Thursday, January 30, 2020

ಗಾಂಧಿ ನಮ್ಮ ಉಸಿರಾಗಲಿ ಮತ್ತು ಬದುಕಾಗಲಿ

            



(ಜನೆವರಿ ೩೦ ಗಾಂಧಿ ಹುತಾತ್ಮರಾದ ದಿನ)

        ಮಹಾತ್ಮ ಗಾಂಧಿ ಈ ಭೂಮಿಯ ಮೇಲೆ ಜನಿಸಿ ಅದಾಗಲೇ 150 ವರ್ಷಗಳು ಕಳೆದು ಹೋದವು ಮತ್ತು ಅವರು ನಮ್ಮಿಂದ ದೂರವಾಗಿ ಏಳು ದಶಕಗಳಾದವು. ಗಾಂಧಿಯ ಬದುಕನ್ನು ಆಲ್ಬರ್ಟ್ ಐನ್‍ಸ್ಟೀನ್‍ನಂಥ ಮಹಾಮೇಧಾವಿ ಹೀಗೆ ವರ್ಣಿಸುತ್ತಾನೆ ‘ಮುಂದೊಂದು ದಿನ ನಮ್ಮ ಪೀಳಿಗೆಗೆ ಈ ಭೂಮಿಯ ಮೇಲೆ ಗಾಂಧಿಯಂಥ ವ್ಯಕ್ತಿಯೊಬ್ಬ ಜೀವಿಸಿದ್ದ ಎನ್ನುವುದನ್ನು ನಂಬುವುದೇ ಅಸಾಧ್ಯವಾಗಬಹುದು’. ಹೌದು ಗಾಂಧಿಯ ಬದುಕು ಎಷ್ಟು ಸರಳವೋ ಅಷ್ಟೇ ಅದು ಸಂಕೀರ್ಣ ಕೂಡ ಹೌದು. ಏಕೆಂದರೆ ಗಾಂಧಿ ನಮಗೆ ಒಂದೊಂದು ಬಗೆಯಲ್ಲಿ ಅರ್ಥವಾಗುತ್ತ ಹೋಗುವ ವ್ಯಕ್ತಿ. ಗಾಂಧಿಯನ್ನು ಸಂತನೆನ್ನಬೇಕಾ, ಅವರೊಬ್ಬ ಚಳವಳಿಗಾರನೇ, ಪತ್ರಕರ್ತನೇ, ಬರಹಗಾರನೇ, ಅಹಿಂಸಾವಾದಿಯೇ, ತನ್ನನ್ನೇ ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡ ದೃಷ್ಟಾರನೇ ಹೀಗೆ ಏನೆಂದು ಗಾಂಧಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಒಂದಂತೂ ಸತ್ಯ ಗಾಂಧಿ ಇವತ್ತಿಗೂ ಪ್ರಸ್ತುತ. ಪತ್ರಕರ್ತ ಆಶಿಶ್ ನಂದಿ ಹೇಳುವಂತೆ ‘ಹುಟ್ಟಿ ಒಂದೂವರೆ ಶತಮಾನ ಕಳೆದರೂ ಮತ್ತು ಸಾವನ್ನಪ್ಪಿ ಎಪ್ಪತ್ತು ವರ್ಷಗಳೇ ಗತಿಸಿ ಹೋದರೂ ಗಾಂಧಿಯದು ಇನ್ನೂ ಬಳಸಿಕೊಳ್ಳಬಹುದಾದ ವ್ಯಕ್ತಿತ್ವ’. ಇವತ್ತು ಕಿಂಡರ್ ಗಾರ್ಟನ್‍ಗೆ ಹೋಗುವ ಮಗುವನ್ನು ಕೇಳಿ ನೋಡಿ ಗಾಂಧಿ ಕುರಿತು ತನ್ನ ಬಾಲ ಭಾಷೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡಲುತೊಡಗುತ್ತದೆ. ಇದು ಗಾಂಧಿಯ ಶಕ್ತಿ ಮತ್ತು ಅವರ ವ್ಯಕ್ತಿತ್ವದ ಹಿರಿಮೆ. 

    ಗಾಂಧಿಯನ್ನು ಈ ಜಗತ್ತು ಪ್ರೀತಿಸಿದಷ್ಟೇ ಅವರನ್ನು ಟೀಕಿಸಿದೆ. ನಮ್ಮ ಮನೆಯ ಅಜ್ಜನೇನೋ ಎನ್ನುವಷ್ಟು ನಮಗೆಲ್ಲ ಗಾಂಧಿಯ ಮೇಲೆ ಸಲುಗೆ ಮತ್ತು ಅಕ್ಕರೆ. ನಮ್ಮ ಈ ಅಕ್ಕರೆ ಮತ್ತು ಸಲುಗೆಯೇ ಗಾಂಧಿಯ ಕುರಿತಾದ ಟೀಕೆಗೆ ಮತ್ತು ವಿಮರ್ಶೆಗೆ ಕಾರಣವಾಗುತ್ತದೆ. ಭಾರತದ ಸ್ವಾತಂತ್ರ್ಯ ಚಳವಳಿಯ ನಂತರದ ಕಾಲಘಟ್ಟದಲ್ಲಿ ಜನಿಸಿದ ನಾವೆಲ್ಲ ಗಾಂಧಿಯನ್ನು ಹಲವು ಕಾರಣಗಳಿಗೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಹೀಗೆ ಆರೋಪಿಸಲು ಹೊರಡುವ ನಮಗೆ ಬಹುಮುಖ್ಯವಾದ ಒಂದು ಚಾರಿತ್ರಿಕ ಘಟನೆ ಎಂದರೆ ಅದು ದೇಶದ ಇಭ್ಭಾಗದ ಸಂಗತಿ. ಭಾರತದ ಸ್ವಾತಂತ್ರ್ಯದ ಜೊತೆ ಜೊತೆಗೆ ದೇಶದ ವಿಭಜನೆ ಸಹ ನಡೆದು ಹೋಗುತ್ತದೆ. ಒಂದೇ ನೆಲದಲ್ಲಿ ಬಾಳಿ ಬದುಕಿದ ಜನ ಹಿಂದೂಸ್ತಾನ್ ಮತ್ತು ಪಾಕಿಸ್ತಾನ್ ಎನ್ನುವ ಎರಡು ಪ್ರತ್ಯೇಕ ರಾಷ್ಟ್ರಗಳಲ್ಲಿ ಹರಿದು ಹಂಚಿ ಹೋದರು. ನೆಲವೇನೋ ಇಬ್ಭಾಗಗೊಂಡಿತಾದರೂ ಜನರನ್ನು ಪ್ರತ್ಯೇಕಿಸುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಲಕ್ಷಾಂತರ ಹಿಂದೂಗಳು ಪಾಕಿಸ್ತಾನದ ನೆಲದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರೆ ಅಸಂಖ್ಯಾತ ಮುಸ್ಲಿಂ ಕುಟುಂಬಗಳು ಭಾರತದಲ್ಲಿ ನೆಲೆಕಂಡುಕೊಂಡರು. ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ತೀರ ಧರ್ಮಾಂಧತೆಯಲ್ಲಿ ಮುಳುಗಿ ಹೋಗಿರುವ ಪಾಕಿಸ್ತಾನ ಸಮಯ ಸಿಕ್ಕಾಗಲೆಲ್ಲ ಭಾರತದ ಮೇಲೆ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಜೊತೆಗೆ ಭಾರತದೊಂದಿಗೆ ಜಗಳ ಕಾಯಲು ಪ್ರತ್ಯೇಕ ಉಗ್ರರ ಪಡೆಯನ್ನೇ ಹುಟ್ಟುಹಾಕಿದೆ. ಹೀಗೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಕದನದ ಮಾತುಗಳು ಕೇಳಿ ಬಂದಾಗಲೆಲ್ಲ ಗಾಂಧಿ ನೆನಪಾಗುತ್ತಾರೆ. ಪಾಕಿಸ್ತಾನದ ಹುಟ್ಟಿಗೆ ಗಾಂಧಿಯೇ ಕಾರಣವೆಂದೂ ಮತ್ತು ಇವತ್ತಿನ ಈ ಎಲ್ಲ ಸಮಸ್ಯೆಗಳಿಗೆ ಗಾಂಧಿಯೇ ಮೂಲವೆಂದು ಆರೋಪಿಸುವ ಜನರ ಗುಂಪೇ ಇಲ್ಲಿದೆ. ಹೀಗೆ ಆರೋಪಿಸಲು ಹೊರಡುವವರು ಮಹಮದ್ ಅಲಿ ಜಿನ್ನಾ ಎನ್ನುವ ವ್ಯಕ್ತಿಯನ್ನು ಮರೆತು ಬಿಡುತ್ತಾರೆ. ಮರೆಯುವುದಿರಲಿ ದೇಶ ವಿಭಜನೆಗೆ ಜಿನ್ನಾ ಕಾರಣರಲ್ಲ ಎನ್ನುವ ವಾದವನ್ನೂ ಅವರು ಮಂಡಿಸುತ್ತಾರೆ. ಅವರ ಪ್ರಕಾರ ಜಿನ್ನಾ ಗಡ್ಡ ಬಿಟ್ಟಿರಲಿಲ್ಲ, ವಿದೇಶದಲ್ಲಿ ಶಿಕ್ಷಣ ಪಡೆದಿದ್ದ ಮತ್ತು ಪಾರ್ಸಿ ಹೆಣ್ಣುಮಗಳನ್ನು ಮದುವೆಯಾಗಿದ್ದ. ಆತ ಮಧ್ಯ ಸೇವಿಸುತ್ತಿದ್ದ ಒಟ್ಟಿನಲ್ಲಿ ಜಿನ್ನಾ ಧರ್ಮಾಂಧನಾಗಿರಲಿಲ್ಲ. ಆದ್ದರಿಂದ ಆತನಿಗೆ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಬೇಕಿರಲಿಲ್ಲ ಎಂದು ಕಾರಣ ನೀಡಿ ಪಾಕಿಸ್ತಾನದ ಹುಟ್ಟಿಗೆ ಗಾಂಧಿಯೇ ಕಾರಣ ಎಂದು ವಾದಿಸುತ್ತಾರೆ. ಆದರೆ ಜಿನ್ನಾನಲ್ಲಿ ಅಧಿಕಾರದ ಆಸೆ ಅವನೊಳಗೇ ಅಂತರ್ಗತವಾಗಿತ್ತು. ಅಖಂಡ ಹಿಂದೂಸ್ತಾನದ ಪ್ರಧಾನಿಯಾಗಬೇಕೆಂಬ ಆಸೆ ತನ್ನೊಳಗೆ ಇಟ್ಟುಕೊಂಡೇ ಆತ ರಾಷ್ಟ್ರೀಯ ಕಾಂಗ್ರೇಸ್‍ನ ಸದಸ್ಯನಾದದ್ದು. ಯಾವಾಗ ನೆಹರು ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿಬರತೊಡಗಿತೋ ಆಗ ಜಿನ್ನಾ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಆಟ ಶುರು ಮಾಡಿದ. ಮೊದಲಿನಿಂದಲೂ ಒಡೆದು ಆಳುವ ನೀತಿಗೆ ಹೆಸರಾದ ಬ್ರಿಟಿಷರು ಜಿನ್ನಾನ ಆ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಸರಿಯಾಗಿಯೇ ಬಳಸಿಕೊಂಡರು. ಭಾರತವನ್ನು ಬಿಟ್ಟು ಹೋಗುವಾಗ ಅವರು ದೇಶವನ್ನು ವಿಭಜಿಸಿ ಭಾರತೀಯರ ಮೇಲಿನ ತಮ್ಮ ಪ್ರತಿಕಾರವನ್ನು ತೀರಿಸಿಕೊಂಡರು. 

           ಪಾಕಿಸ್ತಾನದ ಸೃಷ್ಟಿಗೆ ಗಾಂಧಿಯೇ ಕಾರಣ ಎನ್ನುವವರು 1946 ಅಕ್ಟೋಬರ್ 6 ರಂದು ಗಾಂಧೀಜಿ ‘ಹರಿಜನ’ ಪತ್ರಿಕೆಗೆ ಬರೆದ ಲೇಖನವನ್ನೊಮ್ಮೆ ಓದುವುದೊಳಿತು. ಆ ಪತ್ರಿಕೆಯಲ್ಲಿ ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆಯಾಗಬೇಕು ಎನ್ನುವ ಅಭಿಪ್ರಾಯಕ್ಕೆ ಉತ್ತರವಾಗಿ ಗಾಂಧೀಜಿ ಹೀಗೆ ಬರೆಯುತ್ತಾರೆ ‘ಮುಸ್ಲಿಂ ಲೀಗ್‍ನಿಂದ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆಯೇ ಹೊರತು ಮಾನವ ಕುಟುಂಬದ ಐಕ್ಯಮತವನ್ನು ಒಡೆದು ಹಾಕುವುದಕ್ಕಲ್ಲ. ಆದ್ದರಿಂದ ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಂ ಎರಡಕ್ಕೂ ಬದ್ದ ವೈರಿಗಳು’. ಹೀಗೆ ಹೇಳಿದ ಗಾಂಧಿ ಆಶಯಕ್ಕೆ ವಿರುದ್ಧವಾಗಿ ಭಾರತದ ವಿಭಜನೆಯಾಗುತ್ತದೆ. ಆದರೆ ಇತಿಹಾಸ ಓದದ ನಾವು ಗಾಂಧಿಯ ವಿರುದ್ಧ ಟೀಕಾಪ್ರಹಾರಕ್ಕೆ ಮುಂದಾಗುತ್ತೇವೆ. ಇತಿಹಾಸವನ್ನು ಇವತ್ತು ನಾವೆಲ್ಲ ನಮ್ಮ ನಮ್ಮ ಅನುಕೂಲ ಸಿಂಧುತ್ವದ ನೆಲೆಯಲ್ಲೇ ನೋಡುತ್ತಿರುವುದರಿಂದ ಗಾಂಧಿಯ ಅದೆಷ್ಟೋ ಪ್ರಯತ್ನಗಳು ಚಾರಿತ್ರಿಕ ಮಹತ್ವ ಕಳೆದುಕೊಂಡು ಬಿಟ್ಟಿವೆ. ಇತಿಹಾಸಕಾರರು ಇಂಥ ಚಾರಿತ್ರಿಕ ತಪ್ಪುಗಳನ್ನು ತಿದ್ದುವ ಮತ್ತು ಆ ಮೂಲಕ ಗಾಂಧಿಯನ್ನು ಪರಿಶುದ್ಧ ಅಂತ:ಕರಣದ ಭಾವದಲ್ಲಿ ಕಟ್ಟಿಕೊಡುವ ಕೆಲಸಕ್ಕೆ ಮುಂದಾಗಬೇಕು. ಆ ಮೂಲಕವಾದರೂ ಗಾಂಧಿಯನ್ನು ನಾವೆಲ್ಲ ನಮ್ಮವನು ಎಂದು ಇನ್ನಷ್ಟು ಹತ್ತಿರಕ್ಕೆ ಕರೆದುಕೊಳ್ಳಲು ಸಾಧ್ಯವಾಗಬಹುದೇನೋ.

     ಗಾಂಧಿ ಬಗ್ಗೆ ಮಾತನಾಡುವಾಗ ಜಗತ್ತಿನ ಬಹುದೊಡ್ಡ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟ ನೊಬೆಲ್ ಪ್ರಶಸ್ತಿ ಕುರಿತು ಹೇಳಲೇಬೇಕು. 1885 ರಲ್ಲೇ ಆರಂಭಗೊಂಡ ಈ ನೊಬೆಲ್ ಪ್ರಶಸ್ತಿ ಜಗತ್ತಿನ ಅನೇಕ ಹೋರಾಟಗಾರರಿಗೆ ಮತ್ತು ಚಳವಳಿಗಾರರಿಗೆ ಸಂದಿದೆ ಅದು ಗಾಂಧಿ ಒಬ್ಬರನ್ನು ಬಿಟ್ಟು.  1964 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸುವ ವೇಳೆ ಲೂಥರ್ ಕಿಂಗ್ ‘ಬ್ರಿಟಿಷರ ವಿರುದ್ಧ ಸತ್ಯ ಮತ್ತು ಅಂಹಿಸೆ ಎನ್ನುವ ಈ ಎರಡು ಆಯುಧಗಳಿಂದ ಹೋರಾಡಿದ ಗಾಂಧಿ ನನಗೆ ಯಾವತ್ತಿಗೂ ಆದರ್ಶ’ ಎಂದು ಹೇಳುವ ಮೂಲಕ  ಗಾಂಧಿ ವ್ಯಕ್ತಿತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಾನೆ. ಅರ್ಜೆಂಟಿನಾದ ಅಡಾಲ್ಫೋ ಪೆರೆಜ್ ಎಸ್ಕುವೆಲ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೆಲಾ, ಟಿಬೆಟ್‍ನ ದಲೈ ಲಾಮಾ, ಮಯನ್ಮಾರ್‍ನ ಆಂಗ್ ಸಾನ್ ಸೂಕಿ ಇವರೆಲ್ಲ ಗಾಂಧೀಜಿಯ ಹೋರಾಟದಿಂದ ಪ್ರೇರಿತರಾಗಿ ಹೋರಾಡಿದವರು. ಇನ್ನೊಂದು ಮಹತ್ವದ ವಿಷಯವೆಂದರೆ ಇವರೆಲ್ಲರೂ ನೊಬೆಲ್ ಶಾಂತಿ ಪ್ರಶಸ್ತಿ ಭಾಜನರು. ಆದರೆ ಇವರಿಗೆಲ್ಲ ಸ್ಪೂರ್ತಿಯ ಸೆಲೆಯಾದ ಗಾಂಧಿ ಮಾತ್ರ ಐದು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮಾಂಕಿತರಾಗಿ ಪ್ರಶಸ್ತಿಯಿಂದ ವಂಚಿತರಾದರು. 2006 ರಲ್ಲಿ ನೊಬೆಲ್ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯದರ್ಶಿ ‘ಈ 121 ವರ್ಷಗಳ ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲಿನ ಬಹುದೊಡ್ಡ ಲೋಪವೆಂದರೆ ಮಹಾತ್ಮ ಗಾಂಧಿಗೆ ನೊಬೆಲ್ ಪ್ರಶಸ್ತಿ ನೀಡದೆ ಇರುವುದು’ ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ. 1948 ರಲ್ಲಿ ಗಾಂಧಿ ಹತ್ಯೆಯಾದ ವರ್ಷ ‘ಬದುಕಿರುವ ಯಾವ ವ್ಯಕ್ತಿಯೂ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಿಲ್ಲ’ ಎಂದು ಘೋಷಿಸುವ ಸಂಸ್ಥೆ ಆ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಡೆಹಿಡಿದು ಗಾಂಧಿಗೆ ಬಹುದೊಡ್ಡ ಗೌರವ ನೀಡುತ್ತದೆ. ಆ ಮೂಲಕ ಗಾಂಧಿ ವಿಶ್ವದ ಬಹುಮುಖ್ಯ ಪ್ರಶಸ್ತಿಗಿಂತ ದೊಡ್ಡವ್ಯಕ್ತಿಯಾಗಿ ಬೆಳೆದು ನಿಲ್ಲುತ್ತಾರೆ.  

         ಗಾಂಧಿಯನ್ನು ಈ ಸಮಾಜ ಹೇಗೆಲ್ಲ ಬಳಸಿಕೊಂಡಿದೆ ಎನ್ನುವುದಕ್ಕೆ ಭಾರತದ ಸಿನಿಮಾ ಮಾಧ್ಯಮ ಕೂಡ ಹೊರತಾಗಿಲ್ಲ. ನೂರು ವರ್ಷಗಳ ಇತಿಹಾಸವಿರುವ ಭಾರತೀಯ ಸಿನಿಮಾ ರಂಗದಲ್ಲಿ ಗಾಂಧಿ ಬದುಕಿನ ಕುರಿತಾದ ಹಲವಾರು ಸಿನಿಮಾಗಳು ನಿರ್ಮಾಣವಾಗಿವೆ. ಅಂದರೆ ಗಾಂಧಿ ಬದುಕು ಮತ್ತು ಹೋರಾಟ ಸಿನಿಮಾ ಮಾಧ್ಯಮವನ್ನೂ ಪ್ರಭಾವಿಸಿದೆ. ಗಾಂಧಿ ಕುರಿತು ತಯ್ಯಾರಾದ ಮೊದಲ ಸಿನಿಮಾ ಅದು 1982 ರಲ್ಲಿ ತೆರೆಕಂಡ ರಿಚರ್ಡ್ ಅಟೆನ್ ಬರೋ ನಿರ್ದೇಶನದ ‘ಗಾಂಧಿ’ ಸಿನಿಮಾ. ಈ ಸಿನಿಮಾದಲ್ಲಿ ಗಾಂಧಿ ಪಾತ್ರದಲ್ಲಿ ನಟಿಸಿದ್ದ ಕಲಾವಿದ ಬೆನ್ ಕಿಂಗ್ ಸ್ಲೇಯದು ಒಂದು ರೀತಿಯಲ್ಲಿ ಪರಕಾಯ ಪ್ರವೇಶದ ಅಭಿನಯ. ಚಿತ್ರದಲ್ಲಿ ಆತನ ನಟನೆ ಮನೋಜ್ಞವಾಗಿತ್ತು. ಆತ ತನ್ನ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ಪಡೆದನಲ್ಲದೆ ಸಿನಿಮಾಕ್ಕೆ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ದೊರೆತವು. ಇದುವರೆಗೆ ಗಾಂಧಿ ಕುರಿತು ನಿರ್ಮಾಣವಾದ ಸಿನಿಮಾಗಳಲ್ಲಿ ಅಟೆನ್ ಬರೋ ನಿರ್ದೇಶನದ 1982 ರಲ್ಲಿ ತೆರೆಕಂಡ ‘ಗಾಂಧಿ’ ಸಿನಿಮಾ ಸರ್ವಕಾಲೀಕ ಶ್ರೇಷ್ಠ ಸಿನಿಮಾ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ಇನ್ನು ಭಾರತೀಯ ಚಿತ್ರರಂಗದವರ ಪ್ರಯತ್ನದ ಕುರಿತಾಗಿ ಹೇಳುವುದಾದರೆ ‘ಲಗೆ ರಹೋ ಮುನ್ನಾಭಾಯಿ’ ಎನ್ನುವ ಕಮರ್ಷಿಯಲ್ ಹಿಂದಿ ಸಿನಿಮಾದಲ್ಲಿ ನಾಯಕನಿಗೆ ಸತ್ಯ, ಅಂಹಿಸೆ ಕುರಿತು ಉಪದೇಶಿಸಲು ಗಾಂಧಿ ಪಾತ್ರವನ್ನೇ ಸೃಷ್ಟಿಸಲಾಯಿತು. ಶಾಮ ಬೆನಗಲ್ ನಿರ್ದೇಶನದ ‘ಗಾಂಧಿ ಸೆ ಮಹಾತ್ಮ ತಕ್’ ಇನ್ನೊಂದು  ಗಾಂಧಿ ಬದುಕಿನ ಕುರಿತಾದ ಅಪರೂಪದ ಸಿನಿಮಾ. ಅದೇರೀತಿ ಸರ್ದಾರ್ ವಲ್ಲಭಭಾಯಿ ಪಟೇಲರ ಜೀವನವೃತ್ತಾಂತವನ್ನಾಧರಿಸಿದ ‘ಪಟೇಲ್’ ಚಿತ್ರದಲ್ಲೂ ಗಾಂಧಿ ಪಾತ್ರವನ್ನು ಸೃಷ್ಟಿಸಲಾಗಿತ್ತು. ಇನ್ನುಳಿದಂತೆ ಕಮಲ್ ಹಾಸನ್ ಅವರ ‘ಹೇ ರಾಮ್’ ಮತ್ತು ತೆಲುಗು ಭಾಷೆಯ ‘ಮಹಾತ್ಮ’ ಸಿನಿಮಾಗಳು ಗಾಂಧಿ ಬದುಕನ್ನಾಧರಿಸಿದ ಚಲನಚಿತ್ರಗಳು.

         ಈ ಮೇಲೆ ಹೆಸರಿಸಿದ ಸಿನಿಮಾಗಳ ಕಥಾವಸ್ತುವಿಗೆ ವಿರುದ್ಧವಾಗಿ ಗಾಂಧಿಯನ್ನು ಸಾಮಾನ್ಯ ಮನುಷ್ಯನ ಹಾಗೆ ಚಿತ್ರಿಸುವ ಪ್ರಯತ್ನವನ್ನು ಭಾರತೀಯ ಸಿನಿಮಾರಂಗದಲ್ಲಿ ಮಾಡಲಾಗಿದೆ. ಅದಕ್ಕೆರಡು ಉದಾಹರಣೆಗಳೆಂದರೆ ‘ಬಾಬಾಸಾಹೇಬ ಅಂಬೇಡ್ಕರ್’ ಮತ್ತು ‘ಗಾಂಧಿ ಮೈ ಫಾದರ್’ ಸಿನಿಮಾಗಳು. ಜಬ್ಬಾರ್ ಪಟೇಲ್ ನಿರ್ದೇಶನದ ‘ಬಾಬಾಸಾಹೇಬ ಅಂಬೇಡ್ಕರ್’ ಚಿತ್ರದಲ್ಲಿ ಗಾಂಧಿ ಪಾತ್ರ ನೆಗೆಟಿವ್ ನೆರಳಲ್ಲಿ ರೂಪುಗೊಂಡಿದೆ. ತಮ್ಮ ಬೇಡಿಕೆಗಳ ಇಡೇರಿಕೆಗಾಗಿ ಗಾಂಧಿ ಬ್ಲ್ಯಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದ್ದರು ಎನ್ನುವ ಸಂಗತಿಯನ್ನು ಹೇಳುವ ಮೂಲಕ ನಿರ್ದೇಶಕರು ಗಾಂಧಿಯ ಅನುಯಾಯಿಗಳ ಮನಸ್ಸಿಗೆ ನೋವುಂಟು ಮಾಡುತ್ತಾರೆ. ‘ಗಾಂಧಿ ಮೈ ಫಾದರ್’ ಎನ್ನುವ ಇನ್ನೊಂದು ಸಿನಿಮಾದಲ್ಲಿ ಹರಿಲಾಲ್ ಗಾಂಧಿ ಎನ್ನುವ ಇನ್ನೊಬ್ಬ ಗಾಂಧಿಯೇ ಸಿನಿಮಾದ ನಿಜವಾದ ಹೀರೋ. ಗಾಂಧೀಜಿಯ ಮಗನಾದ ಈತ ತನ್ನ ತಂದೆಯನ್ನು ವಿರೋಧಿಸುವುದನ್ನೇ ಬದುಕಿನ ಗುರಿಯಾಗಿಸಿಕೊಂಡಿರುತ್ತಾನೆ. ಪ್ರತಿಕ್ಷಣ ತನ್ನ ತಂದೆಯನ್ನು ಅವಮಾನಿಸುತ್ತ ಹೋಗುತ್ತಾನೆ. ಇಲ್ಲಿ ಗಾಂಧಿ ಬದುಕು ಮತ್ತು ಅವರ ಹೋರಾಟಕ್ಕಿಂತ ಅವರನ್ನು ಅವಮಾನಿಸುವುದೇ ನಿರ್ದೇಶಕರ ಉದ್ದೇಶವಾಗಿತ್ತು. 

       ಒಟ್ಟಿನಲ್ಲಿ ಗಾಂಧಿ ಬದುಕು ಮತ್ತು ಹೋರಾಟ ಸಿನಿಮಾ ಉದ್ಯಮದ ಜನರನ್ನು ಪ್ರಭಾವಿಸಿದ್ದು ನಿಜ. ಅದಕ್ಕೆಂದೇ ಗಾಂಧಿ ಕುರಿತು ಹಲವಾರು ಸಿನಿಮಾಗಳು ನಿರ್ಮಾಣವಾದವು. ಕೆಲವರು ಗಾಂಧಿ ಬದುಕಿನ ತತ್ವಾದರ್ಶಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿದರೆ ಕೆಲವರು ನೆಗೆಟಿವ್ ಅಂಶಗಳಿಗೆ ಒತ್ತು ಕೊಟ್ಟರು. ಗಾಂಧಿ ಬದುಕಿನ ಸಿನಿಮಾಗಳ ಕುರಿತು ಮಾತನಾಡುವಾಗ ಕೊನೆಗೂ ನಮ್ಮ ನೆನಪಲ್ಲುಳಿಯುವುದು ರಿಚರ್ಡ್ ಅಟೆನ್ ಬರೋ ನಿರ್ದೇಶನದ ‘ಗಾಂಧಿ’ ಸಿನಿಮಾ ಮಾತ್ರ. 

  ಗಾಂಧಿ ಕುರಿತು ಕನ್ನಡ ಸಾಹಿತ್ಯದಲ್ಲಿ ಕಡುವ್ಯಾಮೋಹಿಯಂತೆ ಬರೆದವರು ಇಬ್ಬರು ಮಾತ್ರ. ಅವರಲ್ಲಿ ಯು.ಆರ್.ಅನಂತಮೂರ್ತಿ ಒಬ್ಬರಾದರೆ ಇನ್ನೊಬ್ಬರು ದೇವನೂರ ಮಹಾದೇವ. ಯು.ಆರ್.ಅನಂತಮೂರ್ತಿ ಅವರಿಗೆ ನಾವು ಬದುಕುತ್ತಿರುವ ಭಾರತ ಅದು ಗಾಂಧಿ ಪ್ರಣೀತ ಭಾರತ. ಭಾರತದ ಈ ನೆಲದಲ್ಲಿ ಸಾಮಾನ್ಯನೊಬ್ಬ ದೇಶದ ಪ್ರಧಾನ ಮಂತ್ರಿಯ ಸ್ಥಾನಕ್ಕೇರುವುದು ಅದು ಗಾಂಧಿಯ ಭಾರತದಲ್ಲಿ ಮಾತ್ರ ಸಾಧ್ಯವಾಗಬಹುದಾದ ಬಹುದೊಡ್ಡ ಸಾಮಾಜಿಕ ಪಲ್ಲಟ ಎನ್ನುತ್ತಾರೆ ಅನಂತಮೂರ್ತಿ. ಇನ್ನು ದೇವನೂರ ಮಹಾದೇವ ಅವರಂತೂ ಗಾಂಧಿಯನ್ನು ಕಡು ವ್ಯಾಮೋಹಿಯಂತೆ ಪ್ರೀತಿಸುತ್ತಾರೆ. ಗಾಂಧಿ ಸಿನಿಮಾ ನೋಡದಂತೆ ಒಂದು ಸಮುದಾಯದ ಸಮಿತಿ ಬಹಿಷ್ಕಾರ ಹಾಕಿದಾಗ ದೇವನೂರ ಆ ಸಿನಿಮಾ ನೋಡುತ್ತಾರೆ. ಸಾಯಲು ಸಿದ್ಧವಾದವನು ಮಾತ್ರ ಗಾಂಧಿಯಾಗಲು ಸಾಧ್ಯ ಎನ್ನುತ್ತಾರೆ ಮಹಾದೇವ. ಪುಣಾ ಒಪ್ಪಂದವನ್ನೇ ಆಧಾರವಾಗಿಟ್ಟುಕೊಂಡು ಗಾಂಧಿಯನ್ನು ದ್ವೇಷಿಸುವುದು ತರವಲ್ಲ ಎಂದು ಬುದ್ಧಿಮಾತು ಹೇಳುತ್ತಾರೆ. ಮಹಾದೇವರ ಪ್ರಕಾರ ಗಾಂಧಿ ಮತ್ತು ಅಂಬೇಡ್ಕರ್ ಮಾಡುತ್ತಿದ್ದದ್ದು ಒಂದೇ ರೀತಿಯ ಕೆಲಸವಾಗಿತ್ತು. ಅವರಿಬ್ಬರ ನಡುವೆ ಅಭಿಪ್ರಾಯ ಭೇದವಿರಬಹುದು ಆದರೆ ಉದ್ದೇಶ ಮಾತ್ರ ಒಂದೇ ಆಗಿತ್ತು ಎನ್ನುತ್ತಾರೆ. ಈ ಕಾರಣದಿಂದಲೇ ‘ಮಹಾದೇವರ ಒಳಗೆ ಗಾಂಧಿ ಇಳಿದಷ್ಟು ಬುದ್ಧ ಇನ್ನೂ ಅವರ ಒಳಗಿಳಿದಿಲ್ಲ’ ಎನ್ನುತ್ತಾರೆ ಲೇಖಕ ಕೆ.ಸತ್ಯನಾರಾಯಣ. 

    ಗಾಂಧಿ ಇಷ್ಟವಾಗಲು ಅವರು ತಮ್ಮನ್ನೆ ತಾನು ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡ ರೀತಿ. ಪ್ರಾಯಶ್ಚಿತದ ಭಾವವೇ ಮಾನವೀಯತೆಯ ಹುಟ್ಟಿಗೆ ಕಾರಣ ಎನ್ನುವ ಬಲವಾದ ನಂಬುಗೆ ಗಾಂಧಿಯವರಲ್ಲಿತ್ತು. ಬದುಕಿನ ಕೊನೆಯ ದಿನಗಳವರೆಗೂ ಗಾಂಧಿ ತಮ್ಮ ಬದುಕನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಲೇ ಬಂದರು. ಬ್ರಹ್ಮಚರ್ಯೆ, ಸರಳ ಜೀವನ, ಮಿತಹಾರ, ಸತ್ಯದ ಅನ್ವೇಷಣೆ ಇಲ್ಲೆಲ್ಲ ಗಾಂಧಿಯವರ ಪ್ರಯೋಗಗಳನ್ನು ಕಾಣಬಹುದು. ಗಾಂಧಿಯನ್ನು ಟ್ಯಾಗೋರರು ‘ಮಹಾತ್ಮ’ ಎಂದು ಕರೆದಾಗ ಇದೇ ಗಾಂಧಿ ‘ನನ್ನ ಎದೆಗೆ ಗುಂಡಿಟ್ಟು ಕೊಲ್ಲಲು ಬಂದವನನ್ನು ಕೂಡ ನಾನು ಸಾಯುವ ಘಳಿಗೆ ಕ್ಷಮಿಸಿದೆನೆಂದರೆ ಆಗ ಮಾತ್ರ ನನಗೆ ಮಹಾತ್ಮನಾಗುವ ಯೋಗ್ಯತೆ ಬರುತ್ತದೆ’ ಎಂದು ಪ್ರತಿಕ್ರಿಸಿದವರು. ಇದು ಮಹಾತ್ಮನಾದ ಗಾಂಧಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ರೀತಿಯಾಗಿತ್ತು. ಗಾಂಧಿಯಂಥ ಮತ್ತೊಬ್ಬ ಮಹಾತ್ಮ ಈ ನೆಲದ ಮೇಲೆ ಮತ್ತೆ ಹುಟ್ಟಿ ಬರಲಾರನೇನೋ ಎನ್ನುವಷ್ಟು ಗಾಂಧಿಯ ಬದುಕು ಮತ್ತು ವ್ಯಕ್ತಿತ್ವ ಈ ನೆಲದ ಪರಿಸರದಲ್ಲಿ ಅಂತರ್ಗತಗೊಂಡಿದೆ. 

    ಈ ಕಾಲಘಟ್ಟದಲ್ಲಿ ನಿಂತು ನೋಡಿದಾಗ ಗಾಂಧಿ ಬಳಕೆಯಾಗುತ್ತಿರುವರೇನೋ ಎನ್ನುವ ಭಾವ ಹುಟ್ಟುತ್ತದೆ. ಗಾಂಧಿ ಕೇವಲ ಬಳಕೆಯಾಗಬಾರದು, ಅವರು ಅರ್ಥವಾಗಬೇಕು ಮತ್ತು ನಮ್ಮ ಬದುಕಿನ ಭಾಗವಾಗಬೇಕು. ಗಾಂಧಿ ನಮ್ಮ ಉಸಿರಾಗಬೇಕು ಮತ್ತು ಬದುಕಾಗಬೇಕು. ಗಾಂಧಿ ನಮಗೆಲ್ಲ ಅರ್ಥವಾಗುವಂತೆ ಬರವಣಿಗೆಯಲ್ಲಿ ಅವರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಹೀಗೆ ಹುಟ್ಟಿ ಬರುವ ಗಾಂಧಿ ಸಂತನಾಗಿರಲಿ, ಚಳವಳಿಗಾರನಾಗಿರಲಿ, ಅಹಿಂಸಾವಾದಿಯಾಗಿರಲಿ, ಪತ್ರಕರ್ತನಾಗಿರಲಿ, ಬರಹಗಾರನಾಗಿರಲಿ, ನಿಷ್ಟುರವಾದಿಯಾಗಿರಲಿ, ಜಾತ್ಯಾತೀತವಾದಿಯಾಗಿರಲಿ ಒಟ್ಟಿನಲ್ಲಿ ನಮ್ಮವನೆಂದು ನಾವೆಲ್ಲ ಸ್ವೀಕರಿಸುವಂತಿರಲಿ. ಗಾಂಧಿಯನ್ನು ಸ್ವೀಕರಿಸಿ ನಮ್ಮವನನ್ನಾಗಿಸಿಕೊಳ್ಳುವುದರಲ್ಲೇ ದೇಶದ ಹಿತವಿದೆ ಅಷ್ಟೇಕೆ ಅದು ನಮ್ಮೆಲ್ಲರ ಹಿತ ಕೂಡ ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟ 

Tuesday, January 28, 2020

ಹರಿವ ನದಿಗೆ ನೂರುಕಾಲು: ಪುಸ್ತಕ ಬಿಡುಗಡೆ




ದಿನಾಂಕ ೨೭.೦೧.೨೦೨೦ ರಂದು ಕಲಬುರಗಿಯಲ್ಲಿ ನನ್ನ 'ಹರಿವ ನದಿಗೆ ನೂರುಕಾಲು' ಪುಸ್ತಕ ಬಿಡುಗಡೆಯಾಯಿತು. 


ಬರೆಯಲೇ ಬೇಕೆನ್ನುವ ಹಟವಾಗಲಿ ಮತ್ತು ತೀರ ವ್ಯಾಮೋಹವಾಗಲಿ ನನಗಿಲ್ಲ. ಬರೆದ ನಂತರ ಸಾಹಿತ್ಯ ಕ್ಷೇತ್ರಕ್ಕೊಂದು ಮೌಲಿಕ ಕೊಡುಗೆ ನೀಡಿದೆ ಎನ್ನುವ ಅಹಂಕಾರವಂತೂ ನನ್ನಿಂದ ಗಾವುದ ದೂರದಲ್ಲಿರುತ್ತದೆ. ಬರವಣಿಗೆ ನನಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಡುವ ಕ್ರಿಯೆ. ಬರೆಯುವ ಮೂಲಕವೇ ನನ್ನನ್ನು ನಾನು ಕಂಡುಕೊಳ್ಳುತ್ತ ನನ್ನ ಅಸ್ತಿತ್ವವನ್ನು ಬದುಕುತ್ತಿರುವ ಈ ಸಮಾಜದಲ್ಲಿ ದಾಖಲಿಸುತ್ತ ಹೋಗುತ್ತೇನೆ. ಬರೆಯುವ ಕ್ರಿಯೆಯಲ್ಲಿ ತೊಡಗಿದಾಗ ಅಕ್ಷರಶ: ನಾನು ರಾಗ ದ್ವೇಷಗಳಿಂದ ಮುಕ್ತನಾಗಿರುತ್ತೇನೆ. ಬದುಕುತ್ತಿರುವ ಸಮಾಜವನ್ನು ನಾನು ದ್ವೇಷದ ಭಾವದಿಂದ ಗ್ರಹಿಸಲಾರೆ. ಹಾಗೆ ಗ್ರಹಿಸುವ ಶಕ್ತಿಯಾಗಲಿ ಮತ್ತು ಸಾಮರ್ಥ್ಯವಾಗಲಿ ನನಗಿಲ್ಲ. ಬದುಕುತ್ತಿರುವ ಈ ಸಮಾಜವನ್ನು ನಾನು ಗ್ರಹಿಸುವುದು ಪ್ರೀತಿಯ ಮೂಲಕವೇ.



ಇನ್ನು ಪುಸ್ತಕದ ವಿಷಯಕ್ಕೆ ಬರುವುದಾದರೆ ಇದು ನನ್ನ ಹತ್ತನೇ ಕೃತಿ. ಹಿಂದಿನ ಕೃತಿಗಳಂತೆ ಈ ಪುಸ್ತಕದ ವಿಷಯ ವ್ಯಾಪ್ತಿ ಕೂಡ ಹಲವು ದಿಕ್ಕುಗಳೆಡೆ ಚಾಚಿಕೊಂಡಿದೆ. ಒಂದೇ ವಿಷಯದ ಮೇಲೆ ಪಟ್ಟಾಗಿ ಕುಳಿತು ಬರೆಯುವುದು ಅದು ನನ್ನ ಜಾಯಮಾನವಲ್ಲ. ಕಾಡಿದ ಸಮಸ್ಯೆ, ನೋಡಿದ ಸಿನಿಮಾ, ಓದಿದ ಪುಸ್ತಕ, ಪ್ರಭಾವಿಸಿದ ವ್ಯಕ್ತಿತ್ವ ಇಂಥದ್ದನ್ನೆಲ್ಲ ನಾನು ಅಕ್ಷರಗಳ ಮೂಲಕ ದಾಖಲಿಸುತ್ತ ಹೋಗುತ್ತೇನೆ. ಆ ಮೂಲಕ ವಿಭಿನ್ನ ಓದಿನ ಅಭಿರುಚಿಯ ಓದುಗರನ್ನು ಹೋಗಿ ತಲುಪುವ ಸ್ವಾರ್ಥ ಕೂಡ ನನಗೇ ಗೊತ್ತಿಲ್ಲದಂತೆ ನನ್ನ ಬರವಣಿಗೆಯ ಹಿಂದೆ ಕೆಲಸ ಮಾಡಿರಬಹುದೆನ್ನುವ ಅನುಮಾನ ನನ್ನದು.




ಬ್ಲೇಕ್ ತನ್ನ ಬರವಣಿಗೆಯನ್ನು ಕುರಿತು ಹೀಗೆ ಹೇಳುತ್ತಾನೆ ‘ಇದು ನನ್ನದು ಆದರೆ ನನ್ನದು ಮಾತ್ರವಲ್ಲ’. ತನ್ನ ಬರವಣಿಗೆಯ ಕೃಷಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ಬ್ಲೇಕ್ ನೆನಪಿಸಿಕೊಳ್ಳುವ ರೀತಿ ಇದು. ಕ್ರಮಿಸುತ್ತಿರುವ ಬರವಣಿಗೆಯ ಈ ದಾರಿಯಲ್ಲಿ ಒಂದಿಷ್ಟು ನಿಂತು ಹೊರಳಿ ನೋಡಿದಾಗ ನಾನು ನೆನೆಯಲೇ ಬೇಕಾದ ಹಲವರ ಚಿತ್ರ ಕಣ್ಮುಂದೆ ಬರುತ್ತದೆ. ನಾನು ಎಲ್ಲರನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. 


ಓದಿದ, ನೋಡಿದ ನಂತರ ಅನುಭವವಾಗಿ ಮನಸ್ಸಿನಲ್ಲಿ ಕುಳಿತು ಕಂಗೆಡಿಸಿದ, ಹಗಲಿರುಳು ಚಿಂತಿಸುವಂತೆ ಮಾಡಿದ ಒಂದಿಷ್ಟು ಚಿಂತನೆಗಳನ್ನು ಓದುಗರಿಗೆ ದಾಟಿಸುವ ಪ್ರಯತ್ನವಾಗಿ ಈ ಪುಸ್ತಕದ ಬರವಣಿಗೆ. ಹೀಗೆ ಅನುಭವವನ್ನು ಓದುಗರಿಗೆ ದಾಟಿಸುವ ಈ ಪ್ರಯತ್ನ ನನ್ನದು ಆದರೆ ನನ್ನದು ಮಾತ್ರವಲ್ಲ ಎನ್ನುವ ವಿನಮೃತೆಯೂ ನನ್ನ ಅಂತ:ಪ್ರಜ್ಞೆಯೊಳಗೆ ಜಾಗೃತವಾಗಿದೆ ಎನ್ನುವ ಅರಿವಿನಿಂದಲೆ ನಾನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, January 6, 2020

ಆತ್ಮಹತ್ಯೆಗಾಗಿ ಸಂಪರ್ಕಿಸಿ: ಕಥೆ





           2050 ರ ಜನೆವರಿ ಒಂದನೇ ತಾರಿಖೀನ ದಿನ ಬ್ರಹ್ಮ ಅಲಿಯಾಸ್ ಬ್ರಹ್ಮೇಂದ್ರ ನೀಡಿದ್ದ ಜಾಹೀರಾತು ಬಹುತೇಕ ಎಲ್ಲ ಭಾಷೆಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ‘ಜೀವನದಲ್ಲಿ ಜಿಗುಪ್ಸೆಗೊಂಡು ಇನ್ನು ಬದುಕುವುದು ಬೇಡ ಎಂದು ನಿಮಗನಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅತ್ಯಂತ ಸರಳ ವಿಧಾನಗಳನ್ನು ತಿಳಿಸಿಕೊಡಲಾಗುವುದು. ಮಾಹಿತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಬಹುದು’ ಇದು ಜಾಹೀರಾತಿನ ಒಕ್ಕಣೆಯಾಗಿದ್ದು ಜೊತೆಗೆ ಬ್ರಹ್ಮೇಂದ್ರನ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಲಾಗಿತ್ತು. ಈ ಸಂಬಂಧ ಬ್ರಹ್ಮೇಂದ್ರ ಶಹರಿನ ಜನನಿಬಿಡ ಪ್ರದೇಶದ ಸ್ವರ್ಗ ಎಂದು ಕರೆಯಲಾಗುವ ಗಗನಚುಂಬಿ ಕಟ್ಟಡದ 100ನೇ ಅಂತಸ್ತಿನಲ್ಲಿ ಸಣ್ಣದೊಂದು ಕಚೇರಿಯನ್ನು ತೆರೆದಿದ್ದ. ಕಚೇರಿಯಲ್ಲಿ ಎಲ್ಲ ಆಧುನಿಕ ವ್ಯವಸ್ಥೆಗಳಿದ್ದು ಬದುಕಿನಲ್ಲಿ ಜಿಗುಪ್ಸೆಗೊಂಡು ಬರುವವರು ಸಾಯುವ ಕ್ಷಣದಲ್ಲಾದರೂ ಒಂದಿಷ್ಟು ಆಹ್ಲಾದಕರ ವಾತಾವರಣದಲ್ಲಿ ಸಮಯ ಕಳೆಯುವಂತಾಗಲಿ ಎಂದು ಮೆತ್ತನೆಯ ಸುಖಾಸೀನ, ವಾತಾನುಕೂಲ ಮತ್ತು ಹಿನ್ನೆಲೆಯಲ್ಲಿ ಮಧುರ ಸಂಗೀತದ ಧ್ವನಿ ಕೇಳಿ ಬರುವ ವ್ಯವಸ್ಥೆಯನ್ನು ಮಾಡಿದ್ದ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ತಾನುಕೊಟ್ಟ ಜಾಹೀರಾತನ್ನು ಓದುತ್ತ ಕುಳಿತಿದ್ದ ಬ್ರಹ್ಮೇಂದ್ರನಿಗೆ ಈ ಹೊಸ ಕೆಲಸದಿಂದ ಕ್ಷಣಕ್ಷಣಕ್ಕೂ ಮೈ ರೋಮಾಂಚನಗೊಂಡು ಅವನು ಪುಳಕಗೊಳ್ಳುತ್ತಿದ್ದ.
   ಬ್ರಹ್ಮೇಂದ್ರನಿಗೆ ಈಗ 25 ವರ್ಷ ವಯಸ್ಸು. ಪ್ರತಿಷ್ಠಿತ ಕಾಲೇಜಿನಲ್ಲಿ ಎಮ್.ಬಿ.ಎ ಪದವಿ ಪಡೆದವನಿಗೆ ಬೇರೆಯವರ ಕೈಕೆಳಗೆ ಕೆಲಸ ಮಾಡುವ ಮನಸ್ಸಿಲ್ಲ. ಪದವಿ ಪೂರ್ಣಗೊಂಡಿದ್ದೆ ಒಂದೆರಡು ವರ್ಷ ಬೇರೆ ಬೇರೆ ಶಹರಗಳು ಮತ್ತು ದೇಶಗಳನ್ನು ನೋಡಿ ಬಂದ. ಅಲ್ಲಿನ ಹೊಸ ಹೊಸ ಕೆಲಸಗಳನ್ನು ಕುರಿತು ಅಧ್ಯಯನ ಮಾಡಿದ. ಕೊನೆಗೆ ತಾನೊಂದು ಸ್ವಂತದ ಕೆಲಸ ಆರಂಭಿಸಬೇಕೆಂದು ನಿರ್ಧರಿಸಿದ. ನಿರ್ಧಾರವನ್ನು ಹಳ್ಳಿಯಲ್ಲಿದ್ದ ಅಪ್ಪ-ಅಮ್ಮನಿಗೆ ಹೇಳಿ ಅವರ ಒಪ್ಪಿಗೆ ಮತ್ತು ಹಣಕಾಸಿನ ನೆರವನ್ನು ಕೂಡ ಪಡೆದ. ಇತ್ತೀಚಿಗೆ ನಗರದಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಿದ್ದು ಮತ್ತು ಜನರು ಆತ್ಮಹತ್ಯೆ ಮಾಡಿಕೊಳ್ಳಲು ಚಿತ್ರ-ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತ ಪೆÇೀಲೀಸ್ ಇಲಾಖೆ, ಕೋರ್ಟು ಮತ್ತು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಹಿಂಜರಿಯುವಷ್ಟು ಕೆಲವು ಆತ್ಮಹತ್ಯೆಗಳು ಭೀಕರವಾಗಿರುತ್ತಿದ್ದವು. ಹೊಸ ಕೆಲಸವನ್ನು ಆರಂಭಿಸಬೇಕೆಂದು ಯೋಚಿಸಿದ್ದ ಬ್ರಹ್ಮೇಂದ್ರನಿಗೆ ಆತ್ಮಹತ್ಯೆಯನ್ನು ಸುಲಭವಾಗಿಸಲು ಪರಿಹಾರವನ್ನು ಒದಗಿಸುವ ಮಾಹಿತಿ ಕೇಂದ್ರವನ್ನೇಕೆ ಆರಂಭಿಸಬಾರದು ಎನ್ನುವ ಆಲೋಚನೆ ಹೊಳೆದದ್ದೆ ಆತ ತಕ್ಷಣವೇ ಕಾರ್ಯತತ್ಪರನಾದ. ಹೊಸ ವರ್ಷದ ಮೊದಲ ದಿನದಂದು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ತನ್ನ ಹೊಸ ಕೆಲಸವನ್ನು ಆರಂಭಿಸಿಯೇ ಬಿಟ್ಟ.
     ಪತ್ರಿಕೆಗಳಲ್ಲಿನ ಜಾಹಿರಾತು ಓದುತ್ತ ತನ್ನ ಕಚೇರಿಯ ಚೇಂಬರಿನಲ್ಲಿ ಕುಳಿತಿದ್ದ ಬ್ರಹ್ಮೇಂದ್ರನ ಮೊಬೈಲ್ ರಿಂಗಣಿಸಿತು. ಬ್ರಹ್ಮೇಂದ್ರ ಕರೆ ಸ್ವೀಕರಿಸಿದ. ಆ ಕಡೆಯಿಂದ ‘ಹಲೋ ನಾನು ಮುಕ್ತಿಧಾಮ ಎಂ.ಡಿ ಬ್ರಹ್ಮೇಂದ್ರ ಅವರೊಂದಿಗೆ ಮಾತನಾಡಬೇಕು’ ಎಂದು ಹೆಣ್ಣು ಧ್ವನಿಯೊಂದು ಉಲಿಯಿತು. ‘ಹೇಳಿ ನಾನು ಬ್ರಹ್ಮೇಂದ್ರ ಮಾತಾಡ್ತಿರೊದು’ ಎಂದ. ‘ಸರ್ ಇವತ್ತಿನ ಪತ್ರಿಕೆಯಲ್ಲಿ ಜಾಹೀರಾತು ನೋಡ್ದೆ. ಆತ್ಮಹತ್ಯೆ ಬಗ್ಗೆ ಮಾರ್ಗದರ್ಶನ ಬೇಕಾಗಿದೆ. ದಯವಿಟ್ಟು ಅಪಾಯಿಂಟ್‍ಮೆಂಟ್ ಕೊಡಿ’ ಎಂದಳು. ‘ನಾಳೆ ಬೆಳಗ್ಗೆ 9 ಗಂಟೆಗೆ ಆಫೀಸಿಗೆ ಬನ್ನಿ’ ಎಂದು ಹೇಳಿ ಕರೆ ಕತ್ತರಿಸಿದ. ಬ್ರಹ್ಮೇಂದ್ರನ ಫೆÇೀನ್ ಮತ್ತೊಮ್ಮೆ ರಿಂಗಣಿಸಿತು. ಈ ಸಲ ಕರೆ ಮಾಡಿದ ವ್ಯಕ್ತಿ ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಧ್ಯವಯಸ್ಕ ಎಂದು ಧ್ವನಿಯಿಂದಲೇ ಗುರುತಿಸಿದ. ಆ ವ್ಯಕ್ತಿಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಬರಲು ಸೂಚಿಸಿದ. ಮೊದಲ ದಿನವೇ ತನ್ನ ಜಾಹೀರಾತಿಗೆ ಎರಡು ಪ್ರತಿಕ್ರಿಯೆಗಳು ಬಂದಿದ್ದು ಬ್ರಹ್ಮೇಂದ್ರನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅದೇ ಖುಷಿಯಲ್ಲಿ ಕಾಫಿಗೆ ಆರ್ಡರ್ ಮಾಡಿ ತರಿಸಿ ಕುಡಿದ. ಮಧ್ಯಾಹ್ನದ ಲಂಚ್ ನಂತರ ಒಂದು ತಾಸು ಆಫೀಸಿನಲ್ಲೇ ವಿಶ್ರಮಿಸಿದ. ಮತ್ತೆ ಕರೆಬರಬಹುದೆಂದು ಕಾದ. ಆಫೀಸ್ ಬಾಗಿಲು ಹಾಕುವ ವೇಳೆಯಾದರೂ ಮತ್ತೆ ಕರೆ ಬರದೆ ಒಂದಿಷ್ಟು ನಿರಾಶನಾದ. ಕಚೇರಿಯಲ್ಲಿನ ಹಿನ್ನೆಲೆ ಸಂಗೀತದ ಧ್ವನಿ ಮತ್ತು ದೀಪಗಳನ್ನು ಆರಿಸಿ ಬಾಗಿಲು ಮುಚ್ಚುವಾಗ ಅವನ ಮೊಬೈಲ್ ರಿಂಗಣಿಸಿತು. ಕರೆ ಸ್ವೀಕರಿಸಿದವನಿಗೆ ಆ ಕಡೆಯಿಂದ ವೃದ್ಧರೊಬ್ಬರು ಮಾತನಾಡುತ್ತಿರುವುದು ಕೇಳಿಸಿತು. ಅವರದೂ ಸಹ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ನಾಳೆ ಮಧ್ಯಾಹ್ನ ಮೂರುಗಂಟೆಗೆ ಕಚೇರಿಗೆ ಬರುವಂತೆ ತಿಳಿಸಿ ಬಾಗಿಲು ಮುಚ್ಚಿ ಕೆಳಗಿಳಿಯಲು ಲಿಫ್ಟ್ ಪ್ರವೇಶಿಸಿದ.  
●●●
   ಎದುರಿಗೆ ಕುಳಿತಿರುವವಳು 24-25 ವರ್ಷ ವಯಸ್ಸಿನ ಸುಂದರ ತರುಣಿ. ಅವಳ ಹೆಸರು, ವಿದ್ಯಾರ್ಹತೆ, ಕುಟುಂಬದ ಹಿನ್ನೆಲೆಯನ್ನು ವಿಚಾರಿಸಿದ. ಆಕೆ ವಿವಾಹಿತಳು ಎನ್ನುವುದಕ್ಕೆ ಸಾಕ್ಷಿಯಾಗಿ ಕೊರಳಲ್ಲಿ ಚಿನ್ನದ ಮಂಗಳಸೂತ್ರ ಹೊಳೆಯುತ್ತಿತ್ತು. ಅಂಗೈ ಮೇಲಿನ ಗೊರಂಟಿ ಇನ್ನು ಬಣ್ಣ ಕಳೆದುಕೊಂಡಿರಲಿಲ್ಲ. ಕಪ್ಪು ಅಂಚಿನ ತಿಳಿ ಗುಲಾಬಿ ಬಣ್ಣದ ಸೀರೆ ಅದಕ್ಕೊಪ್ಪುವ ಕಪ್ಪು ಬಣ್ಣದ ಬ್ಲೌಜ್ ತೊಟ್ಟಿದ್ದಳು. ಮುಖದಲ್ಲಿ ವಿಚಿತ್ರವಾದ ಆತಂಕ, ಉದ್ವಿಗ್ನತೆ ತುಂಬಿಕೊಂಡಂತೆ ಕಾಣಿಸುತ್ತಿತ್ತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲೆಂದು ಒಂದಿಷ್ಟು ಹೊತ್ತು ಮೌನವಾಗಿ ಕುಳಿತ ಬ್ರಹ್ಮೇಂದ್ರ ಆಕೆ ಹೊಂದಿಕೊಂಡಿದ್ದಾಳೆಂದು ಅನಿಸಿದ್ದೆ ಮಾತಿಗೆ ಶುರುವಿಟ್ಟುಕೊಂಡ. 
‘ನಿಮ್ಮ ಸಮಸ್ಯೆ ಏನು ಹೇಳಿ’.
‘ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದೀನಿ. ಆದರೆ ಜೀವಕ್ಕಾಗಲಿ ದೇಹಕ್ಕಾಗಲಿ ತೊಂದರೆ ಆಗದಂತೆ ಸುಲಭವಾಗಿ ಸಾಯ್ಬೇಕು. ದಯವಿಟ್ಟು ಮಾರ್ಗದರ್ಶನ ಮಾಡಿ’. 
‘ಇತ್ತೀಚಿಗೆ ಮದುವೆಯಾಗಿರುವಂತೆ ಕಾಣುತ್ತೆ. ಸ್ವಲ್ಪ ಯೋಚಿಸಿ’.
‘ಮದುವೆ ಆಗಿರೋದೆ ನನ್ನ ಸಮಸ್ಯೆ’.
‘ಮದುವೆ ಎಲ್ಲರ ಜೀವನದಲ್ಲಿ ಬರುವಂಥ ಘಟ್ಟವೆ. ನಿಮ್ದು ಲವ್ ಮ್ಯಾರೇಜ್ ಅನಿಸುತ್ತೆ’
‘ಹೌದು ನಮ್ದು ಲವ್ ಮ್ಯಾರೇಜ್’
‘ಅಪ್ಪ ಅಮ್ಮನಿಗೆ ಕೋಪ ಬಂದಿರಬಹುದು. ಕೆಲವು ದಿನಗಳಾದ ಮೇಲೆ ಅವರ ಕೋಪ ತಣ್ಣಗಾಗುತ್ತೆ. ಅಷ್ಟಕ್ಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರೊದು ತಪ್ಪು’.
‘ಅಪ್ಪ ಅಮ್ಮ ಅಷ್ಟೆ ಅಲ್ಲ ಈ ಮದುವೆಯಿಂದ ಸಮಾಜಕ್ಕೂ ಮುಖ ತೋರಿಸೊದಕ್ಕೆ ಆಗ್ತಿಲ್ಲ’.
‘ಯಾಕೆ ನೀವು ಮದುವೆಯಾಗಿರೋ ವ್ಯಕ್ತಿ ಏನು ಕಳಂಕಿತನೆ’
‘ಇಲ್ಲ ಅವರು ತುಂಬ ಸಾತ್ವಿಕರು’.
‘ಕೊಲೆಗಾರರೆ’
‘ಅಲ್ಲ’.
‘ಹಾಗಾದರೆ ಬಡವರಾಗಿರಬಹುದು’.
‘ಇಲ್ಲ ಅವರೊಬ್ಬ ದೊಡ್ಡ ಉದ್ಯಮಿ’.
‘ಹಾಗಾದರೆ ಸಮಸ್ಯೆ ಏನು’
‘ನಾನು ಮದುವೆಯಾಗಿರೊದು ವಿರೋಧಿ ಲಿಂಗದವರನ್ನು ಅಂದರೆ ಗಂಡಸನನ್ನು. ಮಹಿಳೆಯಾದವಳು ಗಂಡಸನನ್ನು ಮದುವೆಯಾಗುವುದಕ್ಕೆ ಈ ಸಮಾಜ ಹೇಗೆ ಒಪ್ಪುತ್ತೆ. ನನಗೂ ಈಗ ತಪ್ಪು ಮಾಡಿದ್ದೀನಿ ಅನಿಸ್ತಿದೆ. ಆತ್ಮಹತ್ಯೆ0iÉು ಇದಕ್ಕೆ ಪರಿಹಾರ. ದಯವಿಟ್ಟು ಸಹಾಯ ಮಾಡಿ’.
‘ಹೌದು ನೀವು ಭಾಳ ದೊಡ್ಡ ತಪ್ಪು ಮಾಡಿದ್ದಿರಿ. ನಿಮ್ಮ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ನಿರ್ಧಾರನ ನಾನು ಗೌರವಿಸ್ತೀನಿ. ನಾಳೆ ಸಾಯಂಕಾಲ ಆರು ಗಂಟೆಗೆ ಬನ್ನಿ ಸಲಹೆ ತಯ್ಯಾರಿರುತ್ತೆ’ ಎಂದು ಹೇಳಿ ಆ ಯುವತಿಯನ್ನು ಬ್ರಹ್ಮೇಂದ್ರ ಬೀಳ್ಕೊಟ್ಟ.
●●●
‘ಈ ಘಟನೆಯಾಗಿ ಮೂರುತಿಂಗಳುಗಳಾಯ್ತು. ಆ ಘಟನೆ ನಡೆದ ದಿನದಿಂದ ರಾತ್ರಿ ನನಗೆ ನಿದ್ದೆನೆ ಬರ್ತಿಲ್ಲ. ಹಾಸಿಗೆಗೆ ಮೈಚಾಚಿದ್ದೆ ಕಣ್ಮುಂದೆ ಆ ಘಟನೆ ಬಿಚ್ಚಿಕೊಳ್ಳುತ್ತ ಹೋಗುತ್ತೆ. ಈ ಹಿಂಸೆಯಿಂದ ಪಾರಾಗಬೇಕು ಅಂದರೆ ಆತ್ಮಹತ್ಯೆ ಒಂದೇ ದಾರಿ. ಸಾವು ಕೂಡ ಸುಖವಾಗಿರಬೇಕು ನೋಡಿ. ಅದಕ್ಕೆ ನಿಮ್ಮ ಹತ್ತಿರ ಬಂದಿರೊದು’ ಮಧ್ಯವಯಸ್ಸಿನ ವ್ಯಕ್ತಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರೆ ಬ್ರಹ್ಮೇಂದ್ರ ಅವರನ್ನೇ ತದೇಕಚಿತ್ತನಾಗಿ ದಿಟ್ಟಿಸಿ ನೋಡುತ್ತಿದ್ದ. 
‘ನಡೆದದ್ದಾದರೂ ಏನು ವಿವರಿಸಿ ಹೇಳಿ’ ಕೇಳಿದ ಬ್ರಹ್ಮೇಂದ್ರ.
‘ತುಂಬ ವಯಸ್ಸಾದ ವ್ಯಕ್ತಿಯೋರ್ವರು ತಮ್ಮ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಅರ್ಜಿ ಸಲ್ಲಿಸಿದ ಎರಡೇ ದಿನಗಳಲ್ಲಿ ಕೆಲಸ ಮಾಡಿಕೊಟ್ಟೆ’.
‘ಸಂತೋಷ ಪಡಬೇಕಾದ ವಿಷಯಕ್ಕೆ ಯಾಕೆ ಆತಂಕ ಪಡುತ್ತಿದ್ದೀರಿ’.
‘ನೋಡಿ ಆ ಮುದುಕನ ಕೆಲಸ ಮಾಡಿಕೊಡೊದಕ್ಕೆ ನಾನು ಒಂದು ಪೈಸೆನೂ ಲಂಚವಾಗಿ ತೆಗೆದುಕೊಳ್ಳಲಿಲ್ಲ. ಯಾವುದೋ ಜ್ಞಾನದಲ್ಲಿದ್ದ ನನಗೆ ಲಂಚ ತೊಗೊಬೇಕು ಅನ್ನೊದು ಮರ್ತೆಹೋಗಿತ್ತು. ಆ ಮುದುಕಪ್ಪ ಆದರೂ ನೆನಪು ಮಾಡ್ಬೇಕಿತ್ತು. ಆವತ್ತಿನಿಂದ ನಾನು ನನ್ನ ಸರ್ಕಾರಿ ಕೆಲಸಕ್ಕೆ ದ್ರೋಹ ಮಾಡ್ತಿದ್ದೀನಿ ಅನಿಸೊದಕ್ಕೆ ಶುರುವಾಗಿದೆ. ಎಲ್ಲಿ ನೈತಿಕನಾಗ್ತಿದ್ದಿನೋ ಎನ್ನುವ ಭಯ ಕಾಡ್ತಿದೆ. ಜೀವನದ ಮೇಲೆ ಜಿಗುಪ್ಸೆ ಬಂದಿದೆ. ಹೀಗೆ ನೈತಿಕನಾಗಿ ಉಳಿಯೊದರಲ್ಲಿ ಅರ್ಥವಿಲ್ಲ. ಸಾಯ್ಬೇಕು ದಯವಿಟ್ಟು ಮಾರ್ಗದರ್ಶನ ಮಾಡ್ಬೇಕು’ ಕೈಮುಗಿದು ವಿನಂತಿಸಿದ ಮಧ್ಯವಯಸ್ಕನಿಗೆ ನಾಳೆ ಸಾಯಂಕಾಲ ಆರು ಗಂಟೆಗೆ ಉಪಯುಕ್ತ ಸಲಹೆ ನೀಡುವುದಾಗಿ ಭರವಸೆ ಕೊಟ್ಟ ಬ್ರಹ್ಮೇಂದ್ರ.

●●●

ಸಮಯ ಮಧ್ಯಾಹ್ನದ ಮೂರು ಗಂಟೆ. ಬ್ರಹ್ಮೇಂದ್ರನ ಚೇಂಬರಿನಲ್ಲಿ ಅವನೆದುರು ಸುಮಾರು ಎಪ್ಪತ್ತು ವರ್ಷ ವಯಸ್ಸಿನ ವೃದ್ಧರೊಬ್ಬರು ಕುಳಿತಿದ್ದಾರೆ. ವಯಸ್ಸು ಎಪ್ಪತ್ತಾದರೂ ದೇಹ ದಷ್ಟಪುಷ್ಟವಾಗಿದ್ದು ಮುಖದಲ್ಲಿ ಆರೋಗ್ಯದ ಕಳೆಯಿದೆ. ಆ ಬಿರುಬಿಸಿಲಿನಲ್ಲಿ ಮೂರು ಮೈಲಿ ದೂರದಿಂದ ನಡೆದುಬಂದಿದ್ದರೂ ಅವರ ಮುಖದಲ್ಲಿ ಸ್ವಲ್ಪವೂ ಆಯಾಸದ ಚಿಹ್ನೆಯಿಲ್ಲ. ಬ್ರಹ್ಮೇಂದ್ರ ಬಾಯಿತೆರೆಯುವ ಮೊದಲೇ ಆ ವೃದ್ಧರೆ ತಮ್ಮ ಪರಿಚಯ ಹೇಳಿಕೊಂಡು ತಮ್ಮ ಸಮಸ್ಯೆಯನ್ನು ವಿವರಿಸತೊಡಗಿದರು.
‘ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದೆ. ನಿವೃತ್ತನಾಗಿ ಹತ್ತು ವರ್ಷಗಳಾದ್ವು. ಸರ್ಕಾರಿ ಕೆಲಸದಲ್ಲಿ ಊರೂರಿಗೆ ವರ್ಗಾವಣೆ ಆಗುತ್ತಿದ್ದುದ್ದರಿಂದ ಸ್ವಂತ ಮನೆ, ಜಮೀನು ಅಂತ ಮಾಡ್ಕೊಳ್ಳಲಿಲ್ಲ. ಒಬ್ಬನೆ ಮಗ. ಇದೇ ಶಹರದಲ್ಲಿ ದೊಡ್ಡ ಹುದ್ದೆಯಲ್ಲಿ ಉದ್ಯೋಗದಲ್ಲಿದ್ದಾನೆ. ಸೊಸೆ ಕೂಡ ದೊಡ್ಡ ಅಧಿಕಾರಿಣಿ. ನಾನು ಕೆಲಸದಲ್ಲಿದ್ದಾಗಲೆ ಹೆಂಡತಿ ತೀರಿಕೊಂಡಳು. ನಿವೃತ್ತಿಯ ನಂತರ ಮಗನ ಮನೆಯಲ್ಲೆ ಇದ್ದೀನಿ’ ಇಷ್ಟು ಹೇಳಿ ಮಾತು ನಿಲ್ಲಿಸಿದವರು ಎದುರುಗಡೆ ಇದ್ದ ಗ್ಲಾಸಿನಲ್ಲಿದ್ದ ನೀರನ್ನು ಕುಡಿದರು.
‘ಹಾಗಾದರೆ ಸಾಯುವಂಥ ಸಮಸ್ಯೆ ಏನೂ ಇಲ್ಲ ನಿಮಗೆ’.
‘ಸಮಸ್ಯೆ ಶುರುವಾದದ್ದೆ ನನ್ನ ನಿವೃತ್ತಿಯ ನಂತರ. ರಿಟೈರ್ಡ್ ಆದ ಮೇಲೆ ವೃದ್ಧಾಶ್ರಮಕ್ಕೆ ಹೋಗೊ ತಯ್ಯಾರಿಯಲ್ಲಿದ್ದೆ. ಆದರೆ ಮಗ ಮತ್ತು ಸೊಸೆ ನನ್ನನ್ನು ವೃದ್ಧಾಶ್ರಮಕ್ಕೆ ಹೋಗೊಕೆ ಬಿಡಲೇ ಇಲ್ಲ. ಕಳೆದ ಹತ್ತು ವರ್ಷಗಳಿಂದ ನನ್ನನ್ನು ತಮ್ಮ ಜೊತೆನೆ ಇಟ್ಟುಕೊಂಡಿದ್ದಾರೆ. ಬೆಳಗ್ಗೆ ಟಿಫಿನ್, ಮಧ್ಯಾಹ್ನ ಮತ್ತು ರಾತ್ರಿ ಊಟ ಆಗಾಗ ನಾಲಿಗೆ ರುಚಿಗೆ ತಕ್ಕಂತೆ ತಿಂಡಿ ಎಲ್ಲ ಕೊಟ್ಟು ನನಗೆ ಹಿಂಸಿಸುತ್ತಿದ್ದಾರೆ. ನಾನು ಸ್ವಲ್ಪ ಕೆಮ್ಮಿದರು ಸಾಕು ಡಾಕ್ಟರ್‍ನ ಮನೆಗೇ ಕರಿಸ್ತಾರೆ. ನನ್ನ ಪೆನ್ಶನ್ ಹಣ ಕೊಡೊದಕ್ಕೆ ಹೊದರೆ ಒಂದು ಪೈಸೆ ಮುಟ್ಟೊದಿಲ್ಲ. ಇಷ್ಟೊಂದು ಪ್ರೀತಿ ಕಾಳಜಿ ನಡುವೆ ನನಗೆ ಉಸಿರುಗಟ್ಟಿದಂತಾಗ್ತಿದೆ. ನಮ್ಮ ಕಾಲದಲ್ಲಿ ಆಗೆಲ್ಲ ಎಲ್ಲರೂ ವಯಸ್ಸಾದ ಅಪ್ಪ ಅಮ್ಮಂದಿರನ್ನ ವೃದ್ಧಾಶ್ರಮಕ್ಕೆ ಕಳಿಸುತ್ತಿದ್ದರು. ನಾನೂ ಕೂಡ ಅಪ್ಪ ಅಮ್ಮನ್ನ ವೃದ್ಧಾಶ್ರಮದಲ್ಲಿ ಬಿಟ್ಟು ಕೈತೊಳೆದುಕೊಂಡವನು. ಈಗೀಗ ಊರಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಆಗ್ತಿದೆ ಅಂತಿದ್ದಾರೆ. ಮನುಷ್ಯ ಇಷ್ಟೊಂದು ನೈತಿಕನಾದರೆ ಬದುಕೊದು ತುಂಬ ಕಷ್ಟ ಆಗುತ್ತೆ. ಮಗ ಸೊಸೆ ನನ್ನನ್ನು ವೃದ್ಧಾಶ್ರಮಕ್ಕೆ ಕಳುಹಿಸಲ್ಲ. ಇದಕ್ಕೆ ಆತ್ಮಹತ್ಯೆನೇ ದಾರಿ. ಒಂದು ಸುಖದ ಸಾವಿನ ವಿಧಾನ ತಿಳಿಸಿಕೊಡಿ ಅಂತ ನಿಮ್ಮ ಹತ್ತಿರ ಬಂದಿದ್ದೀನಿ’ ಖಡಕ್ಕಾಗಿ ಹೇಳಿ ಮಾತು ನಿಲ್ಲಿಸಿದರು. ನಾಳೆ ಸಾಯಂಕಾಲ ಆರು ಗಂಟೆಗೆ ಬರುವಂತೆ ಹೇಳಿ ಅವರನ್ನು ಸಾಗಹಾಕಿದ.   
●●●
ಅಪಾರ್ಟಮೆಂಟಿನ ತನ್ನ ವೈಭವೋಪೇತ ಫ್ಲ್ಯಾಟ್‍ನಲ್ಲಿ ತೊಡೆಯಮೇಲೆ ಲ್ಯಾಪ್‍ಟಾಪ್ ಇಟ್ಟುಕೊಂಡು ಯಾವುದೋ ವೆಬ್‍ಸೈಟಿನ ಮೇಲೆ ದೃಷ್ಟಿ ನೆಟ್ಟಿದ್ದ ಬ್ರಹ್ಮೇಂದ್ರನ ಮನಸ್ಸು ಕ್ಷೋಭೆಗೆ ಒಳಗಾಗಿತ್ತು. ಮನುಷ್ಯರು ನೈತಿಕರಾಗಿ ದಾರಿ ತಪ್ಪುತ್ತಿದ್ದಾರೆ ಎಂದಿತು ಅವನ ಮನಸ್ಸು. ಇಂಥ ಕಲುಷಿತ ವಾತಾವರಣದಲ್ಲಿ ಬದುಕುವುದೇ ಹೇಸಿಗೆ ಅನಿಸತೊಡಗಿತು. ಆತ್ಮಹತ್ಯೆಗೆ ಸರಳವಾದ ಮಾರ್ಗೋಪಾಯಕ್ಕಾಗಿ ಇಂಟರ್‍ನೆಟ್ಟಿನಲ್ಲಿ ಗೂಗಲಿಸಿದ. ಲ್ಯಾಪ್‍ಟಾಪ್‍ನ ಪರದೆಯ ಮೇಲೆ ಹಲವಾರು ಪುಟಗಳು ಕಾಣಿಸಿಕೊಂಡವು. ಒಂದು ಪುಟವನ್ನು ತೆರೆದು ಓದತೊಡಗಿದ. ‘ನಗರದ ಕಲುಷಿತ ವಾತಾವರಣಕ್ಕೆ ಹೊಂದಿಕೊಂಡ ದೇಹಕ್ಕೆ ಶುದ್ಧವಾದ ಆಮ್ಲಜನಕ ಸೇರಿದಲ್ಲಿ ಮನುಷ್ಯ ಕೆಲವೇ ಕ್ಷಣಗಳಲ್ಲಿ ಸಾಯುತ್ತಾನೆ. ಬೆಳಗ್ಗೆ ನಗರದ ಹೊರವಲಯದಲ್ಲಿ ಒಂದರ್ಧಗಂಟೆ ವಾಕ್ ಹೋಗಿ ಶುದ್ಧವಾದ ಗಾಳಿಯನ್ನು ಸೇವಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ದಾರಿಯಲ್ಲೆ ಹೆಣವಾಗಿ ಬಿದ್ದಿರ್ತಿರಿ’ ಎಂದಿತ್ತು. ಮರುದಿನ ನಸುಕಿನಲ್ಲೆ ಕಾರು ಓಡಿಸಿಕೊಂಡು ಬ್ರಹ್ಮೇಂದ್ರ ನಗರದ ಹೊರವಲಯವನ್ನು ಪ್ರವೇಶಿಸಿದ. ಕಾರಿನಿಂದ ಹೊರಗಿಳಿದವನಿಗೆ ತಣ್ಣನೆಯ ಗಾಳಿ ಸೋಕಿ ಮೈ ಜುಮ್ಮೆಂದಿತು. ದೀರ್ಘವಾದ ಉಸಿರೆಳೆದುಕೊಂಡವನ ಮೂಗಿನ ಎರಡೂ ಹೊಳ್ಳೆಗಳ ಮೂಲಕ ಬೊಗಸೆಯಷ್ಟು ಶುದ್ಧವಾದ ಗಾಳಿ ಎದೆಯನ್ನು ಹೊಕ್ಕಿತು.  
●●●
2050 ಜನೆವರಿ 3 ಸಾಯಂಕಾಲ 6 ಗಂಟೆಗೆ ಸ್ವರ್ಗ ಕಟ್ಟಡದ 100 ನೇ ಅಂತಸ್ತಿನಲ್ಲಿದ್ದ ಮುಕ್ತಿಧಾಮ ಕಚೇರಿಯ ಎದುರು ಯುವತಿ, ಮಧ್ಯ ವಯಸ್ಕ ಮತ್ತು ವೃದ್ಧ ನಿಂತಿದ್ದಾರೆ. ಕಚೇರಿಯ ಬಾಗಿಲು ಮುಚ್ಚಿದೆ. ಮೂರೂ ಜನ ಪ್ರತ್ಯೇಕವಾಗಿ ಬ್ರಹ್ಮೇಂದ್ರನ ಮೊಬೈಲಿಗೆ ಕರೆ ಮಾಡುತ್ತಿದ್ದಾರೆ. ಎಲ್ಲರಿಗೂ ಬರುತ್ತಿರುವುದು ಸ್ವಿಚ್ಡ್ ಆಫ್ ಎನ್ನುವ ಒಂದೇ ಉತ್ತರ. ಇವರು ನಿಂತಿರುವುದನ್ನು ನೋಡಿ ಎದುರು ಕಚೇರಿಯಲ್ಲಿನ ವ್ಯಕ್ತಿ ಹತ್ತಿರ ಬಂದು ಹೇಳಿದ ‘ಬ್ರಹ್ಮೇಂದ್ರ ಇವತ್ತು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡರು’. ‘ಅಯ್ಯೋ ಹೀಗಾಗಬಾರದಾಗಿತ್ತು’ ಮೂವರೂ ಒಮ್ಮಲೇ ಉದ್ಗರಿಸಿದರು.

(೦೫.೦೧.೨೦೨೦ ರ ಕನ್ನಡಪ್ರಭ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದೆ)


---000---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ