Thursday, December 27, 2012

'ಸಾಧನೆ' ಪುಸ್ತಕ ಬಿಡುಗಡೆ

     'ಸಾಧನೆ' ಇದು ನನ್ನ ಮೊದಲ ಕೃತಿ. ಇದುವರೆಗೆ ನೂರಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಒಂದೆರಡು ಕಥೆಗಳನ್ನು ಬರೆದಿರುವೆನಾದರೂ ಪುಸ್ತಕ ರೂಪದಲ್ಲಿ ಪ್ರಕಟವಾದ ಮೊದಲ ಕೃತಿ ಇದು. ನನ್ನ ಎರಡನೇ ಕೃತಿ 'ಪೂರ್ಣ ಸತ್ಯ' ಅಚ್ಚಿನಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗಿ ಹೊರಬರಲಿದೆ. ಈ ಸಂದರ್ಭ ನನ್ನ ಮೊದಲ ಪುಸ್ತಕ 'ಸಾಧನೆ'ಯನ್ನು ಪ್ರಕಟಿಸಿದ ಬಾಗಲಕೋಟೆಯ ಬಿ.ವಿ.ವಿ.ಸಂಘದ ವೈರಾಗ್ಯದ ಮಲ್ಲಣಾರ್ಯ ಪ್ರಕಾಶನ ಸಂಸ್ಥೆಗೂ ಮತ್ತು 'ಪೂರ್ಣ ಸತ್ಯ' ಕೃತಿಯನ್ನು ಪ್ರಕಟಿಸುತ್ತಿರುವ ಗುಲಬರ್ಗಾದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಗೂ ನನ್ನ ಕೃತಜ್ಞತೆಗಳು.

'ಸಾಧನೆ' ಪುಸ್ತಕ ಬಿಡುಗಡೆ ಸಂದರ್ಭದಲ್ಲಿನ ಕೆಲವು ಚಿತ್ರಗಳು.








Wednesday, December 26, 2012

ಗಾಂಧಿ ಕ್ಲಾಸು

   

          'ಬದುಕು ನನ್ನನ್ನು ರೂಪಿಸಿತೋ, ನಾನೇ ನನ್ನ ಬದುಕನ್ನು ಹೀಗೆ ರೂಪಿಸಿಕೊಂಡೆನೋ ಆದರೆ ಒಂದಂತೂ ಸತ್ಯ ನನ್ನೀ ಬದುಕು ನನ್ನ ಪ್ರಾರಬ್ಧ ಮತ್ತು ಸವಾಲಿನದು. ನಾನು ಬಾಲ್ಯವನ್ನಾಗಲಿ, ಹದಿಹರೆಯದ ದಿನಗಳನ್ನಾಗಲಿ ಉತ್ಕಟವಾಗಿ ಎಲ್ಲರಂತೆ ಅನುಭವಿಸುವುದು ಆಗಲೇ ಇಲ್ಲ. ದುರ್ಬರ ಬದುಕು ಅದಕ್ಕೆ ಆಸ್ಪದ ಮಾಡಿಕೊಡಲೇ ಇಲ್ಲ. ಬಾಲ್ಯದ, ಹದಿಹರೆಯದ ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ನನ್ನ ಕಣ್ಣುಗಳು ಒದ್ದೆಯಾಗಿರುವುದುಂಟು. ಹಿಂಬಾಲಿಸುತ್ತಲೇ ಇದ್ದ ಆತಂಕ, ಅನಿಶ್ಚಿತತೆಗಳನ್ನು ನಿರಾಸೆಗೊಳಿಸಿ ಬದುಕು ಅರವತ್ತರ ಹೊಸ್ತಿಲ ಬಳಿ ತಂದು ನಿಲ್ಲಿಸಿರುವುದು ಪವಾಡವೇ ಸರಿ' ಈ ಸಾಲುಗಳು ನಾನು ಇತ್ತೀಚಿಗೆ ಓದಿದ 'ಗಾಂಧಿ ಕ್ಲಾಸು' ಪುಸ್ತಕದಿಂದ ಹೆಕ್ಕಿ ತೆಗೆದವುಗಳು. 
           'ಗಾಂಧಿ ಕ್ಲಾಸು' ಕನ್ನಡದ ಖ್ಯಾತ ಬರಹಗಾರ ಕುಂವೀ ಎಂದೇ ಹೆಸರಾದ ಕುಂಬಾರ ವೀರಭದ್ರಪ್ಪನವರ ಆತ್ಮಕಥನ. ಕುಂವೀ ನಾನು ಮೆಚ್ಚುವ ಹಾಗೂ ಅತಿಯಾಗಿ ಹಚ್ಚಿಕೊಂಡಿರುವ ಲೇಖಕ. ಅವರ ಆತ್ಮಕಥನ ಪ್ರಕಟವಾಗಿದೆ ಎಂದು ಗೊತ್ತಾದದ್ದೇ ತಡ ಓದಲೇ ಬೇಕೆನ್ನುವ ಉತ್ಕಟ ಆಸೆ ಪುಸ್ತಕವನ್ನು ಹುಡುಕಿಕೊಂಡು ಹೋಗಿ ಖರೀದಿಸಿಯೇ ಬಿಟ್ಟಿತು. ಬಳ್ಳಾರಿ ಜಿಲ್ಲೆ ಕೊಟ್ಟೂರಿನವರಾದ ಕುಂ.ವೀರಭದ್ರಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 2009ರಲ್ಲಿ ನಿವೃತ್ತರಾಗಿರುವರು. ನೂರಾರು ಕಥೆಗಳನ್ನು ಬರೆದಿರುವ ಇವರು ಕಾದಂಬರಿಗಳು ಮತ್ತು ಜೀವನ ಚರಿತ್ರೆ ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವರು. ಅವರ ಅನೇಕ ಕಥೆಗಳು ಮತ್ತು ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಜೊತೆಗೆ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂಧಿವೆ. ಕಥೆ, ಕಾದಂಬರಿ, ಜೀವನ ಚರಿತ್ರೆ ಪ್ರತಿಯೊಂದರಲ್ಲಿ ಕುಂವೀ ಶೈಲಿ ತನ್ನ ಛಾಪು ಮೂಡಿಸಿ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ತಮ್ಮ ಕೃತಿಗಳ ಓದಿಗಾಗಿ ಓದುಗರ ಒಂದು ವಲಯವನ್ನೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಬರಹಗಾರ ಕುಂವೀ. ಹಲವು ದಶಕಗಳಿಂದ ಸಾಹಿತ್ಯಾಸಕ್ತರನ್ನು ಕಾಡುತ್ತಲೇ ಬಂದಿರುವ ಈ ಲೇಖಕನ ವೈಯಕ್ತಿಕ ಬದುಕು ಹೇಗಿರಬಹುದೆಂಬ ಕುತೂಹಲ ನನ್ನದಾಗಿತ್ತು. 'ಗಾಂಧಿ ಕ್ಲಾಸು' ಆ ಕೃತಿ ಕೈಯಲ್ಲಿ ಹಿಡಿದ ಘಳಿಗೆ ಅದು ಹೇಗೆ ಸಮಯ ಸರಿದು ಹೋಯಿತು ಎಂದು ಅರಿವಿಗೆ ಬರದಂತೆ ಆರು ದಶಕಗಳ ಕುಂವೀ ಬದುಕು ಕಣ್ಣೆದುರು ಅನಾವರಣಗೊಂಡಿತು. ಅದು ವ್ಯಕ್ತಿಯೋರ್ವನ ತೀರ ಖಾಸಗಿ ಬದುಕು ಎನ್ನುವುದಕ್ಕಿಂತ ಅದೊಂದು ಆರು ದಶಕಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ತವಕ, ತಲ್ಲಣ ಮತ್ತು ಹಿರಿಮೆಗಳ ಹಿನ್ನೋಟ. ಆ ಹಿನ್ನೋಟದಲ್ಲಿ ಅಪ್ರತಿಮ ಸಾಧಕನ ಯಶೋಗಾಥೆ ಇದೆ, ಎದುರಾದ ಸಂಕಷ್ಟಗಳಿವೆ, ಸಂಪ್ರದಾಯಗಳ ಸಂಘರ್ಷವಿದೆ, ಸಾರಸ್ವತ ಲೋಕದ ಸಣ್ಣತನಗಳಿವೆ, ಶೋಷಿತರ ಬದುಕಿನ ಬವಣೆಗಳಿವೆ ಇವುಗಳೆಲ್ಲವನ್ನೂ ಮೀರಿ ಕುಂವೀ ಅವರ ಮುಗ್ಧತೆ ಇಲ್ಲಿ ಮೈಚಾಚಿಕೊಂಡಿದೆ.

ಗಾಂಧಿ ಕ್ಲಾಸು 
       'ಅದ್ಯಾಕೆ ಬಾಪೂಜಿ ನೀವು ಮೂರನೆ ತರಗತಿಯ ಭೋಗಿಗಳಲ್ಲಿ ಪ್ರಯಾಣಿಸುವುದು?' 'ನಾಲ್ಕನೇ ತರಗತಿಯ ಭೋಗಿಗಳಿಲ್ವಲ್ಲ ಅದಕ್ಕೆ'. ಕುಂವೀ ಅವರ ಆತ್ಮಕಥೆ ಪ್ರಾರಂಭವಾಗುವುದೇ ಈ ಸಾಲುಗಳೊಂದಿಗೆ. ತಮ್ಮ ಆತ್ಮಕಥೆಯನ್ನು ಹೇಳುತ್ತ ಹೋಗುವ ಲೇಖಕರು ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ 'ಹನುಮಂತನ ಬಾಲದೋಪಾದಿಯಲ್ಲಿರುವ ಘಟನೆಗಳು ಒಂದೇ ಎರಡೇ ಲೆಕ್ಕ ಹಾಕಿದಲ್ಲಿ ನೂರಾರು ಸಾವಿರಾರು. ಇವುಗಳ ಪೈಕಿ ಕೆಲವು ಮುಖ್ಯವಾದವುಗಳನ್ನು ಪ್ರಸ್ತಾಪಿಸದಿದ್ದಲ್ಲಿ ನನ್ನ ಆತ್ಮಕಥೆ ಬಾಲ್ಕನಿಯಾಗಬಹುದೇ ಹೊರತು ಗಾಂಧಿ ಕ್ಲಾಸ್ ಆಗಲಾರದು'. ಒಟ್ಟಾರೆ ಗಾಂಧಿ ಕ್ಲಾಸ್ ಅದು ಸರಳತೆಯ, ಬಡತನದ ಹಾಗು ಸಾವಿರಾರು ಸಂಕಷ್ಟಗಳ ಸಂಕೇತ. ಕುಂವೀ ಅವರ ಬದುಕು ಕೂಡ ದಾರಿದ್ರ್ಯ, ಸಂಕಟಗಳ ಮತ್ತು ಸರಳತೆಯ ಸಮ್ಮಿಶ್ರಣ. ಅದಕ್ಕೆಂದೇ ಅವರು ತಮ್ಮ ಆತ್ಮಕಥೆಗೆ 'ಗಾಂಧಿ ಕ್ಲಾಸು' ಎಂದು ಹೆಸರಿಸುತ್ತಾರೆ.
          ಸಪ್ನ ಬುಕ್ ಹೌಸ್ ನವರು ಪ್ರಕಟಿಸಿರುವ 390 ಪುಟಗಳಿಗೆ ವಿಸ್ತರಿಸಿರುವ ಆತ್ಮಕಥನ ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಅನಾವರಣಗೊಂಡಿದೆ. ಪ್ರಾರಂಭದ ಎರಡು ಅಧ್ಯಾಯಗಳಲ್ಲಿನ ಬರವಣಿಗೆಯನ್ನು ಲೇಖಕರು ತಮ್ಮ ತಂದೆಗಾಗಿ ಮೀಸಲಿಟ್ಟಿರುವರು. ಅಪ್ಪನ ದೈಹಿಕ ಸೌಂದರ್ಯ, ಆತನೊಳಗಿನ ಸಿಟ್ಟು, ಹಟ, ಬಡವರ ಕುರಿತು ಇರುವ ಅನುಕಂಪ, ಮಗನನ್ನು ಓದಿಸಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆನ್ನುವ ಹಂಬಲ ಹೀಗೆ ಅಪ್ಪನ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಈ ಎರಡು ಅಧ್ಯಾಯಗಳಲ್ಲಿ ಪರಿಚಯಿಸುತ್ತಾರೆ. ತಂದೆಯ ಅತಿಯಾದ ಕೋಪ ಮತ್ತು ಹಟ ಒಮ್ಮೊಮ್ಮೆ ಸಿಟ್ಟು ತರಿಸಿದರೆ ಮಗದೊಮ್ಮೆ ಮಕ್ಕಳಿಗಾಗಿ ಅಹರ್ನಿಶಿ ದುಡಿಯುತ್ತಿರುವ ಅಪ್ಪ ಆದರ್ಶಪ್ರಾಯನಾಗುತ್ತಾನೆ. ಆಪ್ಪನಲ್ಲಿನ ಆದರ್ಶ ಮತ್ತು ಸಿಟ್ಟಿನ ಸ್ವಭಾವದಿಂದ ಆಸ್ತಿಯನ್ನೆಲ್ಲ ಕಳೆದುಕೊಂಡು ನಾವು ಬಡತನದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು ಎಂದು ಹೇಳುವ ಕುಂವೀ ತಂದೆಯ ಸಾವಿನ ನಂತರ ಇರುವ ಸಾಲವನ್ನೆಲ್ಲ ತೀರಿಸಿ ಅಪ್ಪನನ್ನು ಋಣಮುಕ್ತನನ್ನಾಗಿಸುವ ಸನ್ನಿವೇಶ ಓದುಗರ ಮನಸ್ಸನ್ನು ಆರ್ದ್ರವಾಗಿಸುತ್ತದೆ. ಆ ಸಂದರ್ಭ ಅರಿವಿಲ್ಲದೆ ಕಣ್ಣೀರು ಕಪಾಳಕ್ಕಿಳಿದು ಭಾವ ತಿವೃತೆಯಿಂದ ಹೃದಯ ಹೊಯ್ದಾಡುತ್ತದೆ.
          ನಂತರದ ಅಧ್ಯಾಯಗಳಲ್ಲಿ ಕುಂವೀ ಶಿಕ್ಷಣ, ನಿರುದ್ಯೋಗ, ದಿನಗೂಲಿಯಾಗಿ ಕೆಲಸ ಮಾಡಿದ ಸಂದರ್ಭಗಳನ್ನು ಕುರಿತು ಹೇಳಿಕೊಂಡಿರುವರು. ಒಂದು ಸಂದರ್ಭ ಮನೆಯಿಂದ ದೂರಾಗಿ ಕೆಲಸ ಸಿಗದೆ 36 ಗಂಟೆಗಳ ಕಾಲ ಉಪವಾಸವಿದ್ದ ಪ್ರಸಂಗವನ್ನು ಓದುವಾಗ ಕಣ್ಣುಗಳು ಮತ್ತೆ ಹನಿಗೂಡುತ್ತವೆ. ಆ ಸಮಯ ಯುವ ಈರಭದ್ರನಲ್ಲಿರುವ ಹಸಿವನ್ನು ಗುರುತಿಸಿ ತಾನು ತಂದ ಬುತ್ತಿಯನ್ನೇ ಅರ್ಧ ಹಂಚಿಕೊಂಡು ಉಣ್ಣುವ ದುರುಗ್ಯಾ ನಾಯ್ಕನನ್ನು ಅವನ ಕೊನೆಗಾಲದಲ್ಲಿ ಸತ್ಕರಿಸುವ ಕುಂವೀ ವ್ಯಕ್ತಿತ್ವ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.
        ಪುಸ್ತಕದ ಒಂಬತ್ತನೇ ಅಧ್ಯಾಯ ಕುಂವೀ ಬದುಕಿನ ಬಹುಮುಖ್ಯ ತಿರುವಿಗೆ ಸಂಬಂಧಿಸಿದೆ. 'ನೀನು ಯಾವುದೇ ಕಾರಣಕ್ಕೂ ಊರಿಗೆ ಬರಕೂಡದು. ತೊಲಗು ಇಲ್ಲಿಂದ. ಮುಂದೆಯೂ ನಿನ್ನ ಮುಖ ತೋರಿಸಬೇಡ' ಹೆತ್ತ ಅಪ್ಪನೇ ಫತ್ವಾ ಹೊರಡಿಸಿದ ಮೇಲೆ ಅದು ಗಡಿಪಾರೋ, ಬಹಿಷ್ಕಾರವೋ ಯಾವ ಸುಡುಗಾಡೆಂಬುದು ತಿಳಿಯದು ಎನ್ನುತ್ತ ಊರು ಬಿಟ್ಟು ಹೊರಡುವ ಕುಂವೀ ನೇರವಾಗಿ ಹೋಗಿ ಸೇರುವುದು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಿಗೆ ಸೇರಿದ ವಾಗಿಲಿ ಎನ್ನುವ ಕುಗ್ರಾಮವನ್ನು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಪುಟ್ಟ ಗ್ರಾಮವನ್ನು ಸೇರಿಕೊಳ್ಳುವ ಕುಂವೀಗೆ ನಂತರದ ದಿನಗಳಲ್ಲಿ ಆ ಗ್ರಾಮ ಅವರಲ್ಲಿನ ಅಭಿವ್ಯಕ್ತಿ ಮಾಧ್ಯಮಕ್ಕೆ ವೇದಿಕೆಯಾಗುತ್ತ ಹೋಗುತ್ತದೆ. ಗಾಂಧಿ ಕ್ಲಾಸಿನ ಕಥಾ ನಾಯಕನ ಬದುಕಿಗೆ ಒಂದು ಸೃಜನಶೀಲತೆಯ ಆಯಾಮ ದೊರೆಯುವುದು ವಾಗಿಲಿ ಎನ್ನುವ ಪುಟ್ಟ ಪ್ರಪಂಚದಲ್ಲೇ. ವಾಗಿಲಿ ಅವರಿಗೆ ಬಡತನ, ಅಜ್ಞಾನ, ಅಂಧಾನುಕರಣೆ, ಶೋಷಣೆ, ವರ್ಗ ಸಂಘರ್ಷ, ದಬ್ಬಾಳಿಕೆ, ಜೀತ ಪದ್ಧತಿ, ಸೇಡು, ಪ್ರತಿಕಾರ, ಮುಗ್ಧತೆ, ಸುಶಿಕ್ಷಿತರ ಸಣ್ಣತನ ಹೀಗೆ ಅನೇಕ ವಿಷಯಗಳನ್ನು ಪರಿಚಯಿಸುತ್ತದೆ. ಅವರ ಕಥೆ, ಕಾದಂಬರಿಗಳ ರಚನೆಗೆ ವಾಗಿಲಿ ಸ್ಫೂರ್ತಿಯ ಸೆಲೆಯಾಗುತ್ತದೆ. ಇಲ್ಲಿ ಕುಂವೀ ಬದುಕಿನ ಜೊತೆ ಜೊತೆಗೆ ಆಂಧ್ರದ ರಾಯಲಸೀಮಾದ ರಕ್ತಸಿಕ್ತ ಚರಿತ್ರೆ ನಮ್ಮೆದುರು ತೆರೆದುಕೊಳ್ಳುತ್ತದೆ. ಓದುತ್ತ ಹೋದಂತೆ  ಇದು ಆತ್ಮಕಥೆಯೋ ಅಥವಾ ರೋಚಕ ನಿರೂಪಣೆಯಿಂದ ಕೂಡಿದ ಕಾದಂಬರಿಯೋ ಎನ್ನುವ ಅನುಮಾನ ಒಂದು ಹಂತದಲ್ಲಿ ಓದುಗನ ಮನಸ್ಸಿನಲ್ಲಿ ಮೂಡದೇ ಇರದು. ಕುಂವೀ ಇಲ್ಲಿ ಬಳಸಿಕೊಂಡಿರುವ ಭಾಷಾ ಶೈಲಿ ತುಂಬ ವಿಶಿಷ್ಟವಾಗಿದ್ದು ಆಕರ್ಷಕವಾಗಿದೆ. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಬಯಲು ಸೀಮೆ ಆಡು ಭಾಷೆಯನ್ನು ಇಲ್ಲಿ ಲೇಖಕರು ದುಡಿಸಿಕೊಂಡ ರೀತಿ ಓದುಗನಿಗೆ ಮೆಚ್ಚುಗೆಯಾಗುತ್ತದೆ. ಯಾವ ವಿಶ್ವವಿದ್ಯಾಲಯ ಮತ್ತು ಅಕಾಡೆಮಿ ಕಟ್ಟಿ ಕೊಡದ ಅನುಭವವನ್ನು ವಾಗಿಲಿ ನನಗೆ ನೀಡಿತು ಎಂದು ಹೇಳುವ ಲೇಖಕರು ಒಂದು ಹಂತದಲ್ಲಿ ನನ್ನೊಳಗಿನ ಸೃಜನಶೀಲತೆ ಕಥೆ, ಕಾವ್ಯ, ಕಾದಂಬರಿಗಳ ವಿವಿಧ ಅಭಿವ್ಯಕ್ತಿ ಮಾಧ್ಯಮಕ್ಕೆ ವಿಸ್ತರಿಸುತ್ತ ಹೋಗಲು ಆ ಪುಟ್ಟ ಗ್ರಾಮವೇ ಕಾರಣ ಎಂದು ತಮ್ಮ ಕೃತಜ್ಞತೆ ಮೆರೆಯುತ್ತಾರೆ. ಬಂಡಾಯ ಮನೋಭಾವದ ಕುಂವೀ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಗ್ರಾಮವನ್ನು ಪ್ರವೇಶಿಸಿ ಮುಂದೊಂದು ದಿನ ಅಲ್ಲಿ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾಗುತ್ತಾರೆ. ನಂತರದ ದಿನಗಳಲ್ಲಿ ಆ ಸಾಮಾಜಿಕ ಪರಿವರ್ತನೆಯೇ ಲೇಖಕರು ವಾಗಿಲಿಯನ್ನು ಬಿಡಲು ಕಾರಣವಾಗುವುದು ಮಾತ್ರ ವಿಪರ್ಯಾಸದ ಸಂಗತಿ.
          ಹತ್ತನೇ ಅಧ್ಯಾಯ ಲೇಖಕರು ಗೂಳ್ಯಮ್ ನಲ್ಲಿ ಕಟ್ಟಿಕೊಂಡ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ನಕ್ಸಲ್ ರ ಪರಿಚಯ, ರಾಯಲ ಸೀಮಾದಲ್ಲಿನ ಹೊಡೆದಾಟಗಳು, ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ, ಶಾಮಣ್ಣ ಕಾದಂಬರಿಯ ರಚನೆ ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ.
        ಕುಂವೀ  ವೃತ್ತಿ ಬದುಕಿನ ಕೊನೆಯ ದಿನಗಳು ಹನ್ನೊಂದನೇ  ಅಧ್ಯಾಯದಲ್ಲಿ ತೆರೆದುಕೊಳ್ಳುತ್ತವೆ. ಗೂಳ್ಯಮ್ ನಿಂದ ಹಿರೇಹಾಳಿಗೆ ಬಂದು ನೆಲೆಸುವ ಕುಂವೀ ಇಲ್ಲಿ ತಮ್ಮ ಮಹತ್ವಾಕಾಂಕ್ಷೆಯ 'ಅರಮನೆ' ಕಾದಂಬರಿಯನ್ನು ಬರೆಯುತ್ತಾರೆ. ಅರಮನೆಯಂಥ ಬೃಹತ್ ಕಾದಂಬರಿಯನ್ನು ಬರೆಯಬೇಕೆನ್ನುವ ತುಡಿತ, ಪಾತ್ರಗಳ ಹುಡುಕಾಟ, ಅರಮನೆಗಳನ್ನು ಹುಡುಕುತ್ತ ಅಲೆದಾಟ, ಕಟ್ಟಿ ಕೆಡವಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ, ಕೊನೆಗೂ ಹದಿನೈದು ವರ್ಷಗಳ ಕಾಲ ಕಾಡಿದ ಸೃಜನಶೀಲ ತಾಕತ್ತು ಕೃತಿಯಾಗಿ ರೂಪಾಂತರಗೊಂಡ ಸಂದರ್ಭ ಇದೆಲ್ಲವನ್ನು ಲೇಖಕರು ಕೊನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ.
         ಪುಸ್ತಕದ ಅಲ್ಲಲ್ಲಿ ಇನ್ನು ಅನೇಕ ವಿಷಯಗಳು ಓದಲು ಸಿಗುತ್ತವೆ. ಶೋಷಣೆಯ ವಿರುದ್ಧ ಕುಂವೀ ಹೋರಾಟ, ಅವರ  ಅಕ್ಷರ ಕ್ರಾಂತಿ, ಬಣ್ಣದ ಬದುಕಿನ ಜನರ ಸಣ್ಣತನ, ಸಾಹಿತ್ಯಿಕ ಬದುಕು ತಂದೊಡ್ಡಿದ ಅವಾಂತರಗಳು, ರೌಡಿಗಳೊಂದಿಗಿನ ಒಡನಾಟ ಪ್ರತಿಯೊಂದನ್ನು ಓದುತ್ತ ಹೋದಂತೆ ಒಂದು ಸೃಜನಶೀಲ ಬದುಕಿನ ವಿಭಿನ್ನ ಮುಖಗಳು ಓದುಗರೆದುರು ಅನಾವರಣಗೊಳ್ಳುತ್ತವೆ. ಜೊತೆಗೆ ಕುಂವೀ ಆಗೊಮ್ಮೆ ಈಗೊಮ್ಮೆ ಕಚುಗುಳಿಯಿಟ್ಟು ಓದುಗರನ್ನು ನಕ್ಕು ನಗಿಸುತ್ತಾರೆ. ಒಟ್ಟಿನಲ್ಲಿ ಪುಸ್ತಕ ಓದಿ ಮುಗಿಸಿದ ನಂತರವೂ ಕುಂವೀ ಎನ್ನುವ ಸೃಜನಶೀಲ ವ್ಯಕ್ತಿತ್ವ ನಮ್ಮನ್ನು ಅನೇಕ ದಿನಗಳವರೆಗೆ ಕಾಡುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, December 20, 2012

ವೈಯಕ್ತಿಕವಾದದ್ದು ಸಾರ್ವತ್ರಿಕವಾಗುತ್ತಿರುವಾಗ......

        ಮೊನ್ನೆ ನನ್ನ ಪರಿಚಿತರು ಗೃಹಪ್ರವೇಶದ ಆಮಂತ್ರಣ ಪತ್ರ ಹಿಡಿದುಕೊಂಡು ಆಹ್ವಾನಿಸಲು ಬಂದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಅವರು ಇನ್ನೇನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿರುವರು. ವೃತ್ತಿ ಬದುಕಿನುದ್ದಕ್ಕೂ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ  ಎಂದು ದುಡಿದುದ್ದನ್ನೆಲ್ಲ ಖರ್ಚು ಮಾಡಿ ಹೈರಾಣಾಗಿರುವ ಅವರಿಗೆ ನಿವೃತ್ತಿಗಿಂತ ಮೊದಲು ತೆಲೆಯ ಮೇಲೊಂದು ಸೂರಿರಲಿ ಎನ್ನುವ  ಆಸೆ. ಯಾವ ಕಾಲದಲ್ಲೋ ಖರೀದಿಸಿದ್ದ ಸೈಟು ಖಾಲಿಯಾಗಿಯೇ ಉಳಿದಿತ್ತು. ಬಳಿಯಲ್ಲಿರುವ ಒಂದಿಷ್ಟು ಈಡುಗಂಟಿಗೆ ಮತ್ತೊಂದಿಷ್ಟನ್ನು ಸಾಲಸೋಲ ಮಾಡಿ ಸೇರಿಸಿ ಕೊನೆಗೂ ಸಣ್ಣದೊಂದು ಮನೆಯನ್ನು ಕಟ್ಟಿಸಿರುವರು. ಎಲ್ಲ ಮುಗಿಯಿತು ಎನ್ನುವಾಗಲೇ ಹೆಂಡತಿ ಮತ್ತು ಮಕ್ಕಳ ವರಾತ ಶುರುವಾಗಿದ್ದು. ನನ್ನ ಪರಿಚಿತರಿಗೋ ಒಂದು ಸಣ್ಣ ಪೂಜೆ ಮಾಡಿ ಅತ್ಯಂತ ಸರಳವಾಗಿ ಗೃಹಪ್ರವೇಶದ ಸಂಪ್ರದಾಯವನ್ನು ಮುಗಿಸಿಬಿಟ್ಟರಾಯಿತು ಎನ್ನುವ ಆಲೋಚನೆ. ಆದರೆ ಅವರ ಯೋಚೆನೆಗೆ ವಿರುದ್ಧವಾಗಿ ಹೆಂಡತಿ ಮಕ್ಕಳದು ಅತ್ಯಂತ ಅದ್ದೂರಿಯಾಗಿಯೇ ಈ ಕಾರ್ಯಕ್ರಮವನ್ನು ಮಾಡಬೇಕೆನ್ನುವ ಹಟ. ಮನೆ ಕಟ್ಟುವುದಕ್ಕೆಂದೇ ಈಗಾಗಲೇ ಐದಾರು ಲಕ್ಷ ರುಪಾಯಿಗಳನ್ನು ಸಾಲ ಮಾಡಿರುವಾಗ ಮತ್ತಷ್ಟು ಸಾಲ ಮಾಡುವ ಪ್ರಾರಬ್ಧವನ್ನೇಕೆ ಮೈಮೇಲೆ ಎಳೆದುಕೊಳ್ಳಬೇಕೆನ್ನುವ ಇರಾದೆ ಈ ಯಜಮಾನರದು. ಸಾಲಮಾಡಿಯಾದರೂ ಸರಿ ಬಂಧುಗಳು ಮತ್ತು ಪರಿಚಿತರನ್ನು ಆಹ್ವಾನಿಸಿ ಭರ್ಜರಿ ಊಟದ ವ್ಯವಸ್ಥೆ ಮಾಡಿ ಎಲ್ಲರೂ ಅನೇಕ ದಿನಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಅದ್ದೂರಿಯಾಗಿ ಗೃಹಪ್ರವೇಶದ ಸಮಾರಂಭ ಮಾಡಲೇ ಬೇಕೆಂದು ಕುಟುಂಬದ ಸದಸ್ಯರು ಅವರ ಮೇಲೆ ಒತ್ತಡ ತರುತ್ತಿರುವರು. ಕುಟುಂಬದವರ ಮಾತಿಗೆ ಒಪ್ಪಿಕೊಂಡ ಈ ಯಜಮಾನರು ಸುಮಾರು ಒಂದು ಲಕ್ಷ ರುಪಾಯಿಗಳನ್ನು ಸಾಲ ಮಾಡಿ ಸಮಾರಂಭವನ್ನು ಭರ್ಜರಿಯಾಗಿಯೇ ಏರ್ಪಡಿಸಲು ಸಿದ್ಧರಾಗಿದ್ದಾರೆ. ಆದರೆ ಈಗಾಗಲೇ ಮನೆ ಕಟ್ಟುವುದಕ್ಕಾಗಿ ಸಾಲ ಮಾಡಿರುವಾಗ ಮತ್ತೊಮ್ಮೆ ಸಾಲ ಮಾಡುವಂಥ ಅವಶ್ಯಕತೆ ಏನಿತ್ತು ಎನ್ನುವ ಆತಂಕ ಮಾತ್ರ ಅವರಲ್ಲಿ ಜೀವಂತವಾಗಿದೆ.
         ಅವರು ಹೊರಟು ಹೋದ ನಂತರ ನನ್ನನ್ನು ಕಾಡಿದ ಸಂಗತಿ ಎಂದರೆ ನಮ್ಮ ಜನರೇಕೆ ತೀರ ವೈಯಕ್ತಿಕವಾದ ಸಂಗತಿಗಳನ್ನು ಮತ್ತು ಆಚಾರ ವಿಚಾರಗಳನ್ನು ಸಾರ್ವತ್ರಿಕರಣಗೊಳಿಸುತ್ತಿರುವುರೆನ್ನುವುದು. ಹೀಗೆ ಯೋಚಿಸುತ್ತಿರುವ ಹೊತ್ತಿನಲ್ಲೇ ಮೇಜಿನ ಮೇಲಿದ್ದ  ಆಹ್ವಾನ ಪತ್ರವೊಂದು ನನ್ನ ಗಮನ ಸೆಳೆಯಿತು. ಅದು ನನ್ನ ಪರಿಚಿತರ ಒಂದು ವರ್ಷದ ಮಗುವಿನ  ಮೊದಲ ಹುಟ್ಟುಹಬ್ಬದ ಆಹ್ವಾನ ಪತ್ರ. ನಗರದ ಭವ್ಯ ಹೋಟೆಲ್ ಒಂದರಲ್ಲಿ ಏರ್ಪಡಿಸಿರುವ ಆ ಔತಣಕೂಟಕ್ಕೆ ಸರಿ ಸುಮಾರು ೫೦೦ ಜನರನ್ನು ಆಹ್ವಾನಿಸಿರುವರಂತೆ. ಅವರೇ ಹೇಳಿದಂತೆ ಅಲ್ಲಿ ಪ್ರತಿ ಊಟಕ್ಕೆ ಸುಮಾರು ೨೦೦ ರುಪಾಯಿಗಳು ಖರ್ಚಾಗುವ ಸಾಧ್ಯತೆಯಿದ್ದು ಒಟ್ಟಾರೆ ಆ ದಿನದ ಎರಡು ಗಂಟೆಗಳ ಔತಣಕೂಟಕ್ಕೆ ಏನಿಲ್ಲವೆಂದರೂ ಒಂದು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದೆ. ಅತ್ಯಂತ ಸಣ್ಣ ಊರಾಗಿರುವುದರಿಂದ ಇಲ್ಲಿ ಇದಕ್ಕಿಂತ ಹೆಚ್ಚು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಅವರದಾಗಿದೆ. ಇನ್ನು ಅಚ್ಚರಿಯ ಸಂಗತಿ ಎಂದರೆ ಆಹ್ವಾನ  ಪತ್ರದ ಹೊರತಾಗಿಯೂ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ.ಚಾನೆಲ್ ಗಳಲ್ಲಿ ಆಹ್ವಾನ ಪತ್ರ ಬಿತ್ತರವಾಗುವುದರ ಜೊತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್ ಗಳನ್ನೂ ತೂಗು ಹಾಕಿರುವರು. ತಮ್ಮ  ಮಗನ ಹುಟ್ಟುಹಬ್ಬವನ್ನು ಅತ್ಯಂತ ಉಮೇದಿಯಿಂದ  ಆಚರಿಸುತ್ತಿರುವ ಅವರಿಗೆ ನಾನೊಂದು ಪ್ರಶ್ನೆ ಕೇಳಿದೆ. 'ಡಿಸೆಂಬರ್ ೨೩ ರಂದು ನಿಮ್ಮ ಮಗನ ಜನ್ಮದಿನ ಆಚರಿಸುತ್ತಿರುವ ನಿಮಗೆ ಆ ದಿನದ ವಿಶೇಷತೆ ಏನೆಂದು ಗೊತ್ತೇ?'. ಅವರು ಗೊತ್ತಿಲ್ಲ ಎಂದು ಪೆಚ್ಚಾಗಿ ನನ್ನ ಮುಖ ನೋಡಿದರು. ಅವರ ಸಂಭ್ರಮಕ್ಕೆ ನಾನೇಕೆ ತಣ್ಣೀರೆರಚಲೆಂದು ಏನಿಲ್ಲ ಎಂದು ಹೇಳಿ ಅವರನ್ನು ಕಳುಹಿಸಿದೆ. ನಿಜಕ್ಕೂ ಆ ದಿನ 'ಕಿಸಾನ್ ದಿವಸ್' (ರೈತರ ದಿನ) ಎಂದು ಆಚರಿಸಲಾಗುತ್ತದೆ. ಅನ್ನ ನೀಡುತ್ತಿರುವ ರೈತರನ್ನು ಸ್ಮರಿಸಿಕೊಳ್ಳುವ ದಿನವದು. ಆದರೆ ತೀರ ಖಾಸಗಿ ಆಚರಣೆಗಳನ್ನು ಸಾರ್ವತ್ರಿಕರಣಗೊಳಿಸುತ್ತಿರುವ ನಾವು  ಸಾರ್ವತ್ರಿಕವಾಗಿ ಆಚರಣೆಯಾಗಬೇಕಾದ ದಿನವನ್ನು ಕೇವಲ ಅವಶ್ಯಕತೆ ಇರುವವರು ಆಚರಿಸಿಕೊಳ್ಳಲಿ ಎಂದು ಅದನ್ನು ವೈಯಕ್ತಿಕಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಯಾರನ್ನಾದರೂ ಕೇಳಿ ನೋಡಿ ಆಚರಿಸಲು ನಾವೇನು ರೈತರೇ ಎನ್ನುವ ವಿತಂಡವಾದ ಕೇಳಿ ಬರುತ್ತದೆ. ಹಗಲಿರುಳೆನ್ನದೆ ದುಡಿದು ಆತ  ನಮಗೆ ಅನ್ನ  ನಿಡುತ್ತಿರುವನೆಂಬ ಸಣ್ಣ ಕೃತಜ್ಞತೆಯೂ ನಮಗಿಲ್ಲ.
       ನೀವುಗಳೆಲ್ಲ ಡಾ.ಸ.ಜ.ನಾಗಲೋಟಿಮಠ ಅವರ ಹೆಸರು ಕೇಳಿರಬಹುದು. ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಬಿ.ಸಿ.ರಾಯ್ ಪ್ರಶಸ್ತಿ' ಪಡೆದ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರವರು. ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಮಯ ಅವರ ಮಗನ ಮದುವೆ ನಡೆಯಿತು. ಆ ಮದುವೆಯನ್ನು ಅವರು ಅತ್ಯಂತ ಸರಳವಾಗಿ ಮಠವೊಂದರಲ್ಲಿ ಏರ್ಪಡಿಸಿದ್ದರು. ಕಾಲೇಜಿನ ಯಾವ ಸಿಬ್ಬಂದಿಯನ್ನು ಮದುವೆಗೆ ಆಹ್ವಾನಿಸಿರಲಿಲ್ಲ. ಮರುದಿನ ಅವರು ಕೆಲಸಕ್ಕೆ ಹಾಜರಾದಾಗಲೇ ಗೊತ್ತಾಗಿದ್ದು ನಿನ್ನೆ ಸಜನಾ ಅವರ ಮಗನ ಮದುವೆ ಇತ್ತೆಂದು. ಅನೇಕರು ತಮಗೇಕೆ ಆಹ್ವಾನಿಸಲಿಲ್ಲವೆಂದು ಕೋಪ ತೋರ್ಪಡಿಸಿದರು. ಅದ್ದೂರಿಯಾಗಿ ಆಚರಿಸುವುದರ ಮೂಲಕ ಅನಾವಶ್ಯಕವಾಗಿ ಖರ್ಚು ಮಾಡುವುದೇಕೆ ಎನ್ನುವುದು ಸಜನಾ ಅವರ ವಾದವಾಗಿತ್ತು. ಅದಕ್ಕೂ ಮಿಗಿಲಾಗಿ ಅವರು ಹೇಳಿದ ವಿಷಯವೆಂದರೆ ಇದು ನನ್ನ ಕುಟುಂಬದ ಖಾಸಗಿ ಕಾರ್ಯಕ್ರಮ ಎಲ್ಲರನ್ನೂ ಆಹ್ವಾನಿಸುವುದಕ್ಕೆ ಅದೇನು ರಾಷ್ಟ್ರೀಯ ಕಾರ್ಯಕ್ರಮವಾಗಿರಲಿಲ್ಲ. ಇವತ್ತಿನ  ರಾಜಕಾರಣಿಗಳು ಮತ್ತು ಸಿನಿಮಾ ಕಲಾವಿದರ ಖಾಸಗಿ ಕಾರ್ಯಕ್ರಮಗಳ ಆಚರಣೆಯನ್ನು ನೋಡಿದಾಗ ಸಜನಾ ಅವರು ಅಂದು ಹೇಳಿದ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.
         ಇರಲಿ ಈ ರೀತಿಯ ಖಾಸಗಿ ಆಚರಣೆಗಳನ್ನು ಖುಷಿಯನ್ನೋ ಅಥವಾ ಸಂತೋಷವನ್ನೋ ಹಂಚಿಕೊಳ್ಳಲು  ಸಾರ್ವತ್ರಿಕವಾಗಿ ಆಚರಿಸಿಕೊಳ್ಳುತ್ತಾರೆಂದುಕೊಳ್ಳೋಣ. ಆದರೆ ಸಾರ್ವತ್ರಿಕವಾಗಿ ಆಚರಿಸಬೇಕಾದ ಕಾರ್ಯಕ್ರಮಗಳನ್ನು ನಾವೇಕೆ ವೈಯಕ್ತಿಕವಾಗಿಸುತ್ತಿದ್ದೇವೆ. ಉದಾಹರಣೆಯಾಗಿ  ಹೇಳಬೇಕಾದರೆ ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ರೈತರ ದಿನ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ ಇಂಥ ಯಾವ ದಿನಗಳಲ್ಲಿ ನಾವುಗಳೆಲ್ಲ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಕೌಟಂಬಿಕ ಆಚರಣೆಗೆ ಮಾತ್ರ ಸೀಮಿತವಾಗಿರಬೇಕಿದ್ದ ಕಾರ್ಯಕ್ರಮಗಳನ್ನು ಅತ್ಯಂತ ಉಮೇದಿಯಿಂದ ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಅನೇಕರಿಗೆ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆನ್ನುವ ಕನಿಷ್ಟ ಪ್ರಜ್ಞೆಯೂ ಇರುವುದಿಲ್ಲ. ಅಕ್ಟೋಬರ್ ೨  ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ಲಾಲ ಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನವೆಂದು ಅದೆಷ್ಟು ಜನರಿಗೆ ಗೊತ್ತಿದೆ?. ಹೊಸ ಸಿನಿಮಾವೊಂದು ಬಿಡುಗಡೆಯಾದಾಗ ಆ ಚಿತ್ರದ  ನಾಯಕನ ಆಳೆತ್ತರದ ಕಟೌಟ್ ನಿಲ್ಲಿಸಿ ಕ್ಷಿರಾಭಿಷೇಕ ಮಾಡುವ ನಮಗೆ ಜನೆವರಿ ೩೦ ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವ ದಿನವೆಂದು ನೆನಪಿಗೇ ಬರುವುದಿಲ್ಲ.
             ಇನ್ನೂ ಆಘಾತಕಾರಿ ಸಂಗತಿ ಎಂದರೆ ಎಲ್ಲರೂ ಒಟ್ಟಾಗಿ ಆಚರಿಸಬೇಕಾದ ಆಚರಣೆಗಳನ್ನು ನಾವು  ಸಂಕುಚಿತ ಮನಸ್ಸಿನಿಂದ ಒಂದು  ಗುಂಪು, ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು. ಗಾಂಧಿ ರಾಷ್ಟ್ರಪಿತನಾದರೂ    ಅವರ  ಜನ್ಮದಿನದ ಆಚರಣೆ ಕೆಲವೇ ವರ್ಗದವರಿಗೆ ಸೀಮಿತ. ಅದರಲ್ಲೂ ರಾಜಕೀಯ ಪಕ್ಷವೊಂದು ಗಾಂಧಿ ಜಯಂತಿಯನ್ನು  ಗುತ್ತಿಗೆಗೆ ಹಿಡಿದಂತೆ ವರ್ತಿಸುತ್ತಿದೆ. ಹೀಗಿರುವಾಗ ವೀರ ಸಾವರ್ಕರ್, ಭಗತ್ ಸಿಂಗ್ ರ ನೆನಪು ಮತ್ತೊಂದು ಪಕ್ಷದ ಪಿತ್ರಾರ್ಜಿತ ಆಸ್ತಿ ಎನ್ನುವಂತಾಗಿದೆ. ಅಂಬೇಡ್ಕರ್ ಏನಿದ್ದರೂ ದಲಿತರ ಮತ್ತು ದಮನಿತರ ನೇತಾರ. ಈ ನಡುವೆ ಜಯಪ್ರಕಾಶ ನಾರಾಯಣ, ಸುಭಾಷಚಂದ್ರ ಭೋಸ್, ವಿವೇಕಾನಂದರಂಥ ಮಹಾನ್ ನಾಯಕರು ನೇಪಥ್ಯಕ್ಕೆ ಸರಿಯುತ್ತಾರೆ. ರೈತರ ದಿನವನ್ನು ರೈತ ಸಂಘದವರೇ ಆಚರಿಸುವುದಿಲ್ಲ. ಎರಡು ದಿನಗಳ ಹಿಂದೆ ಇಲ್ಲೊಂದು ಕವಿರತ್ನ ಕಾಳಿದಾಸ ವೃತ್ತ ಉದ್ಘಾಟನೆಯಾಯಿತು. ಅಲ್ಲಿದ್ದ ಬೆರಳೆಣಿಕೆಯ ಜನರಲ್ಲಿ ಹೆಚ್ಚಿನವರು ಕುರುಬ ಸಮುದಾಯದವರಾಗಿದ್ದೊಂದು ವಿಶೇಷ. ಮೇಘದೂತ, ಅಭಿಜ್ಞಾನ ಶಾಕುಂತಲದಂಥ ಮಹಾ ಕಾವ್ಯಗಳನ್ನು ಬರೆದ ಮೇರು ಕವಿಯನ್ನು ನಾವು ಕುರುಬ ಸಮುದಾಯಕ್ಕೆ ಸಿಮಿತಗೊಳಿಸುತ್ತಿರುವುದಕ್ಕೆ ಸಾಕ್ಷಿಯಾಗಿ  ಅಂದಿನ ಆ ದೃಶ್ಯ  ನಮ್ಮ ಸಂಕುಚಿತ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿತ್ತು.
        ಕೆಲವೊಮ್ಮೆ ವೈಯಕ್ತಿಕ ಸಂಗತಿಗಳು ಸಾರ್ವತ್ರಿಕವಾದಾಗ ಅದಕ್ಕೆ ಸಮಾಜದ ಒಪ್ಪಿಗೆಯ ಮುದ್ರೆ ಇರುತ್ತದೆ. ಇದಕ್ಕೊಂದು ಉದಾಹರಣೆ ಹೇಳುವುದಾದರೆ ಕೆಲದಿನಗಳ ಹಿಂದೆ ನಾನೊಂದು ಪುಸ್ತಕ ಓದಿದೆ. ಆ ಪುಸ್ತಕದ ಹೆಸರು 'ಊರು ಕೇರಿ' ಎಂದು. ಕವಿ ಸಿದ್ಧಲಿಂಗಯ್ಯನವರ ಆತ್ಮಕಥನವದು. ಇದು ಕವಿಯ ವೈಯಕ್ತಿಕ ವಿಷಯವಾದರೂ ಓದುತ್ತ ಹೋದಂತೆ ಒಂದು ವರ್ಗದ ಸಮಸ್ಯೆಗಳು ನಮ್ಮೆದುರು ತೆರೆದುಕೊಳ್ಳುತ್ತ ಹೋಗುತ್ತವೆ. ದಲಿತ ಸಮುದಾಯದ ಸಮಸ್ಯೆಗಳನ್ನು ಹೇಳುವ ಕವಿ ಇಲ್ಲಿ ಕೇವಲ ಒಂದು ರೂಪಕವಾಗುತ್ತಾನೆ. ಹಾಗಾಗಿ ಇದನ್ನು ಲೇಖಕರ ತೀರ ಖಾಸಗಿ ವಿಷಯ  ಎನ್ನುವಂತಿಲ್ಲ. ತಮ್ಮೊಳಗಿನ ಆಂತರಿಕವನ್ನು ಬಾಹ್ಯಿಕರಿಸುವ ಕವಿಯ ಈ ಕಾರ್ಯ ಸಾರ್ವಜನಿಕ ಒಪ್ಪಿಗೆ ಪಡೆಯುತ್ತದೆ.
           ಈ ನಡುವೆ ರಾಷ್ಟ್ರದ ಮಹತ್ವದ ದಿನಗಳು ಮತ್ತು ಮಹಾನ್ ನಾಯಕರುಗಳ ನೆನಪುಗಳೆಲ್ಲ ನೇಪಥ್ಯಕ್ಕೆ  ಸರಿಯುತ್ತಿರುವ ಹೊತ್ತಿನಲ್ಲೇ ಸಿನಿಮಾ ನಟನೊಬ್ಬನ ಹುಟ್ಟುಹಬ್ಬ ಬರುತ್ತದೆ. ಅಭಿಮಾನಿಗಳೆಲ್ಲ ಮಧ್ಯರಾತ್ರಿಯಿಂದಲೇ ಆತನ ಮನೆ ಎದುರು ಉದ್ದನೇ ಸಾಲಿನಲ್ಲಿ ನಿಂತು ದರ್ಶನ ಮಾಡಿ ಕೃತಾರ್ಥರಾಗುತ್ತಾರೆ. ಇನ್ನಾರದೋ ಮನೆಯ ಮಗುವಿನ ಹುಟ್ಟುಹಬ್ಬದ ಆಹ್ವಾನ ಪತ್ರ ಮನೆಯ ಬಾಗಿಲ ಬಳಿ ಬಂದು ಬೀಳುತ್ತದೆ. ಅದರ ಹಿಂದೆಯೇ ಸಾಂಸ್ಕೃತಿಕ ಸಭಾಭವನದಲ್ಲಿ ಅತ್ಯಂತ  ಅದ್ದೂರಿಯಾಗಿ ವೈಕುಂಠ  ಸಮಾರಾಧನೆ ಏರ್ಪಡಿಸಿದ್ದೇವೆ ಬರಲೇ ಬೇಕೆನ್ನುವ ಒತ್ತಾಯ. ಹೀಗೆ ವೈಯಕ್ತಿಕವಾದದ್ದು ಸಾರ್ವತ್ರಿಕರಣಗೊಳ್ಳುತ್ತ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೋಗುತ್ತದೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ       



Wednesday, December 12, 2012

ಕಾಡುವ ಖಾಲಿತನದ ನಡುವೆ ಕದಡುವ ನೆನಪುಗಳು

      ದಯವಿಟ್ಟು ಕ್ಷಮಿಸಿ ಒಂದಿಷ್ಟು ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಿರುವುದಕ್ಕೆ. ಹನ್ನೊಂದು ವರ್ಷಗಳು ಕಳೆದು ಹೋದವು ನಾನು ಬಾಗಲಕೋಟೆಯ  ಬಿ.ವಿ.ವಿ.ಸಂಘದ 'ಸಮಾಚಾರ' ಪತ್ರಿಕೆಗೆ ಬರೆಯಲು ಪ್ರಾರಂಭಿಸಿ. ಈ ಹನ್ನೊಂದು ವರ್ಷಗಳಲ್ಲಿ ಪತ್ರಿಕೆಗೆ ಬರೆದ ನನ್ನ ಲೇಖನಗಳ ಸಂಖ್ಯೆ ನೂರರ ಸಮೀಪ ಬಂದು ನಿಂತಿದೆ. 'ಸಮಾಚಾರ'ಕ್ಕೆ ನಿಯಮಿತವಾಗಿ ಪ್ರತಿ ತಿಂಗಳು ಬರೆಯುವುದು ಒಂದು ಹವ್ಯಾಸವಾಗಿ ಬದಲಾಗಿದೆ. ಪತ್ರಿಕೆಯ ಮೇಲಿನ ಅಭಿಮಾನ ಮತ್ತು ಪ್ರೀತಿ ನನ್ನನ್ನು ಬರೆಯುವಂತೆ ಪ್ರಚೋದಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಹಲವು ತಿಂಗಳುಗಳ ಮೊದಲೇ ಲೇಖನಗಳನ್ನು ಸಿದ್ದಪಡಿಸಿ ಸಂಪಾದಕರಿಗೆ ಕಳಿಸಿದ್ದುಂಟು. ಕೆಲವೊಮ್ಮೆ ಪತ್ರಿಕೆ ಅಚ್ಚಿಗೆ ಹೋಗಲು ಇನ್ನೇನು ಮೂರ್ನಾಲ್ಕು ದಿನಗಳಿವೆ ಎನ್ನುವಾಗ ಆತುರಾತುರವಾಗಿ ಬರೆದದ್ದುಂಟು. ಇನ್ನು ಕೆಲವೊಮ್ಮೆ ಏನನ್ನೂ ಬರೆಯಲು ಸಾಧ್ಯವಿಲ್ಲವೇನೋ ಎನ್ನುವ ಖಾಲಿತನ ಕಾಡಿದ್ದುಂಟು. ಈ ಬರೆಯುವ ಉಮೇದಿ, ಬರೆಯುವ ಆತುರತೆ ಮತ್ತು ಬರೆಯಲಾರೆನೆನ್ನುವ ಖಾಲಿತನದ ನಡುವೆಯೂ ಪತ್ರಿಕೆಯೊಂದಿಗಿನ ನನ್ನ ಒಡನಾಟ ಒಂದು ದಶಕದಿಂದ ಅವ್ಯಾಹತವಾಗಿ ಮುಂದುವರಿದುಕೊಂಡು  ಬಂದಿದೆ.

ಅರಳಿಕೊಂಡ ಬದುಕು 

       2001 ರಲ್ಲಿ ಬಾಗಲಕೋಟೆಗೆ ಬಂದ ಪ್ರಾರಂಭದ ಆ ಹೊಸದರಲ್ಲಿ ಇಡೀ ಜಿಲ್ಲೆಯಾದ್ಯಂತ ಮುಳುಗಡೆಯ ಭೀತಿ ಆವರಿಸಿತ್ತು. ಮುಳುಗಡೆಯ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ನನ್ನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ನೂರಾರು ಮೈಲಿ ದೂರದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಿಂದ ದೂರವಾಗಿ ಹೊಸ ನೆಲದಲ್ಲಿ ಅಪರಿಚಿತರ ನಡುವೆ ಬದುಕಲು ಪ್ರಯತ್ನಿಸಿದ ಆ ಕ್ಷಣ ಹಲವು ಸಂದರ್ಭಗಳಲ್ಲಿ ಮನಸ್ಸು ತಲ್ಲಣಗೊಳ್ಳುತ್ತಿತ್ತು. ಇಲ್ಲಿಯೂ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಿಂದ ಬೇರು ಸಮೇತ ಕಿತ್ತು ಬೇರೊಂದು ಸಾಮಾಜಿಕ ತಾಣದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಹೆಣಗಾಡುತ್ತಿದ್ದ ನನ್ನಂಥ ಸಾವಿರಾರು ಜನರಿದ್ದುದ್ದರಿಂದಲೇ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗಿರಬಹುದು. ಕೃಷ್ಣೆಯ ಹಿನ್ನೀರು ವರ್ಷದಿಂದ ವರ್ಷಕ್ಕೆ ನಗರದ ವಸತಿ ಪ್ರದೇಶಗಳನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಿದ್ದುದ್ದನ್ನು ಕಣ್ಣಾರೆ ಕಂಡ ಆ ದಿನಗಳಲ್ಲಿ ಮುಳುಗಡೆಯ ಊರಿಗೆ ಬಂದು ತಪ್ಪು ಮಾಡಿದೆನೇನೋ ಎನ್ನುವ ಆತಂಕ ಕಾಡುತ್ತಿತ್ತು. ಆದರೆ ಈ ದಿಗಿಲು, ಆತಂಕಗಳನ್ನೆಲ್ಲ ಮೀರಿಸುವ ಅಚ್ಚರಿಯ ಸಂಗತಿ ಎಂದರೆ ಅದು ನಾನು ವೈದ್ಯಕೀಯ ಕಾಲೇಜಿನಂಥ ದೊಡ್ಡ ಮಹಾವಿದ್ಯಾಲಯದ ಗ್ರಂಥಪಾಲಕನಾಗಿ ನೇಮಕಗೊಂಡಿದ್ದು. ಉಪನ್ಯಾಸಕನಾಗಿ ಕೆಲಸ ಮಾಡಿ ಅನುಭವಿದ್ದ ನನಗೆ ಬಿ.ವಿ.ವಿ.ಸಂಘದ ಸಂದರ್ಶನ ಸಮಿತಿಯವರು ಅದು ಹೇಗೆ ನನ್ನಂಥ ಅನನುಭವಿಯನ್ನು ಗ್ರಂಥಪಾಲಕನಾಗಿ ಆಯ್ಕೆ ಮಾಡಿದರೆನ್ನುವ ಸಂಗತಿ ಇವತ್ತಿಗೂ ನನಗೆ ಅಚ್ಚರಿಯ ವಿಷಯ.
      ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ. ಈ ಹನ್ನೊಂದು ವರ್ಷಗಳ ಸುದೀರ್ಘ ಪಯಣ ವಿಶಿಷ್ಟ ಅನುಭವಗಳನ್ನು ನೀಡಿದೆ. ಮುಳುಗಡೆಯ ನಾಡಿನಲ್ಲಿ ಬದುಕು ಅರಳಿಕೊಂಡಿದೆ. ವೃತ್ತಿ ಬದುಕು ತೃಪ್ತಿ ನೀಡಿದೆ. ಹೊಸ ಹೊಸ ವಿಷಯಗಳನ್ನು ಕಲಿಯಲು ವೃತ್ತಿ ಅನುವುಮಾಡಿಕೊಟ್ಟಿದೆ. ಬದುಕಿನ ಅನೇಕ ಸಮಸ್ಯೆಗಳು ಮತ್ತು ಸವಾಲುಗಳಿಗೆ ಮುಖಾಮುಖಿಯಾಗಿ ನಿಲ್ಲುವ ಸಾಮರ್ಥ್ಯ ಈ ನೆಲ ತಂದುಕೊಟ್ಟಿದೆ. ಒಂದು ಗೌರವ, ಒಂದು ಸ್ವಾಭಿಮಾನ, ಒಂದಿಷ್ಟು ಸಾಮರ್ಥ್ಯ, ಒಂದಿಷ್ಟು ಸಂತೃಪ್ತಿ ಜೊತೆಗೊಂದಿಷ್ಟು ಅಸ್ತಿತ್ವ ಇವುಗಳನ್ನು ಬಿಟ್ಟು ಇನ್ನೇನು ಬೇಕು ಬದುಕಿಗೆ.

ವೃತ್ತಿ ಮತ್ತು ಪ್ರವೃತ್ತಿ 

     ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಒಂದೇ ಸ್ಥಳದಲ್ಲಿ ಅದು ಹೇರಳವಾಗಿ ಸಿಗುವುದು ತೀರಾ ಅಪರೂಪದ ಸಂಗತಿ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ವೃತ್ತಿ ಮತ್ತು ಪ್ರವೃತ್ತಿಗಳೆರಡನ್ನೂ ಕಟ್ಟಿಕೊಡುವ ಸಂಸ್ಥೆ. ಇಲ್ಲಿ ಉದ್ಯೋಗದ ಜೊತೆ ಜೊತೆಗೆ ನನ್ನೊಳಗಿನ ಬರವಣಿಗೆಯ ಪ್ರವೃತ್ತಿಯೂ ಅರಳಿಕೊಂಡಿದೆ. ಬಿ.ವಿ.ವಿ.ಸಂಘ ಕಳೆದ ಹದಿನೆಂಟು ವರ್ಷಗಳಿಂದ ಪ್ರಕಟಿಸುತ್ತಿರುವ 'ಸಮಾಚಾರ' ಪತ್ರಿಕೆ ಅನೇಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಬರೆಯಲು ವೇದಿಕೆ ಒದಗಿಸಿದೆ. 'ಸಮಾಚಾರ' ಪತ್ರಿಕೆಯ ಮೂಲಕವೇ ಅನೇಕ ನೌಕರರು ಮತ್ತು ವಿದ್ಯಾರ್ಥಿಗಳು ಬರವಣಿಗೆಯ ಕ್ಷೇತ್ರಕ್ಕೆ ಕಾಲಿಟ್ಟಿರುವರು. ಹಲವಾರು ಲೇಖಕರ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸಣ್ಣ ಪುಟ್ಟ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಲೇ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಬರಹಗಾರರು ಇಲ್ಲಿರುವರು. ಹೀಗೆ ಬರವಣಿಗೆಯ ಮೂಲಕ 'ಸಮಾಚಾರ' ಪತ್ರಿಕೆ ಸಂಘದ ಅನೇಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸಿದೆ. ಒಂದು ಅಸ್ತಿತ್ವದ ನಿರಂತರ ಹುಡುಕಾಟದಲ್ಲಿರುವ ಮನಸ್ಸುಗಳಿಗೆ ನಿಜಕ್ಕೂ ಇಂಥದ್ದೊಂದು ನೆಲೆಯ ಅವಶ್ಯಕತೆ ಇದೆ.

ಬರವಣಿಗೆ ಖುಷಿ ನೀಡಿದೆ 

    ನನಗಿನ್ನೂ ನೆನಪಿದೆ ಹನ್ನೊಂದು ವರ್ಷಗಳ ಹಿಂದೆ 'ಸಮಾಚಾರ'ಕ್ಕೆ  ನಾನು ಬರೆದ ಮೊದಲ ಲೇಖನ ಗ್ರಂಥಾಲಯ ಚಳುವಳಿಯ ಜನಕರೆಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್ ಅವರನ್ನು ಕುರಿತಾಗಿತ್ತು. ಸಂಘದಲ್ಲಿ ಪತ್ರಿಕೆಯೊಂದು ಪ್ರಕಟವಾಗುತ್ತಿದೆ ಎಂದು ಗೊತ್ತಾಗಿ ನನಗೆ ತಿಳಿದಂತೆ ಒಂದು ಲೇಖನ ಬರೆದು ಪತ್ರಿಕೆಯ ಕಾರ್ಯಾಲಯಕ್ಕೆ ಕಳುಹಿಸಿದ್ದೆ. ಲೇಖನ ಪ್ರಕಟವಾಗಿ ಪತ್ರಿಕೆ ಕೈಸೇರಿದಾಗ ನೋಡಿ ಖುಷಿಯಾಗಿತ್ತು. ಆದರೆ ಅಂದು ಬರೆದ ಲೇಖನವನ್ನು ಇಂದು ಓದಿದಾಗ ಇನ್ನೂ ಚೆನ್ನಾಗಿ ಬರೆಯಬೇಕಿತ್ತು ಎಂದೆನಿಸದೆ ಇರದು. ಆ ಲೇಖನದಲ್ಲಿನ ಪದಗಳು ಮತ್ತು ಬರವಣಿಗೆಯ ಶೈಲಿ ಸಪ್ಪೆಯಾಗಿತ್ತು ಎಂದೆನಿಸುತ್ತದೆ. ಹಾಗಿದ್ದಾಗೂ ಕೂಡಾ ಸಂಪಾದಕರು ಹೊಸ ಬರಹಗಾರ ಎನ್ನುವ ಕಾರಣದಿಂದ ಪ್ರೋತ್ಸಾಹಿಸಲು ಒಪ್ಪಿಕೊಂಡಿರಬಹುದು. ಅದೇ  ಉತ್ಸಾಹದಲ್ಲಿ ಮತ್ತೆರಡು ಲೇಖನಗಳನ್ನು ಗ್ರಂಥಾಲಯದ ಕುರಿತೇ ಬರೆದು ಪತ್ರಿಕೆಗೆ ಕಳುಹಿಸಿದೆ. ಅವುಗಳು ಕೂಡಾ ಪ್ರಕಟಗೊಂಡವು. ಹೀಗೆ ಬರೆಯಲು ಪ್ರಾರಂಭಿಸಿದ ಆರಂಭದ ದಿನಗಳಲ್ಲೇ ನಾನೊಂದು ನಿರ್ಧಾರಕ್ಕೆ ಬಂದಿದ್ದು ಅದೆಂದರೆ ನನ್ನ ಬರವಣಿಗೆ ಏಕತಾನತೆಯಿಂದ ಹೊರಬರಬೇಕು ಎಂದು. ಈ ಕಾರಣದಿಂದಲೇ ಸಂಚಿಕೆಯಿಂದ ಸಂಚಿಕೆಗೆ ನಾನು ವಿಭಿನ್ನ ವಿಷಯಗಳ ಮೇಲೆ ಬರೆಯಲು ಪ್ರಯತ್ನಿಸಿದ್ದು.
      'ಸಮಾಚಾರ' ಪತ್ರಿಕೆಯ ಬಹಳಷ್ಟು ಲೇಖನಗಳನ್ನು ನಾನು ಅತ್ಯಂತ ಖುಷಿಯಿಂದಲೇ ಬರೆದಿದ್ದೇನೆ. ಕೆಲವೊಮ್ಮೆ ಸಂಪಾದಕರ ಪ್ರೀತಿಯ ಒತ್ತಾಯಕ್ಕೆ ಮಣಿದು ಬರೆದ ಉದಾಹರಣೆಗಳೂ ಉಂಟು. ಓದಿದ ಉತ್ತಮ ಪುಸ್ತಕಗಳನ್ನು ಕುರಿತು ಪ್ರತಿಕ್ರಿಯಿಸಲು ನಾನು 'ಸಮಾಚಾರ' ಪತ್ರಿಕೆಯನ್ನೇ ವೇದಿಕೆಯಾಗಿ ಮಾಡಿಕೊಂಡಿರುವುದುಂಟು. ಒಟ್ಟಿನಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿ 'ಸಮಾಚಾರ' ಪತ್ರಿಕೆ ನನ್ನೊಳಗಿನ ಅನೇಕ ವಿಚಾರಗಳು ಅಕ್ಷರ ರೂಪದಲ್ಲಿ ಅನಾವರಣಗೊಳ್ಳಲು ನೆರವಾಗಿದೆ. ಸಂಚಿಕೆಯಿಂದ ಸಂಚಿಕೆಗೆ ನನ್ನ ಬರವಣಿಗೆ ಒಂದಿಷ್ಟು ಪಕ್ವಗೊಂಡಿದೆ ಎನ್ನುವುದನ್ನು ನಾನು ಅತ್ಯಂತ ವಿನಮೃತೆಯಿಂದ ಒಪ್ಪಿಕೊಳ್ಳುತ್ತೇನೆ. ಪತ್ರಿಕೆ ಬರೆಯುವ ಚೈತನ್ಯ ನೀಡಿದೆ. 'ಸಮಾಚಾರ'ದ ಬರವಣಿಗೆ ಬೇರೆ ಬೇರೆ ಪತ್ರಿಕೆಗಳಿಗೆ ಒಂದಿಷ್ಟು ಲೇಖನಗಳು ಮತ್ತು ಒಂದೆರಡು ಕಥೆಗಳನ್ನು ಬರೆಯಲು ಸಾಧ್ಯವಾಗಿಸಿದೆ. ಒಟ್ಟಿನಲ್ಲಿ ಬರವಣಿಗೆ ಖುಷಿ ನೀಡಿದೆ.
    ಈ ನಡುವೆ ನಾನೊಂದು  ಪುಸ್ತಕ ಬರೆದೆ ಎನ್ನುವುದು ಹೆಮ್ಮೆ ಮತ್ತು ಅಭಿಮಾನಕ್ಕಿಂತ ಅದು ನನಗೆ ಅತ್ಯಂತ ಅಚ್ಚರಿಯ ವಿಷಯ. 'ಸಮಾಚಾರ'ಕ್ಕೆ ನಿಯಮಿತವಾಗಿ ಬರೆಯುತ್ತಿರುವುದನ್ನು ಗಮನಿಸಿಯೇ ಅಂಥದ್ದೊಂದು ಜವಾಬ್ದಾರಿ ನನಗೆ ಕೊಟ್ಟಿರಲೂ ಬಹುದು. ಹೀಗೆ 'ಸಮಾಚಾರ' ಪತ್ರಿಕೆ ನನ್ನನ್ನು ಪುಸ್ತಕ ಬರೆಯುವ ಮಟ್ಟಕ್ಕೆ ಕರೆತಂದು ನಿಲ್ಲಿಸಿದೆ. ಈ ದಿನ ಮನೆಯ ಅಲ್ಮೇರಾದಲ್ಲಿ ಕಲಾಮ್,  ತೇಜಸ್ವಿ, ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಸಾಲಿನಲ್ಲಿ ಕುಳಿತಿರುವ ನನ್ನ 'ಸಾಧನೆ' ಪುಸ್ತಕವನ್ನು ನೋಡಿದಾಗಲೆಲ್ಲ ಮನಸ್ಸು ಮತ್ತದೇ ಕೃತಜ್ಞತೆಯಿಂದ ಭಾರವಾಗುತ್ತದೆ.
    ಈ ಪ್ರಶ್ನೆ ನನ್ನನ್ನು ಅನೇಕ ಸಾರಿ ಕಾಡಿದ್ದಿದೆ. ನಾನೇಕೆ ಬರೆಯುತ್ತೇನೆ? ಎಂದು. 'ಸಮಾಚಾರ'ಕ್ಕೆ ನಾನು ಬರೆದಿದ್ದು ಯಾವುದೇ ಉದ್ದೆಶಗಳನ್ನಿಟ್ಟುಕೊಂಡು ಅಲ್ಲ. ಬರವಣಿಗೆ ಎನ್ನುವುದು ಅದು ನನಗೆ ಖುಷಿ ಕೊಡುವ ನನ್ನ ಖಾಸಗಿ ವಿಷಯ. ಸಮಾಚಾರಕ್ಕೆ ಬರೆಯುವುದರಿಂದ ನನ್ನ ಬರವಣಿಗೆಯ ಶೈಲಿ ಸುಧಾರಿಸಿದೆ. ಪ್ರತಿ ತಿಂಗಳು ಹೊಸ ಹೊಸ ವಿಷಯಗಳ ಹುಡುಕಾಟದಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಅನಗತ್ಯ ವಿಷಯಗಳಲ್ಲಿ ಬದುಕು ಕಳೆದು ಹೋಗದೆ ಒಂದು ಅಸ್ತಿತ್ವದ ಹುಡುಕಾಟದಲ್ಲಿ ತೊಡಗಿಸಿಕೊಳ್ಳಲು ಬರವಣಿಗೆ ನೆರವಾಗಿದೆ. ಜೊತೆಗೆ ಬೇರೆಯವರು ಓದಲೇ ಬೇಕೆನ್ನುವ ಹಟದಿಂದ ನಾನು ಬರೆಯುತ್ತಿಲ್ಲ. ಬರವಣಿಗೆ ನನ್ನ ಖಾಸಗಿ ವಿಷಯ ಎಂದು ತಿಳಿದುಕೊಂಡಿರುವುದರಿಂದಲೇ ಈ ವಿಷಯದ ಕುರಿತು ಬೇರೆಯವರೊಂದಿಗೆ ಮಾತನಾಡುವಾಗಲೆಲ್ಲ ಸಂಕೋಚ ನನಗೆ ಗೊತ್ತಿಲ್ಲದಂತೆ ಇಣುಕುತ್ತದೆ.

ವಾಸ್ತವಿಕತೆಯ ಅರಿವಿದೆ 

       ಬರವಣಿಗೆ ವಾಸ್ತವಿಕತೆಗೆ ಹತ್ತಿರವಾಗಿರಬೇಕು  ಎನ್ನುವುದರಲ್ಲಿ ನನಗೆ ಹೆಚ್ಚು ನಂಬಿಕೆ ಇದೆ. ಬರಹ ಲೇಖಕನ ಕಲ್ಪನೆಯಲ್ಲಿ ಮೂಡಿಬಂದರೂ ಇನ್ನಾರದೋ ಬದುಕಿಗೆ ಹತ್ತಿರವಾಗಿರಬೇಕು ಅಂದರೆ ಮಾತ್ರ ಅಂಥ ಬರಹ ಒಂದಿಷ್ಟು ದಿನಗಳವರೆಗಾದರೂ ಉಳಿಯಬಲ್ಲದು. ಜೊತೆಗೆ ಬರವಣಿಗೆಗೆ ಒಂದಿಷ್ಟು ಸಿದ್ಧತೆಯ ಅಗತ್ಯವೂ ಇದೆ. ಲೇಖನವೊಂದನ್ನು ಬರೆಯುತ್ತಿರುವ ಸಂದರ್ಭ ಅದಕ್ಕೆ ಪೂರಕವಾದ ಮಾಹಿತಿಗಾಗಿ ಪುಸ್ತಕವನ್ನೋ ಅಥವಾ ಪತ್ರಿಕೆಯನ್ನೋ ಓದುವುದು ಅತ್ಯವಶ್ಯಕ. ಇಲ್ಲದೆ ಇದ್ದಲ್ಲಿ ಸಾಹಿತ್ಯಕ್ಕೊಂದು ಹೊಸ ಆಯಾಮ ದೊರಕಿಸಿ ಕೊಡುವ ಭರಾಟೆಯಲ್ಲಿ ಮುನ್ನುಗ್ಗುವಾಗ ನಮ್ಮಿಂದಾಗುವ ತಪ್ಪುಗಳಿಂದ ಸಾಹಿತ್ಯ ಕ್ಷೇತ್ರ ವಿರೂಪಗೊಳ್ಳುವುದು ಸರಿಯಲ್ಲ. ಅದರೊಂದಿಗೆ ಬರವಣಿಗೆ ಕುರಿತು ಒಂದು ಸಣ್ಣ ನಿರ್ಲಿಪ್ತತೆ ಬರೆಯುವಾತನಿಗೆ ಇರುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಏಕೆಂದರೆ ನಿರೀಕ್ಷೆಗಳು ಹುಸಿಯಾದಾಗ ಬರಹಗಾರನ ಆತ್ಮವಿಶ್ವಾಸ ಕುಸಿದು ಅದರಿಂದ ಅವನ ಬರವಣಿಗೆಯ ದಾರಿ ತಪ್ಪುವ ಅಪಾಯವಿದೆ. ಈ ಎಲ್ಲ ವಿಚಾರಗಳನ್ನು  ಜೊತೆಯಲ್ಲಿಟ್ಟುಕೊಂಡೇ ನಾನು 'ಸಮಾಚಾರ' ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿರುವುದು.
     ಬರವಣಿಗೆ ಅದು ನನ್ನ ವೃತ್ತಿಯಲ್ಲ. ಬರವಣಿಗೆಯಿಂದಲೇ ಕಟ್ಟಿಕೊಂಡ ಬದುಕೂ ನನ್ನದಲ್ಲ. ಬರೆಯಲೇ ಬೇಕೆನ್ನುವ ತೀವೃತರವಾದ ಬೇಗುದಿಯೂ ನನಗಿಲ್ಲ. ಆದರೆ ಇವುಗಳೆಲ್ಲವನ್ನೂ ಮೀರಿದ ಒಂದು ಖುಷಿ ಬರವಣಿಗೆ ನನಗೆ ನೀಡಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Thursday, December 6, 2012

ಪ್ರಾಮಾಣಿಕರ ಸ್ಮರಣೆಯೂ ಒಂದು ಪ್ರಾಮಾಣಿಕತೆ

     ಸಾಹಿತಿಗಳ, ಕಲಾವಿದರ, ರಾಜಕಾರಣಿಗಳ, ಮಠಾಧಿಪತಿಗಳ ಇಲ್ಲವೆ ಖ್ಯಾತನಾಮರ ಕುರಿತು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಅಂಥ ವ್ಯಕ್ತಿಗಳು ಬದುಕಿರುವಾಗಲೇ ಈ ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವುದುಂಟು. ಅಭಿನಂದನಾ ಗ್ರಂಥಗಳ ಪ್ರಕಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬರೆಯುವ ಉಮೇದಿ ಮತ್ತು ಸ್ವಹಿತಾಸಕ್ತಿಯ ಪರಿಣಾಮ ಅಭಿನಂದನೆಗೆ ಪಾತ್ರವಾಗುವ ವ್ಯಕ್ತಿತ್ವದ ಲೋಪದೊಷಗಳೆಲ್ಲ ಗೌಣವಾಗುತ್ತಿವೆ. ಒಂದರ್ಥದಲ್ಲಿ ಅಪಾತ್ರರೂ ಅಭಿನಂದನೆಗೆ ಪಾತ್ರರಾಗುತ್ತಿರುವುದು ಅಭಿನಂದನಾ ಗ್ರಂಥಗಳ ಪ್ರಾಮುಖ್ಯತೆಯನ್ನೇ ಕಡಿಮೆ ಮಾಡುತ್ತಿದೆ. ಹೊಗಳುವವರ ವೈಯಕ್ತಿಕ ಹಿತಾಸಕ್ತಿ, ಹೊಗಳಿಸಿಕೊಳ್ಳುವವರ ಸ್ವಕುಚ ಮರ್ಧನದ ನಡುವೆಯೂ ಅಲ್ಲಲ್ಲಿ ಅಪರೂಪದ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಸಧ್ಯದ ಮಟ್ಟಿಗೆ ನೆಮ್ಮದಿಯ ಸಂಗತಿ.
        ಬೆಳಗಾಂವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಒಂದು ಮಹತ್ವದ ಅಭಿನಂದನಾ ಗ್ರಂಥವನ್ನು ಪ್ರಕಟಿಸುವ ಮೂಲಕ ಮೆಚ್ಚುವಂತಹ ಕೆಲಸ ಮಾಡಿದೆ. ಈ ಸಂಸ್ಥೆ ಪ್ರಕಟಿಸಿ ಹೊರತಂದ 'ಸೌಜನ್ಯ' ಹೆಸರಿನ ಅಭಿನಂದನಾ ಗ್ರಂಥ ಎರಡು ಕಾರಣಗಳಿಂದ ವಿಶಿಷ್ಟವಾದದ್ದು. ಒಂದು 'ಸೌಜನ್ಯ' ಅಭಿನಂದನಾ ಗ್ರಂಥದ ಕಥಾ ನಾಯಕ ಕೆ.ಎಲ್.ಇ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಕಾರಕೂನನಾಗಿ ಸೇವೆ ಸಲ್ಲಿಸಿದ ಸರಳಾತಿ ಸರಳ ವ್ಯಕ್ತಿ. ಇನ್ನೊಂದು 2006ರಲ್ಲಿ ಈ ಅಭಿನಂದನಾ ಗ್ರಂಥ ಪ್ರಕಟವಾಗುವ ವೇಳೆಗಾಗಲೇ ಆ ಕೃತಿಯ ನಾಯಕ ಕಾಲವಾಗಿ ಎರಡು ವರ್ಷಗಳಾಗಿದ್ದವು. ಮೇಲಿನ ಎರಡು ಕಾರಣಗಳಿಂದ ಪುಸ್ತಕ ವಿಶಿಷ್ಟ ಎಂದೆನಿಸಿಕೊಳ್ಳುತ್ತದೆ.
       'ಸೌಜನ್ಯ' ಪುಸ್ತಕದ ಹೆಸರೇ ಹೇಳುವಂತೆ ಇದು ಅತ್ಯಂತ ಸೌಜನ್ಯಪೂರ್ಣ ವ್ಯಕ್ತಿತ್ವದ ಬದುಕಿನ ವಿವಿಧ ಮಗ್ಗಲುಗಳ ಪರಿಚಯಾತ್ಮಕ ಕೃತಿ. ಈ ಸಂಸ್ಮರಣ ಗ್ರಂಥದ ನಾಯಕ ಕೆ.ಎಲ್.ಇ ಸಂಸ್ಥೆಯಲ್ಲಿ ತಮ್ಮ ಬದುಕಿನ ಕೊನೆಯ ದಿನದವರೆಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಶಿವಶಂಕರ ಭೋಜ. ಕಾರಕೂನನಾಗಿ, ಅಧೀಕ್ಷಕರಾಗಿ ಕರ್ನಾಟಕದ ಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘ ಐದು ದಶಕಗಳ ಸೇವೆ ಸಲ್ಲಿಸಿ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಗೊಂದು ವಿಶಿಷ್ಟ ಮುನ್ನುಡಿ ಬರೆದ ಶ್ರೀ ಶಿವಶಂಕರ ಭೋಜ ಅವರ ಕುರಿತು ವಿಸ್ತೃತ ಮಾಹಿತಿ ಪುಸ್ತಕದಲ್ಲಿದೆ. ಅವರ ಸೇವೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದಿಯಾಗಿ ಸಹೋದ್ಯೋಗಿಗಳು, ಕುಟುಂಬದವರು, ಬಂಧುಗಳು ಮತ್ತು ಮಿತ್ರರೆಲ್ಲ ಸ್ಮರಿಸಿ ಕೊಂಡಿರುವರು.
        1952ರಲ್ಲಿ ಒಬ್ಬ ಕಾರಕೂನನಾಗಿ ಕೆ.ಎಲ್.ಇ ಸಂಸ್ಥೆಯನ್ನು ಸೇರಿದ ಶಿವಶಂಕರ ಭೋಜ ಅವರು 2004ರ ವರೆಗೆ ಅಂದರೆ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಖಂಡ ಐದು ದಶಕಗಳ ಕಾಲ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು. 1990ರಲ್ಲಿ ಅವರು ಸೇವೆಯಿಂದ ನಿವೃತ್ತರಾದರೂ ಅವರ ಪ್ರಾಮಾಣಿಕ ಸೇವೆ ಮತ್ತು ಅಗತ್ಯತೆಯನ್ನು ಅರಿತು ಸಂಸ್ಥೆ ಶ್ರೀಯುತರ ಸೇವಾವಧಿಯನ್ನು ವಿಸ್ತರಿಸುತ್ತಲೇ ಹೋಯಿತು. ಈ ಐದು ದಶಕಗಳ ಅವಧಿಯಲ್ಲಿ ಶ್ರೀ ಭೋಜ ಅವರು ಕೆ.ಎಲ್.ಇ ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆದರು. ಆಡಳಿತ ಮಂಡಳಿಗೆ ನಂಬಿಗಸ್ಥರಾಗಿ, ಸಹೋದ್ಯೋಗಿಗಳಿಗೆ ಸಲಹೆಗಾರರಾಗಿ, ಹೊಸದಾಗಿ ಕೆಲಸಕ್ಕೆ ಸೇರುವ ಯುವ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶಕರಾಗಿ ಅವರು ಸಂಸ್ಥೆಯಲ್ಲಿ ಬೆಳೆದು ನಿಂತ ಪರಿ ಇತರರಿಗೊಂದು ಶ್ರೇಷ್ಠ ಉದಾಹರಣೆ. ಬದುಕು ರೂಪಿಸಿದ ಸಂಸ್ಥೆಯ ಮೇಲಿನ ಅಭಿಮಾನವನ್ನು ಅವರು ತಮ್ಮ ಕೊನೆಯ ಉಸಿರಿರುವವರೆಗೂ ಕಾಪಿಟ್ಟುಕೊಂಡು ಬಂದದ್ದು ಸಂಸ್ಥೆಯ ಮೇಲೆ ಅವರಿಗಿದ್ದ ನಿರ್ವಾಜ್ಯ ಪ್ರೀತಿಗೆ ಸಾಕ್ಷಿ. ಅವರ ಕುರಿತಾದ ಲೇಖನಗಳನ್ನು ಓದುತ್ತ ಹೋದಂತೆಲ್ಲ ವ್ಯಕ್ತಿಯೊಬ್ಬ ಇಷ್ಟೊಂದು ನಿಸ್ವಾರ್ಥದಿಂದ ಅದು ಪ್ರಾಮಾಣಿಕ ಗುಣಗಳೊಂದಿಗೆ ಸರಳವಾಗಿ ಬದುಕಲು ಅದು ಹೇಗೆ ಸಾಧ್ಯ ಎನ್ನುವ ಅಚ್ಚರಿಯೊಂದು ತಟ್ಟನೆ ಬಂದು ಕೈಹಿಡಿಯುತ್ತದೆ. ಸಂಸ್ಥೆಯ ಕಾರ್ಯಾಧ್ಯಕ್ಷರು ಶ್ರೀ ಭೋಜ ಅವರನ್ನು ನಂಬಿಗಸ್ಥ ಎಂದು ಕರೆಯುತ್ತಾರೆ. ಕೆಲವರು ನಿಷ್ಟಾವಂತ ಎಂದು ಹೊಗಳುತ್ತಾರೆ. ಕಾಯಕ ನಿಷ್ಠ  ಎಂದು ಹಲವರು ಬರೆಯುತ್ತಾರೆ. ಮೌನ ತಪಸ್ವಿ, ಆದರ್ಶ ಪ್ರಾಯರು, ಸೌಜನ್ಯ ಮೂರ್ತಿ, ಸಮರ್ಪಿತರು, ಮಾರ್ಗದರ್ಶಿ, ಕಾಯಕಯೋಗಿ, ಅನುಕರಣಿಯರು, ತುಂಬಿದ ಕೊಡ ಎನ್ನುವುದು ಅನೇಕರ ಅಭಿಪ್ರಾಯ.
        ಈ ನಡುವೆ ಶ್ರೀ ಶಿವಶಂಕರ ಭೋಜ ಅವರ ವೈಯಕ್ತಿಕ ಬದುಕನ್ನು ಓದುತ್ತಿದ್ದಂತೆ ನಮಗರಿವಿಲ್ಲದೆ ಕಣ್ಣುಗಳು ಹನಿಗೂಡುತ್ತವೆ. ಅವರ ಪತ್ನಿ 1977ರಲ್ಲಿ ನಿಧನರಾದಾಗ ಕೊನೆಯ ಮಗು ಆಗಿನ್ನೂ ಎಂಟು ತಿಂಗಳ ಹಸುಗೂಸು. ಸಂಸ್ಥೆಯ ಕೆಲಸದೊಂದಿಗೆ ಮೂರು ಮಕ್ಕಳ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಮಕ್ಕಳ ಪಾಲಿಗೆ ಮಾತೃ ಹೃದಯಿ ಎನಿಸಿದರು. ಕೌಟಂಬಿಕ ಬದುಕಿನಲ್ಲಿ ಎದುರಾದ ಸಂಕಷ್ಟಗಳನ್ನೆಲ್ಲ ಸಮಚಿತ್ತದಿಂದ ಎದುರಿಸಿ ಮಕ್ಕಳಿಗೆ ವಾತ್ಸಲ್ಯ ಮೂರ್ತಿಯಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ತಾತನಾಗಿ, ಬಂಧುಗಳಿಗೆ ಮಧುರ ಬಾಂಧವ್ಯದ ವ್ಯಕ್ತಿಯಾಗಿ ಒಂದು ಆದರ್ಶದ ಬದುಕನ್ನು ಬಾಳಿದ ಶ್ರೀ ಭೋಜ ಅವರ ವ್ಯಕ್ತಿತ್ವ ನಿಜಕ್ಕೂ ಸ್ಮರಣೀಯ. ನಿವೃತ್ತಿ ಇಲ್ಲದೆ ದುಡಿದ ಶ್ರೀಯುತರು ನಿಧನರಾದದ್ದು ರವಿವಾರದ ರಜಾ ದಿನದಂದು ಇದು ಕಾಕತಾಳಿಯವಾದರೂ ಸಂಸ್ಥೆಯೊಂದಿಗಿನ ಅವರ ಅವಿನಾಭಾವ ಸಂಬಂಧಕ್ಕೆ ನಿದರ್ಶನ. ನಿಧನರಾಗುವ ಹಿಂದಿನ ದಿನ ರಾತ್ರಿ ಎಂಟು ಗಂಟೆವರೆಗೂ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬದುಕಿನ ಕೊನೆಯ ಉಸಿರಿನ ತನಕ ಕರ್ತವ್ಯ ಪ್ರಜ್ಞೆ ಮೆರೆದರು. ಆಡದೆ ಮಾಡಿದವರು ಎಂಬ ಮಾತಿಗೆ ಅನ್ವರ್ಥವಾಗಿ ಬದುಕಿ ಬಾಳಿದ ಶ್ರೀ ಭೋಜ ಅವರ ವೈಯಕ್ತಿಕ ಮತ್ತು ವೃತ್ತಿ ಬದುಕು ಇತರರಿಗೆ ಸದಾ ಕಾಲ ಮಾದರಿ.
          ಪ್ರಾಮಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಈ ದಿನಗಳಲ್ಲಿ ಇರುವ ಅತ್ಯಲ್ಪ ಸಂಖ್ಯೆಯ ಪ್ರಾಮಾಣಿಕರನ್ನು ಗುರುತಿಸಿ ಗೌರವಿಸುವಂಥ ಕೆಲಸಗಳಾಬೇಕು. ತನ್ನ ಸಂಸ್ಥೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಒಬ್ಬ ಕರ್ತವ್ಯ ನಿಷ್ಠ ನೌಕರನನ್ನು ಗುರುತಿಸಿ ಅಭಿನಂದನಾ ಗ್ರಂಥ ಪ್ರಕಟಿಸಿರುವ ಕೆ.ಎಲ್.ಇ ಸಂಸ್ಥೆಯ ಕಾರ್ಯ ಶ್ಲಾಘನೀಯ. ಅಷ್ಟರಮಟ್ಟಿಗೆ ಸಂಸ್ಥೆ ಒಂದು ಉತ್ತಮ ಕೆಲಸ ಮಾಡಿದೆ. ಜೊತೆಗೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾಂವಿ ಜಿಲ್ಲೆಯಲ್ಲಿ ಮರಾಠಿಗರ ನಿರಂತರ ಉಪಟಳಗಳ ನಡುವೆಯೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೆ.ಎಲ್.ಇ ಸಂಸ್ಥೆ ಶ್ರಮಿಸುತ್ತಿದೆ. ಇಂಥ ಸೃಜನಾತ್ಮಕ ಚಟುವಟಿಕೆಗಳೇ ಸಂಸ್ಥೆಯೊಂದರ ಜೀವಂತಿಕೆಯ ಲಕ್ಷಣಗಳು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ