Monday, August 10, 2015

ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಂದಲಗಳು

       






         








                ಕೆಲವು ದಿನಗಳಿಂದ ಶಿಕ್ಷಣ ಕ್ಷೇತ್ರ ಬಹು ಚರ್ಚಿತ ವಿಷಯವಾಗಿ ರೂಪಾಂತರಗೊಂಡಿದೆ. ಅದಕ್ಕೆ ಸಾಕಷ್ಟು ಕಾರಣಗಳಿವೆ. ಹೀಗೆ ಚರ್ಚೆಗೆ ಎತ್ತಿಕೊಂಡ ಬಹುಮುಖ್ಯ ವಿಷಯಗಳಲ್ಲಿ ಹತ್ತನೇ ತರಗತಿಯ ಫಲಿತಾಂಶದಲ್ಲಾದ ಇಳಿಕೆ, ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಮತ್ತು ಫಲಿತಾಂಶದಲ್ಲಾದ ನ್ಯೂನ್ಯತೆ, ಸಿ ಇ ಟಿ ಫಲಿತಾಂಶದಲ್ಲಿನ ಗೊಂದಲಗಳು, ಉನ್ನತ ಶಿಕ್ಷಣದಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಗೋಳು, ಉಪಕುಲಪತಿಗಳ ನೇಮಕಾತಿಯಲ್ಲಿನ ವಿಳಂಬ ಹೀಗೆ ನೂರೆಂಟು ಸಮಸ್ಯೆಗಳು ಚರ್ಚೆಗೆ ಗ್ರಾಸವಾಗುತ್ತಿವೆ. ಹೀಗೆ ಮಾಧ್ಯಮಗಳು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತಿರುವ ಹೊತ್ತಿನಲ್ಲೇ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಎಲ್ಲ ಗೊಂದಲಗಳಿಂದ ಆತಂಕ ಪಡುತ್ತಿರುವರು. ಕೆಲವು ದಿನಗಳ ಹಿಂದೆ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾದ ಸಂದರ್ಭ ನನ್ನ ಪರಿಚಯದ ಹುಡುಗ ತಾನು ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲವೆನ್ನುವ ಕಾರಣಕ್ಕೆ ತೀರ ಖಿನ್ನತೆಗೆ ಒಳಗಾದ. ಮಗನ ವರ್ತನೆ ಪಾಲಕರಿಗೆ ಚಿಂತೆಯನ್ನುಂಟು ಮಾಡಿತು. ದುಬಾರಿ ಫೀಜು ಕೊಟ್ಟು ಖಾಸಗಿ ಶಾಲೆಯಲ್ಲಿ ಪ್ರವೇಶ ದೊರಕಿಸಿ ಕೊಡುವಷ್ಟು ಅವರು ಆರ್ಥಿಕವಾಗಿ ಸ್ಥಿತಿವಂತರಲ್ಲದ ಕಾರಣ ತಮ್ಮ ಮಗನನ್ನು ಸರ್ಕಾರಿ ಶಾಲೆಗೇ ಸೇರಿಸಿದ್ದರು. ಓದಿನಲ್ಲಿ ಜಾಣನಾದ ಹುಡುಗ ಸರ್ಕಾರಿ ಶಾಲೆಯಾದರೂ ಪ್ರತಿವರ್ಷ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಆದರೆ ಆತ ಹತ್ತನೇ ತರಗತಿಗೆ ಪ್ರವೇಶ ಪಡೆಯುವ ವೇಳೆಗೆ ಅಲ್ಲಿದ್ದ ಕೆಲವು ಶಿಕ್ಷಕರನ್ನು ಹಠಾತ್ತನೆ ವರ್ಗಾವಣೆ ಮಾಡಿದ್ದು ವಿದ್ಯಾರ್ಥಿಗಳ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಹೊಸ ಶಿಕ್ಷಕರು ಬರುವಲ್ಲಿನ ವಿಳಂಬ, ತರಗತಿಗಳನ್ನು ನಡೆಸುವಲ್ಲಿ ಆದ ಅವ್ಯವಸ್ಥೆ ಇತ್ಯಾದಿ ಕಾರಣಗಳಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪ್ರಶ್ನೆ ಪತ್ರಿಕೆಗಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಕೆಲವು ಸರ್ಕಾರಿ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶದ ಶೇಕಡಾವಾರು ಪ್ರಮಾಣ ತೀರ ಕುಸಿಯಿತು. ಈಗಾಲೇ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಾಗಬಹುದು. ಪರಿಣಾಮವಾಗಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚುತ್ತದೆ. ಇನ್ನು ಆರ್ಥಿಕವಾಗಿ ಸ್ಥಿತಿವಂತರಲ್ಲದ ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸುವ ಅನಿವಾರ್ಯತೆ ಎದುರಾಗುತ್ತದೆ. ಇಂಥದ್ದೊಂದು ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಫಲಿತಾಂಶ ಸುಧಾರಣೆಗೆ ನೋಟಿಸ್ ಜಾರಿ ಮಾಡುತ್ತದೆ. ಜೊತೆಗೆ ಫಲಿತಾಂಶದಲ್ಲಿ ಸುಧಾರಣೆ ಆಗದೆ ಇದ್ದಲ್ಲಿ ಅಂಥ ಶಾಲೆಗಳನ್ನು ಮುಚ್ಚುವ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತದೆ. ಹೀಗೊಂದು ವೇಳೆ ಶಾಲೆಯನ್ನು ಮುಚ್ಚುವುದಾದರೆ ಅಲ್ಲಿ ಈಗಾಗಲೇ ಓದುತ್ತಿರುವ ಮಕ್ಕಳ ಶಿಕ್ಷಣದ ಗತಿ ಏನು ? ಅವರು ಯಾವ ಶಾಲೆಯಲ್ಲಿ ಪ್ರವೇಶ ಪಡೆಯಬೇಕು ? ಈ ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆ ಉತ್ತರಿಸಬೇಕು.

                 ಇನ್ನು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತದರ ಫಲಿತಾಂಶದಲ್ಲಿ ಅನೇಕ ಗೊಂದಲಗಳು ಕಾಣಿಸಿಕೊಂಡವು. ಹೀಗೆ ೨೦೧೫ ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಅನೇಕ ಗೊಜಲುಗಳು ನಮ್ಮ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದವು. ಪ್ರಶ್ನೆ ಪತ್ರಿಕೆಯಲ್ಲಿನ ಕೆಲವು ತಪ್ಪುಗಳಿಂದಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡುವ ಉಪನ್ಯಾಸಕರ ವಿದ್ಯಾರ್ಹತೆಯನ್ನೇ ಪ್ರಶ್ನಿಸುವಂತಾಯಿತು. ಜೊತೆಗೆ ಹೀಗೆ ತಪ್ಪುಗಳಿಂದ ಕೂಡಿದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಮಂಡಳಿಯು ಆಯ್ಕೆ ಮಾಡಿದ್ದು ಕೂಡ ಪರೀಕ್ಷಾ ಮಂಡಳಿಯ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ಸಂಶಯದಿಂದ ನೋಡುವಂತಾಯಿತು. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಮಂಡಳಿಯು ನಿರ್ಧಿಷ್ಟ ಪಡಿಸಿರುವ ಪಠ್ಯಕ್ರಮಕ್ಕೆ ಸೀಮಿತವಾಗಿರಬೇಕು. ಪಠ್ಯಕ್ರಮದ ವ್ಯಾಪ್ತಿಯನ್ನು ಮೀರಿದ ಪ್ರಶ್ನೆಗಳು ಎದುರಾದಾಗ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಸಹಜವಾಗಿಯೇ ಆತಂಕಕ್ಕೆ ಒಳಗಾಗುವರು. ಹೀಗೆ ಪರೀಕ್ಷೆಯ ಒಂದು ಹಂತದಲ್ಲಿ ಎದುರಾಗುವ ಸಮಸ್ಯೆ ಮತ್ತು ಆತಂಕ ಅದು ವಿದ್ಯಾರ್ಥಿಗಳ ಮಾನಸಿಕ ಧೃಡತೆಯನ್ನು ಕುಗ್ಗಿಸಿ ಮುಂದಿನ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗದೇ ಹೋಗಬಹುದು. ನಿಜಕ್ಕೂ ಸರ್ಕಾರದ ಶಿಕ್ಷಣ ಇಲಾಖೆ ಇಲ್ಲಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಪರೀಕ್ಷಾ ವೇಳೆಯಲ್ಲಿ ಕಾಣಿಸಿಕೊಂಡ ಗೊಂದಲ ಫಲಿತಾಂಶದ ಸಂದರ್ಭದಲ್ಲೂ ಕಾಣಿಸಿಕೊಂಡಿದ್ದು ವಿಪರ್ಯಾಸದ ಸಂಗತಿ. ಪದವಿಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಣೆಗೆ ಹೊರಗುತ್ತಿಗೆ ನೀಡಿದ್ದರಿಂದ ಫಲಿತಾಂಶವನ್ನು ಅನೇಕ ವೆಬ್ ತಾಣಗಳು ಪ್ರಕಟಿಸಿದವು. ಆದರೆ ಸಮಸ್ಯೆ ಎದುರಾದದ್ದು ಒಂದು ವೆಬ್ ತಾಣದಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಇನ್ನೊಂದು ವೆಬ್ ತಾಣದಲ್ಲಿ ಅನುತ್ತೀರ್ಣನಾಗಿದ್ದ. ಈ ಖಾಸಗಿ ವೆಬ್ ತಾಣಗಳಲ್ಲಿ ಫಲಿತಾಂಶವನ್ನು ಸರಿಯಾಗಿ ಹೊಂದಿಸದೆ ಇದ್ದುದ್ದರಿಂದ ಇಂಥ ಅಚಾತುರ್ಯ ಸಂಭವಿಸಿತು. ಈ ಅಚಾತುರ್ಯದಿಂದಾಗಿ ಉತ್ತೀರ್ಣರಾದ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದೆವೆನ್ನುವ ಅಪಮಾನದಿಂದ ಆತ್ಮಹತ್ಯೆಗೆ ಯತ್ನಿಸಿದರು. ಫಲಿತಾಂಶ ವಿದ್ಯಾರ್ಥಿಗಳಿಗೆ ಬೇಗ ತಲುಪಲಿ ಎನ್ನುವ ಕಾರಣಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಅನೇಕ ಖಾಸಗಿ ವೆಬ್ ತಾಣಗಳಿಗೆ ಫಲಿತಾಂಶವನ್ನು ಪ್ರಕಟಿಸುವ ಕೆಲಸ ನೀಡಿದ್ದು ಸ್ವಾಗತಾರ್ಹ ನಡೆ. ಆದರೆ ಯಾವ ಪೂರ್ವಭಾವಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ ಏಕಾಏಕಿ ಹೀಗೆ ನಿರ್ಧಾರ ತೆಗೆದುಕೊಂಡಿದ್ದು ಅನೇಕ ವಿದ್ಯಾರ್ಥಿಗಳ ಬದುಕಿಗೆ ಕಂಟಕವಾಯಿತು. ಮಂಡಳಿಯು ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಅದರ ಸಾಧಕ ಬಾಧಕಗಳನ್ನು ಕುರಿತು ಯೋಚಿಸಬೇಕಿತ್ತು. ಆದರೆ ನಿರ್ಧಾರ ತೆಗೆದುಕೊಳ್ಳುವವರು ಅಸಮರ್ಥರೂ  ಮತ್ತು ಅದಕ್ಷರೂ ಆದಾಗ ಇಂಥ ಸಮಸ್ಯೆಗಳು ಎದುರಾಗುತ್ತವೆ. ಇದೆ ಸಂದರ್ಭ ಪ್ರಶ್ನೆ ಪತ್ರಿಕೆಯಲ್ಲಿ ನುಸುಳಿದ ತಪ್ಪುಗಳನ್ನು ಕುರಿತು ಮಂಡಳಿಯು ಯಾವ ನಿರ್ಧಾರ ತೆಗೆದುಕೊಂಡಿತು ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗೆ ತನ್ನಿಂದಾದ ತಪ್ಪುಗಳನ್ನು ಸರಿಪಡಿಸಲು ಮಂಡಳಿಯು ವಿದ್ಯಾರ್ಥಿಗಳಿಗೆ ಆದ ತಪ್ಪುಗಳ ಸಂಖ್ಯೆಯನ್ನಾಧರಿಸಿ ಹೆಚ್ಚುವರಿ ಅಂಕಗಳನ್ನು (ಗ್ರೇಸ್) ಕೊಡಲು ನಿರ್ಧರಿಸಿತು. ಇಲ್ಲಿ ಮತ್ತೆ ಮಂಡಳಿ ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಏಕೆಂದರೆ ಯಾವ ವಿದ್ಯಾರ್ಥಿ ಪಠ್ಯಕ್ರಮಕ್ಕೆ ಸೇರದೆ ಇದ್ದ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿದ್ದಲ್ಲಿ ಅಂಥ ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚುವರಿ ಅಂಕಗಳನ್ನು ನೀಡಲಾಯಿತು. ಯಾವ ವಿದ್ಯಾರ್ಥಿ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸದೆ ಕೈ ಬಿಟ್ಟಲ್ಲಿ ಅಂಥವರು ಈ ಹೆಚ್ಚುವರಿ ಅಂಕಗಳನ್ನು ಪಡೆಯುವ ಸೌಲಭ್ಯದಿಂದ ವಂಚಿತರಾಗಬೇಕಾಯಿತು. ತಪ್ಪು ಪ್ರಶ್ನೆಗಳನ್ನು (ಪಠ್ಯಕ್ರಮಕ್ಕೆ ಸೇರದ) ಆಯ್ಕೆ ಮಾಡಿದ್ದೆ ಮಂಡಳಿಯ ಹಾಸ್ಯಾಸ್ಪದ ನಡೆಯಾಗಿರುವಾಗ ಹೆಚ್ಚುವರಿ ಅಂಕಗಳ ಫಲಾನುಭವಿಗಳನ್ನು ನಿರ್ಧರಿಸಲು ಉಪಯೋಗಿಸಿದ ಮಾನದಂಡ ಮಂಡಳಿಯ ಅಧಿಕಾರಿಗಳ ಅನರ್ಹತೆಗೆ ಕನ್ನಡಿ ಹಿಡಿಯಿತು. ಈ ವಿಷಯವಾಗಿ ಮಂಡಳಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲು ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರಯತ್ನಿಸಿದಾಗ ಅಧಿಕಾರಿಗಳ ಭೇಟಿ ಲಭ್ಯವಾಗದೆ ಅನಿವಾರ್ಯವಾಗಿ ಪ್ರತಿಭಟನೆಗಿಳಿಯಬೇಕಾಯಿತು. ಉನ್ನತ ಅಧಿಕಾರಿಗಳು ಪ್ರತಿಭಟನೆ ಕಾಣಿಸಿಕೊಂಡ ಎರಡು ದಿನಗಳ ನಂತರ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಭೇಟಿಯಾದದ್ದು ಹಾಗೂ ಶಿಕ್ಷಣ ಸಚಿವರು ಪತ್ರಿಕಾಗೊಷ್ಠಿಯನ್ನು ವಿಳಂಬವಾಗಿ ಕರೆದ ಆ ನಡೆಯನ್ನು ಗಮನಿಸಿದಾಗ ಸರ್ಕಾರ ಮಕ್ಕಳ ಶಿಕ್ಷಣದಂಥ ಗಂಭೀರ ವಿಷಯವನ್ನು ಎಷ್ಟು ಲಘುವಾಗಿ ಪರಿಗಣಿಸಿದೆ ಎಂದು ಗೊತ್ತಾಗುತ್ತದೆ. ಈ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಅದರ ಫಲಿತಾಂಶದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ ಸಿ ಇ ಟಿ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಕೆಲವು ದಿನಗಳವರೆಗೆ ಮುಂದೂಡಬೇಕಾದ ಅನಿವಾರ್ಯತೆ ಎದುರಾಯಿತು. ತಾವು ಬರೆದ ಪ್ರವೇಶ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಂಡಳಿಯ ಈ ನಿರ್ಧಾರದಿಂದ ಮತ್ತಷ್ಟು ಆಘಾತವಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡ ತಪ್ಪುಗಳಂತೆ ಸಿ ಇ ಟಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಕೆಲವೊಂದು ತಪ್ಪುಗಳು ನುಸುಳಿದವು. ಇದು ನಮ್ಮ ಮಕ್ಕಳಿಗೆ ಪಾಠ ಮಾಡುವ ಉಪನ್ಯಾಸಕರ ಯೋಗ್ಯತೆ ಮತ್ತು ಅರ್ಹತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಆದ ತಪ್ಪನ್ನು ಮುಚ್ಚಿಕೊಳ್ಳಲು ಸರ್ಕಾರ ಮತ್ತದರ ಭಾಗವಾದ ಶಿಕ್ಷಣ ಮಂಡಳಿ ಜೊತೆಗೂಡಿ ಮತ್ತೆ ಹೆಚ್ಚುವರಿ ಅಂಕಗಳ ಮೊರೆ ಹೋದವು. ಅತಿ ಕಡಿಮೆ ಅಂಕಗಳ ಅಂತರದಲ್ಲಿ ಸಿ ಇ ಟಿ ಪ್ರವೇಶ ಪರೀಕ್ಷೆಯ Rank ನಿರ್ಧಾರವಾಗುವುದರಿಂದ ಮಂಡಳಿಯ ಹೆಚ್ಚುವರಿ ಅಂಕಗಳನ್ನು ನೀಡುವ ನಡೆ ಮೆರಿಟ್ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಒಟ್ಟಿನಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಶಿಕ್ಷಣ ಮಂಡಳಿಯು ಮಾಡಿದ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕ ಹಾಗೂ ಒತ್ತಡದಲ್ಲಿ ಅನೇಕ ದಿನಗಳನ್ನು ಕಳೆಯಬೇಕಾಯಿತು.

                 ಶಿಕ್ಷಣದ ವಿಷಯವಾಗಿ ಇನ್ನೊಂದು ಬಹು ಚರ್ಚಿತ ಸಂಗತಿ ಎಂದರೆ ಅದು ಏಕರೂಪ ಪಠ್ಯಕ್ರಮಕ್ಕೆ ಸಂಬಂಧಿಸಿದ್ದು. ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತರುವ ಪ್ರಯತ್ನ ಮಾಡಿದಾಗ ಆಗ ಎಲ್ಲ ರಾಜ್ಯಗಳಲ್ಲಿ ಏಕರೂಪ ಪಠ್ಯಕ್ರಮದ ಮೂಲಕ ಬೋಧಿಸುವ ಸಿದ್ಧತೆ ಪ್ರಾರಂಭವಾಯಿತು. ಪರಿಣಾಮವಾಗಿ ಪಠ್ಯ ಪುಸ್ತಕಗಳಲ್ಲಿ ಪ್ರಾದೇಶಿಕತೆ ಮಾಯವಾಗಿ ಮಕ್ಕಳ ಮೇಲೆ ರಾಷ್ಟ್ರೀಯ ಸಂಗತಿಗಳನ್ನು ಬಲವಂತವಾಗಿ ಹೇರಿದಂತಾಗುತ್ತದೆ. ತನ್ನ ಪರಿಸರದಲ್ಲಿನ ಪರಿಚಿತ ಸಂಗತಿಗಳನ್ನು ಓದುತ್ತಿದ್ದ ಮಗು ತನ್ನದಲ್ಲದ ಅಪರಿಚಿತ ವಿಷಯಗಳನ್ನು ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಇದು ಭಾಷಾ ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ ಗಣಿತ ಮತ್ತು ವಿಜ್ಞಾನದ ವಿಷಯಗಳು ಅತ್ಯಂತ ಜಟಿಲವಾಗಿವೆ. ಏನೆಲ್ಲ ಸಮಸ್ಯೆಗಳ ನಡುವೆಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕೇಂದ್ರೀಯ ಪಠ್ಯಕ್ರಮವನ್ನು ಪರಿಚಯಿಸುವ ಯೋಜನೆಗೆ ಚಾಲನೆ ದೊರೆತಿದೆ. ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಪ್ರಾದೇಶಿಕ ಅಸಮಾನತೆ ಇಲ್ಲದೆ ಎಲ್ಲ ಮಕ್ಕಳೂ ಜೊತೆಯಾಗಿ ಸ್ಪರ್ಧಿಸಲಿ ಎನ್ನುವ ಸರ್ಕಾರದ ಕ್ರಮವೇನೋ ಸ್ವಾಗತಾರ್ಹ. ಆದರೆ ಹೀಗೆ ಮಾಡುವಾಗ ಇಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪ್ರಶ್ನೆ ಎದುರಾಗುತ್ತದೆ. ಏಕರೂಪ ಪಠ್ಯಕ್ರಮದ ವ್ಯಾಪ್ತಿಗೆ ಕನ್ನಡ ಮಾಧ್ಯಮದ ಪಠ್ಯಕ್ರಮವನ್ನು ಸೇರಿಸುವುದಾದರೂ ಹೇಗೆ. ಪಿಯುಸಿ ಹಂತದಲ್ಲಿ ಗಣಿತ ಮತ್ತು ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಕಲಿಯಲು ಅನುಕೂಲ ಮತ್ತು ಅವಕಾಶವಿಲ್ಲದಂತ ಹೊತ್ತಿನಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಕೇಂದ್ರೀಯ ಪಠ್ಯಕ್ರಮಕ್ಕನುಗುಣವಾಗಿ ಅಣಿಗೊಳಿಸಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದಾದರೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಇಂಗ್ಲಿಷ್ ಮಾಧ್ಯಮದ ಏಕರೂಪ ಪಠ್ಯಕ್ರಮವನ್ನು ಅಭ್ಯಸಿಸುತ್ತಿರುವ ಮಕ್ಕಳ ಪ್ರಬಲ ಸ್ಪರ್ಧೆಯ ಎದುರು ಅವರುಗಳೆಂದು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬೇಕು? ಅಂಥದ್ದೊಂದು ಸಾಧ್ಯತೆ ಅಸಾಧ್ಯವಾಗಿರುವುದರಿಂದ ಕನ್ನಡ ಭಾಷೆಯಲ್ಲಿ ಓದುತ್ತಿರುವ ಬಡ ಮಕ್ಕಳು ಹೋಟೆಲ್ಲುಗಳಲ್ಲೋ, ಕಿರಾಣಿ ಅಂಗಡಿಗಳಲ್ಲೋ ಕೆಲಸ ಮಾಡುತ್ತ ತಮ್ಮ ಬದುಕು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗುತ್ತದೆ.

               ಶಿಕ್ಷಣದ ವಿಷಯವಾಗಿ ಯಾವುದೇ ಕಾಯ್ದೆ ಕಾನೂನು ರೂಪಿಸುವುದಕ್ಕಿಂತ ಮೊದಲು ಸರ್ಕಾರ ಅದರ ಸಾಧಕ ಬಾಧಕಗಳನ್ನು ಕುರಿತು ವಿವೇಚಿಸುವುದೊಳಿತು. ಸ್ಥಿತಿವಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸಿದರೆ ಬಡ ಮಕ್ಕಳಿಗಾಗಿ ಸರ್ಕಾರದ ಕನ್ನಡ ಶಾಲೆಗಳಿವೆ ಎನ್ನುವ ವಿತಂಡವಾದ ಸರಿಯಲ್ಲ. ಶಿಕ್ಷಣದ ಮಾಧ್ಯಮವನ್ನು ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಅದನ್ನು ಆಸಕ್ತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವಂತ ವಾತಾವರಣ ನಿರ್ಮಾಣವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಕೂಡಿಯೇ ಕನ್ನಡ ಶಾಲೆಗಳಲ್ಲೂ ಮತ್ತು ಇಂಗ್ಲಿಷ್ ಶಾಲೆಗಳಲ್ಲೂ ಕಲಿಯುವಂತಹ ದಿನಗಳು ಬರಬೇಕು.

                 ಇದೇ ಸಂದರ್ಭ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಜಲುಗಳು ನಮ್ಮ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿವೆ. ಕೆಲವು ದಿನಗಳ ಹಿಂದೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಾವು ಕೇಳಿದಷ್ಟು ಹಣ ನೀಡಿದಲ್ಲಿ ಸಂಶೋಧನೆಗೆ ಸಹಕರಿಸುವುದಾಗಿ ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಬೆದರಿಸಿದ ಪ್ರಸಂಗ ಮಾಧ್ಯಮಗಳಲ್ಲಿ ವರದಿಯಾಯಿತು. ನಿಜಕ್ಕೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಈ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುದೊಡ್ಡ ಸಮಸ್ಯೆ ಇದು. ಜೊತೆಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡುತ್ತಿರುವ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ಸತ್ಯ. ಈಗಾಗಲೇ ಈ ವಿಷಯವಾಗಿ ವಿಶ್ವವಿದ್ಯಾಲಯಗಳಲ್ಲಿನ ಅನೇಕ ಪ್ರಾಧ್ಯಾಪಕರ ಮೇಲೆ ದೂರುಗಳನ್ನು ದಾಖಲಿಸಲಾಗಿದೆ. ಆದರೂ ಸರ್ಕಾರ ಈ ವಿಷಯವಾಗಿ ಯಾವ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳಿಲ್ಲ. ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರಿಗೆ ಸಂಶೋಧನಾ ಮಾರ್ಗದರ್ಶನವೆನ್ನುವುದು ಹಣ ಮಾಡುವ ದಂಧೆಯಾದಾಗ ಆಗ ಸಹಜವಾಗಿಯೇ ಸಂಶೋಧನಾ ಶಿಕ್ಷಣದಲ್ಲಿನ ಗುಣಮಟ್ಟ ಕುಸಿಯುತ್ತದೆ.

                  ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕರ್ನಾಟಕದ ಆರು ಜಿಲ್ಲೆಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಿದೆ. ಶಿಕ್ಷಣದ ವಿಷಯವಾಗಿ ಈ ಆರು ಜಿಲ್ಲೆಗಳಲ್ಲಿನ ಒಟ್ಟು ಕೋರ್ಸುಗಳಲ್ಲಿನ ಶೇಕಡಾ ೭೫ ರಷ್ಟು ಸೀಟುಗಳನ್ನು ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದೆ. ಹೈದರಾಬಾದ ಕರ್ನಾಟಕದ ವ್ಯಾಪ್ತಿಯಲ್ಲಿನ ಆರು ಜಿಲ್ಲೆಗಳು ಮಾತ್ರವಲ್ಲದೆ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿನ ಕಾಲೇಜುಗಳಲ್ಲಿಯೂ ಶೇಕಡಾ ೮ ರಷ್ಟು ಮೀಸಲಾತಿ ಸೌಲಭ್ಯ ಆ ಆರು ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ದೊರೆಯಲಿದೆ. ವಿಶೇಷವಾಗಿ ಈ ಒಂದು ವ್ಯವಸ್ಥೆ ವೈದ್ಯಕೀಯ ಕೋರ್ಸಿನಲ್ಲಿ ಪ್ರವೇಶ ಪಡೆಯಲಿಚ್ಚಿಸುವ ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಸೀಮಿತವಾಗಿದ್ದು ಜೊತೆಗೆ ಪ್ರತಿ ಕಾಲೇಜಿನಲ್ಲಿ ಮೆರಿಟ್ ಆಧಾರಿತ ಸೀಟುಗಳ ಸಂಖ್ಯೆ ಪ್ರತಿಶತ ೪೦ ರಷ್ಟು ಮಾತ್ರವಿರುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇಂಥದ್ದೊಂದು ಮೀಸಲಾತಿ ಸೌಲಭ್ಯ ರಾಜ್ಯದ ಬೇರೆ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ. ಈ ಸಮಸ್ಯೆಯನ್ನು ನಾನು ಉದಾಹರಣೆಯೊಂದಿಗೆ ಹೀಗೆ ವಿವರಿಸುತ್ತೇನೆ, ವಿಜಯಪುರದ ಮೋಹನ ಮತ್ತು ಕಲಬುರಗಿಯ ಶ್ರೀನಿವಾಸ ಇವರಿಬ್ಬರೂ ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳಾಗಿದ್ದು ಈ ವರ್ಷದ ಸಿ ಇ ಟಿ ಪ್ರವೇಶ ಪರೀಕ್ಷೆಯಲ್ಲಿ ಅನುಕ್ರಮವಾಗಿ ೧೯೧೦ ಮತ್ತು ೫೬೦೦ Rank ನೊಂದಿಗೆ ತೇರ್ಗಡೆಯಾಗಿರುವರು. ವಿಜಯಪುರದ ಮೋಹನ ೧೯೧೦ Rank ನೊಂದಿಗೆ ತೇರ್ಗಡೆಯಾಗಿದ್ದರೂ ಅವನು ವೈದ್ಯಕೀಯ ಕಾಲೇಜಿನಲ್ಲಿ ತನ್ನ ಫಲಿತಾಂಶದಡಿ ಪ್ರವೇಶ ಪಡೆಯಲು ವಿಫಲನಾದ. ಆದರೆ ೫೬೦೦ Rank ನೊಂದಿಗೆ ತೇರ್ಗಡೆಯಾದ ಕಲಬುರಗಿಯ ಶ್ರೀನಿವಾಸ ಹೈದರಾಬಾದ ಕರ್ನಾಟಕದ ಮೀಸಲಾತಿಯಡಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ. ಅಚ್ಚರಿಯ ಸಂಗತಿ ಎಂದರೆ ಶ್ರೀನಿವಾಸ ಓದಿದ್ದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ. ಹೀಗಿದ್ದೂ ಅವನ ಪಾಲಕರು ಕಲಬುರಗಿ ಜಿಲ್ಲೆಯ ನಿವಾಸಿಗಳೆಂಬ ಕಾರಣಕ್ಕೆ ಅವನಿಗೆ ಪ್ರವೇಶ ದೊರೆಯುವಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ವಿಜಯಪುರ ಜಿಲ್ಲೆ ಸಹ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು ಆದರೆ ಮೋಹನನಿಗೆ ಅಂಥ ಯಾವ ಮೀಸಲಾತಿ ಸೌಲಭ್ಯ ದೊರೆಯದೆ ಇರುವುದರಿಂದ ಸಹಜವಾಗಿಯೇ ಆತ ವೈದ್ಯಕೀಯ ಕೋರ್ಸಿನ ಪ್ರವೇಶದಿಂದ ವಂಚಿತನಾದ. ಇದು ಒಬ್ಬ ಮೋಹನನ ಕಥೆಯಲ್ಲ. ಇಂಥ ಸಾವಿರಾರು ವಿದ್ಯಾರ್ಥಿಗಳು ಸರ್ಕಾರ ಕೊಡಮಾಡುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಸಮಸ್ಯೆಗಳನ್ನೆದುರಿಸುತ್ತಿರುವರು. ಹೀಗೆ ಹೈದರಾಬಾದ ಕರ್ನಾಟಕಕ್ಕೆ ಸೇರಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕೊಡುವಾಗ ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಆರ್ಥಿಕವಾಗಿ ದುರ್ಬಲರಾದವರಿಗೆ ಸೌಲಭ್ಯ ನೀಡಿದ್ದಲ್ಲಿ ಇಂಥದ್ದೊಂದು ಪ್ರಯತ್ನವನ್ನು ಎಲ್ಲರೂ ಸ್ವಾಗತಿಸುತ್ತಿದ್ದರು. ಆದರೆ ಸೌಲಭ್ಯಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಾಗ ಸಹಜವಾಗಿಯೇ ವಂಚಿತರಾದ ವಿದ್ಯಾರ್ಥಿಗಳು ಅಂಥ ಸೌಲಭ್ಯಗಳನ್ನು ವಿರೋಧಿಸುತ್ತಾರೆ.

ಕೊನೆಯ ಮಾತು 


                 ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ವೇಳೆ ನನ್ನನ್ನು ತೀರ ಕಾಡಿದ ಸಂಗತಿ ಎಂದರೆ ಪರೀಕ್ಷಾ ಫಲಿತಾಂಶಕ್ಕಿಂತ ಮೊದಲು ಸಾವನ್ನಪ್ಪಿದ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದ ತುಮಕೂರು ಮೂಲದ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದದ್ದು. ಬದುಕಿದ್ದರೆ ವೃತ್ತಿಪರ ಕೋರ್ಸಿಗೆ ಇಲ್ಲವೇ ತನ್ನ ಇಷ್ಟದ ಕೋರ್ಸಿಗೆ ಪ್ರವೇಶ ಪಡೆದು ತನ್ನ ಬದುಕು ಮತ್ತು ಭವಿಷ್ಯವನ್ನು ಆಕೆ ಉತ್ತಮವಾಗಿ ರೂಪಿಸಿಕೊಳ್ಳುತ್ತಿದ್ದಳು. ಆದರೆ ಕ್ರೂರ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಈ ಘಟನೆಯ ನಂತರ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಮತ್ತು ಕಾಲೇಜುಗಳ ವಸತಿ ನಿಲಯದಲ್ಲಿಡಲು ಯೋಚಿಸುವಂತಾಗಿದೆ. ಒಂದೆಡೆ ಶಿಕ್ಷಣದ ಕುರಿತಾದ ಸರ್ಕಾರದ ಬದಲಾಗುತ್ತಿರುವ ನೀತಿ ನಿಯಮಗಳು. ಇನ್ನೊಂದೆಡೆ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಒಟ್ಟಾರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಜಲು ಮತ್ತು ಗೊಂದಲಗಳು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಚಿಂತೆಗೀಡುಮಾಡುತ್ತಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ