Friday, December 3, 2021

ದಿಗಂಬರ (ಕಥೆ)

 


(ಅಕ್ಟೊಬರ್ ೧೪, ೨೦೨೧ ರ 'ತರಂಗ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

     ದಿಗಂಬರನ ಸಾವಿನ ಸುದ್ದಿ ಕೇಳಿದ ಆ ಸಂದರ್ಭ ನಾನು ನನ್ನ ಬೋಧನಾ ವಿಷಯಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ಕಾರ್ಯಾಗಾರದಲ್ಲಿ ಭಾಗವಹಿಸಲು ದೆಹಲಿನಲ್ಲಿದ್ದೆ. ನನ್ನ ಪ್ರೀತಿಯ ದಿಗಣ್ಣನ ಸಾವಿನ ಸುದ್ದಿ ಕೇಳಿ ನನ್ನೊಳಗೆ ಮೂಡಿದ ಅವ್ಯಕ್ತ ಸಂಕಟದಿಂದ ಆ ಇಡೀ ದಿನಪೂರ್ತಿ ನಾನು ತುಂಬ ಬೇಚೈನಾಗಿದ್ದೆ. ಈ ದಿಗಣ್ಣ ನನಗೆ ವರಸೆಯಲ್ಲಿ ದಾಯಾದಿಯಾಗಲಿ, ನೆಂಟನಾಗಲಿ ಅಥವಾ ನನ್ನೂರಿನ ವ್ಯಕ್ತಿಯಾಗಲಿ ಆಗಿರಲಿಲ್ಲ. ನನ್ನೂರಿನಿಂದ ಎರಡು ಮೈಲಿ ದೂರದಲ್ಲಿರುವ ಆ ಕಡೆ ಪಟ್ಟಣವೂ ಅಲ್ಲದ ಈ ಕಡೆ ಹಳ್ಳಿಯೂ ಅಲ್ಲದ ಊರಿನಲ್ಲಿ ವಾಸಿಸುತ್ತಿದ್ದ ನಮ್ಮ ಮನೆಯ ಪುರೋಹಿತರಾದ ವೆಂಕಣ್ಣಾಚಾರ್ಯರ ಮಗ ಅವನು. ನಾನು ದಿಗಣ್ಣನ ಮನೆ ಸೇರಲು ಅದಕ್ಕೊಂದು ಸ್ಪಷ್ಟವಾದ ಕಾರಣವಿತ್ತು. ನನಗಾಗ ಹತ್ತು ವರ್ಷಗಳಿರಬಹುದು. ಊರಿನಲ್ಲಿ ಹೇಳಿಕೊಳ್ಳುವಂಥ ಸೌಕರ್ಯಗಳೇನೂ ಇರಲಿಲ್ಲ. ಊರಿನ ಹೊರವಲಯದಲ್ಲಿದ್ದ ನಾಲ್ಕನೆ ತರಗತಿಯವರೆಗಿನ ಶಾಲೆ ಅದೊಂದು ಏಕೋಪಾಧ್ಯಾಯ ಶಾಲೆಯಾಗಿತ್ತು. ಅಪ್ಪನಿಗೆ ನಾನು ಅವನಂತೆ ಊರಿನಲ್ಲಿ ಇದ್ದು ಮನೆ ಮತ್ತು ಹೊಲದ ದೇಖರೇಖಿ ನೋಡಿಕೊಳ್ಳಬೇಕೆಂಬ ಆಸೆಯೇನೂ ಇರಲಿಲ್ಲ. ಮಗ ಕಲಿತು ವಿದ್ಯಾವಂತನಾಗಿ ನೌಕರಿ ಹಿಡಿದು ನೆಮ್ಮದಿಯಿಂದ ಬಾಳಲೆಂದು ಎಲ್ಲ ಅಪ್ಪಂದಿರಂತೆ ನನ್ನ ಅಪ್ಪ ಕೂಡ ಆಸೆ ಪಟ್ಟಿದ್ದ. ಅಪ್ಪನ ಈ ಆಸೆಗೆ ಅಮ್ಮನ ಒತ್ತಾಸೆಯೂ ಇತ್ತು. ಒಮ್ಮೆ ವೆಂಕಣ್ಣಾಚಾರ್ಯರು ನಮ್ಮ ಮನೆಗೆ ಸತ್ಯನಾರಾಯಣ ಪೂಜೆಗೆಂದು ಬಂದಿದ್ದಾಗ ಅಪ್ಪ ನೇರವಾಗಿಯೇ ಇಲ್ಲಿನ ಶಾಲೆಯಲ್ಲಿನ ಅನಾನುಕೂಲವನ್ನು ಅವರೊಂದಿಗೆ ಪ್ರಸ್ತಾಪಿಸಿ ನನ್ನನ್ನು ಅವರ ಊರಿಗೆ ಕಳುಹಿಸುವ ಏರ್ಪಾಡು ಮಾಡಿದ್ದ. ವೆಂಕಣ್ಣಾಚಾರ್ಯರ ಧನ ಕನಕದ ಲೋಭವನ್ನು ಅರಿತಿದ್ದ ಅಪ್ಪ ಕಾಳು ಕಡಿಯೊಂದಿಗೆ ಅವರ ಕೈತುಂಬವಷ್ಟು ಹಣಕೊಟ್ಟು ಕಳುಹಿಸಿದ್ದ ಅಲ್ಲದೆ ವರ್ಷ ವರ್ಷ ಅಗತ್ಯವಿದ್ದಾಗಲೆಲ್ಲ ಅವರಿಗೆ ನೆರವಾಗುತ್ತಿದ್ದ.  ಊರಿನ ಹತ್ತಿರದ ಹೊಳೆಯನ್ನು ದಾಟಿ ಎರಡು ಮೈಲಿ ದೂರ ನಡೆದರೆ ಮೊದಲು ಸಿಗುವ ಊರೇ ವೆಂಕಣ್ಣಾಚಾರ್ಯರದು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಊರಾಗಿದ್ದರಿಂದ ಅಲ್ಲಿ ಹೈಸ್ಕೂಲು, ಕಾಲೇಜು, ಬ್ಯಾಂಕ್, ಆಸ್ಪತ್ರೆ ಎಲ್ಲ ರೀತಿಯ ಸೌಕರ್ಯಗಳಿದ್ದವು.

ನದಿಯ ಒಡಲಲ್ಲಿ ದ್ವೀಪದಂತೆ ಅಡಗಿ ಕುಳಿತಿದ್ದ ಸಣ್ಣ ಊರಿನಿಂದ ಬಂದ ನನಗೆ ಇಲ್ಲಿನ ವಿಶಾಲವಾದ ರಸ್ತೆಗಳು, ಎತ್ತರದ ಮನೆಗಳು, ಊರ ನಡುವಿನ ಮಾರುಕಟ್ಟೆ, ಶಿಕ್ಷಕರು-ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಯಿಂದ ಹೊಸ ಲೋಕವನ್ನು ಕಂಡಂತಾಯಿತು. ಈ ಎಲ್ಲ ಆಕರ್ಷಣೆಗಳ ಜೊತೆಗೆ ಆ ಊರನ್ನು ನಾನು ಇಷ್ಟಪಡಲು ಬೇರೊಂದು ಪ್ರಬಲವಾದ ಕಾರಣ ಅದು ದಿಗಂಬರನ ಒಡನಾಟ. ವೆಂಕಣ್ಣಾಚಾರ್ಯರ ಮಗ ದಿಗಂಬರ ಹತ್ತಿರದ ಹಳ್ಳಿಯ ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದ. ಆರಂಭದಲ್ಲಿ ದಿಗಂಬರನೊಡನೆ ಮಾತನಾಡಲು ನನಗೆ ಒಂದಿಷ್ಟು ಅಳುಕಿತ್ತಾದರೂ ಕ್ರಮೇಣ ಅವನ ಸ್ವಭಾವದ ಪರಿಚಯವಾಗಿ ಮುಂದೆ ಅವನನ್ನು ದಿಗಣ್ಣ ಎಂದು ಕರೆಯುವಷ್ಟು ನನಗೆ ಅವನಲ್ಲಿ ಸಲುಗೆ ಬೆಳೆಯಿತು. ನನ್ನ ಪಿಯುಸಿ ವಿದ್ಯಾಭ್ಯಾಸದವರೆಗೆ ಅಂದರೆ ಸರಿಸುಮಾರು ಒಂಬತ್ತು ವರ್ಷಗಳ ಕಾಲ ನಾನು ವೆಂಕಣ್ಣಾಚಾರ್ಯರ ಕುಟುಂಬದವರಲ್ಲೊಬ್ಬನಾಗಿ ಅವರ ಮನೆಯಲ್ಲೇ ನೆಲೆನಿಂತೆ.

ನಾನು ಅವರ ಮನೆಯಲ್ಲಿರುವಷ್ಟು ದಿನಗಳು ವೆಂಕಣ್ಣಾಚಾರ್ಯರು ಮತ್ತು ಅವರ ಪತ್ನಿ ಕಮಲಮ್ಮ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು. ವೆಂಕಣ್ಣಾಚಾರ್ಯರಿಗೆ ಪೌರೋಹಿತ್ಯದ ಜೊತೆಗೆ ಪಿತ್ರಾರ್ಜಿತವಾಗಿ ಬಂದ ಹೊಲ ತೋಟಗಳಿದ್ದು ಆರ್ಥಿಕವಾಗಿ ಸ್ಥಿತಿವಂತರಾಗಿದ್ದು ಒಂದಿಷ್ಟು ಧನ ಕನಕದ ಪ್ರಲೋಭನೆ ಇತ್ತು ಎನ್ನುವುದು ಬಿಟ್ಟರೆ ಗುಣಸ್ವಭಾವದಲ್ಲಿ ಅವರು ಒಳ್ಳೆಯವರೆ ಆಗಿದ್ದರು. ನನಗೂ ಮತ್ತು ದಿಗಣ್ಣನಿಗೂ ವಯಸ್ಸಿನಲ್ಲಿ ಸರಿಸುಮಾರು ಹದಿನೈದು ವರ್ಷಗಳ ಅಂತರವಿತ್ತು. ಹಾಗೆಂದು ದಿಗಣ್ಣ ಎಂದೂ ನನ್ನ ಮೇಲೆ ಹಿರಿತನದ ದರ್ಪ ತೋರಿಸುತ್ತಿರಲಿಲ್ಲ. ನನ್ನನ್ನು ತನ್ನ ಸ್ವಂತ ತಮ್ಮನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಬಿಡುವಿದ್ದಾಗಲೆಲ್ಲ ನನ್ನನ್ನು ತನ್ನ ಸೈಕಲ್ ಮೇಲೆ ಕೂರಿಸಿಕೊಂಡು ಊರು ಸುತ್ತಾಡಿಸುತ್ತಿದ್ದ ಅವನು ನನಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಹೇಳುತ್ತಿದ್ದ. ಒಮ್ಮೆಯಂತೂ ಊರ ಹತ್ತಿರದ ಗುಡ್ಡ ಹತ್ತಿ ಸೂರ್ಯಾಸ್ತ ನೋಡುತ್ತ ಕುಳಿತಿದ್ದಾಗ ದಿಗಣ್ಣ ಥಟ್ಟನೇ ಕೇಳಿದ ಪ್ರಶ್ನೆ ಮತ್ತು ಆ ಪ್ರಶ್ನೆಗೆ ಅವನೇ ಉತ್ತರಿಸಿದ ರೀತಿ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ‘ಅನಂತು ದಿಗಂಬರ ಅಂದರೆ ಏನು ಅಂತ ಗೊತ್ತೇನೋ ನಿನಗೆ’ ದಿಗಣ್ಣ ಕೇಳಿದಾಗ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟು ಅವನನ್ನೆ ನೋಡಿದ್ದೆ. ‘ನೋಡು ಅನಂತು ದಿಗಂಬರ ಅಂದರೆ ಬತ್ತಲೆ ಅಂತ ಅರ್ಥ. ಅಪ್ಪನಿಗೆ ಇದೊಂದು ದೇವರ ಹೆಸರು. ಆದರೆ ನನಗೆ ಮಾತ್ರ ಆ ಬತ್ತಲೆ ಅನ್ನೊ ಅರ್ಥದಲ್ಲೇ ನಂಬಿಕೆ. ನಾನು ಹೆಸರಿನಲ್ಲಿ ಮಾತ್ರ ದಿಗಂಬರನಾಗಿರೊದಕ್ಕೆ ಇಷ್ಟಪಡಲ್ಲ. ನನ್ನ ಮನಸ್ಸು, ವ್ಯಕ್ತಿತ್ವ ಕೂಡ ಬತ್ತಲಾಗಬೇಕು. ಮನುಷ್ಯರು ದೇಹಕ್ಕೆ ಬಟ್ಟೆ ಹಾಕಿದಂತೆ ಮನಸ್ಸಿಗೂ ಬಟ್ಟೆ ತೊಡಿಸಿರುತ್ತಾರೆ. ಅಂತರಂಗದ ಬದುಕು ಒಂದಾದರೆ ಬಹಿರಂಗದ ಬದುಕೇ ಬೇರೆ. ಹೀಗೆ ಬೇರೆ ಬೇರೆಯಾಗಿ ಬದುಕಿದರೆ ಅಂಥ ಬದುಕಿಗೆ ಏನರ್ಥ. ಅಂತರಂಗ ಮತ್ತು ಬಹಿರಂಗ ಎರಡೂ ಏಕತ್ರವಾಗಬೇಕು. ಮನಸ್ಸಿಗೆ ತೊಡಸಿದ ಬಟ್ಟೆ ಕಿತ್ತೆಸೆದು ಬತ್ತಲೆಯಾದಾಗಲೇ ಮನುಷ್ಯನ ನಿಜ ಸ್ವರೂಪ ಗೋಚರವಾಗೊದು. ನಾವು ಅಂತರಂಗದಲ್ಲಿ ಬತ್ತಲೆಯಾಗ್ತಾ ಹೋಗಬೇಕು ಅನಂತು’ ದಿಗಣ್ಣ ಆ ದಿನ ಹೇಳಿದ ಈ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪ್ರೌಢತೆ ಅಂದು ನನಗಿರಲಿಲ್ಲ ನಿಜ ಆದರೆ ಒಂದಂತೂ ಆ ದಿನ ಅರ್ಥವಾಗಿತ್ತು ಅವನ ಸ್ವಭಾವದಲ್ಲಿ ಅದೇನೋ ವಿಶೇಷವಾದದ್ದಿದೆಯೆಂದು.

ದಿಗಣ್ಣನ ಓರಿಗೆಯವರಿಗೆಲ್ಲ ಮದುವೆಯಾಗಿ ಮಕ್ಕಳಾದರೂ ಮಗ ಇನ್ನೂ ಮದುವೆಯಾಗದೆ ಉಳಿದದ್ದು ಕಮಲಮ್ಮನವರಿಗೆ ಚಿಂತೆಯ ವಿಷಯವಾಗಿತ್ತು. ವೆಂಕಣ್ಣಾಚಾರ್ಯರೂ ಅವರಿವರ ಕೈಲಿ ಹೇಳಿಸಿ ನೋಡಿದರೂ ದಿಗಣ್ಣನ ನಿರ್ಲಿಪ್ತತೆ ಅವರು ದಿಗಿಲುಗೊಳ್ಳಲು ಕಾರಣವಾಗಿ ಒಂದುದಿನ ರಾತ್ರಿ ಊಟಕ್ಕೆ ಕುಳಿತಾಗ ಮದುವೆಯ ವಿಷಯವನ್ನು ನೇರವಾಗಿ ಮಗನೆದುರೇ ಪ್ರಸ್ತಾಪಿಸಿದರು. ‘ನನಗೂ ವಯಸ್ಸಾಗಿದೆ ನಿನ್ನ ತಲೆಯ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ಸಾಯ್ತೀನಿ’ ಎಂದು ಕಮಲಮ್ಮನವರು ಕಣ್ಣೀರು ಹಾಕಿದರು. ತಾಯಿಯ ಸಂಕಟ ನೋಡಲಾಗದಕ್ಕೊ ಏನೋ ದಿಗಣ್ಣ ಮದುವೆಗೆ ಒಪ್ಪಿಗೆ ನೀಡಿದ. ವೆಂಕಣ್ಣಾಚಾರ್ಯರ ಮನೆತನ, ಅವರಿಗಿರುವ ಆಸ್ತಿ, ದಿಗಣ್ಣನ ನೌಕರಿಯಿಂದ ಆ ಮನೆಗೆ ಹೆಣ್ಣು ಕೊಡಲು ಅನೇಕ ಕನ್ಯಾಪಿತೃಗಳು ತುದಿಗಾಲಲ್ಲಿ ನಿಂತಿದ್ದರು. ಆ ದಿನ ಹೆಣ್ಣು ನೋಡುವ ಶಾಸ್ತ್ರಕ್ಕೆ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯ ನಂತರ ಮದುವೆ ದಿನ, ಮುಹೂರ್ತ ನಿಶ್ಚಯಿಸುವ ವೇಳೆ ತನಗೆ ಮುಖ್ಯವಾದ ವಿಷಯವೊಂದನ್ನು ಹೆಣ್ಣಿನ ಮನೆಯವರೊಂದಿಗೆ ಚರ್ಚಿಸಬೇಕಿದೆಯೆಂದು ದಿಗಣ್ಣ ತಗಾದೆ ತೆಗೆದ. ವರದಕ್ಷಿಣೆಯೋ ಅಥವಾ ಇನ್ನಾವುದೋ ಬಾಬತ್ತಿಗೆ ಸಂಬಂಧಿಸಿದ ವಿಷಯವಾಗಿರಬೇಕೆಂದೆ ಎಲ್ಲರೂ ತಿಳಿದುಕೊಂಡಿದ್ದರು. ದಿಗಣ್ಣ ಹೇಳಿದ ವಿಷಯ ಕೇಳಿ ವೆಂಕಣ್ಣಾಚಾರ್ಯರು ಮತ್ತು ಕಮಲಮ್ಮನವರು ಅಕ್ಷರಶ: ಭೂಮಿಗಿಳಿದು ಹೋದರು. ಮಧ್ಯಸ್ಥಿಕೆ ವಹಿಸಿದ್ದ ಪುರೋಹಿತರ ಮುಖ ವಿಷಯ ತಿಳಿದು ಕಪ್ಪಿಟ್ಟಿತು. ಹೆಣ್ಣಿನ ತಂದೆ ಮಗಳನ್ನು ಒಳಗೆ ಹೋಗಲು ಹೇಳಿ ನಮ್ಮನ್ನು ನೋಡಿ ಬಾಗಿಲತ್ತ ಕೈ ತೋರಿಸಿದರು. ಕಮಲಮ್ಮನವರು ಸೀರೆಯ ಸೆರಗಿನಿಂದ ಕಣ್ಣೊರಿಸಿಕೊಳ್ಳುತ್ತ ಮುಸುಮುಸು ಅಳುತ್ತಲೇ ಮನೆಯಿಂದ ಹೊರಗೋಡಿ ಬಂದರು. ಹಾಗೆ ಅಂದು ಅಳುತ್ತ ಓಡಿ ಬಂದ ಕಮಲಮ್ಮನವರು ಮುಂದೆ ಹಾಸಿಗೆ ಹಿಡಿದು ಚೇತರಿಸಿಕೊಳ್ಳಲೇ ಇಲ್ಲ. ವೆಂಕಣ್ಣಾಚಾರ್ಯರು ಮಗನೊಡನೆ ಮಾತನಾಡುವುದನ್ನೇ ನಿಲ್ಲಿಸಿದರು. ಈ ಮೊದಲು ತಮ್ಮನ್ನು ಗೌರವದಿಂದ ಕಾಣುತ್ತಿದ್ದ ಊರಿನವರು ಈಗ ನೋಡಿ ನಗುತ್ತಿರುವಂತೆ ಭಾಸವಾಗಿ ದಿನದ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯತೊಡಗಿದರು. ದಿಗಣ್ಣ ಮಾತ್ರ ಏನೂ ನಡದೇ ಇಲ್ಲ ಎನ್ನುವಂತೆ ತನ್ನ ಎಂದಿನ ನಿರ್ಲಿಪ್ತತೆಯಿಂದಲೇ ಇದ್ದ.

‘ದಿಗಣ್ಣ ಯಾಕೆ ಸುಳ್ಳು ಹೇಳಿದೆ. ನಿನ್ನ ಮಾತಿನಿಂದ ಅಮ್ಮನಿಗೆ ಎಷ್ಟೊಂದು ನೋವಾಗಿದೆ ಗೊತ್ತಾ ನಿನಗೆ’ ಆ ದಿನ ಸಾಯಂಕಾಲ ತಿರುಗಾಟಕ್ಕೆಂದು ಗುಡ್ಡಕ್ಕೆ ಹೋಗಿದ್ದಾಗ ನಾನು ಕೇಳಿದ ಪ್ರಶ್ನೆಯಿಂದ ದಿಗಣ್ಣ ಸ್ವಲ್ಪವೂ ವಿಚಲಿತನಾಗಿರಲಿಲ್ಲ. ‘ಅನಂತು ನಿನಗಿದೆಲ್ಲ ಅರ್ಥವಾಗೊಲ್ಲ ನೀನಿನ್ನೂ ಚಿಕ್ಕವನು’ ದಿಗಣ್ಣ ಸಮಜಾಯಿಷಿ ನೀಡಿದರೂ ನಾನು ಹಟ ಹಿಡಿದೆ. ಆವತ್ತು ದಿಗಣ್ಣನ ಮೇಲೆ ಎಂದೂ ಇಲ್ಲದ ಸಿಟ್ಟು ಬರಲು ಕಮಲಮ್ಮನವರು ಅನುಭವಿಸುತ್ತಿದ್ದ ನೋವು ಸಂಕಟವೇ ಕಾರಣವಾಗಿತ್ತು. ‘ಅನಂತು ನನಗೆ ಸುಳ್ಳು ಹೇಳೊದಕ್ಕೆ ಬರಲ್ಲ. ನಾನು ಕಮಲಮ್ಮನವರ ಮಗ ನಿಜ ಅದನ್ನು ಒಪ್ಪಿಕೊಳ್ತೀನಿ. ಆದರೆ ವೆಂಕಣ್ಣಾಚಾರ್ಯರನ್ನು ನನ್ನ ತಂದೆ ಅಂತ ಒಪ್ಪಿಕೊಳ್ಳೊಕೆ ನನ್ನ ಆತ್ಮಸಾಕ್ಷಿ ಒಪ್ತಿಲ್ಲ. ನಾನು ಹಿಮಾಲಯದ ಮೌನಿಬಾಬಾನ ಮಗ. ವೆಂಕಣ್ಣಾಚಾರ್ಯರಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆಸ್ತಿ, ಮನೆತನ ಇದೆಲ್ಲದರ ಮೇಲೆ ತುಂಬಾ ಲೋಭ ಅವರಿಗೆ. ತಮ್ಮ ಆಸ್ತಿ ದಾಯಾದಿಗಳ ಪಾಲಾಗಬಾರದೆಂದು ಅಮ್ಮನಿಗೆ ಮೋಸ ಮಾಡಿ ಮೌನಿಬಾಬಾನಿಂದ ನನ್ನ ಹುಟ್ಟಿಗೆ ಕಾರಣರಾದರು. ವಿಷಯ ಗೊತ್ತಾಗಿ ಅಮ್ಮ ಸಾಯೊದಕ್ಕೆ ಹೋಗಿದ್ದಳಂತೆ. ವೆಂಕಣ್ಣಾಚಾರ್ಯರು ತಾವೂ ಸಾಯೋ ನಾಟಕ ಮಾಡಿದ್ದರಿಂದ ಜೀವಹತ್ಯೆಯ ಭಯದಿಂದ ಅಮ್ಮ ನಿರ್ಧಾರದಿಂದ ಹಿಂದೆ ಸರಿಬೇಕಾಯ್ತು.  ಒಂದೆರಡು ಸಲ ಮೌನಿಬಾಬಾ ಮನೆಗೆ ಬಂದಿದ್ದರು. ಅವರನ್ನು ನೋಡಿದಾಗಲೆಲ್ಲ ನನ್ನನ್ನೆ ನಾನು ನೋಡಿಕೊಂಡಂತಾಗುತ್ತಿತ್ತು. ಒಂದು ದಿನ ಬಾಬಾ ನಡೆದ ಸಂಗತಿಯನ್ನು ನನಗೆ ಹೇಳಿ ಹಿಮಾಲಯಕ್ಕೆ ಹೋಗಿಬಿಟ್ಟರು. ಅದೇ ಅವರ ಕೊನೆಯ ಭೇಟಿಯಾಯ್ತು. ಮತ್ತೆಂದೂ ಅವರು ವಾಪಸ್ಸು ಬರಲಿಲ್ಲ. ಅದಕ್ಕೆ ಆ ದಿನ ಹುಡುಗಿ ಅಪ್ಪನಿಗೆ ನಾನು ಕಮಲ್ಲಮ್ಮನವರ ಮಗ ಆದರೆ ನೀವು ತಿಳಿದುಕೊಂಡಂತೆ ವೆಂಕಣ್ಣಾಚಾರ್ಯರ ಮಗನಲ್ಲ ಅಂತ ನಿಜ ಹೇಳ್ದೆ’ ದಿಗಣ್ಣ ದೂರದಲ್ಲಿ ಮುಳುಗುತ್ತಿದ್ದ ಸೂರ್ಯನನ್ನು ನೋಡುತ್ತಿದ್ದ. ಸುತ್ತಲೂ ಗಾಢವಾದ ಕತ್ತಲು ತುಂಬಿಕೊಳ್ಳುತ್ತಿತ್ತು.

ದಿಗಣ್ಣ ವೆಂಕಣ್ಣಾಚಾರ್ಯರ ಮಗನಲ್ಲ ಎನ್ನುವ ಸುದ್ದಿ ಕೆಲವು ದಿನಗಳ ಕಾಲ ಊರಿನಲ್ಲಿ ಅದೊಂದು ಚರ್ಚೆಗೆ ಗ್ರಾಸವಾಯಿತಾದರೂ ಕ್ರಮೇಣ ಊರಿನವರ ನೆನಪುಗಳಲ್ಲಿ ಈ ವಿಷಯ ಮಸುಕಾಗತೊಡಗಿ ಒಂದು ದಿನ ಇಡೀ ಊರು ಅದನ್ನು ಮರೆತೇ ಬಿಟ್ಟಿತು. ದಿನಗಳು ಕಳೆದಂತೆ ವೆಂಕಣ್ಣಾಚಾರ್ಯರಿಗೂ ಮಗನ ಮೇಲಿನ ಸಿಟ್ಟು ಶಮನವಾಗತೊಡಗಿತು. ಕಮಲಮ್ಮನವರು ಒಂದಿಷ್ಟು ಚೇತರಿಸಿಕೊಂಡರಾದರೂ ಅವರು ತಮ್ಮ ದಿನನಿತ್ಯದ ಬಹುಪಾಲು ವೇಳೆಯನ್ನು ಹಾಸಿಗೆಯಲ್ಲಿ ಮಲಗಿಕೊಂಡೆ ಕಳೆಯಲಾರಂಭಿಸಿದರು. ನಿತ್ಯದ ಮನೆಯ ಕೆಲಸ ಕಾರ್ಯಗಳಲ್ಲಿನ ಕಮಲಮ್ಮನವರ ಅನುಪಸ್ಥಿತಿ ಹೆಚ್ಚಿದಂತೆಲ್ಲ ಆ ಮನೆಗೆ ಹೆಣ್ಣೊಬ್ಬಳ ಅವಶ್ಯಕತೆ ಅನಿವಾರ್ಯ ಅನಿಸತೊಡಗಿತು. ವೆಂಕಣ್ಣಾಚಾರ್ಯರು ಅಡುಗೆ ಮನೆಯಲ್ಲಿ ಕೈಸುಟ್ಟುಕೊಳ್ಳುವುದನ್ನು ನೋಡಲಾಗದೆಯೋ ಇಲ್ಲ ಕಮಲಮ್ಮನವರ ವೇದನೆ ತುಂಬಿದ ಮುಖ ನೋಡಿಯೋ ದಿಗಣ್ಣ ಮದುವೆಗೆ ತಾನಾಗಿಯೇ ಒಪ್ಪಿಗೆ ಸೂಚಿಸಿದ. ಈ ಹಿಂದಿನ ಕಹಿ ಅನುಭವ ಮನಸ್ಸಿನಿಂದ ಇನ್ನು ಮಾಸಿಲ್ಲದ ಕಾರಣ ಮೊದಮೊದಲು ವೆಂಕಣ್ಣಾಚಾರ್ಯರು ವಧು ಪರೀಕ್ಷೆಗೆ ಬರಲು ಹಿಂದೇಟು ಹಾಕಿದರು. ಕೊನೆಗೆ ಯಾವ ಅನುಚಿತ ವರ್ತನೆಯೂ ನಡೆಯಲಾರದೆಂದು ದಿಗಣ್ಣ ಭರವಸೆ ಕೊಟ್ಟ ಮೇಲೆಯೇ ವೆಂಕಣ್ಣಾಚಾರ್ಯರು ಹೆಣ್ಣಿನವರ ಮನೆಗೆ ವಧುಪರೀಕ್ಷೆಗೆ ಬರಲು ಒಪ್ಪಿದ್ದು. ಎಲ್ಲರಿಗೂ ಮನಸ್ಸಿಗೆ ಬಂದು ನಾಗವೇಣಿ ಸೊಸೆಯಾಗಿ ಮನೆ ತುಂಬಿದಳು. ವೆಂಕಣ್ಣಾಚಾರ್ಯರ ದುರಾದೃಷ್ಟವೋ, ಕಮಲಮ್ಮನವರ ದೌರ್ಭಾಗ್ಯವೋ ಇಲ್ಲ ದಿಗಣ್ಣನ ಹಣೆಬರಹವೋ ಈ ಮದುವೆ ಮೂರೆ ತಿಂಗಳಲ್ಲಿ ಮುರಿದು ಬಿದ್ದು ನಾಗವೇಣಿ ತವರುಮನೆ ಸೇರಿದಳು. ಹಾಗೆ ತವರುಮನೆ ಸೇರಿದ ನಾಗವೇಣಿ ತಾನೆಲ್ಲಿ ಕಳಂಕವನ್ನು ಹೊರಬೇಕಾದಿತೋ ಎಂದು ಹೆದರಿ ಎಲ್ಲದಕ್ಕೂ ದಿಗಣ್ಣನ ಮೇಲೆ ಗೂಬೆ ಕೂರಿಸಿ ಹೊರನಡೆದಿದ್ದಳು. ಅವಳು ಹೇಳಿದ್ದರಲ್ಲಿ ಸತ್ಯಾಂಶವೂ ಇತ್ತು. ನಾಗವೇಣಿ ಮಾಡಿದ್ದ ಆಪಾದನೆಗಳನ್ನೆಲ್ಲ ಸ್ವತ: ದಿಗಣ್ಣ ಕೂಡ ಯಾವ ತಕರಾರುಗಳಿಲ್ಲದೆ ಒಪ್ಪಿಕೊಂಡಿದ್ದ.

ನಡೆದದ್ದಿಷ್ಟು- ರಾತ್ರಿ ಎಂದಿನಂತೆ ಕೋಣೆಯಲ್ಲಿ ಗಂಡ ಹೆಂಡತಿ ಮಲಗಿರುವಾಗ ದಿಗಣ್ಣ ನಾಗವೇಣಿಯ ಬೆನ್ನಿನ ಮೇಲೆ ಕೈಯಾಡಿಸುತ್ತ ‘ನಾಗು ನಿನ್ನನ್ನು ಕೂಡುವಾಗಲೆಲ್ಲ ಬೇರೆ ಬೇರೆ ಹೆಂಗಸರ ಮುಖಗಳು ನನ್ನ ಕಣ್ಣೆದುರು ಬಂದು ನಾನು ಅವರನ್ನೇ ಕೂಡುತ್ತಿದ್ದಿನೇನೋ ಎನ್ನುವ ಉತ್ಕಟ ಭಾವ ಮನಸ್ಸಿನಲ್ಲಿ ಮೂಡುತ್ತೆ. ನಿನಗೂ ನನ್ನಂತೆ ಅನಿಸುತ್ತೆ ಅಲ್ವಾ’ ಎಂದು ಕೇಳಿದನಂತೆ. ಹಾಸಿಗೆಯಿಂದ ಧಗ್ಗನೇ ಎದ್ದ ನಾಗವೇಣಿ ಕೋಣೆಯಿಂದ ಹೊರಬಂದು ಅತ್ತೆ ಮಾವನಿಗೆ ವಿಷಯ ತಿಳಿಸಿ ಜೋರು ಧ್ವನಿ ತೆಗೆದು ಅಳಲಾರಂಭಿಸಿದಳು. ವೆಂಕಣ್ಣಚಾರ್ಯರು ಮತ್ತು ಕಮಲಮ್ಮ ಎಷ್ಟು ಸಮಾಧಾನ ಮಾಡಿದರೂ ಬೆಳಗಾಗುತ್ತಲೆ ಉಟ್ಟ ಬಟ್ಟೆಯ ಮೇಲೆ ತವರುಮನೆಗೆ ಹೊರಟು ನಿಂತವಳು ಹಾಗೆ ಹೋಗುವಾಗ ಬೀದಿಯಲ್ಲಿ ಎದುರಾದವರಿಗೆಲ್ಲ ನಡೆದ ಘಟನೆಯನ್ನು ವಿವರಿಸುತ್ತ ದಿಗಣ್ಣನನ್ನು ಊರಿನವರ ದೃಷ್ಟಿಯಲ್ಲಿ ಅವನೊಬ್ಬ ವಿಚಿತ್ರ ಪ್ರಾಣಿ ಎನ್ನುವಂತೆ ಚಿತ್ರಿಸಿ ಹೋದಳು. ಆದ ಈ ಆಘಾತದಿಂದ ಚೇತರಿಸಿಕೊಳ್ಳದೆ ವೆಂಕಣ್ಣಾಚಾರ್ಯರು ಮತ್ತು ಕಮಲಮ್ಮ ಹಾಸಿಗೆ ಹಿಡಿದು ಒಬ್ಬರಾದ ನಂತರ ಒಬ್ಬರು ಇಹಲೋಕ ತ್ಯಜಿಸಿ ದಿಗಣ್ಣನನ್ನು ಒಂಟಿಯಾಗಿಸಿದರು. ಅವರಿಬ್ಬರ ಸಾವಿನ ನಂತರ ದಿಗಣ್ಣ ಇದ್ದ ನೌಕರಿಯನ್ನು ಬಿಟ್ಟು ಮೌನಿಬಾಬಾರನ್ನು ಹುಡುಕುತ್ತ ಹಿಮಾಲಯಕ್ಕೆ ಹೊರಟು ಹೋದ. ಅಪ್ಪ ನನ್ನನ್ನು ಬೇರೆ ಊರಿನ ಕಾಲೇಜಿಗೆ ಸೇರಿಸಿ ಹಾಸ್ಟೆಲಿನಲ್ಲಿ ಇರುವ ವ್ಯವಸ್ಥೆ ಮಾಡಿದರು.

ಇದೆಲ್ಲ ಆಗಿ ಇಪ್ಪತ್ತು ವರ್ಷಗಳ ನಂತರ ಒಂದು ದಿನ ಆಕಸ್ಮಿಕವಾಗಿ ದಿಗಣ್ಣ ನನಗೆ ಮುಂಬಯಿಯ ದಾದರಿನ ರೈಲ್ವೆ ಸ್ಟೇಷನ್ನಿನಲ್ಲಿ ಭೇಟಿಯಾದ. ನಾನು ಸಂಸಾರೊಂದಿಗನಾಗಿ ಹೆಂಡತಿ ಮಕ್ಕಳೊಡನೆ ಮುಂಬಯಿಯಲ್ಲಿ ವಾಸಿಸುತ್ತ ಈ ಮುಂಬಯಿಯವನೇ ಆಗಿದ್ದೆ. ನೌಕರಿ ಮತ್ತು ಸಂಸಾರದ ತಾಪತ್ರಯಗಳ ನಡುವೆಯೂ ನಾನು ದಿಗಣ್ಣನನ್ನು ಮರೆತಿರಲಿಲ್ಲ. ನಮ್ಮ ಮಾತುಗಳ ನಡುವೆ ಅವನು ಆಗಾಗ ಸುಳಿದು ಹೋಗುತ್ತಿದ್ದ. ಇದುವರೆಗೂ ಕೇವಲ ಮಾತಿನಲ್ಲಿ ಬಂದುಹೋಗುತ್ತಿದ್ದ ದಿಗಣ್ಣನನ್ನು ಮನೆಗೆ ಕರೆದೊಯ್ದು ಹೆಂಡತಿ ಮಕ್ಕಳಿಗೆ ‘ನೋಡಿ ನನ್ನ ಪ್ರೀತಿಯ ದಿಗಣ್ಣನನ್ನು’ ಎಂದು ತೋರಿಸುವ ಉಮೇದಿ ಮೂಡಿದ್ದೆ ‘ದಿಗಣ್ಣಾ’ ಎಂದು ಜೋರಾಗಿ ಕೂಗಿದೆ. ಈಗ ಬಿಟ್ಟರೆ ಮುಂದೆಂದೂ ಅವನು ನನಗೆ ಸಿಗುವುದಿಲ್ಲವೇನೋ ಎನ್ನುವಂತಿತ್ತು ನನ್ನ ಜೋರಾದ ಕೂಗು. ಎದುರು ನಿಂತವನನ್ನೊಮ್ಮೆ ದಿಟ್ಟಿಸಿದೆ ಇಪ್ಪತ್ತು ವರ್ಷಗಳ ಹಿಂದೆ ನೋಡಿದ್ದ ಅದೇ ನಿಲುವು, ಅದೇ ಮುಖದ ಭಾವ. ಕೂದಲು ನೆರೆತು ಒಂದಿಷ್ಟು ವಯಸ್ಸಾದವನಂತೆ ಕಂಡದ್ದು ಹೊರತುಪಡಿಸಿದರೆ ಯಾವ ಬದಲಾವಣೆಯೂ ಕಾಣಿಸಲಿಲ್ಲ. ‘ದಿಗಣ್ಣ ನಾನು ನಿನ್ನ ಅನಂತು’ ಅವನನ್ನು ನೋಡಿದ ಸಂತೋಷದಲ್ಲಿ ನಾನು ದಿಗಣ್ಣನ ‘ಅನಂತು’ ಆಗಿದ್ದೆ. ನನ್ನನ್ನು ನೋಡಿ ದಿಗಣ್ಣನ ಮುಖ ಖುಷಿಯಿಂದ ಅರಳಿತು. ಬರೀ ಮಾತಿನಲ್ಲಿ ಬರುತ್ತಿದ್ದವನು ಈಗ ಮನೆಗೇ ಬಂದಾಗ ಹೆಂಡತಿ ಮಕ್ಕಳಿಗೂ ಖುಷಿಯಾಯಿತು. ಅವನು ನಮ್ಮಲ್ಲಿರುವಷ್ಟು ದಿನಗಳು ಎಲ್ಲರೂ ಪ್ರೀತಿಯಿಂದಲೇ ನೋಡಿಕೊಂಡೆವು. ಗೇಟ್ ವೇ ಆಫ್ ಇಂಡಿಯಾ, ಹಾಜಿ ಅಲಿ ದರ್ಗಾ, ಸಿದ್ದಿವಿನಾಯಕ ಗುಡಿ, ಸಮುದ್ರದ ಕಿನಾರೆ ಎಲ್ಲ ಸುತ್ತಾಡಿ ಚೌಪಾಟಿಯಲ್ಲಿ ವಡಾಪಾವ್ ತಿಂದು ರೀಗಲ್‍ನಲ್ಲಿ ಅವನ ಮೆಚ್ಚಿನ ಕಮಲ್ ಹಾಸನನ ‘ಇಂಡಿಯನ್’ ಸಿನಿಮಾ ನೋಡಿ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ದಿಗಣ್ಣ ಕೇಳಿದ ‘ಅನಂತು ಮುಂಬಯಿಯಲ್ಲಿ ಸೂಳೆಯರ ಕೇರಿ ಇದೆಯಂತಲ್ಲ. ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗ್ತಿಯೇನೋ. ಊರಿಂದ ಬಂದಿರೊದಕ್ಕೆ ಅದೇ ಕಾರಣ’ ಅವನ ಧ್ವನಿಯಲ್ಲಿನ ದೈನ್ಯತೆಗೆ ಕರಗಿಹೋದೆ. ‘ಯಾಕೆ ದಿಗಣ್ಣ ಚುಕ್ಕಿನ ಹುಡುಕಬೇಕಾ?’ ಅವನ ಸ್ವಭಾವ ಎಂಥದ್ದೆಂದು ಗೊತ್ತಿತ್ತು. ‘ಸಾಯೋ ಮೊದಲು ಅವಳನ್ನೊಮ್ಮೆ ನೋಡಬೇಕು. ಅದೊಂದು ಆಸೆ ಉಳಿದುಬಿಟ್ಟಿದೆ ಕಣೋ’ ದಿಗಣ್ಣನ ಧ್ವನಿಯಲ್ಲಿ ಬೇಡಿಕೆಯಿತ್ತು. ಚುಕ್ಕಿ ದಿಗಣ್ಣನ ಊರಿಗೆ ಕೆಲಸಕ್ಕೆಂದು ವಲಸೆ ಬಂದ ಕುಟುಂಬದ ಮಗಳು. ನೋಡಲು ತುಂಬ ಸುಂದರಳಾಕೆ. ದಿಗಣ್ಣನ ಬದುಕಿನಲ್ಲಿ ಹಿತವಾದ ತಂಗಾಳಿಯಾಗಿ ಸುಳಿದುಹೋದ ಹೆಣ್ಣವಳು. ಅವನ ಬದುಕಿನಲ್ಲಿ ಸಂತಸದ ಘಳಿಗೆ ಎನ್ನುವುದೇನಾದರೂ ಇದ್ದರೆ ಅದು ಚುಕ್ಕಿ ಅವನ ಬದುಕಿನಲ್ಲಿ ಬಂದ ಕ್ಷಣ ಮಾತ್ರ. ಹೀಗೆ ಅನಿರೀಕ್ಷಿತವಾಗಿ ದಿಗಣ್ಣನ ಬದುಕನ್ನು ಪ್ರವೇಶಿಸಿದ ಚುಕ್ಕಿ ಅಷ್ಟೆ ಅನಿರೀಕ್ಷಿತವಾಗಿ ಮರೆಯಾಗಿ ಹೋದಳು. ಅವಳು ಎಲ್ಲಿ ಹೋದಳೆನ್ನುವುದೇ ಬಿಡಿಸಲಾಗದ ಒಗಟಾಗಿತ್ತು. ಅವಳನ್ನು ಮುಂಬಯಿ ಮಹಾನಗರದ ರೆಡ್ ಲೈಟ್ ಎರಿಯಾದಲ್ಲಿ ನೋಡಿದ್ದಾಗಿ ಕೆಲವರು ಸುದ್ದಿ ಹಬ್ಬಿಸಿದರು. ಆ ಘಟನೆಯ ನಂತರ ದಿಗಣ್ಣ ಮೌನದ ಚಿಪ್ಪಿನೊಳಗೆ ಸೇರಿಕೊಂಡ. 

ಬೆಳಗ್ಗೆ ನಾನು ಎದ್ದು ಕೆಳಗಿಳಿದು ಬಂದಾಗ ಹಾಲ್‍ನಲ್ಲಿ ದಿಗಣ್ಣ ಊರಿಗೆ ಹೊರಡಲು ತಯ್ಯಾರಾಗಿ ಕುಳಿತಿದ್ದ. ಚುಕ್ಕಿ ದೂರದಲ್ಲೆಲ್ಲೊ ಸುಖವಾಗಿರುವಳೆಂದು ಭಾವಿಸಿರುವ ತನಗೆ ಅವಳು ತನ್ನ ಕಲ್ಪನೆಯಲ್ಲಿ ಹಾಗೆ ಇರಲಿ ಎಂದ. ಅವನ ಮನಸ್ಥಿತಿಯೇ ವಿಚಿತ್ರವೆನಿಸಿತು. ರೈಲು ನಿಲ್ದಾಣದವರೆಗೂ ಜೊತೆಗೆ ಹೋದೆ. ‘ದಿಗಣ್ಣ ಯಾರಾದರೂ ಹೆಂಡತಿಗೆ ಅಂಥ ಪ್ರಶ್ನೆ ಕೇಳ್ತಾರಾ?’ ಅಂದು ಅರ್ಥವಾಗದೆ ಉಳಿದಿದ್ದ ಘಟನೆ ಈಗ ಪ್ರಶ್ನೆಯಾಗಿ ಹೊರಬಂದಿತ್ತು. ಪ್ರತ್ಯೇಕವಾಗಿ ಸಾಗಿ ದೂರದಲ್ಲೆಲ್ಲೊ ಒಂದಾಗಿವೆಯೇನೋ ಎನ್ನುವ ಭ್ರಮೆ ಹುಟ್ಟಿಸುವ ರೈಲು ಹಳಿಗಳನ್ನೇ ದಿಟ್ಟಿಸುತ್ತ ದಿಗಣ್ಣ ಉತ್ತರಿಸಿದ ‘ಅದು ಅವಳ ಮೇಲಿನ ಅನುಮಾನ, ಸಂಶಯ ಎನ್ನುವ ಸಂಗತಿಯಾಗಿರಲಿಲ್ಲ ಅನಂತು. ನನಗನ್ನಿಸುವುದು ಬೇರೆಯವರಿಗೂ ಅನಿಸಬಹುದೇನೋ ಎಂದು ತಿಳಿದುಕೊಳ್ಳಬೇಕೆನ್ನುವುದು ಮಾತ್ರ ಆ ಸಂದರ್ಭದ ಮಾತಿನ ಅಗತ್ಯವಾಗಿತ್ತು’. ಒಮ್ಮೊಮ್ಮೆ ಅರ್ಥವಾಗದಷ್ಟು ದಿಗಣ್ಣ ಸಂಕೀರ್ಣನಾಗುತ್ತಿದ್ದ. ರೈಲು ಕಣ್ಮರೆಯಾಗುವವರೆಗೂ ಕಿಟಕಿಯ ಹೊರಗಿನಿಂದ ಗಾಳಿಯಲ್ಲಿ ಅಲ್ಲಾಡುತ್ತಿದ್ದ ಅವನ ಕೈಯನ್ನೆ ನೋಡುತ್ತ ನಿಂತಿದ್ದೆ.

ಈ ಸಲದ ಬೇಸಿಗೆಯಲ್ಲಿ ಸಂಬಂಧಿಕರ ಮನೆಯ ಮದುವೆಗೆಂದು ಊರಿಗೆ ಹೋದವನು ಒಂದು ದಿನ ಬಿಡುವು ಮಾಡಿಕೊಂಡು ದಿಗಣ್ಣನ ಊರಿಗೂ ಹೋಗಿದ್ದೆ. ಮುಖಕ್ಕೆ ಮಾಸ್ಕ್ ಕೈಗಳಿಗೆ ಗ್ಲೌಜ್ ತೊಟ್ಟಿದ್ದ ದಿಗಣ್ಣ ವಿಚಿತ್ರವಾಗಿ ಕಂಡ. ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು ಆ ಜಾಗದಲ್ಲಿ ಬೆಳೆದ ಹುಲ್ಲು ಒಣಗಿ ನಿಂತಿತ್ತು. ಸೊರಗಿದ್ದ ದಿಗಣ್ಣನ ದೇಹಕ್ಕೆ ಮುಪ್ಪು ಆವರಿಸಿತ್ತು. ‘ಯಾಕೆ ದಿಗಣ್ಣ ಹೀಗೆ’ ಹೊಟ್ಟೆಯಲ್ಲಿ ಹುಟ್ಟಿದ ಸಂಕಟ ಕಣ್ಣೀರಾಗಿ ಹೊರಬಂತು. ‘ಅನಂತು ಮನುಷ್ಯನನ್ನು ಮನುಷ್ಯ ಮುಟ್ಟಿಸಿಕೊಂಡರೆ ಅದೇನೋ ಮಹಾರೋಗ ಬರುತ್ತಂತೆ. ಎಲ್ಲಿ ಮನುಷ್ಯ ಸ್ಪರ್ಷದಿಂದ ನನಗೇನಾಗುತ್ತೊ ಅನ್ನುವ ಭಯಕ್ಕೆ ಇದೆಲ್ಲ ಸಿದ್ಧತೆ ನೋಡು’ ದಿಗಣ್ಣ ಮತ್ತಷ್ಟು ಒಗಟಾಗಿ ಕಂಡ. ನನ್ನಿಷ್ಟದ ಅವರೆಕಾಳು ಉಪ್ಪಿಟ್ಟು ಮಾಡಿ ಉಪಚರಿಸಿದ. ಮಾತಿನ ನಡುವೆ ‘ಇದು ಈಗ ನನ್ನ ಮನೆಯಲ್ಲ ಅನಂತು. ಈ ಮನೆ, ಆಸ್ತಿ ಎಲ್ಲ ಹನೀಫಾಗೆ ಸೇರಿದ್ದು. ದೇಹದಲ್ಲಿ ಜೀವ ಇರೊವರೆಗೂ ಇಲ್ಲಿರಲು ಅವಳೇ ಅವಕಾಶ ಕೊಟ್ಟಿದ್ದಾಳೆ’ ದಿಗಣ್ಣ ಹೇಳಿದ್ದು ಅಚ್ಚರಿ ಮೂಡಿಸಿತು. ಅವನ ಮಾತು ಅರ್ಥವಾಗದೆ ಹುಬ್ಬೆರಿಸಿದ ನನ್ನನ್ನು ನೋಡಿ ದಿಗಣ್ಣನೆ ಮಾತು ಮುಂದುವರೆಸಿದ, ‘ವೆಂಕಣ್ಣಾಚಾರ್ಯರು ಸಾಯೊದಕ್ಕೆ ಮೊದಲೇ ತಮ್ಮ ಆಸ್ತಿನೆಲ್ಲ ನನ್ನ ಹೆಸರಿಗೆ ವರ್ಗಾಯಿಸಿದ್ದರು. ಅಮ್ಮ, ಅಪ್ಪ ಸತ್ತ ಮೇಲೆ ಎರಡು ವರ್ಷ ಹಿಮಾಲಯದಲ್ಲಿ ಅಲೆದಾಡಿದೆ. ಮನಸ್ಸಿಗೆ ಸಮಾಧಾನ ಸಿಗಲಿಲ್ಲ. ಊರು ಮನೆ ನೆನಪಾಗಿ ಮರಳಿ ಬಂದವನಿಗೆ ಅಸ್ತಿತ್ವದ ಪ್ರಶ್ನೆ ಕಾಡೊದಕ್ಕೆ ಶುರುವಾಯ್ತು. ನಾನು ಈ ವಂಶಕ್ಕೆ ಸೇರಿದವನೇ ಅಲ್ಲ ಅಂದಮೇಲೆ ಆಸ್ತಿಯನ್ನು ಅನುಭವಿಸಲು ನೈತಿಕ ಪ್ರಶ್ನೆ ಮುಂದೆ ಬಂತು. ಆಸ್ತಿನ ಏನು ಮಾಡಬೇಕು ಅಂತ ಒಂದು ದಿನ ಯೋಚಿಸ್ತಾ ಕುಳಿತಿದ್ದಾಗ ಈ ಹನೀಫಾಳ ಮುಖ ಕಣ್ಣೆದುರು ಸುಳಿಯಿತು. ನಿನಗೆ ನಾರಾಯಣಕಾಕಾ ಗೊತ್ತಿರಬಹುದು ಅಂದರೆ ವೆಂಕಣ್ಣಾಚಾರ್ಯರ ತಮ್ಮ. ಅವನು ತನ್ನ ತೆವಲು ತೀರೊವರೆಗೂ ಹನೀಫಾಳ ಜೊತೆ ಮಲಗಿ ಎರಡು ಮಕ್ಕಳು ಹುಟ್ಟಿದ್ದೆ ಅವಳಿಂದ ದೂರಾದ. ಊರಿನವರು ಎಷ್ಟು ಹೇಳಿದರೂ ಒಂದು ಬಿಡಿಗಾಸು ಬಿಚ್ಚಲಿಲ್ಲ. ಪಾಪ ಹನೀಫಾ ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಅನಾಥಳಾದವಳು ನಾರಾಯಣಚಾರ್ಯರನ್ನು ನಂಬಿ ಮೋಸ ಹೋದಳು. ಎರಡು ಹೆಣ್ಣುಮಕ್ಕಳು ಬೇರೆ ಅವಳಿಗೆ. ಹೇಗಿದ್ದರೂ ಆ ಮಕ್ಕಳು ಆಚಾರ್ಯರ ವಂಶಕ್ಕೆ ಸೇರಿದವರು. ನನಗಿಂತ ಈ ಆಸ್ತಿಯ ಮೇಲೆ ಅವರಿಗೆ ಅಧಿಕಾರ ಹೆಚ್ಚು. ಅದಕ್ಕೆಂದೆ ಈ ಮನೆ, ಹೊಲ, ತೋಟ ಎಲ್ಲ ಹನೀಫಾಳ ಹೆಸರಿಗೆ ಬರೆದು ಬಿಟ್ಟಿದ್ದೀನಿ. ಅನಂತು ಕೊನೆಗೂ ಆ ದೊಡ್ಡ ಭಾರ ಇಳಿಸಿಕೊಂಡು ಈಗ ಹಗುರಾಗಿದ್ದೀನಿ ನೋಡು’. ನನ್ನ ಎದೆಯ ಗೂಡೊಳಗೆ ಕಟ್ಟಿಕೊಂಡಿದ್ದ ದಿಗಣ್ಣನ ಪುಟ್ಟ ಮೂರ್ತಿ ಈಗ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಮುಖದ ಮಾಸ್ಕ್ ಕೈಗಳ ಗ್ಲೌಜ್‍ಗಳನ್ನು ಕಳಚಿಟ್ಟವನು ಹತ್ತಿರ ಬಂದು ನನ್ನೆರಡು ಕೈಗಳನ್ನು ಭದ್ರವಾಗಿ ಹಿಡಿದುಕೊಂಡ. ‘ಭಾಳ ದಿನಗಳ ನಂತರ ರಕ್ತ, ಮಾಂಸ ಮತ್ತು ಮನುಷ್ಯತ್ವ ತುಂಬಿರುವ ಒಬ್ಬ ಮನುಷ್ಯನನ್ನು ಸ್ಪರ್ಷಿಸಿದಂತಾಯಿತು ನೋಡೋ ಅನಂತು’ ಎಂದು ದೊಡ್ಡ ಮಾತನಾಡಿದ. ಅವನ ಕೈಗಳು ಗ್ಲೌಜಿನ ಒಳಗಡೆಯ ಬಿಸಿಗೆ ಬೆವರೊಡೆದು ಹಸಿಯಾಗಿದ್ದವು. ಕಾಳು ಕಡಿಗಳ ಸಣ್ಣ ಸಣ್ಣ ಗಂಟುಗಳನ್ನೆಲ್ಲ ಒಂದು ಚೀಲಕ್ಕೆ ಸೇರಿಸಿ ‘ಮಕ್ಕಳೊಂದಿಗ ಯಾವುದಕ್ಕೂ ಇರಲಿ’ ಎಂದು ಹೆಗಲ ಮೇಲೆ ಹೊತ್ತುಕೊಂಡು ಬಸ್‍ಸ್ಟ್ಯಾಂಡ್‍ವರೆಗೂ ಬಂದ ನನ್ನ ದಿಗಣ್ಣನನ್ನು ಬದುಕಿನ ಈ ಪಯಣದಲ್ಲಿ ಮತ್ತೊಮ್ಮೆ ಭೇಟಿಯಾಗಲಾರೆನೇನೋ ಎಂದೆನಿಸಿ ಕಣ್ಣುಗಳು ಒದ್ದೆಯಾದವು. ಕೆಳಗೆ ನಿಂತು ಕೈಬೀಸುತ್ತಿದ್ದ ದಿಗಣ್ಣ ಇದೇ ಬಸ್‍ಸ್ಟ್ಯಾಂಡಿನಲ್ಲಿ ವೆಂಕಣ್ಣಾಚಾರ್ಯರ ಕೈಹಿಡಿದು ಬಸ್ಸಿನಿಂದಿಳಿದ ಆ ಪುಟ್ಟ ಪೋರ ಅನಂತುಗೆ ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕಾಣಿಸಿದ ಥೇಟ್ ಆ ದಿಗಣ್ಣನೇ ಅನಿಸಿತು. 

ಸಾಯುವಾಗ ಕೂಡ ದಿಗಣ್ಣ ಮುಖಕ್ಕೆ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಜ್‍ಗಳನ್ನು ಧರಿಸಿಯೇ ಇದ್ದನಂತೆ.

-ರಾಜಕುಮಾರ ಕುಲಕರ್ಣಿ