Tuesday, October 4, 2016

ಓದುಗ ಮತ್ತು ಗ್ರಂಥಾಲಯಗಳ ಅಸ್ತಿತ್ವ





             
ಇದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ನಾನಾಗ ಕಲಬುರಗಿಯ ಪದವಿ ಮಾಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಘಳಿಗೆಯದು. ವಿದ್ಯಾರ್ಥಿಗಳಿಗೆ ಆಕ್ಸಫರ್ಡ್ ಇಂಗ್ಲಿಷ್ ನಿಘಂಟು ಕುರಿತು ಪಾಠ ಮಾಡಬೇಕಿತ್ತು. ಆ ಸಂದರ್ಭ ಆಕ್ಸಫರ್ಡ್ ಇಂಗ್ಲಿಷ್ ನಿಘಂಟುವಿನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಆ ನಿಘಂಟುವಿನ ಸಂಪಾದಕ ಜೇಮ್ಸ್ ಮರ್ರೆ ಕುರಿತು ವಿದ್ಯಾರ್ಥಿಗಳಿಗೆ ಹೇಳದೆ ಹೋದರೆ ಮಾಡಿದ ಪಾಠ ಅಪೂರ್ಣವಾದಂತೆ ಎನ್ನುವ ವಿಚಾರ ನನ್ನನ್ನು ಕಾಡತೊಡಗಿತು. ಬೃಹತ್ ಗಾತ್ರದ ಆಕ್ಸಫರ್ಡ್ ಇಂಗ್ಲಿಷ್ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕನಾದ ಜೇಮ್ಸ್ ಮರ್ರೆ ಕುರಿತು ಮಾಹಿತಿ ಇರಲಿಲ್ಲ. ಕೊನೆಗೆ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ ವಿವಿಧ ವಿಶ್ವಕೋಶಗಳನ್ನು ತಡಕಾಡಿ ಒಂದರ್ಧ ಪುಟದಷ್ಟು ಜೇಮ್ಸ್ ಮರ್ರೆ ಬಗೆಗಿನ ಮಾಹಿತಿಯನ್ನು ಕಲೆಹಾಕುವಲ್ಲಿ ನಾನು ಯಶಸ್ವಿಯಾದೆ. ಈ ಹದಿನೈದು ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸಿದಂತೆ ಅದು ಮಾಹಿತಿ ವಿಜ್ಞಾನ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತಂತ್ರಜ್ಞಾನದ ಪರಿಣಾಮ ಇವತ್ತು ಹಿಂದಿನಂತೆ ಪುಸ್ತಕಗಳನ್ನೋ, ವಿಶ್ವಕೋಶಗಳನ್ನೋ ನೆಚ್ಚಿ ಕೂಡಬೇಕಾದ ಅನಿವಾರ್ಯತೆ ಓದುಗರಿಗಿಲ್ಲ. ಇಂಟರ್‍ನೆಟ್ ಅವಿಷ್ಕಾರದ ಪರಿಣಾಮ ರಾಶಿ ರಾಶಿ ಮಾಹಿತಿಯನ್ನು ಇವತ್ತು ನಾವು ಕುಳಿತ ಸ್ಥಳದಲ್ಲೇ ನಮ್ಮ ಎದುರಿಗಿರುವ ಕಂಪ್ಯೂಟರ್‍ನ ಮೂಲಕ ಪಡೆಯಬಹುದಾಗಿದೆ. ಕಂಪ್ಯೂಟರ್‍ನ ಕೀ ಬೋರ್ಡ್ ಮೇಲೆ ಜೇಮ್ಸ್ ಮರ್ರೆ ಎಂದು ಟೈಪಿಸಿದರೆ ಸಾಕು ಕ್ಷಣಾರ್ಧದಲ್ಲಿ ಹತ್ತು ಹದಿನೈದು ಪುಟಗಳಷ್ಟು ಮಾಹಿತಿ ನಮ್ಮೆದುರಿನ ಪರದೆಯ ಮೇಲೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹದಿನೈದು ವರ್ಷಗಳ ಹಿಂದಿದ್ದಂತೆ ಅರ್ಧ ಪುಟದಷ್ಟು ಮಾಹಿತಿಗಾಗಿ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಬೇಕಾದ ಅನಿವಾರ್ಯತೆಯಾಗಲಿ ಅಗತ್ಯವಾಗಲಿ ಇವತ್ತಿನ ಓದುಗರಿಗಿಲ್ಲ. ಆದರೆ ಮಾಹಿತಿಯನ್ನು ದಕ್ಕಿಸಿಕೊಳ್ಳುವ ಭರಾಟೆಯಲ್ಲಿ ಓದುಗ ಒಂದಿಷ್ಟು ಹಾನಿಗೆ ಒಳಗಾಗುತ್ತಿರುವನು ಎನ್ನುವುದು ನನ್ನ ಅನುಭವದ ಮಾತು. ಈ ಹಿಂದೆ ಜೇಮ್ಸ್ ಮರ್ರೆ ಕುರಿತು ಕೇವಲ ಅರ್ಧಪುಟದಷ್ಟು ಮಾತ್ರ ಮಾಹಿತಿಯನ್ನು ವಿಶ್ವಕೋಶಗಳಿಂದ ಹೆಕ್ಕಿ ತೆಗೆಯುವಲ್ಲಿ ಸಫಲನಾದ ನನಗೆ ಹೀಗೆ ವಿಷಯಕ್ಕಾಗಿ ವಿವಿಧ ಗ್ರಂಥಗಳ ಮೇಲೆ ಕಣ್ಣಾಡಿಸುವಾಗ ಕೆಲವೊಂದಿಷ್ಟು ಬೇರೆ ಬೇರೆ ಮಾಹಿತಿಯನ್ನು ನನ್ನದಾಗಿಸಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಇವತ್ತು ಹಲವಾರು ಪುಟಗಳಲ್ಲಿ ಮಾಹಿತಿಯು ಯಾವ ತೊಂದರೆಯಿಲ್ಲದೆ ಮತ್ತು ಕಾಲವ್ಯಯವಿಲ್ಲದೆ ದೊರೆಯುತ್ತಿರುವುದರಿಂದ ಓದುಗ ಬೇರೆ ವಿಷಯಗಳ ಓದಿನಿಂದ ವಂಚಿತನಾಗುತ್ತಿರುವನು ಎನ್ನುವ ಅಭಿಪ್ರಾಯ ನನ್ನದು. 

           ನನ್ನ ಅನುಭವದ ಮಾತು ಒಂದಿಷ್ಟು ಹೆಚ್ಚಾಯಿತೇನೋ ಎಂದೆನಿಸುತ್ತಿದೆ ಇರಲಿ. ಮಾಹಿತಿ ತಂತ್ರಜ್ಞಾನದ ಈ ಸುವರ್ಣ ಯುಗದಲ್ಲಿ ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿರುವವರು ಯಾರು ಎನ್ನುವ ಪ್ರಶ್ನೆ ಅನೇಕ ದಿಕ್ಕುಗಳಿಂದ ಮಾರ್ಧನಿಸುತ್ತಿದೆ. ಸಾಮಾನ್ಯವಾಗಿ ಈ ಪ್ರಶ್ನೆಗೆ ಗ್ರಂಥಾಲಯಗಳು ನಿಜವಾದ ಅರ್ಥದಲ್ಲಿ ಸಂಕಷ್ಟಕ್ಕೆ ಸಿಲುಕಿವೆ ಎನ್ನುವುದು ಅದೊಂದು ಸಿದ್ಧ ಉತ್ತರವಾಗಿ ನಮ್ಮೆದುರು ಬೃಹದಾಕಾರವಾಗಿ ಬೆಳೆದು ನಿಂತಿದೆ. ಒಂದೆಡೆ ಮಾಹಿತಿ ತಂತ್ರಜ್ಞಾನ ಅಗಾಧ ಪ್ರಮಾಣದ ಮಾಹಿತಿಯನ್ನು ಉತ್ಪಾದಿಸಲು ನೆರವಾಗುತ್ತಿರುವ ಸಂದರ್ಭದಲ್ಲೇ ಇನ್ನೊಂದೆಡೆ ಗ್ರಂಥಾಲಯಗಳಲ್ಲಿ ಓದುಗರ ಕೊರತೆ ಎದುರಾಗಿದೆ ಎನ್ನುವುದನ್ನು ಚರ್ಚಿಸುವ ವಿಲಕ್ಷಣ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಓದುಗರು ಗ್ರಂಥಾಲಯಗಳಿಗೆ ಏಕೆ ಭೇಟಿ ನೀಡುತ್ತಿಲ್ಲ ಎನ್ನುವ ಸಮಸ್ಯೆಯ ಮೂಲವನ್ನು ಹುಡುಕಿ ಹೊರಟರೆ ನಮಗೆ ಈ ಮಾಹಿತಿ ತಂತ್ರಜ್ಞಾನದ ಅಗಾಧ ಮತ್ತು ಅಪರಿಮಿತ ಬೆಳವಣಿಗೆ ಎದುರಾಗುತ್ತದೆ. ಇವತ್ತು ಮಾಹಿತಿಯ ಉತ್ಪಾದನೆ ಅಧಿಕಗೊಳ್ಳುತ್ತಿರುವುದರ ಜೊತೆಗೆ ತಂತ್ರಜ್ಞಾನವು ಓದುಗರಿಗೆ ಮಾಹಿತಿಯು ಸುಲಭವಾಗಿ ದೊರೆಯುವ ಅನೇಕ ಸಾಧ್ಯತೆಗಳನ್ನು ಅವಿಷ್ಕಾರಗೊಳಿಸಿದೆ. ಪರಿಣಾಮವಾಗಿ ಇಂದು ನಾವು ಮನೆಯಲ್ಲಿ ಊಟ ಮಾಡುತ್ತಲೋ, ಸಿನಿಮಾ ವೀಕ್ಷಿಸುತ್ತಲೋ ಅಥವಾ ಪ್ರಯಾಣ ಮಾಡುತ್ತಲೋ ನಾವು ನಮಗೆ ಬೇಕಾದ ಮಾಹಿತಿಯನ್ನು ಕಲೆಹಾಕಬಹುದು. ಹೀಗೆ ಮಾಹಿತಿ ಸಂಗ್ರಹಣೆಯ ಕೆಲಸವನ್ನು ತಂತ್ರಜ್ಞಾನವು ಸುಲಭ ಸಾಧ್ಯವಾಗಿಸಿರುವಾಗ ಓದುಗ ನಾನೇಕೆ ಗ್ರಂಥಾಲಯಕ್ಕೆ ಹೋಗಿ ನನ್ನ ಸಮಯವನ್ನು ಹಾಳುಮಾಡಿಕೊಳ್ಳಲಿ ಎಂದು ಪ್ರಶ್ನಿಸುತ್ತಿದ್ದಾನೆ. ಓದುಗ ಎಡುವುತ್ತಿರುವುದು ಇಲ್ಲಿಯೇ.  ಏಕೆಂದರೆ ಮಾಹಿತಿ ಕಲೆಹಾಕುವಿಕೆ ಎನ್ನುವುದು ಅದೊಂದು ಶಾಸ್ತ್ರಿಯ ಮತ್ತು ಅಭ್ಯಾಸಯೋಗ್ಯ ವಿಷಯವಾಗಿ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲ್ಪಡುತ್ತಿದೆ ಎನ್ನುವ ವಿಷಯವನ್ನು ವಿದ್ಯಾರ್ಥಿ ಮತ್ತು ಶಿಕ್ಷಕರ ಸಮೂಹ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಾಶಿ ರಾಶಿ ಉತ್ಪಾದನೆಯಾಗುತ್ತಿರುವ ಮಾಹಿತಿಯಿಂದ ತನಗೆ ಅಗತ್ಯವಾದ ಮಾಹಿತಿಯನ್ನು ಹುಡುಕುವುದು ವಿದ್ಯಾರ್ಥಿಗಳಿಗಾಗಲಿ ಇಲ್ಲವೇ ಶಿಕ್ಷಕರಿಗಾಗಲಿ ಅತಿ ಕಷ್ಟದ ಕೆಲಸ. ಜೊತೆಗೆ ಓದು, ಅಧ್ಯಯನ ಮತ್ತು ಸಂಶೋಧನೆಗಾಗಿ ಮೀಸಲಾಗಿಡಬೇಕಾದ ತನ್ನ ಸಮಯವನ್ನು ವಿದ್ಯಾರ್ಥಿ/ಶಿಕ್ಷಕ ಮಾಹಿತಿಯ ಹುಡುಕುವಿಕೆಗೆ ವ್ಯಯಿಸಿದಾಗ ಸಹಜವಾಗಿಯೇ ಅಲ್ಲಿ ಆತನ ಶ್ರಮ ಮತ್ತು ಸಮಯ ವ್ಯರ್ಥವಾಗುತ್ತದೆ. ಇದು ನೇರವಾಗಿ ಸಂಶೋಧನೆಯ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಲೇ ಸಂಶೋಧನಾ ಕೇಂದ್ರಗಳು ಮಾಹಿತಿಯ ಸಂಗ್ರಹಣೆ ಮತ್ತು ಪೂರೈಕೆಗಾಗಿ ಸುಸಜ್ಜಿತ ಗ್ರಂಥಾಲಯಗಳನ್ನು ಹೊಂದಿವೆ. ಪರಸ್ಥಿತಿ ಹೀಗಿರುವಾಗ ಗ್ರಂಥಾಲಯಕ್ಕೆ ಭೇಟಿ ನೀಡಿ ನಾನೇಕೆ ಸಮಯ ಹಾಳು ಮಾಡಿಕೊಳ್ಳಲಿ ಎನ್ನುವ ಓದುಗನ ಪ್ರತಿಕ್ರಿಯೆಯನ್ನು  ಸುಲಭವಾಗಿ ತಳ್ಳಿಹಾಕುವಂತಿಲ್ಲ ಮತ್ತು ನಿರ್ಲಕ್ಷಿಸುವಂತಿಲ್ಲ. ಇಲ್ಲಿ ಯಾವ ಪ್ರಕಾರದ ಗ್ರಂಥಾಲಯಗಳು ಓದುಗರ ಕೊರತೆಯಂಥ ಬಹುಮುಖ್ಯವಾದ ಸಮಸ್ಯೆಯನ್ನು ಎದುರಿಸುತ್ತಿವೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯ ತನ್ನದೇ ಆದ ಓದುಗರ ಸಮೂಹವನ್ನು ಹೊಂದಿದೆ. ಅಲ್ಲಿ ಶೈಕ್ಷಣಿಕ ಅರ್ಹತೆಯ ಅವಶ್ಯಕತೆಯಾಗಲಿ ಮತ್ತು ವಯೋಮಾನದ ಹಂಗಾಗಲಿ ಇಲ್ಲದಿರುವುದರಿಂದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ನಾವು ಇವತ್ತಿಗೂ ದೊಡ್ಡ ಓದುಗರ ಗುಂಪನ್ನು ಕಾಣಬಹುದು. ಇನ್ನು ವಿಶೇಷ ಗ್ರಂಥಾಲಯಗಳ ವಿಷಯಕ್ಕೆ ಬಂದರೆ ಅವುಗಳು ಸಂಶೋಧನಾ ಕೇಂದ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಲ್ಲಿನ ಓದುಗ ವಲಯಕ್ಕೆ ಸಂಶೋಧನೆಯೇ  ಬಹುಮುಖ್ಯವಾದ ಕಾರ್ಯಯೋಜನೆಯಾಗಿರುವುದರಿಂದ ಜೊತೆಗೆ ಆಯಾ ವಿಶೇಷ ಗ್ರಂಥಾಲಯಗಳು ಸೀಮಿತ ಓದುಗ ವಲಯವನ್ನು ಹೊಂದಿರುವುದರಿಂದ ಅಲ್ಲಿ ಓದುಗರ ಕೊರತೆಯಂಥ ಸಮಸ್ಯೆ ಎದುರಾಗದು. ನಿಜವಾದ ಸಮಸ್ಯೆ ಇರುವುದು ಶೈಕ್ಷಣಿಕ ಗ್ರಂಥಾಲಯಗಳ ವಿಷಯದಲ್ಲಿ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರಂಥ ಬಹುದೊಡ್ಡ ಓದುಗರ ವಲಯವನ್ನು ಹೊಂದಿಯೂ ಕೂಡ ಶೈಕ್ಷಣಿಕ ಗ್ರಂಥಾಲಯಗಳು ಓದುಗರ ಕೊರತೆಯನ್ನು ಎದುರಿಸುತ್ತಿರುವುದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿ. ಶೈಕ್ಷಣಿಕ ಗ್ರಂಥಾಲಯಗಳು ಎದುರಿಸುತ್ತಿರುವ ಈ ಸಮಸ್ಯೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಂಥಪಾಲಕರು ಜೊತೆಯಾಗಿಯೇ  ಕಾರಣರಾಗಿರುವರು. ಅಲ್ಲದೆ ನಮ್ಮ ಸಧ್ಯದ ಶಿಕ್ಷಣ ವ್ಯವಸ್ಥೆಗೆ ಕೂಡ ಈ ಸಮಸ್ಯೆಯನ್ನು ಹುಟ್ಟುಹಾಕಿದ ಆರೋಪದಲ್ಲಿ ಒಂದಿಷ್ಟು ಪಾಲು ಸಹಜವಾಗಿಯೇ ದೊರೆಯಬೇಕು. 

ನಮ್ಮ ಶಿಕ್ಷಣ ವ್ಯವಸ್ಥೆ:

      ಶಿಕ್ಷಣದ ಉದ್ದೇಶಗಳಲ್ಲಿ ರಾಷ್ಟ್ರದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಮಹತ್ವದ ಸ್ಥಾನ ಪಡೆದುಕೊಂಡಿವೆ. ಈ ಉದ್ದೇಶ ಸಾಧನೆಗಾಗಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವುದು ಅಗತ್ಯವಾಗಿದೆ. ಆದರೆ ವೃತ್ತಿಯೇ ಶಿಕ್ಷಣದ ಮೂಲ ಉದ್ದೇಶವಾಗುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳ ಓದು ಪರೀಕ್ಷೆಗಷ್ಟೆ ಸೀಮಿತವಾಗುತ್ತಿದೆ. ವಿದ್ಯಾರ್ಥಿಗಳ ಜಾಣ್ಮೆಯನ್ನು ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನಾಧರಿಸಿ ಗುರುತಿಸುತ್ತಿರುವುದರಿಂದ ವಿದ್ಯಾರ್ಥಿ ತನ್ನ ಓದನ್ನು ಪರೀಕ್ಷೆಗಷ್ಟೇ ಸೀಮಿತಗೊಳಿಸಿಕೊಳ್ಳುತ್ತಿರುವನು. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ವಿದ್ಯಾರ್ಥಿಯ ಓದಿನ ವ್ಯಾಪ್ತಿಯೂ ಸೀಮಿತಗೊಳ್ಳುತ್ತಿದೆ. ಇನ್ನು ಬೋಧನೆ, ಅಧ್ಯಯನ ಮತ್ತು ಸಂಶೋಧನೆಯಲ್ಲಿ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಾದ ಶಿಕ್ಷಕರನ್ನು ಶಿಕ್ಷಣದ ಉನ್ನತ ಸಮಿತಿಗಳು ಕಡ್ಡಾಯವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ನಿಯಮಗಳನ್ನು ಜಾರಿಗೆ ತರುತ್ತಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ದುರಂತಗಳಲ್ಲೊಂದು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ, ಭಾರತೀಯ ವೈದ್ಯಕೀಯ ಮಡಳಿ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಸಮಿತಿಗಳು ಶಿಕ್ಷಕರು ಬಡ್ತಿಗಾಗಿ ಮತ್ತು ವೇತನ ಹೆಚ್ಚಳದ ಸೌಲಭ್ಯಕ್ಕಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು ಕಡ್ಡಾಯಗೊಳಿಸಿವೆ. ಬಡ್ತಿ ಮತ್ತು ವೇತನ ಹೆಚ್ಚಳದ ಪ್ರಲೋಭನೆಗಳನ್ನೊಡ್ಡಿ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಒಂದು ವಿಲಕ್ಷಣ ಸಂಗತಿ. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಎನ್ನುವುದು ಕಾಟಾಚಾರಕ್ಕೆಂಬತೆ ನಡೆದುಕೊಂಡು ಬರುತ್ತಿದೆ ಜೊತೆಗೆ ಸಂಶೋಧನಾ ಫಲಿತಾಂಶ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಈ ಸಂಶೋಧನಾ ಮನೋಭಾವದ ಕೊರತೆಯೇ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಧ್ಯಯನದಿಂದ ವಿಮುಖರನ್ನಾಗಿಸುತ್ತಿದೆ. ಇದರ ನೇರ ಪರಿಣಾಮ ಗ್ರಂಥಾಲಯಗಳ ಮೇಲಾಗುತ್ತಿದ್ದು ಅಲ್ಲಿ ಓದುಗರಿಲ್ಲದೆ ಇಡೀ ಗ್ರಂಥಾಲಯ ವ್ಯವಸ್ಥೆಯೇ  ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದಾದ ಭೀತಿಯನ್ನು ಅನುಭವಿಸುತ್ತಿದೆ.

ತಂತ್ರಜ್ಞಾನ ಕೊಡಮಾಡುತ್ತಿರುವ ಹೆಚ್ಚಿನ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ಪರೀಕ್ಷೆಯನ್ನು ಬರೆಯಲು ಅಗತ್ಯವಾದ ಸಾಮಗ್ರಿಗಳನ್ನು ಬಹಳ ಸುಲಭವಾಗಿ ಕಲೆಹಾಕುತ್ತಿರುವರು. ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥೆಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ಕಲೆಹಾಕಬಹುದೆನ್ನುವ ಆತ್ಮವಿಶ್ವಾಸವನ್ನು ಅನೇಕ ವಿದ್ಯಾರ್ಥಿಗಳಲ್ಲಿ ಇಂದು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆ ಎನ್ನುವುದು ವಿದ್ಯಾರ್ಥಿ ಮಾತ್ರ ತೊಡಗಿಸಿಕೊಳ್ಳುತ್ತಿರುವ ಏಕಮುಖವಾದ ಕ್ರಿಯೆಯಾಗಿ  ಬದಲಾಗುತ್ತಿದೆ. ಶಿಕ್ಷಕರ ಮಾರ್ಗದರ್ಶನವಿಲ್ಲದೇ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗಿರುವುದರಿಂದ ತಂತ್ರಜ್ಞಾನವೇ ಆತನಿಗೆ ಶಿಕ್ಷಕ, ತರಗತಿ, ಪ್ರಯೋಗಾಲಯ ಮತ್ತು ಗ್ರಂಥಾಲಯ ಎಲ್ಲವೂ ಆಗಿ ನಿಜವಾದ ತರಗತಿ ಮತ್ತು ಗ್ರಂಥಾಲಯ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.

ಜೊತೆಗೆ ಚರ್ಚಿಸಲೇ ಬೇಕಾದ ಇನ್ನೊಂದು ಮಹತ್ವದ ವಿಷಯವೆಂದರೆ ಅದು ನಮ್ಮ ಶಿಕ್ಷಕರು ಬೋಧಿಸುತ್ತಿರುವ ಮತ್ತು ನಮ್ಮ ಮಕ್ಕಳು ಕಲಿಯುತ್ತಿರುವ ಪಠ್ಯಕ್ರಮ. ಇವತ್ತಿಗೂ ಇಪ್ಪತ್ತು ವರ್ಷಗಳ ಹಿಂದೆ ಮಾಡಿಟ್ಟ ಟಿಪ್ಪಣಿಯನ್ನೇ ಹಿಡಿದುಕೊಂಡು ಬಂದು ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕರನ್ನು ನಾವು ಸಾಮಾನ್ಯವಾಗಿ ಪ್ರತಿ ಶಾಲೆ ಮತ್ತು ಕಾಲೇಜಿನಲ್ಲಿ ಕಾಣಬಹುದು. ವಿದ್ಯಾರ್ಥಿಗಳು ಸಹ ತಮ್ಮ ಹಿರಿಯ ವಿದ್ಯಾರ್ಥಿಗಳು ಮಾಡಿಟ್ಟ ಅಥವಾ ಅವರು ಅವರ ಹಿರಿಯರಿಂದ ಎರವಲಾಗಿ ಪಡೆದ ಉತ್ತರಗಳನ್ನೇ ನೆಚ್ಚಿಕೊಂಡು ಅವುಗಳನ್ನೇ ಓದಿ ಪರೀಕ್ಷೆ ಬರೆಯುತ್ತಿರುವರು. ಇದಕ್ಕೆಲ್ಲ ಕಾರಣ ಬದಲಾಗದೇ ಇರುವ ನಮ್ಮ ಪಠ್ಯಕ್ರಮ. ಇಂಥದ್ದೊಂದು ವಾತಾವರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆಯಾಗಿಯೇ  ವಿಷಯವೊಂದನ್ನು ವಿಶ್ಲೇಷಿಸುವ ಮತ್ತು ವಿಷಯದ ಆಳಕ್ಕಿಳಿಯುವ ವಿಶ್ಲೇಷಣಾತ್ಮಕ ಓದಿನ ಕಡೆ ತಮ್ಮ ಗಮನವನ್ನು ಕೇಂದ್ರಿಕರಿಸುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮತ್ತು ವಿಶ್ಲೇಷಣಾತ್ಮಕ ಓದು ಏಕೆ ಕಡಿಮೆಯಾಗುತ್ತಿದೆ ಎನ್ನುವ ಪ್ರಶ್ನೆ ಎದುರಾದಾಗ ಆಗ ಶಿಕ್ಷಣ ತಜ್ಞರು ಮತ್ತು ಚಿಂತಕರು ಆರೋಪಿಸುವುದು ಇಂದು ಪರೀಕ್ಷಾಕೇಂದ್ರಿತವಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯನ್ನು. ಶಿಕ್ಷಣ ಜ್ಞಾನಾರ್ಜನೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎನ್ನುವ ನಿಲುವು ಬದಲಾಗಿ ಅನೇಕ ದಶಕಗಳೇ ಕಳೆದುಹೋಗಿವೆ. ಈಗ ಶಿಕ್ಷಣ ಎನ್ನುವುದು ಉದ್ಯೋಗಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ಎನ್ನುವ ಹೊಸ ಅರ್ಥದಲ್ಲಿ ನಾವೆಲ್ಲ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಈ ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಯ ಬುದ್ದಿಮತ್ತೆಯನ್ನು ಆತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ನಿರ್ಧರಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಮತ್ತು ಅಂಕಗಳ ದೃಷ್ಟಿಯಿಂದ ಓದುತ್ತಿರುವುದು ಸಾಮಾನ್ಯವಾಗಿದೆ. ಈ ಸಂದರ್ಭ ವಿದ್ಯಾರ್ಥಿ ಸಮೂಹವನ್ನು ವಿಶ್ಲೇಷಣಾತ್ಮಕ ಓದಿಗೆ ಪ್ರೋತ್ಸಾಹಿಸುವುದು  ಮತ್ತು ಪ್ರೇರೇಪಿಸುವುದು ಅತಿ ಸವಾಲಿನ ಕೆಲಸವಾಗಿ ಕಾಣಿಸುತ್ತಿದೆ. 

ಗ್ರಂಥಾಲಯಗಳ ಅಸ್ತಿತ್ವ:

       ಪ್ರತಿಕೂಲ ವಾತಾವರಣಕ್ಕೆ ವಿರುದ್ಧವಾಗಿ ಈಜುವುದು ಅಸಾಧ್ಯದ ಸಂಗತಿ. ಸಧ್ಯದ ಸನ್ನಿವೇಶದಲ್ಲಿ ಗ್ರಂಥಾಲಯಗಳ ಮಹತ್ವವನ್ನು ಎತ್ತಿಹಿಡಿಯುವ ಮತ್ತು ಆ ಮೂಲಕ ಅವುಗಳ ಅಸ್ತಿತ್ವವನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ಗ್ರಂಥಪಾಲಕರ ಮೇಲಿದೆ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರು ಓದುಗರ ಕೊರತೆಯಂಥ ಸಮಸ್ಯೆಯನ್ನು ಎದುರಿಸುವುದು ತೀರ ಕಡಿಮೆ. ಈ ಮಾತು ಶೈಕ್ಷಣಿಕ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕರಿಗೆ ಅನ್ವಯಿಸಿ ಹೇಳುವುದು ತೀರ ಕಷ್ಟ. ಈ ಸಂದರ್ಭ ಗ್ರಂಥಪಾಲಕರ ಎದುರಿರುವ ಏಕೈಕ ಮಾರ್ಗವೆಂದರೆ ಅದು ತಂತ್ರಜ್ಞಾನ ಕೊಡಮಾಡುತ್ತಿರುವ ಸೌಲಭ್ಯಗಳು. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡೇ ಗ್ರಂಥಪಾಲಕರು ಅತಿ ಹೆಚ್ಚಿನ ಓದುಗರನ್ನು ತಲುಪಬೇಕಾಗಿದೆ. ಮಾಹಿತಿ ಶೋಧ ಎನ್ನುವುದು ಒಂದು ಶಿಸ್ತಿನ ಕ್ರಿಯೆಯಾಗಿರುವುದರಿಂದ ತಂತ್ರಜ್ಞಾನವನ್ನು ಮಾಹಿತಿ ಶೊಧದ ಶಿಸ್ತಿಗೆ ಒಳಪಡಿಸುವುದು ಮತ್ತು ಆ ಕುರಿತು ಓದುಗರಿಗೆ ಪ್ರಾಯೋಗಿಕ ತರಬೇತಿ ನೀಡುವ ಶಿಕ್ಷಕನಾಗಿ ಗ್ರಂಥಪಾಲಕರು ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಪುಸ್ತಕಗಳ ರಾಶಿಯಿಂದಲೇ ಓದುಗರಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವುದು ಮತ್ತು ಓದುಗರ ಸಮೂಹವನ್ನು ಗ್ರಂಥಾಲಯದೆಡೆಗೆ ಆಕರ್ಷಿಸುವುದು ದೂರದ ಮಾತು. ಬದಲಾದ ಪರಿಸ್ಥಿತಿಯಲ್ಲಿ ಗ್ರಂಥಪಾಲಕರು ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಆತ ತಂತ್ರಜ್ಞಾನ ಬಳಕೆಯ ನೈಪುಣ್ಯವನ್ನು ಮೊದಲು ತನ್ನದಾಗಿಸಿಕೊಳ್ಳಬೇಕಾಗಿದೆ. ಹಾಗೆಂದ ಮಾತ್ರಕ್ಕೆ ಸಾಂಪ್ರದಾಯಕ ವಾತಾವರಣಕ್ಕೆ ಗ್ರಂಥಪಾಲಕರು ವಿಮುಖರಾಗಿ ನಡೆಯಬೇಕಿಲ್ಲ. ಸಾಂಪ್ರದಾಯಕ ಮತ್ತು ಆಧುನಿಕತೆಯ ಸಂಯೋಗವಾದ ಹೈಬ್ರೀಡ್ ಗ್ರಂಥಾಲಯಗಳು ಈಗ ಅಸ್ತಿತ್ವದಲ್ಲಿರುವುದರಿಂದ ಗ್ರಂಥಪಾಲಕರು ಗ್ರಂಥಗಳು ಮತ್ತು ತಂತ್ರಜ್ಞಾನ ಈ ಎರಡನ್ನೂ ಜೊತೆಜೊತೆಯಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ ಹಾಗೂ ತಿಳುವಳಿಕೆಯನ್ನು ಹೊಂದಿರಬೇಕು. ಈ ತಿಳುವಳಿಕೆಯ ಜೊತೆಗೆ ವಿಶ್ಲೇಷಣಾತ್ಮಕವಾದ ಅಧ್ಯಯನ, ಸೇವಾ ಮನೋಭಾವ, ಹೊಸ ವಿಷಯಗಳನ್ನು ಅರಿತುಕೊಳ್ಳುವ ತುಡಿತ, ಹೊಸ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುವ ಮನಸ್ಸು ಇದ್ದಲ್ಲಿ ಗ್ರಂಥಪಾಲಕರು ಕಳೆದು ಹೋಗುತ್ತಿರುವ ಗ್ರಂಥಾಲಯಗಳ ಅಸ್ತಿತ್ವವನ್ನು ಮತ್ತೆ ಮರುಸ್ಥಾಪಿಸುವುದು ಅಸಾಧ್ಯದ ಕಾರ್ಯವೆನಲ್ಲ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ