Tuesday, July 7, 2020

ಗ್ರಂಥಾಲಯ: ತಪ್ಪಿದ್ದೇಕೆ ಲಯ?

       


     
    (೨೭.೦೬.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

      ಕೆಲವು ದಿನಗಳ ಹಿಂದೆ ಪ್ರಜಾವಾಣಿಯ ‘ವಾಚಕರ ವಾಣಿ’ ಯಲ್ಲಿ ಕೊರೋನಾ ಕಾರಣದಿಂದ ಪ್ರವೇಶವನ್ನು ನಿರ್ಬಂಧಿಸಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುಗರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡ ಎರಡು ಪತ್ರಗಳು ಪ್ರಕಟವಾದವು. ಸಾರ್ವಜನಿಕ ಗ್ರಂಥಾಲಯಗಳಿಂದ ಓದುಗರ ಸಮೂಹ ವಿಮುಖವಾಗುತ್ತಿದೆ ಎನ್ನುವ ಆತಂಕದ ಸಮಯದಲ್ಲಿ ಓದುಗರು ಈ ರೀತಿಯ ಅಹವಾಲು ಮಾಡಿಕೊಳ್ಳುತ್ತಿರುವುದು ಒಂದೆಡೆ ಸಂತಸಕ್ಕೆ ಕಾರಣವಾದರೆ ಅದು ಒಂದು ಪ್ರಶ್ನೆಯನ್ನು ಕೂಡ ನಮ್ಮ ಮುಂದಿಡುತ್ತಿದೆ. ಹೀಗೆ ಅಹವಾಲು ಮಾಡಿಕೊಳ್ಳುತ್ತಿರುವ ಓದುಗರು ಯಾವ ವಯೋಮಾನದವರು? ಮತ್ತು ಅವರು ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಉಪಯೋಗಿಸುತ್ತಿರುವುದು ಯಾವ ಉದ್ದೇಶಕ್ಕಾಗಿ?. ಪ್ರಕಟವಾದ ಆ ಎರಡು ಪತ್ರಗಳಲ್ಲಿ ಓದುಗರೇ ನಿವೇದಿಸಿಕೊಂಡಂತೆ ಸ್ಪರ್ಧಾತ್ಮಕ ಪರೀಕ್ಷಾವಧಿ ಹತ್ತಿರ ಬರುತ್ತಿರುವುದರಿಂದ ಓದಲು ಅನುಕೂಲಕರವಾದ ಸ್ಥಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳ ಅಗತ್ಯದ ಕಾರಣ ಅವರಿಗೆ ಸಾರ್ವಜನಿಕ ಗ್ರಂಥಾಲಯಗಳ ಅವಶ್ಯಕತೆ ಎದುರಾಗಿದೆ. ಸಾರ್ವಜನಿಕ ಗ್ರಂಥಾಲಯದ ಒಬ್ಬ ನಿಯಮಿತ ಓದುಗನಾಗಿ ಈ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಉಪಯೋಗಿಸುತ್ತಿರುವ ಓದುಗರ ವಯೋಮಾನ ಮತ್ತು ಅವರ ಉದ್ದೇಶಗಳು ನನ್ನ ಅನುಭವಕ್ಕೆ ಬಂದಿವೆ.

    ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ ಗ್ರಂಥಾಲಯ ವ್ಯವಸ್ಥೆಯನ್ನು ಸಾರ್ವಜನಿಕ, ಶೈಕ್ಷಣಿಕ, ವಿಶಿಷ್ಠ ಮತ್ತು ರಾಷ್ಟ್ರೀಯ ಎಂದು ನಾಲ್ಕು ಘಟಕಗಳನ್ನಾಗಿ ವಿಭಾಗಿಸಲಾಗಿದೆ. ಶೈಕ್ಷಣಿಕ ಮತ್ತು ವಿಶಿಷ್ಠ ಗ್ರಂಥಾಲಯಗಳು ಅಕಾಡೆಮಿಕ್ ವಲಯಕ್ಕೆ ಸೇರಿದರೆ ಸಾರ್ವಜನಿಕ ಗ್ರಂಥಾಲಯಗಳನ್ನು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಪರಿಗಣಿಸಲಾಗಿದೆ. ಶೈಕ್ಷಣಿಕ ಹಾಗೂ ವಿಶಿಷ್ಠ ಗ್ರಂಥಾಲಯಗಳಲ್ಲಿ ಓದುಗರ ಪ್ರವೇಶಕ್ಕೆ ನಿರ್ಧಿಷ್ಟ ಮಾನದಂಡಗಳಿವೆ. ಒಂದು ಪ್ರಾಂತ್ಯದ ಎಲ್ಲ ಓದುಗರೂ ಆ ನಿರ್ಧಿಷ್ಟ ಮಾನದಂಡಗಳಿಗೆ ಒಳಪಡಲಾರರು. ಆದ್ದರಿಂದ ಸಾಮಾನ್ಯ ಜನರ ಓದಿನ ಅಭಿರುಚಿ ಮತ್ತು ಜ್ಞಾನದ ಹಸಿವನ್ನು ತಣಿಸಲು ಸಾರ್ವಜನಿಕ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದವು. ಸಾರ್ವಜನಿಕ ಗ್ರಂಥಾಲಯದ ಕಾರ್ಯಯೋಜನೆ ಪ್ರತಿ ಮನೆ ಮನೆಗೂ ಮುಟ್ಟಬೇಕೆನ್ನುವ ಸದಾಶಯದಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಚಾರಿ ಗ್ರಂಥಾಲಯ ಎನ್ನುವ ಯೋಜನೆ ಕೂಡ ಚಾಲ್ತಿಗೆ ಬಂತು. 1980 ರ ದಶಕದಲ್ಲಿ ಆಗಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದ ನನಗೆ ಸಾರ್ವಜನಿಕ ಗ್ರಂಥಾಲಯ ಸಿಬ್ಬಂದಿಯು ವಾಹನದಲ್ಲಿ ಪುಸ್ತಕಗಳನ್ನು ಹೇರಿಕೊಂಡು ಬಂದು ಪ್ರತಿ ಕಾಲೋನಿಯ ನಿರ್ಧಿಷ್ಟ ಜಾಗದಲ್ಲಿ ಸೇರಿದ್ದ ಓದುಗರಿಗೆ ವಿತರಿಸುತ್ತಿದ್ದ ದೃಶ್ಯ ಇವತ್ತಿಗೂ ನೆನಪುಗಳಲ್ಲಿ ಹಸಿರಾಗಿದೆ.   

       ಕರ್ನಾಟಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ಕಬ್ಬನ್ ಪಾರ್ಕ್‍ನ ಶೇಷಾದ್ರಿ ಮೆಮೊರಿಯಲ್ ಹಾಲ್‍ನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿದರು. ಇದು ಸ್ಥಾಪನೆಯಾದದ್ದು 1914 ರಲ್ಲಿ. ಭಾರತ ಸ್ವಾತಂತ್ರ್ಯಾ ನಂತರ ಡಾ.ಎಸ್.ಆರ್.ರಂಗನಾಥನ್ ಮತ್ತು ಅಂದಿನ ಶಿಕ್ಷಣ ಮಂತ್ರಿ ಶ್ರೀ ಎಸ್.ಆರ್.ಕಂಠಿ ಅವರ ಪ್ರಯತ್ನದ ಫಲವಾಗಿ 1965 ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಸಾರ್ವಜನಿಕ ಗ್ರಂಥಾಲಯಗಳಿಗೆ ಅಗತ್ಯದ ಹಣಕಾಸಿನ ನೆರವು ದೊರೆಯುವಂತಾಗಲು ಈ ಕಾಯ್ದೆಯ ರಚನೆ ಅವಶ್ಯಕವಾಗಿತ್ತು. ಈ ಕಾಯ್ದೆಯನ್ವಯ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಹಣದಲ್ಲಿ ಪ್ರತಿ ಒಂದು ರೂಪಾಯಿಗೆ ಆರು ಪೈಸೆಯಷ್ಟು ಹಣವನ್ನು ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಮೀಸಲಾಗಿಡಲಾಗುತ್ತದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳು ಆಯಾ ಜಿಲ್ಲೆಯಲ್ಲಿ ಸಂಗ್ರಹವಾದ ಭೂಕಂದಾಯದಿಂದ ಪ್ರತಿಶತ 6 ರಷ್ಟು ಹಣವನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ಪಡೆಯುತ್ತವೆ. ಕೊಲ್ಕತ್ತದ ರಾಜಾ ರಾಮಮೋಹನ ರಾಯ್ ಲೈಬ್ರರಿ ಫೌಂಡೆಶನ್‍ನಿಂದಲೂ ಸಾರ್ವಜನಿಕ ಗ್ರಂಥಾಲಯಗಳಿಗೆ ವಿಶೇಷ ಅನುದಾನ ದೊರೆಯುತ್ತಿದೆ. ಸಾರ್ವಜನಿಕ ಗ್ರಂಥಾಲಯವೇ ಒದಗಿಸಿದ ಅಂಕಿಅಂಶಗಳ ಪ್ರಕಾರ ಇಂದು ರಾಜ್ಯದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಗಳು, ನಗರ ಕೇಂದ್ರ ಗ್ರಂಥಾಲಯಗಳು, ಸಂಚಾರಿ ಗ್ರಂಥಾಲಯಗಳು, ಗ್ರಾಮೀಣ ಗ್ರಂಥಾಲಯಗಳಿವೆ. ಇವುಗಳ ಜೊತೆಗೆ ಶಾಖಾ ಗ್ರಂಥಾಲಯಗಳು ನಗರ ಮತ್ತು ಜಿಲ್ಲಾ ಕೇಂದ್ರಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಾಲಾನಂತರದಲ್ಲಿ ಸಂಚಾರಿ ಗ್ರಂಥಾಲಯ ವ್ಯವಸ್ಥೆಯು ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿ ಅದಕ್ಕೆ ತನ್ನದೆ ಆದ ಕಾರಣಗಳನ್ನು ನೀಡಿದೆ. ಸಂಖ್ಯಾ ದೃಷ್ಟಿಯಿಂದ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸೌಲಭ್ಯ ಸಮೃದ್ಧವಾಗಿದೆ. ಆದರೆ ಗುಣಾತ್ಮಕ ಸೇವೆಯನ್ನು ಪರಿಗಣಿಸಿದಾಗ ಇವುಗಳ ಸಾಧನೆ ಶೂನ್ಯ. ಜನ ಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಗ್ರಂಥಾಲಯಗಳು ಕ್ರಮೇಣ ಜನಸಾಮಾನ್ಯರಿಂದಲೇ ದೂರವಾಗುತ್ತಿರುವುದು ವಿಪರ್ಯಾಸ. 

      ಸಾರ್ವಜನಿಕ ಗ್ರಂಥಾಲಯಗಳಿಂದ ಓದುಗರು ವಿಮುಖರಾಗುತ್ತಿರುವುದಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅನೇಕ ಕಾರಣಗಳನ್ನು ಮುಂದಿಡುತ್ತದೆ. ಅತಿಯಾದ ಮೊಬೈಲ್ ಬಳಕೆ, ಟೀವಿ ಚಾನೆಲ್‍ಗಳ ಹಾವಳಿ, ಮಾಹಿತಿಯ ಡಿಜಿಟಲೀಕರಣ ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗೆ ತಪ್ಪನ್ನೆಲ್ಲ ತಂತ್ರಜ್ಞಾನದ ಮೇಲೆ ಹೊರಿಸುವುದು ಅದು ಇಲಾಖೆ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗೋಪಾಯ. ಇಲಾಖೆ ಮೊದಲು ಗಮನಹರಿಸಬೇಕಾದದ್ದು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಎಂಥ ಪುಸ್ತಕಗಳು ಓದಲು ದೊರೆಯುತ್ತಿವೆ ಮತ್ತು ಇಂಥ ಪುಸ್ತಕಗಳಿಂದ ಓದುಗರವಲಯ ಸಂತೃಪ್ತವಾಗಿದೆಯೇ ಎನ್ನುವುದು. ಹರಿದು ಓದಲಾರದಂಥ ಸ್ಥಿತಿಗೆ ಬಂದ ಪುಸ್ತಕಗಳ ಸಂಖ್ಯೆಯೇ ಅಲ್ಲಿ ಸಿಂಹಪಾಲು. ಇರುವ ಕೆಲವೇ ಉತ್ತಮ ಪುಸ್ತಕಗಳು ಸಹ ಹಲವು ಓದುಗರ ಕೈಸೇರಿ ಹಾಳಾಗಿ ಓದಲು ಉಪಯುಕ್ತವಾಗಿರುವುದಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಅಧಿಕಾರಿಗಳು ತಮಗೆ ಬೇಕಾದ ಲೇಖಕರಿಂದ ಪುಸ್ತಕಗಳನ್ನು ಬರೆಸಿ ಮತ್ತು ಬೇಕಾದ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸಿ ಖರೀದಿಸುವರೆಂಬ ದೂರಿದೆ. ಅಧಿಕಾರಿಗಳು ಈ ಮಾತನ್ನು ಅಲ್ಲಗಳೆದರೂ ಅಲ್ಲಿನ ಪುಸ್ತಕಗಳನ್ನು ನೋಡಿದಾಗ ಆ ಮಾತು ನಿಜವೆಂದು ತೋರುತ್ತದೆ. ಅಧಿಕಾರಿಗಳು,  ಪ್ರಕಾಶಕರು ಮತ್ತು ಲೇಖಕರ ನಡುವೆ ಕಮಿಷನ್ ರೂಪದಲ್ಲಿ ಹಣ ಹರಿದಾಡಿ ಅವರವರ ಜೇಬು ಭರ್ತಿಯಾಗುತ್ತದೆ ಎನ್ನುವ ಮಾತಿಗೆ ಅಲ್ಲಿನ ಪುಸ್ತಕಗಳೇ ಸಾಕ್ಷಿ ಒದಗಿಸುತ್ತವೆ. ಕುವೆಂಪು, ಬೇಂದ್ರೆ, ಕಾರಂತ, ಅಡಿಗ ಇತ್ಯಾದಿ ಕನ್ನಡದ ಮಹತ್ವದ ಲೇಖಕರ ಪುಸ್ತಕಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ಒಬ್ಬರೆ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರಿನಿಂದ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡುವುದು ಅದೊಂದು ಬಹಿರಂಗ ಸತ್ಯವಾಗಿದೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತೂಕ ಮಾಡಿ ಖರೀದಿಸುವರು ಎನ್ನುವ ವ್ಯಂಗ್ಯೊಕ್ತಿಯೊಂದು ಬಹಳ ಹಿಂದಿನಿಂದಲೂ ಜನಮತದಲ್ಲಿ ಚಲಾವಣೆಯಲ್ಲಿದೆ.

     ಗ್ರಾಮಾಂತರ ಪ್ರದೇಶದ ಜನರಿಗೂ ಪತ್ರಿಕೆ ಮತ್ತು ಪುಸ್ತಕಗಳನ್ನೊದುವ ಸೌಲಭ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಗ್ರಾಮೀಣ ಗ್ರಂಥಾಲಯಗಳ ಸ್ಥಾಪನೆಗೆ ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹ.  ಈ ಕಾರಣದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಯಿತು. ಇದುವರೆಗೆ ಸಾವಿರಾರು ಗ್ರಾಮೀಣ ಗ್ರಂಥಾಲಯಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿಸಲಾಗಿದೆ. ಇಲ್ಲಿಯೂ ಕಟ್ಟಡ, ಪಿಠೋಪಕರಣಗಳು, ಸಿಬ್ಬಂದಿ ಮತ್ತು ಪುಸ್ತಕಗಳದ್ದೇ ಸಮಸ್ಯೆ. ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮುರಿದು ದುರಸ್ಥಿಯಾದ ಪಿಠೋಪಕರಣಗಳನ್ನೆ ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲಾಗುವುದು. ಪುಸ್ತಕಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೆನಿರುವುದಿಲ್ಲ. ಮುಖ್ಯ ಗ್ರಂಥಾಲಯಗಳಲ್ಲಿ ಓದಿ ಹಾಳಾದ ಪುಸ್ತಕಗಳೇ ಇಲ್ಲಿ ಓದಲು ಸಿಗುತ್ತವೆ. ಗ್ರಾಮೀಣ ಪರಿಸರದ ಓದುಗರಿಗೆ ಅವರ ಅಭಿರುಚಿಗನುಗುಣವಾದ ಪುಸ್ತಕಗಳು ಇಲ್ಲಿ ಓದಲು ಸಿಗುವುದಿಲ್ಲ. ಮಲೆನಾಡಿನ ‘ನೀರಾ’ ಕೊಯ್ಲಿನ ಮಾಹಿತಿ ಉತ್ತರ ಕರ್ನಾಟಕದ ಬಯಲು ಸೀಮೆಯ ರೈತರಿಗೆ ಒದಗಿಸುವ ಅಸಂಗತ ಸಂಗತಿಯನ್ನು ಇಲ್ಲಿ ಕಾಣಬಹುದು. ಗ್ರಂಥಾಲಯಕ್ಕೆ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಬರುತ್ತವೆಯಾದರೂ ಅವುಗಳು ಸ್ಥಳೀಯ ರಾಜಕೀಯ ನಾಯಕರುಗಳ ಮನೆಯ ಪಡಸಾಲೆಯ ಅಲಂಕಾರಿಕ ವಸ್ತುಗಳಾಗುತ್ತಿವೆ. ಓದುಗರಿಲ್ಲದೆ ಗ್ರಂಥಾಲಯಗಳು ಹಾಳು ಹರಟೆಯ ಇಲ್ಲವೇ ಇಸ್ಪೀಟ್ ಆಟದ ಕೇಂದ್ರಗಳಾಗಿವೆ.

     ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸರ್ಕಾರದ ಮಟ್ಟದಲ್ಲಿ ಅವಗಣನೆಗೆ ಒಳಗಾಗಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ಸರ್ಕಾರದ ಈ ನಿರ್ಲಕ್ಷ್ಯದ ಧೋರಣೆಗೆ ಇಲಾಖೆಯ ಸಿಬ್ಬಂದಿಯೇ ಹೇಳುವಂತೆ ಈ ಇಲಾಖೆ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗಿದೆ ಎನ್ನುವುದು ಒಂದು ಕಾರಣವಾದರೆ ಎರಡನೆಯ ಮಹತ್ವದ ಕಾರಣ ಇದು ಅನುತ್ಪಾದನಾ ಇಲಾಖೆ ಎನ್ನುವ ಭಾವನೆ ಸರ್ಕಾರಿ ಅಧಿಕಾರಿಗಳಲ್ಲಿ ದಟ್ಟವಾಗಿದೆ. ಎಲ್ಲವನ್ನೂ ಲಾಭ ಮತ್ತು ನಷ್ಟಗಳ ವ್ಯವಹಾರಿಕ ದೃಷ್ಟಿಕೋನದಲ್ಲೇ ನೋಡುವುದು ಸಮಂಜಸವಲ್ಲ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಓದಿನ ಅಭಿರುಚಿಯನ್ನು ಬೆಳೆಸುವ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕಾದ ಉದಾತ್ತ ಧ್ಯೇಯ ಹೊಂದಿರುವಾಗ ಸರ್ಕಾರ ಅದನ್ನು ಆರ್ಥಿಕ ಹೊರೆಯೆಂದು ಪರಿಗಣಿಸುವುದಾಗಲಿ ಮತ್ತು ಅನುತ್ಪಾದನಾ ಕ್ಷೇತ್ರವೆಂದು ನಿರ್ಲಕ್ಷಿಸುವುದಾಗಲಿ ಸರಿಯಲ್ಲ. ಏಕೆಂದರೆ ಆರ್ಥಿಕ ಪ್ರಗತಿಯೊಂದೇ ದೇಶದ/ನಾಡಿನ ಬೆಳವಣಿಗೆಯಲ್ಲ. ಆರ್ಥಿಕ ಪ್ರಗತಿಯ ಜೊತೆಗೆ ಸಾಂಸ್ಕೃತಿಕ ಪ್ರಗತಿ ಕೂಡ ಒಂದು ನಾಡಿನ/ದೇಶದ ಬೆಳವಣಿಗೆಯಲ್ಲಿ ಬಹುಮಹತ್ವದ ಪಾತ್ರವನ್ನು ವಹಿಸುತ್ತದೆ.  

  ಈ ಎಲ್ಲ ಸಮಸ್ಯೆಗಳ ನಡುವೆಯೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ತನ್ನಲ್ಲಿನ ಪುಸ್ತಕಗಳ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಇಲಾಖೆಯ ಈ ನಿರ್ಧಾರವನ್ನು ಸ್ವಾಗತಿಸುವ ಹೊತ್ತಿನಲ್ಲೇ ಅದು ಡಿಜಿಟಲೀಕರಣಗೊಳಿಸುತ್ತಿರುವ ಪುಸ್ತಕಗಳ ಕುರಿತು ಮತ್ತೆ ಪ್ರಶ್ನೆ ಎದುರಾಗುತ್ತದೆ. ಕೆ.ಜಿಗಳ ಲೆಕ್ಕದಲ್ಲಿ ತೂಗಿ ಖರೀದಿಸಿದ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದರೆ ಅದು ಆರ್ಥಿಕವಾಗಿ ಇಲಾಖೆಗೆ ಹೊರೆಯ ಕೆಲಸ. ಜೊತೆಗೆ ಗಣಕೀಕೃತ ಪುಸ್ತಕಗಳನ್ನು ಓದುವ ಓದುಗರು ಯಾರು ಎಂದು ಕೂಡ ಈ ಸಂದರ್ಭ ಯೋಚಿಸಬೇಕಾಗಿದೆ. ಮಧ್ಯವಯಸ್ಸಿನ ಮತ್ತು ವಯೋವೃದ್ಧ ಓದುಗರನ್ನು ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡುವುದು ಅದೊಂದು ಸವಾಲಿನ ಕೆಲಸ. ಇನ್ನು ಯುವ ಓದುಗರಾದ ಕಾಲೇಜು ವಿದ್ಯಾರ್ಥಿಗಳ ಓದು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿಗಷ್ಟೇ ಸೀಮಿತ. ಆದ್ದರಿಂದ ಕೋಟ್ಯಾಂತರ ರೂಪಾಯಿಗಳನ್ನು ಡಿಜಿಟಲೀಕರಣಕ್ಕಾಗಿ ಖರ್ಚು ಮಾಡುವುದಕ್ಕಿಂತ ಅದೇ ಹಣವನ್ನು ಅತ್ಯುತ್ತಮ ಪುಸ್ತಕಗಳ ಖರೀದಿ ಮತ್ತು ಪಿಠೋಪಕರಣಗಳಿಗಾಗಿ ಖರ್ಚು ಮಾಡಬಹುದು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕಾದ ಅಧಿಕಾರಿಗಳೇ ಇಂಥದ್ದೊಂದು ಯೋಜನೆಯ ಫಲಾನುಭವಿಗಳಾಗುತ್ತಿರುವುದು ವ್ಯವಸ್ಥೆಯೊಂದರ ದುರಂತಕ್ಕೆ ಸಾಕ್ಷಿ. ಒಟ್ಟಿನಲ್ಲಿ ಸಮಸ್ಯೆ ಕೇಂದ್ರಿತವಾದ ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಬೇಕು. ಸಂಬಂಧ ಪಟ್ಟ ಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ನಂಬಿಕೆ ನಿಜವಾಗಬೇಕು. ಸರ್ಕಾರ ಅಗತ್ಯದ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಸಾರ್ವಜನಿಕ ಗ್ರಂಥಾಲಯಗಳು ಬಹುದೊಡ್ಡ ಓದುಗರ ಸಮೂಹದಿಂದ ವಿಮುಖವಾಗಿ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳ ನೆಲೆಗಳಾಗುವ ದಿನಗಳು ಬಹಳ ದೂರವಿಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ