯ ಸೃಷ್ಟಿಗೆ ಅಗತ್ಯವಾದ ಒಳನೋಟ, ದ್ವಂದ್ವ ದೃಷ್ಟಿ, ಸ್ವವಿಮರ್ಶೆ ಇತ್ಯಾದಿ ಮಾರ್ಗಗಳು ಬರಿ ಪುಕ್ಕಲಾಗಿಯೋ ದೊಂಬರಾಟವಾಗಿಯೋ ಕಂಡವು. ಬದುಕಿನ ವೈವಿಧ್ಯಮಯ ಆಸಕ್ತಿಗಳನ್ನೆಲ್ಲ ಹೀಗೆ ರಾಜಕೀಯ ನುಂಗಿ ಬಿಡುವುದು ಅನೈಸರ್ಗಿಕ ಸರ್ವಾಧಿಕಾರದಲ್ಲಿ ಮಾತ್ರ ಹೀಗಾಗುತ್ತದೆ' ಎಂದು ಬರಹಗಾರರ ಆ ಕಾಲದ ಆತಂಕವನ್ನು ವಿವರಿಸುವರು. ತುರ್ತು ಪರಿಸ್ಥಿತಿಯಿಂದಾಗಿ ನಮ್ಮ ರೂಢಿಗತ ವಿಚಾರಗಳೆಲ್ಲ ಬದಲಾಗಬೇಕಾಗಿ   ಬಂದವು ಎನ್ನುವ ಅನಂತಮೂರ್ತಿ ಅವರು ಹಾಗೆ ಬದಲಾದ ರೂಢಿಗತ ವಿಚಾರಗಳು ಯಾವುವು ಎಂದು ಪಟ್ಟಿ   ಮಾಡುತ್ತಾರೆ.

೧. ಪಾಕಿಸ್ತಾನವನ್ನು ಒಡೆದು ಮುಸ್ಲಿಂ ಜನಾಂಗಕ್ಕೆ ಪಾಠ ಕಲಿಸಿದ ಇಂದಿರಾ ಗಾಂಧಿ ವಿರುದ್ಧ ಆರೆಸ್ಸೆಸ್ಸ್ ಯಾಕೆ ಹೋರಾಡಿತು?

೨. ಮುಸ್ಲಿಂ ವಿರೋಧವೇ ಜನಸಂಘದ ಕಾರ್ಯಕ್ರಮವೆಂದು ನಾವು ತಿಳಿದಿದ್ದು ತಪ್ಪೆ?

೩. ಜನಸಂಘದ ಮನಸ್ಸಿನಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಾಗಿ ಬಂತೆ?

             ಹೀಗೆ ಬರೆಯುತ್ತಿರುವ ಹೊತ್ತಿನಲ್ಲೇ ಆ ದಿನಗಳಲ್ಲಿ ಪ್ರಮುಖ ಹೋರಾಟಗಾರರಾದ ಜಾರ್ಜ್ ಫರ್ನಾಂಡಿಸ್ ತಮ್ಮ ರಾಜಕೀಯ ಬದುಕಿನ ಕೊನೆಯ ದಿನಗಳಲ್ಲಿ ಅದೇಕೆ ಭ್ರಷ್ಟರಾದರು ಎಂದು ಪ್ರಶ್ನಿಸುತ್ತಾರೆ. ತಮ್ಮ ಪ್ರಶ್ನೆಗೆ ಆಧಾರವಾಗಿ ಅನಂತಮೂರ್ತಿ ಅವರು ಎತ್ತಿಕೊಳ್ಳುವ ಬಹುಮುಖ್ಯ ವಿಷಯ ಗುಜರಾತಿನ ೨೦೦೨ ರ ಗಲಭೆ ಕುರಿತಾದದ್ದು. 'ವಾಜಪೇಯಿ ಅವರು ಕೊನೆಪಕ್ಷ ಮೋದಿಗೆ ರಾಜಧರ್ಮ ಪಾಲಿಸು ಎಂದು ಹೇಳಿದರು. ಆದರೆ ಜಾರ್ಜ್ ಗುಜರಾತಿಗೆ ಹೋಗಿ ಬಂದು ಅಲ್ಲಿ ಏನೂ ಆಗಿಲ್ಲವೆಂದು ಸರ್ಟಿಫಿಕೇಟ್ ಕೊಟ್ಟರು' ಜಾರ್ಜ್ ಹಾಗೆ ಹೇಳಲು ಅಧಿಕಾರದಲ್ಲಿರಬೇಕೆಂಬ ಅವರೊಳಗಿನ ಆಸೆಯೇ ಕಾರಣವಾಗಿರಬಹುದು ಎನ್ನುವ ಅನುಮಾನ ಅವರದು.

           ಅನಂತಮೂರ್ತಿ ಅವರ ಸಾಹಿತ್ಯಕ ಬದುಕಿನ ಒಟ್ಟು ಕಥನವನ್ನು 'ಸೃಜನಶೀಲತೆಯ ಉಬ್ಬು ತಗ್ಗುಗಳು' ಎನ್ನುವ ಪ್ರತ್ಯೇಕ ಅಧ್ಯಾಯದಲ್ಲಿ ವಿವರಿಸಲಾಗಿದೆ. ಓದುಗ ಇದನ್ನು ಅವರ ಸಾಹಿತ್ಯ ಕೃಷಿಯ ಏರಿಳಿತ ಎಂದೂ ಪರಿಭಾವಿಸಬಹುದು. ಅನಂತಮೂರ್ತಿ ಅವರ ದೃಷ್ಟಿಯಲ್ಲಿ ಬರೆಯುವುದೆಂದರೆ 'ಪರ್ಯಾಯ ಸ್ಥಿತಿ ಮುಟ್ಟಿದ ದ್ರಾವಣದ ಒಳಗೆ ಲವಣದ ಸಣ್ಣ ಹರಳನ್ನು ಇಳಿಯಬಿಡುವುದು. ಈ ಲವಣ ನಿಧಾನವಾಗಿ ಕ್ರಮೇಣ ಹರಳಾಗುತ್ತ ತನ್ನ ನಿಸರ್ಗದತ್ತ ಸ್ಥಿತಿಯನ್ನು ಮರುಕಳಿಸಿಕೊಳ್ಳುವ ಜೀವಿಯೋ ಎಂಬಂತೆ ತನ್ನ ಹರಳಿನ ಆಕಾರವನ್ನು ಪಡೆಯುತ್ತ ಹೋಗುತ್ತದೆ. ನಾನು ಹೇಗೆ ಬರೆಯುತ್ತೇನೆಂಬ ಕ್ರಮಕ್ಕೆ ಇದು ಒಳ್ಳೆಯ ಮೆಟಫರ್. ನಾನು ಸೃಷ್ಟಿಸಿದ ಘಟನೆಗಳು, ಪಾತ್ರಗಳು ನೆನಪುಗಳಿಂದ ನನ್ನ ಮನಸ್ಸು ಕರಗುತ್ತ, ದಟ್ಟವಾಗುತ್ತ ಪರ್ಯಾಯ ಸ್ಥಿತಿಯನ್ನು ಮುಟ್ಟುತ್ತ ಹೋಗುತ್ತದೆ. ಆ ಹರಳಿನಂತೆಯೇ ನನ್ನ ಮನಸ್ಸಿನ ಯಾವುದೋ ಸಣ್ಣ ತುಣುಕು ಈ ಪರ್ಯಾಪ್ತತೆಯಲ್ಲಿ ಇಳಿದು ತನ್ನ ರೂಪವನ್ನು ಅಧಿಕೃತಗೊಳಿಸಿಕೊಳ್ಳುತ್ತ ಹಲವು ಅಂಚುಗಳ ಹರಳಾಗುತ್ತ ಹೋಗುತ್ತದೆ. ಹೀಗೆ ಒಂದು ಕಾದಂಬರಿ ಅಥವಾ ಕಥೆ ಹುಟ್ಟಬಹುದು.' ಅನಂತಮೂರ್ತಿ ಅವರ ವಿಚಾರದಲ್ಲಿ ಸಾಹಿತ್ಯವೆಂಬುದು ಪಿಸು ಮಾತಿನಂತೆ, ಓದುಗ ಅದನ್ನು ತನ್ನ ಸ್ವಗತವೆಂಬಂತೆ ಓದಿಕೊಳ್ಳಬೇಕು. ಈ ಬಗೆಯ ಬರವಣಿಗೆ ಮತ್ತು ಓದಿನಲ್ಲಿ ಮಾತ್ರ ಒಂದು ಆಪ್ತತೆ ಇರುತ್ತದೆ ಎನ್ನುವ ನಿಲುವಿಗೆ ಅವರು ಬದ್ದರಾಗಿದ್ದರು. ಅದಕ್ಕೆಂದೇ ಅವರು ಬರವಣಿಗೆಯನ್ನು ಪ್ರಭುಸಮ್ಮಿತ ಎನ್ನುವುದಕ್ಕಿಂತ ಕಾಂತಾ ಸಮ್ಮಿತ ಎಂದು ಕರೆಯುತ್ತಾರೆ. ಈ ಕಾಂತಾ ಸಮ್ಮಿತ ಭಾವದಲ್ಲೇ ಅವರು ಕನ್ನಡಕ್ಕೆ ಸಂಸ್ಕಾರ, ಭವ, ದಿವ್ಯ, ಭಾರತಿಪುರ, ಅವಸ್ಥೆ, ಪೂರ್ವಾಪರ ಕೃತಿಗಳನ್ನು ಕೊಡುಗೆಯಾಗಿ ನೀಡಿದರು. ಈ ಅಧ್ಯಾಯದಲ್ಲಿ ಲೇಖಕರು ತಮ್ಮ ಸಂಸ್ಕಾರ, ಭಾರತಿಪುರ, ಸೂರ್ಯನ ಕುದರೆ, ಅವಸ್ಥೆ, ಭವ, ದಿವ್ಯ ಕೃತಿಗಳನ್ನು ಬರೆದ ಸಂದರ್ಭ ಹಾಗೂ ಆಯಾ ಕೃತಿ ಕುರಿತು ಕಥೆ ಹುಟ್ಟಿದ ಘಳಿಗೆಯ ಬಗೆಗಿನ ಅನಿಸಿಕೆಗಳನ್ನು ಹಂಚಿಕೊಂಡಿರುವರು. ಅಗ್ರಹಾರದಲ್ಲಿನ ಬ್ರಾಹ್ಮಣರ ಬದುಕು 'ಸಂಸ್ಕಾರ'ಕ್ಕೆ ಸ್ಪೂರ್ತಿಯಾದರೆ, ಮನೆಯ ಕಿಟಕಿಯಲ್ಲಿ ಕಾಣಿಸಿಕೊಂಡ ಸಣ್ಣದೊಂದು ಹುಳ 'ಸೂರ್ಯನ ಕುದರೆ'ಗೆ ಪ್ರೇರಣೆಯಾಗುತ್ತದೆ. ಅನೇಕ ಚಳವಳಿಗಾರರ ಬದುಕಿನಿಂದ ಪ್ರೇರಿತರಾಗಿ 'ಅವಸ್ಥೆ' ಬರೆಯುತ್ತಾರೆ.

               ಕೇರಳದ ಕೊಟ್ಟಾಯಂ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು ಅನಂತಮೂರ್ತಿ ಅವರ ಬದುಕಿನ ಮಹತ್ವದ ಘಟನೆಗಳಲ್ಲೊಂದು. ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ವಿಶ್ವವಿದ್ಯಾಲಯದೆದುರು ಅನೇಕ ಸಮಸ್ಯೆಗಳಿದ್ದವು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅಸಹಕಾರ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷಗಳ ರಾಜಕೀಯ ದ್ವೇಷ, ಹಣಕಾಸಿನ ಮುಗ್ಗಟ್ಟು, ವಿದ್ಯಾರ್ಥಿಗಳ ನಿರಂತರ ಮುಷ್ಕರ ಈ ಎಲ್ಲ ಸಮಸ್ಯೆಗಳ ನಡುವೆಯೂ ಅನಂತಮೂರ್ತಿ ಅವರು ತಮ್ಮ ದಕ್ಷ ಆಡಳಿತದಿಂದ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ತಂದು ಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಅನೇಕ ಹೊಸ ವಿಭಾಗಗಳು ಇವರ ಆಡಳಿತಾವಧಿಯಲ್ಲಿ ಆರಂಭಗೊಳ್ಳುತ್ತವೆ. ಕಮ್ಯುನಿಷ್ಟರು ಮಾತು ಕಾಂಗ್ರೆಸ್ಸಿಗರು ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವವಿದ್ಯಾಲಯವನ್ನು ಒಂದು ಉತ್ತಮ ಶಿಕ್ಷಣ ಕೇಂದ್ರವಾಗಿ ರೂಪಿಸುತ್ತಾರೆ. ಕೇರಳದಲ್ಲಿದ್ದ ಸಮಯದಲ್ಲೇ ಅವರಿಗೆ ಮಲೆಯಾಳಂನ ಅನೇಕ ಲೇಖಕರ ಪರಿಚಯವಾಗುತ್ತದೆ. ಆ ಮೂಲಕ ಮಲೆಯಾಳಂ ಸಾಹಿತ್ಯವನ್ನು ತೀರ ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ.

         ಆತ್ಮಕಥನದ ೯ ನೇ ಅಧ್ಯಾಯದಲ್ಲಿ ಲೇಖಕರಾಗಿ ತಾವು ಪಟ್ಟ ಸಂಕಟ ಹಾಗೂ ಎದುರಾದ ವಿವಾದಗಳನ್ನು ತೆರೆದಿಟ್ಟಿರುವರು. ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಹಿಂತಿರುಗಿಸಿ ಅದಕ್ಕೆ ಪರ್ಯಾಯವಾಗಿ ಅಷ್ಟೇ ಮೌಲ್ಯದ ಮನೆ ಪಡೆದಾಗ ಅನಂತಮೂರ್ತಿ ಅವರು ಅನೇಕರಿಂದ ಟೀಕೆಗಳನ್ನು ಎದುರಿಸಬೇಕಾಗಿ ಬರುತ್ತದೆ. ೨೦೦೬ ರಲ್ಲಿ ರಾಜ್ಯಸಭೆಗೆ ಸ್ಪರ್ಧಿಸಿದಾಗ ಯಾರೊಬ್ಬರೂ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ರಾಜಕೀಯ ನಾಯಕರೊಬ್ಬರು 'ಯಾರ್ರೀ ಈ ಅನಂತಮೂರ್ತಿ' ಎನ್ನುವ ಅವಮಾನದ ಮಾತುಗಳನ್ನಾಡುತ್ತಾರೆ. ಈ ನಡುವೆ ಅನಂತಮೂರ್ತಿ ಭೈರಪ್ಪನವರ 'ಗೃಹಭಂಗ' ಕನ್ನಡದ ಪ್ರಮುಖ ಕೃತಿಗಳಲ್ಲೊಂದು ಎಂದು ಹೇಳಿ ನಾನು ಭೈರಪ್ಪನವರ ತಾತ್ವಿಕ ವಿರೋಧಿಯೇ ವಿನ: ವೈಯಕ್ತಿಕ ವಿರೋಧಿಯಲ್ಲ ಎಂದು ನುಡಿಯುತ್ತಾರೆ. ೧೯೬೬ ರಲ್ಲಿ ಕನ್ನಡದ ಹತ್ತು ಕೃತಿಗಳನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಬೇಕಾಗಿ ಬಂದಾಗ ಎನ್ ಟಿ ಬಿ ಸದಸ್ಯನಾಗಿ ನಾನು ಭೈರಪ್ಪನವರ ಕೃತಿಯನ್ನು ಶಿಫಾರಸು ಮಾಡಿದೆ ಎಂದು ಬರೆಯುತ್ತಾರೆ. ಹೀಗಿದ್ದೂ ದಾಟು ಕೃತಿ ಪ್ರಕಟವಾದಾಗ ವೃಥಾ ನನ್ನ ಮೇಲೆ ಆರೋಪ ಮಾಡಲಾಯಿತು ಎಂದು ಹೇಳಿ ವಿವಾದವನ್ನು ಹೆಚ್ಚು ಲಂಬಿಸದೆ ಮೊಟಕುಗೊಳಿಸುವುದು ಅನಂತಮೂರ್ತಿ ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸುತ್ತಿರಲಿಲ್ಲ ಮತ್ತು ವಿರೋಧಿಸುತ್ತಿರಲಿಲ್ಲ ಎನ್ನುವುದಕ್ಕೊಂದು ದೃಷ್ಟಾಂತ.

             ಆತ್ಮಕಥನದ ಅಲ್ಲಲ್ಲಿ ಕಾರಿಯಪ್ಪ, ಮುಲ್ಕರಾಜ್ ಆನಂದ್, ರಾಜಕುಮಾರ, ಎ ಕೆ ರಾಮಾನುಜನ್, ನಂಜುಂಡಸ್ವಾಮಿ, ರಾಜೀವ ಗಾಂಧಿ, ವಿ ಪಿ ಸಿಂಗ್, ನಯನಾರ್ ಇವರೊಂದಿಗಿನ ತಮ್ಮ ಆಪ್ತ ಒಡನಾಟ ಮತ್ತು ಭೇಟಿಯನ್ನು ವಿವರಿಸಿರುವರು. ಜ್ಞಾನಪೀಠ ಮತ್ತು ಪದ್ಮ ಪ್ರಶಸ್ತಿ ಕುರಿತಾದ ತಮ್ಮ ಅನುಭವವನ್ನು ಸಂಕ್ಷಿಪ್ತವಾಗಿ ಬರೆದುಕೊಂಡಿರುವರು. ಒಟ್ಟಾರೆ ಅನಂತಮೂರ್ತಿ ಅವರ ವೈಯಕ್ತಿಕ ಬದುಕಿನ ಜೊತೆಗೆ ಅವರ ಸಂಪರ್ಕಕ್ಕೆ ಬಂದ ಒಂದು ಕಾಲದ ಸಾಹಿತ್ಯಕ, ಸಾಮಾಜಿಕ ಮತ್ತು ರಾಜಕೀಯ ಬದುಕಿನ ಸಮಗ್ರ ಕಥನ ನಮ್ಮ ಓದಿಗೆ ದಕ್ಕುತ್ತದೆ.

ಕೊನೆಯ ಮಾತು 


           ಅನಂತಮೂರ್ತಿ ಒಂದು ಕಾಲದ ಓದುಗರನ್ನು ವೈಚಾರಿಕವಾಗಿ, ತಾತ್ವಿಕವಾಗಿ ಹಾಗೂ ಸೈದ್ಧಾಂತಿಕವಾಗಿ ತುಂಬ ಪ್ರಭಾವಿಸಿದ ಲೇಖಕ. ಕೆಲವು ಲೇಖಕರು ಬರವಣಿಗೆಯಲ್ಲಿನ ರಸದಿಂದಾಗಿಯೋ ಇಲ್ಲವೇ ಆವೇಶಪೂರಿತ ಹೇಳಿಕೆಯಿಂದಾಗಿಯೋ ಓದುಗರನ್ನು ಕೆಲವು ಕಾಲದವರೆಗೆ ಪ್ರಭಾವಿಸಬಹುದು. ಆದರೆ ಅನಂತಮೂರ್ತಿ ಅವರ ಕೃತಿಗಳು ಮತ್ತು ಲೇಖನಗಳು ಓದುಗ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ, ವಿವೇಚಿಸುವಂತೆ ಮತ್ತು ಬದಲಾವಣೆಗೆ ಮುಕ್ತವಾಗಿ ತೆರೆದುಕೊಳ್ಳುವಂತೆ ಪ್ರಭಾವಿಸುತ್ತವೆ. ಅನಂತಮೂರ್ತಿ ಅವರು ತಾವು ಹೇಳಿದ್ದೆ ಕೊನೆ ಎಂದು ಬರೆಯದೆ ತಮ್ಮ ಚಿಂತನೆಯಲ್ಲಿ ಓದುಗನಿಗೂ ಸ್ವಾತಂತ್ರ್ಯ ನೀಡಿರುವ ಮಹತ್ವದ ಲೇಖಕ. ಜೊತೆಗೆ ಬರಹಗಾರರಾಗಿ ಮತ್ತು ಚಿಂತಕರಾಗಿ ಅವರು ಕಾಲಕಾಲಕ್ಕೆ ಸ್ವವಿಮರ್ಶೆಗೊಳಗಾಗುತ್ತಿದ್ದರು ಎನ್ನುವುದಕ್ಕೆ ಅತ್ಮಕಥನದಲ್ಲಿನ ಈ ಸಾಲುಗಳು ಪುರಾವೆ ಒದಗಿಸುತ್ತವೆ.

* ನನ್ನ ಸುಖ-ದು:ಖ ನನ್ನ ಸುಖ-ದು:ಖ ಮಾತ್ರ ಎಂದು ತಿಳಿಯುವ ತಪ್ಪನ್ನು ಲೇಖಕ ಮಾಡಬಾರದು. ಯಾವ ಸಂಕಟವೂ ನನ್ನ ಸಂಕಟವಾಗಬೇಕು. ಆಗದೆ ಇದ್ದರೆ ನಾನು ದೊಡ್ಡ ಲೇಖಕ ಆಗುವುದು ಸಾಧ್ಯವಿಲ್ಲ.

* ಬಂಡಾಯಗಾರರಾಗಿದ್ದ ನನ್ನ ಸ್ನೇಹಿತರೆ ಕ್ಯಾಬಿನೆಟ್ ದರ್ಜೆಯ ಅಧಿಕಾರವನ್ನು ಪಡೆದಿದ್ದಾರೆ. ನಮ್ಮ ಮಾತಿಗೂ ಒಳ ಜೀವನಕ್ಕೂ ಸಂಬಂಧ ಕಳೆದು ಹೋಗಿದೆ.

* ನಮ್ಮ ಪ್ರಾಮಾಣಿಕತೆಯನ್ನು ಎಲ್ಲರಿಗೂ ಕಾಣುವ ಹಾಗೆ ತೋರಿಸಿಕೊಂಡು ಹೋಗುವ ಬಗೆ ನನಗೆ ಇಷ್ಟವಾಗುವುದಿಲ್ಲ. ಪ್ರಾಮಾಣಿಕವಾಗಿದ್ದರೆ ಅದನ್ನು ನಾವು ಪ್ರೇಮದ ಹಾಗೆ ಬಚ್ಚಿಟ್ಟುಕೊಳ್ಳಬೇಕು.

* ಸಂಪ್ರದಾಯ ಜಗತ್ತಿಗೆ ವಿರೋಧವಾದ ಮನಸ್ಸು ಆಧುನಿಕ ವ್ಯವಸ್ಥೆಯ ಕ್ರೌರ್ಯವನ್ನು ಒಪ್ಪಿಕೊಳ್ಳದಂತೆ ನೋಡಿಕೊಳ್ಳಬೇಕು. ಜೊತೆಗೆ ಆಧುನಿಕ ವ್ಯವಸ್ಥೆಗೆ ವಿರೋಧಿಯಾದ ಮನಸ್ಸು ಸಾಂಪ್ರದಾಯಿಕ ವ್ಯವಸ್ಥೆಗೆ ಜಾರಿ ಬಿಡಬಾರದು. ಈ ಎರಡೂ ಅಪಾಯಗಳು ನಮ್ಮೆಲ್ಲರಲ್ಲೂ ಇವೆ ಎಂಬುದನ್ನು ನಾನು ಗುರುತಿಸಿಕೊಂಡಿದ್ದೇನೆ.

* ನನ್ನ ಸಮಾಜವಾದಿ ಗೆಳೆಯರಲ್ಲಿ ಕೆಲವು ಸಾರಿ ಬ್ರಾಹ್ಮಣ ದ್ವೇಷ ಎಂಬುದು ತಾತ್ವಿಕವಾಗಿ ಮಾತ್ರ ಉಳಿಯದೆ ಅದೊಂದು ವೈಯಕ್ತಿಕ ಅಸೂಯೆಯೂ, ತತ್ವದಲ್ಲಿ ಬೆಚ್ಚಗೆ ಅಡಗುವ ಅಲ್ಪತನವೂ ಆಗುತ್ತದೆಂಬುದನ್ನು ನಾನು ನನ್ನ ಜೀವನದುದ್ದಕ್ಕೂ ಕಾಣುತ್ತ ಬಂದಿದ್ದೇನೆ. ಇದರಿಂದ ನನ್ನಲ್ಲಿ ಕಹಿ ಹುಟ್ಟಿಲ್ಲ ಮತ್ತು ಇದಕ್ಕೆ ಪ್ರತಿರೋಧವಾಗಿ ನಾನು ಜಾತಿವಾದಿಯಾಗಲಿಲ್ಲ.

* ನಾನು ಇಂದಿಗೂ ಕಾಯ್ದುಕೊಂಡು ಬಂದಿರುವ ನನ್ನಲ್ಲಿನ ಮುಗ್ಧ ಸರಳತೆ, ಏನನ್ನೂ ಬಚ್ಚಿಡದ ಬಾಯಿ ಬಡುಕತನ ಇವುಗಳಿಂದ ನಾನು ಯಾವ ಪಾಠವನ್ನೂ ಕಲಿತು ಜಾಣನಾಗಲಿಲ್ಲ ಎಂಬ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ