Monday, January 9, 2017

ಬೊಗಸೆಯಲ್ಲಿ ಕಡಲು: ಪುಸ್ತಕ ಬಿಡುಗಡೆ

       







     ನಿನ್ನೆ (೮ನೇ ಜನವರಿ ೨೦೧೭) ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ನನ್ನ 'ಬೊಗಸೆಯಲ್ಲಿ ಕಡಲು' ಬಿಡುಗಡೆಯಾಯಿತು.  ವಿಷಯವನ್ನು ಮೊದಲೆ ಸ್ಪಷ್ಟಪಡುಸುತ್ತಿದ್ದೇನೆ ನನ್ನ ಈ ಕೃತಿಗೆ ‘ಬೊಗಸೆಯಲ್ಲಿ ಕಡಲು’ ಎಂದೇಕೆ ಕರೆದೆನೆಂದು. ಈ ಕೃತಿಯಲ್ಲಿನ ಲೇಖನಗಳ ವಿಷಯ ವ್ಯಾಪ್ತಿ ಕನ್ನಡ ನಾಡು, ನುಡಿ, ಸಿನಿಮಾ, ವ್ಯಕ್ತಿ ಪರಿಚಯ, ಪುಸ್ತಕ ಪರಿಚಯ, ಶಿಕ್ಷಣ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಿಗೆ ಚಾಚಿಕೊಂಡಿದೆ. ಒಂದರ್ಥದಲ್ಲಿ ಕಡಲನ್ನು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ನನ್ನದು. ಈ ಪ್ರಯತ್ನದಲ್ಲಿ ನಾನು ಎಷ್ಟು ಯಶಸ್ವಿಯಾಗಿರಬಹುದು ಎನ್ನುವುದು ಓದುಗರ ವಿವೇಚನೆಗೆ ಬಿಟ್ಟಿದ್ದು.  ಒಂದು ನಿರ್ಧಿಷ್ಟ ವಿಷಯವನ್ನಿಟ್ಟುಕೊಂಡು ನೂರಾರು ಪುಟಗಳ ಪುಸ್ತಕ ಬರೆಯುವುದು ನನ್ನಿಂದಾಗದ ಕೆಲಸವದು. ಜೊತೆಗೆ ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ ಎನ್ನುವುದೂ ಇದಕ್ಕೆ ಕಾರಣವಾಗಿರಬಹುದು. ಹೀಗೆ ಸಾಹಿತ್ಯದ ವಿದ್ಯಾರ್ಥಿಯಲ್ಲ ಎನ್ನುವ ಈ ಘೋಷಣೆಯಿಂದ ಅಕಾಡೆಮಿಕ್ ವಲಯದ ಲೇಖಕರ ಬಣ ನನ್ನನ್ನು ಸಾರಾಸಗಟಾಗಿ ಬರಹಗಾರನೇ ಅಲ್ಲವೆಂದು ಮೂಲೆಗೆ ತಳ್ಳಬಹುದು. ಆ ಕುರಿತು ನನಗೆ ಯಾವ ಬೇಸರವಾಗಲಿ ಇಲ್ಲವೇ ನಿರಾಸೆಯಾಗಲಿ ಇಲ್ಲ. ಕಣ್ಣಿಗೆ ಕಂಡಿದ್ದು, ಮನಸ್ಸಿಗೆ ತೋಚಿದ್ದು ಮತ್ತು ಆಲೋಚನೆಗೆ ಹೊಳೆದದ್ದು ನನ್ನನ್ನು ಕಾಡತೊಡಗಿದಾಗ ಆ ಒಂದು ಬೇಗುದಿಯಿಂದ ಹೊರಬರಲು ನಾನು ಬರವಣಿಗೆಯ ಮೊರೆ ಹೋಗುತ್ತೇನೆ. ಹೀಗಾಗಿ ನನ್ನ ಕೃತಿಗಳ ತೆಕ್ಕೆಗೆ ಬಂದು ಸೇರುವ ವಿಷಯಗಳು ಅನೇಕ.  ಬರವಣಿಗೆಗಾಗಿ ವಿವಿಧ ವಿಷಯಗಳತ್ತ ಹೊರಳುವುದು ಅದು ನನ್ನ ಓದಿನ, ತಿಳುವಳಿಕೆಯ ಮತ್ತು ಬರವಣಿಗೆಯ ಮಿತಿ ಕೂಡ ಆಗಿರಬಹುದು.  ಇಂಥದ್ದೊಂದು ಇತಿ ಮಿತಿಯ ಓದು ಮತ್ತು ಬರವಣಿಗೆಯ ನಡುವೆ ನಾನು ಬರೆದ ‘ಬೊಗಸೆಯಲ್ಲಿ ಕಡಲು’ ನನ್ನ ಏಳನೇ ಕೃತಿ.

ಇನ್ನು ಈ ಕೃತಿಯ ವಿಷಯಕ್ಕೆ ಬರುವುದಾದರೆ ಇಲ್ಲಿನ ಎಲ್ಲ ಲೇಖನಗಳು ನಾನು ‘ಸಮಾಚಾರ’ ಪತ್ರಿಕೆ ಮತ್ತು ಬ್ಲಾಗಿಗೆ  ಬರೆದ ಬರಹಗಳು. ಇಲ್ಲಿನ ಕೆಲವು ಲೇಖನಗಳು ‘ನಿಲುಮೆ’ಯಲ್ಲೂ ಪ್ರಕಟಗೊಂಡಿವೆ. ಬ್ಲಾಗಿನ ಕುರಿತು ಮಾತನಾಡುವಾಗ ಮತ್ತದೆ ಬದ್ದತೆ ಹಾಗೂ ಸಮಾಜದ ಕುರಿತಾದ ನನ್ನಲ್ಲಿರುವ ಒಂದಿಷ್ಟು ಕಾಳಜಿ ಎದುರಾಗುತ್ತವೆ. ನಾನು ಬ್ಲಾಗಿಗೆ ಬರೆದ ಹೆಚ್ಚಿನ ಲೇಖನಗಳೆಲ್ಲ ಸಮಾಜದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನನ್ನೊಳಗಿನ ಒಂದಿಷ್ಟು ಸಮಾಜಮುಖಿ ಚಿಂತನೆಯನ್ನು ಅನಾವರಣಗೊಳಿಸಿವೆ. ಜೊತೆಗೆ ನಾನೇಕೆ ಬರೆಯುತ್ತೇನೆ ಎನ್ನುವ ಪ್ರಶ್ನೆಯೊಂದು ಬರವಣಿಗೆಯುದ್ದಕ್ಕೂ ನನ್ನನ್ನು ಕಾಡುತ್ತಲೇ ಇರುತ್ತದೆ. ಅನೇಕ ಸಂದರ್ಭಗಳಲ್ಲಿ  ಹೇಳಿದಂತೆ ನನ್ನೊಳಗಿನ ತವಕ, ತಲ್ಲಣ ಮತ್ತು ಬೇಗುದಿಯನ್ನು ಹೊರಹಾಕಲು ಆಗಾಗ ನಾನು ಬರವಣಿಗೆಯ ಮೊರೆ ಹೋಗುತ್ತೇನೆ. ಈ ತವಕ, ತಲ್ಲಣಗಳೆಲ್ಲ ನನ್ನನ್ನು ವೈಯಕ್ತಿಕ ನೆಲೆಯಲ್ಲಿ ಕಾಡಿದ್ದು ತೀರ ಕಡಿಮೆ ಅವುಗಳ ಕಾಡುವಿಕೆ ಸಮಾಜಮುಖಿ ನೆಲೆಯಲ್ಲೇ ಹೆಚ್ಚು. ಜೊತೆಗೆ ಬರವಣಿಗೆ ಅದೊಂದು ಮಹಾ ಆದರ್ಶದ ಕೆಲಸ ಅಥವಾ ಬಹುದೊಡ್ಡ ಸಾಧನೆ ಎಂದು ನಾನು ತಿಳಿದುಕೊಂಡಿಲ್ಲ. ನನ್ನ ಈ ಬರವಣಿಗೆಯಿಂದ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯೊಂದು ಘಟಿಸಲಿದೆ ಎನ್ನುವ ಅಹಂಕಾರವಂತೂ ನನ್ನಿಂದ ಬಹಳ ದೂರದಲ್ಲಿದೆ. ಆದರೆ ಒಂದಂತೂ ಸತ್ಯ ನಾನು ಬದುಕುತ್ತಿರುವ ಸಮಾಜದಲ್ಲಿನ ಒಳಿತು ಕೆಡುಕುಗಳಿಗೆ ಮನಸ್ಸು ಆ ಕ್ಷಣಕ್ಕೆ ಸ್ಪಂದಿಸಿ ಬರೆಯುವಂತೆ ಮೊಂಡು ಹಠ ಹಿಡಿದು ಕಾಡತೊಡಗುತ್ತದೆ. ಈ ಕಾರಣದಿಂದಲೇ ನಾನೊಂದಿಷ್ಟು ಬರೆಯಲು ಸಾಧ್ಯವಾಗಿರುವುದು.
             
       ನನ್ನ ಕೃತಿಗಳ ಪ್ರಕಟಣೆಯ ವಿಷಯವಾಗಿ ನಾನು ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೇಕ ಅವರನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಕನ್ನಡ ಪುಸ್ತಕಗಳ ಪ್ರಕಟಣೆಯ ಈ ಅಕ್ಷರಯಜ್ಞದಲ್ಲಿ ಅವರದು ಶ್ಲಾಘನೀಯ ಪಾತ್ರ. ಪುಸ್ತಕಗಳ ಪ್ರಕಟಣೆ, ಪುಸ್ತಕ ಬಿಡುಗಡೆ, ಲೇಖಕರಿಗೆ ಸನ್ಮಾನ, ಪುಸ್ತಕ ಮಾರಾಟ ಮಳಿಗೆ ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಬಸವರಾಜ ಕೊನೇಕ ಅವರು ಮಾಡುತ್ತಿರುವ ಸರಸ್ವತಿ ಸೇವೆ ನಿಜಕ್ಕೂ ಅಭಿನಂದನಾರ್ಹ. ಕಲಬುರ್ಗಿಯಲ್ಲಿ ಮೂರಂತಸ್ತಿನ ಮಳಿಗೆಯನ್ನು ಸ್ಥಾಪಿಸಿ ಆ ಮೂಲಕ ಪುಸ್ತಕಗಳನ್ನು ಓದುಗರಿಗೆ ತಲುಪಿಸುತ್ತಿರುವ ಶ್ರೀಯುತರು ಕಳೆದ ಕೆಲವು ವರ್ಷಗಳಿಂದ ತಮ್ಮ ಧರ್ಮಪತ್ನಿಯವರ ಸ್ಮರಣಾರ್ಥ ಪ್ರತಿವರ್ಷ  ಅತ್ಯುತ್ತಮ ಕೃತಿಗಳಿಗೆ ಬಹುಮಾನ ನೀಡಿ ಲೇಖಕರನ್ನು ಗೌರವಿಸುತ್ತಿರುವರು. ಅವರು ಮಾಡುತ್ತಿರುವ ಈ ಕೆಲಸ ಅದು ಇತರರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಲಿ. ಅವರೊಂದಿಗಿನ ಒಡನಾಟ ಮತ್ತು ಆಪ್ತತೆಯೇ  ನನ್ನ ಐದು ಕೃತಿಗಳು ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ಪ್ರಕಟವಾಗಲು ಕಾರಣ. 
 ನನ್ನ ‘ಬೊಗಸೆಯಲ್ಲಿ ಕಡಲು’ ಕೃತಿ ಅಕ್ಷರಲೋಕದೊಳಗೆ ಅಡಿಯಿಡುವ ವೇಳೆ ನೆರವಿಗೆ ಬಂದವರು ಅನೇಕರು. ಪುಸ್ತಕ ಪರಿಶೀಲನಾ ಸಮಿತಿಯ ಸದಸ್ಯರು, ಮುಖಪುಟ ವಿನ್ಯಾಸಕಾರರು ಮತ್ತು ಮುದ್ರಣಾಲಯದವರು. 
ಈ ಎಲ್ಲರನ್ನು ನಾನು ಈ ಸಂದರ್ಭ ಅತ್ಯಂತ ವಿನಮೃನಾಗಿ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.

-  ರಾಜಕುಮಾರ ವ್ಹಿ ಕುಲಕರ್ಣಿ (ಕುಮಸಿ), ಬಾಗಲಕೋಟೆ