Thursday, May 4, 2017

ಇದು ನನ್ನದು ಆದರೆ ನನ್ನದು ಮಾತ್ರವಲ್ಲ

            ಬ್ಲೇಕ್ ತನ್ನ ಬರವಣಿಗೆಯನ್ನು ಕುರಿತು ಹೀಗೆ ಹೇಳುತ್ತಾನೆ ‘ಇದು ನನ್ನದು ಆದರೆ ನನ್ನದು ಮಾತ್ರವಲ್ಲ’. ತನ್ನ ಬರವಣಿಗೆಯ ಕೃಷಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ಬ್ಲೇಕ್ ನೆನಪಿಸಿಕೊಳ್ಳುವ ರೀತಿ ಇದು. ಏಕೆಂದರೆ ಕಥೆ, ಕಾವ್ಯ, ಕಾದಂಬರಿ ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಸೃಷ್ಟಿಯ ಹಿಂದೆ ಅವನಿಗರಿವಿದ್ದೊ ಇಲ್ಲದೆಯೋ ಅನೇಕ ಪಾತ್ರಗಳು ಆ ಸೃಜನಶೀಲ ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತವೆ. ಲೇಖಕನಾದವನು ನೋಡಿದ, ಕೇಳಿದ ಘಟನೆಗಳಿಗೆ ತನ್ನ ಕಲ್ಪನೆಯನ್ನು ಸೇರಿಸಿ ಕಥೆಯನ್ನೋ ಕಾದಂಬರಿಯನ್ನೋ ಬರೆಯುತ್ತಾನೆ. ಹೀಗೆ ಬರೆದದ್ದು ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಪ್ರಕ್ರಿಯೆಗೆ  ಸ್ಪೂರ್ತಿ ನೀಡಿದ ಪಾತ್ರಗಳು ಹಲವು ಎನ್ನುವುದನ್ನು ಪ್ರತಿಯೊಬ್ಬ ಬರಹಗಾರ ಒಪ್ಪಿಕೊಳ್ಳುತ್ತಾನೆ. ಕುವೆಂಪು ಅವರ ಹೂವಯ್ಯ, ಕಾರಂತರ ಚೋಮ, ಚಿತ್ತಾಲರ ನಾಗಪ್ಪ, ಭೈರಪ್ಪನವರ ವಿಶ್ವನಾಥ ಹೀಗೆ ಈ ಎಲ್ಲ ಪಾತ್ರಗಳ ರಚನೆಯ ಹಿಂದೆ ನಿರ್ಧಿಷ್ಟ ಪಾತ್ರಗಳ ಪ್ರಭಾವವಿದೆ. ಈ ಅನುಭವ ಓದುಗರದೂ ಹೌದು. ಕೆಲವೊಮ್ಮೆ ಕೃತಿಯೊಂದನ್ನು ಓದುತ್ತಿರುವ ಘಳಿಗೆ ಅದರಲ್ಲಿನ ಸನ್ನಿವೇಶ ಇಲ್ಲವೇ ಪಾತ್ರವನ್ನು ಎಲ್ಲೋ ನೋಡಿದ ಮತ್ತು ಅದಕ್ಕೆ ಸಾಕ್ಷಿಯಾದ ಅನುಭವ ದುತ್ತೆಂದು ಎದುರಾಗುವುದುಂಟು. ಹೀಗೆ ಲೇಖಕ ಓದುಗರನ್ನು ಅವರು ಬದುಕುತ್ತಿರುವ ಪರಿಸರಕ್ಕೆ ಸದಾಕಾಲ ಮುಖಾಮುಖಿಯಾಗಿಸುತ್ತಲೇ ಹೋಗುತ್ತಾನೆ. ಏಕೆಂದರೆ ಲೇಖಕನ ಸೃಜನಶೀಲ ಸೃಷ್ಟಿ ಕೂಡ ತಾನು ಬದುಕುತ್ತಿರುವ ಪರಿಸರದಿಂದಲೇ ಎತ್ತಿಕೊಂಡ ಅನುಭವದ ಎಳೆಗೆ ಕಲ್ಪನೆಯ ಎರಕ ಹೊಯ್ದ ಕಲಾಸೃಷ್ಟಿ ತಾನೆ. ಆದ್ದರಿಂದ ಲೇಖಕನಾಗಲಿ ಮತ್ತು ಓದುಗನಾಗಲಿ ಆ ಕಲಾಸೃಷ್ಟಿಯಿಂದ ದೊರೆತ ಅನುಭವವನ್ನು ತನ್ನದು ಮಾತ್ರವೆಂದು ಬೀಗದೆ ಬ್ಲೇಕ್‍ನಂತೆ ಇದು ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ಔದಾರ್ಯವನ್ನು ಮೆರೆಯಬೇಕು. ಕಲಾಸೃಷ್ಟಿಯ ಓದಿನ ರಸಾನುಭವವನ್ನು ಓದುಗ ಅನೇಕ ಮನಸ್ಸುಗಳಿಗೆ ದಾಟಿಸುವ ಕೆಲಸ ಮಾಡಬೇಕು. ಹೀಗೆ ಓದಿದ, ಓದಿನ ನಂತರ ಅನುಭವವಾಗಿ ಮನಸ್ಸಿನಲ್ಲಿ ಕುಳಿತು ಕಂಗೆಡಿಸಿದ, ಹಗಲಿರುಳು ಚಿಂತಿಸುವಂತೆ ಮಾಡಿದ ಒಂದಿಷ್ಟು ಚಿಂತನೆಗಳನ್ನು ಓದುಗರಿಗೆ ದಾಟಿಸುವ ಪ್ರಯತ್ನವಾಗಿ ಈ ಪುಟ್ಟ ಲೇಖನ. ಹೀಗೆ ಓದಿನ ಅನುಭವವನ್ನು ಓದುಗರಿಗೆ ದಾಟಿಸುವ ಈ ಪ್ರಯತ್ನ ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ವಿನಮೃತೆಯೂ ನನ್ನ ಅಂತಪ್ರಜ್ಞೆಯೊಳಗೆ ಜಾಗೃತವಾಗಿದೆ. 

       ಕನ್ನಡ ಸಾಹಿತ್ಯದಲ್ಲಿ ಯಶವಂತ ಚಿತ್ತಾಲರದು ಜೀವನ್ಮುಖಿ ಸಾಹಿತ್ಯ. ಅವರ ಕಥೆ, ಕಾದಂಬರಿಗಳಲ್ಲಿ ಮನುಷ್ಯನ ಮನಸ್ಸು ಮತ್ತು ಮಾನವೀಯತೆಯ ತುಡಿತವೇ ಮುಖ್ಯ ವಸ್ತು. ಮನುಷ್ಯನ ಮನಸ್ಸನ್ನು ಮನಶಾಸ್ತ್ರದ ಹಿನ್ನೆಲೆಯಲ್ಲಿ ಚಿತ್ತಲರದು ವಿಶ್ಲೇಷಿಸಿದಷ್ಟು ಕನ್ನಡದ ಬೇರೆ ಬರಹಗಾರರು ವಿಶ್ಲೇಷಿಸಿದ್ದು ಕಡಿಮೆ. ಮನುಷ್ಯನ ಆಂತರಿಕ ತೊಳಲಾಟ, ದ್ವಂದ್ವ, ಖಿನ್ನತೆ, ಪ್ರೀತಿಯ ಹಂಬಲವನ್ನು ಚಿತ್ತಾಲರು ತಮ್ಮ ಕಥೆ ಕಾದಂಬರಿಗಳ ಪಾತ್ರಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿರುವರು. ಒಟ್ಟಾರೆ ಚಿತ್ತಾಲರ ದೃಷ್ಟಿಯಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ ಒಳಪಡಿಸುವುದೇ ಸಾಹಿತ್ಯದ ಮೂಲ ಉದ್ದೇಶವಾಗಿದೆ. ಸಾಹಿತ್ಯದ ಈ ಉದ್ದೇಶವನ್ನು ಕುರಿತು ಅವರು ತಮ್ಮ ನಾನೇಕೆ ಬರೆಯುತ್ತೇನೆ ಲೇಖನದಲ್ಲಿ ಹೀಗೆ ಹೇಳುತ್ತಾರೆ “ನಾವು ವಿಚಾರ ಮಾಡುವ, ಭಾವಿಸುವ ಮತ್ತು ನೋಡುವ ಮಟ್ಟಗಳು ಎತ್ತರಗೊಂಡು ನಾವು ಮನುಷ್ಯರಾಗಿ ಅರಳುವ ಸಾಧ್ಯತೆಯೇ  ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಬದುಕಿನ ಬಗ್ಗೆ ನಾವು ಬೆಳೆಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತಿವೆ. ಇಂಥ ಸನ್ನಿವೇಶದಲ್ಲಿ ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಸಾಹಿತ್ಯದ ಪಾತ್ರ ಬಹು ದೊಡ್ಡದು. ಸಾಹಿತ್ಯ ಕಮಿಟ್ ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ’.

        ಚಿತ್ತಾಲರಿಗೆ ಸಾಹಿತ್ಯವೆನ್ನುವುದು ಮನರಂಜನೆಯ ಮಾಧ್ಯಮವಲ್ಲ. ಸಾಹಿತ್ಯ ನಾವು ಮನುಷ್ಯರಾಗಿ ರೂಪುಗೊಳ್ಳುವುದಕ್ಕೆ ಅಗತ್ಯವಾದ ನೈತಿಕ ಶಕ್ತಿ ನೀಡುವ ಸೃಜನಶೀಲ ಸೃಷ್ಟಿ ಎನ್ನುವುದರಲ್ಲಿ ಅವರಿಗೆ ಅಚಲವಾದ ನಂಬಿಕೆ. ಇಂಥದ್ದೊಂದು ನಂಬಿಕೆಯಿಂದಲೇ ಓದುಗನ ಮೇಲೆ ಗಾಢ ಪ್ರಭಾವ ಬೀರುವ ಆ ಮೂಲಕ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಮಂಜುನಾಥ, ನಾಗಪ್ಪ, ಪುರುಷೋತ್ತಮನಂಥ ಪಾತ್ರಗಳು ಚಿತ್ತಾಲರಿಂದ ಸೃಷ್ಟಿಯಾದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ವೇಳೆ ಚಿತ್ತಾಲರು ತಮ್ಮ ಭಾಷಣದಲ್ಲಿ ಸಾಹಿತ್ಯದ ಮಹತ್ವವನ್ನು ಕುರಿತು ಹೀಗೆ ನುಡಿಯುತ್ತಾರೆ “ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎನ್ನುವ ನಂಬಿಕೆ ನನ್ನದು. ಇಂದಿನ ಸಮಾಜದಲ್ಲಿ ನಾವು ಮನುಷ್ಯರಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವುಗಳಾಗಿವೆ. ಸಾಹಿತ್ಯ ಹೃದಯವುಳ್ಳ ಹಾದಿಯಾಗಿದೆ ಎನ್ನುವ ನಂಬಿಕೆಯಿಂದಲೇ ಓದುವ ಮತ್ತು ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ”.

        ಬದುಕಿನ ಈ ಏನೆಲ್ಲ ಜಂಜಾಟಗಳ ನಡುವೆಯೂ ಮನುಷ್ಯ ತನ್ನ ಮನುಷ್ಯತ್ವದ ಅಸ್ಮಿತೆಗಾಗಿ ಆತ ತನ್ನನ್ನು ಒಂದಲ್ಲ ಒಂದು ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಯಶವಂತ ಚಿತ್ತಾಲರ ಇಡೀ ಬರವಣಿಗೆಯ ಮತ್ತು ಚಿಂತನೆಯ ಕೇಂದ್ರವಾಗಿದೆ. ಕಥೆಯಲ್ಲಿ ಬಂದಾತ ಮನೆಗೂ ಬಂದು ಬಾಗಿಲು ಬಡಿದ ಎಂದೆನ್ನುವ ಚಿತ್ತಾಲರು ತಾವು ಸೃಷ್ಟಿಸಿದ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಲೇ ಮನುಷ್ಯತ್ವದ ಹುಡುಕಾಟಕ್ಕೆ ತೊಡಗುತ್ತಾರೆ. ಸೃಜನಶೀಲತೆಯಿಂದ ಮನುಷ್ಯ ದೂರವಾದಾಗ ಎದುರಾಗುವ ಅಪಾಯವನ್ನು ಕುರಿತು ಅವರು ಎಚ್ಚರಿಸುತ್ತಾರೆ. ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಕೃತಿಯಲ್ಲಿ ಚಿತ್ತಾಲರು ಮನುಷ್ಯನ ಬದ್ಧತೆಯನ್ನು ಕುರಿತು ಹೇಳುವ ಮಾತು ಹೀಗಿದೆ “ಸ್ಪಿನೋಝಾ ನೈತಿಕ ನಡುವಳಿಕೆಯ ಬಗ್ಗೆ ಹೇಳಿದ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುವುದಾದರೆ ಗುಲಾಬಿ ಗಿಡ ಬದ್ಧವಾದದ್ದು ಗುಲಾಬಿ ಹೂಗಳನ್ನು ಬಿಡುವುದಕ್ಕೆ. ನಾವು ಬದ್ಧರಾಗಬೇಕಾದದ್ದು ಮನುಷ್ಯರ ಹಾಗೆ ಸ್ಪಂದಿಸುವುದಕ್ಕೆ, ಮನುಷ್ಯರ ಹಾಗೆ ಬದುಕುವುದಕ್ಕೆ ಮತ್ತು ಮನುಷ್ಯರಾಗುವುದಕ್ಕೆ. ಸೃಜನಶೀಲನಾಗುವುದು, ಪ್ರೀತಿಸುವ ಸಾಮರ್ಥ್ಯ ಉಳ್ಳವನಾಗುವುದು, ಮನುಷ್ಯನಾಗುವುದು ಈ ಎಲ್ಲ ಪ್ರಕ್ರಿಯೆಗಳ ಅರ್ಥ ಒಂದೇ. ಸೃಜನಶೀಲನಾಗುವುದರಲ್ಲಿ ಸೋತಲ್ಲೆಲ್ಲ ಮನುಷ್ಯ ಮನುಷ್ಯನನ್ನೇ ಉಪಯೋಗಿಸಿಕೊಳ್ಳುವ ಕ್ರೂರತೆ ಕಾಣಿಸಿಕೊಳ್ಳುತ್ತದೆ”. ದೃಷ್ಟಿ ಮಾಗಿದಂತೆ, ಅನುಭವ ವಿಸ್ತಾರವಾದಂತೆ ಜೀವನ ಅದರ ಹಲವು ಸಾಧ್ಯತೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಅನುಭವ ಎನ್ನುವುದು ನಮ್ಮ ಮನಸ್ಸನ್ನು ಮಾಗಿಸಿ ವ್ಯಕ್ತಿತ್ವಕ್ಕೊಂದು ಹೊಸ ಅರ್ಥ ತಂದುಕೊಡಬೇಕು. ಚಿತ್ತಾಲರು ಜೀವನಾನುಭವದ ಕುರಿತು ಮಾರ್ಮಿಕವಾಗಿ ಹೀಗೆ ನುಡಿಯುತ್ತಾರೆ “ಪಚನೇಂದ್ರಿಯಗಳ ಎಲ್ಲ ರಸಗಳೊಡನೆ ಬೆರೆತು ಕರಗಿದಾಗಲೇ ರಕ್ತವಾಗಿ ದೇಹಕ್ಕೆ ಪೋಷಕವಾಗುವ  ಅನ್ನದಂತೆ ನಮ್ಮ ಅನುಭವ ಕೂಡ. ಅನುಭವ ಎನ್ನುವುದು ಸಮಗ್ರ ವ್ಯಕ್ತಿತ್ವದ ಜಠರಾಗ್ನಿಯಲ್ಲಿ ಕರಗಿದಾಗಲೇ, ರಸಪಾಕ ಹೊಂದಿದಾಗಲೇ ಅನುಭವವು ವ್ಯಕ್ತಿತ್ವಕ್ಕೆ ಹೊಸ ಮೆರುಗು ತಂದು ಕೊಟ್ಟೀತು. ಅನುಭವವನ್ನು ಅರಗಿಸಿಕೊಳ್ಳುವ ತಾಕತ್ತು ನಮ್ಮ ವ್ಯಕ್ತಿತ್ವಕ್ಕೆ ಇಲ್ಲದಿದ್ದರೆ ಬಂದ ಅನುಭವ ವಿಷವಾದೀತು”.

         ಯಶವಂತ ಚಿತ್ತಾಲರಂತೆ ಎಸ್.ಎಲ್.ಭೈರಪ್ಪನವರದು ಕೂಡ ಜೀವನ್ಮುಖಿ ಸಾಹಿತ್ಯ. ಯಾವುದೇ ಸಿದ್ಧಾಂತ ಮತ್ತು ವಿಚಾರಗಳನ್ನು ಓದುಗರ ಮೇಲೆ ಬಲವಂತವಾಗಿ ಹೇರುವ ಮನೋಭಾವ ನನ್ನ ಬರವಣಿಗೆಯದಲ್ಲ ಎಂದೆನ್ನುವ ಭೈರಪ್ಪನವರ ಕೃತಿಗಳಲ್ಲಿ ಜೀವನದ ನೈತಿಕ ಮೌಲ್ಯಗಳು ಅಗಾಧವಾಗಿ ಓದುಗನ ಅನುಭವಕ್ಕೆ ದಕ್ಕುತ್ತವೆ. ಒಂದರ್ಥದಲ್ಲಿ ಭೈರಪ್ಪನವರ ಕಾದಂಬರಿಗಳು ಸಹ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ  ಒಳಪಡಿಸುತ್ತವೆ. ಮಂದ್ರದ ಮಧುಮಿತಾ, ಸಾಕ್ಷಿಯ ಪರಮೇಶ್ವರಯ್ಯ, ಅನ್ವೇಷಣದ ವಿಶ್ವನಾಥ, ನಿರಾಕರಣದ ನರಹರಿ ಈ ಎಲ್ಲ ಪಾತ್ರಗಳು ಓದುಗನ ಅಂತ:ಸಾಕ್ಷಿಯನ್ನು ಪ್ರವೇಶಿಸಿ ಅವನನ್ನು ಮೌಲೀಕ ಬದುಕಿನೆಡೆ ಮುಖಮಾಡಿ ನಿಲ್ಲಿಸುತ್ತವೆ. ಮನುಷ್ಯನ ಮನಸ್ಸಿನೊಡನೆ ಮತ್ತು ಮನುಷ್ಯತ್ವದೊಡನೆ ಸಾಹಿತ್ಯ ವ್ಯವಹರಿಸುತ್ತಿರುವುದರಿಂದ ಸಾಹಿತ್ಯ ಕೂಡ ಉದಾತ್ತ ಧ್ಯೇಯಗಳನ್ನು ಹೊಂದಿರಬೇಕೆನ್ನುವುದು ಭೈರಪ್ಪನವರ ಅಭಿಮತ. ಕೃತಿಯೊಂದನ್ನು ಸೃಷ್ಟಿಸುತ್ತಿರುವಾಗ ಬರಹಗಾರ ತನ್ನೆಲ್ಲ ವೈಯಕ್ತಿಕ ರಾಗ ದ್ವೇಷಗಳಿಂದ ಮುಕ್ತನಾಗಿ ಆ ಸೃಜನಶೀಲ ಸೃಷ್ಟಿಯ ಕ್ರಿಯೆಯಲ್ಲಿ  ತೊಡಗಿಸಿಕೊಳ್ಳಬೇಕೆನ್ನುವುದನ್ನು ಭೈರಪ್ಪನವರು ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ “ಸಾಹಿತ್ಯದ ಕೆಲಸವೆಂದರೆ ಮನುಷ್ಯನ ಅಂತರಾಳಕ್ಕೆ ಪ್ರವೇಶ ದೊರಕಿಸಿಕೊಡುವುದು ಮತ್ತು ಪ್ರೀತಿ, ಅನುಕಂಪ, ಕರುಣೆಗಳನ್ನು ಹುಟ್ಟಿಸುವುದು. ನಮ್ಮ ಕಹಿ ಅನುಭವ ಏನೇ ಇರಲಿ ಪ್ರತಿಯೊಂದು ಪಾತ್ರದ ಅಂತರಂಗವನ್ನು ಹೊಕ್ಕು ಅನುಕಂಪದಿಂದ ಬಿಚ್ಚಿಡದಿದ್ದರೆ ಅದು ಮೇಲ್ಮಟ್ಟದ ಸಾಹಿತ್ಯವಾಗುವುದಿಲ್ಲ. ಇಡೀ ರಾಷ್ಟ್ರವನ್ನು ಜೈಲಾಗಿ ಪರಿವರ್ತಿಸಿದ್ದ ಸ್ಟಾಲಿನ್ನನ ಪಾತ್ರವನ್ನು ಚಿತ್ರಿಸುವಾಗ ಕೂಡ ಸೊಲ್ಜನಿಟ್ಸಿನ್ ಅನುಕಂಪ, ಅರಿವು ಮತ್ತು ಅಂತರ್ನೋಟವನ್ನು ಸಾಧಿಸದೆ ಹೋಗಿದ್ದರೆ ಅವನು ಇಷ್ಟೊಂದು ದೊಡ್ಡ ಲೇಖಕನಾಗುತ್ತಿರಲಿಲ್ಲ. ಬರವಣಿಗೆ ಸೃಜನಶೀಲವಾದಾಗ ಅದು ಲೇಖಕನ ಜಾತಿ, ಮತ, ವರ್ಗ, ಲಿಂಗ, ದೇಶ ಮೊದಲಾದ ಭೇದಗಳನ್ನು ಮೀರುತ್ತದೆ”.

          ಹೀಗೆ ರಾಗ ದ್ವೇಷಗಳ ಚೌಕಟ್ಟಿನಿಂದ ಹೊರಬಂದು ಲೇಖಕ ಕಟ್ಟಿಕೊಡುವ ಅನುಭವದಲ್ಲಿ ಲೇಖಕನೇ ತನ್ನನ್ನು ತಾನು ಕಾಣುವುದು ಸಾಹಿತ್ಯದ ಅಗಾಧತೆಗಳಲ್ಲಿ ಒಂದು. ಅನುಭವ ಯಾರದಾದರೇನು ಆ ಅನುಭವದ ಎಳೆಯೊಂದು ಹಠಾತ್ತನೆ ಮನಸ್ಸನ್ನು ಪ್ರವೇಶಿಸಿ ಆ ಕ್ಷಣಕ್ಕೆ ಕೃತಿಗೂ ಮತ್ತು ಓದುಗನಿಗೂ ಮುಖಾಮುಖಿಯಾಗಿಸುವಲ್ಲೇ ಸಾಹಿತ್ಯದ ಸಾಫಲ್ಯವಿದೆ. ಓದುಗನನ್ನು ಕೃತಿಗೆ ಮುಖಾಮುಖಿಯಾಗಿಸುವ ಲೇಖಕನದು ಬರವಣಿಗೆಯ ಆ ಎಲ್ಲ ನೋವು ನಲಿವುಗಳಿಂದ ಬಿಡುಗಡೆಯ ಭಾವ. ಬರವಣಿಗೆ ನೀಡುವ ಸಂತಸವನ್ನು ಚದುರಂಗರು ತಮ್ಮ ‘ವೈಶಾಖ’ ಕಾದಂಬರಿಯ ಮುನ್ನುಡಿಯಲ್ಲಿ ಹೀಗೆ ವಿವರಿಸುತ್ತಾರೆ “ಈ ಬರೆಯುವ ಪ್ರಕ್ರಿಯೆಯಲ್ಲಿ ನೋವು, ನೋವಿನಿಂದ ಮೂಡಿದ ನಲಿವು ಎಲ್ಲವನ್ನೂ ಅನುಭವಿಸಿದ್ದೇನೆ. ನನ್ನ ಒಳಗನ್ನು ತೋಡಿಕೊಳ್ಳುತ್ತಿರುವೆ ಎನ್ನುವ ತೃಪ್ತಿಯ ಜೊತೆಗೆ ಈವರೆಗೆ ಗುರುತಿಸಿಕೊಂಡಿರದೇ ಇದ್ದದ್ದನ್ನು ಹಠಾತ್ತನೆ ಕಂಡಂತಾಗಿ ಚಕಿತಗೊಂಡಿದ್ದೇನೆ. ಈ ರೀತಿಯಲ್ಲಿ ಪಡೆದ ಸಂತೋಷ ಒಂದು ಅನನ್ಯವಾದ ಬಿಡುಗಡೆಯ ಭಾವನೆಯನ್ನು ನನಗೆ ತಂದು ಕೊಟ್ಟಿದೆ. ನನ್ನ ಬರವಣಿಗೆಯನ್ನು ಇಡಿಯಾಗಿ ನೋಡಿದಾಗ ನನ್ನನ್ನು ನಾನೇ ಇಲ್ಲಿ ಕಂಡುಕೊಳ್ಳುತ್ತಿದ್ದೇನೆ ಎಂದು ಅನಿಸಿದ್ದುಂಟು. ಬರಹಗಾರನಾದ ನನಗೆ ಇದಕ್ಕಿಂತ ಮಿಗಿಲಾದ ಆತ್ಮಸುಖ ಬೇರೆ ಏನೂ ಕಾಣದು”.

         ಬರವಣಿಗೆಗೆ ಲೇಖಕ ಬದುಕುತ್ತಿರುವ ಪರಿಸರದ ಬದುಕು ಸ್ಪೂರ್ತಿಯಾದರೂ ಸೃಜನಶೀಲ ಸೃಷ್ಟಿಯು ಬರಹಗಾರನ ಅಂತರಾಳದಿಂದಲೇ ಕುಡಿಯೊಡೆದು ಬೆಳೆಯಬೇಕು. ತಾನು ಕಂಡು ಅನುಭವಿಸಿದ್ದನ್ನು ಸೃಜನಶೀಲವಾಗಿ ಅಭಿವ್ಯಕ್ತಿಗೊಳಿಸುವ ಸೃಜನಾತ್ಮಕ ಶಕ್ತಿ ಇದ್ದರೆ ಮಾತ್ರ ಬರಹಗಾರನಾಗಲು ಸಾಧ್ಯ. ಗೋಪಾಲಕೃಷ್ಣ ಅಡಿಗರು ತಾವು ಬರಹಗಾರನಾದ ರೀತಿಯನ್ನು ಸಂದರ್ಶನವೊಂದರಲ್ಲಿ ಹೀಗೆ ಹೇಳಿರುವರು “ಮೊದಲಿನಿಂದಲೂ ನಾನು ಅಂತರ್ಮುಖಿ. ನನ್ನಲ್ಲೇ ನಾನು ಲೀನನಾಗುವ ಸ್ವಭಾವ. ಯಾವಾಗಲೂ ನಾನು ಏಕಾಂಗಿ ಅನ್ನುವ ಭಾವನೆ. ಯಾವುದೋ ರೀತಿಯಿಂದ ಜಗತ್ತಿನಿಂದ ಉಳಿದ ಮನುಷ್ಯ ಸಂಬಂಧಗಳಿಂದ ಪ್ರತ್ಯೇಕನಾದವನು ಎನ್ನುವ ಭಾವನೆ. ಎಲ್ಲವನ್ನೂ ಕೊಂಚ ದೂರನಿಂತು ನೋಡಬೇಕು ಎನ್ನುವ ಭಾವನೆ. ಸಾಮಾನ್ಯವಾಗಿ ಮಾತನಾಡುವುದು ಬಹಳ ಕಡಿಮೆ. ಮಾತು ಕಡಿಮೆಯಾದ್ದರಿಂದ ಒಳಗಡೆ ನಾನು ಅನುಭವಿಸಿದ್ದು, ಭಾವಿಸಿದ್ದು, ಚಿಂತಿಸಿದ್ದು ಇವೆಲ್ಲಾ ಸೇರಿಕೊಂಡು ಅಭಿವ್ಯಕ್ತಿಯನ್ನು ಬಯಸುತ್ತಾ ಇರುತ್ತವೆ. ಹಾಗಾಗಿ ನಾನು ಬರಹಗಾರನಾದೆ”. 

    ಜೊತೆಗೆ ಗೋಪಾಲಕೃಷ್ಣ ಅಡಿಗರು ಬರಹಗಾರನ ಮನಸ್ಸು ಸದಾಕಾಲ ಹೊಸತನಕ್ಕೆ ತುಡಿಯುತ್ತಿದ್ದರೆ ಮಾತ್ರ ಲೇಖಕ ಹೊಸದನ್ನು ಸೃಷ್ಟಿಸಲು ಸಾಧ್ಯ ಎನ್ನುತ್ತಾರೆ. ಹೀಗಾಗಿ ಬರಹಗಾರನಲ್ಲಿ ಆತನ ವಿಚಾರಗಳು ಮತ್ತೆ ಮತ್ತೆ ಮರುಹುಟ್ಟು ಪಡೆಯುತ್ತಿರಬೇಕು. ದೇಹದ ಮೇಲಿನ ಚರ್ಮದಂತೆ ಆಲೋಚನೆಗಳು ಮತ್ತು ವಿಚಾರಗಳು ಕಾಲಕಾಲಕ್ಕೆ ಹೊಸತನವನ್ನು ಹೊಂದಬೇಕು. ಪೂರ್ವಾಗ್ರಹ ಪೀಡೆಗೆ ನಮ್ಮ ಆಲೋಚನೆಗಳು ಒಳಗಾದಲ್ಲಿ ಲೇಖಕನಿಂದ ಹೊಸ ಸೃಜನಶೀಲ ಸೃಷ್ಟಿಯ ಸಾಧ್ಯತೆ ಅಸಾಧ್ಯವಾದದ್ದು. ಮನುಷ್ಯನ ಆಲೋಚನೆಗಳ ಮರುಹುಟ್ಟನ್ನು ಕುರಿತು ಅಡಿಗರು ಹೀಗೆ ಹೇಳುತ್ತಾರೆ “ಬದುಕಿರುವಾಗಲೇ ಮತ್ತೆ ಮತ್ತೆ ಸಾಯದೇ ಹೋದ ಪಕ್ಷದಲ್ಲಿ ಹೊಸ ಸೃಷ್ಟಿ ಸಾಧ್ಯ ಆಗೋದಿಲ್ಲ. ಇಲ್ಲಿ ನಾನು ಸಾಯುವುದನ್ನು ಭೌತಿಕ ಅರ್ಥದಲ್ಲಿ ಹೇಳುತ್ತಿಲ್ಲ ಅದು ಮನಸ್ಸಿಗೆ ಸಂಬಂಧಿಸಿದ್ದು. ಮನುಷ್ಯನ ಆಲೋಚನೆಗಳು, ವಿಚಾರಗಳು ಕಾಲಕಾಲಕ್ಕೆ ಮರುಹುಟ್ಟು ಪಡೆಯುತ್ತಿರಬೇಕು. ಇಲ್ಲದೆ ಹೋದರೆ ಅವನಿಗೆ ಬೆಳೆಯೋಕಾಗೋದಿಲ್ಲ. ಇನ್ನು ನಾನು ಬರೆಯಲಾರೆ ಎನ್ನುವುದು ನನಗೆ ಸಾವಿನಂತೆ ಕಾಣಿಸುತ್ತದೆ. ಮತ್ತೆ ನಾನು ಹೊಸ ಮನುಷ್ಯನಾಗಿ ಹೊಸ ಸೃಷ್ಟಿಗಾಗಿ ಹಂಬಲಿಸುತ್ತೇನೆ. ಅದಕ್ಕೆಂದೇ ಕೀಟ್ಸ್ ಹೇಳುತ್ತಾನೆ dying in to a new life  ಎಂದು”.

     ಇನ್ನು ಸಾಹಿತ್ಯದಂಥ ಸೃಜನಶೀಲ ಸೃಷ್ಟಿಯನ್ನು ಒಂದು ಧರ್ಮದಂತೆ, ವ್ರತದಂತೆ ಅಪರಿಮಿತವಾಗಿ ಪ್ರೀತಿಸಿದ ಬರಹಗಾರರ ಸಂಖ್ಯೆ ಏನೂ ವಿರಳವಾಗಿಲ್ಲ. ಇವರ ದೃಷ್ಟಿಯಲ್ಲಿ ಸಾಹಿತ್ಯ ಸಮಾಜಿಕ ಸ್ಥಿತ್ಯಂತರಗಳಿಗೆ ಕಾರಣವಾಗುವ ಬಹುದೊಡ್ಡ ಸೃಜನಶೀಲ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬರಹಗಾರ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಂಡಲ್ಲಿ ಸಾಹಿತ್ಯದಿಂದ ದೊಡ್ಡ ದೊಡ್ಡ ಜಿಗಿತಗಳು ಮತ್ತು ಪಲ್ಲಟಗಳಾಗಲಿವೆ ಎನ್ನುವ ನಂಬಿಕೆ ಅನೇಕ ಬರಹಗಾರರದು. ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು  ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೊದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ ಬರವಣಿಗೆಯೇ  ನನ್ನ ಬದುಕು”.

     ಯೋಸಾನ ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಎನ್ನುವ ಮಾತು ನನಗೆ ಸಾವನ್ನು ಕುರಿತು ಫ್ರೆಂಚ್ ಲೇಖಕ ಸಾರ್ತ್ರೆ ಹೇಳಿದ ಮಾತುಗಳನ್ನು ನೆನಪಿಸುತ್ತಿದೆ. ಸಾರ್ತ್ರೆಯ ಪ್ರಕಾರ ಮನುಷ್ಯ ಸತ್ತ ನಂತರವೂ ಜೀವಿಸುತ್ತಾನೆ ಅದು ಬದುಕಿರುವವರ ಕೈಯಲ್ಲಿ. ಬದುಕಿರುವವರ ಕೈಯಲ್ಲಿ ಸತ್ತವನ ಬದುಕು ಹೊಗಳಿಕೆಯಾಗಿಯೋ ಇಲ್ಲವೇ ದಂಡನೆಗೆ ಒಳಗಾಗಿಯೋ ಮತ್ತೆ ಮರುಹುಟ್ಟು ಪಡೆಯುತ್ತದೆ ಎಂದು ಸಾರ್ತ್ರೆ ನುಡಿಯುತ್ತಾನೆ. ಅವನ ಪ್ರಕಾರ ಒಂದರ್ಥದಲ್ಲಿ ಸಾವೆನ್ನುವುದು ಸತ್ತ ವ್ಯಕ್ತಿಯ ಬಾಳನ್ನು ದಂಡನೆಗೆ ಒಳಪಡಿಸಿದಂತೆ. ಸಾವನ್ನು ಸಾರ್ತ್ರೆ ಕಾಣುವ ರೀತಿ ಹೀಗಿದೆ “ಸಾವು ವ್ಯಕ್ತಿಯ ಬಾಳಿನ ಹಿಂದಿನ ದಿನಗಳನ್ನು ಬದಲಾಯಿಸಲು ಒಂದು ನಿರ್ಧಿಷ್ಟತೆ ತಂದು ಬಿಡುತ್ತದೆ. ಸತ್ತ ನಂತರದ ಬಾಳು ಬದುಕಿರುವವರ ಸ್ವತ್ತಾಗುತ್ತದೆ. ಸತ್ತವರ ಬದುಕನ್ನು ನಂತರದ ಪೀಳಿಗೆ ಉಳಿಸಿಕೊಳ್ಳಬಹುದು ಅಥವಾ ಕತ್ತಲೆಗೆ ತಳ್ಳಬಹುದು. ಸತ್ತವರ ಅದೃಷ್ಟ ಬದುಕಿರುವವರ ಕೈಯಲ್ಲಿ. ಆದ್ದರಿಂದ ಸಾಯುವುದೆಂದರೆ ಬೇರೆಯವರ ಮೂಲಕ ದಂಡನೆಗೆ ಒಳಗಾದಂತೆ”.

      ಸಾಹಿತ್ಯದ ಓದು ಕಟ್ಟಿ ಕೊಡುವ ಅನುಭವ ಅನನ್ಯವಾದದ್ದು. ನಮ್ಮ ಅಂತ:ಸಾಕ್ಷಿಯನ್ನು ಪ್ರವೇಶಿಸಿ ಆತ್ಮವಿಮರ್ಶೆಗೆ ದಾರಿಮಾಡಿಕೊಡುವ ಸಾಹಿತ್ಯ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ  ಒಳಪಡಿಸುತ್ತದೆ. ನಮಗೆ ನಾವು ಸತ್ಯ ಹೇಳಿಕೊಳ್ಳುವ ಸಾಮರ್ಥ್ಯವನ್ನು ಪಡೆದಲ್ಲಿ ನಾವು ಮನುಷ್ಯರಾದಂತೆ ಎಂದು ಲೇಖಕರೊಬ್ಬರು ನುಡಿಯುತ್ತಾರೆ. ಇದು ಸಾಧ್ಯವಾಗುವುದು ಸಾಹಿತ್ಯದಂಥ ಸೃಜನಶೀಲ ಪ್ರಕ್ರಿಯೆಯಲ್ಲಿ ಮನುಷ್ಯ ಪಾಲ್ಗೊಂಡಾಗ ಮಾತ್ರ. ಏಕೆಂದರೆ ಸಾಹಿತ್ಯದಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ