Tuesday, January 2, 2018

ವಿದ್ಯುನ್ಮಾನ ವಾಹಿನಿಗಳಿಗೆ ಬೇಕಿದೆ ನೀತಿ ಸಂಹಿತೆ



      
     ಮೊನ್ನೆ ಮೊನ್ನೆಯಷ್ಟೆ ಇಂಥದ್ದೊಂದು ದುರ್ಘಟನೆ ನಡೆದು ಹೋಯಿತು. ಎಳು ವರ್ಷ ವಯಸ್ಸಿನ ಬಾಲಕಿ ಮೈಗೆ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡಲು ಪ್ರಯತ್ನಿಸಿ ಆಸ್ಪತ್ರೆ ಸೇರಿ ಅಸುನೀಗಿದಳು. ಇನ್ನು ಬಾಳಿ ಬದುಕಬೇಕಾದ ಕಂದಮ್ಮ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದು ಅಪ್ಪ ಅಮ್ಮನನ್ನು ತೀವ್ರ ಸಂಕಟಕ್ಕೀಡು ಮಾಡಿದೆ. ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ದಾರಾವಾಹಿಯ ಸನ್ನಿವೇಶದಿಂದ ಪ್ರೇರಿತವಾದ ಆ ಮಗು ಮನೆಯಲ್ಲಿ ಅಪ್ಪ ಅಮ್ಮ ಇಲ್ಲದ ಸಂದರ್ಭ ಮೈಗೆ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡಲೆತ್ನಿಸಿ ಅಕಾಲ ಮರಣಕ್ಕೆ ತುತ್ತಾಯಿತು. ಬ್ಲೂವೇಲ್‍ನಂಥ ದೂರ ದೇಶದ ಆಟ ಈಗಾಗಲೇ ಭಾರತದಲ್ಲಿ ನಾಲ್ಕಾರು ಸಾವುಗಳಿಗೆ ಕಾರಣವಾಗಿರುವಾಗ ನಮ್ಮದೇ ಭಾಷೆಯ ಮತ್ತು ನೆಲದ ಧಾರಾವಾಹಿ ಕಾರ್ಯಕ್ರಮವೊಂದು ಬಾಲಕಿಯ ಸಾವಿಗೆ ಪ್ರಚೋದನೆ ನೀಡಿದ್ದು ತುಂಬ ಆತಂಕದ ವಿಷಯವಾಗಿದೆ. ಮನೋವಿಜ್ಞಾನಿಗಳು ಬಹಳಷ್ಟು ಆತ್ಮಹತ್ಯೆ ಮತ್ತು ಅಪರಾಧ ಪ್ರಕರಣಗಳಿಗೆ ಇವತ್ತು ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳೇ ಬಹುಪಾಲು ಕಾರಣ ಎನ್ನುತ್ತಾರೆ. ಅದರಲ್ಲೂ ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಂದ ಪ್ರಚೋದಿತರಾಗಿ ಆತ್ಮಹತ್ಯೆಗೆ ಒಳಗಾಗುವ ಮತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರಲ್ಲಿ ಮಕ್ಕಳ ಮತ್ತು ಯುವಜನತೆಯ ಸಂಖ್ಯೆಯೇ ಬಹಳಷ್ಟಿದೆ. ಹೀಗೆ ರಾಷ್ಟ್ರವೊಂದರ ಮುಂದಿನ ಭಾವಿಪ್ರಜೆಗಳಾಗುವ ಮಕ್ಕಳು ಮತ್ತು ಯುವಜನತೆಯನ್ನು ನಮ್ಮ ವಿದ್ಯುನ್ಮಾನ ವಾಹಿನಿಗಳು ತಪ್ಪುದಾರಿಗೆಳೆಯುತ್ತಿವೆ ಎನ್ನುವ ಗುರುತರವಾದ ಅಪವಾದ ಈ ಮಾಧ್ಯಮದ ಮೇಲಿದೆ. 

ಭೂತ ಚೇಷ್ಟೆ ಮತ್ತು ಸರ್ಪ ಮತ್ಸರ

ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಬಹಳಷ್ಟು ಧಾರಾವಾಹಿಗಳಲ್ಲಿ ಭೂತ ಚೇಷ್ಟೆ ಇಲ್ಲವೆ ಸರ್ಪ ಮತ್ಸರದ ಕಥೆ ಪ್ರಧಾನ ಭೂಮಿಕೆಯಲ್ಲಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಈ ಪ್ರಕಾರದ ಕಥೆಗಳು ಸಮ್ಮೋಹಿನಿಯಂತೆ ಸೆಳೆಯುತ್ತಿರುವುದು ಮತ್ತು ಈ ಪ್ರವಾಹದ ನಡುವೆ ವಾಸ್ತವಕ್ಕೆ ಹತ್ತಿರವಾದ ಕಥಾ ಹಿನ್ನೆಲೆಯ ಧಾರಾವಾಹಿಗಳು ಪ್ರೇಕ್ಷಕರ ಕೊರತೆಯನ್ನು ಅನುಭವಿಸುತ್ತಿರುವುದು ದುರಂತದ ವಿಷಯ. ಜೊತೆಗೆ ಇಂಥ ಕಥಾವಸ್ತುವನ್ನಿಟ್ಟುಕೊಂಡು ರೋಚಕ ದೃಶ್ಯಗಳನ್ನು ನಿರ್ಮಿಸಲು ಈ ಆಧುನಿಕ ತಂತ್ರಜ್ಞಾನ ನೆರವಿಗೆ ಬರುತ್ತಿರುವುದರಿಂದ ನಿರ್ದೇಶಕರಿಗೆ ಅವರ ಕೆಲಸ ಅತ್ಯಂತ ಸುಲಭವಾಗಿದೆ. ಆದ್ದರಿಂದ ಧಾರಾವಾಹಿಗಳಲ್ಲಿ ಹೆಣ್ಣೊಬ್ಬಳು ಇದ್ದಕ್ಕಿದ್ದಂತೆ ಹಾವಾಗಿ ರೂಪತಾಳುತ್ತಾಳೆ, ಸತ್ತ ಸೊಸೆ ಪ್ರೇತವಾಗಿ ಮನೆ ತುಂಬ ಓಡಾಡುತ್ತಾಳೆ, ಪ್ರೇತದ ಸಹಾಯದಿಂದ ಮಗುವೊಂದು ಭೂತ ಬಿಡಿಸುವವರನ್ನು ಆಟವಾಡಿಸುತ್ತದೆ ಹೀಗೆ ಬದುಕಿನ ವಾಸ್ತವಿಕತೆಗೆ ಸಂಬಂಧವೇ ಇಲ್ಲದ ಕಥೆಗಳು ಧಾರಾವಾಹಿಗಳಾಗಿ ನಮ್ಮ ನಮ್ಮ ಮನೆಯ ಪುಟ್ಟ ಪರದೆಯ ಮೇಲೆ ಪ್ರಸಾರವಾಗಿ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತವೆ ಮತ್ತು ನೋಡುಗರು ಕೂಡ ಈ ಧಾರಾವಾಹಿಗಳನ್ನು ಯಶಸ್ಸಿನ ದಂಡೆಗೆ ಮುಟ್ಟಿಸುತ್ತಾರೆ. 

ಈ ಧಾರಾವಾಹಿಗಳಲ್ಲಿನ ಇನ್ನೊಂದು ಪ್ರಮುಖ ದೋಷ ಇಲ್ಲಿ ಗಟ್ಟಿಯಾದ ಕಥೆ ಇಲ್ಲದಿರುವುದು ಮತ್ತು ಇರುವ ಜಾಳುಜಾಳಾದ ಕಥೆ ಅದು ಯಾವ ಘಳಿಗೆಯಲ್ಲಾದರೂ ಹೊಸ ರೂಪ ತೊಟ್ಟು ಹಳೆಯದರಿಂದ ಸುಲಭವಾಗಿ ಕಳಚಿಕೊಂಡು ಹೊರಬರಬಹುದು. ಈ ಕಾರಣದಿಂದ ಇಲ್ಲಿ ಹಲವು ವರ್ಷಗಳಾದರೂ ಧಾರಾವಾಹಿಗಳಿಗೆ ಕೊನೆ ಎನ್ನುವುದಿರುವುದಿಲ್ಲ. ಕೆಲವು ವಾಹಿನಿಗಳಲ್ಲಿ ದಶಕಗಳ ಕಾಲ ಕೆಲವೊಂದು ಧಾರಾವಾಹಿಗಳು ಪ್ರಸಾರವಾಗಿ ದಾಖಲೆಯನ್ನೇ ನಿರ್ಮಿಸಿವೆ. ದೃಶ್ಯ ಮಾಧ್ಯಮ ತನ್ನ ಜನಪ್ರಿಯತೆಯ ಮಾನದಂಡಕ್ಕಾಗಿ ಕಟ್ಟಿಕೊಂಡ ಟಿ.ಆರ್.ಪಿ ಗೆ ಅನುಗುಣವಾಗಿ ಈ ಧಾರಾವಾಹಿಗಳ ಕಥೆಗಳು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತವೆ. ಇಲ್ಲಿ ಕಥೆ ಬದಲಾಗುತ್ತದೆ, ಪಾತ್ರಗಳು ಬದಲಾಗುತ್ತವೆ, ಆತ್ಮ ಪ್ರೇತಾತ್ಮಗಳು ಮೈದಾಳುತ್ತವೆ, ಬೃಹದಾಕಾರದ ಹಾವೊಂದು ಪರದೆಯ ಮೇಲೆ ಕಾಣಿಸಿ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡುತ್ತದೆ. ಒಟ್ಟಾರೆ ಈ ಧಾರಾವಾಹಿಗಳ ಮೂಲಕ ಭ್ರಾಮಕ ಜಗತ್ತನ್ನು ಸೃಷ್ಟಿಸಿ ಹೀಗೆ ಸೃಷ್ಟಿಯಾದ ಭ್ರಮೆಯ ಲೋಕವನ್ನು ನಿಜವೆಂದು ನಂಬಿ ಯುವ ಪೀಳಿಗೆ ಅದರಲ್ಲೂ ಚಿಕ್ಕ ವಯಸ್ಸಿನ ಮಕ್ಕಳು ಸಾವಿನ ಮನೆಯ ಕದ ಬಡಿಯುತ್ತಿರುವುದು ವಿದ್ಯುನ್ಮಾನ ವಾಹಿನಿಗಳು ಕೊಡ ಮಾಡುತ್ತಿರುವ ಬಹುದೊಡ್ಡ ದುರಂತಗಳಲ್ಲೊಂದು. 

ರಿಯಾಲಿಟಿ ಶೋಗಳು

ಹಲವು ದಶಕಗಳ ಹಿಂದೆ ಖಾಸಗಿ ವಿದ್ಯುನ್ಮಾನ ವಾಹಿನಿಯಲ್ಲಿ ‘ಕೋನ್ ಬನೇಗಾ ಕರೋಡಪತಿ’ ರಿಯಾಲಿಟಿ ಶೋ ಪ್ರಸಾರವಾದಾಗ ಅದು ಅತ್ಯಂತ ಜನಪ್ರಿಯತೆಯನ್ನು ಪಡೆಯಿತು. ಈ ಕಾರ್ಯಕ್ರಮದ ಜನಪ್ರಿಯತೆಯನ್ನೆ ಆಧಾರವಾಗಿಟ್ಟುಕೊಂಡು ನಂತರದ ದಿನಗಳಲ್ಲಿ ಅನೇಕ ರಿಯಾಲಿಟಿ ಶೋಗಳು ನಿರ್ಮಾಣಗೊಂಡು ಅದ್ಭುತ ಯಶಸ್ಸನ್ನು ಪಡೆಯುವುದರೊಂದಿಗೆ ಇವತ್ತು ಈ ಪ್ರಕಾರದ ಕಾರ್ಯಕ್ರಮದ ವೀಕ್ಷಣೆ ಪ್ರೇಕ್ಷಕರಿಗೆ ಗೀಳಾಗಿ ಪರಿಣಮಿಸಿದೆ. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಈ ರಿಯಾಲಿಟಿ ಶೋಗಳು ಕಡಿಮೆ ಅವಧಿಯಲ್ಲಿ ತಂದು ಕೊಡುವ ಜನಪ್ರಿಯತೆ ಸ್ಪರ್ಧಿಗಳ ಬದುಕನ್ನು ನರಕವಾಗಿಸುತ್ತಿದೆ. ಹಳ್ಳಿ ಹೈದ ಪ್ಯಾಟಿಗೆ ಬಂದ ರಿಯಾಲಿಟಿ ಶೋನ ಖ್ಯಾತಿಯ ರಾಜೇಶನ ಬದುಕು ಇದಕ್ಕೊಂದು ಜ್ವಲಂತ ನಿದರ್ಶನವಾಗಿದೆ. ಕಾಡಿನ ಮೂಲೆಯೊಂದರಲ್ಲಿ ತನ್ನ ಅಮಾಯಕ ಬದುಕು ಸಾಗಿಸುತ್ತಿದ್ದ ರಾಜೇಶನನ್ನು ವಾಹಿನಿಯವರು ಹಿಡಿದು ತಂದು ರಿಯಾಲಿಟಿ ಶೋನ ಸ್ಪರ್ಧಿಯಾಗಿಸಿದಾಗ ಆತನ ಬದುಕು ಹೊಸದೊಂದು ಬೆಳವಣಿಗೆಗೆ ತೆರೆದುಕೊಂಡಿತೆಂದು ಎಲ್ಲರೂ ಭಾವಿಸಿದ್ದರು. ಆದರೆ ದೊರೆತ ಯಶಸ್ಸು ಆ ಹುಡುಗನ ಬದುಕನ್ನೆ ಬಲಿ ತೆಗೆದುಕೊಂಡು ಬಿಟ್ಟಿತು. ಯಶಸ್ಸೆನ್ನುವುದು ಬದುಕಿನ ಒಂದು ಭಾಗವೆ ವಿನ: ಅದೇ ಬದುಕಲ್ಲ ಎಂದು ಅರಿಯುವಲ್ಲಿ ಎಡವಿದ ಆತ ತನ್ನ ಸುತ್ತ ಒಂದು ಭ್ರಮೆಯ ಬದುಕನ್ನು ಕಟ್ಟಿಕೊಂಡು ಮಾನಸಿಕ ರೋಗಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡ. ಬಿಗ್ ಬಾಸ್‍ನಂಥ ಕಾರ್ಯಕ್ರಮ ಸ್ಪರ್ಧಿಗಳನ್ನು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿಗಳನ್ನಾಗಿಸುತ್ತಿದೆ. ಪ್ರೇಕ್ಷಕರನ್ನು ಕಾರ್ಯಕ್ರಮದತ್ತ ಸೆಳೆಯಲು ಮತ್ತು ಟಿ.ಆರ್.ಪಿ ರೇಟನ್ನು ಹೆಚ್ಚಿಸಲು ಸ್ಪರ್ಧಿಗಳು ಅಸಹಜ ಆಟಕ್ಕೆ ಮೊರೆ ಹೋಗುತ್ತಾರೆ. ‘ಸನ್ನಿವೇಶಗಳಾಗಲಿ, ಸಂದರ್ಭ ಕ್ರಿಯೆಗಳಾಗಲಿ ಪೂರ್ವನಿಯೋಜಿತವಲ್ಲವೆಂದೂ ಇಡೀ ಕಾರ್ಯಕ್ರಮಕ್ಕೆ ನಿರ್ಧಿಷ್ಟವಾದ ಸ್ಕ್ರಿಪ್ಟ್ ಇಲ್ಲವೆಂದೂ ಸಾರುವ ಇಂಥ ಕಾರ್ಯಕ್ರಮಗಳು ತಮ್ಮ ವಾಸ್ತವಿಕತೆಯ ಸ್ವರೂಪದಿಂದಲೇ ವೀಕ್ಷಕರನ್ನು ಸೆಳೆಯುತ್ತವೆ’ ಎನ್ನುತ್ತಾರೆ ಕಥೆಗಾರ ದಿವಾಕರ್. ಅಲ್ಪ ಸಮಯದಲ್ಲೇ ದೊರೆಯುವ ಯಶಸ್ಸು ಸ್ಪರ್ಧಿಗಳನ್ನು ಉನ್ಮತ್ತಗೊಳಿಸಿ ಅವರ ಸುತ್ತ ಒಂದು ಭ್ರಾಮಕ ಜಗತ್ತನ್ನು ಸೃಷ್ಟಿಸುತ್ತದೆ.  ಬಿಗ್ ಬಾಸ್‍ನಂಥ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಪರಸ್ಪರ ಅವಮಾನಿಸುವ ಮತ್ತು ನೋಯಿಸುವ ಕ್ರಿಯೆಯೇ  ಮುಖ್ಯವಾಗಿದ್ದು ಕಾರ್ಯಕ್ರಮದ ಸಂಯೋಜಕರು ಇಂಥ ಕ್ರಿಯೆಗಾಗಿಯೇ ಪ್ರತಿವಾರ ಟಾಸ್ಕ್ ಗಳನ್ನು  ನೀಡುತ್ತ ಹೋಗುತ್ತಾರೆ. ಪ್ರಖ್ಯಾತ ಮನೋವಿಜ್ಞಾನಿ ಎರಿಕ್ ಪ್ರಾಮ್ ‘ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆ ಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ’ ಎಂದು ಅಭಿಪ್ರಾಯಪಡುತ್ತಾನೆ. ಜೊತೆಗೆ ಆಧುನಿಕ ಮನುಷ್ಯರಲ್ಲಿ ಇತರರ ನೋವನ್ನು, ಅವಮಾನವನ್ನು ನೋಡಿ ಸಂತೋಷಪಡುವ ಪ್ರವೃತ್ತಿ ಹೆಚ್ಚುತ್ತಿದೆಯೆಂದು ಆತಂಕ ವ್ಯಕ್ತಪಡಿಸುತ್ತಾನೆ. ವೀಕ್ಷಕರಲ್ಲಿನ ಇಂಥ ಪ್ರವೃತ್ತಿಯೇ ಬಿಗ್ ಬಾಸ್‍ನಂಥ ರಿಯಾಲಿಟಿ ಶೋಗಳು ಜನಪ್ರಿಯವಾಗಲು ಕಾರಣವಾಗುತ್ತಿದೆ. 

ಇವತ್ತು ವಿದ್ಯುನ್ಮಾನ ವಾಹಿನಿಗಳು ಚಿಕ್ಕ ಮಕ್ಕಳನ್ನು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳಾಗಿ ಬಳಸಿಕೊಳ್ಳುತ್ತಿರುವುದು ಮತ್ತು ಪೋಷಕರು  ಕೂಡ ಸಹಕರಿಸುತ್ತಿರುವುದು ರಿಯಾಲಿಟಿ ಶೋಗಳ ಜನಪ್ರಿಯತೆ ಮತ್ತು ಜನಾಕರ್ಷಣೆಗೆ ಸಾಕ್ಷಿಯಾಗಿದೆ. ನಾಲ್ಕು ವರ್ಷದ ಮಗುವೊಂದು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಶೋನ ಕೊನೆಯವರೆಗೂ ಸ್ಪರ್ಧಿಯಾಗಿ ಉಳಿಯುವುದು ಮತ್ತು ಆ ಮಗು ತನ್ನ ವಯಸ್ಸಿಗೂ ಮೀರಿದ ಗಾಂಭೀರ್ಯವನ್ನು ಪ್ರದರ್ಶಿಸುವುದು ಅತ್ಯಂತ ಬಾಲೀಶವಾಗಿ ಕಾಣಿಸುತ್ತದೆ. ಹೀಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಒಂದೆಡೆ ಪೋಷಕರಿಂದ ಇನ್ನೊಂದೆಡೆ ತರಬೇತಿದಾರರಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಇಲ್ಲಿ ಸ್ಪರ್ಧೆಯ ಹೆಸರಿನಲ್ಲಿ ಮಕ್ಕಳನ್ನು ಯಂತ್ರಗಳಂತೆ ಬಳಸಿಕೊಳ್ಳುತ್ತಿರುವುದು ಮತ್ತು ರಿಯಾಲಿಟಿ ಶೋ ತಂದುಕೊಂಡುವ ಅಲ್ಪಕಾಲದ ಜನಪ್ರಿಯತೆ ಮತ್ತು ಯಶಸ್ಸನ್ನು ಇನ್ನು ಅರಗಿಸಿಕೊಳ್ಳದ ವಯಸ್ಸಿನ ಪರಿಣಾಮ ಮಕ್ಕಳು ತಮ್ಮ ಸಹಜ ಬಾಲ್ಯದಿಂದ ವಂಚಿತರಾಗುತ್ತಿರುವರು. 

ರೋಚಕ ಸುದ್ದಿ

1984 ರಲ್ಲಿ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ ಬೆಳಿಗ್ಗೆ ನಡೆದ ಈ ದುರ್ಘಟನೆ ದೇಶದ ಸಾರ್ವಜನಿಕರನ್ನು ತಲುಪಲು ಮಧ್ಯಾಹ್ನ ಮೂರುಗಂಟೆಯಾಗಿತ್ತು. ಪತ್ರಿಕೆಗಳು ಪ್ರಕಟವಾಗಿ ಓದುಗರ ಕೈಸೇರಿದ ನಂತರ ಘಟಿಸುವ ಘಟನೆಗಳನ್ನು ಓದುಗರಿಗೆ/ಜನರಿಗೆ ತಲುಪಿಸಲು ನಾಲ್ಕೈದು ಪುಟಗಳ ಸಂಜೆ ಪತ್ರಿಕೆಗಳನ್ನು ಮುದ್ರಿಸುವ ವ್ಯವಸ್ಥೆ ಆಗೆಲ್ಲ ಜಾರಿಯಲ್ಲಿತ್ತು. ಆದರೆ ಇವತ್ತು ಆಧುನಿಕ ತಂತ್ರಜ್ಞಾನದ ಪರಿಣಾಮ ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆದ ಸುದ್ದಿಯನ್ನು ಕ್ಷಣಮಾತ್ರದಲ್ಲಿ ಬಿತ್ತರಿಸುವ ಅನುಕೂಲ ಈ ವಿದ್ಯುನ್ಮಾನ ವಾಹಿನಿಗಳಿಗೆ ಪ್ರಾಪ್ತವಾಗಿದೆ. ಅದಕ್ಕೆಂದೆ ಕನ್ನಡ ಭಾಷೆಯಲ್ಲೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸುದ್ದಿ ವಾಹಿನಿಗಳು ಚಲಾವಣೆಯಲ್ಲಿವೆ. ರಸ್ತೆ ಅಪಘಾತ, ಹೊಡೆದಾಟದಂಥ ಸುದ್ದಿಗಳನ್ನು ಲೈವ್ ಆಗಿ ತೋರಿಸುವ ಸುದ್ದಿ ವಾಹಿನಿಗಳು ಪೈಪೋಟಿಯಂತೆ ರೋಚಕ ಸುದ್ದಿಗಳ ಬೆನ್ನುಹತ್ತಿ ಹಸಿಬಿಸಿ ದೃಶ್ಯಗಳನ್ನು ಬಿತ್ತರಿಸುವುದರ ಮೂಲಕ ಸಮಾಜದಲ್ಲಿನ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ರಸ್ತೆ ಅಪಘಾತದಂಥ ದೃಶ್ಯಗಳನ್ನು ದಿನವಿಡೀ ಪ್ರದರ್ಶಿಸುವುದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಪ್ರತಿಯೊಂದು ಸುದ್ದಿಗೂ ಬ್ರೇಕಿಂಗ್ ನ್ಯೂಸ್ ಎನ್ನುವ ಹಣೆಪಟ್ಟಿ ಅಂಟಿಸಿ ಬಿತ್ತರಿಸುವುದು ನಮ್ಮ ವಿದ್ಯುನ್ಮಾನ ಸುದ್ದಿ ವಾಹಿನಿಗಳಿಗೆ ಅದೊಂದು ಗೀಳಾಗಿ ಪರಿಣಮಿಸಿದೆ. ಅಪರಾಧ ಲೋಕವೇ ಈ ಸುದ್ದಿ ವಾಹಿನಿಗಳಿಂದ ನಮ್ಮ ಕಣ್ಣೆದುರು ಅನಾವರಣಗೊಳ್ಳುತ್ತಿದೆ. ಕ್ರೈಮ್ ಸುದ್ದಿಗಳನ್ನು ಬಿತ್ತರಿಸಲು ನಡೆದ ಅಪರಾಧ ಪ್ರಕರಣಗಳ ನಕಲು ಛಾಯೆಯನ್ನು ಅತ್ಯಂತ ರೋಚಕವಾಗಿ ರೂಪಿಸಿ ನೋಡುಗರ ಮುಂದಿಡುತ್ತಿರುವ ವಾಹಿನಿಗಳು ಒಂದರ್ಥದಲ್ಲಿ ಅಪರಾಧ ಪ್ರಕರಣಗಳು ಸಮಾಜದಲ್ಲಿ ಹೆಚ್ಚಲು ಕಾರಣವಾಗುತ್ತಿವೆ.  

ಕಾಡುತ್ತಿರುವ ಭವಿಷ್ಯದ ಚಿಂತೆ

ಜನರ ಭಾವನೆಗಳನ್ನೆ ಬಂಡವಾಳವಾಗಿಸಿಕೊಂಡು ಇವತ್ತು ಜ್ಯೋತಿಷಿಗಳು ವಾಹಿನಿಗಳ ಮೂಲಕ ಸೆಲೆಬ್ರಿಟಿಗಳಾಗುತ್ತಿರುವರು. ಜನಪ್ರಿಯತೆಗಾಗಿ ಪ್ರತಿಯೊಂದು ವಾಹಿನಿಗಳು ಜ್ಯೋತಿಷ್ಯ ಶಾಸ್ತ್ರದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರುವರು. ಹೋಮ, ಹವನ, ವಾಸ್ತು, ಸಂಖ್ಯಾಶಾಸ್ತ್ರದಂಥ ಕಾರ್ಯಕ್ರಮಗಳಿಗೆ ವಾಹಿನಿಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನರೇಕೆ ಇಂಥ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವರು ಎನ್ನುವ ಪ್ರಶ್ನೆಗೆ ಮನೋವಿಜ್ಞಾನಿಗಳು ಇವತ್ತಿನ ಒತ್ತಡದ ಬದುಕೇ ಇದಕ್ಕೆಲ್ಲ ಕಾರಣ ಎಂದು ಉತ್ತರಿಸುತ್ತಾರೆ. ಓದು, ಉದ್ಯೋಗ ಹೀಗೆ ಪ್ರತಿ ಸಂದರ್ಭದಲ್ಲೂ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಿರುವನು. ಉದ್ಯೋಗ ಕ್ಷೇತ್ರದಲ್ಲಿನ ಸ್ಪರ್ಧೆ ಮತ್ತು ಒತ್ತಡ ಕುಟುಂಬ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ ಮನೋಕ್ಲೇಶಕ್ಕೆ ಒಳಗಾಗುವವರಿಗೆ ಹುಲ್ಲು ಕಡ್ಡಿಯೂ ಆಸರೆ ಎನ್ನುವಂತೆ ಜೋತಿಷ್ಯಶಾಸ್ತ್ರ ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವ ಪರ್ಯಾಯ ಮಾರ್ಗವಾಗಿ ಕಾಣಿಸುತ್ತಿದೆ. ಇಲ್ಲಿ ಜನರ ಇಂಥ ಮನಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಜ್ಯೋತಿಷಿಗಳು ಜ್ಯೋತಿಷ್ಯಶಾಸ್ತ್ರವನ್ನು ಹಣ ಮಾಡುವ ದಂಧೆಯಾಗಿ ಪರಿವರ್ತಿಸಿದರೆ ವಾಹಿನಿಗಳು ತಮ್ಮ ಟಿಆರ್‍ಪಿ ರೇಟನ್ನು ಹೆಚ್ಚಿಸಿಕೊಳ್ಳಲು ಇಂಥ ಕಾರ್ಯಕ್ರಮಗಳ ಮೊರೆ ಹೋಗುತ್ತಿವೆ. 

ಕಥೆಯೇ ಇಲ್ಲದ ಮತ್ತು ವಾಸ್ತವಿಕತೆಗೆ ದೂರವಿರುವ ಧಾರಾವಾಹಿಗಳು, ಕ್ರೈಮ್ ಪ್ರಕರಣಗಳು, ಜ್ಯೋತಿಷ್ಯಶಾಸ್ತ್ರ, ಬ್ರೇಕಿಂಗ್ ನ್ಯೂಸ್ ಎನ್ನುವ ರೋಚಕ ಸುದ್ದಿ, ರಿಯಾಲಿಟಿ ಶೋಗಳೆನ್ನುವ ಅಸಹಜ ಆಟದ ಬೆನ್ನುಹತ್ತಿರುವ ವಾಹಿನಿಗಳು ಒಂದರ್ಥದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಪ್ರೇಕ್ಷಕರೂ ಕೂಡ ಇಂಥ ಅಸಹಜ ಮತ್ತು ರೋಚಕ ಕಾರ್ಯಕ್ರಮಗಳನ್ನು ವೀಕ್ಷಿಸುವುದರ ಮೂಲಕ ವಿದ್ಯುನ್ಮಾನ ವಾಹಿನಿಗಳಲ್ಲಿನ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುತ್ತಿರುವರು. ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಒಂದಿಷ್ಟು ಗುಣಾತ್ಮಕ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದರೂ ಈ ಖಾಸಗಿ ವಾಹಿನಿಗಳು ಕೊಡುವ ರೋಚಕತೆ ಮತ್ತು ಭ್ರಾಮಕತೆಯ ಎದುರು ದೂರದರ್ಶನದ ಕಾರ್ಯಕ್ರಮಗಳು ತೀರ ಸಪ್ಪೆಯಾಗಿ ಕಾಣಿಸುತ್ತಿವೆ. ಪರಿಣಾಮವಾಗಿ ದೂರದರ್ಶನದಲ್ಲಿನ ಅತ್ಯುತ್ತಮ ಕಾರ್ಯಕ್ರಮಗಳು ವೀಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಇಡೀ ಸಮಾಜವೇ ಅದೊಂದು ಅನಾರೋಗ್ಯಕರ ವ್ಯವಸ್ಥೆಯಾಗಿ ಬೆಳೆಯುವ ದಿನಗಳು ದೂರವಿಲ್ಲ. ಆದ್ದರಿಂದ ಖಾಸಗಿ ವಿದ್ಯುನ್ಮಾನ ವಾಹಿನಿಗಳಲ್ಲಿನ ಅಸಹಜ ಮತ್ತು ಅನಾರೋಗ್ಯಕರ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವುದು ಇವತ್ತಿನ ತುರ್ತು ಅಗತ್ಯವಾಗಿದೆ.   
(ಲೇಖನ ೧೭.೧೨.೨೦೧೭ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿದೆ)

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ