Thursday, September 18, 2014

ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ


















 

                                    (ಸೆಪ್ಟೆಂಬರ್ ೧೮ ವಿಷ್ಣುವರ್ಧನ್ ಜನ್ಮದಿನದ ನಿಮಿತ್ಯ ಈ ಲೇಖನ) 


           ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು 'ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು' ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೇ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ 'ಸಾಹಸ ಸಿಂಹ' ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ identity ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಿಲು, ಬಂಧನ, ಸುಪ್ರಭಾತದಂಥ ಭಾವ ಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರ ಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು  ತಾವು ತೆರೆದುಕೊಂಡರು. ಹೀಗೆ  ಪ್ರಯತ್ನಿಸದೇ  ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ brand   ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿ ಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತು ಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ಬದುಕಿರುತ್ತಿದ್ದರೆ ಅವರನ್ನು ನಾವು ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್ ೧೮) ವಿಷ್ಣುವರ್ಧನ್ ತಮ್ಮ  ೬೪ ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.

                ವಿಷ್ಣುವರ್ಧನ್ ಆಕಸ್ಮಿಕವಾಗಿ ಕನ್ನಡ ಚಿತ್ರರಂಗಕ್ಕೆ ಬಂದವರಲ್ಲ. ನಟನೆಯ ಒಂದಿಷ್ಟು ತಯ್ಯಾರಿ ಮಾಡಿಕೊಂಡೇ ಈ ನಟ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿನ ಅಭಿನಯ ಸಿನಿಮಾ ಪ್ರಪಂಚಕ್ಕೆ ಕರೆತಂದಿತು. ಅಭಿನಯಿಸಿದ ಮೊದಲ ಸಿನಿಮಾ 'ವಂಶ ವೃಕ್ಷ'. ಬಿ. ವಿ. ಕಾರಂತರ ಗರಡಿಯಲ್ಲಿನ ಸಿನಿಮಾ ಅಭಿನಯದ ತಾಲೀಮು ನಂತರದ ದಿನಗಳಲ್ಲಿ ಅಭಿನಯ ಪ್ರವೃತ್ತಿಗೆ ಭದ್ರ ಬುನಾದಿ ಹಾಕಿತು. ಹೆಸರು ಬದಲಿಸಿಕೊಂಡು ಕುಮಾರನಿಂದ ವಿಷ್ಣುವರ್ಧನನಾಗಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಪ್ರಥಮ ಚಿತ್ರ 'ನಾಗರ ಹಾವು'. ಪುಟ್ಟಣ್ಣ ಕಣಗಾಲ್ ಆ ಹೊತ್ತಿಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕನೆಂದು ಗುರುತಿಸಿಕೊಂಡಿದ್ದರು. ಗೆಜ್ಜೆಪೂಜೆ,  ಶರ ಪಂಜರ, ಬೆಳ್ಳಿ  ಮೋಡ ದಂಥ ನಾಯಕಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಅಭಿನಯಿಸುವ ಕಲಾವಿದರಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಡುವ ನಿರ್ದೇಶಕ ಈ ಪುಟ್ಟಣ್ಣ ಕಣಗಾಲ್ ಎನ್ನುವ ಮಾತು ಆ ದಿನಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ದಟ್ಟವಾಗಿ ಕೇಳಿ ಬರುತ್ತಿತ್ತು. ಜೊತೆಗೆ ಈ ನಿರ್ದೇಶಕ ನಿರ್ದೇಶಿಸಿದ ಬಹಳಷ್ಟು ಸಿನಿಮಾಗಳು ನಾಯಕಿ ಪ್ರಧಾನ ಚಿತ್ರಗಳೇ ಆಗಿರುತ್ತಿದ್ದವು. ಈಶ್ವರಿ ಸಂಸ್ಥೆಯ ಎನ್. ವೀರಾಸ್ವಾಮಿ ನಾಯಕ ಪ್ರಧಾನ ಸಿನಿಮಾ ಮಾಡಲು ಹೊರಟಾಗ ಈ ಸಂಸ್ಥೆಯ ಜನಪ್ರಿಯತೆ ಮತ್ತು ಅವರಲ್ಲಿನ ಸಿನಿಮಾ ನಿರ್ಮಾಣ  ಕುರಿತಾದ  ಬದ್ಧತೆಯ ಪರಿಣಾಮ ಪುಟ್ಟಣ್ಣ ಕಣಗಾಲ್ ಸಿನಿಮಾ ಮಾಡಿಕೊಡಲು ಒಪ್ಪಿದರು. ತರಾಸು ಅವರ ಕಾದಂಬರಿ 'ನಾಗರ ಹಾವು' ಸಿನಿಮಾದ ಕಥಾವಸ್ತುವಾಯಿತು. ಹೊಸ ನಟನೊಬ್ಬನನ್ನು ನಾಯಕನಾಗಿ ಪರಿಚಯಿಸಬೇಕೆನ್ನುವ ನಿರ್ದೇಶಕರ ಮತ್ತು ನಿರ್ಮಾಪಕರ ಮಹತ್ವಾಕಾಂಕ್ಷೆಯಿಂದಾಗಿ ವಿಷ್ಣುವರ್ಧನ್ ಎನ್ನುವ ಪ್ರತಿಭೆ ಕನ್ನಡ ಸಿನಿಮಾ ರಂಗದಲ್ಲಿ ಅರಳಿಕೊಂಡಿತು. ಆರತಿ, ಜಯಂತಿ, ಲೀಲಾವತಿ, ಅಶ್ವತ್ಥ್, ಎಂ. ಪಿ. ಶಂಕರ ಅವರಂಥ ಪ್ರತಿಭಾನ್ವಿತರು ಅಭಿನಯಿಸಿದ 'ನಾಗರ ಹಾವು' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಕನ್ನಡ ಸಿನಿಮಾ ರಂಗದಲ್ಲಿ ರಾಜ ಕುಮಾರ ನಂತರ ಹೊಸ ಸೂಪರ್ ಸ್ಟಾರ್ ವಿಷ್ಣುವರ್ಧನ್ ರೂಪದಲ್ಲಿ ಜನ್ಮತಳೆದ.

                  ವಿಷ್ಣುವರ್ಧನ್ ವೃತ್ತಿ ಬದುಕಿಗೆ 'ನಾಗರ ಹಾವು' ನಂಥ ಹಿಟ್ ಚಿತ್ರದ ಮೂಲಕ ಭದ್ರ ಬುನಾದಿ ಒದಗಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ವೃತ್ತಿ ಬದುಕಿನಲ್ಲಿ ಅದೇ ವಿಷ್ಣುವರ್ಧನ್ ಗಾಗಿ ಮತ್ತೊಂದು ಸಿನಿಮಾ ನಿರ್ದೆಶಿಸಲೇ ಇಲ್ಲ. ಪುಟ್ಟಣ್ಣ ಕಣಗಾಲ್ ಚಿತ್ರರಂಗಕ್ಕೆ ಪರಿಚಯಿಸಿದ ಅನೇಕ ಕಲಾವಿದರು ಮತ್ತೆ ಮತ್ತೆ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆಗಳಿವೆ. ಆದರೆ ವಿಷ್ಣುವರ್ಧನ್ ವಿಷಯದಲ್ಲಿ ಮಾತ್ರ ಈ ಮಾತು ಸುಳ್ಳಾಯಿತು. ತಾನೊಬ್ಬ ಸ್ಟಾರ್ ನಿರ್ದೇಶಕ ಎನ್ನುವ ಅಹಂ ಪುಟ್ಟಣ್ಣ ಕಣಗಾಲರಿಗಿದ್ದಂತೆ ನಾಯಕನಾಗಿ ಅಭಿನಯಿಸಿದ ಪ್ರಥಮ ಚಿತ್ರದಲ್ಲೇ ದೊರೆತ ಅದ್ಭುತ ಯಶಸ್ಸು ವಿಷ್ಣುವರ್ಧನ್ ಗೂ ತಾನೊಬ್ಬ ಜನಪ್ರಿಯ ನಟ ಎನ್ನುವ ಅಹಂಗೆ ಕಾರಣವಾಯಿತೇನೋ? ಪರಸ್ಪರರಲ್ಲಿನ ಈ ಅಹಂಕಾರದ ಗುಣವೇ ಅವರಿಬ್ಬರೂ ಮತ್ತೆ ಜೊತೆಗೂಡಿ ಮತ್ತೊಂದು ಯಶಸ್ಸನ್ನು ಕೊಡಲು ಸಾಧ್ಯವಾಗಲಿಲ್ಲ. ಜೊತೆಗೆ ಆ ಹೊತ್ತಿಗಾಗಲೇ ವಿಷ್ಣುವರ್ಧನ್ ಸುತ್ತ ಅವಕಾಶವಾದಿ ನಿರ್ಮಾಪಕರ ಒಂದು ಪಡೆ ಭದ್ರ ಕೋಟೆಯನ್ನೇ ನಿರ್ಮಿಸಿತ್ತು. ಆ ಕೋಟೆಯಿಂದ ಹೊರಬರಲು ವಿಷ್ಣುವರ್ಧನ್ ಗೆ ಬಹಳಷ್ಟು ಸಮಯ ಹಿಡಿಯಿತು.

                  ವಿಷ್ಣುವರ್ಧನ್ 'ಗಂಧದ ಗುಡಿ' ಸಿನಿಮಾದಲ್ಲಿ ಖಳನ ಪಾತ್ರದಲ್ಲಿ ನಟಿಸಿದ್ದು ನನ್ನನ್ನು ಆ ನಟನ ವಿಷಯವಾಗಿ ಇವತ್ತಿಗೂ ಕಾಡುವ ಸಂಗತಿಗಳಲ್ಲೊಂದು. ಹಾಗೆಂದ ಮಾತ್ರಕ್ಕೆ ಕಲಾವಿದನಾದವನು ಒಂದೇ ಬಗೆಯ ಪಾತ್ರಗಳಿಗೆ  ತನ್ನ ನಟನೆಯನ್ನು ಸೀಮಿತಗೊಳಿಸಿಕೊಳ್ಳಬೇಕು ಎನ್ನುವುದು ನನ್ನ ವಾದವಲ್ಲ. ಆದರೆ ೧೯೭೦ ರ ದಶಕದಲ್ಲಿ ಒಂದು ಇಮೇಜಿಗಾಗಿ ಹಂಬಲಿಸುತ್ತಿದ್ದ ನಾಯಕ ನಟರು ಯಾವತ್ತೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿರಲಿಲ್ಲ. ಹಾಗೊಂದು ವೇಳೆ ನಾಯಕ ನಟನನ್ನು  ನೆಗೆಟಿವ್ ಪಾತ್ರದಲ್ಲಿ ತೋರಿಸುವುದು ಸಿನಿಮಾ ಕಥೆಗೆ ಅನಿವಾರ್ಯವಾದರೆ ಆಗ ದ್ವಿಪಾತ್ರದ ಸೃಷ್ಟಿಯಾಗುತ್ತಿತ್ತು. ಈಗ ನಾನು ಮತ್ತೆ ವಿಷ್ಣುವರ್ಧನ್ ವಿಷಯಕ್ಕೆ ಬರುತ್ತೇನೆ. ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ಅಪಾರ ಜನಪ್ರಿಯತೆ ಮತ್ತು ಅದ್ಭುತ ಯಶಸ್ಸನ್ನು ತಂದುಕೊಟ್ಟಿತ್ತು. ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಲು ಚಿತ್ರರಂಗದ ಅವಕಾಶದ ಬಾಗಿಲು ತೆರೆದುಕೊಂಡಿತ್ತು. ಸಿನಿಮಾ ರಂಗದಲ್ಲಿ ಭದ್ರವಾಗಿ ನೆಲೆಯೂರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿದ್ದವು. ಹೀಗಿದ್ದೂ 'ಗಂಧದ ಗುಡಿ' ಚಿತ್ರಕ್ಕೆ ವಿಷ್ಣುವರ್ಧನ್ ಅವರನ್ನು ಖಳನ  ಪಾತ್ರಕ್ಕೆ ಆಯ್ಕೆ ಮಾಡಿದ್ದು ಒಂದು ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರ ತಪ್ಪು ಎಂದಾದರೆ  ವಿಷ್ಣು ಆ ಪಾತ್ರವನ್ನು ಒಪ್ಪಿಕೊಂಡಿದ್ದು ಇನ್ನೊಂದು ತಪ್ಪು. ಪಾತ್ರದ ಆಯ್ಕೆಯಲ್ಲಿ ಎಡವಿದ ಈ ಒಂದು ಘಟನೆ ಆ ನಟನ ದುಡುಕಿನ ನಿರ್ಧಾರ ಎಂದೆನಿಸಿದರೂ ಎಲ್ಲೋ ಕೆಲವರ ಋಣದ ಭಾರ ಆ ಸಂದರ್ಭ ವಿಷ್ಣುವರ್ಧನ್ ಗೆ ಅಂಥದ್ದೊಂದು ಪಾತ್ರ ಒಪ್ಪಿಕೊಳ್ಳುವಂತೆ ಮಾಡಿತು ಎನ್ನುವುದು ಸಿನಿಮಾ ವಲಯದಲ್ಲಿ ಇವತ್ತಿಗೂ ಕೇಳಿ ಬರುತ್ತಿರುವ ಮಾತಿದು. ಒಟ್ಟಿನಲ್ಲಿ ಆ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ ನಂತರ ವಿಷ್ಣುವರ್ಧನ್ ಖಾಸಗಿ ಮತ್ತು ವೃತ್ತಿ ಬದುಕುಗಳೆರಡರಲ್ಲೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.

                 ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟ. 'ನಾಗರ ಹಾವು' ಸಿನಿಮಾದ ಯಶಸ್ಸು ಅವರಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸಿತು. ನಾಗರ ಹೊಳೆ, ಭಾಗ್ಯ ಜ್ಯೋತಿ, ಬಂಗಾರದ ಗುಡಿ, ಸಿರಿತನಕ್ಕೆ ಸವಾಲ್ ನಂಥ ಅನೇಕ ಹಿಟ್ ಸಿನಿಮಾಗಳು ಅವರನ್ನು ಜನಪ್ರಿಯತೆ ಮತ್ತು ಯಶಸ್ಸಿನ ಉತ್ತುಂಗಕ್ಕೇರಿಸಿದವು. ಹೀಗೆ ಯಶಸ್ಸಿನ ಏಣಿಯನ್ನು ಹತ್ತಿ ಕುಳಿತ ಈ ನಟ ಕನ್ನಡ ಚಿತ್ರರಂಗದ ಎರಡನೇ ನಾಯಕನಾಗಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡರು. ಈ ಸಂದರ್ಭದಲ್ಲೇ ವಿಷ್ಣುವರ್ಧನ್ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಯಿತು. ವಿಷ್ಣುವರ್ಧನ್ ಆಗಮನದ ವೇಳೆಗಾಗಲೇ ರಾಜಕುಮಾರ ನೂರ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದ ಏಕಮೇವಾ ದ್ವಿತೀಯ ನಾಯಕನಾಗಿ ಪ್ರತಿಷ್ಥಾಪನೆಗೊಂಡಿದ್ದರು. ಕನ್ನಡ ನಾಡಿನ ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದ ಪ್ರೇಕ್ಷಕರು ರಾಜಕುಮಾರ ಅಭಿನಯವನ್ನು ಮೆಚ್ಚಿ ಕೊಂಡಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ಪೈಪೋಟಿಯನ್ನೇ ಕಾಣದಿದ್ದ ರಾಜಕುಮಾರ ಸಿನಿಮಾಗಳಿಗೆ ವಿಷ್ಣುವರ್ಧನ್ ಸಿನಿಮಾಗಳು ಪ್ರಬಲ ಸ್ಪರ್ಧೆಯೊಡ್ಡಲಾರಂಭಿಸಿದವು. ರಾಜಕುಮಾರ ಗುಂಪಿನ ಖಾಯಂ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ಹೊಸ ನಟನೊಬ್ಬನ ಆಗಮನದ ಪರಿಣಾಮ ಅವನನ್ನು ಹುಡುಕಿಕೊಂಡು ವಲಸೆ ಹೋಗಲಾರಂಭಿಸಿದರು. ಆಗಲೇ ರಾಜಕುಮಾರ ಆಸ್ಥಾನದ ಖಾಯಂ ಹೊಗಳು ಭಟ್ಟರಾಗಿ ಠಳಾಯಿಸಿದ್ದ ನಿರ್ಮಾಪಕರು ಮತ್ತು ನಿರ್ದೇಶಕರು ಎಚ್ಚೆತ್ತು ಕೊಂಡರು. ರಾಜಕುಮಾರ ಅವರನ್ನು ಓಲೈಸುತ್ತ ತಮ್ಮ ಹಣದ ಥೈಲಿಯನ್ನು ತುಂಬಿಕೊಂಡ ನಿರ್ಮಾಪಕರಿಗೆ ಮತ್ತು ಸಿನಿಮಾ ವಿತರಕರಿಗೆ ವಿಷ್ಣುವರ್ಧನ್ ಆಗಮನ ಮತ್ತು ಬೆಳವಣಿಗೆ ತೊಡಕಾಗಿ ಪರಿಣಮಿಸಿತು. ಇನ್ನೊಂದೆಡೆ ರಾಜಕುಮಾರ ಅವರನ್ನು ಹಾಕಿಕೊಂಡು ಸಿನಿಮಾಗಳನ್ನು ನಿರ್ಮಿಸಲು ಅವಕಾಶ ವಂಚಿತರಾದ ನಿರ್ಮಾಪಕರ  ಪಾಲಿಗೆ ವಿಷ್ಣುವರ್ಧನ್ ಹೊಸ ಭರವಸೆಯಾಗಿ ಗೋಚರಿಸತೊಡಗಿದರು. ಹೀಗೆ ರಾಜಕುಮಾರ ಪರ ಮತ್ತು ವಿರೋಧಿ ಗುಂಪುಗಳು ವಿಷ್ಣುವರ್ಧನ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಪೈಪೋಟಿಯ ನಾಟಕ ಹೆಣೆಯತೊಡಗಿದರು. ಅಂಥದ್ದೊಂದು ನಾಟಕಕ್ಕೆ ರಾಜಕುಮಾರ ಮತ್ತು ಅವರ ಕುಟುಂಬ ವರ್ಗದವರು ಆವತ್ತೇ ತಣ್ಣಗೆ ಪ್ರತಿಕ್ರಿಯಿಸಿದ್ದರೆ ವಿಷ್ಣುವರ್ಧನ್ ವೃತ್ತಿ ಬದುಕು ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿರಲಿಲ್ಲ. ಜೊತೆಗೆ ಅಸುರಕ್ಷತೆಯ ಭಯ ಈ ನಟನನ್ನು ಬದುಕಿನ ಕೊನೆಯ ದಿನಗಳವರೆಗೂ ಕಾಡುತ್ತಿರಲಿಲ್ಲ.

                   ಪೈಪೋಟಿ ಮತ್ತು ಸ್ಪರ್ಧೆಯ ಪರಿಣಾಮ ವಿಷ್ಣುವರ್ಧನ್ ಗೆ ರಾಜಕುಮಾರ ಅವರ ಪ್ರಭಾವಳಿಯಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ರಾಜಕುಮಾರ ಪಾತ್ರಗಳ ನೆರಳು ಸೋಕದಂತೆ ಅಭಿನಯಿಸುವ ಅವಕಾಶವನ್ನು ಅವರನ್ನು ಸುತ್ತುವರಿದ ನಿರ್ದೇಶಕರು ಮತ್ತು ನಿರ್ಮಾಪಕರುಗಳು ಮಾಡಿಕೊಡಲೇ ಇಲ್ಲ. ಮತ್ತೊಬ್ಬ ರಾಜಕುಮಾರನನ್ನು ಸೃಷ್ಟಿಸುವ ಭರಾಟೆಯಲ್ಲಿ ಅವರೆಲ್ಲ ವಿಷ್ಣುವರ್ಧನ್ ಎನ್ನುವ ನಟನನ್ನು ರಾಜಕುಮಾರ ನಡೆದ ದಾರಿಯಲ್ಲೇ ನಡೆಯುವಂತೆ ಮಾಡಿದರು. ಪರಿಣಾಮವಾಗಿ ಇಬ್ಬರ ಸಿನಿಮಾಗಳು ಒಂದೇ ರೀತಿಯ ಕಥೆ ಮತ್ತು ಪಾತ್ರಗಳಿಂದ ಸೊರಗಿಹೋದವು. ಒಬ್ಬರು ಸಾಹಸ ಸಿಂಹನಾದರೆ ಇನ್ನೊಬ್ಬರು ಕೆರಳಿದ ಸಿಂಹ ಎಂದು ಗರ್ಜಿಸಿದರು. ಒಬ್ಬ ನಟ ಸಂಪತ್ತಿಗೆ ಸವಾಲು ಹಾಕಿದರೆ ಇನ್ನೊಬ್ಬ ನಟ ಸಿರಿತನಕ್ಕೆ ಸವಾಲು ಎಂದು ತೊಡೆ ತಟ್ಟಿದರು. ಒಟ್ಟಿನಲ್ಲಿ ರಾಜಕುಮಾರ ಮತ್ತು ವಿಷ್ಣುವರ್ಧನ್ ಒಂದೇ ದೋಣಿಯ ಪಯಣಿಗರಾದರು. ಇಲ್ಲಿ ವಿಷ್ಣುವರ್ಧನ್ ಗೆ ಒಬ್ಬ ಪರಿಪೂರ್ಣ ಕಲಾವಿದನಾಗಿ ಬೆಳೆಯುವ ವಿಪುಲ ಅವಕಾಶವಿದ್ದರೂ ಆ ನಟನನ್ನು ಸುತ್ತುವರಿದ ಅವಕಾಶವಾದಿಗಳಿಗೆ ಅವರನ್ನು ರಾಜಕುಮಾರ್ ಗೆ ಪ್ರಬಲ ಸ್ಪರ್ಧೆ ಒಡ್ಡುವ ನಟನಾಗಿ ಬೆಳೆಸುವುದರಲ್ಲೇ ಹೆಚ್ಚಿನ ಆಸಕ್ತಿಯಿತ್ತು. ಇಂಥ ಅವಕಾಶವಾದಿಗಳಿಂದಾಗಿಯೇ ಪುಟ್ಟಣ್ಣ ಕಣಗಾಲ್, ಗೀತ ಪ್ರಿಯರಂಥ ಪ್ರತಿಭಾನ್ವಿತ ನಿರ್ದೇಶಕರ ಒಂದೊಂದು ಸಿನಿಮಾಕ್ಕೆ ಮಾತ್ರ ವಿಷ್ಣುವರ್ಧನ್ ಅಭಿನಯ ಸೀಮಿತವಾಯಿತು. ಇಂಥದ್ದೊಂದು ನಿರಾಸೆಯ ನಡುವೆಯೂ ಎಸ್. ವಿ. ರಾಜೇಂದ್ರ ಸಿಂಗ ಬಾಬು, ಸುನಿಲ ಕುಮಾರ ದೇಸಾಯಿ, ದಿನೇಶ ಬಾಬು, ಎಸ್ ನಾರಾಯಣ ಈ ನಿರ್ದೇಶಕರು ವಿಷ್ಣುವರ್ಧನ್ ಅವರೊಳಗಿನ ಕಲಾವಿದನನ್ನು ಸಮರ್ಥವಾಗಿ ದುಡಿಸಿಕೊಂಡರು. ಬಂಧನ, ಮುತ್ತಿನಹಾರ, ಸುಪ್ರಭಾತ, ಲಾಲಿ, ಉತ್ಕರ್ಷ, ಸಿರಿವಂತ, ವೀರಪ್ಪ ನಾಯ್ಕ ಸಿನಿಮಾಗಳು ಕನ್ನಡದ ಸರ್ವಕಾಲಿಕ ಶ್ರೇಷ್ಠ ಸಿನಿಮಾಗಳು ಎನ್ನುವ ಗೌರವಕ್ಕೆ ಪಾತ್ರವಾದವು.

                  ವಿಷ್ಣುವರ್ಧನ್ ಅವರಂಥ ಪ್ರತಿಭಾನ್ವಿತ ಕಲಾವಿದನನ್ನು ಅತ್ಯಂತ ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗ ಎಡವಿತು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾದ ಸಂಗತಿ. ವೃತ್ತಿ ಬದುಕಿನ ಆರಂಭದಲ್ಲಿ ಸಾಹಸ ಪ್ರಧಾನ ಪಾತ್ರಗಳಿಗೆ ಸೀಮಿತವಾಗಿದ್ದ ತಮ್ಮ ಅಭಿನಯದ ಇತಿಮಿತಿಯಿಂದ ಹೊರಬರಲು ವಿಷ್ಣುವರ್ಧನ್ ಗೆ ಹಲವು ವರ್ಷಗಳೇ ಬೇಕಾದವು. ಬಂಧನ ಸಿನಿಮಾದಿಂದ ವಿಷ್ಣುವರ್ಧನ್ ವೃತ್ತಿ ಬದುಕು ಬೇರೊಂದು ಮಗ್ಗುಲು ಹೊರಳಿದರೂ ಆ ಸಿನಿಮಾದ ಯಶಸ್ಸನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಾಪಕರು ಮತ್ತು ನಿರ್ದೇಶಕರು ಆ ನಟನನ್ನು ಮತ್ತೆ ಮತ್ತೆ ಬಂಧನದಂಥ ಪಾತ್ರದಲ್ಲೇ ಚಿತ್ರಿಸತೊಡಗಿದರು. ಇದು ವಿಷ್ಣುವರ್ಧನ್ ವೃತ್ತಿ ಬದುಕಿನ ದುರಾದೃಷ್ಟ. ಯಜಮಾನ ಚಿತ್ರದ ಯಶಸ್ಸಿನ ನಂತರ ವಿಷ್ಣುವರ್ಧನ್ ಗೆ ಮತ್ತೆ ಅಂಥದ್ದೇ ಪಾತ್ರಗಳು ಸಿಗತೊಡಗಿದವು. ಅವರ ವೃತ್ತಿ ಬದುಕಿನ ಕೊನೆಯ ಸಿನಿಮಾ 'ಆಪ್ತ ರಕ್ಷಕ' ಕೂಡ 'ಆಪ್ತ ಮಿತ್ರ' ದ ಯಶಸ್ಸಿನ ಮುಂದುವರೆದ ಭಾಗ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಜೊತೆಗೆ ವಿಷ್ಣುವರ್ಧನ್ ವಯಸ್ಸಿಗೊಪ್ಪುವ ಪಾತ್ರಗಳಲ್ಲಿ ಅಭಿನಯಿಸಿದ್ದು ತುಂಬ ಕಡಿಮೆ. ಇಲ್ಲೂ ರಾಜಕುಮಾರ ವೃತ್ತಿ ಬದುಕಿನ ಪ್ರಭಾವವನ್ನು ಕಾಣುತ್ತೇವೆ. ರಾಜಕುಮಾರ ಹೇಗೆ ಕೊನೆಯವರೆಗೂ ಮರಸುತ್ತುವ ಪಾತ್ರಗಳಲ್ಲೇ ಕಾಣಿಸಿಕೊಂಡರೋ ವಿಷ್ಣುವರ್ಧನ್ ಸಹ ಅಂಥದ್ದೇ ಪಾತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ವಯೋಸಹಜ ಪಾತ್ರಗಳಲ್ಲಿ ಅಭಿನಯಿಸಿದ್ದರೆ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಂದ ಇನ್ನಷ್ಟು ಚಾರಿತ್ರಿಕ ಪಾತ್ರಗಳು ಸೃಷ್ಟಿಯಾಗುತ್ತಿದ್ದವು.

      ಕಲಾತ್ಮಕ ಸಿನಿಮಾಗಳಿಗೆ ವಿಮುಖರಾಗಿ ನಡೆದಿದ್ದು ಕೂಡ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನ ವಿರೋದಾಭಾಸಗಳಲ್ಲೊಂದು. ವಿಷ್ಣುವರ್ಧನ್ ಅಭಿನಯದ ಮೊದಲ ಸಿನಿಮಾ 'ವಂಶ ವೃಕ್ಷ' ಅದೊಂದು ಕಲಾತ್ಮಕ ಸಿನಿಮಾ. ಹೆಸರು ಮತ್ತು ಹಣ ಮಾಡುವುದಕ್ಕಿಂತ ಮೊದಲು ಸಿನಿಮಾ ಅಭಿನಯಕ್ಕಾಗಿ ಹಂಬಲಿಸುತ್ತಿದ್ದ ಈ ನಟ ಕಲಾತ್ಮಕ ಸಿನಿಮಾದಲ್ಲಿ ಅವಕಾಶ ದೊರೆತಾಗ ಅದನ್ನು ಸಹಜವಾಗಿಯೇ ಒಪ್ಪಿಕೊಂಡರು. ಆ ನಂತರದಲ್ಲಿ ದೊರೆತ ಜನಪ್ರಿಯತೆ ಅವರನ್ನು ಕಲಾತ್ಮಕ ಸಿನಿಮಾಗಳಿಂದ ವಿಮುಖವಾಗಿಸಿತು. ಇಮೇಜಿಗೆ ಧಕ್ಕೆ ಬರಬಹುದೆನ್ನುವ ಕಾರಣದಿಂದ ವಿಷ್ಣುವರ್ಧನ್ ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ನಟಿಸಲಿಲ್ಲ. ಗಿರೀಶ್ ಕಾಸರವಳ್ಳಿ, ಲಕ್ಷ್ಮಿ ನಾರಾಯಣ ಅವರಂಥ ಸೃಜನಶೀಲ ನಿರ್ದೇಶಕರು ಈ ಕಲಾವಿದನನ್ನು ನಿರ್ದೇಶಿಸಲು ಸಾಧ್ಯವಾಗಲೇ ಇಲ್ಲ. ಶಂಕರ್ ನಾಗ್, ಅನಂತ ನಾಗ್, ಗಿರೀಶ್ ಕಾರ್ನಾಡ್ ರಂಥ ಕಲಾವಿದರು ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಪ್ರಕಾರದ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಉದಾಹರಣೆ ಕಣ್ಣೆದುರೇ ಇರುವಾಗ ವಿಷ್ಣುವರ್ಧನ್ ಮಾತ್ರ ನಟಿಸುವ ಮನಸು ಮಾಡಲೇ ಇಲ್ಲ. ಬೇಡವೆಂದರೂ ಇಲ್ಲೂ ಅದೇ ರಾಜಕುಮಾರ ನೆರಳು ವಿಷ್ಣುವರ್ಧನ್ ವೃತ್ತಿ ಬದುಕಿನ ಮೇಲೆ ತನ್ನ ಮೈ ಚಾಚಿಕೊಳ್ಳುತ್ತದೆ. ರಾಜಕುಮಾರ ಒಂದೇ ಒಂದು ಕಲಾತ್ಮಕ ಸಿನಿಮಾದಲ್ಲಿ ನಟಿಸದೆ ಇದ್ದದ್ದು ವಿಷ್ಣುವರ್ಧನ್ ಗೆ ಆದರ್ಶವಾಗಿಯೋ ಇಲ್ಲವೇ ಪೈಪೋಟಿಯಾಗಿಯೋ ಕಾಣಿಸಿರಲೂಬಹುದು.

                   ರಾಜಕುಮಾರ ವೃತ್ತಿ ಬದುಕಿಗೆ ಪಾರ್ವತಮ್ಮನವರ ಕಾವಲಿತ್ತು. ವರದಪ್ಪನವರಂಥ ಸಹೋದರನ ಬೆಂಬಲವಿತ್ತು. ಚಿನ್ನೇಗೌಡ, ಗೋವಿಂದ ರಾಜ್, ಸಾ ರಾ ಗೋವಿಂದು ಅವರ ಬೆಂಗಾವಲು ಪಡೆಯಿತ್ತು. ಸ್ವಾಮಿ ನಿಷ್ಥೆ ತೋರುವ  ನಿರ್ಮಾಪಕರು ಮತ್ತು ನಿರ್ದೇಶಕರಿದ್ದರು. ಒಟ್ಟಿನಲ್ಲಿ ರಾಜಕುಮಾರ ಮತ್ತು ಅವರೊಳಗಿನ ಕಲಾವಿದ ಈ ಇಬ್ಬರೂ ಅತ್ಯಂತ ಸುರಕ್ಷಿತ ವಲಯದೊಳಗಿದ್ದರು. ಆದರೆ ವಿಷ್ಣುವರ್ಧನ್ ಗೆ ಇಂಥದ್ದೊಂದು ಸುರಕ್ಷತೆಯ ಕೊರತೆ ಅವರ ವೃತ್ತಿ ಬದುಕಿನುದ್ದಕ್ಕೂ ಕಾಡುತ್ತಿತ್ತು. ಕೆಲವು ಅವಕಾಶವಾದಿಗಳು ಸುರಕ್ಷತೆಯ  ಭಾವನೆ ಮೂಡಿಸಲು ಹತ್ತಿರ ಬಂದರಾದರೂ ಅವರೆಲ್ಲ ತಮ್ಮ ತಮ್ಮ ಹಣದ ಥೈಲಿಯನ್ನು ತುಂಬಿಕೊಂಡು ಬದುಕನ್ನು ಹಸನಾಗಿಸಿ ಕೊಂಡರೇ ವಿನ: ವಿಷ್ಣುವರ್ಧನ್ ಗೆ ನೆರವು ನೀಡಿದ್ದು ಕಡಿಮೆ. ಆದ್ದರಿಂದಲೇ ಈ ನಟ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಆಧ್ಯಾತ್ಮದ ನೆಲೆಯಲ್ಲಿ ನಿಂತು  ಸಾವನ್ನು ಕುರಿತು ಧ್ಯಾನಿಸುತ್ತಿದ್ದರು.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment