Tuesday, January 23, 2024

ಗ್ರಂಥಾಲಯ ಸಪ್ತಾಹ: ನಿತ್ಯದ ಹಬ್ಬವಾಗಲಿ


       

(೧೭.೧೧.೨೦೨೩ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

     ಪ್ರತಿವರ್ಷ ನವೆಂಬರ್ 14 ರಿಂದ 20 ರ ವರೆಗೆ ಭಾರತದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ವನ್ನು ಆಚರಿಸಲಾಗುತ್ತದೆ. ವಾರಪೂರ್ತಿ ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳನ್ನು ಗ್ರಂಥಾಲಯಗಳಲ್ಲಿ ಆಯೋಜಿಸಲಾಗುವುದು. ಗ್ರಂಥಾಲಯ ಸಪ್ತಾಹ ಆಚರಿಸುವುದರ ಮೂಲಕ ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿಕೊಡಲಾಗುವುದು. ವಿಶೇಷವಾಗಿ ಗ್ರಂಥಾಲಯ ಸಪ್ತಾಹದ ಆಚರಣೆಗೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ತುಂಬ ಮಹತ್ವವಿದೆ. ವಿವಿಧ ವಯೋಮಾನದ ಮತ್ತು ಹಿನ್ನೆಲೆಯ ಓದುಗರು ಭೇಟಿನೀಡುವ ತಾಣ ಸಾರ್ವಜನಿಕ ಗ್ರಂಥಾಲಯಗಳಾಗಿವೆ. ಅಗತ್ಯದ ಪುಸ್ತಕಗಳನ್ನು ವೈಯಕ್ತಿಕವಾಗಿ ಖರೀದಿಸಿ ಓದುವುದು ಆರ್ಥಿಕವಾಗಿ ಕಷ್ಟಸಾಧ್ಯವಾದ ಕೆಲಸ. ಅದಕ್ಕೆಂದೆ ಓದುಗರ ಅಭಿರುಚಿ ಮತ್ತು ಅಗತ್ಯಕ್ಕನುಗುಣವಾಗಿ ಪುಸ್ತಕಗಳು ದೊರೆಯುವ ವ್ಯವಸ್ಥೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮಾಡಲಾಗಿದೆ. ಜನರಲ್ಲಿ ಓದಿನಂತಹ ಸುಸಂಸ್ಕೃತ ಹವ್ಯಾಸವನ್ನು ಬೆಳೆಸುವ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮತ್ತು ಸೇವೆ ಪ್ರಶಂಸಾರ್ಹವಾಗಿದೆ. 

ಸಾರ್ವಜನಿಕ ಗ್ರಂಥಾಲಯಗಳನ್ನು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಪರಿಗಣಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನರಿತು ಅವುಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಭಾರತದಲ್ಲಿ ಗ್ರಂಥಾಲಯ ಕಾಯ್ದೆಯನ್ನು ರಚಿಸಲಾಯಿತು. ಕರ್ನಾಟಕದಲ್ಲಿ 1965 ರಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆಯಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ಆಸ್ತಿ ತೆರಿಗೆ ಹಣದಲ್ಲಿ ಶೇಕಡಾ 6 ರಷ್ಟನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ಖರ್ಚು ಮಾಡಬೇಕೆಂದು ಉಲ್ಲೇಖಿಸಲಾಗಿದೆ. ಇಂದು ಭಾರತದ ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಬಳಕೆಯಲ್ಲಿದೆ.

ಸಾರ್ವಜನಿಕರ ಓದಿನ ಹವ್ಯಾಸಕ್ಕೆ ಅಗತ್ಯವಾದ ಒಂದು ಪೂರಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಸ್ಥಾಪನೆಯಾದ ಸಾರ್ವಜನಿಕ ಗ್ರಂಥಾಲಯಗಳು ಇಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಕೆಲವು ದಶಕಗಳ ಹಿಂದಿನ ಗ್ರಂಥಾಲಯಗಳ ಭೌತಿಕ ಚಿತ್ರಣದೊಂದಿಗೆ ಹೋಲಿಸಿದರೆ ಇಂದು ಕಟ್ಟಡ ಮತ್ತು ಪೀಠೋಪಕರಣಗಳು ಆಧುನೀಕರಣಗೊಂಡಿರುವುದು ಕಣ್ಣಿಗೆ ಢಾಳಾಗಿ ಗೋಚರಿಸುತ್ತದೆ. ಗ್ರಂಥಾಲಯಗಳಿಗೆ ಕಂಪ್ಯೂಟರ್‍ಗಳನ್ನು ಮತ್ತು ಇಂಟರ್‍ನೆಟ್ ಸೌಲಭ್ಯ ಕೂಡ ಒದಗಿಸಲಾಗಿದೆ. ವಿಪರ್ಯಾಸದ ಸಂಗತಿ ಎಂದರೆ ಓದುಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಗ್ರಂಥಾಲಯಗಳಲ್ಲಿ ಗುಣಾತ್ಮಕ ಪುಸ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದೇ ಕಾರಣ ಎನ್ನುವುದು ಓದುಗರ ಅಭಿಪ್ರಾಯವಾಗಿದೆ.

ಕೇವಲ ಕಟ್ಟಡವನ್ನು ನವೀಕರಿಸಿ ಆಧುನಿಕ ಪೀಠೋಪಕರಣಗಳನ್ನು ಒದಗಿಸಿದ ಮಾತ್ರಕ್ಕೆ ಗ್ರಂಥಾಲಯಗಳಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎನ್ನುವ ನಿರ್ಧಾರಕ್ಕೆ ಬರುವುದು ಆತುರದ ನಡೆಯಾಗುತ್ತದೆ. ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾದ ಪುಸ್ತಕಗಳು ಗ್ರಂಥಾಲಯಗಳಲ್ಲಿ ದೊರೆಯುವಂತಾಗಬೇಕು. ಕಳೆದ ಮೂರು ವರ್ಷಗಳಿಂದ (2020-2022) ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸಿಲ್ಲವೆಂದು ಪ್ರಕಾಶಕರು ತಮ್ಮ ಅಳಲು ತೋಡಿಕೊಂಡಿರುವರು. 2020 ನೇ ಸಾಲಿನ ಆಯ್ಕೆಯಾದ ಪುಸ್ತಕಗಳನ್ನು ಖರೀದಿಸಲು ಇದುವರೆಗೂ ಸರ್ಕಾರ ಅನುಮೋದನೆ ನೀಡದಿರುವುದು ಖಂಡನಾರ್ಹ. ಓದಿನ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಪುಸ್ತಕಗಳ ಖರೀದಿಗೆ ನೆರವು ನೀಡುವಲ್ಲಿ ವಿಳಂಬ ಮಾಡುವುದು ಈಗಾಗಲೇ ಸೃಷ್ಟಿಯಾಗಿರುವ ಓದುಗರು ಮತ್ತು ಪುಸ್ತಕಗಳ ನಡುವಣ ಕಂದಕವನ್ನು ಮತ್ತಷ್ಟು ವಿಸ್ತರಿಸಲು ಆಹ್ವಾನ ನೀಡಿದಂತಾಗುತ್ತದೆ.   

ಕಟ್ಟಡ, ಪೀಠೋಪಕರಣಗಳು ಮತ್ತು ಪುಸ್ತಕಗಳಷ್ಟೆ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಪಾತ್ರ ಕೂಡ ಮಹತ್ವದ್ದಾಗಿದೆ. ಓದುಗರ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಪುಸ್ತಕಗಳ ಉಪಯೋಗ ವ್ಯಾಪಕವಾಗಿ ವಿಸ್ತರಿಸುವ ವಾತಾವರಣವನ್ನು ಗ್ರಂಥಾಲಯದಲ್ಲಿ ನಿರ್ಮಾಣಮಾಡಬೇಕು. ಪುಸ್ತಕಗಳು ಕಣ್ಣಿಗೆ ಚೆಂದ ಕಾಣುವಂತೆ ಜೋಡಿಸಿಡುವುದಕ್ಕಿಂತ ಓದಿಸಿಕೊಂಡು ಜೀರ್ಣವಾಗಲು ಅವಕಾಶ ಮಾಡಿಕೊಡಬೇಕು. ಪುಸ್ತಕವೊಂದು ಎಷ್ಟೊಂದು ಪ್ರಮಾಣದಲ್ಲಿ ಓದಿಸಿಕೊಂಡಿದೆ ಎನ್ನುವುದನ್ನು ದಾಖಲೆಗಳ ಮೂಲಕ ಹೇಳಲು ಸಾಧ್ಯವಿಲ್ಲ. ಪುಸ್ತಕದ ಭೌತಿಕ ಸ್ವರೂಪವೇ ಅದನ್ನು ಹೇಳುತ್ತದೆ. ಕಥೆಗಾರ ಎಸ್.ದಿವಾಕರ್ ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ ಎನ್ನುವ ತಮ್ಮ ಪ್ರಬಂಧದಲ್ಲಿ ಹೀಗೆ ಹೇಳಿರುವರು-‘ಪುಸ್ತಕಗಳ ರಟ್ಟು ಕಿತ್ತುಹೋಗಿರಬಹುದು, ಅವುಗಳ ಪುಟಗಳು ನಾಯಿಕಿವಿಗಳಾಗಿರಬಹುದು, ಹೊಲಿಗೆಯೋ ಅಂಟೋ ಬಿಚ್ಚಿಕೊಂಡು ಕೆಲವು ಹಾಳೆಗಳೇ ಸಡಿಲವಾಗಿರಬಹುದು. ಅವು ಮತ್ತೆ ಮತ್ತೆ ಓದಿಸಿಕೊಂಡು ತಮ್ಮ ಸುಸ್ವರೂಪ ಕಳೆದುಕೊಂಡ ಪುಸ್ತಕಗಳು. ಅಂಥ ಪುಸ್ತಕಗಳ ಮಾರ್ಜಿನ್ನಿನ ತುಂಬ ಪೆನ್ಸಿಲಿನಲ್ಲೋ ಪೆನ್ನಲ್ಲೋ ಗೀಚಿರುವ ಬರಹಗಳಿದ್ದರೆ ಆಶ್ಚರ್ಯವಿಲ್ಲ’.

ಹಿಂದೆಲ್ಲ ಮನೆಬಾಗಿಲಿಗೆ ಪುಸ್ತಕಗಳನ್ನು ಕೊಂಡೊಯ್ದು ಓದುಗರಿಗೆ ಒದಗಿಸುವ ‘ಸಂಚಾರಿ ಗ್ರಂಥಾಲಯ’ ಸೇವೆ ಚಾಲ್ತಿಯಲ್ಲಿತ್ತು. ವಿಶೇಷವಾಗಿ ಗೃಹಿಣಿಯರಿಗೆ ತಮ್ಮ ಮನೆಗೆಲಸದ ಬಿಡುವಿನ ವೇಳೆ ಸಂಚಾರಿ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಲು ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಇಂದು ಸಂಚಾರಿ ಗ್ರಂಥಾಲಯ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಸೇವೆಯನ್ನು ಮತ್ತೆ ಪುನರಾರಂಭಿಸುವುದು ಓದಿನ ಅಭಿರುಚಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಸಾರ್ವಜನಿಕರು ಕೂಡ ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಳ್ಳುವುದು ಮುಖ್ಯವಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳು ಮಾತ್ರವಲ್ಲದೆ ಕುಟುಂಬದ ಖಾಸಗಿ ಸಮಾರಂಭಗಳಲ್ಲೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಆಚರಣೆಗೆ ಬರಬೇಕು.

ಮೊಬೈಲ್‍ನ ವ್ಯಾಪಕ ಬಳಕೆ ಓದಿನ ಆಸಕ್ತಿ ಕ್ಷೀಣಿಸುತ್ತಿರುವುದಕ್ಕೆ ಪ್ರಬಲ ಕಾರಣಗಳಲ್ಲೊಂದು. ಎಲ್ಲ ವಯೋಮಾನದವರಲ್ಲಿ ಮೊಬೈಲ್ ಬಳಕೆಯ ವ್ಯಾಮೋಹ ಸೋಂಕಿನಂತೆ ಹರಡುತ್ತಿದೆ. ಪುಸ್ತಕಗಳ ಓದಿನ ಹವ್ಯಾಸವನ್ನು ಹೆಚ್ಚಿಸುವುದೇ ಈ ಸಮಸ್ಯೆಯ ಪರಿಹಾರಕ್ಕಿರುವ ಪರ್ಯಾಯ ಮಾರ್ಗವಾಗಿದೆ. ಈ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸಾರ್ವಜನಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಅಗತ್ಯದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸಲು ಗ್ರಂಥಾಲಯ ಇಲಾಖೆಗೆ ಆರ್ಥಿಕ ನೆರವು ನೀಡುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿಯಾಗಬೇಕು. ಜೊತೆಗೆ ಗ್ರಂಥಾಲಯ ಸಪ್ತಾಹ ಕೇವಲ ಏಳು ದಿನಗಳ ಆಚರಣೆಯಾಗದೆ ಅದು ದಿನನಿತ್ಯದ ಹಬ್ಬವಾಗಬೇಕು.

-ರಾಜಕುಮಾರ ಕುಲಕರ್ಣಿ