Sunday, June 3, 2018

ಮೋಹನಸ್ವಾಮಿ: ಒಂದು ಪ್ರಯೋಗಶೀಲ ಕಥನ

                



         ಆರಂಭದಲ್ಲೇ ಕಥೆಗಾರ ವಸುಧೇಂದ್ರರಿಗೊಂದು ಕೃತಜ್ಞತೆ ಹೇಳುತ್ತೇನೆ. ಕಾರಣ ತೃತೀಯ ಲಿಂಗಿಗಳ ಕುರಿತು ಇಷ್ಟೊಂದು ಪೂರ್ಣಪ್ರಮಾಣದ ಕಥೆ ಕನ್ನಡ ಸಾಹಿತ್ಯದಲ್ಲಿ ಓದಿದ ನೆನಪು ನನಗಿಲ್ಲ. ತಮ್ಮದಲ್ಲದ ತಪ್ಪಿಗೆ ತಾವು ಬದುಕುತ್ತಿರುವ ಸಮಾಜದ ನಿಂದನೆ ಮತ್ತು ತಿರಸ್ಕಾರಕ್ಕೊಳಗಾದ ಒಂದು ನಿಕೃಷ್ಟ ಬದುಕಿಗೆ ಅಕ್ಷರ ರೂಪ ನೀಡಿ ಕಥೆಯ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ವಸುಧೇಂದ್ರರ ಪ್ರಯತ್ನ ಮೆಚ್ಚುವಂಥದ್ದು. ಈ ವಸುಧೇಂದ್ರ ಸಾಫ್ಟ್ ವೇರ್  ಕಂಪನಿಯಲ್ಲಿ ಕೈತುಂಬ ಸಂಬಳ ತರುವ ಉದ್ಯೋಗದಲ್ಲಿದ್ದೂ ಅಲ್ಲಿನ ಏಕತಾನತೆಯಿಂದ ಬೇಸತ್ತು ಮುಲಾಜಿಲ್ಲದೆ ನೌಕರಿ ಬಿಟ್ಟು ಬರವಣಿಗೆಯಲ್ಲಿ ನೆಮ್ಮದಿ ಕಂಡ ಬರಹಗಾರನೀತ. ಬರವಣಿಗೆಯೊಂದಿಗೆ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುತ್ತ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುತ್ತಿರುವ ವಸುಧೇಂದ್ರ ಕನ್ನಡದ ಬಹುಮುಖ್ಯ ಕಥೆಗಾರರಲ್ಲೊಬ್ಬರು ಎಂದು ಗುರುತಿಸಿಕೊಂಡಿರುವರು. ಮನೀಷೆ, ಯುಗಾದಿ, ಚೇಳು, ಮೋಹನಸ್ವಾಮಿ ಅವರ ಪ್ರಮುಖ ಕಥಾಸಂಕಲನಗಳಾದರೆ ಹರಿಚಿತ್ತ ಸತ್ಯ ಅವರು ಬರೆದಿರುವ ಕಾದಂಬರಿ. 2013 ರಲ್ಲಿ ಪ್ರಕಟಗೊಂಡ ‘ಮೋಹನಸ್ವಾಮಿ’ ಕಥಾಸಂಕಲನ ತನ್ನ ವಿನೂತನ ಕಥಾವಸ್ತುವಿನಿಂದ ಕನ್ನಡ ಸಾಹಿತ್ಯವಲಯದಲ್ಲಿ ಸಂಚಲನ ಸೃಷ್ಟಿಸಿ ಓದುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಹಾಗೂ ಪ್ರಶಂಸೆಗೆ ಒಳಗಾಗಿದೆ. ಇದುವರೆಗೂ ನಾಲ್ಕು ಮುದ್ರಣಗಳನ್ನು ಕಂಡ ಈ ಕೃತಿ ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಗೊಂಡಿದೆ. ಸ್ಪ್ಯಾನಿಷ್ ಭಾಷೆಗೆ ಅನುವಾದಗೊಂಡ ಕನ್ನಡದ ಮೊದಲ ಕೃತಿ ಎನ್ನುವ ಹೆಗ್ಗಳಿಕೆ ಈ ಕಥಾಸಂಕಲನದ್ದು. 

   ಮೋಹನಸ್ವಾಮಿ ಕಥಾಸಂಕಲನದಲ್ಲಿ ಲೇಖಕರು ವಿವಿಧ ಸಂದರ್ಭಗಳಲ್ಲಿ ಬರೆದ ಒಟ್ಟು ಹನ್ನೊಂದು ಕಥೆಗಳಿವೆ. ಈ ಹನ್ನೊಂದು ಕಥೆಗಳಲ್ಲಿ ಆರಂಭದ ಆರು ಕಥೆಗಳ ನಾಯಕರು ತೃತೀಯ ಲಿಂಗಿ ಗುಂಪಿಗೆ ಸೇರಿದವರು ಎನ್ನುವುದು ಕನ್ನಡದ ಕಥಾಲೋಕಕ್ಕೆ ವಿನೂತನ ವಿಷಯವೊಂದು ಸೇರ್ಪಡೆಯಾಗಿದೆ ಎನ್ನಬಹುದು. ಅದರಲ್ಲೂ ಮೊದಲ ಐದು ಕಥೆಗಳಲ್ಲಿ ಮೋಹನಸ್ವಾಮಿಯ ಕಥೆಯಿದೆ. ಸಾಫ್ಟ್ ವೇರ್  ಕಂಪನಿಯಲ್ಲಿ ಆಕರ್ಷಕ ಸಂಬಳದ ಉದ್ಯೋಗಿಯಾಗಿರುವ ಮೋಹನಸ್ವಾಮಿ ಹುಟ್ಟಿನಿಂದಲೇ ತೃತೀಯ ಲಿಂಗಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸ್ವಭಾವತ: ಮೃದು ಸ್ವಭಾವದ ಮೋಹನಸ್ವಾಮಿ ಉತ್ತಮ ವಿದ್ಯೆಯಿಂದ ಸ್ವತಂತ್ರವಾಗಿ ಬದುಕನ್ನು ರೂಪಿಸಿಕೊಂಡವನು. ಹೆಣ್ಣೆಂದರೆ ಆಕರ್ಷಣೆಯೇ  ಇಲ್ಲದ ಗಂಡುಗಳೆಡೆ ಆಕರ್ಷಿತನಾಗುವ ಮೋಹನಸ್ವಾಮಿ ತನ್ನ ಮನದ ಬಯಕೆಯನ್ನು ಗುಟ್ಟಾಗಿಟ್ಟುಕೊಳ್ಳಲು ಮಾಡುವ ಪ್ರಯತ್ನ ಮತ್ತು ಆ ಸಂದರ್ಭದ ಅವನ ಅಸಹಾಯಕತೆಯನ್ನು ಲೇಖಕರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿರುವರು. 

    ತನ್ನದೇ ಊರಿನ ಕಾಶೀವೀರನನ್ನು ಮೋಹಿಸಿ ಅಪಮಾನಕ್ಕೆ ಒಳಗಾಗುವ ಮೋಹನಸ್ವಾಮಿಯ ಮನೋಕ್ಷೋಭೆಯನ್ನು ‘ಕಾಶೀವೀರರು’ ಕಥೆ ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತದೆ. ತನಗಿಂತ ಐದು ವರ್ಷ ದೊಡ್ಡವನಾದ ಕಾಶೀವೀರನನ್ನು ಕಂಡರೆ ಮೋಹನಸ್ವಾಮಿಗೆ ಕಡು ಪ್ರೀತಿ ಮತ್ತು ಅವನ ದೇಹವನ್ನೊಮ್ಮೆ ಸ್ಪರ್ಷಿಸಬೇಕೆನ್ನುವ ಅದಮ್ಯ ಬಯಕೆ ಅವನಿಗಿದೆ. ಆ ಒಂದು ಸಂದರ್ಭಕ್ಕಾಗಿ ಕಾಯುತ್ತಿದ್ದವನಿಗೆ ಅನಿರೀಕ್ಷಿತವಾಗಿ ಅವಕಾಶವೊಂದು ಕೂಡಿ ಬರುತ್ತದೆ. ಸ್ನಾನದ ಮನೆಯಲ್ಲಿ ಕಾಶೀವೀರನ ತಲೆಯ ಮೇಲೆ ನೀರು ಸುರಿಯುವ ಸಂದರ್ಭ ಮೋಹನಸ್ವಾಮಿ ತನ್ನ ಬಯಕೆಯನ್ನು ಅದುಮಿಡಲು ಅಸಹಾಯಕನಾಗಿ ಕಾಶೀವೀರನ ದೇಹವನ್ನು ಸ್ಪರ್ಷಿಸುತ್ತಾನೆ. ‘ಅವನ ದೇಹದ ಸ್ಪರ್ಷ ಸಿಕ್ಕಿದ್ದೇ ಮೋಹನಸ್ವಾಮಿ ತನ್ನ ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡ. ಬೆನ್ನಿಗೆ ಕೈ ಹಚ್ಚಿದವನು ಹಗೂರಕ್ಕೆ ಎದೆ, ಹೊಟ್ಟೆ, ಪಾದ, ಕಾಲು, ತೊಡೆ ಎಲ್ಲವನ್ನೂ ಉಜ್ಜಲಾರಂಭಿಸಿದ. ಮೋಹನನಿಗೆ ಅದ್ಯಾವ ಭೂತ ಮೈಯಲ್ಲಿ ಹೊಕ್ಕಿತ್ತೋ ಗೊತ್ತಿಲ್ಲ ಕಾಶೀವೀರನ ಚಡ್ಡಿಯಲ್ಲೂ ಕೈಹಾಕಿದ. ಗರ್ಭಗುಡಿಯನ್ನು ಪ್ರವೇಶಿಸಿ ಮೂಲ ವಿಗ್ರಹವನ್ನು ಮುಟ್ಟಿದ ವಿಚಿತ್ರ ತಲ್ಲಣ, ಖುಷಿ, ಭಯಗಳು ಮೋಹನಸ್ವಾಮಿಯನ್ನು ಆಕ್ರಮಿಸಿ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ಅವನ ಬೆನ್ನಿಗೆ ತಲೆಯನ್ನು ಆನಿಸಿ ವಾಸ್ತವದ ಸುಖವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದ. ಬದುಕಿನಲ್ಲಿ ಮೊದಲ ಬಾರಿಗೆ ಸ್ಪರ್ಷ ಸುಖಕ್ಕೆ ಒಳಗಾಗಿದ್ದ’ ಈ ಸಾಲುಗಳು ಮೋಹನಸ್ವಾಮಿಯ ಇಡೀ ವ್ಯಕ್ತಿತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ಓದುಗರಿಗೆ ಪರಿಚಯಿಸುತ್ತವೆ. ಈ ಘಟನೆಯ ನಂತರ ತನ್ನ ವ್ಯಕ್ತಿತ್ವದ ಬಗ್ಗೆಯೇ  ಅಸಹ್ಯ ಪಟ್ಟುಕೊಳ್ಳುವ ಮೋಹನಸ್ವಾಮಿ ಅನುಭವಿಸುವ ಮಾನಸಿಕ ಹಿಂಸೆ ಮತ್ತು ಅವನೊಳಗಿನ ತೊಳಲಾಟ ಮನಸ್ಸನ್ನು ಆರ್ದ್ರಗೊಳಿಸಿ ಕಣ್ಣುಗಳು ಹನಿಗೂಡುತ್ತವೆ. ಈ ಸಂದರ್ಭವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಕಾಶೀವೀರನ ನಡೆ ಅವನೊಳಗಿನ ಸ್ವಾರ್ಥಕ್ಕೆ ಕನ್ನಡಿ ಹಿಡಿಯುತ್ತದೆ. ಕಾಶೀವೀರ ಕೇಳಿದಾಗಲೆಲ್ಲ ಹಣ ಕೊಡುವ ಮೋಹನಸ್ವಾಮಿ ಒಂದು ಹಂತದಲ್ಲಿ ರೋಸಿಹೋಗಿ ಸಿಡಿದು ನಿಲ್ಲುತ್ತಾನೆ. ಆಗ ಮೋಹನಸ್ವಾಮಿ ತೃತೀಯ ಲಿಂಗಿ ಎನ್ನುವುದು ಅನಾವರಣಗೊಂಡು ಆ ಇಡೀ ಪರಿಸರ ಅವನನ್ನು ತಿರಸ್ಕಾರದಿಂದ ನೋಡುತ್ತದೆ. 

   ‘ತುತ್ತತುದಿಯಲಿ ಮೊತ್ತ ಮೊದಲು’ ಕಥೆಯಲ್ಲಿ ಇಬ್ಬರು ಪ್ರೇಮಿಗಳ ನಡುವಿನ ದಟ್ಟ ಪ್ರೀತಿಯಿದೆ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಮೋಹನಸ್ವಾಮಿ ಮತ್ತು ಕಾರ್ತಿಕ್ ಒಂದೇ ಮನೆಯಲ್ಲಿ ವಾಸಿಸುತ್ತ ಪರಸ್ಪರ ಪ್ರೀತಿಸುತ್ತಿರುವರು. ಮೋಹನಸ್ವಾಮಿಗೆ ಕಾರ್ತಿಕನ ಹೃದಯದ ಪ್ರತಿ ಮಿಡಿತದ ಪರಿಚಯವಿದೆ. ಕಾರ್ತಿಕನ ವ್ಯಕ್ತಿತ್ವ, ಅವನ ಬೇಕು ಬೇಡುಗಳು, ಅವನ ದೇಹದ ಪ್ರತಿ ಅಂಗಗಳು ಹೀಗೆ ಮೋಹನಸ್ವಾಮಿಗೆ ಕಾರ್ತಿಕ ತನ್ನವನೆನ್ನುವ ಭಾವವಿದೆ. ಕಾರ್ತಿಕ್ ಸಹ ಮೋಹನಸ್ವಾಮಿಯನ್ನು ಉತ್ಕಟವಾಗಿ ಪ್ರೀತಿಸಬಲ್ಲ. ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕ ರಮೇಶನಿಗೆ ಮೋಹನಸ್ವಾಮಿ ತನ್ನ ಪ್ರೇಮದ ಕಥೆ ಹೇಳುವುದರ ಮೂಲಕ ಮೋಹನಸ್ವಾಮಿ ಮತ್ತು ಕಾರ್ತಿಕರ ನಡುವಣ ಪ್ರೀತಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಾರ್ತಿಕ್ ಎಂದರೆ ಹೆಣ್ಣು ಎಂದು ತಪ್ಪಾಗಿ ಭಾವಿಸಿದ ರಮೇಶನಿಗೆ ಪ್ರಯಾಣದ ಕೊನೆಯಲ್ಲಿ ಕಾರ್ತಿಕ್ ಗಂಡು ತಾನೊಬ್ಬ ಗೇ ಎಂದು ಮೋಹನಸ್ವಾಮಿ ಹೇಳಿದಾಗ ರಮೇಶ ಅದನ್ನು ಸಹಜವಾಗಿ ಸ್ವೀಕರಿಸುತ್ತಾನೆ. ಇಲ್ಲಿ ಬದಲಾದ ಕಾಲಘಟ್ಟದಲ್ಲಿ ಬದಲಾಗುತ್ತಿರುವ ನಿಲುವು ವ್ಯಕ್ತವಾಗುತ್ತದೆ. 

     ‘ಕಗ್ಗಂಟು’ ಕಥೆ ಹಿಂದಿನ ಕಥೆಯ ಮುಂದುವರೆದ ಭಾಗದಂತಿದೆ. ಈಗ ಕಾರ್ತಿಕನಿಗೆ ಮದುವೆಗೆ ಹೆಣ್ಣು ಗೊತ್ತಾಗಿದೆ. ಇಷ್ಟರಲ್ಲೇ ಕಾರ್ತಿಕ್ ಮದುವೆಯಾಗಲಿರುವ ವಿಷಯ ಮೋಹನಸ್ವಾಮಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ತನ್ನನ್ನು ಪ್ರೀತಿಸುವ ಕಾರ್ತಿಕ್ ಬೇರೆಯವರನ್ನು ಮದುವೆಯಾಗಲಾರ ಎನ್ನುವ ನಂಬಿಕೆ ಮೋಹನಸ್ವಾಮಿಯದು. ಒಂದು ಕಾಲದಲ್ಲಿ ಮೋಹನಸ್ವಾಮಿಯನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ ಕಾರ್ತಿಕನಿಗೆ ಈಗ ಅವನೆಂದರೆ ಅಸಹ್ಯ ಮತ್ತು ತಿರಸ್ಕಾರ. ರಶ್ಮಿಯ ಸಾಂಗತ್ಯದಲ್ಲಿ ಕಾರ್ತಿಕ್ ಸಂಪೂರ್ಣವಾಗಿ ಮೋಹನಸ್ವಾಮಿಯಿಂದ ದೂರಾಗುತ್ತಾನೆ. ಕಾರ್ತಿಕ್ ದೂರವಾದ ನೋವು ಒಂದಡೆಯಾದರೆ, ಎಲ್ಲಿ ಕಾರ್ತಿಕ್ ತನ್ನ ಕುರಿತು ರಶ್ಮಿಗೆ ನಿಜ ಹೇಳುವನೋ ಎನ್ನುವ ಭಯ, ಆತಂಕ ಮೋಹನಸ್ವಾಮಿಯನ್ನು ಕಂಗೆಡಿಸುತ್ತದೆ. ತಾನೊಬ್ಬ ಕ್ರಿಮಿ ಈ ಭೂಮಿಯ ಮೇಲೆ ತನಗೆ ಬದುಕಲೂ ಹಕ್ಕಿಲ್ಲವೇನೋ ಎಂದು ಮೋಹನಸ್ವಾಮಿ ಸ್ವನಿಂದನೆಯಲ್ಲಿ ಜರ್ಜರಿತನಾಗುತ್ತಾನೆ. 

    ‘ತಗಣಿ’ ಕಥೆಯ ಶಂಕರಗೌಡನದು ಮೋಹನಸ್ವಾಮಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ಹಳ್ಳಿಯಲ್ಲಿ ವಾಸಿಸುತ್ತಿರುವ ಹೆಚ್ಚು ಓದಿರದ ಶಂಕರನಿಗೆ ತಾನೊಬ್ಬ ಹಿಜಡಾ ಎಂದು ಇಡೀ ಊರಿಗೇ ತೋರಿಸಿಕೊಳ್ಳುವ ಧಾಡಸೀತನವಿದೆ. ಸಮಾಜಕ್ಕೆ ಹೆದರುವ ಮೋಹನಸ್ವಾಮಿಗೂ ಮತ್ತು ತಾನು ಇದ್ದಂತೆ ಬದುಕಲು ಇಚ್ಛಿಸುವ ಶಂಕರನಿಗೂ ಇರುವ ವ್ಯತ್ಯಾಸವಿದು. ಮುಂಬೈಗೆ ಹೋಗಿ ಬಂದ ದಿನದಿಂದ ಶಂಕರ ಥೇಟು ಹೆಣ್ಣಿನಂತೆ ವರ್ತಿಸಲು ತೊಡಗುತ್ತಾನೆ. ಅವನ ವೇಷ ಭೂಷಣ ಕೂಡ ಹೆಣ್ಣಿನಂತೆ ಬದಲಾಗಿದೆ. ಶಂಕರನಲ್ಲಾದ ಈ ಬದಲಾವಣೆ ಮನೆಯವರನ್ನು ಆತಂಕಕ್ಕೀಡು ಮಾಡಿದೆ. ಅವರೆಲ್ಲ ಊರಿನಲ್ಲಿ ತಲೆ ಎತ್ತಿ ನಡೆಯಲಾರದಂತಾಗಿದೆ. ಶಂಕರನ ಈ ವರ್ತನೆಗೆ ರೋಸಿಹೋದ ಅಪ್ಪ ಮತ್ತು ಅಣ್ಣಂದಿರು ಅವನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ನಗರ ಪ್ರದೇಶದಲ್ಲಿ ತನ್ನ ದೇಹದ ನ್ಯೂನ್ಯತೆಯೊಂದಿಗೆ ಬದುಕಲು ಮೋಹನಸ್ವಾಮಿಗೆ ಸಾಧ್ಯವಾದದ್ದು ಶಂಕರನಿಗೆ ಹಳ್ಳಿಗಾಡಿನ ಪರಿಸರದಲ್ಲಿ ಸಾಧ್ಯವಾಗುವುದಿಲ್ಲ. 

       ‘ಕಿಲಿಮಂಜಾರೋ’ ಕಥೆಯಲ್ಲಿ ಲೇಖಕರ ಪರ್ವತಾರೋಹಣದ ದಟ್ಟ ಅನುಭವವಿದೆ. ತಾಂಜಾನಿಯಾ ದೇಶದ ಈ ಕಿಲಿಮಂಜಾರೋ ಪರ್ವತ ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪ್ರದೇಶವೆಂದು ಹೆಸರುವಾಸಿಯಾಗಿದೆ. ದಿಢೀರನೆ ಬದಲಾಗುವ ಹವಾಮಾನದ ಪರಿಣಾಮ ಕಿಲಿಮಂಜಾರೋದಲ್ಲಿ ಯಾವುದೇ ಪ್ರಾಣಿಗಳು ಬದುಕಲು ಸಾಧ್ಯವಿಲ್ಲ. ಇಂಥ ಪ್ರದೇಶದಲ್ಲಿ ಪರ್ವತಾರೋಹಣದ ಸಾಹಸಕ್ಕೆ ಮುಂದಾಗುವ ಮೋಹನಸ್ವಾಮಿ ಬದುಕಿನ ಪ್ರತಿ ಹಂತದಲ್ಲೂ ಸೋಲನುಭವಿಸಿದವನು. ಗೆಲ್ಲಬೇಕೆನ್ನುವ ಛಲವೇ ಅವನನ್ನು ಕಿಲಿಮಂಜಾರೋದ ತುದಿಗೆ ತಂದು ನಿಲ್ಲಿಸುತ್ತದೆ. ಪರ್ವತದ ನೆತ್ತಿಯ ಮೇಲೆ ನಿಂತ ಮೋಹನಸ್ವಾಮಿಗೆ ಪ್ರಕೃತಿ ಎದುರು ಮನುಷ್ಯನ ಸಾಧನೆಗಳೆಲ್ಲ ಶೂನ್ಯದಂತೆ ಭಾಸವಾಗುತ್ತದೆ. ನಿಸರ್ಗದೆದುರು ನನ್ನ ಕಷ್ಟಗಳ್ಯಾವವು ದೊಡ್ಡವಲ್ಲ ಎಂದರಿತ ಮೋಹನಸ್ವಾಮಿ ಈಗ ಆತ್ಮವಿಶ್ವಾಸದ ಪ್ರತೀಕವಾಗಿದ್ದಾನೆ. ಅವನ ಕತ್ತಲೆಯ ಬದುಕಿನಲ್ಲಿ ಭರವಸೆಯ ಬೆಳ್ಳಿ ಕಿರಣ ಮೂಡಿದೆ. 

    ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಉದ್ಯೋಗಿಗಳ ಬದುಕಿನ ಅನಿಶ್ಚಿತತೆಯನ್ನು ‘ದುರ್ಭಿಕ್ಷಕಾಲ’ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡುತ್ತದೆ. ದೇವಿಕಾ ಮತ್ತು ವಿನಾಯಕ ಪರಸ್ಪರ ಪ್ರೀತಿಸಿ ಮದುವೆಯಾದವರು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಇಬ್ಬರಿಗೂ ಎಲ್ಲರಂತೆ  ತಮಗೂ ತಲೆಯ ಮೇಲೊಂದು ಸೂರಿರಲಿ ಎನ್ನುವ ಆಸೆ ಇದೆ. ಲಕ್ಷಾಂತರ ರೂಪಾಯಿಗಳ ಸಾಲ ಮಾಡಿ ಪುಟ್ಟ ಅಪಾರ್ಟಮೆಂಟ್ ಖರೀದಿಸಿದ್ದಾರೆ. ಬದುಕಿನ ಈ ಎಲ್ಲ ಜಂಜಾಟಗಳ ಮಧ್ಯೆ ತಮಗೂ ಒಂದು ಮಗುವಾಗಲಿ ಎನ್ನುವ ಅವರ ಆಸೆ ಕೈಗೂಡಿಲ್ಲ. ಈ ನಡುವೆ ಬಹುರಾಷ್ಟ್ರೀಯ ಕಂಪನಿಗಳಿಗೆ ದುರ್ಭಿಕ್ಷ ಕಾಲದ  ಬಿಸಿ ತಟ್ಟಿದೆ. ಪರಿಣಾಮವಾಗಿ ದೇವಿಕಾ ತನ್ನ ಈ ಮೊದಲ ಕೆಲಸ ಕಳೆದುಕೊಂಡಿದ್ದಾಳೆ. ಸಾಲದ ಹೊರೆ ಹೆಚ್ಚುತ್ತಿರುವುದರಿಂದ ಬೇರೊಂದು ಕೆಲಸ ಹುಡುಕುವುದು ಅವಳಿಗೆ ಅನಿವಾರ್ಯವಾಗಿದೆ. ಕೆಲಸ ಸಿಕ್ಕು ಸಂಸಾರ ಸಹಜ ಸ್ಥಿತಿಗೆ ಮರಳಿತು ಎನ್ನುವಷ್ಟರಲ್ಲಿ ದೇವಿಕಾ ಗರ್ಭೀಣಿಯಾದ ಸುದ್ಧಿ ಕಂಪನಿಗೆ ತಲೆ ನೋವಾಗಿ ಪರಿಣಮಿಸಿದೆ. ಸಧ್ಯದ ಅವಳ ಪರಿಸ್ಥಿತಿಯಲ್ಲಿ ಈಗ ಪ್ರಾಜೆಕ್ಟ್ ಗೆ  ಆಕೆಯ ಅವಶ್ಯಕತೆಯಿಲ್ಲ ಎಂದರಿತ ಕಂಪನಿ ಅವಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಈ ಮಧ್ಯೆ ವಿನಾಯಕ ಕೂಡ ಕೆಲಸ ಕಳೆದುಕೊಂಡಿದ್ದಾನೆ. ಮಗು ಮತ್ತು ಬದುಕು ಈ ಎರಡರಲ್ಲಿ ಒಂದನ್ನು ಆಯ್ಕೆ  ಮಾಡುವ ಅನಿವಾರ್ಯತೆ ಎದುರಾದಾಗ ದೇವಿಕಾ ಬದುಕನ್ನು ಆಯ್ಕೆ  ಮಾಡಿಕೊಳ್ಳುತ್ತಾಳೆ.

     ಆಧುನಿಕ ತಂತ್ರಜ್ಞಾನದ ಅವಿಷ್ಕಾರವೊಂದು ಸಾವಿಗೆ ಕಾರಣವಾಗುವ ಕಥೆ ‘ಪೂರ್ಣಾಹುತಿ’ಯಲ್ಲಿದೆ. ಗಂಡನನ್ನು ಕಳೆದುಕೊಂಡ ಕುಸುಮಾಳಿಗೆ ಮಗಳೇ ದಿಕ್ಕು ಮತ್ತು ಭರವಸೆ. ಕಾಲೇಜಿನಲ್ಲಿ ಓದುತ್ತಿರುವ ಅಂಕಿತಾಳಿಗೆ ಹೊಸ ಮೊಬೈಲೊಂದು ಬೇಕಾಗಿದೆ. ಹಠ ಹಿಡಿದು ಅಮ್ಮನನ್ನು ಕಾಡಿ ತನ್ನ ಆಸೆಯನ್ನು ಪೂರೈಸಿಕೊಳ್ಳುವುದರಲ್ಲಿ ಯಶ ಕಾಣುವ ಅಂಕಿತಾ ದಿನದಿಂದ ದಿನಕ್ಕೆ ಅಮ್ಮನ ಆತಂಕ ಮತ್ತು ಭೀತಿಗೆ ಕಾರಣಳಾಗುತ್ತಿದ್ದಾಳೆ. ಅಮ್ಮ ಕುಸುಮಾ ಈ ಆಧುನಿಕ ತಂತ್ರಜ್ಞಾನದ ಕಡುವೈರಿ. ಅವಳೆಂದೂ ಮೊಬೈಲ್ ಬಳಸುವುದಿಲ್ಲ. ಆದರೆ ಮೊಬೈಲ್ ಎನ್ನುವ ಈ ಪುಟ್ಟ ಮಾಂತ್ರಿಕ ಸಲಕರಣೆಯೇ  ತಾಯಿ-ಮಗಳ ಸಾವಿಗೆ ಕಾರಣವಾಗುವುದು ಈ ಆಧುನಿಕ ಅವಿಷ್ಕಾರದ ಕ್ರೂರ ವ್ಯಂಗ್ಯ. ಅಮ್ಮ ದೇವಸ್ಥಾನಕ್ಕೆ ಹೋದ ಸಂದರ್ಭ ಮನೆಯಲ್ಲಿ ಒಬ್ಬಳೇ ಇರುವುದನ್ನು ಫೋಟೋ  ಸಹಿತ ಸ್ಟೇಟಸ್ ಹಾಕಿಕೊಳ್ಳುವ  ಅಂಕಿತಾಳ ಬದುಕಿಗೆ ಅದೇ ಮುಳುವಾಗಿ ಅವಳ ಬದುಕು ದಾರುಣ ಕೊಲೆಯಲ್ಲಿ ಅಂತ್ಯಗೊಳ್ಳುತ್ತದೆ. ಮಗಳು ಇನ್ನೂ ದೇವಸ್ಥಾನಕ್ಕೆ ಬರದಿದ್ದನ್ನು ಅರಿತು ಕರೆ ಮಾಡಲು ಫೋನ್  ಬೂತ್ ಹುಡುಕಿ ಹೊರಡುವ ತಾಯಿ ಲಿಫ್ಟಿನಲ್ಲಿ ಸಿಲುಕಿ ಯಾರ ಸಹಾಯ ದೊರೆಯದೆ ಕೊನೆಯುಸಿರೆಳೆಯುತ್ತಾಳೆ. ಈ ಆಧುನಿಕ ತಂತ್ರಜ್ಞಾನದ ಅವಿಷ್ಕಾರವನ್ನು ಹಿತಮಿತವಾಗಿ ಬಳಸುವಂತೆ ಕಥೆ ಓದುಗರ ಕಣ್ಣು ತೆರೆಸುತ್ತದೆ. 

    ‘ದ್ರೌಪದಮ್ಮನ ಕಥಿ’ಯಲ್ಲಿ ಮಹಾಭಾರತದ ಕಥೆಯಿದೆ. ಇಡೀ ಕಥೆಯನ್ನು ಬಳ್ಳಾರಿ ಸೀಮೆಯ ಭಾಷೆಯಲ್ಲಿ ಓದುವುದೇ ಒಂದು ವಿಶಿಷ್ಠ ಅನುಭವ. ಇಡೀ ಕಥೆಯಲ್ಲಿ ದ್ರೌಪದಿಯದೇ ಕೇಂದ್ರ ಪಾತ್ರ. ಅರ್ಜುನನಿಂದ ಸ್ವಯಂವರದಲ್ಲಿ ಗೆದ್ದು ಐದು ಜನ ಪಾಂಡವರೊಂದಿಗೆ ಮದುವೆಯಾಗಿ ಹಲವು ವರ್ಷಗಳೇ ಗತಿಸಿದರೂ ದ್ರೌಪದಿಗೆ ಇನ್ನೂ ಮಕ್ಕಳಾಗಿಲ್ಲ. ಮಕ್ಕಳಿಲ್ಲದ ಕೊರಗು ಅವಳನ್ನು ದಹಿಸುತ್ತಿದೆ. ಅಂತ:ಪುರಕ್ಕೆ ಭೇಟಿ ನೀಡಿದ ನಾರದರೆದುರು ದ್ರೌಪದಿ ತನ್ನ ಆತಂಕವನ್ನು ಹೇಳಿಕೊಳ್ಳುತ್ತಾಳೆ. ವರ್ಷಕ್ಕೊಬ್ಬರಂತೆ ದ್ರೌಪದಿಯ ಗಂಡನಾಗಿ ಬಾಳ್ವೆ ಮಾಡಬೇಕು ಎಂದ ನಾರದರ ಸಲಹೆ ಫಲಿಸಿ ದ್ರೌಪದಿ ಗರ್ಭೀಣಿಯಾಗುತ್ತಾಳೆ. ಧರ್ಮನ ಅವಧಿ ಮುಗಿದು ಭೀಮನ ಅವಧಿಯಲ್ಲಿ ಒಂದುಸಲ ಮುಟ್ಟಾಗಿ ಕಟ್ಟಿದ ಬಸಿರದು. ದ್ರೌಪದಿಗೆ ಈ ಬಸಿರು ಭೀಮನದೆಂದು ತಿಳಿದಿದೆ. ಆದರೆ ಧರ್ಮನನ್ನು ಸಮಾಜ ಜೊಳ್ಳು ಎಂದು ಜರೆಯಬಾರದೆನ್ನುವ ಆತಂಕ ಕುಂತಿಯದು. ಆದ್ದರಿಂದ ಈ ಬಸಿರು ಧರ್ಮನದೆಂದು ಬಿಂಬಿಸಬೇಕೆನ್ನುವ ಕುಂತಿಯ ರಾಜಾಜ್ಞೆ ಹಾಗೂ ಒತ್ತಾಯ ದ್ರೌಪದಿಯ ಮೇಲೆ. ಇಷ್ಟು ದಿನ ಮಕ್ಕಳಾಗಲಿಲ್ಲ ಎನ್ನುವ ಕೊರಗು ಕಾಡಿದರೆ ಈಗ ಬಸಿರಿಗೆ ಕಾರಣನಲ್ಲದವನನ್ನು ಒಪ್ಪಿಕೊಳ್ಳುವ ಅನಿವಾರ್ಯತೆ. ದ್ರೌಪದಿಯದು ನಮ್ಮ ನಡುವೆಯೇ  ಬದುಕುತ್ತಿರುವ ಪಾತ್ರವೇನೋ ಎನ್ನುವಷ್ಟು ಮನಸ್ಸಿಗೆ ಹತ್ತಿರವಾಗುತ್ತದೆ. 

‘ಭಗವಂತ, ಭಕ್ತ ಮತ್ತು ರಕ್ತ’ ಹಾಗೂ ‘ಇವತ್ತು ಬೇರೆ’ ಕಥೆಗಳಲ್ಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅರ್ಥಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧಗಳ ಚಿತ್ರಣವಿದೆ. ‘ಅಯ್ಯೋ ಪ್ಯಣ್ಯಾತ್ಮ ಮೀಟಿಂಗ್ ಬಿಟ್ಟು ಬರಲಾರದ ಮುಂಡೆಗಂಡ ನಿನಗ್ಯಾಕೆ ಅವರ ಚಿಂತಿ. ತನ್ನ ಭಕ್ತರನ್ನು ಆ ಭಗವಂತ ಯಾವತ್ತೂ ಕೈ ಬಿಡಲ್ಲ ತಿಳ್ಕೋ. ನಿನ್ನ ಕೈಲೆ ಆಗಲ್ಲ ಅಂದರೆ  ಜಗತ್ತು ನಿಂತು ಹೋಗಲ್ಲ. ಮತ್ತೊಂದು ದಾರಿ ತೋರಿಸ್ತಾನೆ. ನೀನೇನೂ ಬ್ಭೆಜಾರು ಮಾಡಿಕೋ ಬೇಡೋ ನಮ್ಮಪ್ಪ. ನಿನ್ನ ಮೀಟಿಂಗ್ ನೀನು ಮಾಡ್ಕೋ’ ಎನ್ನುವ ರಿಂದತ್ತಿಯ ಮಾತುಗಳು ಓದುಗರನ್ನು ವಿವೆಚನೆಗೆ ಹಚ್ಚುತ್ತವೆ. 

‘ಕಥೆ ಎಂದರೆ ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವುದು’ ಎನ್ನುತ್ತಾರೆ ಮಾಸ್ತಿ. ಚಿತ್ತಾಲರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ‘ಕಥೆಯಲ್ಲಿ ನಾನು ಹೇಳುತ್ತಿರುವುದು ನನ್ನ ವೈಯಕ್ತಿಕ ಯಾತನೆಯಾದರೇನಂತೆ, ಮುಖ್ಯವಾದದ್ದು ಅದರಲ್ಲಿ ನೀವು ನಿಮ್ಮ ದು:ಖವನ್ನು ಕಂಡುಕೊಳ್ಳುವ ಸಾಧ್ಯತೆ ಹುಟ್ಟಿದೆಯೇ  ಎನ್ನುವ ಪ್ರಶ್ನೆ. ಅಂದರೆ ಕಥೆಯಲ್ಲಿ ಚಿತ್ರಿತವಾದ ಯಾತನೆ ಯಾರ ಯಾತನೆಯೂ ಆಗುವಷ್ಟು ಬಲವುಳ್ಳದ್ದೇ ಎನ್ನುವ ಪ್ರಶ್ನೆ’. 

ಇಲ್ಲಿನ ವಸುಧೇಂದ್ರರ ಕಥೆಗಳನ್ನು ಓದುತ್ತಿರುವಾಗ ಅವರು ತಾವು ಬದುಕುತ್ತಿರುವ ಪರಿಸರದಲ್ಲಿ ಕಂಡು  ನೋಡಿದ ಪಾತ್ರಗಳ ಸಂಗತಿಯನ್ನು ನಮಗೆ ತಿಳಿಸುತ್ತಿದ್ದಾರೆ ಎನ್ನಿಸುತ್ತದೆ. ಮತ್ತು ಆ ಪಾತ್ರಗಳ ಯಾತನೆ ನಮ್ಮ ಯಾತನೆಯೂ ಆಗಿ ಬಹಳ ದಿನಗಳ ಕಾಲ ಕಾಡತೊಡಗುತ್ತದೆ. ಇಂಥ ಅನುಭವಕ್ಕೆ ಓದುಗರನ್ನು ಒಳಗಾಗಿಸುವಲ್ಲೇ ಕಥೆಯೊಂದರ ಸಾರ್ಥಕತೆ ಇರುವುದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ