Saturday, February 3, 2018

'ಭಾವ ಭಿತ್ತಿ' ಪುಸ್ತಕ ಬಿಡುಗಡೆ

(ದಿನಾಂಕ ೦೨.೦೨.೨೦೧೮ ರಂದು ಕಲಬುರಗಿಯಲ್ಲಿ ನನ್ನ 'ಭಾವ ಭಿತ್ತಿ' ಪುಸ್ತಕ ಬಿಡುಗಡೆಯಾಯಿತು.)



ಸಾಹಿತ್ಯವೆನ್ನುವುದು ಮನುಷ್ಯತ್ವವನ್ನು ಅರಳಿಸುವ ಒಂದು ಸೃಜನಶೀಲ ಸೃಷ್ಟಿ. ಓದು ಮತ್ತು ಬರವಣಿಗೆಯ ಮೂಲಕ ನಾನು ಬೇರೆಯವರಿಗೆ ಏನನ್ನು ಹೇಳುತ್ತಿದ್ದೇನೆ ಎನ್ನುವುದಕ್ಕಿಂತ ಈ ಒಂದು ಸೃಜನಶೀಲ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ನಾನು ಏನನ್ನು ಪಡೆಯುತ್ತಿರುವೆ ಎನ್ನುವ ಪ್ರಶ್ನೆ ನನ್ನಲ್ಲಿ ಸದಾಕಾಲ ಜಾಗೃತವಾಗಿರುತ್ತದೆ.


ನಾನೇಕೆ ಓದುತ್ತೇನೆ ಮತ್ತು ಬರೆಯುತ್ತೇನೆ ಎನ್ನುವ ಪ್ರಶ್ನೆಗಳಿಗೆ ನಾನು ಅನೇಕ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಮನುಷ್ಯನಾಗಲು, ಸೃಜನಶೀಲನಾಗಲು, ಭಾವ ಪರಿಶುದ್ಧತೆಗಾಗಿ, ಜೀವನಾನುಭವವನ್ನು ಹಿಗ್ಗಿಸಿಕೊಳ್ಳಲು, ಮನಸ್ಸು ಮತ್ತು ಬುದ್ಧಿಯನ್ನು ಮಾಗಿಸಿಕೊಳ್ಳಲು ಹೀಗೆ ನಾನು ಸಾಹಿತ್ಯದಂಥ ಸೃಜನಶೀಲ ಸೃಷ್ಟಿಯ ಭಾಗವಾಗಲು ಅನೇಕ ಕಾರಣಗಳಿವೆ. ಓದು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡ ಆ ಘಳಿಗೆ ಸೃಷ್ಟಿಯಾಗುವ ಏಕಾಂತ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವ ಪರಿಸರವನ್ನು ನಿರ್ಮಿಸಿ ಕೊಡುತ್ತದೆ. ಮನುಷ್ಯ ಹೀಗೆ ಏಕಾಂತದಲ್ಲಿದ್ದ ಘಳಿಗೆಯಲ್ಲೇ ತನಗೆ ಮಾತ್ರವಾದರೂ ಸತ್ಯವನ್ನು ಹೇಳಿಕೊಳ್ಳುವ ಸಾಮರ್ಥ್ಯ ದಕ್ಕಿಸಿಕೊಂಡಲ್ಲಿ ನಾವು ಮನುಷ್ಯರಾದಂತೆ ಎಂದು ಚಿಂತಕರೊಬ್ಬರು ನುಡಿಯುತ್ತಾರೆ. ಮತ್ತೆ ಮತ್ತೆ ಭಾವಪರಿಶುದ್ಧತೆಯನ್ನು ಸಾಧಿಸಿ ಮನುಷ್ಯನಾಗಲು ನಾನು ಅತ್ಯಂತ ಪ್ರೀತಿಯಿಂದಲೇ ಈ ಓದು ಮತ್ತು ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ.


ಈ ಕೃತಿಯಲ್ಲಿನ ಲೇಖನಗಳಲ್ಲಿ ಕೆಲವು ‘ಸಮಾಚಾರ’ ಪತ್ರಿಕೆಯಲ್ಲಿ ಇನ್ನು ಕೆಲವು ‘ಮನದ ಮಾತು’, ‘ನಿಲುಮೆ’ ಬ್ಲಾಗುಗಳಲ್ಲಿ ಮತ್ತು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಈ ಎಲ್ಲ ಲೇಖನಗಳನ್ನು ಸಂಕಲಿಸಿ ‘ಭಾವಭಿತ್ತಿ’ ಎಂದು ಹೆಸರಿಟ್ಟು ಸಿದ್ಧಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೆಕ್ ಅವರಿಗೆ ತಲುಪಿಸಿದಾಗ ಅವರು ಅತ್ಯಾಕರ್ಷಕ ಮುಖಪುಟದೊಂದಿಗೆ ಸುಂದರವಾಗಿ ಪ್ರಕಟಿಸಿ ಹೊರತಂದಿರುವರು. 

ನನ್ನ ಬರವಣಿಗೆಯನ್ನು ಓದಿ ಮೆಚ್ಚುಗೆಯ ಮಾತನಾಡುವ ಜೊತೆಗೆ ವಿಮರ್ಶಿಸುವ ಅನೇಕ ಹಿರಿಯರು ಮತ್ತು ಗೆಳೆಯರು ನಾನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸದಾ ಕಾಲ ಪ್ರೇರಣೆಯಾಗಿರುವರು. ನನ್ನ ‘ಭಾವಭಿತ್ತಿ’ ಕೃತಿ ಅಕ್ಷರಲೋಕದೊಳಗೆ ಅಡಿಯಿಡುವ ವೇಳೆ ನೆರವಿಗೆ ಬಂದವರು ಅನೇಕರು. ಪುಸ್ತಕ ಪರಿಶೀಲನಾ ಸಮಿತಿಯ ಸದಸ್ಯರು, ಮುಖಪುಟ ವಿನ್ಯಾಸಕಾರರು ಮತ್ತು ಮುದ್ರಣಾಲಯದವರು.


ಈ ಎಲ್ಲರನ್ನು ನಾನು ಈ ಸಂದರ್ಭ ಅತ್ಯಂತ ವಿನಮೃನಾಗಿ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಜೊತೆಗೆ ಓದುಗರನ್ನು ಕೂಡ ಈ ಸಂದರ್ಭ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ