Thursday, May 24, 2012

ಆತ್ಮಕಥಾನಕ ಅದು ಆತ್ಮಪ್ರಶಂಸೆಯಲ್ಲ

        ಆತ್ಮಕಥೆ ಮತ್ತು ವ್ಯಕ್ತಿ ಚಿತ್ರಣ ನನ್ನ ಓದಿನ ಮೊದಲ ಆದ್ಯತೆಗಳಲ್ಲೊಂದು. ಏಕೆಂದರೆ ಅಂಥ ಕೃತಿಗಳು ನನ್ನರ್ಥದಲ್ಲಿ ಬದುಕು ಬದಲಿಸುವ ಪುಸ್ತಕಗಳು. ಅಂಥದ್ದೆ ಒಂದು ಉತ್ತಮ ಆತ್ಮಕಥಾನಕ ಓದಲು ಮೊನ್ನೆ ಅವಕಾಶ ಸಿಕ್ಕಿತು. ಅದು ಗಿರೀಶ್ ಕಾರ್ನಾಡರು ಬರೆದ 'ಆಡಾಡತಾ ಆಯುಷ್ಯ' ಎನ್ನುವ ಪುಸ್ತಕ. ನಮಗೆಲ್ಲ ಗೊತ್ತಿರುವಂತೆ ಕಾರ್ನಾಡರದು ಮಲ್ಟಿ ಫೆಸೆಟೆಡ್ ಪರ್ಸನಾಲಿಟಿ. ಬರವಣಿಗೆ, ರಂಗಭೂಮಿ, ಸಿನಿಮಾ, ಅಭಿನಯ ತರಬೇತಿ ಹೀಗೆ ಹತ್ತು ಹಲವು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂದಿರುವಂಥ ವ್ಯಕ್ತಿ. ಅವರಲ್ಲಿನ ಪ್ರತಿಭೆ ಮತ್ತು ಅವರ ಅಗಾಧ ಬೆಳವಣಿಗೆ ನಮ್ಮನ್ನೆಲ್ಲ ಬೆರಗುಗೊಳಿಸುತ್ತದೆ. ತಮ್ಮ ಪ್ರತಿಭೆಯಿಂದ ಕನ್ನಡ ಸಾಹಿತ್ಯ, ಸಿನಿಮಾ ಮತ್ತು ರಂಗಭೂಮಿಗೆ ಸೃಜನಾತ್ಮಕ ಆಯಾಮವನ್ನು ದೊರಕಿಸಿಕೊಟ್ಟ ಕಾರ್ನಾಡರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹೌದು
      ಇನ್ನು ನಾನು ಆತ್ಮಕಥೆಯ ವಿಷಯಕ್ಕೆ ಬರುತ್ತೇನೆ. ಅನೇಕರು ತಿಳಿದಿರುವಂತೆ ಆತ್ಮಕಥಾನಕ ಎನ್ನುವುದು ಬರೀ ಆತ್ಮಪ್ರಶಂಸೆ ಮಾತ್ರವಲ್ಲ.ಕೆಲವರ ಈ ರೀತಿಯ ವಾದವನ್ನು ಪುಷ್ಟಿಕರಿಸುವಂತೆ ಕೆಲವೊಂದು ಆತ್ಮಪ್ರಶಂಸೆಯ ಆತ್ಮಕಥಾನಕಗಳು ಕನ್ನಡದಲ್ಲಿ ಪ್ರಕಟವಾಗಿರಬಹುದು. ಹಾಗೆಂದ ಮಾತ್ರಕ್ಕೆ ಎಲ್ಲ ಕೃತಿಗಳನ್ನು ಅದೇ ದೃಷ್ಟಿಯಿಂದ ನೋಡುವುದು ತಪ್ಪ. ಏಕೆಂದರೆ ಆತ್ಮಕಥಾನಕಗಳು ಕೃತಿಕಾರನ ಬದುಕಿನ ಜೊತೆ ಜೊತೆಗೆ ಅವನ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತೀಕ ಬದುಕನ್ನು ಅನಾವರಣಗೊಳಿಸುವ ಮಹತ್ವದ ಕೃತಿಗಳು. ಉದಾಹರಣೆಯಾಗಿ ಹೇಳುವುದಾದರೆ ಎಚ್.ನರಸಿಂಹಯ್ಯನವರ 'ಹೋರಾಟದ ಹಾದಿ' ಆತ್ಮಕಥೆ ಅದು ಭಾರತೀಯ ಶಿಕ್ಷಣ ಪದ್ಧತಿ, ಪಾಶ್ಚಾತ್ಯ ಶಿಕ್ಷಣ ಪದ್ಧತಿ, ಶೈಕ್ಷಣಿಕ ಸಮಸ್ಯೆಗಳು ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಆ ಕೃತಿಯ ಮುನ್ನುಡಿಯಲ್ಲಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ಹೇಳಿರುವಂತೆ 'ಹೋರಾಟದ ಹಾದಿ ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ. ಈ ಕೃತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಚರಿತ್ರೆಯ ಒಂದಷ್ಟು ಭಾಗ, ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿಯ ಇನ್ನೊಂದಷ್ಟು ಭಾಗ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಬಹಳಷ್ಟು ಭಾಗ ಅವರ ವ್ಯಕ್ತಿತ್ವದಲ್ಲಿ ಅವಿನಾಭಾವದಿಂದ ಬೆಸೆದುಕೊಂಡಿವೆ'. ಹೀಗೆ ಆತ್ಮಕಥಾನಕ ಎನ್ನುವುದುಕೃತಿಕಾರನ ಬದುಕಿನ ಹೊರತಾಗಿಯೂ ಅನೇಕ ಸಂಗತಿಗಳನ್ನು ಕಟ್ಟಿಕೊಡುವ ಅನನ್ಯ ಕೃತಿ.
       'ಆಡಾಡತಾ ಆಯುಷ್ಯ' ಓದುಗನಿಗೆ ಹೊಸ ಅನುಭವ ಕೊಡುವ ಒಂದು ವಿಶಿಷ್ಟ ಆತ್ಮಕಥಾನಕ. ಕನ್ನಡದಲ್ಲಿ ಈ ಪ್ರಕಾರದ ಆತ್ಮಕಥೆ ರಚಿತವಾಗಿರುವುದು  ಅದೊಂದು   ಹೊಸ ಪ್ರಯೋಗ  ಎನ್ನಬಹುದು ಏಕೆಂದರೆ ಇಲ್ಲಿ ಕಾರ್ನಾಡರು ಏನನ್ನೂ ಮುಚ್ಚಿಡದೆ ಎಲ್ಲವನ್ನೂ ಬಹಿರಂಗಗೊಳಿಸಿದ ರೀತಿ ಓದುಗರನ್ನು ಅಚ್ಚರಿಗೊಳಿಸುತ್ತದೆ. ಪುಸ್ತಕ ಮೊದಲಿಗೆ ಆಪ್ತವಾಗುವುದು ಅದರಲ್ಲಿನ ಬರವಣಿಗೆಯ ಶೈಲಿಯಿಂದ.ಸರಳ ಭಾಷೆ,ಪುಟ್ಟ ವಾಕ್ಯಗಳ ಮೂಲಕ ತಮ್ಮ ಬದುಕಿನ ದಟ್ಟ ಅನುಭವಗಳನ್ನು ಕಟ್ಟಿಕೊಡುವ ಕಾರ್ನಾಡರ ಅಭಿವ್ಯಕ್ತಿಯ ಶೈಲಿ ತುಂಬ ಆಕರ್ಷಣಿಯವಾಗಿದೆ. ಕೃತಿಯ ಅರ್ಪಣೆಗೇ ಎರಡು ಪುಟಗಳನ್ನು ಮೀಸಲಿಟ್ಟದ್ದು ಪ್ರಾರಂಭದಲ್ಲೇ ಓದುಗನಲ್ಲಿ ಒಂದು ಸಣ್ಣ ಕುತೂಹಲಕ್ಕೆ ಕಾರಣವಾಗಿಅದುಪುಸ್ತಕದ ಕೊನೆಯ ಪುಟದವರೆಗೂ ಕೈಹಿಡಿದು ಕರೆದೊಯ್ಯುತ್ತದೆ. ಧಾರವಾಡದ ಕರ್ನಾಟಕ ಕಾಲೇಜು, ಆಕ್ಸ್ ಫರ್ಡ್ ಪ್ರೆಸ್, ಮುಂಬಯಿ ಜನಜೀವನ, ಸಿನಿಮಾ ನಿರ್ದೇಶನ, ಕಲಾತ್ಮಕ ಸಿನಿಮಾಗಳು, ಪುಣೆಯ ಫಿಲ್ಮ್ ಇನ್ ಸ್ಟಿಟ್ಯೂಟ್ , ತುರ್ತು ಪರಿಸ್ಥಿತಿ, ಜೊತೆಗೆ ಅಲ್ಲಲ್ಲಿ ಕಾಣಿಸಿಕೊಳ್ಳುವ ಸೃಜನಾತ್ಮಕ ವ್ಯಕ್ತಿತ್ವಗಳ ಪರಿಚಯ ಹೀಗೆ ಈ ಕೃತಿ ಕಾರ್ನಾಡರ ಸುತ್ತ ಸುತ್ತುತ್ತಲೇ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತ ಹೋಗುತ್ತದೆ. ಕಾರ್ನಾಡರು ತಮ್ಮ ಬದುಕಿನ ಜೊತೆಗೆ ತಾವು ಕಂಡ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತೀಕ ಬದುಕನ್ನೂ ಓದುಗನಿಗೆ  ಮೊಗೆ ಮೊಗೆದುಕೊಟ್ಟಿರುವರು.       
    ಕಾರ್ನಾಡರು ತಾವಿದ್ದ ಪರಿಸರದ ಕುರಿತು ಬರೆಯುವಾಗ ಅದನ್ನು ಸ್ಥೂಲವಾಗಿ ಹೇಳಿರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ.ಉದಾಹರಣೆಗೆ ಆಕ್ಸ್ ಫರ್ಡ್  ಬಗ್ಗೆ ಬರೆಯುವಾಗ ಜೊತೆಗೆ ಬ್ರಿಟಿಷ್ ಸಮಾಜದ ಕುರಿತೂ ಹೇಳುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ 'ಹಿಂದೂ ಸಮಾಜಕ್ಕೆ ಜಾತಿ ವ್ಯವಸ್ಥೆ ತಳಹದಿಯಾಗಿರುವಂತೆ ಬ್ರಿಟಿಷ್ ಸಮಾಜಕ್ಕೊಂದು
 ಅದರದೇ ಆದ  ವರ್ಗ ವ್ಯವಸ್ಥೆ ಅಡಿಗಲ್ಲಾಗಿದೆ.ಈ ವ್ಯವಸ್ಥೆಯನ್ನು ಸ್ಥೂಲವಾಗಿ ಹೀಗೆ ಚಿತ್ರಿಸಬಹುದು ಸಮಾಜದ ಬುಡದಲ್ಲಿ  
ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳಭಾಗದಲ್ಲಿ ಕಾರ್ಮಿಕ ವರ್ಗ. ಸಮಾಜದ ಮೇಲು ತುದಿಯಲ್ಲಿ ವಂಶಾನುಗತವಾಗಿ ಬಂದ    ಸಂಪತ್ತು-ಆಸ್ತಿಗಳಿದ್ದರೂ ಇಂದು ಬುರುಸಲು ಗಟ್ಟಿ ಸಾಮಾಜಿಕವಾಗಿ, ರಾಜಕೀಯವಾಗಿ ಅರ್ಥಹೀನವಾಗಿರುವ ಮೇಲುವರ್ಗ.
ಈ ಎರಡರ ನಡುವೆ ಮಧ್ಯಮ ವರ್ಗ'.ಹೀಗೆ ಹೇಳುವ ಲೇಖಕರು ಪ್ರತಿಯೊಂದು ವರ್ಗದ ಸಾಮಾಜಿಕ,ಶೈಕ್ಷ ಣಿಕ, ಆರ್ಥಿಕ 
 ಬದುಕನ್ನುವಿಶ್ಲೇಷಿಸುತ್ತಾರೆ.ಇಲ್ಲಿ ಕಾರ್ನಾಡರ ವೈಯಕ್ತಿಕ ಬದುಕನ್ನು ಓದುತ್ತಿದ್ದೇನೆ ಎನ್ನುವುದಕ್ಕಿಂತ ಒಂದು ರಾಷ್ಟ್ರದ ಜನ
 ಜೀವನವನ್ನು ಓದುತ್ತಿರುವ ಅನುಭವ ಓದುಗನಿಗಾಗುತ್ತದೆ. ಈ ಕಾರಣದಿಂದ ಕೃತಿ ಓದುಗನಿಗೆ ಮತ್ತಷ್ಟು ಆಪ್ತವಾಗುತ್ತದೆ.       ಆದರೆ ಕೃತಿಯ ಅಪೂರ್ಣತೆ ಓದುಗನಿಗೆ ನಿರಾಸೆಯನ್ನುಂಟು ಮಾಡುತ್ತದೆ.ಕಾರ್ನಾಡರೇ ಹೇಳಿರುವಂತೆ ಇದು ಅವರ   
ಬದುಕಿನ ಅರ್ಧ ಕಥಾನಕ.   ಕಾರ್ನಾಡರಿಗೀಗ ಎಪ್ಪತ್ಮೂರು ವರ್ಷ ಕೃತಿಯ ಕಥಾವಸ್ತು ಅವರ ಮೂವತ್ತೇಳನೇ ವಯಸ್ಸಿಗೆ
ಸೀಮಿತಗೊಂಡಿದೆ.ಮುಂದಿನ ದಿನಗಳಲ್ಲಿ ತಮ್ಮ ಬದುಕಿನ ಉತ್ತರಾರ್ಧ ಬರಬಹುದು ಎನ್ನುವ ಸುಳಿವನ್ನು ಅವರು
ಬಿಟ್ಟುಕೊಟ್ಟಿರುವರು.ಹಾಗೊಂದು ವೇಳೆ ಬಂದರೆ ಅದನ್ನು 'ನೋಡ ನೋಡುತ ದಿನಮಾನ' ಎಂದು ಕರೆಯಬಹುದು
ಎಂದಿರುವರು.     'ಆಡಾಡತ ಆಯುಷ್ಯ' ಓದುಗರ ಮನಸ್ಸನ್ನು ತುಂಬಿದೆ. ಈಗ ಅವರು ಕಾಯುತ್ತಿರುವುದು 'ನೋಡ ನೋಡುತ ದಿನಮಾನ' ಪುಸ್ತಕಕ್ಕಾಗಿ. ಎಲ್ಲರ ಆಶಯದಂತೆ ಉತ್ತರಾರ್ಧ ಬೇಗ ಪ್ರಕಟಗೊಂಡು ಓದುಗರ ಕೈ ಸೇರಲಿ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Tuesday, May 22, 2012

ಮನುಷ್ಯನಾಗುವುದೆಂದರೇನು?

     ಮೊನ್ನೆ ನನ್ನೂರಿಗೆ ಹೋಗಿದ್ದೆ. ಊರ ಹೆಬ್ಬಾಗಿಲಲ್ಲಿ ಪರಿಚಿತರೋರ್ವರು ಭೇಟಿಯಾದರು. ಅದು ಇದು ಮಾತನಾಡುತ್ತ ತಮ್ಮ ಅಣ್ಣನ ಮಗನಿಗೆ ಸರ್ಕಾರಿ ಕೆಲಸ ಸಿಕ್ಕ ವಿಷಯ ತಿಳಿಸಿದರು. ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಹುಡುಗ ಪರಿಶ್ರಮ ಪಟ್ಟು ಓದಿ ಡಿಪ್ಲೊಮಾ ಡಿಗ್ರಿ ಸಂಪಾದಿಸಿದ್ದ. ಆತನ ಅರ್ಹತೆಗೆ ತಕ್ಕುದಾದ ಹುದ್ಧೆ ಲೋಕೋಪಯೋಗಿ ಇಲಾಖೆಯಲ್ಲಿ ಲಭಿಸಿತ್ತು. ನನ್ನ ಪರಿಚಿತರು ತಮ್ಮ ಅಣ್ಣನ ಮಗನ ಕುರಿತು ಅಭಿಮಾನದಿಂದ ಮಾತನಾಡಿದರು. 'ನೋಡ್ರಿ ಅವ್ನಿಗಿ ಭಾಳ ಛಲೋ ಡಿಪಾರ್ಟ್ಮೆಂಟ್ ಸಿಕ್ಕಾದ. ಇನ್ನ ಮುಂದ ಅವ್ನಿಗಿ ಯಾರೂ ಹಿಡಿಯೊ ಹಂಗಿಲ್ಲ. ಯಾಕಂದ್ರ ಮುಂದ ಸುರಿಯೊದೆಲ್ಲ ರೊಕ್ಕದ ಮಳಿನಾ. ಬ್ಯಾಡ ಅಂದ್ರೂ ಮಂದಿ ಮನಿಗಿ ಬಂದು ರೊಕ್ಕ ಕೊಡ್ತಾರ. ರೊಕ್ಕ ಎಣಿಸಾಕ ಅಂವ ಒಂದು ಆಳ ಇಟ್ಕೋಬೇಕಾಗ್ತದ. ಎರಡು ವರ್ಷದಾಗ ಅಂವ ಹ್ಯಾಂಗ ಮನಷ್ಯಾ ಆಗ್ತಾನ ನೋಡ್ರಿ'
      ಒಂದು ಕ್ಷಣ ನಾನು ತಬ್ಬಿಬ್ಬಾದೆ. ಹಾಗಾದರೆ ಅವರ ದೃಷ್ಟಿಯಲ್ಲಿ ಮನುಷ್ಯನಾಗುವುದೆಂದರೆ ಸರ್ಕಾರಿ ನೌಕರಿಗೆ ಸೇರಿ ಲಂಚ ಹೊಡೆಯುತ್ತ, ಬಂಗಲೆ ಮೇಲೆ ಬಂಗಲೆ ಕಟ್ಟಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುತ್ತ ಐಶಾರಾಮಿ ಬದುಕು ನಡೆಸುವುದೇ ನಿಜವಾದ ಮನುಷ್ಯ ಎನ್ನುವ ಬಗ್ಗೆ ಅವರ ಯೋಚನಾ ಲಹರಿ ಅರೇ ಕ್ಷಣ ನನ್ನನ್ನು ನಾನು ಯಾರು ಎನ್ನುವ ಯೋಚನೆಗೆ ಹಚ್ಚಿತು. ಒಂದಿಷ್ಟು ಶೃದ್ಧೆ, ನಿಷ್ಟೆ, ಪ್ರಾಮಾಣಿಕತೆಯ ನೆರಳಲ್ಲಿ ಬದುಕು ನೂಕುತ್ತಿರುವ ಜನ ಮನುಷ್ಯರೇ ಅಲ್ಲ ಎನ್ನುವ ಅಭಿಪ್ರಾಯ ಅವರ ಮಾತಿನುದ್ದಕ್ಕೂ ಇಣುಕುತ್ತಿತ್ತು.
       ಈ ಮೇಲಿನ ಪರಿಚಿತರು ಹೇಳಿದ ರೀತಿಯಲ್ಲಿ ಬದುಕಬೇಕೆನ್ನುವ ಧಾವಂತಕ್ಕೆ ಕಟ್ಟುಬಿದ್ದ ವಿದ್ಯಾವಂತರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸರ್ಕಾರಿ ಕೆಲಸವನ್ನು ಆಶ್ರಯಿಸುತ್ತಿರುವುದು ಸಾಮಾನ್ಯ. ಕಡಿಮೆ ಕೆಲಸ, ಕೈತುಂಬ ಸಂಬಳ, ವಿಶೇಷ ಸೌಲಭ್ಯಗಳು, ಆದಾಯದ ಅನೇಕ ಮೂಲಗಳು ಈ ಎಲ್ಲ ಕಾರಣಗಳಿಂದ ಸರ್ಕಾರಿ ಉದ್ಯೋಗಕ್ಕೆ ಸೇರುವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇವರ ದೃಷ್ಟಿಯಲ್ಲಿ ಸರ್ಕಾರಿ ನೌಕರಿ ಎಂದರೆ ಅದು ಸಾರ್ವಜನಿಕ ಸೇವೆಯಲ್ಲ. ಆ ಹುದ್ಧೆಯ ಮೂಲಕ ಅಪಾರ ಸಂಪತ್ತು ಗಳಿಸಿ ಸಮಾಜದ ದೃಷ್ಟಿಯಲ್ಲಿ ಮನುಷ್ಯರೆಂದು ಕರೆಯಿಸಿಕೊಳ್ಳುವ ತುಡಿತ. ಸರ್ಕಾರಿ ನೌಕರಿ ದೊರೆತರೆ ಜೀವನ ಪಾವನವಾದಂತೆ. ಸರ್ಕಾರಿ ಹುದ್ಧೆಯ ನೇಮಕಾತಿಗಾಗಿ ಲಕ್ಷಾಂತರ ರೂಪಾಯಿಗಳ ಲಂಚ ನೀಡಿ ಜೊತೆಗೆ ನಿರ್ಧಿಷ್ಟ ಇಲಾಖೆಗೆ ಸೇರಲು ಮತ್ತಷ್ಟು ಕೈ ಬೆಚ್ಚಗೆ ಮಾಡಿ ಆಯಕಟ್ಟಿನ ಜಾಗದಲ್ಲಿ ಕುಳಿತರೆ ಭವಿಷ್ಯ ಬಂಗಾರವಾದಂತೆ. ಹೀಗೆ ಲಕ್ಷಾಂತರ ರುಪಾಯಿಗಳನ್ನು ಸುರಿದು ಸರ್ಕಾರಿ ಕೆಲಸಕ್ಕೆ ಸೇರುವ ನಮ್ಮ ವಿದ್ಯಾವಂತ ಯುವಕರು ಅದಕ್ಕೆ ನೂರರಷ್ಟು ಸಂಪತ್ತನ್ನು ಕೊಳ್ಳೆ ಹೊಡೆಯುವರು. ಲೋಕಾಯುಕ್ತರು ದಾಳಿಮಾಡಿದಾಗ ಗುಮಾಸ್ತನೋರ್ವನ ಮನೆಯಲ್ಲಿ ಕೋಟಿಗಟ್ಟಲೆ ಹಣ, ಕೇಜಿಗಟ್ಟಲೆ ಚಿನ್ನ, ಬೆಳ್ಳಿ ದೊರೆಯುತ್ತಿರುವುದು ಇದೆ ಕಾರಣದಿಂದ. ಸರ್ಕಾರಿ ನೌಕರಿ ದೆಸೆಯಿಂದ ಅಕ್ರಮವಾಗಿ ಸಂಪತ್ತು ಗಳಿಸುವುದು ನಮ್ಮ ವಿದ್ಯಾವಂತರಿಗೆ ತಪ್ಪಾಗಿ ಕಾಣಿಸುವುದಿಲ್ಲ.
      ಮತ್ತೊಂದು ನಿದರ್ಶನ- ಆತನೊಬ್ಬ ಸಾಹಿತ್ಯದ ಪರಮ ಭಕ್ತ. ತನ್ನ ಕಾಲೇಜು ದಿನಗಳಲ್ಲಿ ಅನ್ಯಾಯ, ಅಕ್ರಮ, ಅನೀತಿಯನ್ನು ಉಗ್ರವಾಗಿ ಖಂಡಿಸುತ್ತಾ ಸಾಹಿತ್ಯ ರಚಿಸುತ್ತಿದ್ದ. ಊರೂರು ಅಲೆಯುತ್ತ ಜನರ ಮನಸ್ಸಿನಲ್ಲಿ ಬಂಡಾಯದ ಬೀಜ ಬಿತ್ತುತ್ತಿದ್ದ. ದೇಹಕ್ಕೆ ವಯಸ್ಸಾದಂತೆ ಆತನ ಮನಸ್ಸೂ ಪಕ್ವಗೊಂಡಿದೆ. ಸಾಹಿತ್ಯ ಸಮಾಜ ತಿದ್ದುವುದಕ್ಕಲ್ಲ ಎಂದು ಅರ್ಥ ಮಾಡಿಕೊಂಡವನಂತೆ ವರ್ತಿಸುತ್ತಿದ್ದಾನೆ. ಬರವಣಿಗೆಯಿಂದಲೂ ಸಂಪತ್ತು ಗಳಿಸಬಹುದೆಂದು ತೋರಿಸಿಕೊಟ್ಟಿದ್ದಾನೆ. ಹೊಡಿ ಬಡಿ ಎಂದೆಲ್ಲ ಬರೆಯುತ್ತಿದ್ದವನು ಈಗ ವ್ಯವಸ್ಥೆಯನ್ನೇ ಹೊಗಳಲು ಪ್ರಾರಂಭಿಸಿದ್ದಾನೆ. ದಿನದ ಹೆಚ್ಚಿನ ಸಮಯ ಶ್ರೀಮಂತ ಕುಳಗಳ ಇಲ್ಲವೇ ರಾಜಕಾರಣಿಗಳ ಸಹವಾಸದಲ್ಲಿ ಕಳೆಯುತ್ತಿದ್ದಾನೆ. ಒಂದರ್ಥದಲ್ಲಿ ಆಸ್ಥಾನದ ಹೊಗಳು ಭಟ್ಟನಾಗಿ ತನ್ನನ್ನು ತಾನು ಬದಲಾಯಿಸಿ ಕೊಂಡಿದ್ದಾನೆಂದರೂ ಅಡ್ಡಿಯಿಲ್ಲ. ಪ್ರಶಸ್ತಿ, ಗೌರವಗಳೆಂದರೆ ಮಾರು ದೂರ ಸರಿದು ನಿಲ್ಲುತ್ತಿದ್ದವನ ಮನೆಯ ಶೋಕೆಸಿನಲ್ಲಿ ಈಗ ಹಲವಾರು ಪ್ರಶಸ್ತಿ ಫಲಕಗಳು ರಾರಾಜಿಸುತ್ತಿವೆ. ಅಕಾಡೆಮಿಗಳ ಸದಸ್ಯತ್ವಕ್ಕಾಗಿ, ಸಮ್ಮೇಳನದ ಅಧ್ಯಕ್ಷಗಿರಿಗಾಗಿ ದಿನಗಟ್ಟಲೆ ಪ್ರಭಾವಿಗಳ ಎದುರು ಕೈ ಕಟ್ಟಿ ನಿಲ್ಲುತ್ತಾನೆ.
      ಇಲ್ಲಿ ನಮ್ಮದೂ ನೂರೆಂಟು ತಪ್ಪುಗಳಿವೆ. ಮನುಷ್ಯರನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ವ್ಯಕ್ತಿತ್ವ ಮತ್ತು ಸಾಧನೆಗಳಿಗಿಂತ ಒಣ ಪ್ರತಿಷ್ಠೆ ಮತ್ತು ಆಡಂಬರಕ್ಕೆ ಪ್ರಾಮುಖ್ಯ ನಿಡುತ್ತಿದ್ದೇವೆ. ವೈಯಕ್ತಿಕ ಬದುಕನ್ನು ಪಕ್ಕಕ್ಕೆ ತಳ್ಳಿ ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಉಜ್ವಲ್ ನಿಕ್ಕಂ ಅವರಂಥ ವ್ಯಕ್ತಿಗಳು ನಮಗೆ ಯಾವತ್ತೂ ಸೆಲಿಬ್ರಿಟಿಯಾಗಿ ಕಾಣಿಸುವುದೇ ಇಲ್ಲ. ಹಲವರ ದೃಷ್ಟಿಯಲ್ಲಿ ಅಕ್ರಮವಾಗಿ ಸಂಪಾದನೆ ಮಾಡಿ ಸ್ವಂತಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡವರೆ ನಿಜವಾದ ಮನುಷ್ಯರು. ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಸಮಾಜ ಸೇವಕನಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅದೇ ಒಬ್ಬ ಅಪ್ರಾಮಾಣಿಕ ರಾಜಕಾರಣಿ ಹತ್ತಿರ ಕರೆದು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದರೆ ಪುಳಕಗೊಳ್ಳುತ್ತೇವೆ. ಮೈ ಮನಗಳಲ್ಲಿ ರೋಮಾಂಚನವಾಗುತ್ತದೆ. ಅದನ್ನೇ ದೊಡ್ಡ ವಿಷಯ ಮಹತ್ಸಾಧನೆ ಎನ್ನುವಂತೆ ಇತರರ ಎದುರು ಹೇಳಿ ಸುಖಿಸುತ್ತೇವೆ. ಏಕೆಂದರೆ ಅಪ್ರಾಮಾಣಿಕತೆಯಿಂದ ಅಪಾರ ಸಂಪತ್ತು ಗಳಿಸಿದವನೇ ನಮ್ಮ ದೃಷ್ಟಿಯಲ್ಲಿ ನಿಜವಾದ ಮನುಷ್ಯ. ಇಲ್ಲಿ ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗೆ ಬದುಕ ಬೇಕೆನ್ನುವುದಕ್ಕಿಂತ ಹೇಗಾದರೂ ಸರಿ ಬದುಕ ಬೇಕೆನ್ನುವುದು ನಿಯಮವಾಗುತ್ತದೆ. ಬದುಕುವ ಕಲೆ ಗೊತ್ತಿರುವಾತ ಸಮಾಜದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹೀಗೇ ಬದುಕಬೇಕೆಂದು ಹೊರಡುವವನು ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗಿ ಶತಮೂರ್ಖನೆಂದು ಕರೆಯಿಸಿಕೊಳ್ಳುತ್ತಾನೆ. ಹಾಗಾದರೆ ಮನುಷ್ಯನಾಗುವುದೆಂದರೇನು? ಇಂಥದ್ದೊಂದು ಜಿಜ್ಞಾಸೆ ಬದುಕುವ ಕಲೆ ಗೊತ್ತಿಲ್ಲದವರನ್ನು ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುವ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.
(20.05.2010 ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟ)

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, May 19, 2012

ಅವರು ಕನಸು ಕಟ್ಟುತ್ತಿದ್ದ ಸಮಯ ಇವರೆಲ್ಲಿದ್ದರು

      'ಆಕೆಗೆ ಈಗಿನ್ನೂ ಹದಿನೆಂಟರ ಹರೆಯ. ಅವನಿಗೂ ಅಷ್ಟೇ. ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ನೋಡಿದರು. ಪರಸ್ಪರ ಪ್ರೀತಿಸಲಾರಂಭಿಸಿದರು. ವಿಷಯ ಕಾಲೇಜಿನ ಕಾರಿಡಾರಿನಲ್ಲಿ ಹರಿದಾಡಿ ಮನೆಯವರ ಕಿವಿ ತಲುಪಿತು. ರೋಷಗೊಂಡ ಅಪ್ಪ ಅವಳನ್ನು ದೂರದ ತಂಗಿಯ ಮನೆಗೆ ಕರೆದೊಯ್ದು ಬಿಟ್ಟ. ಅವಳ ಅನುಪಸ್ಥಿತಿ ಹುಡುಗನನ್ನು ತೀವ್ರ ನಿರಾಸೆಗೆ ದೂಡಿತು. ಓದು, ಊಟ, ಆಟ ಎಲ್ಲದರಲ್ಲೂ ನಿರಾಸಕ್ತಿ. ಬದುಕೇ ಬೇಡವಾಯಿತು. ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದ. ಮಗನ ಭವಿಷ್ಯದ ಕುರಿತು ಸುಂದರ ಕನಸುಗಳನ್ನು ಕಟ್ಟುತ್ತಿದ್ದ ತಂದೆ ತಾಯಿಯ ಬದುಕಿನಲ್ಲಿ ಆತನ ಸಾವಿನಿಂದ ಕಾರ್ಮೋಡ ಕವಿಯಿತು. ಬದುಕು ಬರಡಾಯಿತು'.
       ಈ ಮೇಲೆ ಉಲ್ಲೇಖಿಸಿದ ಘಟನೆ ನನ್ನ ಕಲ್ಪನೆಯಲ್ಲಿ ಮೂಡಿ ಬಂದಿದ್ದರೂ ಈ ದಿನಗಳಲ್ಲಿ ಇದು ಪ್ರತಿ ಮನೆಗಳಲ್ಲಿ ಮರುಕಳಿಸುತ್ತಿದೆ. 'ಹುಚ್ಚು ಖೋಡಿ ಮನಸ್ಸು ಅದು ಹದಿನಾರರ ವಯಸ್ಸು' ಎಂದು ನಮ್ಮ ಜಾನಪದ ಕವಿ ಹಾಡಿರುವಂತೆ ಹರೆಯ ಬಹುಪಾಲು ಹುಡುಗ/ಹುಡುಗಿಯರ ಬದುಕನ್ನು ದುರಂತದ ಕಡೆಗೆ ಮುಖ ಮಾಡಿ ನಿಲ್ಲಿಸುತ್ತಿದೆ. ಕಾಲೇಜಿನ ಅಂಗಳಕ್ಕೆ ಕಾಲಿಟ್ಟಿದ್ದೆ ತಡ ನಮ್ಮ ಯುವಕ/ಯುವತಿಯರಲ್ಲಿ ಈ ಪ್ರೀತಿ, ಪ್ರೇಮಗಳು ಮೊಳಕೆಯೊಡೆಯಾಲಾರಂಭಿಸುತ್ತವೆ.ಅದಕ್ಕೆ ಪೂರಕವಾಗಿ ನಮ್ಮ ಮನೋರಂಜನಾ ಮಾಧ್ಯಮವಾದ ಸಿನಿಮಾ ಹರೆಯದ ಹಸಿ ಹಸಿ ಪ್ರೇಮವನ್ನೇ ಬೆಳ್ಳಿ ತೆರೆಗೆ ತಂದು ಯುವಜನತೆಯನ್ನು ಉತ್ತೇಜಿಸುತ್ತಿದೆ. ಕೆಲವು ದಶಕಗಳ ಹಿಂದೆ ತೆರೆಗೆ ಬಂದ ಹಿಂದಿ ಸಿನಿಮಾವೊಂದರ ಕೊನೆಯ ದೃಶ್ಯದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಡುವ ಜಾಗ ಅನೇಕ ವರ್ಷಗಳವರೆಗೆ ಯುವ ಪ್ರೇಮಿಗಳ ಪಿಕ್ ನಿಕ್ ತಾಣವಾಗಿತ್ತು. ಇದು ಸಿನಿಮಾ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ಪ್ರೌಢಶಾಲಾ ಶಿಕ್ಷಣದ ನಂತರ ದೊರೆಯುವ ಸ್ವಚ್ಚಂದವಾದ ಬದುಕು, ಮುಕ್ತ ಸ್ವಾತಂತ್ರ್ಯ, ದೈಹಿಕ ಆಕರ್ಷಣೆ, ಸಿನಿಮಾದಂಥ ಪರಿಣಾಮಕಾರಿ ಮಾಧ್ಯಮದ ಪ್ರಭಾವದಿಂದಾಗಿ ಯುವಕ/ಯುವತಿಯರು ಬದುಕು ಕಟ್ಟಿಕೊಳ್ಳಬೇಕಾದ ಹೊತ್ತಿನಲ್ಲಿ ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಬದುಕನ್ನು ದುರಂತದಲ್ಲಿ ಅಂತ್ಯಗೊಳಿಸಿಕೊಳ್ಳುತ್ತಿರುವರು. ಪ್ರೀತಿ ಬದುಕಿಗೆ ಜೀವಸೆಲೆಯಾಗಬೇಕು, ಸಾಧನೆಗೆ ಸ್ಫೂರ್ತಿಯಾಗಬೇಕು, ಯಶಸ್ಸಿನ ಮೆಟ್ಟಿಲಾಗಬೇಕು, ನಾಳೆಯ ಭವಿಷ್ಯಕ್ಕೆ ಅಡಿಪಾಯವಾಗಬೇಕು, ನಿನ್ನೆಯ ದಿನಗಳ ಮಧುರ ಕನವರಿಕೆಯಾಗಬೇಕು. ಆದರೆ ಪ್ರೀತಿಯೇ ಬದುಕನ್ನು ಘೋರವಾಗಿಸುತ್ತಿರುವುದು ದುರಂತದ ಸಂಗತಿ.
         ಈ ನಡುವೆ ನಮಗೆ ಅವರುಗಳ ಬಗ್ಗೆ ಕಿಂಚಿತ್ ಚಿಂತೆಯೂ ಇಲ್ಲ. ಮಕ್ಕಳ ಬದುಕಿನ ಕನಸು ಕಟ್ಟುತ್ತ ನಾಳೆ ಬರಲಿರುವ ಸುಂದರ ದಿನಗಳನ್ನು ಎದುರು ನೋಡುತ್ತ ಬದುಕು ನೂಕುತ್ತಿರುವ ಪಾಲಕರಿಗೆ ಮಕ್ಕಳ ಈ ವರ್ತನೆ ಆಘಾತವನ್ನುಂಟು ಮಾಡುತ್ತಿದೆ. ಬಾಳ ಸಂಜೆಯಲ್ಲಿ ಆಸರೆಯಾಗಿರಬೇಕಿದ್ದ ಮಕ್ಕಳು ಪ್ರೀತಿ, ಪ್ರೇಮದ ಬಲೆಗೆ ಬಿದ್ದು ತಾರುಣ್ಯದಲ್ಲೇ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿರುವುದು ಅನೇಕ ತಂದೆ ತಾಯಿಗಳನ್ನು ಅನಾಥರನ್ನಾಗಿಸುತ್ತಿದೆ.
        ಈ ಪಾಲಕರು ಮಕ್ಕಳ ಸುಂದರ ಬದುಕಿನ ಕನಸು ಕಟ್ಟುತ್ತಿದ್ದ ಸಮಯದಲ್ಲಿ ಆ ಮಕ್ಕಳು ಪ್ರೇಮದ ಉನ್ಮಾದಕ್ಕೊಳಗಾಗಿ ರೈಲು ಕಂಬಿಗಳ ಮೇಲೆ, ನೇಣಿನ ಕುಣಿಕೆಯೊಳಗೆ, ಭಾವಿ/ನದಿ/ಸಾಗರಗಳ ಗರ್ಭದೊಳಗೆ ಹೆಣವಾಗಿ ಬಿದ್ದಿದ್ದರು.

-ರಾಜಕುಮಾರ. ವಿ. ಕುಲಕರ್ಣಿ, ಬಾಗಲಕೋಟೆ

Thursday, May 10, 2012

ಲಂಕೇಶ್ ಎಂಬ ಬೋಧಿ ವೃಕ್ಷದ ಕೆಳಗೆ

   
      ಲಂಕೇಶ್ ನಿಧನದ ಸಂದರ್ಭ 'ಸುಧಾ'ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಪ್ರಸಿದ್ಧ ಸಾಹಿತಿಯೊಬ್ಬರು ಲಂಕೇಶರ ಬಗ್ಗೆ ಬರೆದ ಶ್ರದ್ಧಾಂಜಲಿ ರೂಪದ ಲೇಖನದಲ್ಲಿ 'ಲಂಕೇಶ್ ಹಾಗೂ ತಮ್ಮ ನಡುವೆ ವೈಮನಸ್ಸಿತ್ತೆಂದು ಮತ್ತು ಲಂಕೇಶ್ ಪತ್ರಕರ್ತನಾಗಿ ಯಶಸ್ವಿಯಾಗಲಿಲ್ಲ.ಕೆಲವು ಮೂರ್ಖ ಕನ್ನಡಿಗರಿಂದ ಲಂಕೇಶ್ ಪತ್ರಿಕೆ ಜನಪ್ರಿಯವಾಯಿತು' ಎಂದು ಬರೆದಿದ್ದರು. ಆ ಲೇಖನ ಓದಿದ ನಂತರ ಬಹಳ ಕೆಡುಕೆನಿಸಿತು. ತಕ್ಷಣ ಲಂಕೇಶ ಪತ್ರಿಕೆಗೆ ನನ್ನದೊಂದು ಸಣ್ಣ ಅಭಿಪ್ರಾಯ ಬರೆದು ಕಳುಹಿಸಿದೆ. ಅದು ಪತ್ರಿಕೆಯಲ್ಲಿ ಪ್ರಕಟವಾಯಿತು. 'ಈ ಲೇಖಕರ ಮಾನಸಿಕ ಆರೋಗ್ಯ ಸರಿ ಇಲ್ಲದ್ದರಿಂದ ಲಂಕೇಶರನ್ನು ಟೀಕಿಸಿರುವರೆಂದು' ನನ್ನ ಸ್ಪಷ್ಟ ಅಭಿಪ್ರಾಯ ಅದರಲ್ಲಿತ್ತು.
    ನಾನಾಗ ಕೆಲಸ ಮಾಡುತ್ತಿದ್ದ ಗುಲಬರ್ಗಾದ ಕಾಲೇಜಿನಲ್ಲಿ ಪ್ರಸಿದ್ಧ ಲೇಖಕಿ ಗೀತಾ ನಾಗಭೂಷಣ ಪ್ರಾಂಶುಪಾಲರಾಗಿದ್ದರು. ನನ್ನ ಸಹೋದ್ಯೋಗಿಯಿಂದ ಈ ವಿಷಯ ತಿಳಿದು ಅವರು ಬಹುವಾಗಿ ನೊಂದುಕೊಂಡರು. ನನ್ನನ್ನು ಕರೆದು 'ಅಲ್ರೀ ರಾಜಕುಮಾರ ಅಂಥ  ಗೌರವಾನ್ವಿತ ಸಾಹಿತಿಗಳನ್ನು ಈ ರೀತಿ ಟೀಕಿಸಿದ್ದರಲ್ಲ ಇದು ಸರಿ ಏನ್ರಿ' ಎಂದು ಕೇಳಿದರು. ನನ್ನ ವಯೋಮಾನದವರನ್ನು ಲಂಕೇಶ್ ಇಡಿಯಾಗಿ ಆವರಿಸಿಕೊಂಡಿದ್ದ ಕಾಲವದು.
     ಲಂಕೇಶ್ ಇನ್ನಿಲ್ಲ ಎನ್ನುವುದನ್ನು ಒಪ್ಪಲು ಸಿದ್ಧವಿಲ್ಲದ ಮನಸ್ಸು ಬೇರೆ. ಅಂಥ ಪರಿಸ್ಥಿಯಲ್ಲಿ ಈ ರೀತಿಯ ಲೇಖನ ಪ್ರಕಟಗೊಂಡಿದ್ದು ಬೇಸರ ತರಿಸಿತ್ತು. ಲೇಖನ ಬರೆದ ಹಿರಿಯ ಸಾಹಿತಿಗಳ ಬಗ್ಗೆ ನನಗೆ ಯಾವತ್ತಿಗೂ ಗೌರವ ಭಾವನೆ ಇದ್ದದ್ದೆ. ಆದರೆ ಆ ದಿನ ಒರಟಾಗಿ ವರ್ತಿಸಲು ಕಾರಣವಿಷ್ಟೇ. ಲಂಕೇಶರನ್ನು ಟೀಕಿಸಿದಾಗ ಪ್ರತಿಭಟಿಸಲು ಇಂಥದ್ದೇ ಕಾರಣ ಮತ್ತು ಇಂಥ ವ್ಯಕ್ತಿಗಳು ಎಂದಿರಲಿಲ್ಲ. ವೈಚಾರಿಕ ಕ್ರಾಂತಿಗಾಗಿ ಹಂಬಲಿಸುತ್ತಿದ್ದ ಒಂದು ವರ್ಗದ ಕನ್ನಡಿಗರು ಲಂಕೇಶರ ಸಮ್ಮೋಹಿನಿಗೆ ಒಳಗಾದ ಕಾಲಘಟ್ಟವದು.
      ನಿರ್ಜೀವಗೊಂಡಿದ್ದ ಸಮಾಜಕ್ಕೆ ತಮ್ಮ ಹರಿತ ಲೇಖನಗಳಿಂದ ಜೀವಕಳೆ ನೀಡಿದ ಲಂಕೇಶರನ್ನು ನನ್ನಂತೆ ಲಕ್ಷಾಂತರ ಕನ್ನಡಿಗರು ಮಾನಸಿಕವಾಗಿ ಗುರುವಾಗಿ ಸ್ವಿಕರಿಸಿದ್ದರು. ಅದೊಂದು ರೀತಿಯ ಲಂಕೇಶ್ ಮತ್ತು ಲಂಕೇಶ್ ಪತ್ರಿಕೆ ಇಲ್ಲದ ಕರ್ನಾಟಕವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂಥ ಲಂಕೇಶ್ ಮೇನಿಯಾ. ಅಷ್ಟರಮಟ್ಟಿಗೆ ಲಂಕೇಶ್ ಕನ್ನಡ ಜಾಣ ಜಾಣೆಯರನ್ನು ಆವರಿಸಿಕೊಂಡಿದ್ದರು. ತಮ್ಮ ಟೀಕೆ ಟಿಪ್ಪಣೆ ಮತ್ತು ನೀಲು ಕವನಗಳ ಮೂಲಕ ಪ್ರತಿವಾರ ಪತ್ರಿಕೆಗಾಗಿ ಕಾಯುವಂತೆ ಮಾಡುತ್ತಿದ್ದ ಲಂಕೇಶ್ ಅಪರೋಕ್ಷವಾಗಿ ಅನೇಕ ಯುವ ಬರಹಗಾರರಿಗೆ ಪತ್ರಕರ್ತನ ದೀಕ್ಷೆ ನೀಡಿದವರು. ಬಂ, ಗುಂ, ಚಡ್ಡಿಯಂಥ ಹೊಸ ಹೊಸ ಪದಗಳನ್ನು ಪತ್ರಿಕಾ ಪ್ರಪಂಚಕ್ಕೆ ಪರಿಚಯಿಸಿದ ಲಂಕೇಶ್ ತಮ್ಮ ನೇರ ಮತ್ತು ನಿಷ್ಟೂರ ಬರಹಗಳಿಂದ ಕರ್ನಾಟಕದ ರಾಜಕೀಯದಲ್ಲಿ ಅನೇಕ ಪ್ರಗತಿಪರ ಬೆಳವಣಿಗೆಗಳಿಗೆ ಕಾರಣರಾದರು. ಪತ್ರಿಕೆಯೊಂದು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಹಣೆಬರಹವನ್ನು ನಿರ್ಧರಿಸುವ ಮಟ್ಟಕ್ಕೆ ಅವರು ಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ಲಂಕೇಶ್ ಗತಿಸಿದ ಹನ್ನೆರಡು ವರ್ಷಗಳ ನಂತರವೂ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಕುರಿತು ಪ್ರಕಟವಾಗುವ ಲೇಖನಗಳನ್ನು ಓದಿದಾಗ ಹೊಸದನ್ನು ತಿಳಿದುಕೊಂಡ ಅನುಭವ ಜೊತೆಗೆ ಲಂಕೇಶರನ್ನು ಸಂಪೂರ್ಣವಾಗಿ ತಿಳಿದುಕೊಂಡಿಲ್ಲವಲ್ಲ ಎನ್ನುವ ಕ್ಷೋಭೆ ಮನಸ್ಸನ್ನು ಆವರಿಸಿ ಒಂದು ರೀತಿಯ ಶೂನ್ಯ ಸ್ಥಿತಿಗೆ ನೂಕುತ್ತದೆ.
       ಲಂಕೇಶ್ ನಮ್ಮೊಡನೆ ಇಲ್ಲದಿರಬಹುದು. ಆದರೆ ಅವರು ಬಿಟ್ಟು ಹೋದ ಸಿಟ್ಟು, ಸೆಡವು, ಕೋಪ, ಆಕ್ರೋಶ, ಅಸಹನೆ, ಜಿಗುಟುತನ, ಹುಂಬತನ, ನಿರ್ಲಕ್ಷ ಭಾವ, ಎದೆಗಾರಿಕೆ ಈ ಎಲ್ಲ ಗುಣಗಳು ನಮ್ಮೊಡನಿವೆ. ದುರದೃಷ್ಟವಶಾತ್ ಇಂದು ಈ ಎಲ್ಲ ಗುಣಗಳು ರಾಜಕೀಯ ನಾಯಕರುಗಳ ಹಾಗೂ ಅಧಿಕಾರಸ್ಥರ ಮನೆಯ ಅಂಗಳದಲ್ಲಿ ಮಲಗಿ ನಿದ್ರಿಸುತ್ತಿರುವುದು ಲಂಕೇಶ್ ಯುಗದ ವೈಚಾರಿಕ ಪ್ರಜ್ಞೆಯ ಘೋರ ದುರಂತ.
      ಲಂಕೇಶರ ಕುರಿತ 'ಲಂಕೇಶ್ ವಿಶೇಷಾಂಕ'ದಲ್ಲಿನ ಲೇಖನಗಳನ್ನು ಓದಿದಾಗ ಈ ಮೇಲಿನದೆಲ್ಲ ನೆನಪಾಯಿತು.

(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ)

-ರಾಜಕುಮಾರ ವಿ. ಕುಲಕರ್ಣಿ, ಬಾಗಲಕೋಟೆ