Monday, July 4, 2016

ಬರಹಗಾರನ ತಲ್ಲಣಗಳು

                                      ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ
                                  ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ
                                                                                        -ದಿನಕರ ದೇಸಾಯಿ

       ತೀರ ಬೇಸರ, ಅವಮಾನದ ಸಂದರ್ಭ ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ.  ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು  ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್‍ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. ಈ ಮೇಲಿನದೆಲ್ಲ ‘ಬರಹಗಾರನ ತಲ್ಲಣಗಳು’ ಎಂದು ನಾನು ಬರೆಯುತ್ತಿರುವ ಲೇಖನಕ್ಕೆ ಪೀಠಿಕೆಯಾಯಿತು. ಇನ್ನು ಮುಖ್ಯ ವಿಷಯಕ್ಕೆ ಬರುತ್ತೇನೆ ಇವತ್ತಿನ ಸಂದರ್ಭ ಪ್ರತಿಯೊಬ್ಬ ಲೇಖಕ ಹಲವು ಬಗೆಯ ತಲ್ಲಣಗಳು ಮತ್ತು ಆತಂಕಕ್ಕೆ ಒಳಗಾಗುತ್ತಿರುವನು. ಏನು ಬರೆಯಬೇಕು? ಯಾರಿಗಾಗಿ ಬರೆಯಬೇಕು? ಹೇಗೆ ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳಬೇಕು? ತಾನು ಬರೆದದ್ದನ್ನು ಪ್ರಕಟಿಸುವುದು ಹೇಗೆ? ಈ ಎಲ್ಲ ಸಮಸ್ಯೆಗಳು ಬರಹಗಾರರನ್ನು ಕಾಡುತ್ತಿರುವ ಬಹುಮುಖ್ಯ ಸಂಗತಿಗಳಾಗಿವೆ. ಅದರಲ್ಲೂ ಬರವಣಿಗೆಯ ವಿಷಯವಾಗಿ ಮಹಿಳೆಯರು ಎದುರಿಸುತ್ತಿರುವ ತಲ್ಲಣಗಳು ಪುರುಷರಿಗಿಂತ ಒಂದಿಷ್ಟು ಹೆಚ್ಚೆ ಎನ್ನಬಹುದು.


ಎಡ-ಬಲ:

ಕನ್ನಡ ಮಾತ್ರವಲ್ಲ ಭಾರತದ ಎಲ್ಲ ಭಾಷೆಗಳಲ್ಲೂ ಬರಹಗಾರರು ಎರಡು ಪ್ರತ್ಯೇಕ ಬಣಗಳಾಗಿ ಒಡೆದು ಹೋಗಿರುವರು. ಹೀಗೆ ಪ್ರತ್ಯೇಕ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಲೇಖಕರಿಗೆ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಒಂದು ಗುಂಪಿನ ಲೇಖಕರು ದೇಶ, ಧರ್ಮದ ಪರ ಬರೆದರೆ ಇನ್ನೊಂದು ಗುಂಪು ಅದನ್ನು ವಿರೋಧಿಸಿ ಬರೆಯುತ್ತದೆ. ಒಂದರ್ಥದಲ್ಲಿ ಇದು ಲೇಖಕರ ಅಸ್ತಿತ್ವದ ಪ್ರಶ್ನೆ ಕೂಡ ಹೌದು. ಯಾವುದಾದರು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಲೇಖಕರ ಬರವಣಿಗೆಗೆ ಹೇರಳ ಸಂಖ್ಯೆಯ ಓದುಗರು ಸಿಗುವ ಸಾಧ್ಯತೆ ಹೆಚ್ಚು. ನಮ್ಮ ಹಿರಿಯ ಲೇಖಕರ ಈ ನಡೆ ಇವತ್ತಿನ ತರುಣ ಬರಹಗಾರರನ್ನು ಹೆಚ್ಚು ಹೆಚ್ಚು ಪ್ರಭಾವಿಸುತ್ತಿದೆ. ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣದ ಕೇಂದ್ರಗಳು ಅತ್ಯಂತ ವ್ಯವಸ್ಥಿತವಾಗಿ ಎಡ ಮತ್ತು ಬಲ ಗುಂಪಿನ ಲೇಖಕರನ್ನು ಹುಟ್ಟುಹಾಕುತ್ತಿವೆ. ಆದರೆ ಇಂಥದ್ದೊಂದು ವಾತಾವರಣದ ನಡುವೆ ನಿಜಕ್ಕೂ ಆತಂಕಕ್ಕೊಳಗಾಗುವವನು ಈ ಯಾವ ಮಾರ್ಗವನ್ನು ಅನುಸರಿಸದೆ ತನ್ನದೆ ಪ್ರತ್ಯೇಕ ದಾರಿಯೊಂದನ್ನು ಕಂಡುಕೊಳ್ಳುವ ಲೇಖಕ. ಏಕೆಂದರೆ ಈ ಮೂರನೇ ಮಾರ್ಗದ ಲೇಖಕನಿಗೆ ಬರೆಯಲು ಯಾವುದೇ ಅಜೆಂಡಾ ಇಲ್ಲವೇ ಸಿದ್ಧ ಸೂತ್ರವಾಗಲಿ ಇಲ್ಲ. ಅವನದು ಸಮಾಜಮುಖಿ ಚಿಂತನೆ. ವ್ಯವಸ್ಥೆಯಲ್ಲಿ ತಾನು ಕಂಡಿದ್ದನ್ನು ಮತ್ತು ಅನುಭವಿಸಿದ್ದನ್ನು ತನ್ನದೇ ಸರಳ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವ ಈ ಮೂರನೇ ಮಾರ್ಗದ ಲೇಖಕನಿಗೆ ಎದುರಾಗುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಓದುಗರ ಕೊರತೆ. ಓದುಗರೆ ಇಲ್ಲ ಎಂದಾದಲ್ಲಿ ಯಾರಿಗಾಗಿ ಬರೆಯಬೇಕು? ಇದು ಲೇಖಕನನ್ನು ಕಾಡುವ ಪ್ರಶ್ನೆ. ದೇವನೂರ ಮಹಾದೇವ ಒಂದು ಮಹತ್ವದ ಪ್ರಶ್ನೆಯನ್ನು ಓದುಗರೆದುರು ಇಡುತ್ತಾರೆ ‘ತನ್ನ ಸಮುದಾಯದ ಓದುಗರೇ ಅಪರೂಪವಾಗಿರುವ ಇಂಥ ಸಂದರ್ಭದಲ್ಲಿ ಆ ಸಮುದಾಯದ ಲೇಖಕನೊಬ್ಬ ಯಾರನ್ನು ತನ್ನ ಓದುಗರೆಂದು ಉದ್ದೇಶಿಸಿ ಬರೆಯಬೇಕು? ಇತರರಿಗೆಂದು ಬರೆದರೆ ಆ ಬರವಣಿಗೆ ಇತರರ ಆಸಕ್ತಿ, ಕುತೂಹಲ ಪೂರೈಸಲು ಮಾನವಶಾಸ್ತ್ರೀಯ ವಸ್ತುವಿನಂತಾಗಿ ಬಿಡುವುದರಿಂದ ತನ್ನ ಸಮುದಾಯದ ಗಾಯದ ಮೇಲೆ ಆ ಸಮುದಾಯದ ಪ್ರಜ್ಞಾವಂತನೇ ಬರೆ ಎಳೆದಂತಾಗುವುದಿಲ್ಲವೆ?’. ಮಹಾದೇವರ ಮಾತನ್ನು ಉಲ್ಲೇಖಿಸುತ್ತಿರುವ ಸಂದರ್ಭ ನನಗೆ ರಷ್ಯನ ಕಥೆಗಾರ್ತಿ ಆನಾ ಸ್ಟಾರೊಬಿನೆಜ್ ಹೇಳಿದ ಮಾತು ನೆನಪಾಗುತ್ತಿದೆ. ಆಕೆ ಲೇಖಕನ ಅಸ್ತಿತ್ವ ಮತ್ತು ಬದಲಾಗಬೇಕಾದ ಲೇಖಕನ ಮನೋಭಾವವನ್ನು ಕುರಿತು ಹೀಗೆ ಹೇಳುತ್ತಾಳೆ ‘ಲೇಖಕರಿಗೆ ಯಾವುದೇ ಇಸಂ ಅಥವಾ ಪ್ರಾದೇಶಿಕತೆಯ ಮಿತಿ ಇರುವುದು ಇವತ್ತಿನ ಸಂದರ್ಭದಲ್ಲಿ ಬರವಣಿಗೆಗೆ ಪೂರಕವಲ್ಲ. ಇಡೀ ಜಗತ್ತೇ ನನ್ನ ಓದುಗ ಎಂದುಕೊಂಡೇ ಬರವಣಿಗೆ ಆರಂಭಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಟರ್‍ನೆಟ್ ಯುಗದಲ್ಲಿ ಬರಹಗಾರರಿಗೆ ಇರುವ ಸವಾಲು ಇದು. ಹಾಗಾಗಿ ಯಾವುದೇ ಬರಹಗಾರರಿಗೆ ಲೇಬಲ್ ಹಾಕುವುದೆಂದರೆ ಅವರನ್ನು ಒಂದು ಮಿತಿಯಲ್ಲಿ ಕಟ್ಟಿಹಾಕುವುದು ಎಂದೇ ಅರ್ಥ. ಆದ್ದರಿಂದ ಸೃಜನಶೀಲ ಲೇಖಕರು ಇಂತಹ ಮಿತಿಗಳಿಂದ ಹೊರಬಂದು ಬರೆಯಬೇಕಿದೆ. ಇಡೀ ಜಗತ್ತೇ ನಮ್ಮ ಬರವಣಿಗೆಗೆ ಕ್ಯಾನ್‍ವಾಸ್ ಆಗಬೇಕಿದೆ. ಆಗ ನಾವು ಎಲ್ಲರನ್ನೂ ತಲುಪುವುದು ಸಾಧ್ಯ. ಭಾಷೆಯ ಮಿತಿಯನ್ನು ಕೂಡ ಆ ಮೂಲಕ ಮೀರುವುದು ಸಾಧ್ಯ’.  ಆನಾ ಸ್ಟಾರೊಬಿನೆಜ್‍ಳ ಈ ಮಾತು ಲೇಖಕರು ತಮ್ಮನ್ನು ಕಾಡುತ್ತಿರುವ ಆತಂಕ ಮತ್ತು ತಲ್ಲಣಗಳಿಂದ ಹೊರಬರಲು ಪರ್ಯಾಯ ಮಾರ್ಗವನ್ನು ತೋರಿಸುವಂತಿದೆ.
ಕನ್ನಡದಲ್ಲಿ ಸಧ್ಯದ ಮಟ್ಟಿಗೆ ಬಹುದೊಡ್ಡ ಓದುಗರ ವಲಯವನ್ನು ಹೊಂದಿರುವ ಲೇಖಕರೆಂದರೆ ಅದು ಎಸ್.ಎಲ್.ಭೈರಪ್ಪನವರು. ಅವರ ಕಾದಂಬರಿಯೊಂದು ಪ್ರಕಟವಾದ ಕಡಿಮೆ ಸಮಯದಲ್ಲಿ ಅನೇಕ ಮುದ್ರಣಗಳನ್ನು ಕಾಣುತ್ತದೆ. ಆದರೆ ವಿಪರ್ಯಾಸದ ಸಂಗತಿ ಎಂದರೆ ಒಂದು ವೈಚಾರಿಕ ವಲಯ ಉದ್ದೇಶಪೂರ್ವಕವಾಗಿ ಭೈರಪ್ಪನವರಿಗೆ ಬಲಪಂಥೀಯ ಬರಹಗಾರನೆಂಬ ಹಣೆಪಟ್ಟಿಯನ್ನು ಅಂಟಿಸಿದೆ. ಈ ಒಂದು ಅಪವಾದಕ್ಕೆ ಪೂರಕವಾಗಿ ಭೈರಪ್ಪನವರು ಕೂಡ ತಮ್ಮ ಕಾದಂಬರಿಗಳಲ್ಲಿ ಬಲಪಂಥೀಯ ವಿಚಾರಗಳನ್ನು ಸಮರ್ಥಿಕೊಂಡು ಬರೆದಿರುವುದುಂಟು. ಹೀಗೆ ಭೈರಪ್ಪನವರನ್ನು ಒಂದು ಗುಂಪಿಗೆ ಸೇರಿಸಿದ ವೈಚಾರಿಕ ವಲಯ ಅವರಿಗೆ ವಿರುದ್ಧವಾಗಿ ಅನಂತಮೂರ್ತಿ ಅವರನ್ನು ಎಡಪಂಥೀಯರನ್ನಾಗಿಸಿ ಸಾಹಿತ್ಯ ಕ್ಷೇತ್ರದ ಈ ಇಬ್ಬರು ಸೃಜನಶೀಲರ ನಡುವೆ ಬಹುದೊಡ್ಡ ಕಂದಕವನ್ನೇ ಸೃಷ್ಟಿಸಿತು. ಆತಂಕದ ಸಂಗತಿ ಎಂದರೆ ಇವತ್ತಿನ ಬಹಳಷ್ಟು ಬರಹಗಾರರು ಈ ಇಬ್ಬರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಬರವಣಿಗೆಯನ್ನು ನಿರ್ಧಿಷ್ಟ ಗುಂಪಿಗೆ ಸೀಮಿತಗೊಳಿಸಿಕೊಳ್ಳುತ್ತಿರುವರು. ಹಾಗಾದರೆ ಬರಹಗಾರ ಭಾಷೆ ಮತ್ತು ದೇಶದ ಮಿತಿಯನ್ನು ದಾಟುವ ಸಾಧ್ಯತೆಯನ್ನು ತನ್ನದಾಗಿಸಿಕೊಳ್ಳುವುದು ಹೇಗೆ?

ಅಭಿವ್ಯಕ್ತಿಯ ದಮನ

ತಮಿಳುನಾಡಿನ ಬರಹಗಾರ ಬರವಣಿಗೆಯ ಕೃಷಿಯನ್ನು ನಿಲ್ಲಿಸಿ ಇನ್ನುಮುಂದೆ ಪೆರುಮಾಳ್ ಮುರುಗನ್ ಎನ್ನುವ ಲೇಖಕ ಸತ್ತುಹೋದ ಎಂದು ಘೋಷಿಸಿಕೊಳ್ಳಬೇಕಾದರೆ ಆ ಬರಹಗಾರ ನಿಜಕ್ಕೂ ಅನುಭವಿಸಿದ ಮಾನಸಿಕ ಹಿಂಸೆ ಹೇಗಿತ್ತು? ಬರಹಗಾರನ ವೈಚಾರಿಕ ಚಿಂತನೆಯನ್ನು ಕತ್ತು ಹಿಸುಕಿ ಸಾಯಿಸುವ ಮತ್ತು ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಹುನ್ನಾರ ಕಾಲಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತ ಬಂದಿದೆ. ಕಮೂ, ಕಾಫ್ಕಾನಿಂದ ಕುವೆಂಪು, ಲಂಕೇಶ್, ಭೈರಪ್ಪನವರವರೆಗೆ ಬರಹಗಾರರು ತಮ್ಮ ಬರವಣಿಗೆಯ ಬದುಕಿನಲ್ಲಿ ಒಮ್ಮೆಯಾದರೂ ಪ್ರತಿಭಟನೆ ಮತ್ತು ಅಭಿವ್ಯಕ್ತಿಯ ದಮನಕ್ಕೆ ಒಳಗಾದವರೆ. ಆಲ್ಬರ್ಟ್ ಕಮೂ ಒಂದೆಡೆ ಹೇಳುತ್ತಾನೆ ‘I rebel therefore we are exist’ ಎಂದು. ಈ ಮಾತನ್ನು ಕಮೂ ಬರವಣಿಗೆ ಎನ್ನುವುದು ಅದು ವ್ಯವಸ್ಥೆಯ ವಿರುದ್ಧದ ಬರಹಗಾರನ ಪ್ರತಿಭಟನೆ ಎನ್ನುವ ಅರ್ಥದಲ್ಲಿ ಹೇಳುತ್ತಾನೆ. ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಲಂಕೇಶ್ ತಮ್ಮ ನೇರ ಮತ್ತು ಪ್ರತಿಭಟನಾತ್ಮಕ ಬರವಣಿಗೆಯಿಂದ ಕೆಲಸ ಕಳೆದುಕೊಂಡು ತಮ್ಮದೇ ಸ್ವಂತ ಪತ್ರಿಕೆಯನ್ನು ಆರಂಭಿಸಬೇಕಾಗುತ್ತದೆ. ಕನ್ನಡದ ಪ್ರಮುಖ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪನವರು ಅನೇಕ ಸಂದರ್ಭಗಳಲ್ಲಿ ಒಂದು ವರ್ಗದ ಪ್ರತಿಭಟನೆಯ ಅಗ್ನಿ ದಿವ್ಯವನ್ನು ಹಾಯ್ದು ಬಂದಿರುವರು. ‘ಸಂಸ್ಕಾರ’ ಬರೆದ ಸಂದರ್ಭದಲ್ಲಿ ಅನಂತಮೂರ್ತಿ ಅವರು ತಮ್ಮದೇ ಸಮುದಾಯದ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ‘ಅವಸ್ಥೆ’ ಬರೆದು ಅವರು ಇನ್ನೊಂದು ಸಮುದಾಯವನ್ನು ಎದುರುಹಾಕಿಕೊಳ್ಳಬೇಕಾಯಿತು.
ಬರಹಗಾರನ ಅಭಿವ್ಯಕ್ತಿಯನ್ನು ದಮನಗೊಳಿಸಲು ಆಳುವ ಅಥವಾ ಓದುಗ ವರ್ಗ ಒಂದು ಮಾರ್ಗವನ್ನು ಅನುಸರಿಸಿದರೆ ವೈಚಾರಿಕ ವಲಯದ ತಂತ್ರ ಇನ್ನೊಂದು ರೀತಿಯದು. ಸಾಮಾನ್ಯವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪಾಂಡಿತ್ಯಪೂರ್ಣ ಬರಹಗಾರರು ತಮ್ಮ ಸಮಕಾಲೀನ ಬರಹಗಾರರಿಂದ ಅವಜ್ಞಗೆ ಒಳಗಾಗುವ ಸಾಧ್ಯತೆ ಹೆಚ್ಚು.  ಇಂಥ ಬರಹಗಾರರ ಬರವಣಿಗೆಯನ್ನು ವಿಮರ್ಶಿಸದೆ (ಅದು ಮೆಚ್ಚುಗೆಯಾಗಲಿ ಇಲ್ಲವೇ ಟೀಕೆಯಾಗಲಿ) ವೈಚಾರಿಕ ವಲಯ ತಟಸ್ಥವಾಗಿ ಉಳಿದಲ್ಲಿ ಆಗ ಲೇಖಕನಿಗೆ ತಾನು ಯಾರಿಗಾಗಿ ಬರೆಯಬೇಕು ಎನ್ನುವ ಜಿಜ್ಞಾಸೆ ಕಾಡಲಾರಂಭಿಸುತ್ತದೆ. ವೈಚಾರಿಕ ವಲಯದ ಈ ತಟಸ್ಥ ನೀತಿಯನ್ನು ಕೆಲವು ಲೇಖಕರು ‘ಮೌನ ಪಿತೂರಿ’ ಎಂದು ಕರೆಯುತ್ತಾರೆ. ಎನ್.ಎಸ್.ಶಂಕರ ಇಂಥದ್ದೊಂದು ಮೌನಪಿತೂರಿಗೆ ಒಳಗಾದ ಶಂಭಾ ಜೋಷಿ ಅವರ ಮನಸ್ಥಿತಿಯನ್ನು ತಮ್ಮ ಲೇಖನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವರು. ಅವರು ಹೇಳುವಂತೆ ಹಿಂದೂ ಸಂಸ್ಕೃತಿಯ ಬೇರಿಗೆ ಕೈಯಿಟ್ಟ ಅದ್ವಿತೀಯ ಸಂಶೋಧಕ ಶಂಭಾ ಪ್ರಾಚೀನ ಪಠ್ಯಗಳನ್ನು ಶೋಧಿಸುತ್ತ ಸಂಪ್ರದಾಯಶೀಲರು ತತ್ತರಿಸುವಂತ ಗೂಢಾರ್ಥವನ್ನು ಬಿಡಿಸಿ ಹೇಳತೊಡಗಿದ ಕೂಡಲೇ ಅವರಿಗೆದುರಾದದ್ದು ವಿಮರ್ಶೆಯಲ್ಲ, ಛೀಮಾರಿಯಲ್ಲ, ಜಗಳವೂ ಅಲ್ಲ. ವೈಚಾರಿಕ ವಲಯ ಶಂಬಾರನ್ನು ಸಂಪೂರ್ಣ ನಿರ್ಲಕ್ಷಿಸಿ ಮೌನದ ಮಹಾಗೋಡೆಯನ್ನೇ ಅವರೆದುರು ನಿಲ್ಲಿಸಿಬಿಟ್ಟಿತು. ಗಾಡ ಕತ್ತಲಿನಂಥ ಮೌನ. ತನ್ನೊಂದಿಗೆ ಮಾತನಾಡುವವರೇ ಸಿಕ್ಕದ ಶಂಭಾರಿಗೆ ಪ್ರತಿವಾದದ ಎದುರು ತನ್ನ ನೋಟವನ್ನು ಸ್ಫುಟಗೊಳಿಸಿಕೊಳ್ಳುವ, ಹರಿತಗೊಳಿಸಿಕೊಳ್ಳುವ ಅವಕಾಶವೇ ದೊರೆಯದಾಯಿತು. ಕ್ರಮೇಣ ಅವರ ಪಾಲಿಗೆ ಪಾಂಡಿತ್ಯವೇ ಪಂಜರವಾಗಿಹೋಯಿತು.

ಲೇಖಕಿಯರ ತಲ್ಲಣಗಳು

ಬರವಣಿಗೆ ಕುರಿತು ಲೇಖಕಿಯರ ತಲ್ಲಣವನ್ನು ಇಂಗ್ಲಿಷ್ ಲೇಖಕಿ ಲೈಲಾ ಅಹ್ಮದ್ ಹೀಗೆ ವಿವರಿಸುತ್ತಾರೆ ‘ಬರವಣಿಗೆ ಎಂಬುದು ಮಹಿಳೆಯ ಪಾಲಿಗೆ ಚರಿತ್ರೆ ಎದುರುಗೊಳ್ಳುವ ಸವಾಲಿನ  ಕ್ರಿಯೆಯೇ. ಅದರಲ್ಲೂ ಮೂರನೇ ಜಗತ್ತಿನ ಮಹಿಳೆಯರಿಗೆ ಅದು ಇನ್ನಷ್ಟು ದೊಡ್ಡ ಸವಾಲು. ಇನ್ನು ಮುಸ್ಲಿಂ ಜಗತ್ತಿನ ಮಹಿಳೆಯ ಪಾಲಿಗೆ ಬರವಣಿಗೆ ಎನ್ನುವುದು ಏಕಕಾಲಕ್ಕೆ ಚರಿತ್ರೆಯನ್ನೂ ವರ್ತಮಾನದ ಆತಂಕಗಳನ್ನೂ ಎದುರುಹಾಕಿಕೊಂಡ ನಿರಂತರ ಹೋರಾಟದಂತೆಯೇ  ಸರಿ. ತನ್ನ ಪರಿಸರದ ಕಟು ಸಂಪ್ರದಾಯ, ಆಚರಣೆ, ನಂಬಿಕೆ, ಮೌಢ್ಯಗಳೊಂದಿಗೆ ಧಾರ್ಮಿಕ, ಕೌಟಂಬಿಕ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಲೇ ಆಕೆಯೊಳಗಿನ ಲೇಖಕಿ ಶತಮಾನಗಳ ಪುರುಷ ಪ್ರಧಾನ ಯಜಮಾನ್ಯವನ್ನು ಒಡೆಯಬೇಕಾಗುತ್ತದೆ. ಹಾಗಾಗಿ ಬರವಣಿಗೆ ಎನ್ನುವುದು ಮಹಿಳೆಯ ಪಾಲಿಗೆ ದಣಿವರಿಯದ ಹಾದಿ’.  ಕನ್ನಡ ಭಾಷೆ ಮಾತ್ರವಲ್ಲ ಜಗತ್ತಿನ ಎಲ್ಲ ಭಾಷೆಗಳಲ್ಲಿ ಮಹಿಳೆ ಒಬ್ಬ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು ತುಂಬ ಕಡಿಮೆ. ಲೇಖಕರಿಗೆ ದೊರೆತಷ್ಟು ಮತ್ತು ದೊರೆಯುತ್ತಿರುವ ಮಾನ್ಯತೆ ಲೇಖಕಿಯರಿಗೆ ದೊರೆಯುತ್ತಿಲ್ಲ. ಹೀಗಾಗಿ ಬರಹಗಾರ್ತಿಯರು ಲೇಖಕರಿಗಿಂತ ಒಂದಿಷ್ಟು ಹೆಚ್ಚೆ ಎನ್ನುವಷ್ಟು ಆತಂಕ ಮತ್ತು ತಲ್ಲಣಗಳನ್ನು ಎದುರಿಸುತ್ತಿರುವರು. ಜೊತೆಗೆ ಸಂಪ್ರದಾಯದ ಬೇಲಿಯಿಂದಾಗಿ ಮಹಿಳೆಯರು ಮುಕ್ತವಾಗಿ ಬರವಣಿಗೆಯ ಮೂಲಕ ಅಭಿವ್ಯಕ್ತಗೊಳ್ಳಲು ಸಾಧ್ಯವಾಗುತ್ತಿಲ್ಲ. ತ್ರಿವೇಣಿ, ಎಂ.ಕೆ.ಇಂದಿರಾ, ಪ್ರೇಮಾ ಭಟ್ಟ, ಅನುಪಮಾ ನಿರಂಜನ, ಸಾರಾ ಅಬೂಬಕ್ಕರ ಇವರೆಲ್ಲ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಘಳಿಗೆ ಸಮಾಜ ಸಂಪ್ರದಾಯಗಳಿಂದ ಈಗಿನಷ್ಟು ಮುಕ್ತವಾಗಿರಲಿಲ್ಲ. ಪರಿಣಾಮವಾಗಿ ಆಗೆಲ್ಲ ಹೆಚ್ಚಿನ ಲೇಖಕಿಯರು ಕಥೆ ಕಾದಂಬರಿಗಳಿಗೆ ಮಾತ್ರ ತಮ್ಮ ಬರವಣಿಗೆಯನ್ನು ಸೀಮಿತಗೊಳಿಸಿಕೊಂಡು ಒಂದಿಷ್ಟು ಶೃಂಗಾರ ಭರಿತ ಮನೋರಂಜನಾತ್ಮಕ ಸಾಹಿತ್ಯವನ್ನು ಸೃಷ್ಟಿಸಿದರು. ಈ ಕಾರಣದಿಂದಲೇ ಮಹಿಳಾ ಸಾಹಿತ್ಯ ಅಡುಗಮನೆ ಸಾಹಿತ್ಯ ಎನ್ನುವ ಗೇಲಿಗೆ ಒಳಗಾಗಬೇಕಾಯಿತು. ತ್ರಿವೇಣಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರ ಬದುಕಿನ ಸಮಸ್ಯೆಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಕಾದಂಬರಿಕಥನದ ಮೂಲಕ ಒಂದಿಷ್ಟು ಬಿಡಿಸಿನೋಡುವ ಪ್ರಯತ್ನ ಮಾಡಿದರು. ಆದರೂ ಅವರ ಪ್ರಯತ್ನ ಸುಶಿಕ್ಷಿತ ವರ್ಗದ ಮಹಿಳೆಯರ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿತ್ತು ಎನ್ನುವ ಅಪವಾದವಿದೆ. ಹೀಗೆ ತ್ರಿವೇಣಿ ಅವರ ಪ್ರಯತ್ನವನ್ನು ಅನುಮಾನದ ದೃಷ್ಟಿಯಿಂದ ನೋಡುವ ಮೊದಲು ಆ ಕಾಲದ ಸಮಾಜದ ಕಟ್ಟಳೆಗಳು ಮತ್ತು ಆ ಸಂದರ್ಭ ಲೇಖಕಿಯ ತಲ್ಲಣಗಳತ್ತ ಗಮನಹರಿಸಬೇಕು. ಒಬ್ಬ ಲೇಖಕಿಯಾಗಿ ತ್ರಿವೇಣಿ ಅವರು ಅಂದು ಇಟ್ಟ ದಿಟ್ಟ ಹೆಜ್ಜೆ ನಂತರದ ದಿನಗಳಲ್ಲಿ ಅನೇಕ ಬರಹಗಾರ್ತಿಯರು ಸಂಪ್ರದಾಯದ ಚೌಕಟ್ಟನ್ನು ಮುರಿದು ಹೊರಬರಲು ದಾರಿದೀಪವಾಯಿತು. ತ್ರಿವೇಣಿ ಅವರ ಆ ನಡೆಯನ್ನು ದಿಕ್ಸೂಚಿಯಾಗಿಟ್ಟುಕೊಂಡು ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ವೈದೇಹಿ, ನೇಮಿಚಂದ್ರ, ಸಬೀಹಾ ಭೂಮಿಗೌಡ, ಪ್ರತಿಭಾ ನಂದಕುಮಾರ, ಬಿ.ಟಿ.ಲಲಿತಾ ನಾಯಕ್ ಅವರಂಥ ಬರಹಗಾರ್ತಿಯರು ಸಾಹಿತ್ಯ ಕ್ಷೇತ್ರದ ಮುನ್ನೆಲೆಗೆ ಬಂದರು. ಗೀತಾ ನಾಗಭೂಷಣ ಲೇಖಕಿಯಾಗಿ ಶೋಷಣೆಗೆ ಒಳಗಾದ ತಳ ಸಮುದಾಯಗಳ ಹೆಣ್ಣಿನ ಒಳತೋಟಿಗಳನ್ನು ಅತ್ಯಂತ ಸಮರ್ಥವಾಗಿ ತಮ್ಮ ಕಾದಂಬರಿಗಳ ಮೂಲಕ ಅಭಿವ್ಯಕ್ತಿಗೊಳಿಸಿದರು. ಆದರೂ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಯಾದ ಹೆಣ್ಣಿನ ಪಾತ್ರವನ್ನು ಕುರಿತು ಚರ್ಚಿಸುವಾಗ ದೇವನೂರರ ‘ಕುಸುಮ ಬಾಲೆ’ ಮತ್ತು ‘ಒಡಲಾಳ’ ಚರ್ಚೆಗೆ ಒಳಗಾದಷ್ಟು ಲೇಖಕಿಯರಿಂದ ಸೃಷ್ಟಿಯಾದ ಸ್ತ್ರೀ ಪಾತ್ರಗಳು ಚರ್ಚೆಗೆ ಒಳಗಾದದ್ದು ತೀರ ಕಡಿಮೆ. ಇದು ಕನ್ನಡ ಭಾಷೆಯಲ್ಲಿ ಮಹಿಳಾ ಸಾಹಿತ್ಯದ ಇತಿಮಿತಿಯನ್ನು ಎತ್ತಿ ತೋರಿಸುತ್ತದೆ. ಬರಹಗಾರ್ತಿಯಾಗಿ ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಪುರುಷ ಬಣದ ಸವಾಲುಗಳನ್ನು ನಿರಂತರವಾಗಿ ಎದುರಿಸಬೇಕಾದದ್ದು ಅವಳ ಸಧ್ಯದ ತಲ್ಲಣಗಳಲ್ಲೊಂದು. ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಮುನ್ನೆಲೆಗೆ ಏಕೆ ಬರುತ್ತಿಲ್ಲ ಎನ್ನುವುದಕ್ಕೆ ಲೇಖಕಿಯೊಬ್ಬರು ವಿವರಿಸುವ ಕಾರಣ ಹೀಗಿದೆ ‘ನಮಗೆ ಅಡುಗೆ ಮಾಡುವಾಗ ಲೇಖನ ಮುಗಿಸಲಿಲ್ಲ ಎಂಬ ಚಿಂತೆ. ಲೇಖನ ಬರೆಯಲು ಕುಳಿತಾಗ ಮನೆಕೆಲಸದ ಹೊರೆ ಕಾಡುತ್ತಿರುತ್ತದೆ. ಒಟ್ಟಿನಲ್ಲಿ ಮಹಿಳೆ ಏನನ್ನಾದರೂ ಸಾಧಿಸಬೇಕಾದರೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗಿಂತ ಹತ್ತು ಪಟ್ಟು ಹೆಚ್ಚು ಶ್ರಮವಹಿಸಿ ದುಡಿಯಬೇಕಾಗುತ್ತದೆ. ತನ್ನ ವಿರಾಮ, ವಿಶ್ರಾಂತಿ, ಚಿಕ್ಕ ಚಿಕ್ಕ ಆಸೆಗಳನ್ನೆಲ್ಲ ಬದಿಗಿಟ್ಟು ತೊಡಗಿಸಿಕೊಳ್ಳಬೇಕಾಗುತ್ತದೆ. ಇಷ್ಟಾದರೂ ತನ್ನ ಸಂಸಾರಿಕ ಜವಾಬ್ದಾರಿಗೆ ಅಪಚಾರವೆಸಗಿದೆನೇನೋ ಎಂಬ ದ್ವಂದ್ವ ಆಕೆಯನ್ನು ಕಾಡುತ್ತಿರುತ್ತದೆ. ಹೆಂಗಸರ ಇಂಥ ದ್ವಂದ್ವಗಳು ಪುರುಷಲೋಕದಲ್ಲಿಲ್ಲ. ಪುರುಷನೊಬ್ಬ ಒಂದು ಸಾಧನೆ ಮಾಡಬೇಕಾದರೆ ಅವನು ತನ್ನ ಎಲ್ಲ ಸಮಯವನ್ನು ಅದಕ್ಕಾಗೇ ಮೀಸಲಿಡಲು ಸಾಧ್ಯ’.

ಕೊನೆಯ ಮಾತು

ಬರೆಯುವ ಸುಖವನ್ನು ಬರೆಯುವ ಅಭ್ಯಾಸವಿಲ್ಲದವರಿಗೆ ವಿವರಿಸುವುದು ಕಷ್ಟ ಎಂದು ಲಂಕೇಶ್ ಹೇಳುತ್ತಾರೆ. ‘ಬರವಣಿಗೆ ಅನ್ನುವುದು ಒಂದು ರೀತಿಯ ಹಿಂಸೆಯ ಕೆಲಸವಾದರೂ ಬರೆದ ನಂತರ ದೊರೆಯುವ ಸುಖ ಅಪೂರ್ವವಾದದ್ದು’ ಬರವಣಿಗೆ ಕುರಿತು ಜಿ.ಎಸ್.ಶಿವರುದ್ರಪ್ಪನವರ ಅಭಿಪ್ರಾಯವಿದು. ಒಟ್ಟಿನಲ್ಲಿ ಲೇಖಕನ ತೊಳಲಾಟ, ತಾಕಲಾಟ, ತಲ್ಲಣ ಮತ್ತು ಆತಂಕಗಳ ಒಟ್ಟು ಪರಿಣಾಮವೇ ಬರವಣಿಗೆ. ತಲ್ಲಣ ಮತ್ತು ಆತಂಕಕ್ಕೆ ಒಳಗಾಗುವುದು ಹಿಂಸೆಯ ಕೆಲಸವಾದರೂ ತನ್ನ ತೊಳಲಾಟಗಳಿಗೆ ಅಕ್ಷರರೂಪ ನೀಡಿದ ನಂತರದ ಸಂತೃಪ್ತಿ ಮಾತ್ರ ತುಂಬ ಅನನ್ಯವಾದದ್ದು. ಲೇಖಕ ಯಾರಿಗಾಗಿ ಮತ್ತು ಏತಕ್ಕಾಗಿ ಬರೆಯಬೇಕು ಎನ್ನುವ ಪ್ರಶ್ನೆಯೇ  ನಿಜಕ್ಕೂ ಅರ್ಥಹೀನ. ತಾನು ಬದುಕುತ್ತಿರುವ ಸಮಾಜದ ಎಲ್ಲ ತಲ್ಲಣಗಳು ಮತ್ತು ಆತಂಕವನ್ನು ತನ್ನದಾಗಿಸಿಕೊಂಡು ಬರೆಯಲು ಹೊರಡುವ ಬರಹಗಾರನದು ಸಮಾಜಮುಖಿ ಚಿಂತನೆಯೇ  ವಿನ: ಅದು ವೈಯಕ್ತಿಕವಾದದ್ದಲ್ಲ. ಲಂಕೇಶ್‍ರ ಪ್ರಕಾರ ಬರಹಗಾರನೆಂದರೆ ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಬರವಣಿಗೆಗೆ ಕತ್ತು ಕೊಡುವ ವ್ಯಕ್ತಿ. ಆದರೆ ಇಲ್ಲಿ ಅಪಾಯ ಮತ್ತು ದುರಂತವನ್ನು ಎದುರಿಸಿಯೂ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಲೇಖಕನಿಗೆ ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಮತ್ತು ಸಧ್ಯದ ಸಂದರ್ಭದಲ್ಲಿ ಅನೇಕ ಬರಹಗಾರರನ್ನು ಕಾಡುತ್ತಿರುವ ಆತಂಕವೂ ಇದಾಗಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ