Wednesday, November 28, 2012

ದೀಪಾವಳಿ ಅಂದು-ಇಂದು

       

       'ದೀಪಾವಳಿ ಹಬ್ಬಕ್ಕ ಟಿವ್ಯಾಗ ಹೊಸ ಸಿನಿಮಾ ಹಾಕ್ತಾರ. ಮೂರ ದಿನಾ ಸಿನಿಮಾ ನೋಡ್ಕೊತ ಫುಲ್ ಎಂಜಾಯ್' ಎಂದು ಮಗಳು ಮೂರು ಮೂರು ಸಲ ತಿವಿದು ಹೇಳಿದಾಗಲೇ ಗೊತ್ತಾಯ್ತು ದೀಪಾವಳಿ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಅಂತ (ಈ ಲೇಖನ ವಿಜಯ ಕರ್ನಾಟಕದ ಬಾಗಲಕೋಟೆ ಪುರವಣಿಗೆ ಬರೆಯುತ್ತಿರುವ ಹೊತ್ತು ದೀಪಾವಳಿ ಹಬ್ಬ ಆಗಿರಲಿಲ್ಲ ಮತ್ತು ಮಗಳು ಈ ಸಾರಿ ಹಬ್ಬಕ್ಕೆಂದು ತಾತನ ಮನೆಗೆ ಹೋಗಿ ಬರ್ಜರಿಯಾಗಿ ಆಚರಿಸಿದ್ದಾಳೆ). ಇವತ್ತಿನ ಮಕ್ಕಳ ದೀಪಾವಳಿ ಹಬ್ಬ ಕೇವಲ ಟಿ.ವಿ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತಿರುವುದು ನೆನಪಾಗಿ ಬೇಸರವಾಯಿತು. ಈ ದಿನಗಳಲ್ಲಿ ನಾವುಗಳೆಲ್ಲ ಹಬ್ಬಗಳನ್ನು ಆಚರಿಸುವುದಕ್ಕಿಂತ ಅವುಗಳನ್ನು ಟಿ.ವಿ ಚಾನೆಲ್ ಗಳಲ್ಲಿ ನೋಡಿ ಸಂಭ್ರಮಿಸುತ್ತಿದ್ದೇವೆ. ಈ ಹಬ್ಬ ಹರಿದಿನಗಳಂದು ಮನೆಯ ಸದಸ್ಯರೆಲ್ಲ ಟಿ.ವಿ ಎದುರು ಯಾವಾಗ ಕುಳಿತೆವೋ ಎಂದು ಕಾತರಿಸುತ್ತಾರೆ. ನಮ್ಮ ಸಂಪ್ರದಾಯ, ಆಚರಣೆಗಳೆಲ್ಲ ಟಿವಿ ಎನ್ನುವ ಮೂರ್ಖ ಪೆಟ್ಟಿಗೆಯೊಳಗೆ ಬಂಧಿಸಲ್ಪಟ್ಟಿರುವುದು ಸಧ್ಯದ ಮಟ್ಟಿಗೆ ಸಾಂಸ್ಕೃತಿಕ ಲೋಕದ ಬಹುದೊಡ್ಡ ತಳಮಳ.
           ಇನ್ನು ದೀಪಾವಳಿ ಹಬ್ಬದ ವಿಷಯಕ್ಕೆ ಬಂದರೆ ಅದು ನಾವು ಆಚರಿಸುವ ಹಬ್ಬಗಳಲ್ಲೇ ಬಹುದೊಡ್ಡ ಹಬ್ಬ. ಹಿಂದೆ ನಾವು ಚಿಕ್ಕವರಿದ್ದಾಗ ದೀಪಾವಳಿ ಹಬ್ಬ ಇನ್ನೂ ಎಂಟು ದಿನಗಳಿವೆ ಎನ್ನುವಾಗಲೇ ನಮ್ಮ ಸಡಗರಕ್ಕೆ ಎಲ್ಲೆ ಇರುತ್ತಿರಲಿಲ್ಲ. ಮನೆಯಲ್ಲಿ ಅಮ್ಮ, ಅಜ್ಜಿ, ಅಕ್ಕ ಹಬ್ಬಕಾಗಿ  ತಯ್ಯಾರಿಸುವ  ಉಂಡಿ, ಚೆಕ್ಕುಲಿ, ಗಿಲಗಂಚಿ, ಚುಡುವಾ, ಸೇವು, ಜಾಮೂನು, ಅನಾರಸ ಹೀಗೆ ವಿವಿಧ ಖಾದ್ಯಗಳು  ಬಾಯಲ್ಲಿ ನೀರೂರಿಸುತ್ತಿದ್ದವು. ತಿಂಡಿಯ ಆಸೆಗಾಗಿ ನಾವು ಮಕ್ಕಳೆಲ್ಲ ಅಡುಗೆ ಮನೆಯೊಳಗೆ ಹತ್ತಾರು ಸಲ ಹೋಗಿ ಬರುವುದು ಮತ್ತು ಅಮ್ಮನಿಂದ ಬಯ್ಯಿಸಿಕೊಳ್ಳುವುದು ನಡೆಯುತ್ತಿತ್ತು. ನಮ್ಮ ಮನದ ಇಂಗಿತ ಅರಿತ ಅಜ್ಜಿ ಅಮ್ಮನ ಕಣ್ತಪ್ಪಿಸಿ ಮನೆಯ ಹಿತ್ತಲಿಗೆ ನಮ್ಮನ್ನು ಕರೆದೊಯ್ದು ಒಂದಿಷ್ಟು ತಿಂಡಿ ತಿನ್ನಲು ಕೊಡುತ್ತಿದ್ದಳು. ತಿಂಡಿಗಳೆಲ್ಲ ಸಿದ್ಧವಾದ ನಂತರ ನಮ್ಮ ಕೈಗೆ ನಿಲುಕದಂತೆ ದೊಡ್ಡ ಡಬ್ಬಿಗಳಲ್ಲಿ ತುಂಬಿ ಅಟ್ಟದ ಮೇಲೆ ಒಯ್ದಿಡುತ್ತಿದ್ದರು. ನಾವುಗಳೆಲ್ಲ ಅಟ್ಟದ ಮೇಲಿನ ತಿಂಡಿಗಳಿಂದ ತುಂಬಿದ ಡಬ್ಬಿಗಳನ್ನು ಆಸೆಯಿಂದ ನೋಡುತ್ತ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿದ್ದೇವು. ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ಅಟ್ಟ ಹತ್ತಿ ತಿಂಡಿ ತಿನ್ನುವ ಸಾಹಸ ಮಾಡುತ್ತಿದ್ದದುಂಟು.
            ದೀಪಾವಳಿ ಹಬ್ಬದ ಹಿಂದಿನ ದಿನ ಅಪ್ಪ ಪೇಟೆಯಿಂದ ನಮಗೆಲ್ಲ ಹೊಸ ಬಟ್ಟೆಗಳನ್ನು ಮತ್ತು ಹಬ್ಬಕ್ಕಾಗಿ ಪಟಾಕಿಗಳನ್ನು ತರುತ್ತಿದ್ದ. ಹೊಸ ಬಟ್ಟೆಗಳನ್ನು ಪದೆ ಪದೆ ಮುಟ್ಟಿ ನೋಡುವಾಗಿನ ಸಂಭ್ರಮ ಮತ್ತು ಸಡಗರ ವರ್ಣನಾತೀತ. ನರಕಚತುರ್ದಶಿಯಂದು ನಸುಕಿನಲ್ಲೇ ಏಳಬೇಕಿರುವುದರಿಂದ ಹಿಂದಿನ ರಾತ್ರಿ ನಮಗೆಲ್ಲ ಬೇಗನೆ ಊಟ ಮಾಡಿಸಿ ಮಲಗಿಸುತ್ತಿದ್ದರು. ಪಟಾಕಿ ಸಿಡಿಸುವ ಮತ್ತು ಹೊಸ ಬಟ್ಟೆ ಧರಿಸುವ ಕನಸುಗಳೊಂದಿಗೆ ನಾವೆಲ್ಲ ನಿದ್ರೆಗೆ ಜಾರುತ್ತಿದ್ದೇವು. ನರಕ ಚತುರ್ದಶಿಯಂದು ಬೆಳಿಗ್ಗೆ ನಾಲ್ಕು ಗಂಟೆಗೇ ಆರತಿ ಬೆಳಗುವ ಸಂಪ್ರದಾಯವಿತ್ತು. ಕೃಷ್ಣ ನರಕಾಸುರನನ್ನು ಕೊಂದು ಬಂದಿದ್ದರ ಪ್ರತೀಕವಾಗಿ ಎಲ್ಲ ಮನೆಗಳಲ್ಲಿ ವಿಶೇಷವಾಗಿ ಮಕ್ಕಳನ್ನು ಸಾಲಾಗಿ ಕೂಡಿಸಿ ಹೆಣ್ಣು ಮಕ್ಕಳು ಆರತಿ ಮಾಡುತ್ತಿದ್ದರು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನಾವೆಲ್ಲ ಪಟಾಕಿ ಸಿಡಿಸಲು ಅಂಗಳಕ್ಕೆ ಲಗ್ಗೆ ಇಡುತ್ತಿದ್ದೇವು. ಒಂದಾದ ಮೇಲೊಂದರಂತೆ ಪಟಾಕಿಗಳು ಸಿಡಿದು ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿದ್ದವು. ಇಡೀ ಊರು ಪಟಾಕಿಗಳ ಸದ್ದಿನಲ್ಲಿ ಮುಳುಗೆಳುತ್ತಿತ್ತು.
          ಬೆಳಕು ಹರಿಯುವವರೆಗೂ ಪಟಾಕಿಗಳ ಸಂಭ್ರಮದಲ್ಲಿ ಮೈಮರೆತು ಕುಣಿಯುತ್ತಿದ್ದ ನಮ್ಮನ್ನೆಲ್ಲ ಅಮ್ಮ ಬಲವಂತವಾಗಿ ಕರೆದೊಯ್ದು ಬಚ್ಚಲ ಮನೆಯಲ್ಲಿ ಕೂಡಿಸುತ್ತಿದ್ದಳು. ಮೈಗೆಲ್ಲ ಎಣ್ಣೆ ಸವರಿದ ಬಿಸಿ ನೀರಿನ ಸ್ನಾನ ಮೈಗೆ ಹಿತವೆನಿಸುತ್ತಿತ್ತು. ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಫಲಹಾರಕ್ಕೆ ಅಣಿಯಾಗುತ್ತಿದ್ದೇವು. ಮಕ್ಕಳು, ಗಂಡಸರು, ನೆರೆಹೊರೆಯವರು ಮತ್ತು ಆಳುಕಾಳುಗಳು ಸೇರಿ ಹದಿನೈದಿಪ್ಪತ್ತು ಜನ ಇರುತ್ತಿದ್ದರು. ಮನೆಯ ಪಡಸಾಲೆಯಲ್ಲಿ ಎಲ್ಲರೂ ಸಾಲಾಗಿ ಕುಳಿತ ನಂತರ ಅಕ್ಕ ನಮ್ಮೆದುರು ಉದ್ದಕ್ಕೂ ಬಿಡಿಸುತ್ತಿದ್ದ ಬಣ್ಣದ ರಂಗೋಲಿ ಚಿತ್ತಾಕರ್ಷಕವಾಗಿರುತ್ತಿತ್ತು. ಪ್ರತಿಯೊಬ್ಬರೆದುರು ಪುಟ್ಟ ಮಗುವಿನ ಹಾಸಿಗೆ ಗಾತ್ರದ ಬಾಳೆ ಎಲೆ. ಎಳೆಯ ಸುತ್ತಲೂ ಉಂಡಿ, ಚೆಕ್ಕುಲಿ, ಗಿಲಗಂಚಿ, ಅನಾರಸ, ಜಾಮೂನುಗಳಿದ್ದರೆ ಮಧ್ಯದಲ್ಲಿ ಹಬೆಯಾಡುವ ಬಿಸಿ ಉಪಿಟ್ಟು ಅದರ ಮೇಲೆ ಕೆನೆ ಮೊಸರು. ಎಲೆಯ ಎಡಭಾಗದಲ್ಲಿ ರಸಬಾಳೆ ಹಣ್ಣು. ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷಗಳ ಜೊತೆಗೆ ಅಮ್ಮ ಮತ್ತು ಅಜ್ಜಿಯ ಅಂತ:ಕರಣದ ಒತ್ತಾಯದಿಂದಾಗಿ ತಿಂಡಿಗಳೆಲ್ಲ ಒಂದೊಂದಾಗಿ ಹೊಟ್ಟೆಗಿಳಿಯುತ್ತಿದ್ದವು. ಆ ದಿನ ಊಟದ ನೆನಪೇ ಆಗದಂತೆ ಫಲಹಾರದಿಂದ ಹೊಟ್ಟೆ ಭಾರವಾಗುತ್ತಿತ್ತು. ರಾತ್ರಿಯಂತೂ ಊರಿನ ಎಲ್ಲ ಮನೆಗಳಲ್ಲಿ ಸ್ಪರ್ಧೆಯಂತೆ ಪಟಾಕಿಗಳನ್ನು ಸಿಡಿಸಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸುತ್ತಿದ್ದರು.
       ದೀಪಾವಳಿ ಹಬ್ಬದ ಮೂರನೆ ದಿನವಾದ ಬಲಿಪಾಡ್ಯಮಿಯದು ಇನ್ನೊಂದು ವಿಶೇಷ ಆ ದಿನ ನಸುಕಿನ ನಾಲ್ಕು ಗಂಟೆಗೇ ಅಗಸರ ಚೆಂದಪ್ಪ ನಮಗೆಲ್ಲ ಆರತಿ ಬೆಳಗಲು ಬರುತ್ತಿದ್ದ. ತೆಲೆಯ ಮೇಲೆ ಕಂಬಳಿ ಹೊದ್ದು ಕೈಯಲ್ಲಿ ಆರತಿ ತಟ್ಟೆ ಹಿಡಿದು ಬರುವ ಚೆಂದಪ್ಪ ದೇವಧೂತನಂತೆ ಕಾಣಿಸುತ್ತಿದ. ಮನೆಯವರೆಲ್ಲರೂ ಸಾಲಾಗಿ  ಕುಳಿತು ಅವನಿಂದ ಆರತಿ ಮಾಡಿಸಿಕೊಳ್ಳುತ್ತಿದ್ದೇವು. ಮನೆಯ ಹಿರಿಯರು ಅವನ ಆರತಿ ತಟ್ಟೆಗೆ ಒಂದಿಷ್ಟು ಹಣ ಹಾಕುತ್ತಿದ್ದರು. ಆ ದಿನ ಫಲಹಾರದ ಜೊತೆಗೆ ಮಧ್ಯಾಹ್ನದ ಊಟಕ್ಕೆ ವಿಶೇಷ ಅಡುಗೆ ಸಿದ್ಧವಾಗುತ್ತಿತ್ತು. ನೆರೆಹೊರೆಯವರನ್ನೂ ಉಪಹಾರಕ್ಕೆ ಮತ್ತು ಊಟಕ್ಕೆ ಕರೆಯುತ್ತಿದ್ದರು. ಒಂದು ಸೌಹಾರ್ದ ವಾತಾವರಣ ಈ ಹಬ್ಬ ತಂದುಕೊಡುತ್ತಿತ್ತು. ದೀಪಾವಳಿ ಹಬ್ಬದ ಆ ಮೂರು ದಿನಗಳು ಮನೆಯಲ್ಲಿನ ದನಕರುಗಳಿಗೂ ಆರತಿ ಬೆಳಗುತ್ತಿದ್ದುದೊಂದು ವಿಶೇಷ. ಊರಿನ ದನ ಕಾಯುವ ಹುಡುಗರು ಹುಲ್ಲಿನಿಂದ ಆರತಿ ತಟ್ಟೆಯನ್ನು ತಯ್ಯಾರಿಸಿ ಅದರೊಳಗೆ ಮಣ್ಣಿನ ಹಣತೆಯನ್ನಿಟ್ಟುಕೊಂಡು ರಾತ್ರಿ ಮನೆ ಮನೆಗೂ ತೆರಳಿ ದನಕರುಗಳಿಗೆ ಆರತಿ ಬೆಳಗುತ್ತಿದ್ದರು. ಆ ಹುಡುಗರಿಗೆ ಕೆಲವರು ಪಟಾಕಿಗಳನ್ನೋ ಇನ್ನು ಕೆಲವರು ಒಂದೆರಡು ರೂಪಾಯಿಗಳನ್ನೋ ಕೊಡುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರು ದಿನಗಳ ಸಡಗರ ಸಂಭ್ರಮ ವರ್ಣನಾತೀತ. ಹೊಸ ಬಟ್ಟೆ, ವಿವಿಧ ಭಕ್ಷ ಭೋಜನಗಳು, ತರೇಹವಾರಿ ಪಟಾಕಿಗಳು ಈ ಎಲ್ಲ ಸಂಭ್ರಮಗಳ ನಡುವೆ ಮೂರು ದಿನಗಳು ಕಳೆದು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ದೀಪಾವಳಿ ಮತ್ತೆ ಯಾವಾಗ ಬರುತ್ತದೋ ಎನ್ನುವ ಬೇಸರದಿಂದಲೇ ನಾವು ಮಕ್ಕಳೆಲ್ಲ ದೀಪಾವಳಿ ಹಬ್ಬಕ್ಕೆ ವಿದಾಯ ಹೇಳುತ್ತಿದ್ದೇವು.

ಇಂದು 

       'ರ್ರೀ ಸುಜಾತಾ ಈ ಸಲದ ದಿಪಾವಳಿಗಿ ಟಿವ್ಯಾಗ ಮುಂಜಾನಿ ಎಂಟರಿಂದ ರಾತ್ರಿ ಹತ್ತರತನಕ ಸ್ಪೆಷಲ್ ಪ್ರೋಗ್ರಾಮ್ ಹಾಕ್ಲಿಕತ್ತಾರ. ನಾನಂತೂ ಹನ್ನೊಂದರೊಳಗ ಹಬ್ಬದ ಕೆಲ್ಸಾ ಎಲ್ಲಾ ಮುಗಿಸಿ ಟಿವಿ ಎದರ ಕೂಡ್ತಿನಿ ನೋಡ್ರಿ' ಪಕ್ಕದ ಮನೆ ಸಾವಿತ್ರಮ್ಮ ಹೇಳುತ್ತಿದ್ದರೆ ಇಡೀ ಓಣಿ ಹೆಂಗಸರೆಲ್ಲ ಹಬ್ಬದ ಮೂರು ದಿನಗಳಂದು ಟಿವಿಯಲ್ಲಿ ಏನೇನು ಕಾರ್ಯಕ್ರಮಗಳಿವೆಯಂದು ಚರ್ಚಿಸುತ್ತಿದ್ದರು.  ಹೌದು ಈ ಟಿವಿ ಚಾನೆಲ್ ಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳ ಹಾವಳಿ ಪ್ರಾರಂಭವಾದ ಮೇಲಂತೂ ಹಬ್ಬಗಳು ತಮ್ಮ ವಿಶೇಷತೆಗಳನ್ನೇ ಕಳೆದು ಕೊಂಡಿವೆ. ಮೂರು ದಿನಗಳ ದೀಪಾವಳಿ ಹಬ್ಬವೂ ಇದರಿಂದ ಹೊರತಾಗಿಲ್ಲ. ಹಬ್ಬಕ್ಕೆಂದು ಮನೆಗಳಲ್ಲಿ ವಿಶೇಷ ತಿಂಡಿಗಳನ್ನು ತಯ್ಯಾರಿಸುವ ಸಂಪ್ರದಾಯ ನಮ್ಮ ಅಮ್ಮಂದಿರ ಕಾಲಕ್ಕೇ ಮುಗಿದು ಹೋಗಿದೆ. ಅಂಗಡಿಗಳಿಂದ ಹಬ್ಬಕ್ಕೆಂದು ಕಟ್ಟಿಸಿಕೊಂಡು ಬರುವ ಕಾಲು ಕೇಜಿ ತಿಂಡಿಯನ್ನೂ ಮಕ್ಕಳು ಮ್ಯಾಗಿ ಮತ್ತು ಪಿಜ್ಜಾದ ಪ್ರಭಾವದಿಂದಾಗಿ ಮೂಸಿಯೂ ನೋಡುತ್ತಿಲ್ಲ. ಹೊಸ ಬಟ್ಟೆ ಹಬ್ಬಕ್ಕೇ ತೊಡಬೇಕೆನ್ನುವ ನಿಯಮವಿಲ್ಲ. ಸಾಲು ಸಾಲು ಮರಗಳನ್ನು ನೆಲಕ್ಕುರುಳಿಸಿ ಪರಿಸರವನ್ನು ಹಾಳುಗೆಡುವುತ್ತಿರುವ ನಾವು ಪರಿಸರ ಮಾಲಿನ್ಯ ಎಂದು ನೆಪವೊಡ್ಡಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದೇವೆ. ಹಿಂದೆ ಎಲ್ಲ ದೀಪಾವಳಿ ಹಬ್ಬದಂದು ಪರಿಚಿತರ ಮತ್ತು ಸಂಬಂಧಿಕರ ಮನೆಗಳಿಗೆ ಹೋಗಿ ಫಲಹಾರ ಸೇವಿಸಿ ಪರಸ್ಪರ ಶುಭಾಷಯ ಕೊರುತ್ತಿದ್ದ ದಿನಗಳು ಮರೆಯಾಗಿ ಇಂದು ಪಕ್ಕದ ಮನೆಯವರಿಗೇ ಶುಭಾಷಯವನ್ನು ಎಸ್.ಎಮ್.ಎಸ್ ಮೂಲಕ ತಿಳಿಸುತ್ತಿದ್ದೇವೆ. ಇನ್ನು ನಮ್ಮ ನಂತರದ ಪೀಳಿಗೆಗೆ ದನಕರುಗಳಿಗೆ ದೀಪ ಬೆಳಗುವುದಾಗಲಿ, ನಸುಕಿನಲ್ಲಿ ಚೆಂದಪ್ಪ ಬಂದು ಆರತಿ ಮಾಡುವುದಾಗಲಿ, ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ಮಾಡಿ ಪೂಜಿಸುವುದಾಗಲಿ ಗೊತ್ತೇ ಇಲ್ಲ. ಅದೆಲ್ಲ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ದೀಪಾವಳಿ ಅನ್ನುವುದು ಕೂಡಾ ಅದೊಂದು ಸಾಮಾನ್ಯ ದಿನದಂತೆಯೇ ಆಗಿ ಹೋಗಿದೆ. ಈ ಬದಲಾವಣೆಯನ್ನೆಲ್ಲ ಬೆರಗುಗಣ್ಣಿನಿಂದ ಗಮನಿಸುತ್ತಿರುವ 90 ವರ್ಷದ ನನ್ನ ಪರಿಚಯದ ಅಜ್ಜಿಯೊಬ್ಬಳು ಗೊಣಗುತ್ತಾಳೆ 'ನಮ್ಮ ಕಾಲದಾಗ ದೀಪಾವಳಿ ಇನ್ನು ಎಂಟು ದಿನ ಅನ್ನೋವಾಗಲೇ ಹಬ್ಬದ ತಯ್ಯಾರಿ ಶುರು ಆಗ್ತಿತ್ತು. ಮುಂದ ತುಳಸಿ ಲಗ್ನ ಮುಗಿಯೋವರೆಗೂ ಮನೆಯಲ್ಲಿ ದೀಪಾವಳಿ ಹಬ್ಬಾನೆ. ಆದರ ಈಗಿನ ಕಾಲದಾಗ ದೀಪಾವಳಿ ಯಾವಾಗ ಬರ್ತದ ಯಾವಾಗ ಹೋಗ್ತದ ಗೊತ್ತೇ ಆಗಂಗಿಲ್ಲ'.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, November 22, 2012

ತುರ್ತು ನಿಗಾಘಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳು

        

        ಇಡೀ ದೇಶದಾದ್ಯಂತ ನವೆಂಬರ್ 14 ರಿಂದ 20ರ ವರೆಗೆಗಿನ ಏಳು ದಿನಗಳ ಅವಧಿ ಸಾರ್ವಜನಿಕ ಗ್ರಂಥಾಲಯಗಳಿಗೆ 'ಗ್ರಂಥಾಲಯ ಸಪ್ತಾಹ' ಆಚರಣೆಯ ಸಂಭ್ರಮದ ಸಮಯ. ಆ ಏಳು ದಿನಗಳಲ್ಲಿ ಪುಸ್ತಕ ಪ್ರದರ್ಶನ, ಚಿಂತಕರಿಂದ  ಉಪನ್ಯಾಸ, ಓದುಗರಿಗೆ ಬಹುಮಾನ ಇತ್ಯಾದಿ ಚಟುವಟಿಕೆಗಳ ಮೂಲಕ ಓದುಗರನ್ನು ಗ್ರಂಥಾಲಯದೆಡೆಗೆ ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ನಿರಂತರ 24 ತಾಸುಗಳ ಮನೋರಂಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸಮಸ್ಯೆಗಳ ಕಾರಣ ಓದುವ ಕ್ರಿಯೆಯಂಥ ಸೃಜನಾತ್ಮಕ ಹವ್ಯಾಸ ಕ್ರಮೇಣ ಕ್ಷೀಣಿಸುತ್ತಿದೆ. ಪರಿಣಾಮವಾಗಿ ಸಾರ್ವಜನಿಕ ಗ್ರಂಥಾಲಯಗಳು ಓದುಗರ ಕೊರತೆಯನ್ನು ಅನುಭವಿಸುತ್ತಿವೆ.
        ಕರ್ನಾಟಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಕಬ್ಬನ್ ಪಾರ್ಕಿನ ಶೇಷಾದ್ರಿ ಮೆಮೋರಿಯಲ್ ಹಾಲ್ ನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿದರು. ಇದು ಸ್ಥಾಪನೆಯಾದದ್ದು 1914 ರಲ್ಲಿ. ಭಾರತ ಸ್ವಾತಂತ್ರ್ಯಾ ನಂತರ ಡಾ.ಎಸ್.ಆರ್.ರಂಗನಾಥನ್ ಮತ್ತು ಅಂದಿನ ಶಿಕ್ಷಣ ಮಂತ್ರಿ ಶ್ರೀ ಎಸ್.ಆರ್.ಕಂಠಿ ಅವರ ಪ್ರಯತ್ನದ ಫಲವಾಗಿ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಸಾರ್ವಜನಿಕ ಗ್ರಂಥಾಲಯಗಳಿಗೆ ಅಗತ್ಯವಾದ ಹಣಕಾಸಿನ ನೆರವು ದೊರೆಯುವಂತಾಗಲು ಈ ಕಾಯ್ದೆಯ ರಚನೆ ಅವಶ್ಯಕವಾಗಿತ್ತು. ಈ ಕಾಯ್ದೆಯನ್ವಯ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಹಣದಲ್ಲಿ ಪ್ರತಿ ಒಂದು ರೂಪಾಯಿಗೆ ಆರು ಪೈಸೆಗಳಷ್ಟು ಹಣವನ್ನು ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಮೀಸಲಾಗಿಡಲಾಗುತ್ತದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳು ಆಯಾ ಜಿಲ್ಲೆಯಲ್ಲಿ ಸಂಗ್ರಹವಾಗುವ ಭೂಕಂದಾಯದಿಂದ ಪ್ರತಿಶತ 6ರಷ್ಟು ಹಣವನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ಪಡೆಯುತ್ತವೆ. ಕೊಲ್ಕತ್ತಾದ ರಾಜಾ ರಾಮಮೋಹನ ರಾಯ್ ಲೈಬ್ರರಿ ಫೌಂಡೆಶನ್ ನಿಂದಲೂ ಸಾರ್ವಜನಿಕ ಗ್ರಂಥಾಲಯಗಳಿಗೆ ವಿಶೇಷ ಅನುದಾನ ದೊರೆಯುತ್ತಿದೆ. 
       ಸಾರ್ವಜನಿಕ ಗ್ರಂಥಾಲಯವೇ ಒದಗಿಸಿದ ಅಂಕಿಅಂಶಗಳ ಪ್ರಕಾರ ಇಂದು ರಾಜ್ಯದಲ್ಲಿ 27 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 19 ನಗರ ಕೇಂದ್ರ ಗ್ರಂಥಾಲಯಗಳು, 16 ಸಂಚಾರಿ ಗ್ರಂಥಾಲಯಗಳು ಮತ್ತು 2751 ಗ್ರಾಮೀಣ ಗ್ರಂಥಾಲಯಗಳಿವೆ. ಇವುಗಳ ಜೊತೆಗೆ ಒಟ್ಟು 451 ಶಾಖಾ ಗ್ರಂಥಾಲಯಗಳು ನಗರ ಮತ್ತು ಜಿಲ್ಲಾ ಕೇಂದ್ರಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಖ್ಯಾ ದೃಷ್ಟಿಯಿಂದ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸೌಲಭ್ಯ ಸಮೃದ್ಧವಾಗಿದೆ. ಆದರೆ ಗುಣಾತ್ಮಕ ಸೇವೆಯ ದೃಷ್ಟಿಯಿಂದ ನೋಡಿದಾಗ ಇವುಗಳ ಸಾಧನೆ ಶೂನ್ಯ. ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಗ್ರಂಥಾಲಯಗಳು ಕ್ರಮೇಣ ಸಾರ್ವಜನಿಕರಿಂದಲೇ ದೂರವಾಗುತ್ತಿರುವುದು ವಿಪರ್ಯಾಸ.
      ಸಾರ್ವಜನಿಕ ಗ್ರಂಥಾಲಯಗಳಲ್ಲ ಏನಿದೆ, ಏನಿಲ್ಲ ಎನ್ನುವುದನ್ನು ಪಟ್ಟಿ ಮಾಡುತ್ತ ಹೋದರೆ ಅಲ್ಲಿ ಇಲ್ಲಗಳ ಸಂಖ್ಯೆಯೇ ಬೆಳೆಯುತ್ತ ಹೋಗುತ್ತದೆ. ಸ್ವಂತ ಕಟ್ಟಡ ಇಲ್ಲದಿರುವುದು, ಪುಸ್ತಕಗಳ ಕೊರತೆ, ಸಿಬ್ಬಂದಿ ಸಮಸ್ಯೆ, ಉಪಕರಣಗಳ ಅಭಾವ ಹೀಗೆ ಸಾರ್ವಜನಿಕ ಗ್ರಂಥಾಲಯಗಳು ಸಮಸ್ಯೆಗಳ ಆಗರಗಳಾಗಿವೆ. ಅದೆಷ್ಟೋ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಹಳಷ್ಟು ಗ್ರಂಥಾಲಯಗಳು ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಓದುಗರಿಗೆ ಕುಳಿತು ಓದಲು ಕುರ್ಚಿ, ಟೇಬಲ್ ಗಳ ಕೊರತೆಯಿಂದಾಗಿ ಅನೇಕ ಗ್ರಂಥಾಲಯಗಳಲ್ಲಿ ಓದುಗರು ನಿಂತು ಓದುವ ದೃಶ್ಯ ಸಾಮಾನ್ಯವಾಗಿದೆ. ಪುಸ್ತಕಗಳ ಬಗ್ಗೆ ಹೇಳದಿರುವುದೇ ಒಳಿತು ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹರಿದು ಓದಲಾರದಂಥ ಸ್ಥಿತಿಗೆ ಬಂದ ಪುಸ್ತಕಗಳ ಸಂಖ್ಯೆಯೇ ಸಿಂಹಪಾಲು. ಇರುವ ಕೆಲವೇ ಉತ್ತಮ ಪುಸ್ತಕಗಳು ಸಹ ಓದಲು ಉಪಯುಕ್ತವಾಗಿರುವುದಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಅಧಿಕಾರಿಗಳು ತಮಗೆ ಬೇಕಾದ ಲೇಖಕರಿಂದ ಪುಸ್ತಕಗಳನ್ನು ಬರೆಸಿ ಮತ್ತು ಬೇಕಾದ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸಿ ಖರೀದಿಸುವರೆಂಬ ದೂರಿದೆ. ಅಧಿಕಾರಿಗಳು ಈ ಮಾತನ್ನು ಅಲ್ಲಗಳೆದರೂ ಅಲ್ಲಿನ ಪುಸ್ತಕಗಳನ್ನು ನೋಡಿದಾಗ ಆ ಮಾತು ನಿಜವೆಂದು ತೋರುತ್ತದೆ. ಅಧಿಕಾರಿಗಳು, ಪ್ರಕಾಶಕರು ಮತ್ತು ಲೇಖಕರ ನಡುವೆ ಕಮಿಷನ್ ರೂಪದಲ್ಲಿ ಹಣ ಹರಿದಾಡಿ ಅವರವರ ಜೇಬು ಭರ್ತಿಯಾಗುತ್ತದೆ ಎನ್ನುವ ಮಾತಿಗೆ ಪುಷ್ಟಿ ಕೊಡುವಂತೆ ಅಲ್ಲಿನ ಪುಸ್ತಕಗಳು ಸಾಹಿತ್ಯ ಲೋಕಕ್ಕೆ ಪರಿಚಯವೇ ಇಲ್ಲದ ಲೇಖಕರಿಂದ ಬರೆದವುಗಳಾಗಿರುತ್ತವೆ. ಅಲ್ಲಿರುವ ಪುಸ್ತಕಗಳಲ್ಲಿ ಅಡುಗೆ ಮನೆಯ ಸಾಹಿತ್ಯದ್ದೆ ಅಧಿಕ ಪಾಲು. ಕುವೆಂಪು, ಬೇಂದ್ರೆ, ಕಾರಂತ, ಅಡಿಗರ ಪುಸ್ತಕಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ಇನ್ನು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವರ್ತನೆ ಆ ದೇವರಿಗೆ ಪ್ರೀತಿ. ಪುಸ್ತಕ ದ್ವೇಷಿಗಳಂತೆ ವರ್ತಿಸುವವರಿಗೆ ಪುಸ್ತಕಗಳ ನಡುವೆ ಕಾರ್ಯನಿರ್ವಹಿಸುವ ಅವಕಾಶ ದೊರೆತದ್ದು ಕುಚೋದ್ಯದ ಸಂಗತಿ. ಗ್ರಂಥಾಲಯದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಬೇಕಾದವರೇ ಅಶಿಸ್ತಿಗೆ ದಾರಿಮಾಡಿ ಕೊಡುತ್ತಾರೆ. ದಿನದ ಹೆಚ್ಚಿನ ಸಮಯ ಅವರುಗಳು ಗ್ರಂಥಾಲಯದ ಒಳಗಿರುವುದಕ್ಕಿಂತ ಹೊರಗಿರುವುದೇ ಹೆಚ್ಚು. ಓದಲು ಮತ್ತು ಬರೆಯಲು ಬರದವರು ಸಹ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರಾಗಿಯೋ ಅಥವಾ ಗ್ರಂಥಾಲಯ ಸಹಾಯಕರಾಗಿಯೋ ಕೆಲಸಕ್ಕೆ ಸೇರಬಹುದೆನ್ನುವ ಮನೋಭಾವ ಬಲವಾಗುತ್ತಿದೆ. ಪರಿಣಾಮವಾಗಿ ಯಾವುದೋ ಮೂಲಗಳಿಂದ ವಿದ್ಯಾರ್ಹತೆ ಪಡೆದು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೆಲಸಕ್ಕೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಓದುಗರದು ಮಾತ್ರ ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಸಿಬ್ಬಂದಿಯನ್ನು ಸರಸ್ವತಿಯ ಆರಾಧಕರೆನ್ನಬೇಕೋ ಅಥವಾ ವಿಧ್ವಂಸಕರೆಂದು ಕರೆಯಬೇಕೋ ಎನ್ನುವ ಜಿಜ್ಞಾಸೆ.
        ಉತ್ತಮ ಪುಸ್ತಕಗಳ ಕೊರತೆಯ ನಡುವೆಯೂ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯೂಟರ್ ಗಳನ್ನೂ ಒದಗಿಸಿದೆ. ಒಂದರ್ಥದಲ್ಲಿ ಅದು 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ' ಎನ್ನುವಂತಿದೆ. ಪುಸ್ತಕಗಳ ಕೊರತೆಯೇ ಪ್ರಮುಖ ಸಮಸ್ಯೆಯಾಗಿರುವಾಗ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯೂಟರ್ ಗಳನ್ನು  ಒದಗಿಸಿದ ಯೋಜನೆಯ ಹಿಂದಿನ ಉದ್ದೇಶ ಅನುಮಾನ ಬರಿಸುವಂತಿದೆ. ಗ್ರಂಥಾಲಯಗಳಿಗೆ ಕೊಟ್ಟ ಕಂಪ್ಯೂಟರ್ ಗಳೆನಾದರೂ ಕೆಲಸ ಮಾಡುತ್ತಿವೆಯೇ? ಕಂಪ್ಯೂಟರ್ ಶಿಕ್ಷಣ ಮತ್ತು ತರಬೇತಿ ಪಡೆದ ಸಿಬ್ಬಂದಿಯ ಕೊರತೆಯಿಂದಾಗಿ ಇವತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಂಪ್ಯೂಟರ್ ಗಳು ಧೂಳು ತಿನ್ನುತ್ತ ಕುಳಿತಿವೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿನ ಒಂದೆರಡು ಗ್ರಂಥಾಲಯಗಳನ್ನು ಗಣಕೀಕರಣಗೊಳಿಸಿದ ಮಾತ್ರಕ್ಕೆ ರಾಜ್ಯದಲ್ಲಿನ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಗಣಕೀಕೃತಗೊಳಿಸಬಹುದೆನ್ನುವ ನಿರ್ಧಾರಕ್ಕೆ ಬರುವುದು ತಪ್ಪು. ಕೋಟ್ಯಾಂತರ ರೂಪಾಯಿಗಳನ್ನು ಕಂಪ್ಯೂಟರ್ ಗಳ ಮೇಲೆ ಖರ್ಚು ಮಾಡುವುದಕ್ಕಿಂತ ಅದೇ ಹಣವನ್ನು ಪುಸ್ತಕಗಳು ಮತ್ತು ಉಪಕರಕಣಗಳ ಮೇಲೆ ಖರ್ಚು ಮಾಡಬಹುದಿತ್ತು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕಿದ್ದ ಅಧಿಕಾರಿಗಳೇ ಇಂಥದ್ದೊಂದು ಯೋಜನೆಯ ಫಲಾನುಭವಿಗಳಾಗುತ್ತಿರುವುದು ವ್ಯವಸ್ಥೆಯೊಂದರ ದುರಂತಕ್ಕೆ ಸಾಕ್ಷಿ.
            ಗ್ರಾಮಾಂತರ ಪ್ರದೇಶದ ಜನತೆಗೂ ಪತ್ರಿಕೆ ಮತ್ತು ಪುಸ್ತಕಗಳನ್ನೊದುವ ಸೌಲಭ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಗ್ರಾಮೀಣ ಗ್ರಂಥಾಲಯಗಳ ಸ್ಥಾಪನೆಗೆ ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಕಾರಣದಿಂದಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಯಿತು. ಇದುವರೆಗೆ 2751 ಗ್ರಾಮೀಣ ಗ್ರಂಥಾಲಯಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿಸಲಾಗಿದೆ. ಇಲ್ಲಿಯೂ ಕಟ್ಟಡ, ಪುಸ್ತಕಗಳು, ಸಿಬ್ಬಂದಿ ಮತ್ತು ಉಪಕರಣಗಳದ್ದೆ ಸಮಸ್ಯೆ. ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮುರಿದು ದುರಸ್ಥಿಯಾದ ಕುರ್ಚಿ ಮೇಜುಗಳನ್ನೇ ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲಾಗುವುದು. ಪುಸ್ತಕಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಮುಖ್ಯ ಗ್ರಂಥಾಲಯಗಳಲ್ಲಿ ಓದಿ ಹಾಳಾದ ಪುಸ್ತಕಗಳೇ ಇಲ್ಲಿ ಓದಲು ಸಿಗುತ್ತವೆ. ಗ್ರಾಮೀಣ ಪರಿಸರದ ಓದುಗರಿಗೆ ಅವರ ಅಭಿರುಚಿಗನುಗುಣವಾದ ಪುಸ್ತಕಗಳು ಇಲ್ಲಿ ಓದಲು ಸಿಗುವುದಿಲ್ಲ. ಗ್ರಂಥಾಲಯಕ್ಕೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳು ಬರುತ್ತವೆಯಾದರೂ ಅವುಗಳು ಸ್ಥಳೀಯ ರಾಜಕೀಯ ನಾಯಕರುಗಳ ಮನೆಯ ಪಡಸಾಲೆಯ ಅಲಂಕಾರಿಕ ವಸ್ತುಗಳಾಗುತ್ತಿವೆ. ಓದುಗರಿಲ್ಲದೆ ಗ್ರಂಥಾಲಯಗಳು ಹಾಳು ಹರಟೆಯ ಇಲ್ಲವೇ ಇಸ್ಪಿಟ್ ಆಟದ ಕೇಂದ್ರಗಳಾಗಿವೆ. ಗ್ರಾಮೀಣ ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ನೇಮಕಗೊಂಡ ಮೇಲ್ವಿಚಾರಕರಿಗೆ ಸರ್ಕಾರದಿಂದ ಪ್ರತಿ ತಿಂಗಳು 1500 ರೂಪಾಯಿಗಳ ಸಹಾಯಧನ ದೊರೆಯುತ್ತಿದೆ. ಈ ಸಂಬಳದಲ್ಲಿ ಆ ಮೇಲ್ವಿಚಾರಕರು ಪ್ರತಿದಿನ 6 ರಿಂದ 8 ಗಂಟೆಗಳವರೆಗೆ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸಬೇಕು. ಕಡಿಮೆ ಸಂಬಳಕ್ಕೆ ಹೆಚ್ಚಿನ ಅವಧಿಗೆ ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಿಲ್ಲದ ಮೇಲ್ವಿಚಾರಕರಿಂದ ಹೆಚ್ಚಿನದನ್ನು  ನಿರೀಕ್ಷಿಸುವುದು ದೂರದ ಮಾತು. ಹಾಗೆ ನಿರೀಕ್ಷಿಸುವುದು ಕೂಡಾ ತಪ್ಪು. ಈ ನಡುವೆ ತಿಂಗಳು ಪೂರ್ತಿ ಕೆಲಸ ಮಾಡಿದರೂ ಅವರಿಗೆ ದೊರೆಯಬೇಕಾದ ಸಂಬಳ ದೊರೆಯುತ್ತಿಲ್ಲ ಎನ್ನವ ಮಾತೂ ಕೇಳಿ ಬರುತ್ತಿದೆ.
       ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮಕ್ಕಳ ಗ್ರಂಥಾಲಯಗಳ ಸ್ಥಾಪನೆಗೆ ಚಾಲನೆ ನೀಡಿತು. ಈ ಒಂದು ಯೋಜನೆಯಲ್ಲಾದರೂ ಯಶಸ್ವಿಯಾಗಬಹುದೆಂಬ ಸಾರ್ವಜನಿಕರ ನಿರೀಕ್ಷೆಯನ್ನು ಅದು ಹುಸಿಗೊಳಿಸಿತು. ಮಕ್ಕಳ ವಿಭಾಗ ಎನ್ನುವ ಹೆಸರಿನ ವಿಭಾಗ ಗ್ರಂಥಾಲಯಗಳಲ್ಲಿ ಹೆಸರಿಗೆ ಮಾತ್ರವಿದ್ದು ಅಲ್ಲಿ ಮಕ್ಕಳ ಅಭಿರುಚಿ ಮತ್ತು ಅವರ ವಯೋಮಾನಕ್ಕನುಗುಣವಾದ ಪುಸ್ತಕಗಳೇ ಇರುವುದಿಲ್ಲ. ಮಕ್ಕಳ ಉಪಯೋಗಕ್ಕೆಂದು ತಂದಿಟ್ಟ ಒಂದೆರಡು ಕಂಪ್ಯೂಟರ್ ಗಳನ್ನು ಅಲ್ಲಿನ ಸಿಬ್ಬಂದಿ ಮಕ್ಕಳಿಗೆ ಉಪಯೋಗಿಸಲು ಬಿಡುವುದಿಲ್ಲವಾದ್ದರಿಂದ ಪವಿತ್ರ ಗೋವನ್ನು ತೋರಿಸುವಂತೆ ದೂರದಿಂದಲೇ ತೋರಿಸಬೇಕು. ಒಟ್ಟಿನಲ್ಲಿ ಸಮಸ್ಯೆ ಕೇಂದ್ರಿತವಾದ ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಬೇಕು. ಸಂಬಂಧಪಟ್ಟ ಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ನಂಬಿಕೆ ನಿಜವಾಗಬೇಕು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, November 15, 2012

ಮಲಾಲಾ ಎನ್ನುವ ಭರವಸೆಯ ಬೆಳಕು

   
Malala Yousafzai


     ಆಕೆಗಿನ್ನೂ ಹದಿನಾಲ್ಕು ವರ್ಷ ವಯಸ್ಸು. ಆಟ ಆಡುತ್ತ, ಗೆಳತಿಯರೊಂದಿಗೆ ಚೇಷ್ಟೆ ಮಾಡುತ್ತ, ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಹಠ ಮಾಡುತ್ತ, ತಮ್ಮಂದಿರೊಂದಿಗೆ ಜಗಳವಾಡುತ್ತ ಕಾಲ ಕಳೆಯಬೇಕಾದ ಪುಟ್ಟ ಹುಡುಗಿ ಅವಳು. ಅಂಥ ಹುಡುಗಿ ಅಕ್ಟೋಬರ್ 9 ರಂದು ಶಾಲೆಯಿಂದ ಮರಳುತ್ತಿರುವ ಹೊತ್ತು ಅವಳಿದ್ದ ಶಾಲಾವಾಹನವನ್ನು ತಡೆಗಟ್ಟಿದ ಕ್ರೂರ ತಾಲಿಬಾನಿಗಳು ಅವಳ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲು ಪ್ರಯತ್ನಿಸಿದರು. ಉಗ್ರರ ಒಂದು ಗುಂಡು ತೆಲೆಯನ್ನು ಮತ್ತು ಇನ್ನೊಂದು ಕುತ್ತಿಗೆಯನ್ನು ಹೊಕ್ಕು ಅವಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂಗ್ಲೆಂಡಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಹುಡುಗಿಯನ್ನು ಉಳಿಸಿಕೊಳ್ಳಲು ಅಲ್ಲಿನ ವೈದ್ಯರು ಹರಸಾಹಸ ಮಾಡುತ್ತಿರುವರು. ಆಸ್ಪತ್ರೆಯ ವೈದ್ಯರ ಪ್ರಕಾರ ಅವಳು ಬದುಕುಳಿಯುವ ಸಾಧ್ಯತೆ ಪ್ರತಿಶತ 70 ರಷ್ಟಿದೆ. ಇಡೀ ಜಗತ್ತು ಅವಳಿಗಾಗಿ ಪ್ರಾರ್ಥಿಸುತ್ತಿದೆ. ಬದುಕಿ ಬರಲೆಂದು ಅವಳ ವಯಸ್ಸಿನ ಪುಟ್ಟ ಮಕ್ಕಳೆಲ್ಲ ಆಸೆ ಕಂಗಳಿಂದ ನಿರೀಕ್ಷಿಸುತ್ತಿದ್ದಾರೆ. ಕೋಟ್ಯಾಂತರ ಜನರ ಹರಕೆ ಹಾರೈಕೆಗಳೆಲ್ಲ ನಿಜವಾಗಲಿವೆ ಎನ್ನುವ ಸಣ್ಣ ಆಸೆ ಎಲ್ಲರಲ್ಲೂ ಇದೆ (ಈ ಲೇಖನ ಬರೆದು ಮುಗಿಸುವ ವೇಳೆಗೆ ಆ ಪುಟ್ಟ ಹುಡುಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ).
            ನಮಗೆಲ್ಲ ಗೊತ್ತಿರುವಂತೆ ಇಡೀ ಜಗತ್ತಿನ ಗಮನ ಸೆಳೆದ ಈ ಘಟನೆ ನಡೆದದ್ದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ. ತಾಲಿಬಾನಿಗಳ ಗುಂಡಿಗೆ ಬಲಿಯಾಗಿ ಇವತ್ತು ಜೀವನ್ಮರಣದ ನಡುವೆ ಹೋರಾಡುತ್ತಿರುವ ಆ ಪುಟ್ಟ ಬಾಲಕಿಯ ಹೆಸರು ಮಲಾಲಾ. ಪಾಕಿಸ್ತಾನದ ಸ್ವಾತ್ ಕಣಿವೆಯ ಮೇಲೆ ಉಗ್ರರು ಮಾಡುತ್ತಿರುವ ಹೀನ ಕೃತ್ಯವನ್ನು ಹೊರ ಪ್ರಪಂಚಕ್ಕೆ ತಿಳಿಸಿ ಕೊಟ್ಟಿದ್ದೆ ಮಲಾಲಾ ಮಾಡಿದ ಬಹುದೊಡ್ಡ ತಪ್ಪು. ಒಂದು ಮಾನವೀಯ ನೆಲೆಯಲ್ಲಿ ಚಿಂತಿಸಿ ಜನರ ಕಲ್ಯಾಣಕ್ಕಾಗಿ ಪ್ರಯತ್ನಿಸಿದ ಮಲಾಲಾಳ ಕಾರ್ಯ ತಾಲಿಬಾನಿಗಳಿಗೆ ಸರಿ ಕಾಣಲಿಲ್ಲ. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಅತೀ ಮತಾಂಧರಂತೆ ವರ್ತಿಸುವ ಆ ಉಗ್ರರಿಗೆ ದೇಶಾಭಿಮಾನಕ್ಕಿಂತ ಧರ್ಮಾಭಿಮಾನವೇ ಅಧಿಕ. ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಅಧ:ಪತನಕ್ಕಿಳಿದರೂ ಸರಿ ಧರ್ಮ ಮಾತ್ರ ಉಚ್ಚ ಸ್ಥಾನದಲ್ಲಿರಲಿ ಎನ್ನುವ ಕರ್ಮಠ ಮನಸ್ಸು ಅವರದು.
           ಅಂಥದ್ದೊಂದು ಧರ್ಮಾಂಧತೆಯ ಪರಿಣಾಮ ದೇಶದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನು ಜನರಿಗೆ ಮನಗಾಣಿಸಲು ಪ್ರಯತ್ನಿಸಿದ ಮಲಾಲಾಳ ವರ್ತನೆ ಉಗ್ರರಿಗೆ ಸರಿಕಾಣಿಸಲಿಲ್ಲ. ಅದಕ್ಕೆಂದೆ ಅವಳನ್ನು ಹತ್ಯೆಗೈಯಲು ಸಂಚು ರೂಪಿಸಿದರು. ಪುಟ್ಟ ಹುಡುಗಿ ಎನ್ನುವುದನ್ನೂ ಯೋಚಿಸದೆ ನಿರ್ದಯವಾಗಿ ಗುಂಡಿನ ಮಳೆಗರೆದರು.
          ಮಲಾಲಾ ಜನಿಸಿದ್ದು ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮುಸ್ಲಿಂ ಕುಟುಂಬದಲ್ಲಿ ಜುಲೈ 1997 ರಲ್ಲಿ. ಪಾಕಿಸ್ತಾನದ ಕವಿಯಿತ್ರಿ ಮತ್ತು ವೀರ ವನಿತೆ ಮಲಾಲಾಳ ಹೆಸರನ್ನೇ ಆಕೆಗಿಡಲಾಯಿತು. ಮಲಾಲಾಳ ತಂದೆ ಜಿಯಾವುದ್ದೀನ್ ಯೂಸುಪ್ ಝೈ ಸ್ವಾತ್ ಕಣಿವೆಯಲ್ಲಿ ಕೆಲವು ಶಾಲೆಗಳನ್ನು ನಡೆಸುತ್ತಿದ್ದರು. ಕವಿ, ವಿಚಾರವಾದಿ, ಶಿಕ್ಷಣ ಪ್ರೇಮಿಯಾಗಿದ್ದ ಜಿಯಾವುದ್ದೀನ್ ವ್ಯಕ್ತಿತ್ವ ಮಗಳನ್ನು ತುಂಬ ಪ್ರಭಾವಿಸಿತ್ತು. ಸುಶಿಕ್ಷಿತ ತಂದೆ ತಾಯಿ, ನಲ್ಮೆಯ ತಮ್ಮಂದಿರಿಂದ ಕೂಡಿದ ಅತ್ಯಂತ ಸುಖಿ ಕುಟುಂಬದಲ್ಲಿ ಬೆಳೆದ ಹುಡುಗಿ ಅವಳು. ಆ ಕುಟುಂಬದಲ್ಲಿ ಪ್ರೀತಿಯ ಒರತೆಗೆ ಕೊರತೆಯಿರಲಿಲ್ಲ. ಜೊತೆಗೆ ಆತ್ಮಾಭಿಮಾನ ಮತ್ತು ರಾಷ್ಟ್ರ ಭಕ್ತಿ ಅವರುಗಳ ಕಣ ಕಣದಲ್ಲೂ ತುಂಬಿ ಕೊಂಡಿದ್ದವು. ಗೆಳತಿಯರೊಂದಿಗೆ ಆಟವಾಡಿಕೊಂಡಿರಬೇಕಾದ ಆ  ವಯಸ್ಸಿನಲ್ಲೇ ಮಲಾಲಾ ತನ್ನ ತಂದೆಯೊಡನೆ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಯ ಕುರಿತು ಚರ್ಚಿಸುತ್ತಿದ್ದಳು.
             ಅಂಥದ್ದೊಂದು ಕೌಟಂಬಿಕ ಹಿನ್ನೆಲೆಯೇ ಮಲಾಲಾಳಿಗೆ ಬರೆಯಲು ಪ್ರೇರಣೆ ನೀಡಿತು. ಅದು ಆರಂಭಗೊಂಡಿದ್ದು 2009 ರ ಪ್ರಾರಂಭದಲ್ಲಿ. ಆ ಸಂದರ್ಭ ಮೌಲಾನಾ ಫಜ್ಲುಲ್ಲಾ ನೇತೃತ್ವದ ತಾಲಿಬಾನಿಗಳ ತಂಡ ಇಡೀ ಸ್ವಾತ್ ಕಣಿವೆಯ ಮೇಲೆ ತನ್ನ ನಿಯಂತ್ರಣ ಹೊಂದಿತ್ತು. ದಿನದಿಂದ ದಿನಕ್ಕೆ ಅಲ್ಲಿ ಉಗ್ರರ ಉಪಟಳ ಹೆಚ್ಚುತ್ತಿತ್ತು. ತಾಲಿಬಾನಿಗಳು ಆ ಇಡೀ ಪ್ರದೇಶದಲ್ಲಿ ಮನೋರಂಜನಾ ಕಾರ್ಯಕ್ರಮಗಳು ಬಿತ್ತರವಾಗದಂತೆ ತಡೆ ಹಿಡಿದಿದ್ದರು. ದೂರದರ್ಶನ ತನ್ನ ಪ್ರಸರಣಾ ಕಾರ್ಯಕ್ರಮವನ್ನು ನಿಲ್ಲಿಸಿತ್ತು. ಸಿನಿಮಾ ಮಂದಿರಗಳು ಬಾಗಿಲು ಹಾಕಿದ್ದವು. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲೇ ಬಿಬಿಸಿಯ ಉರ್ದು ಚಾನೆಲ್ ಎಚ್ಚೆತ್ತುಕೊಂಡಿತು. ಉಗ್ರರ ಅಟ್ಟಹಾಸ ಸಹಿಸಲಸಾಧ್ಯವಾದಾಗ ಅವರ ವಿರುದ್ಧ ಸಾರ್ವಜನಿಕರನ್ನು ಒಂದುಗೂಡಿಸಲು ಯೋಜನೆಯೊಂದನ್ನು ರೂಪಿಸಿತು. ಪಾಕಿಸ್ತಾನದಲ್ಲಿರುವ ತನ್ನ ವರದಿಗಾರ ಅಬ್ದುಲ್  ಹೈ  ಕಕ್ಕರ್ ನನ್ನು ಈ ಕೆಲಸಕ್ಕಾಗಿ ನಿಯೋಜಿಸಿತು. ಕಕ್ಕರ್ ನೇರವಾಗಿ ಹೋಗಿ ಭೇಟಿ ಮಾಡಿದ್ದು ಸ್ವಾತ್ ಕಣಿವೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಒಂದಿಷ್ಟು ಹೆಸರು ಮಾಡಿದ್ದ ಜಿಯಾವುದ್ದೀನ್ ಅವರನ್ನು. ಅಂಥದ್ದೊಂದು ಅಗತ್ಯವನ್ನು ಅವರಿಗೆ ಮನಗಾಣಿಸಿಕೊಟ್ಟ ನಂತರವೇ ಜಿಯಾವುದ್ದೀನ್ ತಮ್ಮ ಮಗಳು ಮಲಾಲಾಳನ್ನು ಬರೆಯುವಂತೆ ಹೇಳಿದ್ದು. ಸ್ವಾತ್ ಕಣಿವೆಯಲ್ಲಿನ ಒಬ್ಬ ಪುಟ್ಟ ಹುಡುಗಿಗೆ ಬರೆಯಲು ಒಪ್ಪಿಸಿದ ಕೆಲಸವನ್ನು ಬಿಬಿಸಿ ಉರ್ದು ಚಾನೆಲ್ ಮುಖ್ಯಸ್ಥ ಮಿರ್ಜಾ ವಾಹಿದ್ ಹೀಗೆ ಸಮರ್ಥಿಸಿಕೊಳ್ಳುತ್ತಾರೆ 'ಸ್ವಾತ್ ಕಣಿವೆಯಲ್ಲಿನ ಹಿಂಸೆ ಮತ್ತು ರಾಜಕೀಯವನ್ನು ಬಿಬಿಸಿ ಉರ್ದು ಚಾನೆಲ್ ಈಗಾಗಲೇ ಸಾಕಷ್ಟು ವರದಿ ಮಾಡಿದೆ. ಆದರೆ ತಾಲಿಬಾನಿಗಳ ಹಿಡಿತದಲ್ಲಿ ಸಾಮಾನ್ಯ ಜನರು ಹೇಗೆ ಬದುಕುತ್ತಿರುವರು ಎನ್ನುವ ವಿಷಯವಾಗಿ ನಾವು ಇನ್ನಷ್ಟು ವರದಿ ಮಾಡಬೇಕಿದೆ. ಅದು ಸಾಧ್ಯವಾಗುವುದು ಸ್ವಾತ್ ಕಣಿವೆಯಲ್ಲೇ ವಾಸಿಸುತ್ತಿರುವ ಸಾರ್ವಜನಿಕರಿಂದ ಮಾತ್ರ ಸಾಧ್ಯ. ಅದಕ್ಕೆಂದೇ ಈ ಒಂದು ಕೆಲಸವನ್ನು ನಾವು ಮಲಾಲಾಳಿಗೆ ಒಪ್ಪಿಸಿದ್ದು'. ಇದರಿಂದ ಮಲಾಲಾಳ ಜೀವಕ್ಕೆ ಆಪತ್ತಿದೆ ಎನ್ನುವ ಆತಂಕ ಬಿಬಿಸಿಗೆ ಇದ್ದುದ್ದರಿಂದಲೇ ಗುಲ್ ಮಕಾಯ್ ಎನ್ನುವ ಗುಪ್ತನಾಮದಿಂದ ಮಲಾಲಾಳ ಲೇಖನಗಳು ಪ್ರಕಟವಾಗತೊಡಗಿದವು.
           ಬಿಬಿಸಿ ಉರ್ದು ಚಾನೆಲ್ ನಲ್ಲಿ ಮಲಾಲಾಳ ಬರವಣಿಗೆಗೆ ವ್ಯಾಪಕ ಪ್ರಚಾರ ದೊರೆಯತೊಡಗಿತು. ತಾಲಿಬಾನ್ ಉಗ್ರರ ಅಟ್ಟಹಾಸ ಮತ್ತು ಸಾರ್ವಜನಿಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಲೇಖನಗಳ ಮೂಲಕ ಒಂದೊಂದಾಗಿ ಬಿಚ್ಚಿಡತೊಡಗಿದಳು. ದೇಶದ ಮೂಲೆ ಮೂಲೆಗಳಿಂದ ಉತ್ತಮ ಪ್ರತಿಕ್ರಿಯೆ ಬರತೊಡಗಿತು. ಅನೇಕರು ಮಲಾಲಾಳ ಲೇಖನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ನಡುವೆ ಮಲಾಲಾ ಮತ್ತು ಅವಳ ತಂದೆ ನ್ಯೂಯಾರ್ಕ್ ಟೈಮ್ಸ್ ವರದಿಗಾರ ಎಲ್ಲಿಕ್ ನನ್ನು ಸಂಪರ್ಕಿಸಿ ಸ್ವಾತ್ ಕಣಿವೆ ಕುರಿತು ಡಾಕ್ಯುಮೆಂಟರಿ ಸಿದ್ಧಪಡಿಸುವಂತೆ ಕೇಳಿಕೊಂಡರು. ಹೀಗೆ ಅವರುಗಳ ಪ್ರಯತ್ನದಿಂದ ತಯ್ಯಾರಾದ ಡಾಕ್ಯುಮೆಂಟರಿ ಅಲ್ಲಿನ ಜನಜೀವನವನ್ನು ವಿವರವಾಗಿ ಸೆರೆಹಿಡಿದು ಪ್ರದರ್ಶಿಸಿತು. 2009ರ ಕೊನೆಯಲ್ಲಿ ಯುನಿಸೆಫ್ ನ ಸಹಕಾರದೊಂದಿಗೆ ಕೆ.ಕೆ.ಫೌಂಡೆಶನ್ ಅಣಕು ಶಾಸನ ಸಭೆಯನ್ನು ನಿರ್ಮಿಸಿ ಸ್ವಾತ್ ಕಣಿವೆಯಲ್ಲಿನ ಮಕ್ಕಳನ್ನೆಲ್ಲ ಚರ್ಚೆಗೆ ಆಹ್ವಾನಿಸಿತು. ಶಾಸನ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಲಾಲಾ ಸ್ತ್ರೀ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳನ್ನು ಕುರಿತು ವಿವರವಾಗಿ ಮಾತನಾಡಿದಳು. ತಾನು ರಾಜಕೀಯಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿ ಬೆನಜಿರ್ ಭುಟ್ಟೊ ತನಗೆ ಸ್ಫೂರ್ತಿ ಎಂದು ಹೇಳಿದಳು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರ ಮೂಲಕ ತಾಲಿಬಾನ್ ವಿರುದ್ಧದ ತನ್ನ  ಹೋರಾಟವನ್ನು ಮತ್ತಷ್ಟು ತೀವೃಗೊಳಿಸಿದಳು. ನಂತರದ ದಿನಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ವಾರ್ ಆಯಿಂಡ್ ಪೀಸ್ ಪ್ರಾರಂಭಿಸಿದ ಮುಕ್ತ ಮನಸ್ಸು ಯೋಜನೆಯಲ್ಲಿ ಮಲಾಲಾ ಪಾಲ್ಗೊಳ್ಳಲಾರಂಭಿಸಿದ ಪರಿಣಾಮ ಪಾಕಿಸ್ತಾನದ 42 ಶಾಲೆಗಳಲ್ಲಿ ಪತ್ರಿಕೋದ್ಯಮದ ತರಬೇತಿ ಪ್ರಾರಂಭವಾಯಿತು. ಮಲಾಲಾಳ ಬರವಣಿಗೆಯಿಂದ ಸ್ಫೂರ್ತಿಗೊಂಡ ಅನೇಕ ವಿದ್ಯಾರ್ಥಿನಿಯರು ಬರವಣಿಗೆಯ ತರಬೇತಿಯನ್ನು ಪಡೆಯಲು ಬಯಸಿದರು. 2012 ರ ಎಫ್ರಿಲ್ ನಲ್ಲಿ ಮಲಾಲಾ 'ಮಲಾಲಾ ಎಜ್ಯುಕೇಶನ್ ಫೌಂಡೆಶನ್' ಸ್ಥಾಪಿಸಿ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ನೆರವು ನೀಡಲಾರಂಭಿಸಿದಳು. ಮಲಾಲಾ ತನ್ನ ಹೋರಾಟ ಮತ್ತು ಸಾಮಾಜಿಕ ಕಳಕಳಿಯಿಂದಾಗಿ ಬಹುಬೇಗ ಜನಪ್ರಿಯಳಾದಳು. ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಮಲಾಲಾಳ ಹೆಸರನ್ನು ಸೂಚಿಸಲಾಯಿತು. ಇದಾದ ಎರಡು ತಿಂಗಳುಗಳ ನಂತರ ಪಾಕಿಸ್ತಾನ ರಾಷ್ಟ್ರದ ಪ್ರಥಮ ರಾಷ್ಟ್ರೀಯ ಯುವ ಶಾಂತಿ ಪ್ರಶಸ್ತಿಗೆ ಭಾಜನಳಾದಳು.

ಮಲಾಲಾ ಬರೆಯುತ್ತಾಳೆ 
    ಮಲಾಲಾಳ ಬರವಣಿಗೆಯ ಒಂದಿಷ್ಟು ಸ್ಯಾಂಪಲ್ ಗಳು
# ನನ್ನ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ತಾಲಿಬಾನಿಗಳಿಗೆ ಅದೆಷ್ಟು ಧೈರ್ಯ.
# ನಿನ್ನೆ ನಾನೊಂದು ಭಯಾನಕ ಕನಸು ಕಂಡೆ. ಸ್ವಾತ್ ಕಣಿವೆಯಲ್ಲಿ ಮಿಲ್ಟ್ರಿ ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ನಾನು ಈ ರೀತಿಯ ಕನಸು ಕಾಣಲಾರಂಭಿಸಿದ್ದೇನೆ. ಆ ಕನಸಿನಲ್ಲಿ ನಾನು ಶಾಲೆಗೆ ಹೋಗಲು ಹೆದರುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳು ಹುಡುಗಿಯರು ಶಾಲೆಗೆ ಹೋಗದಿರುವಂತೆ ರಾಜಾಜ್ಞೆ ವಿಧಿಸಿರುವರು.
# 27 ವಿದ್ಯಾರ್ಥಿನಿಯರಲ್ಲಿ ಕೇವಲ 11 ಹುಡುಗಿಯರು ಮಾತ್ರ ಶಾಲೆಗೆ ಹಾಜರಾಗಿದ್ದರು. ಉಗ್ರರ ಅಟ್ಟಹಾಸಕ್ಕೆ  ನನ್ನ ಮೂವರು ಗೆಳತಿಯರು ಪೇಶಾವರ, ಲಾಹೋರ ಮತ್ತು ರಾವಲ್ಪಿಂಡಿಗೆ ತಮ್ಮ ಪೋಷಕರೊಂದಿಗೆ ವಲಸೆ ಹೋಗಿರುವರು.
# ನಾನು ನನ್ನ ಇಷ್ಟದ ಪಿಂಕ್ ಬಣ್ಣದ ಉಡುಪು ಧರಿಸಲು ನಿರ್ಧರಿಸಿದೆ. ಉಳಿದ ವಿದ್ಯಾರ್ಥಿನಿಯರೂ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಬಂದಿದ್ದರು.
# ಇನ್ನು ಐದು ಶಾಲೆಗಳನ್ನು ನಾಶ ಪಡಿಸಿದರು. ಅವುಗಳಲ್ಲಿ ಒಂದು ಶಾಲೆ ನಮ್ಮ ಮನೆಯ ಹತ್ತಿರವೇ ಇದೆ. ನನಗೆ ಆಶ್ಚರ್ಯವಾಯಿತು ಏಕೆಂದರೆ ಈಗಾಗಲೇ ಶಾಲೆಗಳು ಮುಚ್ಚಲ್ಪಟ್ಟಿವೆ. ಅವುಗಳನ್ನು ನಾಶಪಡಿಸುವ ಅಗತ್ಯವಾದರೂ ಏಕೆ?
# ರಜೆಯ ನಂತರ ನಮಗೆ ವಾರ್ಷಿಕ ಪರೀಕ್ಷೆಗಳಿವೆ. ಆದರೆ ಇದು ಸಾಧ್ಯವಾಗುವುದು ತಾಲಿಬಾನಿಗಳು ಹುಡುಗಿಯರನ್ನು ಶಾಲೆಗೆ ಹೋಗಲು ಅನುಮತಿ ನೀಡಿದರೆ ಮಾತ್ರ.
# ಪಾಕಿಸ್ತಾನದ ಸೇನೆ ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
# ಇಸ್ಲಾಮಾಬಾದಿಗೆ ಇದು ನನ್ನ ಮೊದಲ ಭೇಟಿ. ಸುಂದರ ಕಟ್ಟಡಗಳು ಮತ್ತು ವಿಶಾಲ ರಸ್ತೆಗಳಿಂದಾಗಿ ನಗರ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ನನ್ನ ಸ್ವಾತ್ ಕಣಿವೆಗೆ ಹೋಲಿಸಿದಾಗ ಇಲ್ಲಿ ನಿಸರ್ಗ ಸೌಂದರ್ಯದ ಕೊರತೆ ಇದೆ.
# ಜನರು ಸರ್ಕಾರಕ್ಕಿಂತ ಸೇನಾಪಡೆಯ ಮಾತುಗಳನ್ನು ಹೆಚ್ಚು ನಂಬುತ್ತಿರುವರು.
# ಓ ದೇವರೆ ಸ್ವಾತ್ ಕಣಿವೆಗೆ ಶಾಂತಿಯನ್ನು ತಂದುಕೊಡು. ಅದು ಸಾಧ್ಯವಾಗದಿದ್ದರೆ ಅಮೇರಿಕ ಇಲ್ಲವೇ ಚೀನಾ ದೇಶವನ್ನಾದರೂ ಇಲ್ಲಿಗೆ ಕಳಿಸಿಕೊಡು.
# ನನಗೆ ನಿಜವಾಗಿಯೂ ಬೇಸರವಾಗುತ್ತಿದೆ. ಏಕೆಂದರೆ ಇಲ್ಲಿ ಓದಲು ಪುಸ್ತಕಗಳೇ ಇಲ್ಲ.
# ನನ್ನದೊಂದು ಕನಸಿದೆ. ಈ ದೇಶವನ್ನು ಉಳಿಸಲು ನಾನು ರಾಜಕಾರಣಿಯಾಗಲೇ ಬೇಕಿದೆ. ನನ್ನ ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ರಾಜಕಾರಣಿಯಾಗಿ ನಾನು ಆ ಎಲ್ಲ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕಿದೆ.
# ಒಂದು ವೇಳೆ ಅಧ್ಯಕ್ಷ ಜರ್ದಾರಿ ಮಗಳು ಸ್ವಾತ್ ಕಣಿವೆಯಲ್ಲಿ ಓದುತ್ತಿದ್ದರೆ ಇಲ್ಲಿನ ಶಾಲೆಗಳು ಮುಚ್ಚುತ್ತಿರಲಿಲ್ಲ.
# ತಾಲಿಬಾನಿಗಳು ನನ್ನನ್ನು ಕೊಲ್ಲಲು  ಬಂದರೆ ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ನೀವು ಮಾಡಲು ಹೊರಟಿರುವುದು ತಪ್ಪು ಎಂದು. ಏಕೆಂದರೆ ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು.

          ಹೇಳಿಕೇಳಿ ಪಾಕಿಸ್ತಾನ ಭಯೋತ್ಪಾದಕರ ಬೀಡು. ವಿಶ್ವದ ಪರಮಪಾತಕಿ ಬಿನ್ ಲಾಡೆನ್ ಗೆ ಸೇನಾ ತರಬೇತಿ ಶಿಬಿರದ ಅನತಿ ದೂರದಲ್ಲೇ ರಾಜಾಶ್ರಯ ನೀಡಿದ ನೆಲವದು. ಇವತ್ತಿಗೂ ಭಾರತದ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾಕುತ್ತಿದೆ. ಅಂಥ ನೆಲದ ಉಗ್ರರಿಗೆ ತಮ್ಮದೇ ನೆಲದ ಕುಡಿಯೊಂದು ಹೀಗೆ ತಿರುಗಿ ಬೀಳುವುದನ್ನು ಸಹಿಸಲಾದರೂ ಹೇಗೆ ಸಾಧ್ಯ. ಅದಕ್ಕೆಂದೇ ಮಲಾಲಾಳ ಹತ್ಯೆಗೆ ಸಂಚು ರೂಪಿಸುತ್ತಾರೆ. ಅಕ್ಟೋಬರ್ 9, 2012 ರಂದು ಪರೀಕ್ಷೆ ಬರೆದು ಶಾಲಾವಾಹನದಲ್ಲಿ ಮನೆಗೆ ತೆರಳುತ್ತಿದ್ದ ಮಲಾಲಾಳನ್ನು ಮಾರ್ಗ ಮಧ್ಯದಲ್ಲೇ ಅಡ್ಡಗಟ್ಟಿದ ಉಗ್ರರು ಅವಳ ಮೇಲೆ ಗುಂಡಿನ ಮಳೆಗರೆಯುತ್ತಾರೆ. ಉಗ್ರರ ಗುಂಡೇಟಿನಿಂದ ಮಲಾಲಾಳ ದೇಹ ನೆಲಕ್ಕೊರಗುತ್ತದೆ. ಆದರೆ ಆಕೆಯದು ಗಟ್ಟಿ ಜೀವ ನೋಡಿ. ಅವಳ ಹೆಸರಿನಲ್ಲೇ ಶೂರತ್ವ ಇರುವುದರಿಂದ ಗುಂಡೇಟಿನ ನಡುವೆಯೂ ಉಸಿರಾಡುತ್ತಾಳೆ. ತಕ್ಷಣವೇ ಅವಳನ್ನು ವಿಮಾನದ ಮೂಲಕ ಪೇಶಾವರ್ ನ ಮಿಲ್ಟ್ರಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಮೂರು ಗಂಟೆಗಳ ಸತತ ಚಿಕಿತ್ಸೆಯ ನಂತರ ಕೊನೆಗೂ ಮಲಾಲಾಳ ದೇಹದಲ್ಲಿನ ಗುಂಡುಗಳನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗುತ್ತಾರೆ. ಅಕ್ಟೋಬರ್ 11 ರಂದು  ಹೆಚ್ಚಿನ ಚಿಕಿತ್ಸೆಗಾಗಿ ರಾವಲ್ಪಿಂಡಿಯ ಆರ್ಮ್ ಫೋರ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ವಿದೇಶಿ ಆಸ್ಪತ್ರೆಗಳಿಂದ ಚಿಕಿತ್ಸೆಗೆ ನೆರವು ನೀಡುವ ಭರವಸೆಯ ಮಾತುಗಳು ಕೇಳಿ ಬಂದಾಗ ಕೊನೆಗೆ ಅಕ್ಟೋಬರ್ 15 ರಂದು ಮಲಾಲಾ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುತ್ತಾಳೆ. ಸಧ್ಯ ಬರ್ಮಿಂಗ್ ಹ್ಯಾಮ್ ನ ಕ್ವಿನ್ ಎಲಿಜಿಬತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲಾ ಚೇತರಿಸಿಕೊಳ್ಳುತ್ತಿದ್ದಾಳೆ. ವೈದ್ಯರು ಪ್ರತಿಶತ 70 ರಷ್ಟು ಬದುಕುಳಿಯುವ ಸಾಧ್ಯತೆ ಇದೆ ಎಂದು ಭರವಸೆ ನೀಡಿರುವರು. ಇಡೀ ಜಗತ್ತು ಮಲಾಲಾಳಿಗಾಗಿ ಪ್ರಾರ್ಥಿಸುತ್ತಿದೆ.
           ಪಾಕಿಸ್ತಾನದ ಸರ್ಕಾರ ಮಲಾಲಾಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಆಕೆಯ ತಂದೆ ಜಿಯಾವುದ್ದೀನ್ ಗೆ ಲಂಡನ್ನಿನ ರಾಯಭಾರಿ ಕಚೇರಿಯಲ್ಲಿ ಕೆಲಸ ಕೊಟ್ಟು ಇಡೀ ಕುಟುಂಬವನ್ನು ಸ್ಥಳಾಂತರಿಸಿದೆ. ಮುಂದಿನ ದಿನಗಳಲ್ಲಿ ತಾಲಿಬಾನಿಗಳಿಂದ ಮಲಾಲಾಳ ಕುಟುಂಬಕ್ಕೆ ತೊಂದರೆ ಆಗದಿರಲಿ ಎನ್ನುವ ಮುನ್ನೆಚ್ಚರಿಕೆ ಇದು. ಈ ನಡುವೆ ತಾಲಿಬಾನ್ ಉಗ್ರರ ಪಡೆ ಮಲಾಲಾಳ ಮೇಲಾದ ಹತ್ಯಾ ಯತ್ನದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮಲಾಲಾ ಧರ್ಮ ನಿಂದಕ ಮತ್ತು ಅಶ್ಲೀಲತೆಯ ಸಂಕೇತ ಎಂದು ಜರೆದಿದೆ. ಆಕೆ ಬದುಕುಳಿದರೂ ಅವಳನ್ನು ಕೊಲ್ಲಲು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಘೋಷಿಸಿದೆ.
          ಮಲಾಲಾ ಬದುಕಿ ಬರಲಿ ಇದು ಎಲ್ಲರ ಹಾರೈಕೆ. ಮಲಾಲಾಳ ಸ್ನೇಹಿತೆ ಹೇಳಿದಂತೆ "ಸ್ವಾತ್ ಕಣಿವೆಯಲ್ಲಿನ ಪ್ರತಿಯೊಬ್ಬ ಹೆಣ್ಣುಮಗು ಮಲಾಲಾ. ನಾವು ಶಿಕ್ಷಿತರಾಗುತ್ತೇವೆ. ನಾವು ಜಯಶಾಲಿಗಳಾಗುತ್ತೇವೆ. ತಾಲಿಬಾನಿಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ". ಅಲ್ಲಿ ಮಲಾಲಾಳ ಧ್ವನಿ ಪ್ರತಿಧ್ವನಿಸುತ್ತಿದೆ. ಕ್ರಮೇಣ ಆ ಧ್ವನಿ ಇಡೀ ಪಾಕಿಸ್ತಾನವನ್ನು ವ್ಯಾಪಿಸಲಿದೆ.
           ನವೆಂಬರ್ 14 ಮಕ್ಕಳ ದಿನ (ಈಗಾಗಲೇ ವಿಶ್ವಸಂಸ್ಥೆ ನವೆಂಬರ್ 10 ಮಲಾಲಾ ದಿನ ಎಂದು ಘೋಷಿಸಿದೆ). ಅದಕ್ಕಾಗಿ ದೂರದ ಇಂಗ್ಲೆಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಆ ಹೆಣ್ಣು ಮಗು ನೆನಪಾಯಿತು. ಇಂಟರ್ ನೆಟ್ ನಲ್ಲಿ ಹುಡುಕಿದಾಗ ಒಂದಿಷ್ಟು ಮಾಹಿತಿ ದೊರೆಯಿತು. ಹೀಗೆ ದೊರೆತ ಮಾಹಿತಿಗೆ ಒಂದಿಷ್ಟು ರೆಕ್ಕೆ ಪುಕ್ಕ ಜೋಡಿಸಿದಾಗ ಅದೊಂದು ಲೇಖನವಾಗಿ ಈಗ ನಿಮ್ಮೆದುರು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, November 8, 2012

ಅಭಿನಂದನೆಗಳು ಸರ್ ನಿಮಗೆ

     

         ಶಿಕ್ಷಣ ತಜ್ಞರು ಮತ್ತು  ಬಿ.ವಿ.ವಿ.ಸಂಘದ ಆಡಳಿತಾಧಿಕಾರಿಗಳಾದ  ಪ್ರೊ.ಎನ್.ಜಿ.ಕರೂರ ಅವರಿಗೆ 2012ನೆ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತಸದ ಸಂಗತಿ. ಸುಮಾರು ಐದು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಮನಸ್ಸು ಅವರದು. ಎಲ್ಲರೂ ಹೇಳುವಂತೆ ಈ ಪ್ರಶಸ್ತಿ ಶಿಕ್ಷಣದ ಕುರಿತು ಅಪಾರ ಕಾಳಜಿಯುಳ್ಳ  ಅವರಿಗೆ ಎಂದೋ ದೊರೆಯಬೇಕಿತ್ತು. ತಡವಾಗಿಯಾದರೂ ಪ್ರಶಸ್ತಿ ದೊರೆಯಿತಲ್ಲ ಎನ್ನುವ ಸಂತಸ ಮತ್ತು ಸಮಾಧಾನ ಅವರನ್ನು ಬಲ್ಲವರಿಗೆ.
         ಪ್ರೊ.ಎನ್.ಜಿ.ಕರೂರ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದವರು. ಅವರು ಚಡಚಣದ ಗೆಳೆಯರ ಗುಂಪಿನ ಪ್ರಭಾವಳಿಯಲ್ಲಿ ಬೆಳೆದವರು. ಮಧುರ ಚೆನ್ನರ ಮತ್ತು ಸಿಂಪಿ ಲಿಂಗಣ್ಣನವರ ವ್ಯಕ್ತಿತ್ವದ ಗಾಢ ಪ್ರಭಾವಳಿ ಇವರ ವೃತ್ತಿ ಮತ್ತು ವೈಯಕ್ತಿಕ ಬದುಕಿನೊಂದಿಗೆ ಬೆಸೆದು ಕೊಂಡಿದೆ. ಗೆಳೆಯರ ಗುಂಪಿನ ಎರಡನೆ ತೆಲೆಮಾರಿನ ಶ್ರೀ ಗುರುಲಿಂಗ ಕಾಪಸೆ ಅವರೊಂದಿಗೆ ಇವರದು ಅನ್ಯೋನ್ಯ ಸ್ನೇಹ ಸಂಬಂಧ. ಒಂದು ಸಾಹಿತ್ಯಕ ವಾತಾವರಣದಲ್ಲಿ ತಮ್ಮ   ವ್ಯಕ್ತಿತ್ವವನ್ನು ರೂಪಿಸಿಕೊಂಡ ಶ್ರೀಯುತರದು ಅತ್ಯಂತ ಸಂವೇದನಾಶೀಲ ಮನೋಭಾವ. 
        ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾಗಿ ಪ್ರೊ.ಎನ್.ಜಿ.ಕರೂರ ಅವರದು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಐದು ದಶಕಗಳ ಅನುಭವ. ಈ ಐದು ದಶಕಗಳ ಅವಧಿಯಲ್ಲಿ ಅವರಿಂದ ವಿದ್ಯಾರ್ಜನೆಗೊಂಡ ವಿದ್ಯಾರ್ಥಿಗಳ ಸಂಖ್ಯೆ ಸಾವಿರಾರು. ಜೊತೆಗೆ ಅವರ ಅನುಭವದ ಮೂಸೆಯಲ್ಲಿ ರೂಪಿತಗೊಂಡ ಶಿಕ್ಷಣ ಸಂಸ್ಥೆಗಳು ಹಲವಾರು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅವರ ಶಿಕ್ಷಣದ ಕುರಿತಾದ ಉಪನ್ಯಾಸಗಳು ಅಸಂಖ್ಯಾತ ಮತ್ತು ಬರೆದ ಪುಸ್ತಕಗಳು ಅನೇಕ.
       ಶಿಕ್ಷಣದ ಔನತ್ಯ ಮತ್ತು ಅದರ ಪಾವಿತ್ರ್ಯತೆಯ ಕಾಯ್ದುಕೊಳ್ಳುವಿಕೆಗಾಗಿ ಅವರದು ನಿರಂತರ ಹುಡುಕಾಟ. ಅದು ಪ್ರಾಥಮಿಕ ಶಿಕ್ಷಣವಾಗಿರಲಿ, ಮಾಧ್ಯಮಿಕ ಶಿಕ್ಷಣ ಇರಲಿ ಉನ್ನತ ಹಾಗೂ ವೃತ್ತಿಪರ ಶಿಕ್ಷಣವಿರಲಿ ಒಟ್ಟಾರೆ ವಿದ್ಯಾರ್ಥಿ ಸಮೂಹಕ್ಕೆ ಗುಣಾತ್ಮಕ ಶಿಕ್ಷಣ ದೊರೆಯಬೇಕೆನ್ನುವುದು ಅವರ ಕಳಕಳಿ. ಗುಣಾತ್ಮಕ ಶಿಕ್ಷಣಕ್ಕೆ ಏನು ಬೇಕೆನ್ನುವುದನ್ನೂ ಅವರು ಪ್ರತಿಪಾದಿಸುತ್ತಾರೆ. ಪರಿಣಿತ ಮತ್ತು ಅನುಭವಿಕ ಬೋಧಕ ವೃಂದ, ಸುಸಜ್ಜಿತ ಪ್ರಯೋಗಾಲಯಗಳು, ಅತ್ಯುತ್ತಮ ಸೌಕರ್ಯದ ಗ್ರಂಥಾಲಯ, ವಿಶಾಲ ಆಟದ ಬಯಲು, ಆಧುನಿಕ ಬೋಧನಾ ಸಲಕರಣೆಗಳಿಂದ ಕೂಡಿದ ಪಾಠದ ಕೊಠಡಿಗಳು ಶಿಕ್ಷಣದ ಗುಣ ಮಟ್ಟದ ಹೆಚ್ಚಳಕ್ಕೆ ಅಗತ್ಯವಾದ ಅವಶ್ಯಕತೆಗಳಿವು ಎನ್ನುವುದು ಅವರ ಕಿವಿಮಾತು. ವಿಶೇಷವಾಗಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಅವರಿಗೆ ಅಪರಿಮಿತವಾದ ಕಾಳಜಿ. ಪ್ರಾಥಮಿಕ ಶಿಕ್ಷಣವೇ ಶೈಕ್ಷಣಿಕ ಬದುಕಿನ ಅಡಿಪಾಯ ಎನ್ನುವುದನ್ನು ಬಲವಾಗಿ ಸಮರ್ಥಿಸುವ ಶ್ರೀಯುತರದು ಉನ್ನತ ಶಿಕ್ಷಣದ ಸಂದರ್ಭದಲ್ಲಿ ದೊರೆಯುವ ಎಲ್ಲ ಪ್ರಕಾರದ ಶೈಕ್ಷಣಿಕ ಸೌಲಭ್ಯಗಳು ಮಗುವಿಗೆ ಪ್ರಾಥಮಿಕ ಹಂತದಲ್ಲೇ ದೊರೆಯಬೇಕೆನ್ನುವ ಅಭಿಪ್ರಾಯ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ನೋಡಿ ಖುಷಿ ಪಡುವ ಅವರದು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನೂ ತೀರ ವೈಯಕ್ತಿಕವಾಗಿ ತೆಗೆದುಕೊಂಡು ನೊಂದುಕೊಳ್ಳುವ ಸಂವೇದನಾಶೀಲ ಮನಸ್ಸು. 
ಶಿಕ್ಷಣದ ಕುರಿತಾದ ಅವರ ಕಾಳಜಿಗಳು:-
1. ಶಿಕ್ಷಕ ಅಧ್ಯಯನ ಶೀಲ ಪ್ರವೃತ್ತಿಯನ್ನು ಸದಾ ಜಾಗೃತವಾಗಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪ್ರೀತಿಸುತ್ತ ಎಲ್ಲಕ್ಕೂ ಮಿಗಿಲಾಗಿ ಶೀಲ ಸಂಪನ್ನರಾಗಿ ಬಾಳಬೇಕು.
2. ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ ನೀಡುವುದು, ಅಭಿರುಚಿಯನ್ನು ತಿದ್ದುವುದು ಶಿಕ್ಷಣದ ಉದ್ದೇಶ. ಅದು ಫಲಿಸದಿದ್ದರೆ ಎಲ್ಲವೂ ವ್ಯರ್ಥ. 
3. ಸರಕಾರ ಕೊಡುವ ಪ್ರಶಸ್ತಿಗಿಂತಲೂ ಶಿಕ್ಷಕರಿಗೆ ವಿದ್ಯಾರ್ಥಿಗಳು ಕೊಡುವ ಪ್ರಶಸ್ತಿ ಶ್ರೇಷ್ಠ. ಬೋಧನಾ ಕೌಶಲ್ಯದ ಜೊತೆ ವಿದ್ಯಾರ್ಥಿಗಳನ್ನು ಪ್ರೀತಿಸುವ ಕಕ್ಕುಲಾತಿ ಮುಖ್ಯ. 
4. ರಾಜ್ಯದಲ್ಲಿ ಈ ವರ್ಷ ನೂರಿನ್ನೂರು ಬಿ.ಎಡ್ ಕಾಲೇಜುಗಳು ಅಸ್ತಿತ್ವಕ್ಕೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಯದ್ವಾ ತದ್ವಾ ಅನುಮತಿ ನೀಡಿ ಶಿಕ್ಷಣ ಕ್ಷೇತ್ರ ಹದಗೆಡಲಿಕ್ಕೆ ಇದೊಂದು ಹೆದ್ದಾರಿ.
5. ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆ, ಕಾಲೇಜುಗಳಲ್ಲಿ. ಅಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶಕರಾದ ಶಿಕ್ಷಕರೇ ಶ್ರೇಷ್ಠ ನಾಗರಿಕರ ನಿರ್ಮಾಪಕರು.

        ಖ್ಯಾತ ವಿಮರ್ಶಕರು ಮತ್ತು ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆ ಅವರು ಪ್ರೊ.ಎನ್.ಜಿ.ಕರೂರ ಅವರನ್ನು ಅತಿ ಹತ್ತಿರದಿಂದ ಬಲ್ಲವರು. ಡಾ.ಕಾಪಸೆ ಅವರ ಮಾತುಗಳಲ್ಲಿ ಹೇಳುವುದಾರೆ ಶಿಕ್ಷಣ, ಸಾಹಿತ್ಯ, ಆಡಳಿತ, ಸನ್ನಡತೆ ಇವು ಪ್ರೊ.ಎನ್.ಜಿ.ಕರೂರ ಅವರ ಜೀವನದ ಚತುರ್ಮುಖಗಳು. ಅವುಗಳಿಂದಾಗಿ ಆದರ್ಶ ಶಿಕ್ಷಕ, ಅಧ್ಯಯನಶೀಲ ಸಾಹಿತಿ, ದಕ್ಷ ಆಡಳಿತಗಾರ ಹಾಗು ತತ್ವ ನಿಷ್ಠ ನಡೆ-ನುಡಿ ಇವು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿ ಕಂಗೊಳಿಸಿವೆ. ವಿದ್ಯಾರ್ಥಿ ದೆಸೆಯಿಂದಲೂ, ಪ್ರಾಪಂಚಿಕ ತೊಂದರೆಗಳಲ್ಲಿಯೂ ತೂಕ ತಪ್ಪದಂತೆ ನಡೆಯುವ ಅವರ ಜಾಗೃತ ಮನಸ್ಸು ಅರ್ಧಶತಮಾನಕ್ಕೂ ಮಿಕ್ಕಿ ಶಿಕ್ಷಣ ಕ್ಷೇತ್ರದಲ್ಲಿ ತನ್ಮಯತೆಯಿಂದ ಕಾರ್ಯ ಮಾಡಿದೆ, ಮಾಡುತ್ತಲೂ ಇದೆ.
               ಸಾಹಿತ್ಯದ ವಿದ್ಯಾರ್ಥಿಯಾಗಿ ಕನ್ನಡ, ಇಂಗ್ಲಿಷ್ ಎರಡರಲ್ಲೂ ಸಮಾನ ಆಸಕ್ತಿ ಹೊಂದಿದ ಅವರು ವರ್ಡ್ಸವರ್ಥ್, ಶೆಲ್ಲಿ, ಇಲಿಯಟ್ ರನ್ನು ತಿಳಿದು ಕೊಂಡಂತೆ ಮಧುರ ಚೆನ್ನ, ಬೇಂದ್ರೆ, ಕುವೆಂಪು ಅವರನ್ನೂ ಬಲ್ಲವರು. ರನ್ನನಂಥ ಪ್ರಾಚೀನ ಕವಿಯನ್ನು ಕುರಿತು ಅಧಿಕಾರವಾಣಿಯಿಂದಲೇ ಮಾತನಾಡಬಲ್ಲವರು. ಹೀಗಿದ್ದರೂ ಅವರ ಬಿ.ಇಡಿ ಮತ್ತು ಎಂ.ಇಡಿಗಳು ಶಿಕ್ಷಣ ಕ್ಷೇತ್ರದ ಕಡೆಗೆ ವಾಲುವಂತೆ ಮಾಡಿದವು. ಅವುಗಳಿಂದಾಗಿ ಅವರು ಪ್ರಾಚಾರ್ಯರಾದರು. ಜೊತೆಗೆ ಸಂಸ್ಥೆಗಳನ್ನು ಕಟ್ಟುವ, ಬೆಳೆಸುವ ಕಾರ್ಯದಲ್ಲಿ ನಿಮಗ್ನರಾದರು. ಸಂಸ್ಥೆಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುವುದು, ಅವುಗಳನ್ನು ಕಾರ್ಯಗತಗೊಳಿಸುವುದು, ಶಿಸ್ತಿನಿಂದ ಹಿಡಿದ ಕೆಲಸವನ್ನು ಪೂರೈಸುವುದು ಇವು ಅವರ ನಿರಂತರದ ಕಾರ್ಯಚಟುವಟಿಕೆಗಳಾದವು.

ಅವರೊಳಗಿನ ಬರಹಗಾರ 
         ಪ್ರೊ.ಎನ್.ಜಿ.ಕರೂರ ಅವರದು ಸೃಜನಶೀಲ ಮನಸ್ಸು. ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿರುವ ಅವರು ಬರವಣಿಗೆಯ ಕ್ಷೇತ್ರದಲ್ಲೂ ಕೃಷಿ ಮಾಡಿರುವರು. ಭಾಷೆ, ಶಿಕ್ಷಣ, ಸಾಮಾಜಿಕ ಸಮಸ್ಯೆಗಳು, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಬರೆದಿರುವರು. ಅಪರೂಪದವರು, ಶಿಕ್ಷಣ ಮಾರ್ಗ, ಮಿಂಚು ಮಾಲೆ, ಬಾನ್ದನಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಇವು ಶ್ರೀಯುತರು ಬರೆದಿರುವ ಪ್ರಮುಖ ಕೃತಿಗಳು. ಸಾರ್ಥಕ ಮತ್ತು ಅಂತರಂಗದ ರತ್ನ ಅವರ ಸಂಪಾದಿತ ಕೃತಿಗಳು. 
         ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಅವರು ಆಡಳಿತಾಧಿಕಾರಿಗಳಾಗಿ ಬಂದ ಪ್ರಾರಂಭದ ದಿನಗಳಲ್ಲಿ ಅವರು ಮಾಡಿದ ಮೊದಲ ಕೆಲಸ ಕಾರ್ಯಾಧ್ಯಕ್ಷರ ಇಚ್ಛೆಯಂತೆ 'ಸಮಾಚಾರ' ಪತ್ರಿಕೆಯನ್ನು ಪ್ರಾರಂಭಿಸಿದ್ದು. ಬಿ.ವಿ.ವಿ.ಸಂಘದ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪತ್ರಿಕೆಯಲ್ಲಿ ಸಿಬ್ಬಂದಿ ವರ್ಗದವರ ಲೇಖನಗಳ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು. ಪತ್ರಿಕಾ ಪ್ರಕಟಣೆಯ ಪರಿಣಾಮ ಒಂದು ಸಾಹಿತ್ಯಕ ವಾತಾವರಣ ನಿರ್ಮಾಣವಾಗಿ  ಬಿ.ವಿ.ವಿ.ಸಂಘದಲ್ಲಿ ಅನೇಕ ಲೇಖಕರು ರೂಪಗೊಳ್ಳಲು ಸಾಧ್ಯವಾಯಿತು. ಶ್ರೀಯುತರ ನೂರಕ್ಕೂ ಹೆಚ್ಚು ಸಂಪಾದಕೀಯ ಲೇಖನಗಳು 'ಸಮಾಚಾರ' ಪತ್ರಿಕೆಯಲ್ಲಿ ಪ್ರಕಟಗೊಂಡವು. ಅವರ ಸಂಪಾದಕೀಯ ಲೇಖನಗಳು ಒಂದಕ್ಕಿಂತ ಇನ್ನೊಂದು ವಿಭಿನ್ನ. ತಮ್ಮ ಸಂಪಾದಕೀಯದಲ್ಲಿ ಉತ್ತಮವಾದದ್ದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಸಮಸ್ಯೆಗಳನ್ನು ಯಾವ ಮುಲಾಜು ಮತ್ತು ಬಿಡೆಗೆ ಸಿಲುಕದೆ ಟಿಕಿಸಿರುವರು. ತಮ್ಮ ಮೊನಚು ಬರವಣಿಗೆಯಿಂದ ಒಂದು ಜಾಗೃತ ವಾತಾವರಣವನ್ನು ನಿರ್ಮಿಸಿ ಆ ಮೂಲಕ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವರು. ಅವರ ಬಹಳಷ್ಟು ಲೇಖನಗಳಲ್ಲಿ ಒಂದು ತುಡಿತ, ಸಂವೇದನೆ, ಪ್ರಾಮಾಣಿಕ ಕಳಕಳಿ, ಸಾತ್ವಿಕ ಸಿಟ್ಟು ಮತ್ತು ಬದಲಾಗದ ಪರಿಸ್ಥಿತಿ ಕುರಿತಾದ ಹತಾಶ ಸ್ಥಿತಿ ಎದ್ದು ಕಾಣುತ್ತವೆ. ಒಂದು ಸೂಕ್ಷ್ಮ ಸಂವೇದನಾಶೀಲ ಮನಸ್ಸಿನ ನಿಜವಾದ ಕಳಕಳಿ  ಇದು.

  ಅವರೊಂದಿಗೆ ಒಂದು ದಶಕದ ನಂಟು 
          ನಾನು 2001ರಲ್ಲಿ ಬಿ.ವಿ.ವಿ.ಸಂಘದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕನಾಗಿ ನಿಯುಕ್ತಿಗೊಂಡ ದಿನದಿಂದ ನನಗೆ ಅವರ ನಿಕಟ ಸಂಪರ್ಕವಿದೆ. 'ಸಮಾಚಾರ' ಪತ್ರಿಕೆಗೆ ನಾನು ಬರೆಯುವ ಲೇಖನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೇಖನ ಮೆಚ್ಚುಗೆಯಾಗದೇ ಇದ್ದಲ್ಲಿ ಬೇಸರಿಸಿದ್ದಾರೆ. ಹೇಗೆ ಬರೆಯ ಬೇಕೆಂದು ತಿಳಿ ಹೇಳಿದ್ದಾರೆ. ಒಂದರ್ಥದಲ್ಲಿ ನನ್ನೊಳಗಿನ ಬರೆಯುವ ಹವ್ಯಾಸಕ್ಕೆ ನೀರೆರೆದು ಪೋಷಿಸಿದ್ದಾರೆ. 'ಸಾಧನೆ' ಪುಸ್ತಕ ಬರೆಯುತ್ತಿರುವ ಸಂದರ್ಭ ಪ್ರತಿ ಘಳಿಗೆ ಜೊತೆಗೆ ನಿಂತು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪುಸ್ತಕ ಪ್ರಕಟವಾಗಿ ಹೊರಬಂದ ನಂತರ ಅನೇಕ ವ್ಯಕ್ತಿಗಳೆದುರು ಕರೆದೊಯ್ದು ನಿಲ್ಲಿಸಿ ನನ್ನನ್ನು ಅವರಿಗೆ ಪರಿಚಯಿಸಿದ್ದಾರೆ. ಅವರಿಂದ ನನ್ನ ಓದಿನ ವ್ಯಾಪ್ತಿ ವಿಸ್ತರಿಸಿದೆ. ತಾವು ಓದಿದ ಅನೇಕ ಉತ್ತಮ ಪುಸ್ತಕಗಳನ್ನು ಕೊಟ್ಟು ಓದುವಂತೆ ಪ್ರಚೋದಿಸಿದ್ದಾರೆ. ಒಂದು ಸೃಜನಶೀಲ ಹವ್ಯಾಸ ಮೊಳಕೆಯೊಡೆದು ಬೆಳೆಯಲು ಕಾರಣರಾಗಿರುವ ಶ್ರೀಯುತರಿಗೆ ನಾನು ಮತ್ತು ನನ್ನೊಳಗಿನ ಬರಹಗಾರ ಕೃತಜ್ಞರಾಗಿದ್ದೇವೆ.
           ಒಮ್ಮೆ ಪುಸ್ತಕವೊಂದರ ಪ್ರಕಟಣಾ ಕೆಲಸಕ್ಕೆ ಸಂಬಂಧಿಸಿದಂತೆ ನಾನು ಮತ್ತು ಸ್ನೇಹಿತರಾದ ಶ್ರೀ ಪಿ.ಎನ್.ಸಿಂಪಿ ಅವರು ಹಿರಿಯರಾದ ಶ್ರೀ ಎನ್.ಜಿ.ಕರೂರ ಅವರೊಂದಿಗೆ ಗದುಗಿಗೆ ಹೋಗುವ ಸಂದರ್ಭ ಒದಗಿ ಬಂತು. ಹೊರ ನೋಟಕ್ಕೆ ಗಂಭೀರ ವದನರಾಗಿ ಮತ್ತು ಮಿತಭಾಷಿಯಾಗಿ ಕಾಣುವ ಅವರು ಆ ಘಳಿಗೆ ನಮ್ಮಗಳ ಊಟ ತಿಂಡಿಯ ಬಗ್ಗೆ ತೋರಿದ ಕಾಳಜಿ, ಕಕ್ಕುಲಾತಿ ಕಂಡು ಮೂಕವಿಸ್ಮಿತನಾಗಿದ್ದೇನೆ. ರಾತ್ರಿ ಬಹಳ ತಡವಾಯಿತೆಂದು ನಮ್ಮನ್ನು ವಾಹನದಲ್ಲಿ ನಮ್ಮ ನಮ್ಮ ಮನೆಯವರೆಗೂ ಬಿಟ್ಟು ಹೋದ ಅವರ ಔದಾರ್ಯ ಅವರ ವ್ಯಕ್ತಿತ್ವಕ್ಕೊಂದು ದೃಷ್ಟಾಂತ. ಆ ಪ್ರಯಾಣದ ವೇಳೆ ಅವರಿಂದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.
   
           ಶ್ರೀಯುತರಿಗೆ ಅಭಿನಂದನೆಗಳು ಮತ್ತೊಮ್ಮೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
      

Thursday, November 1, 2012

ಕರುನಾಡಿನಲ್ಲಿ ಕನ್ನಡ: ಎರಡು ಪ್ರಶ್ನೆಗಳು

ಭಾಷೆಯ ಮೇಲೆ ಜಾಗತೀಕರಣದ ಪ್ರಭಾವ ಮತ್ತು ಚಳುವಳಿಗಳ ಪಾತ್ರ 

         ಜಾಗತೀಕರಣ ಎನ್ನುವುದು ಈ ದಿನಗಳಲ್ಲಿ ಇಡೀ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಜಾಗತೀಕರಣದ ಪರಿಣಾಮವಾಗಿ ಇವತ್ತು ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ  ಕ್ಷೀಣಿಸುತ್ತಿದೆ. ಇದಕ್ಕೆ ವಿರುದ್ಧವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆಲ್ಲ ಕಾರಣವೇನು? ಅದು ಇಂಗ್ಲಿಷ್ ಭಾಷೆಯ ಪರವಾಗಿ ಪಾಲಕರು ತೋರುತ್ತಿರುವ ಒಲವು. ಇಂಗ್ಲಿಷ್ ಭಾಷೆ ಜಾಗತೀಕರಣದ ಪರಿಣಾಮ ಅದು ನಮ್ಮ ಬದುಕಿನ ಭಾಷೆ ಎನ್ನುವ ನಿರ್ಧಾರಕ್ಕೆ ಪಾಲಕರೆಲ್ಲ ಬಂದು ನಿಂತಿರುವರು. ಇಂಗ್ಲಿಷ್ ಭಾಷೆಯಿಂದ ಮಾತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ಮನೋಭಾವ ಬಲಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಜಾಗತೀಕರಣ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪೂರಕವಾದ ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ.
       ಒಂದು ಕಾಲದಲ್ಲಿ ಬೆಂಗಳೂರಿನ ಗಾಂಧಿ ನಗರದಲ್ಲಿ ಕನ್ನಡದಲ್ಲಿ ಮಾತನಾಡುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೆ ಇವತ್ತು ಏನಾಗಿದೆ ಅದೇ ಗಾಂಧಿನಗರದಲ್ಲಿ ಇಂಗ್ಲಿಷ್ ಭಾಷೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಉಪಹಾರ ಮಂದಿರಗಳಲ್ಲಿ ಕೆಲಸ ಮಾಡುವ ಮಾಣಿಗಳೆಲ್ಲ ಇಂಗ್ಲಿಷನಲ್ಲೆ ಮಾತನಾಡುತ್ತಿರುವರು. ಇದು ವ್ಯಂಗ್ಯವಲ್ಲ ಆದರೆ ಸಂವಹನದ ಭಾಷೆಯಾಗಿ ಕನ್ನಡ ಮರೆಯಾಗುತ್ತಿರುವುದರ ದುರಂತಕ್ಕೆ ಇದೊಂದು ನಿದರ್ಶನ.
        ಈ ಜಾಗತೀಕರಣವನ್ನು ನಾವುಗಳೆಲ್ಲ ನಮ್ಮ ಮನೆಯೊಳಗೂ ಬಿಟ್ಟು ಕೊಂಡಿದ್ದೇವೆ. ನಮ್ಮ ಬಾಲ್ಯದ ದಿನಗಳಲ್ಲಿ ನಮಗೆಲ್ಲ ಪಾಶ್ಚಾತ್ಯ ಕಲಾವಿದರಿರಲಿ ನಮ್ಮ ನೆರೆಯ ರಾಜ್ಯಗಳ ಭಾಷೆಗಳಲ್ಲಿನ ಸಿನಿಮಾಗಳ ಹೆಸರುಗಳು ಕೂಡ ಅಪರಿಚಿತವಾಗಿದ್ದವು. ಇವತ್ತಿನ ಮಕ್ಕಳನ್ನು ಕೇಳಿ ನೋಡಿ ಅವರಿಗೆ ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳ ಕಲಾವಿದರೆಲ್ಲ ಗೊತ್ತು. ಜಾಗತೀಕರಣದ ಪರಿಣಾಮ ವಿದೇಶಿ ಸಿನಿಮಾಗಳೆಲ್ಲ ನಮ್ಮ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಒಂದರ್ಥದಲ್ಲಿ ವಿದೇಶಿ ಸಿನಿಮಾಗಳ ಪ್ರಭಾವದಿಂದಾಗಿ ನಮ್ಮ ಮಕ್ಕಳು ನಮ್ಮ ನೆಲದ ಸಂಸ್ಕೃತಿಯಿಂದ ದೂರವಾಗಿ ನಮ್ಮದಲ್ಲದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿರುವರು. ಅವರಿಗೆಲ್ಲ ಕನ್ನಡ ಎನ್ನುವುದು ಅದು ಕೇವಲ ಕಿಚನ್ ಭಾಷೆ ಎನ್ನುವ ಅಸಡ್ಡೆ. ಇದನ್ನೇ ವಿಪರ್ಯಾಸ ಎನ್ನುವುದು. ಜಾಗತೀಕರಣದಿಂದಾಗಿ ನಾವುಗಳೆಲ್ಲ ಜಗತ್ತಿನ ಎಲ್ಲ ಆಗು ಹೋಗುಗಳಿಗೆ ಮುಖಾಮುಖಿಯಾಗಿ ನಿಂತಿರುವ ಹೊತ್ತಿನಲ್ಲೇ ನಮ್ಮದೇ ನೆಲದ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯನ್ನು ನಾಲ್ಕು ಗೋಡೆಗಳ ಅಡುಗೆ ಕೋಣೆಗೆ ಸೀಮಿತಗೊಳಿಸುತ್ತಿರುವೆವು.
         ಇನ್ನು ಕನ್ನಡ ಚಳುವಳಿಗಳ ಕುರಿತು ಹೇಳುವುದಾದರೆ ಜಾಗತೀಕರಣಕ್ಕೂ ಮತ್ತು ಚಳುವಳಿಗೂ ಒಂದು ರೀತಿಯ ನಿಕಟ ಸಂಬಂಧವಿದೆ. ಜಾಗತೀಕರಣದಿಂದ ಒಂದು ನೆಲದ ಸಂಸ್ಕೃತಿ ಮತ್ತು ಭಾಷೆ ತಲ್ಲಣಗೊಳ್ಳುತ್ತಿರುವ ಸಂದರ್ಭದಲ್ಲೇ ಚಳುವಳಿಗಳು ರೂಪಗೊಳ್ಳಬೇಕು. ಆ ಚಳುವಳಿಗಳು ಜಾಗತೀಕರಣಕ್ಕೆ ಮುಖಾಮುಖಿಯಾಗಿ ನಿಂತು ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಕಾಯ್ದುಕೊಳ್ಳಬೇಕು. ಆದರೆ ಈ ದಿನಗಳಲ್ಲಿ ಕನ್ನಡ ಪರ ಚಳುವಳಿಗಳು ಯಾವ ಮಟ್ಟದಲ್ಲಿ ಕೆಲಸ ಮಾಡಬೇಕಿತ್ತೋ ಆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
         ನಮಗೆಲ್ಲ ಗೊತ್ತಿರುವಂತೆ 25 ವರ್ಷಗಳ ಹಿಂದೆ ಕನ್ನಡದ ಪರವಾಗಿ ಸಂಘಟಿಸಿದ್ದ ಗೋಕಾಕ ಚಳುವಳಿ ಅಭೂತಪೂರ್ವ ಯಶಸ್ಸು ಕಂಡಿತು. ಸಾಹಿತಿಗಳು, ಸಿನಿಮಾ ಕಲಾವಿದರು ಮತ್ತು ಜನಸಾಮಾನ್ಯರೆಲ್ಲ ಒಂದಾಗಿ ಈ ನಾಡಿನ ಪರ ಹೋರಾಟ ಮಾಡಿದರು. ಆ ಚಳುವಳಿಯ ತೀವೃತೆಗೆ ಮಣಿದ ಅಂದಿನ ಸರ್ಕಾರ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಅಂದಿನ ಚಳುವಳಿಗಾರರಲ್ಲಿ ಸ್ವಹಿತಾಸಕ್ತಿಗಿಂತ ನಾಡಿನ ರಕ್ಷಣೆ ಮುಖ್ಯವಾಗಿತ್ತು. ಆದರೆ ಈ ದಿನಗಳಲ್ಲಿ ಏನಾಗುತ್ತಿದೆ. ಚಳುವಳಿ ಎನ್ನುವುದು ನಾಡಿನ ರಕ್ಷಣೆಗಾಗಿ ಮಾಡುವ ಹೋರಾಟ ಎನ್ನುವುದಕ್ಕಿಂತ ಅದೊಂದು ಉದ್ಯೋಗವಾಗಿ ಪರಿವರ್ತಿತವಾಗುತ್ತಿದೆ. ನಿರುದ್ಯೋಗಿಗಳೆಲ್ಲ ಒಂದು ಗುಂಪು ಕಟ್ಟಿಕೊಂಡು ಅದಕ್ಕೊಂದು ಹೆಸರಿಟ್ಟು ಬೀದಿಗಿಳಿದರೆ ಇಂಥವರಿಂದ ಕನ್ನಡದ ರಕ್ಷಣೆ ಸಾಧ್ಯವೇ?. ಇನ್ನು ಕೆಲವರಿಗೆ ಈ ಚಳುವಳಿ ಎನ್ನುವುದು ರಾಜಕೀಯ ಪ್ರವೇಶಕ್ಕೆ ವೇದಿಕೆಯಾಗಿ ಬಳಕೆಯಾಗುತ್ತಿರುವುದು ದುರ್ದೈವದ ಸಂಗತಿ. ಅನೇಕರು ಕನ್ನಡ ಪರ ಹೋರಾಟದ ಹೆಸರಿನಲ್ಲಿ ತಮ್ಮ ತಮ್ಮ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಂಡರೆ ವಿನಃ ಅಂಥವರಿಂದ ನಾಡು ನುಡಿಗೆ ಸಂಬಂಧಿಸಿದಂತೆ ಯಾವ ಕೆಲಸಗಳೂ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ನಮ್ಮ ಚಳುವಳಿಗಾರರಲ್ಲಿ ವೈಯಕ್ತಿಕ ಹಿತಾಸಕ್ತಿ ಬಹು ಮುಖ್ಯವಾಗಿ ಕೆಲಸಮಾಡುತ್ತಿದೆ.
        ಆಯಾ ಕಾಲಘಟ್ಟದಲ್ಲಿ ಒಂದು ನೆಲದ ಸಾಂಸ್ಕೃತಿಕ ಬದುಕಾಗಲಿ ಮತ್ತು ಭಾಷೆಯಾಗಲಿ ಸಮಸ್ಯೆಗಳನ್ನೆದುರಿಸುವುದು ಸಹಜ. ಆದರೆ ಆ ಎಲ್ಲ ಸಮಸ್ಯೆಗಳು ಮತ್ತು ತಲ್ಲಣಗಳ ನಡುವೆಯೂ ನೆಲದ ಸಂಸ್ಕೃತಿ ಮತ್ತು ಭಾಷೆ ತನ್ನ ಮೂಲ ಗುಣವನ್ನು ಮತ್ತು ಸಹಜತೆಯನ್ನು ಕಾಯ್ದುಕೊಂಡು ಬರಬೇಕು. ಇದು ಚಳುವಳಿಗಳಿಂದ ಸಾಧ್ಯ. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ನಾಡಿನ ಚಳುವಳಿಗಳಿಂದ ಇಂಥದ್ದೊಂದು ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ.

ಕನ್ನಡ ಭಾಷೆಯ ಬೆಳವಣಿಗೆಗೆ ಸಿನಿಮಾ ಮಾಧ್ಯಮದ ಕೊಡುಗೆ 

         ಸಿನಿಮಾ ಎನ್ನುವುದು ಅತ್ಯಂತ ಪರಿಣಾಮಕಾರಿಯಾದ ಅಭಿವ್ಯಕ್ತಿ ಮಾಧ್ಯಮ. ಆದ್ದರಿಂದ ಸಿನಿಮಾವನ್ನು ಒಂದು ನೆಲದ ಸಾಂಸ್ಕೃತಿಕ ಮಾಧ್ಯಮವಾಗಿ ಪರಿಗಣಿಸಬೇಕಾದ ಅಗತ್ಯತೆ ಇದೆ. ಸಿನಿಮಾ ಮಾಧ್ಯಮ ಅನೇಕ ಸಂದರ್ಭಗಳಲ್ಲಿ ತನ್ನ ನೆಲದ ಇಡೀ ಸಾಂಸ್ಕೃತಿಕ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ. ಕನ್ನಡ ಭಾಷೆಯನ್ನೇ ತೆಗೆದುಕೊಳ್ಳಿ ಸರ್ವಕಾಲಿಕ ಶ್ರೇಷ್ಠ ಎನ್ನುವ ಮೆಚ್ಚುಗೆಗೆ ಪಾತ್ರವಾದ ಸಿನಿಮಾಗಳು ಈ ನೆಲದಲ್ಲಿ ನಿರ್ಮಾಣಗೊಂಡಿವೆ. ನಾಂದಿ, ಸ್ಕೂಲ್ ಮೇಷ್ಟ್ರು, ಬಂಗಾರದ ಮನುಷ್ಯ, ಅಮರಶಿಲ್ಪಿ ಜಕಣಾಚಾರಿಯಂಥ ಚಿತ್ರಗಳು ಈ ನೆಲದ ಹಿರಿಮೆಯನ್ನು ಇಡೀ ದೇಶಕ್ಕೆ ಪರಿಚಯಿಸಿದವು. ತಬರನ ಕಥೆ, ದ್ವೀಪ, ಘಟಶ್ರಾದ್ಧದಂಥ ಕಲಾತ್ಮಕ ಚಿತ್ರಗಳು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಪರಿಣಾಮ ವಿದೇಶಿಯರಿಗೂ ಈ ನಾಡಿನ ಸಂಸ್ಕೃತಿಯ ಪರಿಚಯವಾಯಿತು.
        ಈ ಸಿನಿಮಾ ಎನ್ನುವ ಮಾಧ್ಯಮವನ್ನು ನಾಡು-ನುಡಿಯ ಬೆಳವಣಿಗೆಗೆ ಪೂರಕವಾಗುವಂತೆ ಹೇಗೆ ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆ ಎದುರಾದಾಗ ನಮಗೆ ತಟ್ಟನೆ ನೆನಪಾಗುವುದು ಈ ಬೆಂಗಾಲಿಗಳು ಮತ್ತು ಮಲೆಯಾಳಿಗಳು. ಈ ಜಾಗತೀಕರಣದ ಯುಗದಲ್ಲೂ ಅವರುಗಳು ಸಿನಿಮಾವನ್ನು ತಮ್ಮ ನೆಲದ ಸಂಸ್ಕೃತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿರುವರು. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಬಹುತೇಕ ಸಿನಿಮಾಗಳಲ್ಲಿ ಈ ಬಂಗಾಳಿ ಮತ್ತು ಮಲೆಯಾಳಂ ಭಾಷೆಗಳದ್ದೆ ಸಿಂಹಪಾಲು. ಇವತ್ತಿಗೂ ಅವರ ಸಿನಿಮಾಗಳು ತಮ್ಮ ಮೂಲ ಭಾಷೆ ಮತ್ತು ಸಂಸ್ಕೃತಿಯಿಂದ ದೂರವಾಗಿಲ್ಲ.
      ಕನ್ನಡ ಭಾಷೆಯಲ್ಲಿ ಏನಾಗುತ್ತಿದೆ? ಕಳೆದ ಎರಡು ದಶಕಗಳ ನಮ್ಮ ಸಿನಿಮಾ ಮಾಧ್ಯಮದ ಬೆಳವಣಿಗೆಯನ್ನು ಅವಲೋಕಿಸಿದರೆ ವಸ್ತುಸ್ಥಿತಿಯ ಅರಿವಾಗುತ್ತದೆ. ಒಂದು ಕಾಲದಲ್ಲಿ ಈ ನೆಲದ ಸಂಸ್ಕೃತಿ ಮತ್ತು ಹಿರಿಮೆಯನ್ನು ಎತ್ತಿ ಹಿಡಿದ ಸಿನಿಮಾ ಮಾಧ್ಯಮ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಾಗತೀಕರಣ ಎನ್ನುವುದು ನಮ್ಮ ಈ ಸಿನಿಮಾ ಮಾಧ್ಯಮವನ್ನು ವಿನಾಶದಂಚಿಗೆ ತಳ್ಳಿದೆ. ಈ ದಿನಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುತೇಕ ಸಿನಿಮಾಗಳಲ್ಲಿ ನಮ್ಮ ನೆಲದ ಸೊಗಡು ಕಾಣಿಸುತ್ತಿಲ್ಲ. ಅಲ್ಲಿ ಬಳಕೆಯಾಗುತ್ತಿರುವ ಭಾಷೆಯ ಬಗ್ಗೆ ಅನೇಕ ತಕರಾರುಗಳಿವೆ. ಸಿನಿಮಾಕ್ಕೆ ಅದರದೇ ಆದ ಭಾಷೆಯಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಸಿನಿಮಾ ಜನ ಪ್ರತ್ಯೇಕವಾದ ಸಿನಿಮಾ ಭಾಷೆಯೊಂದನ್ನು ಸೃಷ್ಟಿಸುತ್ತಿರುವರು.
         ಸಿನಿಮಾ ನಿಜಕ್ಕೂ ಅದು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಪ್ರತಿಬಿಂಬ. ಅದು ನಮ್ಮ ಭಾಷೆಯ ಹಿರಿಮೆ. ಆತಂಕದ ಸಂಗತಿ ಎಂದರೆ ಸಂಸ್ಕೃತಿ, ಸಮಾಜ, ಭಾಷೆ ಎಲ್ಲವನ್ನೂ ಮೀರಿ ಅಲ್ಲಿ ವ್ಯಾಪಾರಿ ಮನೋಭಾವ ಪ್ರಮುಖ ಪಾತ್ರವಹಿಸುತ್ತಿದೆ. ಜಾಗತೀಕರಣಕ್ಕೆ ಈ ಸಿನಿಮಾ ಮಾಧ್ಯಮವನ್ನು ಮುಖ ಮಾಡಿ ನಿಲ್ಲಿಸುವ ಹುನ್ನಾರ ಅನೇಕರದು. ತಮ್ಮ ಸಿನಿಮಾವೊಂದು ಅನ್ಯ ರಾಜ್ಯಗಳಲ್ಲಿ, ಅನ್ಯ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಹಣಗಳಿಸಬೇಕೆನ್ನುವ ಇಚ್ಛಾಶಕ್ತಿ ಪ್ರಬಲವಾದಾಗ ಅಲ್ಲಿ ನಾಡು ನುಡಿಯ ಹಿತಾಸಕ್ತಿ ಮೂಲೆಗುಂಪಾಗುತ್ತದೆ. ಒಂದು ಕಾಲದಲ್ಲಿ ತನ್ನ ಸೃಜನಶೀಲತೆಯ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದ ನಮ್ಮ ಸಿನಿಮಾ ಮಾಧ್ಯಮದ ಸಧ್ಯದ ಪರಿಸ್ಥಿತಿ ಇದು.
       ಭಾಷೆಯೊಂದರ ಬೆಳವಣಿಗೆ ಹಾಗೂ ಮತ್ತದರ ಹಿರಿಮೆ ಅದನ್ನು ನಾವು ಹೇಗೆ ಬಳಸುತ್ತಿರುವೆವು ಎನ್ನುವುದನ್ನು ಅವಲಂಬಿಸಿದೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾದರೂ ಕನ್ನಡವನ್ನು ನಮ್ಮ ನಮ್ಮ ಮನೆಗಳಲ್ಲಿ ಹೃದಯದ ಭಾಷೆಯಾಗಿ ನೆಲೆಗೊಳಿಸುವ ಕೆಲಸವಾಗಬೇಕು. ಕುವೆಂಪು, ಬೇಂದ್ರೆ ಅವರಿಂದ ದೂರವಾಗಿ ಹ್ಯಾರಿ ಪಾಟರ್ ಗೆ ನಮ್ಮ ಮಕ್ಕಳು ಹತ್ತಿರವಾಗುತ್ತಿರುವುದು ಸಧ್ಯದ ಮಟ್ಟಿಗೆ ಅದು ಕನ್ನಡ ಭಾಷೆಯ ಬಹುದೊಡ್ಡ ಸೋಲು. ಇಂಥದ್ದೊಂದು ಸೋಲಿನ ವಾತಾವರಣದ ನಡುವೆಯೂ ಕನ್ನಡ ಪುಸ್ತಕಗಳ ಓದು ಮತ್ತು ಸದಭಿರುಚಿಯ  ಕನ್ನಡ ಸಿನಿಮಾಗಳ ವೀಕ್ಷಣೆ ನನಗೆ ಅತ್ಯಂತ ಖುಷಿಕೊಡುವ ಸಂಗತಿಗಳಲ್ಲೊಂದು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ