Thursday, February 3, 2022

ಬಿತ್ತಿದಂತಲ್ಲದೆ ಬೆಳೆ ಇನ್ನೇನಾಗಬೇಕು?

 


(೭.೧೨.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

       ‘ನಮ್ಮಪ್ಪಗ ನಾವು ಆರು ಮಕ್ಕಳು. ಸಣ್ಣವರಿದ್ದಾಗ ಒಂದು ದಿವಸರೆ ನಮ್ಮಪ್ಪ ನಮ್ಮನ್ನು ಎತ್ತಿಕೊಂಡು ಆಡಿಸಿದ್ದು ನೆನಪಿಲ್ಲ. ತಪ್ಪು ಮಾಡಿದರ ದನಕ್ಕ ಬಡಿದಂಗ ಬಡಿತಿದ್ದ. ನಾವು ಏನು ಓದ್ಲಿಕತ್ತಿವಿ ಅಂತ ವಿಚಾರಿಸಿದವನೇ ಅಲ್ಲ. ಕೂಡು ಕುಟುಂಬ ಇರೊದರಿಂದ ಎಲ್ಲಾ ಜವಾಬ್ದಾರಿ ನಮ್ಮ ದೊಡ್ಡಪ್ಪಂದೆ ಆಗಿತ್ತು. ನಮಗೂ ನಮ್ಮಪ್ಪ ನಮ್ಮನ್ನ ವಿಚಾರಿಸ್ತಿಲ್ಲ ಅನ್ನೊದು ಮನಸ್ಸಿಗಿ ಅಂಥ ಹಳಹಳಕಿ ಸಂಗತಿ ಆಗಿರಲಿಲ್ಲ. ಆದರ ಮುಪ್ಪಿನ ಕಾಲಕ್ಕ ಅಪ್ಪಗ ಬ್ಯಾನಿ ಬ್ಯಾಸರಕಿ ಬಂದರ ಕರಳ ಕಿವುಚಿದಂಗ ಆಗ್ತಿತ್ತು. ಹಿರಿಜೀವ ಆರಾಮಾಗಿರಲಿ ಅಂತ ಮನಸ ಬಯಿಸ್ತಿತ್ತು. ಅದೇ ನನ್ನ ಮಗನ ವಿಷಯಕ್ಕ ಬಂದರ ಇದ್ದೊಬ್ಬ ಮಗ ಅಂತ ಅಂಗೈದಾಗ ಇಟಗೊಂಡು ಬೆಳೆಸೀನಿ. ಒಂದು ದಿವಸ ಕೂಡ ಸಿಟ್ಟಿನಿಂದ ಗದರಿಸಿಲ್ಲ. ನಡೆದರ ಕಾಲು ನೋವಾಗ್ತಾವಂತ ಸ್ಕೂಲ್‍ತನಕ ಎತಕೊಂಡು ಹೋಗೀನಿ. ರೆಕ್ಕಿ ಬಲಿತ ಮ್ಯಾಗ ಈಗ ಅಮೆರಿಕಾಕ ಹೋಗಿ ಕೂತಾನ. ವಿಡಿಯೋ ಕಾಲ್ ಮಾಡದಾಗಷ್ಟೇ ನೋಡಿ ಖುಷಿ ಪಡಬೇಕು. ಆ ಚೋಟುದ್ದ ಮೊಮ್ಮಗ ಈ ಆಯಿ ಮುತ್ತ್ಯಾಗ ಹಾಯ್ ಗಾಯ್ಸ್ ಅಂತ ಕರೀತದ. ಕಾಲನ ಪ್ರವಾಹದಾಗ ಕುಟುಂಬ ಪ್ರೀತಿ, ವಾತ್ಸಲ್ಯ ಅನ್ನೋವು ಕೊಚ್ಚಿ ಹೋಗ್ಯಾವ’ ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ಮಿತ್ರರೊಬ್ಬರು ತಮ್ಮ ಅಳಲು ತೋಡಿಕೊಂಡರು.

ನ್ಯೂಕಿಯರ್ ಕುಟುಂಬಗಳ ಸಂಖ್ಯೆ ವೃದ್ಧಿಸುತ್ತಿರುವ ಈ ಕಾಲದಲ್ಲಿ ಕುಟುಂಬ ಪ್ರೇಮ ಎನ್ನುವುದು ಕಥೆ, ಕಾದಂಬರಿಗಳಲ್ಲಿನ ಶಬ್ದವಾಗಿಯೂ ಸಿನಿಮಾ ಪರದೆಯ ಮೇಲಿನ ದೃಶ್ಯವಾಗಿಯೂ ಗೋಚರಿಸುತ್ತಿದೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳಲ್ಲಿ ಮನೆಯ ಒಂದೇ ಸೂರಿನಡಿ ಹಲವು ಸಂಬಂಧಗಳು ಅನ್ಯೋನ್ಯತೆಯಿಂದ ಬಾಳುತ್ತಿದ್ದವು. ಅಜ್ಜ, ಅಜ್ಜಿ, ಅಪ್ಪ, ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಅಣ್ಣ, ತಂಗಿ ಹೀಗೆ ಹತ್ತು ಹಲವು ಸಂಬಂಧಗಳ ಪರಿಚಯ ಪ್ರತಿ ಕುಟುಂಬದಲ್ಲಿನ ಮಗುವಿಗಾಗುತ್ತಿತ್ತು. ಮಗು ತನ್ನ ದಿನನಿತ್ಯದ ಅಗತ್ಯಗಳಿಗಾಗಿ ಅಪ್ಪ ಅಮ್ಮನನ್ನೇ ಆಶ್ರಯಿಸಬೇಕಾಗುತ್ತಿರಲಿಲ್ಲ. ಯಾರದೋ ಮಗು ಇನ್ನಾರದೋ ಕಂಕುಳಲ್ಲಿ ಕುಳಿತು ಊಟ ಮಾಡುತ್ತಿತ್ತು, ಬೇರೆ ಯಾರದೋ ತೊಡೆಯ ಮೇಲೆ ನಿದ್ರಿಸುತ್ತಿತ್ತು, ಅಜ್ಜಿಯ ಮಗ್ಗುಲಲ್ಲಿ ಮಲಗಿ ಕಥೆ ಕೇಳುತ್ತಿತ್ತು, ಸೋದರ ಸಂಬಂಧಿಗಳ ಜೊತೆ ಆಡಿ ನಲಿಯುತ್ತಿತ್ತು. ಇಂಥ ಕೂಡುಕುಟುಂಬಗಳಲ್ಲಿ ಮಕ್ಕಳಿಗೆ ಪ್ರೀತಿ, ವಾತ್ಸಲ್ಯದ ಜೊತೆಗೆ ಸುರಕ್ಷತೆಯ ಭರವಸೆ ಅಗಣಿತವಾಗಿ ಸಿಗುತ್ತಿತ್ತು.

ಕಾಲಕ್ರಮೇಣ ಕುಟುಂಬ ಘಟಕ ಒಡೆದು ನ್ಯೂಕ್ಲಿಯರ್ ಕುಟುಂಬಗಳು ಅಸ್ತಿತ್ವಕ್ಕೆ ಬಂದು ಈಗ ಮಕ್ಕಳಿಗೆ ಅಪ್ಪ ಅಮ್ಮನನ್ನು ಹೊರತುಪಡಿಸಿ ಕುಟುಂಬದ ಉಳಿದ ಸದಸ್ಯರ ಪ್ರೀತಿ, ವಾತ್ಸಲ್ಯ ಎನ್ನುವುದು ಮರೀಚಿಕೆಯಾಗಿದೆ. ಅದೆಷ್ಟೋ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಇನ್ನೂ ಅಂಬೆಗಾಲಿಕ್ಕುವ ವಯಸ್ಸಿನಲ್ಲೇ ಮಕ್ಕಳ ಹೊಣೆ ಮನೆಯಲ್ಲಿ ಕೆಲಸ ಮಾಡುವ ಆಯಾಗಳಿಗೋ ಇಲ್ಲವೇ ಈ ಕೆಲಸಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಪಾಲನಾ ಕೇಂದ್ರಗಳಿಗೋ ವರ್ಗಾವಣೆಗೊಳ್ಳುತ್ತದೆ. ತಮ್ಮ ಬಾಲ್ಯ ಜೀವನದ ಅತಿ ಮಹತ್ವದ ಸಮಯವನ್ನು ಬೇರೆಯವರ ಆಶ್ರಯದಲ್ಲಿ ಕಳೆಯುವ ಮಕ್ಕಳಲ್ಲಿ ಅನಾಥ ಪ್ರಜ್ಞೆ ಬೆಳೆಯುತ್ತಿದೆ. ಇಂಥ ಮಕ್ಕಳಿಗೆ ಒಂದು ಕುಟುಂಬ ವ್ಯವಸ್ಥೆಯಲ್ಲಿನ ವಿವಿಧ ಸಂಬಂಧಗಳ ಅರಿವೇ ಇರುವುದಿಲ್ಲ. ಅದಕ್ಕೆಂದೆ ಇವತ್ತಿನ ಮಕ್ಕಳಿಗೆ ಎಲ್ಲ ಸಂಬಂಧಗಳೂ ಅಂಕಲ್ ಆಂಟಿಗಳೆ.

ಹಿಂದೆಲ್ಲ ಅಮ್ಮಂದಿರು ಆಕಾಶದಲ್ಲಿನ ಹೊಳೆಯುವ ಚಂದ್ರ, ಮಿನುಗುತ್ತಿರುವ ನಕ್ಷತ್ರಗಳು, ಗಿಡ, ಮರ, ಬಳ್ಳಿ, ಹೂವುಗಳನ್ನು ತೋರಿಸಿ ಮಕ್ಕಳಿಗೆ ಉಣಿಸುತ್ತಿದ್ದರು. ನನ್ನ ವಯೋಮಾನದವರು ಅಮ್ಮನ ಕಂಕುಳಲ್ಲಿ ಕುಳಿತು ಚಂದ್ರ, ನಕ್ಷತ್ರಗಳನ್ನು ನೋಡುತ್ತ ಕೈತುತ್ತು ತಿಂದು ಬಾಲ್ಯವನ್ನು ಕಳೆದವರು. ಆದರೆ ಈಗಿನ ಮಕ್ಕಳಿಗೆ ಆ ಸೌಭಾಗ್ಯವಿಲ್ಲ. ಇಂದಿನ ಮಮ್ಮಿಗಳು ಲ್ಯಾಪ್‍ಟಾಪ್ ಎದುರಿಟ್ಟು ಕಾರ್ಟೂನ್ ತೋರಿಸಿ ಮುಳ್ಳುಚಮಚದಿಂದ ಜಂಕ್ ಫುಡ್ ತಿನ್ನಿಸುವ ಕಾಲವಿದು. ಮಗು ತನ್ನೆದುರಿರುವ ಲ್ಯಾಪ್‍ಟಾಪನ್ನೆ ಸರ್ವಸ್ವ ಎಂದು ಭಾವಿಸಿ ರಕ್ತಸಂಬಂಧಗಳ ಪ್ರೀತಿ ವಾತ್ಸಲ್ಯದಿಂದ ದೂರಾಗುತ್ತಿದೆ. 

ಭವಿಷ್ಯವನ್ನು ರೂಪಿಸುವ ಹುನ್ನಾರದಲ್ಲಿ ಪಾಲಕರು ಮಕ್ಕಳ ಸಹಜ ಬಾಲ್ಯ ಜೀವನವನ್ನೇ ಹೊಸಕಿಹಾಕುತ್ತಿರುವರು. ಸಹಜ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಿಂತ ಪಾಲಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ನೆರವಾಗುವ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವರು. ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ಎರಡನೇ ವಯಸ್ಸಿನಿಂದಲೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಮೆಟ್ರೊಪಾಲಿಟನ್ ನಗರಗಳಲ್ಲಿ ಮಗು ತಾಯಿಯ ಗರ್ಭದಲ್ಲಿರುವಾಗಲೇ ಶಾಲೆಗೆ ಪ್ರವೇಶ ದೊರಕಿಸುವ ವ್ಯವಸ್ಥೆ ಇದೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಐಎಎಸ್, ಐಪಿಎಸ್‍ಗಳನ್ನಾಗಿಸಬೇಕೆನ್ನುವ ಧಾವಂತಕ್ಕೆ ಕಟ್ಟು ಬೀಳುವ ಪಾಲಕರು ಮಗುವಿನ ಶಿಶುವಿಹಾರದ ಅನೌಪಚಾರಿಕ ಶಿಕ್ಷಣದಿಂದಲೇ ತಮ್ಮ ಪ್ರಯತ್ನ ಆರಂಭಿಸುವರು. ಪಾಲಕರ ವಾಂಛೆಯ ಪರಿಣಾಮ ಮಗು ಸ್ಪರ್ಧಾತ್ಮಕ ಜಗತ್ತಿಗೆ ಇಷ್ಟವಿರಲಿ, ಇಲ್ಲದಿರಲಿ ತನ್ನನ್ನು ಒಡ್ಡಿಕೊಳ್ಳಲೇ ಬೇಕು. ಶಾಲೆ, ಮನೆಪಾಠದ ಬಿಡುವಿರದ ಚಟುವಟಿಕೆಗಳ ನಡುವೆ ಮಕ್ಕಳು ತಮ್ಮ ಸಹಜ ಬಾಲ್ಯ ಜೀವನದಿಂದ ವಂಚಿತರಾಗುತ್ತಿರುವರು. ದೊರೆಯುವ ಅಲ್ಪವಿರಾಮದ ವೇಳೆ ಕೂಡ ನೃತ್ಯ, ಸಂಗೀತ, ಅಬ್ಯಾಕಸ್‍ದಂಥ ತರಬೇತಿಗಳಿಗೆ ವಿನಿಯೋಗವಾಗುತ್ತಿದೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಪಾಲಕರು ಮಕ್ಕಳನ್ನು ವಸತಿ ಶಾಲೆಗಳಿಗೆ ದಾಖಲಿಸಿ ಓದಿಸುವರು. ಈ ವ್ಯವಸ್ಥೆಯಲ್ಲಿ ಮಕ್ಕಳು ವರ್ಷಪೂರ್ತಿ ಕುಟುಂಬ ವಾತಾವರಣದಿಂದ ದೂರವಿರಬೇಕಾದ ಅನಿವಾರ್ಯತೆ. ಪರಿಣಾಮವಾಗಿ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯದ ಭಾವನೆಗಳು ಬರಡಾಗುತ್ತಿವೆ.

ನನ್ನ ಹಿರಿಯ ಮಿತ್ರರ ಮಗ ಭಾರತಕ್ಕೆ ಬಂದಿದ್ದ ಸಂದರ್ಭ ಭೇಟಿಯಾಗುವ ಪ್ರಸಂಗ ಎದುರಾಯಿತು. ಅವನು ಮಾತಿನ ನಡುವೆ ಹೇಳಿದ್ದು ಹೀಗೆ ‘ಹಳ್ಳಿಯಲ್ಲಿ ಎಲ್ಲ ಸೌಕರ್ಯವಿರುವ ಮನೆ ಕಟ್ಟಿಸಿದ್ದೀನಿ. ಕೆಲಸಕ್ಕೆ ಆಳುಗಳಿವೆ. ಕಾಲಕಾಲಕ್ಕೆ ಹಣ ಕಳಿಸ್ತೀನಿ. ಓಡಾಡೊಕೆ ಕಾರಿದೆ. ಅಮೆರಿಕಾದಿಂದಲೇ ಕಾಲ್ ಮಾಡಿ ಡಾಕ್ಟರ್‍ನ ಮನೆಗೆ ಕರೆಯಿಸಿ ಚಿಕಿತ್ಸೆ ಕೊಡಿಸ್ತೀನಿ. ಇನ್ನೇನು ಬೇಕು ಇವರಿಗೆ ಬದುಕೊಕೆ?’. ಇದು ಇವತ್ತಿನ ಮಕ್ಕಳ ಮನಸ್ಥಿತಿ. ಹಣವೇ ಪ್ರಧಾನ ಎಂದು ಭಾವಿಸಿದವರಿಗೆ ಬದುಕಲು ಹಣಕ್ಕಿಂತ ಪ್ರೀತಿ ವಾತ್ಸಲ್ಯದ ಅಗತ್ಯವಿದೆ ಎಂದು ತಿಳಿಸಿ ಹೇಳುವುದಾದರೂ ಹೇಗೆ? ಹಾಗೆ ಹೇಳುವ ನೈತಿಕ ಸ್ಥೈರ್ಯವನ್ನೆ ಪಾಲಕರು ಕಳೆದುಕೊಂಡಿರುವಾಗ ಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು. ಸ್ಪರ್ಧಾತ್ಮಕ ಯುಗದಲ್ಲಿ ನಾವು ಮಕ್ಕಳನ್ನು ಬಿತ್ತುತ್ತಿದ್ದೇವೆ. ಸ್ಪರ್ಧಾತ್ಮಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ರಸಗೊಬ್ಬರಗಳನ್ನು ಬಿತ್ತಿದ ಬೆಳೆಗೆ ಉಣಿಸುತ್ತಿದ್ದೇವೆ. ಬಿತ್ತಿದಂತೆ ಬೆಳೆ ಎನ್ನುವುದು ನಿಸರ್ಗದ ಸಹಜ ಧರ್ಮವೇ ಆಗಿರುವಾಗ ಇನ್ನು ಮಕ್ಕಳು ಯಂತ್ರಗಳಂತಾಗದೆ ಇನ್ನೇನಾಗಬೇಕು?  

-ರಾಜಕುಮಾರ ಕುಲಕರ್ಣಿ