Monday, October 22, 2012

ಮುಳುಗಡೆ ನೆಲದ ನೋವಿನ ಧ್ವನಿ

        ನಾನು ಚಿಕ್ಕವನಿದ್ದಾಗ ನನ್ನೂರಿನಲ್ಲಿ ಸರ್ಕಾರ ಸುಮಾರು ಒಂದು ಸಾವಿರ ಎಕರೆಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಬೃಹತ್ ಕೆರೆಯೊಂದನ್ನು ಕಟ್ಟಲು ಯೋಜನೆ ರೂಪಿಸಿತು. ಅದಕ್ಕೆ ಅಗತ್ಯವಾದ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಯಿತು. ಹಲವು ವರ್ಷಗಳ ನಂತರ ಕಾಮಗಾರಿ ಪೂರ್ಣಗೊಂಡು ಕೆರೆ ತುಂಬಿ ನಿಂತಿತು. ಕೆರೆಯ ನೀರಿನಿಂದ ಅನೇಕ ರೈತರ ಬದುಕು ಹಸಿರಾಯಿತು ಮತ್ತು ಹಸನಾಯಿತು. ವರ್ಷಕ್ಕೆ ಎರಡು ಬೆಳೆ ಮಾತ್ರ ಬೆಳೆಯುತ್ತಿದ್ದ ರೈತರು ನಂತರದ ದಿನಗಳಲ್ಲಿ ಕೆರೆಯ ನೀರನ್ನು ಉಪಯೋಗಿಸಿಕೊಂಡು ಮೂರು ಬೆಳೆಗಳನ್ನು ಬೆಳೆಯಲಾರಂಭಿಸಿದರು. ರೈತರ ಕೈಯಲ್ಲಿ ಹಣ ಹರಿದಾಡಿ ತಕ್ಕ ಮಟ್ಟಿಗೆ ಸ್ಥಿತಿವಂತರಾದರು. ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿದವರು ಯಾರು ಕೆರೆಯ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರೋ ಆ ರೈತರು. ಸರ್ಕಾರವೇನೋ ಭೂಮಿಗೆ ಬದಲಾಗಿ ಅವರಿಗೆ ಪರಿಹಾರ ರೂಪದಲ್ಲಿ ಹಣ ನೀಡಿತ್ತು. ಆದರೆ ಸರ್ಕಾರ ಕೊಟ್ಟ ಪರಿಹಾರದ ಹಣ ನಿಧಾನವಾಗಿ ಕರಗಲಾರಂಭಿಸಿತು. ಒಂದು ಕಾಲದಲ್ಲಿ ರೈತರಾಗಿದ್ದ ಅವರೆಲ್ಲ ಬದುಕಿಗಾಗಿ ಬೇರೆಯವರ ಹೊಲದಲ್ಲಿ ಕೂಲಿಗಳಾಗಿ ದುಡಿಯಬೇಕಾಯಿತು. ಕೆಲವರಂತೂ ತಮ್ಮ ಕುಟುಂಬದೊಂದಿಗೆ ದೂರದ ನಗರ ಪ್ರದೇಶಕ್ಕೆ ವಲಸೆ ಹೋದರು. ಆ ಕೆರೆಯ ನೀರು ಕಾಲುವೆಯ ಮೂಲಕ ಹರಿದು ಬರುವಾಗ ಆ ಸದ್ದಿನಲ್ಲಿ ಇವತ್ತಿಗೂ ಅಲ್ಲಿ ಅನೇಕರ ನೋವಿನ ನಿಟ್ಟುಸಿರು ಕೇಳಿಸುತ್ತದೆ. ಆ ಕೆರೆಯ ಒಡಲಲ್ಲಿ ಅನೇಕ ರೈತರ ಬದುಕು ಮುಳುಗಿ ಹೋಗಿದೆ. 
       ಇದೆಲ್ಲ ನೆನಪಾಗಲು ಕಾರಣ ಮೊನ್ನೆ ಮಹಾಲಿಂಗಪುರದಲ್ಲಿ ಏರ್ಪಡಿಸಿದ್ದ ಗ್ರಂಥಪಾಲಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವಾಗ ನಾನು ಕೇಳಿಸಿಕೊಂಡ ಇಬ್ಬರು ಸಹಪ್ರಯಾಣಿಕರ ಸಂಭಾಷಣೆ. ಮಧ್ಯವಯಸ್ಸಿನವರಾಗಿದ್ದ ಅವರಿಬ್ಬರೂ ಬಾಲ್ಯದಿಂದಲೇ ಪರಿಚಿತರು ಎನ್ನುವುದು ಅವರಿಬ್ಬರ ಸಂಭಾಷಣೆಯಿಂದ ತಿಳಿಯುತ್ತಿತ್ತು. ಹತ್ತು ವರ್ಷಗಳ ನಂತರ ಹೀಗೆ ಆಕಸ್ಮಿಕವಾಗಿ ಅವರಿಬ್ಬರೂ ಬಸ್ಸಿನಲ್ಲಿ ಪ್ರಯಾಣದ ಮಧ್ಯೆ ಭೇಟಿಯಾಗುವಂತಹ ಪ್ರಸಂಗ ಎದುರಾಯಿತು. ಬಾಲ್ಯದ ದಿನಗಳು, ಆ ಪರಿಸರ, ಮುಳುಗಡೆಯಾದ ಮನೆಗಳು, ಬೇರೆಡೆಗೆ ಸ್ಥಳಾಂತರಗೊಂಡಿದ್ದು ಹೀಗೆ ಅನೇಕ ವಿಷಯಗಳು ಅವರ ಮಾತಿನ ನಡುವೆ ಸುಳಿದು ಹೋದವು. ಒಬ್ಬರಂತೂ ತಾವು ಈ ಮೊದಲು ವಾಸಿಸುತ್ತಿದ್ದ ಪರಿಸರಕ್ಕೆ ಈಗ ಅಪರಿಚಿತರಾಗಿ ಹೋಗಿದ್ದೆವೆಂದೂ ಅಲ್ಲಿ ಭೇಟಿ ನೀಡಿದಾಗ ಯಾರೊಬ್ಬರೂ ತನ್ನನ್ನು ಗುರುತಿಸಲಿಲ್ಲವೆಂದು ತುಂಬಾ ಭಾವುಕರಾಗಿ ನುಡಿದರು. ಒಟ್ಟಿಗೆ ಒಂದೇ ಪರಿಸರದಲ್ಲಿ ಸಹೋದರ ಸಂಬಂಧಿಗಳಂತೆ ವಾಸಿಸುತ್ತಿದ್ದ ಕುಟುಂಬಗಳೆಲ್ಲ ಈಗ ಹೊಸ ಪರಿಸರದಲ್ಲಿ ತಮ್ಮ ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಹೆಣಗುತ್ತಿವೆ ಎನ್ನುವ ಬೇಸರ ಅವರಲ್ಲಿತ್ತು. ಬಸ್ಸಿನಿಂದ ಇಳಿಯುವಾಗ ಮತ್ತೆ ಯಾವಾಗ ಈ ಭೇಟಿ ಎನ್ನುವ ನೋವಿನ ಸಣ್ಣ ಎಳೆಯೊಂದು ಅವರ ಮಾತಿನಲ್ಲಿ ಹಾಗೂ ಮುಖದಲ್ಲಿ ಗೋಚರಿಸುತ್ತಿತ್ತು. 
       ಹೌದು ಮುಳುಗಡೆ ತಂದೊಡ್ಡುವ ಸಮಸ್ಯೆ ಮತ್ತದರ ಭೀಕರತೆ ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನದಿ ಪಾತ್ರವೊಂದಕ್ಕೆ ಅಣೆಕಟ್ಟು ಕಟ್ಟಿ ಅದರಿಂದ ಅನೇಕರ ಬದುಕಿಗೆ ಆಸರೆಯೊದಗಿಸುವುದರ ಹಿಂದೆ ಹಲವಾರು ಜನರ ತ್ಯಾಗ ಮತ್ತು ಬಲಿದಾನದ ಕಥೆಗಳು ಅಡಕವಾಗಿವೆ. ಸರ್ಕಾರವೇನೋ ಸೂಕ್ತ ಹಣಕಾಸಿನ ನೆರವು ನೀಡಿ ಸಂತ್ರಸ್ತರ ಬದುಕಿಗೆ ಅಗತ್ಯವಾದ ನೆಲೆ ಒದಗಿಸಲಾಗುವುದು ಎಂದು ಹೇಳಿ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಿಂದ ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಬೇರೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ತಾಣದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಸಣ್ಣ ಸಂಗತಿಯಲ್ಲ. ಒಂದೆಡೆ ಒಂದೇ ನೆಲದಲ್ಲಿ ಭಾತೃತ್ವದ ಭಾವನೆಯಿಂದ ಹಲವು ತೆಲೆಮಾರುಗಳಿಂದ ಬದುಕಿ ಬಾಳಿದ ಕುಟುಂಬಗಳು ತಮ್ಮ ನೆಲದ ಸಂಬಂಧವನ್ನೇ ಕಡಿದುಕೊಂಡು ಅಪರಿಚಿತ ಪ್ರದೇಶದಲ್ಲಿ ಬದುಕುವಾಗ ಕಾಡುವ ಅನಾಥ ಪ್ರಜ್ಞೆ ನಿಜಕ್ಕೂ ಸಂತ್ರಸ್ತರ ಬದುಕಿಗೆ ಎದುರಾಗುವ ಬಹುದೊಡ್ಡ ಸವಾಲು. ಮುಳುಗಡೆ ಎನ್ನುವುದು ಕೇವಲ ಮನೆ ಎನ್ನುವ ಭೌತಿಕ ವಸ್ತುವನ್ನು ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಿಲ್ಲ. ಅದು ಒಂದು ಇಡೀ ಸಾಂಸ್ಕೃತಿಕ ಬದುಕನ್ನೇ ತನ್ನ ಮಡಲಿಗೆಳೆದುಕೊಳ್ಳುತ್ತದೆ. ಒಂದು ಭೌಗೋಳಿಕ ಪ್ರದೇಶದ ಮುಳುಗಡೆಯಿಂದ ಅಲ್ಲಿನ ಸಾಮಾಜಿಕ ಜನಜೀವನ, ಅಲ್ಲಿನ ಸಂಪ್ರದಾಯಗಳು, ಅಲ್ಲಿ ಆಚರಿಸುವ ಹಬ್ಬಗಳು, ಧಾರ್ಮಿಕ ವಿಧಿ ವಿಧಾನಗಳು, ನಾಟಕ, ಬಯಲಾಟ, ಕೋಲಾಟಗಳಂಥ ಸಾಂಸ್ಕೃತಿಕ ಚಟುವಟಿಕೆಗಳು ಇವುಗಳೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧಗಳು ಹೀಗೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕೇ ಮುಳುಗಿ ಹೋಗುತ್ತದೆ.
      ಪ್ರತಿವಾರದ ಸಂತೆಗೆ ತರಕಾರಿ ಮಾರಲು ಬರುವ ನಿಂಗಜ್ಜಿ ಮುಳುಗಡೆ ತಂದೊಡ್ಡುವ ಮತ್ತೊಂದು ಭೀಕರತೆಯನ್ನು ಅನಾವರಣಗೊಳಿಸುತ್ತಾಳೆ. ಅವಳು ಹೇಳುವಂತೆ ಹಳ್ಳಿಯಲ್ಲಿದ್ದ ಹತ್ತೆಕ್ಕರೆ ಜಮೀನು ಮತ್ತು ಮೂರು ತೆಲೆಮಾರುಗಳಿಂದ ವಾಸಿಸುತ್ತಿದ್ದ ಮನೆ ಜಲಾಶಯದ ಒಡಲು ಸೇರಿವೆ. ಸರ್ಕಾರ ನೀಡಿದ ಪರಿಹಾರದ ಹಣವನ್ನು ಅವಳ ನಾಲ್ಕು ಮಕ್ಕಳೂ ಸಮನಾಗಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಒಮ್ಮೆಯೂ ಅಷ್ಟೊಂದು ದೊಡ್ಡ ಮೊತ್ತದ ಹಣ ಕಾಣದಿದ್ದ ಅವರಿಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಯಿತು. ಕೈಯಲ್ಲಿನ ಹಣದ ಪರಿಣಾಮ ವಿಲಾಸಿ ಜೀವನ ಅವರನ್ನು ಕೈ ಬೀಸಿ ಕರೆಯಿತು. ದ್ವಿಚಕ್ರ ವಾಹನ, ಮೋಜು ಮಸ್ತಿಗಾಗಿ ಹಣವೆಲ್ಲ ಖರ್ಚಾಗಿ ಈಗ ಕೈ ಬರಿದಾಗಿದೆ. ಮನೆಯೂ ಮುಳುಗಿ ಹೋಗಿರುವುದರಿಂದ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರ ನೀಡಿದ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳಲು ಹಣವೂ ಇಲ್ಲದಿರುವುದರಿಂದ ಅವರ ಇಡೀ ಕುಟುಂಬ ನಗರಕ್ಕೆ ಗುಳೆ ಬಂದಿದೆ. ಎರಡು ಕೋಣೆಗಳ ಸಣ್ಣ ಬಾಡಿಗೆ ಮನೆಯೊಂದರಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ದಿನದೂಡುತ್ತಿರುವ ನಿಂಗಜ್ಜಿ ಈ ಇಳಿವಯಸ್ಸಿನಲ್ಲೂ ದುಡಿಯುತ್ತಿರುವಳು. ಆಕೆ ಹೇಳುವಂತೆ ಇದು ಕೇವಲ ನಿಂಗಜ್ಜಿಯ ಕುಟುಂಬವೊಂದರ ಕಥೆಯಲ್ಲ. ಮುಳುಗಿ ಹೋಗಿರುವ ಅನೇಕ ಹಳ್ಳಿಗಳಲ್ಲಿನ ಕುಟುಂಬಗಳ ಕಥೆಯಿದು.
      ಮುಳುಗಡೆಯಾದವರು ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಸ್ಥಳಾಂತರಗೊಂಡರು. ಆದರೆ ಮುಳುಗಡೆಯಾಗದೆಯೂ ಮುಳುಗಿ ಹೋಗುವ ಕುಟುಂಬಗಳದ್ದು ಇನ್ನೊಂದು ರೀತಿಯ ದುರ್ಗತಿ. ಜಲಾಶಯಗಳ ಹಿನ್ನೀರಿನ ಸಮೀಪದಲ್ಲಿ ವಾಸಿಸುವ ಕುಟುಂಬಗಳದ್ದು ಅಕ್ಷರಶ: ನರಕಯಾತನೆ. ಹಿನ್ನೀರಿನಿಂದ ಹೊರಸೂಸುವ ದುರ್ಗಂಧ, ಹಾವು ಚೇಳುಗಳ ಹರಿದಾಟ, ಸೊಳ್ಳೆಗಳ ಕಾಟದಿಂದ ದಿನನಿತ್ಯದ ಬದುಕು ಅಸಹನೀಯ ಎಂದೆನಿಸುತ್ತದೆ. ಇಡೀ ಮನೆ ರೋಗ ರುಜಿನಗಳ ಕೊಂಪೆಯಾಗುತ್ತದೆ. ಕತ್ತಲಾಗುತ್ತಿದ್ದಂತೆ ಚಿತ್ರ ವಿಚಿತ್ರ ಕ್ರಿಮಿ ಕೀಟಗಳ ಹಾವಳಿಯಿಂದ ಅವರಿಗೆ ಪ್ರತಿ ರಾತ್ರಿಯೂ ಸುದೀರ್ಘ ಎನಿಸುತ್ತದೆ. ಜೊತೆಗೆ ಸಾಮಾಜಿಕ ಜೀವನವೊಂದು ಚದುರಿ ಹೋಗುವುದರಿಂದ ಅನಾಥ ಪ್ರಜ್ಞೆ ಇನ್ನಿಲ್ಲದಂತೆ ಕಾಡಲಾರಂಭಿಸುತ್ತದೆ. ಹಣವಿರುವ ಸ್ಥಿತಿವಂತರು ಅಂಥದ್ದೊಂದು ಅಸಹನೀಯ ಬದುಕಿನಿಂದ ದೂರಾಗಿ ಹೊಸ ಬದುಕನ್ನು ಕಟ್ಟಿ ಕೊಳ್ಳಬಹುದು. ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆ ಒಂದು ಪರಿಸರದಲ್ಲೇ ಬದುಕುವ ಅನಿವಾರ್ಯತೆಯಿಂದ ದಿನನಿತ್ಯದ ಬದುಕು ಘೋರವಾಗುತ್ತದೆ.
      ಮುಳುಗಡೆ ನಾಡಿನಲ್ಲಿ ಸೂರಿದ್ದವರದು ಒಂದು ಕಥೆಯಾದರೆ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳದ್ದು ಇನ್ನೊಂದು ರೀತಿಯ ವ್ಯಥೆ. ನಗರ ಪ್ರದೇಶಗಳಲ್ಲಿ ವಸತಿ ಪ್ರದೇಶ ಜಲಾಶಯದ ಒಡಲು ಸೇರುತ್ತಿದ್ದಂತೆ ಇರುವ ಅತ್ಯಲ್ಪ ಮನೆಗಳ ಬೇಡಿಕೆ ಹೆಚ್ಚಲಾರಂಭಿಸುತ್ತದೆ. ಬೇಡಿಕೆ ಹೆಚ್ಚಿದಂತೆ ಮನೆ ಬಾಡಿಗೆ ಗಗನಕ್ಕೆರುತ್ತದೆ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ವಾಸಿಸಲು ಸೂರೊಂದನ್ನು ಹೊಂದಿಸುವುದೇ ಬಹುದೊಡ್ಡ ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಮನೆ ಮಾಲೀಕರುಗಳು ವ್ಯಾಪಾರಕ್ಕಿಳಿಯುತ್ತಾರೆ. ವ್ಯಾಪಾರ ಮತ್ತು ವ್ಯವಹಾರಗಳೆದುರು ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಒಂದೆಡೆ ಮುಳುಗಡೆ ಅನೇಕರ ಬದುಕನ್ನು ಮುಳುಗಿಸಿದರೆ ಅದೇ ಮುಳುಗಡೆ ಇನ್ನೊಂದೆಡೆ ಕೆಲವರನ್ನು ಲಾಭಕ್ಕಾಗಿ ವ್ಯಾಪಾರಕ್ಕಿಳಿಸುತ್ತದೆ. ಜೊತೆಗೆ ಹಳ್ಳಿಗಳೆಲ್ಲ ಮುಳುಗಡೆಯಾಗುತ್ತಿದ್ದಂತೆ ಅನೇಕ ಕುಟುಂಬಗಳು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿವೆ. ಪರಿಣಾಮವಾಗಿ ಮನೆ ಬಾಡಿಗೆ ಎನ್ನುವ ಬಿಸಿಯ ದಳ್ಳುರಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಬದುಕು ಬೆಂದು ಹೋಗುತ್ತದೆ. ದುಡಿಮೆಯ ಬಹುಪಾಲು ಹಣವನ್ನು ವಸತಿ ವ್ಯವಸ್ಥೆಗಾಗಿ ವಿನಿಯೋಗಿಸುವ ಪರಿಸ್ಥಿತಿ ಎದುರಾದಾಗ ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಸೌಲಭ್ಯಗಳೆಲ್ಲ ಮರೀಚಿಕೆಯಾಗುತ್ತವೆ.
        ಹರಿಯುವ ನೀರಿಗೆ ಕಟ್ಟುವ ಅಣೆಕಟ್ಟು ಎಲ್ಲೋ ಕೆಲವರ ಬದುಕನ್ನು ಸಮೃದ್ಧಗೊಳಿಸಬಹುದು. ಆದರೆ ಅದು ಕೊಡಮಾಡುವ ಸಮೃದ್ಧತೆಯ ಹಿಂದಿನ ಕರಾಳ ಮುಖ ಮಾತ್ರ ಅತ್ಯಂತ ಭೀಕರ. ಹೀಗೆ ಜಲಾಶಯಗಳ ಒಡಲನ್ನು ಸೇರುವ ಮುಳುಗಡೆಯ ನಾಡಿನಲ್ಲಿ ಒಂದೆರಡು ಹೆಜ್ಜೆ ನಡೆದು ಬಂದರೆ ಕಣ್ಣೆದುರು ಅಲ್ಲಿನ ದುರಂತ ಬದುಕು ಅನಾವರಣಗೊಳ್ಳುತ್ತ ಹೋಗುತ್ತದೆ. ಅನೇಕರ ನಿಟ್ಟುಸಿರು, ನಿಸ್ಸಾಹಯಕ ಕೂಗು, ಆಕ್ರಂದನ ಕಿವಿಗಪ್ಪಳಿಸುತ್ತವೆ.

ಮುಗಿಸುವ ಮುನ್ನ:

        ಬಾಗಲಕೋಟೆಯಲ್ಲೊಂದು ವಿಶಿಷ್ಟ ಮ್ಯೂಜಿಯಂ ಇದೆ. ಅಲ್ಲಿ ಗ್ರಾಮೀಣ ಪರಿಸರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಅತ್ಯಂತ ಸುಂದರವಾಗಿ ಮತ್ತು ಅಷ್ಟೇ ಆಕರ್ಷಕವಾಗಿ ಚಿತ್ರಿಸಲಾಗಿದೆ. ಅಲ್ಲಿ ಗೌಡರ ಮನೆಯಿದೆ, ದನಗಳ ಕೊಟ್ಟಿಗೆ ಇದೆ, ಊರ ನಡುವಿನ ಭಾವಿಯಿದೆ, ಅರಳಿ ಮರದ ಕೆಳಗೆ ಹರಟೆಯಲ್ಲಿ ತೊಡಗಿರುವ ಜನರ ಗುಂಪಿದೆ, ಕಮ್ಮಾರ, ಕುಂಬಾರ, ನೇಕಾರ, ಬಡಿಗ, ಬಳೆಗಾರ ಇತ್ಯಾದಿ ಕಸುಬುದಾರರ ಪ್ರತಿಕೃತಿಗಳಿವೆ. ಹಬ್ಬ ಹರಿದಿನಗಳ ಚಿತ್ರಗಳಿವೆ. ಒಟ್ಟಾರೆ ಗ್ರಾಮೀಣ ಪರಿಸರದಲ್ಲಿ ನಡೆದಾಡಿ ಬಂದ ಅನುಭವ ನೋಡುಗನದಾಗುತ್ತದೆ. ಮುಳುಗಡೆ ನಾಡಿನ ಇಡೀ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಇಲ್ಲಿ ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟಿರುವರೇನೋ ಎನ್ನುವ ಪ್ರಶ್ನೆ ಮನದಲ್ಲಿ ಉಳಿದು ಕಾಡುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, October 13, 2012

ಜಾತಿ ವ್ಯವಸ್ಥೆಯ ಕರಿ ನೆರಳಲ್ಲಿ ವಿಶ್ವವಿದ್ಯಾಲಯಗಳು

         ಕೆಲವು ವರ್ಷಗಳ ಹಿಂದೆ ನನ್ನ ಪರಿಚಯದ ಹುಡುಗನೊಬ್ಬ ಪಿಹೆಚ್.ಡಿ ಪದವಿಗಾಗಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೊಂದಾಯಿಸಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಡಾಕ್ಟರೇಟ್ ಕನಸು ಕಾಣುತ್ತಿದ್ದವನಿಗೆ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರೆತದ್ದು ಸಹಜವಾಗಿಯೇ ಖುಷಿ ನೀಡಿತ್ತು. ಸಮಾಜ ವಿಜ್ಞಾನ ವಿದ್ಯಾರ್ಥಿಯಾದ ಅವನಿಗೆ ತನ್ನ ಸಂಶೋಧನೆಯಿಂದ ಸಮಾಜಕ್ಕೊಂದು ವಿಶಿಷ್ಠ ಕೊಡುಗೆ ನೀಡುವ ಆಸೆಯಿತ್ತು. ಓದಿನಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಆತ  ಹಲವು ಕನಸುಗಳನ್ನು ಕಟ್ಟಿಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ. ಹತ್ತಿರದಿಂದ ಅವನ ಏಳ್ಗೆಯನ್ನು ಗಮನಿಸುತ್ತ ಬಂದಿದ್ದ ನನಗೆ ಕೂಡಾ ಅವನಿಗೆ ದೊರೆತ ಆ ಅವಕಾಶ ಸಂತಸ ತಂದಿತ್ತು. ಅದಾದ ನಂತರ ಹಲವು ತಿಂಗಳುಗಳ ಕಾಲ ನಾನು ನನ್ನ ಕೆಲಸದ ನಡುವೆ ಆ ವಿಷಯವನ್ನು ಮರೆತು ಬಿಟ್ಟೆ. ಅವನೂ ಸಹ ತನ್ನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನನ್ನನ್ನು ಅನೇಕ ತಿಂಗಳುಗಳ ಕಾಲ ಸಂಪರ್ಕಿಸಲಿಲ್ಲ. 
        ಈ ನಡುವೆ ವೈಯಕ್ತಿಕ ಕೆಲಸಕ್ಕೆಂದು ನನ್ನೂರಿಗೆ ಹೋಗುತ್ತಿದ್ದ ಸಮಯ ಬಸ್ ನಿಲ್ದಾಣದಲ್ಲಿ ಚಹಾ ಕುಡಿಯಲೆಂದು ಇಳಿದಾಗ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಅವನ ಭೇಟಿಯಾಯಿತು. ದೈಹಿಕವಾಗಿ ತುಂಬಾ ಬಳಲಿದವನಂತೆ  ಕಾಣುತ್ತಿದ್ದ. ಮಾತಿನ ನಡುವೆ ಅವನ ಸಂಶೋಧನಾ ವಿಷಯ ಚರ್ಚೆಗೆ ಬಂದಿತು. ಎಲ್ಲಿಯವರೆಗೆ ಬಂದಿದೆ ನಿನ್ನ ಸಂಶೋಧನಾ ಕಾರ್ಯ ಎಂದು ಕೇಳಿದ ನನ್ನ ಪ್ರಶ್ನೆಗೆ ಅಳುವೇ ಅವನ ಉತ್ತರವಾಗಿತ್ತು. ಮಾರ್ಗದರ್ಶಕರು ಸಹಕರಿಸುತ್ತಿಲ್ಲವೆಂದು ತಾನು ಸಂಶೋಧನಾ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು ಬಿಡಲು ನಿರ್ಧರಿಸಿರುವುದಾಗಿ ಹೇಳಿದ. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಜಾತಿಯತೆಯ ಲಾಬಿ ಬಹಳಷ್ಟಿದೆ ಎಂದು ಮತ್ತು ಆ ವಾತಾವರಣದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. ನಿರುತ್ಸಾಹಗೊಳ್ಳದಿರೆಂದು ಧೈರ್ಯ ಹೇಳಿ  ಅವನನ್ನು ಬಿಳ್ಕೊಟ್ಟು  ನಾನು ಹೋಗಬೇಕಿದ್ದ ಬಸ್ ಹತ್ತಿದೆ.
        ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಸಮಸ್ಯೆ ವ್ಯಾಪಕವಾಗಿ ವಿಸ್ತರಿಸುತ್ತ ಹೋಗುತ್ತಿದೆ. ಜ್ಞಾನವನ್ನು ವೃದ್ಧಿಸಬೇಕಾದ  ವಿಶ್ವವಿದ್ಯಾಲಯಗಳು ಜಾತಿ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧರಿಸಿ ಗುಂಪುಗಾರಿಕೆ ಬೆಳೆಯುತ್ತಿದೆ. ಈ ಜಾತಿ ವ್ಯವಸ್ಥೆ ಎನ್ನುವುದು ಎಷ್ಟೊಂದು ವ್ಯವಸ್ಥಿತವಾಗಿ ಜಾತಿ, ಉಪಜಾತಿಗಳಾಗಿ ವಿಭಿನ್ನ ಸ್ತರಗಳಲ್ಲಿ  ಬೆಳೆಯುತ್ತಿದೆ ಎನ್ನುವುದನ್ನು ನೋಡಲು ನಾವು ಬೇರೆಲ್ಲೂ ಹೋಗಬೇಕಿಲ್ಲ. ಈ ವಿಶ್ವವಿದ್ಯಾಲಯಗಳೇ ಅಂಥದ್ದೊಂದು ಮಾಹಿತಿಯನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿವೆ. ಒಟ್ಟಿನಲ್ಲಿ ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಜಾತಿ ವ್ಯವಸ್ಥೆಯನ್ನು ಅತ್ಯಂತ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬರುತ್ತಿರುವ ಸಂಪೂರ್ಣ ಶ್ರೇಯಸ್ಸು ನಮ್ಮ ಈ ವಿಶ್ವವಿದ್ಯಾಲಯಗಳಿಗೆ ಸಲ್ಲಬೇಕು.
        ಬ್ರಾಹ್ಮಣ ಪ್ರಾಧ್ಯಾಪಕರಿಗೆ ಸಂಶೋಧನಾ ವಿದ್ಯಾರ್ಥಿ ಬ್ರಾಹ್ಮಣನೇ ಆಗಿರಬೇಕು. ಅದೇರೀತಿ ಲಿಂಗಾಯತ, ಜಂಗಮ, ಕುರುಬ, ಕುಂಬಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿ  ಗಣ ಹತ್ತು ಹಲವು ಜಾತಿ, ಉಪಜಾತಿಗಳಾಗಿ  ವಿಂಗಣೆಗೊಂಡಿವೆ. ಇಲ್ಲಿ ಅರ್ಹತೆಗೆ ಮಾನದಂಡ ಜಾತಿ ಮತ್ತು ಉಪಜಾತಿಯೇ ಹೊರತು ವಿದ್ಯಾರ್ಥಿಯಲ್ಲಿರುವ ಬುದ್ದಿಮತ್ತೆಯಲ್ಲ. ಒಂದು ಕೋಮಿಗೆ ಸೇರಿದ ಪ್ರಾಧ್ಯಾಪಕ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿಯನ್ನು ಸಂಶೋಧನಾ  ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲು ಸುತಾರಾಂ ಇಷ್ಟಪಡುವುದಿಲ್ಲ. ತನ್ನ ಜಾತಿಗೆ ಸೇರಿದ ವಿದ್ಯಾರ್ಥಿ ಅದೆಷ್ಟೇ ಅಯೋಗ್ಯನಾದರೂ ಸರಿ ಅಂಥವರನ್ನು ಹಿಡಿದು ತಂದು ಸಂಶೋಧನೆಗೆ ಹಚ್ಚುವಂಥ ಪ್ರಭೃತಿಗಳ ಸಂಖ್ಯೆಯೇನೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಇಲ್ಲ. ಜಾತಿಯೊಂದನ್ನು ಅತ್ಯಂತ ವ್ಯವಸ್ಥಿತವಾಗಿ ಸೀಳಿ ಅದನ್ನು ಅನೇಕ ಉಪಜಾತಿಗಳಲ್ಲಿ ವರ್ಗೀಕರಿಸಿ ನೋಡುವ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರುಗಳ ಜಾತಿ ಪ್ರೀತಿ ನಿಜಕ್ಕೂ ಕುತೂಹಲಕರ ಸಂಗತಿಗಳಲ್ಲೊಂದು.
       ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೆಲವೊಮ್ಮೆ ವಿಶ್ವವಿದ್ಯಾಲಯಗಳ ಉಪಕುಲಪತಿಗಳೇ ಈ ಜಾತಿ ವ್ಯವಸ್ಥೆಗೆ ಕುಮ್ಮುಕು ಕೊಡುವುದುಂಟು. ಅಂಥ ಸಂದರ್ಭಗಳಲ್ಲೆಲ್ಲ ಉಪಕುಲಪತಿಗಳ ಜಾತಿಗೆ ಸೇರಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಡೀ ವಿಶ್ವವಿದ್ಯಾಲಯವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದೂ ಇದೆ. ನಾನು ಸ್ನಾತಕೋತ್ತರ ಶಿಕ್ಷಣದ ವಿದ್ಯಾರ್ಥಿಯಾಗಿದ್ದ ಸಂದರ್ಭ ಒಂದು ನಿರ್ಧಿಷ್ಟ ಜಾತಿಗೆ (ಕ್ಷಮಿಸಿ) ಸೇರಿದ್ದ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ ಪೂರೈಸಿದ ನಂತರವೂ ಅನೇಕ ವರ್ಷಗಳಿಂದ ವಿಶ್ವವಿದ್ಯಾಲಯದ ವಸತಿ ಗೃಹದಲ್ಲೇ ಉಳಿದು ಕೊಂಡಿದ್ದರು. ವಸತಿ ಜೊತೆಗೆ ಊಟವು ಸಹ ಅವರಿಗೆ ಪುಕ್ಕಟ್ಟೆಯಾಗಿ ಕೊಡುತ್ತಿದ್ದ ಸಂಗತಿ ನಮಗೆಲ್ಲ ಅಚ್ಚರಿಯನ್ನುಂಟು ಮಾಡುತ್ತಿತ್ತು. ಆನಂತರ ತಿಳಿದು ಬಂದಂತೆ ಅವರಿಗೆಲ್ಲ ಹಿಂದೆ ಅಲ್ಲಿ ಇದ್ದ ಉಪಕುಲಪತಿಗಳ ಬೆಂಬಲವಿತ್ತು ಅದಕ್ಕೆ ಕಾರಣ ಅವರೆಲ್ಲ ಒಂದೇ ಜಾತಿಗೆ ಸೇರಿದವರಾಗಿದ್ದರು. ನಂತರ ಬಂದ ಉಪಕುಲಪತಿ ಅವರನ್ನೆಲ್ಲ ವಿಶ್ವವಿದ್ಯಾಲಯದಿಂದ ಹೊರಹಾಕಲು ಹರಸಾಹಸ ಪಡಬೇಕಾಯಿತು.
      ಅನೇಕ ಸಂದರ್ಭಗಳಲ್ಲಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಹೀಗೆ ಒಂದು ಸಲ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳು ಅನೇಕ ವರ್ಷಗಳ ಕಾಲ ವಿಶ್ವವಿದ್ಯಾಲಯ ಕೊಡ ಮಾಡುವ ಸೌಲಭ್ಯಗಳನ್ನು ಅನುಭವಿಸುತ್ತ ಇಲ್ಲವೆ ಅನೇಕ ವರ್ಷಗಳವರೆಗೆ ಸಂಶೋಧನಾ  ಕೆಲಸವನ್ನು ವಿಸ್ತರಿಸುತ್ತ ಕಾಲ ತಳ್ಳುವುದುಂಟು. ಇನ್ನು ಅದೆಷ್ಟೋ ವಿಷಯ ಜ್ಞಾನವಿಲ್ಲದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ನೆರವಿನಿಂದ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟರೇಟ್ ಪ್ರಮಾಣ ಪತ್ರ ಪಡೆಯುವುದುಂಟು. ಒಟ್ಟಾರೆ ಇದಕ್ಕೆಲ್ಲ ಜಾತಿ ಎನ್ನುವ ಒಂದು ಪ್ರಬಲ ಅನಿಷ್ಟ ವ್ಯವಸ್ಥೆಯ ವ್ಯಾಪಕ ಬೆಂಬಲ ನಿರಂತರವಾಗಿ ದೊರೆಯುತ್ತಿದೆ. ಹೊರಗೆ ಸಮಾಜದಲ್ಲಿ ಯಾವ ಜಾತಿ ವ್ಯವಸ್ಥೆಯ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಬಿಗಿಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ವೈಚಾರಿಕ ಪ್ರಜ್ಞೆಯ ಪ್ರಕಾಂಡ  ಪಂಡಿತರು ಆಂತರ್ಯದಲ್ಲಿ ಅದನ್ನು ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬರುತ್ತಿರುವುದು ವೈಚಾರಿಕ ಕ್ರಾಂತಿಯ ನೆಲೆಯೆಂದೇ ನಂಬಿರುವ ವಿಶ್ವವಿದ್ಯಾಲಯಕ್ಕೆ ಮಾಡುತ್ತಿರುವ  ದೊಡ್ಡ ಅಪಚಾರ.
         ಪರಿಸ್ಥಿತಿ ಹೀಗಿರುವಾಗ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಫಲಿತಾಂಶದ ಕುರಿತು ಮಾತನಾಡದಿರುವುದೇ ಲೇಸು. ವಿಶೇಷವಾಗಿ ಸಮಾಜ ವಿಜ್ಞಾನ ವಿಷಯಗಳಲ್ಲಿನ ಸಂಶೋಧನಾ ಚಟುವಟಿಕೆಗಳಿಂದ ಉತ್ತಮ ಮತ್ತು ಪರಿಣಾಮಕಾರಿಯಾದ ಫಲಿತಾಂಶ ಹೊರಬರುತ್ತಿಲ್ಲ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಜನಿವಾರ, ಶಿವದಾರ, ಸಂಧ್ಯಾವಂದನೆ, ಶಿವಪೂಜೆ, ರುದ್ರಾಕ್ಷಿ ಮಾಲೆ, ಕಳಸಮ್ಮ, ದುರ್ಗಮ್ಮ ಇಂಥ ನಿರುಪಯುಕ್ತ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಹಿತ್ಯ, ಸಂಗೀತ , ಸಮಾಜಸೇವೆ ಇತ್ಯಾದಿ ಕ್ಷೇತ್ರಗಳನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸಿ ಸಂಶೋಧನೆ ಮಾಡುತ್ತಿರುವರು. ಕುವೆಂಪು ಒಕ್ಕಲಿಗ ವಿದ್ಯಾರ್ಥಿಗಳಿಗಾದರೆ, ಬೇಂದ್ರೆ ಬ್ರಾಹ್ಮಣರಿಗೆ, ಶಿವರುದ್ರಪ್ಪ ಲಿಂಗಾಯಿತರಿಗೆ, ಕುಂವೀ ಕುಂಬಾರರಿಗೆ, ಕಟ್ಟಿಮನಿ ಇನ್ನುಳಿದವರಿಗೆ ಈ ರೀತಿಯಾದ ಅಚ್ಚುಕಟ್ಟಾದ ವಿಂಗಡಣೆಯನ್ನು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಮಾಡುತ್ತಿರುವರು. ಜಾತಿ ವ್ಯವಸ್ಥೆಯ ವಿರುದ್ಧ ವೈಚಾರಿಕ ಪ್ರತಿಭಟನೆಗಿಳಿಯಬೇಕಿದ್ದ ವಿಶ್ವವಿದ್ಯಾಲಯಗಳೇ ಆ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬರುತ್ತಿವೆ. ಜಾತಿ, ಉಪಜಾತಿ, ಉಪಪಂಗಡಗಳ ಒಂದು ಶ್ರೇಣಿಕೃತ ವ್ಯವಸ್ಥೆಯನ್ನು ಈ ಜಾಗತೀಕರಣದ ದಿನಗಳಲ್ಲೂ ಅತ್ಯಂತ ಅಚ್ಚುಕಟ್ಟಾಗಿ ಕಟ್ಟಿ ಕೊಡುತ್ತಿರುವ ವಿಶ್ವವಿದ್ಯಾಲಯಗಳು ಮುಂದಿನ ದಿನಗಳಲ್ಲಿ ಜಾತಿ, ಉಪಜಾತಿಗೊಂದರಂತೆ ಪ್ರತ್ಯೇಕಗೊಂಡರೂ ಆಶ್ಚರ್ಯವಿಲ್ಲ.

ಮುಗಿಸುವ ಮುನ್ನ:

       ಮೊನ್ನೆ ಸಂಗೀತ ಗೋಷ್ಠಿಯೊಂದಕ್ಕೆ ಹೋಗಿದ್ದೆ. ಸಂಗೀತಗಾರರಲ್ಲಿ ಬಹುತೇಕರು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳಲ್ಲಿ ಕಲಿತು ಬಂದವರಾಗಿದ್ದರು. ಕೆಲವರನ್ನು ಪರಿಚಯಿಸಿಕೊಂಡು ಮಾತಿಗಿಳಿದೆ. ಎಲ್ಲರಿಗೂ 'ವೀರೆಶ್ವರ ಪುಣ್ಯಾಶ್ರಮ'ದಲ್ಲಿ ಕಲಿತು ಬಂದ ಅಭಿಮಾನವಿತ್ತು. ಮಾತಿನ ನಡುವೆ ಆ ಸಂಗೀತಗಾರರು ತಮ್ಮ ಗುರುಗಳ ಕುರಿತು ಅನೇಕ ವಿಷಯಗಳನ್ನು ಹೇಳಿದರು. ಅವರುಗಳು ಹೇಳಿದ ವಿಷಯಗಳಲ್ಲಿ ನನ್ನನ್ನು ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ಕಾಡಿದ ಸಂಗತಿ ಎಂದರೆ ಆ ಆಶ್ರಮದಲ್ಲಿ (ಸಂಗೀತ ಶಾಲೆ) ಜಾತಿಯ ಪ್ರಶ್ನೆಯೇ ಇಲ್ಲ. ಗುರುಗಳು ಪ್ರತಿಯೊಬ್ಬ ಶಿಕ್ಷಣಾರ್ಥಿಯನ್ನು ಆತನ ಹೆಸರಿನೊಂದಿಗೆ ಊರ ಹೆಸರನ್ನು ಸೇರಿಸಿ ಕರೆಯುತ್ತಿದ್ದರಂತೆ. ವಿದ್ಯಾರ್ಥಿಯ ಮನೆತನದ ಹೆಸರನ್ನು ತಪ್ಪಿಯೂ ಕೂಡ ಬಳಸುತ್ತಿರಲಿಲ್ಲವಂತೆ. ಅದೇಕೆ ಹೀಗೆ ಎಂದು ಪ್ರಶ್ನಿಸಿದಾಗ ಮನೆತನದ ಹೆಸರು ಜಾತಿ ಸೂಚಕವಾಗಿರುವುದರಿಂದ ಆಶ್ರಮದಲ್ಲಿ ಜಾತಿ ವ್ಯವಸ್ಥೆಯೊಂದು ಅನಾವರಣಗೊಳ್ಳುವುದು ಗುರುಗಳಿಗೆ ಇಷ್ಟವಿರಲಿಲ್ಲವಂತೆ. ನಿಜಕ್ಕೂ ಜ್ಯಾತ್ಯಾತೀತ ಪರಿಕಲ್ಪನೆ ಎಂದರೆ ಇದು. ಜಾತಿ ವ್ಯವಸ್ಥೆಯಿಂದ ದೂರವಿರುವ ಕಾರಣದಿಂದಲೇ ಇರಬೇಕು ಇವತ್ತಿಗೂ ಗದುಗಿನ 'ವೀರೆಶ್ವರ ಪುಣ್ಯಾಶ್ರಮ' ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಪ್ರಾಮುಖ್ಯತೆ ಪಡೆದಿಲ್ಲ. ಲೇ ಹಾರವ, ಜಂಗಮ, ಕುಂಬಾರ ಎಂದು ಜಾತಿಯಿಂದ ವಿದ್ಯಾರ್ಥಿಗಳನ್ನು ಕೂಗಿ ಕರೆಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಬುದ್ಧಿವಂತ ಪ್ರಾದ್ಯಾಪಕರುಗಳು ಪಂಡಿತ ಪುಟ್ಟರಾಜ ಗವಾಯಿಗಳಂಥ ವಿಶಾಲ ಮನೋಭಾವದ ವ್ಯಕ್ತಿತ್ವದಿಂದ ಕಲಿಯುವುದು ಬಹಳಷ್ಟಿದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, October 1, 2012

ಕ್ಷಮಿಸಿ ಬಿಡಿ ಬಾಪು ನಾವು ಕೃತಘ್ನರು

      ಮತ್ತೊಂದು ಗಾಂಧಿ ಜಯಂತಿ ಆಚರಣೆಗೆ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಸಿದ್ಧವಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್ ಎರಡರಂದು ಗಾಂಧೀಜಿ ಅವರ ಹುಟ್ಟುಹಬ್ಬ ಆಚರಿಸಿ ದೇಶ ರಾಷ್ಟ್ರಪಿತನ ಗುಣಗಾನ ಮಾಡುತ್ತದೆ. ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಅಂದು ಸಂಭ್ರಮವೋ ಸಂಭ್ರಮ. ಗಾಂಧಿ ಟೊಪ್ಪಿಗೆಗೆ ಅಂದು ಎಲ್ಲಿಲ್ಲದ ಬೇಡಿಕೆ ಮತ್ತು ಗೌರವ. ಕರವಸ್ತ್ರವಾದರೂ ಸರಿ ಜನ ಖಾದಿ ಬಟ್ಟೆಯನ್ನು ಖರೀದಿಸಿ ಪುನೀತರಾಗುತ್ತಾರೆ. 'ಈಶ್ವರ ಅಲ್ಲಾ ತೇರೋ ನಾಮ' ಹಾಡು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ. ವರ್ಷವಿಡೀ ಧೂಳಿನಿಂದ ಮುಚ್ಚಿ ಹೋದ ಗಾಂಧಿ ಪ್ರತಿಮೆಯನ್ನು ಸ್ವಚ್ಚಗೊಳಿಸಿ ಹೂಗಳಿಂದ ಅಲಂಕಾರಗೊಳಿಸಲಾಗುತ್ತದೆ. ಗಾಂಧೀಜಿ ಅವರ ನೆನಪಿಗಾಗಿ ಶಾಲಾ, ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗುತ್ತದೆ. ಮಹಾತ್ಮಾ ಗಾಂಧಿ ಹತ್ಯೆಯಾಗಿ ಹತ್ತಿರ ಹತ್ತಿರ ಅರವತ್ತು ವರ್ಷಗಳಾದವು. ಅನೇಕ ವರ್ಷಗಳಿಂದ ಗಾಂಧಿ ಜಯಂತಿ ಆಚರಿಸುತ್ತಿರುವ ನಾವು ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆವೆಯೇ? ಅಂಹಿಸಾ ಪರಮೋಧರ್ಮ ಎಂದು ಅಚಲವಾಗಿ ನಂಬಿದ್ದ ಗಾಂಧೀಜಿ ಅವರ ವಿಚಾರಧಾರೆ ಇಂದು ಬಳಕೆಯಲ್ಲಿದೆಯೇ? ಗಾಂಧೀಜಿ ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾಪಗಳೇನಾದವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸಮಯವಿದು. ದುರಂತವೆಂದರೆ ಇಂದು ನಾವು ಗಾಂಧೀಜಿ ಅವರನ್ನು ಬೇರೆಯೇ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಗಾಂಧೀಜಿ ಅವರ ಆದರ್ಶ, ತತ್ವಗಳೇನು ಎನ್ನುವುದಕ್ಕಿಂತ ಅವರಲ್ಲಿನ ದೌರ್ಬಲ್ಯಗಳು ಮತ್ತು ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ನಡೆದಿದೆ. ಗಾಂಧೀಜಿ ಅನೇಕ ದೌರ್ಬಲ್ಯಗಳಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಹೇಳುವ ಹುನ್ನಾರ ವ್ಯವಸ್ಥಿತವಾಗಿ ಅನಾವರಣಗೊಳ್ಳುತ್ತಿದೆ.

ಗಾಂಧಿ ಮತ್ತು ಸಿನಿಮಾ 

       ಇದುವರೆಗೆ ಗಾಂಧೀಜಿ ಪಾತ್ರವಿರುವ ಅನೇಕ ಸಿನಿಮಾಗಳು ಭಾರತೀಯ ಭಾಷೆಗಳಲ್ಲಿ ತಯ್ಯಾರಾಗಿವೆ. ಆ ಎಲ್ಲ ಸಿನಿಮಾಗಳಲ್ಲಿ ಗಾಂಧೀಜಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. 1982ರಲ್ಲಿ ರಿಚರ್ಡ್ ಆಟೆನ್ ಬರೋ ನಿರ್ದೇಶಿಸಿದ 'ಗಾಂಧಿ' ಸಿನಿಮಾ ಇದುವರೆಗೆ ನಾವು ನೋಡಿದ ಗಾಂಧಿ ಬದುಕು ಆಧರಿಸಿ ನಿರ್ಮಾಣಗೊಂಡ ಸಿನಿಮಾಗಳಲ್ಲೇ ಇದೊಂದು ಪರಿಪೂರ್ಣ ಚಿತ್ರ. ಆದರೆ ಕೆಲವು ವರ್ಷಗಳ ಹಿಂದೆ ಗಾಂಧೀಜಿ ಕುರಿತು ಸಿನಿಮಾವೊಂದು ಬಿಡುಗಡೆಯಾಯಿತು. ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಇದೊಂದು ವಿಭಿನ್ನ ಚಿತ್ರ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ ಗಾಂಧೀಜಿ ಅವರನ್ನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ತೋರಿಸಿರುವುದೇ ಅದರಲ್ಲಿನ ವಿಭಿನ್ನತೆ. ವಿಕ್ಷಿಪ್ತ ವ್ಯಕ್ತಿತ್ವದ ಹರಿಲಾಲ ಗಾಂಧಿ ಎನ್ನುವ ಮತ್ತೊಬ್ಬ ಗಾಂಧಿ ಈ ಚಿತ್ರದ ನಿಜವಾದ ಹೀರೋ. ಹರಿಲಾಲನ ಪಾತ್ರವನ್ನು ವೈಭವೀಕರಿಸಿ ಆ ಮೂಲಕ ಗಾಂಧೀಜಿ ಅವರ ಬದುಕಿನ ದೌರ್ಬಲ್ಯಗಳನ್ನು ತೋರಿಸಲು ಪ್ರಯತ್ನಿಸಲಾಗಿದೆ. ಗಾಂಧೀಜಿ ಮೊದಲ ಮಗನಾದ ಈ ಹರಿಲಾಲ ಕುಡುಕ ಮತ್ತು ಸೋಮಾರಿ. ವಿದ್ಯಾಭ್ಯಾಸವನ್ನು ಮಧ್ಯೆದಲ್ಲೇ ಬಿಟ್ಟ ಹರಿಲಾಲನದು ಬೇಜವಾಬ್ದಾರಿಯಿಂದ ವರ್ತಿಸುವ ವ್ಯಕ್ತಿತ್ವ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ತಂದೆ ಅದಕ್ಕಾಗಿ ಕುಟುಂಬವನ್ನು ನಿರ್ಲಕ್ಷಿಸುತ್ತಿರುವರು ಎನ್ನುವ ಮನೋಭಾವ ಆತನದು. ಈ ಕಾರಣದಿಂದಾಗಿಯೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಗಾಂಧೀಜಿಯನ್ನು ಅವಮಾನಿಸಿ ಅವರಿಗೆ ಮುಜುಗರವನ್ನುಂಟು ಮಾಡಲು ಪ್ರಯತ್ನಿಸುತ್ತಾನೆ. ತನ್ನ ತಾಯಿಯೊಂದಿಗೆ ತಂದೆ ಕ್ರೂರವಾಗಿ ವರ್ತಿಸುತ್ತಿರುವರು ಎನ್ನುವ ಸಂದೇಹ ಅವನನ್ನು ಕಾಡುತ್ತಿರುತ್ತದೆ. ಆದ್ದರಿಂದ ತಂದೆಯನ್ನು ಸಮಾಜದಲ್ಲಿ ತೆಲೆ  ಎತ್ತದಂತೆ ನಿರಂತರವಾಗಿ ಅವಮಾನ ಮಾಡುವುದು ಹರಿಲಾಲನ ಉದ್ದೇಶವಾಗಿರುತ್ತದೆ. ಹೀಗೆ ಗಾಂಧೀಜಿ ಮತ್ತು ಹರಿಲಾಲನ ನಡುವಿನ ಸಂಕೀರ್ಣ ಸಂಬಂಧದ ಚಿತ್ರಣ ಈ ಸಿನಿಮಾದಲ್ಲಿದೆ. ಗಾಂಧೀಜಿ ಮತ್ತು ಹರಿಲಾಲ ನಡುವಣ ಸಂಬಂಧ ಹೇಗಿತ್ತು ಎಂದು ಹೇಳಲು ಗಾಂಧೀಜಿ ಇವತ್ತು ನಮ್ಮ ನಡುವೆ ಇಲ್ಲ. ಅವರ ಹತ್ಯೆಯಾದ  ಆರು ತಿಂಗಳಿಗೆ  ಹರಿಲಾಲ ಅಸುನೀಗಿದ. ಇವರಿಬ್ಬರ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಕಸ್ತೂರಬಾ ಗಾಂಧೀಜಿ ಹತ್ಯೆಗಿಂತ ಮೊದಲೇ ಸಾವನ್ನಪ್ಪಿದರು. ಹೀಗಾಗಿ ಈ ಚಿತ್ರದಲ್ಲಿ ನೈಜತೆಗಿಂತ ಕಾಲ್ಪನಿಕತೆಯೇ ಹೆಚ್ಚು. ಈ ಚಿತ್ರವನ್ನು ನೋಡಿದ ವೀಕ್ಷಕರಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಗಾಂಧೀಜಿ ಅವರ ವೈಯಕ್ತಿಕ ಬದುಕಿನ ಘಟನೆಗಳಿಗೆ ಕಾಲ್ಪನಿಕತೆಯನ್ನು ಬೆರೆಸಿ ಸಿನಿಮಾ ತಯ್ಯಾರಿಸುವ ಅವಶ್ಯಕತೆಯಾದರೂ ಏನಿತ್ತು? ಗಾಂಧೀಜಿ ಅವರನ್ನು ಸಾಮಾನ್ಯ ವ್ಯಕ್ತಿಯಂತೆ ಚಿತ್ರಿಸುವುದರಿಂದ ಆಗುವ ಉಪಯೋಗವಾದರೂ ಏನು? ಸಿನಿಮಾದ ಮೂಲಕ ಹರಿಲಾಲ ಗಾಂಧಿಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಅಗತ್ಯವಾದರೂ ಏಕೆ? ಒಂದು ವಿಷಯವಂತೂ ಸ್ಪಷ್ಟವಾಗಿದೆ ಗಾಂಧೀಜಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಿನಿಮಾದ ಮೂಲಕ ಹಣ ಮತ್ತು ಪ್ರಶಸ್ತಿಗಳನ್ನು ಗಳಿಸುವುದು ಈ ಸಿನಿಮಾ ಜನರ ಉದ್ದೇಶವಾಗಿದೆ. ಆದರೆ ಅವರು ಅದಕ್ಕಾಗಿ ಬಳಸಿಕೊಂಡ ವಿಧಾನ ಮಾತ್ರ ಸರಿಯಿಲ್ಲ. ಒಬ್ಬ ವ್ಯಕ್ತಿ ಸತ್ತ ಅರವತ್ತು ವರ್ಷಗಳ ನಂತರ ಅವರ ವೈಯಕ್ತಿಕ ಬದುಕಿನ ಘಟನೆಗಳನ್ನು ತೆರೆದಿಟ್ಟು ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಹೇಳಲು ಹೊರಟಿರುವುದು ಅಕ್ಷಮ್ಯ ಅಪರಾಧ.

ಮೋಹನದಾಸ ಮತ್ತು ಪ್ರೇಮ ಪ್ರಕರಣ 

        ಗಾಂಧೀಜಿ ಅವರ ಬದುಕಿನ ಕುರಿತು ಅನೇಕ ಪುಸ್ತಕಗಳು ಪ್ರಕಟವಾಗಿವೆ. ಇತ್ತೀಚಿಗೆ ಪ್ರಕಟವಾದ ಪುಸ್ತಕವೊಂದರಲ್ಲಿ ಲೇಖಕರು ಗಾಂಧೀಜಿ ಅವರ ಬದುಕಿನಲ್ಲಿ ಪ್ರೇಮಪ್ರಕರಣವೊಂದು ನಡೆಯಿತೆಂದು ಹೇಳಿರುವರೆಂದು ಕೆಲವರು ವಿಮರ್ಶಿಸುವುದರ  ಮೂಲಕ ಓದುಗರ ಸಮೂಹದಲ್ಲಿ ಕುತೂಹಲ ಹುಟ್ಟಿಸುತ್ತಾರೆ. ಆ ಪ್ರಭೃತಿಗಳು  ಮುಂದುವರೆದು ಪುಸ್ತಕದ ಕೆಲವು ಪುಟಗಳು ಗಾಂಧೀಜಿ ಮತ್ತು ಬಂಗಾಳದ ಸಾಮಾಜಿಕ ಕಾರ್ಯಕರ್ತೆ ಸರಳಾದೇವಿಯ ನಡುವಣ ಸಂಬಂಧಕ್ಕೆ ಮೀಸಲಾಗಿವೆ ಎಂದು ಹೇಳುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರರ ಸೋದರ ಸಂಬಂಧಿ ಸರಳಾದೇವಿ ಹಾಗೂ ಮಹಾತ್ಮಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಷಯ ಪುಸ್ತಕದಲ್ಲಿದೆ ಎಂದು ಅನೇಕ ಪತ್ರಿಕೆಗಳು ವಿಮರ್ಶಾ ಲೇಖನವನ್ನು ಪ್ರಕಟಿಸಿದವು. ಆ ಸಂದರ್ಭ ಗಾಂಧೀಜಿಗೆ ಐವತ್ತು ವರ್ಷ ವಯಸ್ಸು ಮತ್ತು ಸರಳಾದೇವಿ ವಯಸ್ಸು ನಲವತ್ತೇಳು ಎಂದು ಹೇಳುವ ಅಕ್ಯಾಡೆಮಿಕ ವಿಮರ್ಶಕರು  ಗಾಂಧೀಜಿ ಅವರ ಆದರ್ಶಗಳನ್ನೆಲ್ಲ ಗಾಳಿಗೆ ತೂರಿರುವರು. ಕೊನೆಗೆ ಎರಡೂ ಕುಟುಂಬಗಳ ಒತ್ತಡದಿಂದಾಗಿ ಈ ಪ್ರೇಮ ಸಂಬಂಧ ಮುರಿದುಬಿತ್ತು ಎಂದೆನ್ನುವ ಇವರುಗಳು   ಅವರಿಬ್ಬರ ನಡುವೆ ಇದ್ದದ್ದು ಅದೊಂದು ಅಧ್ಯಾತ್ಮಿಕ ಪ್ರೀತಿ ಎಂದು ಮರೆತಿರುವುದು ಬಹುದೊಡ್ಡ ದುರಂತ.  ಇತಿಹಾಸದಲ್ಲಿ ಮುಚ್ಚಿಹೋದ ಸಂಗತಿಯೊಂದನ್ನು ಬೆಳಕಿಗೆ ತಂದಂತೆ ಕಪೋಕಲ್ಪಿತ ವಿಷಯಗಳನ್ನೆಲ್ಲ ಸೇರಿಸಿ ಗಾಂಧೀಜಿ ಅವರ ಕುರಿತು ಪುಸ್ತಕ ಬರೆಯುತ್ತಿರುವುದು ಮತ್ತು ಅಂಥ ಬರವಣಿಗೆಯನ್ನು ಪೂರ್ವಾಗ್ರಹ ಪೀಡಿತ ಮನೋಭಾವದಿಂದ ವಿಮರ್ಶಿಸುತ್ತಿರುವುದು ನಾವು ಗಾಂಧೀಜಿ ಅವರಿಗೆ ಮಾಡುತ್ತಿರುವ ಬಹುದೊಡ್ಡ ಅಪಮಾನ. ಹೀಗೆ ಅನಗತ್ಯವಾದ ವಿಷಯವನ್ನು ಅನಾವರಣಗೊಳಿಸುವುದರಿಂದ ಲೇಖಕರು ಹಾಗೂ ವಿಮರ್ಶಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರಯೋಜನವಾಗಲಾರದು. ಇಂಥ ಕಾಮಾಲೆ ಮನಸ್ಸಿನ ವಿಮರ್ಶೆಗಳಿಂದ   ಪುಸ್ತಕಗಳು ಪ್ರಕಟವಾದ ಕೆಲವೇ ದಿನಗಳಲ್ಲಿ ಅವುಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತವೆ. ಓದುಗರೊಬ್ಬರು  ಹೇಳಿದಂತೆ  ಈ ಪ್ರಕಾರದ  ವಿಮರ್ಶೆಗಳಿಂದ  ಪುಸ್ತಕಗಳ ಪ್ರತಿಗಳು ಮಾರಾಟವಾಗಿ ಲೇಖಕರ ಜೇಬುಗಳು ಭರ್ತಿಯಾಗುತ್ತವೆ. ಅನೇಕ ಇತಿಹಾಸಕಾರರು ಇಂಥ ವಿಷಯಗಳನ್ನು ಸಮರ್ಥಿಸುವುದರ ಮೂಲಕ ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುತ್ತಿರುವರು.

ಇನ್ನು ಕೆಲವು ಅಪ್ರಿಯ ಸತ್ಯಗಳು 

1. ಗಾಂಧಿ ಜಯಂತಿಯಂದು ಮಧ್ಯ ಮತ್ತು ಮಾಂಸದಂಗಡಿಗಳನ್ನು ತೆರೆಯಬಾರದು ಎನ್ನುವ ಆದೇಶವಿದ್ದರೂ ಇದರ ಉಲ್ಲಂಘನೆಯಾಗುತ್ತಿದೆ. ಗಾಂಧಿ ಜನ್ಮದಿನ ಎನ್ನುವುದನ್ನು ಮರೆತು ಜನರು ಮಾಂಸ ಮತ್ತು ಮಧ್ಯ ಸೇವನೆ ಮಾಡುವುದು ಸಾಮಾನ್ಯವಾಗಿದೆ.
2. ಗಾಂಧಿ ಜಯಂತಿಯಂದು ಸರ್ಕಾರಿ ರಜೆ ಇರುವುದರಿಂದ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿ ಆಚರಣೆ ವಿರಳವಾಗುತ್ತಿದೆ.
3. ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನಗಳಂದು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ.
4. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗಾಂಧೀಜಿ ಭಾವಚಿತ್ರ ಕಣ್ಮರೆಯಾಗುತ್ತಿದೆ.
5. ಗಾಂಧೀಜಿ ಪ್ರತಿಮೆಗೆ ಅಪಮಾನವಾದರೂ ಜನರು ಪ್ರತಿಭಟಿಸುತ್ತಿಲ್ಲ. ಸರ್ಕಾರ ಕೂಡ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ದಿಸೆಯಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
6. ಭಾರತದ ನೋಟುಗಳಲ್ಲಿರುವ ಗಾಂಧೀಜಿ ಅವರ ಚಿತ್ರವನ್ನು ವಿರೂಪಗೊಳಿಸಿ ಆನಂದ ಪಡೆಯುವ ವಿಕೃತರ ಸಂಖ್ಯೆ ಹೆಚ್ಚುತ್ತಿದೆ.
7. ಗಾಂಧೀಜಿ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂದಗಾಮಿ ಗುಂಪಿಗೆ ಸೇರಿದವರಾಗಿದ್ದು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆ ಅತ್ಯಲ್ಪ ಎಂದು ಹೇಳುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.
8. ಗಾಂಧೀಜಿ ಕುರಿತು ಅನೇಕ ಜೋಕುಗಳು ಚಾಲ್ತಿಯಲ್ಲಿವೆ. ವ್ಯಂಗ್ಯ ಚಿತ್ರಕಾರರಿಗಂತೂ ಗಾಂಧೀಜಿ ಚಿತ್ರ ರಚನೆ ಅತ್ಯಂತ ಸರಳ. ಗಾಂಧೀಜಿ ಹಾಸ್ಯ ಬರಹಗಾರರಿಗೆ ಮತ್ತು ವ್ಯಂಗ್ಯ ಚಿತ್ರಕಾರರಿಗೆ ವಿಷಯವಸ್ತುವಾಗುತ್ತಿರುವುದು ಅತ್ಯಂತ ಖೇದದ ಸಂಗತಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ