Tuesday, April 3, 2018

ಮಲಿನಗೊಂಡಿದೆ ರಾಜಕಾರಣ

           



        ಕರ್ನಾಟಕ ಈಗ ಚುನಾವಣೆಯ ಹೊಸ್ತಿಲಲ್ಲಿದೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ಕನಿಷ್ಠ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸಾಧ್ಯತೆಯಿದೆ ಎಂದು ನನ್ನ ಮಿತ್ರರೊಬ್ಬರು ಆತಂಕ ವ್ಯಕ್ತಪಡಿಸಿದಾಗ ದೇಶದ ರಾಜಕಾರಣ ಚಿಂತಾಜನಕ ಸ್ಥಿತಿಯಲ್ಲಿದೆ ಎಂದೆನಿಸಿತು. ರಾಜ್ಯದಲ್ಲಿ ಮೂರು ಪ್ರಬಲ ಪಕ್ಷಗಳಿರುವುದರಿಂದ ಒಂದು ಮತ ಕ್ಷೇತ್ರದಿಂದ ಕೇವಲ ಮೂರು ಅಭ್ಯರ್ಥಿಗಳನ್ನು ಲೆಖ್ಖಕ್ಕೆ ತೆಗೆದುಕೊಂಡರೆ ಈ ಸಲದ ವಿಧಾನಸಭಾ ಚುನುವಾಣೆಗೆ ಅಭ್ಯರ್ಥಿಗಳಿಂದ ಖರ್ಚಾಗುವ ಅಂದಾಜು ಹಣ 1344 ಕೋಟಿ ರೂಪಾಯಿಗಳಾಗುತ್ತದೆ. ಹಣ ಮತ್ತು ಹೆಂಡ ನೀರಿನಂತೆ ಹರಿಯಲಿವೆ, ಮತದಾರರಿಗೆ ಬಾಡೂಟದ ಆತಿಥ್ಯ ದೊರೆಯಲಿದೆ, ಸೀರೆ ಮತ್ತು ಪಂಚೆಗಳ ವಿತರಣೆಯಾಗಲಿದೆ, ಬಣ್ಣದ ಟಿ ವಿ ಮತದಾರರ ಮನೆಗಳನ್ನು ಅಲಂಕರಿಸಲಿವೆ ಇದೆಲ್ಲ ಭಾರತದ ರಾಜಕಾರಣದಿಂದ ಮತದಾರ ಪ್ರಭುಗಳಿಗೆ ಪ್ರಾಪ್ತವಾಗುವ ಭಾಗ್ಯ. ಜೊತೆಗೆ ನಮ್ಮ ರಾಜಕಾರಣಿಗಳು ಪ್ರಣಾಳಿಕೆಯ ಮೂಲಕ ಸಾರ್ವಜನಿಕರಿಗೆ ಇಲ್ಲದ ಆಮಿಷಗಳನ್ನು ಒಡ್ಡಿ ಮತಗಳನ್ನು ಸೆಳೆಯುವ ನಾಟಕ ಮಾಡುತ್ತಾರೆ. ಒಟ್ಟಿನಲ್ಲಿ ಅಧಿಕಾರದ ಆಕಾಂಕ್ಷೆಗೆ ಒಳಗಾಗುವ ರಾಜಕಾರಣಿಗಳು ತಮ್ಮ ಹಣ ಮತ್ತು ತೋಳ್ಬಲದಿಂದ ರಾಜಕೀಯ ಕ್ಷೇತ್ರವನ್ನು ಅಪವಿತ್ರಗೊಳಿಸಿ ಸುಗುಣರು, ಪ್ರಾಮಾಣಿಕರು ಮತ್ತು ಕರ್ತವ್ಯನಿಷ್ಟರು ರಾಜಕೀಯಕ್ಕೆ ವಿಮುಖರಾಗುವಂಥ ವಾತಾವರಣವನ್ನು ನಿರ್ಮಿಸುತ್ತಿರುವರು. ಒಟ್ಟಿನಲ್ಲಿ ರಾಜಕಾರಣ  ಮಲಿನಗೊಂಡಿದೆ ಎನ್ನುವುದು ಪ್ರಾಮಾಣಿಕರ ಕೂಗಾಗಿದೆ.  

ನಿರ್ಣಾಯಕರಾಗುತ್ತಿರುವ ಅನಕ್ಷರಸ್ಥರು

ಇವತ್ತು ರಾಜಕೀಯದಲ್ಲಿ ಅಸಮರ್ಥರು, ಅಪ್ರಾಮಾಣಿಕರು ಮತ್ತು ಅದಕ್ಷರು ಚುನಾಯಿತರಾಗಿ ಅಧಿಕಾರ ನಡೆಸುತ್ತಿರುವುದಕ್ಕೆ ದೇಶದ ಬಹುಸಂಖ್ಯಾತ ಅನಕ್ಷರಸ್ಥರೆ ಪ್ರಮುಖ ಕಾರಣರಾಗಿರುವರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನಕ್ಷರಸ್ಥರ ಮತ್ತು ಬಡವರ ಮತಗಳನ್ನು ಸುಲಭವಾಗಿ ಸೆಳೆದುಕೊಳ್ಳಬಹುದೆನ್ನುವುದು ವಾಸ್ತವಿಕ ಸತ್ಯವಾಗಿದೆ. ಹೀಗಾಗಿ ನಮ್ಮ ರಾಜಕಾರಣಿಗಳು ತಮ್ಮ ಗೆಲುವಿಗಾಗಿ ಹೆಚ್ಚು ಅವಲಂಬಿತರಾಗಿರುವುದು ಈ ಬಡ ಮತ್ತು ಅವಿದ್ಯಾವಂತ ಮತದಾರರ ಮೇಲೆಯೇ. ಬಡತನ ಮತ್ತು ನಿರುದ್ಯೋಗದಂಥ ಸಮಸ್ಯೆಗಳು ಒಂದು ವರ್ಗದ ಜನರನ್ನು ರಾಜಕಾರಣಿಗಳು ಕೊಡಮಾಡುತ್ತಿರುವ ಆಮಿಷಕ್ಕೆ ಸುಲಭವಾಗಿ ಬಲಿಯಾಗಿಸುತ್ತಿವೆ. ಹಣ ಮತ್ತು ಹೆಂಡಕ್ಕೆ ಮಾರುಹೋಗುವ ಬಡವರು ಹಾಗೂ ಅನಕ್ಷರಸ್ಥರು ಚುನಾವಣೆಯಲ್ಲಿ ಹಣಬಲವಿರುವ ಅಭ್ಯರ್ಥಿಗಳಿಗೆ ಜಯ ತಂದು ಕೊಡುತ್ತಿರುವರು. ವಿದ್ಯಾವಂತರೆಂದು ಗುರುತಿಸಿಕೊಂಡಿರುವ ಒಂದು ಇಡೀ ವರ್ಗ ಚುನಾವಣೆಯ ಸಂದರ್ಭ ಮತದಾನಕ್ಕೆ ವಿಮುಖವಾಗುತ್ತಿರುವುದರಿಂದ ರಾಜಕೀಯ ಪ್ರಜ್ಞೆಯೇ  ಇಲ್ಲದ ಅನಕ್ಷರಸ್ಥರ ಸಮೂಹ ಇವತ್ತಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. 

ಸಾಹಿತ್ಯವಲಯದ ಓಲೈಕೆ

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು”. ಯೋಸಾನ ಒಟ್ಟು ಹೇಳಿಕೆಯ ಅರ್ಥ ಬರಹಗಾರ ರಾಜಕೀಯ ಅಥವಾ ರಾಜಕಾರಣದೊಂದಿಗೆ ರಾಜೀ ಮಾಡಿಕೊಳ್ಳದೆ ಸಮಾಜವನ್ನು ಭ್ರಷ್ಟ ರಾಜಕಾರಣದಿಂದ ಕಾಯುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಭೇಟಿಯಾಗಲು ಮನೆಗೆ ಬರುವ ವಿಚಾರ ತಿಳಿದು  ಭೇಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ದೇವನೂರ ಮಹಾದೇವರಂಥ ಸೂಕ್ಷ್ಮ ಸಂವೇದನೆಯ ಬರಹಗಾರ ರಾಜಕೀಯದಿಂದ ಅಂತರವನ್ನು ಕಾಯ್ದುಕೊಂಡು ರಾಜಕಾರಣವನ್ನು ಶುಚಿಗೊಳಿಸುವ ಕೆಲಸ ಮಾಡಬಲ್ಲ. ಆದರೆ ದುರಂತದ ಸಂಗತಿ ಎಂದರೆ ನಮ್ಮ ಬಹುಪಾಲು ಬರಹಗಾರರು ಅಧಿಕಾರ ಕೇಂದ್ರವನ್ನು ಓಲೈಸುವ ಮತ್ತು ರಾಜಕಾರಣಿಗಳನ್ನು ಹೊಗಳುವ ಬಹುಪರಾಕ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವರು. ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರು ಆಳುವ ಸರ್ಕಾರದ ಪರ ಮಾತನಾಡುವುದು, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಬಿಗಿಳಿಯುವುದು, ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕಾರಣಿಗಳ ಮನೆ ಬಾಗಿಲನ್ನು ಕಾಯುವುದು ಇಂಥ ಕಾರ್ಯಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುತ್ತಿರುವ ಸಾಹಿತಿಗಳು ರಾಜಕಾರಣಕ್ಕೆ ತಮ್ಮ ಬರವಣಿಗೆ ಮೂಲಕ ಪರಿಶುದ್ಧತೆಯ ರೂಪವನ್ನು ನೀಡುವುದು ದೂರದ ಮಾತು. ಅಕಾಡೆಮಿಗಳ ಚುನಾವಣೆಗೆ ಸ್ವತ: ರಾಜಕೀಯದ ಖದರು ನೀಡಿರುವ ನಮ್ಮ ಸಾಹಿತ್ಯವಲಯದಿಂದ ಹೆಚ್ಚಿನದೇನನ್ನೂ ಅಪೇಕ್ಷಿಸುವಂತಿಲ್ಲ. ಯೇಟ್ಸ್  ತನ್ನ ಸುಪ್ರಸಿದ್ಧ ಕವಿತೆ ‘ದ’ಸೆಕೆಂಡ್ ಕಮಿಂಗ್’ನಲ್ಲಿ ಯುರೋಪಿನ ಸನ್ನಿವೇಶವನ್ನು ವರ್ಣಿಸುತ್ತ the best lack conviction and the worst are full of passionate intensity  ಎಂದು ಆತಂಕದಿಂದ ಬರೆಯುತ್ತಾನೆ. ಯೇಟ್ಸ್ ನ  ಈ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ ಬರಹಗಾರರು ಮೌನವಾಗಿರದೆ ಮಾತನಾಡುವುದನ್ನು ಮತ್ತು ಪ್ರತಿಭಟಿಸುವುದನ್ನು ಕಲಿಯಬೇಕು. ಅಧಿಕಾರದ  ಶಕ್ತಿಕೇಂದ್ರ ಮತ್ತು ರಾಜಕಾರಣವನ್ನು ಓಲೈಸದೆ ಬರಹಗಾರರು ಹೋರಾಟ ಮತ್ತು ಚಳವಳಿಯಂಥ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುವುದು ಸಮಾಜದ ಹಿತದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. 

ಸಮಿತಿಯ ನಿಷ್ಕ್ರಿಯತೆ

ಟಿ.ಎನ್.ಶೇಷನ್ ಅವರ ಅಧಿಕಾರವಧಿಯ ನಂತರ ಭಾರತದ ಚುನಾವಣಾ ಸಮಿತಿಯು ಜಡವಾದಂತೆ ಕಾಣುತ್ತಿದೆ. ಭಾರತದ ಚುನಾವಣಾ ರಾಜಕಾರಣಕ್ಕೆ ಒಂದು ಪಾರದರ್ಷಕತೆಯನ್ನು ತಂದುಕೊಟ್ಟ ಹಿರಿಮೆ ಟಿ.ಎನ್.ಶೇಷನ್ ಅವರದು. ಶೇಷನ್ ಚುನಾವಣಾ ಸಮಿತಿಯ ಆಯುಕ್ತರಾಗುವುದಕ್ಕಿಂತ ಪೂರ್ವದಲ್ಲಿ ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಅಬ್ಬರ ಬಲವಾಗಿತ್ತು. ಚುನಾವಣೆ ಎನ್ನುವುದು ಅಕ್ಷರಶ: ಹಣವಂತರ ಮತ್ತು ತೋಳ್ಬಲವಿರುವವರ ಅಖಾಡ ಎನ್ನುವ ವಾತಾವರಣ ರಾಜಕೀಯದಲ್ಲಿ ಮನೆ ಮಾಡಿತ್ತು. ಶೇಷನ್ ಆಯುಕ್ತರಾಗಿ ಬಂದವರೆ ಚುನಾವಣಾ ಸಮಿತಿಗೆ ಪರಮಾಧಿಕಾರದ ಸ್ಪರ್ಷ ನೀಡಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿಗೆ ಕಡಿವಾಣ ಹಾಕಿದರು. ಪ್ರತಿ ಅಭ್ಯರ್ಥಿಯು ಖರ್ಚು ಮಾಡುವ ಒಟ್ಟು ಹಣವನ್ನು ನಿಗದಿಪಡಿಸಿದ್ದಲ್ಲದೆ ಚುನಾವಣಾ ಖರ್ಚು ವೆಚ್ಚದ ಲೆಕ್ಕ ಒಪ್ಪಿಸುವ ನಿಯಮವನ್ನು ಜಾರಿಗೆ ತಂದದ್ದು ಭಾರತದ ರಾಜಕೀಯದಲ್ಲಿ ಅದೊಂದು ಮಹತ್ವದ ಸಾಧನೆಯಾಯಿತು. ಟಿ.ಎನ್.ಶೇಷನ್ ಅವರ ಪ್ರಯತ್ನದ ಪರಿಣಾಮ ದೇಶದ ರಾಜಕಾರಣದಲ್ಲಿ ಒಂದಿಷ್ಟು ಪ್ರಮಾಣಿಕತೆಯ ಗಾಳಿಯೇನೋ  ಬೀಸಿತಾದರೂ ಅವರ ನಂತರದ ಅಧಿಕಾರಿಗಳಲ್ಲಿನ ಅದಕ್ಷತೆಯ ಪರಿಣಾಮ ಇವತ್ತು ಚುನಾವಣಾ ಸಮಿತಿ ನಿಷ್ಕ್ರಿಯಗೊಂಡಿದೆ. 

ಮಠ ಮತ್ತು ಮಸೀದಿಗಳು

ಭಾರತ ಧಾರ್ಮಿಕ ನೆಲೆಯ ರಾಷ್ಟ್ರವಾಗಿರುವುದರಿಂದ ಇಲ್ಲಿ ರಾಜಕಾರಣದ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಿಗೆ ಮಠ ಮತ್ತು ಮಸೀದಿಗಳು ರಾಜಕೀಯ ಮಹತ್ವವನ್ನು ಪಡೆದುಕೊಂಡಿವೆ. ಇವತ್ತು ಮಠ ಮತ್ತು ಮಸೀದಿಗಳು ರಾಜಕೀಯ ವೇದಿಕೆಗಳಾಗಿ ರೂಪಾಂತರಗೊಂಡಿವೆ. ಮಠಗಳನ್ನು ಮತ್ತು ಮಸೀದಿಗಳನ್ನು ಓಲೈಸಿದರೆ ತಮ್ಮದೆ ಆದ ಮತಬ್ಯಾಂಕವೊಂದನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎನ್ನುವುದು ನಮ್ಮ ರಾಜಕಾರಣಿಗಳಿಗೆ ಮನವರಿಕೆಯಾಗಿದೆ. ಧರ್ಮ ಮತ್ತು ಜಾತಿಗೊಂದರಂತೆ ತಲೆ ಎತ್ತುತ್ತಿರುವ ಮಠಗಳು ಇವತ್ತು ದೇಶದ ರಾಜಕೀಯದ ನಡೆಯನ್ನು ನಿರ್ಣಯಿಸುವಷ್ಟು ಪ್ರಬಲವಾಗಿವೆ. ಪುರಾಣ, ಪ್ರವಚನದಂಥ ಸಾತ್ವಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಮಠಗಳು ಮತ್ತು ಮಸೀದಿಗಳು ಚುನಾವಣೆಯ ಸಂದರ್ಭ ತಮ್ಮದೆ ನಿರ್ಧಿಷ್ಟ ಧರ್ಮದ ಮತ್ತು ಜಾತಿಯ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲುತ್ತಿವೆ. ಧರ್ಮ ಮತ್ತು ಜಾತಿಯ ವ್ಯಾಮೋಹಕ್ಕೆ ಸಿಲುಕಿರುವ ಧಾರ್ಮಿಕ ಸಂಸ್ಥೆಗಳು ರಾಜಕಾರಣಿಗಳ ಅಪ್ರಾಮಾಣಿಕತೆ ಮತ್ತು ಅನೀತಿಯ ನಡೆಯನ್ನು ಗುರುತಿಸಿಯೂ ಅಂಥವರನ್ನು ಪ್ರೋತ್ಸಾಹಿಸುತ್ತಿರುವುದು  ದೇಶದ ಘೋರ ದುರಂತಗಳಲ್ಲೊಂದು.  

ಕುಲದ ಕಸುಬು

ಭಾರತದಲ್ಲಿ ರಾಜಕಾರಣ ಎನ್ನುವುದು ಅದೊಂದು ಸಮಾಜಸೇವೆ ಎನ್ನುವುದಕ್ಕಿಂತ ಹಣಮಾಡುವ ದಂಧೆ ಮತ್ತು ವಂಶಪಾರಂಪರ್ಯವಾಗಿ ಪ್ರಾಪ್ತವಾಗುವ ಕುಲದ ಕಸುಬಿನಂತಾಗಿದೆ. ಅನೇಕ ರಾಜಕಾರಣಿಗಳು ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳಿಗಾಗಿ ಮತ್ತು ಮೊಮ್ಮಕ್ಕಳಿಗಾಗಿ ರಾಜಕೀಯ ವೇದಿಕೆಯನ್ನು ಸಿದ್ಧ ಪಡಿಸುವುದು ಇವತ್ತಿನ ವಾಸ್ತವಿಕ ಚಿತ್ರಣವಾಗಿದೆ. ನಾಲ್ಕೈದು ದಶಕಗಳ ಕಾಲ ಶಾಸಕರಾಗಿ, ಸಂಸದರಾಗಿ ಮತ್ತು ಮಂತ್ರಿಗಳಾಗಿ ಅಧಿಕಾರ ಅನುಭವಿಸುವ ರಾಜಕಾರಣಿಗಳು ತಮ್ಮ ನಂತರ ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುತ್ತಿರುವುದು ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶದ ವಿಪರ್ಯಾಸಗಳಲ್ಲೊಂದು. ಒಂದೇ ಕುಟುಂಬದಲ್ಲಿ ಇಬ್ಬರು ಅಥವಾ ಮೂರು ಶಾಸಕರು, ಸಂಸದರು, ಮಂತ್ರಿಗಳಿರುವುದು ಸಹಜ ಚಿತ್ರಣವಾಗಿದೆ. ಪ್ರಜಾಪ್ರಭುತ್ವದಡಿಯಲ್ಲಿ ವಂಶಪಾರಂಪರ್ಯದ ರಾಜಾಡಳಿತವನ್ನು ಅಸ್ತಿತ್ವಕ್ಕೆ ತರುತ್ತಿರುವ ನಮ್ಮ ರಾಜಕಾರಣಿಗಳು ರಾಜಕೀಯವನ್ನು ಕುಲದ ಕಸುಬಾಗಿ ರೂಪಾಂತರಿಸುತ್ತಿರುವಾಗ ಪ್ರಾಮಾಣಿಕತೆ ಮತ್ತು ನೈತಿಕತೆಯ ನೆಲೆಯಲ್ಲಿ ರಾಜಕೀಯ ಮಾಡಬೇಕೆನ್ನುವ ಸುಶಿಕ್ಷಿತರು ಭ್ರಮನಿರಸನಗೊಂಡಿರುವರು. 

ವಿದ್ಯಾವಂತರ  ಗೈರು

ರಾಜಕೀಯಕ್ಕೆ ವಿದ್ಯಾವಂತರು ಮತ್ತು ಸುಶಿಕ್ಷಿತರು ಪ್ರವೇಶಿಸುತ್ತಿಲ್ಲವೇಕೆ ಎನ್ನುವುದು ಬಹುಮುಖ್ಯ ಪ್ರಶ್ನೆಯಾಗಿದೆ. ಜೊತೆಗೆ ಸುಶಿಕ್ಷಿತರೆಂದು ಗುರುತಿಸಿಕೊಂಡಿರುವ ಒಂದು ವರ್ಗ ಚುನಾವಣೆಯ ಸಂದರ್ಭ ಮತದಾನದಂಥ ಪವಿತ್ರ ಕಾರ್ಯದಲ್ಲಿಯೂ ಪಾಲ್ಗೊಳ್ಳುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿದ್ಯಾವಂತರು ರಾಜಕಾರಣಕ್ಕೆ ಬೆನ್ನು ಮಾಡಿ ನಿಂತಿರುವುದರಿಂದ ಇವತ್ತು ಅನಕ್ಷರಸ್ಥ ರಾಜಕಾರಣಿಗಳು ದೇಶದ ಕಾನೂನನ್ನು ರೂಪಿಸುವ ನಿರ್ಣಾಯಕ ಸ್ಥಾನದಲ್ಲಿರುವರು. ಶಿಕ್ಷಣ, ವೈದ್ಯಕೀಯ, ಕಾನೂನು, ಆರೋಗ್ಯದಂಥ ಕ್ಷೇತ್ರಗಳು ಅನಕ್ಷರಸ್ಥ ಜನಪ್ರತಿನಿಧಿಗಳ ಕೈಗೆ ಸಿಲುಕಿ ಭ್ರಷ್ಟಾಚಾರದ ಕೂಪಗಳಾಗಿವೆ. ವಿದ್ಯಾವಂತರು ಮತದಾನದ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುತ್ತಿಲ್ಲವಾದುದರಿಂದ ಚುನಾವಣೆಯ ಸೋಲು ಗೆಲುವಿನಲ್ಲಿ ಅವಿದ್ಯಾವಂತ ಮತದಾರರ ಮತಗಳೇ ನಿರ್ಣಾಯಕವಾಗುತ್ತಿವೆ. ಮತದಾನದ ದಿನದಂದು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗುವ, ಮನೆ ಸ್ವಚ್ಛಗೊಳಿಸುವ, ಸುತ್ತಲಿನ ಕಸ ತೆಗೆಯುವ ಚಟುವಟಿಕೆಗಳಲ್ಲಿ ಧನ್ಯತೆ ಅನುಭವಿಸುವ ಸುಶಿಕ್ಷಿತರು ಮತ ಕೇಂದ್ರಗಳ ಕಡೆ ಮಾತ್ರ ತಲೆಹಾಕಲಾರರು. ಆಶ್ಚರ್ಯವೆಂದರೆ ಇದೇ ಸುಶಿಕ್ಷಿತ ವರ್ಗದವರು ಅತ್ಯಂತ ಪ್ರಾಮಾಣಿಕರಾಗಿ ಉದ್ದನೆಯ ಸಾಲಿನಲ್ಲಿ ನಿಂತು ವಿದ್ಯುತ್, ನೀರು, ದೂರವಾಣಿ ಬಿಲ್ಲನ್ನು ಪಾವತಿಸುತ್ತಾರೆ, ಸರ್ಕಾರಕ್ಕೆ ಮೋಸ ಮಾಡದೆ ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತಾರೆ ಮತ್ತು ತರಕಾರಿ, ದಿನಸಿ ಪದಾರ್ಥ ಖರೀದಿಸುವಾಗ ಗಂಟೆಗಟ್ಟಲೆ ಚೌಕಾಸಿ ಮಾಡುತ್ತಾರೆ.

ಒಟ್ಟಿನಲ್ಲಿ ದೇಶದ ರಾಜಕಾರಣವನ್ನು ಪರಿಶುದ್ಧಗೊಳಿಸುವ ಕೆಲಸ ಇವತ್ತಿನ ತುರ್ತು ಅಗತ್ಯವಾಗಿದೆ. ಸುಶಿಕ್ಷಿತರು, ವಿದ್ಯಾವಂತರು, ರಾಷ್ಟ್ರ ಪ್ರೇಮಿಗಳು, ಪ್ರಾಮಾಣಿಕರು ರಾಜಕೀಯಕ್ಕೆ ಪ್ರವೇಶಿಸಬೇಕು. ರಾಜಕೀಯ ಎನ್ನುವುದು ಹಣಗಳಿಸುವ ಉದ್ದಿಮೆಯಾಗದೆ, ಕುಟುಂಬದ ಕಸುಬಾಗದೆ ಅದೊಂದು ಸಮಾಜ ಸೇವೆ ಎನ್ನುವ ಮನೋಭಾವ ಬೆಳೆಯಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅತ್ಯುತ್ತಮ ರಾಜಕಾರಣಿಗಳನ್ನು ರೂಪಿಸುವ ಕೇಂದ್ರಗಳಾಗಬೇಕು.  ಜಯಪ್ರಕಾಶ ನಾರಾಯಣ, ಲೋಹಿಯಾ, ವಾಜಪೇಯಿ ಅವರಂಥ ಸಮರ್ಥ ಮತ್ತು ನಿಸ್ವಾರ್ಥ ರಾಜಕಾರಣಿಗಳು ನಮ್ಮ ವಿದ್ಯಾರ್ಥಿ ಸಮುದಾಯದಿಂದ ಬೆಳೆದು ಬರಬೇಕು. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ